Connect with us

ಅಂತರಂಗ

ನಮ್ಮ ಕಣ್ಣೋಟವೇ ತಪ್ಪು ಇನ್ನು ಮುನ್ನೋಟ ಹೇಗೆ–ಕೊರೋನಾ ಪ್ರಶ್ನೆ..?

Published

on

  • ನಾ ದಿವಾಕರ

ಭಾರತದ ಆಳುವ ವರ್ಗಗಳ ಮುಂದೆ ಕೊರೋನ ಬಹುಆಯಾಮದ ಸಮಸ್ಯೆಗಳನ್ನು ತಂದು ನಿಲ್ಲಿಸಿದೆ. ಬಹುಶಃ 70 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಸಮಾಜದ ಎಲ್ಲ ಮಜಲುಗಳನ್ನೂ ಎಳೆಎಳೆಯಾಗಿ ಹೊರಗೆಳೆದು ನಡುರಸ್ತೆಯಲಿ ಬೆತ್ತಲೆ ನಿಲ್ಲಿಸುವಂತಹ ಪ್ರಸಂಗ ಎದುರಾಗಿರಲಿಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ರಾಜಕೀಯ ನೆಲೆಗಳಲ್ಲಿ ಸಮಸ್ಯೆಗಳು ಎದುರಾಗುತ್ತಿವೆ. ನಮ್ಮದೇ ವ್ಯವಸ್ಥೆ ಪೋಷಿಸಿರುವ ವಿಕೃತಿಗಳ ಪರಿಣಾಮ ಕೊರೋನಾ ಸಾಂಸ್ಕೃತಿಕ ಸಮಸ್ಯೆಗಳನ್ನೂ ಸೃಷ್ಟಿಸಿದೆ.

ಸರ್ಕಾರದ ಅಥವಾ ವ್ಯವಸ್ಥೆಯ ವೈಫಲ್ಯವನ್ನು ಕುರಿತು ಸೊಲ್ಲೆತ್ತಿದ ಕೂಡಲೇ ನಮ್ಮಲ್ಲಿ ರಾಜಕೀಯ ಪರ ವಿರೋಧದ ನೆಲೆಗಳು ಧುತ್ತೆಂದು ಎದುರಾಗಿಬಿಡುತ್ತವೆ. ಇದು ಅನಿವಾರ್ಯವಲ್ಲ. ಏಕೆಂದರೆ ನಾವು ಎದುರಿಸುತ್ತಿರುವ ಸಮಸ್ಯೆಗಳ ಮೂಲ ವ್ಯವಸ್ಥೆಯ ಬೇರುಗಳಲ್ಲಿದೆ. ಪ್ರಭುತ್ವ ಈ ದೋಷಪೂರಿತ ಬೇರುಗಳನ್ನು ಪೋಷಿಸುತ್ತಾ ಮತ್ತಷ್ಟು ಹದಗೆಡಿಸುತ್ತಿದೆ. ಸರ್ಕಾರಗಳು ಇತ್ತ ಬದಲಾವಣೆಯೂ ಸಾಧ್ಯವಾಗದೆ, ನಿರ್ವಹಣೆಯೂ ಸಾಧ್ಯವಾಗದೆ, ಪ್ರಭುತ್ವದ ನೀತಿಗಳನ್ನು ಪ್ರಶ್ನಾತೀತವಾಗಿಸಿ ಆಡಳಿತ ನಡೆಸುತ್ತಿವೆ. ಈ ವ್ಯತ್ಯಾಸವನ್ನು ಗ್ರಹಿಸದೆ ಹೋದರೆ ನಾವು ಪಕ್ಷ ರಾಜಕಾರಣದ ಬಂದಿಗಳಾಗಿಬಿಡುತ್ತೇವೆ.

50 ದಿನಗಳ ಲಾಕ್ ಡೌನ್ ಭಾರತದಲ್ಲಿ ಕೊರೋನಾ ಹರಡುವಿಕೆಯನ್ನು ಕಡಿಮೆ ಮಾಡಿದೆ. ಇದು ವಾಸ್ತವ. ಈ ಲಾಕ್ ಡೌನ್ ಮಾಡದೆ ಹೋಗಿದ್ದಲ್ಲಿ ಈ ಹೊತ್ತಿಗೆ ಲಕ್ಷಾಂತರ ಸಂಖ್ಯೆಯ ಜನ ಕೊರೋನಾ ಪೀಡಿತರಾಗುತ್ತಿದ್ದರು ಎಂದು ವೈದ್ಯಕೀಯ ವಲಯದಲ್ಲೂ ಹೇಳಲಾಗುತ್ತಿದೆ. ಆದರೆ ಲಾಕ್ ಡೌನ್ ಹೊರತಾಗಿಯೂ ಕೊರೋನಾ ಹರಡುವಿಕೆಯನ್ನು ತಡೆಗಟ್ಟುವುದರಲ್ಲಿ ಸಂಪೂರ್ಣ ಯಶಸ್ಸು ಕಾಣಲಾಗಿಲ್ಲ.

ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಂಕಿಅಂಶಗಳನ್ನು ಕೆಲಹೊತ್ತು ಬದಿಗಿಡೋಣ. ಇತ್ತೀಚೆಗೆ ಇದು ಹವಾಮಾನ ವರದಿಯಂತೆ ಕಾಣುತ್ತಿದೆ. ಇಂದು ನಮ್ಮ ಮುಂದಿರುವ ಬೃಹತ್ ಸಮಸ್ಯೆ ಲಾಕ್ ಡೌನ್ ನಡುವೆಯೂ ದೇಶದ ಅರ್ಥವ್ಯವಸ್ಥೆಯನ್ನು ಹದಗೆಡದಂತೆ ನೋಡಿಕೊಳ್ಳುವುದು ಮತ್ತು ಈ ಅರ್ಥವ್ಯವಸ್ಥೆಯನ್ನು ಸಂರಕ್ಷಿಸುವ ದುಡಿಮೆಯ ಕೈಗಳನ್ನು ಸಂರಕ್ಷಿಸುವುದು. ಮೊದಲನೆಯ ಆದ್ಯತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಶ್ರಮ ವಹಿಸುತ್ತಿವೆ. ಎರಡನೆಯದು ಕೇವಲ ಆಯ್ಕೆಯಾಗಿದೆಯೇ ಹೊರತು, ಆದ್ಯತೆಯಾಗಿಲ್ಲ.

ಈ ಎರಡನೆ ಆದ್ಯತೆಯ ಫಲಾನುಭವಿಗಳು ಈ ದೇಶದ ಕಾರ್ಮಿಕರು ಮತ್ತು ವಿಶೇಷವಾಗಿ ಅಸಂಘಟಿತ ವಲಸೆ ಕಾರ್ಮಿಕರು. ಮಹಾರಾಷ್ಟ್ರದ ಔರಂಗಾಬಾದ್ ಬಲಿ 16 ವಲಸೆ ಕಾರ್ಮಿಕರು ಚಲಿಸುವ ರೈಲಿಗೆ ಬಲಿಯಾಗಿದ್ದರೆ, ಹೈದರಾಬಾದ್ ನಿಂದ ಉತ್ತರಭಾರತಕ್ಕೆ ಮಾವಿನ ಹಣ್ಣಿನ ಲಾರಿಯೊಂದರಲ್ಲಿ ಹೊರಟಿದ್ದ ಐವರು ಕಾರ್ಮಿಕರು ಇಂದು ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ವ್ಯವಸ್ಥೆ ಕಾರಣವೇ ? ಈ ಪ್ರಶ್ನೆಯೇ ನಮ್ಮನ್ನು ವಿಚಲಿತಗೊಳಿಸಬೇಕು.

ಯಾವ ವ್ಯವಸ್ಥೆಯನ್ನು ದೂಷಿಸಬೇಕು. ಆಡಳಿತ ವ್ಯವಸ್ಥೆಯೋ ಅಥವಾ ನಮ್ಮ ಸಾಮಾಜಿಕ ವ್ಯವಸ್ಥೆಯೋ ? ವ್ಯವಸ್ಥೆಯನ್ನೇ ದೂಷಿಸುತ್ತಾ ಕುಳಿತರೆ ಜನಸಾಮಾನ್ಯರಲ್ಲಿ ಅರಿವು ಮೂಡುವುದು ಯಾವಾಗ ? ಈ ಪ್ರಶ್ನೆಗಳು ಒಂದೆಡೆಯಾದರೆ ಮತ್ತೊಂದೆಡೆ ಸರ್ಕಾರ ಇವರಿಗೆ ಎಲ್ಲ ಸವಲತ್ತುಗಳನ್ನೂ ನೀಡುತ್ತಿಲ್ಲವೇ ? ವಿಮೆ, ಭವಿಷ್ಯ ನಿಧಿ, ಕನಿಷ್ಟ ಕೂಲಿ, ಉಚಿತ ಪಡಿತರ ಎಲ್ಲವನ್ನೂ ನೀಡುತ್ತಿಲ್ಲವೇ ? ಈ ಪ್ರಶ್ನೆಗಳೂ ಕೇಳಿಬರುತ್ತವೆ.

ನಿಜ ಸರ್ಕಾರ ಎಲ್ಲ ಸವಲತ್ತುಗಳನ್ನೂ ನೀಡುತ್ತಿದೆ. ಹಾಗಾಗಿಯೇ ವಲಸೆ ಕಾರ್ಮಿಕರು ತಾವು ದುಡಿದ ಅಲ್ಪ ಆದಾಯದಲ್ಲೇ ಜೀವನ ಸವೆಸುತ್ತಾ ತಮ್ಮ ಸುತ್ತಲಿನ ಸಮಾಜಕ್ಕೆ ಹಿತವಲಯಗಳನ್ನು ಸೃಷ್ಟಿಮಾಡುತಿದ್ದರು. ತಮ್ಮ ಆದಾಯದ ಇತಿಮಿತಿಯಲ್ಲೇ ಸಾವಿರಾರು ಮೈಲು ದೂರದಲ್ಲಿರುವ ಕುಟುಂಬವನ್ನೂ ಸಲಹಿ ತಮ್ಮನ್ನೂ ಪೋಷಿಸಿಕೊಳ್ಳುತ್ತಿದ್ದ ಈ ಕಾರ್ಮಿಕರು ಎಂದಾದರೂ ದೇಹಿ ಎಂದಿದ್ದಾರೆಯೇ ? ಇಲ್ಲವಲ್ಲಾ .

ಈಗ ಇವರೇಕೆ ನಮಗೆ ಸಮಸ್ಯೆಯಾಗಿ ಕಾಣುತ್ತಿದ್ದಾರೆ ? ಏಕೆಂದರೆ ಅವರ ಆದಾಯ ಸ್ಥಗಿತಗೊಂಡಿದೆ. ಅವರ ನಾಳಿನ ಕೂಳು ಇಲ್ಲವಾಗಿದೆ. ಇವರನ್ನೇ ನಂಬಿ ಬದುಕುತ್ತಿರುವ ಕುಟುಂಬಗಳು ಬೀದಿಪಾಲಾಗುತ್ತಿವೆ. ಇಂತಹ ಸಂದರ್ಭಗಳಲ್ಲಿ ವಲಸೆ ಕಾರ್ಮಿಕರಲ್ಲಿ ಕಾಣುತ್ತಿರುವ ಸ್ವಗ್ರಾಮದ ಸೆಳೆತ ನಮ್ಮ ದೃಷ್ಟಿಯಲ್ಲಿ ಅಕ್ಷಮ್ಯ ಎನಿಸಿದರೆ ನಾವು ನಾಗರಿಕರೇ ಅಲ್ಲ ಎನ್ನಬೇಕಾಗುತ್ತದೆ.

“ ವಲಸೆ ” ಎನ್ನುವ ಪದಬಳಕೆಯೇ ನಮ್ಮ ಮತ್ತು ಅವರ ನಡುವೆ ಒಂದು ಗೋಡೆ ನಿರ್ಮಿಸಿಬಿಡುತ್ತದೆ. ಹಾಗೆ ಕೂಡಿ ಬಾಳಿದವರಿಗೇ ಗೋಡೆಯಿಂದಾಚೆ ಇರಲು ಹೇಳುವ ಒಂದು ಸಮಾಜ ವಲಸಿಗರಿಗೆ ಇನ್ನೇನು ಹೇಳಲು ಸಾಧ್ಯ ? ವಲಸೆ ಕಾರ್ಮಿಕರು ಎಂದಾಕ್ಷಣ ನಮ್ಮ ಮನಸಿನಲ್ಲಿ ಅಸ್ಮಿತೆಗಳ ತಾಕಲಾಟ ಶುರುವಾಗುತ್ತದೆ. ಎಲ್ಲಿಂದ ಬಂದವರು, ಯಾವ ಭಾಷಿಕರು, ಅಸ್ಪೃಶ್ಯರೋ ಸ್ಪೃಶ್ಯರೋ, ಉತ್ತರದವರೋ ಈಶಾನ್ಯದವರೋ, ಬಿಹಾರಿಯೋ ಬಂಗಾಲಿಯೋ ಹೀಗೆ.

ಈ ಅಸ್ಮಿತೆಗಳ ಗೋಡೆಗಳನ್ನು ಕಟ್ಟಿಕೊಳ್ಳುತ್ತಲೇ ನಾವು ಅವರನ್ನು ಆಶ್ರಯಿಸುತ್ತೇವೆ. ಅವರು ನಮ್ಮನ್ನು ಆಶ್ರಯಿಸುವುದಿಲ್ಲ, ಅವರ ದುಡಿಮೆಯನ್ನು ಆಶ್ರಯಿಸುತ್ತಾರೆ. ಕೊನೆಗೆ ನಮಗೆ ಸೂರು ಕಲ್ಪಿಸಲು ವರ್ಷಗಟ್ಟಲೆ ದುಡಿಯುವ ನೂರಾರು ಕೈಗಳಿಗೆ ನಾವು ನೀಡುವುದು ಅಳಿದುಳಿದ ಅನ್ನವನ್ನೇ ಹೊರತು ಭೂರಿ ಭೋಜನವೇನಲ್ಲ.

ಇವರಲ್ಲಿ ನಾವು ನಾಗರಿಕ ಪ್ರಜ್ಞೆ ಅಪೇಕ್ಷಿಸುತ್ತೇವೆ, ಸಾಮಾನ್ಯ ಜ್ಞಾನ ಅಪೇಕ್ಷಿಸುತ್ತೇವೆ, ಸಂಯಮ, ತಾಳ್ಮೆ, ಸಹನೆ ಎಲ್ಲವನ್ನೂ ಅಪೇಕ್ಷಿಸುತ್ತೇವೆ. ಸರ್ಕಾರ ಲಾಕ್ ಡೌನ್ ಅವಧಿಯಲ್ಲಿ ಉಚಿತ ಅಕ್ಕಿ ನೀಡಿರಲಿಲ್ಲವೇ ಎನ್ನುವ ಪ್ರಶ್ನೆ ಸಹಜ. ಆದರೆ ಜೀವನ ಎಂದರೆ ಅನ್ನ ಮಾತ್ರವೇ ? ಅಷ್ಟೇ ಆಗಿದ್ದರೆ ದುಡಿಮೆಯೂ ಬೇಕಿಲ್ಲ ಅಲ್ಲವೇ ? ನಾವು ಸುಂದರ ಬದುಕಿನ ಕೋಟೆ ಕಟ್ಟಿಕೊಳ್ಳಲು ಕನಸು ಕಾಣುತ್ತೇವೆ, ಅವರು ತಮ್ಮ ಜೀವನ ಸವೆಸಲು ಅಪೇಕ್ಷಿಸಿದರೆ ನಮ್ಮ ಮನಸಿಗೆ ಹುಳಿ ಹಿಂಡಿದಂತಾಗುತ್ತದೆ.

ಏಕೆ ಹೀಗೆ ? ನಮ್ಮ ಕನಸಿನ ಬದುಕನ್ನು ತಕ್ಕಡಿಯ ಒಂದು ತಟ್ಟೆಯಲ್ಲಿಟ್ಟು ಅವರ ಕನಸುಗಳನ್ನೂ ಇಟ್ಟು ನೋಡೋಣವೇ ? ನಮ್ಮ ತಟ್ಟೆಯಲ್ಲಿ ಕುಟುಂಬ, ಮನೆ, ವಾಹನ, ಶಿಕ್ಷಣ, ಉದ್ಯೋಗ, ಮನರಂಜನೆ, ವಿಹಾರ, ಪ್ರಯಾಣ ಇವೆಲ್ಲವೂ ತೂಗುತ್ತವೆ. ಅವರ ತಟ್ಟೆಯಲ್ಲಿ ಆಹಾರ, ಕುಟುಂಬ, ತಂಗಲು ಒಂದು ಚಾವಡಿ ಇಷ್ಟಲ್ಲದೆ ಇನ್ನೇನು ತೂಗುತ್ತದೆ. ಆದರೂ ನಾವು ತುಲಾಭಾರ ಮಾಡಲು ಸದಾ ಸಜ್ಜಾಗಿರುತ್ತೇವೆ.

ಮುಂಬಯಿಯ ಧಾರವಿಯತ್ತ ಒಮ್ಮೆ ಕಣ್ಣು ಹಾಯಿಸಿದರೆ ಈ ವಾಸ್ತವ ಮುಖಕ್ಕೆ ರಾಚುತ್ತದೆ. ಹತ್ತು ಅಡಿ ವಿಸ್ತೀರ್ಣದ ಗೂಡಿನಲ್ಲಿ ಹತ್ತು ಜನ ಇರುತ್ತಾರೆ ಎಂದರೆ ನಮಗೆ ಊಹಿಸಲು ಸಾಧ್ಯವೇ ? ಇದನ್ನು ಕಾಣಲು ಅಲ್ಲಿಗೇ ಹೋಗಬೇಕಿಲ್ಲ, ನಾವು ಖರೀದಿಸುವ ಫ್ಲಾಟ್ ಸುತ್ತಲೂ ಅದೇ ವಸತಿಸಮುಚ್ಚಯದ ನಿರ್ಮಾಣದಲ್ಲಿ ತೊಡಗಿರುವ ವಲಸಿಗರ ಗೂಡುಗಳತ್ತ ಒಮ್ಮೆ ಕಣ್ಣು ಹಾಯಿಸಿದರೂ ಸಾಕು, ಧಾರವಿ ಪರಿಚಯವಾಗುತ್ತದೆ. ನಾವು ಅತ್ತ ನೋಡುವುದಿಲ್ಲವಷ್ಟೆ.

ಅವರ ಬಳಿ ಚರವಾಣಿ ಇರುವುದಲ್ಲವೇ ಎಂದು ಹುಬ್ಬೇರಿಸುತ್ತೇವೆ ? ಹೊಟ್ಟೆಗೆ ಹಿಟ್ಟಿಲ್ಲದೆ ಗಾದೆಯೂ ನಮಗೆ ನೆನಪಾಗಿಬಿಡುತ್ತದೆ. ಆದರೆ ಈ ವಲಸಿಗರನ್ನು ಸಾವಿರಾರು ಕಿಲೋಮೀಟರ್ ದೂರಕ್ಕೆ ಕರೆದೊಯ್ದಿರುವ ಒಂದು ಅರ್ಥವ್ಯವಸ್ಥೆಯೇ ಅವರಿಗೆ ಚರವಾಣಿಯನ್ನೂ ಒದಗಿಸುತ್ತದೆ, ತರಂಗಾಂತರವನ್ನೂ ಒದಗಿಸುತ್ತದೆ. ಇಲ್ಲಿ ಬಂಡವಾಳದ ಸ್ವಾರ್ಥವೂ ಇರುವುದುನ್ನು ಗಮನಿಸಬೇಕಷ್ಟೆ.

ಉತ್ತರ ಭಾರತದಲ್ಲಿ ವಲಸೆ ಕಾರ್ಮಿಕರಿಗೆಂದೇ ಶ್ರಮಿಕ ರೈಲುಗಳು ಸಜ್ಜಾಗಿದ್ದರೂ ಸಾವಿರಾರು ಕಾರ್ಮಿಕರು ಕಾಲ್ನಡಿಗೆಯಲ್ಲೇ ಹೊರಟಿದ್ದಾರೆ. ಏಕೆಂದರೆ ಅವರಿಗೆ ಆನ್‍ಲೈನ್ ಅರ್ಜಿ ಮತ್ತು ತಮ್ಮ ಕ್ರಮಸಂಖ್ಯೆಗಾಗಿ ಕಾಯುವಷ್ಟು ವ್ಯವಧಾನ ಇರುವುದಿಲ್ಲ.

ಅದಕ್ಕೇ ಮಹಾರಾಷ್ಟ್ರದಲ್ಲಿ ರೈಲಿಗೆ ಸಿಲುಕಿ ಸತ್ತಿದ್ದು, ಸ್ವಲ್ಪ ದಿನ ತಡೆದಿದ್ದರೆ ಏನಾಗುತ್ತಿತ್ತು ? ಮತ್ತೊಂದು ಪ್ರಶ್ನೆ ನಮ್ಮ ನಡುವೆ ಉದ್ಭವಿಸುತ್ತದೆ. ನಿಜ, ತಡೆದಿದ್ದರೆ ಅವರು ಬದುಕಬಹುದಿತ್ತು. ಆದರೆ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ತಮ್ಮ ಕುಟುಂಬಗಳೊಡನೆ ಸಂಪರ್ಕವನ್ನೇ ಕಡಿದುಕೊಂಡ ಸಾವಿರಾರು ಕಾರ್ಮಿಕರಲ್ಲಿ ನಾವು ವ್ಯವಧಾನವನ್ನು ಅಪೇಕ್ಷಿಸುವುದಾದರೂ ಹೇಗೆ ? ಸರ್ಕಾರ ಅವರಿಗೆ ಉಚಿತ ಅಕ್ಕಿ ನೀಡಿದೆ, ಮೊಬೈಲ್ ರೀಚಾರ್ಜ್ ಮಾಡಿಸಲು 10 ರೂ ಕೊಡುವವರಿಲ್ಲ. ತಮ್ಮ ಹೆಂಡತಿ ಮಕ್ಕಳೊಡನೆ ಮಾತನಾಡುವ ತವಕ ಅವರಿಗೆ ಇರುವುದಿಲ್ಲವೇ ? ಇದು ನಮಗೆ ಗೋಚರಿಸುವುದೇ ಇಲ್ಲ. ಏಕೆಂದರೆ ನಮ್ಮ ಮತ್ತು ಅವರ ನಡುವೆ ಒಂದು ಗೋಡೆ ಇದೆ. ಅದು ಅನೇಕ ಸಂಗತಿಗಳನ್ನು ನುಂಗಿಹಾಕಿಬಿಡುತ್ತದೆ.

ಈ ಕಾರ್ಮಿಕರಿಗಾಗಿಯೇ ಸರ್ಕಾರಗಳು ಸಾಕಷ್ಟು ಕಾನೂನುಗಳನ್ನು ಜಾರಿ ಮಾಡಿವೆ. ಕಟ್ಟುನಿಟ್ಟಾದ ಕಾಯ್ದೆಗಳಿವೆ. ಆದರೆ ಇವರನ್ನು ನಿರ್ವಹಿಸುವ ಗುತ್ತಿಗೆದಾರರನ್ನು ನಿಯಂತ್ರಿಸಲು ಯಾವ ಕಾಯ್ದೆ ಕಾನೂನು ಇದೆ ಎಂದು ನೋಡಿದಾಗ ಮೂಕವಿಸ್ಮಿತರಾಗುತ್ತೇವೆ. ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ, ರಸ್ತೆ ಮತ್ತು ರೈಲು ನಿರ್ಮಾಣ ಕಾಮಗಾರಿಯಲ್ಲಿ, ಸಾರ್ವಜನಿಕ ಸೌಕರ್ಯಗಳ ನಿರ್ಮಾಣ ಕಾಮಗಾರಿಗಳಲ್ಲಿ ಬಂಡವಾಳಿಗರ ಮಾಫಿಯಾ ಎಷ್ಟು ಬಲಿಷ್ಠವಾಗಿದೆಯೋ ಅಷ್ಟೇ ಬಲಿಷ್ಠವಾಗಿರುವುದು ಗುತ್ತಿಗೆದಾರರ ಮಾಫಿಯಾ.

ಇದು ನಮ್ಮನ್ನಾಳುವ ಜನಪ್ರತಿನಿಧಿಗಳಿಗೆ, ಆಡಳಿತ ನಿರ್ವಹಿಸುವ ಅಧಿಕಾರಶಾಹಿಗೆ ತಿಳಿಯದ ವಿಷಯವೇನಲ್ಲ. ಆದರೂ ಒಂದು ವ್ಯವಸ್ಥೆ ಎಲ್ಲರನ್ನೂ ತೆಪ್ಪಗಾಗಿಸುತ್ತದೆ. ಈ ವ್ಯವಸ್ಥೆಯ ಅಂಗಳದಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳ ದುಷ್ಟ ಕೂಟಗಳು ತಮ್ಮದೇ ಆದ ಸುಭದ್ರ ನೆಲೆಗಳನ್ನು ಸೃಷ್ಟಿಸಿಕೊಂಡಿರುತ್ತವೆ. ಸರ್ಕಾರಕ್ಕೆ, ಪ್ರಭುತ್ವಕ್ಕೆ ಇದರ ಸ್ಪಷ್ಟ ಅರಿವು ಇರುತ್ತದೆ. ಆ ವ್ಯವಸ್ಥೆಯನ್ನು ದೂಷಿಸಿದರೆ ತಪ್ಪೇನಿದೆ ?

ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲೆಂದೇ ಜಾಗತಿಕ ಹಣಕಾಸು ಬಂಡವಾಳ ಪ್ರತಿಯೊಂದು ದೇಶದಲ್ಲೂ ತನ್ನದೇ ಹಿತವಲಯದ ಆಡಳಿತ ವ್ಯವಸ್ಥೆಯನ್ನು ರೂಪಿಸುತ್ತದೆ. ನಾವು ಚುನಾಯಿಸುವ ಸರ್ಕಾರಗಳು ಮತ್ತು ನಮ್ಮ ಚಟುವಟಿಕೆಗಳನ್ನು ನಿಯಂತ್ರಿಸುವ ಪ್ರಭುತ್ವ ಈ ವ್ಯವಸ್ಥೆಯ ಚೌಕಟ್ಟಿನಿಂದ ಹೊರಬರುವ ವ್ಯವಧಾನವೂ ಇಲ್ಲದೆ, ಸಂಯಮವೂ ಇಲ್ಲದೆ, ಸಂವೇದನೆಯೂ ಇಲ್ಲದೆ ಬಂಡವಾಳದ ಜೀತದಾಳುಗಳಂತೆ ಕಾರ್ಯನಿರ್ವಹಿಸುತ್ತದೆ.

ವಲಸೆ ಕಾರ್ಮಿಕರಲ್ಲಿ ವ್ಯವಧಾನ ಅಪೇಕ್ಷಿಸುವ ನಾಗರಿಕ ಸಮಾಜ, ಅಂದರೆ ನಾವು, ಈ ವ್ಯವಸ್ಥೆಯ ನಿರ್ವಾಹಕರಲ್ಲಿ ಅದನ್ನು ಬಯಸುವುದಿಲ್ಲ. ಏಕೆಂದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ವ್ಯವಸ್ಥೆಯ ಒಂದು ಭಾಗವಾಗಿರುತ್ತೇವೆ. ಈ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ಸಂರಕ್ಷಿಸುವ ಪ್ರಭುತ್ವ ನಮ್ಮ ಪಾಲಿಗೆ ಅಪ್ಯಾಯಮಾನವಾಗುತ್ತದೆ.

ಕಾರಣ, ಯೋಚಿಸುವ ಮನಸುಗಳನ್ನು ವ್ಯವಸ್ಥೆಯೇ ಖರೀದಿಸುತ್ತದೆ. ಶಿಕ್ಷಣದ ಮೂಲಕ, ಮಾಧ್ಯಮಗಳ ಮೂಲಕ, ಅಂತರ್ಜಾಲದ ಮೂಲಕ, ಸಾಮಾಜಿಕ ಮಾಧ್ಯಮಗಳ ಮೂಲಕ ಮತ್ತು ಸಾಂಸ್ಥಿಕ ನೆಲೆಗಳ ಮೂಲಕ. ಈ ವಶೀಕರಣ ಪ್ರಕ್ರಿಯೆಗೆ ನಾವು, ಅಂದರೆ ಆಲೋಚಿಸುವ ಶಕ್ತಿಯುಳ್ಳ ಮನಸುಗಳು, ಸುಲಭ ತುತ್ತಾಗುತ್ತೇವೆ. ನಮ್ಮ ಆಯ್ಕೆಗಳು ಪ್ರಭುತ್ವದ ಆದ್ಯತೆಯಾಗಿಬಿಡುತ್ತವೆ, ನಮ್ಮ ಆದ್ಯತೆಗಳು ವ್ಯವಸ್ಥೆಯ ಆಯ್ಕೆಯಾಗಿಬಿಡುತ್ತದೆ.

ಇದಕ್ಕೆ ಗುರುದಕ್ಷಿಣೆಯಂತೆ ನಾವು ಐದು ವರ್ಷಕ್ಕೊಮ್ಮೆಯೋ, ನಡುನಡುವೆಯೋ ಮತಗಟ್ಟೆಗೆ ಹೋಗಿ ಗುರುವಲ್ಲದ ಗುರುವಿಗೆ ನಮ್ಮ ಹೆಬ್ಬೆರಳುಗಳನ್ನು ಅರ್ಪಿಸುತ್ತಲೇ ಬಂದಿದ್ದೇವೆ. ನಮ್ಮ ಹಿತವಲಯ ಸುರಕ್ಷಿತವಾಗಿಬಿಡುತ್ತದೆ. ನಮ್ಮ ಬೇಕು ಬೇಡಗಳ ಚೆಂಡಾಟಕ್ಕೆ ಮೈದಾನ ಹಿಗ್ಗುತ್ತಲೇ ಹೋಗುತ್ತದೆ. ಹೀಗಿರುವಾಗ ನಮಗೆ ನಾವೇ ಕಟ್ಟಿದ ಗೋಡೆಯ ಆಚೆಗಿನ ಪ್ರಪಂಚ ಕಾಣುವುದಾದರೂ ಹೇಗೆ ?

ಹಾಗಾಗಿಯೇ ನಮಗೆ ಒಂದು ಸೈಕಲ್ ಮೇಲೆ ಸಾವಿರ ಕಿಲೋಮೀಟರ್ ಹೋಗುವವನು, ಬಿರುಬಿಸಿಲಲ್ಲಿ ಮಗುವನ್ನು ತಲೆಯಮೇಲೆ ಹೊತ್ತು ಹೋಗುವವನು, ಕೊಂಕುಳಲ್ಲಿ ಹಸಿವಿನಿಂದ ಅಳುತ್ತಿರುವ ಕಂದಮ್ಮನನ್ನು ಹೊತ್ತು ಹೋಗುವವಳು ವಿಚಿತ್ರವಾಗಿ ಕಾಣುತ್ತಾರೆ. ನಮ್ಮ ಮತ್ತು ಅವರ ನಡುವೆ “ ವಲಸೆ ” ಎನ್ನುವ ಅಕ್ಷರದ ಗೋಡೆಯೊಂದು ನಿಂತಿರುತ್ತದೆ. ಇವರು ಇಲ್ಲೇ ಇದ್ದರೆ ಏನು ಗಂಟು ಹೋಗುತ್ತೆ ಎನ್ನುವ ಪ್ರಶ್ನೆಯೂ ಸಹಜ.

ಆದರೆ ಈ ಪ್ರಶ್ನೆಯ ಹಿಂದೆ ನಮ್ಮ ಸ್ವಾರ್ಥವೂ ಇದೆ ಅಲ್ಲವೇ ? ನಾಳೆಯಿಂದ ಶ್ರಮದ ಬೆಲೆ ಹೆಚ್ಚಾಗುತ್ತದೆ ಎನ್ನುವ ಆತಂಕ. ಗುತ್ತಿಗೆದಾರನಿಗೆ ಹೆಚ್ಚಿನ ಕೂಲಿ ನೀಡಬೇಕಾದ ಆತಂಕ. ಈ ಆತಂಕಗಳಿಗೆ ವಲಸಿಗರ ತಕ್ಕಡಿಯ ತಟ್ಟೆಯಲ್ಲಿ ಜಾಗವೇ ಇರುವುದಿಲ್ಲ. ನಮಗೆ ಜೀವನ ಮತ್ತು ಜೀವನೋಪಾಯ ಒಂದೇ ಸೂರಿನಡಿ ಇರುತ್ತದೆ. ಅವರಿಗೆ ಎರಡರ ನಡುವೆ ನೂರಾರು ಮೈಲು ಅಂತರ ಇರುತ್ತದೆ.

ಈ ಕಟುವಾಸ್ತವವನ್ನು ಅರಿಯಲು ಬೇಕಾದ ಮುನ್ನೋಟ ನಮ್ಮ ಸಮಾಜದ ಹಲವು ವರ್ಗಗಳಲ್ಲಿ ಇಲ್ಲ ಎನ್ನುವುದನ್ನು ಕೊರೋನಾ ನಿರೂಪಿಸಿದೆ. ಸರ್ಕಾರದಿಂದ ಇದನ್ನು ಅಪೇಕ್ಷಿಸಲಾಗುವುದಿಲ್ಲ. ಪ್ರಭುತ್ವದಿಂದ ನಿರೀಕ್ಷಿಸಲಾಗುವುದಿಲ್ಲ. ಏಕೆಂದರೆ ಅವೆರಡೂ ವ್ಯವಸ್ಥೆಯ ಸಂರಕ್ಷಣೆಗಾಗಿಯೇ ಇರುವ ಸಾಂಸ್ಥಿಕ ಸ್ಥಾವರಗಳು.

ಆದರೆ ನಾಗರಿಕ ಸಮಾಜ ಸ್ಥಾವರವಾಗಬಾರದು ಅಲ್ಲವೇ ? ಸದೃಢ ದೇಶ ನಿರ್ಮಾಣಕ್ಕಾಗಿ ಬೆವರು ಸುರಿಸಿ ದುಡಿವ ಶ್ರಮಿಕರ ಮಡುಗಟ್ಟಿದ ಭಾವನೆಗಳು ಜಡಗಟ್ಟಿದ ವ್ಯವಸ್ಥೆಗೆ ಅರ್ಥವಾಗುವುದಿಲ್ಲ. ಒಂದು ಜಂಗಮ ಸ್ವರೂಪಿ ಸಮಾಜಕ್ಕೆ ಮಾತ್ರ ಅರ್ಥವಾಗುತ್ತದೆ. ಅಂತಹ ಒಂದು ಸಮಾಜವನ್ನು ಇನ್ನಾದರು ನಾವು ಕಟ್ಟಬೇಕಿದೆ ಎನಿಸುವುದಿಲ್ಲವೇ ? ಇನ್ನೂ ಹಾಗೆನಿಸಿದದಿದ್ದರೆ, ಕೊರೋನಾ ನಮ್ಮ ನಡುವೆ ಇನ್ನೂ ಇರುತ್ತದೆ. ನಮಗೆ ಈ ಪಾಠವನ್ನು ಕಲಿಸಿಯೇ ತೀರುತ್ತದೆ. ಲಾಕ್ ಡೌನ್ ಇರಲಿ, ಇಲ್ಲದಿರಲಿ, ನಮ್ಮ ಮನಸಿನ ಬಾಗಿಲುಗಳನ್ನು ಸೀಲ್ ಡೌನ್ ಮಾಡುವುದು ಬೇಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಹಳ್ಳಿ ಹೆಜ್ಜೆಯ ಸುತ್ತು

Published

on

ಸಾಂದರ್ಭಿಕ ಚಿತ್ರ
  • ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್

ಭಾರತದ ಜನಸಂಖ್ಯೆಯ ಸುಮಾರು 70% ಕ್ಕಿಂತ ಹೆಚ್ಚು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಅಂತೆಯೇ ನಾವು ಸೇವಿಸುವ ಆಹಾರ ಮತ್ತು ಕೃಷಿ ಉತ್ಪನ್ನಗಳ ಮುಖ್ಯ ಮೂಲ ಗ್ರಾಮಗಳು. ಸ್ವಾತಂತ್ರ್ಯದ ನಂತರ ಗ್ರಾಮಗಳು ಜನಸಂಖ್ಯೆ ಮತ್ತು ಶಿಕ್ಷಣ ಎರಡರಲ್ಲೂ ಹೆಚ್ಚು ಬೆಳೆದಿದೆ.

ಹಳ್ಳಿಯ ಜನರು ತಮ್ಮ ಕೆಲಸಕ್ಕೆ ಹೆಚ್ಚು ಸಮರ್ಪಿತರಾಗಿದ್ದಾರೆ, ನಗರದ ಜನರು ಸಹ ಹೆಚ್ಚಿನ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿರುತ್ತಾರೆ ಮತ್ತು ನಗರ ಪ್ರದೇಶದ ಜನರಿಗು ಹಳ್ಳಿ ಜನರಿಗು ತುಂಬಾನೆ ವ್ಯತ್ಯಾಸಗಳನ್ನು ಕಾಣಬಹುದು. (ಉಡುಗೆ-ತೊಡುಗೆ, ಕೆಲಸ-ಕಾರ್ಯಗಳಲ್ಲಿ, ಊಟೋಪಚಾರದಲ್ಲಿ)

ಇದಲ್ಲದೆ ಇಡೀ ಗ್ರಾಮವು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುತ್ತದೆ ಮತ್ತು ಯಾವುದೇ ರೀತಿಯ ಸಂಘರ್ಷವಿಲ್ಲದೆ ಗ್ರಾಮಸ್ಥರು ಪರಸ್ಪರ ದುಃಖ ಮತ್ತು ಸಂತೋಷದಲ್ಲಿ ಮುಂದೆ ಬರುತ್ತಾರೆ ಮತ್ತು ಅವರು ಸಹಾಯಕ ಸ್ವಭಾವವನ್ನು ಹೊಂದಿದ್ದಾರೆ.

ಗ್ರಾಮದ ಮಹತ್ವ

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಗ್ರಾಮಗಳು ಅಸ್ತಿತ್ವದಲ್ಲಿವೆ ಮತ್ತು ಸರಕುಗಳ ಬೇಡಿಕೆ ಮತ್ತು ಪೂರೈಕೆಗಾಗಿ ಅವು ಪರಸ್ಪರ ಅವಲಂಬಿತವಾಗಿವೆ. ಅಂತೆಯೇ ಅವು ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿವೆ. ಭಾರತವು ತನ್ನ ದ್ವಿತೀಯ ಮತ್ತು ತೃತೀಯ ಕ್ಷೇತ್ರಕ್ಕಿಂತ ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿರುವ ದೇಶ.

ಅಲ್ಲದೆ ಭಾರತವು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ ಮತ್ತು ಈ ದೊಡ್ಡ ಜನಸಂಖ್ಯೆಯನ್ನು ಪೋಷಿಸಲು ಅವರಿಗೆ ಹಳ್ಳಿಗಳಿಂದ ಬರುವ ಆಹಾರ ಬೇಕು ಇದು ನಮಗೆ ಮತ್ತು ಪ್ರತಿಯೊಬ್ಬರಿಗೂ ಏಕೆ ಮುಖ್ಯವಾಗಿದೆ ಎಂಬುದನ್ನು ಇದು ವಿವರಿಸುತ್ತದೆ. ಗ್ರಾಮಗಳು ಆರ್ಥಿಕತೆಯ ಬೆನ್ನೆಲುಬು ಎಂದು ನಾವು ಹೇಳಬಹುದು.

ಇದನ್ನೂ ಓದಿ | ಚಿತ್ರದುರ್ಗ | ಕೊರೋನಾದಿಂದ ಪಬ್ಲಿಕ್ ಟಿವಿ ಕ್ಯಾಮೆರಾಮನ್ ಬಸವರಾಜ್ ಕೋಟಿ‌ ಸಾವು

ಅಲ್ಲದೆ ನನ್ನ ಗ್ರಾಮವು ಭಾರತದ ಎಲ್ಲಾ ಹಳ್ಳಿಗಳ ಒಂದು ಭಾಗವಾಗಿದ್ದು, ಜನರು ಇನ್ನೂ ಶಾಂತಿ ಮತ್ತು ಸೌಹಾರ್ದಯುತವಾಗಿ ವಾಸಿಸುತ್ತಿದ್ದಾರೆ. ಗ್ರಾಮಗಳ ಜನರು ಸ್ನೇಹಪರರಾಗಿದ್ದಾರೆ ನಗರ ಪ್ರದೇಶದ ಜನರಿಗೆ ಹೋಲಿಸಿದರೆ ಸಂತೋಷದಾಯಕ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಾರೆ.

ಇದಲ್ಲದೆ ಮರಗಳು, ವೈವಿಧ್ಯಮಯ ಬೆಳೆಗಳು, ಗದ್ದೆ-ತೋಟ, ಹೂವುಗಳ ವೈವಿಧ್ಯತೆ ಮತ್ತು ಹಳ್ಳಕೊಳ್ಳಗಳು ಇತ್ಯಾದಿಗಳಿವೆ. ಇವೆಲ್ಲವುಗಳಲ್ಲದೆ ರಾತ್ರಿಯಲ್ಲಿ ತಂಪಾದ ಆಹ್ಲಾದಕರವಾದ ಗಾಳಿ ಮತ್ತು ಹಗಲಿನಲ್ಲಿ ಬೆಚ್ಚಗಿನ ಗಾಳಿ ಜೋತೆಗೆ ಪೈರಿನ ಸುವಾಸನೆ ಬೀಸುತ್ತದೆ.

ನನ್ನ ಹಳ್ಳಿ

ನನ್ನ ಹಳ್ಳಿಯು ತಗ್ಗು ಪ್ರದೇಶದಲ್ಲಿದ್ದು ಬೆಚ್ಚಗಿನ ಬೇಸಿಗೆಯನ್ನು, ಜಿಟಿ-ಜಿಟಿ ಮಳೆಯನ್ನು ಮತ್ತು ಚುಮು-ಚುಮು ಚಳಿಗಾಲವನ್ನು ಹೊಂದಿದೆ. ಹೆಚ್ಚಾಗಿ ರಜಾದಿನಗಳ ಕಾರಣ ಬೇಸಿಗೆಯಲ್ಲಿ ಪ್ರತಿಯೊಬ್ಬರೂ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಬೇಸಿಗೆಯಲ್ಲಿ ನಗರಕ್ಕಿಂತ ಗ್ರಾಮವು ತಂಪಾಗಿರುತ್ತದೆ. ಅಲ್ಲದೆ ತಂಗಾಳಿಯಿಂದಾಗಿ ನಮಗೆ ಹಳ್ಳಿಯಲ್ಲಿ ಹವಾನಿಯಂತ್ರಣ ಅಗತ್ಯವಿಲ್ಲ.

ಒಂದು ಹಳ್ಳಿಯಲ್ಲಿ ನೀವು ಹಸಿರನ್ನು ನೋಡುತ್ತೀರಿ ಮತ್ತು ಪ್ರತಿಯೊಂದು ಮನೆಯಲ್ಲೂ ಅವರ ಅಂಗಳದಲ್ಲಿ ಕನಿಷ್ಠ ಒಂದು ಮರವಿರುತ್ತದೆ. ಇದಲ್ಲದೆ ಬೇಸಿಗೆ ಸುಗ್ಗಿಯ ಕಾಲವಾಗಿರುವುದರಿಂದ ಹಳ್ಳಿಯಲ್ಲಿ ರೈತರು ತಮ್ಮ ಬೆಳೆಗಳನ್ನು ವಕ್ಕಲು ಮಾಡಿಕೊಳ್ಳುವುದನ್ನು ಕಾಣಬಹುದು ಹಳ್ಳಿಯಲ್ಲಿ ಮೊದಲು ಹೆಚ್ಚು ಕಚ್ಚಾ ಮನೆ (ಮಣ್ಣು ಮತ್ತು ಇಟ್ಟಿಗೆಗಳಿಂದ ಮಾಡಿದ ಮನೆಗಳು) ಇರುವುದನ್ನು ಕಾಣುತ್ತಿದ್ದೆವು ಆದರೆ ಈಗ ಸನ್ನಿವೇಶವು ಬದಲಾಗಿದೆ ಇಂದು ಪಕ್ಕಾ ಮನೆಯ ಸಂಖ್ಯೆ (ಕಾಂಕ್ರೀಟ್ ಮತ್ತು ಇತರ ವಸ್ತುಗಳಿಂದ ಮಾಡಲ್ಪಟ್ಟಿದೆ) ಹೆಚ್ಚಾಗಿದೆ. ಅಲ್ಲದೆ ಗ್ರಾಮದ ಜನರಿಗಿಂತ ಹಳ್ಳಿಯ ಜನರು ಸ್ನೇಹಪರರಾಗಿದ್ದಾರೆ.

ನನ್ನ ಹಳ್ಳಿಯ ಬಗ್ಗೆ ನಾನು ಹೆಚ್ಚು ಇಷ್ಟಪಡುವ ವಿಷಯವೆಂದರೆ ತಾಜಾ ಮತ್ತು ಪುನರುಜ್ಜೀವನಗೊಳಿಸುವ ಗಾಳಿ. ನಾವು 4-5 ಗಂಟೆಗಳ ಕಾಲ ಮಲಗಿದ್ದರೂ ಗಾಳಿಯು ಉಲ್ಲಾಸದ ಭಾವನೆಯನ್ನು ನೀಡುತ್ತದೆ. ಬಹು ಮುಖ್ಯವಾಗಿ ರಾತ್ರಿಯಲ್ಲಿ ನಾನು ನಗರದಲ್ಲಿ ನೋಡಲು ಸಾಧ್ಯವಾಗದ ನಕ್ಷತ್ರಗಳನ್ನು ನೋಡುತ್ತೇನೆ ಮತ್ತು ಎಣಿಸುತ್ತೇನೆ.

ನಮ್ಮ ಹಳ್ಳಿಯು ನಮ್ಮ ರಜಾದಿನಗಳಲ್ಲಿ ಅಥವಾ ನಾವು ದಣಿದಿದ್ದಾಗ ಮತ್ತು ವಿಶ್ರಾಂತಿ ಪಡೆಯಲು ಬಯಸಿದಾಗ ಭೇಟಿ ನೀಡಲು ಇಷ್ಟಪಡುವ ಸ್ಥಳವಾಗಿದೆ. ಹಳ್ಳಿಯು ನಗರದ ಮಾಲಿನ್ಯ ಮತ್ತು ಶಬ್ದದಿಂದ ದೂರವಿರುವ ಸ್ಥಳವಾಗಿದೆ. ಅಲ್ಲದೆ ನೀವು ಹಳ್ಳಿಯ ಮಣ್ಣಿನೊಂದಿಗೆ ಸಂಪರ್ಕವನ್ನು ಅನುಭವಿಸಿದ್ದಾದರೆ ನಿಮ್ಮ ಜೀವನ ತುಂಬಾ ಸುಖಕರವಾಗಿರುವುದಾಗಿದೆ ಎಂಬುದನ್ನ ತಿಳಿದುಕೊಳ್ಳಿ ಏಕೆಂದರೆ ಮಣ್ಣಿನ ವಾಸನೆಯೇ ಹಾಗೆ ಅದನ್ನ ಪಡೆಯಲು ಅದೃಷ್ಟವೇ ಮಾಡಿರಬೇಕು.

ಯಾರಾದರು ಹಳ್ಳಿಗಳ ಬಗ್ಗೆ ಯಾವುದು ಉತ್ತಮ ಎಂಬ ಪ್ರಶ್ನೆಗೆ ಹಳ್ಳಿಗಳಲ್ಲಿ ತಾಜಾ ಗಾಳಿ, ನದಿಗಳು, ಮರಗಳು, ಮಾಲಿನ್ಯವಿಲ್ಲದ ವಾತವರಣ, ಮಣ್ಣಿನ ವಾಸನೆ, ತಾಜಾ ಮತ್ತು ಸಾವಯವ ಆಹಾರ, ಮತ್ತು ಇನ್ನೂ ಅನೇಕ ಉತ್ತಮ ಒಳ್ಳೆಯ ವಿಷಯಗಳಿವೆ ಎಂಬ ಉತ್ತರ ಪ್ರತ್ಯಕ್ಷವಾಗಿ ಕಾಣಸಿಗುತ್ತದೆ.

ಗ್ರಾಮಗಳಲ್ಲಿ ಅಭಿವೃದ್ಧಿಯ ಕೊರತೆಯಿದೆ ಎಂಬುದು ಹಾಸ್ಯಸ್ಪದವಾದ ಸಂಗತಿಯಾಗಿದೆ ಹಳ್ಳಿಗಳು ಸಾಕಷ್ಟು ಉತ್ತಮವಾಗಿ ಅಭಿವೃದ್ಧಿಗೊಂಡಿವೆ ಮತ್ತು ಅವು ನಗರಗಳಿಗಿಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಎಂಬುದು ಸಂತಸದ ಸಂಗತಿಯಾಗಿದೆ.

ಕೋನೆಯದಾಗಿ ಒಂದು ಮಾತು ಹೇಳುವುದಾದರೆ ದೇಶದ ಬೆನ್ನೆಲುಬು ರೈತರಾದರೆ. ದೇಶದ ಹೆಜ್ಜೆಗುರುತು ಹಳ್ಳಿಗಳಾಗಿವೆ ಹಳ್ಳಿಗಳನ್ನ ಬಿಟ್ಟು ದೇಶವಿಲ್ಲ ಎಂಬುದು ವಾಸ್ತವದ ಸಂಗತಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ನುಡಿ ನಮನ | ಡಾ. ವಿಠಲ ಭಂಡಾರಿ, ಕ್ಷಮಿಸಿ ಸರ್

Published

on

ಡಾ. ವಿಠಲ ಭಂಡಾರಿ
  • ಡಾ. ಗಿರೀಶ್ ಮೂಗ್ತಿಹಳ್ಳಿ, ಚಿಕ್ಕಮಗಳೂರು

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಂಶೋಧನೆ ಮಾಡುವಾಗ ಡಾ. ಆನಂದ ಪಾಟೀಲ ಅವರ ಸಲಹೆಯಂತೆ ‘ಪ್ರೀತಿಯ ಕಾಳು’ ಪುಸ್ತಕ ಬೇಕಿತ್ತು. ಈ ಪುಸ್ತಕ ವಿಠಲ ಭಂಡಾರಿ ಅವರ ತಂದೆ ಆರ್. ವಿ. ಭಂಡಾರಿ ಅವರ 13 ಮಕ್ಕಳ ನಾಟಕಗಳ ಸಂಕಲನ. ಈ ಕೃತಿಯನ್ನು ಡಾ. ವಿಠಲ ಭಂಡಾರಿ ಅವರು ಸಂಪಾದಿಸಿದ್ದರು. ಮಾನ್ಯ ಭಂಡಾರಿಯವರನ್ನು ಕೇಳಿಕೊಂಡಾಗ ನನಗೆ ಅಂಚೆ ಮೂಲಕ ಕಳುಹಿಸಿಕೊಟ್ಟಿದ್ದರು.

ಬೇಕಾದ ಪೂರಕ ಮಾಹಿತಿಯನ್ನು ಫೋನಿನಲ್ಲಿಯೇ ಚರ್ಚಿಸಿದ್ದರು. ನನ್ನ ಸಂಶೋಧನೆಯಲ್ಲಿ ಜತೆ ಇದ್ದರು. ಆದರೆ ಒಮ್ಮೆ ಎಂದೂ ಭೇಟಿಯಾದವರಲ್ಲ. ಕಾರಣ ದೂರದೂರು ಎಂದು! ಕರೆ ಮಾಡಿದರೆ, ಅವರು ಎಷ್ಟೇ ಕಾರ್ಯನಿರತರಾಗಿದ್ದರೂ ಕರೆ ಸ್ವೀಕರಿಸಿ ವರ್ತಮಾನವನ್ನು ತಿಳಿಸುತ್ತಿದ್ದರು. ಸಂಶೋಧನಾ ಪ್ರಬಂಧವು ಕೃತಿಯಾದಾಗ ಅವರಿಗೆ ಒಂದು ಪ್ರತಿ ಕಳುಹಿಸಿ ಕೊಟ್ಟೆ.. ತುಂಬಾ ಸಂಭ್ರಮಿಸಿದ್ದರು. ಮೆಚ್ಚುಗೆ ಮಾತುಗಳನ್ನಾಡಿದ್ದರು.

ಕಳೆದ ಲಾಕ್ ಡೌನ್ ಸಮಯದಲ್ಲಿ ನನ್ನ ಪುಸ್ತಕವನ್ನು ಆನ್ ಲೈನ್ ಬಿಡುಗಡೆ ಮಾಡೋಣ ಎಂದು ಕಾರ್ಯಕ್ರಮದ ಕ್ರಿಯಾಯೋಜನೆಯನ್ನು ತಯಾರಿಸಿದ್ದರು… ಇಷ್ಟೆಲ್ಲ ಕಾರ್ಯಗಳು ಪರಸ್ಪರ ಭೇಟಿಯಾಗದೆ ಆದ ವಿಶೇಷ ಅನುಭವಗಳು. ಈ ಮಧ್ಯೆ ಅವರಿಗೆ ಕರೆ ಮಾಡುವುದಕ್ಕೆ ಆಗಿರಲಿಲ್ಲ.

ಆದರೆ ಇಂದಿನ ಅವರ ಅಗಲಿಕೆಯ ಸುದ್ದಿ ನನ್ನನ್ನ ನಿಶ್ಚಲವಾಗಿಸಿದೆ…! ಸಾಮಾನ್ಯ ರೀತಿಯಲ್ಲಿ ಮಾನ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಬಹುದು.. ಆದರೆ ಅವರನ್ನು ಭೇಟಿ ಮಾಡಬೇಕೆಂಬ ಆಸೆಯ ಚಿಗುರಿಗೆ ಕೆಟ್ಟ ಸುದ್ದಿಯ ಸಿಡಿಲೊಡೆದಿದೆ… ಕ್ಷಮಿಸಿ ಸರ್… ನನ್ನ ಸರದಿಯೂ ಬಂದಾಗ ಮೇಲೆ ಬರುವೆ.. ಸಿಕ್ಕೋಣ.. ಈ ಅಮಾನವೀಯ ವ್ಯವಸ್ಥೆಯ ಬಗ್ಗೆ ಚರ್ಚೆ ಮಾಡೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಏನಿದು ವರ್ಷದುಡುಕು;ಹೊಸ್ತುಡುಕು..?

Published

on

ಕೆ.ಶ್ರೀಧರ್ (ಕೆ.ಸಿರಿ)
  • ಕೆ.ಶ್ರೀಧರ್ (ಕೆ.ಸಿರಿ)

ಏಪ್ರಿಲ್ 13 ಕ್ಕೆ ಚಾಂದ್ರಮಾನ ಯುಗಾದಿ ಹಬ್ಬ ನಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯರಿಗೆ ನಿಜವಾದ ಹೊಸ ವರ್ಷ ಬೆಳಗ್ಗೆ ಎದ್ದು ನೀರಿಗೆ ಬೇವಿನ ಎಲೆ ಹಾಕಿ ಮೈಗೆಲ್ಲಾ ಎಣ್ಣೆ ಸವರಿಕೊಂಡು ಎಣ್ಣೆ ಸ್ನಾನ ಮಾಡಿ ಹೊಸ ಹುಡುಪುಗಳನ್ನು ಧರಿಸಿ ಮನೆಗೆ ತಳಿರು ತೋರಣ ಕಟ್ಟಿ ಇಷ್ಟ ದೇವರಿಗೆ ಪೂಜೆ ಸಲ್ಲಿಸಿ ಬೇವು ಬೆಲ್ಲ ಸವಿದು ತಾಯಿ ಮಾಡಿದ ಸಿಹಿಯಾದ ತಿಂಡಿ ತಿನಿಸುಗಳ ತಿಂದು ಇಡೀ ದಿನ ಸಂಭ್ರಮದಿಂದ ಹಬ್ಬ ಆಚರಿಸುವುದು ಬಂಧು ಬಾಂಧವರೆಲ್ಲರೂ ಸಂಭ್ರಮ ಪಡುವುದು ಸಂಜೆಯ ನಂತರ ಚಂದ್ರನನ್ನು ನೋಡಿ ಹೊಸ ವರ್ಷ ಆರಂಭಿಸುವುದು ವಿಶೇಷ.

ಯುಗಾದಿ ಎಂದರೆ ಇಷ್ಟೇ ಎಂದು ನಾನು ತಿಳಿದಿದ್ದೆ. ಆದರೆ ಇನ್ನೊಂದು ದಿನವೂ ಹಬ್ಬವಿದೆ ಆ ಹಬ್ಬ ತುಂಬಾ ವಿಶೇಷ ಎನಿಸಿದ್ದು ಈ ವರ್ಷದುಡುಕಿನ ಸಂಭಾಷಣೆ ಕೇಳಿದ ನಂತರವೆ. ನಾನು ಏಪ್ರಿಲ್ 14 ರಂದು ನನ್ನ ಕೆಲಸದ ನಿಮಿತ್ತ ಎಲ್ಲಿಯೋ ಹೊರಟಿದ್ದೆ ಪೆಟ್ರೋಲ್ ಹಾಕಿಸಲು ಬಂಕ್ ನ ಬಳಿ ಹೋದಾಗ ಯಾರೋ ಒಬ್ಬ ಯುವಕ ಬ್ಯಾಗ್ ಹಾಕಿಕೊಂಡು ಯಾವುದೋ ಊರಿಗೆ ಹೋಗುವಂತಿತ್ತು ಅದೇ ಸಂದರ್ಭದಲ್ಲಿ ಬಂದ ಆ ಯುವಕನ ಗೆಳೆಯ ಈ ರೀತಿಯಾಗಿ ಸಂಭಾಷಣೆ ಬೆಳೆಸಿದ.

“ಡೋ ಎಲ್ಲಿಗಡಾ ಹೋಗ್ತಿದೇ’?_
“ಬೆಂಗಳೂರಿಗೆ ಹೋಯ್ತಾವ್ನೀ ಕಯ್ಯಾ”_
“ಯೋ ಎಲ್ಗೋದೇ ಬಾ ನಾಳೆ ಹೊಸ್ತುಡುಕದೆ ಕಣಾ ತೀರಿಸ್ಗಂಡ್ ಹೋಗೈ”
“ಇಲ್ಲ ಬಾಮೈದ ಟೇಮಾಗದ ಆಗಲೇ ರಜಾ ತೀರದ ಕಣಾ ಹೋಗ್ಬೇಕ”
“ಇದ್ಯಾಂವಂಡಾ ಇವಾ ವರ್ಷದುಡುಕು ಮಾಡಾದ್ ಬುಟ್ಟು ಕೆಲಸಕ್ಕ ಹೋದನಂತೆ ಇಮ”
“ಯಾನ್ ಮಾಡದಯ್ಯ ನೀವ್ ಮಾಡ್ರೀ ಹೊಸ್ತುಡುಕ ನಾ ಮುಂದಿನ ಕಿತ ಬರ್ತೀನಿ ಕಣಾ”
“ಆಯ್ತು ಹೋಗಿದ್ದ್ ಬೊಯ್ಯ”
“ನೋಡ್ದಾ ಬಾವೋಜಿ ಇವನ್ ಸುಮಾನ್ವಾ ಹಬ್ಬ ಮಾಡೋ ಬಡ್ಡಿದೇ ಅಂದ್ರೆ ಕೆಲಸಕ್ಕೆ ಹೋದನಂತೆ ಇಮ”
“ನಡೈ ಬಾಮೈದ ಯಾನ್ಹಾ ಮಾಡ್ಲಿ ಹೊಣ್ಣೇರ್ ಕಟ್ಬೇಕು ಬ್ಯಾಗನ್ ನಡೈ ಊರ್ಗೋಗಮು”

ಎಂದು ಮಾತನಾಡುತ್ತಾ ಮಾತನಾಡುತ್ತಾ ಹಾಗೇಯೇ ದ್ವಿಚಕ್ರ ವಾಹನದಲ್ಲಿ ಊರ ಕಡೆ ಹೊರಟರು. ನಾನು ವಿಜಯನಗರ ಜಿಲ್ಲೆಯವನಾದುದರಿಂದ ಈ ವರ್ಷದುಡುಕು/ಹೊಸ್ತುಡುಕು,ಹೊಣ್ಣೇರ್ ಕಟ್ಟೋದು ಈ ಪದಗಳು ಅಪರಿಚಿತ ಅನಿಸ್ತು ತಲೆಯಲ್ಲಿ ಒಂಥರಾ ಈ ಪದಗಳು ಕೊರೆಯಲು ಶುರುಮಾಡಿದವು.

ಚಾಮರಾಜನಗರ ಮೊದಲೇ ದೇಸಿ ಭಾಷೆಯ ಪದಗಳಿಗೆ ಫೇಮಸ್ಸು ಅಂತ ನನಗೆ ಗೊತ್ತಿತ್ತು ಆ ಕುತೂಹಲ ಇನ್ನೂ ನನ್ನಲ್ಲಿ ಹೆಚ್ಚಾಯ್ತು ಹೇಗಾದರೂ ಮಾಡಿ ಈ ಪದಗಳ ಅರ್ಥ ತಿಳ್ಕೋಬೇಕು ಇದ್ಯಾವುದೂ ಇದು ವರ್ಷದುಡುಕು/ಹೊಸ್ತುಡುಕು ಹಬ್ಬ ಅನ್ನೋ ಉತ್ಕಟ ಆಸಕ್ತಿ ಹೆಚ್ಚಾಯಿತು ಹೀಗೆಯೇ ಹಳ್ಳಿಗೆ ಹೋದಾಗ ಗ್ರಾಮಸ್ಥರನ್ನು ಕುರಿತು ಹೀಗೆ ಸಂಭೋಧಿಸಿದೆ.

“ಏನ್ರೀ ಯಜಮಾನ್ರೇ ವರ್ಷದುಡುಕು ಜೋರಾ”?
“ವ್ಹಾ ಬನ್ನಿ ಸಾ ಜೋರದ ಕಣಾ, ಹಬ್ಬ ಅಂದಮ್ಯಾಗ ಇದ್ದಿದ್ದೇ ಅಲ್ವಾ ಕಣೀ ಸಾ”
“ಅದ್ಸರಿ ಏನೀ ಈ ಹೊಸ್ತುಡುಕು ಅಂದ್ರೆ”?
“ವ್ಹಾ ನೀವು ಸರಿಗೆ ಕೇಳಿದ್ರೀ ಕಪಾ ಇನ್ನೇನಾ ಸಾ ಯುಗಾದಿ ಮುಗಿದ ಮಾರ್ನೇ ದಿನಾ, ಎಲ್ಲರೂ ಮನೇಲೆ ಇರ್ತಾರ, ಹೈಕ ಮಕ್ಕ ನೀರೇರೆಚಗತಾರ, ಒಬ್ಬಿಟ್ಟು ಪಾಯಾಸ,ತಿಂಡಿ ಗಿಂಡಿ ಮಾಡ್ಕಂಡಮಾ ದ್ಯಾವ್ರಗ ಎಡೆ ಗಿಡೆ ಮಡಗಿ ಮಕ್ಕ ಮರಿ ತಿನ್ಕಂಡು ಉಣ್ಕಂಡು ಹಟ್ಟೀಲಿ ಜಾಲಿಯಾಗಿ ಇರ್ತಾರ”.
“ಇಷ್ಟೇಯಾ ವರ್ಷದುಡುಕು ಅಂದ್ರೆ”?
“ಅದ ಸಾ ಆಡೋರು ಇಸ್ಪೀಟ್ ಗಿಸ್ಪೀಟ್ ಆಡ್ತಾರ ಒಂಥರಾ ರಜೆ ಇದ್ದಂಗೆ ಸಾ ದಿನವೆಲ್ಲಾ ಹಟ್ಟೀಲೆ ಇರ್ತಾರ”

“ಅದ್ಸರಿ ಈ ಹೊಣ್ಣೇರ್ ಕಟ್ಟೋದು ಅಂದ್ರೆ ಏನು”?”ಅದಿನ್ಯಾನಿದ್ದು ಸಾ ಆರಂಭಕಾರ್ರಿಗೆ ಇದು ಹೊಸ್ವರ್ಸ ಇದ್ದಂಗ ಎತ್ಗಳಿಗ ನೊಗ ಹಾಕಿ,ನೇಗ್ಲು ಹೂಡಿ, ಕಕ್ಕೆ ಹೂವ,ಗಣಿಗಲ ಹೂವ ಎತ್ಗೋಳ್ ಕೊಂಬಿಗೆ ಕಟ್ಟಿ ಊರಾಗ ಒಂದ್ ರೌಂಡ್ ಸುತ್ತಿಸಿಗಂಡಮಾ ಪೂಜಾ ಗೀಜಾ ಮಾಡಿ ಆರಂಭ ಶುರು ಮಾಡೋದಕ್ಕ ಹೊಣ್ಣೇರ್ ಕಟ್ಟೋದು ಅಂತಾರೆ ಅಷ್ಟೇಯಾ ಅದು ಈಗ ಅಷ್ಟೋಂದಿಲ್ಲ ಸಾ ಕೆಲವು ಕಡಿಗ್ಯಾ ಮಾಡ್ತಾರಾ ಕೆಲವು ಕಡಿಗ್ಯಾ ಬುಡ್ತಾರಾ ಅದೆಲ್ಲಾ ಒಂದ್ ಜಮಾನ್ದಾಗಿತ್ತು”

“ಓಹ್ ಸರಿ ಈ ಕಕ್ಕೆ ಹೂವು ಗಣಗಲ ಹೂವು ಅಂದ್ರೆ ಯಾವುದು”? “ಅದೇ ಸಾ ಈ ರೋಡ್ಚೋರಿ ಕೆಂಪ್ಗ ಇರ್ತಾವಲ್ಲ ಅವೇ ಕಕ್ಕೆ ಹೂವು, ಅರಿಶಿಣ ಬಣ್ಣದ ಹೂವ್ ಇರ್ತಾವಲ್ಲ ಅವು ಗಣಿಗಲ್ವೂ ಈ ರಸ್ತಿ ಅಗಲೀಕರಣದಿಂದ ಆ ಹೂವುಗಳು ಸಿಗೋದೆ ಅಪರೂಪ ಆಗ್ಬುಟ್ಟದಾ!”

“ಹೂಂ… ಸರಿ ಇಷ್ಟೇಯಾ ಹಾಗಾರೆ ಹೊಸ್ತುಡುಕು ಅಂದ್ರೆ”?
“ಹೂಂ ಇನ್ನೂ ಅದೆ ಮಾಡೋರು ಮರಿ ಕೂದು ಬಾಡ್ಗಿಡೂಟಾ ಮಾಡ್ತಾರೆ ಎಣ್ಣಿ ಗಿಣ್ಣಿ ಹೊಡ್ದು ಜಾಲಿ ಮಾಡ್ತಾರೆ”
“ಈ ವರ್ಷದುಡುಕ್ಲೀ ಮಾಂಸದೂಟ ಕಡ್ಡಾಯಾ ನಾ”?
“ಹೇ ಹಾಗೇನಿಲ್ಲಾ ಸಾ ಆದರೆ ಒಂದ್ ಜಮಾನ್ದಾಗಿತ್ತಂತೆ ಯುಗಾದಿ ಆದ್ ಮರುದಿನ ಮಾಂಸ ತಿನ್ನಲಿಲ್ಲ ಅಂದ್ರೆ ಸ್ವರ್ಗಕ್ಕೆ ಬಿಡೋಲ್ಲ ಮಾಂಸ ತಿನ್ನಬೇಕು ಅನ್ನೋ ಪ್ರತೀತಿ ಇತ್ತಂತೆ ಇದನ್ನೆಲ್ಲ ನಿಮ್ಮ ಜಮಾನ್ದೋರಿಗೆ ಹೇಳಿದ್ರ ಬಿದ್ದು ಬಿದ್ದು ನಗನಾಡ್ತಿರೀ, ಕೆಲವರು ಆ ದಿನ ದುಡ್ಡು ಕಾಸು ಯಾರಿಗೂ ಕೊಡಾಕಿಲ್ಲ ಹಿಂಗ ಹತ್ತಲವು ಸಂಪ್ರದಾಯಾಗಳು ನೇಮ್ಗಳನ್ನ ಮಾಡ್ತಾರೆ”

“ಜಮೀನಿಗೆ ಹೋಗಿ ಉಳುಮೆ ಗಿಳುಮೆ ಮಾಡೋಲ್ವೋ”?
“ಕಂಡೀಸನ್ನಾಗಿ ಯಾರು ಹೊಲ್ನ ಊಳೋಲ್ಲ ಅಪ್ಪಿ ತಪ್ಪಿ ಮಳಿ ಗಿಳಿ ಉಯ್ಯ್ದ್ರೆ ಸ್ಥಳೀಯ್ ಜ್ವಾಳ ಗೀಳ ಬಿತ್ತೋರು ಬಿತ್ತಾರ ಅಷ್ಟೇ” “ಹೂಂ ಆಯ್ತು ಯಜಮಾನ್ರೆ ಥ್ಯಾಂಕ್ಯೂ ನಾನು ಬರ್ತೀನಿ” “ಹೂಂ ಆಯ್ತು ಕಣೀ ಹೋಗಿ ಬುದ್ದೀ ನಂಗು ಹೊಟ್ಟೈಸಿತೈತಿ ಹಟ್ಟಿಗೆ ಹೋಗ್ಬೇಕು ಒಬ್ಬಿಟ್ಟು ತಿನ್ಬೇಕು”.

ನೋಡಿ ನಮ್ಮ ಗ್ರಾಮೀಣ ಭಾಗದ ಸಂಪ್ರದಾಯಗಳು ಎಷ್ಟು ಚೆಂದ ಅಲ್ವಾ ಈ ದೇಸಿ ಭಾಷೆಯಲ್ಲಿ ಎಷ್ಟು ತಾಕತ್ತಿದೆ ಎಷ್ಟು ಗ್ರಾಮೀಣತೆಯ ಸೊಗಡಿದೆ ಈ ಭಾಷೆನಾ ಹಳ್ಳಿಗಳಲ್ಲಿ ಬಿಟ್ರೆ ಜಗತ್ತಿನ ಯಾವ ವಿಶ್ವ ವಿದ್ಯಾಲಯಗಳಲ್ಲೂ ಕೂಡ ಕಲಿಯಲಿಕ್ಕೆ ಆಗೋದಿಲ್ಲ. ನಮ್ಮ ಹಿಂದಿನವರು ನಡೆಸಿಕೊಂಡು ಬಂದ ಕೆಲವೊಂದು ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯ ನಮ್ಮ ಪರಂಪರೆ ಎಂತದ್ದು ಅಂತ ಹೇಳ್ತವೆ. ಈ ಚಾಮರಾಜನಗರದ ವರ್ಷದುಡುಕು ಹಾಗೇನೆ ಒಂಥರಾ ದೇಸಿಯ ಭಾಷೆಯ ಹಬ್ಬ ಹರಿದಿನಗಳ ಪರಿಚಯ ನನಗಾಯ್ತು ಧನ್ಯವಾದಗಳು ಚಾಮರಾಜನಗರ.

(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿಗಳು
ಚಾಮರಾಜನಗರ
9741270125)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending