ನೆಲದನಿ
ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳು

ಕರ್ನಾಟಕ ಸಬಾಲ್ಟ್ರನ್ ಓದು ಮಾಲಿಕೆ: ಸಂಪುಟ 6
‘ಕರ್ನಾಟಕ ಸಬಾಲ್ಟ್ರನ್ ಓದು ಮಾಲಿಕೆ’ ಯ ಒಂದು ಸಂಪುಟವನ್ನು ನಾನು ಮತ್ತು ಡಾ.ಕುಂಸಿ ಉಮೇಶ್ ಅವರು ಸಂಪಾದಿಸಿ ಈ ಹಿಂದೆ ಸಾಹಿತ್ಯ ಅಕಾಡೆಮಿಗೆ ಸಲ್ಲಿಸಿದ್ದೆವು. ‘ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳು’ ಎಂಬ ಹೆಸರಲ್ಲಿ ಈ ಸಂಪುಟ ಮುದ್ರಣವಾಗಿ ಈಗ ಹೊರಬಂದಿದೆ.
ಪ್ರಸ್ತುತ ಸಂಪುಟವು ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳನ್ನು ಅಧ್ಯಯನ ಮಾಡುವ ಆಸಕ್ತರಿಗೆ ಉಪಯುಕ್ತವಾಗಬಲ್ಲದು. ಮುಖ್ಯವಾಗಿ, ಎಂಫಿಲ್, ಪಿಎಚ್, ಡಿ ವಿದ್ಯಾರ್ಥಿಗಳು, ಆಸಕ್ತ ಸಂಶೋಧಕರು ಮತ್ತು ಸಾಮಾಜಿಕ ಕಾರ್ಯಕರ್ತರಿಗೂ ಇದು ಕೈಪಿಡಿಯ ರೂಪದಲ್ಲಿ ನೆರವಾಗುತ್ತದೆ. ತಳಸ್ತರದ ಸಮುದಾಯಗಳನ್ನು ಅಧ್ಯಯನ ಮಾಡುವ ದೃಷ್ಟಿಕೋನವನ್ನು ವಿಶ್ಲೇಷಿಸುವ ಬರಹಗಳು ಇಲ್ಲಿವೆ.
ರಹಮತ್ ತರೀಕೆರೆ, ಹಿ ಚಿ ಬೋರಲಿಂಗಯ್ಯ, ಚಂದ್ರ ಪೂಜಾರಿ, ಟಿ ಆರ್ ಚಂದ್ರಶೇಖರ್, ದಿ. ಕಿಕ್ಕೇರಿ ನಾರಾಯಣ, ಟಿ ಎಸ್ ಚನ್ನೇಶ್ ಹೊನ್ನಾಳಿ, ಮಂಜುನಾಥ ಬೇವಿನಕಟ್ಟಿ, ಕ್ಷೀರಸಾಗರ, ಶೈಲಜ ಹಿರೇಮಠ, ಇವರ ಲೇಖನಗಳು ಈ ಸಂಪುಟದಲ್ಲಿವೆ. ಜೊತೆಗೆ ವರ್ತಮಾನವನ್ನು ಕಾಲದ ಅಗತ್ಯದಲ್ಲಿಟ್ಟು ವಿಶ್ಲೇಷಿಸುವ ಗೆಳೆಯರಾದ ಎಚ್ ಡಿ ಪ್ರಶಾಂತ, ಕಿರಣ್ ಗಾಜನೂರು, ಮೋಹನ್ ಚಂದ್ರಗುತ್ತಿ, ಹರ್ಷಕುಮಾರ್ ಕುಗ್ವೆ, ಅರುಣ್ ಜೋಳದ ಕೂಡ್ಲಿಗಿ, ಎಸ್ ಎಂ ಮುತ್ತಯ್ಯ, ಆರಡಿ ಮಲ್ಲಯ್ಯ, ಶಶಿಕಿರಣ್, ವೆಂಕಟಗಿರಿ ದಳವಾಯಿಯವರ ಬರಹಗಳು ಇಲ್ಲಿವೆ. ಇವುಗಳ ಜೊತೆ ಆನಂದ್ ತೇಲ್ತುಂಬ್ಡೆ, ವರ್ಜಿನಸ್ ಕಾಕಾ, ಸೀತಾಕಾಂತ್ ಮಹಾಪಾತ್ರ, ಹರಿಮೋಹನ್ ಮಾಥೂರ್, ಪೆಗ್ಗಿ ಫ್ರಾಯರ್, ಮಿಲಿಂದ್ ಬೋಕಿಲ್, ಮುಂತಾದ ಹಿರಿಯರ ಲೇಖನಗಳೂ ಇವೆ. ಒಟ್ಟಿನಲ್ಲಿ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ವೈಧಾನಿಕ ಪ್ರಸ್ಥಾನಗಳನ್ನು ವಿಶ್ಲೇಷಿಸುವ ಅತ್ಯುತ್ತಮ ಬರಹಗಳನ್ನು ಇಲ್ಲಿ ಸಂಕಲಿಸಲಾಗಿದೆ.
ಇಂತಹ ಒಂದು ಯೋಜನೆಯನ್ನು ನಮಗೆ ವಹಿಸಿದ ಮೇಟಿ ಮಲ್ಲಿಕಾರ್ಜುನ ಅವರಿಗೆ ಮೊದಲು ಕೃತಜ್ಞತೆ ಸಲ್ಲಿಸಬೇಕು. ಅಕಾಡೆಮಿಯ ಅಂದಿನ ಮತ್ತು ಇಂದಿನ ಅಧ್ಯಕ್ಷರಾದ ಮಾಲತಿ ಪಟ್ಟಣಶೆಟ್ಟಿ, ಅರವಿಂದ ಮಾಲಗತ್ತಿ ಮತ್ತು ಸಿಬ್ಬಂದಿ ವರ್ಗಕ್ಕೆ ನಮಸ್ಕಾರಗಳು. ಬರಹಗಳನ್ನು ಮಾಡಿಕೊಟ್ಟ ಹಿರಿಯ ಮತ್ತು ಕಿರಿಯ ಮಿತ್ರರಿಗೆ, ಅನುವಾದ ಮಾಡಿಕೊಟ್ಟ ಗೆಳೆಯರಿಗೆ ಧನ್ಯವಾದಗಳು.
ಒಟ್ಟು 872 ಪುಟಗಳ ಪುಸ್ತಕವಿದು. ಬೆಲೆ: 380/- ರೂಪಾಯಿಗಳು. ಸಾಹಿತ್ಯ ಅಕಾಡೆಮಿಯ ಮಾರಾಟ ಮಳಿಗೆಗಳಲ್ಲಿ ಈ ಪುಸ್ತಕವನ್ನು ಖರೀದಿಸಬಹುದು.
– ಡಾ.ಎ.ಎಸ್.ಪ್ರಭಾಕರ್
ಸುದ್ದಿದಿನ.ಕಾಂ|ವಾಟ್ಸಾಪ್|9986715401

ನೆಲದನಿ
ನಮ್ಮ ಶಿವಮೊಗ್ಗ – ನಮ್ಮ ಹೆಮ್ಮೆ: ಕುವೆಂಪು

ಕುವೆಂಪು ಅವರು 20ನೇ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ “ಯುಗದ ಕವಿ; ಜಗದ ಕವಿ” ಎಂದೆನಿಸಿಕೊಂಡವರು. ಕನ್ನಡದ ಎರಡನೇ ರಾಷ್ಟ್ರಕವಿಯಾಗಿ ನಾಡಿಗೆ ಕೀರ್ತಿ ತಂದವರು. ಜ್ಞಾನಪೀಠ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ. ಕನ್ನಡದ ಈ ಮೇರು ಕವಿ ನಮ್ಮ ಶಿವಮೊಗ್ಗದವರು ಎಂಬುದೇ ನಮ್ಮ ಹೆಮ್ಮೆ.
ಶಿವಮೊಗ್ಗ ಜಿಲ್ಲೆ ಸಾಹಿತ್ಯದ ತವರು. ಸಾಕಷ್ಟು ಕವಿಗಳು, ಲೇಖಕರ ಜೊತೆಗೆ ರಾಜಕಾರಣಿಗಳನ್ನು ಸಮಾಜಕ್ಕೆ ಕೊಡುಗೆ ನೀಡಿದ ಹೆಗ್ಗಳಿಗೆ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯದು. ಅಂತಹ ಅತ್ಯುತ್ತಮ ಕೊಡುಗೆಗಳಲ್ಲಿ ಒಬ್ಬರು ರಾಷ್ಟ್ರಕವಿ ಕುವೆಂಪು.
ಚಿಕ್ಕಮಗಳೂರು ಜಿಲ್ಲೆಯ ಪುಟ್ಟ ಗ್ರಾಮವೊಂದರಲ್ಲಿ 1904ರಲ್ಲಿ ಸೀತಮ್ಮ ಮತ್ತು ವೆಂಕಟಪ್ಪ ಅವರ ಮಗನಾಗಿ ಜನಿಸಿದ ಕುವೆಂಪುರವರು ತಮ್ಮ ಬಾಲ್ಯವನ್ನೆಲ್ಲಾ ಶಿವಮೊಗ್ಗದ ಕುಪ್ಪಳ್ಳಿಯಲ್ಲಿ ಕಳೆದರು. ಕನ್ನಡದಲ್ಲಿ ಎಂ.ಎ. ಪದವೀರರಾಗಿದ್ದ ಇವರು ಮೈಸೂರಿನ ಮಹರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿ ನಂತರ ಉಪಕುಲಪತಿಗಳಾದರು.
ಹೇಮಾವತಿ ಅವರನ್ನು ವಿವಾಹವಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರಿಗೆ ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಮತ್ತು ತಾರಿಣಿ ಎಂಬ ನಾಲ್ಕು ಮಕ್ಕಳು. 1994ರಲ್ಲಿ ನಿಧನರಾದ ಕುವೆಂಪುರವರನ್ನು ಕುಪ್ಪಳ್ಳಿಯಿಂದ ಅನತಿ ದೂರದಲ್ಲಿರುವ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಇಂದು ಆ ಸ್ಥಳ ಕವಿಶೈಲ ಎಂದು ಪ್ರಸಿದ್ಧಿ ಪಡೆದಿದೆ.
ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿಗೆ 1966ರಲ್ಲಿ ಜ್ಞಾನಪೀಠ ಹಾಗೂ 1955ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಈ ಮೂಲಕ ಕನ್ನಡವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ಕುವೆಂಪುರವರದು.
1964ರಲ್ಲಿ ರಾಷ್ಟ್ರಕವಿ ಎಂಬ ಪುರಸ್ಕಾರ ಪಡೆದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡುವಂತೆ ಮಾಡಿದ ಕುವೆಂಪು ಅವರನ್ನು . ಪದ್ಮಭೂಷಣ, ಪಂಪ ಪ್ರಶಸ್ತಿ, ಪದ್ಮವಿಭೂಷಣ, ಕರ್ನಾಟಕ ರತ್ನ ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದವು.
ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಎಂಬ ಪಂಚಮಂತ್ರವನ್ನು ಜಗತ್ತಿಗೆ ಸಾರಿದ ಕುವೆಂಪುರವರ ಜನ್ಮದಿನವಾದ ಡಿಸೆಂಬರ್ 29ನ್ನು ಕರ್ನಾಟಕ ಸರ್ಕಾರವು 2015ರಿಂದ ‘ವಿಶ್ವ ಮಾನವ ದಿನ’ವನ್ನಾಗಿ ಆಚರಿಸುವಂತೆ ಆದೇಶವನ್ನು ಹೊರಡಿಸಿ ಮಹಾನ್ ಕವಿಗೆ ಗೌರವ ಸಮರ್ಪಿಸಿದೆ.
ಬಾಲ್ಯದಿಂದಲೇ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಕುವೆಂಪು ಅವರು ಇಂಗ್ಲೀಷ್ ನವೋದಯ ಕಾಲದ ರಮ್ಯ ಕವಿಗಳ ಪ್ರಭಾವಕ್ಕೊಳಗಾಗಿ ‘ಬಿಗಿನರ್ಸ್ ಮ್ಯೂಸ್’ ಎಂಬ ಆರು ಇಂಗ್ಲೀಷ್ ಕವನಗಳ ಕವನಸಂಕಲನವನ್ನು 1922ರಲ್ಲಿ ರಚಿಸಿದ್ದರು. ನಂತರ ಗುರುಗಳಾದ ಜೇಮ್ಸ್ ಕಸಿನ್ ಅವರ ಸಲಹೆಯಂತೆ ಕನ್ನಡದಲ್ಲಿಯೇ ಬರೆಯಲಾರಂಭಿಸಿದರು.
ಶ್ರೀ ರಾಮಾಯಣ ದರ್ಶನಂ, ಮಲೆಗಳಲಿ ಮದುಮಗಳು, ಕಾನೂರು ಹೆಗ್ಗಡತಿ, ಸ್ಮಶಾನ ಕುರುಕ್ಷೇತ್ರ, ಜಲಗಾರ, ಶೂದ್ರತಪಸ್ವಿ, ವಿಚಾರಕ್ರಾಂತಿಗೆ ಆಹ್ವಾನ ಮುಂತಾದ ಬರಹಗಳು ಇಂದಿಗೂ ಜನರ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಇವರ ಮಂತ್ರಮಾಂಗಲ್ಯದ ಪರಿಕಲ್ಪನೆ ಯುವಜನರನ್ನು ಆಕರ್ಷಿಸಿತು.
ಕುವೆಂಪುರವರು ಕಾವ್ಯ, ಕವನ, ಕಥೆ, ಕಾದಂಬರಿ, ವಿಮರ್ಷೆ, ಅನುವಾದ, ನಾಟಕ ಹೀಗೆ ಎಲ್ಲಾ ಬಗೆಯ ಸಾಹಿತ್ಯ ರೂಪಗಳಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಕುಪ್ಪಳ್ಳಿ ಎನ್ನುವ ಸಣ್ಣ ಗ್ರಾಮದಿಂದ ರಾಷ್ಟ್ರಕವಿಯಾಗುವವರೆಗಿನ ಕುವೆಂಪುರವರ ಸಾಹಿತ್ಯ ಪಯಣ ನಿಜಕ್ಕೂ ಸ್ಪೂರ್ತಿದಾಯಕ. ರಾಷ್ಟ್ರಮಟ್ಟದಲ್ಲಿ ಜಿಲ್ಲೆಗೆ ಮನ್ನಣೆ ತಂದು ಕೊಟ್ಟ ಕುವೆಂಪುರವರಿಗೆ ಜಿಲ್ಲೆಯ ಜನರು ಎಂದಿಗೂ ಋಣಿ.
ಕೃಪೆ : ಡಿ ಐ ಪಿ ಆರ್ ಶಿವಮೊಗ್ಗ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ
ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ ‘ಅಲ್ಲಮಪ್ರಭು’

ಅಲ್ಲಮಪ್ರಭು 12ನೆಯ ಶತಮಾನದ ವಚನಕಾರರಲ್ಲಿ ಪ್ರಸಿದ್ಧರಾದವರು. ಅನೇಕ ಶಿವಶರಣ, ಶಿವಶರಣೆಯರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿದರು. ತನ್ನ ವಚನಗಳ ಮೂಲಕ ಅಂತರಂಗ, ಬಹಿರಂಗಗಳನ್ನು ಶೋಧಿಸಲೆತ್ನಿಸಿದವರು.
ಅಲ್ಲಮಪ್ರಭು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗೆ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಸುಮಾರು 12ನೇ ಶತಮಾನದಲ್ಲಿ ಜನಿಸಿದರು ಎಂದು ದಾಖಲೆಗಳು ಹೇಳುತ್ತವೆ.
12ನೆಯ ಶತಮಾನದ ಶಿವಶರಣರಲ್ಲಿ ಅಲ್ಲಮಪ್ರಭು ಉಚ್ಚಸ್ಥಾನದಲ್ಲಿದ್ದವರು. ಅರಸು ಮನೆತನದಲ್ಲಿಯೆ ಹುಟ್ಟಿ ಬೆಳೆದವರಾದರೂ, ಮನೆ ಬಿಟ್ಟು ತೆರಳಿ ಆಧ್ಯಾತ್ಮಸಾಧಕನಾದರೆಂದು ಹೇಳಲಾಗುತ್ತಿದೆ. ಬಸವಣ್ಣನ ಕಲ್ಯಾಣಕ್ಕೆ ಬಂದ ಅಲ್ಲಮಪ್ರಭು ಅಲ್ಲಿ ಅನುಭವಮಂಟಪದ ಶೂನ್ಯಸಿಂಹಾಸನದ ಅಧ್ಯಕ್ಷರಾಗುತ್ತಾರೆ.
ಅಲ್ಲಮನ ವಚನಚಂದ್ರಿಕೆಯಲ್ಲಿ 1294 ವಚನಗಳು ಲಭ್ಯವಾಗಿವೆ. ಅಲ್ಲಮಪ್ರಭು ತನ್ನ ಕೊನೆಯ ದಿನಗಳಲ್ಲಿ ಶ್ರೀಶೈಲಕ್ಕೆ ಹೋಗಿ ಅಲ್ಲಿಯ ವನದಲ್ಲಿ ಶಿವೈಕ್ಯರಾದರೆಂಬುದು ಪ್ರತೀತಿ. ಬಸವಣ್ಣನವರ ಸಮಕಾಲೀನರಾದ ಅಲ್ಲಮಪ್ರಭುವಿನ ವಚನಗಳ ಅಂಕಿತ ‘ಗುಹೇಶ್ವರ’ ಅಥವಾ ‘ಗೊಹೇಶ್ವರ’. ಇವರ ವಚನಗಳಲ್ಲಿ ಗಹನವಾದ ಆಧ್ಯಾತ್ಮ ಹಾಗೂ ತಾತ್ವಿಕ ವಿಚಾರಗಳಿವೆ.
ಅಲ್ಲಮನ ಆಧ್ಯಾತ್ಮಿಕ ಅನುಭವಗಳ ಅಸಾಮಾನ್ಯತೆಯಿಂದ ಇವರ ವಚನಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಇವರದು ಬಹುಮಟ್ಟಿಗೆ ರೂಪಕ ಭಾಷೆ. ಈ ಭಾಷೆ ಇವರ ವೈಶಿಷ್ಟ್ಯವೂ ಹೌದು. ಚಾಮರಸನು ತನ್ನ ಪ್ರಭುಲಿಂಗಲೀಲೆ ಎನ್ನುವ ಕಾವ್ಯದಲ್ಲಿ ಅಲ್ಲಮಪ್ರಭುವಿನ ಐತಿಹ್ಯವನ್ನು ವರ್ಣಿಸಿದ್ದಾನೆ.
ಅಲ್ಲಮನ ಜೀವನ ಚರಿತ್ರೆಯನ್ನು ನಿಖರವಾಗಿ ನಿರೂಪಿಸಲು ಸಾಧ್ಯವಾಗಲಾರದಷ್ಟು ಐತಿಹ್ಯಗಳು ಆ ವ್ಯಕ್ತಿತ್ವವನ್ನು ಸುತ್ತುವರಿದಿವೆ. ಅಲ್ಲಮನ ಬಗ್ಗೆ ಹದಿಮೂರನೇ ಶತಮಾನದ ಹರಿಹರ ಮಹಾಕವಿಯು, ಪ್ರಭುದೇವರ ರಗಳೆಯಲ್ಲಿ ಸಾಕಷ್ಟು ವಿವರಣೆಗಳನ್ನು ನೀಡಿರುವನಾದರೂ, ಅಲ್ಲಮನ ಪ್ರಭಾವಲಯದಿಂದ ಪೂರ್ಣವಾಗಿ ಹೊರ ಬಂದು, ಒಂದು ಸಹಜ ಚಿತ್ರಣವನ್ನು ಕೊಡುವಲ್ಲಿ ಹರಿಹರನಂತಹ ವಾಸ್ತವವಾದಿ ಕವಿ ಸಹ ಸೋಲುತ್ತಾನೆ.
ಇನ್ನು ಚಾಮರಸರು ಅಲ್ಲಮಪ್ರಭುದೇವನನ್ನು ಈ ಲೋಕದ ಮಾನವ ಚೇತನವೆಂದು ಒಪ್ಪಿಕೊಳ್ಳುವುದೇ ಇಲ್ಲ. ಅವನು ‘ಕೈಲಾಸದಿಂದ ಬಂದ ಶಿವನ ಚಿತ್ಕಳೆ’ ಎಂದೇ ಚಿತ್ರಿಸುತ್ತಾನೆ. ಇವರಿಬ್ಬರಲ್ಲದೆ ಎಳಂದೂರು ಹರಿಹರೇಶ್ವರನೆಂಬ ಮತ್ತೊಬ್ಬ ಕವಿಯೂ ಅಲ್ಲಮಪ್ರಭುವಿನ ಬಗ್ಗೆ ಕಾವ್ಯ ರಚನೆ ಮಾಡಿದ್ದಾನೆ. ಇನ್ನು ಚಾಮರಸನು ರಚಿಸಿರುವ ಪ್ರಭುಲಿಂಗಲೀಲೆಯು ತಮಿಳು, ಮರಾಠಿ ಮುಂತಾದ ಭಾಷೆಗಳಿಗೆ ಬಲು ಹಿಂದೆಯೇ ಅನುವಾದಗೊಂಡು ಪ್ರಖ್ಯಾತಿ ಪಡೆದಿತ್ತು.
ಈ ಮಹಾಕವಿಗಳಲ್ಲದೆ, ಅಲ್ಲಮಪ್ರಭುವಿನ ಬಗ್ಗೆ ಪ್ರಾಸಂಗಿಕವಾಗಿ ಬರೆಯದ ವೀರಶೈವ ಸಾಹಿತ್ಯವೇ ಇಲ್ಲವೆನ್ನಬಹುದು. ಇಡಿಯ ವಚನ ಸಾಹಿತ್ಯದಲ್ಲಿಯೇ, ಸಾಹಿತ್ಯದ ಪರಿಭಾಷೆಯನ್ನು ಸರಿಯಾದ ಮಾರ್ಗದಲ್ಲಿ ದುಡಿಸಿಕೊಂಡವರಲ್ಲಿ ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭು ಇಬ್ಬರೂ ಅಪ್ರತಿಮರು. ಅಲ್ಲಮಪ್ರಭು ಎಂಬ ಅಪ್ರತಿಮ ಚೇತನ ನಮ್ಮ ಶಿವಮೊಗ್ಗದವರು ಎಂಬುದು ಶಿವಮೊಗ್ಗದ ಪ್ರತಿಯೊಬ್ಬ ನಾಗರಿಕನ ಹೆಮ್ಮೆ.
ಹೆಚ್ಚಿನ ಮಾಹಿತಿಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ
ಪರಾಮರ್ಶನ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ
ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ನಾ. ಡಿಸೋಜ

ನಾ. ಡಿಸೋಜ ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ತಮ್ಮೆಲ್ಲ ಕಥೆ, ಕಾದಂಬರಿಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚರಿಸುತ್ತ ಬಂದಿದ್ದು, ಪರಿಸರ ನಾಶವೇ ಮಾನವ ಜನಾಂಗದ ವಿನಾಶದ ಮೂಲ, ಪರಿಸರವನ್ನುಳಿಸಿಕೊಂಡು ಬಾಳಿದರೆ ಮಾನವನ ಬಾಳೂ ಸಂತುಷ್ಟ ಎಂಬುದನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ.
ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 1937ರ ಜೂನ್ 06 ರಂದು ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ.
ತಂದೆ ಶಾಲಾ ಮಕ್ಕಳಿಗೆ ಕಲಿಸಲು ಬರೆದುಕೊಂಡಿದ್ದ ಪುಸ್ತಕಗಳಲ್ಲಿನ ಪದ್ಯಗಳನ್ನು ಕಲಿಯುವುದರ ಮೂಲಕ ಡಿಸೋಜ ಅವರ ಸಾಹಿತ್ಯಾಸಕ್ತಿ ಮೊಳಕೆಯೊಡೆಯತೊಡಗಿತ್ತು. ಜೊತೆಗೆ ತಾಯಿ ಹೇಳುತ್ತಿದ್ದ ಜನಪದ ಗೀತೆಗಳು, ಕಥೆಗಳು ಡಿಸೋಜರ ಮನಸ್ಸಿನ ಮೇಲೆ ಮೋಡಿ ಮಾಡತೊಡಗಿದ್ದವು. ಹೈಸ್ಕೂಲಿನಲ್ಲಿದ್ದಾಗಲೇ ಇವರ ಸಾಹಿತ್ಯಾಸಕ್ತಿಯನ್ನು ಗಮನಿಸಿ, ಬೆಳೆಸಿದವರು ಗೊರೂರು ನರಸಿಂಹಾಚಾರ್ಯರರು.
ಶಿವಮೊಗ್ಗದಲ್ಲಿ ಇಂಟರ್ಮೀಡಿಯೇಟ್ ಕಾಲೇಜು (ಈಗಿನ ಸಹ್ಯಾದ್ರಿ ಕಾಲೇಜು) ಸೇರಿದ ಇವರು ಪ್ರತಿಭೆ ತೋರಿಸಿದ್ದು ಕನ್ನಡ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರಲ್ಲಿ. ಮೈಸೂರಿಗೆ ಹೋಗಿ ಕಾಲಕಳೆದದ್ದೆಲ್ಲಾ ಸಾರ್ವಜನಿಕ ಪುಸ್ತಕ ಭಂಡಾರಗಳಲ್ಲಿ. ಮಾಸ್ತಿ, ಕುವೆಂಪು, ಅ.ನ.ಕೃ., ಕಾರಂತರು, ಗೋಕಾಕ್, ಗೊರೂರು ಇವರುಗಳಲ್ಲದೆ ಪರ್ಲ್ಬಕ್, ಸಾಮರ್ ಸೆಟ್ ಮಾಮ್, ಡಿಕನ್ಸ್ ಮುಂತಾದವರ ಕೃತಿಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದರು.
ಡಿಸೋಜ ಅವರು ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದು ಅವರ ವೃತ್ತಿ ಬದುಕಿಗೊಂದು ಆಸರೆಯಾಯಿತು. ನಾ. ಡಿಸೋಜರವರು ಉದ್ಯೋಗಕ್ಕೆ ಸೇರಿದ್ದು ಲೋಕೋಪಯೋಗಿ ಇಲಾಖೆಯಲ್ಲಿ ಟೈಪಿಸ್ಟ್ ಮತ್ತು ದ್ವಿತೀಯ ದರ್ಜೆ ಗುಮಾಸ್ತನಾಗಿ. ನಂತರ ಪ್ರಥಮ ದರ್ಜೆ ಗುಮಾಸ್ತರಾಗಿ ಶರಾವತಿ ಯೋಜನೆ ಕಾರ್ಗಲ್, ಮಾಸ್ತಿಕಟ್ಟೆ, ತೀರ್ಥಹಳ್ಳಿ ಮುಂತಾದೆಡೆಗಳಲ್ಲಿ ಕಾರ್ಯನಿರ್ವಹಿಸಿ 1995ರಲ್ಲಿ ನಿವೃತ್ತಿಹೊಂದಿದರು.
ನಾ. ಡಿಸೋಜ ಮೊದಲಿಗೆ ‘ಪ್ರಪಂಚ’ ಪತ್ರಿಕೆಗೆ ಕಥೆಗಳನ್ನು ಬರೆಯತೊಡಗಿದರು. ನಂತರ ಎಲ್ಲ ಪ್ರಮುಖ ಪತ್ರಿಕೆಗಳಲ್ಲೂ ಇವರ ಕಥೆಗಳು ಪ್ರಕಟವಾಗತೊಡಗಿದವು. ಡಿಸೋಜರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ ಪ್ರಕಟವಾದದ್ದು 1964ರಲ್ಲಿ. ನಂತರ ಮಂಜಿನ ಕಾನು, ಈ ನೆಲ ಈ ಜಲ, ಕೆಂಪು ತ್ರಿಕೋನ, ನೆಲೆ, ಮಾನವ – ಹೀಗೆ ಇವರು ಸುಮಾರು 40ಕ್ಕೂ ಹೆಚ್ಚಿನ ಕಾದಂಬರಿಗಳನ್ನು ಬರೆದಿದ್ದಾರೆ. ಪರಿಸರ ನಾಶ, ಕ್ರೈಸ್ತ ಜನಾಂಗದ ಹಿನ್ನೆಲೆ, ಭ್ರಷ್ಟಾಚಾರದ ವಸ್ತು, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ ಹೀಗೆ ಹತ್ತು ಹಲವು ವಿಷಯಗಳನ್ನೊಳಗೊಂಡ ಅವರ ಕಾದಂಬರಿಗಳು ಓದುಗರ ಮನಸೂರೆಗೊಂಡಿವೆ.
ಇವರು ಪತ್ರಿಕೆಗಳಿಗೆ ಬರೆದ ಸಣ್ಣ ಕಥೆಗಳು 09 ಸಂಕಲನಗಳಲ್ಲಿ ಸಂಕಲಿತಗೊಂಡಿದ್ದು, ಸಮಗ್ರ ಕಥೆಗಳು 02 ಸಂಪುಟಗಳಲ್ಲಿ ಪ್ರಕಟವಾಗಿವೆ.
ನಾಡಿಗೆ ಬೆಳಕನ್ನು ನೀಡಲು ಪ್ರಾರಂಭಿಸಿದ ವಿದ್ಯುಚ್ಛಕ್ತಿ ಯೋಜನೆಯ ಅಡಿಯಲ್ಲಿ ಬಹಳಷ್ಟು ಜನರ ಬದುಕುಗಳು ಕತ್ತಲೆಯಲ್ಲಿ ಕರಗಿ ಹೋಗುವ ವಸ್ತುವನ್ನಾಗಿ ಉಳ್ಳ ‘ಮುಳುಗಡೆ’ ಕಾದಂಬರಿಯು ಸುಧಾ ಯುಗಾದಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ, ಸುರೇಶ್ ಹೆಬ್ಲೀಕರ್ರವರ ನಿರ್ದೇಶನದಲ್ಲಿ ‘ಕಾಡಿನ ಬೆಂಕಿ’, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ‘ದ್ವೀಪ ’, ಸಿರಿಗಂಧ ಶ್ರೀನಿವಾಸಮೂರ್ತಿಯವರ ನಿರ್ದೇಶನದಲ್ಲಿ ‘ಬಳುವಳಿ’, ಕೋಡ್ಲು ರಾಮಕೃಷ್ಣರವರ ನಿರ್ದೇಶನದಲ್ಲಿ ‘ಬೆಟ್ಟದಪುರದ ದಿಟ್ಟ ಮಕ್ಕಳು’ ಮತ್ತು ಮನುರವರ ನಿರ್ದೇಶನದಲ್ಲಿ ‘ಆಂತರ್ಯ’ ಕಾದಂಬರಿಗಳು ಚಲನಚಿತ್ರಗಳಾಗಿಯೂ ಜನಪ್ರಿಯತೆಯನ್ನು ಪಡೆದಿವೆ.
ಇವುಗಳಲ್ಲಿ ‘ಕಾಡಿನ ಬೆಂಕಿ’ ಚಿತ್ರ ರಜತ ಕಮಲ ಪ್ರಶಸ್ತಿಯನ್ನೂ , ‘ದ್ವೀಪ’ ಚಿತ್ರ ‘ಸ್ವರ್ಣ ಕಮಲ’ ಪ್ರಶಸ್ತಿಯನ್ನೂ ಗಳಿಸಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಿರಿಮೆ ಗಳಿಸಿವೆ. ದೂರದರ್ಶನ ಮಾಧ್ಯಮದಲ್ಲಿ ಸಹ ಮಕ್ಕಳ ಧಾರವಾಹಿ, ಕಥೆಗಳು, ಹಲವಾರು ಕಾದಂಬರಿಗಳು ನಾಟಕಕ್ಕೆ ರೂಪಾಂತರವಾಗಿ ಪ್ರದರ್ಶಿತವಾಗಿವೆ.
‘ಮುಳುಗಡೆ’, ‘ಕೊಳಗ’, ‘ಒಳಿತನ್ನು ಮಾಡಲು ಬಂದವರು’, ‘ಬಣ್ಣ’, ‘ಇಬ್ಬರು ಮಾಜಿಗಳು’ ಮುಂತಾದ ಕಾದಂಬರಿಗಳು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ., ಬಿ.ಕಾಂ., ತರಗತಿಗಳಿಗೆ, ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ. ತರಗತಿಗಳಿಗೆ, ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ತರಗತಿಗಳಿಗೆ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವೂ ಸೇರಿದಂತೆ ಮುಂತಾದೆಡೆಗಳಲ್ಲಿ ಪಠ್ಯಪುಸ್ತಕಗಳಾಗಿಯೂ ಆಯ್ಕೆಯಾಗಿದೆ.
ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡಿರುವ ನಾ.ಡಿಸೋಜ ಮಕ್ಕಳ ಸಾಹಿತ್ಯದ ವಿವಿಧ ಪ್ರಕಾರದಲ್ಲಿ 12 ಕೃತಿಗಳನ್ನು ಪ್ರಕಟಿಸಿದ್ದಾರೆ.
ಡಿಸೋಜ ಅವರ ಹಲವಾರು ಸಣ್ಣ ಕಥೆಗಳು ಕೊಂಕಣಿ, ಮಲಯಾಳಂ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿವೆ. ತುಂಜಾಲು ಕಾದಂಬರಿಯು ತೆಲುಗು ಭಾಷೆಗೆ, ಪ್ರೀತಿಯೊಂದೇ ಸಾಲದೆ, ಜಲಪಾತದ ಸುತ್ತ, ಇಗರ್ಜಿ, ಸುತ್ತಲಿನ ಹತ್ತು ಮನೆಗಳು, ಕಾಡಿನ ಬೆಂಕಿ, ತಿರುವು ಮುಂತಾದ ಕಾದಂಬರಿಗಳು ಕೊಂಕಣಿಗೆ, ಇಗರ್ಜಿ ಕಾದಂಬರಿ, ದ್ವೀಪ, ಬಾಲಗಂಧರ್ವ ಮತ್ತು ಏಸುಕ್ರಿಸ್ತ ಕೃತಿಗಳು ಇಂಗ್ಲಿಷ್ಗೂ, ನೇತ್ರಾಣಿ ಗುಡ್ಡಕ್ಕೆ ಯಾತ್ರೆ ಕೃತಿಯು ಹಿಂದಿ ಭಾಷೆಗೂ ಅನುವಾದಗೊಂಡಿದೆ.
ನಾ.ಡಿಸೋಜರವರ ಸಾಹಿತ್ಯ ಕುರಿತು ಮದರಾಸು ವಿಶ್ವವಿದ್ಯಾಲಯದ ಶ್ರೀ ಪ್ರಕಾಶ್ ಸೈಮನ್ರವರು ‘ನಾ. ಡಿಸೋಜರವರ 25 ಕಥೆಗಳು ಒಂದು ಅಧ್ಯಯನ’ ಕುರಿತು ಎಂ.ಫಿಲ್. ಪದವಿ (1995), ಮಧುರೆ ಕಾಮರಾಜ ವಿಶ್ವವಿದ್ಯಾಲಯದ ಎಂ.ಎಂ. ಮಂಜುನಾಥರವರು ‘ನಾ. ಡಿಸೋಜರವರ ಕಾದಂಬರಿಗಳಲ್ಲಿ ಮುಳುಗಡೆ ಸಮಸ್ಯೆ – ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಎಂ.ಫಿಲ್. ಪದವಿ (1998), ಕುವೆಂಪು ವಿಶ್ವವಿದ್ಯಾಯದ ಟಿ.ಎಸ್. ಶೈಲಾರವರು ‘ನಾ. ಡಿಸೋಜರವರ ಕಾದಂಬರಿಗಳಲ್ಲಿ ಸಾಂಸ್ಕೃತಿಕ ಸ್ಥಿತ್ಯಂತರಗಳು’ ಮಹಾ ಪ್ರಬಂಧಕ್ಕೆ ಎಂ.ಫಿಲ್ ಪದವಿ (2001) ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗಂಗಾ ಮೂಲಿಮನಿಯವರು ‘ನಾ. ಡಿಸೋಜ ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ (2001) ಪಡೆದಿದ್ದಾರೆ.
ನಾ. ಡಿಸೋಜ ಅವರು ಕರ್ನಾಟಕ ಸಾಹಿತ್ಯ ಅಕಾಡಮಿ, ಕೊಂಕಣಿ ಸಾಹಿತ್ಯ ಅಕಾಡಮಿ, ಪುಸ್ತಕ ಪ್ರಾಧಿಕಾರ, ಕುವೆಂಪು ವಿಶ್ವವಿದ್ಯಾಲಯದ ಸೆನೆಟ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್, ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆಡಳಿತ ಪರಿಷತ್, ಕುವೆಂಪು ರಂಗ ಮಂದಿರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂತಾದ ಸಂಸ್ಥೆಗಳಲ್ಲಿ ಸದಸ್ಯರಾಗಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗುಲ್ವಾಡಿ ವೆಂಕಟರಾವ ಪ್ರಶಸ್ತಿ, ಅಖಿಲ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಮಾಸ್ತಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಇವರ ಮುಡಿಗೇರಿವೆ. ಕೊಡಗಿನಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಹೆಚ್ಚಿನ ಮಾಹಿತಿಗಾಗಿ
ನಾ. ಡಿಸೋಜಾ ಅವರ ಕಾದಂಬರಿಯಾಧಾರಿತ
ಬೆಟ್ಟದ ಪುರದ ದಿಟ್ಟ ಮಕ್ಕಳು ಸಿನಿಮಾ: https://www.youtube.com/watch?v=fvTMpbWMVXA
ದ್ವೀಪ ಸಿನಿಮಾ: https://www.youtube.com/watch?v=EY-qzjFtda8
ಪರಾಮರ್ಶನ
• https://kn.wikipedia.org
• https://sites.google.com
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ6 days ago
ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು?ಕಂಕಣಬಲ ಕೂಡಿ ಬರಲು ಏನು ಮಾಡಬೇಕು?
-
ಬಹಿರಂಗ6 days ago
ಜ್ಯೋತಿಬಾ ಎಂಬ ದೀವಿಗೆ ತೋರಿದ ದಾರಿ ನಮ್ಮದಾಗಲಿ
-
ದಿನದ ಸುದ್ದಿ6 days ago
ಸಾರಿಗೆ ಮುಷ್ಕರ –ಕಾರ್ಮಿಕರ ಬದುಕು ಘನತೆಯ ಪ್ರಶ್ನೆ
-
ಬಹಿರಂಗ5 days ago
ಸಂವಿಧಾನ ನಿತ್ಯದ ಪಾಠವಾಗಲಿ..!
-
ನಿತ್ಯ ಭವಿಷ್ಯ6 days ago
ಈ ರಾಶಿಯವರಿಗೆ ಇನ್ಮುಂದೆ ಕಹಿ ಗಿಂತ ಸಿಹಿಯೇ ಹೆಚ್ಚಾಗಲಿದೆ..! ಮಂಗಳವಾರ-ಏಪ್ರಿಲ್-13,2021
-
ಅಂತರಂಗ5 days ago
ಮಹಾ ಮಾನವತಾವಾದಿ ಅಂಬೇಡ್ಕರ್ ನೆನಪಿನಲ್ಲಿ..!
-
ಲೈಫ್ ಸ್ಟೈಲ್3 days ago
ತರಕಾರಿ ಸಿಪ್ಪೆಯಿಂದ ಪೇಪರ್ ತಯಾರಿಸಿದ ಹತ್ತರ ಬಾಲೆ ಮಾನ್ಯ ಹರ್ಷ..!
-
ನಿತ್ಯ ಭವಿಷ್ಯ5 days ago
ಈ ರಾಶಿಯವರಿಗೆ ಶುಭಕಾರ್ಯ ನೆರವೇರಲಿದೆ..! ಬುಧವಾರ- ರಾಶಿ ಭವಿಷ್ಯ ಏಪ್ರಿಲ್-14,2021