Connect with us

ದಿನದ ಸುದ್ದಿ

ದಾವಣಗೆರೆ ವಿವಿ ರಂಗ ವಿಮರ್ಶಾ ಕಮ್ಮಟ |ಮಾನವ ಜೀವನದಲ್ಲಿ ವಿಮರ್ಶೆಗಳು ಖಾಯಂ ಪ್ರಕ್ರಿಯೆಗಳು : ನಿರ್ದೇಶಕ ಬಿ.ಸುರೇಶ

Published

on

ಸಹಜ ಆಸೆಗಳನ್ನು ಬದಿಗಿಟ್ಟು ಕಾಯಕವನ್ನು ಸಾಧಿಸಲು ಪ್ರಯತ್ನಿಸಬೇಕು: ಕುಲಪತಿ ಪ್ರೊ. ಎಸ್.ವಿ. ಹಲಸೆ

ಸುದ್ದಿದಿನ,ದಾವಣಗೆರೆ : ಮನುಷ್ಯನಿಗೆ ಆಸೆಗಳು ಸಹಜ. ಆಸೆಗಳನ್ನು ಬದಿಗಿಟ್ಟು ನಮ್ಮ ಕಾಯಕವನ್ನು ಸಾಧಿಸಲು ಪ್ರಯತ್ನಸಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಸ್.ವಿ. ಹಲಸೆ ಹೇಳಿದರು.

ಕರ್ನಾಟಕ ನಾಟಕ ಅಕಾಡಮಿ ಬೆಂಗಳೂರು ವತಿಯಿಂದ ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ ದಾವಣಗೆರೆ, ಜಿಲ್ಲಾ ವರದಿಗಾರರ ಕೂಟ, ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ ಇವರ ಸಹಯೋಗದಲ್ಲಿ ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮತ್ತು ಆಸಕ್ತ ಬರಹಗಾರರಿಗಾಗಿ ಶನಿವಾರ ದಾವಣಗೆರೆ ವಿವಿ ಎಂಬಿಎ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಂಗ ವಿಮರ್ಶಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು.

ಕಲಿಕೆಯು ದಿನನಿತ್ಯದ ಪಯಣ. ಎಲ್ಲರಲ್ಲೂ ಒಂದು ಸುಪ್ತವಾದ ವ್ಯಕ್ತಿತ್ವವಿದ್ದು ಅದನ್ನು ಹೊರತರಲು ಇಂತಹ ಕಮ್ಮಟಗಳು ಸಹಕಾರಿಯಾಗುತ್ತವೆ.ಲಿಖಿತ ಪಠ್ಯ-ರಂಗ ಪಠ್ಯ ಮತ್ತು ವಿಮರ್ಶೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸತತ ಪ್ರಯತ್ನ ಬಹುಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳ ಕಾಯಕ ಅಧ್ಯಯನ ಮಾಡುವುದಾದರೆ, ಸಮರ್ಪಕವಾಗಿ ಪಾಠ ಪ್ರವಚನ ಮಾಡುವುದು ಶಿಕ್ಷಕರ ಕಾಯಕ ಮತ್ತು ಜವಾಬ್ಧಾರಿಯಾಗಿದೆ.

ಯಾವುದೇ ಶಿಕ್ಷಕನಿಗೆ ನಾನು ಉತ್ತಮ ವಿದ್ಯಾರ್ಥಿಗಳನ್ನು ಹೊರ ತರುತ್ತೇನೆ ಎಂಬ ಆತ್ಮವಿಶ್ವಾಸವಿರಬೇಕು ಆಗ ಮಾತ್ರ ನಮ್ಮ ದೇಶ ರಾಮರಾಜ್ಯವಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳ ಬುದ್ದಿಮಟ್ಟ ಒಂದೇ ಆಗಿರುತ್ತದೆ ಆದರೆ ಅಭ್ಯಾಸದಲ್ಲಿ ತೊಡಗಿಕೊಳ್ಳುವಿಕೆಯ ಸಮಯ ಹೆಚ್ಚಾದಂತೆ ಅವರ ಜ್ಞಾನ ಹೆಚ್ಚಾಗುತ್ತಾ ಹೋಗುತ್ತದೆ. ಜೊತೆಗೆ ನಮ್ಮ ಮತ್ತು ವಿದ್ಯಾರ್ಥಿಗಳ ಸಂಬಂಧ ಉತ್ತಮವಾಗಿದ್ದಲ್ಲಿ ಮಾತ್ರ ಒಳ್ಳೆಯ ಶಿಕ್ಷಣ ನಿಡಲು ಸಾಧ್ಯವಾಗುತ್ತದೆ ಎಂದ ಅವರು ವಿದ್ಯಾರ್ಥಿಗಳನ್ನು ಭಾಷೆಯನ್ನು ಪರಿಶುದ್ದವಾಗಿ ಕಲಿಯಬೇಕು ಎಂದರು.

ಉದ್ಘಾಟನೆಗೂ ಮುನ್ನ ಲಿಖಿತ ಪಠ್ಯ-ರಂಗ ಪಠ್ಯ ಮತ್ತು ವಿಮರ್ಶೆಯ ಹಾದಿ ವಿಷಯ ಕುರಿತಾದ ಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ರಂಗ ತಜ್ಞ ಹಾಗೂ ಸಿನಿಮಾ ನಿರ್ದೇಶಕರಾದ ಬಿ. ಸುರೇಶ್, ಮಾನವ ಜೀವನದಲ್ಲಿ ವಿಮರ್ಶೆಗಳು ಒಂದು ರೀತಿಯ ಖಾಯಂ ಪ್ರಕ್ರಿಯೆಗಳಿದ್ದಂತೆ. ಮನುಷ್ಯ ದಿನೇ ದಿನೇ ಪ್ರಶ್ನೆಗೊಳಪಡುತ್ತಾನೆ. ಒಬ್ಬ ಮತ್ತೊಬ್ಬನನ್ನು ಪ್ರಶ್ನಿಸುವುದು, ಅನುಕರಿಸುವುದು, ತೆಗಳುವುದು ಒಂದು ರೀತಿಯ ವಿಮರ್ಶೆಯೇ ಆಗಿದೆ. ವಿಮರ್ಶೆ ನಿರಂತರ ಚಟುವಟಿಕೆ ಎಂಬ ವ್ಯಾಖ್ಯಾನವೂ ಇದೆ. ಒಂದು ರೀತಿ ಮನುಷ್ಯನ ಎಲ್ಲಾ ಅಂಗಗಳು ವಿಮರ್ಶೆಗೊಳಪಡುತ್ತವೆ. ಮತ್ತೊಬ್ಬರನ್ನು ಟೀಕಿಸುವುದು ವಿಮರ್ಶೆಯಾಗಿರುತ್ತದೆ. ಆದ್ದರಿಂದ ಯಾವುದೂ ಅಂತಿಮವಲ್ಲ ಎಂದರು.

ರಂಗ ವಿಮರ್ಶೆ ಮಾಡಬೇಕಾದರೆ ರಂಗಭೂಮಿ ಬಗ್ಗೆ ಸಂಪೂರ್ಣ ಅಧ್ಯಯನ ಅವಶ್ಯ. ಪರಿಪೂರ್ಣ ಜ್ಞಾನದಿಂದ ಒಂದು ರಂಗದ ವಿಮರ್ಶೆ ಸಾಧ್ಯ ಹೂ ಅರಳುವುದು, ಹೂವು ದುಂಬಿ ಆಕರ್ಷಿಸುವ ಅಂಶಗಳು ಒಂದು ರೀತಿಯ ವಿಮರ್ಶೆಯ ಅಂಶವೇ. ಈ ಎಲ್ಲಾ ಅಂಶಗಳನ್ನು ಪತ್ರಿಕೋದ್ಯಮ ಹಾಗೂ ಸಾಹಿತ್ಯದ ವಿದ್ಯಾರ್ಥಿಗಳು ನಿರಂತರ ಓದಿನಿಂದ ಜ್ಞಾನ ಪಡೆದುಕೊಂಡು ತಮ್ಮದೇ ಶೈಲಿಯಲ್ಲಿ ನೀರೂಪಿಸುವುದು ವಿಮರ್ಶೆ ಎನಿಸುತ್ತದೆ.

ಒಮ್ಮೊಮ್ಮೆ ಭಿನ್ನಾಭಿಪ್ರಾಯ ಸೂಚಿಸುವುದು ಕೂಡ ವಿಮರ್ಶೆಯಾಗುತ್ತದೆ. ಅನುಕರಣಾ ಮನೋಭಾವವನ್ನು ವಿಮರ್ಶಾ ಪ್ರವೃತಿಯಿಂದ ದೂರವಿಡ ಬೇಕು. ಆಗ ಯಾವುದೇ ಒಂದು ರಂಗದ ವಿಮರ್ಶೆ ಯಶಸ್ವಿಯಾಗಲು ಸಾಧ್ಯ. ಇಂದು ವಿಮರ್ಶಾ ರಂಗದಲ್ಲಿ ವಿಫುಲ ಉದ್ಯೋಗಾವಕಶಗಳಿದ್ದು ವಿದ್ಯಾರ್ಥಿಗಳು ಉತ್ತಮ ಓದು ತಿಳುವಳಿಕೆ ಜ್ಞಾನ ಹೆಚ್ಚಿಸಿಕೊಳ್ಳುವುದರಿಂದ ಒಳ್ಳೆಯ ಸ್ಥಾನಮಾನ ಕಲ್ಪಿಸಿಕೊಳ್ಳಬಹುದು ಹಾಗೂ ವಿಮರ್ಶೆ ಕ್ಷೇತ್ರದಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ಕೊಡಲಾಗುತ್ತಿದ್ದು, ತಾವುಗಳು ಕೂಡ ಈ ಪ್ರಶಸ್ತಿ ಪಡೆಯಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು, ಪತ್ರಕರ್ತರಾದ ಬಿ.ಎನ್. ಮಲ್ಲೇಶ್ ಮಾತನಾಡಿ, ಪತ್ರಕರ್ತರಿಗೆ ಪ್ರತಿಯೊಂದು ವಿಷಯದ ಬಗ್ಗೆ ಜ್ಞಾನವಿರಬೇಕು. ಪತ್ರಕರ್ತ ಪ್ರತಿಯೊಂದು ವಿಷಯವನ್ನು ವಿಮರ್ಶಾ ದೃಷ್ಟಿಯಿಂದ ನೋಡಬೇಕು. ಇತ್ತೀಚಿನ ದಿನಗಳಲ್ಲಿ ವಿಮರ್ಶೆಯು ಟೀಕೆಯೆಂಬಂತೆ ಬಿಂಬಿತವಾಗುತ್ತಿದೆ.

ವಿಮರ್ಶೆ ಮಾಡಲು ವಿಷಯದ ಬಗ್ಗೆ ಸಾಮುಲಾಗ್ರವಾಗಿ ತಿಳಿದುಕೊಂಡಿರಬೇಕು. ವಾಸ್ತವವನ್ನು ತಿಳಿದುಕೊಂಡು ವಿಮರ್ಶೆ ಮಾಡಬೇಕು. ಇಲ್ಲವಾದಲ್ಲಿ ವಿಮರ್ಶೆ ಸೋಲುತ್ತದೆ. ವಿಮರ್ಶೆ ಮಾಡಲು ಭಾಷಾ ಪ್ರಬುದ್ದತೆ ಅಗತ್ಯವಾಗಿದ್ದು, ಭಾಷೆ ಮೇಲೆ ಹಿಡಿತವಿಲ್ಲದಿದ್ದರೆ ವಿಮರ್ಶಕರಾಗಲು ಸಾಧ್ಯವಿಲ್ಲ ಎಂದರು.

ವಿಜಯ ಕರ್ನಾಟಕ ಉಪ ಸಂಪಾದಕ ಯಳನಾಡು ಮಂಜುನಾಥ, ಯಳನಾಡು ಮಂಜುನಾಥ ಸಂಯುಕ್ತ ಕರ್ನಾಟಕ ದಾವಣಗೆರೆ ಬ್ಯೂರೋ ಮುಖ್ಯಸ್ಥರಾದ ಮಂಜುನಾಥ ಗೌರಕ್ಕಳವರ್, ವಾರ್ತಾಧಿಕಾರಿ ಅಶೋಕ್‍ಕುಮಾರ್.ಡಿ, ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯರಾದ ವಿಜಯಲಕ್ಷ್ಮಿ ಹಿರೇಮಠ, ನಾಟಕ ಅಕಾಡೆಮಿ ಸದಸ್ಯರಾದ ರವೀಂದ್ರ ಅರಳಗುಪ್ಪಿ, ಸಾಹಿತಿಗಳಾದ ಬಾ.ಮ.ಬಸವರಾಜಯ್ಯ, ಪತ್ರಿಕೋದ್ಯಮ, ಕನ್ನಡ ಸಾಹಿತ್ಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending