Connect with us

ದಿನದ ಸುದ್ದಿ

ಗೋ ಹತ್ಯೆ ಅಲ್ಲ, ಪ್ರಜಾತಂತ್ರದ ಹತ್ಯೆ ನಿಷೇಧಿಸಬೇಕಿದೆ

Published

on

  • ನಾ ದಿವಾಕರ

2020 ಪ್ರಜಾಸತ್ತಾತ್ಮಕ ಭಾರತದ ಪಾಲಿಗೆ ಕರಾಳ ವರ್ಷ. ಕೋವಿದ್ 19ರ ಭೀಕರ ಪರಿಣಾಮಗಳು ನೈಸರ್ಗಿಕ. ಇದರಿಂದ ಉಂಟಾದ ಲಕ್ಷಾಂತರ ಸಾವುಗಳು, ಅಸಂಖ್ಯಾತ ಜನರ ಸಂಕಷ್ಟಗಳು ಮತ್ತು ಶೋಷಿತ ಜನಸಮುದಾಯಗಳ ಬವಣೆ ಆಡಳಿತ ವ್ಯವಸ್ಥೆಯ ಕೊಡುಗೆ. 130 ಕೋಟಿ ಜನಸಂಖ್ಯೆ ಇರುವ ಬೃಹತ್ ದೇಶದಲ್ಲಿ ಒಂದು ಸಾಂಕ್ರಾಮಿಕ ಪಿಡುಗಿಗೆ 1 ಲಕ್ಷ 41 ಜನರ ಸಾವು ಆಡಳಿತ ವ್ಯವಸ್ಥೆಯನ್ನು ಅಷ್ಟಾಗಿ ಭಾವಿಸುವುದಿಲ್ಲ.

ಆ ಮಟ್ಟಿಗೆ ಭಾರತೀಯ ಪ್ರಭುತ್ವದ ಸಂವೇದನೆ ಜಡ್ಡುಗಟ್ಟಿದೆ. ಏಕೆಂದರೆ 1995ರ ನಂತರದ 25 ವರ್ಷಗಳಲ್ಲಿ 3 ಲಕ್ಷ 50 ಸಾವಿರ ರೈತರು ಸಾಲದ ಹೊರೆಯಿಂದ, ಬೆಳೆ ವೈಫಲ್ಯದಿಂದ, ಇತರ ಕೃಷಿ ಸಂಬಂಧಿತ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಾರತದ ಪ್ರಭುತ್ವದ ದೃಷ್ಟಿಯಲ್ಲಿ ಕೋವಿದ್‍ನಿಂದ ಉಂಟಾಗುವ ಸಾವುಗಳಿಗೂ, ರೈತರ ಆತ್ಮಹತ್ಯೆಗಳಿಗೂ ವ್ಯತ್ಯಾಸವೇನೂ ಇರುವುದಿಲ್ಲ. ಆ ಮಟ್ಟಿಗೆ ಭಾರತದ ಆಡಳಿತ ವ್ಯವಸ್ಥೆ ಮಾನವೀಯ ಸ್ಪರ್ಶವನ್ನು ಕಳೆದುಕೊಂಡಿದೆ.

ನೈಸರ್ಗಿಕ ಕೋವಿದ್ ಮತ್ತು ಸಾಂದರ್ಭಿಕ ಕೃಷಿ ಬಿಕ್ಕಟ್ಟು-ರೈತರ ಆತ್ಮಹತ್ಯೆಗಳನ್ನು ಬದಿಗಿಟ್ಟು ನೋಡಿದರೂ 2020 ಭಾರತದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಆಡಳಿತ ವ್ಯವಸ್ಥೆಗೆ ಕರಾಳ ವರ್ಷವೇ ಆಗಿದೆ. ಕಾಶ್ಮೀರದ ದಿಗ್ಬಂಧನ ಮತ್ತು ಕಾಶ್ಮೀರದ ಜನತೆಯ ಗೃಹಬಂಧನದ ಉನ್ಮಾದದ ನಡುವೆಯೇ ಕೇಂದ್ರ ಸರ್ಕಾರ ಭಾರತೀಯ ಪ್ರಜೆಗಳ ಪೌರತ್ವವನ್ನೇ ಪ್ರಶ್ನಿಸುವ ಕಾಯ್ದೆಯೊಂದನ್ನು ಜಾರಿಗೊಳಿಸಿದ್ದು ಕಳೆದ ವರ್ಷ ಡಿಸೆಂಬರ್ 11ರಂದು. ದೇಶದಲ್ಲಿ ಲಕ್ಷಾಂತರ ಸಂಖ್ಯೆಯ ಅಕ್ರಮ ವಲಸಿಗರು ಬಾಂಗ್ಲಾದೇಶ, ಪಾಕಿಸ್ತಾನದಿಂದ ಬಂದು ನೆಲೆಸಿದ್ದಾರೆ ಇವರೆಲ್ಲರನ್ನೂ ಉಚ್ಚಾಟಿಸುವ “ ಸ್ವಚ್ಚ ಭಾರತ ಅಭಿಯಾನಕ್ಕೆ ” ಚಾಲನೆ ದೊರೆತಿದ್ದು ಈ ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ.

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ಬಹಳ ವರ್ಷಗಳಿಂದ ನೆಲೆಸಿರುವ ಹಿಂದೂಗಳಿಗೆ ಭಾರತದ ಪೌರತ್ವವನ್ನು ನೀಡುವುದು ಮತ್ತು ಭಾರತದಲ್ಲಿ ಬಹಳ ವರ್ಷಗಳಿಂದ ಅಕ್ರಮವಾಗಿ ನೆಲೆಸಿರುವ ಈ ದೇಶದ ಮುಸ್ಲಿಮರನ್ನು ಅವರ ದೇಶಗಳಿಗೆ ರವಾನಿಸುವುದು ಎನ್‍ಆರ್‍ಸಿ, ಎನ್‍ಪಿಆರ್ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲ ಉದ್ದೇಶವಾಗಿತ್ತು. ಈ ಮಸೂದೆಗಳನ್ನು ಸಂಸತ್ತಿನಲ್ಲಿ ಯಾವುದೇ ಚರ್ಚೆ ಇಲ್ಲದೆ ಅನುಮೋದಿಸಿದ ಮಾದರಿಯೇ ಪ್ರಜಾತಂತ್ರದ ಕಗ್ಗೊಲೆಯ ಸೂಚನೆಗಳಾಗಿದ್ದವು.

ದೇಶಾದ್ಯಂತ ಭುಗಿಲೆದ್ದ ಸಿಎಎ ವಿರೋಧಿ ಆಂದೋಲನ ಕೇಂದ್ರ ಸರ್ಕಾರದ ದುಸ್ಸಾಹಸಕ್ಕೆ ತಕ್ಕ ಪ್ರತಿರೋಧವಾಗಿ ರೂಪುಗೊಂಡಿತ್ತು. ಈ ಆಂದೋಲನವನ್ನು ವಿಫಲಗೊಳಿಸಲು ಕೇಂದ್ರ ಸರ್ಕಾರ ಮತ್ತು ಆಡಳಿತಾರೂಢ ಪಕ್ಷ ಬಳಸಿದ ವಾಮ ಮಾರ್ಗಗಳು ದೆಹಲಿಯ ಕೋಮು ಗಲಭೆಗಳಲ್ಲಿ ವ್ಯಕ್ತವಾಗಿದ್ದವು. ಜನರನ್ನು ಗುಂಡಿಟ್ಟು ಕೊಲ್ಲಿ ಎಂದು ಮುಕ್ತವಾಗಿ ರಸ್ತೆಯಲ್ಲೇ ಕೂಗಿ ಹೇಳುವ ವ್ಯಕ್ತಿಯನ್ನು ಬಂಧಿಸಲೂ ಸಾಧ್ಯವಾಗದ ಸರ್ಕಾರಕ್ಕೆ ಬಿಲ್ಕಿಸ್ ಬಾನು ಎನ್ನುವ 80ರ ವೃದ್ಧೆಯಲ್ಲಿ ಭಯೋತ್ಪಾದಕತೆಯ ಛಾಯೆ ಕಂಡುಬಂದಿದ್ದು ಆಡಳಿತ ವ್ಯವಸ್ಥೆಯ ಕ್ರೌರ್ಯದ ಸಂಕೇತವಾಗಿತ್ತು.

ಇದು ಭಾರತದಲ್ಲಿ ಪ್ರಜಾತಂತ್ರದ ಕಗ್ಗೊಲೆಯ ಆರಂಭದ ಹೆಜ್ಜೆಗಳು ಎಂದು ಅರ್ಥವಾಗುವ ಹೊತ್ತಿಗೆ ಕೋವಿದ್ 19 ಅಪ್ಪಳಿಸಿತ್ತು. ಕೋವಿದ್ ಒಂದು ಮಾರಣಾಂತಿಕ ಪಿಡುಗು, ಲಕ್ಷಾಂತರ ಜನರ ಬದುಕನ್ನೇ ಕಸಿದುಕೊಳ್ಳುವ ಒಂದು ಸಾಂಕ್ರಾಮಿಕ. ವಿಶ್ವದಾದ್ಯಂತ ಈ ಪಿಡುಗಿನಿಂದ ಉಂಟಾಗಿರುವ ಸಾಮಾಜಿಕ ಮತ್ತು ಆರ್ಥಿಕ ವ್ಯತ್ಯಯಗಳು ದುಡಿಯುವ ವರ್ಗಗಳನ್ನು ಮಾತ್ರವೇ ಅಲ್ಲದೆ ಮಧ್ಯಮ ಮತ್ತು ಮೇಲ್ ಮಧ್ಯಮ ವರ್ಗಗಳನ್ನೂ ಕಂಗಾಲಾಗಿಸಿವೆ.

ಕೋವಿದ್ ನಿಯಂತ್ರಿಸುವ ನಿಟ್ಟಿನಲ್ಲಿ ಯಾವುದೇ ಒಂದು ನಿರ್ದಿಷ್ಟ ಕಾನೂನನ್ನು ರೂಪಿಸದೆ ಲಕ್ಷಾಂತರ ಮಂದಿಯ ಸಂಕಷ್ಟಕ್ಕೆ ಕಾರಣವಾಗಿರುವುದು ಭಾರತ ಸರ್ಕಾರದ ಪ್ರಜಾತಂತ್ರ ವಿರೋಧಿ ಧೋರಣೆಗೆ ಮತ್ತೊಂದು ನಿದರ್ಶನ. ಬಹುಪಾಲು ರಾಷ್ಟ್ರಗಳಲ್ಲಿ ಕೋವಿದ್ ನಿಯಂತ್ರಿಸುವ ಉದ್ದೇಶದಿಂದಲೇ ಹೊಸ ಕಾಯ್ದೆಗಳನ್ನು ಜಾರಿ ಮಾಡಲಾಗಿದ್ದು ಭಾರತ ಇದಕ್ಕೆ ಹೊರತಾಗಿದೆ.

ಆದರೆ ಭಾರತದಲ್ಲಿ ಕೇಂದ್ರ ಸರ್ಕಾರ ಹಠಾತ್ತನೆ ವಿಧಿಸಿದ ಲಾಕ್ ಡೌನ್ ನಿಂದ ಉಂಟಾದ ದುಷ್ಪರಿಣಾಮಗಳನ್ನು ಮತ್ತಾವ ದೇಶದಲ್ಲೂ ಕಾಣಲಾಗುವುದಿಲ್ಲ. ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಪಟ್ಟ ಬವಣೆ, ಅನುಭವಿಸಿದ ಸಾವು ನೋವು ಮತ್ತು ಸಾವಿರಾರು ಕಿಲೋಮೀಟರ್ ಕಾಲ್ನಡಿಗೆಯ ಮೂಲಕ ತಮ್ಮ ಸ್ವಂತ ಊರುಗಳನ್ನು ಸೇರಿಕೊಳ್ಳಲು ಯತ್ನಿಸಿದ ದಾರುಣ ಸನ್ನಿವೇಶ ಈ ದೇಶದ ಆಡಳಿತ ವ್ಯವಸ್ಥೆಯ ಕ್ರೌರ್ಯದ ಮತ್ತೊಂದು ಮುಖವನ್ನು ಪರಿಚಯಿಸಿತ್ತು. ಬಿಸಿಲಿನ ಝಳ, ಕೊರೋನಾ ವೈರಾಣುವಿನ ಸೊಂಕು, ಆರೋಗ್ಯ ಸೇವೆಯ ಕೊರತೆ, ಸಾರಿಗೆ ವ್ಯವಸ್ಥೆಯ ಕೊರತೆ, ಹಸಿವಿನ ಬಳಲಿಕೆ ಮತ್ತು ಕೇಂದ್ರ ಹಾಗೂ ಸರ್ಕಾರಗಳ ನಿರ್ಲಕ್ಷ್ಯ ಸಾವಿರಾರು ವಲಸೆ ಕಾರ್ಮಿಕರನ್ನು ಬೀದಿಪಾಲು ಮಾಡಿತ್ತು.

ಈ ದುರವಸ್ಥೆಯ ನಡುವೆಯೇ ನೂರಾರು ವಲಸೆ ಕಾರ್ಮಿಕರು ರಸ್ತೆಗಳಲ್ಲಿ, ಚಲಿಸುವ ರೈಲುಗಳಲ್ಲಿ ಮೃತಪಟ್ಟಿದ್ದರು. ದುರಂತ ಎಂದರೆ ದೇಶದಲ್ಲಿ ಲಕ್ಷಾಂತರ ಅಕ್ರಮ ವಲಸಿಗರು ಇರುವ ಮಾಹಿತಿ ಇದೆ ಎಂದು ಹೇಳುತ್ತಿದ್ದ ಕೇಂದ್ರ ಸರ್ಕಾರಕ್ಕೆ ಯಾವ ರಾಜ್ಯದಲ್ಲಿ ಎಷ್ಟು ವಲಸೆ ಕಾರ್ಮಿಕರಿದ್ದಾರೆ ಎನ್ನುವ ಕನಿಷ್ಟ ಮಾಹಿತಿಯನ್ನೂ ಒದಗಿಸಲಾಗಲಿಲ್ಲ. ಲಾಕ್‍ಡೌನ್ ವಿಧಿಸಿದ 15 ದಿನಗಳ ನಂತರ ಒಮ್ಮೆಲೆ ಹರಿದುಬಂದ ಲಕ್ಷಾಂತರ ವಲಸೆ ಕಾರ್ಮಿಕರ ದಂಡು ಎಲ್ಲ ರಾಜ್ಯಗಳ ಆಡಳಿತ ವ್ಯವಸ್ಥೆಯನ್ನು ಕಂಗೆಡಿಸಿದ್ದನ್ನು ಕಂಡಿದ್ದೇವೆ.

ಈ ಪರಿಸ್ಥಿತಿಯನ್ನು ನಿವಾರಿಸುವಲ್ಲಿ ಸರ್ಕಾರಗಳು ಯಶಸ್ವಿಯಾದರೂ ಆ ವೇಳೆಗಾಗಲೇ ನೂರಾರು ಕಾರ್ಮಿಕರು ಅಸು ನೀಗಿದ್ದರು. ಸಾವಿರಾರು ಕುಟುಂಬಗಳು ತಮ್ಮ ನೆಲೆ ಕಳೆದುಕೊಂಡಿದ್ದವು. ದುರಂತ ಎಂದರೆ ಈ ಅವ್ಯವಸ್ಥೆಯಲ್ಲಿ ಮಡಿದ ವಲಸೆ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಯಾವುದೇ ಪರಿಹಾರವನ್ನೂ ಘೋಷಿಸಲಾಗಿಲ್ಲ. ಇದು ಪ್ರಭುತ್ವದ ಕ್ರೌರ್ಯದ ಮತ್ತೊಂದು ನಿದರ್ಶನ.

ಈ ದುರಂತಗಳ ನಡುವೆಯೇ, ದೇಶದ ಅಸಂಖ್ಯಾತ ಜನತೆ ತಮ್ಮ ನಾಳಿನ ಚಿಂತೆಯಲ್ಲಿ ಕಾಲ ಕಳೆಯುತ್ತಿರುವ ಸಂದರ್ಭದಲ್ಲೇ, ದುಡಿಯುವ ವರ್ಗಗಳ, ಶ್ರಮಜೀವಿಗಳ ಬದುಕಿಗೆ ಭರವಸೆ ನೀಡುವ ಕ್ರಮಗಳನ್ನು ಕೈಗೊಳ್ಳುವ ಬದಲು ಕೇಂದ್ರ ಸರ್ಕಾರ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಕಾನೂನುಗಳನ್ನು ರೂಪಿಸಲು ಮುಂದಾಗಿತ್ತು.

ಒಂದು ವರ್ಷದ ಕಾಲ ತುಟ್ಟಿ ಭತ್ಯೆಯನ್ನು ತಡೆಹಿಡಿಯುವುದು, ಕಾರ್ಖಾನೆಗಳಲ್ಲಿ ದುಡಿಯುವ ಅವಧಿಯನ್ನು ಹೆಚ್ಚಿಸುವುದು, ಕಾರ್ಮಿಕರ ಸಂಘಟನೆಯ ಹಕ್ಕುಗಳನ್ನು ಕಸಿದುಕೊಳ್ಳುವುದು ಮತ್ತು ಕಾರ್ಖಾನೆಗಳ ಮಾಲಿಕರಿಗೆ ಕಡಿಮೆ ವೇತನ ನೀಡಲು ಅಧಿಕಾರ ನೀಡುವುದು ಹೀಗೆ ಹಲವು ಕಾರ್ಮಿಕ ವಿರೋಧಿ ನಿಯಮಗಳನ್ನು ಕೋವಿದ್ 19 ಉಲ್ಬಣಿಸುತ್ತಿದ್ದ ಸಂದರ್ಭದಲ್ಲೇ ಜಾರಿಗೊಳಿಸಿದ ಕೇಂದ್ರ ಸರ್ಕಾರ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಲೆಂದೇ ದಶಕಗಳ ಹೋರಾಟದ ಪರಿಣಾಮವಾಗಿ ರೂಪಿಸಲಾಗಿದ್ದ 44 ಕಾರ್ಮಿಕ ಕಾಯ್ದೆಗಳನ್ನು ಕೇವಲ ನಾಲ್ಕು ಸಂಹಿತೆಗಳಲ್ಲಿ ಅಡಕಿಸುವ ಮೂಲಕ ಕಾರ್ಮಿಕರ ಎಲ್ಲ ಹಕ್ಕುಗಳನ್ನೂ ಕಸಿದುಕೊಳ್ಳುವ ಹೊಸ ಮಸೂದೆಯನ್ನು ಜಾರಿಗೊಳಿಸಿತ್ತು.

ಉಪವಾಸ, ಹಸಿವು, ಬಡತನ, ದಾರಿದ್ರ್ಯ, ಅನಾರೋಗ್ಯ ಮತ್ತೊ ಕೋವಿದ್‍ನಂತಹ ಮಾರಣಾಂತಿಕ ಪಿಡುಗು ಇಷ್ಟೆಲ್ಲಾ ಗಂಭೀರ ಸಮಸ್ಯೆಗಳ ನಡುವೆ ದೇಶದ ಶ್ರಮಜೀವಿಗಳ ಕತ್ತುಹಿಸುಕುವ ಈ ಕಾಯ್ದೆಗಳನ್ನು ಜಾರಿಗೊಳಿಸಲು ಯತ್ನಿಸುವುದು ಕ್ರೌರ್ಯದ ಪರಮಾವಧಿಯಲ್ಲವೇ ?

ಕೋವಿದ್ 19 ಸಂದರ್ಭದಲ್ಲಿ ಜನಸಂದಣಿಯಾಗದಂತೆ ನಿರ್ಬಂಧಗಳನ್ನು ವಿಧಿಸಿ, ಸಾರ್ವಜನಿಕ ಪ್ರತಿಭಟನೆಗಳಲ್ಲಿ ಸೇರಬಹುದಾದ ಜನರ ಸಂಖ್ಯೆಗೆ ನಿರ್ಬಂಧ ವಿಧಿಸಿ, ಜನವಿರೋಧಿ ಕಾನೂನುಗಳನ್ನು, ತಿದ್ದುಪಡಿ ಮಸೂದೆಗಳನ್ನು ಸಂಸತ್ತಿನಲ್ಲಿ ಚರ್ಚಿಸದೆಯೇ , ಸುಗ್ರೀವಾಜ್ಞೆಗಳ ಮೂಲಕ ಜಾರಿಗೊಳಿಸುವುದು ಪ್ರಜಾತಂತ್ರದ ಕಗ್ಗೊಲೆ ಅಲ್ಲವೇ ? ಈ ಸಂದರ್ಭದಲ್ಲೇ ಕೇಂದ್ರ ಸರ್ಕಾರ ದೇಶದ ಕೃಷಿ ವ್ಯವಸ್ಥೆಯ ಮೂಲ ಸ್ವರೂಪವನ್ನೇ ವಿರೂಪಗೊಳಿಸುವ ಮೂರು ಕೃಷಿ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಿದೆ.

ಶಾಸನ ಸಭೆಗಳಲ್ಲಿ ಸ್ಪಷ್ಟ ಬಹುಮತ ಇರುವ ಒಂದು ಸರ್ಕಾರ ತನ್ನ ಸಂಖ್ಯಾಬಲವನ್ನೇ ಅಸ್ತ್ರದಂತೆ ಬಳಸಿ ರೈತರ ಪಾಲಿಗೆ ಮಾರಣಾಂತಿಕ ಎನ್ನಬಹುದಾದ ಮೂರು ಮಸೂದೆಗಳನ್ನು ಜಾರಿಗೊಳಿಸಿದೆ. ಇಂದು ದೆಹಲಿಯಲ್ಲಿ ಮುಷ್ಕರ ಹೂಡಿರುವ ಲಕ್ಷಾಂತರ ರೈತರ ಒಕ್ಕೊರಲ ದನಿ ಈ ಕ್ರೌರ್ಯದ ವಿರುದ್ಧ ಪ್ರತಿಧ್ವನಿಸುತ್ತಿದೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಮಸ್ತ ದೇಶದ ಜನತೆ ಸರ್ಕಾರದ ಆಡಳಿತ ನೀತಿಯನ್ನು, ಕಾರ್ಯನೀತಿಗಳನ್ನು ಮತ್ತು ಶಾಸನಗಳನ್ನು ವಿರೋಧಿಸುವಾಗ ಆಡಳಿತಾರೂಢ ಪಕ್ಷಕ್ಕೆ, ಜನರ ಬಳಿ ಕುಳಿತು ಮಾತನಾಡುವ ಕನಿಷ್ಟ ಮಾನವೀಯ ಪ್ರಜ್ಞೆ ಇರಬೇಕಾಗುತ್ತದೆ. ನರೇಂದ್ರ ಮೋದಿ ಸರ್ಕಾರ ದೆಹಲಿಯ ಗಡಿಯಲ್ಲಿ, ತೀವ್ರವಾದ ಚಳಿಯಲ್ಲಿ ನೆರೆದ ಲಕ್ಷಾಂತರ ರೈತರೊಡನೆ ಮಾತನಾಡುವ ಬದಲು ಜಲಫಿರಂಗಿಗಳ ಮೂಲಕ, ಅಶ್ರುವಾಯು ಮೂಲಕ, ಪೊಲೀಸರ ಲಾಠಿಯ ಮೂಲಕ ಸ್ಪಂದಿಸಿರುವುದು ಪ್ರಭುತ್ವದ ಕ್ರೌರ್ಯದ ಮತ್ತೊಂದು ನಿದರ್ಶನ.

ಹೋರಾಟಗಾರರ ಸಮಸ್ಯೆಗಳನ್ನು ಆಲಿಸುವ ವಿವೇಚನೆ, ವಿವೇಕ ಮತ್ತು ವ್ಯವಧಾನವನ್ನು ಸಂಪೂರ್ಣ ಕಳೆದುಕೊಂಡಿರುವ ಒಂದು ಆಡಳಿತ ವ್ಯವಸ್ಥೆ ಮುಷ್ಕರ ನಿರತ ರೈತರಲ್ಲಿ ದಲ್ಲಾಳಿಗಳನ್ನು, ಖಲಿಸ್ತಾನಿಗಳನ್ನು, ಪಾಕಿಸ್ತಾನಿಯರನ್ನು, ನಗರ ನಕ್ಸಲರನ್ನು, ಭಯೋತ್ಪಾದಕರನ್ನು ಗುರುತಿಸಲು ಯತ್ನಿಸುವುದು ಪ್ರಜಾತಂತ್ರ ವ್ಯವಸ್ಥೆಗೆ ಅವಮಾನ ಮಾಡಿದಂತಾಗುತ್ತದೆ.

ಇಂದು ದೆಹಲಿಯಲ್ಲಿ ಈ ಕ್ರೌರ್ಯವನ್ನು ಕಾಣುತ್ತಿದ್ದೇವೆ. ತಮ್ಮ ಸಮಸ್ಯೆಗಳ ನಿವಾರಣೆಗಾಗಿ ದೇಶದ ರಾಜಧಾನಿಯಲ್ಲಿ ಬೀಡುಬಿಟ್ಟಿರುವ ಲಕ್ಷಾಂತರ ರೈತರನ್ನು ದೇಶದ್ರೋಹಿಗಳಂತೆ ಕಾಣುವ ಒಂದು ನಿರ್ದಯಿ ಸರ್ಕಾರವನ್ನು ನಾವೇ ಆಯ್ಕೆ ಮಾಡಿರುವುದು ಶತಮಾನದ ದುರಂತ. ಲಾಕ್ ಡೌನ್ ಸಂದರ್ಭದಲ್ಲಿ ಮಡಿದ ವಲಸೆ ಕಾರ್ಮಿಕರು, ಇಂದು ದೆಹಲಿಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿರುವ ರೈತರು, ಹಸಿವಿನಿಂದ ಸಾಯುತ್ತಿರುವ ಅಸಂಖ್ಯಾತ ಬಡಜನತೆ ಇವರೆಲ್ಲರೂ ಆಳುವ ವರ್ಗಗಳ ದೃಷ್ಟಿಯಲ್ಲಿ ನಿಕೃಷ್ಟರಾಗಿ ಕಾಣುತ್ತಿದ್ದಾರೆ.

ದೆಹಲಿಯ ನೀತಿಗಳನ್ನೇ ಯಥಾವತ್ತಾಗಿ ಅನುಸರಿಸುವ ಕರ್ನಾಟಕದ ಬಿಜೆಪಿ ಸರ್ಕಾರ ತನ್ನ ಸ್ವಂತ ವಿವೇಚನೆಯನ್ನೂ ಕಳೆದುಕೊಂಡು, ವಿಧಾನಸಭೆಯಲ್ಲಿ ಯಾವುದೇ ಚರ್ಚೆ ನಡೆಸದೆ ಭೂ ಸ್ವಾಧೀನ ಮಸೂದೆಯನ್ನು ಅಂಗೀಕರಿಸುತ್ತದೆ.

ರಾಜ್ಯ ರಾಜಧಾನಿಯಲ್ಲಿ ಭೂ ಸ್ವಾಧೀನ ಕಾಯ್ದೆಯ ವಿರುದ್ಧ, ನೂತನ ಕೃಷಿ ನೀತಿಯ ವಿರುದ್ಧ ಹೋರಾಡುತ್ತಿರುವ ರೈತಾಪಿ ಮತ್ತು ಕಾರ್ಮಿಕರೊಡನೆ ಮಾತುಕತೆ ನಡೆಸುವ ಸೌಜನ್ಯವನ್ನೂ ಕಳೆದುಕೊಂಡಿರುವ ರಾಜ್ಯ ಬಿಜೆಪಿ ಸರ್ಕಾರ ಈ ಗೊಂದಲದ ನಡುವೆಯೇ ಗೋ ಹತ್ಯೆ ನಿಷೇಧ ಕಾಯ್ದೆಯನ್ನೂ ಅಂಗೀಕರಿಸುತ್ತದೆ.

ಸರ್ಕಾರದ ಆಡಳಿತ ನೀತಿಗಳ ವಿರುದ್ಧ ಮತ್ತು ಜನವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವ ಪ್ರತಿಯೊಂದು ದನಿಯನ್ನೂ “ ಭೌಗೋಳಿಕ ದೇಶ ಮತ್ತು ಕಾಲ್ಪನಿಕ ಪ್ರೇಮ ”ದ ಚೌಕಟ್ಟಿನಲ್ಲಿರಿಸಿ ದೇಶದ್ರೋಹದ ಪಟ್ಟ ಕಟ್ಟುವ ಒಂದು ಪರಂಪರೆಯನ್ನು ನರೇಂದ್ರ ಮೋದಿ ಸರ್ಕಾರ ಅನುಸರಿಸುತ್ತಿದೆ. ಯುಎಪಿಎ ಎನ್ನುವ ಕರಾಳ ಶಾಸನ, ಎನ್‍ಐಎ ಎನ್ನುವ ಒಂದು ದಮನಕಾರಿ ಸಂಸ್ಥೆಯ ಮೂಲಕ ಪ್ರಜಾತಂತ್ರದ ದನಿಗಳನ್ನು ವ್ಯವಸ್ಥಿತವಾಗಿ ದಮನಿಸುವ ಒಂದು ಪರಂಪರೆಗೂ ಸುಭದ್ರ ಬುನಾದಿ ಹಾಕಲಾಗಿದೆ.

ದೆಹಲಿಯಲ್ಲಿ ನೂತನ ಸಂಸತ್ ಭವನದ ಶಂಕುಸ್ಥಾಪನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ, ಇದು ಭವಿಷ್ಯ ಭಾರತದ, ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ಸಾಕ್ಷೀಭೂತವಾಗುವ ಒಂದು ಸ್ಥಾವರ ಎಂದು ಹೇಳಿರುವುದು ಆಕರ್ಷಣೀಯವಾಗಿ ಕಾಣುತ್ತದೆ.

ಆದರೆ ಈ ಆತ್ಮನಿರ್ಭರ ಭಾರತದಲ್ಲಿ ಈ ದೇಶದ ಬಹುಮುಖಿ ಸಂಸ್ಕøತಿ, ಬಹುತ್ವದ ನೆಲೆಗಳು, ಪ್ರಜಾತಂತ್ರದ ಮೌಲ್ಯಗಳು ಮತ್ತು ಸಾಂವಿಧಾನಿಕ ತತ್ವಗಳು ಸಮಾಧಿಯಾಗುತ್ತಿರುವುದನ್ನು ಗಮನಿಸಿದಾಗ, ನೂತನ ಸಂಸತ್ ಭವನದಲ್ಲಿ ಪ್ರಜಾತಂತ್ರದ ಛಾಯೆ ಸುಳಿಯಲು ಸಾಧ್ಯವೇ ಎಂದು ಅನುಮಾನವಾಗುತ್ತದೆ. ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲಿ , ತುರ್ತುಪರಿಸ್ಥಿತಿಯ ಸಂದರ್ಭದಲ್ಲೂ ಸಹ, ಭಾರತದ ಆಳುವ ವರ್ಗ ಈ ಮಟ್ಟಿಗೆ ಕ್ರೌರ್ಯ ಪ್ರದರ್ಶಿಸಿರಲಿಲ್ಲ.

ಈ ಕ್ರೌರ್ಯಕ್ಕೆ ಬಲಿಯಾಗುತ್ತಿರುವುದು ಕೇವಲ ಸಾಂವಿಧಾನಿಕ ಪ್ರಜಾತಂತ್ರ ಮೌಲ್ಯಗಳನ್ನು ಎತ್ತಿಹಿಡಿಯುವ ವಿವೇಕಯುತ ದನಿಗಳು ಮಾತ್ರವೇ ಅಲ್ಲ. ಭಾರತದ ನ್ಯಾಯಿಕ ವ್ಯವಸ್ಥೆಯೇ ಬಲಿಯಾಗುತ್ತಿದೆ. ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿರುವ ಸಾರ್ವಭೌಮ ಪ್ರಜೆಗಳ ದನಿಗಳು ಆಡಳಿತ ವ್ಯವಸ್ಥೆಯ ಕ್ರೌರ್ಯದ ನಡುವೆ ಕಳೆದುಹೋಗುತ್ತಿವೆ.

ಬಹುತ್ವ ಮತ್ತು ಪ್ರಜಾತಂತ್ರ ಈ ದೇಶದ ಅಂತರಾತ್ಮ. ಈ ಅಂತರಾತ್ಮವನ್ನೇ ಹೊಸಕಿಹಾಕುತ್ತಿರುವ ಸಂದರ್ಭದಲ್ಲಿ ಭಾರತದ ಪ್ರಜೆಗಳು ತಮ್ಮ ಆತ್ಮನಿರ್ಭರತೆಯನ್ನು ಗುರುತಿಸಲು ಹೆಣಗಾಡುತ್ತಿದ್ದಾರೆ. ಇದರ ಒಂದು ಪ್ರಾತ್ಯಕ್ಷಿಕೆಯನ್ನು ರೈತ ಕಾರ್ಮಿಕರ ಹೋರಾಟದ ದನಿಗಳಲ್ಲಿ ಗುರುತಿಸಬಹುದು.

ಸರ್ಕಾರಗಳು ಗೋ ಹತ್ಯೆಯನ್ನು, ಅಂತರ್ಧರ್ಮೀಯ ವಿವಾಹಗಳನ್ನು ನಿಷೇಧಿಸಲು ಸಜ್ಜಾಗುತ್ತಿವೆ. ಸಂವಿಧಾನದ ತತ್ವಗಳಲ್ಲಿ, ಮೌಲ್ಯಗಳಲ್ಲಿ ವಿಶ್ವಾಸ ಇರುವ ಸ್ವತಂತ್ರ ಭಾರತದ ಸಾರ್ವಭೌಮ ಪ್ರಜೆಗಳು ಪ್ರಜಾತಂತ್ರ ಮೌಲ್ಯಗಳ ಹತ್ಯೆಯನ್ನು ನಿಷೇಧಿಸಲು ಸಜ್ಜಾಗಬೇಕಿದೆ. ಇಂದು ಎದ್ದು ನಿಲ್ಲದಿದ್ದರೆ ಬಹುಶಃ ಎಂದಿಗೂ ಎದ್ದು ನಿಲ್ಲಲಾಗುವುದಿಲ್ಲ ಈ ಪ್ರಜ್ಞೆ ಭಾರತದ ನಾಗರಿಕ ಪ್ರಜೆಗಳಲ್ಲಿದ್ದರೆ ಬಹುಶಃ ಪ್ರಜಾತಂತ್ರ ಉಳಿಯುತ್ತದೆ. ನೂತನ ಸಂಸತ್ ಭವನದಲ್ಲಿ ಪ್ರಜಾತಂತ್ರದ ಸುಳಿವು ಕಾಣಲು ಸಾಧ್ಯವಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending