Connect with us

ದಿನದ ಸುದ್ದಿ

ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ |ಕೈಗಾರಿಕಾ ಪ್ರದೇಶ ನಿವೇಶನಗಳ ದರ ಪರಿಷ್ಕರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಡಿಸಿ ಮಹಾಂತೇಶ್ ಬೀಳಗಿ ಸೂಚನೆ

Published

on

ಸಾಂದರ್ಭಿಕ ಚಿತ್ರ

ದಾವಣಗೆರೆಯಲ್ಲಿ ಮೆಗಾ ಟೆಕ್ಸ್ ಟೈಲ್ ಪಾರ್ಕ್‍ಗೆ ಶಿಫಾರಸು

ಸುದ್ದಿದಿನ,ದಾವಣಗೆರೆ : ಹರಿಹರ ತಾಲ್ಲೂಕು ಸಾರಥಿ-ಕುರುಬರಹಳ್ಳಿ ಕೈಗಾರಿಕಾ ವಸಾಹತುವಿನಲ್ಲಿ ಅಭಿವೃದ್ಧಿಪಡಿಸಲಾಗಿರುವ ನಿವೇಶನಗಳ ದರ ಪರಿಷ್ಕರಿಸುವುದರ ಕುರಿತು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಕರ್ನಾಟಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಅಭಿವೃದ್ಧಿ ನಿಗಮದ (ಕೆಎಸ್‍ಎಸ್‍ಐಡಿಸಿ) ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹರಿಹರ ತಾಲ್ಲೂಕು ಕುರುಬರಹಳ್ಳಿ ಬಳಿ ಕೆಎಸ್‍ಎಸ್‍ಐಡಿಸಿ ವತಿಯಿಂದ ಕೈಗಾರಿಕಾ ವಸಾಹತು ಸ್ಥಾಪಿಸಿ 95 ನಿವೇಶನಗಳನ್ನು ಅಭಿವೃದ್ಧಿಪಡಿಸಿದ್ದು, ಇದುವರೆಗೆ 26 ನಿವೇಶನಗಳು ಮಾತ್ರ ಹಂಚಿಕೆ ಮಾಡಲಾಗಿದೆ. 57 ನಿವೇಶನಗಳು ಹಂಚಿಕೆಯಾಗದೆ ಖಾಲಿ ಇವೆ. ಈ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ನಿವೇಶನ ಪಡೆಯಲು ಪ್ರತಿ ಎಕರೆಗೆ ಸುಮಾರು 2.20 ಕೋಟಿ ರೂ. ವೆಚ್ಚವನ್ನು ಉದ್ಯಮಿಗಳು ಭರಿಸಬೇಕಿದೆ.

ಇಷ್ಟೊಂದು ದೊಡ್ಡ ಮೊತ್ತ ನೀಡಿ ನಿವೇಶನ ಪಡೆಯಲು ಯಾರೂ ಮುಂದೆ ಬಾರದ ಕಾರಣ ಖಾಲಿ ಉಳಿದಿದ್ದು, ಈಗಾಗಲೆ ನಿವೇಶನ ಪಡೆದವರಲ್ಲಿಯೂ ಕೈಗಾರಿಕೆ ಚಟುವಟುಕೆ ಪ್ರಾರಂಭಿಸಿದವರು ಕೆಲವೇ ಕೆಲವರು ಮಾತ್ರ. ಪ.ಜಾತಿ, ಪಂಗಡದವರಿಗೆ ಶುಲ್ಕದಲ್ಲಿ ಶೇ. 50 ರಷ್ಟು ಸಬ್ಸಿಡಿ ಇರುವುದರಿಂದ ಕೇವಲ ಪ.ಜಾತಿ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿದ್ದು, ಈವರೆಗೆ 18 ಜನ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಇಲ್ಲಿನ ಕೈಗಾರಿಕಾ ವಸಾಹತುವಿನಲ್ಲಿ ನಿವೇಶನ ಪಡೆಯುವುದು ದುಬಾರಿಯಾಗಿದ್ದು, ದರವನ್ನು ಕಡಿಮೆ ನಿಗದಿಪಡಿಸುವಂತೆ ಈ ಹಿಂದೆಯೂ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಕ್ರಮ ಆಗಿಲ್ಲ. ದರ ಕಡಿಮೆಗೊಳಿಸಿದರೆ, ತ್ವರಿತವಾಗಿ ಉದ್ಯಮಗಳು ಸ್ಥಾಪನೆಯಾಗಿ ಉದ್ಯೋಗ ಸೃಷ್ಟಿಯ ಜೊತೆಗೆ ಜಿಲ್ಲೆಯ ಅಭಿವೃದ್ಧಿಯಾಗಿ, ಬಂಡವಾಳ ಹರಿದುಬರಲಿದೆ.

ಆದ್ದರಿಂದ ನಿವೇಶನದ ದರ ಪರಿಷ್ಕರಿಸುವಂತೆ ಸಣ್ಣ ಕೈಗಾರಿಕೆಗಳ ಮಾಲೀಕರ ಸಂಘದ ಕಾರ್ಯದರ್ಶಿ ಹನುಮಂತರಾವ್ ಸೇರಿದಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ದರ ಪರಿಷ್ಕರಣೆ ಕೋರಿ ಸರ್ಕಾರಕ್ಕೆ ಕೂಡಲೆ ಪ್ರಸ್ತಾವನೆ ಸಲ್ಲಿಸುವಂತೆ ಕೆಎಸ್‍ಎಸ್‍ಐಡಿಸಿ ಅಧಿಕಾರಿಗೆ ನಿರ್ದೇಶನ ನೀಡಿದರು.

ಮೂಲಭೂತ ಸೌಕರ್ಯಕ್ಕೆ ಸೂಚನೆ

ಹರಿಹರ ಕೈಗಾರಿಕಾ ಪ್ರದೇಶದಲ್ಲಿ ಸೂಕ್ತ ರಸ್ತೆ, ಚರಂಡಿ ಮುಂತಾದ ಮೂಲಭೂತ ಸೌಕರ್ಯಗಳಿಲ್ಲ. ಮಳೆಗಾಲದಲ್ಲಿ ನೀರು ಕೈಗಾರಿಕಾ ಘಟಕದೊಳಗೆ ನುಗ್ಗಿ, ಉತ್ಪಾದನೆ ಹಾಗೂ ಕಚ್ಚಾ ಸಾಮಗ್ರಿಗಳು ಹಾನಿಗೀಡಾಗುತ್ತಿವೆ. ಮೂಲಭೂತ ಸೌಕರ್ಯ ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ, ಹೀಗಾಗಿ ಇಲ್ಲಿನ ಕಂದಾಯವನ್ನು 5 ವರ್ಷಗಳಿಂದ ಪಾವತಿಸಿಲ್ಲ, ಕಳೆದ ಬಾರಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗಿನ ಸಭೆಯಲ್ಲಿಯೂ ಈ ವಿಷಯ ಪ್ರಸ್ತಾಪಿಸಲಾಗಿತ್ತು.

ಸಚಿವರು ಮೂಲಭೂತ ಸೌಕರ್ಯ ಕಲ್ಪಿಸುವಂತೆ ಸೂಚನೆ ನೀಡಿದ್ದರೂ ಪಾಲನೆಯಾಗಿಲ್ಲ ಎಂದು ಕೈಗಾರಿಕೋದ್ಯಮಿಗಳು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಹರಿಹರ ಕೈಗಾರಿಕಾ ಪ್ರದೇಶಕ್ಕೆ ಚರಂಡಿ, ರಸ್ತೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಂದಾಯ ಬಾಕಿ ಪಾವತಿಗೆ ನಗರಸಭೆಯಿಂದ ದಿನಾಂಕ ನಿಗದಿಪಡಿಸಿದಲ್ಲಿ, ವಸಾಹತು ಸ್ಥಳದಲ್ಲಿಯೇ ಕಂದಾಯ ಪಾವತಿಸಲಾಗುವುದು ಎಂದು ಕೈಗಾರಿಕೆಯ ಮಾಲೀಕರು ಒಪ್ಪಿಗೆ ಸೂಚಿಸಿದರು.

ದಾವಣಗೆರೆಯ ಕರೂರು ಕೈಗಾರಿಕಾ ಪ್ರದೇಶಕ್ಕೆ ಕಳೆದ ನಾಲ್ಕು ತಿಂಗಳಿನಿಂದ ನೀರು ಪೂರೈಕೆ ಸ್ಥಗಿತಗೊಂಡಿದ್ದು, ವಾಷಿಂಗ್ ಯುನಿಟ್, ಕುಡಿಯುವ ನೀರು ಹಾಗೂ ಬಳಕೆಗೂ ನೀರು ಇಲ್ಲದ ಕಾರಣ ಗಾರ್ಮೆಂಟ್ ಉದ್ದಿಮೆ ನಡೆಸುವುದು ದುಸ್ತರವಾಗಿದೆ. ಮಹಾನಗರಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಗಾರ್ಮೆಂಟ್ ಉದ್ಯಮಿಗಳು ಸಭೆಯ ಗಮನಕ್ಕೆ ತಂದರು.

ಜಿಲ್ಲಾಧಿಕಾರಿಗಳು ಸ್ಪಂದಿಸಿ, ಕೆಐಎಡಿಬಿ ಅಧಿಕಾರಿಗಳು ಕೂಡಲೆ ಮಹಾನಗರಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ, ನೀರಿನ ಪೂರೈಕೆಗೆ ತಕ್ಷಣ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.

ಮೆಗಾ ಟೆಕ್ಸ್ ಟೈಲ್ ಪಾರ್ಕ್‍ಗೆ ಶಿಫಾರಸು

ದಾವಣಗೆರೆ ಜಿಲ್ಲೆಯಲ್ಲಿ ಜವಳಿ ಉದ್ಯಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಸಲುವಾಗಿ ನ್ಯಾಷನಲ್ ಟೆಕ್ಸ್‍ಟೈಲ್ ಕಾರ್ಪೋರೇಷನ್‍ಗೆ (ಎನ್‍ಟಿಸಿ) 138 ಎಕರೆ ಭೂಮಿ ನೀಡಲಾಗಿದೆ. ಕೇಂದ್ರ ಸರ್ಕಾರ ದೇಶದಲ್ಲಿ ಈ ವರ್ಷ 7 ಮೆಗಾ ಟೆಕ್ಸ್‍ಟೈಲ್ ಪಾಕ್ ಸ್ಥಾಪನೆಗೆ ನೆರವು ನೀಡಲು ಉದ್ದೇಶಿಸಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಈಗಾಗಲೆ ಎನ್‍ಟಿಸಿ ಬಳಿ 138 ಎಕರೆ ಭೂಮಿ ಇದೆ.

ಈ ಪ್ರದೇಶದಲ್ಲಿ ಮೆಗಾ ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪನೆಗೆ ಉತ್ತಮ ಅವಕಾಶವಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ಮೆಗಾ ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪನೆಗೆ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಿಂದ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.

ಗೃಹಕೈಗಾರಿಕೆಗೆ ನಿರಾಕ್ಷೇಪಣೆ

ಗೃಹ ಆಧಾರಿತ ಜವಳಿ ಉದ್ಯಮವನ್ನು ಜಿಲ್ಲೆಯಲ್ಲಿ ವಸತಿಗೃಹ ಪ್ರದೇಶದಲ್ಲಿ ನಡೆಸಲಾಗುತ್ತಿದ್ದು, ಸಬ್ಸಿಡಿ ಪಡೆಯಲು ಪರಿಸರ ಇಲಾಖೆಯಿಂದ ನಿರಾಕ್ಷೇಪಣೆ ಪತ್ರದ ಅಗತ್ಯವಿದೆ. ಆದರೆ ಪರಿಸರ ಅಧಿಕಾರಿಗಳು ಎನ್‍ಒಸಿ ನೀಡುತ್ತಿಲ್ಲ ಎಂದು ಜವಳಿ ಉದ್ಯಮಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪರಿಸರ ಅಧಿಕಾರಿಗಳು, ಜವಳಿ ಉದ್ಯಮವನ್ನು ಕೈಗಾರಿಕಾ ಪ್ರದೇಶದಲ್ಲಿ ನಡೆಸಬೇಕು, ವಸತಿಗೃಹ ಪ್ರದೇಶದಲ್ಲಿ ಅವಕಾಶವಿಲ್ಲ ಹೀಗಾಗಿ ನೀಡಿಲ್ಲ ಎಂದು ಉತ್ತರಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಗೃಹ ಕೈಗಾರಿಕೆಗಳು ಗೃಹದಲ್ಲಿಯೇ ನಡೆಯುತ್ತವೆ. ದೊಡ್ಡ ಪ್ರಮಾಣದಲ್ಲಿ ಅವರು ಮಾಡುವುದಿಲ್ಲ. ಅವರಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಕೂಡಲೆ ಅಂತಹವರಿಗೆ ನಿರಾಕ್ಷೇಪಣೆ ಪತ್ರ ನೀಡುವಂತೆ ಪರಿಸರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿನಿರ್ದೇಶಕ ಹೆಚ್.ಎಸ್. ಜಯಪ್ರಕಾಶ್ ನಾರಾಯಣ್, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಸುರೇಶ್, ಕೆಐಎಡಿಬಿ ಅಧಿಕಾರಿ ಶ್ರೀಧರ್ ಸೇರಿದಂತೆ ವಿವಿಧ ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್‍ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್‍ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.

ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್‍ಸೆಟ್‍ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ

Published

on

ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.

ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.

ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್‌ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ

Published

on

ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.

ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್‌ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.

ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.

ದೂರುಗಳನ್ನು ಆನ್‌ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.

ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending