Connect with us

ಅಂತರಂಗ

ಅರಿಮೆಯ ಅರಿವಿರಲಿ-54 : ಮನಸಿನ ಸುಳಿಯಲ್ಲಿ ಮೈ

Published

on

  • ಯೋಗೇಶ್ ಮಾಸ್ಟರ್

ಲೋಚನೆ, ಅದೇನು ಬರತ್ವೆ ಹೋಗತ್ವೆ ಚಲಿಸುವ ಮೋಡಗಳಂತೆ. ಇಷ್ಟೇ ಆಗಿದ್ದರೆ ಇಷ್ಟು ಬರೆಯುವ ಅಗತ್ಯವೇನಿರುತ್ತಿತ್ತು! ಅವುಗಳು ಸುಳಿಯುತ್ತವೆ, ಸುಳಿದಾಡುತ್ತವೆ, ಸುಳಿಯಾಗಿ ಮೈಯನ್ನೂ ಒಳಗೆಳೆದುಕೊಳ್ಳುತ್ತವೆ.

ಅಲೆಕ್ಸ್ ಪ್ರಸಂಗ

ಅದೊಂದು ಕ್ರೈಸ್ತ ಅಧ್ಯಯನ ಸಂಸ್ಥೆ. ಪಾದ್ರಿಯಾಗಲು ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಗಳು ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆ ವಿದ್ಯಾರ್ಥಿಗಳಲ್ಲಿ ಅಲೆಕ್ಸ್ ಒಳ್ಳೆಯ ಕಟ್ಟುಮಸ್ತಾದ, ಹುರುಪುಗಟ್ಟಿದ ದೇಹದವನು. ಪ್ರತಿದಿನವೂ ಬೆಳಗ್ಗೆಯೇ ವ್ಯಾಯಾಮ ಮಾಡುತ್ತಿದ್ದ. ಅತ್ಯಂತ ಕಟ್ಟುನಿಟ್ಟಾಗಿ ಊಟದ ವಿಷಯದಲ್ಲಿ ಕ್ರಮವನ್ನು ಅನುಸರಿಸುತ್ತಿದ್ದ. ಎಂದಿಗೂ ಕಣ್ಣಿನ ಆಸೆಗೆ, ನಾಲಿಗೆಯ ಚಪಲಕ್ಕೆ ಮುಕ್ಕಿದವನೇ ಅಲ್ಲ. ಕಸ ತಿನ್ನುವ ಬದಲು ತುಸ ತಿನ್ನು ಎಂದು ತಿಳಿದವನು.

ಲಘನಂ ಪರಮೌಷಧಂ ಎನ್ನುವಂತೆ (ಉಪವಾಸವೇ ಉತ್ತಮ ಚಿಕಿತ್ಸೆ) ಅವರ ಉಪವಾಸ ಕಾಲವಿಲ್ಲದಿದ್ದರೂ (ಲೆಂಟ್ ಸೀಸನ್) ಕಾಲಕಾಲಕ್ಕೆ ಉಪವಾಸವನ್ನು ಮಾಡುತ್ತಿದ್ದ. ಆದರೆ ತಾನು ಎಂದಿಗೂ ಜ್ವರ ಬಂದು ಮಲಗೇ ಇಲ್ಲ, ಡಾಕ್ಟರ್ ಬಳಿಗೆ ಹೋಗುವುದೇ ಇಲ್ಲ ಎನ್ನುವ ಅವನ ಹೆಮ್ಮೆ ಅಥವಾ ನೋಡುಗರ ದೃಷ್ಟಿಯ ‘ಜಂಭ’ ಹಲವು ವಿದ್ಯಾರ್ಥಿ ಗೆಳೆಯರ ಅಣಕಿಸುತ್ತಿತ್ತು. ಅವನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ತೀರ್ಮಾನಿಸಿದರು.

ಒಂದು ಬೆಳಗ್ಗೆ ಅಲೆಕ್ಸ್ ತನ್ನ ವ್ಯಾಯಾಮ ಶಾಲೆಯಿಂದ ಹೊರಗೆ ಬರುತ್ತಿದ್ದಂತೆ ಎದುರಾದ ಒಬ್ಬ ಸೋದರ ಕೇಳಿದ, “ಯಾಕೆ ಅಲೆಕ್ಸ್? ಒಂದು ತರಾ ಇದ್ದೀಯಾ?” ಎಂದು.

ಅಲೆಕ್ಸ್ ತಾನು ಸರಿಯಿದ್ದೇನೆ ಎಂದು ಮುಂದೆ ಹೋದ. ಆದರೆ ಅವನಿಗೆ ಎದುರಾದ ಮಿತ್ರರೆಲ್ಲಾ “ರಾತ್ರಿಯೆಲ್ಲಾ ನಿದ್ದೆ ಕೆಟ್ಟಾ?”, “ಮುಖವೇಕೆ ಬಾಡಿದೆ?”, “ಮೈ ಹುಷಾರಿಲ್ಲವಾ?”, “ಆರ್ ಯೂ ಆಲ್ ರೈಟ್?” ಇತ್ಯಾದಿ ಕೇಳುತ್ತಲೇ ಇದ್ದರು. ಸಂಜೆ ಐದೂವರೆಯ ಹೊತ್ತಿಗೆ ಅಲೆಕ್ಸ್‍ಗೆ ಹೈ ಟೆಂಪರೇಚರಲ್ಲಿ ಜ್ವರ ಬಂದಿತ್ತು.

ಸಾರಾ ಪ್ರಸಂಗ

ಸಾರಾ ಶಾಲೆಯೊಂದರಲ್ಲಿ ಉಪಾಧ್ಯಾಯಿನಿ. ಆಕೆ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾಗ ಚಲಿಸುವ ಜೀಪಿನಿಂದ ಸ್ಟೆಪ್ನಿ ಟಯರೊಂದು ಕೆಳಗೆ ಬಿದ್ದು ಆಕೆಗೆ ಬಡಿದು ಅವಳನ್ನು ದೊಡ್ಡ ಹಳ್ಳಕ್ಕೆ ತಳ್ಳಿತ್ತು. ಇದರಿಂದ ಮೂರ್ಚಿತಳಾಗಿ ಬಿದ್ದ ಸಾರಾಗೆ ಕಾಲಿನ ಮೂಳೆ ವಿವಿಧ ಭಾಗಗಳಲ್ಲಿ ಮುರಿದಿತ್ತು. ಅವಳನ್ನು ಆಸ್ಪತ್ರೆಗೆ ಸೇರಿಸಿದರು. ಅಲ್ಲಿಯೇ ಒಳರೋಗಿಯಾಗಿ ಇದ್ದು ಕೆಲವು ಶಸ್ತ್ರಚಿಕಿತ್ಸೆಗೆ ಸಾರ ಒಳಗಾದಳು. ಸುಮಾರು ಆರು ತಿಂಗಳ ನಂತರ ಅವಳು ಕ್ಲಿನಿಕಲಿ ಫಿಟ್ ಎಂದು ಹೇಳಿ ಡಾಕ್ಟರ್ ಸರ್ಟಿಫೈ ಮಾಡಿದರೂ ಅವಳು ಎದ್ದು ನಡೆದಾಡಲು ಸಾಧ್ಯವಾಗಲಿಲ್ಲ. ಅವಳಿಗೆ ಒಂದು ಹೆಜ್ಜೆಯೂ ಇಡಲಾಗುತ್ತಿರಲಿಲ್ಲ.

ಸಾವಿತ್ರಮ್ಮ ಪ್ರಸಂಗ

ಸಾವಿತ್ರಮ್ಮ ಎಂಬ ಗೃಹಿಣಿ ಗರ್ಭಿಣಿಗೆ ತಪಾಸಣೆಯ ಸಮಯದಲ್ಲಿ ಮಗುವಿನ ಹೃದಯ ದುರ್ಬಲವಾಗಿದೆಯೆಂದೂ, ಸ್ಪಂದಿಸುತ್ತಿರುವುದು ಬರುಬರುತ್ತಾ ಕ್ಷೀಣವಾಗುತ್ತಿದೆಯೆಂದೂ, ಬಹುಶಃ ಉಳಿಯಲಾರದೆಂದೂ ಡಾಕ್ಟರ್ ಹೇಳಿದ್ದರು. ಆದರೆ ಒಂದು ದಿನದ ಕಾಲಾವಕಾಶ ಕೇಳಿದ ಸಾವಿತ್ರಮ್ಮ ತನ್ನ ಗುರುಗಳೋರ್ವರ (ಈ ಲೇಖನ ಬರೆದವನು) ಹತ್ತಿರ ಹೋಗಿ ವಿಷಯವನ್ನು ತಿಳಿಸಿದಳು.

ಮಗುವು ಜೀವಂತವಾಗಿರುವುದಕ್ಕೆ ಮಾತ್ರವಲ್ಲದೇ, ಅದು ಆರೋಗ್ಯವಾಗಿರುವಂತೆ ಸಂಕಲ್ಪ ಮಾಡಿಕೊಂಡಳು. ಮರುದಿನ ಡಾಕ್ಟರ್ ಹತ್ತಿರ ಹೋದಾಗ ಮಗುವು ಸ್ಪಂದಿಸುತ್ತಿದೆಯೆಂದೂ, ಹೃದಯ ಬಡಿತವು ಸಾಮಾನ್ಯವಾಗಿದೆ ಎಂದೂ ತಿಳಿಯಿತು. ಆ ಮಗುವಿನ ಸುಖ ಪ್ರಸವವಾಯಿತು.

ಮಂಜು ಪ್ರಸಂಗ

ಮಂಜುಳಾಳ ವಿಷಯದಲ್ಲಿ ಗರ್ಭ ನಿರೋಧಕ ಔಷಧಿಯ ನಂತರ ಗರ್ಭಧಾರಣೆಯಾಗಿತ್ತು. ಕೆಲವರು ತಮ್ಮ ಅನುಭವ ಮತ್ತು ಸಾಕ್ಷೀಕರಿಸಿದ ಸಂಗತಿಗಳ ಪ್ರಕಾರ ಆ ಮಗುವಿಗೆ ಮೆದುಳಿನ ಅಥವಾ ನರಗಳ ಅಥವಾ ಯಾವುದಾದರೂ ಅಂಗಗಳ ನ್ಯೂನ್ಯತೆಗಳಿರುತ್ತವೆ ಎಂದೂ, ಅಥವಾ ಇನ್ನೇನಾದರೂ ಸಮಸ್ಯೆ ಇರುತ್ತದೆ ಎಂದೂ ಹೇಳಿದರು.

ಎಲ್ಲರೂ ಗರ್ಭಪಾತ ಮಾಡಿಸಲು ಸೂಚಿಸುತ್ತಿದ್ದರು. ತನ್ನ ಮೊದಲ ಗರ್ಭಧಾರಣೆಯಾದ ಕಾರಣದಿಂದ ಗರ್ಭಪಾತಕ್ಕೆ ಇಷ್ಟವಿಲ್ಲದ ಮಂಜು ಸಕಾರಾತ್ಮಕವಾಗಿ ಹೇಳುವ ಬೇರೊಂದು ವೈದ್ಯರಿಂದ ಸೆಕೆಂಡ್ ಒಪಿನಿಯನ್ ತೆಗೆದುಕೊಳ್ಳಲು ಯತ್ನಿಸುತ್ತಿದ್ದಳು. ಜೊತೆಗೆ ಅವಳಿಗೆ ತಂದೆ ಸಮಾನದಲ್ಲಿ ಅವಳೊಡನೆ ಬೆಂಬಲವಾಗಿದ್ದ ಗುರುಗಳ ಮೂಲಕ ಸಾವಿತ್ರಮ್ಮನ ಪ್ರಸಂಗದ ಜೀವಂತ ಉದಾಹರಣೆ ಕಣ್ಣ ಮುಂದಿತ್ತು.
ಗರ್ಭಕಟ್ಟಿದ, ಗರ್ಭನಿರೋಧಕ ಔಷಧಿಯನ್ನು ತೆಗೆದುಕೊಂಡ ಅವಧಿಗಳನ್ನೆಲ್ಲಾ ಕೂಲಂಕುಶವಾಗಿ ವಿಚಾರ ಮಾಡಿದ ಮತ್ತೊಬ್ಬ ವೈದ್ಯರು 50-50 ಎಂದರು.

ಕೆಲವೊಮ್ಮೆ ಆ ಬಗೆಯ ಸಮಸ್ಯೆಗಳಾಗಬಹುದು. ಕೆಲವೊಮ್ಮೆ ಸಮಸ್ಯೆ ಆಗದಿರಲೂಬಹುದು ಎಂದರು. ಮಂಜು ಮಗುವಾಗಲಿ ಎಂದು ಬಯಸಿದಳು. ಆದುದ್ದಾಗಲಿ ನೋಡೇಬಿಡೋಣ ಎಂದು ಕಾದಳು. ಹೆಣ್ಣುಮಗು ಜನಿಸಿತು. ಆರೋಗ್ಯವಾಗಿತ್ತು. ಈಗ ಆ ಮಗು ಶಾಲೆಗೆ ಹೋಗುತ್ತಿದೆ. ಸುಂದರ ಮತ್ತು ಆರೋಗ್ಯವಾಗಿರುವ ಆ ಮಗು ನೃತ್ಯ ಕಲಿಯುತ್ತಿದೆ. ಮನೆಯವರೆಲ್ಲರ ಕಣ್ಮಣಿಯಾಗಿ ಬೆಳೆಯುತ್ತಿದೆ.

ಭಾಗ್ಯಮ್ಮನ ಪ್ರಸಂಗ

ಅದೊಂದು ತುಂಬು ಕುಟುಂಬ. ಭಾಗ್ಯಮ್ಮ ಹಿರಿಯ ಸೊಸೆ. ಬೆಳಗ್ಗಿನಿಂದ ರಾತ್ರಿಯವರೆಗೂ ಕೆಲಸ. ಗಂಡ, ಅತ್ತೆ, ಮಾವ, ಮೈದುನಂದಿರು, ವಾರಗಿತ್ತಿಯರು, ಎಲ್ಲರ ಮಕ್ಕಳು, ಮನೆಯ ಕೆಲಸದಾಳುಗಳು, ಮನೆಯ ವ್ಯವಹಾರ, ಅಂಗಡಿಗೆ ಹೋಗಿ ಸಾಮಾನುಗಳನ್ನು ತರುವುದರಿಂದ ಹಿಡಿದು ಅಡುಗೆ ಮಾಡಿ ಬಡಿಸುವವರೆಗೂ ಅವಳದೇ ಉಸ್ತುವಾರಿ, ಅವಳದೇ ಜವಾಬ್ದಾರಿ.

ಕಬ್ಬಿಣದ ಪೆಟ್ಟಿಗೆಯಲ್ಲಿ ಇಡುವ ಹಣ ಮತ್ತು ವಡವೆಗಳಿಂದ ಹಿಡಿದು, ಕೂಲಿಯವರಿಗೆ ಕೊಡುವ ಸಂಬಳ, ಮನೆಯವರಿಗೆ ವ್ಯವಹಾರಕ್ಕೆ ಕೊಡುವ ಹಣ, ವಾರಗಿತ್ತಿಯರಿಗೆ, ಮಕ್ಕಳಿಗೆ ಕೊಡುವ ಖರ್ಚು ಎಲ್ಲವೂ ಅವಳ ಸುಪರ್ದಿನಲ್ಲೇ ಇರುವುದು.

ಕೆಲವೊಮ್ಮೆ ಅವಳಿಗೆ ಜ್ವರ ಬರುವುದು. ಭಯಂಕರವಾಗಿ ಹುಷಾರು ತಪ್ಪುವುದು. ಹಾಸಿಗೆ ಹಿಡಿಯುವಳು. ಯಾವ ಡಾಕ್ಟರು ಎಷ್ಟು ನೋಡಿದರೂ, ಏನೇ ಔಷಧಿ ಕೊಟ್ಟರೂ ವಾಸಿಯಾಗುವುದಿಲ್ಲ. ಒಂದಷ್ಟು ಕಾಲ ಹಾಸುಗೆ ಹಿಡಿದೇ ಹಿಡಿಯುವಳು. ನಂತರ ತಾನಾಗಿಯೇ ವಾಸಿಯಾಗಿ ತನ್ನ ಜವಾಬ್ದಾರಿಯ ನೊಗಕ್ಕೆ ತನ್ನ ಹೆಗಲನ್ನು ಕೊಡುವಳು.

ಪ್ರಸಂಗಗಳ ವಿಶ್ಲೇಷಣೆ

ಅಲೆಕ್ಸ್ ಪ್ರಸಂಗದಲ್ಲಿ ತನ್ನ ಭೇಟಿಯಾಗುತ್ತಿದ್ದ ಒಬ್ಬೊಬ್ಬರೂ ಕೂಡಾ ನಿನಗೇನೋ ಆಗಿದೆ, ನೀನು ಹುಷಾರು ತಪ್ಪಿದಂತೆ ಕಾಣುತ್ತಿದ್ದೀಯಾ, ನಿನ್ನಲ್ಲಿ ಸಮಸ್ಯೆ ಇದೆ ಎಂದು ಒಂದೇ ಸಮನೆ ಹೇಳುತ್ತಿದ್ದರು. ಮೊದಮೊದಲು ನಿರಾಕರಿಸಿದ ಅಲೆಕ್ಸ್ ನಂತರ ಇಷ್ಟು ಜನ ಹೇಳುತ್ತಿರುವಾಗ ಬಹುಶಃ ನಿಜವೇ ಇರಬಹುದೆಂದು ನಂಬತೊಡಗಿದ. ತನಗೆ ಹುಷಾರು ತಪ್ಪಿದೆ ಎಂದು ಅನ್ನಿಸತೊಡಗಿದಾಗ, ಅದನ್ನು ನಂಬತೊಡಗಿದಾಗ ನಿಜವಾಗಿಯೇ ಹುಷಾರು ತಪ್ಪಿದ.

ತನಗೆ ನೀಡುತ್ತಿದ್ದ ನಕಾರಾತ್ಮಕ ಸೂಚನೆಗಳನ್ನು ತೆಗೆದುಕೊಂಡದಷ್ಟೇ ಅಲ್ಲದೇ ಅದನ್ನು ನಂಬಿದರಿಂದ ಅವನಿಗೆ ಅವನು ಸ್ವೀಕರಿಸಿದ ಸೂಚನೆಯ ಸ್ಥಿತಿಯನ್ನೇ ಪಡೆದ.

ಸಾರಾ ಪ್ರಸಂಗದಲ್ಲಿ, ಅವಳು ಸ್ಟೆಪ್ನಿ ಟಯರ್ ತಗುಲಿ ಹಳ್ಳಕ್ಕೆ ಬಿದ್ದು, ಮಲ್ಟಿಪಲ್ ಫ್ರಾಕ್ಚರ್ ಆದ ಮೇಲೆ ಆಸ್ಪತ್ರೆಗೆ ಸೇರಿಸಿದ್ದರು. ಆಸ್ಪತ್ರೆಯಲ್ಲಿ ಸಾರಾ ಮೂರ್ಚಾವಸ್ಥೆಯಲ್ಲಿ ಇರುವಾಗ ನೆಲ ಸಾರಿಸುತ್ತಿದ್ದ ಇಬ್ಬರು ಹೆಂಗಸರು ಸಾರಾಳ ಸ್ಥಿತಿಗೆ ಮರುಗುತ್ತಾ, “ಪಾಪ, ಇಷ್ಟು ದೊಡ್ಡ ಪೆಟ್ಟಾಗಿ ಕಾಲು ಹೀಗೆ ಮುರಿದುಹೋಗಿದೆ. ಇನ್ನು ಮುಂದೆ ಎಂದಿಗೂ ಇವಳು ನಡೆಯಲಾರಳು” ಎಂಬರ್ಥದಲ್ಲಿ ಚರ್ಚಿಸಿದ್ದರು.

ಸಾರಾ ಜಾಗೃತವಾಗಿರದಿದ್ದರೂ ಅವಳ ಮನಸ್ಸಿನ ಸುಪ್ತಚೇತನ ಅದನ್ನು ಒಪ್ಪಿಬಿಟ್ಟಿತ್ತು. ಅದನ್ನು ಸತ್ಯವೆಂದು ನಂಬಿತ್ತು. ಹಾಗಾಗಿ ಅವಳು ಸಂಪೂರ್ಣ ಗುಣಮುಖಳಾಗಿದ್ದರೂ ಅವಳ ಒಳಮನಸ್ಸು ಅವಳಿಗೆ ನಡೆಯಲು ಬಿಟ್ಟಿರಲಿಲ್ಲ. ಮತ್ತೆ ಅವಳನ್ನು ಸಂಮೋಹನಕ್ಕೊಳಪಡಿಸಿ, ಸಮಾಲೋಚನೆಗಳಿಂದ ಅವಳಿಗೆ ನಡೆಯಲು ಸಾಧ್ಯವಿದೆ ಎಂದು ಮನವರಿಕೆ ಮಾಡಿಸಿದ ಮೇಲೆ ಎಂದಿನಂತೆ ನಡೆಯತೊಡಗಿದಳು.

ಸಾವಿತ್ರಮ್ಮನೋ, ಅವಳಿಗೆ ಅವಳ ಗುರುಗಳು ಹೇಳಿದ್ದರು. ತಮ್ಮ ದೇಹದ ಆರೋಗ್ಯ ಮತ್ತು ಗರ್ಭದೊಳಗಿನ ಶಿಶುವಿನ ಬೆಳವಣಿಗೆಯು ತಾಯಿಯ ಆಲೋಚನೆಯ ಮೇಲೆ ಅವಲಂಬಿಸಿರುತ್ತದೆ ಎಂದು. ಹಾಗಾಗಿ, ವೈದ್ಯರು ಮಗುವು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದಾಗ, ಅವಳು ದಿನ ಪೂರ್ತಿ ಸುಮಧುರ ಸಂಗೀತವನ್ನು ಕೇಳುತ್ತಾ, ಗುರುಗಳು ನೀಡುತ್ತಿದ್ದ ಸಕಾರಾತ್ಮಕ ಸಂದೇಶಗಳನ್ನು ಕೇಳುತ್ತಾ ತನ್ನ ಮಗುವು ಆರೋಗ್ಯವಾಗಿಯೂ, ಜೀವಂತವಾಗಿಯೂ ತನ್ನ ಜೊತೆಯಲ್ಲಿರಬೇಕೆಂದು ಬಯಸಿದ್ದಳು.

ಅದೊಂದು ವೈದ್ಯಕೀಯ ಪವಾಡವೆಂದು ಡಾಕ್ಟರ್ ಉದ್ಗರಿಸುವಂತೆ ಮರುದಿನದ ತಪಾಸಣೆಯ ಸಂದರ್ಭದಲ್ಲಿ ಮಗುವು ಸ್ಪಂದಿಸುತ್ತಿತ್ತು.
ಅದೇ ರೀತಿ ಮಂಜು ಕೂಡಾ, 50-50 ಎಂದು ಹೇಳಿದ ವೈದ್ಯರ ಮಾತಲ್ಲಿ ತನಗೆ ಬೇಕಾದ ಸಮಸ್ಯೆ ಇಲ್ಲದ ಮಗುವು ಹುಟ್ಟುತ್ತದೆ ಎಂಬ ಮಾತನ್ನು ಮಾತ್ರ ಸ್ವೀಕರಿಸಿದಳು. ಅದರಂತೆಯೇ ತನ್ನ ಗರ್ಭದೊಳಗಿನ ಮಗುವು ಆರೋಗ್ಯವಾಗಿ, ಚೆನ್ನಾಗಿ ಇರುವುದರ ಚಿತ್ರಣವನ್ನು ಮನಸ್ಸಿನ ಪರದೆಯ ಮೇಲೆ ರೂಪಿಸಿಕೊಂಡು ಬಸುರಿನ ದಿನಗಳನ್ನು ಕಳೆದಳು. ಆರೋಗ್ಯವಾಗಿರುವ ಮಗುವು ಹುಟ್ಟಿತು.

ಭಾಗ್ಯಮ್ಮನ ಪ್ರಸಂಗದಲ್ಲಿ, ದಿನನಿತ್ಯವೂ ಇಡೀ ಸಂಸಾರದ ನೊಗಕ್ಕೆ ಹೆಗಲುಗೊಟ್ಟು ದುಡಿವ ಅವಳಿಗೆ ಮನೆಯಲ್ಲಿ ಯಾರೊಬ್ಬರಿಗೂ ನೀನು ಹೇಗಿದ್ದೀಯಾ? ಉಂಡೆಯಾ? ಕುಡಿದೆಯಾ? ಸ್ನಾನ ಆಯಿತಾ? ಯಾವ ಬಟ್ಟೆ ಹಾಕಿಕೊಳ್ಳುತ್ತಿದ್ದೀಯಾ? ಎಂದು ಕೇಳುವವರು, ಉಪಚರಿಸುವವರು ಯಾರೂ ಇರುತ್ತಿರಲಿಲ್ಲ. ಹಾಗೆ ಉಪಚರಿಸಬಾರದೆಂದೇನೂ ಯಾರಿಗೂ ಇಲ್ಲ ಆದರೆ, ಅವಳೇ ಉಪಚಾರ ಮಾಡುವವಳಾಗಿದ್ದಳು.

ಎಲ್ಲರನ್ನೂ ನೋಡಿಕೊಳ್ಳುವ ಅವಳನ್ನು ನೋಡಿಕೊಳ್ಳಬೇಕೆಂಬ ಅಗತ್ಯ ಇದೆ ಎಂದು ಯಾರಿಗೂ ಅನ್ನಿಸಿಯೇ ಇರಲಿಲ್ಲ. ಹೀಗೆ ಯಾವುದಾದರೂ ಕಾರಣಕ್ಕೆ ಸಣ್ಣ ಜ್ವರ ಬಂದರೆ, ಪುಟ್ಟದಾಗಿ ಹುಷಾರು ತಪ್ಪಿದರೂ ಅವಳು ಗಂಭೀರವಾಗಿ ಮಲಗಿಬಿಡುತ್ತಿದ್ದಳು. ತನ್ನ ಜ್ವರವನ್ನು ವಾಸಿ ಮಾಡಿಕೊಳ್ಳಲು ಬಿಡುತ್ತಿರಲಿಲ್ಲ. ಅವಳು ಮಲಗಿದರೆ ಎಲ್ಲರೂ ಅವಳ ಉಪಚಾರಕ್ಕೆ ಮುಂದಾಗುತ್ತಿದ್ದರು.

ಹಣ್ಣು ಹಂಪಲು ಕೊಡುವುದು, ಹಣ್ಣಿನ ರಸ ಮತ್ತು ಔಷಧಿಯನ್ನು ಕುಡಿಸುವುದು, ಹೇಗಿದೆ? ಹೇಗನಿಸುತ್ತಿದೆ? ಬೇಗ ಹುಷಾರಾಗು ಎಂದು ನೋಡಿಕೊಳ್ಳುವುದೆಲ್ಲಾ ಆಗುತ್ತಿತ್ತು. ಈ ಬಗೆಯ ಪ್ರೀತಿಯ ಮತ್ತು ಕಾಳಜಿಯ ಕ್ಷಣಗಳನ್ನು ಅನುಭವಿಸಲು, ಆನಂದಿಸಲು ಭಾಗ್ಯಮ್ಮ ತನ್ನ ಜ್ವರವನ್ನು ಹೋಗಗೊಡುತ್ತಿರಲಿಲ್ಲ. ತನ್ನ ಜ್ವರದಿಂದ ಸಿಗುವಂತಹ ಸೆಕೆಂಡರಿ ಬೆನಿಫಿಟ್ ಅವಳಿಗೆ ತುಂಬಾ ಮುಖ್ಯ ಅನ್ನಿಸುತ್ತಿತ್ತು.

ಈ ಪ್ರಸಂಗಗಳನ್ನೆಲ್ಲಾ ಗಮನಿಸಿದರೆ, ಮಾಡುವ ಆಲೋಚನೆ, ಹೊಂದುವ ಚಿಂತನೆಗಳು, ರೂಪಿಸಿಕೊಳ್ಳುವ ಚಿತ್ರಣಗಳು ಜೈವಿಕವಾದಂತಹ ಪರಿಣಾಮವನ್ನು ಬೀರುತ್ತವೆ ಎಂದು ಅನಿಸುತ್ತದೆ, ಅಲ್ಲವೇ?

(ಮುಂದುವರಿಯುವುದು)

  • ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ನುಡಿ ನಮನ | ಡಾ. ವಿಠಲ ಭಂಡಾರಿ, ಕ್ಷಮಿಸಿ ಸರ್

Published

on

ಡಾ. ವಿಠಲ ಭಂಡಾರಿ
  • ಡಾ. ಗಿರೀಶ್ ಮೂಗ್ತಿಹಳ್ಳಿ, ಚಿಕ್ಕಮಗಳೂರು

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಂಶೋಧನೆ ಮಾಡುವಾಗ ಡಾ. ಆನಂದ ಪಾಟೀಲ ಅವರ ಸಲಹೆಯಂತೆ ‘ಪ್ರೀತಿಯ ಕಾಳು’ ಪುಸ್ತಕ ಬೇಕಿತ್ತು. ಈ ಪುಸ್ತಕ ವಿಠಲ ಭಂಡಾರಿ ಅವರ ತಂದೆ ಆರ್. ವಿ. ಭಂಡಾರಿ ಅವರ 13 ಮಕ್ಕಳ ನಾಟಕಗಳ ಸಂಕಲನ. ಈ ಕೃತಿಯನ್ನು ಡಾ. ವಿಠಲ ಭಂಡಾರಿ ಅವರು ಸಂಪಾದಿಸಿದ್ದರು. ಮಾನ್ಯ ಭಂಡಾರಿಯವರನ್ನು ಕೇಳಿಕೊಂಡಾಗ ನನಗೆ ಅಂಚೆ ಮೂಲಕ ಕಳುಹಿಸಿಕೊಟ್ಟಿದ್ದರು.

ಬೇಕಾದ ಪೂರಕ ಮಾಹಿತಿಯನ್ನು ಫೋನಿನಲ್ಲಿಯೇ ಚರ್ಚಿಸಿದ್ದರು. ನನ್ನ ಸಂಶೋಧನೆಯಲ್ಲಿ ಜತೆ ಇದ್ದರು. ಆದರೆ ಒಮ್ಮೆ ಎಂದೂ ಭೇಟಿಯಾದವರಲ್ಲ. ಕಾರಣ ದೂರದೂರು ಎಂದು! ಕರೆ ಮಾಡಿದರೆ, ಅವರು ಎಷ್ಟೇ ಕಾರ್ಯನಿರತರಾಗಿದ್ದರೂ ಕರೆ ಸ್ವೀಕರಿಸಿ ವರ್ತಮಾನವನ್ನು ತಿಳಿಸುತ್ತಿದ್ದರು. ಸಂಶೋಧನಾ ಪ್ರಬಂಧವು ಕೃತಿಯಾದಾಗ ಅವರಿಗೆ ಒಂದು ಪ್ರತಿ ಕಳುಹಿಸಿ ಕೊಟ್ಟೆ.. ತುಂಬಾ ಸಂಭ್ರಮಿಸಿದ್ದರು. ಮೆಚ್ಚುಗೆ ಮಾತುಗಳನ್ನಾಡಿದ್ದರು.

ಕಳೆದ ಲಾಕ್ ಡೌನ್ ಸಮಯದಲ್ಲಿ ನನ್ನ ಪುಸ್ತಕವನ್ನು ಆನ್ ಲೈನ್ ಬಿಡುಗಡೆ ಮಾಡೋಣ ಎಂದು ಕಾರ್ಯಕ್ರಮದ ಕ್ರಿಯಾಯೋಜನೆಯನ್ನು ತಯಾರಿಸಿದ್ದರು… ಇಷ್ಟೆಲ್ಲ ಕಾರ್ಯಗಳು ಪರಸ್ಪರ ಭೇಟಿಯಾಗದೆ ಆದ ವಿಶೇಷ ಅನುಭವಗಳು. ಈ ಮಧ್ಯೆ ಅವರಿಗೆ ಕರೆ ಮಾಡುವುದಕ್ಕೆ ಆಗಿರಲಿಲ್ಲ.

ಆದರೆ ಇಂದಿನ ಅವರ ಅಗಲಿಕೆಯ ಸುದ್ದಿ ನನ್ನನ್ನ ನಿಶ್ಚಲವಾಗಿಸಿದೆ…! ಸಾಮಾನ್ಯ ರೀತಿಯಲ್ಲಿ ಮಾನ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಬಹುದು.. ಆದರೆ ಅವರನ್ನು ಭೇಟಿ ಮಾಡಬೇಕೆಂಬ ಆಸೆಯ ಚಿಗುರಿಗೆ ಕೆಟ್ಟ ಸುದ್ದಿಯ ಸಿಡಿಲೊಡೆದಿದೆ… ಕ್ಷಮಿಸಿ ಸರ್… ನನ್ನ ಸರದಿಯೂ ಬಂದಾಗ ಮೇಲೆ ಬರುವೆ.. ಸಿಕ್ಕೋಣ.. ಈ ಅಮಾನವೀಯ ವ್ಯವಸ್ಥೆಯ ಬಗ್ಗೆ ಚರ್ಚೆ ಮಾಡೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಏನಿದು ವರ್ಷದುಡುಕು;ಹೊಸ್ತುಡುಕು..?

Published

on

ಕೆ.ಶ್ರೀಧರ್ (ಕೆ.ಸಿರಿ)
  • ಕೆ.ಶ್ರೀಧರ್ (ಕೆ.ಸಿರಿ)

ಏಪ್ರಿಲ್ 13 ಕ್ಕೆ ಚಾಂದ್ರಮಾನ ಯುಗಾದಿ ಹಬ್ಬ ನಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯರಿಗೆ ನಿಜವಾದ ಹೊಸ ವರ್ಷ ಬೆಳಗ್ಗೆ ಎದ್ದು ನೀರಿಗೆ ಬೇವಿನ ಎಲೆ ಹಾಕಿ ಮೈಗೆಲ್ಲಾ ಎಣ್ಣೆ ಸವರಿಕೊಂಡು ಎಣ್ಣೆ ಸ್ನಾನ ಮಾಡಿ ಹೊಸ ಹುಡುಪುಗಳನ್ನು ಧರಿಸಿ ಮನೆಗೆ ತಳಿರು ತೋರಣ ಕಟ್ಟಿ ಇಷ್ಟ ದೇವರಿಗೆ ಪೂಜೆ ಸಲ್ಲಿಸಿ ಬೇವು ಬೆಲ್ಲ ಸವಿದು ತಾಯಿ ಮಾಡಿದ ಸಿಹಿಯಾದ ತಿಂಡಿ ತಿನಿಸುಗಳ ತಿಂದು ಇಡೀ ದಿನ ಸಂಭ್ರಮದಿಂದ ಹಬ್ಬ ಆಚರಿಸುವುದು ಬಂಧು ಬಾಂಧವರೆಲ್ಲರೂ ಸಂಭ್ರಮ ಪಡುವುದು ಸಂಜೆಯ ನಂತರ ಚಂದ್ರನನ್ನು ನೋಡಿ ಹೊಸ ವರ್ಷ ಆರಂಭಿಸುವುದು ವಿಶೇಷ.

ಯುಗಾದಿ ಎಂದರೆ ಇಷ್ಟೇ ಎಂದು ನಾನು ತಿಳಿದಿದ್ದೆ. ಆದರೆ ಇನ್ನೊಂದು ದಿನವೂ ಹಬ್ಬವಿದೆ ಆ ಹಬ್ಬ ತುಂಬಾ ವಿಶೇಷ ಎನಿಸಿದ್ದು ಈ ವರ್ಷದುಡುಕಿನ ಸಂಭಾಷಣೆ ಕೇಳಿದ ನಂತರವೆ. ನಾನು ಏಪ್ರಿಲ್ 14 ರಂದು ನನ್ನ ಕೆಲಸದ ನಿಮಿತ್ತ ಎಲ್ಲಿಯೋ ಹೊರಟಿದ್ದೆ ಪೆಟ್ರೋಲ್ ಹಾಕಿಸಲು ಬಂಕ್ ನ ಬಳಿ ಹೋದಾಗ ಯಾರೋ ಒಬ್ಬ ಯುವಕ ಬ್ಯಾಗ್ ಹಾಕಿಕೊಂಡು ಯಾವುದೋ ಊರಿಗೆ ಹೋಗುವಂತಿತ್ತು ಅದೇ ಸಂದರ್ಭದಲ್ಲಿ ಬಂದ ಆ ಯುವಕನ ಗೆಳೆಯ ಈ ರೀತಿಯಾಗಿ ಸಂಭಾಷಣೆ ಬೆಳೆಸಿದ.

“ಡೋ ಎಲ್ಲಿಗಡಾ ಹೋಗ್ತಿದೇ’?_
“ಬೆಂಗಳೂರಿಗೆ ಹೋಯ್ತಾವ್ನೀ ಕಯ್ಯಾ”_
“ಯೋ ಎಲ್ಗೋದೇ ಬಾ ನಾಳೆ ಹೊಸ್ತುಡುಕದೆ ಕಣಾ ತೀರಿಸ್ಗಂಡ್ ಹೋಗೈ”
“ಇಲ್ಲ ಬಾಮೈದ ಟೇಮಾಗದ ಆಗಲೇ ರಜಾ ತೀರದ ಕಣಾ ಹೋಗ್ಬೇಕ”
“ಇದ್ಯಾಂವಂಡಾ ಇವಾ ವರ್ಷದುಡುಕು ಮಾಡಾದ್ ಬುಟ್ಟು ಕೆಲಸಕ್ಕ ಹೋದನಂತೆ ಇಮ”
“ಯಾನ್ ಮಾಡದಯ್ಯ ನೀವ್ ಮಾಡ್ರೀ ಹೊಸ್ತುಡುಕ ನಾ ಮುಂದಿನ ಕಿತ ಬರ್ತೀನಿ ಕಣಾ”
“ಆಯ್ತು ಹೋಗಿದ್ದ್ ಬೊಯ್ಯ”
“ನೋಡ್ದಾ ಬಾವೋಜಿ ಇವನ್ ಸುಮಾನ್ವಾ ಹಬ್ಬ ಮಾಡೋ ಬಡ್ಡಿದೇ ಅಂದ್ರೆ ಕೆಲಸಕ್ಕೆ ಹೋದನಂತೆ ಇಮ”
“ನಡೈ ಬಾಮೈದ ಯಾನ್ಹಾ ಮಾಡ್ಲಿ ಹೊಣ್ಣೇರ್ ಕಟ್ಬೇಕು ಬ್ಯಾಗನ್ ನಡೈ ಊರ್ಗೋಗಮು”

ಎಂದು ಮಾತನಾಡುತ್ತಾ ಮಾತನಾಡುತ್ತಾ ಹಾಗೇಯೇ ದ್ವಿಚಕ್ರ ವಾಹನದಲ್ಲಿ ಊರ ಕಡೆ ಹೊರಟರು. ನಾನು ವಿಜಯನಗರ ಜಿಲ್ಲೆಯವನಾದುದರಿಂದ ಈ ವರ್ಷದುಡುಕು/ಹೊಸ್ತುಡುಕು,ಹೊಣ್ಣೇರ್ ಕಟ್ಟೋದು ಈ ಪದಗಳು ಅಪರಿಚಿತ ಅನಿಸ್ತು ತಲೆಯಲ್ಲಿ ಒಂಥರಾ ಈ ಪದಗಳು ಕೊರೆಯಲು ಶುರುಮಾಡಿದವು.

ಚಾಮರಾಜನಗರ ಮೊದಲೇ ದೇಸಿ ಭಾಷೆಯ ಪದಗಳಿಗೆ ಫೇಮಸ್ಸು ಅಂತ ನನಗೆ ಗೊತ್ತಿತ್ತು ಆ ಕುತೂಹಲ ಇನ್ನೂ ನನ್ನಲ್ಲಿ ಹೆಚ್ಚಾಯ್ತು ಹೇಗಾದರೂ ಮಾಡಿ ಈ ಪದಗಳ ಅರ್ಥ ತಿಳ್ಕೋಬೇಕು ಇದ್ಯಾವುದೂ ಇದು ವರ್ಷದುಡುಕು/ಹೊಸ್ತುಡುಕು ಹಬ್ಬ ಅನ್ನೋ ಉತ್ಕಟ ಆಸಕ್ತಿ ಹೆಚ್ಚಾಯಿತು ಹೀಗೆಯೇ ಹಳ್ಳಿಗೆ ಹೋದಾಗ ಗ್ರಾಮಸ್ಥರನ್ನು ಕುರಿತು ಹೀಗೆ ಸಂಭೋಧಿಸಿದೆ.

“ಏನ್ರೀ ಯಜಮಾನ್ರೇ ವರ್ಷದುಡುಕು ಜೋರಾ”?
“ವ್ಹಾ ಬನ್ನಿ ಸಾ ಜೋರದ ಕಣಾ, ಹಬ್ಬ ಅಂದಮ್ಯಾಗ ಇದ್ದಿದ್ದೇ ಅಲ್ವಾ ಕಣೀ ಸಾ”
“ಅದ್ಸರಿ ಏನೀ ಈ ಹೊಸ್ತುಡುಕು ಅಂದ್ರೆ”?
“ವ್ಹಾ ನೀವು ಸರಿಗೆ ಕೇಳಿದ್ರೀ ಕಪಾ ಇನ್ನೇನಾ ಸಾ ಯುಗಾದಿ ಮುಗಿದ ಮಾರ್ನೇ ದಿನಾ, ಎಲ್ಲರೂ ಮನೇಲೆ ಇರ್ತಾರ, ಹೈಕ ಮಕ್ಕ ನೀರೇರೆಚಗತಾರ, ಒಬ್ಬಿಟ್ಟು ಪಾಯಾಸ,ತಿಂಡಿ ಗಿಂಡಿ ಮಾಡ್ಕಂಡಮಾ ದ್ಯಾವ್ರಗ ಎಡೆ ಗಿಡೆ ಮಡಗಿ ಮಕ್ಕ ಮರಿ ತಿನ್ಕಂಡು ಉಣ್ಕಂಡು ಹಟ್ಟೀಲಿ ಜಾಲಿಯಾಗಿ ಇರ್ತಾರ”.
“ಇಷ್ಟೇಯಾ ವರ್ಷದುಡುಕು ಅಂದ್ರೆ”?
“ಅದ ಸಾ ಆಡೋರು ಇಸ್ಪೀಟ್ ಗಿಸ್ಪೀಟ್ ಆಡ್ತಾರ ಒಂಥರಾ ರಜೆ ಇದ್ದಂಗೆ ಸಾ ದಿನವೆಲ್ಲಾ ಹಟ್ಟೀಲೆ ಇರ್ತಾರ”

“ಅದ್ಸರಿ ಈ ಹೊಣ್ಣೇರ್ ಕಟ್ಟೋದು ಅಂದ್ರೆ ಏನು”?”ಅದಿನ್ಯಾನಿದ್ದು ಸಾ ಆರಂಭಕಾರ್ರಿಗೆ ಇದು ಹೊಸ್ವರ್ಸ ಇದ್ದಂಗ ಎತ್ಗಳಿಗ ನೊಗ ಹಾಕಿ,ನೇಗ್ಲು ಹೂಡಿ, ಕಕ್ಕೆ ಹೂವ,ಗಣಿಗಲ ಹೂವ ಎತ್ಗೋಳ್ ಕೊಂಬಿಗೆ ಕಟ್ಟಿ ಊರಾಗ ಒಂದ್ ರೌಂಡ್ ಸುತ್ತಿಸಿಗಂಡಮಾ ಪೂಜಾ ಗೀಜಾ ಮಾಡಿ ಆರಂಭ ಶುರು ಮಾಡೋದಕ್ಕ ಹೊಣ್ಣೇರ್ ಕಟ್ಟೋದು ಅಂತಾರೆ ಅಷ್ಟೇಯಾ ಅದು ಈಗ ಅಷ್ಟೋಂದಿಲ್ಲ ಸಾ ಕೆಲವು ಕಡಿಗ್ಯಾ ಮಾಡ್ತಾರಾ ಕೆಲವು ಕಡಿಗ್ಯಾ ಬುಡ್ತಾರಾ ಅದೆಲ್ಲಾ ಒಂದ್ ಜಮಾನ್ದಾಗಿತ್ತು”

“ಓಹ್ ಸರಿ ಈ ಕಕ್ಕೆ ಹೂವು ಗಣಗಲ ಹೂವು ಅಂದ್ರೆ ಯಾವುದು”? “ಅದೇ ಸಾ ಈ ರೋಡ್ಚೋರಿ ಕೆಂಪ್ಗ ಇರ್ತಾವಲ್ಲ ಅವೇ ಕಕ್ಕೆ ಹೂವು, ಅರಿಶಿಣ ಬಣ್ಣದ ಹೂವ್ ಇರ್ತಾವಲ್ಲ ಅವು ಗಣಿಗಲ್ವೂ ಈ ರಸ್ತಿ ಅಗಲೀಕರಣದಿಂದ ಆ ಹೂವುಗಳು ಸಿಗೋದೆ ಅಪರೂಪ ಆಗ್ಬುಟ್ಟದಾ!”

“ಹೂಂ… ಸರಿ ಇಷ್ಟೇಯಾ ಹಾಗಾರೆ ಹೊಸ್ತುಡುಕು ಅಂದ್ರೆ”?
“ಹೂಂ ಇನ್ನೂ ಅದೆ ಮಾಡೋರು ಮರಿ ಕೂದು ಬಾಡ್ಗಿಡೂಟಾ ಮಾಡ್ತಾರೆ ಎಣ್ಣಿ ಗಿಣ್ಣಿ ಹೊಡ್ದು ಜಾಲಿ ಮಾಡ್ತಾರೆ”
“ಈ ವರ್ಷದುಡುಕ್ಲೀ ಮಾಂಸದೂಟ ಕಡ್ಡಾಯಾ ನಾ”?
“ಹೇ ಹಾಗೇನಿಲ್ಲಾ ಸಾ ಆದರೆ ಒಂದ್ ಜಮಾನ್ದಾಗಿತ್ತಂತೆ ಯುಗಾದಿ ಆದ್ ಮರುದಿನ ಮಾಂಸ ತಿನ್ನಲಿಲ್ಲ ಅಂದ್ರೆ ಸ್ವರ್ಗಕ್ಕೆ ಬಿಡೋಲ್ಲ ಮಾಂಸ ತಿನ್ನಬೇಕು ಅನ್ನೋ ಪ್ರತೀತಿ ಇತ್ತಂತೆ ಇದನ್ನೆಲ್ಲ ನಿಮ್ಮ ಜಮಾನ್ದೋರಿಗೆ ಹೇಳಿದ್ರ ಬಿದ್ದು ಬಿದ್ದು ನಗನಾಡ್ತಿರೀ, ಕೆಲವರು ಆ ದಿನ ದುಡ್ಡು ಕಾಸು ಯಾರಿಗೂ ಕೊಡಾಕಿಲ್ಲ ಹಿಂಗ ಹತ್ತಲವು ಸಂಪ್ರದಾಯಾಗಳು ನೇಮ್ಗಳನ್ನ ಮಾಡ್ತಾರೆ”

“ಜಮೀನಿಗೆ ಹೋಗಿ ಉಳುಮೆ ಗಿಳುಮೆ ಮಾಡೋಲ್ವೋ”?
“ಕಂಡೀಸನ್ನಾಗಿ ಯಾರು ಹೊಲ್ನ ಊಳೋಲ್ಲ ಅಪ್ಪಿ ತಪ್ಪಿ ಮಳಿ ಗಿಳಿ ಉಯ್ಯ್ದ್ರೆ ಸ್ಥಳೀಯ್ ಜ್ವಾಳ ಗೀಳ ಬಿತ್ತೋರು ಬಿತ್ತಾರ ಅಷ್ಟೇ” “ಹೂಂ ಆಯ್ತು ಯಜಮಾನ್ರೆ ಥ್ಯಾಂಕ್ಯೂ ನಾನು ಬರ್ತೀನಿ” “ಹೂಂ ಆಯ್ತು ಕಣೀ ಹೋಗಿ ಬುದ್ದೀ ನಂಗು ಹೊಟ್ಟೈಸಿತೈತಿ ಹಟ್ಟಿಗೆ ಹೋಗ್ಬೇಕು ಒಬ್ಬಿಟ್ಟು ತಿನ್ಬೇಕು”.

ನೋಡಿ ನಮ್ಮ ಗ್ರಾಮೀಣ ಭಾಗದ ಸಂಪ್ರದಾಯಗಳು ಎಷ್ಟು ಚೆಂದ ಅಲ್ವಾ ಈ ದೇಸಿ ಭಾಷೆಯಲ್ಲಿ ಎಷ್ಟು ತಾಕತ್ತಿದೆ ಎಷ್ಟು ಗ್ರಾಮೀಣತೆಯ ಸೊಗಡಿದೆ ಈ ಭಾಷೆನಾ ಹಳ್ಳಿಗಳಲ್ಲಿ ಬಿಟ್ರೆ ಜಗತ್ತಿನ ಯಾವ ವಿಶ್ವ ವಿದ್ಯಾಲಯಗಳಲ್ಲೂ ಕೂಡ ಕಲಿಯಲಿಕ್ಕೆ ಆಗೋದಿಲ್ಲ. ನಮ್ಮ ಹಿಂದಿನವರು ನಡೆಸಿಕೊಂಡು ಬಂದ ಕೆಲವೊಂದು ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯ ನಮ್ಮ ಪರಂಪರೆ ಎಂತದ್ದು ಅಂತ ಹೇಳ್ತವೆ. ಈ ಚಾಮರಾಜನಗರದ ವರ್ಷದುಡುಕು ಹಾಗೇನೆ ಒಂಥರಾ ದೇಸಿಯ ಭಾಷೆಯ ಹಬ್ಬ ಹರಿದಿನಗಳ ಪರಿಚಯ ನನಗಾಯ್ತು ಧನ್ಯವಾದಗಳು ಚಾಮರಾಜನಗರ.

(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿಗಳು
ಚಾಮರಾಜನಗರ
9741270125)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಮಹಾ ಮಾನವತಾವಾದಿ ಅಂಬೇಡ್ಕರ್ ನೆನಪಿನಲ್ಲಿ..!

Published

on

  • ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್

ಭಾರತೀಯ ಸಂವಿಧಾನದ ವಾಸ್ತುಶಿಲ್ಪಿ ಮತ್ತು “ಅಸ್ಪೃಶ್ಯ” ದಲಿತ ಜಾತಿಗಾಗಿ ನಾಗರಿಕ ಹಕ್ಕುಗಳ ಆಜೀವ ಚಾಂಪಿಯನ್ ಎಂದು ಕರೆಯಲ್ಪಡುವ ಭೀಮರಾವ್ ರಾಮ್ಜಿ ಅಂಬೇಡ್ಕರ್ 1927 ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಮತ್ತು 1952 ರಲ್ಲಿ ಗೌರವ ಪದವಿಯನ್ನು ಪಡೆದ “ಶ್ರೇಷ್ಠ” ಸಾಮಾಜಿಕ ಸುಧಾರಕ ಮತ್ತು ಮಾನವ ಹಕ್ಕುಗಳ ಧೀರ.

ಅಂಬೇಡ್ಕರ್ ಹಿಂದೂ “ಅಸ್ಪೃಶ್ಯ” ಜಾತಿಯ ಮೊದಲ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿ, ರಾಜಕೀಯವಾಗಿ ಪ್ರಮುಖ ಸದಸ್ಯ. ದಲಿತ ಹಕ್ಕುಗಳು ಮತ್ತು ಸಾಮಾಜಿಕ ಮಾನ್ಯತೆಗಾಗಿ ವಸಾಹತುಶಾಹಿ ಭಾರತದ ಏಕೈಕ ಸ್ವಾಯತ್ತ ಹೋರಾಟಕ್ಕಾಗಿ ಮತ್ತು ಭಾರತೀಯ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಅವರು ನಿರ್ವಹಿಸಿದ ಪಾತ್ರಕ್ಕಾಗಿ, ಅವರನ್ನು ಇಂದು ಉತ್ತಮವಾಗಿ ಸ್ಮರಿಸಲಾಗುತ್ತಿದೆ;

ಜಾತಿಯನ್ನು ಅಸಮಾನತೆ ಮತ್ತು ಐತಿಹಾಸಿಕ ಅನ್ಯಾಯದ ರೂಪವೆಂದು ಪುನರಾವರ್ತಿಸುವ ಅವರ ವ್ಯಾಪಕ ಬರಹಗಳು ಇಂದು ಪ್ರಜಾಪ್ರಭುತ್ವ ನ್ಯಾಯ ಮತ್ತು ದೃಢೀಕರಣದ ಕ್ರಿಯಾ ನೀತಿಯ ಭಾರತೀಯ ಪಥಗಳಲ್ಲಿ ಆಳವಾದ ಮತ್ತು ನಿರಂತರವಾದ ಗುರುತು ಬಿಡಲು ಅವಕಾಶ ಮಾಡಿಕೊಟ್ಟಿತು.

ಕೊಲಂಬಿಯಾದ ವಿದ್ಯಾರ್ಥಿಯಾಗಿ, ಡಾ.ಬಿ.ಆರ್.
ಅಂಬೇಡ್ಕರ್ ಅವರು ಅಮೆರಿಕದ ಉದಾರವಾದದ ಕೆಲವು ಶ್ರೇಷ್ಠ ವ್ಯಕ್ತಿಗಳಾದ ಜಾನ್ ಡೀವಿ ಮತ್ತು ಎಡ್ವರ್ಡ್ ಸೆಲಿಗ್‌ಮನ್ ಮತ್ತು ಅಮೆರಿಕಾದ ಇತಿಹಾಸಕಾರರಾದ ಜೇಮ್ಸ್ ಶಾಟ್‌ವೆಲ್ ಮತ್ತು ಜೇಮ್ಸ್ ಹಾರ್ವೆ ರಾಬಿನ್ಸನ್‌ರೊಂದಿಗೆ ಅಧ್ಯಯನ ಮಾಡಿದರು.

ಅಮೆರಿಕದ ತತ್ವಜ್ಞಾನಿ ಮತ್ತು ಶೈಕ್ಷಣಿಕ ಸುಧಾರಕ ಜಾನ್ ಡೀವಿ, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಡಾ. ಅಂಬೇಡ್ಕರ್ ಅವರ ಬೌದ್ಧಿಕ ಮಾರ್ಗದರ್ಶಕರಾಗಿದ್ದರು. ಅವರ ಮಾರ್ಗದರ್ಶನದಲ್ಲಿ, ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಅವರ ಆಲೋಚನೆಗಳ ನೀಲನಕ್ಷೆಯನ್ನು ರೂಪಿಸಿದರು.

ಇದು ರಾಜಕೀಯ ಪರಿಕಲ್ಪನೆಗಳ ಸಾರ್ವತ್ರಿಕತೆಯನ್ನು ಅನ್ವೇಷಿಸಲು ಅವಕಾಶ ಮಾಡಿಕೊಟ್ಟಿತು, ಜೊತೆಗೆ ಯುರೋ-ಅಮೆರಿಕದ ಅನ್ಯಾಯ ಮತ್ತು ಅಮಾನವೀಯತೆಯ ಇತಿಹಾಸಗಳಿಗೆ ಸಂಬಂಧಿಸಿದಂತೆ ಡಾರ್ಕ್ ಇತಿಹಾಸಗಳನ್ನು ಬಹಿರಂಗಪಡಿಸಲು ಅವಕಾಶ ಮಾಡಿಕೊಟ್ಟಿತು.

ಇದನ್ನೂ ಓದಿ |ಸಂವಿಧಾನ ನಿತ್ಯದ ಪಾಠವಾಗಲಿ..!

ಇದು ಅಂಬೇಡ್ಕರ್ ಅವರ ಚಿಂತನೆಯ ದ್ವಿಗುಣವಾದ ಪಾತ್ರ-ಅದರ ಆಳವಾದ ಜಾಗತಿಕತೆ, ಮತ್ತು ಅಸ್ಪೃಶ್ಯತೆಯ ನಿರ್ದಿಷ್ಟ ಯಾತನೆಯೊಂದಿಗಿನ ನಿರಂತರ ಕಾಳಜಿಯು ಅವರ ಪೀಳಿಗೆಯ ಇತರ ಆಂಟಿಕೊಲೊನಿಯಲ್ ಚಿಂತಕರಿಂದ ಅವರನ್ನು ಪ್ರತ್ಯೇಕಿಸುತ್ತದೆ.

ಮುಂದೆ 1936 ರಲ್ಲಿ, ಉದಾರವಾದಿ ಹಿಂದೂ ಜಾತಿ-ಸುಧಾರಕರ ಗುಂಪಿನ 1936 ರ ಸಭೆಗಾಗಿ ಅಂಬೇಡ್ಕರ್ ಅವರು ಜಾತಿಯ ಸರ್ವನಾಶವನ್ನು ಬರೆದರು. ಅವರ ಭಾಷಣದ ಕರಡನ್ನು ನೋಡಿದ ನಂತರ ಆ ಗುಂಪು ತಮ್ಮ ಆಹ್ವಾನವನ್ನು ಹಿಂತೆಗೆದುಕೊಂಡಿತು. ಪರಿಣಾಮವಾಗಿ ಅಂಬೇಡ್ಕರ್ ಈ ಕೃತಿಯನ್ನು ಸ್ವತಃ ಪ್ರಕಟಿಸಿದರು, ಮತ್ತು ಇದು ತ್ವರಿತ ಕ್ಲಾಸಿಕ್ ಆಗಿ ಮಾರ್ಪಟ್ಟಿತು.

ಕೊಲಂಬಿಯಾ ಸೆಂಟರ್ ಫಾರ್ ನ್ಯೂ ಮೀಡಿಯಾ ಬೋಧನೆ ಮತ್ತು ಕಲಿಕೆ ಅವರ ಆನಿಹೈಲೇಷನ್ ಆಫ್ ಜಾತಿ ವೆಬ್‌ಸೈಟ್‌ನಲ್ಲಿ ಕೃತಿಯ ಟಿಪ್ಪಣಿ ಆವೃತ್ತಿಯನ್ನು ನೀಡುತ್ತದೆ.
2004 ರಲ್ಲಿ ಕೊಲಂಬಿಯಾದ 250 ನೇ ವಾರ್ಷಿಕೋತ್ಸವದ ಆಚರಣೆಯು ತನ್ನ ವೆಬ್‌ಸೈಟ್‌ನಲ್ಲಿ ಅಂಬೇಡ್ಕರ್ ಅವರ ಪ್ರೊಫೈಲ್ ಅನ್ನು ಒಳಗೊಂಡಿತ್ತು.

ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ವಿಚಾರಗಳ ಆಧಾರದ ಮೇಲೆ ಪ್ರಜಾಪ್ರಭುತ್ವದ ನ್ಯಾಯದ ಭಾರತೀಯ ಪಥಗಳಲ್ಲಿ ಅಂಬೇಡ್ಕರ್ ಅವರ ಗುರುತು ಯುಎಸ್ ಅಧ್ಯಕ್ಷ ಬರಾಕ್ ಒಬಾಮ ಅವರು 2010 ರಲ್ಲಿ ಭಾರತದ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಕೇಳಬಹುದು. ಅಧ್ಯಕ್ಷ ಒಬಾಮಾ ಅವರು ಭಾರತೀಯ ಸಂವಿಧಾನ ಮತ್ತು ಭಾರತೀಯ ಸಮಾಜಕ್ಕೆ ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ.

“to get an education, to find work, and to give their children a better future.” ಎಂಬ ನಿಲುವಿನಲ್ಲಿ ಭೀಮರಾವ್ ರಾಮ್ಜಿ ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ಶಿಕ್ಷಣವನ್ನು ಪಡೆಯುವ ಹಕ್ಕನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ ಈ ಒಂದು ಹಕ್ಕು ಎಲ್ಲಾವರ್ಗಕ್ಕಿಂತ ಶ್ರೇಷ್ಟವಾದುದಾಗಿದೆ ಎಂದು ಹೇಳುತ್ತಾ
ಸಾರ್ವಜನಿಕ ಸಂಸ್ಕೃತಿಯು ಮಾನಸಿಕ ಮತ್ತು ದೈಹಿಕ ಸ್ಥಳವಾಗಿದ್ದು, ಅಲ್ಲಿ ಸ್ವಯಂ ಮತ್ತು ಪ್ರಪಂಚದ ದೃಷ್ಟಿಕೋನದ ಮೂಲ ಕಲ್ಪನೆಗಳು ಸ್ಫಟಿಕೀಕರಣಗೊಳ್ಳುತ್ತವೆ.

ವೈವಿಧ್ಯಮಯ ಸಂವಹನ ರೇಖೆಗಳನ್ನು ರೂಪಿಸಲು ಇದು ಮುಖ್ಯ ಸ್ಥಳವಾಗಿದೆ. ಈ ಸಂವಹನ ರೇಖೆಗಳು ವ್ಯಕ್ತಿಯ ನಡವಳಿಕೆಯನ್ನು ಶಿಸ್ತುಬದ್ಧಗೊಳಿಸುತ್ತವೆ. ಸ್ವಯಂ ಪ್ರಜ್ಞೆಯ ಕುರಿತಾದ ದಲಿತರ ವಿಚಾರಗಳು ಅವರ ದೈನಂದಿನ ಅನುಭವದಿಂದ ಹೆಚ್ಚಾಗಿ ರೂಪುಗೊಂಡಿದ್ದರಿಂದ, ಅಂಬೇಡ್ಕರ್ ಮಾನಸಿಕ ಮತ್ತು ದೈಹಿಕ ಜಾಗವನ್ನು ಆತ್ಮಸಾಕ್ಷಿಯತ್ತ ದಲಿತರ ಸಾರ್ವಜನಿಕ ಸಂಸ್ಕೃತಿಯನ್ನು ಚಿಂತನಶೀಲವಾಗಿ ವಿಕಸನಗೊಳಿಸಿದರು.

ಸ್ವಾಯತ್ತ ದಲಿತ ಪ್ರತಿಪಾದಕ ಸ್ವಯಂ ಮತ್ತು ವಿಮೋಚನಾ ಪ್ರಪಂಚದ ದೃಷ್ಟಿಕೋನವನ್ನು ಬೆಳೆಸಲು ವೈವಿಧ್ಯಮಯ ಸಂವಹನ ರೇಖೆಗಳಲ್ಲಿ ಹಲವಾರು ನೋಡಲ್ ಪಾಯಿಂಟ್‌ಗಳನ್ನು ರಚಿಸಲಾಗಿದೆ. ಇದು ಅಂಬೇಡ್ಕರೈಟ್ ಪ್ರಾಕ್ಸಿಸ್ ಜೊತೆಗೆ ಸಾಮಾಜಿಕ ಚರ್ಚಾಸ್ಪದ ತೊಡಗಿಸಿಕೊಳ್ಳುವಿಕೆಗಳನ್ನು ಅಭಿವೃದ್ಧಿಪಡಿಸುವ ವಾತಾವರಣವನ್ನು ನಿರ್ಮಿಸಿತು.

ಮುಂಬೈ ಅಂಬೇಡ್ಕರ್ ಗರ್ಭಧರಿಸಿದ, ಪ್ರಾರಂಭಿಸಿದ ಮತ್ತು ಪ್ರಮುಖ ವಿಮೋಚನಾ ಚಳುವಳಿಗಳನ್ನು ಅಭಿವೃದ್ಧಿಪಡಿಸಿದ ಸ್ಥಳವಾಗಿರುವುದರಿಂದ, ಈ ನಗರವು “ಅಂಬೇಡ್ಕರೈಟ್ ಸಾರ್ವಜನಿಕ ಸಂಸ್ಕೃತಿಯ” ಪೂರ್ವಸೂಚಕವಾಗಿದೆ.

ಸಾರ್ವಜನಿಕ ಸಂಸ್ಕೃತಿ ಆಧುನಿಕ ನಾಗರಿಕ ಸಮಾಜಗಳೊಂದಿಗೆ ಸಂಬಂಧ ಹೊಂದಿದೆ. ಸಂವಹನ ಅಭ್ಯಾಸಗಳು ನಿರ್ದಿಷ್ಟ ನಡವಳಿಕೆಯಲ್ಲಿ ಸಾರ್ವಜನಿಕ ನಡವಳಿಕೆ, ಅಭಿಪ್ರಾಯಗಳು ಮತ್ತು ಪ್ರಪಂಚದ ದೃಷ್ಟಿಕೋನಗಳನ್ನು ರೂಪಿಸುವ ಸ್ಥಳವಾಗಿದೆ. ಇದು ಸ್ವಯಂ ಮತ್ತು ಇತರರ ಬಗ್ಗೆ ಜ್ಞಾನವನ್ನು ಕ್ರೂಢೀಕರಿಸುತ್ತದೆ ಮತ್ತು ಸಾಮೂಹಿಕ ಚಟುವಟಿಕೆಗಳಿಂದ ಸ್ಫಟಿಕೀಕರಣಗೊಳ್ಳುತ್ತದೆ ಮತ್ತು ಗುರುತಿಸಲ್ಪಡುತ್ತಿದೆ.

ಸಾರ್ವಜನಿಕ ಸಂಸ್ಕೃತಿಯ ಅಂಶಗಳನ್ನು ಕೆಲವೊಮ್ಮೆ “ಸಾರ್ವಜನಿಕ ವಲಯ,” “ಸಾರ್ವಜನಿಕ ಜೀವನ” ಅಥವಾ “ಸಾರ್ವಜನಿಕ ಚಟುವಟಿಕೆಗಳು” ಎಂದು ಸ್ಪಷ್ಟಪಡಿಸಲಾಗುತ್ತಿದೆ. “ಸಾರ್ವಜನಿಕ ವಲಯ” ದ ವಿದ್ಯಮಾನವನ್ನು ಗ್ರಹಿಸಲು ಜುರ್ಗೆನ್ ಹಬೆರ್ಮಾಸ್ ರಾಜ್ಯದ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ

ಸಾರ್ವಜನಿಕ ವಲಯದ ಅವರ ಪರಿಕಲ್ಪನೆಯನ್ನು ಕೆಲವು ವಿದ್ವಾಂಸರು ಪ್ರತಿರೋಧಿಸುತ್ತಾರೆ ಏಕೆಂದರೆ ಇದು ನಾಗರಿಕ ಸಮಾಜದಲ್ಲಿ ತಾರತಮ್ಯ ಮತ್ತು ಪ್ರತಿರೋಧಕ್ಕೆ ಮಾದರಿಯನ್ನು ಒದಗಿಸುವುದಿಲ್ಲ ಎಂದು ಆದರೂ ಅದಕ್ಕೆ ಸ್ಪಷ್ಟೀಕರಣ ಕೊಡುತ್ತಾರೆ.

ಇತ್ತೀಚೆಗೆ, ಸಾರ್ವಜನಿಕ ಸಂಸ್ಕೃತಿಯ ವಿವಿಧ ಪರಿಕಲ್ಪನೆಗಳು, ವಿಶೇಷವಾಗಿ ಬಹುಸಾಂಸ್ಕೃತಿಕ ನಗರ ಜಾಗವನ್ನು ಅಧ್ಯಯನ ಮಾಡುವಾಗ, ಸಾರ್ವಜನಿಕ ಸಂಸ್ಕೃತಿಯ ಏಕಮಾತ್ರ ಅಭಿವ್ಯಕ್ತಿಗೆ ಸವಾಲು ಹಾಕಿವೆ. ಮುಂಬೈನ ಸಾರ್ವಜನಿಕ ಸಂಸ್ಕೃತಿಯ ಪ್ರಮುಖ ಐತಿಹಾಸಿಕ ಅಧ್ಯಯನಗಳು ದಕ್ಷಿಣ ಬಾಂಬೆಯ ಮೇಲ್ವರ್ಗದ ಸಮಾಜಕ್ಕೆ ನಿರ್ದಿಷ್ಟವಾಗಿವೆ, ಮತ್ತು ವ್ಯಾಪಾರಿಗಳು, ಅಥವಾ ಈ ಅಧ್ಯಯನಗಳು ಮುಂಬಯಿಯಲ್ಲಿನ ಎಡ ಒಕ್ಕೂಟವಾದದ ಮೇಲೆ ಹೆಚ್ಚು ಗಮನಹರಿಸುತ್ತವೆ ಮತ್ತು ಅನುಬಂಧದ ಮೂಲಕ ಸಮುದಾಯ ಸಂಘಗಳಿಗೆ ದ್ವಿತೀಯಕ ಪಾತ್ರವನ್ನು ನೀಡುತ್ತವೆ.

ನಗರದ ದೈನಂದಿನ ಜೀವನ, ಸ್ವಾಧೀನಪಡಿಸಿಕೊಳ್ಳುವಿಕೆ ಮತ್ತು ವ್ಯತ್ಯಾಸವನ್ನು ಗುರುತಿಸುವುದು ಮುಂಬೈನ ಬದಲಾಗುತ್ತಿರುವ ಸಾಮಾಜಿಕ ಜೋಡಣೆಗಳು ಮತ್ತು ವಿದ್ಯುತ್ ನಕ್ಷತ್ರಪುಂಜಗಳ ಸ್ವರೂಪ ಮುಂತಾದ ಲೆಫೆಬ್ರಿಯನ್ ಕಲ್ಪನೆಗಳಿಂದ ಹುಟ್ಟಿಕೊಂಡಿದೆ.

ಪ್ರಸ್ತುತ ಅಧ್ಯಯನವು ಮುಂಬಯಿಯಲ್ಲಿನ ಅಂಬೇಡ್ಕರೈಟ್ ಸಾರ್ವಜನಿಕ ಸಂಸ್ಕೃತಿಯೊಂದಿಗೆ ದಲಿತರ ಪ್ರಾದೇಶಿಕ ವಿತರಣೆಯ ಸ್ವರೂಪ, ಅವರ ಸಮುದಾಯ ಸಂಘಗಳು ಅವರ ಸಾಮಾಜಿಕ ಪ್ರಭಾವದ ಚಟುವಟಿಕೆಗಳು ಮತ್ತು ಈ ಚಟುವಟಿಕೆಗಳು ಸ್ವಾಯತ್ತ ಚರ್ಚಾಸ್ಪದ ರಂಗವನ್ನು ರೂಪಿಸಿದ ಪ್ರಕ್ರಿಯೆಯ ಬಗ್ಗೆ ತನಿಖೆ ನಡೆಸಲು ಕೈಗೊಳ್ಳುತ್ತವೆ.

ಇಲ್ಲಿ, ಅಂಬೇಡ್ಕರೈಟ್ ಸಾರ್ವಜನಿಕ ಸಂಸ್ಕೃತಿಯನ್ನು ಮಾನಸಿಕ ಮತ್ತು ದೈಹಿಕ ಸ್ಥಳವೆಂದು ಪರಿಗಣಿಸಲಾಗಿದೆ. ಇದು ಸ್ವಾಯತ್ತ ದಲಿತರ ದೃಢವಾದ ಸ್ವಯಂ ಮತ್ತು ವಿಮೋಚನಾ ಪ್ರಪಂಚದ ದೃಷ್ಟಿಕೋನವನ್ನು ಬೆಳೆಸಿತು. ಇದು ಅಂಬೇಡ್ಕರೈಟ್ ಪ್ರಜ್ಞೆಯ ಪ್ರಚೋದನೆಗಾಗಿ ಕ್ರಿಯಾತ್ಮಕ ಕಾರ್ಯವಿಧಾನಗಳೊಂದಿಗೆ ಸಾಮಾಜಿಕ ಚರ್ಚಾಸ್ಪದ ತೊಡಗಿಸಿಕೊಳ್ಳುವಿಕೆಗಳನ್ನು ಅಭಿವೃದ್ಧಿಪಡಿಸುವ ವಾತಾವರಣವನ್ನು ನಿರ್ಮಿಸಿತು.

ಕೆಲವು ವಿದ್ವಾಂಸರು ಇದನ್ನು “ಅಂಬೇಡ್ಕರೈಟ್ ಕೌಂಟರ್-ಪಬ್ಲಿಕ್” ವಿಷಯದಲ್ಲಿ ಓದುತ್ತಾರೆ. ಇದು ಬಹಿಷ್ಕೃತ ಸಮುದಾಯಗಳಲ್ಲಿ ಸಂವಹನ ಜಾಲಗಳನ್ನು ಹುಟ್ಟುಹಾಕಿತು.
ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಮೂಲ ವಾದಗಳನ್ನು ಚಿಂತನಶೀಲವಾಗಿ ಹರಿತಗೊಳಿಸಿದರು ಮತ್ತು ದಲಿತರಿಗೆ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗರೂಕತೆಯಿಂದ ಕಲ್ಪಿಸಿಕೊಂಡರು.

ವಿಕಾಸಗೊಳ್ಳುತ್ತಿರುವ ಈ ಅಂಬೇಡ್ಕರೈಟ್ ಸಾರ್ವಜನಿಕ ಸಂಸ್ಕೃತಿಯು ಪರ್ಯಾಯ ಸಂಸ್ಕೃತಿಯನ್ನು ಉತ್ಪಾದಿಸುವತ್ತ ಜಾತಿ-ಹೋರಾಟವನ್ನು ನಡೆಸಲು ಜಾಗವನ್ನು ಸೃಷ್ಟಿಸಲು ಪ್ರಯತ್ನಿಸಿತು, ಆದರೆ ಇದು ಪ್ರತಿ-ಸಂಸ್ಕೃತಿಯಲ್ಲ.

ನೀವು ಯಾರು ಅಥವಾ ನೀವು ಎಲ್ಲಿಂದ ಬಂದವರು, ಎನ್ನುವ ಪ್ರಶ್ನೆಗೆ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ದೇವರು ಕೊಟ್ಟಿರುವ ಸಾಮರ್ಥ್ಯವನ್ನು ಪೂರೈಸಬಲ್ಲರು ಎಂದು ನಾವು ನಂಬುತ್ತೇವೆ. ಆದರೆ ಡಾ. ಅಂಬೇಡ್ಕರ್ ಅವರಂತಹ ವಿದ್ವಾಂಸರು ತಮ್ಮನ್ನು ಮೇಲಕ್ಕೆತ್ತಿ ಎಲ್ಲರ ಹಕ್ಕುಗಳನ್ನು ರಕ್ಷಿಸುವ ಸಂವಿಧಾನದ ಮಾತುಗಳನ್ನು ಬರೆದಿರುವ ಪ್ರಪಂಚದ ಏಕೈಕ ವ್ಯಕ್ತಿಯಾಗಿದ್ದಾರೆ ಎಂದು ಹೇಳಿಕೊಳ್ಳುವ ಹೆಮ್ಮೆ ಭಾರತೀಯರಾದ ನಮ್ಮೆಲ್ಲರಿಗೂ ಸಲ್ಲುವಂತೆ ಮಾಡಿಕೊಟ್ಟಿದ್ದಾರೆ.

130ನೆಯ ಭೀಮರಾವ್ ರಾಮ್ಜಿ ಅಂಬೇಡ್ಕರ್ ಜಯಂತಿಯ ಶುಭಾಷಯಗಳೊಂದಿಗೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending