Connect with us

ದಿನದ ಸುದ್ದಿ

ದಾವಣಗೆರೆ | ಜನಸ್ಪಂದನ ಸಭೆ ; ಸಾರ್ವಜನಿಕರಿಂದ ಅರ್ಜಿಗಳ ಮಹಾಪೂರ : ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್, ಮಿಸ್ ಮಾಡ್ದೆ ಓದಿ..!

Published

on

ಸುದ್ದಿದಿನ,ದಾವಣಗೆರೆ : ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧ್ಯಕ್ಷತೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಜನಸ್ಪಂದನ ಸಭೆಯಲ್ಲಿ ಅರ್ಜಿಗಳ ಮಹಾಪೂರವೇ ಹರಿದುಬಂದಿದೆ.

ಶಿವನಗರದ ನಸ್ರಿನ್ ಬಾನು ಎಂಬುವವರು ಅರ್ಜಿ ಸಲ್ಲಿಸಿ ನನ್ನ ಅಕ್ಕ ಸೌದಿ ಅರೇಬಿಯಾಕ್ಕೆ ತೆರಳಿದ್ದು ಅಲ್ಲಿ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಈ ಕುರಿತು ನಾನು ಸಂಸದರೊಂದಿಗೆ ಮಾತನಾಡಿ, ಭಾರತ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ನಂತರ ರಾಯಭಾರಿ ಕಚೇರಿಯಿಂದ ಸಂವಹನ ನಡೆಸಿ ಅವರನ್ನು ಹುಡುಕುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಸಾಂತ್ವನ ಹೇಳಿದರು.

ನ್ಯಾಮತಿ ತಾಲ್ಲೂಕಿನ ಕೃಷಿಕರೋರ್ವರು ಕೃಷಿ ಇಲಾಖೆ ಜಮೀನಿನಲ್ಲಿ ಆಶ್ರಯ ಮನೆಗಳನ್ನು ಕಟ್ಟಲು ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಈ ಸಂಬಂಧ ಈಗಾಗಲೇ ನನ್ನ ಮೇಲೆ ನ್ಯಾಯಾಂಗದಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೋರ್ಟ್‍ನಲ್ಲಿಯೇ ಉತ್ತರಿಸುತ್ತೇನೆ ಎಂದು ಅವರನ್ನು ವಾಪಸ್ಸು ಕಳುಹಿಸಿಕೊಟ್ಟರು.

ಇದನ್ನೂ ಓದಿ | ಅಂತರಾಷ್ಟ್ರೀಯ ಪತ್ರ ಲೇಖನ ಸ್ಪರ್ಧೆ

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಮೊದಲು ಕೃಷಿ ಇಲಾಖೆ ಜಮೀನಿನಲ್ಲಿ ಆಶ್ರಯ ಮನೆ ಕಟ್ಟಲು ಅವಕಾಶ ಮಾಡಿಕೊಡಬೇಕೆಂದು ಅರ್ಜಿ ಸಲ್ಲಿಸಿದ್ದು, ಇದು ಕೃಷಿ ಇಲಾಖೆಗೆ ಸಂಬಂಧ ಪಡುತ್ತದೆ ಎಂದು ತಿಳಿಸಿದ್ದೆ. ನಂತರ ಅವಕಾಶವಿದ್ದರೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕೃಷಿ ಅಧಿಕಾರಿಗಳಿಗೆ ಪತ್ರ ಸಹ ಬರೆದಿದ್ದೆ. ಆದರೆ ಅಧಿಕಾರಿಗಳು ಪ್ರತಿಕ್ರಿಯಿಸಿ ಆ ಜಮೀನಿನ ಅವಶ್ಯಕತೆ ಇದೆ.

ಇಲ್ಲಿ ಕೃಷಿ ಫಾರ್ಮ್ ಇದ್ದು, ಮುಂದಿನ ಎಲ್ಲಾ ಕೃಷಿ ಚಟುವಟಿಕೆಗಳಿಗೆ ಜಮೀನಿನ ಬಳಕೆ ಮಾಡಿಕೊಳ್ಳುವ ಕಾರಣ ಜಮೀನನ್ನು ಕೊಡಲಾಗುವುದಿಲ್ಲ. ಬದಲಾಗಿ ಬೇರೆ ಜಮೀನನ್ನು ಕೊಡಿಸಲು ಯತ್ನಿಸುತ್ತೇವೆ ಎಂದಿದ್ದರು. ಈ ಕಾರಣದಿಂದ ನನ್ನ ಮೇಲೆ ನ್ಯಾಯಾಂಗದಲ್ಲಿ ಪ್ರಕರಣ ದಾಖಲಿಸಿದ್ದು, ಕೋರ್ಟ್‍ಗೆ ಸಮಸ್ಯೆ ಕುರಿತು ಮನವರಿಕೆ ಮಾಡಿದ್ದೇವೆ ಎಂದರು.

ದಾವಣಗೆರೆ ತಾಲ್ಲೂಕು ಮಾಯಕೊಂಡ ಹೋಬಳಿ, ಹೂವಿನಮಡು ಗ್ರಾಮದ ವೃದ್ಧರೋರ್ವರು ಅರ್ಜಿ ಸಲ್ಲಿಸಲು ಬರುವ ವೇಳೆ ಅವರನ್ನು ಡಿಸಿ ಯವರು ತಡೆದು ವೃದ್ದರ ಬಳಿಯೇ ಹೋಗಿ ಸಮಸ್ಯೆ ಆಲಿಸಿದರು. ಗ್ರಾಮದ ಸರ್ವೇ ನಂ.15 ರಲ್ಲಿ 10 ಜನ ಅತೀ ಸಣ್ಣ ರೈತರಿದ್ದು, ಎಲ್ಲರೂ ಬುಡಕಟ್ಟು ಜನಾಂಗಕ್ಕೆ ಸೇರಿದ್ದೇವೆ.

ಇಲ್ಲಿರುವ ಸುಮಾರು 10 ಎಕರೆ ವಿಸ್ತೀರ್ಣದ ನೀರಾವರಿ ಕೃಷಿ ಜಮೀನಿನಲ್ಲಿ 1 ಎಕರೆ, 20 ಗುಂಟೆ ಹೀಗೆ ನಾವೆಲ್ಲರೂ ಜಮೀನನ್ನು ಹೊಂದಿದ್ದು, ಕಳೆದ 60 ವರ್ಷಗಳಿಂದ ಸರ್ವೆ ನಂ.14 ರ ಬಸವರಾಜಪ್ಪ ಎಂಬುವವರ ಜಮೀನಿನಲ್ಲಿ ಉಪಕಾಲುವೆ ಮೂಲಕ ನೀರನ್ನು ಹರಿಸಿಕೊಳ್ಳತ್ತಾ ಬಂದಿದ್ದು, ಇದೀಗ ಕಾಲುವೆಗಳನ್ನು ಮುಚ್ಚಿದ್ದಾರೆ. ಅದನ್ನು ಕೂಡಲೇ ತೆರವುಗೊಳಿಸಿ ನೀರು ಹರಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಕೂಡಲೇ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗೆ ಸೂಚಿಸುತ್ತೇನೆ ಎಂದರು.

ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಮಲ್ಲಿಕಾರ್ಜುನ ಇಂಗಳೇಶ್ವರ ಅರ್ಜಿ ಸಲ್ಲಿಸಿ, ಸುನಂದಮ್ಮ ಅವರಿಗೆ ಸರ್ಕಾರದಿಂದ ಮಂಜೂರಾಗಿರುವ ಡೊ.ನಂ. 775/16, ಹದಡಿ ರಸ್ತೆ, ತರಳಬಾಳು ಬಡಾವಣೆಯಲ್ಲಿ 30*25 ಅಳತೆಯಲ್ಲಿರುವ ಈ ಜಾಗವನ್ನು ನಿವೃತ್ತಿ ಸರ್ಕಾರ ನೌಕರರಾದ ಕೆ.ಬಿ.ಚನ್ನಪ್ಪ ಅವರು ಖರೀದಿ ಮಾಡಿ, ಮಹಾನಗರಪಾಲಿಕೆಯಿಂದ ಕಟ್ಟಡ ಪರವಾನಿಗೆ ಪಡೆಯದೆ ಮೂರು ಅಂತಸ್ತಿನ ಮಹಡಿ ಕಟ್ಟಿದ್ದಾರೆ.

ಆದ ಕಾರಣ ಈ ಜಾಗವನ್ನು ಪರಿಶೀಲಿಸಿ, ವಾಪಸ್ ಪಡೆದು ಸರ್ಕಾರಿ ಕಚೇರಿಗೆ ಉಪಯೋಗಿಸಿಕೊಳ್ಳಬೇಕು ಎಂದು ಕೋರಿದರು. ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಪಾಲಿಕೆ ಆಯುಕ್ತರಿಗೆ ತಿಳಿಸಿ, ಸೂಕ್ತ ತನಿಖೆ ಮಾಡಲು ಆದೇಶಿಸುತ್ತೇನೆ ಎಂದರು.

ಹರಿಹರ ತಾಲ್ಲೂಕಿನ ಹಲಸಬಾಳು ಗ್ರಾಮದ ಗ್ರಾಮಸ್ಥರಾದ ಬಸವರಾಜ, ಹಾಲಮ್ಮ ಸೇರಿದಂತೆ ಅನೇಕರು ಅರ್ಜಿ ಸಲ್ಲಿಸಿ ಗ್ರಾಮದ ಸರ್ವೇ ನಂ.27 ರಲ್ಲಿ ಕಳೆದ 75 ರಿಂದ 80 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಮಾಡುತ್ತಿದ್ದು, ನಮಗೆ ನಮ್ಮ ಮನೆಯ ಹಕ್ಕುಪತ್ರ ಕೊಡಬೇಕಾಗಿ ಮನವಿ ಮಾಡಿದ್ದು, ಈ ಕುರಿತು ತಾವುಗಳು ಸ್ಪಂದಿಸಿದ್ದೀರಿ.

ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದು, ನೋಟಿಸು ನೀಡದೆ, ನಮ್ಮ ಗಮನಕ್ಕೆ ತಾರದೆ, ಮುದ್ದತ್ತಿಗೂ ಅವಕಾಶ ಕೊಡದೇ, ವಕೀಲರಿಗೂ ತಿಳಿಸದೆ ಮನವಿಯನ್ನು ತಿರಸ್ಕರಿಸಿರುತ್ತಾರೆ. ಈ ಕುರಿತು ನಮಗೆ ನ್ಯಾಯ ಒದಗಿಸಿ ಎಂದು ಮನವಿ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಹರಿಹರದ ತಹಶೀಲ್ದಾರರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಮಲ್ಲಿಕಾರ್ಜುನ ಇಂಗಳೇಶ್ವರ ಅರ್ಜಿ ಸಲ್ಲಿಸಿ ಪಿಬಿ ರಸ್ತೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಹಿಂಭಾಗದಲ್ಲಿ ಕಟ್ಟಡ ಮಾಲೀಕರಾದ ಅಶೋಕ್ ಕುಮಾರ್ ಸಿಂಗ್ ಅವರು ಡೊ.ನಂ. 113/4 ರಲ್ಲಿ ರಾಜ ಕಾಲುವೆಯ ಮೇಲೆ ಒತ್ತುವರಿ ಮಾಡಿರುತ್ತಾರೆ ಎಂದು ದೂರು ನೀಡಿದ್ದು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಆದ ಕಾರಣ ಕಟ್ಟಡ ಪರವಾನಿಗೆ ದಾಖಲೆಗಳನ್ನು ಪರಿಶೀಲಿಸಿ ಹೆಚ್ಚುವರಿ ಇದ್ದಲ್ಲಿ ಸೂಕ್ತ ಕ್ರಮ ತೆಗೆದುಕೊಂಡು ಕಟ್ಟಡ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

ದಾವಣಗೆರೆ ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಅರ್ಜಿ ಸಲ್ಲಿಸಿ ಸಾವಿರಾರು ಕೋಟಿ ರೂ. ಮೌಲ್ಯದ ಮಹಾನಗರಪಾಲಿಕೆ ವ್ಯಾಪ್ತಿಯ ಸರ್ಕಾರಿ ಜಾಗ, ರಾಜಕಾಲುವೆ, ಉದ್ಯಾನವನಗಳು, ಹೈ-ಟೆನ್ಶನ್ ಮಾರ್ಗದ ಜಾಗಗಳ ಒತ್ತುವರಿ ತೆರವುಗೊಳಿಸಬೇಕು. ದುರುಪಯೋಗ ಪಡಿಸಿಕೊಳ್ಳುತ್ತಿರುವ ಅಧಿಕಾರಿಗಳು, ಇಂಜಿನಿಯರ್‍ಗಳ ಮೇಲೆ ಕೂಡಲೇ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪರಿಶೀಲಿಸುತ್ತೇವೆ ಎಂದರು.

ಕನ್ನಡ ಜಾಗೃತಿ ಸಮಿತಿ ಕಾರ್ಯದರ್ಶಿ ಅರ್ಜಿ ಸಲ್ಲಿಸಿ ನಲ್ಲೂರು ಗ್ರಾಮದಲ್ಲಿ ಸುಮಾರು 12 ಮೆಡಿಕಲ್ ಅಂಗಡಿಗಳಿದ್ದು, ಕಳೆದ ಮೂರು ತಿಂಗಳಿಂದ ಭಾನುವಾರದಂದು ಸಂಪೂರ್ಣವಾಗಿ ಬಂದ್ ಮಾಡುತ್ತಿದ್ದಾರೆ. ಇದರಿಂದ ಗ್ರಾಮದ ಜನರಿಗೆ ತೊಂದರೆಯಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಿಹೆಚ್‍ಓರವರಿಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ ಗ್ರಾಮದ ಸ್ಥಳೀಯ ಹೈದರ್ ಅಲಿ ಖಾನ್ ಅರ್ಜಿ ಸಲ್ಲಿಸಿ ಕೆರೆಬಿಳಚಿ ಗ್ರಾಮಕ್ಕೆ ಬಸ್ ಬಿಡುವಂತೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಆದೇಶಿಸಿದ್ದು, ಇಲ್ಲಿವರೆಗೂ ಸಾರಿಗೆ ಸೌಕರ್ಯ ಕಲ್ಪಿಸಿಲ್ಲ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿ ಕೆರೆಬಿಳಚಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಮಾಡುತ್ತೇವೆ ಎಂದರು.

ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಮಲ್ಲಿಕಾರ್ಜುನ ಇಂಗಳೇಶ್ವರ ಅರ್ಜಿ ಸಲ್ಲಿಸಿ ದೊಡ್ಡ ಬೂದಿಹಾಳ ಹಾಗೂ ಆನಗೋಡು, ಪಾಮೇನಹಳ್ಳಿಗಳಲ್ಲಿ ಭೂ ಪರಿವರ್ತನೆ ಆಗದೆ ಲೇಔಟ್ ಆಗಿ ಪರಿವರ್ತನೆ ಮಾಡಿ ನಕಲಿ ಸರ್ಟಿಫಿಕೇಟ್‍ಗಳಲ್ಲಿ ಮಹಾನಗರಪಾಲಿಕೆಯ ಸೀಲು ಸಹಿಗಳನ್ನು ಬಳಸಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ಜಿಲ್ಲಾಧಿಕಾರಿಗಳು ಕೂಡಲೇ ತಡೆದು ಸ್ಥಳ ಪರಿಶೀಲಿಸಿ ಎಲ್ಲಾ ಸರ್ವೇ ನಂಬರ್‍ಗಳನ್ನು ಉಪನೋಂದಣಿ ಕಚೇರಿಯಲ್ಲಿ ಆಸ್ತಿ ನೋಂದಣಿ ಆಗುವುದನ್ನು ತಡೆಯಬೇಕು. ಹಾಗೂ ಜಮೀನು ಮಾಲೀಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವಿನಂತಿಸಿದರು. ಅದಕ್ಕೆ ಜಿಲ್ಲಾಧಿಕಾರಿ ಜಿಲ್ಲಾ ನೋಂದಾಣಾಧಿಕಾರಿಗಳಿಗೆ ಪರಿಶೀಲಿಸುವಂತೆ ತಿಳಿಸುತ್ತೇನೆ ಎಂದರು.

ಮುದಹದಡಿ ಗ್ರಾಮದ ಆರ್.ಪರಶುರಾಮಪ್ಪ ಅರ್ಜಿ ಸಲ್ಲಿಸಿ ಗ್ರಾಮದ ಸರ್ವೇ ನಂ.20/3 ರಲ್ಲಿ 3 ಎಕರೆ 27 ಗುಂಟೆ ಜಮೀನಿನ ಬೆಳೆಗೆ ಹದಡಿ ಕಾರ್ಪೋರೇಷನ್ ಬ್ಯಾಂಕಿನಲ್ಲಿ ಸಾಲ ಪಡೆದಿದ್ದು, ರೈತರ ಸಾಲ ಮನ್ನಾ ಯೋಜನೆಯಿಂದ ಮೊದಲನೆ ಕಂತು ನನ್ನ ಸಾಲಕ್ಕೆ ಜಮಾಗೊಂಡಿದೆ. 2ನೇ ಕಂತು ಜಮಾಗೊಂಡು ವಾಪಸ್ ಹೋಗಿದೆ. ಸರ್ಕಾರದ ಈ ಯೋಜನೆಯನ್ನು ದೊರಕಿಸಿ ಕೊಡಿ ಎಂದರು. ಇದಕ್ಕೆ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಆಲೂರು ಗ್ರಾಮದ ಗ್ರಾಮಸ್ಥರು ಅರ್ಜಿ ಸಲ್ಲಿಸಿ ಇಲ್ಲಿಯ ಗ್ರಾಮ ಲೆಕ್ಕಾಧಿಕಾರಿ ನಾಗರಾಜ ಮಲ್ಲಾಪುರ ಎಂಬುವವರು ಜನಸಾಮಾನ್ಯರಿಗೆ ಸ್ಪಂದಿಸದೇ ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇರುವ ಕಾರಣ ಅವರನ್ನು ಮೂಲ ಸ್ಥಾನಕ್ಕೆ ವರ್ಗಾವಣೆ ಮಾಡಿ, ಆ ಜಾಗಕ್ಕೆ ಬೇರೆಯವನ್ನು ನೇಮಿಸಿಕೊಡಬೇಕೆಂದು ಮನವಿ ಮಾಡಿದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ತನಿಖೆ ನಡೆಸುತ್ತೇವೆ ಎಂದರು.
ನ್ಯಾಮತಿ ತಾಲ್ಲೂಕಿನ ಹಾಲೇಶ್ ಅರ್ಜಿ ಸಲ್ಲಿಸಿ, ಇಲ್ಲಿಯ ಶಿವಾನಂದಪ್ಪ ಬಡಾವಣೆಯಲ್ಲಿ ಸರ್ವೇ ನಂ. 135 ರಲ್ಲಿ ಸುಮಾರು 74 ಜನರಿಗೆ ಹಕ್ಕು ಪತ್ರ ನೀಡಿದ್ದು, ವಾಸವಿರುವ 15 ಕುಟುಂಬಗಳನ್ನು ಕೈಬಿಟ್ಟು ವಾಸವಿಲ್ಲದಿರುವ 14-15 ಕುಟುಂಬಗಳಿಗೆ ಅಕ್ರಮ ಪತ್ರ ನೀಡಿ ಖಾತೆ ಏರಿಸಲಾಗಿದೆ ಆದ್ದರಿಂದ ತಾವೇ ಖುದ್ದಾಗಿ ಬಂದು ಪರಿಶೀಲಿಸಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ತನಿಖೆ ನಡೆಸುತ್ತೇವೆ ಎಂದರು.

ಹೊನ್ನಾಳಿಯ ಪ್ರಕಾಶ್.ಸಿ.ಎಸ್ ಅರ್ಜಿ ಸಲ್ಲಿಸಿ ಇಲ್ಲಿಯ ಕೆನರಾ ಬ್ಯಾಂಕ್‍ನಲ್ಲಿ ರೂ.20 ಸಾವಿರ ಸಾಲ ಪಡೆದು ಅದರ ಬಾಬ್ತು ತೀರಿಸಲು ಒಂದು ವರ್ಷ ಪಿಗ್ನಿ ಕಟ್ಟಿರುತ್ತೇನೆ. ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರಿಗೆ ವಿಚಾರಿಸಿದರೆ ಅಸಡ್ಡೆಯಿಂದ ಉತ್ತರಿಸಿ ಹಣ ಪಾವತಿಸಬೇಕೆಂದು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಬ್ಯಾಂಕಿಗೆ ಅಸಲು ಮಾತ್ರ ಕಟ್ಟಲು ಸಾಧ್ಯವಾಗುತ್ತಿದ್ದು ಇದಕ್ಕೆ ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಜಿಲ್ಲಾಧಿಕಾರಿ ಲೀಡ್ ಬ್ಯಾಂಕ್ ಮ್ಯಾನೇಜರ್ ಗೆ ತಿಳಿಸಿ ಸೂಕ್ತಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಡಿಹೆಚ್‍ಒ ಡಾ.ನಾಗರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ರೇಷ್ಮಾ ಕೌಸರ್, ಕೌಸರ್ ಬಾನು, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾ.20 ಗ್ರಾಮ ವಾಸ್ತವ್ಯ

ಮಾ.20 ರ ಶನಿವಾರದಂದು ಚನ್ನಗಿರಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿಯಲ್ಲಿ ಗ್ರಾಮವಾಸ್ತವ್ಯ ಮಾಡಲಿದ್ದು, ಕಡಿಮೆ ಸಂಖ್ಯೆಯಲ್ಲಿ ಜನರನ್ನು ಸೇರಿಸುವಂತೆ ಆದೇಶಿಸಲಾಗಿದೆ.

ಮಾ.24 ಕನಸು ಬಿತ್ತುವ, ರಾಷ್ಟ್ರ ಕಟ್ಟುವ ಕಾರ್ಯಕ್ರಮ


ಕಳೆದ ವರ್ಷ “ಕನಸು ಬಿತ್ತುವ ಕೆಲಸ, ರಾಷ್ಟ್ರ ಕಟ್ಟುವ ಕೆಲಸ” ಎಂಬ ಯೋಜನೆಗೆ ಚಾಲನೆ ನೀಡಿದ್ದು, ಕೊರೋನ ಸೋಂಕಿನ ಕಾರಣದಿಂದಾಗಿ ಮುಂದುವರೆಸಲು ಆಗಿರಲಿಲ್ಲ. ಇದೀಗ ಮಾ.24 ರಂದು ನ್ಯಾಮತಿ ತಾಲ್ಲೂಕಿನ ಮಲ್ಲಿಗೆ ಗ್ರಾಮದಲ್ಲಿ ಸುಮಾರು 4-5 ಶಾಲೆಗಳ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.

| ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ


ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್‍ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್‍ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.

ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್‍ಸೆಟ್‍ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ

Published

on

ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.

ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.

ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್‌ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ

Published

on

ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.

ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್‌ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.

ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.

ದೂರುಗಳನ್ನು ಆನ್‌ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.

ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending