Connect with us

ನೆಲದನಿ

ಮುಚ್ಚಿಡಲ್ಪಟ್ಟ ಅಂಬೇಡ್ಕರ್‍ರ ಭವ್ಯ ಇತಿಹಾಸ..!

Published

on

ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ರವರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ, ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲ್ಲಿ ಹುಟ್ಟಿದರು, ಬಾಲ್ಯದಿಂದಲೆ ಅಸ್ಪøಶ್ಯತೆಯ ನೋವನ್ನು ಅನುಭವಿಸಿದರು, ತಮ್ಮ ತಂದೆಯನ್ನು ನೋಡಲು ಗಾಡಿಯಲ್ಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು… ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರರು ಮುಂದೆ ಉನ್ನತ ಜ್ಞಾನ ಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ’ ಎನಿಸಿಕೊಂಡರು, ಅಸ್ಪೃಶ್ಯರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದ್ದಷ್ಟೆ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ ‘ಮಹಾನ್ ಇತಿಹಾಸವನ್ನು’ ಮುಚ್ಚಲಾಗುತ್ತಿದೆ!

ಹಾಗಿದ್ದರೆ ಅಂಬೇಡ್ಕರ್‍ರವರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ ಜಾರ್ಜ್‍ಬುಷ್ “ಗಾಂಧಿ, ಠಾಗೋರ್ ಮತ್ತು ನೆಹರೂ”ರವರುಗಳನ್ನು ನವಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್‍ರವರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕುಬ್ಜರನ್ನಾಗಿಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವಾಗ ಬುಷ್‍ರಂತಹವರು ಇದಕ್ಕಿಂತ ಹೆಚ್ಚಿಗೆ ಇನ್ನೇನನ್ನು ತಾನೆ ಹೇಳಿಯಾರು? ಈ ಹಿನ್ನೆಲೆಯಲ್ಲಿ ಹೊರ ಜಗತ್ತಿಗೆ ಅಂಬೇಡ್ಕರರ ನೈಜ ಸಾಧನೆಗಳನ್ನು ಬಿಚ್ಚಿ ಹೇಳಬೇಕಾಗಿದೆ. ಇತಿಹಾಸದಲ್ಲಿ ಅವರನ್ನು ಮರೆಮಾಚಲು ನಡೆಯುತ್ತಿರುವ ದುಷ್ಟ ಪ್ರಯತ್ನವನ್ನು ತಡೆಯಬೇಕಾಗಿದೆ.

ಹಾಗಿದ್ದರೆ ಅಸ್ಪೃಶ್ಯರ ಉದ್ಧಾರವನ್ನು, ಸಂವಿಧಾನ ರಚನೆಯನ್ನು ಹೊರತುಪಡಿಸಿ ಅಂಬೇಡ್ಕರರ ಇನ್ನೇನೇನು ಸಾಧನೆಗಳಿವೆ? ಪಟ್ಟಿ ಮಾಡುತ್ತಾ ಹೋದರೆ ‘ಬಾಬಾಸಾಹೇಬ’ರ ವ್ಯಕ್ತಿತ್ವ ಗಾಂಧಿ ಎಂಬ ‘ಮಹಾತ್ಮ’ರನ್ನೂ , ಠಾಗೋರ್ ಎಂಬ ‘ಗುರುದೇವ’ರನ್ನೂ, ನೆಹರೂ ಎಂಬ ‘ಚಾಚಾ’ರನ್ನೂ ಮೀರಿ ಬೆಳೆಯುತ್ತದೆ. ಏಕೆಂದರೆ ಈ ದೇಶದಲ್ಲಿ ಪ್ರಪ್ರಥಮವಾಗಿ ರೈತರ ಪರ ದನಿ ಎತ್ತಿದ್ದು ಅಂಬೇಡ್ಕರ್. ಈ ದೇಶದ ಮಹಿಳೆಯರಿಗೆ ‘ಹಿಂದೂ ಸಂಹಿತೆ ಮಸೂದೆ’ಯ ಮೂಲಕ ನ್ಯಾಯ ದೊರಕಿಸಿಕೊಡಲು ಹೋರಾಡಿದ್ದು ಅಂಬೇಡ್ಕರ್.

ಅಚ್ಚರಿಯ ವಿಷಯವೆಂದರೆ ಈ ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್.ಬಿ.ಐ) ಸ್ಥಾಪಿಸಲು ಕಾರಣರಾದದ್ದು ಕೂಡ ಅಂಬೇಡ್ಕರ್‍ರೆ. ಹಿಂದೂ ಸಾಮಾಜಿಕ ಸುಧಾರಣೆಗೆ ಯತ್ನಿಸಿದ್ದು, ಪಾಕಿಸ್ತಾನ ವಿಷಯ, ಕಾರ್ಮಿಕ ನೀತಿ, ವಿದ್ಯುತ್ ಮತ್ತು ನೀರಾವರಿ ನೀತಿ, ದಾಮೋದರ ಕಣಿವೆ ಯೊಜನೆ, ಹಿರಾಕುಡ್ ಯೋಜನೆ, ಸೋನ್ ಕಣಿವೆ ಯೋಜನೆ, ಎರಡನೆ ಮಹಾಯುದ್ಧದ ನಂತರ ದೇಶದ ಆರ್ಥಿಕ ನೀತಿ ರೂಪಿಸಿದ್ದು… ಅಬ್ಬಬ್ಬಾ ಪಟ್ಟಿ ಮಾಡುತ್ತಾ ಹೋದರೆ ಅಂಬೇಡ್ಕರ್‍ರು ಇದಕ್ಕೆಲ್ಲ ಕಾರಣರಾ ಎಂದೆನಿಸುತ್ತದೆ. ವಾಸ್ತವವೆಂದರೆ ಇವು ಅವರ ಮುಚ್ಚಿಟ್ಟ ಇತಿಹಾಸದ ಕೆಲವು ತುಣುಕುಗಳು ಅಷ್ಟೆ!

ಉದಾಹರಣೆಗೆ ಹೇಳುವುದಾದರೆ 1945ರಲ್ಲಿ ಎರಡನೇ ಮಹಾಯುದ್ಧದ ನಂತರ ಈ ದೇಶದ ಕೃಷಿ, ಕೈಗಾರಿಕೆ, ಆರ್ಥಿಕ ಸ್ಥಿತಿ, ಪುನರ್ವಸತಿ ಮತ್ತು ಸೈನಿಕರ ಕಲ್ಯಾಣಕ್ಕಾಗಿ ‘ಪುನರುಜ್ಜೀವನ ಸಮಿತಿ ಸಭೆ’ ಬ್ರಿಟಿಷ್ ಗವರ್ನರ್ ಜನರಲ್ ರವರಿಂದ ರಚಿಸಲ್ಪಟ್ಟಿತು. ಅಂಬೇಡ್ಕರ್‍ರವರು ಆ ಸಮಿತಿಯ ಸದಸ್ಯರಾಗಿದ್ದರು ಮತ್ತು ಅವರಿಗೆ “ನೀರಾವರಿ ಮತ್ತು ವಿದ್ಯುಚ್ಛಕ್ತಿ ನೀತಿ ನಿರೂಪಣಾ ಸಮಿತಿ’ಯ ಜವಾಬ್ದಾರಿಯನ್ನು ವಹಿಸಲಾಯಿತು. ಆಸಕ್ತಿದಾಯಕ ವಿಷಯವೇನೆಂದರೆ ಆ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್‍ರವರು ಅದ್ಭುತವಾದ ಸಾಧನೆ ಮಾಡಿದ್ದಾರೆ. 1942 ರಿಂದ 1946 ರವರೆಗೆ ಗವರ್ನರ್ ಜನರಲ್‍ರವರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕ್ಯಾಬಿನೆಟ್ ಮಂತ್ರಿಯ ಸ್ಥಾನ ಪಡೆದಿದ್ದ ಅವರಿಗೆ ಕಾರ್ಮಿಕ, ನೀರಾವರಿ, ಮತ್ತು ವಿದ್ಯುಚ್ಛಕ್ತಿ ಇಲಾಖೆಗಳನ್ನು ವಹಿಸಲಾಗಿತ್ತು.

ಈ ನಾಲ್ಕು ವರ್ಷಗಳ ಅವಧಿಯಲ್ಲಿ ಅಂಬೇಡ್ಕರ್‍ರವರು ಮಾಡಿದ ಸಾಧನೆ ಬಹುತೇಕ ಜನರಿಗೆ ಗೊತ್ತಿಲ್ಲ! ಅಥವಾ ಗೊತ್ತಾಗಲು ಬಿಟ್ಟಿಲ್ಲ. ಕುತೂಹಲಕಾರಿ ವಿಷಯವೆಂದರೆ ಈ ಅವಧಿಯಲ್ಲಿಯೇ ಅವರು ಪ್ರಸಿದ್ಧ ದಾಮೋದರ್ ಕಣಿವೆ ಯೋಜನೆ, ಹಿರಾಕುಡ್ ಯೋಜನೆ ಮತ್ತು ಸೋನ್ ಕಣಿವೆ ಯೋಜನೆ ಜಾರಿಗೊಳಿಸಿದ್ದು ಮತ್ತು ಇಂತಹ ಬೃಹತ್ ನಿರಾವರಿ ಯೋಜನೆ, ವಿದ್ಯುತ್ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಅವರು 1944ರಲ್ಲೆ ’ಕೇಂದ್ರೀಯ ಜಲವಿದ್ಯುತ್ ಮತ್ತು ನೀರಾವರಿ ಆಯೋಗ’ವನ್ನು ಸ್ಥಾಪಿಸಿದ್ದು. ಇವತ್ತು ನಮ್ಮ ಮನೆಗಳೇನಾದರೂ ಬೆಳಗುತ್ತಿದ್ದರೆ, ನಮ್ಮ ಹೊಲಗಳೇನಾದರೂ ಹಸಿರಿನಿಂದ ಕಂಗೊಳಿಸುತ್ತಿದ್ದರೆ ಅದು ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್‍ರವರು ಮಾಡಿದ ಅದ್ಭುತ ಸಾಧನೆಯ ಫಲವಲ್ಲದೆ ಬೇರೆನೂ ಅಲ್ಲ. ದುರಂತವೆಂದರೆ ಇಂತಹ ಅದ್ಭುತ ಸಾಧನೆಯನ್ನು ಮುಚ್ಚಿಡಲಾಗಿದೆಯಲ್ಲ ಎಂಬುದು.

ಅಂದಹಾಗೆ ಅಂಬೇಡ್ಕರ್‍ರ ಮತ್ತೊಂದು ಸಾಧನೆಯನ್ನು ಹೇಳಲೇಬೇಕು. ಅದು ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ)ಗೆ ಸಂಬಂಧಿಸಿದ್ದು. ತಮ್ಮ ‘ಆರ್ಥಿಕ ಯೋಜನೆ, ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ಪಾತ್ರ’ ಎಂಬ ಕೃತಿಯಲ್ಲಿ ಖ್ಯಾತ ಚಿಂತಕ ಸುಖದೇವ್ ಥೋರಟ್‍ರವರು ಇದನ್ನು ದಾಖಲಿಸುತ್ತಾರೆ. “ಆರ್.ಬಿ.ಐ ಸ್ಥಾಪನೆಗೆ ಬ್ರಿಟಿಷ್ ಮಹಾರಾಣಿಯವರಿಂದ ನೇಮಿಸಲ್ಪಟ್ಟಿದ್ದ ‘ಹಿಲ್ಟನ್ ಯಂಗ್ ಆಯೋಗ’ದ ಮುಂದೆ ಅಂಬೇಡ್ಕರ್‍ರವರು ಆರ್.ಬಿ.ಐ.ನ ಮಾರ್ಗದರ್ಶಿಸೂತ್ರ, ಕಾರ್ಯಶೈಲಿ ಮತ್ತು ದೂರದೃಷ್ಟಿಯನ್ನು ಮಂಡಿಸುತ್ತಾರೆ. ತನ್ಮೂಲಕ ಆರ್.ಬಿ.ಐ.ನ ಸ್ಥಾಪನೆಗೆ ಕಾರಣರಾಗುತ್ತಾರೆ” ಎನ್ನುತ್ತಾರೆ ಸುಖದೆವ್ ಥೊರಟ್.

ಕುತೂಹಲಕಾರಿ ಅಂಶವೆಂದರೆ ‘ಹಿಲ್ಟನ್ ಯಂಗ್ ಅಯೋಗ’ದ ಪ್ರತಿಯೊಬ್ಬ ಸದಸ್ಯನ ಕೈಯಲ್ಲೂ ಅಂಬೇಡ್ಕರ್‍ರವರು ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ಗಾಗಿ ‘ಡಿ.ಎಸ್‍ಸಿ’ ಪದವಿ ಪಡೆಯಲು ರಚಿಸಿದ್ದ ‘ರೂಪಾಯಿಯ ಸಮಸ್ಯೆ: ಅದರ ಮೂಲ ಮತ್ತು ಪರಿಹಾರ’ ಎಂಬ ಕೃತಿಯಿತ್ತು. ದೇಶದ ಹಣಕಾಸು ವ್ಯವಸ್ಥೆ ಪಟ್ಟಭದ್ರರ ಕೈಗೆ ಜಾರುತ್ತಿದ್ದನ್ನು ಗಮನಿಸಿ ಅಂಬೇಡ್ಕರ್ ರವರು ಆರ್.ಬಿ.ಐ.ನ ಅಗತ್ಯತೆ ಮತ್ತು ಅದರ ಭವಿಷ್ಯದ ಮಾರ್ಗಸೂಚಿಯ ಬಗ್ಗೆ ಆಯೋಗದ ಮುಂದೆ ಸಮಗ್ರವಾದ ವಾದ ಮಂಡಿಸುತ್ತಾರೆ ತನ್ಮೂಲಕ 1934ರಲ್ಲಿ ಅದರ ಸ್ಥಾಪನೆಗೆ ಕಾರಣರಾಗುತ್ತಾರೆ. ಮತ್ತೆ ಕೇಳುತ್ತಿರುವ ಪ್ರಶ್ನೆಯೇನೆಂದರೆ ಇಂತಹ ಅದ್ಭುತ ಇತಿಹಾಸ ಎಷ್ಟು ಜನರಿಗೆ ಗೊತ್ತು ಎಂಬುದು?

ಮತ್ತೋಂದು ವಿಷಯ ಇಲ್ಲಿ ಹೇಳಲೆಬೇಕಾಗಿದೆ. ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 150ನೇ ವರ್ಷಾಚರಣೆಯನ್ನು ನೆರವೇರಿಸಿಕೊಂಡಿತು. ಅದು ರಾಷ್ಟ್ರಗೀತೆಯ ಕರ್ತೃ ರವೀಂದ್ರನಾಥ್ ಠಾಗೋರ್‍ರವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಿತು. ಪ್ರಶ್ನೆಯೇನೆಂದರೆ ಈ ದೇಶದ ಕರೆನ್ಸಿಯ ಬಗ್ಗೆ, ಹಣಕಾಸು, ಅರ್ಥಶಾಸ್ತ್ರದ ಬಗ್ಗೆ ಠಾಗೋರ್ ರವರ ಕೊಡುಗೆಯಾದರೂ ಏನು? ಎಂಬುದು. ಖಂಡಿತ ಏನೂ ಇಲ್ಲ. ಎಸ್.ಬಿ.ಐ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಕಾರಣಕರ್ತರಾದ, ಹಲವಾರು ಕೃತಿಗಳನ್ನು ರಚಿಸಿ ಈ ದೇಶದ ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿರುವ, ನೊಬೆಲ್ ಪ್ರಶಸ್ತಿ ವಿಜೇತ ಖ್ಯಾತ ಅರ್ಥಶಾಸ್ತ್ರಜ್ಞ ಅಮಾತ್ರ್ಯ ಸೇನ್‍ರಿಂದ “ಅಂಬೇಡ್ಕರ್ ನನ್ನ ಅರ್ಥಶಾಸ್ತ್ರದ ಗುರು”ಎಂದು ಕರೆಸಿಕೊಂಡಿರುವ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್‍ರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಬೇಕಿತ್ತು! ದುರಂತವೆಂದರೆ ಅಸ್ಪೃಶ್ಯತೆಯ ಸೋಂಕು ತಗುಲಿಸಿಕೊಂಡ ಈ ದೇಶದ ಸ್ಥಾಪಿತ ಹಿತಾಸಕ್ತಿಗಳಿಗೆ ಅಂಬೇಡ್ಕರರ ಈ ಸಾಧನೆಗಳು ಕಾಣುತ್ತಿಲ್ಲ. ಇನ್ನು ಅವರು ಬ್ರಾಂಡ್ ಅಂಬಾಸಿಡರ್ ಆಗಲು ಹೇಗೆ ಸಾಧ್ಯ? ಅವರನ್ನು ಕೇವಲ ಒಂದು ಸಮುದಾಯದ ‘ಬ್ರಾಂಡ್’ ಆಗಿ ಬಿಂಬಿಸಲಾಗುತ್ತಿದೆ ಅಷ್ಟೇ!

ಇನ್ನು ಈ ನಡುವೆ ಅಂತರ್ ರಾಜ್ಯ ಸಮಸ್ಯೆಗಳ ಬಗ್ಗೆ ಅಂಬೇಡ್ಕರ್‍ರವರ ಅನಿಸಿಕೆಗಳನ್ನು ದಾಖಲಿಸಲೇಬೇಕು. ಯಾಕೆಂದರೆ 1955ರಲ್ಲೆ ಅಂಬೇಡ್ಕರ್‍ರವರು ತಮ್ಮ “ಭಾಷಾವಾರು ಪ್ರಾಂತ್ಯಗಳ ಬಗೆಗಿನ ಆಲೋಚನೆಗಳು’ ಎಂಬ ಕೃತಿಯಲ್ಲಿ ಮಧ್ಯಪ್ರದೇಶವನ್ನು ಉತ್ತರ ಮತ್ತು ದಕ್ಷಿಣ ರಾಜ್ಯಗಳಾಗಿ ವಿಂಗಡಿಸಲು ಮತ್ತು ಬಿಹಾರವನ್ನು ಎರಡು ರಾಜ್ಯವಾಗಿ ವಿಂಗಡಿಸಲು ಸಲಹೆ ನೀಡುತ್ತಾರೆ. ಅಚ್ಚರಿಯ ವಿಷಯವೇನೆಂದರೆ ಅವರು ಸಲಹೆ ನೀಡಿದ 45 ವರ್ಷಗಳ ನಂತರ ಅದು ಜಾರಿಯಾದದ್ದು. ಯಾಕೆಂದರೆ 2000ದಲ್ಲಿ ಮದ್ಯಪ್ರದೇಶದಿಂದ ಛತ್ತೀಸಗಢ ಮತ್ತು ಬಿಹಾರದಿಂದ ಜಾರ್ಖಂಡ್‍ಅನ್ನು ವಿಭಜನೆಗೊಳಿಸಿ ಪ್ರತ್ಯೇಕ ರಾಜ್ಯಗಳೆಂದು ಘೋಷಿಸಲಾಯಿತು. ತನ್ಮೂಲಕ ಅಂಬೇದ್ಕರ್‍ರ ದೂರದೃಷ್ಟಿಗೆ ಮನ್ನಣೆ ನೀಡಲಾಯಿತು. (ಅಂದಹಾಗೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಇರುವ ಹೊಗೇನಕಲ್ ವಿವಾದಕ್ಕೆ ಅಂಬೇಡ್ಕರರಲ್ಲಿ ಪರಿಹಾರವಿದೆಯೆಂದರೆ ಅತಿಶಯೋಕ್ತಿಯೆನಿಸದು. ಅದಕ್ಕಾಗಿ ಅಂಬೇಡ್ಕರ್ ಕೃತಿಗಳ ಮೋರೆ ಹೋಗಬೇಕಷ್ಟೆ.)

ಸಿಂಪಲ್ಲಾಗಿ ಹೇಳುವುದಾದರೆ ಅಂಬೇಡ್ಕರ್‍ರನ್ನು ಕೇವಲ ದಲಿತರ ಉದ್ಧಾರಕ ಎಂದು ಮಾತ್ರ ನೋಡಲಾಗಿದೆ. ತನ್ಮೂಲಕ ಅವರ ಇತರ ಅದ್ಭುತ ಸಾಧನೆಗಳನ್ನು ನಿಕೃಷ್ಟವಾಗಿ ಮುಚ್ಚಿಡಲಾಗಿದೆ. ಅಂತಹ ಮುಚ್ಚಿಡುವ ಪ್ರಕ್ರಿಯೆ ಈಗಲೂ ನಡೆಯುತ್ತಿದೆ ಎಂದರೆ ಅಚ್ಚರಿಯಾಗಬಹುದು. ಉದಾಹರಣೆಗೆ ರಾಜ್ಯಸರ್ಕಾರದ ಪಠ್ಯ ಪುಸ್ತಕವೊಂದರಲ್ಲಿ ಸಂವಿಧಾನ ರಚನೆ ಬಗೆಗಿನ ಅಧ್ಯಾಯದಲ್ಲಿ ಡಾ.ಬಾಬು ರಾಜೇಂದ್ರ ಪ್ರಸಾದರನ್ನು ಸಂವಿಧಾನ ರಚನಾಸಭೆಯ ಅಧ್ಯಕ್ಷರೆಂದೂ (ನೆನಪಿರಲಿ Constituent Assembly
ಎಂಬುದನ್ನು ‘ಸಂವಿಧಾನ ಸಭೆ’ ಎಂದು ಅನುವಾದಿಸಬೇಕಿತ್ತು.

ಆದರೆ ಗೊಂದಲ ಮೂಡಿಸಲು ಅದನ್ನು ‘ಸಂವಿಧಾನ ರಚನಾಸಭೆ’ ಎಂದು ಉದ್ದೇಶಪೂರ್ವಕವಾಗಿ ತಪ್ಪಾಗಿ ಅನುವಾದಿಸಲಾಗಿದೆ ಎಂದೆನಿಸುತ್ತದೆ!) ಮತ್ತು ಡಾ.ಬಿ.ಆರ್. ಅಂಬೇಡ್ಕರರನ್ನು ಕರಡು ಸಮಿತಿಯ (ಇದನ್ನು ಸರಿಯಾಗಿ ಅನುವಾದಿಸಲಾಗಿದೆ!) ಅಧ್ಯಕ್ಷರೆಂದು ಉಲ್ಲೇಖಿಸಲಾಗಿದೆ. ಅಚ್ಚರಿಯ ವಿಷಯವೆಂದರೆ ಇಲ್ಲಿ ಕೇವಲ ರಾಜೇಂದ್ರ ಪ್ರಸಾದರ ಚಿತ್ರವನ್ನು ಮಾತ್ರ ಮುದ್ರಿಸಲಾಗಿದೆ, ಅಂಬೇಡ್ಕರ್ ಭಾವಚಿತ್ರ ಮಾತ್ರ ಇಲ್ಲ! ರಾಜೇಂದ್ರಪ್ರಸಾದರ ಆ ಚಿತ್ರವನ್ನು ನೋಡಿದ ಯಾರಾದರೂ ಅಂಬೇಡ್ಕರರನ್ನು ‘ಸಂವಿಧಾನ ಶಿಲ್ಪಿ’ ಎನ್ನುತ್ತಾರೆಯೆ? ಖಂಡಿತ ಇಲ್ಲ. ‘ಬಾಬು ರಾಜೇಂದ್ರ ಪ್ರಸಾದರ ಚಿತ್ರದ ಹಿಂದೆ’ ಅಂಬೇಡ್ಕರರನ್ನು ‘ಮುಚ್ಚುª’ ಕ್ರೂರ ಪ್ರಯತ್ನವಿದಲ್ಲದೆ ಬೇರೆನೂ ಅಲ್ಲ!

ಹಾಗಿದ್ದರೆ ಅಂಬೇಡ್ಕರ್‍ರನ್ನು ಹೀಗೆ ಮುಚ್ಚಿಡುವ ಅವರ ಸಾಧನೆಗಳೆಲ್ಲವನ್ನು ಇಡೀ ಜಗತ್ತಿಗೆ ಹೇಳದಿರುವುದರ ಹಿಂದಿರುವ ಹುನ್ನಾರವಾದರೂ ಏನು? ಖಂಡಿತ ಒಂದು ಬೃಹತ್ ಸಮುದಾಯವನ್ನು ಅದರ ಭವ್ಯ ಇತಿಹಾಸವನ್ನು ಅದರಿಂದ ಮರೆಮಾಚಿ ಮಾನಸಿಕ ಗುಲಾಮಗಿರಿಗೆ ತಳ್ಳುವ ವ್ಯವಸ್ಥಿತ ಸಂಚಿದು. ಈ ನಿಟ್ಟಿನಲ್ಲಿ ಶೋಷಿತ ಸಮುದಾಯ ಅಂತಹ ವ್ಯವಸ್ಥಿತ ಸಂಚಿಗೆ ಬಲಿಯಾಗಬಾರದು. ‘ನಮಗೇಕೆ ಇದನ್ನು ಹೇಳಲಿಲ್ಲ’ ಎಂದು ಮುಂದಿನ ಪೀಳಿಗೆ ಕೇಳುವಂತಾಗಬಾರದು. ಆದಕಾರಣ ಶೋಷಿತ ಸಮುದಾಯ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ. ಅಂಬೇಡ್ಕರರ ಭವ್ಯ ಇತಿಹಾಸವನ್ನು, ಪ್ರತಿಯೊಂದು ಸಾಧನೆಯನ್ನು ಇಡೀ ಜಗತ್ತಿಗೆ ಸಾರಿಹೇಳಲು ಟೊಂಕಕಟ್ಟಿ ನಿಲ್ಲಬೇಕಿದೆ.

ರಘೋತ್ತಮ ಹೊ.ಬ

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

Published

on

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.

ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.

ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.

ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.

ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.

ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.

ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.

ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ17 hours ago

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಡಿಕೇರಿಯಲ್ಲಿ...

ದಿನದ ಸುದ್ದಿ5 days ago

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ...

ದಿನದ ಸುದ್ದಿ1 week ago

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499...

ದಿನದ ಸುದ್ದಿ1 week ago

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ...

ದಿನದ ಸುದ್ದಿ1 week ago

ಇಂದು ಚುನಾವಣಾ ಆಯೋಗ ಸಮಾವೇಶ

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ...

ದಿನದ ಸುದ್ದಿ1 week ago

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ 90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು....

ದಿನದ ಸುದ್ದಿ2 weeks ago

ಔಷಧಗಳ ದರ ಗಣನೀಯ ಏರಿಕೆ ಕುರಿತ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ; ಕೇಂದ್ರ ಸರ್ಕಾರ ಸ್ಪಷ್ಟನೆ

ಸುದ್ದಿದಿನ ಡೆಸ್ಕ್ : ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ವಿವಿಧ ಔಷಧಿಗಳ ದರ ಗಣನೀಯವಾಗಿ ಏರಿಕೆ ಮಾಡಲಾಗಿದೆ ಎಂಬ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ಮತ್ತು ಜನರನ್ನು...

ದಿನದ ಸುದ್ದಿ2 weeks ago

ರಾಜ್ಯದಲ್ಲಿ ಬಿಸಿಲ ತಾಪ ಇನ್ನೂ ಹೆಚ್ಚಾಗಲಿದೆ ; ಹವಾಮಾನ ಇಲಾಖೆ ಮುನ್ಸೂಚನೆ

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಮುಂದಿನ 7 ದಿನಗಳಲ್ಲಿ ಬಿಸಿಲ ತಾಪ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಜನರುಕೆಲವು ಮುನ್ನೆಚ್ಚರಿಕೆ...

ದಿನದ ಸುದ್ದಿ2 weeks ago

ಜಿಲ್ಲೆಯ ರಾಜಕಾರಣದಲ್ಲಿ ನನಗೆ ಅನ್ಯಾಯ; ರಾಜಕೀಯ ಕುತಂತ್ರ ವ್ಯವಸ್ಥೆ ವಿರುದ್ಧ ನನ್ನ ಹೋರಾಟ : ವಿನಯ್ ಕುಮಾರ್

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ರಾಜಕಾರಣದಲ್ಲಿ ಚೆನ್ನಯ್ಯ ಒಡಿಯರ್ ಅವರಿಗೆ ಆದ ಅನ್ಯಾಯ ನನಗೂ ಆಗಿದೆ. ನನ್ನ ಹೋರಾಟ ನನ್ನ ಸ್ವಾಭಿಮಾನದ ಹೋರಾಟ ಒಬ್ಬ ವ್ಯಕ್ತಿ ಪಕ್ಷದ ವಿರುದ್ಧ...

ದಿನದ ಸುದ್ದಿ2 weeks ago

ಲೋಕಸಭೆ ಚುನಾವಣೆ; ರಾಜ್ಯದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನ

ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ, ದೇಶಾದ್ಯಂತ ಎರಡನೇ ಹಂತದ 89 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮೊದಲ...

Trending