Connect with us

ಅಂತರಂಗ

ತನ್ನಿಮಿತ್ತ : ಪುಸ್ತಕಗಳ ಮಧ್ಯೆ ಪ್ರಾಣ ಬಿಟ್ಟ ಅಂಬೇಡ್ಕರ್

Published

on

ಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಪುಸ್ತಕಗಳ ನಡುವೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಹಲೋಕ ತ್ಯಜಿಸಿದರು. ಡಿಸೆಂಬರ್ 5ನೇ ತಾರೀಖು ರಾತ್ರಿ ಬಹಳ ಹೊತ್ತಿನವರೆಗೆ ಓದು ಮತ್ತು ಬರವಣಿಗೆಯಲ್ಲಿ ಮಗ್ನರಾಗಿದ್ದ ಅವರು ತಮ್ಮ ಮುಂದಿದ್ದ ಪುಸ್ತಕಗಳ ಮೇಲೆಯೇ ಕುಸಿದು ಬಿದ್ದಿದ್ದರು. ಡಿಸೆಂಬರ್ 6ರ ಬೆಳಗ್ಗೆ ನೋಡಿದಾಗ ಅವರು ನಾಲ್ಕಾರು ಗಂಟೆಗಳ ಹಿಂದೆಯೇ ಈ ಪ್ರಪಂಚವನ್ನು ತ್ಯಜಿಸಿ ಮಹಾ ಪರಿನಿಬ್ಬಾಣ ಹೊಂದಿದ್ದರು.

ನಂಬಲಸಾಧ್ಯವಾದ ಪುಸ್ತಕ ವ್ಯಾಮೋಹವನ್ನು ಹೊಂದಿದ್ದ ಡಾ. ಅಂಬೇಡ್ಕರ್ರವರು ನಿಧನರಾಗುವ ಹಿಂದಿನ ರಾತ್ರಿಯ (1956 ಡಿಸೆಂಬರ್ 5ರ ರಾತ್ರಿ) ನೈಜ ಪ್ರಸಂಗವನ್ನು ಅಂಬೇಡ್ಕರ್ರವರಿಗೆ 17 ವರ್ಷಗಳ ಕಾಲ ಸಹಾಯಕರಾಗಿ ಸೇವೆ ಸಲ್ಲಿಸಿದ್ದ ನಾನಕ್ಚಂದ್ ರತ್ತು ಹೀಗೆ ದಾಖಲಿಸಿದ್ದಾರೆ: ಡಿಸೆಂಬರ್ 5ನೇ ತಾರೀಖು ಅವರು ಇಡೀ ದಿನ ಅಧ್ಯಯನದಲ್ಲಿ ಮುಳುಗಿದ್ದರು, ರಾತ್ರಿ 10 ಗಂಟೆಯ ವೇಳೆಗೆ ತುಂಬಾ ಬಳಲಿದ್ದರು. ಕೆಲಸದಾಳು ಸುಧಾಮ ಹಲವಾರು ಸಾರಿ ಊಟಕ್ಕೆ ಕರೆದಿದ್ದನು.

ಆದರೂ ಬಾಬಾಸಾಹೇಬರು ಊಟಕ್ಕೆ ಹೋಗದೆ ಅಧ್ಯಯನದಲ್ಲಿ ತಲ್ಲೀನರಾಗಿದ್ದರು. ಕೊನೆಗೂ ನಮ್ಮೆಲ್ಲರ ಬಲವಂತದಿಂದಾಗಿ ಒಲ್ಲದ ಮನಸ್ಸಿನಿಂದ (ಅಧ್ಯಯನ ನಿಲ್ಲಿಸಿ ಊಟಕ್ಕೆ ಕರೆಯುತ್ತಾರಲ್ಲ ಎಂಬ ಸಿಟ್ಟಿನಿಂದಲೂ ಸಹ) ಸುಮಾರು ರಾತ್ರಿ 10.15ರ ಸಮಯಕ್ಕೆ ತಮ್ಮ ಅಧ್ಯಯನದ ಕೊಠಡಿಯಿಂದ ಎದ್ದು ಊಟದ ಕೋಣೆಯ ಕಡೆಗೆ ಹೊರಟರು. ಡೈನಿಂಗ್ ರೂಂಗೆ ಹೋಗುವಾಗ ತಮ್ಮ ಬಹತ್ತಾದ ಲೈಬ್ರರಿಯು ಅತೀ ದೊಡ್ಡ ಮೈನ್ ಹಾಲ್ನಲ್ಲಿತ್ತು. ತಮ್ಮ ಕೈಯನ್ನು ನನ್ನ ಭುಜದ ಮೇಲಿಟ್ಟುಕೊಂಡು ತಮ್ಮ ಇನ್ನೊಂದು ಕೈಯಲ್ಲಿ ಊರುಗೋಲನ್ನಿಡಿದು, ಪುಸ್ತಕಗಳಿಂದ ತುಂಬಿಹೋಗಿದ್ದ ತಮ್ಮ ದೊಡ್ಡ ಟೇಬಲ್ನೆಡೆಗೆ ನಡೆದು ಅಲ್ಲಿದ್ದ ಕುರ್ಚಿಯ ಮೇಲೆ ಕುಳಿತುಕೊಂಡರು.ಒಂದು ಚಿಕ್ಕ ಪೆಟ್ಟಿಗೆಯನ್ನು ತೆರೆದರು.

ತಮ್ಮ ಫೌಂಟನ್ ಪೆನ್ ಹೊರತೆಗೆದು ಕೆಲವು ಹಾಳೆಗಳಿಗೆ ಹುಡುಕಾಡಿದರು. ಕೆಲಸದಾಳು ಮೂರನೇ ಬಾರಿಗೆ ಬಂದ. ಅವರು ಕುರ್ಚಿಯಿಂದ ಮೇಲೆದ್ದು ಮುಂದೆ ನಡೆದರು. ಒಂದು ಕ್ಷಣ ನಿಂತು ಕೆಲವು ಪುಸ್ತಕಗಳನ್ನು ಕಪಾಟಿನಿಂದ ಹೊರ ತೆಗೆದು ನನ್ನ ಕೈಗಿತ್ತರು. ಸ್ವಲ್ಪ ಮುಂದೆ ಹೋಗಿ ಅವರು ಎರಡೂ ಕಡೆ ನೋಡಿ ಬೇರೆ ಅಲ್ಮೆರಾಗಳಿಂದ ಇನ್ನೂ ಹೆಚ್ಚು ಪುಸ್ತಕಗಳನ್ನು ತೆಗೆದುಕೊಂಡರು. ಆ ಪುಸ್ತಕಗಳನ್ನು ಹಾಸಿಗೆಯ ಹತ್ತಿರದ ತಮ್ಮ ಟೇಬಲ್ಲಿನ ಮೇಲಿಡಲು ನನಗೆ ಹೇಳಿದರು. ಊಟದ ಕೊಠಡಿಯನ್ನು ಪ್ರವೇಶಿಸುವುದಕ್ಕೆ ಮೊದಲು ಹಿಂದಕ್ಕೆ ತಿರುಗಿದರು.

ಒಂದು ಕ್ಷಣ ನಿಂತುಕೊಂಡು ತಮ್ಮ ಜೀವಿತ ಕಾಲದ ನಿಜವಾದ ಮತ್ತು ಮಹಾ ಗೆಳೆಯರಾಗಿದ್ದ ಅಲ್ಮಿರಾಗಳೊಳಗಿದ್ದ ಆ ಪುಸ್ತಕಗಳ ಮೇಲೆ ನೋಟವನ್ನು ಹರಿಸುತ್ತಾ ಊಟದ ಕೊಠಡಿಯ ಒಳಗೆ ಹೋದರು. ಅಡುಗೆ ಮನೆಯ ಎದುರಿಗಿದ್ದ ಕುರ್ಚಿಯ ಮೇಲೆ ಕುಳಿತುಕೊಳ್ಳಲು ನಾನು ಅವರಿಗೆ ಸಹಾಯ ಮಾಡಿದೆ. ಕೆಲಸದಾಳು ಅವರಿಗೆ ಊಟ ಬಡಿಸಿದ. ಸ್ವಲ್ಪ ಅನ್ನವನ್ನು ತಿಂದು ತಟ್ಟೆಯನ್ನು ನನ್ನ ಕಡೆಗೆ ತಳ್ಳಿದರು. ”ನೀನು ತಿನ್ನು,” ಎಂದು ಹೇಳಿದರು. ತಮ್ಮ ತಲೆಯನ್ನು ನೀವಲು ನನಗೆ ಹೇಳಿದರು.

ನಾನು ಸ್ವಲ್ಪ ಹೊತ್ತು ನೀವಿದೆ. ಸ್ವಲ್ಪ ಸಮಯದ ನಂತರ ”ಚಲ್ ಕಬೀರಾ ತೇರಾ ಭವ್ಸಾಗರ್ ದೇರಾ,”ಎಂದು ಗುನುಗುತ್ತ, ಊರುಗೋಲಿನ ಸಹಾಯದಿಂದ ಮೇಲೆದ್ದರು. ನನ್ನ ಭುಜದ ಮೇಲೆ ತಮ್ಮ ತೋಳನ್ನಿರಿಸಿ ಕೆಲವು ಹೆಜ್ಜೆಗಳಷ್ಟು ನಡೆದು ನಿಂತುಕೊಂಡರು. ಲೈಬ್ರರಿಯೊಳಗಿದ್ದ ಪುಸ್ತಕಗಳನ್ನು ಮತ್ತೊಮ್ಮೆ ಮಮತೆಯಿಂದ ನೋಡಿದರು, ನಂತರ ಮಲಗುವ ಕೊಠಡಿ ಪ್ರವೇಶಿಸಿದರು.

ಆಗ ರಾತ್ರಿ ಸುಮಾರು 11-30 ಗಂಟೆ. ವಿಶ್ರಾಂತಿಯಿಲ್ಲದೆ ಹಿಂದಿನ ನಾಲ್ಕು ರಾತ್ರಿಗಳೂ ಸತತವಾಗಿ ಕೆಲಸ ಮಾಡಿದ್ದರಿಂದ ನಾನು ದಣಿದು ಹೋಗಿದ್ದೆ. ನನ್ನ ಹೆಂಡತಿ ಮಕ್ಕಳು ನನಗೋಸ್ಕರ ಆತಂಕದಿಂದ ಕಾಯುತ್ತಿರಬಹುದೆಂದು ಅರಿತಿದ್ದ ನಾನು ಮನೆಗೆ ಹೋಗಲು ಅಣಿಯಾದೆ. ಬಾಬಾ ಸಾಹೇಬರ ದಣಿದುಹೋದ ಮುಖ ಕಣ್ಣುಗಳನ್ನು ನೋಡಿ, ಅವರು ಗಾಢವಾದ ನಿದ್ರೆಗೆ ಹೋಗುತ್ತಾರೆಂದು ನಾನು ಚೆನ್ನಾಗಿ ಊಹಿಸಬಲ್ಲವನಾಗಿದ್ದೆ. ಅವರ ಗಮನವನ್ನು ಸೆಳೆಯಲೆಂದೇ ನಾನು ಟೇಬಲ್ ಮೇಲಿದ್ದ ಪುಸ್ತಕಗಳನ್ನು ಸ್ಥಳಾಂತರಿಸುತ್ತಾ ಟೇಬಲ್ಲನ್ನು ಅಲುಗಾಡಿಸಿದೆ.

ಅವರು ಕಣ್ಣೆತ್ತಿ ನೋಡಿದರು. ಇದರ ಸದುಪಯೋಗ ಪಡೆದುಕೊಂಡು ”ಸ್ವಾಮಿ ಈ ರಾತ್ರಿ ನಾನು ಇಲ್ಲೇ ಇರಬೇಕೆ? ಅಥವಾ ನಾನು ಮನೆಗೆ ಹೋಗಬಹುದೋ?,” ಎಂದು ನಾನು ವಿನೀತನಾಗಿ ಕೇಳಿದೆ. ”ಆಗಲಿ ನೀನು ಮನೆಗೆ ಹೋಗು ವಿಶ್ರಾಂತಿ ಪಡೆದುಕೋ, ನೀನು ಈ ಎಲ್ಲಾ ದಿನಗಳಲ್ಲೂ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೀಯ,” ಎಂದು ಅವರು ಹೇಳಿದರು. ನಾನು ಇನ್ನೇನು ಮೈನ್ ಗೇಟನ್ನು ತಲುಪಿ, ನನ್ನ ಬೈಸಿಕಲ್ನೊಡನೆ ಹೊರಗೆ ಹೆಜ್ಜೆ ಇಡುತ್ತಿದ್ದಂತೆಯೇ ಸೇವಕನು ಓಡುತ್ತಾ ಬಂದನು. ”ಸ್ವಾಮಿ, ಬಾಬಾಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ,” ಎಂದನು.

ನನ್ನ ಬೈಸಿಕಲ್ಲನ್ನು ಗೇಟಿನಲ್ಲೇ ಬಿಟ್ಟು, ಕೊಠಡಿ ಪ್ರವೇಶಿಸಿದಂತೆ ಅವರು ಪ್ರಶ್ನಾರ್ಥಕ ಕಣ್ಣುಗಳಿಂದ ಮೇಲೆ ನೋಡಿ ”ನೀನು ಮನೆಗೆ ಹೋಗುವ ಮೊದಲು ಬುದ್ಧ ಶಾಸನ ಕೌನ್ಸಿಲ್ಗೆ, ಅತ್ರೆ ಮತ್ತು ಜೋಷಿಯವರಿಗೆ ನಾನು ಹೇಳಿ ಬರೆಸಿದ್ದ ಕರಡು ಪತ್ರಗಳನ್ನೂ, ಬುದ್ಧ ಅಂಡ್ ಹಿಸ್ ಧಮ್ಮ ಗ್ರಂಥದ ಮುನ್ನುಡಿ ಮತ್ತು ಪರಿಚಯದ ಟೈಪ್ ಮಾಡಿರುವ ಪ್ರತಿಯನ್ನೂ ತೆಗೆದಿಡು ನಂತರ ನಾನು ಅವುಗಳನ್ನೊಮ್ಮೆ ಓದುತ್ತೇನೆ,” ಎಂದರು.

ಇವುಗಳನ್ನು ತಪ್ಪದೇ ಕಳುಹಿಸಬೇಕಾಗಿರುವುದರಿಂದ ಬೆಳಿಗ್ಗೆ ಬೇಗನೇ ಬರಬೇಕೆಂದು ನನ್ನನ್ನು ಕೇಳಿಕೊಂಡರು.
ನಾನು ಅವರ ಆತಂಕವನ್ನು ಚೆನ್ನಾಗಿ ಊಹಿಸಬಲ್ಲವನಾಗಿದ್ದೆ. ನಾನು ಮನೆಗೆ ಹೋಗುವುದಿಲ್ಲವೆಂದೂ ಮತ್ತು ಆ ರಾತ್ರಿ ಅಲ್ಲಿಯೇ ಉಳಿಯುವೆನೆಂದೂ ಅವರಿಗೆ ನಮ್ರವಾಗಿ ಹೇಳಿದೆ. ”ಬೇಡ, ನೀನು ಬಹಳ ದಿನಗಳು ಮನೆಗೆ ಹೋಗಿಲ್ಲ. ನಿನಗೆ ತೊಂದರೆಯುಂಟಾದದ್ದಕ್ಕೆ ನನಗೆ ಬೇಸರವಿದೆ. ಆದರೆ ನೀನು ಸಮರ್ಪಣಾ ಭಾವದಿಂದ, ಭಕ್ತಿಯಿಂದ ಮಾಡಿದ ಸೇವೆಗಾಗಿ ನಾನು ನಿನಗೆ ಕತಜ್ಞನಾಗಿದ್ದೇನೆ. ಆರಾಮವಾಗಿ ಮನೆಗೆ ಹೋಗು, ನಾನು ತುಂಬಾ ಚೆನ್ನಾಗಿದ್ದೇನೆ. ತಲೆ ಕೆಡಿಸಿಕೊಳ್ಳಬೇಡ,” ಎಂದು ಹೇಳಿದರು. ನಾನು ಅವರ ಪಾದಗಳನ್ನು ಮುಟ್ಟಿ ಪೂಜ್ಯಭಾವದಿಂದ ನಮಸ್ಕರಿಸಿ ಮನೆಗೆ ಹೊರಟೆ.

ಅದೊಂದು ನೀರಸ ರಾತ್ರಿಯಾಗಿತ್ತು. ಮಧ್ಯರಾತ್ರಿ ಮುಗಿದುಹೋಗಿತ್ತು. ಮೋಡಗಳ ಮೇಲೆ ಮೋಡಗಳು ರಾಶಿ ರಾಶಿಯಾಗಿ ಕವಿದಿದ್ದವು, ನಾನು ಹಳೆಯ ತರಕಾರಿ ಮಂಡಿ ತಲುಪಿದಾಗ ನನ್ನ ಬೈಸಿಕಲ್ನ ಮುಂದಿನ ಟೈರ್ ಪಂಕ್ಚರ್ ಆಯಿತು. ಬೈಸಿಕಲ್ಅನ್ನು ಮೂರು ಮೈಲಿಗಳಿಗೂ ಹೆಚ್ಚು ದೂರ ತಳ್ಳಿಕೊಂಡು ಹೋಗಬೇಕಾಯಿತು. ತುಂಬಾ ಹೊತ್ತು ಕಾಯ್ದು ಮಲಗಿಬಿಟ್ಟಿದ್ದ ನನ್ನ ಹೆಂಡತಿ ಮಕ್ಕಳಿಗೆ ಬೇಸರವಾಗುವಂತೆ ಬೆಳಗಿನ ಜಾವ 2 ಗಂಟೆಗೆ ಮನೆ ತಲುಪಿದೆ. ಅವಸರವಾಗಿ ಊಟ ಮಾಡಿದೆ.

ನಿದ್ರಿಸಲು ಹೋದೆ, ಬಾಬಾ ಸಾಹೇಬರ ಬಳಿ ಈ ಸಮಯದಲ್ಲಿ ಇರಬೇಕಾಗಿರುವುದರಿಂದ ನನ್ನನ್ನು ಬೇಗನೇ ಎಬ್ಬಿಸಲು ನನ್ನ ಹೆಂಡತಿಗೆ ತಿಳಿಸಿದೆ. ಬಹಳ ದಿನಗಳ ನಂತರ ಮನೆಗೆ ಬಂದಿದ್ದರಿಂದ ಅವಳು ಪ್ರಶ್ನಾರ್ಥಕ ಕಣ್ಣುಗಳಿಂದ ನನ್ನತ್ತ ನೋಡಿದಳು. ಆದರೆ ಆ ನೋಟ ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವೆಂದು ಅವಳು ಚೆನ್ನಾಗಿ ಅರಿತಿದ್ದಳು. ನನಗೂ ಮಾತನಾಡುವ ಧೈರ್ಯವಾಗಲೀ ಶಕ್ತಿಯಾಗಲೀ ಇರಲಿಲ್ಲ.
ಬೆಳಿಗ್ಗೆ ಸವಿತಾ ಅಂಬೇಡ್ಕರ್ರವರು ನನ್ನನ್ನು ಕರೆತರಲು ಬಾಬಾ ಸಾಹೇಬರ ಮನೆಯ ಅಡುಗೆ ಭಟ್ಟ ಸುಧಾಮ ಮತ್ತು ಬಾಬಾ ಸಾಹೇಬರ ಕಾರು ಚಾಲಕ ಕಾಳು ರವರನ್ನು ಬಾಬಾ ಸಾಹೇಬರ ಕಾರಿನಲ್ಲಿ ನನ್ನ ಮನೆಗೆ ಕಳುಹಿಸಿದ್ದರು.

ಬಾಗಿಲ ಮುಂದೆ ನಿಂತಿದ್ದ ಇವರಿಬ್ಬರನ್ನು ಹಾಗೂ ಬಾಬಾ ಸಾಹೇಬರ ‘ಅಂಬಾಸಿಡರ್ ಕಾರನ್ನು ನೋಡಿ ಏನೋ ಅನಾಹುತವಾಗಿರಬೇಕೆಂದು ಅನ್ನಿಸಿತು. ನನ್ನ ನರಗಳಲ್ಲಿ ಆಘಾತದ ಅಲೆಗಳು ಪ್ರವಹಿಸಿದವು. ನನ್ನ ಇಡೀ ದೇಹ ಬೆವರತೊಡಗಿತು. ನನ್ನ ಕೈ ಕಾಲುಗಳು ನಡುಗತೊಡಗಿದವು. ”ಏನಾಯಿತು? ಬಾಬಾ ಸಾಹೇಬರು ಚೆನ್ನಾಗಿದ್ದಾರೆಯೇ?,” ಎಂದು ನಾನು ಅವರನ್ನು ಕೇಳಿದೆ.

ನಿಮ್ಮನ್ನು ತುರ್ತಾಗಿ ಕರೆದುಕೊಂಡು ಬರಲು ಸವಿತಾ ಮೇಡಂರವರು ನಮ್ಮನ್ನು ಕಳುಹಿಸಿದ್ದಾರೆ ಎಂದಷ್ಟೆ ಹೇಳಿದರು. ನಾನು ನಿಂತ ಹೆಜ್ಜೆಯಲ್ಲೇ ಹೊರಟೆ. ಬಾಬಾ ಸಾಹೇಬರ ಮನೆಯನ್ನು ತಲುಪಿದಾಗ ವರಾಂಡದಲ್ಲಿ ಅಳುತ್ತಾ ಕುಳಿತಿದ್ದ ಸವಿತಾರವರು ”ನಾನಕ್ಚಂದ್! ಸಾಹೇಬರು ನಮ್ಮನ್ನು ಬಿಟ್ಟು ಹೊರಟು ಹೋದರು,” ಎಂದು ಅಳುತ್ತ ಹೇಳಿದರು.

ಬಾಬಾ ಸಾಹೇಬರ ಸಾವಿನ ವಾರ್ತೆಯು ನನ್ನ ಜೀವನದ ಅತ್ಯಂತ ಆಘಾತಕರವಾದ ಅನುಭವವಾಗಿತ್ತು. ನಾನು ಹುಚ್ಚನಂತಾದೆ. ನನ್ನ ತಲೆಯನ್ನು ಬಾಗಿಲಿಗೆ ಚಚ್ಚಿಕೊಂಡೆ. ”ಅಯ್ಯೋ ಬಾಬಾ ಸಾಹೇಬ್ ನಾನಾದರೂ ಸತ್ತು ನೀವಾದರೂ ಬದುಕಬಾರದಿತ್ತೆ ಎಂದು ಅರಚಿಕೊಂಡೆ. ಬಾಬಾ ಸಾಹೇಬರ ಮಲಗುವ ಕೊಠಡಿಯನ್ನು ಪ್ರವೇಶಿಸುತ್ತಿದ್ದಂತೆಯೇ ಸವಿತಾರವರು ನನ್ನನ್ನು ಹಿಂಬಾಲಿಸಿದರು.

ಹಿಂದಿನ ರಾತ್ರಿ ಅವರನ್ನು ಎಲ್ಲಿ ಬೀಳ್ಕೊಟ್ಟಿದ್ದೆನೋ ಅದೇ ಹಾಸಿಗೆಯ ಮೇಲೆ ಚಿರನಿದ್ರೆಯಲ್ಲಿದ್ದ ಆ ಮಹಾಪುರುಷನನ್ನು ಕಂಡು ಸ್ಥಂಭೀಭೂತನಾದೆ. ಆ ಮಹಾಪುರುಷನ ಸುತ್ತಾ ಓಡಾಡಿದೆ, ಮಂಡಿಯೂರಿ ಬಾಬಾ ಸಾಹೇಬರ ಎರಡೂ ಪಾದಗಳ ಮೇಲೆ ನನ್ನ ತಲೆಯನ್ನಿಟ್ಟು ಗೋಳಾಡತೊಡಗಿದೆ. ಹಿಂದಿನ ರಾತ್ರಿ ಅವರು ಟೇಬಲ್ ಮೇಲೆ ಇಡಲು ಹೇಳಿದ್ದ ಹಾಸಿಗೆಯ ಹತ್ತಿರ ಬಿದ್ದಿದ್ದ ಕಾಗದಗಳತ್ತ ನೋಡಿ, ನನ್ನ ದುಃಖ ಮಿತಿಮೀರಿತು.

ಹಣಕಾಸಿನ ಮುಗ್ಗಟ್ಟು
ಡಾ. ಬಿ.ಆರ್. ಅಂಬೇಡ್ಕರ್ರವರಿಗಿದ್ದ ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ಅವರೇನಾದರೂ ಅಸ್ಪೃಶ್ಯ ಜಾತಿಯಲ್ಲಿ ಹುಟ್ಟದೇ ಮೇಲ್ಜಾತಿಯಲ್ಲಿ ಹುಟ್ಟಿದ್ದರೆ ಈ ದೇಶದ ಮೊದಲ ಪ್ರಧಾನಮಂತ್ರಿಯಾಗುತ್ತಿದ್ದರು.
1947ರಲ್ಲಿ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವಾಗ ಮುಸ್ಲಿಮರಿಗಾಗಿಯೇ ಒಂದು ಪ್ರತ್ಯೇಕ ರಾಷ್ಟ್ರ ನೀಡಬೇಕೆಂದು ಮಹಮದ್ ಅಲಿ ಜಿನ್ನಾರವರ ಬೇಡಿಕೆಯಂತೆ ಅಖಂಡ ಭಾರತವನ್ನು ಭಾರತ ಮತ್ತು ಪಾಕಿಸ್ತಾನಗಳೆಂದು ಎರಡು ಪ್ರತ್ಯೇಕ ರಾಷ್ಟ್ರಗಳನ್ನಾಗಿ ವಿಭಜಿಸಿದರು ಇದೇ ರೀತಿ ಡಾ. ಅಂಬೇಡ್ಕರ್ರವರು ಮುಸ್ಲಿಮರಿಗಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದ ದಲಿತರಿಗಾಗಿಯೂ ಒಂದು ಪ್ರತ್ಯೇಕ ರಾಷ್ಟ್ರ ಕೇಳಿದ್ದರೆ, ಅಖಂಡ ಭಾರತವನ್ನು ಮೂರು ಪ್ರತ್ಯೇಕ ದೇಶಗಳನ್ನಾಗಿ ವಿಭಜಿಸಲು ಬ್ರಿಟಿಷರು ತುದಿಗಾಲ ಮೇಲೆ ನಿಂತಿದ್ದರು. ಆಗ ದಲಿತರಿಗಾಗಿ ವಿಭಜಿಸುವ ಹೊಸ ದೇಶಕ್ಕೆ ಡಾ. ಅಂಬೇಡ್ಕರ್ರವರು ತಾವು ಬದುಕಿರುವವರೆಗೂ ಪ್ರಧಾನಮಂತ್ರಿಗಳಾಗಿರಬಹುದಿತ್ತು.

ಆದರೆ ಭಗವಾನ್ ಬುದ್ಧನ ತತ್ವಗಳಿಂದ ಪ್ರಭಾವಿತರಾಗಿದ್ದ ಅಪ್ಪಟ ರಾಷ್ಟ್ರೀಯವಾದಿ ಡಾ. ಅಂಬೇಡ್ಕರ್ ಪ್ರಧಾನಿಯಾಗುವ ಆಸೆಯಿಂದ ಅಖಂಡ ಭಾರತವನ್ನು ಹೋಳು ಮಾಡಲು ಇಷ್ಟ ಪಡಲೂ ಇಲ್ಲ ಮತ್ತು ಅಂತಹ ಪ್ರಯತ್ನಕ್ಕೆ ಕೈ ಹಾಕಲೂ ಇಲ್ಲ.

ಅತಿ ಹೆಚ್ಚು ವಿದ್ಯಾಭ್ಯಾಸ ಮಾಡಿದ್ದ ಹಾಗೂ ಬಹುದೊಡ್ಡ ಜ್ಞಾನಿಯಾಗಿದ್ದ ಡಾ. ಅಂಬೇಡ್ಕರ್ರವರು ತನ್ನ ಜ್ಞಾನವನ್ನು ವಾಣಿಜ್ಯೋದ್ಯಮಕ್ಕೆ ಬಳಸಿಕೊಂಡಿದ್ದರೆ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ಹೊಂದಿದ ಬಹುದೊಡ್ಡ ವಾಣಿಜ್ಯೋದ್ಯಮಿಯಾಗಿ ದೊಡ್ಡ ಸಿರಿವಂತರಾಗಬಹುದಿತ್ತು. ಆದರೆ ತಮ್ಮ ಇಡೀ ಬದುಕನ್ನು ಅವರ ದುರ್ಬಲ ವರ್ಗದ ಏಳಿಗೆಗೆ ಮೀಸಲಿಟ್ಟರು. ಅವರು ಬದುಕಿರುವವರೆಗೂ ಆರ್ಥಿಕ ಮುಗ್ಗಟ್ಟನ್ನೂ ಎದುರಿಸುತ್ತಿದ್ದರು.

ಕೊನೆಗೆ ಈ ಮಹಾಪುರುಷ ನಿಧನರಾದಾಗ ಅವರ ಪಾರ್ಥೀವ ಶರೀರ ಕೊಂಡೊಯ್ಯಲೂ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು, ಎಲ್ಲರ ಕಣ್ಣಲ್ಲಿ ನೀರು ಹರಿಸುತ್ತದೆ.ಡಾ. ಅಂಬೇಡ್ಕರ್ರವರ ಪಾರ್ಥೀವ ಶರೀರವನ್ನು ದೆಹಲಿಯಿಂದ ಮುಂಬೈಗೆ ಸಾಗಿಸಲು ಇಂಡಿಯನ್ ಏರ್ಲೈನ್ಸ್ನ ಲಘು ವಿಶೇಷ ವಿಮಾನವನ್ನು ಬಾಡಿಗೆಗೆ ಕೇಳಿದಾಗ 5000 ರೂಪಾಯಿ ಬಾಡಿಗೆಯಾಗುತ್ತದೆಂದು ತಿಳಿಸಲಾಯಿತು. ಮಾಜಿ ಕಾನೂನು ಸಚಿವರೂ ಆಗಿದ್ದ ಅಂಬೇಡ್ಕರ್ರವರ ಅಲ್ಮೆರಾವನ್ನು ತೆಗೆದು ನೋಡಿದಾಗ ಅಲ್ಲಿ ಕೇವಲ 300 ರೂಪಾಯಿಗಳು ಮಾತ್ರ ಇತ್ತು.

ನಂತರ ರತ್ತುರವರು ಶ್ರೀಮತಿ ಸವಿತಾ ಅಂಬೇಡ್ಕರ್ರವರಲ್ಲಿ ಉಳಿಕೆ ಹಣ ಕೇಳಿದಾಗ ಅವರು ನನ್ನ ಹತ್ತಿರ ಸ್ವಲ್ಪವೂ ಹಣವಿಲ್ಲವೆಂದರು. ಟಿ.ಬಿ. ಬೋನ್ಸ್ಲೆ ಎಂಬುವರು ತನ್ನ ಅಂಬಾಸಿಡರ್ ಕಾರನ್ನು ಮಾರಾಟ ಮಾಡಿ ಹಣ ನೀಡಲು ಮುಂದಾದರು. ಆದರೆ ಆ ಕಾರನ್ನು ತಕ್ಷಣಕ್ಕೆ ಕೊಳ್ಳಲು ಯಾರು ಸಹ ಮುಂದೆ ಬರಲಿಲ್ಲ. ಕೊನೆಗೆ ಅಂದಿನ ಕೇಂದ್ರ ಸರ್ಕಾರವನ್ನು ಕೋರಲಾಯಿತು.

ಆಗ ಕೇಂದ್ರ ಸರ್ಕಾರದ ವಿಮಾನಯಾನ ಖಾತೆ ಸಚಿವರು ಸದ್ಯಕ್ಕೆ ನಿಮ್ಮ ಕೈಯ್ಯಲ್ಲಿರುವ ಹಣವನ್ನು ಪಾವತಿಸಿ, ಉಳಿಕೆ ಹಣವನ್ನು ನಂತರ ಪಾವತಿಸಿ ಎಂದು ಹೇಳಿ ವಿಶೇಷ ವಿಮಾನ ವ್ಯವಸ್ಥೆ ಮಾಡಿದರು. ನಂತರ ಈ ಉಳಿಕೆ ಹಣವನ್ನು ಬಾಂಬೆಯಲ್ಲಿ ಡಾ॥ ಅಂಬೇಡ್ಕರ್ ರವರ ನಿಕಟವರ್ತಿಗಳಾದ ಬಿ.ಕೆ. ಗಾಯಕ್ವಾಡ್ರವರು ಪಾವತಿಸಿದರು.

ಚೈತ್ಯಭೂಮಿ ಮುಂಬೈನ ಸಮುದ್ರ ತೀರದಲ್ಲಿರುವ ದಾದರ್ನಲ್ಲಿ ಡಾ. ಅಂಬೇಡ್ಕರ್ರವರ ಅಂತಿಮ ಸಂಸ್ಕಾರವು ಬೌದ್ಧಧರ್ಮದ ವಿಧಿ ವಿಧಾನಗಳಂತೆ 1956ರ ಡಿಸೆಂಬರ್ 7ರ ಸಂಜೆ 7.30ಕ್ಕೆ ನಡೆಯಿತು. ಆ ಸ್ಥಳವನ್ನು ‘ಚೈತ್ಯಭೂಮಿ’ ಎಂದು ಕರೆಯಲಾಗುತ್ತದೆ. ಆ ಸ್ಥಳದಲ್ಲಿ ಈಗ ಒಂದು ಬಹತ್ ಸ್ಮಾರಕ ನಿರ್ಮಿಸಲಾಗಿದೆ. ಆ ಸ್ಮಾರಕದೊಳಗೆ ಬಾಬಾಸಾಹೇಬರ ಚಿತಾಭಸ್ಮವನ್ನು ಇಡಲಾಗಿದೆ.

”ಬಾಬಾ ! ನಿನ್ನ ಸೇವಕ ನಾನು ರತ್ತು ಬಂದಿದ್ದೇನೆ, ನಾನು ಬಂದಿದ್ದೇನೆ… ಎದ್ದೇಳಿ ಬಾಬಾ… ನನಗೆ ಈ ದಿನ ಮಾಡಬೇಕಾದ ಕೆಲಸಗಳ ಬಗ್ಗೆ ಆದೇಶ ನೀಡಿ, ನನಗೆ ಕೆಲಸ ಕೊಡಿ, ನಾನು ಟೈಪ್ ಮಾಡಲು ನೀವು ರಾತ್ರಿ ಬರೆದಿರುವ ಹಾಳೆಗಳನ್ನು ನೀಡಿ ಇವುಗಳನ್ನು ಬೇಗ ಟೈಪ್ ಮಾಡಿ ಮುಗಿಸು ಎಂದು ಆಜ್ಞೆ ಮಾಡಿ,” ಎಂದು ಜೋರಾಗಿ ಹೇಳುತ್ತಾ ದುಃಖದಿಂದ ಅತ್ತುಬಿಟ್ಟೆ.

ಸಂಗ್ರಹ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಹಳ್ಳಿ ಹೆಜ್ಜೆಯ ಸುತ್ತು

Published

on

ಸಾಂದರ್ಭಿಕ ಚಿತ್ರ
  • ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್

ಭಾರತದ ಜನಸಂಖ್ಯೆಯ ಸುಮಾರು 70% ಕ್ಕಿಂತ ಹೆಚ್ಚು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಅಂತೆಯೇ ನಾವು ಸೇವಿಸುವ ಆಹಾರ ಮತ್ತು ಕೃಷಿ ಉತ್ಪನ್ನಗಳ ಮುಖ್ಯ ಮೂಲ ಗ್ರಾಮಗಳು. ಸ್ವಾತಂತ್ರ್ಯದ ನಂತರ ಗ್ರಾಮಗಳು ಜನಸಂಖ್ಯೆ ಮತ್ತು ಶಿಕ್ಷಣ ಎರಡರಲ್ಲೂ ಹೆಚ್ಚು ಬೆಳೆದಿದೆ.

ಹಳ್ಳಿಯ ಜನರು ತಮ್ಮ ಕೆಲಸಕ್ಕೆ ಹೆಚ್ಚು ಸಮರ್ಪಿತರಾಗಿದ್ದಾರೆ, ನಗರದ ಜನರು ಸಹ ಹೆಚ್ಚಿನ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿರುತ್ತಾರೆ ಮತ್ತು ನಗರ ಪ್ರದೇಶದ ಜನರಿಗು ಹಳ್ಳಿ ಜನರಿಗು ತುಂಬಾನೆ ವ್ಯತ್ಯಾಸಗಳನ್ನು ಕಾಣಬಹುದು. (ಉಡುಗೆ-ತೊಡುಗೆ, ಕೆಲಸ-ಕಾರ್ಯಗಳಲ್ಲಿ, ಊಟೋಪಚಾರದಲ್ಲಿ)

ಇದಲ್ಲದೆ ಇಡೀ ಗ್ರಾಮವು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುತ್ತದೆ ಮತ್ತು ಯಾವುದೇ ರೀತಿಯ ಸಂಘರ್ಷವಿಲ್ಲದೆ ಗ್ರಾಮಸ್ಥರು ಪರಸ್ಪರ ದುಃಖ ಮತ್ತು ಸಂತೋಷದಲ್ಲಿ ಮುಂದೆ ಬರುತ್ತಾರೆ ಮತ್ತು ಅವರು ಸಹಾಯಕ ಸ್ವಭಾವವನ್ನು ಹೊಂದಿದ್ದಾರೆ.

ಗ್ರಾಮದ ಮಹತ್ವ

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಗ್ರಾಮಗಳು ಅಸ್ತಿತ್ವದಲ್ಲಿವೆ ಮತ್ತು ಸರಕುಗಳ ಬೇಡಿಕೆ ಮತ್ತು ಪೂರೈಕೆಗಾಗಿ ಅವು ಪರಸ್ಪರ ಅವಲಂಬಿತವಾಗಿವೆ. ಅಂತೆಯೇ ಅವು ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿವೆ. ಭಾರತವು ತನ್ನ ದ್ವಿತೀಯ ಮತ್ತು ತೃತೀಯ ಕ್ಷೇತ್ರಕ್ಕಿಂತ ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿರುವ ದೇಶ.

ಅಲ್ಲದೆ ಭಾರತವು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ ಮತ್ತು ಈ ದೊಡ್ಡ ಜನಸಂಖ್ಯೆಯನ್ನು ಪೋಷಿಸಲು ಅವರಿಗೆ ಹಳ್ಳಿಗಳಿಂದ ಬರುವ ಆಹಾರ ಬೇಕು ಇದು ನಮಗೆ ಮತ್ತು ಪ್ರತಿಯೊಬ್ಬರಿಗೂ ಏಕೆ ಮುಖ್ಯವಾಗಿದೆ ಎಂಬುದನ್ನು ಇದು ವಿವರಿಸುತ್ತದೆ. ಗ್ರಾಮಗಳು ಆರ್ಥಿಕತೆಯ ಬೆನ್ನೆಲುಬು ಎಂದು ನಾವು ಹೇಳಬಹುದು.

ಇದನ್ನೂ ಓದಿ | ಚಿತ್ರದುರ್ಗ | ಕೊರೋನಾದಿಂದ ಪಬ್ಲಿಕ್ ಟಿವಿ ಕ್ಯಾಮೆರಾಮನ್ ಬಸವರಾಜ್ ಕೋಟಿ‌ ಸಾವು

ಅಲ್ಲದೆ ನನ್ನ ಗ್ರಾಮವು ಭಾರತದ ಎಲ್ಲಾ ಹಳ್ಳಿಗಳ ಒಂದು ಭಾಗವಾಗಿದ್ದು, ಜನರು ಇನ್ನೂ ಶಾಂತಿ ಮತ್ತು ಸೌಹಾರ್ದಯುತವಾಗಿ ವಾಸಿಸುತ್ತಿದ್ದಾರೆ. ಗ್ರಾಮಗಳ ಜನರು ಸ್ನೇಹಪರರಾಗಿದ್ದಾರೆ ನಗರ ಪ್ರದೇಶದ ಜನರಿಗೆ ಹೋಲಿಸಿದರೆ ಸಂತೋಷದಾಯಕ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಾರೆ.

ಇದಲ್ಲದೆ ಮರಗಳು, ವೈವಿಧ್ಯಮಯ ಬೆಳೆಗಳು, ಗದ್ದೆ-ತೋಟ, ಹೂವುಗಳ ವೈವಿಧ್ಯತೆ ಮತ್ತು ಹಳ್ಳಕೊಳ್ಳಗಳು ಇತ್ಯಾದಿಗಳಿವೆ. ಇವೆಲ್ಲವುಗಳಲ್ಲದೆ ರಾತ್ರಿಯಲ್ಲಿ ತಂಪಾದ ಆಹ್ಲಾದಕರವಾದ ಗಾಳಿ ಮತ್ತು ಹಗಲಿನಲ್ಲಿ ಬೆಚ್ಚಗಿನ ಗಾಳಿ ಜೋತೆಗೆ ಪೈರಿನ ಸುವಾಸನೆ ಬೀಸುತ್ತದೆ.

ನನ್ನ ಹಳ್ಳಿ

ನನ್ನ ಹಳ್ಳಿಯು ತಗ್ಗು ಪ್ರದೇಶದಲ್ಲಿದ್ದು ಬೆಚ್ಚಗಿನ ಬೇಸಿಗೆಯನ್ನು, ಜಿಟಿ-ಜಿಟಿ ಮಳೆಯನ್ನು ಮತ್ತು ಚುಮು-ಚುಮು ಚಳಿಗಾಲವನ್ನು ಹೊಂದಿದೆ. ಹೆಚ್ಚಾಗಿ ರಜಾದಿನಗಳ ಕಾರಣ ಬೇಸಿಗೆಯಲ್ಲಿ ಪ್ರತಿಯೊಬ್ಬರೂ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಬೇಸಿಗೆಯಲ್ಲಿ ನಗರಕ್ಕಿಂತ ಗ್ರಾಮವು ತಂಪಾಗಿರುತ್ತದೆ. ಅಲ್ಲದೆ ತಂಗಾಳಿಯಿಂದಾಗಿ ನಮಗೆ ಹಳ್ಳಿಯಲ್ಲಿ ಹವಾನಿಯಂತ್ರಣ ಅಗತ್ಯವಿಲ್ಲ.

ಒಂದು ಹಳ್ಳಿಯಲ್ಲಿ ನೀವು ಹಸಿರನ್ನು ನೋಡುತ್ತೀರಿ ಮತ್ತು ಪ್ರತಿಯೊಂದು ಮನೆಯಲ್ಲೂ ಅವರ ಅಂಗಳದಲ್ಲಿ ಕನಿಷ್ಠ ಒಂದು ಮರವಿರುತ್ತದೆ. ಇದಲ್ಲದೆ ಬೇಸಿಗೆ ಸುಗ್ಗಿಯ ಕಾಲವಾಗಿರುವುದರಿಂದ ಹಳ್ಳಿಯಲ್ಲಿ ರೈತರು ತಮ್ಮ ಬೆಳೆಗಳನ್ನು ವಕ್ಕಲು ಮಾಡಿಕೊಳ್ಳುವುದನ್ನು ಕಾಣಬಹುದು ಹಳ್ಳಿಯಲ್ಲಿ ಮೊದಲು ಹೆಚ್ಚು ಕಚ್ಚಾ ಮನೆ (ಮಣ್ಣು ಮತ್ತು ಇಟ್ಟಿಗೆಗಳಿಂದ ಮಾಡಿದ ಮನೆಗಳು) ಇರುವುದನ್ನು ಕಾಣುತ್ತಿದ್ದೆವು ಆದರೆ ಈಗ ಸನ್ನಿವೇಶವು ಬದಲಾಗಿದೆ ಇಂದು ಪಕ್ಕಾ ಮನೆಯ ಸಂಖ್ಯೆ (ಕಾಂಕ್ರೀಟ್ ಮತ್ತು ಇತರ ವಸ್ತುಗಳಿಂದ ಮಾಡಲ್ಪಟ್ಟಿದೆ) ಹೆಚ್ಚಾಗಿದೆ. ಅಲ್ಲದೆ ಗ್ರಾಮದ ಜನರಿಗಿಂತ ಹಳ್ಳಿಯ ಜನರು ಸ್ನೇಹಪರರಾಗಿದ್ದಾರೆ.

ನನ್ನ ಹಳ್ಳಿಯ ಬಗ್ಗೆ ನಾನು ಹೆಚ್ಚು ಇಷ್ಟಪಡುವ ವಿಷಯವೆಂದರೆ ತಾಜಾ ಮತ್ತು ಪುನರುಜ್ಜೀವನಗೊಳಿಸುವ ಗಾಳಿ. ನಾವು 4-5 ಗಂಟೆಗಳ ಕಾಲ ಮಲಗಿದ್ದರೂ ಗಾಳಿಯು ಉಲ್ಲಾಸದ ಭಾವನೆಯನ್ನು ನೀಡುತ್ತದೆ. ಬಹು ಮುಖ್ಯವಾಗಿ ರಾತ್ರಿಯಲ್ಲಿ ನಾನು ನಗರದಲ್ಲಿ ನೋಡಲು ಸಾಧ್ಯವಾಗದ ನಕ್ಷತ್ರಗಳನ್ನು ನೋಡುತ್ತೇನೆ ಮತ್ತು ಎಣಿಸುತ್ತೇನೆ.

ನಮ್ಮ ಹಳ್ಳಿಯು ನಮ್ಮ ರಜಾದಿನಗಳಲ್ಲಿ ಅಥವಾ ನಾವು ದಣಿದಿದ್ದಾಗ ಮತ್ತು ವಿಶ್ರಾಂತಿ ಪಡೆಯಲು ಬಯಸಿದಾಗ ಭೇಟಿ ನೀಡಲು ಇಷ್ಟಪಡುವ ಸ್ಥಳವಾಗಿದೆ. ಹಳ್ಳಿಯು ನಗರದ ಮಾಲಿನ್ಯ ಮತ್ತು ಶಬ್ದದಿಂದ ದೂರವಿರುವ ಸ್ಥಳವಾಗಿದೆ. ಅಲ್ಲದೆ ನೀವು ಹಳ್ಳಿಯ ಮಣ್ಣಿನೊಂದಿಗೆ ಸಂಪರ್ಕವನ್ನು ಅನುಭವಿಸಿದ್ದಾದರೆ ನಿಮ್ಮ ಜೀವನ ತುಂಬಾ ಸುಖಕರವಾಗಿರುವುದಾಗಿದೆ ಎಂಬುದನ್ನ ತಿಳಿದುಕೊಳ್ಳಿ ಏಕೆಂದರೆ ಮಣ್ಣಿನ ವಾಸನೆಯೇ ಹಾಗೆ ಅದನ್ನ ಪಡೆಯಲು ಅದೃಷ್ಟವೇ ಮಾಡಿರಬೇಕು.

ಯಾರಾದರು ಹಳ್ಳಿಗಳ ಬಗ್ಗೆ ಯಾವುದು ಉತ್ತಮ ಎಂಬ ಪ್ರಶ್ನೆಗೆ ಹಳ್ಳಿಗಳಲ್ಲಿ ತಾಜಾ ಗಾಳಿ, ನದಿಗಳು, ಮರಗಳು, ಮಾಲಿನ್ಯವಿಲ್ಲದ ವಾತವರಣ, ಮಣ್ಣಿನ ವಾಸನೆ, ತಾಜಾ ಮತ್ತು ಸಾವಯವ ಆಹಾರ, ಮತ್ತು ಇನ್ನೂ ಅನೇಕ ಉತ್ತಮ ಒಳ್ಳೆಯ ವಿಷಯಗಳಿವೆ ಎಂಬ ಉತ್ತರ ಪ್ರತ್ಯಕ್ಷವಾಗಿ ಕಾಣಸಿಗುತ್ತದೆ.

ಗ್ರಾಮಗಳಲ್ಲಿ ಅಭಿವೃದ್ಧಿಯ ಕೊರತೆಯಿದೆ ಎಂಬುದು ಹಾಸ್ಯಸ್ಪದವಾದ ಸಂಗತಿಯಾಗಿದೆ ಹಳ್ಳಿಗಳು ಸಾಕಷ್ಟು ಉತ್ತಮವಾಗಿ ಅಭಿವೃದ್ಧಿಗೊಂಡಿವೆ ಮತ್ತು ಅವು ನಗರಗಳಿಗಿಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಎಂಬುದು ಸಂತಸದ ಸಂಗತಿಯಾಗಿದೆ.

ಕೋನೆಯದಾಗಿ ಒಂದು ಮಾತು ಹೇಳುವುದಾದರೆ ದೇಶದ ಬೆನ್ನೆಲುಬು ರೈತರಾದರೆ. ದೇಶದ ಹೆಜ್ಜೆಗುರುತು ಹಳ್ಳಿಗಳಾಗಿವೆ ಹಳ್ಳಿಗಳನ್ನ ಬಿಟ್ಟು ದೇಶವಿಲ್ಲ ಎಂಬುದು ವಾಸ್ತವದ ಸಂಗತಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ನುಡಿ ನಮನ | ಡಾ. ವಿಠಲ ಭಂಡಾರಿ, ಕ್ಷಮಿಸಿ ಸರ್

Published

on

ಡಾ. ವಿಠಲ ಭಂಡಾರಿ
  • ಡಾ. ಗಿರೀಶ್ ಮೂಗ್ತಿಹಳ್ಳಿ, ಚಿಕ್ಕಮಗಳೂರು

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಂಶೋಧನೆ ಮಾಡುವಾಗ ಡಾ. ಆನಂದ ಪಾಟೀಲ ಅವರ ಸಲಹೆಯಂತೆ ‘ಪ್ರೀತಿಯ ಕಾಳು’ ಪುಸ್ತಕ ಬೇಕಿತ್ತು. ಈ ಪುಸ್ತಕ ವಿಠಲ ಭಂಡಾರಿ ಅವರ ತಂದೆ ಆರ್. ವಿ. ಭಂಡಾರಿ ಅವರ 13 ಮಕ್ಕಳ ನಾಟಕಗಳ ಸಂಕಲನ. ಈ ಕೃತಿಯನ್ನು ಡಾ. ವಿಠಲ ಭಂಡಾರಿ ಅವರು ಸಂಪಾದಿಸಿದ್ದರು. ಮಾನ್ಯ ಭಂಡಾರಿಯವರನ್ನು ಕೇಳಿಕೊಂಡಾಗ ನನಗೆ ಅಂಚೆ ಮೂಲಕ ಕಳುಹಿಸಿಕೊಟ್ಟಿದ್ದರು.

ಬೇಕಾದ ಪೂರಕ ಮಾಹಿತಿಯನ್ನು ಫೋನಿನಲ್ಲಿಯೇ ಚರ್ಚಿಸಿದ್ದರು. ನನ್ನ ಸಂಶೋಧನೆಯಲ್ಲಿ ಜತೆ ಇದ್ದರು. ಆದರೆ ಒಮ್ಮೆ ಎಂದೂ ಭೇಟಿಯಾದವರಲ್ಲ. ಕಾರಣ ದೂರದೂರು ಎಂದು! ಕರೆ ಮಾಡಿದರೆ, ಅವರು ಎಷ್ಟೇ ಕಾರ್ಯನಿರತರಾಗಿದ್ದರೂ ಕರೆ ಸ್ವೀಕರಿಸಿ ವರ್ತಮಾನವನ್ನು ತಿಳಿಸುತ್ತಿದ್ದರು. ಸಂಶೋಧನಾ ಪ್ರಬಂಧವು ಕೃತಿಯಾದಾಗ ಅವರಿಗೆ ಒಂದು ಪ್ರತಿ ಕಳುಹಿಸಿ ಕೊಟ್ಟೆ.. ತುಂಬಾ ಸಂಭ್ರಮಿಸಿದ್ದರು. ಮೆಚ್ಚುಗೆ ಮಾತುಗಳನ್ನಾಡಿದ್ದರು.

ಕಳೆದ ಲಾಕ್ ಡೌನ್ ಸಮಯದಲ್ಲಿ ನನ್ನ ಪುಸ್ತಕವನ್ನು ಆನ್ ಲೈನ್ ಬಿಡುಗಡೆ ಮಾಡೋಣ ಎಂದು ಕಾರ್ಯಕ್ರಮದ ಕ್ರಿಯಾಯೋಜನೆಯನ್ನು ತಯಾರಿಸಿದ್ದರು… ಇಷ್ಟೆಲ್ಲ ಕಾರ್ಯಗಳು ಪರಸ್ಪರ ಭೇಟಿಯಾಗದೆ ಆದ ವಿಶೇಷ ಅನುಭವಗಳು. ಈ ಮಧ್ಯೆ ಅವರಿಗೆ ಕರೆ ಮಾಡುವುದಕ್ಕೆ ಆಗಿರಲಿಲ್ಲ.

ಆದರೆ ಇಂದಿನ ಅವರ ಅಗಲಿಕೆಯ ಸುದ್ದಿ ನನ್ನನ್ನ ನಿಶ್ಚಲವಾಗಿಸಿದೆ…! ಸಾಮಾನ್ಯ ರೀತಿಯಲ್ಲಿ ಮಾನ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಬಹುದು.. ಆದರೆ ಅವರನ್ನು ಭೇಟಿ ಮಾಡಬೇಕೆಂಬ ಆಸೆಯ ಚಿಗುರಿಗೆ ಕೆಟ್ಟ ಸುದ್ದಿಯ ಸಿಡಿಲೊಡೆದಿದೆ… ಕ್ಷಮಿಸಿ ಸರ್… ನನ್ನ ಸರದಿಯೂ ಬಂದಾಗ ಮೇಲೆ ಬರುವೆ.. ಸಿಕ್ಕೋಣ.. ಈ ಅಮಾನವೀಯ ವ್ಯವಸ್ಥೆಯ ಬಗ್ಗೆ ಚರ್ಚೆ ಮಾಡೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಏನಿದು ವರ್ಷದುಡುಕು;ಹೊಸ್ತುಡುಕು..?

Published

on

ಕೆ.ಶ್ರೀಧರ್ (ಕೆ.ಸಿರಿ)
  • ಕೆ.ಶ್ರೀಧರ್ (ಕೆ.ಸಿರಿ)

ಏಪ್ರಿಲ್ 13 ಕ್ಕೆ ಚಾಂದ್ರಮಾನ ಯುಗಾದಿ ಹಬ್ಬ ನಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯರಿಗೆ ನಿಜವಾದ ಹೊಸ ವರ್ಷ ಬೆಳಗ್ಗೆ ಎದ್ದು ನೀರಿಗೆ ಬೇವಿನ ಎಲೆ ಹಾಕಿ ಮೈಗೆಲ್ಲಾ ಎಣ್ಣೆ ಸವರಿಕೊಂಡು ಎಣ್ಣೆ ಸ್ನಾನ ಮಾಡಿ ಹೊಸ ಹುಡುಪುಗಳನ್ನು ಧರಿಸಿ ಮನೆಗೆ ತಳಿರು ತೋರಣ ಕಟ್ಟಿ ಇಷ್ಟ ದೇವರಿಗೆ ಪೂಜೆ ಸಲ್ಲಿಸಿ ಬೇವು ಬೆಲ್ಲ ಸವಿದು ತಾಯಿ ಮಾಡಿದ ಸಿಹಿಯಾದ ತಿಂಡಿ ತಿನಿಸುಗಳ ತಿಂದು ಇಡೀ ದಿನ ಸಂಭ್ರಮದಿಂದ ಹಬ್ಬ ಆಚರಿಸುವುದು ಬಂಧು ಬಾಂಧವರೆಲ್ಲರೂ ಸಂಭ್ರಮ ಪಡುವುದು ಸಂಜೆಯ ನಂತರ ಚಂದ್ರನನ್ನು ನೋಡಿ ಹೊಸ ವರ್ಷ ಆರಂಭಿಸುವುದು ವಿಶೇಷ.

ಯುಗಾದಿ ಎಂದರೆ ಇಷ್ಟೇ ಎಂದು ನಾನು ತಿಳಿದಿದ್ದೆ. ಆದರೆ ಇನ್ನೊಂದು ದಿನವೂ ಹಬ್ಬವಿದೆ ಆ ಹಬ್ಬ ತುಂಬಾ ವಿಶೇಷ ಎನಿಸಿದ್ದು ಈ ವರ್ಷದುಡುಕಿನ ಸಂಭಾಷಣೆ ಕೇಳಿದ ನಂತರವೆ. ನಾನು ಏಪ್ರಿಲ್ 14 ರಂದು ನನ್ನ ಕೆಲಸದ ನಿಮಿತ್ತ ಎಲ್ಲಿಯೋ ಹೊರಟಿದ್ದೆ ಪೆಟ್ರೋಲ್ ಹಾಕಿಸಲು ಬಂಕ್ ನ ಬಳಿ ಹೋದಾಗ ಯಾರೋ ಒಬ್ಬ ಯುವಕ ಬ್ಯಾಗ್ ಹಾಕಿಕೊಂಡು ಯಾವುದೋ ಊರಿಗೆ ಹೋಗುವಂತಿತ್ತು ಅದೇ ಸಂದರ್ಭದಲ್ಲಿ ಬಂದ ಆ ಯುವಕನ ಗೆಳೆಯ ಈ ರೀತಿಯಾಗಿ ಸಂಭಾಷಣೆ ಬೆಳೆಸಿದ.

“ಡೋ ಎಲ್ಲಿಗಡಾ ಹೋಗ್ತಿದೇ’?_
“ಬೆಂಗಳೂರಿಗೆ ಹೋಯ್ತಾವ್ನೀ ಕಯ್ಯಾ”_
“ಯೋ ಎಲ್ಗೋದೇ ಬಾ ನಾಳೆ ಹೊಸ್ತುಡುಕದೆ ಕಣಾ ತೀರಿಸ್ಗಂಡ್ ಹೋಗೈ”
“ಇಲ್ಲ ಬಾಮೈದ ಟೇಮಾಗದ ಆಗಲೇ ರಜಾ ತೀರದ ಕಣಾ ಹೋಗ್ಬೇಕ”
“ಇದ್ಯಾಂವಂಡಾ ಇವಾ ವರ್ಷದುಡುಕು ಮಾಡಾದ್ ಬುಟ್ಟು ಕೆಲಸಕ್ಕ ಹೋದನಂತೆ ಇಮ”
“ಯಾನ್ ಮಾಡದಯ್ಯ ನೀವ್ ಮಾಡ್ರೀ ಹೊಸ್ತುಡುಕ ನಾ ಮುಂದಿನ ಕಿತ ಬರ್ತೀನಿ ಕಣಾ”
“ಆಯ್ತು ಹೋಗಿದ್ದ್ ಬೊಯ್ಯ”
“ನೋಡ್ದಾ ಬಾವೋಜಿ ಇವನ್ ಸುಮಾನ್ವಾ ಹಬ್ಬ ಮಾಡೋ ಬಡ್ಡಿದೇ ಅಂದ್ರೆ ಕೆಲಸಕ್ಕೆ ಹೋದನಂತೆ ಇಮ”
“ನಡೈ ಬಾಮೈದ ಯಾನ್ಹಾ ಮಾಡ್ಲಿ ಹೊಣ್ಣೇರ್ ಕಟ್ಬೇಕು ಬ್ಯಾಗನ್ ನಡೈ ಊರ್ಗೋಗಮು”

ಎಂದು ಮಾತನಾಡುತ್ತಾ ಮಾತನಾಡುತ್ತಾ ಹಾಗೇಯೇ ದ್ವಿಚಕ್ರ ವಾಹನದಲ್ಲಿ ಊರ ಕಡೆ ಹೊರಟರು. ನಾನು ವಿಜಯನಗರ ಜಿಲ್ಲೆಯವನಾದುದರಿಂದ ಈ ವರ್ಷದುಡುಕು/ಹೊಸ್ತುಡುಕು,ಹೊಣ್ಣೇರ್ ಕಟ್ಟೋದು ಈ ಪದಗಳು ಅಪರಿಚಿತ ಅನಿಸ್ತು ತಲೆಯಲ್ಲಿ ಒಂಥರಾ ಈ ಪದಗಳು ಕೊರೆಯಲು ಶುರುಮಾಡಿದವು.

ಚಾಮರಾಜನಗರ ಮೊದಲೇ ದೇಸಿ ಭಾಷೆಯ ಪದಗಳಿಗೆ ಫೇಮಸ್ಸು ಅಂತ ನನಗೆ ಗೊತ್ತಿತ್ತು ಆ ಕುತೂಹಲ ಇನ್ನೂ ನನ್ನಲ್ಲಿ ಹೆಚ್ಚಾಯ್ತು ಹೇಗಾದರೂ ಮಾಡಿ ಈ ಪದಗಳ ಅರ್ಥ ತಿಳ್ಕೋಬೇಕು ಇದ್ಯಾವುದೂ ಇದು ವರ್ಷದುಡುಕು/ಹೊಸ್ತುಡುಕು ಹಬ್ಬ ಅನ್ನೋ ಉತ್ಕಟ ಆಸಕ್ತಿ ಹೆಚ್ಚಾಯಿತು ಹೀಗೆಯೇ ಹಳ್ಳಿಗೆ ಹೋದಾಗ ಗ್ರಾಮಸ್ಥರನ್ನು ಕುರಿತು ಹೀಗೆ ಸಂಭೋಧಿಸಿದೆ.

“ಏನ್ರೀ ಯಜಮಾನ್ರೇ ವರ್ಷದುಡುಕು ಜೋರಾ”?
“ವ್ಹಾ ಬನ್ನಿ ಸಾ ಜೋರದ ಕಣಾ, ಹಬ್ಬ ಅಂದಮ್ಯಾಗ ಇದ್ದಿದ್ದೇ ಅಲ್ವಾ ಕಣೀ ಸಾ”
“ಅದ್ಸರಿ ಏನೀ ಈ ಹೊಸ್ತುಡುಕು ಅಂದ್ರೆ”?
“ವ್ಹಾ ನೀವು ಸರಿಗೆ ಕೇಳಿದ್ರೀ ಕಪಾ ಇನ್ನೇನಾ ಸಾ ಯುಗಾದಿ ಮುಗಿದ ಮಾರ್ನೇ ದಿನಾ, ಎಲ್ಲರೂ ಮನೇಲೆ ಇರ್ತಾರ, ಹೈಕ ಮಕ್ಕ ನೀರೇರೆಚಗತಾರ, ಒಬ್ಬಿಟ್ಟು ಪಾಯಾಸ,ತಿಂಡಿ ಗಿಂಡಿ ಮಾಡ್ಕಂಡಮಾ ದ್ಯಾವ್ರಗ ಎಡೆ ಗಿಡೆ ಮಡಗಿ ಮಕ್ಕ ಮರಿ ತಿನ್ಕಂಡು ಉಣ್ಕಂಡು ಹಟ್ಟೀಲಿ ಜಾಲಿಯಾಗಿ ಇರ್ತಾರ”.
“ಇಷ್ಟೇಯಾ ವರ್ಷದುಡುಕು ಅಂದ್ರೆ”?
“ಅದ ಸಾ ಆಡೋರು ಇಸ್ಪೀಟ್ ಗಿಸ್ಪೀಟ್ ಆಡ್ತಾರ ಒಂಥರಾ ರಜೆ ಇದ್ದಂಗೆ ಸಾ ದಿನವೆಲ್ಲಾ ಹಟ್ಟೀಲೆ ಇರ್ತಾರ”

“ಅದ್ಸರಿ ಈ ಹೊಣ್ಣೇರ್ ಕಟ್ಟೋದು ಅಂದ್ರೆ ಏನು”?”ಅದಿನ್ಯಾನಿದ್ದು ಸಾ ಆರಂಭಕಾರ್ರಿಗೆ ಇದು ಹೊಸ್ವರ್ಸ ಇದ್ದಂಗ ಎತ್ಗಳಿಗ ನೊಗ ಹಾಕಿ,ನೇಗ್ಲು ಹೂಡಿ, ಕಕ್ಕೆ ಹೂವ,ಗಣಿಗಲ ಹೂವ ಎತ್ಗೋಳ್ ಕೊಂಬಿಗೆ ಕಟ್ಟಿ ಊರಾಗ ಒಂದ್ ರೌಂಡ್ ಸುತ್ತಿಸಿಗಂಡಮಾ ಪೂಜಾ ಗೀಜಾ ಮಾಡಿ ಆರಂಭ ಶುರು ಮಾಡೋದಕ್ಕ ಹೊಣ್ಣೇರ್ ಕಟ್ಟೋದು ಅಂತಾರೆ ಅಷ್ಟೇಯಾ ಅದು ಈಗ ಅಷ್ಟೋಂದಿಲ್ಲ ಸಾ ಕೆಲವು ಕಡಿಗ್ಯಾ ಮಾಡ್ತಾರಾ ಕೆಲವು ಕಡಿಗ್ಯಾ ಬುಡ್ತಾರಾ ಅದೆಲ್ಲಾ ಒಂದ್ ಜಮಾನ್ದಾಗಿತ್ತು”

“ಓಹ್ ಸರಿ ಈ ಕಕ್ಕೆ ಹೂವು ಗಣಗಲ ಹೂವು ಅಂದ್ರೆ ಯಾವುದು”? “ಅದೇ ಸಾ ಈ ರೋಡ್ಚೋರಿ ಕೆಂಪ್ಗ ಇರ್ತಾವಲ್ಲ ಅವೇ ಕಕ್ಕೆ ಹೂವು, ಅರಿಶಿಣ ಬಣ್ಣದ ಹೂವ್ ಇರ್ತಾವಲ್ಲ ಅವು ಗಣಿಗಲ್ವೂ ಈ ರಸ್ತಿ ಅಗಲೀಕರಣದಿಂದ ಆ ಹೂವುಗಳು ಸಿಗೋದೆ ಅಪರೂಪ ಆಗ್ಬುಟ್ಟದಾ!”

“ಹೂಂ… ಸರಿ ಇಷ್ಟೇಯಾ ಹಾಗಾರೆ ಹೊಸ್ತುಡುಕು ಅಂದ್ರೆ”?
“ಹೂಂ ಇನ್ನೂ ಅದೆ ಮಾಡೋರು ಮರಿ ಕೂದು ಬಾಡ್ಗಿಡೂಟಾ ಮಾಡ್ತಾರೆ ಎಣ್ಣಿ ಗಿಣ್ಣಿ ಹೊಡ್ದು ಜಾಲಿ ಮಾಡ್ತಾರೆ”
“ಈ ವರ್ಷದುಡುಕ್ಲೀ ಮಾಂಸದೂಟ ಕಡ್ಡಾಯಾ ನಾ”?
“ಹೇ ಹಾಗೇನಿಲ್ಲಾ ಸಾ ಆದರೆ ಒಂದ್ ಜಮಾನ್ದಾಗಿತ್ತಂತೆ ಯುಗಾದಿ ಆದ್ ಮರುದಿನ ಮಾಂಸ ತಿನ್ನಲಿಲ್ಲ ಅಂದ್ರೆ ಸ್ವರ್ಗಕ್ಕೆ ಬಿಡೋಲ್ಲ ಮಾಂಸ ತಿನ್ನಬೇಕು ಅನ್ನೋ ಪ್ರತೀತಿ ಇತ್ತಂತೆ ಇದನ್ನೆಲ್ಲ ನಿಮ್ಮ ಜಮಾನ್ದೋರಿಗೆ ಹೇಳಿದ್ರ ಬಿದ್ದು ಬಿದ್ದು ನಗನಾಡ್ತಿರೀ, ಕೆಲವರು ಆ ದಿನ ದುಡ್ಡು ಕಾಸು ಯಾರಿಗೂ ಕೊಡಾಕಿಲ್ಲ ಹಿಂಗ ಹತ್ತಲವು ಸಂಪ್ರದಾಯಾಗಳು ನೇಮ್ಗಳನ್ನ ಮಾಡ್ತಾರೆ”

“ಜಮೀನಿಗೆ ಹೋಗಿ ಉಳುಮೆ ಗಿಳುಮೆ ಮಾಡೋಲ್ವೋ”?
“ಕಂಡೀಸನ್ನಾಗಿ ಯಾರು ಹೊಲ್ನ ಊಳೋಲ್ಲ ಅಪ್ಪಿ ತಪ್ಪಿ ಮಳಿ ಗಿಳಿ ಉಯ್ಯ್ದ್ರೆ ಸ್ಥಳೀಯ್ ಜ್ವಾಳ ಗೀಳ ಬಿತ್ತೋರು ಬಿತ್ತಾರ ಅಷ್ಟೇ” “ಹೂಂ ಆಯ್ತು ಯಜಮಾನ್ರೆ ಥ್ಯಾಂಕ್ಯೂ ನಾನು ಬರ್ತೀನಿ” “ಹೂಂ ಆಯ್ತು ಕಣೀ ಹೋಗಿ ಬುದ್ದೀ ನಂಗು ಹೊಟ್ಟೈಸಿತೈತಿ ಹಟ್ಟಿಗೆ ಹೋಗ್ಬೇಕು ಒಬ್ಬಿಟ್ಟು ತಿನ್ಬೇಕು”.

ನೋಡಿ ನಮ್ಮ ಗ್ರಾಮೀಣ ಭಾಗದ ಸಂಪ್ರದಾಯಗಳು ಎಷ್ಟು ಚೆಂದ ಅಲ್ವಾ ಈ ದೇಸಿ ಭಾಷೆಯಲ್ಲಿ ಎಷ್ಟು ತಾಕತ್ತಿದೆ ಎಷ್ಟು ಗ್ರಾಮೀಣತೆಯ ಸೊಗಡಿದೆ ಈ ಭಾಷೆನಾ ಹಳ್ಳಿಗಳಲ್ಲಿ ಬಿಟ್ರೆ ಜಗತ್ತಿನ ಯಾವ ವಿಶ್ವ ವಿದ್ಯಾಲಯಗಳಲ್ಲೂ ಕೂಡ ಕಲಿಯಲಿಕ್ಕೆ ಆಗೋದಿಲ್ಲ. ನಮ್ಮ ಹಿಂದಿನವರು ನಡೆಸಿಕೊಂಡು ಬಂದ ಕೆಲವೊಂದು ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯ ನಮ್ಮ ಪರಂಪರೆ ಎಂತದ್ದು ಅಂತ ಹೇಳ್ತವೆ. ಈ ಚಾಮರಾಜನಗರದ ವರ್ಷದುಡುಕು ಹಾಗೇನೆ ಒಂಥರಾ ದೇಸಿಯ ಭಾಷೆಯ ಹಬ್ಬ ಹರಿದಿನಗಳ ಪರಿಚಯ ನನಗಾಯ್ತು ಧನ್ಯವಾದಗಳು ಚಾಮರಾಜನಗರ.

(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿಗಳು
ಚಾಮರಾಜನಗರ
9741270125)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending