Connect with us

ದಿನದ ಸುದ್ದಿ

ದಾವಣಗೆರೆ | ಇದೇನು ಸ್ಮಾರ್ಟ್ ಸಿಟಿಯೋ? ಕೊಚ್ಚೆ ಗುಂಡಿಯೋ? : ಎಸ್.ಓ.ಜಿ ಕಾಲೋನಿ ಜನರ ಅಳಲು

Published

on

ಎಸ್ ಓ ಜಿ ಕಾಲೋನಿ ಕಸದ ರಾಶಿ

ಪ್ರೀತಿ.ಟಿ.ಎಸ್

ಎಸ್.ಓ.ಜಿ. ಕಾಲೋನಿಯಿಂದ ಎಸ್.ಎಸ್.ಆಸ್ಪತ್ರೆಗೆ ಸಾಗುವ ರಸ್ತೆ ಬದಿಯಲ್ಲಿ ದುರಸ್ತಿ ಕಾಣದ ಚರಂಡಿಗಳು, ಅಲ್ಲಲ್ಲಿ ಕಸದ ರಾಶಿ, ಪೊದೆಗಳು ಬೆಳೆದು ಹಾವು-ಹುಪ್ಪಡಿಗಳ ಕಾಟ. ಬೀದಿ ದೀಪಗಳು ಇಲ್ಲದಿರುವಂತಹ, ತಗ್ಗು ಗುಂಡಿ ಇರುವ ರಸ್ತೆಗಳು.ಇದು ಕಂಡು ಬಂದದ್ದು ಸ್ಮಾರ್ಟ್ ಸಿಟಿ ದಾವಣಗೆರೆಯ ಎಸ್.ಓ.ಜಿ. ಕಾಲೋನಿಯಲ್ಲಿ.

ಈ ರಸ್ತೆಯ ಮೇಲೆ ಸಾರ್ವಜನಿಕರು ಓಡಾಡುವಾಗ ಪಕ್ಕದಲ್ಲಿಯೇ ಕಸದ ರಾಶಿ, ಅದರಿಂದ ಬೀರುವ ದುರ್ವಾಸನೆ, ಬೀದಿ ನಾಯಿ ಹಾಗೂ ಹಾವುಗಳ ಉಪಟಳ ಇಂತಹ ಸಮಸ್ಯೆಗಳಿಂದಾಗಿ ಇಲ್ಲಿನ ಸ್ಥಳೀಯ ನಿವಾಸಿಗರು ಕಿರಿ ಕಿರಿ ಅನುಭವಿಸುತ್ತಿದ್ದಾರೆ.
ಪ್ರತಿದಿನ ಕಸ ವಿಲೇವಾರಿ ವಾಹನ ಸ್ಥಳದಲ್ಲಿ ಸಂಚರಿಸಿದರೂ ಸಿಬ್ಬಂದಿಗಳು ಬೀದಿಗಳಿಗೆ ಹೋಗಿ ಕಸ ಸಂಗ್ರಹಿಸುವುದಿಲ್ಲ. ವಾರಕ್ಕೆ 2 ಬಾರಿ ಕಸ ಸಂಗ್ರಹಿಸಿ ಬೇಜವಾಬ್ದಾರಿ ತೋರುತ್ತಿದ್ದಾರೆ. ಇದರಿಂದಾಗಿ ಅಲ್ಲಿರುವ ನಿವಾಸಿಗಳು ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ. ಕಸದ ವಿಲೇವಾರಿಯಲ್ಲಿ ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸಿದ್ದು, ಕಸ ವಿಲೇವಾರಿ ಕುರಿತು ಶೀಘ್ರ ಕ್ರಮ ಕೈಗೊಳ್ಳುವಂತೆ ಇಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಆ ವಾರ್ಡ್‍ನಲ್ಲಿ ಸಂಗ್ರಹಿಸಲಾದ ಕಸವನ್ನು ಸಿಬ್ಬಂದಿಗಳು ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಸಮೀಪದಲ್ಲಿಯೇ ಸುರಿದು ಕೆಲವು ದಿನಗಳಿಗೊಮ್ಮೆ ಸುಡುತ್ತಾರೆ. ಈ ಸ್ಥಳದ ಸುತ್ತಮುತ್ತ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ, ತೋಟಗಾರಿಕೆ ಇಲಾಖೆ ಹಾಗೂ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳಿದ್ದು ಅದರಿಂದ ಉತ್ಪತ್ತಿಯಾಗುವ ಹೊಗೆಯಿಂದ ತಮ್ಮ ಕಾರ್ಯ ನಿರ್ವಹಿಸದೆ ತೊಂದರೆ ಅನುಭವಿಸುವಂತಾಗಿದೆ.
ನಗರದಲ್ಲಿ ಅಲ್ಲಲ್ಲಿ ಕಂಟೇನರ್‍ಗಳ ವ್ಯವಸ್ಥೆ ಇಲ್ಲದಿರುವುದರಿಂದ, ಸಾರ್ವಜನಿಕರು ತಮ್ಮ ಮನೆಯ ಕಸವನ್ನು ವಿಲೇವಾರಿ ಮಾಡಲು ಅಲ್ಲಲ್ಲಿ ಕಸ ಹಾಕುತ್ತಾರೆ. ಇದರ ಪರಿಣಾಮ ಅಕ್ಕಪಕ್ಕದ ಮನೆಯ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಅಧಿಕಾರಶಾಹಿ ಮತ್ತು ಜನಪ್ರತಿನಿಧಿಗಳು ಹಿಂದೇಟು ಹಾಕಿರುವುದು ಎದ್ದು ಕಾಣುತ್ತದೆ.

ಸಾಂಕ್ರಾಮಿಕ ರೋಗದ ಭೀತಿ

ಇದು ಮಳೆಗಾಲದ ಸಮಯವಾದರಿಂದ, ಇಂತಹ ಸಮಯದಲ್ಲಿ ಕಸದ ಜತೆ ಮತ್ತಷ್ಟು ನೀರು ನಿಂತು ಕೊಳೆತು ಹುಳು ಹುಪ್ಪಡಿಗಳು ಹೆಚ್ಚಾಗುತ್ತಿವೆ. ಇದು ಸಾಂಕ್ರಾಮಿಕ ರೋಗಕ್ಕೆ ಹೇಳಿ ಮಾಡಿದ ಋತುಮಾನವಾಗಿದೆ. ಆದರಿಂದ ಇಲ್ಲಿ ಸಂಗ್ರಹವಾದ ಕಸವನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಕಸದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಮಲೇರಿಯಾ, ಡೆಂಗ್ಯೂ ಸೇರಿದಂತೆ ಇನ್ನಿತರ ಕಾಯಿಲೆಗೆ ಅನುವು ಮಾಡಿಕೊಡಲು ಸಹಕಾರಿಯಾಗುತ್ತದೆ. ಆದ್ದರಿಂದ ಕೂಡಲೇ ಚರಂಡಿ, ರಸ್ತೆ ಮೇಲಿನ ಕಸದ ರಾಶಿಯನ್ನು ಸ್ವಚ್ಛ ಮಾಡುವಲ್ಲಿ ಪಾಲಿಕೆ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

ಪ್ಲಾಸ್ಟಿಕ್ ತ್ಯಾಜ್ಯದ ಸಾಮ್ರಾಜ್ಯ

ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಎಷ್ಟೋ ಪ್ರಯತ್ನಗಳು ನಡೆದರೂ ಪ್ಲಾಸ್ಟಿಕ್ ಬಳಕೆ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದನ್ನು ಈ ಕಸದ ರಾಶಿಯ ಮೂಲಕ ಸಾಕ್ಷಿ ಸಮೇತ ತೋರಿಸಬಹುದು. ಹೆಚ್ಚಿನ ಪಾಲು ಪ್ಲಾಸ್ಟಿಕ್ ಚೀಲಗಳು, ಒಡೆದ ಗಾಜಿನ ಬಾಟಲಿ ಚೂರುಗಳು, ನೀರು ಕುಡಿದು ಬಿಸಾಡಿದ ಬಾಟಲಿಗಳು ಇಲ್ಲಿ ಕಂಡು ಬರುತ್ತವೆ.

ಜಾನುವಾರು ಜೀವಕ್ಕೆ ತುತ್ತು

ಕಸದ ರಾಶಿಯಲ್ಲಿ ಪ್ಲಾಸ್ಟಿಕ್‍ನ ಪ್ರಮಾಣವೇ ಜಾಸ್ತಿ ಇರುವುದರಿಂದ ದನ ಕರುಗಳ ಸಾವಿಗೆ ಇದು ಒಂದು ಕಾರಣವಾಗಿ ಪರಿಣಮಿಸಿದೆ. ಏಕೆಂದರೆ ಈ ಪ್ಲಾಸ್ಟಿಕ್ ವಸ್ತುಗಳ ಮಧ್ಯೆ ಇರುವ ಆಹಾರ ಪದಾರ್ಥ ತಿನ್ನಲು ಬರುವ ಪ್ರಾಣಿಗಳು ತಮ್ಮ ಜೀವ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು.

ಶೀಘ್ರವೇ ಕ್ರಮ ಅಗತ್ಯ

ಕಸ ವಿಲೇವಾರಿ ಮಾಡಲು ನಗರಸಭೆ ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಹೆಚ್ಚಿನ ಪೌರಕಾರ್ಮಿಕರನ್ನು ಬಳಸಿಕೊಂಡು ಹಾಗೂ ಸಣ್ಣ-ಪುಟ್ಟ ಕಸವನ್ನು ತುಂಬುವ ಗಾಡಿಗಳ ಮೂಲಕ ನಗರದ ವಿವಿಧ ಭಾಗಗಳಲ್ಲಿರುವ ಕಸದ ಗುಂಪುಗಳನ್ನು ಕಡಿಮೆ ಮಾಡಬೇಕಿದೆ.

ಮಹಾನಗರ ಪಾಲಿಕೆ ಅಧಿಕಾರಿಗಳು ಸಮಸ್ಯೆಯನ್ನು ಅರಿತುಕೊಂಡು ಈಗಲೇ ಎಚ್ಚೆತ್ತುಕೊಂಡು, ಪರಿಹಾರವನ್ನು ಒದಗಿಸಬೇಕು. ಇದರಲ್ಲಿ ಸಾರ್ವಜನಿಕರ ಪಾತ್ರವೂ ಮುಖ್ಯ. ಕೇವಲ ಅಧಿಕಾರಿಗಳು ಹಾಗೂ ಪಾಲಿಕೆಯನ್ನು ದೂಷಿಗಳನ್ನಾಗಿ ಮಾಡುವ ಮೊದಲು ಸಾರ್ವಜನಿಕರು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಅರಿತರೆ ಆಡಳಿತ ವರ್ಗವನ್ನು ದೂರುವುದು ತಪ್ಪುತ್ತದೆ. ನಾವು ಇರುವ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ.

ನಿವಾಸಿಗಳ ಅಭಿಪ್ರಾಯ

• ಕಸ ವಿಲೇವಾರಿ ಮಾಡುವಲ್ಲಿ ನಗರಪಾಲಿಕೆಯವರು ಸರಿಯಾದ ಕ್ರಮವನ್ನು ಕೈಗೊಳ್ಳದೇ ಬೇಜವಾಬ್ದಾರಿ ಮಾಡುತ್ತಿದ್ದಾರೆ. ಸುತ್ತಮುತ್ತ ಸ್ಥಳಗಳಿಂದ ಸಂಗ್ರಹಿಸಲ್ಪಟ್ಟ ಕಸವನ್ನು ಬಸ್ ಡಿಪೋ, ತೋಟಗಾರಿಕೆ ಇಲಾಖೆ, ಎನ್.ಎಸ್.ಎಸ್ ಆಫೀಸ್ ಬಳಿಯೇ ಸಂಗ್ರಹಿಸಿಟ್ಟು ಕೆಲವು ದಿನಗಳಿಗೊಮ್ಮೆ ಸುಡುತ್ತಾರೆ. ಇದರಿಂದ ದುರ್ವಾಸನೆಯ ಜೊತೆಗೆ ಸುಟ್ಟಾಗ ಬರುವ ಹೊಗೆಯಿಂದ ಕೆಲಸ ಮಾಡಲು ಕಿರಿಕಿರಿ ಅನಿಸುತ್ತದೆ. ತೋಟಗಾರಿಕೆ ಅಡಿಯಲ್ಲಿ ಬೆಳೆದ ಅನೇಕ ಮರಗಳ ವಿನಾಶವೂ ಆಗುತ್ತಿದೆ. ಚರಂಡಿಗಳಲ್ಲಿ ನಿಂತ ನೀರಿನಿಂದ ಸೊಳ್ಳೆಗಳ ಹಾವಳಿಯೂ ಜಾಸ್ತಿ ಆಗಿದೆ.

| ಬಿ.ಎಸ್.ವೀರಭದ್ರಪ್ಪ, ಟೈಯರ್ ಪ್ಲಾಂಟ್ ಪ್ರಭಾರ

• ಪೌರಕಾರ್ಮಿಕರು ಪ್ರತಿ ದಿನ ಬಂದರು ಸಹ ಹೋಟೆಲ್‍ಗಳಲ್ಲಿ ಟೀ ಕುಡಿದು, ಹರಟೆ ಹೊಡೆಯುತ್ತಾ ಸಮಯ ವ್ಯರ್ಥ ಮಾಡುತ್ತಾರೆ. ಅವರಿಗೆ ಸರ್ಕಾರ ಸಂಬಳ ನೀಡಿದರು ಸಹ ಸಾರ್ವಜನಿಕರಿಗೆ ಹಣ ಕೇಳಿ ಕಾಟ ನೀಡುತ್ತಾರೆ. ವಾರಕ್ಕೆರಡು ಬಾರಿ ಮಾತ್ರ ತಮ್ಮ ಕೆಲಸ ನಿರ್ವಹಿಸುತ್ತಾರೆ.

| ಗೌತಮ್, ಸ್ಥಳಿಯ ನಿವಾಸಿ

• ಏರಿಯಾದಲ್ಲಿ ಅಲ್ಲಲ್ಲಿ ಕಸವನ್ನು ಹಾಕುತ್ತಿದ್ದು ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದೆ. ಇದರ ತಡೆಗೆ ಫಾಗಿಂಗ್ ಮಾಡಬೇಕು. ಪಾಲಿಕೆ ವಾಹನಗಳು ದಿನನಿತ್ಯ ಬರಬೇಕು. ಪೌರಕಾರ್ಮಿಕರು ನಿರ್ಲಕ್ಷ್ಯ ತಾಳದೆ ನಿತ್ಯ ಕೆಲಸ ಮಾಡುವಲ್ಲಿ ಮೇಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು.

| ರಿಯಾಜ್, ಸ್ಥಳೀಯ ನಿವಾಸಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬಿಎಸ್​​ವೈ ರಾಜೀನಾಮೆ ಘೋಷಣೆ..!

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಬೆಂಗಳೂರು : ಸರ್ಕಾರದ ಎರಡು ವರ್ಷಗಳ ಸಾಧನಾ ಕಾರ್ಯಕ್ರಮದ ಭಾಷಣದಲ್ಲಿ ಭಾವುಕರಾಗಿ ಸಿಎಂ ಬಿಎಸ್​​ವೈ ಕಣ್ಣೀರು ಹಾಕಿದರು.

ಸಂಘದ ಕಾರ್ಯಕರ್ತನಾಗಿ ನಂತರ ಆರೆಸ್ಸೆಸ್ ಪ್ರಚಾರಕನಾಗಿ ಬಳಿಕ ರಾಜಕೀಯ ಜೀವನ ಪ್ರವೇಶಿಸಿ ಸಂದರ್ಭದಿಂದ ಹಿಡಿದು ತಮ್ಮ ಈಗಿನ ರಾಜಕೀಯದವರೆಗೂ ತಮ್ಮ ಹೋರಾಟಗಳನ್ನ ಅವರು ಮೆಲುಕು ಹಾಕಿದರು. ಭಾಷಣದ ಮಧ್ಯೆ ಅವರು ಗದ್ಗದಿತರಾಗಿ ಕಣ್ಣೀರು ಹಾಕಿದರು. ಕೊನೆಯಲ್ಲಿ ಗದ್ಗದಿತರಾಗಿ ಊಟದ ನಂತರ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಕಣ್ಣೀರು ಹಾಕಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹಿರಿಯ ನಟಿ ಜಯಂತಿ ಇನ್ನಿಲ್ಲ

Published

on

ಸುದ್ದಿದಿನ, ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ (76) ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಕನ್ನಡ, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ 6 ಭಾಷೆಗಳಲ್ಲಿ ನಟಿಸಿದ್ದಾರೆ. 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು, ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದರು. ಜಯಂತಿ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮೊಟ್ಟೆ ಖರೀದಿಯಲ್ಲಿ ಅವ್ಯವಹಾರ ; ಕಾಣದ ಕೈಗಳು ಕೆಲಸ ಮಾಡುತ್ತಿವೆ : ಸಚಿವೆ ಶಶಿಕಲಾ ಜೊಲ್ಲೆ

Published

on

ಸುದ್ದಿದಿನ, ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಮೊಟ್ಟೆ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು, ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದ್ದು, ವಯಕ್ತಿಕವಾಗಿ ನನ್ನ ತೇಜೊವಧೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೊಟ್ಟೆ ಖರೀದಿಗೆ ಇದುವರೆಗೂ ಯಾವದೇ ಟೆಂಡರ್ ಕರೆದಿಲ್ಲ. ಅಲ್ಲದೇ ಟೆಂಡರ್ ನೀಡಲು ನಾನು ವಯಕ್ತಿಕವಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ.

ನಮ್ಮ ಬಿಜೆಪಿ ಪಕ್ಷದ ಶಾಸಕರಾದ ಪರಣ್ಣ ಮುನವಳ್ಳಿಯವರು ತಮ್ಮ ಸಂಬಂಧಿಕರು ಎಂದು ಕರೆದುಕೊಂಡು ಬಂದಾಗ ಕಾನೂನು ಪ್ರಕಾರ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದೇನೆ. ಇದರಲ್ಲಿ ಯಾವುದೇ ಹಣಕಾಸಿನ ವ್ಯವಹಾರದ ಕುರಿತು ನಾನು ಮಾತನಾಡಿಲ್ಲ.

ಆದರೆ, ಒಬ್ಬ ಮಹಿಳೆಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ರಾಜಕೀಯದಲ್ಲಿ ನನ್ನದೇ ಆದ ತತ್ವ ಸಿದ್ದಾಂತ ನಂಬಿಕೊಂಡು ಕೆಲಸ ಮಾಡುತ್ತಿರುವ ನನ್ನ ಏಳಿಗೆಯನ್ನು ಸಹಿಸದವರು, ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಅನುಮಾನ
ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending