Connect with us

ಅಂತರಂಗ

ಅರಿಮೆಯ ಅರಿವಿರಲಿ-52 : ಮಗುತನದಿಂದ ತನ್ನತನ

Published

on

  • ಯೋಗೇಶ್ ಮಾಸ್ಟರ್

ಹಂಕಾರವನ್ನೇ ಆತ್ಮಗೌರವ ಅಥವಾ ಸ್ವಾಭಿಮಾನವನ್ನಾಗಿ ಭಾವಿಸುವುದು ತನ್ನತನದ ಮೌಲ್ಯವನ್ನು ಗಟ್ಟಿಗೊಳಿಸುವುದೇನಲ್ಲ. ಬದಲಾಗಿ ಮಾನಸಿಕ ಸಮಸ್ಯೆಗಳನ್ನು ಹೆಚ್ಚಿಸುತ್ತಾ ಹೋಗುವುದು. ಆದರೆ ತನ್ನತನದ ಪರಿಕಲ್ಪನೆ ಮತ್ತು ಸ್ವಾಭಿಮಾನದ ಘನತೆಯನ್ನು ನಾವು ಅರಿತುಕೊಳ್ಳುವುದರ ಜೊತೆಗೆ ಮಕ್ಕಳಿಗೆ ಪ್ರಾರಂಭದಿಂದಲೇ ರೂಢಿಗೊಳಿಸಿದರೆ, ಅಥವಾ ಅದರ ಬಗ್ಗೆ ಅರಿವು ಮೂಡಿಸಿದರೆ ಆತ್ಮಗೌರವದ ಬದುಕನ್ನು ಕಟ್ಟಿಕೊಳ್ಳಬಲ್ಲರು.

ಧೈರ್ಯ, ಹಟಮಾರಿತನ, ವಿನಯ, ಸಂಕೋಚ, ನಿಸ್ಸಂಕೋಚ, ಭಯ, ಮೌನ, ಮಾತು, ಕೆಲಸ, ನಿರ್ಗೆಲಸ; ಹೀಗೆ ಎಲ್ಲರೂ ಅಗತ್ಯವಿರುವಷ್ಟು ಹೊಂದಬಹುದು ಮತ್ತು ಉಪಯೋಗಿಸಬಹುದು.
ಇದನ್ನು ಬಹಳ ಗಂಭೀರವಾಗಿ ಗಮನಿಸೋಣ. ಯಾರೊಬ್ಬ ಎಲ್ಲದಕ್ಕೂ ಸಂಕೋಚ ಪಡುತ್ತಾನೋ ಅಥವಾ ಎಲ್ಲದಕ್ಕೂ ನಿರ್ಲಜ್ಜೆಯಿಂದ ಮುಂದಾಗುತ್ತಾನೋ, ಅವನಲ್ಲಿ ಮಾನಸಿಕ ಸಮಸ್ಯೆ ಇದೆ ಎಂದೇ ಅರ್ಥ.

ಅದೇ ಒಬ್ಬ ವ್ಯಕ್ತಿ ಕೆಲವೊಂದು ವಿಷಯಕ್ಕೆ ಸಹಜವಾಗಿ ನಾಚಿಕೆಪಟ್ಟುಕೊಳ್ಳುತ್ತಾನೆ. ಅಗತ್ಯವಿರುವ ಕೆಲವು ವಿಷಯಗಳಿಗೆ ಸಂಕೋಚವಿಲ್ಲದೇ ಮುಂದಾಗುತ್ತಾನೆ ಎಂದರೆ ಅವನು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತಿರುವ ಲಕ್ಷಣವನ್ನು ತೋರುತ್ತಿದ್ದಾನೆಂದು ಅರ್ಥ.

ಆತ್ಮಗೌರವ ಅಥವಾ ಸೆಲ್ಫ್ ಎಸ್ಟೀಮ್ ಎಂಬುದು ವ್ಯಕ್ತಿತ್ವ ವಿಕಾಸ, ಸಾಮಾಜಿಕ ಮನಶಾಸ್ತ್ರ, ಚಿಕಿತ್ಸಕ (ಕ್ಲಿನಿಕಲ್) ಮನಶಾಸ್ತ್ರ, ಪುರೋಗಾಮಿತ್ವ (ಡೆವಲಪ್ ಮೆಂಟಲ್) ಮನಶಾಸ್ತ್ರ; ಹೀಗೆ ಹಲವು ಶಾಖೆಗಳಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ.
ಇದು ತನ್ನತನದ ಪರಿಕಲ್ಪನೆಯ ಮೇಲೆಯೇ ಅವಲಂಬಿತವಾಗಿದ್ದು ರೋಸೆನ್‍ಬರ್ಗ್ (1965) ಎಂಬ ಮನಶಾಸ್ತ್ರಜ್ಞ ಹೇಳುವಂತೆ, ಸ್ವಾಭಿಮಾನ ಎಂದರೆ ಒಬ್ಬ ವ್ಯಕ್ತಿಯ ಸಮಗ್ರವಾದ ತನ್ನತನದ ಸಕಾರಾತ್ಮಕ ಮೌಲ್ಯಮಾಪನ. ಜೊತೆಗೆ ತನ್ನನ್ನು ತಾನು ಗೌರವಿಸಿಕೊಳ್ಳುವುದು ಮತ್ತು ತನ್ನನ್ನು ಸತ್ವಪೂರ್ಣ ವ್ಯಕ್ತಿ ಎಂದು ಪರಿಗಣಿಸಿಕೊಳ್ಳುವುದು.

ಮಗುತನದ ಹಂತಗಳು

ಮಗುವಿನ ಬಾಲ್ಯದಲ್ಲಿಯೇ ಗೌರವಪೂರ್ಣವಾದ ತನ್ನತನದ ಭಾವವನ್ನು ರೂಪುಗೊಳಿಸುವ ಜವಾಬ್ದಾರಿಯನ್ನು ಮಗುವನ್ನು ನೋಡಿಕೊಳ್ಳುವ ಹಿರಿಯರು ಹೊರಬೇಕು.

ಸೊನ್ನೆ ವರ್ಷದಿಂದ ಎರಡು ವರ್ಷಗಳ ವರೆಗೆ

1. ಮಗುವು ಸತತವಾದ ಗಮನವನ್ನು ಪಡೆಯುತ್ತಿದ್ದರೆ, ಅದಕ್ಕೆ ಪ್ರೀತಿಯಿಂದ ಕೂಡಿರುವ ಸಂಬಂಧದ ಅನುಭವವಾಗುತ್ತಿದ್ದರೆ, ಆ ಮಗುವು ಸಕಾರಾತ್ಮಕವಾದ ತನ್ನತನದ ಭಾವವನ್ನು ಹೊಂದುತ್ತದೆ.

2. ಮಗುವು ತನಗಾಗುತ್ತಿರುವ ಅನುಭವದ ಆಧಾರದಲ್ಲಿ ಆದ್ಯತೆಗಳನ್ನು ಕಂಡುಕೊಳ್ಳುತ್ತದೆ. ಯಾವುದು ಮೊದಲು ಮುಖ್ಯ, ಬೇಕಾದದ್ದು, ಹಿತ ನೀಡುವಂತದ್ದು; ಇಂತಹ ಅನುಭವಗಳನ್ನು ಆಧರಿಸಿರುವ ಆ ಆದ್ಯತೆಗಳಿಂದ ತನ್ನತನದ ಸಹಜವಾದ ಪ್ರಜ್ಞೆಯನ್ನು ರೂಪಿಸಿಕೊಳ್ಳುತ್ತದೆ.

3. ಅಂಬೆಗಾಲಿಡುವ ಶಿಶುವಿನ ಇತಿಮಿತಿಯನ್ನು ನಿಯಂತ್ರಿಸುವ ಕಟ್ಟಳೆ ಸುರಕ್ಷಿತ ಭಾವವನ್ನು ಒದಗಿಸುತ್ತದೆ. ಆದರೆ ಆ ಕಟ್ಟಳೆ ಮೃದುವಾಗಿಯೂ ಮತ್ತು ದೃಢವಾಗಿಯೂ ಇರಬೇಕು. ಉದಾಹರಣೆಗೆ, “ನೀನು ಗೇಟಿನ ಆಚೆ ಹೋಗಬಾರದು. ಹಾಗೆ ಹೋಗಲು ನಾನು ಬಿಡುವುದಿಲ್ಲ. ಅಲ್ಲಿ ಗಾಡಿಗಳು ಬರುತ್ತವೆ. ಅಪಾಯವಿದೆ” ಎಂಬ ನಿಯಂತ್ರಣವು ಇರಬೇಕು.

ಆದರೆ ಅದು, “ಹೋಗಬಾರದು ಎಂದರೆ ಹೋಗಬಾರದು. ಹೋದರೆ ಏಟು ಕೊಡ್ತೀನಿ. ಹೇಳಿದಷ್ಟು ಕೇಳು” ಎನ್ನುವ ಮಾತಿನ ಬಗೆಯು ಸಕಾರಾತ್ಮಕವಾದ ತನ್ನತನವನ್ನು ರೂಪಿಸುವ ಬದಲು ಅರಿಮೆಯನ್ನು ಹುಟ್ಟಿಸುವ ಅಥವಾ ದೌರ್ಬಲ್ಯಕ್ಕೆ ಎಡೆಮಾಡುವಂತಹ ನಕಾರಾತ್ಮಕ ಗುಣಗಳನ್ನು ರೂಢಿಸುತ್ತದೆ.

4. ಮಗುವು ಎರಡು ವರ್ಷದ ಹೊತ್ತಿಗೆ ಭಾವವನ್ನು ಮತ್ತು ಭಾಷೆಯನ್ನು ಗ್ರಹಿಸಲು ಆರಂಭಿಸಿದ್ದು ನಾನು ಎಂಬ ಭಾವವು ರೂಪುಗೊಳ್ಳುತ್ತಿರುತ್ತದೆ. ಅಲ್ಲಿಗೆ ತನ್ನತನದ ಸಂರಚನೆ ಪ್ರಾರಂಭವಾಯಿತೆಂದೇ ಅರ್ಥ. ಮಗುವಿನ ಗಿಲಕಿಯನ್ನೋ ಅಥವಾ ಅದು ನಿತ್ಯ ಬಳಸುವ ವಸ್ತುವನ್ನೋ ತೋರಿ, “ಇದು ಯಾರಿಗೆ ಬೇಕು?” “ಇದು ಯಾರದು?” ಎಂದರೆ, ನನಗೆ, ನನ್ನದು ಎಂಬ ಭಾವವನ್ನು ವ್ಯಕ್ತಪಡಿಸಲು ಅದಕ್ಕೆ ಸಾಧ್ಯವಾಗುತ್ತದೆ. ಅವುಗಳೆಲ್ಲಾ ತನ್ನತನದ ಆರಂಭಿಕ ಪ್ರಕಟಣೆಗಳೇ.

ಮೂರರಿಂದ ನಾಲ್ಕರವರೆಗೆ

1. ಮೂರು ಮತ್ತು ನಾಲ್ಕುವರ್ಷದ ಮಗುವು ತನ್ನನ್ನು ತಾನು ಪ್ರತ್ಯೇಕ ಮತ್ತು ಭಿನ್ನ ವ್ಯಕ್ತಿಗಳೆಂದು ನೋಡಿಕೊಳ್ಳಲು ಪ್ರಾರಂಭಿಸುತ್ತದೆ. ಅದಕ್ಕಾಗಿ ಪ್ರತ್ಯೇಕವಾಗಿರುವ ವಸ್ತುಗಳು, ಉಡುಪುಗಳು, ಬಂದವರು ಮಾತಾಡಿಸುವ ರೀತಿ; ಇವೆಲ್ಲವೂ ಬೇರೆ ಹಿರಿಯರದ್ದಕ್ಕಿಂತ ಭಿನ್ನ ಎಂಬುದನ್ನು ಗುರುತಿಸುತ್ತವೆ.

ತಮ್ಮದು ಯಾವುದು, ಇತರರದು ಯಾವುದು ಎಂದು ವಸ್ತುಗಳನ್ನು ಮಾತ್ರ ಗುರುತಿಸುವುದಲ್ಲ. ವ್ಯಕ್ತಿತ್ವವನ್ನೂ ಕೂಡಾ ಕಂಡುಕೊಳ್ಳುತ್ತಿರುತ್ತವೆ. ಆದರೆ ಅದಿನ್ನೂ ಬಿರಿಯುವ ಹಂತದಲ್ಲಿದ್ದರೂ ಪ್ರಕ್ರಿಯೆ ಅದಾಗಲೇ ಪ್ರಾರಂಭವಾಗಿದೆ ಎಂದೇ ಅರ್ಥ.

2. ತನ್ನತನದ ಬಗ್ಗೆ ಇರುವ ಅರಿವು ಬಹುಪಾಲು ಶಾಬ್ಧಿಕ ವರ್ಣನೆಯಾಗಿರುತ್ತದೆ. ತಾನು ಹೇಗೆ ಇದ್ದೇನೆ? ತಾನು ಏನು ಮಾಡುತ್ತೇನೆ? ತನಗೆ ಏನು ಬೇಕು? ಈ ರೀತಿ. ಆದರೆ ಅದು ನಾನು ಹೀಗೆ ಇರುವುದು, ನನಗೆ ಹೀಗಿರಬೇಕು; ಈ ರೀತಿಯ ಹಕ್ಕು ಅಥವಾ ಅಧಿಕಾರದ ತಳಹದಿಯದ್ದಾಗಿದ್ದು ತೀರ್ಮಾನ ತೆಗೆದುಕೊಳ್ಳುವಂತದ್ದಾಗಿರುವುದಿಲ್ಲ.

3. ಶಾಲೆಗೆ ಅಥವಾ ಬಾಲವಾಡಿಗೆ ಹೋಗ ವಯಸ್ಸಿಗೆ ಬರುವ ಮಕ್ಕಳಾಗಲೇ ಸ್ವತಂತ್ರವಾಗಿ ತಾವೇನು ಮಾಡಬಲ್ಲೆವು ಎಂಬುದರ ಬಗ್ಗೆ ಕುತೂಹಲವನ್ನು ಹೊಂದಿರುತ್ತಾರೆ ಮತ್ತು ಅವುಗಳ ಪ್ರಯೋಗಿಸಲು ಹಾತೊರೆಯುತ್ತಿರುತ್ತಾರೆ. ಅಂತಹ ಸಮಯದಲ್ಲಿ ತನ್ನತನದ ಸಾಮರ್ಥ್ಯ ಮತ್ತು ಚಿತ್ರಣವನ್ನು ಗುರುತಿಸಿಕೊಳ್ಳುವ ಆರಂಭವಾಗಿರುತ್ತದೆ.

ಬಹಳಷ್ಟು ಪೋಷಕರು ಅದನ್ನು ನಿಯಂತ್ರಿಸಲು ಹಾತೊರೆಯುತ್ತಾರೆ. ಗಮನಿಸಬೇಕು, ನಿಯಂತ್ರಣದಲ್ಲೂ ಇಡಬೇಕು. ಆದರೆ ಆ ನಿಯಂತ್ರಣವು ಸಕಾರಣವಾಗಿರಬೇಕು. ನನಗೆ ಇಷ್ಟವಿಲ್ಲ ಮಾಡಬೇಡ. ಸುಮ್ಮನೆ ಅದೆಲ್ಲಾ ಯಾಕೆ? ಈಗ ಸುಮ್ಮನೆ ಕೂತ್ಕೊಂಡಿದ್ರೆ ಸರಿ ಹೋಯ್ತು. ನನಗೆ ಮುಂಚೆನೇ ತಲೆ ಸರಿ ಇಲ್ಲ, ಇನ್ನು ನೀನು ಬೇರೆ ರೇಗಿಸಬೇಡ; ಈ ಬಗೆಯ ಹಲವು ಕಾರಣಗಳಿಂದ ಮಕ್ಕಳನ್ನು ನಿಯಂತ್ರಿಸಲು ಹೋಗಬಾರದು.

4. ಬಹಳಷ್ಟು ಪೋಷಕರು ತಮ್ಮ ದೌರ್ಬಲ್ಯದ ಕಾರಣದಿಂದ ಮಕ್ಕಳ ಸಾಮರ್ಥ್ಯವನ್ನು ಕಡೆಗಣಿಸುತ್ತಾರೆ. ತಮಗಿರುವ ದುರ್ಬಲ ತನ್ನತನದ ಚಿತ್ರಣದಿಂದಾಗಿ ಮಕ್ಕಳು ರೂಪಿಸಿಕೊಳ್ಳಬಹುದಾದ ಬಲವಾದ ಮತ್ತು ಸುಂದರವಾದ ಮಗುತನದ ಚಿತ್ರಣವನ್ನು ಹಾಳುಗೆಡವುತ್ತಾರೆ.

ಐದರಿಂದ ಆರರವರೆಗೆ

1. ಗುತನವು ವಿಸ್ತಾರಗೊಳ್ಳುವ, ಬದಲಾಗುವ ಹಂತವಿದು. ಸ್ಥಿತ್ಯಂತರದ ಮಜಲಿದು ‘ನಾನು’ ಇಂದ ‘ನಾವು’, ‘ನನ್ನ’ ಇಂದ ‘ನಮ್ಮ’. ನಮ್ಮ ಅಗತ್ಯಗಳೇನು, ನಾವು ಎಂಬ ಗುಂಪಿಗೆ ಏನು ಬೇಕು, ಅದು ಹೇಗಿರಬೇಕು ಎಂಬ ಆಸಕ್ತಿಗಳು ಮೊಳೆಯುವುದು ಈ ವಯಸ್ಸುಗಳಲ್ಲಿ.

2. ಬಾಲವಾಡಿಯಲ್ಲಿ ಮಕ್ಕಳಿಗೆ ತಮಗೆ ಏನು ಬೇಕು, ಯಾವುದನ್ನು ಆಸೆ ಪಡುತ್ತೇವೆ, ಭಾವಿಸುವುದು ಎಂದರೇನು ಎಂದೆಲ್ಲಾ ಸಂವಹನದ ಮೂಲಕ ಮನದಟ್ಟು ಮಾಡುತ್ತಾರೆ.

3. ಐದಾರು ವರ್ಷದ ಮಕ್ಕಳು ಭಾಷೆಯಲ್ಲಿ ತಮ್ಮನ್ನೂ ಮತ್ತು ತಮ್ಮವರ ಸಂಬಂಧ ಮತ್ತು ಗುರುತುಗಳನ್ನೂ ವಿವರಿಸುವಷ್ಟರ ಮಟ್ಟಿಗೆ ಮುಂದುವರೆದಿರುತ್ತಾರೆ.

ಬಾಲ್ಯಾವಸ್ಥೆಯ ಮಧ್ಯಕಾಲ

ಬಾಲ್ಯದ ಮಧ್ಯಕಾಲ ಎನ್ನಬಹುದಾದ ಏಳರಿಂದ ಹನ್ನೊಂದು ವರ್ಷದ ಅವಧಿಯಲ್ಲಿ ಸಾಮಾಜಿಕವಾಗಿ ತಮ್ಮನ್ನು ಮಕ್ಕಳು ಗುರುತಿಸಿಕೊಳ್ಳಲಾರಂಭಿಸುತ್ತಾರೆ. ಇತರರೊಂದಿಗೆ ಹೇಗಿರಬೇಕು, ಅವರೊಂದಿಗೆ ಹೇಗೆ ಹೊಂದಿಕೊಳ್ಳಬೇಕು ಎಂಬ ಸಾಮರ್ಥ್ಯವೂ ಈ ಹಂತಕ್ಕಾಗಲೇ ರೂಢಿಯಾಗತೊಡಗುತ್ತಿರುತ್ತದೆ. ತಮ್ಮನ್ನು ಇತರರು ಹೇಗೆ ಕಾಣುತ್ತಾರೆ ಎಂದೂ ಅವರು ಗಮನಿಸುತ್ತಿರುತ್ತಾರೆ.

ಹಾಗೆಯೇ ಇತರರ ಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಮನೆಯವರಲ್ಲದ ಇತರರ ಬಗ್ಗೆ ಆಸಕ್ತಿ ತೋರುತ್ತಾರೆ. ಕೆಲವರನ್ನು ಇಷ್ಟಪಡುವುದಿಲ್ಲ. ಕೆಲವರನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಹಂತದಲ್ಲಿ ಸಾಮಾನ್ಯವಾಗಿ ತಮ್ಮನ್ನು ಇತರರೊಂದಿಗೆ ಮತ್ತು ತಮ್ಮ ಸ್ಥಿತಿಗತಿಗಳನ್ನು ಇತರರ ಸ್ಥಿತಿಗತಿಗಳೊಂದಿಗೆ ಹೋಲಿಸಿಕೊಂಡು ನೋಡುವ ಸಾಮರ್ಥ್ಯವೂ ಈ ಮಧ್ಯಕಾಲದ ಬಾಲ್ಯದಲ್ಲಿ ಬೆಳವಣಿಗೆಯಾಗುತ್ತದೆ.

ಮುಂದೆ ವಯಸ್ಕರಾಗುವ ಮಕ್ಕಳ ಗ್ರಹಿಕೆ ಮತ್ತು ಅನುಭವಗಳ ಈ ಹಂತವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಹಂತದ ಮಗುತನವು ಎಚ್ಚರಿಕೆಯಿಂದ ರೂಪುಗೊಂಡರೆ ಮುಂದೆ ವ್ಯಕ್ತಿಯ ತನ್ನತನವೂ ಅದಕ್ಕೆ ಪೂರಕವಾಗಿ ರೂಪುಗೊಳ್ಳುತ್ತದೆ. ಮಗುತನವೇ ವ್ಯಕ್ತಿಯ ತನ್ನತನವಾಗಿ ರೂಪಾಂತರಗೊಳ್ಳುವುದೆಂಬ ಸ್ಪಷ್ಟ ಅರಿವು ಮಗುವನ್ನು ಪಾಲಿಸುವ ಹಿರಿಯರಿಗೆ ಇರಬೇಕು.

ಮಗುತನದ ರೂಪಾಂತರ

ಮಗುತನವು ತನ್ನತನವಾಗಿ ಸಹಜವಾಗಿ ರೂಪಾಂತರಗೊಳ್ಳುತ್ತಿದ್ದರೆ ಕೆಲವು ಲಕ್ಷಣಗಳನ್ನು ಗುರುತಿಸಬಹುದು.

1. ಹೆಚ್ಚು ಸಮತೋಲದ ಮನಸ್ಥಿತಿಯನ್ನು ಹೊಂದಿರುತ್ತಾರೆ. ತಮ್ಮ ಬಗ್ಗೆ ವಿವರಿಸಿಕೊಳ್ಳುವುದು ಕಡಿಮೆಯಾಗಿರುತ್ತದೆ. ಕೆಲವೊಮ್ಮೆ ವಿವರಿಸಿಕೊಳ್ಳಲೇ ಹೋಗುವುದಿಲ್ಲ. ಕೆಲವರು ಎಷ್ಟೋ ದೊಡ್ಡವರಾಗಿರುತ್ತಾರೆ. ದೊಡ್ಡದೊಡ್ಡ ಲೇಖಕರು, ಸಂಗೀತಗಾರರು, ಕಲಾವಿದರಾಗಿರುತ್ತಾರೆ. ಕೆಲವೊಮ್ಮೆ ಸಾಮಾನ್ಯ ಮನೆವಾರ್ತೆಯ ಮಹಿಳೆಯೋ, ಉದ್ಯೋಗಸ್ಥ ಪುರುಷನೋ ಆಗಿರುತ್ತಾರೆ.

ಆದರೆ ಅವರು ಬಾಯಿ ಬಿಟ್ಟರೇನೇ ತಮ್ಮ ಬಗ್ಗೆ ವಿವರಣೆ. ಇದು ಎಷ್ಟೋ ಬಾರಿ ಸಂದರ್ಭಾನುಸಾರವಾಗಿರುವುದೇ ಇಲ್ಲ. ವರ್ತಮಾನದ ಸಂಗತಿಗಳನ್ನು ತಮ್ಮ ಭೂತಕಾಲದ ಅನುಭವಗಳಿಗೆ ಮತ್ತು ತಮ್ಮ ಮನೆಯವರ ಕುರಿತಾದ ವಿಷಯಗಳಿಗೆ ಕೊಂಡಿ ಬೆಸೆಯುತ್ತಾರೆ.

ಹೇಳ್ತಾರೆ, ಹೇಳ್ತಾರೆ, ಹೇಳ್ತಾನೇ ಇರ್ತಾರೆ; ತಮ್ಮ ತಂದೆ ತಾಯಿ, ಅದ್ಯಾವುದೋ ಅಂಗಡಿ, ಅಲ್ಲಿ ಸಾಮಾನುಗಳನ್ನು ತರುತ್ತಿದ್ದದ್ದು, ತಮ್ಮ ಗುರುಗಳು, ತಾವು ಮದುವೆಯಾದಾಗ ಏನಾಯ್ತು; ಯಾವ ವಿಷಯವಾದರೂ ಪ್ರಸ್ತುತ ವಿಷಯಕ್ಕೆ ತಗುಲಿಕೊಳ್ಳಬಹುದು. ಕೇಳುವವರಿಗೆ ಅವುಗಳನ್ನು ಕೇಳುವ ಯಾವ ಅಗತ್ಯವೂ ಇರುವುದಿಲ್ಲ. ಆದರೂ ಕೇಳಲೇಬೇಕಾಗುತ್ತದೆ.

“ಓ, ಹಾಗಾ? ಸರಿ, ಆಮೇಲೆ?” ಇತ್ಯಾದಿ ತಾವು ಕೇಳುತ್ತಿದ್ದೇವೆಂಬ ಸೂಚನೆ ನೀಡಲು ಹುಸಿ ಆಸಕ್ತಿ ತೋರುತ್ತಿರುತ್ತಾರೆ. ಕೇಳುಗರಿಗೆ ಅವರ ಮಾತನ್ನು ಎಲ್ಲಿ ತುಂಡರಿಸಬೇಕೆಂದೂ ತಿಳಿಯುವುದಿಲ್ಲ. ಕೆಲವೊಮ್ಮೆ ತೀರಾ ಅನಾಮತ್ತಾಗಿ ಮಾತಿನ ಸರಣಿಯನ್ನು ತುಂಡರಿಸಿ ಮುಂದೆ ಹೋಗಬೇಕಾಗುತ್ತದೆ.

ಒಂದು ವೇಳೆ ಹಾಗೆ ಮಾತಾಡುತ್ತಿರುವವರೊಡನೆ ಸ್ನೇಹ ಮತ್ತು ಸಲುಗೆ ಇದ್ದಲ್ಲಿ “ಮಾತು ನಿಲ್ಲಿಸು” ಎಂದು ನೇರವಾಗಿ ಹೇಳಬಹುದಾಗಿರುತ್ತದೆ. ಇಲ್ಲವಾದರೆ, ಯಾರಿಗಾದರೂ ‘ನನಗೆ ಫೋನ್ ಮಾಡು’ ಎಂದು ಮೆಸೇಜ್ ಮಾಡಿ, ಫೋನ್ ಬಂದಾದ ಮೇಲೆ, ‘ಓ, ಅರ್ಜೆಂಟ್ ಕಾಲ್. ನನಗೆ ಏನೋ ಕೆಲಸವಿದೆ. ಮತ್ತೆ ಸಿಗೋಣ. ನೀವು ಹೇಳುತ್ತಿದ್ದದ್ದು ತುಂಬಾ ಇಂಟರೆಸ್ಟಿಂಗ್’ ಅಂತ ರೀಲ್ ಬಿಟ್ಟು ಓಡುತ್ತಾರೆ.

ಅವರಿಗೆ ಅವರ ಬದುಕು, ಸಂಬಂಧಗಳು, ನೋವು ನಲಿವುಗಳು, ನೆನಪುಗಳು, ಹೆಮ್ಮೆ ಅಪಮಾನಗಳೆಲ್ಲಾ ನಿಜಕ್ಕೂ ಆಪ್ತವೂ, ಮಹತ್ತರವೂ ಆಗಿರುತ್ತದೆ. ಆದರೆ, ಸಮಯಾಸಮಯದ ಪ್ರಜ್ಞೆ ಇಲ್ಲದೇ ಹೇಳುವುದರಿಂದ ಅವು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತವೆ. ಇನ್ನೂ ಕೆಲವೊಮ್ಮೆ ನಿಷ್ಟುರವಾಗಿಯೇ ಗಮನಿಸಬೇಕು. ನಮಗೆ ನಮ್ಮ ಅನುಭವಗಳಾಗಲಿ, ನೆನಪುಗಳಾಗಲಿ ಮುಖ್ಯವೂ ಮಹತ್ವದ್ದೂ ಆಗಿರುತ್ತದೆ.

ಆದರೆ ನನ್ನೆದುರಿನ ವ್ಯಕ್ತಿಗೇನಾಗಬೇಕು ಅವುಗಳನ್ನು ಕಟ್ಟಿಕೊಂಡು? ಸಂದರ್ಭಾನುಸಾರವೋ ಅಥವಾ ಕೋರಿಕೆಯ ಮೇರೆಗೋ ಅಥವಾ ಉದಾಹರಣೆಯ ಸಲುವಾಗಿಯೋ ಹಂಚಿಕೊಳ್ಳಬೇಕು. ಅದೂ ಚಿಕ್ಕದಾಗಿ. ಇಲ್ಲದಿದ್ದರೆ ಆ ವ್ಯಕ್ತಿಗಳು ಫೋನ್ ಮಾಡಿದರೆ ಇತರರು ಕರೆ ಸ್ವೀಕರಿಸಲು ಹೆದರುತ್ತಾರೆ, ಏಕೆಂದರೆ, ‘ಒಂದೆರಡು ನಿಮಿಷ ಮಾತಾಡಬಹುದಾ?’ ಎಂದೂ ಕೇಳುವುದಿಲ್ಲ. ಸುಮ್ಮನೆ ಮಾತಾಡಲು ಪ್ರಾರಂಭಿಸಿ ಅದು ಗಂಟೆಗಟ್ಟಲೆ ಹೋಗುತ್ತದೆ. ಕರೆ ಸ್ವೀಕರಿಸಿದವರ ಸಮಯ ಭಯಂಕರವಾಗಿ ಹಾಳಾಗಿರುತ್ತದೆ. ಸಮಯ ವ್ಯರ್ಥವಾಯಿತೆಂದರೆ ಅಷ್ಟು ಜೀವನವೇ ವ್ಯರ್ಥವಾಯಿತೆಂದು.

ಹುಟ್ಟು ಮತ್ತು ಸಾವಿನ ನಡುವಿನ ಅವಧಿ ಬದುಕು. ಹಾಗಾಗಿ ಬದುಕು ಮತ್ತು ಸಮಯ ಎರಡೂ ಸಮಾನಾರ್ಥಕ ಪದಗಳು. ಸಮಯವನ್ನು ಕೊಟ್ಟರೆಂದರೆ ಅವರ ಜೀವನದ ಒಂದು ಭಾಗವನ್ನೇ ಕೊಟ್ಟಿದ್ದಾರೆಂದು ಅರ್ಥ. ಹಾಗಾಗಿ ನಾವು ನಮ್ಮ ಸಮಯವನ್ನೂ ಮತ್ತು ಇತರರ ಸಮಯವನ್ನೂ ಗೌರವಿಸುವುದರ ಮೂಲಕ ಜೀವನಪ್ರೀತಿಯನ್ನು ಅಭಿವ್ಯಕ್ತಿಸಬೇಕು.

ಮಗುತನವು ಸ್ವಾಸ್ಥ್ಯಪೂರ್ಣವಾದ ತನ್ನತನಕ್ಕೆ ಬದಲಾಗಿರುವುದರ ಸ್ಪಷ್ಟ ಲಕ್ಷಣವೇ ತನ್ನ ಸಮಯ ಮತ್ತು ಇತರರ ಸಮಯವನ್ನು ಜೀವನದ ಮೌಲಿಕ ಕ್ಷಣಗಳನ್ನಾಗಿ ರೂಪಿಸಿಕೊಳ್ಳುವುದು.
ಮಗುವು ತನ್ನ ಬಾಲ್ಯದಲ್ಲಿಯೇನಾದರೂ ತನ್ನ ತಾನು ವಿವರಿಸಿಕೊಂಡು ಸುಧೀರ್ಘವಾಗಿ ಮಾತಾಡುತ್ತಲೇ ಇರುವ ಲಕ್ಷಣಗಳನ್ನು ತೋರಿದರೆ ಎಚ್ಚರವಹಿಸಬೇಕು. ಅವರ ಮಗುತನವು ತನ್ನತನಕ್ಕೆ ರೂಪಾಂತರಗೊಳ್ಳುವ ಅವಧಿಯಲ್ಲಿಯೇ ಅವರಿಗೆ ಅದರ ರೂಢಿ ತಪ್ಪಿಸಬೇಕು.

2. ಭ್ರಾಮಕವಾದ ಆದರ್ಶದ ತನ್ನತನದ ಪ್ರತಿಮೆಗೂ ಮತ್ತು ತನ್ನ ನಿಜವಾಗಿರುವ ತನ್ನತನಕ್ಕೂ ಇರುವ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ತಿಳಿಯುತ್ತಾರೆ.
ತಾನು, ತನ್ನ ಸಾಮರ್ಥ್ಯ, ದೌರ್ಬಲ್ಯ, ಸಂಪನ್ಮೂಲಗಳು, ಸಾಧ್ಯತೆಗಳು; ಇತ್ಯಾದಿಗಳನ್ನು ಅರಿತುಕೊಂಡು ಅವುಗಳ ಆಧಾರದಲ್ಲಿ ತನ್ನ ಸಾಮರ್ಥ್ಯ ಮತ್ತು ಸಾಧ್ಯತೆಗಳನ್ನು ವಿಸ್ತರಿಸಿಕೊಂಡು ಹೋಗುವುದು ತನ್ನತನದ ಸಾಕ್ಷಾತ್ಕಾರವಾಗಿರುವವರಿಗೆ ಸಾಧ್ಯ. ಇಲ್ಲವಾದರೆ ಭ್ರಾಮಕವಾದ ಆದರ್ಶದ ಅಥವಾ ಹಗಲುಗನಸಿನ ಗೋಪುರಗಳಲ್ಲಿ ತಮ್ಮನ್ನು ಕಂಡುಕೊಂಡು ವಾಸ್ತವದ ಬದುಕಿನಲ್ಲಿ ಅವರು ತಮ್ಮತನವನ್ನು ಕಾಣುವುದೇ ಇಲ್ಲ.

3. ತನ್ನ ಸಾಮರ್ಥ್ಯವನ್ನು ಮುಂದಿಡುವುದು, ತಾನು ಹೇಗಿದ್ದೇನೆಂದು ಮುಂದಿಡುವುದಲ್ಲ.
ಕೆಲವು ವ್ಯಕ್ತಿಗಳನ್ನು ಗಮನಿಸಿ. ತಾನೆಷ್ಟು ಭಾವುಕವಾದ ವ್ಯಕ್ತಿ, ತಾನೆಷ್ಟು ಮರುಗುತ್ತೇನೆ, ತನಗೆ ಖುಷಿಯಾದರೆ ಹೇಗೆ ವರ್ತಿಸುತ್ತೇನೆ, ತನಗೆ ಅಪಮಾನವಾದರೆ ಹೇಗೆ ತಡೆದುಕೊಳ್ಳಲಾರದೇ ತಳಮಳಿಸುತ್ತೇನೆ, ತಾನು ಹೇಗೆ ವ್ಯಕ್ತಿಗಳನ್ನು ಹಚ್ಚಿಕೊಳ್ಳುತ್ತೇನೆ; ಇಂತಹ ತಮ್ಮ ವರ್ತನೆಗಳ ಬಗ್ಗೆಯೇ ಮಾತಾಡುತ್ತಾರೆ.

ಅದನ್ನೇ ಹೇಳುತ್ತಿರುತ್ತಾರೆ. ಆದರೆ, ಅವರ ತನ್ನತನವು ಸರಿಯಾಗಿ ರೂಪಾಂತರವಾಗಿದ್ದ ಪಕ್ಷದಲ್ಲಿ, ‘ತಾನು ಯಾವ ಕೆಲಸ ಮಾಡಬಲ್ಲೆ? ತನ್ನ ಸಾಮರ್ಥ್ಯವೇನು? ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯ ಕೇಳುಗರ ಯಾವ ಕೆಲಸಕ್ಕೆ ಉಪಯೋಗಕ್ಕೆ ಬರಬಲ್ಲದು? ಇತ್ಯಾದಿಗಳನ್ನು ತಮ್ಮ ಕೇಳುಗರಿಗೆ ಮನವರಿಕೆ ಮಾಡಿಕೊಡುತ್ತಾರೆ.

ನಾನು ಹೇಗೆ ವರ್ತಿಸುತ್ತಿದ್ದೇನೆ, ನನ್ನ ಅಂಟಿಕೆ, ವ್ಯಾಮೋಹಗಳೇನು ಎಂದು ನನಗೆ ನನ್ನತನವನ್ನು ರೂಪಿಸಿಕೊಳ್ಳುವ ಅಥವಾ ಬದಲಿಸಿಕೊಳ್ಳುವ ದಿಕ್ಕಿನಲ್ಲಿ ಬೇಕಾಗಿರುವುದು. ಇತರರಿಗೆ ಅದನ್ನು ವಿವರಿಸುವ ಅಗತ್ಯವಿಲ್ಲ. ಅವರಿಗೆ ತಿಳಿಯಬೇಕಾಗಿರುವುದು ತನ್ನ ಸಾಮರ್ಥ್ಯ. ಉಳಿದದ್ದು ಅವರೇ ನೋಡುತ್ತಾರಲ್ಲಾ, ಅನುಭವಿಸುತ್ತಾರಲ್ಲಾ!

4. ತನ್ನತನದಲ್ಲಿ ಮೂಡುವ ವ್ಯಕ್ತಿಗತವಾದ ಭಾವ

ನಾನು ಎಂಬ ಭಾವವು ತನ್ನತನ ಎಂಬ ಅರಿವಿನ ಜೊತೆಗೆ ಒಂದಾಗಿ ಕೆಲಸ ಮಾಡುವುದು. ಇದರಿಂದ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಸಂಬಂಧಗಳನ್ನು ಕುರಿತು ಗೊಂದಲಗಳನ್ನು ಸೃಷ್ಟಿಸಿಕೊಳ್ಳದೇ ಹದವಾದ ಮತ್ತು ಮಧುರವಾದ ವಾತಾವರಣವನ್ನು ತಮಗೂ ಸೃಷ್ಟಿಸಿಕೊಳ್ಳಲು ಸಾಧ್ಯ, ಇತರರಿಗೂ ಆ ಅನುಭವ ನೀಡಲು ಸಾಧ್ಯ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಹಳ್ಳಿ ಹೆಜ್ಜೆಯ ಸುತ್ತು

Published

on

ಸಾಂದರ್ಭಿಕ ಚಿತ್ರ
  • ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್

ಭಾರತದ ಜನಸಂಖ್ಯೆಯ ಸುಮಾರು 70% ಕ್ಕಿಂತ ಹೆಚ್ಚು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಅಂತೆಯೇ ನಾವು ಸೇವಿಸುವ ಆಹಾರ ಮತ್ತು ಕೃಷಿ ಉತ್ಪನ್ನಗಳ ಮುಖ್ಯ ಮೂಲ ಗ್ರಾಮಗಳು. ಸ್ವಾತಂತ್ರ್ಯದ ನಂತರ ಗ್ರಾಮಗಳು ಜನಸಂಖ್ಯೆ ಮತ್ತು ಶಿಕ್ಷಣ ಎರಡರಲ್ಲೂ ಹೆಚ್ಚು ಬೆಳೆದಿದೆ.

ಹಳ್ಳಿಯ ಜನರು ತಮ್ಮ ಕೆಲಸಕ್ಕೆ ಹೆಚ್ಚು ಸಮರ್ಪಿತರಾಗಿದ್ದಾರೆ, ನಗರದ ಜನರು ಸಹ ಹೆಚ್ಚಿನ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿರುತ್ತಾರೆ ಮತ್ತು ನಗರ ಪ್ರದೇಶದ ಜನರಿಗು ಹಳ್ಳಿ ಜನರಿಗು ತುಂಬಾನೆ ವ್ಯತ್ಯಾಸಗಳನ್ನು ಕಾಣಬಹುದು. (ಉಡುಗೆ-ತೊಡುಗೆ, ಕೆಲಸ-ಕಾರ್ಯಗಳಲ್ಲಿ, ಊಟೋಪಚಾರದಲ್ಲಿ)

ಇದಲ್ಲದೆ ಇಡೀ ಗ್ರಾಮವು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುತ್ತದೆ ಮತ್ತು ಯಾವುದೇ ರೀತಿಯ ಸಂಘರ್ಷವಿಲ್ಲದೆ ಗ್ರಾಮಸ್ಥರು ಪರಸ್ಪರ ದುಃಖ ಮತ್ತು ಸಂತೋಷದಲ್ಲಿ ಮುಂದೆ ಬರುತ್ತಾರೆ ಮತ್ತು ಅವರು ಸಹಾಯಕ ಸ್ವಭಾವವನ್ನು ಹೊಂದಿದ್ದಾರೆ.

ಗ್ರಾಮದ ಮಹತ್ವ

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಗ್ರಾಮಗಳು ಅಸ್ತಿತ್ವದಲ್ಲಿವೆ ಮತ್ತು ಸರಕುಗಳ ಬೇಡಿಕೆ ಮತ್ತು ಪೂರೈಕೆಗಾಗಿ ಅವು ಪರಸ್ಪರ ಅವಲಂಬಿತವಾಗಿವೆ. ಅಂತೆಯೇ ಅವು ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿವೆ. ಭಾರತವು ತನ್ನ ದ್ವಿತೀಯ ಮತ್ತು ತೃತೀಯ ಕ್ಷೇತ್ರಕ್ಕಿಂತ ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿರುವ ದೇಶ.

ಅಲ್ಲದೆ ಭಾರತವು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ ಮತ್ತು ಈ ದೊಡ್ಡ ಜನಸಂಖ್ಯೆಯನ್ನು ಪೋಷಿಸಲು ಅವರಿಗೆ ಹಳ್ಳಿಗಳಿಂದ ಬರುವ ಆಹಾರ ಬೇಕು ಇದು ನಮಗೆ ಮತ್ತು ಪ್ರತಿಯೊಬ್ಬರಿಗೂ ಏಕೆ ಮುಖ್ಯವಾಗಿದೆ ಎಂಬುದನ್ನು ಇದು ವಿವರಿಸುತ್ತದೆ. ಗ್ರಾಮಗಳು ಆರ್ಥಿಕತೆಯ ಬೆನ್ನೆಲುಬು ಎಂದು ನಾವು ಹೇಳಬಹುದು.

ಇದನ್ನೂ ಓದಿ | ಚಿತ್ರದುರ್ಗ | ಕೊರೋನಾದಿಂದ ಪಬ್ಲಿಕ್ ಟಿವಿ ಕ್ಯಾಮೆರಾಮನ್ ಬಸವರಾಜ್ ಕೋಟಿ‌ ಸಾವು

ಅಲ್ಲದೆ ನನ್ನ ಗ್ರಾಮವು ಭಾರತದ ಎಲ್ಲಾ ಹಳ್ಳಿಗಳ ಒಂದು ಭಾಗವಾಗಿದ್ದು, ಜನರು ಇನ್ನೂ ಶಾಂತಿ ಮತ್ತು ಸೌಹಾರ್ದಯುತವಾಗಿ ವಾಸಿಸುತ್ತಿದ್ದಾರೆ. ಗ್ರಾಮಗಳ ಜನರು ಸ್ನೇಹಪರರಾಗಿದ್ದಾರೆ ನಗರ ಪ್ರದೇಶದ ಜನರಿಗೆ ಹೋಲಿಸಿದರೆ ಸಂತೋಷದಾಯಕ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಾರೆ.

ಇದಲ್ಲದೆ ಮರಗಳು, ವೈವಿಧ್ಯಮಯ ಬೆಳೆಗಳು, ಗದ್ದೆ-ತೋಟ, ಹೂವುಗಳ ವೈವಿಧ್ಯತೆ ಮತ್ತು ಹಳ್ಳಕೊಳ್ಳಗಳು ಇತ್ಯಾದಿಗಳಿವೆ. ಇವೆಲ್ಲವುಗಳಲ್ಲದೆ ರಾತ್ರಿಯಲ್ಲಿ ತಂಪಾದ ಆಹ್ಲಾದಕರವಾದ ಗಾಳಿ ಮತ್ತು ಹಗಲಿನಲ್ಲಿ ಬೆಚ್ಚಗಿನ ಗಾಳಿ ಜೋತೆಗೆ ಪೈರಿನ ಸುವಾಸನೆ ಬೀಸುತ್ತದೆ.

ನನ್ನ ಹಳ್ಳಿ

ನನ್ನ ಹಳ್ಳಿಯು ತಗ್ಗು ಪ್ರದೇಶದಲ್ಲಿದ್ದು ಬೆಚ್ಚಗಿನ ಬೇಸಿಗೆಯನ್ನು, ಜಿಟಿ-ಜಿಟಿ ಮಳೆಯನ್ನು ಮತ್ತು ಚುಮು-ಚುಮು ಚಳಿಗಾಲವನ್ನು ಹೊಂದಿದೆ. ಹೆಚ್ಚಾಗಿ ರಜಾದಿನಗಳ ಕಾರಣ ಬೇಸಿಗೆಯಲ್ಲಿ ಪ್ರತಿಯೊಬ್ಬರೂ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಬೇಸಿಗೆಯಲ್ಲಿ ನಗರಕ್ಕಿಂತ ಗ್ರಾಮವು ತಂಪಾಗಿರುತ್ತದೆ. ಅಲ್ಲದೆ ತಂಗಾಳಿಯಿಂದಾಗಿ ನಮಗೆ ಹಳ್ಳಿಯಲ್ಲಿ ಹವಾನಿಯಂತ್ರಣ ಅಗತ್ಯವಿಲ್ಲ.

ಒಂದು ಹಳ್ಳಿಯಲ್ಲಿ ನೀವು ಹಸಿರನ್ನು ನೋಡುತ್ತೀರಿ ಮತ್ತು ಪ್ರತಿಯೊಂದು ಮನೆಯಲ್ಲೂ ಅವರ ಅಂಗಳದಲ್ಲಿ ಕನಿಷ್ಠ ಒಂದು ಮರವಿರುತ್ತದೆ. ಇದಲ್ಲದೆ ಬೇಸಿಗೆ ಸುಗ್ಗಿಯ ಕಾಲವಾಗಿರುವುದರಿಂದ ಹಳ್ಳಿಯಲ್ಲಿ ರೈತರು ತಮ್ಮ ಬೆಳೆಗಳನ್ನು ವಕ್ಕಲು ಮಾಡಿಕೊಳ್ಳುವುದನ್ನು ಕಾಣಬಹುದು ಹಳ್ಳಿಯಲ್ಲಿ ಮೊದಲು ಹೆಚ್ಚು ಕಚ್ಚಾ ಮನೆ (ಮಣ್ಣು ಮತ್ತು ಇಟ್ಟಿಗೆಗಳಿಂದ ಮಾಡಿದ ಮನೆಗಳು) ಇರುವುದನ್ನು ಕಾಣುತ್ತಿದ್ದೆವು ಆದರೆ ಈಗ ಸನ್ನಿವೇಶವು ಬದಲಾಗಿದೆ ಇಂದು ಪಕ್ಕಾ ಮನೆಯ ಸಂಖ್ಯೆ (ಕಾಂಕ್ರೀಟ್ ಮತ್ತು ಇತರ ವಸ್ತುಗಳಿಂದ ಮಾಡಲ್ಪಟ್ಟಿದೆ) ಹೆಚ್ಚಾಗಿದೆ. ಅಲ್ಲದೆ ಗ್ರಾಮದ ಜನರಿಗಿಂತ ಹಳ್ಳಿಯ ಜನರು ಸ್ನೇಹಪರರಾಗಿದ್ದಾರೆ.

ನನ್ನ ಹಳ್ಳಿಯ ಬಗ್ಗೆ ನಾನು ಹೆಚ್ಚು ಇಷ್ಟಪಡುವ ವಿಷಯವೆಂದರೆ ತಾಜಾ ಮತ್ತು ಪುನರುಜ್ಜೀವನಗೊಳಿಸುವ ಗಾಳಿ. ನಾವು 4-5 ಗಂಟೆಗಳ ಕಾಲ ಮಲಗಿದ್ದರೂ ಗಾಳಿಯು ಉಲ್ಲಾಸದ ಭಾವನೆಯನ್ನು ನೀಡುತ್ತದೆ. ಬಹು ಮುಖ್ಯವಾಗಿ ರಾತ್ರಿಯಲ್ಲಿ ನಾನು ನಗರದಲ್ಲಿ ನೋಡಲು ಸಾಧ್ಯವಾಗದ ನಕ್ಷತ್ರಗಳನ್ನು ನೋಡುತ್ತೇನೆ ಮತ್ತು ಎಣಿಸುತ್ತೇನೆ.

ನಮ್ಮ ಹಳ್ಳಿಯು ನಮ್ಮ ರಜಾದಿನಗಳಲ್ಲಿ ಅಥವಾ ನಾವು ದಣಿದಿದ್ದಾಗ ಮತ್ತು ವಿಶ್ರಾಂತಿ ಪಡೆಯಲು ಬಯಸಿದಾಗ ಭೇಟಿ ನೀಡಲು ಇಷ್ಟಪಡುವ ಸ್ಥಳವಾಗಿದೆ. ಹಳ್ಳಿಯು ನಗರದ ಮಾಲಿನ್ಯ ಮತ್ತು ಶಬ್ದದಿಂದ ದೂರವಿರುವ ಸ್ಥಳವಾಗಿದೆ. ಅಲ್ಲದೆ ನೀವು ಹಳ್ಳಿಯ ಮಣ್ಣಿನೊಂದಿಗೆ ಸಂಪರ್ಕವನ್ನು ಅನುಭವಿಸಿದ್ದಾದರೆ ನಿಮ್ಮ ಜೀವನ ತುಂಬಾ ಸುಖಕರವಾಗಿರುವುದಾಗಿದೆ ಎಂಬುದನ್ನ ತಿಳಿದುಕೊಳ್ಳಿ ಏಕೆಂದರೆ ಮಣ್ಣಿನ ವಾಸನೆಯೇ ಹಾಗೆ ಅದನ್ನ ಪಡೆಯಲು ಅದೃಷ್ಟವೇ ಮಾಡಿರಬೇಕು.

ಯಾರಾದರು ಹಳ್ಳಿಗಳ ಬಗ್ಗೆ ಯಾವುದು ಉತ್ತಮ ಎಂಬ ಪ್ರಶ್ನೆಗೆ ಹಳ್ಳಿಗಳಲ್ಲಿ ತಾಜಾ ಗಾಳಿ, ನದಿಗಳು, ಮರಗಳು, ಮಾಲಿನ್ಯವಿಲ್ಲದ ವಾತವರಣ, ಮಣ್ಣಿನ ವಾಸನೆ, ತಾಜಾ ಮತ್ತು ಸಾವಯವ ಆಹಾರ, ಮತ್ತು ಇನ್ನೂ ಅನೇಕ ಉತ್ತಮ ಒಳ್ಳೆಯ ವಿಷಯಗಳಿವೆ ಎಂಬ ಉತ್ತರ ಪ್ರತ್ಯಕ್ಷವಾಗಿ ಕಾಣಸಿಗುತ್ತದೆ.

ಗ್ರಾಮಗಳಲ್ಲಿ ಅಭಿವೃದ್ಧಿಯ ಕೊರತೆಯಿದೆ ಎಂಬುದು ಹಾಸ್ಯಸ್ಪದವಾದ ಸಂಗತಿಯಾಗಿದೆ ಹಳ್ಳಿಗಳು ಸಾಕಷ್ಟು ಉತ್ತಮವಾಗಿ ಅಭಿವೃದ್ಧಿಗೊಂಡಿವೆ ಮತ್ತು ಅವು ನಗರಗಳಿಗಿಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಎಂಬುದು ಸಂತಸದ ಸಂಗತಿಯಾಗಿದೆ.

ಕೋನೆಯದಾಗಿ ಒಂದು ಮಾತು ಹೇಳುವುದಾದರೆ ದೇಶದ ಬೆನ್ನೆಲುಬು ರೈತರಾದರೆ. ದೇಶದ ಹೆಜ್ಜೆಗುರುತು ಹಳ್ಳಿಗಳಾಗಿವೆ ಹಳ್ಳಿಗಳನ್ನ ಬಿಟ್ಟು ದೇಶವಿಲ್ಲ ಎಂಬುದು ವಾಸ್ತವದ ಸಂಗತಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ನುಡಿ ನಮನ | ಡಾ. ವಿಠಲ ಭಂಡಾರಿ, ಕ್ಷಮಿಸಿ ಸರ್

Published

on

ಡಾ. ವಿಠಲ ಭಂಡಾರಿ
  • ಡಾ. ಗಿರೀಶ್ ಮೂಗ್ತಿಹಳ್ಳಿ, ಚಿಕ್ಕಮಗಳೂರು

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಂಶೋಧನೆ ಮಾಡುವಾಗ ಡಾ. ಆನಂದ ಪಾಟೀಲ ಅವರ ಸಲಹೆಯಂತೆ ‘ಪ್ರೀತಿಯ ಕಾಳು’ ಪುಸ್ತಕ ಬೇಕಿತ್ತು. ಈ ಪುಸ್ತಕ ವಿಠಲ ಭಂಡಾರಿ ಅವರ ತಂದೆ ಆರ್. ವಿ. ಭಂಡಾರಿ ಅವರ 13 ಮಕ್ಕಳ ನಾಟಕಗಳ ಸಂಕಲನ. ಈ ಕೃತಿಯನ್ನು ಡಾ. ವಿಠಲ ಭಂಡಾರಿ ಅವರು ಸಂಪಾದಿಸಿದ್ದರು. ಮಾನ್ಯ ಭಂಡಾರಿಯವರನ್ನು ಕೇಳಿಕೊಂಡಾಗ ನನಗೆ ಅಂಚೆ ಮೂಲಕ ಕಳುಹಿಸಿಕೊಟ್ಟಿದ್ದರು.

ಬೇಕಾದ ಪೂರಕ ಮಾಹಿತಿಯನ್ನು ಫೋನಿನಲ್ಲಿಯೇ ಚರ್ಚಿಸಿದ್ದರು. ನನ್ನ ಸಂಶೋಧನೆಯಲ್ಲಿ ಜತೆ ಇದ್ದರು. ಆದರೆ ಒಮ್ಮೆ ಎಂದೂ ಭೇಟಿಯಾದವರಲ್ಲ. ಕಾರಣ ದೂರದೂರು ಎಂದು! ಕರೆ ಮಾಡಿದರೆ, ಅವರು ಎಷ್ಟೇ ಕಾರ್ಯನಿರತರಾಗಿದ್ದರೂ ಕರೆ ಸ್ವೀಕರಿಸಿ ವರ್ತಮಾನವನ್ನು ತಿಳಿಸುತ್ತಿದ್ದರು. ಸಂಶೋಧನಾ ಪ್ರಬಂಧವು ಕೃತಿಯಾದಾಗ ಅವರಿಗೆ ಒಂದು ಪ್ರತಿ ಕಳುಹಿಸಿ ಕೊಟ್ಟೆ.. ತುಂಬಾ ಸಂಭ್ರಮಿಸಿದ್ದರು. ಮೆಚ್ಚುಗೆ ಮಾತುಗಳನ್ನಾಡಿದ್ದರು.

ಕಳೆದ ಲಾಕ್ ಡೌನ್ ಸಮಯದಲ್ಲಿ ನನ್ನ ಪುಸ್ತಕವನ್ನು ಆನ್ ಲೈನ್ ಬಿಡುಗಡೆ ಮಾಡೋಣ ಎಂದು ಕಾರ್ಯಕ್ರಮದ ಕ್ರಿಯಾಯೋಜನೆಯನ್ನು ತಯಾರಿಸಿದ್ದರು… ಇಷ್ಟೆಲ್ಲ ಕಾರ್ಯಗಳು ಪರಸ್ಪರ ಭೇಟಿಯಾಗದೆ ಆದ ವಿಶೇಷ ಅನುಭವಗಳು. ಈ ಮಧ್ಯೆ ಅವರಿಗೆ ಕರೆ ಮಾಡುವುದಕ್ಕೆ ಆಗಿರಲಿಲ್ಲ.

ಆದರೆ ಇಂದಿನ ಅವರ ಅಗಲಿಕೆಯ ಸುದ್ದಿ ನನ್ನನ್ನ ನಿಶ್ಚಲವಾಗಿಸಿದೆ…! ಸಾಮಾನ್ಯ ರೀತಿಯಲ್ಲಿ ಮಾನ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಬಹುದು.. ಆದರೆ ಅವರನ್ನು ಭೇಟಿ ಮಾಡಬೇಕೆಂಬ ಆಸೆಯ ಚಿಗುರಿಗೆ ಕೆಟ್ಟ ಸುದ್ದಿಯ ಸಿಡಿಲೊಡೆದಿದೆ… ಕ್ಷಮಿಸಿ ಸರ್… ನನ್ನ ಸರದಿಯೂ ಬಂದಾಗ ಮೇಲೆ ಬರುವೆ.. ಸಿಕ್ಕೋಣ.. ಈ ಅಮಾನವೀಯ ವ್ಯವಸ್ಥೆಯ ಬಗ್ಗೆ ಚರ್ಚೆ ಮಾಡೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಏನಿದು ವರ್ಷದುಡುಕು;ಹೊಸ್ತುಡುಕು..?

Published

on

ಕೆ.ಶ್ರೀಧರ್ (ಕೆ.ಸಿರಿ)
  • ಕೆ.ಶ್ರೀಧರ್ (ಕೆ.ಸಿರಿ)

ಏಪ್ರಿಲ್ 13 ಕ್ಕೆ ಚಾಂದ್ರಮಾನ ಯುಗಾದಿ ಹಬ್ಬ ನಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯರಿಗೆ ನಿಜವಾದ ಹೊಸ ವರ್ಷ ಬೆಳಗ್ಗೆ ಎದ್ದು ನೀರಿಗೆ ಬೇವಿನ ಎಲೆ ಹಾಕಿ ಮೈಗೆಲ್ಲಾ ಎಣ್ಣೆ ಸವರಿಕೊಂಡು ಎಣ್ಣೆ ಸ್ನಾನ ಮಾಡಿ ಹೊಸ ಹುಡುಪುಗಳನ್ನು ಧರಿಸಿ ಮನೆಗೆ ತಳಿರು ತೋರಣ ಕಟ್ಟಿ ಇಷ್ಟ ದೇವರಿಗೆ ಪೂಜೆ ಸಲ್ಲಿಸಿ ಬೇವು ಬೆಲ್ಲ ಸವಿದು ತಾಯಿ ಮಾಡಿದ ಸಿಹಿಯಾದ ತಿಂಡಿ ತಿನಿಸುಗಳ ತಿಂದು ಇಡೀ ದಿನ ಸಂಭ್ರಮದಿಂದ ಹಬ್ಬ ಆಚರಿಸುವುದು ಬಂಧು ಬಾಂಧವರೆಲ್ಲರೂ ಸಂಭ್ರಮ ಪಡುವುದು ಸಂಜೆಯ ನಂತರ ಚಂದ್ರನನ್ನು ನೋಡಿ ಹೊಸ ವರ್ಷ ಆರಂಭಿಸುವುದು ವಿಶೇಷ.

ಯುಗಾದಿ ಎಂದರೆ ಇಷ್ಟೇ ಎಂದು ನಾನು ತಿಳಿದಿದ್ದೆ. ಆದರೆ ಇನ್ನೊಂದು ದಿನವೂ ಹಬ್ಬವಿದೆ ಆ ಹಬ್ಬ ತುಂಬಾ ವಿಶೇಷ ಎನಿಸಿದ್ದು ಈ ವರ್ಷದುಡುಕಿನ ಸಂಭಾಷಣೆ ಕೇಳಿದ ನಂತರವೆ. ನಾನು ಏಪ್ರಿಲ್ 14 ರಂದು ನನ್ನ ಕೆಲಸದ ನಿಮಿತ್ತ ಎಲ್ಲಿಯೋ ಹೊರಟಿದ್ದೆ ಪೆಟ್ರೋಲ್ ಹಾಕಿಸಲು ಬಂಕ್ ನ ಬಳಿ ಹೋದಾಗ ಯಾರೋ ಒಬ್ಬ ಯುವಕ ಬ್ಯಾಗ್ ಹಾಕಿಕೊಂಡು ಯಾವುದೋ ಊರಿಗೆ ಹೋಗುವಂತಿತ್ತು ಅದೇ ಸಂದರ್ಭದಲ್ಲಿ ಬಂದ ಆ ಯುವಕನ ಗೆಳೆಯ ಈ ರೀತಿಯಾಗಿ ಸಂಭಾಷಣೆ ಬೆಳೆಸಿದ.

“ಡೋ ಎಲ್ಲಿಗಡಾ ಹೋಗ್ತಿದೇ’?_
“ಬೆಂಗಳೂರಿಗೆ ಹೋಯ್ತಾವ್ನೀ ಕಯ್ಯಾ”_
“ಯೋ ಎಲ್ಗೋದೇ ಬಾ ನಾಳೆ ಹೊಸ್ತುಡುಕದೆ ಕಣಾ ತೀರಿಸ್ಗಂಡ್ ಹೋಗೈ”
“ಇಲ್ಲ ಬಾಮೈದ ಟೇಮಾಗದ ಆಗಲೇ ರಜಾ ತೀರದ ಕಣಾ ಹೋಗ್ಬೇಕ”
“ಇದ್ಯಾಂವಂಡಾ ಇವಾ ವರ್ಷದುಡುಕು ಮಾಡಾದ್ ಬುಟ್ಟು ಕೆಲಸಕ್ಕ ಹೋದನಂತೆ ಇಮ”
“ಯಾನ್ ಮಾಡದಯ್ಯ ನೀವ್ ಮಾಡ್ರೀ ಹೊಸ್ತುಡುಕ ನಾ ಮುಂದಿನ ಕಿತ ಬರ್ತೀನಿ ಕಣಾ”
“ಆಯ್ತು ಹೋಗಿದ್ದ್ ಬೊಯ್ಯ”
“ನೋಡ್ದಾ ಬಾವೋಜಿ ಇವನ್ ಸುಮಾನ್ವಾ ಹಬ್ಬ ಮಾಡೋ ಬಡ್ಡಿದೇ ಅಂದ್ರೆ ಕೆಲಸಕ್ಕೆ ಹೋದನಂತೆ ಇಮ”
“ನಡೈ ಬಾಮೈದ ಯಾನ್ಹಾ ಮಾಡ್ಲಿ ಹೊಣ್ಣೇರ್ ಕಟ್ಬೇಕು ಬ್ಯಾಗನ್ ನಡೈ ಊರ್ಗೋಗಮು”

ಎಂದು ಮಾತನಾಡುತ್ತಾ ಮಾತನಾಡುತ್ತಾ ಹಾಗೇಯೇ ದ್ವಿಚಕ್ರ ವಾಹನದಲ್ಲಿ ಊರ ಕಡೆ ಹೊರಟರು. ನಾನು ವಿಜಯನಗರ ಜಿಲ್ಲೆಯವನಾದುದರಿಂದ ಈ ವರ್ಷದುಡುಕು/ಹೊಸ್ತುಡುಕು,ಹೊಣ್ಣೇರ್ ಕಟ್ಟೋದು ಈ ಪದಗಳು ಅಪರಿಚಿತ ಅನಿಸ್ತು ತಲೆಯಲ್ಲಿ ಒಂಥರಾ ಈ ಪದಗಳು ಕೊರೆಯಲು ಶುರುಮಾಡಿದವು.

ಚಾಮರಾಜನಗರ ಮೊದಲೇ ದೇಸಿ ಭಾಷೆಯ ಪದಗಳಿಗೆ ಫೇಮಸ್ಸು ಅಂತ ನನಗೆ ಗೊತ್ತಿತ್ತು ಆ ಕುತೂಹಲ ಇನ್ನೂ ನನ್ನಲ್ಲಿ ಹೆಚ್ಚಾಯ್ತು ಹೇಗಾದರೂ ಮಾಡಿ ಈ ಪದಗಳ ಅರ್ಥ ತಿಳ್ಕೋಬೇಕು ಇದ್ಯಾವುದೂ ಇದು ವರ್ಷದುಡುಕು/ಹೊಸ್ತುಡುಕು ಹಬ್ಬ ಅನ್ನೋ ಉತ್ಕಟ ಆಸಕ್ತಿ ಹೆಚ್ಚಾಯಿತು ಹೀಗೆಯೇ ಹಳ್ಳಿಗೆ ಹೋದಾಗ ಗ್ರಾಮಸ್ಥರನ್ನು ಕುರಿತು ಹೀಗೆ ಸಂಭೋಧಿಸಿದೆ.

“ಏನ್ರೀ ಯಜಮಾನ್ರೇ ವರ್ಷದುಡುಕು ಜೋರಾ”?
“ವ್ಹಾ ಬನ್ನಿ ಸಾ ಜೋರದ ಕಣಾ, ಹಬ್ಬ ಅಂದಮ್ಯಾಗ ಇದ್ದಿದ್ದೇ ಅಲ್ವಾ ಕಣೀ ಸಾ”
“ಅದ್ಸರಿ ಏನೀ ಈ ಹೊಸ್ತುಡುಕು ಅಂದ್ರೆ”?
“ವ್ಹಾ ನೀವು ಸರಿಗೆ ಕೇಳಿದ್ರೀ ಕಪಾ ಇನ್ನೇನಾ ಸಾ ಯುಗಾದಿ ಮುಗಿದ ಮಾರ್ನೇ ದಿನಾ, ಎಲ್ಲರೂ ಮನೇಲೆ ಇರ್ತಾರ, ಹೈಕ ಮಕ್ಕ ನೀರೇರೆಚಗತಾರ, ಒಬ್ಬಿಟ್ಟು ಪಾಯಾಸ,ತಿಂಡಿ ಗಿಂಡಿ ಮಾಡ್ಕಂಡಮಾ ದ್ಯಾವ್ರಗ ಎಡೆ ಗಿಡೆ ಮಡಗಿ ಮಕ್ಕ ಮರಿ ತಿನ್ಕಂಡು ಉಣ್ಕಂಡು ಹಟ್ಟೀಲಿ ಜಾಲಿಯಾಗಿ ಇರ್ತಾರ”.
“ಇಷ್ಟೇಯಾ ವರ್ಷದುಡುಕು ಅಂದ್ರೆ”?
“ಅದ ಸಾ ಆಡೋರು ಇಸ್ಪೀಟ್ ಗಿಸ್ಪೀಟ್ ಆಡ್ತಾರ ಒಂಥರಾ ರಜೆ ಇದ್ದಂಗೆ ಸಾ ದಿನವೆಲ್ಲಾ ಹಟ್ಟೀಲೆ ಇರ್ತಾರ”

“ಅದ್ಸರಿ ಈ ಹೊಣ್ಣೇರ್ ಕಟ್ಟೋದು ಅಂದ್ರೆ ಏನು”?”ಅದಿನ್ಯಾನಿದ್ದು ಸಾ ಆರಂಭಕಾರ್ರಿಗೆ ಇದು ಹೊಸ್ವರ್ಸ ಇದ್ದಂಗ ಎತ್ಗಳಿಗ ನೊಗ ಹಾಕಿ,ನೇಗ್ಲು ಹೂಡಿ, ಕಕ್ಕೆ ಹೂವ,ಗಣಿಗಲ ಹೂವ ಎತ್ಗೋಳ್ ಕೊಂಬಿಗೆ ಕಟ್ಟಿ ಊರಾಗ ಒಂದ್ ರೌಂಡ್ ಸುತ್ತಿಸಿಗಂಡಮಾ ಪೂಜಾ ಗೀಜಾ ಮಾಡಿ ಆರಂಭ ಶುರು ಮಾಡೋದಕ್ಕ ಹೊಣ್ಣೇರ್ ಕಟ್ಟೋದು ಅಂತಾರೆ ಅಷ್ಟೇಯಾ ಅದು ಈಗ ಅಷ್ಟೋಂದಿಲ್ಲ ಸಾ ಕೆಲವು ಕಡಿಗ್ಯಾ ಮಾಡ್ತಾರಾ ಕೆಲವು ಕಡಿಗ್ಯಾ ಬುಡ್ತಾರಾ ಅದೆಲ್ಲಾ ಒಂದ್ ಜಮಾನ್ದಾಗಿತ್ತು”

“ಓಹ್ ಸರಿ ಈ ಕಕ್ಕೆ ಹೂವು ಗಣಗಲ ಹೂವು ಅಂದ್ರೆ ಯಾವುದು”? “ಅದೇ ಸಾ ಈ ರೋಡ್ಚೋರಿ ಕೆಂಪ್ಗ ಇರ್ತಾವಲ್ಲ ಅವೇ ಕಕ್ಕೆ ಹೂವು, ಅರಿಶಿಣ ಬಣ್ಣದ ಹೂವ್ ಇರ್ತಾವಲ್ಲ ಅವು ಗಣಿಗಲ್ವೂ ಈ ರಸ್ತಿ ಅಗಲೀಕರಣದಿಂದ ಆ ಹೂವುಗಳು ಸಿಗೋದೆ ಅಪರೂಪ ಆಗ್ಬುಟ್ಟದಾ!”

“ಹೂಂ… ಸರಿ ಇಷ್ಟೇಯಾ ಹಾಗಾರೆ ಹೊಸ್ತುಡುಕು ಅಂದ್ರೆ”?
“ಹೂಂ ಇನ್ನೂ ಅದೆ ಮಾಡೋರು ಮರಿ ಕೂದು ಬಾಡ್ಗಿಡೂಟಾ ಮಾಡ್ತಾರೆ ಎಣ್ಣಿ ಗಿಣ್ಣಿ ಹೊಡ್ದು ಜಾಲಿ ಮಾಡ್ತಾರೆ”
“ಈ ವರ್ಷದುಡುಕ್ಲೀ ಮಾಂಸದೂಟ ಕಡ್ಡಾಯಾ ನಾ”?
“ಹೇ ಹಾಗೇನಿಲ್ಲಾ ಸಾ ಆದರೆ ಒಂದ್ ಜಮಾನ್ದಾಗಿತ್ತಂತೆ ಯುಗಾದಿ ಆದ್ ಮರುದಿನ ಮಾಂಸ ತಿನ್ನಲಿಲ್ಲ ಅಂದ್ರೆ ಸ್ವರ್ಗಕ್ಕೆ ಬಿಡೋಲ್ಲ ಮಾಂಸ ತಿನ್ನಬೇಕು ಅನ್ನೋ ಪ್ರತೀತಿ ಇತ್ತಂತೆ ಇದನ್ನೆಲ್ಲ ನಿಮ್ಮ ಜಮಾನ್ದೋರಿಗೆ ಹೇಳಿದ್ರ ಬಿದ್ದು ಬಿದ್ದು ನಗನಾಡ್ತಿರೀ, ಕೆಲವರು ಆ ದಿನ ದುಡ್ಡು ಕಾಸು ಯಾರಿಗೂ ಕೊಡಾಕಿಲ್ಲ ಹಿಂಗ ಹತ್ತಲವು ಸಂಪ್ರದಾಯಾಗಳು ನೇಮ್ಗಳನ್ನ ಮಾಡ್ತಾರೆ”

“ಜಮೀನಿಗೆ ಹೋಗಿ ಉಳುಮೆ ಗಿಳುಮೆ ಮಾಡೋಲ್ವೋ”?
“ಕಂಡೀಸನ್ನಾಗಿ ಯಾರು ಹೊಲ್ನ ಊಳೋಲ್ಲ ಅಪ್ಪಿ ತಪ್ಪಿ ಮಳಿ ಗಿಳಿ ಉಯ್ಯ್ದ್ರೆ ಸ್ಥಳೀಯ್ ಜ್ವಾಳ ಗೀಳ ಬಿತ್ತೋರು ಬಿತ್ತಾರ ಅಷ್ಟೇ” “ಹೂಂ ಆಯ್ತು ಯಜಮಾನ್ರೆ ಥ್ಯಾಂಕ್ಯೂ ನಾನು ಬರ್ತೀನಿ” “ಹೂಂ ಆಯ್ತು ಕಣೀ ಹೋಗಿ ಬುದ್ದೀ ನಂಗು ಹೊಟ್ಟೈಸಿತೈತಿ ಹಟ್ಟಿಗೆ ಹೋಗ್ಬೇಕು ಒಬ್ಬಿಟ್ಟು ತಿನ್ಬೇಕು”.

ನೋಡಿ ನಮ್ಮ ಗ್ರಾಮೀಣ ಭಾಗದ ಸಂಪ್ರದಾಯಗಳು ಎಷ್ಟು ಚೆಂದ ಅಲ್ವಾ ಈ ದೇಸಿ ಭಾಷೆಯಲ್ಲಿ ಎಷ್ಟು ತಾಕತ್ತಿದೆ ಎಷ್ಟು ಗ್ರಾಮೀಣತೆಯ ಸೊಗಡಿದೆ ಈ ಭಾಷೆನಾ ಹಳ್ಳಿಗಳಲ್ಲಿ ಬಿಟ್ರೆ ಜಗತ್ತಿನ ಯಾವ ವಿಶ್ವ ವಿದ್ಯಾಲಯಗಳಲ್ಲೂ ಕೂಡ ಕಲಿಯಲಿಕ್ಕೆ ಆಗೋದಿಲ್ಲ. ನಮ್ಮ ಹಿಂದಿನವರು ನಡೆಸಿಕೊಂಡು ಬಂದ ಕೆಲವೊಂದು ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯ ನಮ್ಮ ಪರಂಪರೆ ಎಂತದ್ದು ಅಂತ ಹೇಳ್ತವೆ. ಈ ಚಾಮರಾಜನಗರದ ವರ್ಷದುಡುಕು ಹಾಗೇನೆ ಒಂಥರಾ ದೇಸಿಯ ಭಾಷೆಯ ಹಬ್ಬ ಹರಿದಿನಗಳ ಪರಿಚಯ ನನಗಾಯ್ತು ಧನ್ಯವಾದಗಳು ಚಾಮರಾಜನಗರ.

(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿಗಳು
ಚಾಮರಾಜನಗರ
9741270125)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending