Connect with us

ದಿನದ ಸುದ್ದಿ

ಇಂಡಿಯಾ ಲಾಕ್ ಡೌನ್ : ಇದರ ಸೈಡ್ ಎಫೆಕ್ಟ್ ನಿಯಂತ್ರಣ ಹೇಗೆ..?

Published

on

  • ವಿವೇಕಾನಂದ. ಹೆಚ್.ಕೆ.

ವಿಶ್ವದಲ್ಲಿ ನಾಗರಿಕತೆಯ ಉಗಮ ದಾಖಲಾಗಿರುವ ದಿನದಿಂದ ಇಂದಿನವರೆಗೂ ಆಗಾಗ ಅನೇಕ ಆಘಾತಗಳನ್ನು ಅನುಭವಿಸುತ್ತಾ ಬಂದಿದೆ.

ಕಾಡಿನ ಕ್ರೂರ ಮೃಗಗಳಿಂದ, ಪ್ರಾಕೃತಿಕ ಅವಘಡಗಳಿಂದ, ರಾಜರುಗಳು ಆಕ್ರಮಣಗಳಿಂದ, ಭಯಂಕರ ಯುದ್ದಗಳಿಂದ, ಹುಚ್ಚು ಸರ್ವಾಧಿಕಾರಿಗಳಿಂದ ಬರಗಾಲದಿಂದ, ಅನೇಕ ರೋಗ ರುಜಿನಗಳಿಂದ ಎಲ್ಲಾ ಶತಮಾನಗಳಲ್ಲೂ ಆತಂಕ ಎದುರಿಸಿದೆ.

ಇದೀಗ ಕೊರೋನಾ ವೈರಸ್ ಆ ರೀತಿಯ ಒಂದು ಆತಂಕವಷ್ಟೆ. ಆಯಾ ಕಾಲಕ್ಕೆ ಅದೇ ಭಯಾನಕ. ಯಾವುದೂ ಹೆಚ್ಚು ಅಲ್ಲ ಕಡಿಮೆಯೂ ಅಲ್ಲ. ಕೆಲವು ಇಂಗ್ಲೀಷ್ ಸಿನಿಮಾಗಳಲ್ಲಿ ಬೇರೆ ಲೋಕದಿಂದ ದಾಳಿ ಇಡುವ ಏಲಿಯನ್ ಗಳ ವಿರುದ್ಧ ಹೋರಾಡುವ ದೃಶ್ಯಗಳನ್ನು ನೋಡಿರಬಹುದು. ಅವು ಮಾಡುವ ಅನಾಹುತಗಳು ಮತ್ತು ಕೊನೆಗೆ ಅವುಗಳ ವಿರುದ್ಧ ಜಯ. ಇದೂ ಸಹ ಅದೇ ರೀತಿ. ಆದರೆ ಅದು ಸಿನಿಮಾ ಇದು ವಾಸ್ತವ.

ಡಾರ್ವಿನ್‌ನ ಸಾರ್ವಕಾಲಿಕ ಸಿದ್ದಾಂತದಂತೆ ಬಲಿಷ್ಠವಾದದ್ದು ಮಾತ್ರ ಉಳಿಯುತ್ತದೆ. ಕೊರೋನಾ ವೈರಸ್ ಎಂಬ ಜೀವಾಣು ಮನುಷ್ಯನ ಮೇಲೆ ಯುದ್ಧ ಸಾರಿದೆ. ಸದ್ಯಕ್ಕೆ ಅದು ವಿಜಯದ ರಣಕೇಕೆ ಹಾಕುತ್ತಿದೆ. ಅದರ ವಿರುದ್ಧ ಮನುಷ್ಯ ಉಳಿವಿಗಾಗಿ ಹೋರಾಡುತ್ತಿದ್ದಾನೆ.

ಇದೀಗ ಅದರ ಹೋರಾಟದ ಭಾಗವಾಗಿ ಇಡೀ ಭಾರತವನ್ನು ಬಹುತೇಕ ಬಂದ್ ಮಾಡಲಾಗಿದೆ. ಆಧುನಿಕ ಕಾಲದ ಸುಮಾರು 50 ವಯಸ್ಸು ಆಸುಪಾಸಿನ ಜನರಿಗೆ ಇದರ ನೇರ ಅನುಭವ ಇರಲೇ ಇಲ್ಲ. ಅವರಿಗೆ ಇದೊಂದು ಅನಿರೀಕ್ಷಿತ ಆಘಾತ.

ಇರಲಿ ಈಗ ಮನೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಸಮಯ ಕಳೆಯುವ ಅನಿವಾರ್ಯತೆಗೆ ಸಿಲುಕಿದ್ದೇವೆ. ಈ ಸಮಯದಲ್ಲಿ ನಿಜವಾಗಲೂ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಬಹಳಷ್ಟು ಅಗ್ನಿ ಪರೀಕ್ಷೆಗೆ ಒಳಪಡುತ್ತದೆ. ಇಂದು ನಾಳೆ ನಾಡಿದ್ದು ಹಬ್ಬ, ಅದರ ಆಚರಣೆ,
ಸಾವಿನ ಭಯ ಆತಂಕ ಹೊಸ ಜೀವನ ಶೈಲಿಯ ಒತ್ತಡದಲ್ಲಿ ಅಷ್ಟಾಗಿ ಗೊತ್ತಾಗುವುದಿಲ್ಲ. ಆದರೆ ‌ನಂತರ ದಿನಗಳು ಕಷ್ಟವಾಗುತ್ತದೆ. ಮಾನಸಿಕ ಕಿರಿಕಿರಿ ಉಂಟುಮಾಡುತ್ತದೆ. ಅದಕ್ಕಾಗಿ ಸ್ವಲ್ಪ ಅನುಕೂಲಕರ ಪರಿಸ್ಥಿತಿಯ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರು ಈ ಕೆಲವು ವಿಧಾನಗಳನ್ನು ಅನುಸರಿಸಬಹುದು.

ಯೋಗ ಪ್ರಾಣಾಯಾಮ ಧ್ಯಾನ ವ್ಯಾಯಾಮ ನೃತ್ಯಗಳ ಮೊರೆ ಹೋಗಬಹುದು. ದೈಹಿಕವಾಗಿ ದುರ್ಬಲರಾದವರು ಧ್ಯಾನ ಮತ್ತು ಪ್ರಾಣಾಯಾಮದಿಂದ ಸಾಕಷ್ಟು ಮಾನಸಿಕ ಲಾಭ ಪಡೆಯಬಹುದು.

ಇಲ್ಲಿಯವರೆಗೂ ಓದಲು ಸಾಧ್ಯವಾಗದ ಯಾವುದಾದರೂ ಆಸಕ್ತಿಯ ಪುಸ್ತಕಗಳನ್ನು ಓದಲು ಪ್ರಾರಂಭಿಸಬೇಕು. ಖಂಡಿತ ಓದು ನಿಮ್ಮನ್ನು ಮಾನಸಿಕ ಖಿನ್ನತೆಯಿಂದ ಪಾರು ಮಾಡುತ್ತದೆ.

ನಿಮ್ಮ ಆಸಕ್ತಿಯ ಏನನ್ನಾದರೂ ಬರೆಯಲು ಪ್ರಾರಂಭಿಸಿ. ಕನಿಷ್ಠ ದಿನಚರಿ ಅಥವಾ ಬದುಕಿನ ನೆನಪ ಪುಟಗಳಾದರೂ ದಾಖಲಿಸಿರಿ. ಇದು ಓದಿಗಿಂತ ಹೆಚ್ಚು ಸಮಾಧಾನಕರ ಪರಿಣಾಮ ನಿಮ್ಮ ಮನಸ್ಸಿನ ಮೇಲೆ ಬೀರುತ್ತದೆ.

ಹಳೆಯ ಗೆಳೆಯರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ತೃಪ್ತಿಯಾಗುವಷ್ಟು ಮಾತನಾಡಿ. ಅದನ್ನು ಈ ವಿರಾಮದ ಎಲ್ಲಾ ದಿನಗಳಲ್ಲಿಯೂ ಮುಂದುವರಿಸಿ. ಅಕ್ಷರದ ಚಾಟ್ ಗಳಿಗಿಂತ ನೇರ ಮಾತುಗಳು ನಿಮ್ಮನ್ನು ‌ಉಲ್ಲಸಿತರಾಗಿಡುತ್ತದೆ.

ಮಕ್ಕಳು ಮನೆಯವರೊಂದಿಗೆ ಚೆಸ್ ಕೇರಂ ಹಾವು ಏಣಿಯಾಟ ಚೌಕಾಬಾರ ಮುಂತಾದ ಆಟಗಳನ್ನು ಹಾಡಬಹುದು. ಇದು ನಿಮ್ಮ ಬಹುತೇಕ ಸಮಯ ಆಕ್ರಮಿಸುತ್ತದೆ. ಸಮಯ ಕಳೆಯುವುದೇ ತಿಳಿಯುವುದಿಲ್ಲ.

ಕುಟುಂಬ ಸ್ವಲ್ಪ ದೊಡ್ಡದಿದ್ದರೆ ಚೀಟಿ ಬರೆದು ಕಳ್ಳ ಪೋಲೀಸ್ ಆಟ, ಅಂತ್ಯಾಕ್ಷರಿ, ಖಾಲಿ ಹಾಳೆಯ ಮೇಲೆ ಚುಕ್ಕಿಯಿಟ್ಟು ಜೋಡಿಸುವುದು, ಕಣ್ಣಾ ಮುಚ್ಚಾಲೆ, ಯಾವುದಾದರೂ ವಸ್ತುಗಳನ್ನು ಮನೆಯಲ್ಲಿ ಮುಚ್ಚಿಟ್ಟು ಹುಡುಕುವುದು ಮುಂತಾದ ಆಟಗಳನ್ನು ಆಡಬಹುದು. ಇದು ಸ್ವಲ್ಪ ಖುಷಿ ಕೊಡುತ್ತದೆ.

ಸರಳ ರೀತಿಯ ಅಡುಗೆಗಳ ಪ್ರಯೋಗ ಮಾಡಬಹುದು. ಇಲ್ಲಿಯವರೆಗೂ ಮನೆಯಲ್ಲಿ ಯಾರು ಅಡುಗೆ ಮಾಡುತ್ತಿದ್ದರೋ ಅದನ್ನು ಬದಲಾಯಿಸಿ ಮತ್ತೊಬ್ಬರು ಒಂದಷ್ಟು ಪ್ರಯತ್ನಿಸಬಹುದು. ಆದರೆ ಮಿತ ಆಹಾರ ಒಳ್ಳೆಯದು.

ಆರೋಗ್ಯದ ಕಾರಣಕ್ಕಾಗಿ ಉಪವಾಸ ವೃತಗಳನ್ನು ಸಹ ಮಾಡಬಹುದು. ಹೌದು ಏಕತಾನತೆ ಮುರಿಯಲು ವೈದ್ಯರ ಸಲಹೆ ಮೇರೆಗೆ ಉಪವಾಸ ದೇಹ ಮತ್ತು ಮನಸ್ಸಿನ ನಿಯಂತ್ರಣಕ್ಕೆ ಒಳ್ಳೆಯ ಮದ್ದು.
ಅದು ಅವರವರ ಆರೋಗ್ಯ ಸ್ಥಿತಿ ಅವಲಂಬಿಸಿರುತ್ತದೆ.

ಅನುಕೂಲ ಇದ್ದರೆ ಅತ್ಯುತ್ತಮ ಸಿನಿಮಾ ನೋಡಬಹುದು ಮತ್ತು ಸಂಗೀತ ಆಲಿಸಬಹುದು. ಇವು ಖಂಡಿತವಾಗಿ ನಿಮ್ಮನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ಕೆಲವೊಮ್ಮೆ ಆಳವಾಗಿ ಯೋಚಿಸುವಂತೆ ಪ್ರೇರೇಪಿಸುತ್ತದೆ.

ಮೊಬೈಲ್ ನಲ್ಲಿರುವ ಅನೇಕ ಹೊಸ ಹೊಸ ತಾಂತ್ರಿಕ ಸಾಧ್ಯತೆಗಳನ್ನು ಕಲಿಯಲು ಪ್ರಯತ್ನಿಸಬಹುದು. ಸದಾ ವೇಗದ ಜೀವನದಲ್ಲಿ ನಾವು ಕನಿಷ್ಠ ಉಪಯೋಗ ಮಾತ್ರ ತಿಳಿದಿರುತ್ತೇವೆ. ಆದರೆ ಇಂದಿನ ಸ್ಮಾರ್ಟ್ ಫೋನ್ ಗಳಲ್ಲಿ ವಿಶ್ವ ರೂಪ ದರ್ಶನ ಪಡೆಯಬಹುದು.

ಮಾತಿನ ಸಂತೆಯಲ್ಲಿ ಮರೆಯಾಗಿದ್ದ ಮೌನದ ದಿವ್ಯತೆಯನ್ನು ಹಿಡಿದಿಡಲು ಪ್ರಯತ್ನಿಸಬಹುದು. ಮೌನ ತುಂಬಾ ಕಠಿಣ. ಆದರೆ ‌ ಅದು ಒಮ್ಮೆ ಅನುಭವಕ್ಕೆ ಸಿಕ್ಕರೆ ತುಂಬಾ ಪರಿಣಾಮಕಾರಿ. ಅದೊಂದು ಅನುಭಾವ. ಸಾಧ್ಯವಾದರೆ ಪ್ರಯತ್ನಿಸಿ.

ಇದು ನನಗೆ ಹೊಳೆದ ಕೆಲವು ವಿಷಯಗಳು ಮಾತ್ರ. ಇದರ ಜೊತೆಗೆ ನಿಮಗೂ ಹಲವಾರು ವಿಧಾನಗಳು ತಿಳಿದಿರುತ್ತದೆ. ನಾನು ಈ ಮೂಲಕ ಮತ್ತೊಮ್ಮೆ ನೆನಪಿಸುತ್ತಿದ್ದೇನೆ ಅಷ್ಟೆ.

ಇದರ ಜೊತೆ ಖಂಡಿತವಾಗಿಯೂ ಬಡಜನರನ್ನು ಜ್ಞಾಪಿಸಿಕೊಳ್ಳಲೇ ಬೇಕು. ಕರೋನ ವಿರುದ್ಧ ಈ ಕರ್ಪ್ಯೂ ಹೋರಾಟದ ಬಹುದೊಡ್ಡ ಸೈಡ್ ಎಪೆಕ್ಟ್ ಎಂದರೆ ಬೀದಿ ಬದಿಯ ಮನೆ ಇಲ್ಲದ ಸುಮಾರು 10 ಕೋಟಿ ಕಡುಬಡವರ ಬಹುತೇಕ ಸರ್ವನಾಶ.

ಸರ್ಕಾರಗಳು ಏನೇ ಹೇಳಿದರು ಈ‌ ಸಂದರ್ಭದಲ್ಲಿ ಆಡಳಿತ ಯಂತ್ರ ಅವರನ್ನು ಮುಟ್ಟುವುದು ತುಂಬಾ ಕಷ್ಟವಿದೆ. ಅವರು ಯಾವುದೇ ದಾಖಲೆ ಹೊಂದಿರದೆ ಲೆಕ್ಕಕ್ಕೇ ಸಿಗುವುದಿಲ್ಲ. ಉಳ್ಳವರು ಮತ್ತು ದಾನ ಮಾಡುವ ಮನಸ್ಸಿರುವವರು ಕೂಡ ಅವರಿಗೆ ಕೈಲಾದ ಸಹಾಯ ಮಾಡಲಾಗದ ಅಸಹಾಯಕ ಸ್ಥಿತಿ ಏರ್ಪಟ್ಟಿದೆ. ಹೊರಗೆ ಹೋಗುವಂತಿಲ್ಲ.

ಮುಖ್ಯವಾಗಿ ರಾಜ್ಯ ರಾಜಧಾನಿಗಳ, ದೊಡ್ಡ ನಗರಗಳ ಬಸ್ ನಿಲ್ದಾಣ, ರೈಲು ನಿಲ್ದಾಣ, ಫ್ಲೈ ಓವರ್ ಗಳ ಬಳಿ ಮಲಗುವವರ ಸ್ಥಿತಿ ನಾಯಿಗಿಂತ ಕಡೆಯಾಗಿರುತ್ತದೆ. ಇಲ್ಲ ಬೀದಿ ನಾಯಿಗಳು ಇನ್ನೂ ದುಸ್ಥಿತಿಗೆ ಹೋಗಿ ಜೀವ ಕಳೆದುಕೊಳ್ಳುತ್ತವೆ.

ನಾವು ಎಷ್ಟು ಸಾಧ್ಯವೋ ಎಲ್ಲಿ ಸಾಧ್ಯವೋ ಎಷ್ಟು ಅನುಕೂಲವೋ ಅದನ್ನು ಬಳಸಿಕೊಂಡು ಇಂತಹವರಿಗೆ ಸಹಾಯ ಮಾಡಲು ಪ್ರಯತ್ನಿಸೋಣ. ಅದು ಉಪಕಾರವಲ್ಲ ಕರ್ತವ್ಯ ಎಂದು ಭಾವಿಸೋಣ. ದಿನಗೂಲಿ ನೌಕರರು ಸಹ ಇದೇ ವ್ಯಾಪ್ತಿಯಲ್ಲಿ ಬರುತ್ತಾರೆ.

ಇಷ್ಟೆಲ್ಲದರ ನಡುವೆಯೂ ಈ ಸಿನೆಮಾ ಹಾಡು ಗುನುಗುನಿಸುತ್ತಿರಿ…ನಗುನಗುತಾ ನಲಿ ನಲಿ,
ಏನೇ ಆಗಲಿ..

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಆ.14 ರಂದು ಬೃಹತ್ ಲೋಕ್ ಆದಾಲತ್ ; ರಾಜಿ ಸಂಧಾನ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಸದಾವಕಾಶ : ಕೆ.ಬಿ. ಗೀತಾ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಆ. 14 ರಂದು ಬೃಹತ್ ಲೋಕ್ ಅದಾಲತ್ ಆಯೋಜಿಸಲಾಗಿದ್ದು, ಪಕ್ಷಗಾರರು ರಾಜಿ ಅಥವಾ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭವಾಗಿ, ಶೀಘ್ರವಾಗಿ ಯಾವುದೇ ಶುಲ್ಕವಿಲ್ಲದೇ ಇತ್ಯರ್ಥಪಡಿಸಿಕೊಳ್ಳಲು ಸದಾವಕಾಶ ಕಲ್ಪಿಸಲಾಗಿದ್ದು, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ. ಗೀತಾ ಅವರು ಹೇಳಿದರು.

ಜಿಲ್ಲೆಯಲ್ಲಿ ಏರ್ಪಡಿಸಲಾಗಿರುವ ಬೃಹತ್ ಲೋಕ ಅದಾಲತ್ ಕುರಿತಂತೆ ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ಏರ್ಪಡಿಸಲಾದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಆ. 14 ರಂದು ಏರ್ಪಡಿಸಲಾಗಿರುವ ಬೃಹತ್ ಲೋಕ ಅದಾಲತ್‍ನಲ್ಲಿ ಕಕ್ಷಿಗಾರರು ಭೌತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗಬಹುದು ಅಥವಾ ಇ-ಲೋಕ ಅದಾಲತ್‍ನಲ್ಲಿ ಆನ್‍ಲೈನ್ ಮೂಲಕವೂ ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬೃಹತ್ ಲೋಕ್ ಅದಾಲತ್‍ನ ಪ್ರತಿಯೊಂದು ಪೀಠದಲ್ಲಿ ಒಬ್ಬರು ಹಾಲಿ ನ್ಯಾಯಾಧೀಶರು ಹಾಗೂ ಒಬ್ಬರು ಪರಿಣತ ವಕೀಲರು ಸಂಧಾನಕಾರರಾಗಿರುತ್ತಾರೆ.

ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಹಾಗೂ ದಾಖಲು ಮಾಡದೆ ಇರುವಂತಹ ವಾಹನ ಅಪಘಾತಕ್ಕೆ ಸಂಬಂಧಿಸಿದ ಪರಿಹಾರ ಪ್ರಕರಣಗಳು, ಭೂ-ಸ್ವಾಧೀನ ಪರಿಹಾರಕ್ಕೆ ಸಂಬಂಧಿತ ಪ್ರಕರಣಗಳು, ಪಾಲುವಿಭಾಗ ದಾವೆಗಳು, ಹಣ ವಾಪಾಸಾತಿ ದಾವೆಗಳು, ಬಾಡಿಗೆದಾರ ಮತ್ತು ಮಾಲೀಕರ ನಡುವಿನ ದಾವೆಗಳು, ಇತರೆ ಸಿವಿಲ್ ವ್ಯಾಜ್ಯಗಳು ಹಾಗೂ ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಜೀವನಾಂಶದ ಅರ್ಜಿ ಪ್ರಕರಣಗಳು, ಕೌಟುಂಬಿಕ ಕಲಹಗಳು, (ವಿಚ್ಚೇದನಾ ಹೊರತುಪಡಿಸಿ) ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು. ಸಾರ್ವಜನಿಕರು ಕಕ್ಷಿಗಾರರು ಪಡೆದುಕೊಂಡು ಅತೀ ಹೆಚ್ಚು ಪ್ರಕರಣಗಳನ್ನು ಬಗೆಹರಿಸಿಕೊಳ್ಳಬೇಕೆಂದು ವಿನಂತಿಸಿದರು.

ಲೋಕ ಅದಾಲತ್ ಅಥವಾ ಜನತಾ ನ್ಯಾಯಾಲಯದ ಮೂಲ ಉದ್ದೇಶವೇನೆಂದರೆ ಪಕ್ಷಗಾರರು ರಾಜಿ ಅಥವಾ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭವಾಗಿ, ಶೀಘ್ರವಾಗಿ ಯಾವುದೇ ಶುಲ್ಕವಿಲ್ಲದೇ ಇತ್ಯರ್ಥಪಡಿಸಿಕೊಳ್ಳಬಹುದು.

ಇದರಿಂದ ಪಕ್ಷಗಾರರ ಮಧ್ಯದಲ್ಲಿರುವ ವೈಮನಸ್ಸು ಕಡಿಮೆಯಾಗಿ ನ್ಯಾಯಾಧೀಶರು ಹೆಚ್ಚು ಅವಶ್ಯಕತೆ ಇರುವಂತಹ, ಕಾನೂನಿನ ಸಂಕೀರ್ಣತೆ ಇರುವಂತಹ ಪ್ರಕರಣಗಳಿಗೆ ಹೆಚ್ಚು ಒತ್ತು ಕೊಟ್ಟು ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವಂತಹ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ.

2020ರ ಸೆ.19 ರಂದು ನಡೆದ ಬೃಹತ್ ಲೋಕ್ ಅದಾಲತ್‍ನಲ್ಲಿ ಜಿಲ್ಲೆಯ 4921 ಪ್ರಕರಣಗಳು ಇತ್ಯರ್ಥಗೊಂಡು 4.47 ಕೋಟಿ ರೂ. ಪರಿಹಾರ, 2020 ಡಿ.19 ರಂದು ನಡೆದ ಲೋಕ್ ಅದಾಲತ್‍ನಲ್ಲಿ 3988 ಪ್ರಕರಣಗಳು ಇತ್ಯರ್ಥಗೊಂಡು 10.16 ಕೋಟಿ ರೂ. ಹಾಗೂ ಮಾ.27ರಂದು ನಡೆದ ಬೃಹತ್ ಲೋಕ್ ಅದಾಲತ್‍ನಲ್ಲಿ 6041 ಪ್ರಕರಣಗಳು ಇತ್ಯರ್ಥಗೊಂಡು ರೂ.11.06 ಪರಿಹಾರ ಒದಗಿಸಲಾಗಿದೆ.

ಹೀಗಾಗಿ ದಿನದಿಂದ ದಿನಕ್ಕೆ ಲೋಕ್‍ಅದಾಲತ್‍ಗಳು ಯಶಸ್ವಿಯಾಗುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಲೋಕ್ ಅದಾಲತ್‍ಗಳು ಯಶಸ್ವಿಯಾಗಲು ಸಮಸ್ತ ವಕೀಲ ವೃಂದದವರು, ಪೊಲೀಸ್ ಇಲಾಖೆಯವರು, ಬ್ಯಾಂಕ್ ಅಧಿಕಾರಿಗಳು, ವಿಮಾ ಅಧಿಕಾರಿಗಳು, ಕಂದಾಯ ಇಲಾಖೆಯವರು, ಕಕ್ಷಿದಾರರು, ಮುಖ್ಯವಾಗಿ ಮಾಧ್ಯಮಗಳು ತುಂಬಾ ಸಹಕಾರ ನೀಡಿದ್ದಾರೆ ಅವರೆಲ್ಲರಿಗೂ ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಧನ್ಯವಾದ ಸಲ್ಲಿಸುತ್ತೇವೆ ಎಂದರು.

ಇದೀಗ ಮತ್ತೊಮ್ಮೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಆ.14 ರಂದು ಬೃಹತ್ ಲೋಕತ್ ಅದಾಲತ್ ಮೂಲಕ ಅತಿ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಉದ್ದೇಶಿಸಿರುತ್ತಾರೆ. ಆ ಪ್ರಕಾರವಾಗಿ ಜಿಲ್ಲೆಗಳಲ್ಲಿರುವ ಎಲ್ಲಾ ತಾಲ್ಲೂಕು ಸೇವಾ ಸಮಿತಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬೃಹತ್ ಲೋಕ್ ಅದಾಲತ್‍ನ್ನು ನಡೆಸುವ ಬಗ್ಗೆ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತೇವೆ. ಅದಾಲತ್ ಅನ್ನು ಯಶಸ್ವಿಗೊಳಿಸಲು ನಿತ್ಯ ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.

ಪಕ್ಷಗಾರರು ಸ್ವಇಚ್ಚೆಯಿಂದ ರಾಜಿಗೆ ಒಪ್ಪಿಕೊಂಡರೆ ಮಾತ್ರ ಲೋಕ್ ಅದಾಲತ್‍ನಲ್ಲಿ ಪ್ರಕರಣಗಳು ತೀರ್ಮಾನವಾಗುತ್ತದೆ. ಒಂದು ವೇಳೆ ಉಭಯ ಪಕ್ಷಗಾರರಿಗೆ ಒಪ್ಪಿಗೆ ಇಲ್ಲದಿದ್ದರೆ ಯಾವುದೇ ತೀರ್ಮಾನವಾಗುವುದಿಲ್ಲ, ಅಂತಹ ಪ್ರಕರಣಗಳನ್ನು ಪುನ: ನ್ಯಾಯಾಲಯದಲ್ಲಿಯೇ ಕಾನೂನು ಬದ್ದವಾಗಿ ತೀರ್ಮಾನ ಮಾಡಲಾಗುತ್ತದೆ.

ಈ ರೀತಿ ರಾಜಿ ಮಾಡಿಕೊಂಡ ಪ್ರಕರಣಗಳು ನ್ಯಾಯಯುತವಾಗಿ ಮತ್ತು ಕಾನೂನು ಬದ್ಧವಾಗಿದ್ದರೆ ಮಾತ್ರ ಲೋಕ್ ಅದಾಲತ್‍ನಲ್ಲಿ ಇತ್ಯರ್ಥ ಮಾಡುತ್ತಾರೆ. ಲೋಕ್ ಅದಾಲತ್‍ನಲ್ಲಿ ಮಾಡುವ ಅವಾರ್ಡ್ ಕಾನೂನುಬದ್ಧವಾಗಿರುತ್ತದೆ ಮತ್ತು ನ್ಯಾಯಾಲಯದಲ್ಲಿ ತೀರ್ಮಾನವಾದ ಪ್ರಕರಣಗಳಂತೆ ಅದರ ತೀರ್ಪನ್ನು ಜಾರಿಗೊಳಿಸಬಹುದು.

ಕೋವಿಡ್-19ರ ಮೊದಲನೆ ಮತ್ತು ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿ ಈಗಾಗಲೆ ಪಕ್ಷಗಾರರು ಮತ್ತು ವಕೀಲರು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆÉ. ಅಲ್ಲದೇ ಇತ್ತೀಚಿನ ಅತೀವೃಷ್ಠಿಯಿಂದ ರೈತರು ಹಾಗೂ ಸಾಮಾನ್ಯ ಜನರು ಬೆಳೆ ಹಾಗೂ ಆಸ್ತಿ-ಪಾಸ್ತಿ ಅನುಭವಿಸಿದ್ದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತಾರೆ.

ಇಂತಹ ಸಂದರ್ಭದಲ್ಲಿ ಹಾಗೂ ಆದಾಯ ಕಡಿಮೆ ಇರುವಂತಹ ಪರಿಸ್ಥಿತಿಯಲ್ಲಿ ತಮ್ಮ ವ್ಯಾಜ್ಯಗಳನ್ನು ಲೋಕ್‍ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಂಡರೆ ಕಕ್ಷಿದಾರರಿಗೆ ಮತ್ತು ವಕೀಲರಿಗೆ ಹೆಚ್ಚನ ಅನುಕೂಲವಾಗುತ್ತದೆ. ಅದಾಲತ್‍ನಲ್ಲಿ ರಾಜಿ ಮೂಲಕ ಇತ್ಯರ್ಥ ಪಡಿಸಿಕೊಳ್ಳುವ ಪ್ರಕರಣಗಳ ಸಂಪೂರ್ಣ ಶುಲ್ಕವನ್ನು ನ್ಯಾಯಾಲಯವು ಮರುಪಾವತಿ ಮಾಡುತ್ತದೆ. ವ್ಯಾಜ್ಯಪೂರ್ವ ಪ್ರಕರಣಗಳಿಗೆ ನ್ಯಾಯಾಲಯ ಶುಲ್ಕ ಕೊಡಬೇಕಾಗಿಲ್ಲ.

ಅದಾಲತ್‍ನಲ್ಲಿ ಇತ್ಯರ್ಥ ಮಾಡಿಕೊಂಡ ಪ್ರಕರಣಗಳಿಗೆ ಯಾವುದೇ ಮೆಲ್ಮನವಿ ಹಾಗೂ ರಿವಿಜನ್ ಇರುವುದಿಲ್ಲ. ಮತ್ತು ಇದರಲ್ಲಿ ಆದ ತೀರ್ಮಾನವೆ ಅಂತಿಮ ತೀರ್ಮಾನವಾಗಿರುತ್ತದೆ. ಮತ್ತು ಪಕ್ಷಗಾರರು ಉಭಯತ್ರರು ಒಪ್ಪಿ ರಾಜಿ ಮಾಡಿಕೊಳ್ಳುವುದರಿಂದ ಅವರ ಮಧ್ಯೆ ಸೌಹಾರ್ದತೆ ಹೆಚ್ಚುತ್ತದೆ ಹಾಗೂ ವಿವಾದಗಳು ಕಡಿಮೆಯಾಗುತ್ತದೆ ಇದು ಉತ್ತಮ ಸಮಾಜ ನಿರ್ಮಾಣ ಮಾಡಲು ತುಂಬಾ ಸಹಕಾರಿಯಾಗುತ್ತದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಇಮೇಲ್ [email protected] ಮೂಲಕ ಮತ್ತು ದೂರವಾಣಿ ಸಂಖ್ಯೆ- 08192-296364, 9481167005 ಮೂಲಕ ಜಿಲ್ಲೆಯ ಕಾನೂನು ಸೇವೆಗಳ ಪ್ರಾಧಿಕಾರದ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗೀತಾ.ಕೆ.ಬಿ ತಿಳಿಸಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರವೀಣ್ ನಾಯಕ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಪಿ. ಬಸವರಾಜು ಸೇರಿದಂತೆ ವಿವಿಧ ವಕೀಲರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಜೋಗ ಜಲಪಾತ ವೀಕ್ಷಣೆಗೆ ವಿಶೇಷ ಸಾರಿಗೆ ಬಸ್

Published

on

ಸುದ್ದಿದಿನ,ದಾವಣಗೆರೆ : ವಿಶ್ವವಿಖ್ಯಾತ ಜೋಗ ಜಲಪಾತದ ವೈಭವವನ್ನು ಸಾರ್ವಜನಿಕರು ವೀಕ್ಷಿಸುವಂತಾಗಲು ದಾವಣಗೆರೆ ವಿಭಾಗದ ದಾವಣಗೆರೆ ಮತ್ತು ಹರಿಹರದಿಂದ ಜೋಗ್‍ಫಾಲ್ಸ್‍ಗೆ ರಾಜಹಂಸ ಸಾರಿಗೆ ವಿಶೇಷ ಪ್ಯಾಕೇಜ್ ಸೇವೆ ಆ. 01 ರಿಂದ ವಾರದ ಎಲ್ಲಾ ದಿನಗಳಂದು ಇರುತ್ತದೆ.

ಭಾನುವರದಂದು ಮಾತ್ರ ಈ ಸೇವೆ ಪ್ರಾರಂಭಿಸಲಾಗಿತ್ತು. ಆಧರೆ ಈ ಪ್ಯಾಕೇಜ್ ಪ್ರಯಾಣಕ್ಕೆ ಸಾರ್ವಜನಿಕ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಬಂದ ಕಾರಣ ಆ.01 ರಿಂದ ವಾರದ ಎಲ್ಲಾ ದಿನಗಳಂದು ಬಸ್ ಕಾರ್ಯಚರಣೆ ನಡೆಸಲು ಉದ್ದೇಶಿಸಲಾಗಿದೆ.

ದಾವಣಗೆರೆಯಿಂದ ಬೆಳಿಗ್ಗೆ 07 ಕ್ಕೆ ಹೊರಟು, ಹರಿಹರ 7-30, ಶಿರಸಿ- ಬೆ. 10.30 ಕ್ಕೆ ತಲುಪುತ್ತದೆ. 12 ಕ್ಕೆ ಶಿರಸಿಯಿಂದ ಹೊರಟು ಮಧ್ಯಾಹ್ನ 1.30 ಕ್ಕೆ ಜೋಗವನ್ನು ತಲುಪುತ್ತದೆ. ಸಂಜೆ 4.30 ಕ್ಕೆ ಜೋಗದಿಂದ ಹೊರಟು ರಾತ್ರಿ 8 ಗಂಟೆಗೆ ದಾವಣಗೆರೆಯನ್ನು ತಲುಪುತ್ತದೆ. ಪ್ರಯಾಣ ದರ ರೂ 500 (ಹೋಗಿ ಬರುವ 2 ಬದಿ ಸೇರಿ) ಮಕ್ಕಳಿಗೆ ರೂ.375 (2 ಬದಿಯಿಂದ) ಹರಿಹರದಿಂದ ಹೊರಡುವ ಪ್ರಯಾಣಿಕರಿಗೆ ದರ ರೂ. 475 (2 ಬದಿ) ಮಕ್ಕಳಿಗೆ ರೂ 350 ಆಗಿರುತ್ತದೆ.

ಮುಂಗಡ ಬುಕ್ಕಿಂಗ್ ಕೌಂಟರ್‍ಗಳಲ್ಲಿ ಬುಕ್ಕಿಂಗ್ www.ksrtc.in ಮಾಡಲು ಸೌಕರ್ಯ ಕಲ್ಪಿಸಲಾಗಿದೆ ಎಂದು ದಾವಣಗೆರೆ ಕ.ರಾ.ರ.ಸಾ. ನಿಗಮ. ದಾವಣಗೆರೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಾಜ್ಯದಲ್ಲಿ ಮತ್ತೆ ಏರಿದ ಕೊರೋನಾ ಪ್ರಕರಣಗಳು

Published

on

ಸುದ್ದಿದಿನ, ಬೆಂಗಳೂರು : ರಾಜ್ಯದಲ್ಲಿ ಸೋಮವಾರ 1,606 ಹೊಸ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 31 ಜನ ಸೋಂಕಿಗೆ ಬಲಿಯಾಗಿದ್ದಾರೆ.

ಈ ಪೈಕಿ ಬೆಂಗಳೂರಿನಲ್ಲಿ 467 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಸೋಂಕಿಗೆ ಬಲಿಯಾಗಿದ್ದಾರೆಂದು ರಾಜ್ಯ ಆರೋಗ್ಯ ಇಲಾಖೆ ಇಂದು ಮಾಹಿತಿ ನೀಡಿದೆ. ಈವರೆಗೆ 28,36.678 ಮಂದಿ ಚೇತರಿಸಿಕೊಂಡಿದ್ದು, 23,057 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದಲ್ಲಿ 36,405 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending