Connect with us

ದಿನದ ಸುದ್ದಿ

ಎಲ್ಲ ರೀತಿಯಿಂದ ದೊಡ್ಡವರು ‘ಜಿ.ಎಸ್.ಆಮೂರ’

Published

on

ಜಿ ಎಸ್ ಆಮೂರ ಎಲ್ಲ ರೀತಿಯಿಂದಲೂ ದೊಡ್ಡವರು. ಕಳೆದ ಮೇ ತಿಂಗಳಲ್ಲಿ 95 ಮುಗಿಸಿ ನೂರರೆಡೆಗೆ ಹೆಜ್ಜೆ ಹಾಕುತ್ತಿದ್ದರು. ಕನ್ನಡಕ್ಕೆ ಇಂಗ್ಲಿಷ್ ಮೇಷ್ಟ್ರುಗಳ ಲಿಂಕ್ (ಸಂಬಂಧ, ಕೊಡುಗೆ, ಬಾಂಧವ್ಯ ಈ ಪದಗಳಿಗಿಂತ ಉತ್ತಮ) ದೊಡ್ಡದು. ಮೇಷ್ಟ್ರುಗಳಷ್ಟೇ ಅಲ್ಲ ಬೇರೆ ಬೇರೆ ನೌಕರಿಗಳಲ್ಲಿದ್ದವರೂ ಇದ್ದರು. ಇರಲಿ. ನವೋದಯ, ನವೋದಯಪೂರ್ವ ಕಾಲದಿಂದಲೂ ಈ ಇತಿಹಾಸವಿದೆ. ಆ ಪರಂಪರೆಯ ಕೊಂಡಿಯಾಗಿದ್ದ ಅಮೂರ ಕಳಚಿಕೊಂಡು ಕನ್ನಡ ಸಾಹಿತ್ಯ ಚರಿತ್ರೆಯ ಭಾಗವಾದರು.

ಕನ್ನಡಕ್ಕೆ ಗಂಟುಬೀಳುವ ಇಂಗ್ಲಿಷ್ ಮೇಷ್ಟ್ರುಗಳ ಲಿಂಕೂ ಇದೆ ! ಅವರಲ್ಲಿ ಬಹುತೇಕರಿಗೆ ಅತ್ತ ಇಂಗ್ಲಷ್ಷೂ ಐಬು ಇತ್ತ ಅವರ ತಾಯ್ನುಡಿಯೂ ಐಬು. ಅವರು ಇಂಗ್ಲಿಷ್ ಡಿಗ್ರಿ ಸರ್ಟಿಫಿಕೇಟ್ ಇಟ್ಟುಕೊಂಡು ಕನ್ನಡದೊಳಗೆ ಓಡಾಡ್ತಾ ಇರ್ತಾರೆ. ಸ್ವಲ್ಪ ಬೆದರಿಕೆ, ಸ್ವಲ್ಪ ಬೂಟಾಟಿಕೆ ತೋರ್ತಾರೆ ! ಕೆಲವು ಕನ್ನಡದವು ಬೆದರೋದೂ ಉಂಟು !

ಆದರೆ ಕನ್ನಡಕ್ಕೆ ಕಾಮಧೇನುವಿನಂತೆ ಬರುವ ಇಂಗ್ಲಿಷ್ ಮೇಷ್ಟ್ರುಗಳ ಲಿಂಕ್ ಇದ್ಯಲ್ಲಾ ಅದು ಮಹತ್ವದ್ದು. ‘ ಶ್ರೀ ‘ ಯವರಿಂದಲೇ ಶ್ರೀಕಾರಗೊಂಡ ಆ ಪರಂಪರೆಗೆ ಸೇರಿದವರು ಅಮೂರ. ಮುಂದುವರೆದ ಹೊಸ ತಲೆಮಾರಿನಲ್ಲೂ ಕೆಲವರು ಆ ಪರಂಪರೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.

ಇಂಥವರು ಕನ್ನಡವನ್ನು ಪ್ರೀತಿ ಗೌರವದಿಂದ ಕಾಣುತ್ತಾರೆ. ಕನ್ನಡವೆಂಬುದು ಇಂಗ್ಲಿಷಿನಂತೆಯೇ ಒಂದು ದೊಡ್ಡ ಭಾಷೆಯೆಂಬ ಅರಿವಿನಲ್ಲಿ ಒಡನಾಡುತ್ತಾರೆ, ಕೆಲಸ ಮಾಡುತ್ತಾರೆ. ಅಂಥವರಿಂದಲೇ ಇವಳ ಒಡವೆ ಅವಳಿಗಿಡುವ ಶಕ್ತಿ ಬರುವುದು. ಆಮೂರ ಇಂಗ್ಲಿಷ್ ಮತ್ತು ಕನ್ನಡ ಎರಡನ್ನೂ ಅರಗಿಸಿಕೂಂಡ ವಿಮರ್ಶಕರು. ಯಾವ ವಿಷಯವೇ ಆಗಲಿ ಅವರು ಬುಡಮಟ್ಟ ಶೋಧಿಸಿ ಬರೆಯುತ್ತಿದ್ದರು.

ಕನ್ನಡ ಕಥನ ಪರಂಪರೆ, ಮಹಿಳೆಯರ ಕಾವ್ಯ, ನವೋದಯ ಸಾಹಿತ್ಯ, ಜನಪ್ರಿಯ ಸಾಹಿತ್ಯ ಎಲ್ಲದರ ಬಗ್ಗೆಯೂ ಸಮಾನ ಆಸಕ್ತಿಯಿಂದ ಅಧ್ಯಯನಶೀಲರಾಗುತ್ತಿದ್ದರು. ಬೇಂದ್ರೆ, ಶ್ರೀರಂಗರ ಬಗ್ಗೆ ಎಂಥ ತಾದಾತ್ಮ್ಯ ಹೊಂದುತ್ತಿದ್ದರೋ ಅಷ್ಟೇ ತಾದಾತ್ಮ್ಯದಲ್ಲಿ ಜನಪ್ರಿಯ ಕಾದಂಬರಿಕಾರ ಅನಕೃ ಬಗ್ಗೆ ಚಿಂತಿಸಿ ಬರೆಯುತ್ತಿದ್ದರು. ಜನಪ್ರಿಯ ಸಾಹಿತ್ಯದ ಬಗ್ಗೆ ಸದಭಿರುಚಿಯ ಅಭಿಪ್ರಾಯ ಮೂಡಿಸುತ್ತಿದ್ದರು.

ಇಂಗ್ಲಿಷ್ ಭಾಷೆಯಲ್ಲಿ ಹಲವಾರು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಮಳಗಾಂವಕರ್, ಮುಲ್ಕ್ ರಾಜ್ ಆನಂದ, ರಾಜಾರಾವ್, ನಾಯ್ಪಾಲ್, ಸಲ್ಮಾನ್ ರುಶ್ದಿ ( ನಾನು ನೈಪಾಲ್, ರಶ್ದಿ ಅಂದಾಗಲೆಲ್ಲ ಅವರು ನಾಯ್ಪಾಲ್, ರುಶ್ದಿ ಅಂತ ಸರಿಮಾಡುತ್ತಿದ್ದರು ! ) ಅವರೆಲ್ಲರ ಕೃತಿಗಳ ವಿಸ್ತೃತ ಓದು ಅವರದಾಗಿತ್ತು. ಕುವೆಂಪು ಅವರ ರಾಮಾಯಣ ದರ್ಶನಂ ಕುರಿತ ಅವರ ಇಂಗ್ಲಿಷ್ ಲೇಖನ ಬಹಳ ಮೌಲಿಕವಾದುದು.

ಪ್ರಾಚೀನ ಸಾಹಿತ್ಯದ ಬಗ್ಗೆ ಇರುವಷ್ಟೇ ಆಸಕ್ತಿಯನ್ನು ಹೊಸದಾಗಿ ಬರೆಯುವವರ ಕತೆ ಕವಿತೆಗಳನ್ನು ಸಂಕಲನಗಳಲ್ಲಿ ಸೇರಿಸುತ್ತಿದ್ದರು. ಬೇರೆ ಬೇರೆ ರೀತಿಯ ಸಂಕಲನಗಳನ್ನು ಸಂಪಾದಿಸುವುದಕ್ಕೆ ಬೇಕಾದ ಅಪಾರ ಓದನ್ನು ಅವರು ಸಂತೋಷದಿಂದ ಮತ್ತು ಪರಿಪೂರ್ಣತೆಯಿಂದ ಮಾಡುತ್ತಿದ್ದರು.

ಬೆಂಗಳೂರಿಗೆ ಬಂದರೆ ಲಂಕೇಶ್ ಅವರಲ್ಲಿಗೆ ಭೇಟಿ ಕೊಟ್ಟು ಅವರೊಡನೆ ಗಂಭೀರ ಸಾಹಿತ್ಯ ಚರ್ಚೆ ಮಾಡುತ್ತಿದ್ದರು. ಹಾಗೆ ಒಮ್ಮೆ ಚರ್ಚಿಸುತ್ತಿದ್ದ ಹೊತ್ತಿನಲ್ಲಿ ಅವರು, ‘ ವರ್ಷಕ್ಕೆ ಒಂದು ಸಾರಿ ತಪ್ಪದೇ War and Peace ಮತ್ತು Anna Karenina ಓದೇ ಓದ್ತೀನಿ ‘ ಅಂತ ಹೇಳಿದ್ದು ನನ್ನ ನೆನಪಿನಲ್ಲಿದೆ. ಅವರ ‘ಭುವನದ ಭಾಗ್ಯ’ ಕುರಿತು ಆಗ ನಾನು ಲಂಕೇಶ್ ಪತ್ರಿಕೆ ಯಲ್ಲಿ ಬರೆದಿದ್ದೆ.

ಅವರು ಬಹುಶೃತ ವಿದ್ವಾಂಸರಾಗಿದ್ದರು. ನಿಷ್ಠುರ ವಿಮರ್ಶಕರಾಗಿದ್ದರು. ಒಮ್ಮೆ ಒಂದು ಪ್ರತಿಷ್ಠಿತ ಪ್ರಶಸ್ತಿ ತೀರ್ಮಾನ ಮಾಡಲು ಒಂದು ಸಭೆ ನಡೆಯಿತು. ಮೂವರು ತೀರ್ಪುಗಾರರಲ್ಲಿ ಅಮೂರ ಒಬ್ಬರು. ಇನ್ನೊಬ್ಬರು ಅವರ ವಯಸ್ಸಿನವರೇ. ಮೂರನೆಯವರು ಇನ್ನೂ ಯುವಕರು. ತೀರ್ಮಾನ ವಿವಾದದಲ್ಲಿ ಆಯಿತು. ಆ ಪ್ರಶಸ್ತಿಗೆ ಯಾವ ರೀತಿಯಿಂದಲೂ ಅರ್ಹವಲ್ಲದ ಕೃತಿಯನ್ನು ಅಮೂರ ಒಪ್ಪಲಿಲ್ಲ.

ಆದರೆ ಉಳಿದಿಬ್ಬರ ಬಹುಮತವಿತ್ತು. ಅದು ಆಯ್ಕೆಯಾಗಬೇಕಾಯ್ತು. ಎಲ್ಲ ಮುಗಿದಮೇಲೆ ಹೊರಡುವಾಗ ಆ ಯುವಕರನ್ನು ಪಕ್ಕಕ್ಕೆ ಕರೆದು ಆಮೂರ ಹೇಳಿದರು, ” ನೀವಿನ್ನೂ ಚಿಕ್ಕ ವಯಸ್ಸಿನವರಿದ್ದೀರಿ, ಇನ್ನು ಮುಂದೆ ಎಂದೂ ಇಂಥ ಲಿಟರರಿ ಪೊಲಿಟಿಕ್ಸ್ ಮಾಡಬೇಡಿ, ” ಅಂದ ಅವರ ಮಾತಿಗೆ ನಾನು ಸಾಕ್ಷಿಯಾಗಿದ್ದೆ. ಆ ಯುವ ಪ್ರಭೃತಿ ತಲೆತಗ್ಗಿಸಿ ನಿಂತಿದ್ದರು.

ಅದು ಸಾಹಿತ್ಯ ಲೋಕದಲ್ಲಿರಬೇಕಾದ ದೊಡ್ಡತನ. ಅಮೂರ ಅಂಥ ಅಪರೂಪದ ದೊಡ್ಡವರು. ನಮಗೆ ಬಹಳಷ್ಟು ಕಲಿಸಿದ್ದಾರೆ. ಅಂಥ ಮೌಲ್ಯಗಳನ್ನು ಕಲಿತು ದೊಡ್ಡವರಾಗಲು ಬದುಕೋಣ. ಅವರ ನೆನಪಿಗೆ ನಮನಗಳು.

-ಅಗ್ರಹಾರ ಕೃಷ್ಣಮೂರ್ತಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending