Connect with us

ದಿನದ ಸುದ್ದಿ

ದಾವಣಗೆರೆ | ಜಿಲ್ಲೆಯ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ವಾರದೊಳಗೆ ಲಸಿಕೆ

Published

on

ಸುದ್ದಿದಿನ,ದಾವಣಗೆರೆ : ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿನ 18 ವರ್ಷ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಒಂದು ವಾರದೊಳಗಾಗಿ ಆದ್ಯತೆ ಮೇರೆಗೆ ಕೋವಿಡ್ ನಿರೋಧಕ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ವಿದ್ಯಾರ್ಥಿಗಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿಡಿಯೋ ಸಂವಾದದ ಬಳಿಕ, ಮಾತನಾಡಿದ ಅವರು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ನಿರ್ದೇಶನದಂತೆ ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ ಹಾಗೂ ಖಾಸಗಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಐಟಿಐ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಒಂದು ವಾರದ ಒಳಗಾಗಿ ಕೋವಿಡ್ ನಿರೋಧಕ ಲಸಿಕೆಯನ್ನು, ಲಸಿಕೆಯ ಲಭ್ಯತೆಯ ಆಧಾರದ ಮೇಲೆ ಆದ್ಯತೆ ಮೇರೆಗೆ ನೀಡಲಾಗುವುದು.

ಜಿಲ್ಲೆಯಲ್ಲಿ ಲಸಿಕೆ ನೀಡಲು ಅರ್ಹರಿರುವ ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು, 50132 ವಿದ್ಯಾರ್ಥಿಗಳು, 3619 ಬೋಧಕರು ಹಾಗೂ 1905 ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಒಟ್ಟು 55656 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಈಗಾಗಲೆ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಆರಂಭವಾಗಿದ್ದು, ಕೆಲವು ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮೊದಲನೆ ಡೋಸ್ ಲಸಿಕೆ ಪಡೆದಿರಬಹುದು.

ಲಸಿಕೆ ಪಡೆಯದೆ ಇರುವ ಎಲ್ಲ ಅರ್ಹ ವಿದ್ಯಾರ್ಥಿಗಳಿಗೂ ಲಸಿಕೆ ನೀಡಲಾಗುವುದು. ಇದಕ್ಕಾಗಿ ಎಲ್ಲ ಕಾಲೇಜುಗಳಲ್ಲಿ ಲಸಿಕಾ ಕ್ಯಾಂಪ್ ಆಯೋಜಿಸಲಾಗುವುದು. ಲಸಿಕೆ ಲಭ್ಯತೆ ಆಧಾರದ ಮೇಲೆ ಲಸಿಕೆ ಕ್ಯಾಂಪ್ ಏರ್ಪಡಿಸುವ ಸ್ಥಳ, ದಿನವನ್ನು ಆರೋಗ್ಯ ಇಲಾಖೆ ನಿಗದಿಪಡಿಸಲಿದೆ. ಲಸಿಕೆ ಕಾರ್ಯಕ್ರಮ ಯಶಸ್ವಿಗೊಳಿಸಲು ಇದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು.

ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ಪದವಿ-29485 ಹಾಗೂ ಸ್ನಾತಕೋತ್ತರ ಪದವಿ-2227 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಬೇಕಿದೆ. ಈ ಕಾರ್ಯಕ್ರಮಕ್ಕೆಂದೇ ಪ್ರತ್ಯೇಕವಾಗಿ ಲಸಿಕೆಯನ್ನು ಹಂಚಿಕೆ ಮಾಡಲಾಗುವುದಿಲ್ಲ, ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಈಗಾಗಲೆ ನಡೆಯುತ್ತಿರುವ ಲಸಿಕಾ ಕಾರ್ಯಕ್ರಮದ ಜೊತೆ ಜೊತೆಗೆ, ವಿದ್ಯಾರ್ಥಿಗಳಿಗೂ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಕಾಲೇಜುಗಳ ಪಟ್ಟಿಯನ್ನು ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಲೇಜುಗಳಲ್ಲಿ ನಡೆಸಲಾಗುವ ಲಸಿಕಾ ಕ್ಯಾಂಪ್ ಕಾರ್ಯಕ್ರಮದ ಸಂದರ್ಭದಲ್ಲಿ ಕೋವಿಡ್‍ಗೆ ಸಂಬಂಧಿಸಿದಂತೆ ಹಾಗೂ ಲಸಿಕೆ ನೀಡಿಕೆಗಾಗಿ ಸರ್ಕಾರ ಹೊರಡಿಸಿರುವ ಎಲ್ಲ ಮಾರ್ಗಸೂಚಿಗಳನ್ನು ಅಧಿಕಾರಿಗಳು ತಪ್ಪದೆ ಪಾಲಿಸಬೇಕು, ಇದಕ್ಕಾಗಿ ಕಾಲೇಜುಗಳಲ್ಲಿ ಸೂಕ್ತ ಕೊಠಡಿಗಳನ್ನು ಪರಿಶೀಲಿಸಿ, ನಿಗದಿಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಗೆ ಸರ್ಕಾರದಿಂದ ಹಂಚಿಕೆ ಮಾಡಲಾಗುವ ಕೋವಿಡ್ ನಿರೋಧಕ ಲಸಿಕೆಯ ಪ್ರಮಾಣವನ್ನು ಪರಿಗಣಿಸಿ, ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಅಗತ್ಯವಿರುವ ಲಸಿಕೆಯನ್ನು ಹಂಚಿಕೆ ಮಾಡಬೇಕು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೀಡುವ ಲಸಿಕೆ ಕಾರ್ಯಕ್ರಮಕ್ಕೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವಂತಾಗಬಾರದು, ಈ ನಿಟ್ಟಿನಲ್ಲಿ ಸೂಕ್ತ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸಭೆಯಲ್ಲಿ ಡಿಹೆಚ್‍ಒ ಡಾ. ನಾಗರಾಜ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ, ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಶಶಿಧರ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಜಿಲ್ಲೆಯ 582 ಕೇಂದ್ರಗಳಲ್ಲಿ ಬೃಹತ್ ಲಸಿಕಾ ಮೇಳ ; ನಗರದಲ್ಲಿ ವ್ಯಾಕ್ಸಿನೇಷನ್ ವೀಕ್ಷಿಸಿದ ಸಂಸದರು

Published

on

ಸುದ್ದಿದಿನ,ದಾವಣಗೆರೆ : ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಸೂಚನೆಯಂತೆ ದಾವಣಗೆರೆ ನಗರದಲ್ಲಿ ಶುಕ್ರವಾರ ವಿದ್ಯಾನಗರದ ಶಿವ ಪಾರ್ವತಿ ದೇವಸ್ಥಾನದಲ್ಲಿ ಏರ್ಪಡಿಸಿದ ಬೃಹತ್ ಲಸಿಕಾ ಮೇಳದ ಅಂಗವಾಗಿ ನಡೆದ ಲಸಿಕಾಕರಣ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಭಾಗವಹಿಸಿ, ಫಲಾನುಭವಿಗಳ ಯೋಗಕ್ಷೇಮ ವಿಚಾರಿಸಿದರು.

ಜಿಲ್ಲೆಯಾದ್ಯಂತ ಶುಕ್ರವಾರದಂದು ಬೃಹತ್ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದ್ದು, ನಗರದ ಮೋತಿವೀರಪ್ಪ ಕಾಲೇಜು ಹಾಗೂ ಸೂಪರ್ ಮಾರ್ಕೆಟ್ ಕೇಂದ್ರಗಳಲ್ಲಿ ಸಂಸದರೊಂದಿಗೆ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮುಂತಾದ ಅಧಿಕಾರಿಗಳು ಭೇಟಿ ನೀಡಿ ಲಸಿಕೆ ಮೇಳದಲ್ಲಿ ಪಾಲ್ಗೊಂಡು, ಲಸಿಕೆ ಕಾರ್ಯಕ್ರಮ ವೀಕ್ಷಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಪ್ರಪಂಚದಲ್ಲೇ ಅತೀ ದೊಡ್ಡ ವ್ಯಾಕ್ಸಿನೇಷನ್ ಮೇಳ ಇದಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮ್ಮ ಸರ್ಕಾರ ಜನರ ಹಿತಕ್ಕೆ ಬದ್ಧವಾಗಿದೆ ಎಂದರು.

ಜಿಲ್ಲೆಯ 195 ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಪಟ್ಟಣ ಪಂಚಾಯಿತಿ, ನಗರ ಸಭೆ, ವ್ಯಾಪ್ತಿಯಲ್ಲಿ 5 ರಿಂದ 6 ಕಡೆ ಕೋವಿಡ್ ನಿರೋಧಕ ಲಸಿಕೆ ಹಾಕಲಾಗುತ್ತಿದ್ದು, ದಾವಣಗೆರೆ ನಗರದ ಒಟ್ಟು 57 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ನಗರದ 45 ವಾರ್ಡ್ ಹಾಗೂ ಸಿ.ಜಿ. ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್ ನೀಡುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ 200 ರಿಂದ 500 ಜನರಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಶುಕ್ರವಾರ ಒಂದೇ ದಿನ ಒಟ್ಟು 01 ಲಕ್ಷ ಲಸಿಕೆ ನೀಡುವ ಗುರಿ ಹೊಂದಿದ್ದೇವೆ. ಈಗಾಗಲೇ 10 ಲಕ್ಷದ 52 ಸಾವಿರ ಜನರಿಗೆ ಲಸಿಕೆ ನೀಡಲಾಗಿದ್ದು, 11.5 ಲಕ್ಷದ ಗುರಿ ಸಾಧಿಸಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ ಎಂದರು.

ನಗರದ ದೊಗ್ಗಳ್ಳಿ ಕಾಂಪೌಡ್‍ಗೆ ಭೇಟಿ

ನಗರದ ದೊಗ್ಗಳ್ಳಿ ಕಾಂಪೌಡ್‍ಗೆ ಭೇಟಿ ನೀಡಿ, ಅಲ್ಲಿಯ ಕೊಳಚೆ ಪ್ರದೇಶವನ್ನು ವೀಕ್ಷಿಸಿದ ಸಂಸದರು, ಅಲ್ಲಿಯ ಜನರಿಗೆ ಕೊಳಚೆ ಪ್ರದೇಶದಲ್ಲಿ ಓಡಾಡಲು ಅವ್ಯವಸ್ಥೆಯಾಗುತ್ತಿದೆ. ಮಳೆಗಾಲದಲ್ಲಿ ನೀರು ಶೇಖರಣೆಯಾಗಿ ಸುತ್ತ-ಮುತ್ತಲಿನ ಪ್ರದೇಶ ಮಲಿನಗೊಂಡಿದ್ದು, ಜನ-ಜೀವನ ಜೀವಿಸಲು ಕಷ್ಟಕರವಾಗಿದೆ. ಕೂಡಲೇ ಈ ಸ್ಥಳವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಸುವ್ಯವಸ್ಥಿತ ರಸ್ತೆ ಹಾಗೂ ಯುಜಿಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಿದರು.

ಈ ವೇಳೆ ಮಹಾನಗರ ಪಾಲಿಕೆಯ ಮಹಾಪೌರ ಎಸ್.ಟಿ.ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಡಿಹೆಚ್‍ಒ ಡಾ.ನಾಗರಾಜ್, ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಸೆ.30 ರಂದು ಬೃಹತ್ ಲೋಕ್‍ಅದಾಲತ್

Published

on

ಸುದ್ದಿದಿನ,ದಾವಣಗೆರೆ : ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ ಹಾಗೂ ಜಗಳೂರು ನ್ಯಾಯಾಲಯಗಳ ಆವರಣದಲ್ಲಿ ಸೆಪ್ಟಂಬರ್ 30 ರಂದು ಮೆಗಾ ಲೋಕ್ ಅದಾಲತ್ ಆಯೋಜಿಸಲಾಗಿದೆ.

ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಹಾಗೂ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್‍ರವರು ಲೋಕ್ ಅದಾಲತ್ ಮೂಲಕ ಅತೀ ಹೆಚ್ಚು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಬಯಸಿದ್ದು, ಈಗ ಮತ್ತೊಮ್ಮೆ ಪ್ರಾಧಿಕಾರವು ಸೆ.30 ರಂದು ಮೆಗಾ ಲೋಕ್ ಅದಾಲತ್ ಮೂಲಕ ಅತೀ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಲಾಗಿದೆ. ಹೀಗಾಗಿ ಜಿಲ್ಲೆಗಳಲ್ಲಿರುವ ಎಲ್ಲಾ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಮೆಗಾ ಲೋಕ್ ಅದಾಲತ್‍ನ್ನು ಸೆ. 30 ರಂದು ಆಯೋಜಿಸಲಾಗಿದೆ.

ಮೆಗಾ ಲೋಕ್ ಅದಾಲತ್‍ನಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಪರಿಹರಿಸಿಕೊಳ್ಳಲು ಸಾರ್ವಜನಿಕರಿಗೆ ಮೆಗಾ ಲೋಕ್ ಅದಾಲತ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ. ರಾಜಿಯಾಗಬಲ್ಲ ಎಲ್ಲಾ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟರ್ ವಾಹನ ಅಪಘಾತ ಪರಿಹಾರ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಭೂಸ್ವಾಧೀನ ಪರಿಹಾರ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಎಂ.ಎಂ.ಡಿ.ಆರ್ ಕಾಯ್ದೆಯಡಿಯ ಪ್ರಕರಣಗಳನ್ನು ಮೆಗಾ ಲೋಕ್ ಅದಾಲತ್ ನಲ್ಲಿ ಪರಿಹರಿಸಿಕೊಳ್ಳಬಹುದು.

ವೈವಾಹಿಕ ಕುಟುಂಬ ನ್ಯಾಯಾಲಯದ ಪ್ರಕರಣಗಳು (ವಿಚ್ಚೇದನ ಹೊರತುಪಡಿಸಿ), ಪಿಂಚಣಿ ಪ್ರಕರಣಗಳು, ವೇತನ ಭತ್ಯೆ ಸಂಬಂಧಿಸಿದ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕ, ಕೈಗಾರಿಕೆ ಕಾರ್ಮಿಕರ ವೇತನ, ಕಾರ್ಮಿಕ ವಿವಾದ ಇತ್ಯಾದಿ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು.

ಕೋವಿಡ್-19 ಸೋಂಕಿನಿಂದ ಸಾರ್ವಜನಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ಆರ್ಥಿಕ ಸಂಕಷ್ಟದಿಂದ ಹೊರಬರಲು ಅವಕಾಶವಿದೆ. ನ್ಯಾಯಾಲಯದ ಸಂಪೂರ್ಣ ಶುಲ್ಕವನ್ನು ಮರುಪಾವತಿ ಮಾಡಲಾಗುವುದು. ಕಕ್ಷಿಗಾರರು ಭೌತಿಕವಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮುಖಾಂತರ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು.

ಕಳೆದ ಆ.14 ರಂದು ಜರುಗಿದ ಮೆಗಾ ಲೋಕ್ ಅದಾಲತ್‍ನಲ್ಲಿ ಜಿಲ್ಲೆಯಲ್ಲಿ 8050 ಪ್ರಕರಣಗಳು ಇತ್ಯರ್ಥಗೊಂಡು 13.88 ಕೋಟಿ ರೂ. ಗಳ ಪರಿಹಾರ ಒದಗಿಸಲಾಗಿದೆ. ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಜೀವ ವಿಮಾ ನಿಗಮ ಅಧಿಕರಿಗಳು, ವಕೀಲರು, ಎಂ.ವಿ.ಸಿ ಪ್ರಕರಣದ ಅರ್ಜಿದಾರ ವಕೀಲರುಗಳು, ಭೂ ವಿಜ್ಞಾನ ಇಲಾಖೆ, ಬ್ಯಾಂಕ್ ಅಧಿಕಾರಿಗಳು, ಶಿಕ್ಷಣ ಇಲಾಖೆ ಸೇರಿದಂತೆ ಲೋಕ್ ಅದಾಲತ್ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ಸಾರ್ವಜನಿಕರು ಮೆಗಾ ಲೋಕ್ ಅದಾಲತ್ ನ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಹಳೆಯ ನ್ಯಾಯಾಲಯ ಸಂಕಿರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದಾವಣಗೆರೆ ಇವರನ್ನು ದೂ.ಸ:08192-296364, ತಾಲ್ಲೂಕು ಕಾನೂನು ಸೇವಾ ಸಮಿತಿಗಳಾದ ಹರಿಹರ 08192-296885, ಹೊನ್ನಾಳಿ 08188-251732, ಚನ್ನಗಿರಿ 08189-229195 ಮತ್ತು ಜಗಳೂರು 08196-227600 ಇವರನ್ನು ಸಂಪರ್ಕಿಸಬಹುದೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಹಾಗೂ ಹಿರಿಯ ಸಿವಿಲ್ ನ್ಯಾಯಾದೀಶರಾದ ಪ್ರವೀಣ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭೋವಿ ಅಭಿವೃದ್ಧಿ ನಿಗಮ : ವಿವಿಧ ಯೋಜನೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಯಡಿ ಸಾಲ ಮತ್ತು ಸಹಾಯಧನ ಸೌಲಭ್ಯ ಕಲ್ಪಿಸಲು ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಬರುವ ಜನಾಂಗದ ಫಲಾಪೇಕ್ಷಿಗಳಿಂದ ಸ್ವಯಂ ಉದ್ಯೋಗ ಯೋಜನೆ, ಐ.ಎಸ್.ಬಿ. ಯೋಜನೆ, ಎಂ.ಸಿ.ಎಫ್. ಪ್ರೇರಣಾ ಯೋಜನೆ, ಗಂಗಾ ಕಲ್ಯಾಣ ಹಾಗೂ ಭೂ ಒಡೆತನ ಯೋಜನೆಯಡಿ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ ಯೋಜನೆಯಡಿ ತರಕಾರಿ, ಹಣ್ಣು ಮಾರಾಟ, ಹಸು, ಎಮ್ಮೆ, ಕುರಿ, ಹಂದಿ, ಮೊಲ ಸಾಕಾಣಿಕೆ ಇತ್ಯಾದಿ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ಘಟಕ ವೆಚ್ಚ ಗರಿಷ್ಠ ರೂ.50000 ವರಗೆ ಸಾಲ ಸೌಲಭ್ಯವನ್ನು ನಿಗಮದಿಂದ ನೇರವಾಗಿ ಮಂಜೂರು ಮಾಡಲಾಗುವುದು.

ಉದ್ಯಮಶೀಲತಾ ಯೋಜನೆಯಡಿ ಅರ್ಹ ನಿರುದ್ಯೋಗಿಗಳು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡು ಆದಾಯ ಗಳಿಸಲು ಬ್ಯಾಂಕಿನಿಂದ ಮಂಜೂರಾದ ಸಾಲದ ಉದ್ದೇಶಗಳಿಗೆ ಘಟಕ ವೆಚ್ಚ ಗರಿಷ್ಠ ರೂ.2 ಲಕ್ಷ ಸಹಾಯಧನ ಮತ್ತು ಘಟಕ ವೆಚ್ಚ ಗರಿಷ್ಠ ರೂ.3.50 ಲಕ್ಷ ಸಹಾಯಧನ ನಿಗಮದ ಸಹಾಯಧನವನ್ನು ಹೊರತುಪಡಿಸಿ ಘಟಕದ ವೆಚ್ಚದ ಉಳಿದ ಭಾಗವನ್ನು ಬ್ಯಾಂಕ್ ಸಾಲದಿಂದ ಭರಿಸಲಾಗುವುದು.

ಮೈಕ್ರೊ ಕ್ರೆಡಿಟ್ ಯೋಜನೆಯಡಿ ಮಹಿಳೆಯರಲ್ಲಿ ಗುಂಪು ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮಹಿಳಾ ಸ್ವಸಹಾಯ ಸಂಘಗಳು ಸ್ವಯಂ ಉದೋಗ ಕೈಗೊಂಡು ಆದಾಯ ಗಳಿಸಲು ಕನಿಷ್ಠ 10 ಜನ ಸದಸ್ಯರಿರುವ ಮಹಿಳಾ ಸ್ವಸಹಾಯ ಗುಂಪಿಗೆ ಕನಿಷ್ಠ ರೂ.2.50 ಲಕ್ಷ ಸಾಲ ಮತ್ತು ಸಹಾಯಧನವನ್ನು ಮಂಜೂರು ಮಾಡಲಾಗುವುದು.

ಗಂಗಾಕಲ್ಯಾಣ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಕುಷ್ಕಿ ಜಮೀನಿಗೆ ರೂ.3.50 ಲಕ್ಷದಿಂದ ರೂ.4.50 ಲಕ್ಷ ವೆಚ್ಚದಲ್ಲಿ ಕೊಳವೆ ಬಾವಿಯಿಂದ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.

ಭೂಒಡೆತನ ಯೋಜನೆಯಡಿ ಭೂ ರಹಿತ ಕೃಷಿ ಕಾರ್ಮಿಕರಿಗೆ ಯೋಗ್ಯವಾದ ಜಮೀನು ಖರೀದಿಗೆ ರೂ.15 ಲಕ್ಷದಿಂದ ರೂ.20 ಲಕ್ಷ ಘಟಕ ವೆಚ್ಚದಲ್ಲಿ ಸಾಲ ಸೌಲಭ್ಯ ಮಂಜೂರು ಮಾಡಲಾಗುವುದು.

ಅರ್ಜಿ ಸಲ್ಲಿಸುವ ಫಲಾಪೇಕ್ಷಿಗಳು ಆನ್‍ಲೈನ್ ಮೂಲಕ ಅರ್ಜಿಯನ್ನು ಮತ್ತು ದಾಖಲೆಗಳನ್ನು ನಿಗಮದ ವೆಬ್‍ಸೈಟ್ http://kbdc.karnataka.gov.in ಮೂಲಕ ಸೆ.15 ರಿಂದ ಅ.14 ರವರೆಗೆ ಸಲ್ಲಿಸಬಹುದು. ಫಲಾಪೇಕ್ಷಿಗಳ ಅರ್ಜಿಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿರುವ ಆಯ್ಕೆ ಸಮಿತಿಯ ಮೂಲಕ ಗುರಿಗನುಗುಣವಾಗಿ ಆಯ್ಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಕಛೇರಿಯನ್ನು ಸಂಪರ್ಕಿಸಬಹುದೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending