Connect with us

ಭಾವ ಭೈರಾಗಿ

ಸ್ಮರಣೆ | ‘ವೈಣಿಕ‌ ಶಿಖಾಮಣಿ’ ವೀಣೆ ಶೇಷಣ್ಣ

Published

on

ವಿದ್ಯೆ ಸಾಧಕನ ಸೊತ್ತೆ, ಹೊರತು ಸೋಮಾರಿಗಳ ಸ್ವತ್ತಲ್ಲ. ಎಂಬ ದಿವ್ಯ ವಾಣಿಯ ಮೂಲಕ ಸಾಮಾನ್ಯರೂ ಕೂಡಾ ನಿರಂತರವಾದ ಅಭ್ಯಾಸದಿಂದ ಏನಾದರೂ ಸಾಧಿಸಬಹುದು ಎಂಬುದನ್ನು ಸಾರಿದವರು ನಮ್ಮ ವೀಣೆ ಶೇಷಣ್ಣನವರು.

‘ವೀಣೆ’, ಇದರ ಇನ್ನೊಂದು ಅನ್ವರ್ಥನಾಮವೇ ಶೇಷಣ್ಣನವರು. ಮೈಸೂರು ಬಾನಿಯ ಪ್ರಮುಖ ಪ್ರವರ್ತಕರಾದ ಶೇಷಣ್ಣನವರು ಆದಪ್ಪಯ್ಯನವರ ವಂಶದ ಇಪ್ಪತ್ತನಾಲ್ಕನೇ ತಲೆ. ಇವರ ತಂದೆ ಭಕ್ಷಿ ಚಿಕ್ಕರಾಮಪ್ಪನವರು ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸರು. 1852ರಲ್ಲಿ ಜನಿಸಿದ ಶೇಷಣ್ಣನವರು ಏಳು ವರ್ಷದ ಹುಡುಗನಾಗಿದ್ದಾಗಲೇ ಆಸ್ಥಾನದಲ್ಲಿ ಹಾಡಿ ಮಹಾರಾಜರಿಂದ ಕಂಠೀಹಾರವನ್ನು ಪಡೆದ ಬಾಲಪ್ರತಿಭೆ. ಎಳೆಯವಯಸ್ಸಿನಿಂದಲೇ ತಂದೆಯವರಿಂದ ಶಿಕ್ಷಣ ಪಡೆದರೂ ಬಾಲ್ಯದಲ್ಲೇ ತೀರ್ಥರೂಪುರವನ್ನು ಕಳೆದುಕೊಂಡಿದ್ದರಿಂದ ದೊಡ್ಡ ಶೇಷಣ್ಣನವರಲ್ಲಿ ವೀಣಾಭ್ಯಾಸ ಮುಂದುವರಿಸಿದರು. ಪ್ರತಿದಿನ ನಾಲ್ಕಾರು ಪಲ್ಲವಿಗಳು, ವಿವಿಧ ಬಗೆಯ ತಾನಗಳನ್ನು ಎಂಟು ಗಂಟೆಗಳ ಕಾಲ ಸಾಧನೆ ಮಾಡುತ್ತಿದ್ದ ಶೇಷಣ್ಣನವರ ಶ್ರದ್ಧೆ, ಏಕಾಗ್ರತೆ ಹಾಗೂ ತಲ್ಲೀನತೆಗಳು ಅಪೂರ್ವವಾದುವು. ಅವರ ಸಾಧನೆಗೆ ಅಕ್ಕ ವೆಂಕಮ್ಮನವರೇ ಪ್ರೇರಕ ಶಕ್ತಿ. ಸಾಧನೆ-ಕೇಳ್ಮೆ ಹಾಗೂ ಪ್ರತಿಭೆಗಳಿಂದ ಶೇಷಣ್ಣನವರು ವೀಣೆಯ ಮೇಲೆ ಅಸಾಧ್ಯ ಪ್ರಭುತ್ವ, ಮಧುರ ನಾದ ಹಾಗೂ ಎಣೆ ಇಲ್ಲದ ಮನೋಧರ್ಮ ಗಳಿಸಿಕೊಂಡರು. ಜೊತೆಗೆ ಮೈಸೂರು ಸದಾಶಿವರಾಯರಲ್ಲಿ ಗಾಯನದ ಅಭ್ಯಾಸವನ್ನೂ ಮುಂದುವರೆಸಿದರು. ರಾಯರು ತ್ಯಾಗರಾಜರ ಪ್ರಶಿಷ್ಯರು. ಹೀಗಾಗಿ, ಶೇಷಣ್ಣನವರು ತ್ಯಾಗರಾಜರ ನೇರ ಶಿಷ್ಯಪರಂಪರೆಗೆ ಸೇರುತ್ತಾರೆ. ಗಾಯನ ಹಾಗೂ ವೀಣಾಭ್ಯಾಸ ಎರಡರಲ್ಲೂ ವೀಣೆ ಸುಬ್ಬಣ್ಣನವರು ಶೇಷಣ್ಣನವರ ಸಹಪಾಠಿಗಳು.

ಶೇಷಣ್ಣನವರು ಪ್ರವರ್ಧಮಾನಕ್ಕೆ ಬರುವ ಕಾಲದಲ್ಲಿ ಮೈಸೂರನ್ನು ಚಾಮರಾಜ ಒಡೆಯರು ಆಳುತ್ತಿದ್ದರು. ಅವರು ಶೇಷಣ್ಣನವರನ್ನು ಆಸ್ಥಾನ ವಿದ್ವಾಂಸರಾಗಿ ನೇಮಿಸಿದರು. ಪ್ರಭು ಚಾಮರಾಜ ಒಡೆಯರ ಪಿಟೀಲು, ಸುಬ್ಬಣ್ಣನವರ ಗಾಯನ ಹಾಗೂ ಶೇಷಣ್ಣನವರ ವೀಣೆ ಒಂದು ಅಪರೂಪ ಮೇಳ. ಪ್ರಭು ಆಸ್ಥಾನಿಕರ ಸಂಬಂಧವನ್ನು ಮೀರಿದ ಸ್ನೇಹ, ಆತ್ಮೀಯತೆಗಳು ಮಹಾರಾಜರು ಮತ್ತು ಶೇಷಣ್ಣನವರಲ್ಲಿ ಬೆಳೆಯಿತು.

ಕನ್ಯಾಕುಮಾರಿಯಿಂದ ದೆಹಲಿಯವರೆಗೆ ವಿವಿಧ ಪ್ರಾಂತ್ಯ, ಅರಮನೆ, ಉತ್ಸವಗಳಲ್ಲಿ ಶೇಷಣ್ಣನವರ ವಿನಿಕೆ ನಡೆಯುತ್ತಿದ್ದವು. ಅವರ ಕಚೇರಿಯನ್ನು ಏರ್ಪಡಿಸುವುದು ಪ್ರತಿಷ್ಠೆ-ಗೌರವದ ಸಂಕೇತವಾಗಿತ್ತು. ರಾಮನಾಥಪುರಂ, ಅಂದಿನ ಪರಿಚಿತ ಸಂಸ್ಥಾನವಲ್ಲದೆ, ಒಂದು ಪ್ರಮುಖ ಸಂಗೀತ ಕೇಂದ್ರವೂ ಆಗಿತ್ತು. ಸ್ವತಃ ಮಹಾರಾಜರೇ ಸಂಗೀತಗಾರರಾಗಿದ್ದುದರಿಂದ ಸಂಗೀತ ಕಲೆಗೆ ವ್ಯಾಪಕ ಪ್ರೋತ್ಸಾಹ ಕೊಡುತ್ತಿದ್ದರು. ಅಂದಿನ ಮಹಾರಾಜ ಭಾಸ್ಕರ ಸೇತುಪತಿ ಅವರು ನವರಾತ್ರಿಯ ವಿಶೇಷ ದರ್ಬಾರಿನಲ್ಲಿ ಒಮ್ಮೆ ಶೇಷಣ್ಣನವರ ಕಚೇರಿಯನ್ನುಏರ್ಪಡಿಸಿದರು. ಶೇಷಣ್ಣನವರ ವಿನಿಕೆಗೆ ರಾಜರ ಹೃದಯ ಮಿಡಿಯಿತು. ಮರುದಿನವೂ ಅವರದೇ ವೀಣಾ ಕಚೇರಿ ಏರ್ಪಾಡಾಯಿತು. ಅಂದೂ ವೀಣೆಯ ದಿವ್ಯಾನುಭವದ, ಅಮೃತದ ಸವಿ. ಹೀಗೇ ನವರಾತ್ರಿಯ ಒಂಬತ್ತು ದಿನಗಳೂ ಶೇಷಣ್ಣನವರದೇ ವೀಣಾ ಕಚೇರಿ. ಅರಮನೆಯಲ್ಲೆಲ್ಲಾ ವೀಣಾ ಝೇಂಕಾರ. ಶೇಷಣ್ಣನವರಿಗೆ ಮಹಾರಾಜರು ಕನಕಾಭಿಷೇಕ ಮಾಡಿ ಆನೆಯ ಮೇಲೆ ಕೂಡಿಸಿ ಅಂಬಾರಿಯಲ್ಲಿ ಮೆರವಣಿಗೆ ಮಾಡಿಸಿದರು. ಅಲ್ಲಿಂದ ಮುಂದೆ ಶೇಷಣ್ಣನವರ ಕಚೇರಿ ರಾಮನಾಥಪುರಂ ಆಸ್ಥಾನದಲ್ಲಿ ಪ್ರತಿವರ್ಷವೂ ನಡೆಯತೊಡಗಿತು.

ಉತ್ತರ ಭಾರತದ ಬರೋಡಾ ಸಂಸ್ಥಾನವು ಸಂಗೀತ ಪ್ರೋತ್ಸಾಹಕ್ಕೂ ಸಂಗೀತಗಾರರ ಪೋಷಣೆಗೂ ಪ್ರಸಿದ್ಧವಾದುದು. ಮೈಸೂರು ಮತ್ತು ಬರೋಡಾ ಅರಮನೆಗಳ ಆಸ್ಥಾನಿಕರಲ್ಲಿ ಪರಸ್ಪರ ಮೈತ್ರಿ, ವಿನಿಮಯ, ಸನ್ಮಾನಗಳು ನಡೆಯುತ್ತಿದ್ದವು. ಶೇಷಣ್ಣನವರ ಖ್ಯಾತಿಯನ್ನು ಕೇಳಿದ ಬರೋಡ ಮಹಾರಾಜ ಸಯ್ಯಾಜೀರಾವ್‌ ಗಾಯಕವಾಡರು ‘ವೈಣಿಕ ಶಿಖಾಮಣಿ’ಯನ್ನು ತಮ್ಮ ಆಸ್ಥಾನಕ್ಕೆ ಆಹ್ವಾನಿಸಿದರು. ಏರ್ಪಾಡಾಗಿದ್ದ ಒಂದು ದಿನದ ಬದಲು ಮೂರು ದಿನ ಕಚೇರಿ ನಡೆಯಿತು. ಸರಸ್ವತಿಯೇ ಪುರುಷರೂಪದಲ್ಲಿ ಬಂದು ನುಡಿಸುತ್ತಿದ್ದಂತೆ ಭಾಸವಾಯಿತು. ಈ ಅಪೂರ್ವ ಅನುಭವದಿಂದ ಮಹಾರಾಜರು ಪ್ರೇರಿತರಾಗಿ ಮಹಾರಾಣಿಯವರು ಸ್ವತಃ ಉಪಯೋಗುಸುತ್ತಿದ್ದ, ಸುಂದರವಾದ ಮೇನಾವನ್ನು ಶೇಷಣ್ಣನವರಿಗೆ ನೀಡಿದರು. ಈ ಸುದ್ದಿ ಕ್ಷಿಪ್ರದಲ್ಲೇ ಮೈಸೂರು ಮುಟ್ಟಿತು. ತಮ್ಮ ಆಸ್ಥಾನಿಕರಿಗೆ ಬೇರೊಂದು ಸಂಸ್ಥಾನದಲ್ಲಿ ದೊರೆತ ಈ ಸನ್ಮಾನದಿಂದ ಮಹಾರಾಜರಿಗೆ ಸಂತೋಷ ಹೆಮ್ಮೆ ಆದುದು ಸಹಜವೇ. ದೊರೆಗಳ ಅಪ್ಪಣೆಯಂತೆ ಶೇಷಣ್ಣನವರನ್ನು ಆ ಮೇನೆಯಲ್ಲಿ ಕುಳ್ಳಿರಿಸಿ ಅರಮನೆಯ ಧ್ವಜಪತಾಕೆ, ರಾಜಲಾಂಛನ, ಜೋಡಿಸುತ್ತು ದಿಂಡುಹಾರಗಳ ಮರ್ಯಾದೆ ಸಹಿತ ಮೆರವಣಿಗೆ ಮಾಡಲು ಸಿದ್ಧತೆಗಳಾದವು. ಆದರೆ, ‘ಈ ಗೌರವವೆಲ್ಲಾ ಸರಸ್ವತಿಗೆ ಸಲ್ಲಬೇಕು, ತಮಗೆ ಅಲ್ಲ’ ಎಂದು ಭಾವಿಸಿದ ಶೇಷಣ್ಣನವರು ವೀಣೆಯನ್ನು ಪಲ್ಲಕ್ಕಿಯಲ್ಲಿಟ್ಟು ವಾಗ್ದೇವಿಗೆ ನಮಿಸಿದರು. ಮೇನಾದ ಮುಂದೆ ಬರಿಗಾಲಿನಲ್ಲಿ ಕೈಜೋಡಿಸಿ ನಡೆದರು. ಹೀಗೆ ಶೇಷಣ್ಣನವರು ‘ವೈಣಿಕ ಶಿಖಾಮಣಿ’ ಮಾತ್ರವಲ್ಲ “ಗುಣಶಿಖಾಮಣಿ”ಯೂ ಆಗಿ ಬೆಳಗಿದವರು.

ಶೇಷಣ್ಣನವರ ವೀಣಾವಾದನ ಕಚೇರಿಗಳು ಸಾಮಾನ್ಯವಾಗಿ ನಾಲ್ಕು ಗಂಟೆಗಳ ಅವಧಿಯವು. ಕೃತಿಗಳು ಕಡಿಮೆ. ಪ್ರಧಾನವಾಗಿ ರಾಗ, ಮಧ್ಯಮಕಾಲ ಮತ್ತು ಪಲ್ಲವಿಗಳನ್ನೇ ಆರಿಸಿಕೊಳ್ಳುತ್ತಿದ್ದರು. ಒಂದೇ ರಾಗವನ್ನು ಹತ್ತು ಸಲ ನುಡಿಸಿದರೂ ಪ್ರತಿಭಾರಿ ಆ ರಾಗಕ್ಕೆ ಹೊಸಬಣ್ಣ, ಹೊಸಾಕಾರ, ಹೊಸರುಚಿ. ಹೀಗಾಗಿ ರಾಗದ ಶಕ್ತಿಗಳನ್ನು ಅರಿತು ಹಂತಹಂತವಾಗಿ ರಾಗಪುಷ್ಪವನ್ನು ಅರಳಿಸಿ, ಸಂಗೀತದ ಕಂಪನ್ನು ಬೀರುತ್ತಿದ್ದರು. ಕಚೇರಿಯ ಕೊನೆಯಲ್ಲಿ ಜಾವಳಿ, ತಿಲ್ಲಾನಗಳ ಮೇಲೋಗರ. ಕರ್ಕಶತೆಗಳಿಲ್ಲದ ಮೃದುವಾದ ಮೀಟು. ನಾದ ಭಾವಕ್ಕೆ ಗಮನ ಕೊಡುತ್ತಿದ್ದರೇ ಹೊರತು ವಾದ್ಯ ತಂತ್ರಕ್ಕೆ ಅಲ್ಲ. ವೀಣೆಯು ಶೇಷಣ್ಣನವರಿಗೆ ಕೇವಲ ಒಂದು ವಾದ್ಯವಾಗಿರದೆ ಒಂದು ಉಪಾಸನೆಯಾಗಿತ್ತು. ‘ನಮ್ಮ ಶಕ್ತಿಗೆ ಒಳಪಟ್ಟು ನುಡಿಸುತ್ತೇವೆಯೇ ಹೊರತು ವೀಣೆಯ ಸಾಮರ್ಥ್ಯಕ್ಕೆ ತಕ್ಕಂತೆ ನುಡಿಸಲು ಸಾಧ್ಯವೇ?’ ಎಂಬ ಶೇಷಣ್ಣನವರ ಮಾತು ಕೇವಲ ಸೌಜನ್ಯದ್ದಲ್ಲ ಗಾಢ ಚಿಂತನೆಗೂ ಅರ್ಹವಾದ ಅಭಿಪ್ರಾಯ. ಯಾರು ಹೋಗಿ ಕೇಳಿದರೂ ವೀಣೆ ನುಡಿಸುತ್ತಿದ್ದ ಅವರ ಸ್ವಭಾವ ಆದರ್ಶಪ್ರಾಯವಾದುದು. ತಮ್ಮ ಕೊನೆಯ ದಿನಗಳಲ್ಲಿ ವೀಣೆ ನುಡಿಸಲು ಅಶಕ್ತರಾದಾಗ ‘ಸಾಯಲು ನನಗೆ ಅಂಜಿಕೆ ಇಲ್ಲ; ಆದರೆ, ವೀಣೆಯನ್ನು ಬಿಟ್ಟುಹೋಗಲು ನೋವಾಗುತ್ತದೆ’ ಎನ್ನುತ್ತಿದ್ದರು.

ಶೇಷಣ್ಣನವರು ಇಪ್ಪತ್ತನೆಯ ಶತಮಾನದ ಪ್ರಮುಖ ವಾಗ್ಗೇಯಕಾರರಲ್ಲಿ ಒಬ್ಬರು. ತಿರುಪತಿ ಶ್ರೀನಿವಾಸ, ಸರಸ್ವತೀ, ಲಕ್ಷ್ಮೀ, ಚಾಮುಂಡೇಶ್ವರಿ ಮುಂತಾದ ದೇವರುಗಳ ಮೇಲೆ ಶೇಷಣ್ಣನವರು ಕನ್ನಡ ಪದಗಳನ್ನು ರಚಿಸಿದ್ದಾರೆ. ಶೇಷ, ಶೇಷದಾಸ ಎಂಬ ಅಂಕಿತದಲ್ಲಿ ಬಹುತೇಕ ರಚನೆಗಳಿದ್ದರೂ ತಿಲ್ಲಾನಗಳನ್ನು ತಮ್ಮ ಪ್ರಭುಗಳ ಮೇಲೆ (ಚಾಮರಾಜ ಒಡೆಯರು ಮತ್ತು ಕೃಷ್ಣರಾಜ ಒಡೆಯರ) ನಾಮಾಂಕಿತ ಮಾಡಿದ್ದಾರೆ. ಹಿಂದುಸ್ತಾನಿ ಶೈಲಿಯಲ್ಲಿ ಒಂದು ಜಾವಡಿಯೂ ಉಂಟು. ಶೇಷಣ್ಣನವರ ಮನೋಧರ್ಮದ ಒಂದು ಝಳಕನ್ನು ಅವರ ಕೃತಿಗಳಲ್ಲಿ ಕಾಣಬಹುದು. ವಿಶೇಷವಾಗಿ ದಾಟುಸ್ವರ ಪ್ರಯೋಗಗಳು ಆಕರ್ಷಕವಾಗಿವೆ.

ಶೇಷಣ್ಣನವರು ಒಂದು ದೊಡ್ಡ ಶಿಷ್ಯವರ್ಗವನ್ನೇ ತರಬೇತುಗೊಳಿಸಿ ಮೈಸೂರು ವೀಣಾ ಪರಂಪರೆ ಅವ್ಯಾಹತವಾಗಿ ಮುಂದುವರಿಯುವಂತೆ ಮಾಡಿದ್ದಾರೆ. ಅವರಲ್ಲಿ ಪ್ರಮುಖರು ವೆಂಕಟಗಿರಿಯಪ್ಪ, ಶರ್ಮಾದೇವಿ ಸುಬ್ರಹ್ಮಣ್ಯ ಶಾಸ್ತ್ರೀ, ಭೈರವಿ ಲಕ್ಷ್ಮೀನಾರಾಯಣಪ್ಪ, ಚಿತ್ರಶಿಲ್ಪಿ ವೆಂಕಟಪ್ಪ, ವಿ. ನಾರಾಯಣ ಅಯ್ಯರ್‌, ತಿರುಮಲೆ ರಾಜಮ್ಮ, ಎಂ.ಎಸ್‌. ಭೀಮರಾವ್‌ ಹಾಗೂ ಶೇಷಣ್ಣನವರ ಅಣ್ಣನ ಮೊಮ್ಮಗ ಎ.ಎಸ್‌. ಚಂದ್ರಶೇಖರಯ್ಯ ಮತ್ತು ಮೊಮ್ಮಗ ವಿ.ಎನ್‌. ರಾವ್‌(ಸ್ವರಮೂರ್ತಿ). ಸುಬ್ಬಣ್ಣನವರೂ ಅವರಲ್ಲಿ ಕೆಲಕಾಲ ಕಲಿತದ್ದಲ್ಲದೆ, ಬಿಡಾರಂ ಕೃಷ್ಣಪ್ಪನವರೂ ಶಿಷ್ಯರಾಗಿಯೇ ವರ್ತಿಸಿದರು. ಮೈಸೂರು ಪ್ರಾಂತ್ಯದ ಬಹುಮಂದಿ ಕಲಾವಿದರು ಈ ತ್ರಿಮೂರ್ತಿಗಳಾದ ಶೇಷಣ್ಣ, ಸುಬ್ಬಣ್ಣ, ಕೃಷ್ಣಪ್ಪನವರ ಪರಂಪರೆಗೆ ಸೇರಿದವರೇ. ಹೀಗಾಗಿ ರಾಜ್ಯದ ಮುಂದಿನ ಬಹುತೇಕ ಹಿರಿಯ ವೈಣಿಕರುಗಳು ಶೇಷಣ್ಣನವರ ಶಿಷ್ಯ ಪರಂಪರೆಗೆ ಸೇರುತ್ತಾರೆ.

ಬರೋಡಾ ಆಸ್ಥಾನದಿಂದ ಮೌಲಾಭಕ್ಷ್‌ಎಂಬ ವಿದ್ವಾಂಸರು ಚಾಮರಾಜ ಒಡೆಯರ ಆಸ್ಥಾನಕ್ಕೆ ಆಗಮಿಸಿದರು. ಅವರ ಜಲತರಂಗ್‌ವಾದನ (ಹಿಂದುಸ್ತಾನಿ) ಅರಮನೆಯಲ್ಲಿ ನಡೆಯಿತು. ಆ ವಾದ್ಯದ ಕಿಣ ಕಿಣ ನಾದಕ್ಕೆ ಮಹಾರಾಜರು ಆಕರ್ಷಿತರಾದರು. ಇದರಿಂದ ಪ್ರೇರಿತರಾಗಿ ಶೇಷಣ್ಣನವರು ಆ ವಾದ್ಯವನ್ನು ಅತಿ ಕ್ಷಿಪ್ರದಲ್ಲೇ ಕರಗತ ಮಾಡಿಕೊಂಡರು. ಅಲ್ಲಿಂದ ಮುಂದೆ ವೀಣೆಯ ಜೊತೆ ಶೇಷಣ್ಣನವರ ಜಲತರಂಗ್‌ ಕಚೇರಿಗಳು ಸಹಾ ಎಲ್ಲ ಕಡೆ ನಡೆಯತೊಡಗಿದವು. ಕರ್ನಾಟಕ ಶಾಸ್ತ್ರೀಯ ಸಂಗೀತ ವೇದಿಕೆಯ ಮೇಲೆ ಜಲತರಂಗ ವಾದ್ಯಕ್ಕೆ ಒಂದು ಗೌರವಾನ್ವಿತ ಸ್ಥಾನ ತಂದುಕೊಟ್ಟವರು ಶೇಷಣ್ಣನವರೇ. ಇದಲ್ಲದೆ ಶೇಷಣ್ಣನವರು, ಪಿಟೀಲು, ಸ್ವರಬತ್‌, ಪಿಯಾನೋ ಮುಂತಾದ ವಾದ್ಯಗಳಲ್ಲೂ ಪ್ರಾವೀಣ್ಯತೆ ಪಡೆದಿದ್ದರು.

ಸುಪ್ರಸಿದ್ಧ ಥಿಯೊಸೊಫಿಸ್ಟರಾದ ಡಾ. ಕಸಿನ್ಸ್‌, ಎ.ಎಚ್‌. ಫಾಕ್ಸ್‌ ಸ್ಟ್ರಾಂಗ್ವೇಸ್‌, ಸರ್ ಈವಾನ್‌ ಮೆಕಾಂಜೆ ಮುಂತಾದವರು ಶೇಷಣ್ಣನವರ ವಿನಿಕೆ ತಮ್ಮ ಮೇಲೆ ಮಾಡಿದ ಪ್ರಭಾವವನ್ನು ದಾಖಲೆಗೊಳಿಸಿದ್ದಾರೆ. ‘ದಿ ಮ್ಯೂಸಿಕ್‌ ಆಫ್‌ ಒರಿಯೆಂಟ್‌ ಅಂಡ್‌ ಆಕ್ಸಿಡೆಂಟ್‌’ ಗ್ರಂಥದಲ್ಲಿ ಮಾರ್ಗರೇಟ್‌ ಕಸಿನ್ಸ್‌ರವರು ಶೇಷಣ್ಣನವರನ್ನು ‘ದಿ ಕಿಂಗ್ ಆಫ್ ವೀಣಾ ಪ್ಲೇಯರ್ಸ್’ ಎಂದು ಕರೆದಿದ್ದಾರೆ. ‘ಮ್ಯೂಸಿಕ್‌ ಆಫ್‌ ಹಿಂದೂಸ್ತಾನ್‌’ ಗ್ರಂಥದಲ್ಲಿ ಶೇಷಣ್ಣನವರ ಅಸಾಧ್ಯ ಪ್ರತಿಭೆ, ಎಣೆ ಇಲ್ಲದ ಮನೋಧರ್ಮಗಳನ್ನು ಕೊಂಡಾಡಿದ್ದಾರೆ. ದೇವುಡು, ಡಾ. ಡಿ.ವಿ. ಗುಂಡಪ್ಪ, ಡಾ. ರಾಳ್ಲಪಲ್ಲಿ ಅನಂತ ಕೃಷ್ಣಶರ್ಮ, ಡಾ. ವಿ.ಸೀತಾರಾಮಯ್ಯ, ತಿರುಮಲೆ ರಾಜಮ್ಮ, ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಪ್ರೊ.ಎ.ಎನ್‌. ಮೂರ್ತಿರಾವ್‌, ಸ್ವರಮೂರ್ತಿ ವಿ. ಎನ್‌. ರಾವ್‌ ಮುಂತಾದವರುಗಳು ಶೇಷಣ್ಣನವರ ಜೀವನ ಸಾಧನೆಗಳನ್ನು ಕುರಿತು ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ.

ಶೇಷಣ್ಣನವರ ಎಲ್ಲ ರಚನೆಗಳನ್ನು ಮೈಸೂರಿನ ಸಂಗೀತ ಕಲಾವರ್ಧಿನೀ ಸಭಾದವರು ಪ್ರಕಟಿಸಿದ್ದಾರೆ, ಅಲ್ಲದೆ, ಭವನುತ, ಶ್ರೀ ರಘುವರ, ರಘುನಾಯಕ ಮುಂತಾದ ಕೆಲ ಕೀರ್ತನೆಗಳಿಗೆ ಚಿಟ್ಟೇ ಸ್ವರವನ್ನೂ ಹೆಣೆದಿದ್ದಾರೆ. ಬ್ರಿಟಿಷ್‌ ಚಕ್ರವರ್ತಿ ಐದನೇ ಜಾರ್ಜ್‌ರವರು ದೆಹಲಿಯಲ್ಲಿ ಒಂದು ರಾಜಸಭೆ ನಡೆಸಿದರು. ಅಲ್ಲಿ ಸಂಗೀತ ಕಚೇರಿ ಮಾಡಿದ ದಕ್ಷಿಣ ಭಾರತದ ಏಕೈಕ ಕಲಾವಿದರು ಶೇಷಣ್ಣನವರು! ಅವರ ವಿನಿಕೆ ಪಾಶ್ಚಾತ್ಯ ದೊರೆಯ ಮೇಲೆ ಗಾಢ ಪ್ರಭಾವವನ್ನು ಬೀರಿತು. ಆ ನಾದ ಸವಿಯನ್ನು ಸದಾ ಹಸಿರಾಗಿ ಇಟ್ಟುಕೊಳ್ಳಲು ಶೇಷಣ್ಣನವರ ಒಂದು ಭಾವಚಿತ್ರವನ್ನು ಜಾರ್ಜ್ ದೊರೆ ತಮ್ಮೊಂದಿಗೆ ತೆಗೆದುಕೊಂಡು ಹೋಗಿ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಅಲಂಕರಿಸಿದರು.

1924ರಲ್ಲಿ ಬೆಳಗಾಂನಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆಯಿತು. ಮಹಾತ್ಮಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್‌ ಅಧಿವೇಶನವಿದು. ಆ ಸಂದರ್ಭದಲ್ಲಿ ವೀಣೆ ಶೇಷಣ್ಣನವರ ಸಂಗೀತವನ್ನು ತಲ್ಲೀನರಾಗಿ ಸವಿದ ಮಾಹಾತ್ಮರು ‘ಇದು ದೇವಗಾನ! ಇದನ್ನು ಕೇಳಿದ ನಾವೇ ಧನ್ಯರು!’ ಎಂದು ಉದ್ಗರಿಸಿದರು.

ತಂಜಾವೂರಿನ ಕೃಷ್ಣಸ್ವಾಮಿನಾಯಕರ ಮನೆಯಲ್ಲಿ ಒಂದು ಸಂಗೀತ ಗೋಷ್ಠಿ. ಕರ್ನಾಟಕ ಸಂಗೀತದ ಪ್ರಸಿದ್ಧ ವಿದ್ವಾಂಸರುಗಳಾದ ಮಹಾ ವೈದ್ಯನಾಥ ಅಯ್ಯರ್‌, ಶರಭ ಶಾಸ್ತ್ರಿ, ತಿರುಕ್ಕೋಡಿ ಕಾವಲ್‌ಕೃಷ್ಣಯ್ಯರ್‌, ವೀಣೆ ಶೇಷಣ್ಣ, ನಾರಾಯಣಸ್ವಾಮಪ್ಪ ಮುಂತಾದ ದಿಗ್ಗಜಗಳು ಸೇರಿದ್ದ ಅಪರೂಪ ಸಭೆ. ಈ ಹಿರಿಯರನ್ನು ಉದ್ದೇಶಿಸಿ ಕೃಷ್ಣಸ್ವಾಮಿ ನಾಯಕರು. “ತಾವೆಲ್ಲ ವಿದ್ವಾಂಸರುಗಳಿದ್ದೀರಿ! ತಮ್ಮಲ್ಲೇ ಶ್ರೇಷ್ಠರು ಯಾರು? ಎಂದು ತಾವುಗಳೇ ನಿರ್ಧರಿಸಬೇಕು. ತಾವುಗಳೇ ನಿರ್ಧರಿಸಿದ ಅಗ್ರರಲ್ಲಿ ಅಗ್ರಗಣ್ಯರಾದ ಕಲಾವಿದರಿಗೆ ಈ ಸೀಮೆ ಕಮಲದ ಉಂಗುರವನ್ನು ಪ್ರಧಾನ ಮಾಡಬೇಕು” ಎಂದು ಅರಿಕೆ ಮಾಡಿಕೊಂಡರು. ಕಚೇರಿ ಪ್ರಾರಂಭವಾಯಿತು. ಪೈಪೋಟಿಯಂತಿದ್ದ ವಿದ್ವತ್ಪೂರ್ಣ ಕಚೇರಿಗಳು! ಒಬ್ಬರನ್ನು ಮೀರಿಸಿದ ಪ್ರತಿಭೆ ಇನ್ನೊಬ್ಬರದು. ಪಾಂಡಿತ್ಯ, ಪ್ರತಿಭೆ, ಸೃಜನಶೀಲತೆಗಳು ಮುಪ್ಪರಿಗೊಂಡ ವಿದ್ವಾಂಸರುಗಳು!. ಅವರಲ್ಲಿ ಪ್ರಶಸ್ತಿಗೆ ಚುನಾಯಿಸುವುದು ತೀರಾ ಕಷ್ಟದ ಕೆಲಸವಾಗಿ ಕಂಡಿತು. ಆಗ, ಮಹಾವೈದ್ಯನಾಥ ಅಯ್ಯರ್‌ಅವರು ಎದ್ದುನಿಂತು. “ನಾವೆಲ್ಲಾ ಹಿರಿಯ ಕಲಾವಿದರೇ, ಪಾಂಡಿತ್ಯಪೂರ್ಣವಾಗಿ ಹಾಡಿ-ನುಡಿಸಿದ್ದೇವೆ. ಆದರೆ, ಒಬ್ಬ ವಿದ್ವಾಂಸರನ್ನು ಮಾತ್ರ ಯಾರೂ ಮೀರಿಸಲಾಗಲಿಲ್ಲ. ಆ ಅದ್ವಿತೀಯ ಕಲಾವಿದರೇ ವೀಣೆ ಶೇಷಣ್ಣನವರು! ಅವರ ನಾದ ಮಾಧುರ್ಯ, ಎಣೆ ಇಲ್ಲದ ಮನೋಧರ್ಮ, ಸುಖವಾದ ವಿನಿಕೆ. ಅದ್ಭುತವಾದುದು. ಆದ್ದರಿಂದ ಈ ಪ್ರಶಸ್ತಿ ಅವರಿಗೇ ಸಲ್ಲಬೇಕು” ಎಂದರು. ಈ ಅಭಿಪ್ರಾಯವನ್ನು ತಿರುಕ್ಕೋಡಿವಲ್‌ ಕೃಷ್ಣಯ್ಯರ್‌ ಅವರು ಅನುಮೋದಿಸಿ, ಶೇಷಣ್ಣನವರನ್ನು “ಪುರುಷ ಸರಸ್ವತಿ” ಎಂದು ಕರೆದರು. ಸಭೆ ಈ ಅಭಿಪ್ರಾಯವನ್ನು ಒಪ್ಪಿ ಅನುಮೋದಿಸಿತು. ಹೀಗೆ ಶೇಷಣ್ಣನವರು ತಮ್ಮ ಸಮಕಾಲೀನ ಕಲಾ ಪ್ರಪಂಚದಲ್ಲೇ ಗೌರವಾನ್ವಿತರಾಗಿ “ವಿದ್ವಾಂಸರ ವಿದ್ವಾಂಸರಾಗಿ” ಬೆಳಗಿದರು.

ಶೇಷಣ್ಣನವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರು 1902ರಲ್ಲಿ ನೀಡಿದ ‘ವೈಣಿಕ ಶಿಖಾಮಣಿ’ ಬಿರುದು ಅನ್ವರ್ಥವಾಯಿತು. ಮಹಾರಾಜರ ಸಮ್ಮುಖದಲ್ಲಿ ಕಚೇರಿ ಮಾಡಬಯಸುವವರು ಮೊದಲು ಶೇಷಣ್ಣನವರ ಮುಂದೆ ಹಾಡಬೇಕಿತ್ತು. ಅರ್ಹರಾದ ಕಲಾವಿದರನ್ನು ಶೇಷಣ್ಣನವರು ಅರಮನೆಗೆ ಶಿಫಾರ್ಸು ಮಾಡುತ್ತಿದ್ದರು. ಕಲಾವಿದರ ಎಲ್ಲ ಒಳ್ಳೆಯ ಸಂಗತಿಗಳಿಗೆ ತಲೆದೂಗಿ ಶಹಭಾಸ್‌ಗಿರಿ ಹೇಳಿ ಪ್ರೋತ್ಸಾಹಿಸುತ್ತಿದ್ದರು. “ಸುನಾದ ನನ್ನ ಕೈನಲ್ಲಿ ಬಂದರೇನು? ಇನ್ನೊಬ್ಬರ ಕೈಯಲ್ಲಿ ಬಂದರೇನು” ಎಂಬ ಅವರ ಮಾತು ಒಬ್ಬ ನಾದೋಪಾಸಕನಿಗೆ ತಕ್ಕುದಾದುದು. 1926ರ ಜುಲೈ 25ರಂದು ಶೇಷಣ್ಣನವರು ಸರಸ್ವತಿಯ ಪಾದಾರವಿಂದವನ್ನು ಸೇರಿದರು. ಆಗ ಎ.ಆರ್‌.ಕೃಷ್ಣಶಾಸ್ತ್ರಿಗಳು ಪ್ರಬುದ್ಧ ಕರ್ನಾಟಕದ ಸಂಪಾದಕೀಯದಲ್ಲಿ “ಸರಸ್ವತಿಯ ಮನೆಯಲ್ಲಿ ಕಳುವಾಯಿತು” ಎಂದು ಬರೆದುದು ಎಷ್ಟು ಅರ್ಥಪೂರ್ಣ! ಸಂಗೀತ ಕ್ಷೇತ್ರದ ಧ್ರುವತಾರೆಗಳಲ್ಲಿ ಒಬ್ಬರಾದ ಶೇಷಣ್ಣನವರು ಎಂದೂ ಪ್ರಾತಃ ಸ್ಮರಣೀಯರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.

(ಕೃಪೆ: ಮೈಸೂರು ವಿ. ಸುಬ್ರಹ್ಮಣ್ಯ ಅವರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಕಟಣೆಯಾದ ‘ಕಲಾ ಚೇತನ’ದಲ್ಲಿನ ಲೇಖನದ ಸಂಕ್ಷಿಪ್ತ ರೂಪ)

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಮಣ್ಣ ಮಕ್ಕಳು

Published

on

ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
  • ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ

ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.

ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.

ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು

Published

on


ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.

ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.

  • ಬಸವರಾಜ ಹೂಗಾರ

ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.

ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.

  • ಡಾ.ರಹಮತ್ ತರೀಕೆರೆ

ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.

  • ಬಿ.ಶ್ರೀನಿವಾಸ,ಕೃತಿ ಲೇಖಕ

ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.

ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.

“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.

ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.

ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.

ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ

  • ಡಾ.ರಾಮಚಂದ್ರ ಹಂಸನೂರು, ಬೆಟಗೇರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading
Advertisement

Title

ದಿನದ ಸುದ್ದಿ1 day ago

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಡಿಕೇರಿಯಲ್ಲಿ...

ದಿನದ ಸುದ್ದಿ5 days ago

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ...

ದಿನದ ಸುದ್ದಿ1 week ago

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499...

ದಿನದ ಸುದ್ದಿ1 week ago

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ...

ದಿನದ ಸುದ್ದಿ2 weeks ago

ಇಂದು ಚುನಾವಣಾ ಆಯೋಗ ಸಮಾವೇಶ

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ...

ದಿನದ ಸುದ್ದಿ2 weeks ago

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ 90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು....

ದಿನದ ಸುದ್ದಿ2 weeks ago

ಔಷಧಗಳ ದರ ಗಣನೀಯ ಏರಿಕೆ ಕುರಿತ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ; ಕೇಂದ್ರ ಸರ್ಕಾರ ಸ್ಪಷ್ಟನೆ

ಸುದ್ದಿದಿನ ಡೆಸ್ಕ್ : ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ವಿವಿಧ ಔಷಧಿಗಳ ದರ ಗಣನೀಯವಾಗಿ ಏರಿಕೆ ಮಾಡಲಾಗಿದೆ ಎಂಬ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ಮತ್ತು ಜನರನ್ನು...

ದಿನದ ಸುದ್ದಿ2 weeks ago

ರಾಜ್ಯದಲ್ಲಿ ಬಿಸಿಲ ತಾಪ ಇನ್ನೂ ಹೆಚ್ಚಾಗಲಿದೆ ; ಹವಾಮಾನ ಇಲಾಖೆ ಮುನ್ಸೂಚನೆ

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಮುಂದಿನ 7 ದಿನಗಳಲ್ಲಿ ಬಿಸಿಲ ತಾಪ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಜನರುಕೆಲವು ಮುನ್ನೆಚ್ಚರಿಕೆ...

ದಿನದ ಸುದ್ದಿ2 weeks ago

ಜಿಲ್ಲೆಯ ರಾಜಕಾರಣದಲ್ಲಿ ನನಗೆ ಅನ್ಯಾಯ; ರಾಜಕೀಯ ಕುತಂತ್ರ ವ್ಯವಸ್ಥೆ ವಿರುದ್ಧ ನನ್ನ ಹೋರಾಟ : ವಿನಯ್ ಕುಮಾರ್

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ರಾಜಕಾರಣದಲ್ಲಿ ಚೆನ್ನಯ್ಯ ಒಡಿಯರ್ ಅವರಿಗೆ ಆದ ಅನ್ಯಾಯ ನನಗೂ ಆಗಿದೆ. ನನ್ನ ಹೋರಾಟ ನನ್ನ ಸ್ವಾಭಿಮಾನದ ಹೋರಾಟ ಒಬ್ಬ ವ್ಯಕ್ತಿ ಪಕ್ಷದ ವಿರುದ್ಧ...

ದಿನದ ಸುದ್ದಿ2 weeks ago

ಲೋಕಸಭೆ ಚುನಾವಣೆ; ರಾಜ್ಯದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನ

ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ, ದೇಶಾದ್ಯಂತ ಎರಡನೇ ಹಂತದ 89 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮೊದಲ...

Trending