ನೆಲದನಿ
ಬಡತನವ ಮೆಟ್ಟಿನಿಂತ ಯಕ್ಷಗಾನ ಭಾಗವತ: ಪರಮೇಶ್ವರ ನಾಯ್ಕ್ ಎಂಬ ಕಲಾದನಿ

ಭಾರತದ ಬಹುತೇಕ ಜನಪದ ಕಲೆಗಳು ತಳ ಸಮುದಾಯಗಳಿಂದಲೆ ಜೀವಂತಿಕೆಯನ್ನು ಪಡೆದುಕೊಂಡಿವೆ. ಈಗಲೂ ಈ ಕಲೆಗಳು ತನ್ನ ಜೀವಂತಿಕೆಯನ್ನು ಪಡೆದುಕೊಂಡಿರುವುದು ಬಡತನದ ಬದುಕಿನಲ್ಲಿಯೇ. ಹೀಗಾಗಿ ಬಡತನ ಹಾಗೂ ಜನಪದ ಕಲೆಗಳಿಗೆ ನಿಕಟವಾದ ಸಂಬಂಧವೊಂದು ಬಿಡದ ನಂಟಾಗಿ ಬೆಳೆದುಕೊಂಡು ಬಂದಿದೆ. ಇಂತಹ ಜಾನಪದ ಕಲೆಗಳಲ್ಲಿ ಯಕ್ಷಗಾನವು ಒಂದು ಪ್ರಮುಖ ಕಲೆಯಾಗಿ ಬೆಳೆದುಕೊಂಡು ಬಂದಿದೆ. ಇಂತಹ ಯಕ್ಷಗಾನ ಕಲೆಯನ್ನು ತಮ್ಮ ಬದುಕಿನ ಭಾಗವಾಗಿ ಮುಂದುವರೆಸಿಕೊಂಡು ಬಂದಿರುವ ಕಲಾವಿದರಲ್ಲಿ ಪರಮೇಶ್ವರ ನಾಯ್ಕರು ಒಬ್ಬರಾಗಿದ್ದಾರೆ.
ಶ್ರೀಯುತ ಪರಮೆಶ್ವರ ನಾಯ್ಕರು ಅಕ್ಟೋಬರ್ 20, 1969 ರಲ್ಲಿ ಉತ್ತರ ಕನ್ನಡದ ಮಂಕೋಡ ಎಂಬಲ್ಲಿ ಜನ್ಮತಾಳಿದರು. ಶ್ರೀ ಕೆರಿಯ ನಾಯ್ಕ ಹಾಗೂ ಶ್ರೀಮತಿ ಗೌರಿಯವರ ಸುಪುತ್ರರಾಗಿದ್ದಾರೆ. ಇವರ ತಂದೆಗೆ ಒಂಭತ್ತು ಜನ ಮಕ್ಕಳು. ಇವರಲ್ಲಿ ನಾಲ್ಕು ಜನ ಗಂಡು ಹಾಗೂ ಐದು ಜನ ಹೆಣ್ಣು ಮಕ್ಕಳು. ಪರಮೇಶ್ವರ ನಾಯ್ಕ ಅವರ ತಂದೆವರು ತಮಗಿರುವ ಅಲ್ಪ ಪ್ರಮಾಣದ ಜಮೀನಿನಲ್ಲಿ ದುಡಿದು ಜೀವನ ಸಾಗಿಸುತ್ತಿದ್ದರು. ಇವರಿಗೆ ಆಶ್ರಯವಾಗಿ ತಾಯಿ ಗೌರಿ ಅವರು ಕೂಡ ಕೂಲಿ ಜೀವನ ನಡೆಸಿ ಮಕ್ಕಳನ್ನು ಸಾಕುತ್ತಿದ್ದರು. ಆದರೆ ಇದರಿಂದ ತಮ್ಮ ಮಕ್ಕಳನ್ನು ಸಾಕುವುದು ಕಷ್ಟವಾದಾಗ ತಮ್ಮ ಹಿರಿಯ ಮಗವಾದ ಪರಮೇಶ್ವರ ನಾಯ್ಕ ಅವರನ್ನು ಮೂರನೇ ತರಗತಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ, ಶ್ರೀಮಂತರ ಮನೆಯೊಂದರಲ್ಲಿ ಜೀತಕ್ಕೆ ನೇಮಿಸಲಾಗುತ್ತದೆ. ಮನೆಯಲ್ಲಿ ಸಾಕಷ್ಟು ಬಡತನದ ಕಾರಣ ತಮ್ಮ ವಿದ್ಯಾರ್ಥಿ ಜೀವನದಿಂದ ದೂರ ಸರಿದು ಧಣಿಗಳ ಮನೆಯಲ್ಲಿ ದನ ಕಾಯುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಈ ವೇಳೆಯಲ್ಲಿ ಪರಮೇಶ್ವರ ನಾಯ್ಕ ಅವರ ಅಂತರಾಳದಲ್ಲಿ ಯಕ್ಷಗಾನ ಕಲಾವಿದನೊಬ್ಬ ಮೊಳಕೆಯೊಡೆಯಲು ಪ್ರಾರಂಭಿಸುತ್ತಾನೆ. ದನ ಕರುಗಳನ್ನು ಮೇಯಿಸುವ ಕಾಯಕದ ಜೊತೆಯಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಆಸಕ್ತಿಯನ್ನು ಮೂಡಿಸಿಕೊಂಡ ಇವರು ರಾತ್ರಿಯ ವೇಳೆಯಲ್ಲಿ ತಮ್ಮ ಗ್ರಾಮದ ಸುತ್ತಮುತ್ತಲ ಊರುಗಳಲ್ಲಿ ಜರುಗುವಂತಹ ಯಕ್ಷಗಾನವನ್ನು ನೋಡುವುದಕ್ಕೆ ಹೋಗುತ್ತಿರುತ್ತಾರೆ. ಹೀಗೆ ಬೆಳೆದ ಹವ್ಯಾಸದಿಂದ ಸುಶ್ರಾವ್ಯವಾಗಿ ಭಾಗವಂತಿಕೆಯ ಹಾಡುಗಳನ್ನು ಪ್ರಯೋಗ ಮಾಡುತ್ತಾರೆ. ಇವರಲ್ಲಿ ಅಂತರ್ಗತವಾಗಿ ನೆಲೆಯೂರಿದ್ದ ಕಂಠಸಿರಿಯ ಮೂಲಕವಾಗಿ ಭಾಗವತಿಕೆ ಹಾಡುಗಳನ್ನು ಸುಂದರವಾಗಿ ಹಾಡುವುದಕ್ಕೆ ಪ್ರಯೋಗ ಮಾಡುತ್ತಾರೆ. ಪರಮೇಶ್ವರ ನಾಯ್ಕ ಅವರು ಯಾವೊಬ್ಬ ಗುರುವಿನ ಮಾರ್ಗದರ್ಶನವಿಲ್ಲದೆ ಸ್ವತಃ ಪರಿಶ್ರಮ ಹಾಗೂ ಆಸಕ್ತಯಿಂದಾಗಿ ಹಲವಾರು ಪದ್ಯಗಳನ್ನು ಕಂಠಪಾಠದ ಮೂಲಕವಾಗಿ ಕರಗತ ಮಾಡಿಕೊಳ್ಳುತ್ತಾರೆ. ಹೀಗೆ ಕಾಡುಹಕ್ಕಿಯಂತೆ ಸ್ವತಂತ್ರವಾಗಿ ಹಾಡು ಕಲಿತ ಪರಮೇಶ್ವರ ನಾಯ್ಕ ಅವರು ಸುಮಾರು ಹನ್ನೆರಡನೇ ವಯಸ್ಸಿಗೆ ಯಕ್ಷಗಾನ ಕ್ಷೇತ್ರದಲ್ಲಿ ತನ್ನದೆ ಆದ ವಿದ್ವತ್ತನ್ನು ಗಳಿಸಿಕೊಳ್ಳುತ್ತಾರೆ.
ಪರಮೇಶ್ವರ ನಾಯ್ಕ್ ಅವರು ಬಾಲ್ಯದಲ್ಲಿ ತಮ್ಮ ಮನೆಯಲ್ಲಿನ ಕೌಟುಂಬಿಕ ಬಡತನದ ಕಾರಣದಿಂದಾಗಿ ಸಿದ್ಧಾಪುರದ ಮಂಜುನಾಥ ಹೆಗಡೆಯವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಮಂಜುನಾಥ ಹೆಗಡೆಯವರು ಹವ್ಯಾಸಿ ಭಾಗವತರಾಗಿದ್ದು, ಸಾಕಷ್ಟು ಯಕ್ಷಗಾನಗಳಲ್ಲಿ ಪ್ರದರ್ಶನ ನೀಡಿದ್ದರು. ಇವರ ಒಡನಾಟದಿಂದ ಪರಮೇಶ್ವರ ನಾಯ್ಕ್ ಅವರು ಕೂಡ ಈ ಕಲೆಯ ಗೀಳನ್ನು ಮೈಗೂಡಿಸಿಕೊಂಡು, ಮಂಜುನಾಥ ಹೆಗಡೆಯವರೊಂದಿಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಹೀಗೆ ಯಕ್ಷಗಾನದ ಹುಚ್ಚು ಹತ್ತಿಸಿಕೊಂಡ ಪರಮೇಶ್ವರ ನಾಯ್ಕ್ ಅವರು ಪದ್ಯಗಳನ್ನು ಕಂಠಪಾಠ ಮಾಡಿಕೊಂಡು ಹಾಡುವುದಕ್ಕೆ ಪ್ರಾರಂಭಿಸಿದರು. ಮಂಜುನಾಥ ಹೆಗಡೆಯವರ ತಂದೆಯವರಾದ ತಿಮ್ಮಪ್ಪ ಹೆಗಡೆಯವರು ಕೂಡ ಹೆಸರಾಂತ ಭಾಗವತರಾಗಿದ್ದು ಹಲವಾರು ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದರು. ಇಂತಹ ವಾತಾವರಣದಲ್ಲಿ ಬೆಳೆದ ಪರಮೇಶ್ವರ ನಾಯ್ಕ್ ಅವರಿಗೆ ಭಾಗವತಿಕೆಯ ಪ್ರೇರಣೆ ಪ್ರಭಾವವು ಈ ದಿನಗಳಲ್ಲಿ ಉಂಟಾಯಿತು. ಈ ಸಂದರ್ಭದಲ್ಲಿ ಪರಮೇಶ್ವರ ನಾಯ್ಕ್ ಅವರಿಗೆ ಕೇವಲ ಹನ್ನೆರಡು ವರ್ಷ ವಯಸ್ಸಾಗಿತ್ತು. ಕೌಟುಂಬಿಕ ಬಡತನವು ಇವರನ್ನು ಶಾಲಾ ಶಿಕ್ಷಣದಿಂದ ವಂಚಿತಗೊಳಿಸಿದರು ಸಹ, ಕಲಾ ಶಿಕ್ಷಣವು ಇವರ ಬದುಕಿಗೆ ವರವಾಗಿ ಪರಿಣಮಿಸಿತು. ಈ ಕಲೆಯೇ ಮುಂದೆ ಇವರ ಬಡತನದ ನಿವಾರಣೆಯ ಪ್ರಮುಖ ಅಸ್ತ್ರವಾಗಿ ಸಹಯಾಸ್ತವನ್ನು ನೀಡಿತು ಎಂದರೆ ತಪ್ಪಾಗಲಾರದು.
ಪರಮೇಶ್ವರ ನಾಯ್ಕ್ರವರು ಅಲ್ಲಿ ಇಲ್ಲಿ ನಡೆಯುವ ಯಕ್ಷಗಾನದ ಪ್ರದರ್ಶನಗಳನ್ನು ನೋಡಿ, ಕೇಳಿಯೇ ಹಲವಾರು ಪ್ರಸಂಗಗಳನ್ನು ಕಂಠಪಾಠ ಮಾಡಿಕೊಂಡಿದ್ದರು. ಚಿಕ್ಕವರಿದ್ದಾಗಲೇ ಇವರಲ್ಲಿ ಒಡಮೂಡಿರುವ ಕಂಠಸಿರಿಯನ್ನು ಗಮನಿಸಿದ ಆರ್ತಿಕಟ್ಟದ ಗಜಾನನ ಸಮಿತಿಯವರು ಇವರ ಕಂಠವನ್ನು ಗಮನಿಸಿ, ಇವರಿಂದ ಯಕ್ಷಗಾನ ಪ್ರಸಂಗಗಳನ್ನು ಹಾಡಿಸಿ, ಧ್ವನಿ ಮುದ್ರಿಕೆಯಲ್ಲಿ ದಾಖಲಿಸಿದರು. ಈ ಧ್ವನಿ ಮುದ್ರಿಕೆಯನ್ನು ಅನಂತರಾಯರು ಮತ್ತು ಶ್ರೀಕಾಂತರಾಯರು ಸೇರಿಕೊಂಡು ಉಪ್ಪರಿಗೆ ಮೇಲೆ ಹೋಗಿ ಹೆಸರಾಂತ ಯಕ್ಷಗಾನ ದಿಗ್ಗಜರಾದ ಕಾಳಿಂಗ ನಾವಡರಿಗೆ ಇವರ ಕಂಠವನ್ನು ಪರಿಚಯಿಸಿದರು. ಪರಮೇಶ್ವರ ನಾಯ್ಕ್ ಅವರ ಕಂಠಸಿರಿಯನ್ನು ಗಮನಿಸಿದ ಕಾಳಿಂಗ ನಾವಡರು ಇವರನ್ನು ಮೆಚ್ಚಿಕೊಂಡರು. ಆಗ ಪರಮೇಶ್ವರ ನಾಯ್ಕ್ ಅವರು ಓದಿರುವುದು ಕೇಲವ ಮೂರನೇ ತರಗತಿ ಮಾತ್ರ, ಆದರೆ ಯಕ್ಷಗಾನದ ಮೊದಲ ವೇಷ ಎಂದರೆ ಅದು ಭಾಗವತಿಕೆ. ಇದನ್ನು ನಿಭಾಯಿಸಲಿಕ್ಕೆ ಹತ್ತನೇ ತರಗತಿಯಾದರೂ ಓದಿದ್ದರೆ ಒಳ್ಳೆಯದು ಎಂಬುದಾಗಿ ಮಾತನಾಡಿಕೊಂಡರು. ಆದರೆ ಬಾಲ ಗೋಪಾಲದಿಂದ ಒಡ್ಡೋಲಗದವರೆಗೆ ನಿರ್ವಹಿಸಲಿಕ್ಕೆ ತೊಂದರೆ ಇಲ್ಲ ಎಂಬುದಾಗಿ ತೀರ್ಮಾನಿಸಿದರು. ನಂತರದಲ್ಲಿ ಇವರ ಕಂಠ ಮತ್ತು ಇವರಿಗಿರುವ ಆಸಕ್ತಿ, ಉತ್ಸಾಹವನ್ನು ಗಮನಿಸಿ ತಮ್ಮೊಂದಿಗೆ ಮಂಡಳಿಗೆ ಬರುವುದಾಗಿ ಕೇಳಿಕೊಂಡರು. ಆಗಿನ ಸಂದರ್ಭದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿ ಕೆಲಸಕ್ಕೆ ಸೇರಿಕೊಂಡ ಪರಮೇಶ್ವರ ನಾಯ್ಕ್ ಅವರಿಗೆ ಕೆಲಸದ ಮನೆಯನ್ನು ತೊರೆದು ಬರುವಷ್ಟು ಶಕ್ತಿ ಮತ್ತು ಸಾಮಥ್ರ್ಯವಿರಲಿಲ್ಲ. ಆದ ಕಾರಣದಿಂದಾಗಿ ತಮ್ಮ ಕಷ್ಟವನ್ನು ಹೇಳಿಕೊಂಡು ವಿನಯನಾಗಿಯೇ ಇದನ್ನು ನಿರಾಕರಿಸಿದರು. ಆದರೂ ಕಲೆಯ ಬಗೆಗಿನ ಆಸಕ್ತಿ ಹಾಗೂ ಉತ್ಸಾಹ ಮಾತ್ರ ದಿನದಿಂದ ದಿನಕ್ಕೆ ವೃದ್ಧಿಸುತ್ತಲೆ ಇತ್ತು. ಇವರ ಕಂಠ ದಿನದಿಂದ ದಿನಕ್ಕೆ ಪಕ್ವಗೊಳ್ಳುತ್ತ ಸಾಗಿತು.
ಪರಮೇಶ್ವರ ನಾಯ್ಕ್ ಅವರು ತಮ್ಮ ಬಡತನದ ಬದುಕಿನ ನಡುವೆಯೇ ಹಲವಾರು ಯಕ್ಷಗಾನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕವಾಗಿ ಇದರ ಬಗೆಗಿನ ಕಾಳಜಿಯನ್ನು, ತನ್ನೊಳಗಿನ ಕಲೆಯ ಹವ್ಯಾಸವನ್ನು ಹಾಗೆ ಮುಂದುವರೆಸಿಕೊಂಡು ಬಂದರು. ದನ ಕರುಗಳನ್ನು ಮೇಯಿಸುತ್ತಲೇ ಯಕ್ಷಗಾನ ಪದ್ಯಗಳನ್ನು ಹಾಡುತ್ತ ತಮ್ಮ ಜೀವನವನ್ನು ನಿರ್ವಹಿಸುತ್ತ ಬಂದರು. ಹೀಗೆ ದನಗಳನ್ನು ಕಾಯುತ್ತಿರುವ ಸಂದರ್ಭದಲ್ಲಿ ಕೃಷ್ಣಗೌಡ್ರು ಮಾದ್ಲುಮನೆ ಎಂಬ ಹವ್ಯಾಸಿ ಕಲಾವಿದರ ಜೊತೆಗೂಡಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕವಾಗಿ ಹಾಡುಗಾರಿಕೆಯನ್ನು ಗಟ್ಟಿಗೊಳಿಸಿಕೊಂಡರು. ನಂತರದಲ್ಲಿ ತಮ್ಮಲ್ಲಿ ಒಡಮೂಡುತ್ತಿರುವ ಕಲಾಸಕ್ತಿಯಿಂದಾಗಿ ಕೃಷ್ಣಜಿ ಬೇಡ್ಕಣೆ ಎಂಬುವವರು ಯಕ್ಷಗಾನ ತರಗತಿಗಳನ್ನು ನಡೆಸುತ್ತಿದ್ದರು. ಬಿಡುವಿನ ಸಮಯದಲ್ಲಿ ಇವರ ಬಳಿ ತೆರಳಿ ತರಬೇತಿಯನ್ನು ಪಡೆಯುವ ಮೂಲಕವಾಗಿ, ಇವರ ಬಳಿಯಲ್ಲಿಯೇ ಯಕ್ಷದೀಕ್ಷೆಯನ್ನು ಪಡೆದು, ಯಕ್ಷಗಾನ ಬದುಕಿನತ್ತ ಮುಖ ಮಾಡಿದರು. ಹೀಗೆ ಸುಮಾರು ದಿನಗಳ ಕಾಲ ಇವರ ತರಬೇತಿ ಶಾಲೆಯಲ್ಲಿ ಹವ್ಯಾಸ ನಡೆಸಿ, ಹಲವಾರು ತೆರನಾಗಿ ಕೌಶಲ್ಯವನ್ನು ಕರಗತ ಮಾಡಿಕೊಂಡರು. ಹೀಗೆ ಯಕ್ಷದೀಕ್ಷೆಯನ್ನು ಪಡೆದು, ಸರಾಗವಾಗಿ ಹಾಡುವುದನ್ನು ಕರಗತ ಮಾಡಿಕೊಂಡಿದ್ದ ಪರಮೇಶ್ವರ ನಾಯ್ಕ್ ಅವರು ಒಂದು ಕಡೆ ಅವಕಾಶಕ್ಕಾಗಿ ಕಾಯುತ್ತಿರುವ ಸಂದರ್ಭದಲ್ಲಿ ತಮ್ಮ ಸ್ನೇಹಿತರಾದ ಮಾದ್ಲುಮನೆ ಭಾಸ್ಕರ್ಗೌಡ ಎಂಬುವರೊಂದಿಗೆ ಒಮ್ಮೆ ಶಿರಸಿಯ ಮಾರಿಕಾಂಬ ಜಾತ್ರೆಗೆ ಆಗಮಿಸಿದರು. ಜಾತ್ರೆಯಲ್ಲಿ ಬಿಡಾರ ಹೂಡಿದ್ದ ಯಕ್ಷಗಾನ ಮಂಡಳಿಯತ್ತ ಇವರ ಗಮನವು ಕೇಂದ್ರಿಕೃತವಾಯಿತು. ಹೇಗಾದರೂ ಮಾಡಿ ಇವರ ಸ್ನೇಹ ಹಾಗೂ ವಿಶ್ವಾಸ ಗಳಿಸುವ ಮೂಲಕವಾಗಿ ಇವರ ಕಲಾ ಮಂಡಳಿಯಲ್ಲಿ ಅವಕಾಶ ಗಳಿಸಿಕೊಳ್ಳಬೇಕೆಂಬ ಹಂಬಲವೊಂದು ಇವರಲ್ಲಿ ಮೊಳಕೆಯೊಡೆಯಿತು. ಇದರಿಂದಾಗಿ ಈ ಮಂಡಳಿಯತ್ತ ನಡೆದರು. ಇಲ್ಲಿಯೂ ಕೂಡ ಪರಮೇಶ್ವರ ನಾಯ್ಕರು ತಮ್ಮ ಕಂಠಸಿರಿಯ ಮೂಲಕ ಕಂಪನಿ ಮಾಲಿಕರ ಜೀವನಶೆಟ್ಟಿಯವರ ಮನಗೆದ್ದು ತಮ್ಮ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಬಂದರು.
ಶ್ರೀಯುತ ಪರಮೇಶ್ವರ ನಾಯ್ಕ್ ಅವರು ತಮ್ಮ ಬಾಲ್ಯದ ಹನ್ನೆರಡನೇ ವಯಸ್ಸಿನಿಂದಲೆ ಯಕ್ಷಗಾನ ಕಲೆಯ ಗೀಳನ್ನು ಮೈಗೂಡಿಸಿಕೊಂಡು ಬಂದವರು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ತಮ್ಮ ಸೇವೆಯನ್ನು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸುತ್ತಿದ್ದಾರೆ. ಇವರ ಈ ಸೇವೆಯನ್ನು ಗಮನಿಸಿ ನಾಡಿನ ವಿವಿಧ ಭಾಗಗಳಲ್ಲಿ ಹಲವಾರು ಸನ್ಮಾನ ಹಾಗೂ ಗೌರವಗಳು ಇವರಿಗೆ ಲಭಿಸಿವೆ. ಇವರ ಸೇವೆಯನ್ನು ಗಮನಿಸಿ ಕಾನಗೋಡು, ಹಳ್ಳಿಬೈಲು, ಕಕ್ಕುಂಜೆ ಹಾಗೂ ವಿವಿಧೆಡೆಗಳಲ್ಲಿ ಹಲವಾರು ಸಂಘ ಸಂಸ್ಥೆಗಳು ಗೌರವಗಳು ಲಭಿಸಿವೆ. ಹಾಗೆಯೇ ಕರಾವಳಿ ಭಾಗದ ಹೆಸರಾಂತ ‘ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್’ ವತಿಯಿಂದಲೂ ಇವರಿಗೆ ಗೌರವ ಸನ್ಮಾನಗಳು ಲಭಿಸಿವೆ. ಹಾಗೆಯೇ ಸಿದ್ಧಾಪುರ ತಾಲ್ಲೂಕಿನ ತರಳಿಮಠದ ವತಿಯಿಂದ ‘ತರಳಿಮಠ’ ಪ್ರಶಸ್ತಿಯು ಶ್ರೀಯುತ ಪರಮೇಶ್ವರ ನಾಯ್ಕ್ ಅವರಿಗೆ ಲಭಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ನೆಲದನಿ
ರೈತ ಹೋರಾಟಗಾರ `ಸಹಜಾನಂದ ಸರಸ್ವತಿ’

ಉತ್ತರಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿ 22 ಫೆಬ್ರವರಿ 1889 ರಂದು ಜನಿಸಿ, ಜೂನ್ 26,1950 ರಂದು ನಿಧನರಾದ ಸಹಜಾನಂದ್ ಸರಸ್ವತಿ ಅವರ ನಿಜವಾದ ಹೆಸರು ನವರಂಗ್ ರೈ. ಹೋರಾಟ ಮನೋಭಾವದ ಸಹಜಾನಂದರು ಬಹುಮುಖ ಪ್ರತಿಭೆ. ಕ್ರಾಂತಿಕಾರಿ ರೈತ ನಾಯಕ, ಇತಿಹಾಸಕಾರ, ದಾರ್ಶನಿಕ, ಬರಹಗಾರ. ಅವರ ಮುಖ್ಯ ಬರಹ-ಕೃತಿ ಬಿಹಾರವನ್ನು ಕೇಂದ್ರೀಕರಿಸಿದೆ. ಅವರು ಬಿಹ್ತಾದಲ್ಲಿ ಆಶ್ರಮವನ್ನು ಸ್ಥಾಪಿಸಿದ್ದರು ಮತ್ತು ಅಲ್ಲಿಂದ ತಮ್ಮ ವೃದ್ದಾಪ್ಯದ ದಿನಗಳಲ್ಲಿ ತಮ್ಮ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಿದರು.
ಸಹಜಾನಂದರು 1929ರಲ್ಲಿ ಬಿಹಾರ ಪ್ರಾಂತೀಯ ಕಿಸಾನ್ ಸಭೆಯನ್ನು (ಬಿಪಿಕೆಎಸ್) ರಚಿಸಿದರು. ಜಮೀನ್ದಾರರಿಂದ ಭೂ ಹಿಡುವಳಿ ಕುರಿತಾಗಿ ರೈತರ ಮೇಲೆ ನಡೆಯುತ್ತಿದ್ದ ದಾಳಿಗಳ ವಿರುದ್ಧ ರೈತರ ಕುಂದುಕೊರತೆಗಳನ್ನು ಒಟ್ಟುಗೂಡಿಸುವ ಸಲುವಾಗಿ ಈ ಸಂಘಟನೆ-ಹೋರಾಟವನ್ನು ಅವರು ಆರಂಭಿಸಿದರು. ಆ ಮೂಲಕ ಭಾರತದಲ್ಲಿ ರೈತರ ಚಳುವಳಿಗಳಿಗೆ ನಾಂದಿ ಹಾಡಿದರು.
ಕ್ರಮೇಣ ರೈತ ಚಳುವಳಿ ತೀವ್ರಗೊಂಡಿತು ಮತ್ತು ಭಾರತದ ಉಳಿದ ಭಾಗಗಳಿಗೆ ಹರಡಿತು. ಇದು 1936 ರಲ್ಲಿ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ರಚನೆಗೆ ಕಾರಣವಾಯಿತು, ಅವರು ಅದರ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು. ಕಿಸಾನ್ ಪ್ರಣಾಳಿಕೆ ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಪಡಿಸಬೇಕು ಮತ್ತು ಗ್ರಾಮೀಣ ಸಾಲಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿತು. ಆ ಜಮೀನ್ದಾರರನ್ನು ಬ್ರಿಟಿಷ್ ಸರ್ಕಾರ ಆದಾಯ ಸಂಗ್ರಹಕ್ಕಾಗಿ ನೇಮಕ ಮಾಡಿಕೊಂಡಿತ್ತು.
ಇದನ್ನೂ ಓದಿ | ಕ್ರಾಂತಿಕಾರಿ ರೈತ ಹೋರಾಟದ ಸ್ಫೂರ್ತಿಯ ಚಿಲುಮೆ `ಅಜಿತ್ ಸಿಂಗ್‘
ಭೂ ಮಾಲೀಕತ್ವವನ್ನು ಉಳಿಸಲು ಮತ್ತು ರೈತರ ಉಳುಮೆಯ ಹಕ್ಕುಗಳನ್ನು ಉಳಿಸಿಕೊಳ್ಳಲು ನಡೆದ ಈ ಚಳುವಳಿ, ಬಿಹಾರ ಮತ್ತು ಯುನೈಟೆಡ್ ಪ್ರಾಂತ್ಯದ ಕಾಂಗ್ರೆಸ್ ಸರ್ಕಾರಗಳೊಂದಿಗೆ ಸಂಘರ್ಷ ಎದುರಿಸಬೇಕಾಗಿತು.
ಸಹಜಾನಂದ ಸರಸ್ವತಿ 1937-1938ರಲ್ಲಿ ಬಿಹಾರದಲ್ಲಿ ಬಕಾಶ್ತ್ ಚಳವಳಿಯನ್ನು ಸಂಘಟಿಸಿ ಮುನ್ನಡೆಸಿದರು. ಬಕಾಶ್ತ್ ಎಂದರೆ ಸ್ವಯಂ-ಕೃಷಿ, ಸ್ವಯಂ ಉಳುಮೆ. ಈ ಆಂದೋಲನವು ಜಮೀನ್ದಾರರ ಬಕಾಶ್ತ್ ಜಮೀನುಗಳಿಂದ ಟೆನೆಂಟ್ಗಳನ್ನು ಹೊರಹಾಕುವುದರ ವಿರುದ್ಧವಾಗಿತ್ತು. ಇದು ಬಿಹಾರ ಹಿಡುವಳಿ ಕಾಯ್ದೆ ಮತ್ತು ಬಕಾಶ್ತ್ ಭೂ ತೆರಿಗೆಯನ್ನು ಅಂಗೀಕರಿಸಲು ಕಾರಣವಾಯಿತು. ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಸಹಜಾನಂದರನ್ನು ಬಂಧಿಸಲಾಗಿತ್ತು.
(ಕೃಪೆ : Mass Media Foundation)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ
ಸಾರೇಕೊಪ್ಪದ ಬಂಗಾರ ; ಅಕ್ಷರತುಂಗಾವನ್ನು ನೆನೆದು

- ಸುರೇಶ ಎನ್ ಶಿಕಾರಿಪುರ
ನನ್ನಮ್ಮ ಅನಕ್ಷರಸ್ತೆ ಆಕೆ ಅಕ್ಷರ ಬರೆಯುವುದು ಕಲಿತದ್ದು ಅಂದಿನ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರು ಜಾರಿಗೆ ತಂದಿದ್ದ ‘ಅಕ್ಷರ ತುಂಗಾ’ ಎಂಬ ಯೋಜನೆಯಿಂದ. ಅನಕ್ಷರಸ್ಥ ಹಿಂದುಳಿದ ವರ್ಗಗಳ ಜನ ಸಣ್ಣದಾಗಿ ದಿನಪತ್ರಿಕೆ ಓದಲು ರಾಜಕೀಯ ಸಾಮಾಜಿಕ ವೈಚಾರಿಕ ವಿಚಾರಗಳನ್ನು ಸರ್ಕಾರಗಳ ಯೋಜನೆಗಳು ವಿದ್ಯಾಮಾನಗಳನ್ನು ಅರ್ಥಮಾಡಿಕೊಳ್ಳಲು ಕಲಿತದ್ದು ಬಂಗಾರಪ್ಪನೆಂಬ ಹಿಂದುಳಿದ ವರ್ಗದ ನಾಯಕ ಜಾರಿಗೊಳಿದ್ದ ಆ ಯೋಜನೆಯಿಂದ.
ಆದರೆ ತಮ್ಮ ರಾಜಕೀಯ ಹಿತಾಸಕ್ತಿ ಮತ್ತು ದಲಿತರು ಹಿಂದುಳಿದವರು ಅಕ್ಷರ ಕಲಿಯಬಾರದೆಂಬ ಪಾರಂಪರಿಕ ದ್ವೇಷ ಮತ್ತು ಹೊಟ್ಟೆಕಿಚ್ಚಿನ ಕಾರಣಕ್ಕೆ ಮೇಲ್ಜಾತಿಗಳು ಇದರ ಮೇಲೆ ಅಪಪ್ರಚಾರ ಶುರುವಿಟ್ಟರು. ಅಕ್ಷರ ತುಂಗಾ ಯೋಜನೆಯ ಕುರಿತ ಅಸಮಧಾನ ಅಪಪ್ರಚಾರದ ಒಂದು ಘೋಷಣೆ ಹೇಗಿತ್ತೆಂದರೆ,
“ಅಕ್ಷರತುಂಗಾ ಮೂರ್ಕೋಟಿ ನುಂಗ” ಇದನ್ನು ಅಂದಿನ ದಲಿತವಿರೋಧೀ ಹಿಂದುಳಿದವರ ವಿರೋಧಿಗಳು ಯಶಸ್ವಿಯಾಗಿ ಪ್ರಚಾರ ಮಾಡಿದರು. ಅಕ್ಷರ ಕಲಿಯುತ್ತಿದ್ದ ಜನ ಕೆಲವರು ಅದನ್ನು ಹೌದೆಂದೇ ನಂಬಿದ್ದರು. ಬಂಗಾರಪ್ಪ ಅಪ್ಪಟ ಜಾನಪದ ನಾಯಕ. ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಹಳ್ಳಿ ಸೊಗಡು ಸಂಪರ್ಕ ಬಿಟ್ಟುಕೊಡದ ಅಪ್ಪಣ ಹಳ್ಳೀಯ.
ಅವರಿಗೆ ಅಕ್ಷರ ಜ್ಞಾನವಿಲ್ಲದ ಕಾರಣಕ್ಕೇ ದಲಿತರು ಹಿಂದುಳಿದವರು ಹಿಂದೇಯೇ ಉಳಿದಿರುವುದು ಎಂಬ ಸ್ಪಷ್ಟ ತಿಳುವಳಿಕೆಯಿತ್ತು. ಅದಕ್ಕಾಗೇ ಅಂಬೇಡ್ಕರ್ ಗಾಂಧೀಜಿ ನೆಹರು ದೇವರಾಜ ಅರಸು ಹೋರಾಡಿದ್ದರೆಂಬ ಅರಿವಿತ್ತು ಹಾಗಾಗಿಯೇ ಶಾಲೆ ಕಲಿಯದ ಹಿರಿಯರು ಯುವಕರು ಆ ಯೋಜನೆಯ ಮೂಲಕ ನಾಲಕ್ಕಕ್ಷರ ಕಲಿತು ತಮ್ಮ ಮೇಲಾಗುವ ಅನ್ಯಾಯ ಅಕ್ರಮ ದಬ್ಬಾಳಿಕೆಗಳನ್ನು ಅರ್ಥ ಮಾಡಿಕೊಳ್ಳುವಂತಾಗಲಿ ಎಂಬುದೇ ಅವರ ಉದ್ಧೇಶವಾಗಿತ್ತು.
ಏಕೆಂದರೆ ಅನಕ್ಷರಸ್ತ ಬಡ ರೈತನಿಂದ ನಕಲಿ ಸಹಿ ಮಾಡಿಸಿಕೊಂಡು ಅವನ ಹೊಲ ಮನೆ ನುಂಗಿ ನೀರುಕುಡಿದ ಮೇಲ್ಜಾತಿ ಹಣವಂತರ ದೌರ್ಜನ್ಯಗಳ ಬರ್ಬರತೆ ಹೇಗಿರುತ್ತಿತ್ತು ಎಂಬುದನ್ನು ಆ ಕಾಲದ ಹಿರಿಯ ತಲೆಮಾರಿನವರಿಗೆ ಕೇಳಿದರೆ ಗೊತ್ತಾಗುತ್ತದೆ. ಕರಣಿಕ ಗೌಡ ಪಟೇಲ ಎಂಬುವವರೆಲ್ಲಾ ಅಕ್ಷರ ಬಲ ದೊಣ್ಣೆಯ ಬಲ ಖಡ್ಗದ ರಾಜಕೀಯ ಬಲದಿಂದಲೇ ದಮನಿತ ವರ್ಗಗಳನ್ನು ಹತ್ತಿಕ್ಕಿದ ಚರಿತ್ರೆಯೇ ನಮ್ಮ ಬೆನ್ನಿಗಿದೆ.
ಇಂತಹಾ ದುರುಳರಿಂದ ದುಡಿಯುವ ಶ್ರಮಜೀವಿ ಜನರನ್ನು ಪಾರು ಮಾಡಲು ಕೊನೆಯಪಕ್ಷ ಒಂದು ಅಗ್ರಿಮೆಂಟ್ ಕಾಪಿಯನ್ನೋ ನೋಂದಣಿ ವ್ಯವಹಾರವನ್ನೋ ಓದಿ ತಿಳಿದುಕೊಳ್ಳುವಂತಾಗಲಿ ಇದರಿಂದ ಸಾಕಷ್ಟು ಶೋಷಣೆಯನ್ನು ತಪ್ಪಿಸಬಹುದೆಂಬುದು ಅವರ ದೂರದೃಷ್ಟಿಯಾಗಿತ್ತು. ಇದು ಮೇಲ್ಜಾತಿ ಮನಸುಗಳಿಗೆ ಆಗಿಬರಲಿಲ್ಲ ಅವರು ಹುನ್ನಾರದ ಬೀಜ ಬಿತ್ತಿದರು “ಅಕ್ಷರತುಂಗಾ ಮೂರ್ಕೋಟಿ ನುಂಗಾ” ಎಂದೇ ಕೂಗಿದರು.
ನನ್ನೂರಿನ ಬಿಜೆಪಿಯ ಈರಾದಿಈರರೆಲ್ಲ ಇದನ್ನು ದನಿ ಎತ್ತರಿಸಿ ಕೂಗಿದ್ದೇ ಕೂಗಿದ್ದು ಹಾಗೆ ಕೂಗುವವರಲ್ಲಿ ಮುಗ್ಧ ಅನಕ್ಷರಸ್ಥ ಜನತೆಯೂ ಇರುತ್ತಿತ್ತು. ಆದರೆ ‘ಅಕ್ಷರತುಂಗಾ’ ಯೋಜನೆಯಲ್ಲಿ ಬಂಗಾರಪ್ಪ ಗಂಟು ಹೊಡೆದರು ಎಂಬುದಕ್ಕೆ ಸಾಕ್ಷಿಯೇ ಇಲ್ಲ. ಸಾಬೀತಾಗಲೂ ಇಲ್ಲ.
ಹಿಂದುಳಿದವರ್ಗದವನೊಬ್ಬ ಅಧಿಕಾರ ಉನ್ನತಸ್ಥಾನದಲ್ಲಿ ಕೂರುವುದು ಶೋಷಿತ ಸಮುದಾಯಗಳು ಅಕ್ಷರ ಕಲಿಯುವುದು ಈ ದೇಶದ ಮೇಲ್ಜಾತಿಗಳಿಗೆ ಯಾವತ್ತೂ ಆಗದ ವಿಚಾರ.
ದೇವರಾಜ ಅರಸರಿಗೂ ಬಂಗಾರಪ್ಪನವರಿಗೂ ಕಾಡಿದರು ಸಿದ್ದರಾಮಯ್ಯನವರಿಗೂ ಕಾಡಿದರು ಮುಂದೆ ಯಾರೇ ದಲಿತ ಹಿಂದುಳಿದವ ಅಧಿಕಾರಕ್ಕೆ ಬಂದರೂ ಕಾಡುತ್ತಾರೆ ಸಾಧ್ಯವಾದಷ್ಟು ಆ ಸಮುದಾಯಗಳವರು ಅಧಿಕಾರದ ಹಂತಕ್ಕೆ ಬರುವುದನ್ನು ತಡೆಯಲು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಎಚ್ಚೆತ್ತುಕೊಳ್ಳದಿದ್ದರೆ ಕಷ್ಟ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ
ನುಡಿಯ ಒಡಲು -27 | ನುಡಿಯೆಂಬ ಅಪ್ರಮಾಣದ ಪ್ರಮಾಣೀಕರಣ

- ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ನುಡಿ, ಪ್ರಾದೇಶಿಕ ನುಡಿ ಇಲ್ಲವೇ ರಾಷ್ಟ್ರೀಯ ನುಡಿ ಯಾವುದಾದರೂ ಇರಬಹುದು ಅಂತಹ ನುಡಿಯ ಚಹರೆಗಳು ಎರಡು ಪ್ರಮುಖ ಆಯಾಮಗಳನ್ನು ಒಳಗೊಂಡಿರುತ್ತವೆ. ಒಂದು ರಚನೆ ಮತ್ತೊಂದು ಕ್ರಿಯೆ. ನಿರಂತರ ಬದಲಾವಣೆಯ ಪ್ರಕ್ರಿಯೆಯಲ್ಲಿ ರೂಪಿಸಿಕೊಂಡ ನುಡಿಯ ರಚನೆ ಮತ್ತು ಕ್ರಿಯೆಯ ವಿಭಿನ್ನ ನೆಲೆಗಳನ್ನು ಸಮಾಜಭಾಷಾಶಾಸ್ತ್ರೀಯ ಮಾದರಿಯಲ್ಲಿ ಬಿಡಿಸಿ ನೋಡಬೇಕಿದೆ.
ಹೀಗೆ ಯಾವುದೇ ನುಡಿಯ ಯಾಜಮಾನಿಕೆ ನೆಲೆಗೊಳ್ಳಲು ಆ ನಾಡಿನ ರಾಜ ಇಲ್ಲವೇ ಅರಸು ಮನೆತನಗಳ ಕೊಡುಗೆಯೂ ಕಾರಣವಾಗಿರದೆ ಇರಲಾರದು. ನುಡಿ ಬಗೆಗಿನ ಇಂತಹ ಬೆಳವಣಿಗೆಗಳನ್ನು ವಿಶ್ಲೇಷಿಸುವ ಅಗತ್ಯವಿದೆ. ಈ ವಿದ್ಯಮಾನಗಳು ಹಾಗೂ ಬೆಳವಣಿಗೆಯನ್ನು ಅರಿತುಕೊಳ್ಳುವ ಮೂಲಕ ನುಡಿಯ ಒಡಲಲ್ಲೇ ಹುದುಗಿರುವ ಅಸಮಾನತೆಗಳನ್ನು ಗುರುತಿಸಬಹುದು.
ಡೈಗ್ಲಾಸಿಂ ಎಂಬ ಅರಿಮೆಪದದ ಮೂಲಕ ನುಡಿಯ ಇಂತಹ ಅಸಮಾನ ನೆಲೆಗಳನ್ನು ಬಿಡಿಸಿ ನೋಡಬಹುದು. ಆದರೆ ಡೈಗ್ಲಾಸಿಯ ಕುರಿತ ಫರ್ಗ್ಯೂಸನ್ (1986:219) ಅವರ ವಿಶ್ಲೇಷಣಾ ಮಾದರಿಗೆ ಸಾಕಷ್ಟು ಮಿತಿಗಳಿರುವುದರಿಂದ ಡೈಗ್ಲಾಸಿಯದ ಪೂರ್ಣ ಚಿತ್ರಣ ಸಿಗುವುದಿಲ್ಲ. ಹಾಗಾಗಿ ಇವರ ತಾತ್ವಿಕ ಚೌಕಟ್ಟಿಗೆ ಪರ್ಯಾಯವಾಗಿ ಇನ್ನೊಂದು ಚೌಕಟ್ಟನ್ನು ರೂಪಿಸಿಕೊಂಡು ವಿವರಿಸಬಹುದು.
ಅಂದರೆ ಡೈಗ್ಲಾಸಿಯೆಂಬುದು ಕೇವಲ ಒಂದೇ ನುಡಿಯೊಳಗಣ ಏರುಪೇರುಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಬದಲಾಗಿ ನುಡಿಯೊಳಗಿನ ಅಸಮಾನತೆಗೆ ಬೇರೊಂದು ನುಡಿಯೂ ಕಾರಣವಾಗಿರಲೂ ಸಾಧ್ಯವಿದೆ (ಎತ್ತುಗೆಗಾಗಿ ಸಂಸ್ಕೃತ ಕನ್ನಡ ಹಾಗೂ ಸಂಸ್ಕೃತಕ್ಕೆ ಹೊರತಾದ ಕನ್ನಡ ಅಂದರೆ ದೇಶಿ ಕನ್ನಡ). ಆದ್ದರಿಂದ ಯಾವುದೇ ಒಂದು ನುಡಿ ಇಲ್ಲವೇ ಒಳನುಡಿಯು ಬೇರೊಂದು ನುಡಿ ಇಲ್ಲವೇ ಒಳನುಡಿಯ ಪ್ರಾಬಲ್ಯಕ್ಕೆ ಒಳಪಟ್ಟಾಗ ಅಂತಹ ನುಡಿ ರೂಪಾಂತರಗೊಳ್ಳುವ ಬಗೆಗಳು ಯಾವ ಯಾವ ಸ್ವರೂಪದಲ್ಲಿ ರೂಪುಗೊಳ್ಳುತ್ತವೆ ಅನ್ನುವ ಪ್ರಕ್ರಿಯೆಯನ್ನೂ ಕೂಡ ಡೈಗ್ಲಾಸಿಯ ಎಂದು ಗುರುತಿಸಿಬಹುದು.
ಈ ಡೈಗ್ಲಾಸಿಯ ಹುಟ್ಟಿಸುವ ಡೈಕಾಟಮಿಯೂ ಕೂಡ ಒಂದು ನುಡಿ ಹಾಗೂ ಒಳನುಡಿಗಳ ನಡುವೆ ಇರುವ ಅಧಿಕಾರ ಮತ್ತು ಸಾಮಾಜಿಕ ಅಂತಸ್ತನ್ನು ಪ್ರತಿನಿಧಿಸುವ ಬಗೆಯೇ ಹೊರತು ಬೇರೇನು ಇರಲಾರದು. ಕನ್ನಡದ ಪ್ರಮಾಣಭಾಷೆ ಎನ್ನುವುದು ಸಂಸ್ಕೃತ ಭೂಯಿಷ್ಠ ಭಾಷಿಕ ಸ್ವರೂಪ. ಇದನ್ನೇ ಕನ್ನಡದ ಉನ್ನತ (ದಿ ಹೈ ವೆರೈಟಿ) ನುಡಿ ಪ್ರಭೇದವೆಂದು ಪರಿಗಣಿಸಿರುವುದು. ಇಂತಹ ನುಡಿ ಸನ್ನಿವೇಶವು ಕನ್ನಡದ ಇತರೆ ಒಳನುಡಿಗಳನ್ನು ನಿಮ್ನ (ದಿ ಲೋ ವೆರೈಟಿ) ಪ್ರಭೇದಗಳನ್ನಾಗಿ ರೂಪಿಸಿರಲಕ್ಕೂ ಸಾಧ್ಯ.
ಈ ಎರಡೂ ಬಗೆಯ ಪ್ರಭೇಧಗಳ ನಡುವಿನ ವ್ಯತ್ಯಾಸಗಳನ್ನು ಫರ್ಗ್ಯೂಸನ್ನು ವಿವರಿಸುವ ಮಾದರಿಯಲ್ಲಿ ನೋಡಲು ಸಾಧ್ಯವಿಲ್ಲ. ಏಕೆಂದರೆ ಫರ್ಗ್ಯೂಸನ್ನ ಪ್ರಕಾರ ಡೈಗ್ಲಾಸಿಯ ಎಂಬುದು ಒಂದೇ ನುಡಿಯ ಬೇರೆ ಬೇರೆ ಪ್ರಭೇದಗಳ ನಡುವಣ ಅಂತರಗಳು. ಈ ಅಂತರಗಳನ್ನೇ ಇವನು ಹೈ ಮತ್ತು ಲೋ ಪ್ರಭೇದಗಳೆಂದು ಗುರುತಿಸಿದ್ದಾನೆ. ಇವುಗಳಲ್ಲಿ ಹೈ ವೆರೈಟಿಯೇ ಈ ಮುಂದಿನ ಎಲ್ಲ ವಲಯಗಳಲ್ಲಿ ಕ್ರಿಯಾಶೀಲವಾಗಿರುತ್ತದೆ. ಈ ವಲಯಗಳನ್ನು ನಿಯೋಗ.
ಪ್ರತಿಷ್ಠೆ, ಸಾಹಿತ್ಯ ಪರಂಪರೆ, ಗ್ರಹಿಕೆ, ಪ್ರಮಾಣೀಕರಣ, ನೆಲೆಗೊಳಿಸುವಿಕೆ, ವ್ಯಾಕರಣ, ಶಬ್ದಕೋಶ ಎಂದು ವರ್ಗೀಕರಿಸಿದ್ದಾನೆ. ಕನ್ನಡ ಭಾಷೆ ಮತ್ತು ಸಾಹಿತ್ಯ ಚರಿತ್ರೆಯನ್ನು ಪರಿಶೀಲಿಸಿದಾಗ ಈ ಎರಡೂ ಪ್ರಭೇದಗಳ ನಡುವಿನ ಕಂದರ ಮೇಲೆ ಪಟ್ಟಿ ಮಾಡಿದ ಎಲ್ಲ ನಿಯೋಗಗಳಲ್ಲಿಯೂ ನಿಚ್ಚಳವಾಗಿ ಕಣ್ಣಿಗೆ ರಾಚುತ್ತದೆ ದಿಟ. ಆದರೆ ಫರ್ಗ್ಯೂಸನ್ನ ಮಾದರಿಗೆ ಹೊರತಾದ ಕನ್ನಡದ ಡೈಗ್ಲಾಸಿಯ ಮಾದರಿಯನ್ನು ಇಲ್ಲಿ ಕಾಣಬಹುದು.
ಈಗಾಗಲೇ ಚರ್ಚಿಸಿದಂತೆ ಕನ್ನಡ ಸನ್ನಿವೇಶದಲ್ಲಿ ಹೈ ವೆರೈಟಿ ಅಂದರೆ ಅದು ಸಂಸ್ಕೃತ ಕನ್ನಡವೇ ಆಗಿರುತ್ತದೆ ಹಾಗೂ ಲೋ ವೆರೈಟಿ ಎಂಬುದು ಅದು ದೇಶಿ ಕನ್ನಡವೇ ಆಗಿರುತ್ತದೆ. ಒಂದು ಅಂದಾಜಿನ ಪ್ರಕಾರ ಇಂತಹ ಕನ್ನಡವನ್ನೇ ಮಾರ್ಗ ಹಾಗೂ ದೇಶಿ ಎಂದೂ ವಿಂಗಡಿಸಿರಬಹುದು. ಹೀಗೆ ರೂಪುಗೊಂಡ ಈ ಆಯಾಮಗಳು ಸಾಂಸ್ಕೃತಿಕ, ರಾಜಕೀಯ ಪಲ್ಲಟಕ್ಕೂ ಕಾರಣವಾಗಿವೆ ಎಂಬುದು ಗಮನಾರ್ಹ. ಫರ್ಗ್ಯೂಸನ್ನ ಪ್ರಕಾರ ಹೈ ಹಾಗೂ ಲೋ ವೆರೈಟಿಗಳ ನಡುವಣ ಅಂತರ ಯಾವಾಗಲೂ ಅದು ಸ್ಥಿರವಾಗಿರುತ್ತದೆ.
ಅಂದರೆ ಇವನ ಪ್ರಕಾರ ಡೈಗ್ಲಾಸಿಯವನ್ನು ಕುರಿತು ಚರ್ಚಿಸುವುದೆಂದರೆ ಪ್ರಮಾಣ ನುಡಿಯೊಂದರ ಬೆಳವಣಿಗೆ ಹಾಗೂ ಲಕ್ಷಣಗಳನ್ನು ಕುರಿತು ಚರ್ಚಿಸುವುದೇ ಆಗಿದೆ. ಆದರೆ ಬಕ್ತಿನ್ನ ಹೆಟ್ರೋಗ್ಲಾಸಿಯ ಪರಿಕಲ್ಪನೆಯೊಟ್ಟಿಗೆ ಡೈಗ್ಲಾಸಿಯವನ್ನು ಹೋಲಿಸಿ ನೋಡಿದರೆ ದಿಟವಾಗಿಯೂ ನುಡಿಯ ಒಡಲ ಉರಿ ಎಂತಹದು ಎಂಬುದು ನಿಚ್ಚಳವಾಗುತ್ತದೆ.
ಬಕ್ತಿನ್ನ ಪ್ರಕಾರ ಹೆಟ್ರೋಗ್ಲಾಸಿಯ ಎನ್ನುವುದು ಲೋ ವೆರೈಟಿಯ ಬಹುಳತೆಯನ್ನು ಕುರಿತಾಗಿದೆ ಅಂದರೆ ಹೆಟ್ರೋಗ್ಲಾಸಿಯ ಎಂಬುದು ಅಂಕೆಯಲ್ಲಿಟ್ಟ ನುಡಿ (ಒವರ್ರ್ಚಿಂಗ್) ಹಾಗೂ ಸಾಹಿತ್ಯಕ ಇಲ್ಲವೇ ಮೇಲ್ಮಟ್ಟದ ನುಡಿ (ಲಿಟರರಿ ಆರ್ಎನ್ನೋಬೆಲ್ಡ್)ಗಳ ನಡುವಣ ತಿಕ್ಕಾಟವೇ ಆಗಿರುತ್ತದೆ. ಇದನ್ನು ಹೀಗೂ ಹೇಳಬಹುದು, ನುಡಿಯ ಏಕೀಕರಣ ಹಾಗೂ ವಿಕೇಂದ್ರಿಕರಣದ ನಡುವಿನ ತಿಕ್ಕಾಟವೂ ಆಗಿರುತ್ತದೆ. ಸಂವಿಧಾನಬದ್ಧ ಮಾನ್ಯತೆಯನ್ನು ಪಡೆದಿರುವ ಈ ಕೆಳಗಿನ ವಿಂಗಡನೆಯನ್ನು ಗಮನಿಸಿದರೆ ಬಕ್ತಿನ್ನ ಈ ಪರಿಕಲ್ಪನೆಯ ಮಹತ್ವದ ಆಯಾಮಗಳು ಯಾವವು ಎಂಬುದು ಎದ್ದುಕಾಣುತ್ತವೆ.
1. ಪ್ರಮುಖ ನುಡಿಗಳು / ರಾಷ್ಟ್ರೀಯ ನುಡಿಗಳು
2. ಪ್ರಾದೇಶಿಕ ನುಡಿಗಳು / ಮೈನಾರಿಟಿ ನುಡಿಗಳು
3. ಶಾಸ್ತ್ರೀಯ / ವಿಶೇಷ ಮಾನ್ಯತೆ ಪಡೆದ ನುಡಿಗಳು
ಸ್ಟೀವರ್ಟ್ (ಲ್ಯಾಂಗ್ವೇಜ್ ಆಪ್ ಟೈಪಾಲಜಿ:1962: ಇಂಟರ್ನೆಟ್)ನ ಮಾದರಿಯೂ ಫರ್ಗ್ಯೂಸನ್ ನ ಮಾದರಿಯನ್ನು ಮತ್ತಷ್ಟೂ ಸುಧಾಹರಿಸಿ ನುಡಿ ಸನ್ನಿವೇಶದ ಮತ್ತೊಂದು ಬಗೆಯ ನುಡಿಯ ಅಸಮಾನತೆಯನ್ನು ತೋರಿಸುತ್ತದೆ.
ನುಡಿ ಪ್ರಕಾರಗಳು,ಟೈಪ್ಸ್
ವಿಶೇಷತೆಗಳು, ಆ್ಯಟ್ರಿಬ್ಯೂಟ್ಸ್
1. ಪ್ರಮಾಣ ನುಡಿ
2. ದೇಶಿ ನುಡಿ
3. ಒಳನುಡಿ
ವಿಶೇಷತೆಯ ವಿವರಗಳು
1. ಪ್ರಮಾಣ, 2. ಸ್ವಾಯತ್ತತೆ, 3. ಚಾರಿತ್ರಿಕತೆ, 4. ಚೈತನ್ಯಶೀಲತೆ
ಈ ಮಾದರಿಯು ನುಡಿ ಹಾಗೂ ಒಳನುಡಿಗಳ ನಡುವಣ ಅಸಮಾನ ನೆಲೆಗಳನ್ನು ಸೂಚಿಸುತ್ತದೆ. ಕನ್ನಡ ಇಲ್ಲವೇ ಭಾರತದ ಯಾವುದೇ ಒಂದು ನುಡಿಯ ಒಳನುಡಿಗಳಲ್ಲಿಯೇ ತಾರತಮ್ಯದ ನೆಲೆಗಳನ್ನು ಕಾಣಬಹುದು. ಆದ್ದರಿಂದ ಕ್ಲಾಸಿಕಲ್ ನುಡಿಗೆ ಇನ್ನೂ ಹೆಚ್ಚಿನ ಪಾವಿತ್ರö್ಯತೆಯನ್ನು ಆರೋಪಿಸುವ ಹುನ್ನಾರಗಳು ನಡೆಯುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಜೋಶ್ವಾ ಫಿಶ್ಮನ್ (1980: ಇಂಟರ್ನೆಟ್) ಡೈಗ್ಲಾಸಿಯವನ್ನು ಇನ್ನೊಂದು ಬಗೆಯಲ್ಲಿ ವಿಸ್ತರಿಸುತ್ತಾನೆ. ಇವನ ಪ್ರಕಾರ ಡೈಗ್ಲಾಸಿಯ ಎಂಬುದು ಕೇವಲ ಒಂದೇ ನುಡಿಯ ಪ್ರಭೇದಗಳ ನಡುವಿನ ಸನ್ನಿವೇಶ ಮಾತ್ರವಾಗದೇ ಅದು ಬೇರೆ ಬೇರೆ ನುಡಿಗಳ ನಡುವಣ ನುಡಿ ಸನ್ನಿವೇಶವೂ ಆಗಿರುತ್ತದೆ.
ಬಹುಭಾಷಿಕ ಸನ್ನಿವೇಶದಲ್ಲಂತೂ ಹೈ ಹಾಗೂ ಲೋ ವೆರೈಟಿಗಳು ಯಾವುದೇ ಜೈವಿಕ ನಂಟಸ್ತಿಕೆಯನ್ನು ಹೊಂದದ ನುಡಿ ಪ್ರಭೇದಗಳೂ ಆಗಿರುತ್ತವೆ, ಎತ್ತುಗೆಗಾಗಿ ಸಂಸ್ಕೃತ ಇಲ್ಲವೇ ಸಂಸ್ಕೃತ ಕನ್ನಡ (ಹೈ ವೆರೈಟಿ) ಹಾಗೂ ಕನ್ನಡ (ಲೋ ವೆರೈಟಿ) ಆಗಿರುತ್ತವೆ. ಫಿಶ್ಮನ್ನ ಈ ವಿಶ್ಲೇಷಣೆಯನ್ನು ವಿಸ್ತೃತ ಡೈಗ್ಲಾಸಿಯ ಓದು ಎಂದು ಗುರುತಿಸಲಾಗಿದೆ. ದ್ವಿಭಾಷಿಕ, ಬಹುಭಾಷಿಕ ಸನ್ನಿವೇಶದಲ್ಲಿಯ ಡೈಗ್ಲಾಸಿಯ ಕುರಿತು ಇವನ ಓದುಗಳು ಹೊಸ ಬಗೆಯ ದಾರಿಗಳನ್ನು ತೋರಿಸಿವೆ ಎಂದೇ ಹೇಳಬೇಕಾಗುತ್ತದೆ.
ಒಂದು ಕಡೆಗೆ, ಸಾರ್ವತ್ರಿಕ ನುಡಿಗಟ್ಟೊಂದನ್ನು ರೂಪಿಸುವ ಮತ್ತು ಇನ್ನೊಂದು ಕಡೆಗೆ ಕನ್ನಡದ ಗುರುತನ್ನು ನೆಲೆಗೊಳಿಸುವ ಹಂಬಲದಲ್ಲಿ ಹೊರಟ ಕವಿರಾಜಮಾರ್ಗಕಾರನಿಗೆ ಬೇಕಾದಷ್ಟು ಸಾಂಸ್ಕೃತಿಕ ರಾಜಕೀಯ ಗುರಿಗಳೂ ಇದ್ದಿರಬಹುದು. ಈ ಗುಂಗಿನಿಂದ ಮಾರ್ಗಕಾರನು ಕನ್ನಡದ ರಾಚನಿಕ ಸ್ವರೂಪವನ್ನು ಪುರ್ರಚಿಸುವ ಮಹತ್ತರ ಉದ್ದೇಶವನ್ನು ಇಟ್ಟಿಕೊಂಡಿದ್ದರಬಹುದು. ಆದರೆ ಈ ಬಗೆಯ ನುಡಿಯ ಧೋರಣೆಯನ್ನು ಕೂಡ ಸಂಸ್ಕೃತ ವಿದ್ವಾಂಸರು ಲೆಕ್ಕಿಸದೆ ಮಾರ್ಗಕಾರನನ್ನು ಕೇವಲ ಅನ್ಯಭಾಷೆಗಳಿಂದ ಪಡೆಯುವ ಜಾಗದಲ್ಲಿ ನಿಲ್ಲಿಸಿದ್ದಾದರೆ.
ಈ ಮಾತುಗಳನ್ನು ಗಮನಿಸಿದರೇ ಇದು ಇನ್ನೂ ನಿಚ್ಚಳಗೊಳ್ಳುತ್ತದೆ. “ಕನ್ನಡಕ್ಕೆ ಸಂಸ್ಕೃತದ ಜ್ಞಾನಶಾಸ್ತಿçಯ ಮನ್ನಣೆ ದೊರಕದೇ ಹೋಗಿದ್ದರೆ ಅದಕ್ಕೆ ಈಗ ದೊರಕಿದ ಪ್ರತಿಷ್ಠೆಯನ್ನು ಸಾಧಿಸಲಾಗುತ್ತಿರಲಿಲ್ಲ” (ಶೆಲ್ಡನ್ ಪೊಲಾಕ್: 2000: ಪುಟ:11). ಎಂದೂ ವಿಶ್ಲೇಷಿಸಿದ ಬಗೆ ಸಂಸ್ಕೃತ ತನ್ನೆಲ್ಲ ನುಡಿಯ ಕಸುವನ್ನು ಕನ್ನಡಕ್ಕೆ ದತ್ತಿಯಾಗಿ ಕೊಟ್ಟಿದೆ ಎನ್ನುವಂತಿದೆ. ಇಂತಹ ಭಾಷಿಕ ಅಧಿಕಾರ ಮತ್ತು ಯಜಮಾನಿಕೆಯನ್ನು ಸಂಸ್ಕೃತವು ಚರಿತ್ರೆ ಉದ್ದಕ್ಕೂ ಕನ್ನಡದಂತಹ ನುಡಿಗಳ ಮೇಲೆ ಸವಾರಿಯನ್ನು ಮಾಡಿಕೊಂಡು ಬಂದಿದೆ.
ತನ್ನ ಅಧಿಕಾರ ಹಾಗೂ ಯಜಮಾನಿಕೆಯನ್ನು ಸಾಧಿಸಿರುವ ರೀತಿಯನ್ನು ಈ ಮೇಲಿನ ಪೊಲಾಕ್ ಅವರ ಮಾತುಗಳಿಂದ ತಿಳಿದುಕೊಳ್ಳಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಈ ಧೋರಣೆ ಕನ್ನಡದ ಅನನ್ಯತೆ ಕಟ್ಟುವ ಮಾರ್ಗಕಾರನ ತಾತ್ವಿಕ ಮತ್ತು ಸಾಂಸ್ಕೃತಿಕ ಅಸ್ತಿತ್ವವನ್ನು ಹುಸಿಗೊಳಿಸುವ ಸೂಚನೆಯನ್ನೂ ನೀಡುತ್ತದೆ. ಇದು ಕನ್ನಡದಂತಹ ನುಡಿಯ ಜೀವಂತಿಕೆ ಮತ್ತು ಸ್ವಂತಿಕೆಯನ್ನು ನಾಶಮಾಡಿ ತನ್ನ ಭಾಷಿಕ ಅಧಿಕಾರವನ್ನು ಮುಂದುವರಿಸುವ ಅಪಾಯದ ಸೂಚನೆಯೂ ಆಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕನ್ನಡದ ಅರಸು ಮನೆತನಗಳಾದ ರಾಷ್ಟçಕೂಟ, ಚಾಲುಕ್ಯ, ಹೊಯ್ಸಳ ಇವರು ತಮ್ಮ ರಾಜಕೀಯ-ಸಾಂಸ್ಕೃತಿಕ ಸಂವಹನೆಗಾಗಿ ಕನ್ನಡ ನುಡಿಗೆ ಮನ್ನಣೆ ನೀಡಿದ ಕಾರಣ ಈ ನುಡಿಯು ತನ್ನೆಲ್ಲ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಬಿಕ್ಕಟ್ಟುಗಳ ನಡುವೆಯೂ ತನ್ನದೇ ಆದ ಸಾಹಿತ್ಯಿಕ-ರಾಜಕೀಯ ಅನನ್ಯತೆಯನ್ನು ಕಟ್ಟಿಕೊಂಡಿರುವ ಸಾಧ್ಯತೆಗಳೇ ಹೆಚ್ಚು ಎಂಬ ನಂಬಿಕೆಗಳೂ ನೆಲೆನಿಂತಿವೆ. ಇರಲಿ ಹೀಗೆ ಸಾಂಸ್ಕೃತಿಕವಾಗಿ ಪ್ರಾಬಲ್ಯ ಹೊಂದಿರುವ ಸಂಸ್ಕೃತ ನುಡಿಯ ಗಮನವು ಹೇಗೆ ಒಂದು ನುಡಿಯ ಒಟ್ಟು ಸಾಮಾಜಿಕ ಸಂದರ್ಭದಲ್ಲಿ ತನ್ನ ಗುರುತುಗಳನ್ನು ನೆಲೆಗೊಳಿಸುವ ಹುನ್ನಾರವನ್ನು ಮಾಡಿದೆ ಅನ್ನುವುದನ್ನು ಇಲ್ಲಿ ಕಾಣಬಹುದು. ಅಂದರೆ ಆಯಾ ಭಾಷಿಕ ಸನ್ನಿವೇಶ ಮತ್ತು ಬಳಕೆಯ ನಿಲುವುಗಳನ್ನು ನಿಯಂತ್ರಿಸಿದ ಮಾದರಿಗಳು ನಮ್ಮ ಕನ್ನಡ ವ್ಯಾಕರಣ, ಮೀಮಾಂಸೆ, ಸಂಸ್ಕೃತಿ ಚಿಂತನೆ, ಶೈಕ್ಷಣಿಕ ಪರಂಪರೆಗಳು ರೂಪಗೊಂಡ ಬಗೆಗಳನ್ನು ಸಾಮಾಜಿಕ ನುಡಿಯರಿಮೆಯ ನೆಲೆಗಳಿಂದ ಇನ್ನೂ ನಿಚ್ಚಳವಾಗಿ ಕಾಣಲು ಸಾಧ್ಯವಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್6 days ago
ವೀರ್ಯಾಣು ಬಲವೃದ್ಧಿಗೆ ಇಲ್ಲಿವೆ ಉಪಾಯಗಳು..!
-
ಅಂತರಂಗ7 days ago
ಅನಾಥರನ್ನಾಗಿಸದ ಅಂತಿಮ ಸಂಗಾತಿ
-
ದಿನದ ಸುದ್ದಿ6 days ago
ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ : ಸಿದ್ದರಾಮಯ್ಯ
-
ರಾಜಕೀಯ6 days ago
ಜನರನ್ನು ಕಷ್ಟಕ್ಕೆ ದೂಡಿ ಮೋದಿ ಸರ್ಕಾರ ಲಾಭಗಳಿಸುತ್ತಿದೆ : ಸೋನಿಯಾ ಗಾಂಧಿ ಕಿಡಿ
-
ಲೈಫ್ ಸ್ಟೈಲ್6 days ago
ಜಾನುವಾರುಗಳ ಲೋಹ ಕಾಯಿಲೆ
-
ದಿನದ ಸುದ್ದಿ6 days ago
ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು ; ವಿದೇಶದಿಂದ ಬರುವ ಗೋಮಾಂಸವನ್ನು ತಿನ್ನಬಹುದು, ಬಿಜೆಪಿಯ ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು..? ಮಾಜಿ ಸಿಎಂ ಸಿದ್ದರಾಮಯ್ಯ
-
ರಾಜಕೀಯ7 days ago
ಮೋದಿಯವರ ನಿಜ ಬಣ್ಣ ಕಾಂಗ್ರೆಸ್ ಪಕ್ಷ ಬಯಲಿಗೆಳೆಯಲಿದೆ : ಸಿದ್ದರಾಮಯ್ಯ
-
ಲೈಫ್ ಸ್ಟೈಲ್5 days ago
ಏನಿದು ? ಗಡಿಮಾರಿ..!