Connect with us

ನೆಲದನಿ

ಕನ್ನಡ ಸಾಹಿತ್ಯದ ಬಂಡಾಯದ ಕಿಡಿ: ಅಲ್ಲಮಪ್ರಭು ಬೆಟ್ಟದೂರು ಬದುಕಿನ ಕಥನ

Published

on

ನ್ನಡ ಸಾಹಿತ್ಯ ಪರಂಪರೆಯು ಸುದೀರ್ಘವಾದ ಐತಿಹಾಸಿ ಹಿನ್ನಲೆಯನ್ನು ಒಳಗೊಂಡಿದೆ. ಇಂತಹ ಕನ್ನಡ ಸಾಹಿತ್ಯ ಪರಂಪರೆಯು ಕಾಲದಿಂದ ಕಾಲಕ್ಕೆ ವರ್ತಮಾನದ ತುರ್ತಿಗೆ ಪೂರಕವಾದ ನೆಲೆಯಲ್ಲಿ ತನ್ನ ಆಶಯಗಳನ್ನು ಅಭಿವ್ಯಕ್ತಿಸುವ ನೆಲೆಯಲ್ಲಿ ಬೆಳೆದುಬಂದಿದೆ. ಕನ್ನಡ ಸಾಹಿತ್ಯವು ತನ್ನಲ್ಲಿ ಮಡಿವಂತಿಕೆಯನ್ನು ಕಾಪಾಡಕೊಳ್ಳದೆ ಸಮಾಜಮುಖಿಯಾಗಿ ಸ್ಪಂದಿಸುತ್ತ ಬಂದಿದೆ. ಇದರ ಫಲವಾಗಿ ಈ ಸಾಹಿತ್ಯ ಪ್ರಕಾರವು ಕ್ರಿಸ್ತಪೂರ್ವದಿಂದ ಸಮಕಾಲೀನ ಸಂದರ್ಭದವರೆಗೆ ಹಲವಾರು ಅವಸ್ಥಾಂತಗಳ ಮೂಲಕ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡು ಮುನ್ನಡೆದಿದೆ. ಹೀಗಾಗಿಯೇ ಪೂರ್ವದ ಹಳಹನ್ನಡ, ಹಳಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡ ಎಂಬ ವಿವಿಧ ಕಾಲಘಟ್ಟಗಳನ್ನು ದಾಟುವ ಮೂಲಕ ತನ್ನ ಗಟ್ಟಿತನವನ್ನು ವಿಸ್ತರಿಸುತ್ತ ಶ್ರೀಮಂತ ಭಾಷೆಯಾಗಿ ಕಂಗೊಳಿಸುತ್ತಿದೆ. ಹೀಗೆ ಬೆಳೆದುಬಂದ ವಿವಿಧ ಅವಸ್ಥಾಂತರಗಳಲ್ಲಿ ನಮ್ಮ ಮುಂದಿರುವ ಹೊಸಗನ್ನಡವು ವಿಸ್ತ್ರøತ ಸ್ವರೂಪವನ್ನು ಪಡೆದುಕೊಂಡು ಮುನ್ನಡೆದಿದೆ. ಹೊಸಗನ್ನಡದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಹಾಗೂ ದಲಿತ ಸಾಹಿತ್ಯ ಎಂಬ ವಿಶಿಷ್ಟ ಪ್ರಕಾರಗಳ ಮೂಲಕವಾಗಿ ಕನ್ನಡ ಸಾಹಿತ್ಯವು ತನ್ನ ಅನನ್ಯತೆಯನ್ನು ಕಾಯ್ದುಕೊಂಡು ಬಂದಿದೆ. ಹೊಸಗನ್ನಡದ ಬಂಡಾಯ ಮತ್ತು ದಲಿತ ಸಾಹಿತ್ಯವು ವಿಶಿಷ್ಟವಾಗಿ ದನಿಯಿಲ್ಲದವರ ದನಿಯಾಗಿ, ನೆಲದ ನೋವುಗಳಿಗೆ ಸ್ಪಂದಿಸುವ ನೆಲೆಯಲ್ಲಿ ತನ್ನ ಗುಣ ಮತ್ತು ಸ್ವರೂಪಗಳಲ್ಲಿ ಬದಲಾವಣೆಯನ್ನು ಕಂಡುಕೊಂಡಿದೆ. ‘ಖಡ್ಗವಾಗಲಿ ಕಾವ್ಯ’ ಎಂಬ ಘೋಷವಾಕ್ಯದ ಮೂಲಕವಾಗಿ ಬಂಡಾಯ ಸಾಹಿತ್ಯವು ಸಾಮಾಜಿಕ ಅಸಮಾನತೆಯನ್ನು ವಿರೋಧಿಸಿ ಸಮಸಮಾಜದ ಕನಸ್ಸೊತ್ತು ಮುನ್ನಡೆಯಿತು. ಇಂತಹ ಬಂಡಾಯ ಸಾಹಿತ್ಯ ಪರಂಪರೆಗೆ ಕನ್ನಡದ ಹಲವಾರು ವಿಚಾರವಾದಿಗಳು ಹೆಗಲುಕೊಟ್ಟು ದುಡಿದಿದ್ದಾರೆ. ಅಂತಹ ವಿಚಾರವಾದಿಗಳಲ್ಲಿ ಅಲ್ಲಮಪ್ರಭು ಬೆಟ್ಟದೂರು ಅವರು ಒಬ್ಬರು.

ಶ್ರೀಯುತ ಅಲ್ಲಮಪ್ರಭು ಬೆಟ್ಟದೂರು ಅವರು ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಬೆಟ್ಟದೂರು ಎಂಬ ಗ್ರಾಮದಲ್ಲಿ ಶ್ರೀ ಚನ್ನಬಸವಪ್ಪ ಶ್ರೀಮತಿ ಅಮರಮ್ಮ ಇವರ ಮಗನಾಗಿ ದಿನಾಂಕ: 30 ಜುಲೈ 1951 ರಂದು ಜನಿಸಿದರು. ಶ್ರೀಯುತ ಅಲ್ಲಮಪ್ರಭು ಬೆಟ್ಟದೂರು ಅವರ ಕೌಟುಂಬಿಕ ಹಿನ್ನೆಲೆಯನ್ನು ಗಮನಿಸಿದರೆ, ಇವರದು ಸಾಮಾಜಿಕ ಹೋರಾಟದಿಂದ ಬಂದ ಕುಟುಂಬವಾಗಿದೆ. ಶ್ರೀಯುತರ ತಂದೆಯವರಾದ ಶ್ರೀ ಚನ್ನಬಸವಪ್ಪನವರು ರೈತ ಹೋರಾಟಗಾರರು ಹಾಗೂ ಚಿಂತಕರಾಗಿದ್ದು, ವಚನ ಸಾಹಿತ್ಯ ಹಾಗೂ ಶರಣ ಚಳವಳಿಯ ಬಗೆಗೆ ವಿಶೇಷವಾದ ಆಸಕ್ತಿಯನ್ನು ಮೈಗೂಡಿಸಿಕೊಂಡಿದ್ದರು. ಶರಣರ ವಿಚಾರಗಳನ್ನು ಕುರಿತಂತೆ ‘ಸಕಲ ಜೀವ ಪ್ರೇಮ’, ‘ಸಲ್ಲಲಿತ ಸನ್ಮಾರ್ಗ’ ಎಂಬ ವೈಚಾರಿಕ ಕೃತಿಗಳನ್ನು ರಚಿಸಿದ್ದರು. ಈ ಸಲ್ಲಲಿತ ಸನ್ಮಾರ್ಗ ಎಂಬ ಕೃತಿಯೊಳಗೆ ಶರಣರ ಚಳವಳಿಯನ್ನು ‘ವಚನ ಧರ್ಮ’ ಎಂದು ಕರೆಯುವ ವಾಡಿಕೆಯನ್ನು ವಿರೋಧಿಸಿ, ವಚನ ಮಾರ್ಗ ಅಥವಾ ಶರಣ ಮಾರ್ಗ ಎಂದು ಪ್ರತಿಪಾದಿಸಿದ್ದಾರೆ. ಇವರು ರಚಿಸಿರುವ ಈ ಕೃತಿಗಳಿಗೆ ಹಲವಾರು ಪ್ರಶಸ್ತಿ ಹಾಗೂ ಗೌರವ ಪುರಸ್ಕಾರಗಳು ಕೂಡ ಲಭಿಸಿವೆ. ಹಾಗೆಯೇ ಶ್ರೀಯುತರ ಚಿಕ್ಕಪ್ಪನವರಾದ ಶ್ರೀ ಶಂಕರೆಗೌಡರು ನಂದಾಲಾಲ್ ಬಸು ಎಂಬ ಹೆಸರಾಂತ ಚಿತ್ರಕಲಾವಿದರ ಶಿಷ್ಯರಾಗಿ ಚಿತ್ರಕಲೆಯನ್ನು ಕರಗತಮಾಡಿಕೊಂಡಿದ್ದರು. ನಂತರದಲ್ಲಿ ಗಾಂಧೀಜಿಯವರು ತಮ್ಮ ಕೊನೆಯ ದಿನಗಳನ್ನು ಕಳೆಯುವ ಸಂದರ್ಭದಲ್ಲಿ ಅವರ ಜೊತೆಗಿದ್ದು, ಅವರ ಜೀವನ ಕುರಿತ ಭಿತ್ತಿಚಿತ್ರಗಳನ್ನು ರಚಿಸಿದ್ದವರು. ಹಾಗೆಯೇ ಇವರು ಲಾಲ್ ಬಹಾದ್ದೂರ್ ಶಾಸ್ತ್ರಿಗಳಿಗೆ ಅತ್ಯಂತ ಪ್ರಿಯವಾದವರು. ಇಷ್ಟೊಂದು ಹೆಸರು ಮಾಡಿದ್ದರು ಸಹ ಕಲಾಲೋಕದಿಂದ ವಿಮುಖರಾಗಿ ಕೃಷಿ ಕಾಯಕದಲ್ಲಿ ತಲ್ಲಿನರಾಗಿ ಬಸವ ಮಾರ್ಗದಲ್ಲಿ ‘ಕಾಯಕವೇ ಕೈಲಾಸ’ವೆಂದು ನಡೆದರು. ಇವರೆಲ್ಲರ ಪ್ರೇರಣೆ ಮತ್ತು ಪ್ರಭಾವಗಳು ಶ್ರೀಯುತ ಅಲ್ಲಮಪ್ರಭು ಅವರ ಮೇಲಾಗಿದ್ದವು. ಹೀಗಾಗಿ ಕಾಯಕ ಮಾರ್ಗ, ಹೋರಾಟ ಮಾರ್ಗಗಳು ಬಾಲ್ಯದ ದಿನಗಳಿಂದಲೂ ಇವರ ರಕ್ತದೊಳಗೆ ಕರಗತವಾಗಿದ್ದವು. ಬಾಲ್ಯದ ಸಂದರ್ಭದಲ್ಲಿ ತಮ್ಮ ಕುಟುಂಬದ ಹಿರಿಯರು ನಡುಗನ್ನಡದ ಪ್ರಭುಲಿಂಗಲೀಲೆ ಮತ್ತು ಕುಮಾರವ್ಯಾಸ ಭಾರತವನ್ನು ಹಾಡುತ್ತಿದ್ದರೆ, ಅವುಗಳನ್ನು ಓದುವ ಹವ್ಯಾಸವನ್ನು ಶ್ರೀಯುತ ಅಲ್ಲಮಪ್ರಭು ಬೆಟ್ಟದೂರು ಅವರು ಮೈಗೂಡಿಸಿಕೊಂಡಿದ್ದರು.

ಅಲ್ಲಮಪ್ರಭು ಬೆಟ್ಟದೂರು ಅವರು ವಿದ್ಯಾರ್ಥಿ ದೆಸೆಯಿಂದಲೂ ಹೋರಾಟದ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದರು. ಹೀಗಾಗಿ ಬಂಡಾಯ ಸಾಹಿತ್ಯ ಪ್ರಕಾರದ ಅಡಿಯಲ್ಲಿ ತಮ್ಮ ದನಿಯನ್ನು ಎತ್ತಿಹಿಡಿದರು. ಧಾರವಾಡದಲ್ಲಿ ಪದವಿ ಶಿಕ್ಷಣವನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಶ್ರೀಯುತ ಚಂಪಾ ಅವರ ಪ್ರೇರಣೆಗೊಳಗಾಗಿ ಜೆ.ಪಿ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆಗ ಚಂಪಾ ಅವರು ಜೆ.ಪಿ ಚಳುವಳಿಯ ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದರೆ, ಅಲ್ಲಮಪ್ರಭು ಅವರು ರಾಯಚೂರು ಭಾಗದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಸಂಚಾಲಕರಾಗಿ ಚಳವಳಿಯನ್ನು ಮುನ್ನಡೆಸಿದರು. ಹಾಗೆಯೇ 1979 ರ ಅವಧಿಯಿಂದಲೂ ಬಂಡಾಯ ಸಾಹಿತ್ಯಕ್ಕೆ ಬೆನ್ನೆಲುಬಾಗಿ ನಿಂತ ಶ್ರೀಯುತರು ಹಲವಾರು ಜನಪರ ಮತ್ತು ಪ್ರಗತಿಪರ ಹೋರಾಟಗಳಲ್ಲಿ ತಮ್ಮ ಸಹಭಾಗಿತ್ವವನ್ನು ವ್ಯಕ್ತಪಡಿಸುತ್ತ ಬಂದಿದ್ದಾರೆ. ಇವರ ಪ್ರಮುಖ ಹೋರಾಟಗಳೆಂದರೆ, ‘ಕುದುರೆ ಮೋತಿ ಹೋರಾಟ’, ‘ಗೋಕಾಕ ಚಳವಳಿ’, ‘ಹೈದ್ರಾಬಾದ್ ಕರ್ನಾಟಕದ 371 ಜೆ’ ವಿಧಿಯ ಜಾರಿಗಾಗಿ ಹೋರಾಟ, ‘ಪ್ರತ್ಯೇಕ ಕೊಪ್ಪಳ ಜಿಲ್ಲಾ ಹೋರಾಟ’ ಹೀಗೆ ಹಲವಾರು ಜನಪರವಾದ ಚಳವಳಿಗಳ ಮೂಲಕವಾಗಿ ಸಮಸಮಾಜದ ಕನಸ್ಸೊತ್ತು ಮುನ್ನಡೆಯುತ್ತಿದ್ದಾರೆ. ಇವರ ಹೋರಾಟಗಳಲ್ಲಿ ‘ಕುದುರಿ ಮೋತಿ ಪ್ರಕರಣ’ವು ಅತ್ಯಂತ ಮಹತ್ವದ ಹೋರಾಟವಾಗಿದೆ. 11 ಜೂನ್ 1985 ರಲ್ಲಿ ಮಠಾಧೀಶನೊಬ್ಬ ತಳಸಮುದಾಯದ ಪಾರ್ವತಮ್ಮ ಮತ್ತು ಮುಸ್ಲಿಂ ಸಮುದಾಯದ ಹುಸೇನ್‍ಬಿ ಎಂಬುವವರನ್ನು ಅಪಮಾನಿಸಿ, ಬೆತ್ತಲಗೊಳಿಸಿ ಊರಿನ ತುಂಬ ಮೆರವಣಿಗೆ ಮಾಡಿಸಿದ್ದ. ಈ ಪ್ರಕರಣದ ಕುರಿತು ಸಮಗ್ರವಾದ ಮಾಹಿತಿಯನ್ನು ಕಲೆಹಾಕಿ, ಇದರ ವಿರುದ್ಧ ಹೋರಾಟವನ್ನು ಮಾಡಿದ ಕೀರ್ತಿಯು ಶ್ರೀಯುತರಿಗೆ ಸಲ್ಲುತ್ತದೆ. ಇವರು ಈ ಪ್ರಕರಣವನ್ನು ಗಂಭೀರವಾಗಿ ಕೈಗೆತ್ತಿಕೊಳ್ಳದಿದ್ದರೆ ಈ ಪ್ರಕರಣವನ್ನು ಮುಚ್ಚಿಹಾಕುವ ತಂತ್ರಗಳು ನಡೆದಿದ್ದವು. ಆದರೆ ಇಲ್ಲಿ ಅನ್ಯಾಯಕ್ಕೊಳಗಾದ ದಮನಿತ ಮತ್ತು ಅಸಹಾಯಕ ಸಮುದಾಯಗಳ ದನಿಯಾಗಿ ನಿಂತು ಹೋರಾಟ ಮಾಡಿದರು. ಇದರಿಂದ ಮೂಲಭೂತವಾದಿಗಳು ಹಾಗೂ ಉನ್ನತ ವರ್ಗದವರ ವಿರೋಧಕ್ಕೂ ಗುರಿಯಾಗಿ, ಮಠಾಧೀಶನ ಅನುಯಾಯಿಗಳಿಂದ ಹಲ್ಲೆಗಳು ಕೂಡ ಇವರ ಮೇಲೆ ನಡೆದವು. ಸಾಕಷ್ಟು ಪ್ರಾಣ ಬೆದರಿಕೆಗಳು ಕೇಳಿಬಂದವು. ಆದರೆ ಇದಾವುದನ್ನು ಲೆಕ್ಕಿಸದೆ ಜನಪರವಾದ ನೆಲೆಯಲ್ಲಿ ತಮ್ಮ ಹೋರಾಟವನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಇಂದಿಗೂ ತಮ್ಮ ಗುರುಗಳಾದ ಎಂ.ಎಂ ಕಲುಬುರ್ಗಿ, ಚಂಪಾ ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುನ್ನಡೆಯುತ್ತಿದ್ದಾರೆ.

ಶ್ರೀಯುತ ಅಲ್ಲಮಪ್ರಭು ಬೆಟ್ಟದೂರು ಅವರು ಕೇವಲ ಹೋರಾಟಗಾರರು ಮಾತ್ರವಲ್ಲದೆ ಹೆಸರಾಂತ ಬಂಡಾಯ ಸಾಹಿತಿಗಳು ಹೌದು. ಸಾಮಾಜಿಕ ಅಸಮಾನತೆ, ಅಸ್ಪøಶ್ಯತೆ, ಕೋಮುವಾದ, ಜಾತಿವಾದದ ವಿರುದ್ಧವಾಗಿ ತಮ್ಮ ದನಿಯನ್ನು ಎತ್ತುವ ಮೂಲಕ ಸಮಸಮಾಜ ಮತ್ತು ಶಾಂತಿಯುತ ಸಮಾಜದ ಕನಸು ಕಂಡವರು. ಸುಮಾರು 80 ರ ದಶಕದಲ್ಲಿ ಭಾರತದ ರಾಜಕೀಯದಲ್ಲಿ ಉಂಟಾದ ಅರಾಜಕತೆಯ ವಿರುದ್ಧ ಬಂಡಾಯದ ನೆಲೆಯಲ್ಲಿ ಜೆ.ಪಿ ಚಳವಳಿಗೆ ಹೆಗಲು ಕೊಟ್ಟು ನಿಂತವರು. ಇವರ ಸಾಹಿತ್ಯಿಕ ಬರಹಗಳಲ್ಲೂ ಇದೇ ಬಂಡಾಯದ ದನಿ ಪ್ರಮುಖವಾಗಿ ಎದ್ದು ಕಾಣುತ್ತದೆ. ಹಾಗೆಯೇ ಕೋಮುವಾದವನ್ನು ಸೃಷ್ಟಿಸುತ್ತಿರುವ ಬಿಜೆಪಿ ಹಾಗೂ ಆರ್.ಎಸ್.ಎಸ್ ಸಿದ್ಧಾಂತಗಳನ್ನು ವಿರೋಧಿಸುವ ನೆಲೆಯಲ್ಲಿ 1980ರ ಸುಮಾರಿನಲ್ಲಿಯೇ ಬಂಡಾಯದ ಕಳಹಳೆಯನ್ನು ಮೊಳಗಿಸಿದ ಕೀರ್ತಿಯು ಶ್ರೀಯುತರಿಗೆ ಸಲ್ಲುತ್ತದೆ. ಅಂದು ವಾಜಪೇಯಿಯವರ ಅಧ್ಯಕ್ಷತೆಯಲ್ಲಿ ಸಿದ್ಧಗೊಂಡ ಬಿಜೆಪಿಯ ಸಂಘಪರಿವಾರ ನೀತಿಯನ್ನು ಅನಾವರಣಗೊಳಿಸುವ ಇವರ ಕವಿತೆಯೊಂದು ಹೀಗಿದೆ;

ವಾಜಪೇಯ ಭಾಜಪೇಯ
ಹೊಚ್ಚ ಹೊಸ ಪೇಯ
ಕುಡಿಯಿರಯ್ಯ, ಕುಡಿಯದಿದ್ದರೆ
ಮೂಗ ಹಿಡಿದು ಕುಡಿಸಲಾಗುವುದು
ಕೇಳಿರಯ್ಯ, ಕೇಳ್ ಈರಯ್ಯ…

ಎಂದು ಗುಡುಗುವ ಅಲ್ಲಮಪ್ರಭು ಅವರು, ಅಂದಿನ ಬಿಜೆಪಿ ಮತ್ತು ಆರ್.ಎಸ್.ಎಸ್ ಮೂಲಭೂತವಾದಿ ಧೋರಣೆಗಳನ್ನು ವಿಡಂಬಿಸುವ ಇವರ ಮತ್ತೊಂದು ಕವಿತೆ ಹೀಗಿದೆ;

ಕುಂಕುಮದ ಕಲಿಗಳು ದೇಶವಾಳುವರು ಕೇಳಿರಣ್ಣ
ತುಪ್ಪದ ತಲೆಗಳು ರಾಜ್ಯವಾಳುವರು ಕೇಳಿರಣ್ಣ
ಹತ್ತು ವರ್ಷದಾಗ ಮೀನು ಬೀಳುತಾವ ತಿಳಿಯಿರಣ್ಣ

ಎಂಬ ಕವಿತೆಯನ್ನು ಹಿಂದೆ ಶರಣರ ವಚನಗಳ ಆಶಯಗಳನ್ನು ಸಾರುವ ಜಂಗಮರ ಧಾಟಿಯಲ್ಲಿ ವ್ಯಕ್ತಪಡಿಸಿದ್ದರು. ಅಂದರೆ ಸುಮಾರು 80 ರ ದಶಕದಲ್ಲಿ ಸಾರಿದ ಇವರ ಕವಿತೆಯ ಆಶಯವು ಇಂದಿಗೆ ಸತ್ಯವಾಗಿದೆ. ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬಂದರೆ ಏನೆಲ್ಲ ಅನಾಹುತಗಳಾಗಬಹುದು ಎಂಬುದನ್ನು ಅಂದೇ ಗ್ರಹಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ತರುವಾಯದಲ್ಲಿ ಕೋಮುವಾದ, ಭಯೋತ್ಪಾದನೆ, ವಿಚಾರವಾದಿಗಳ ಹತ್ಯೇ, ಅತ್ಯಾಚಾರದಂತಹ ಹೇಯ್ಯ ಕೃತ್ಯಗಳು ಸಹಜ ಕೃತ್ಯಗಳಂತೆ ನಡೆಯುತ್ತಿವೆ. ಸರ್ವಮಾನವರನ್ನು ಸಮಾನವಾಗಿ ಕಾಣುವ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬ ಘಂಟಾಘೋಷ ವಾಕ್ಯಗಳು ಎದೆಗಾರಿಕೆಯಿಂದ ಹೊರಬರುತ್ತಿವೆ. ಅಷ್ಟೇ ಅಲ್ಲದೆ ಸಂವಿಧಾನವನ್ನು ಸುಡುವುದರ ಮೂಲಕ ನಾವು ಸಂವಿಧಾನ ವಿರೋಧಿಗಳು ಎಂಬುದನ್ನು ಸಮರ್ಥಿಸಿಕೊಳ್ಳುವ ಪುಂಡಾಟಿಕೆಯನ್ನು ಬಿಜೆಪಿ ಮತ್ತದರ ಸಂಘಪರಿವಾರವು ಪ್ರದರ್ಶಿಸುತ್ತಿದೆ. ಆದ್ದರಿಂದ ಶ್ರೀಯುತ ಅಲ್ಲಮಪ್ರಭು ಅವರು ಅಂದು ನುಡಿದ ಕವಿವಾಣಿಯನ್ನು ಇದೊಂದು ಭವಿಷ್ಯವಾಣಿ ಎಂದರೆ ತಪ್ಪಾಗಲಾರದು. ಹೀಗೆ ಮೂಲಭೂತವಾದಿಗಳು ಮತ್ತು ಸನಾತನವಾದಿಗಳ ವಿರೋಧವನ್ನು ಕಟ್ಟಿಕೊಂಡೆ ಬಂಡಾಯ ಸಾಹಿತ್ಯ ಮತ್ತು ಜನಪರವಾದ ಚಳವಳಿಗಳನ್ನು ಮುಂದುವರೆಸಿಕೊಂಡು ಬಂದವರು. ಇವರ ಪ್ರಮುಖ ಕವನ ಸಂಕಲನಗಳೆಂದರೆ, ‘ಇದು ನನ್ನ ಭಾರತ’, ಕುದುರಿ ಮೋತಿ ಮತ್ತು ನೀಲಗಿರಿ’, ‘ಕೆಡಹಬಲ್ಲರು ಅವರು ಕಟ್ಟಬಲ್ಲೆವು ನಾವು’ ಇವು ಅವರ ಕವನ ಸಂಕಲನಗಳು. ‘ಗುಲಗಂಜಿ’ ಎಂಬ ಚುಟುಕು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಇದರ ಜೊತೆಯಲ್ಲಿ ‘ತಳಮಳ’ ಎಂಬ ಪತ್ರಿಕೆಯಲ್ಲಿ ‘ಪ್ರಚಲಿತ’ ಎಂಬ ಅಂಕಣವನ್ನು ಬರೆದು, ಈ ಅಂಕಣಗಳನ್ನು ‘ವರ್ತಮಾನ’ ಎಂಬ ಕೃತಿಯ ಮೂಲಕ ಸಂಕಲಿಸಿದ್ದಾರೆ. ಇಷ್ಟೇ ಅಲ್ಲದೆ ಹಲವಾರು ಸಂಪಾದನ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೀರ್ತಿಗೆ ಶ್ರೀಯುತರು ಪಾತ್ರರಾಗಿರುತ್ತಾರೆ. ಇವರ ಈ ಸಾಹಿತ್ಯ ಮತ್ತು ಹೋರಾಟದ ಹಾದಿಯನ್ನು ಗಮನಿಸಿ ಹಲವಾರು ಗೌರವ, ಪುರಸ್ಕಾರ ಮತ್ತು ಪ್ರಶಸ್ತಿಗಳು ಇವರ ಮುಡಿಗೇರಿವೆ. ಇವುಗಳಲ್ಲಿ ಕೆಲವು ಹೀಗಿವೆ; ಶಕ್ತಿನಗರದ ಕನ್ನಡ ಸಂಘದಿಂದ ‘ರಾಜ್ಯೋತ್ಸವ ಪ್ರಶಸ್ತಿ’, ಕರಾವಳಿಯ ಸಾಂಸ್ಕøತಿಕ ಸಂಘಟನೆಯಿಂದ ‘ಕರಾವಳಿ ಪ್ರಶಸ್ತಿ’, ಕೊಪ್ಪಳದ ಸ್ಥಳೀಯ ಸಂಘಟನೆಗಳಿಂದ ‘ಕನಕ ಪ್ರಶಸ್ತಿ’ಗಳು ಇವರ ಮುಡಿಗೇರಿವೆ. ಸಾಹಿತ್ಯದ ಮೇಲಿನ ವಿಶೇಷವಾದ ಕಾಳಜೀಯಿಂದಾಗಿ ಮತ್ತು ಸಾಹಿತಿಗಳಿಗೆ ಪ್ರೋತ್ಸಾಹಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕೆಂಬ ಕನಸ್ಸೊತ್ತು ಸಮಾನ ಮನಸ್ಕರೊಂದಿಗೆ ಸೇರಿ ‘ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ’ ಎಂಬ ಸಂಸ್ಥೆಯೊಂದನ್ನು ಕೊಪ್ಪಳ ಜಿಲ್ಲೆಯಲ್ಲಿ ಮೊದಲ ಭಾರಿಗೆ ಸ್ಥಾಪಿಸುವ ಮೂಲಕ ಸಾಹಿತ್ಯ ವಲಯಕ್ಕೆ ಮಾದರಿಯಾಗಿದ್ದಾರೆ. ಈ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಹಕಾರಿ ಸಂಘದ ಮೂಲಕ ಕೃತಿ ಪ್ರಕಟಣೆ ಮಾಡುವ ಲೇಖಕರಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಕೈಗೊಳ್ಳಲಾಗಿದೆ.

ಶ್ರೀಯುತ ಅಲ್ಲಮಪ್ರಭು ಬೆಟ್ಟದೂರು ಅವರು ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿ ಕೊಪ್ಪಳದಲ್ಲಿ ಸೇವೆಸಲ್ಲಿಸಿ, ಪ್ರಾಂಶುಪಾಲರಾಗಿ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಇದರ ಜೊತೆಯಲ್ಲಿ ಚಂಪಾ ಅವರು ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ದ ಅಧ್ಯಕ್ಷರಾದ ಸಂದರ್ಭದಲ್ಲಿ ಅಲ್ಲಮಪ್ರಭು ಅವರು ಸದಸ್ಯರಾಗಿ, ನಂತರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆಸಲ್ಲಿಸಿರುತ್ತಾರೆ. ಇಂದು ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಮೂಲತಃ ಕೃಷಿಮೂಲ ಪರಂಪರೆಯಿಂದ ಬಂದವರಾಗಿದ್ದು, ‘ಕಾಯಕವೇ ಕೈಲಾಸ’ ಎಂಬ ಶರಣ ಮಾರ್ಗದಲ್ಲಿ ಮುನ್ನಡೆದವರು. ಹೀಗಾಗಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಆಸಕ್ತಿಯಿಂದಾಗಿ ಕೊಪ್ಪಳದ ಸಮೀಪದಲ್ಲಿ ಜಮೀನು ಖರೀದಿಸಿ ವ್ಯವಸಾಯಯಲ್ಲಿ ತಲ್ಲಿನರಾಗಿದ್ದಾರೆ. ಇವರ ಏಕೈಕ ಪುತ್ರರಾದ ಪುಟ್ಟರಾಜ್ ಪಾಟೀಲ್ ಅವರು ಕೂಡ ಸಾವಯವ ಕೃಷಿಯಲ್ಲಿ ತಲ್ಲಿನರಾಗಿದ್ದಾರೆ. ಪುಟ್ಟರಾಜ್ ಅವರು ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಜನಿಸಿದ ಕಾರಣದಿಂದಾಗಿ, ಅದೇ ಚಳವಳಿಯಲ್ಲಿ ತಲ್ಲಿನರಾಗಿದ್ದ ಅಲ್ಲಮಪ್ರಭು ಅವರು ತಮ್ಮ ಮಗನಿಗೆ ಗೋಕಾಕ್ ಚಳವಳಿಯ ಪ್ರಮುಖ ರುವಾರಿಗಳಾದ ಪಾಟೀಲ್ ಪುಟ್ಟಪ್ಪ, ರಾಜ್‍ಕುಮಾರ್ ಹಾಗೂ ಚಂದ್ರಶೇಖರ್ ಪಾಟೀಲ್ ಅವರ ಹೆಸರುಗಳನ್ನು ಸಂಯೋಜಿಸಿ ‘ಪುಟ್ಟರಾಜ್ ಪಾಟೀಲ್’ ಎಂದು ನಾಮಕರಣ ಮಾಡಿದ್ದಾರೆ. ಇದು ಶ್ರೀಯುತರು ತಮ್ಮ ಗುರುಪರಂಪರೆ ಮತ್ತು ಹೋರಾಟ ಮಾರ್ಗದೊಂದಿಗೆ ಇವರಿಗಿರುವ ನಂಟನ್ನು ಎತ್ತಿಹಿಡಿಯುತ್ತದೆ. ಇಂದು ಶ್ರೀಯುತ ಅಲ್ಲಮಪ್ರಭು ಬೆಟ್ಟದೂರು ಅವರು ತಮ್ಮ ಶ್ರೀಮತಿ ಮಂಜುಳಾ, ಮಗ ಪುಟ್ಟರಾಜ್ ಪಾಟೀಲ್ ಹಾಗೂ ಮೊಮ್ಮಕ್ಕಳೊಂದಿಗೆ ಸರಳವಾದ ಜೀವನ ನಡೆಸುತ್ತಿದ್ದಾರೆ. ಇದರ ಜೊತೆಗೆ ಸಮಾಜಿಕ ಕಾಳಜಿಯೊತ್ತು ಹೋರಾಟ ಹಾಗೂ ವೈಚಾರಿಕ ಚಿಂತನೆಯ ಬೀಜಗಳನ್ನು ನಾಡಿಗೆ ಬಿತ್ತರಿಸುತ್ತಿದ್ದಾರೆ. ಇವರ ಈ ಬದುಕು ಮತ್ತು ಹೋರಾಟ ಯಶಸ್ವಿನೆಡೆಗೆ ಸಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

Published

on

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.

ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.

ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.

ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.

ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.

ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.

ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.

ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending