Connect with us

ನೆಲದನಿ

ಮಹಾಡ್: ದಲಿತರ ಚಾರಿತ್ರಿಕ ದಂಗೆಯ ಕಥನ

Published

on

  • ನಟರಾಜ್ ಹುಳಿಯಾರ್

ಕಾಲದ ಮುಖ್ಯ ಚಿಂತಕರಲ್ಲೊಬ್ಬರಾದ ಆನಂದ್ ತೇಲ್ ತುಂಬ್ಡೆ ನಾಲ್ಕೈದು ವರ್ಷಗಳಿಂದ ಬರೆಯುತ್ತಿದ್ದ ‘ಮಹಾಡ್: ದಿ ಮೇಕಿಂಗ್ ಆಫ್ ದಿ ಫಸ್ಟ್ ದಲಿತ್ ರಿವೋಲ್ಟ್’ (ಆಕಾರ್ ಬುಕ್ಸ್, ನವದೆಹಲಿ) ಪುಸ್ತಕ ಮೊನ್ನೆ ಬಂದಿದೆ. ‘ಇಂಡಿಯಾದ ದಲಿತ ಚಳವಳಿಯ ಜಾನಪದವೇ ಆಗಿಹೋಗಿರುವ’ 20 ಮಾರ್ಚ್ 1927ರ ಮಹಾಡ್ ಸಮ್ಮೇಳನವನ್ನು ಆನಂದ್ ‘ಜಗತ್ತಿನ ಮೊದಲ ಮುಖ್ಯ ನಾಗರಿಕ ಹಕ್ಕುಗಳ ಹೋರಾಟಗಳಲ್ಲಿ ಒಂದು’ ಎನ್ನುತ್ತಾರೆ.

ಆನಂತರ 25 ಡಿಸೆಂಬರ್ 1927ರಂದು ಬೃಹತ್ ಮಹಾಡ್ ಸತ್ಯಾಗ್ರಹವನ್ನು ಏರ್ಪಡಿಸಿದ ಅಂಬೇಡ್ಕರ್ ಅಲ್ಲಿ ಮನುಸ್ಮೃತಿಯನ್ನು ಸುಟ್ಟರು. ಈ ಎರಡು ಚಾರಿತ್ರಿಕ ಸಮ್ಮೇಳನಗಳನ್ನು ಕುರಿತು ಮರಾಠಿಯಲ್ಲಿರುವ ಅನೇಕ ದಾಖಲೆಗಳು, ವಸಾಹತು ಆಡಳಿತದ ಟಿಪ್ಪಣಿಗಳು, ಅಂಬೇಡ್ಕರರ ‘ಬಹಿಷ್ಕೃತ ಭಾರತ’ ಪತ್ರಿಕೆಯ ಸಂಪಾದಕೀಯಗಳನ್ನು ಆನಂದ್ ಮಂಡಿಸಿದ್ದಾರೆ; ಆಳವಾಗಿ ವಿಶ್ಲೇಷಿಸಿದ್ದಾರೆ.

ಮೊದಲ ಮಹಾಡ್ ಸಮ್ಮೇಳನದ ಮುಂಚೂಣಿ ಸಂಘಟಕರಾದ ರಾಮಚಂದ್ರ ಬಾಬಾಜಿ ಮೋರೆಯವರ ನಿರೂಪಣೆಯೂ ಇಲ್ಲಿದೆ. ಕೊಂಚ ಅನುಕೂಲಸ್ಥ ಮನೆತನದಿಂದ ಬಂದ ಬಾಲಕ ಮೋರೆ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಪ್ರೈಮರಿ ವಿದ್ಯಾಭ್ಯಾಸ ಮುಗಿಸಿ ಸ್ಕಾಲರ್‌ಶಿಪ್ ಪಡೆದಿದ್ದರೂ ಮಹರ್ ಎಂಬ ಕಾರಣಕ್ಕೆ ಅವನನ್ನು ಮಹಾಡ್ ಹೈಸ್ಕೂಲಿಗೆ ಸೇರಿಸಿಕೊಳ್ಳಲಿಲ್ಲ.

ಹನ್ನೊಂದರ ಹರೆಯದ ಮೋರೆ ಈ ಅನ್ಯಾಯದ ವಿರುದ್ಧ ಸರ್ಕಾರಕ್ಕೆ ಬಹಿರಂಗ ಪತ್ರವೊಂದನ್ನು ಬರೆದು ದಿನಪತ್ರಿಕೆಯೊಂದರಲ್ಲಿ ಪ್ರಕಟಿಸಿದ. ಸರ್ಕಾರದ ಅನುದಾನ ಕಳೆದುಕೊಂಡೇವೆಂಬ ಭಯಕ್ಕೆ ಸ್ಕೂಲಿನವರು ಮೋರೆಯನ್ನು ಸೇರಿಸಿಕೊಂಡರೂ ಅವನನ್ನು ತರಗತಿಯ ಹೊರಗೆ ಕೂರಿಸುತ್ತಿದ್ದರು. ಮುಂದೆ ಇಂಥ ಅವಮಾನಗಳ ವಿರುದ್ಧ ಬಂಡೆದ್ದ ತರುಣ ಮೋರೆ ದಲಿತ ಸಮುದಾಯವನ್ನು ಎಚ್ಚರಿಸುತ್ತಾ, ಅವರಿಗೆ ಆಗುತ್ತಿದ್ದ ಅವಮಾನಗಳ ವಿರುದ್ಧ ಹೋರಾಡತೊಡಗಿದರು.

ಆ ಹೊತ್ತಿಗಾಗಲೇ ಲಂಡನ್ ಹಾಗೂ ಕೊಲಂಬಿಯಾದಿಂದ ಎರಡು ಡಾಕ್ಟರೇಟ್ ಹಾಗೂ ಬಾರ್ ಅಟ್ ಲಾ ಪದವಿ ಪಡೆದು ಹಿಂದಿರುಗಿದ್ದ ಅಂಬೇಡ್ಕರ್ ಸಾಧನೆಯ ಬಗ್ಗೆ ಮೋರೆಗೆ ಅಪಾರ ಹೆಮ್ಮೆ ಹಾಗೂ ಗೌರವವಿತ್ತು. ಅಂಬೇಡ್ಕರರನ್ನು ಮಹಾಡ್‌ಗೆ ಕರೆಸಿ ಸನ್ಮಾನ ಮಾಡಿ, ದಲಿತ ಮಕ್ಕಳು ಅವರಂತೆ ಸಾಧನೆ ಮಾಡಲು ಸ್ಫೂರ್ತಿ ತುಂಬಬೇಕು; ದಲಿತರನ್ನು ಹೀನಾಯವಾಗಿ ಕಾಣುವ ಸವರ್ಣೀಯರು ಅಂಬೇಡ್ಕರ್ ಸಾಧನೆ ಕಂಡು ನಾಚಿಕೊಳ್ಳುವಂತೆ ಮಾಡಬೇಕು ಎಂಬ ಆಸೆಯಿಂದ ಅಂಬೇಡ್ಕರರನ್ನು ಕಂಡ ಮೋರೆ ಮಹಾಡಿನಲ್ಲಿ ದಲಿತ ಸಮ್ಮೇಳನದ ಅಧ್ಯಕ್ಷತೆ ವಹಿಸುವಂತೆ ಕೋರುತ್ತಾರೆ.

ತರುಣ ಮೋರೆಯ ಉತ್ಸಾಹ ಕಂಡ ಅಂಬೇಡ್ಕರ್ ಕೆಲವು ತಿಂಗಳ ನಂತರ ಮಹಾಡ್‌ನ ‘ಡಿಪ್ರೆಸ್ಡ್ ಕ್ಲಾಸಸ್ ಕಾನ್ಫರೆನ್ಸ್’ ಸಿದ್ಧತೆಗಳನ್ನು ಪರಿಶೀಲಿಸಲು ತಮ್ಮ ಸಂಗಾತಿಗಳನ್ನು ಕಳಿಸುತ್ತಾರೆ. ಮುಂಬೈಯಲ್ಲಿಯೂ ಈ ಕುರಿತ ಸಭೆಗಳು ನಡೆಯುತ್ತವೆ. ಅಂಬೇಡ್ಕರ್ ಸಮ್ಮೇಳನಾಧ್ಯಕ್ಷರ ಭಾಷಣವನ್ನು ತರುಣ ಸಿ.ಬಿ. ಖೈರ್ಮೋಡೆಯವರಿಗೆ ಹೇಳಿ ಬರೆಸತೊಡಗುತ್ತಾರೆ (ಖೈರ್ಮೋಡೆ ಮುಂದೆ ಮರಾಠಿಯಲ್ಲಿ ಅಂಬೇಡ್ಕರ್ ಜೀವನಚರಿತ್ರೆಯ 12 ಸಂಪುಟಗಳನ್ನು ಬರೆದರು. ಮೊದಲ ಸಂಪುಟವನ್ನು ಅಂಬೇಡ್ಕರ್ ನೋಡಿದ್ದರು).

ಈ ಸಮ್ಮೇಳನ ನಡೆಸಲು ತಕ್ಕ ಜಾಗವೇ ಸಿಗದೆ, ಕೊನೆಗೂ ತಮಾಷಾ ನಾಟಕ ನಡೆಸುವ ಸ್ಥಳವೊಂದು ಸಿಕ್ಕುತ್ತದೆ. 1927ರ ಮಾರ್ಚ್ 19ರ ಹೊತ್ತಿಗೆ ಮಹಾರಾಷ್ಟ್ರದ ಅನೇಕ ದಿಕ್ಕುಗಳಿಂದ ತಮ್ಮ ಜಾತಿಯ ಸಂಕೇತವಾದ ಲಾಠಿ ಹಿಡಿದು ಮಹರ್ ಸಮುದಾಯದವರು ಅಲ್ಲಿ ಸೇರುತ್ತಾರೆ. ಅಂಬೇಡ್ಕರ್ ತಮ್ಮ ಭಾಷಣದಲ್ಲಿ ಆ ಸುತ್ತಲಿನ ಅಸ್ಪೃಶ್ಯ ಸಮುದಾಯದವರು 19ನೆಯ ಶತಮಾನದಲ್ಲಿ ಮಿಲಿಟರಿ ಸೇರಿ ಉತ್ತಮ ಸ್ಥಿತಿಯಲ್ಲಿದ್ದುದನ್ನು, ಅವರ ಮಕ್ಕಳು ಮಿಲಿಟರಿ ಶಾಲೆಗಳಲ್ಲಿ ಕಲಿತು ವಿದ್ಯಾವಂತರಾಗುತ್ತಿದ್ದ ಕಾಲವನ್ನು ನೆನೆಸಿಕೊಳ್ಳುತ್ತಾರೆ.

ನಂತರ ಕೆಲವರ ಚಿತಾವಣೆಯಿಂದಾಗಿ ಮಿಲಿಟರಿ ಸೇವೆಯ ಬಾಗಿಲು ಮುಚ್ಚಿ, ದಲಿತರ ಪ್ರಗತಿ ಕುಸಿಯಿತು; ಆದ್ದರಿಂದ ಸರ್ಕಾರಿ ಸೇವೆಗೆ ತಕ್ಕ ಶಿಕ್ಷಣ ಹಾಗೂ ಕೃಷಿ ಎರಡನ್ನೂ ದಲಿತರು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕೆಂದು ಅಂಬೇಡ್ಕರ್ ಹೇಳುತ್ತಾರೆ. ಆನಂತರ ದಲಿತರನ್ನು ಬೆಂಬಲಿಸಿ ಮಾತಾಡಿದ ಸವರ್ಣೀಯ ಹಿಂದೂ ನಾಯಕ ಶೇಟ್ ‘ಮಹಾಡ್ ಮುನಿಸಿಪಾಲಿಟಿ ಈಚೆಗೆ ಚವ್ದಾರ್ (ಸಿಹಿನೀರು) ಕೆರೆಯ ನೀರನ್ನು ಅಸ್ಪೃಶ್ಯರೂ ಸೇರಿದಂತೆ ಎಲ್ಲರೂ ಬಳಸಿಕೊಳ್ಳಬಹುದು ಎಂಬ ನಿರ್ಣಯ ಮಾಡಿದೆ’ ಎಂಬುದನ್ನು ಸಭೆಯ ಗಮನಕ್ಕೆ ತರುತ್ತಾರೆ.

ಮಾರನೆಯ ದಿನ ಸಮ್ಮೇಳನದ ಬೆಂಬಲಿಗರಾದ ಟಿಪ್ನಿಸ್ ಮನೆಯಲ್ಲಿ ಅಂಬೇಡ್ಕರ್ ಮತ್ತು ಸಂಗಾತಿಗಳು ಈ ಕುರಿತು ಮಾತಾಡುತ್ತಿರುವಾಗ, ಅವತ್ತಿನ ಸಮಾವೇಶದ ನಂತರ ಎಲ್ಲರೂ ಚವ್ದಾರ್ ಕೆರೆಗೆ ಹೋಗಿ ಮುನಿಸಿಪಾಲಿಟಿ ನಿರ್ಣಯವನ್ನು ಜಾರಿಗೆ ತರಲು ತೀರ್ಮಾನಿಸಿದರು. ಸಮಾವೇಶದ ಕೊನೆಯಲ್ಲಿ ಸಂಘಟಕರಾದ ಭಾಯಿಚಿತ್ರೆ ಮುನಿಸಿಪಾಲಿಟಿಯ ನಿರ್ಣಯದಂತೆ ಚವ್ದಾರ್ ಕೆರೆಯ ನೀರನ್ನು ಕುಡಿಯಲು ಸಮ್ಮೇಳನಾಧ್ಯಕ್ಷರೊಂದಿಗೆ ಎಲ್ಲರೂ ಕೆರೆಯತ್ತ ನಡೆಯಬೇಕೆಂದು ಇದ್ದಕ್ಕಿದ್ದಂತೆ ಘೋಷಿಸಿದಾಗ ಸಭೆ ರೋಮಾಂಚನಗೊಂಡಿತು.

ಅಲ್ಲಿದ್ದ ಜನಸಮುದಾಯದ ಜೊತೆ ಚವ್ದಾರ್ ಕೆರೆಯತ್ತ ಹೆಜ್ಜೆ ಹಾಕಿದ ಅಂಬೇಡ್ಕರ್ ಬೊಗಸೆಯಲ್ಲಿ ಕೆರೆಯ ಸಿಹಿನೀರು ಕುಡಿದರು. ಸಾವಿರಾರು ವರ್ಷಗಳಿಂದ ಮಲೆತುಹೋಗಿದ್ದ ಇಂಡಿಯಾದ ಚರಿತ್ರೆ ಇದ್ದಕ್ಕಿದ್ದಂತೆ ಚಲಿಸಿತ್ತು. ಸಮಾವೇಶ ಮುಗಿಸಿ ಊರಿಗೆ ಹೊರಡುವ ಮುನ್ನ ಪ್ರತಿನಿಧಿಗಳು ಊಟ ಮಾಡತೊಡಗಿದರು. ಭದ್ರತೆಯ ಕಾರಣಕ್ಕಾಗಿ ಸರ್ಕಾರಿ ಪ್ರವಾಸಿ ಮಂದಿರದಲ್ಲಿದ್ದ ಅಂಬೇಡ್ಕರ್ ಮತ್ತಿತರರು ಅಲ್ಲಿಗೆ ಮರಳಿದರು.

ಎರಡು ಗಂಟೆಯ ಹೊತ್ತಿಗೆ ವೀರೇಶ್ವರ ದೇವಾಲಯದ ಪೂಜಾರಿ ‘ಅಸ್ಪೃಶ್ಯರು ದೇವಾಲಯ ಪ್ರವೇಶಿಸುತ್ತಿದ್ದಾರೆ; ಕಾಪಾಡಿ, ಕಾಪಾಡಿ’ ಎಂದು ಊರ ತುಂಬಾ ಕೂಗುತ್ತಾ ಓಡತೊಡಗಿದ. ಇನ್ನು ಕೆಲವರು ‘ಮಹರ್ ಜನ ಚವ್ದಾರ್ ಕೆರೆಯ ನೀರನ್ನು ಅಪವಿತ್ರಗೊಳಿಸಿ ನಿಮ್ಮ ದೇವಾಲಯಗಳಿಗೆ ಹೋಗಲು ತಯಾರಾಗುತ್ತಿದ್ದಾರೆ’ ಎಂದು ಕುಣಬಿ ಸಮುದಾಯದವರನ್ನು ರೊಚ್ಚಿಗೆಬ್ಬಿಸಿದರು.

ಸವರ್ಣೀಯರು ಲಾಠಿ ಹಿಡಿದು ವೀರೇಶ್ವರ ದೇವಸ್ಥಾನದ ಬಳಿ ಬಂದು ಸೇರಿದರು. ಈ ನಡುವೆ ತಮ್ಮನ್ನು ಕಂಡ ಪೊಲೀಸ್ ಅಧಿಕಾರಿಗೆ ಅಂಬೇಡ್ಕರ್ ತಮ್ಮವರಿಗೆ ದೇವಾಲಯ ಪ್ರವೇಶಿಸುವ ಇರಾದೆಯೇ ಇಲ್ಲ ಎಂದು ಹೇಳಿದರು. ಅತ್ತ ಊರಿಗೆ ಹೊರಟ ದಲಿತರ ಮೇಲೆ ಸವರ್ಣೀಯ ಗೂಂಡಾಗಳು ಹಲ್ಲೆ ಮಾಡಿದರು. ಸಮ್ಮೇಳನದ ಅಡುಗೆಮನೆಗೆ ನುಗ್ಗಿ ಅಲ್ಲಿದ್ದ ಹೆಂಗಸರು ಮಕ್ಕಳನ್ನೂ ಹೊಡೆದರು. ಗೂಂಡಾಗಳಿಂದ ತಪ್ಪಿಸಿಕೊಂಡು ಓಡುತ್ತಾ ಆಸರೆ ಬೇಡುತ್ತಿದ್ದ ದಲಿತರನ್ನು ಮೇಲುಜಾತಿಯ ಬಹುತೇಕರು ಮನೆಯೊಳಕ್ಕೆ ಬಿಟ್ಟುಕೊಳ್ಳಲಿಲ್ಲ.

ಮುಸಲ್ಮಾನರು ಅವರ ರಕ್ಷಣೆಗೆ ಬರದಿದ್ದರೆ ಅವರ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಿರುತ್ತಿತ್ತು. ಮುಸಲ್ಮಾನರು ಮತ್ತು ಕಾಯಸ್ಥ ಜಾತಿಯವರು ಮಾತ್ರ ಅವರ ನೆರವಿಗೆ ಬಂದರು. ಜನರನ್ನು ಸಂತೈಸುತ್ತಾ, ‘ಏನೇ ಆಗಲಿ ಶಾಂತಿಯಿಂದ ಇರಿ’ ಎಂದು ಅಂಬೇಡ್ಕರ್ ಕೇಳಿಕೊಂಡರು. ಅಲ್ಲಿ ಸೇರಿದ್ದ, ಮಿಲಿಟರಿ ಸೇವೆಯಿಂದ ನಿವೃತ್ತರಾಗಿದ್ದ ದೃಢಕಾಯ ದಲಿತರಿಗೇನಾದರೂ ಅಂಬೇಡ್ಕರ್ ‘ಹೂಂ’ ಎಂದಿದ್ದರೆ ಕತೆಯೇ ಬೇರೆಯಾಗುತ್ತಿತ್ತು ಎಂದು ತೇಳ್‌ತುಂಬ್ಡೆ ಬರೆಯುತ್ತಾರೆ. ಆನಂತರ ಕೆರೆಯ ಸಿಹಿನೀರನ್ನು ಪುರೋಹಿತರು ಸಗಣಿ, ಗಂಜಲ ಹಾಕಿ ‘ಶುದ್ಧಿ’ ಮಾಡಿದ ಕತೆಯೂ ಕೆಲವು ಪುಸ್ತಕಗಳಲ್ಲಿದೆ.

ಮಹಾಡ್‌ನಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ ಕೆಲವರಿಗೆ ನಂತರ ಶಿಕ್ಷೆಯಾಯಿತು. ಅದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಪೂರ್ಣ ಪ್ರಮಾಣದ ಮಹಾಡ್ ಸತ್ಯಾಗ್ರಹಕ್ಕಾಗಿ ಅಂಬೇಡ್ಕರ್ ವ್ಯಾಪಕ ಸಿದ್ಧತೆ ಶುರು ಮಾಡಿದರು. ಇದೆಲ್ಲದರ ಮಧ್ಯೆ, ತಾವೂ ಮಹಾಡ್ ಸತ್ಯಾಗ್ರಹವನ್ನು ಬೆಂಬಲಿಸುತ್ತೇವೆಂದು ಬಂದ ದಲಿತ ಸಾಧುಗಳು ಅಂಬೇಡ್ಕರ್ ‘ಅರೆ ರುದ್ರಾವತಾರಿ’ ಎಂದು ಪ್ರತಿಪಾದಿಸತೊಡಗಿದರು! ಇದನ್ನು ಕೇಳಿ ಮೊದಲು ನಕ್ಕ ಅಂಬೇಡ್ಕರ್, ನಂತರ ಗಂಭೀರವಾಗಿ ಹೇಳಿದರು: ‘ಇಂಥ ಕಲ್ಪನೆಗಳಿಂದಲೇ ಬ್ರಾಹ್ಮಣರು ಸಮಾಜವನ್ನು ನಾಶ ಮಾಡಿರುವುದು. ಇಂಥದ್ದನ್ನೆಲ್ಲಾ ಎಂದೂ ಸಮುದಾಯದಲ್ಲಿ ಹಬ್ಬಿಸಬಾರದು’.

ಈ ಸಮ್ಮೇಳನದ ಸಿದ್ಧತೆಗಳು ನಡೆಯುತ್ತಿರುವಾಗಲೇ ಮಹಾಡ್ ಮುನಿಸಿಪಾಲಿಟಿ ಚವ್ದಾರ್ ಕೆರೆಯ ನೀರನ್ನು ಎಲ್ಲರೂ ಬಳಸಬಹುದು ಎಂಬ ನಿರ್ಣಯವನ್ನು ವಾಪಸ್ ತೆಗೆದುಕೊಂಡಿತು. ದಲಿತರು ಈ ಕೆರೆಯ ನೀರನ್ನು ಬಳಸಬಾರದೆಂದು ಸವರ್ಣೀಯರು ಕೋರ್ಟಿನಿಂದ ತಡೆಯಾಜ್ಞೆ ತಂದರು; ಸಮ್ಮೇಳನಕ್ಕೆ ಜಾಗವೇ ಸಿಗದಂತೆ ಮಾಡಿದ್ದೇವೆಂದು ಗುಜಾರ್ ಬ್ರಾಹ್ಮಣರು ಹಿಗ್ಗಿನಲ್ಲಿದ್ದರು.

ಆದರೆ ಫತೇಹ್ ಖಾನ್ ಎಂಬಾತ ಸಂತೋಷದಿಂದ ಸಮ್ಮೇಳನಕ್ಕೆ ಜಾಗ ಕೊಟ್ಟ. ಗುಜಾರ್ ಬ್ರಾಹ್ಮಣರ ಒತ್ತಡಕ್ಕೆ ಫತೇಹ್ ಖಾನ್ ಮಣಿಯಲಿಲ್ಲ; ಅವನ ಹೊಲದಲ್ಲಿ ಹಾಕಿದ ದೊಡ್ಡ ಪೆಂಡಾಲಿನಲ್ಲಿ, 25 ಡಿಸೆಂಬರ್ 1927ರಂದು ಹತ್ತು ಸಾವಿರ ಪ್ರತಿನಿಧಿಗಳ ಸತ್ಯಾಗ್ರಹ ಸಮ್ಮೇಳನ ಶುರುವಾಯಿತು. ಕೆಲವು ದಲಿತೇತರ ನಾಯಕರೂ ಸಮ್ಮೇಳನದಲ್ಲಿ ಮಾತಾಡಿದರು.

ಅಂಬೇಡ್ಕರರ ಚಾರಿತ್ರಿಕ ಭಾಷಣದ ನಂತರ ಜಾತಿಪದ್ಧತಿಯ ಬೇರುಗಳಿಗೆ ಮಾರಣಾಂತಿಕ ಹೊಡೆತ ಕೊಡಲು ಮನುಸ್ಮೃತಿಯನ್ನು ಸುಡಲಾಯಿತು. ಚವ್ದಾರ್ ಕೆರೆಯ ನೀರನ್ನು ಬಳಸುವ ವಿಚಾರದಲ್ಲಿ ಮುಂದೊಮ್ಮೆ ಕಾನೂನಿನ ಸಮರವನ್ನು ಗೆಲ್ಲುವ ಛಲದಿಂದ ಅಂಬೇಡ್ಕರ್ ಸಾವಿರಾರು ಅನುಯಾಯಿಗಳೊಡನೆ ಮಹಾಡಿನ ಬೀದಿಗಳಲ್ಲಿ ಮೆರವಣಿಗೆ ಹೊರಟು ನಾಲ್ಕೂ ದಿಕ್ಕುಗಳಿಂದ ಕೆರೆಯ ಸುತ್ತ ಸೇರಿ ಕಾರ್ಯಕ್ರಮ ಮುಗಿಸಿದರು.

ಮರುದಿನ ಚಮ್ಮಾರರ ಸಭೆಗಳನ್ನು ಉದ್ದೇಶಿಸಿ ಅಂಬೇಡ್ಕರ್ ಮಾತಾಡಿದರು. ಈ ನಡುವೆ ಅಕ್ಕಪಕ್ಕದ ಊರುಗಳಿಂದ ಆತಂಕಗೊಂಡು ಮಹಾಡಿಗೆ ಓಡಿ ಬಂದ ಹೆಂಗಸರು ಬಾಬಾಸಾಹೇಬರನ್ನು ನೋಡಿ ನೆಮ್ಮದಿಗೊಂಡರು; ಕಾರಣ, ಅಂಬೇಡ್ಕರರ ಹತ್ಯೆಯಾಗಿದೆಯೆಂದು ಪುಕಾರು ಹಬ್ಬಿತ್ತು. ಮಹರ್ ಮಹಿಳೆಯರು ಬಟ್ಟೆ ತೊಡುವ ಕ್ರಮದಲ್ಲಿ ಇದ್ದ ಜಾತಿದೈನ್ಯತೆಯನ್ನು ಮೊದಲು ಬಿಡಬೇಕೆಂದು ಅಂಬೇಡ್ಕರ್ ಹೇಳಿದರು. ಸಮ್ಮೇಳನದ ನಂತರ ಊರಿಗೆ ಹೊರಟ ಮಹಿಳೆಯರು ತಮ್ಮ ಉಡುಪಿನ ಶೈಲಿಯನ್ನು ಬದಲಿಸಿಕೊಂಡಿದ್ದರು.

ಮಹಾಡ್ ಮುನಿಸಿಪಾಲಿಟಿಯ ಸ್ವೀಪರುಗಳು ತಮ್ಮ ಕೆಲಸಕ್ಕೆ ರಾಜಿನಾಮೆ ಕೊಟ್ಟಿದ್ದರು. ಮಹಾಡ್ ಸಮ್ಮೇಳನಗಳ ಅನುಭವ ಬಾಬಾಸಾಹೇಬರಿಗೆ ದಲಿತರ ಸಂಘಟನೆ-ಹೋರಾಟದ ಸಾಧ್ಯತೆಗಳ ಬಗ್ಗೆ ಅಪಾರ ಭರವಸೆ ಮೂಡಿಸಿತು. ಮಹಾಡ್ ತೋರಿದ ಹಕ್ಕಿನ ಪ್ರತಿಪಾದನೆಯ ಅರ್ಥಪೂರ್ಣತೆಯನ್ನು ಇವತ್ತಿಗೂ ದಲಿತ ಸಂಘಟನೆಗಳು ನೆನೆಯುತ್ತವೆ. ಅಂಬೇಡ್ಕರ್ ಬದುಕಿರುವವರೆಗೂ ಮನುಸ್ಮೃತಿ ಸುಟ್ಟ ದಿನವನ್ನು ಆಚರಿಸುತ್ತಿದ್ದರು.

ಮಹಾರಾಷ್ಟ್ರ ಹಾಗೂ ಇನ್ನಿತರ ಕಡೆಗಳಲ್ಲಿ ಈ ಆಚರಣೆ ಇವತ್ತಿಗೂ ಮುಂದುವರಿದಿದೆ. ಸ್ವಾತಂತ್ರ್ಯಾನಂತರ ಮಹಾಡ್ ಹೋರಾಟ ಚರಿತ್ರೆಗೆ ಸಂದಿದೆಯೆಂದು ಭಾವಿಸಲಾಗದು; ಕಳೆದ ವರ್ಷವಷ್ಟೇ ಚೆನ್ನರಾಯಪಟ್ಟಣದ ಕುರುವಂಕದಲ್ಲಿ ಕಲ್ಯಾಣಿಯೊಂದರ ನೀರು ಬಳಸಲು ದಲಿತರು ಹೋರಾಡಬೇಕಾಗಿ ಬಂದಿತ್ತು. ಆದ್ದರಿಂದಲೇ ಮಹಾಡ್ ಇವತ್ತಿಗೂ ದಲಿತರ ನಿರಂತರ ಹೋರಾಟದ ದಿಟ್ಟ ಸಂಕೇತದಂತಿದೆ.

ಕೊನೆ ಟಿಪ್ಪಣಿ: ಸಿಹಿನೀರಿಗಾಗಿ ಸುದೀರ್ಘ ಹೋರಾಟ
‘ಚವ್ದಾರ್ ಕೆರೆ ಸಾರ್ವಜನಿಕ ಕೆರೆಯಲ್ಲ; ಅದು ‘ಚೌಧರಿ’ ಎಂಬುವವರು ಕಟ್ಟಿಸಿದ ಖಾಸಗಿ ಕೆರೆ’ ಎಂದು ಸವರ್ಣೀಯರು ಸುಳ್ಳುವಾದ ಹೂಡಿ, ದಲಿತರು ಕೆರೆಯ ನೀರನ್ನು ಮುಟ್ಟದಂತೆ ಕೋರ್ಟಿನಿಂದ ತಡೆಯಾಜ್ಞೆತಂದಿದ್ದರು.

‘ಚವ್ದಾರ್ ಕೆರೆಯ ನೀರನ್ನು ಮುಟ್ಟಿ ನಾನು ಜೈಲಿಗೆ ಹೋಗಲು ಸಿದ್ಧ; ನಿಮ್ಮಲ್ಲಿ ಎಷ್ಟು ಜನ ಜೈಲಿಗೆ ಹೋಗಲು ಸಿದ್ಧರಿದ್ದೀರಿ, ಹೆಸರು ಕೊಡಿ’ ಎಂದು ಅಂಬೇಡ್ಕರ್ ಸತ್ಯಾಗ್ರಹ ಸಮ್ಮೇಳನದಲ್ಲಿ ಕೇಳಿದರು; ಹೆಸರು ಬರೆಸಿದವರ ಸಂಖ್ಯೆ ಮೂರು ಸಾವಿರ ದಾಟತೊಡಗಿತು; ಸಮ್ಮೇಳನದಲ್ಲಿದ್ದ ಬಹುತೇಕರು ಜೈಲಿಗೆ ಹೋಗಲು ಸಿದ್ಧರಿದ್ದರು.

ಸತ್ಯಾಗ್ರಹಕ್ಕೆ ಹೊರಡುವ ಕೆಲವು ಮಹರ್ ಗಂಡಸರು ತಮ್ಮ ಹೆಂಡತಿಯರ ಕುಂಕುಮವನ್ನು ಅಳಿಸಿ ಯುದ್ಧಭೂಮಿಗೆ ಹೊರಡುವಂತೆ ಮಹಾಡಿಗೆ ಬಂದಿದ್ದರು. ಅವರು ಹಿಂದೆ ಸರಿವ ಪ್ರಶ್ನೆಯೇ ಇರಲಿಲ್ಲ. ಮುಂದೆ ಕೋರ್ಟಿನಿಂದ ಕೋರ್ಟಿಗೆ ದಾಟಿದ ಈ ಕೇಸನ್ನು ಅಂಬೇಡ್ಕರ್ ಗೆದ್ದದ್ದು 1937ರಲ್ಲಿ. ಆದರೆ ಅಂಬೇಡ್ಕರ್ ಅಷ್ಟುಹೊತ್ತಿಗಾಗಲೇ ದಲಿತರನ್ನು ಬಹುದೂರ ಕರೆದೊಯ್ದಿದ್ದರು. ಜೊತೆಗೆ, ದಲಿತರ ಬಿಡುಗಡೆಗೆ ಕಾನೂನು ಹಾಗೂ ಹೋರಾಟಗಳೆರಡೂ ಮುಖ್ಯವೆಂಬುದನ್ನೂ ತೋರಿಸಿದ್ದರು.

ಕೃಪೆ: –ಪ್ರಜಾವಾಣಿಯ ‘ಕನ್ನಡಿ’ ಅಂಕಣದಲ್ಲಿ ಪ್ರಕಟಗೊಂಡಿದ್ದ ಬರಹ (ಮಾರ್ಚ್ 16, 2016)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ

ಮಾಗಿದ ಕಾಲದಲ್ಲಿ ಸಾಹಿತ್ಯ ಕೃಷಿಗೆ ನಿಂತ ಪ್ರೊ.ಜಿ.ಪರಮೇಶ್ವರಪ್ಪ ಅವರ ಸಾಹಿತ್ಯ ಪಯಣ

Published

on

  • ಡಾ.ಕೆ.ಎ.ಓಬಳೇಶ್

ಭಾರತದಂತಹ ವಿಶಿಷ್ಟ ಸಾಂಸ್ಕೃತಿಕ ನಾಡಿನಲ್ಲಿ ವಿಭಿನ್ನ ಪ್ರಕಾರದ ಕಲೆಗಳು ಜನ್ಮತಳೆದಿವೆ. ಈ ಎಲ್ಲಾ ವಿಭಿನ್ನ ಕಲಾ ಪ್ರಕಾರಗಳು ಈ ನೆಲದ ಬಹುತ್ವವನ್ನು ಎತ್ತಿಹಿಡಿಯುವ ಪ್ರಯತ್ನ ಮಾಡಿವೆ. ಇಂತಹ ಬಹುತ್ವವೇ ಭಾರತದ ಸೌಹಾರ್ದತೆಗೆ ಸಾಕ್ಷಿಯಾಗಿರುವುದು ಈ ನೆಲದ ಹೆಮ್ಮೆಯ ಪ್ರತೀಕ.

ಇದಕ್ಕೆ ಪೂರಕವೆಂಬಂತೆ ಕನ್ನಡ ನಾಡಿನಲ್ಲಿ ಹಲವಾರು ಸಾಹಿತಿಗಳು ಈ ನೆಲದ ವಿವಿಧತೆಯನ್ನು ಅನಾವರಣಗೊಳಿಸುವ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸುವ ಕಾಯಕದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಇಂತಹ ದೇಶಿ ಸೊಗಡನ್ನು ಸಾಹಿತ್ಯದ ಮೂಲಕ ಸೆರೆಹಿಡಿಯುತ್ತ ಬಂದಿರುವ ಸಾಹಿತಿಗಳಲ್ಲಿ ಪ್ರೊ.ಜಿ.ಪರಮೇಶ್ವರಪ್ಪನವರು ಒಬ್ಬರಾಗಿದ್ದಾರೆ.

ಮಧ್ಯ ಕರ್ನಾಟಕದ ಐತಿಹಾಸಿಕ ನಗರವಾಗಿರುವ ಚಿತ್ರದುರ್ಗ ಪ್ರಾಂತ್ಯವು ಕರ್ನಾಟಕದ ಸಾಂಸ್ಕೃತಿಕ ಹಿರಿಮೆ ಮತ್ತು ಗರಿಮೆಗೆ ತನ್ನದೇ ಆದ ವಿಶಿಷ್ಟ ಕಾಣಿಕೆಯನ್ನು ನೀಡಿರುವುದು ಚಾರಿತ್ರಿಕ ಸತ್ಯ. ಇಂತಹ ಸಾಂಸ್ಕೃತಿಕ ಶ್ರೀಮಂತ ನೆಲದಲ್ಲಿ ಹುಟ್ಟಿ ಬೆಳೆದು, ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ಅಂತರ್ಗತವಾಗಿರುವ ಸಾಹಿತ್ಯದ ದೇಶೀಯತೆ ಹಾಗೂ ಅದರ ವೈಶಿಷ್ಟ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಾಹಿತ್ಯ ಚಟುವಟಿಕೆಗೆ ತೊಡಗಿಸಿಕೊಂಡ ಜಿ.ಪರಮೇಶ್ವರಪ್ಪನವರ ಬದುಕಿನ ಸುತ್ತ ಒಂದು ಕೀರುನೋಟ ಬೀರುವುದು ಪ್ರಸ್ತುತ ಲೇಖನದ ಆಶಯವಾಗಿದೆ.

ಶ್ರೀಯುತ ಜಿ.ಪರಮೇಶ್ವರಪ್ಪನವರು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು ಹರ್ತಿಕೋಟೆ ಸಮೀಪದ ಕಪಿಲೆಹಟ್ಟಿ ಗ್ರಾಮದಲ್ಲಿ ದಿನಾಂಕ 15 ನವಂಬರ್1950ರಲ್ಲಿ ಜಡಿಯಪ್ಪ ಹಾಗೂ ಸಕ್ರಮ್ಮ ದಂಪತಿಗಳ ತೃತೀಯ ಪುತ್ರನಾಗಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹರ್ತಿಕೋಟೆಯಲ್ಲಿ, ಪ್ರೌಢ ಶಿಕ್ಷಣವನ್ನು ಐಮಂಗಳದಲ್ಲಿ, ಪದವಿಪೂರ್ವ ಶಿಕ್ಷಣವನ್ನು ಚಿತ್ರದುರ್ಗದಲ್ಲಿ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಮೈಸೂರಿನಲ್ಲಿ ಪಡೆದರು.

ಕನ್ನಡ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ನಂತರದ ದಿನಮಾನಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಾದ ಬೀದರ್, ಅಥಣಿ, ಮಾಯಕೊಂಡ, ಚಳ್ಳಕೆರೆ ಹಾಗೂ ಚಿತ್ರದುರ್ಗದಲ್ಲಿ 1980 ರಿಂದ 2020 ರವರೆಗೆ ಸುಮಾರು 30 ವರ್ಷಗಳ ಕಾಲ ಬೋಧಕರಾಗಿ ತಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ.

ಬಾಲ್ಯದ ದಿನಗಳಿಂದಲೂ ಗ್ರಾಮೀಣ ಬದುಕಿನೊಂದಿಗೆ ನಂಟನ್ನು ಹೊಂದಿದ್ದ ಇವರಿಗೆ ಜಾನಪದ ಕಲೆ ಹಾಗೂ ಸಾಹಿತ್ಯದೊಂದಿಗೆ ಬೆರೆತು ಹೋಗಿದ್ದರು. ಹಾಗೆಯೇ ಸಾಹಿತ್ಯದ ವಿದ್ಯಾರ್ಥಿಯಾದ ಇವರಿಗೆ ಕನ್ನಡ ಸಾಹಿತ್ಯ ಹಾಗೂ ಹಲವಾರು ಕನ್ನಡ ಸಾಹಿತಿಗಳಿಗೆ ಮಾರುಹೋಗಿದ್ದರು. ಆದರೆ ಸಾಹಿತ್ಯದ ಬರವಣಿಗೆಯ ಬಗ್ಗೆ ಇವರಿಗೆ ಒಂದಷ್ಟು ಭಯವನ್ನು ಕಟ್ಟಿಕೊಂಡ ಕಾರಣ ತಮ್ಮ ಬೋಧನಾ ಅವಧಿಯುದ್ದಕ್ಕೂ ಬರವಣಿಗೆಯಿಂದ ದೂರವೇ ಉಳಿದಿದ್ದರು.

ಶ್ರೀಯುತರು ಬರವಣಿಗೆಯಿಂದ ದೂರ ಉಳಿದಿದ್ದರೂ ಬೋಧನೆಯೊಂದಿಗೆ ಸಾಹಿತ್ಯ ಪ್ರೀತಿಯನ್ನು ಸದಾ ಕಾಪಾಡಿಕೊಂಡಿದ್ದರು. ಪಂಪ, ರನ್ನ, ಕುಮಾರವ್ಯಾಸರಂತಹ ಪ್ರಾಚೀನ ಕವಿಗಳು ಹಾಗೆಯೇ ಕುವೆಂಪು, ಬೇಂದ್ರೆ, ಶಿವರಾಮ ಕಾರಂತ್, ಸಿ.ಪಿ.ಕೃಷ್ಣಮೂರ್ತಿ, ಜಿ.ಎಚ್.ನಾಯಕರಂತಹ ಆಧುನಿಕ ಸಾಹಿತಿಗಳ ಬರಹಗಳು ಇವರ ಮೇಲೆ ಸಾಕಷ್ಟು ಪ್ರೇರಣೆ ಮತ್ತು ಪ್ರಭಾವವನ್ನು ಬೀರಿದ್ದವು.

ಇಂತಹ ಸಾಹಿತ್ಯ ಪರಂಪರೆಯಿಂದ ಸಾಹಿತ್ಯಾಭಿರುಚಿಯನ್ನು ಮೈಗೂಡಿಸಿಕೊಂಡಿರುವ ಜಿ.ಪರಮೇಶ್ವರಪ್ಪನವರು ತಮ್ಮ ವಿದ್ಯಾರ್ಥಿಗಳಿಗೂ ಸಾಹಿತ್ಯಾಸಕ್ತಿಯನ್ನು ಮೂಡಿರುವ ಕಾಯಕದಲ್ಲಿ ತಮ್ಮ ಬೋಧನಾ ವೃತ್ತಿಯನ್ನು ಮುನ್ನಡೆಸಿಕೊಂಡು ಬಂದವರು. ಹಾಗೆಯೇ ಹಳಗನ್ನಡ, ವ್ಯಾಕರಣ, ಛಂದಸ್ಸಿನಲ್ಲಿ ವಿಶೇಷವಾದ ಪರಿಣಿತಿಯನ್ನು ಹೊಂದಿದ್ದ ಇವರು, ತಮ್ಮ ವೃತ್ತಿ ಬದುಕಿನಲ್ಲಿ ಹೆಚ್ಚು ಬೋಧನೆ ಮಾಡಿ, ಇವುಗಳನ್ನು ಕರಗತ ಮಾಡಿಕೊಂಡಿದ್ದರು. ಹೀಗಾಗಿ ಕನ್ನಡ ಸಾಹಿತ್ಯದ ಛಂದೋ ಪ್ರಕಾರದ ತಾಳ, ಲಯವನ್ನು ಸ್ಪಷ್ಟವಾಗಿ ಅರಿತವರಾಗಿದ್ದರು. ಇದು ಮುಂದೆ ಶ್ರೀಯುತರ ಸಾಹಿತ್ಯ ಚಟುವಟಿಕೆಗೆ ವರವಾಗಿ ಪರಿಣಮಿಸಿತು.

ಶ್ರೀಯುತ ಜಿ.ಪರಮೇಶ್ವರಪ್ಪನವರು ತಮ್ಮ ವೃತ್ತಿ ಬದುಕಿನ ಅವಧಿಯಲ್ಲಿ ಸಾಹಿತ್ಯ ರಚನೆಗೆ ತೊಡಗಿದ್ದು ತೀರಾ ವಿರಳ. ಕೆಲವು ಸ್ನೇಹಿತರ ಒತ್ತಡ, ಸಭೆ ಸಮಾರಂಭಗಳಲ್ಲಿ ಉಪನ್ಯಾಸ ನೀಡುವುದಕ್ಕಾಗಿ ಮಾಡಿಕೊಂಡ ಟಿಪ್ಪಣಿಗಳು ಹಾಗೂ ವಿಶೇಷ ದಿನಗಳಿಗಾಗಿ ಪತ್ರಿಕೆಗಳಿಗೆ ಕೆಲವೊಂದು ಲೇಖನಗಳನ್ನು ಬರೆದಿರುವುದನ್ನು ಬಿಟ್ಟರೆ ಸಾಹಿತ್ಯದ ಯಾವುದೇ ಪ್ರಕಾರದಲ್ಲೂ ತಮ್ಮನ್ನು ಗುರುತಿಸಿಕೊಂಡವರಲ್ಲ. ಈ ಎಲ್ಲಾ ಲೇಖನಗಳನ್ನು ಸಂಗ್ರಹಿಸಿ ‘ಚದುರಿದ ಚಿಂತನೆಗಳು’ ಎಂಬ ಕೃತಿಯನ್ನು 2020ರಲ್ಲಿ ಹೊರತಂದಿದ್ದಾರೆ.

ಪ್ರಸ್ತುತ ಕೃತಿಯಲ್ಲಿ ಜಾನಪದ, ಹಳಗನ್ನಡ ಸಾಹಿತ್ಯ, ವಚನಸಾಹಿತ್ಯ ಹಾಗೂ ವೈಚಾರಿಕ ಚಿಂತನೆಗಳ ಮೇಲೆ ಬೆಳಕು ಚೆಲ್ಲಿರುವುದು ಕಂಡುಬರುತ್ತದೆ. ಈ ಕೃತಿಯು ಅವರ ಓದಿನ ವಿಸ್ತಾರ ಹಾಗೂ ಅವರಿಗಿದ್ದ ಸಾಹಿತ್ಯದ ತುಡಿತವನ್ನು ಅನಾವರಣಗೊಳಿಸುತ್ತದೆ. ಆದರೆ ಪರಮೇಶ್ವರಪ್ಪನವರಿಗೆ ಸವಾಲಾಗಿ ಪರಿಣಮಿಸಿದ್ದು ಮಾತ್ರ ಶಾಸ್ತçಬದ್ಧವಾದ ಸಾಹಿತ್ಯ ರಚನೆಗೆ ಮುಂದಾದ ಸಂದರ್ಭ. ತಮ್ಮ ಸುತ್ತಮುತ್ತಲಿನ ಸಾಂಸ್ಕೃತಿಕ ಪರಿಸರದಲ್ಲಿ ತಲಾತಲಾಂತರದಿಂದ ಬಾಯಿಂದ ಬಾಯಿಗೆ ಹರಿದು ಬಂದು, ಜನಜೀವನದಲ್ಲಿ ಬೆರೆತು ಹೋಗಿದ್ದ ಜಾನಪದೀಯ ಮಹಾಕಾವ್ಯವಾದ ‘ಪಾರ್ಥಲಿಂಗ ಚಾರಿತಾಮೃತ’ ಎಂಬ ಕೃತಿಯನ್ನು ಸಂಪಾದಿಸುವುದಕ್ಕೆ ತೊಡಗಿಸಿಕೊಂಡರು.

ಈ ಸಂದರ್ಭದಲ್ಲಿ ಗದ್ಯ ಪ್ರಕಾರದಲ್ಲಿಯೇ ಸಾಹಿತ್ಯ ರಚನೆಗೆ ಮುಂದಾದರು. ಆಗ ಅಲ್ಲಿನ ವಕ್ತೃ ಹಾಗೂ ಪಾರ್ಥಲಿಂಗ ಭಕ್ತರ ಅಭಿಲಾಷೆಯು ಇದನ್ನು ಭಾಮಿನಿ ಷಟ್ಟದಿಯಲ್ಲಿಯೇ ರಚಿಸಬೇಕು ಎಂಬುದಾಗಿತ್ತು. ಇದಕ್ಕೆ ಕಾರಣ ಗದ್ಯದಲ್ಲಿ ಪಾರ್ಥಲಿಂಗನ ಕಾವ್ಯವನ್ನು ಬರೆದರೆ ಯಾರೋ ಓದು ಬರಹ ಕಲಿತವರು ಓದಿ ಸುಮ್ಮನಾಗುತ್ತಾರೆ. ಆದರೆ ರಾಗ, ತಾಳ, ಲಯಬದ್ಧವಾದ ಭಾಮಿನಿ ಛಂದೋ ಪ್ರಕಾರದಲ್ಲಿ ರಚಿಸಿದರೆ ಯಾರೋ ಒಬ್ಬ ಹಾಡಿದರೆ ಅಕ್ಷರ ಬಲ್ಲವರು ಹಾಗೂ ಅಕ್ಷರ ವಂಚಿತರೆಲ್ಲ ಆಸಕ್ತಿಯಿಂದ ಕುಳಿತು ಕೇಳಿ ಆಸ್ವಾದಿಸುತ್ತಾರೆ ಎಂಬುದು ಅವರ ನಿಲುವಾಗಿತ್ತು.

ಆಗ ಕುಮಾರವ್ಯಾಸ ಮಾಡಿದ ಅಂತಹ ಸಾಧನೆಯು ನನ್ನಿಂದ ಸಾಧ್ಯವೇ ಎಂಬ ಅನುಮಾನ ಲೇಖಕರಲ್ಲಿ ಮೂಡಿತು. ಆಗ ಹಳಗನ್ನಡದ ಜನಪ್ರಿಯ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿರುವ ಷಟ್ಪದಿಯ ಭಾಮಿನಿ ಛಂದೋ ಪ್ರಕಾರದಲ್ಲಿಯೇ ಈ ಕಾವ್ಯವನ್ನು ರಚಿಸಬೇಕು ಎಂದು ಮುಂದಾದ ಸಂದರ್ಭದಲ್ಲಿ ಇದೊಂದು ಸವಾಲಿನ ಕೆಲಸವಾಗಿ ಪರಿಣಮಿಸಿತು. ಸುಮಾರು ಆರು ತಿಂಗಳ ಕಾಲ ನಿರಂತರವಾದ ಪ್ರಯತ್ನ ಮಾಡುತ್ತ ಬರೆಯುವ, ಹರಿಯುವ ಕಾಯಕದಲ್ಲಿ ನಿರತರಾದರು.

ಆಗ ಇದು ಭಾಮಿನಿ ಷಟ್ಪದಿಯ ಪಾಠ ಮತ್ತು ಪ್ರವಚನದಷ್ಟು ಸುಲಭವಾಗಿ ಛಂದೋ ಪ್ರಕಾರದ ಸಾಹಿತ್ಯ ರಚನೆ ಮಾಡಲಾಗದು ಎಂಬ ಅನುಭವವಾಯಿತು. ಈ ಯೋಜನೆಯಿಂದ ದೂರ ಉಳಿದು, ಇದು ನನ್ನಿಂದ ಸಾಧ್ಯವಾಗದ ಕೆಲಸವೆಂದು ಕೈಚೆಲ್ಲಿ ಕುಳಿತರು. ಇಂತಹ ಸಂದರ್ಭದಲ್ಲಿ ಪಾಥಲಿಂಗ ದೈವದ ಭಕ್ತರು ಹಾಗೂ ಕಾವ್ಯವನ್ನು ಹಾಡುವ ವಕ್ತೃಗಳು ಇದು ನಿಮ್ಮಿಂದ ಮಾತ್ರ ಸಾಧ್ಯ. ಪಾರ್ಥಲಿಂದ ದೈವವು ಕೂಡ ಅದು ನಿಮ್ಮಿಂದ ಮಾತ್ರವೇ ಸಾಧ್ಯವಾಗುವ ಕೆಲಸವೆಂದು ಅಪ್ಪಣೆ ನೀಡಿದೆ ಎಂದು ಒತ್ತಡ ಹಾಕಿದಾಗ, ಅವರ ದೈವಕೇಂದ್ರಿತವಾದ ನಂಬಿಕೆಗೆ ಕಟ್ಟುಬಿದ್ದು ಮತ್ತೇ ಛಂದೋಬದ್ಧ ಸಾಹಿತ್ಯ ಪ್ರಯೋಗದಲ್ಲಿ ತಮ್ಮನ್ನು ದುಡಿಮೆಗಚ್ಚಿದರು.

ಪಾರ್ಥಲಿಂಗನ ಭಕ್ತಾಧಿಗಳ ಒತ್ತಡ ಹಾಗೂ ಅವರ ಪ್ರೀತಿಯ ಹಠಕ್ಕೆ ಮಣಿದು, ಕವಿ ಕುಮಾರವ್ಯಾಸ ಹರಿ ಸ್ಮರಣೆಯಿಂದ ಕಾವ್ಯ ರಚನೆಗೆ ಮುಂದಾದಂತೆ ಶ್ರೀಯುತ ಜಿ.ಪರಮೇಶ್ವರಪ್ಪನವರು ಪಾರ್ಥಲಿಂಗನ ಸ್ಮರಣೆಯೊಂದಿಗೆ ಕಾವ್ಯಾಭ್ಯಾಸದ ಗರಡಿಯಲ್ಲಿ ಗಟ್ಟಿಗರಾಗಿ ನಿಂತರು. ಹೀಗೆ ಸಂಪ್ರದಾಯ ಬದ್ಧವಾಗಿ ಮೂಡಿ ಬಂದ ಛಂದೋ ಪ್ರಕಾರದಲ್ಲಿ ಸಾಹಿತ್ಯ ರಚನೆಗೆ ಮುಂದಾದ ಶ್ರೀಯುತರು ಪ್ರಸ್ತುತ ಕಥೆ ರಚನೆಯ ಕುರಿತಾದ ತಮ್ಮ ನಿಲುವನ್ನು ಕುಮಾರವ್ಯಾಸನಂತೆಯೇ ಹಂಚಿಕೊಂಡಿದ್ದಾರೆ;

ಬಾಯಿ ಮಾತಲಿ ಬಸವ ಹೇಳಿದ ತಾಯಿ ಭೂಮಿಯ ಜನರ ಕಿವಿಯಲಿ ಮಾಯೆಯಿಲ್ಲದ ನಿಗಮ ಗೋಚರನಾ ಪುರಾಣವನು ದಾಯಕನೊಲಿದು ಬರೆಸಿದ ಜನಪದೀಯರಾಡುವ ಪಾರ್ಥಕಥೆಯನು ಶಾಯಿಯಿಂದಲಿ ಕೃತಿ ರಚಿಸಿದೆನು ವಿಮಲ ಮನಸಿನಲಿ

ಇಲ್ಲಿ ಲೇಖಕರು ಕುಮಾರವ್ಯಾಸನಂತೆ ತನ್ನನ್ನು ಕೇವಲ ಲಿಪಿಕಾರ ಎಂಬುದಾಗಿ ಬಿಂಬಿಸಿಕೊಂಡಿದ್ದಾರೆ. ಹಾಗೆಯೇ ಇಲ್ಲಿ ತಾನೊಬ್ಬ ಕವಿಯೆಂಬುದನ್ನು ಕೂಡ ಕುಮಾರವ್ಯಾಸನಂತೆ ಛಂದೋ ನೆಲೆಯಲ್ಲಿ ಅಭಿವ್ಯಕ್ತಿಸಿರುವುದನ್ನು ಕಾಣಬಹುದಾಗಿದೆ.

ವೇದ ಶಾಸ್ತ್ರಾಗಮ ಪುರಾಣಗಳೋದಿ ತಲೆಗಳು ಚಿಟ್ಟು ಹಿಡಿದಿವೆ ವಾದ ಗೈವರಿಗೋದು ಬರದವರಿಗೆಡೆಯಿಲ್ಲಲ್ಲಿ ಓದು ಬರದವರಿಲ್ಲಿ ತಿಳಿವುದು ವಾದ ಮಾಡುವರಿಲ್ಲಿ ಬರಬಹು ದೋದಿ ಕುಣಿಸುವನಿಲ್ಲಿ ಕವಿ ಪರಮೇಶ್ವರೆಂಬುವನು

ಹೀಗೆ ತನ್ನನ್ನು ಪರಮೇಶ್ವರ ಕವಿ ಎಂಬುದಾಗಿ ಗುರುತಿಸಿಕೊಂಡು ಪಾರ್ಥಲಿಂಗ ಸ್ಮರಣೆಯ ಮೂಲಕವೇ ಕಾವ್ಯ ರಚನೆಗೆ ಗಟ್ಟಿಯಾಗಿ ನಿಂತರು. ಇಂತಹ ಗಟ್ಟಿತನದ ಪ್ರತೀಕವಾಗಿ ಆರಂಭಿಕ ದಿನಗಳಲ್ಲಿ ದಿನಕ್ಕೊಂದು ಕಾವ್ಯವನ್ನು ಛಂದೋಬದ್ಧವಾಗಿ ರೂಪಿಸುವಲ್ಲಿ ಯಶಸ್ವಿಯಾದರು.

ಹೀಗೆ ಅಳುಕಿನಿಂದಲೇ ಆರಂಭವಾದ ಛಂದೋಬದ್ಧ ಸಾಹಿತ್ಯ ಕೃಷಿಯನ್ನು ಕರಗತ ಮಾಡಿಕೊಂಡು ಸುಮಾರು 497 ಪದ್ಯಗಳಿಂದ ಕೂಡಿದ ಒಟ್ಟು ಏಳು ಅಧ್ಯಾಯಗಳ ‘ಶ್ರೀ ಪಾರ್ಥಲಿಂಗ ಚರಿತಾಮೃತ’ ಎಂಬ ಭಾಮಿನಿ ಷಟ್ಪದಿ ಕಾವ್ಯ ಕೃತಿಯನ್ನು ಛಂದೋ ವಿನ್ಯಾಸಕ್ಕೆ ಚ್ಯುತಿಯಾಗದಂತೆ ಬರೆದು ಮುಗಿಸಿದ ಕೀರ್ತಿ ಕವಿ ಜಿ.ಪರಮೇಶ್ವರಪ್ಪ ಅವರಿಗೆ ಸಲ್ಲುತ್ತದೆ. ‘ಕನ್ನಡದಲ್ಲಿ ಮಹಾಕಾವ್ಯಗಳ ಕಾಲ ಮುಗಿಯಿತು.

ಛಂದೋಬದ್ಧವಾದ ರಚನೆಗಳ ಕಾಲ ಮುಗಿಯಿತು ಎಂಬ ಮಾತುಗಳು ಹುಸಿಯಾಗಿವೆ’ ಎಂಬ ಡಾ.ಬಿ.ವಿ.ವಸಂತಕುಮಾರ್ ಅವರ ಮಾತುಗಳಿಗೆ ಜಿ.ಪರಮೇಶ್ವರಪ್ಪ ಅವರು ರಚಿಸಿರುವ ಛಂದೋಬದ್ಧ ‘ಪಾರ್ಥಲಿಂಗ ಚರಿತಾಮೃತ’ ಸಾಕ್ಷಿಯಾಗಿ ನಿಲ್ಲುತ್ತದೆ.

ಪ್ರಸ್ತುತ ಕೃತಿಯು ಶ್ರೀಯುತ ಜಿ.ಪರಮೇಶ್ವರಪ್ಪನವರಿಗೆ ಸಾಹಿತಿ ಎಂಬ ಬಿರುದಾವಳಿಯನ್ನು ಮಾತ್ರವಲ್ಲದೆ, ಅವರನ್ನು ಪಾರ್ಥಲಿಂಗ ಚರಿತಾಮೃತದ ಕವಿಯೆಂದು ಗುರುತಿಸುವಷ್ಟು ಹೆಗ್ಗಳಿಕೆಯನ್ನು ತಂದುಕೊಟ್ಟಿದೆ.

ಹಾಗೆಯೇ ಈ ಕೃತಿಯು ಸಾಕಷ್ಟು ಜನಮಾನಸದಲ್ಲಿ ಬೆರೆತು ಹೋಗಿದ್ದು, ಈಗಾಗಲೇ ಸುಮಾರು ಐವತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಪಠನ ಮಾಡಲಾಗಿದೆ. ಇದು ಕವಿಗಳ ಶ್ರಮಕ್ಕೆ ಸಿಕ್ಕ ನಿಜವಾದ ಪ್ರತಿಫಲ. ಕವಿಯಾದವನು ಇದರಾಚೆ ಏನನ್ನು ನಿರೀಕ್ಷಿಸಲಾರ.

ಅಳುಕಿನಿಂದಲೇ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟ ಜಿ.ಪರಮೇಶ್ವರಪ್ಪನವರು ಛಂದೋಬದ್ಧ ಕಾವ್ಯ ರಚನೆಯಲ್ಲಿ ಮೊದಲ ಯಶಸ್ಸು ಗಳಿಸಿದ ತರುವಾಯ ‘ವದ್ದಿಕೆರೆ ಸಿದ್ಧೇಶ್ವರ ಚರಿತೆ’ಯನ್ನು ಇದೇ ಛಂದೋ ವಿನ್ಯಾಸದಲ್ಲಿ ರಚನೆಗೆ ಮುಂದಾಗಿದ್ದು, ಇದನ್ನು ಒಂದೇ ವರ್ಷದಲ್ಲಿ ಮುಗಿಸುವಷ್ಟು ಛಂದೋಬದ್ಧ ಸಾಹಿತ್ಯ ಕ್ಷೇತ್ರದಲ್ಲಿ ಹಿಡಿತವನ್ನು ಸಾಧಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.

ಪ್ರಸ್ತುತ ಕೃತಿಯು ಕೂಡ ದೈವ ಕೇಂದ್ರಿತವಾದ ಪುರಾಣ ನೆಲೆಯಿಂದ ಕೂಡಿದ್ದು, ಜನಪದರ ಬದುಕಿನೊಳಗೆ ಬೆರೆತು ಹೋದ ಮೌಖಿಕ ಕಥನವೊಂದನ್ನು ಛಂದೋಬದ್ಧ ಹಾಡುಗಬ್ಬವಾಗಿ ರೂಪಿಸುವ ಮಹತ್ತರ ಕಾರ್ಯವೊಂದನ್ನು ಇವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಶ್ರೀಯುತ ಪರಮೇಶ್ವರಪ್ಪನವರ ಎರಡನೇ ಕೃತಿಯಾಗಿರುವ ‘ವದ್ದಿಕೆರೆ ಸಿದ್ಧೇಶ್ವರ ಚರಿತೆ’ಯು ಹರಿಹರನ ‘ಶಿವಶರಣರ ರಗಳೆ’ಯ ಕಥನ ಮಾದರಿಯಿಂದ ಪ್ರಭಾವಿತಗೊಂಡಂತಿದೆ.

ಇದನ್ನೂ ಓದಿ |ವಿಮರ್ಶೆ | ಸ್ವಪ್ನದಲ್ಲಿ ಸೊರಗಿದ ಪ್ರೀತಿ

ಈ ಕೃತಿಯು ಒಟ್ಟು 311ಷಟ್ಪದಿ ಪದ್ಯಗಳಿಂದ ಕೂಡಿದೆ. ಇಲ್ಲಿಯೂ ಕೂಡ ಕವಿಗಳು ಪ್ರಾಚೀನ ಕಾವ್ಯ ಪರಂಪರೆಯ ಮುಂದುವರಿಕೆಯ ಭಾಗವೆಂಬಂತೆ ದೈವ ಸ್ತುತಿಯೊಂದಿಗೆ ಕಾವ್ಯಾರಂಭಕ್ಕೆ ಮುಂದಾಗಿರುವುದನ್ನು ಕಾಣಬಹುದಾಗಿದೆ.

ಶುದ್ಧಮನದಲಿ ಖುದ್ದು ಹೇಳುವೆ ಸಿದ್ಧ ಪುರುಷನ ಸಿದ್ಧ ಕಥೆಯನು ಬುದ್ಧ ಜನಗಳು ಮೆಚ್ಚುವಂದದಿ ಹಾಡುಗಬ್ಬದಲಿ ಬಿದ್ದು ಗಂಗೆಯಲೆದ್ದು ಬಂದಂತೆದ್ದು ಹೋಗುವವಿದ್ದ ರುಜಿನಗ ಳೆದ್ದು ಬರುವಾ ಜನ್ಮ ಚಕ್ರವನೊದ್ದು ಹೋಗುವುದು

ಹೀಗೆ ಪ್ರಾಚೀನ ಕಾವ್ಯ ಪರಂಪರೆಯ ತಂತ್ರವನ್ನು ಅನುಸರಿಸುತ್ತಲೇ ಜಾನಪದೀಯ ಕಥನವನ್ನು ಶಿಷ್ಟ ಸಾಹಿತ್ಯದ ಚೌಕಟ್ಟಿಗೆ ಒಳಪಡಿಸುವ ಮೂಲಕ ಛಂದೋಬದ್ಧಗೊಳಿಸುವಲ್ಲಿ ಕವಿ ಜಿ.ಪರಮೇಶ್ವರಪ್ಪನವರ ಪಾತ್ರ ಮಹತ್ವದ್ದಾಗಿದೆ. ಜನಪದರ ಸಾಂಸ್ಕೃತಿಕ ಬದುಕಿನಲ್ಲಿ ಬೆರೆತುಕೊಂಡಿರುವ ಮೌಖಿಕ ಕಥನವನ್ನು ಶಿಷ್ಟ ಪರಂಪರೆಯೊಂದಿಗೆ ಅನುಸಂಧಾನಗೊಳಿಸುವ ಮೂಲಕ ಹಾಡುಗಬ್ಬಗೊಳಿಸಿದ ಕವಿಯ ತಂತ್ರಗಾರಿಕೆಯ ಹಿಂದೆ ನೆಲಮೂಲದ ತುಡಿತ-ಮಿಡಿತವಿದೆ.

ಜನಪದ ಮತ್ತು ಶಿಷ್ಟ ಪರಂಪರೆಯ ನಡುವಿನ ಬೇಲಿ ಹಾಗೂ ಅಂತರವನ್ನು ಕಡಿದು ಹಾಕಿ ಇವೆರಡ ನಡುವೆ ಸಂಕರವನ್ನು ಸಾಧಿಸಿದ್ದಾರೆ. ಈ ಕಾರಣದಿಂದಾಗಿ ಇವರು ನಮ್ಮ ಮುಂದಿನ ಅಪರೂಪದ ಸಾಹಿತಿಗಳಲ್ಲಿ ಒಬ್ಬರಾಗಿ ಕಂಡುಬರುತ್ತಾರೆ.
ಶ್ರೀಯುತರ ಈ ಛಂದೋಬದ್ಧ ಕಾವ್ಯದ ದುಡಿಮೆಯ ಹಿಂದೆ ಒಂದು ಪ್ರಾಮಾಣಿಕ ಪ್ರಯತ್ನವಿದೆ. ಈ ಪ್ರಯತ್ನ ಕಾಯಕ ಪ್ರಧಾನತೆಯಿಂದ ಕೂಡಿದೆ. ಇಂತಹ ಕಾಯಕ ಪ್ರಧಾನ ಕೃಷಿಯು ಇವರ ಸತತ ಪ್ರಯತ್ನವೆಂಬ ತಪಸ್ಸಿನ ಪ್ರತೀಕವಾಗಿ ಕಂಡುಬರುತ್ತದೆ.

ಇಂತಹ ತಪದ ಪ್ರತೀಕ ಹಾಗೂ ಬಾಲ್ಯದ ದಿನಗಳಿಂದ ಮೈಮನಗಳಲ್ಲಿ ಬೆರತು ಹೋದ ಜನಪದ ಸೊಗಡು, ಅಧ್ಯಯನದೊಂದಿಗೆ ಆಸಕ್ತಿಯಾಗಿ ವಿಷಯವಾಗಿ ಪ್ರಭಾವ ಬೀರಿದ ಸಾಹಿತ್ಯಾಭಿರುಚಿ, ಸುದೀರ್ಘವಾದ ಬೋಧನಾನುಭವ ಹಾಗೂ ನಿವೃತ್ತಿಯ ಸಮಯದಲ್ಲಿನ ಸಾಹಿತ್ಯಾಸಕ್ತ ಸಮಾನ ಮನಸ್ಕರ ಪ್ರೇರಣೆ ಮತ್ತು ಪ್ರೋತ್ಸಾಹದ ಫಲವಾಗಿ ಕನ್ನಡ ಸಾರಸ್ವತ ಲೋಕಕ್ಕೆ ‘ಪಾರ್ಥಲಿಂಗ ಚರಿತಾಮೃತ’, ವದ್ದಿಕೆರೆ ಸಿದ್ಧೇಶ್ವರ ಚರಿತೆ’, ‘ವೀರ ಕರಿಯಣ್ಣ’, ‘ಚಿತ್ತಯ್ಯ-ಕಾಟಯ್ಯ’ ಎಂಬ ಛಂದೋ ವಿನ್ಯಾಸದ ಮೌಲ್ಯಯುತ ಷಟ್ಪದಿ ಕೃತಿಗಳನ್ನು ಹಾಗೂ ‘ಚದುರಿದ ಚಿಂತನೆಗಳು’ ಎಂಬ ವೈಚಾರಿಕ ಕೃತಿಯನ್ನು ನೀಡಿದ ಕವಿ, ಸಾಹಿತಿ, ಚಿಂತಕರಾಗಿರುವ ಶ್ರೀಯುತ ಜಿ.ಪರಮೇಶ್ವರಪ್ಪ ಅವರಿಂದ ಕನ್ನಡ ಸಾಹಿತ್ಯಲೋಕ ಮತ್ತಷ್ಟು ಶ್ರೀಮಂತಗೊಳ್ಳಲಿ ಎಂಬುದು ನಮ್ಮ ಹಾರೈಕೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ಪರಿಸರ ವಿಜ್ಞಾನ ಎನ್ನುವುದು ಖಾಯಂ ಆರ್ಥಿಕತೆ

Published

on

ಸುಂದರ್ ಲಾಲ್ ಬಹುಗುಣ
  • ಮ ಶ್ರೀ ಮುರಳಿ ಕೃಷ್ಣ, ಬೆಂಗಳೂರು

ಮೇಲಿನ ಘೋಷಣೆ ಪ್ರಸಿದ್ಧ ಪರಿಸರವಾದಿ ಸುಂದರಲಾಲ್ ಬಹುಗುಣ ಅವರದ್ದು. ತೊಂಬತ್ತ್ನಾಲ್ಕು ವರ್ಷದ ಅವರು ಶುಕ್ರವಾರ ಋಷಿಕೇಶ್ ನ ಎಐಐಎಂಎಸ್ ಆಸ್ಪತ್ರೆಯಲ್ಲಿ ಕೋವಿಡ್ ಗೆ ಬಲಿಯಾದರು.

ಈಗಿನ ಉತ್ತರಖಾಂಡದ ತೆಹರಿಯ ಬಳಿಯ ಮರೋಡ ಎಂಬ ಹಳ್ಳಿಯೊಂದರಲ್ಲಿ 1927ರಲ್ಲಿ ಜನಿಸಿದ ಸುಂದರಲಾಲ್ ಬಹುಗುಣ ಗಾಂಧೀವಾದಿಗಳಾಗಿ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದರು. ಬ್ರಿಟೀಶರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.

ಅವರು ಅಸ್ಪರ್ಶ್ಯತೆ ವಿರುದ್ಧ ಹೋರಾಡುತ್ತಲೇ, 1965-1970ರ ಅವಧಿಯಲ್ಲಿ ಮಹಿಳೆಯರನ್ನು ಸಂಘಟಿಸಿ ಪಾನನಿರೋಧ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ವಿಮಲಾರನ್ನು ತಮ್ಮ ಬಾಳಸಂಗಾತಿಯನ್ನಾಗಿ ಮಾಡಿಕೊಂಡಾಗ ಅವರು ವಿಧಿಸಿದ ಒಂದು ಷರತ್ತು- ಗ್ರಾಮೀಣ ಪ್ರದೇಶದ ಒಂದು ಹಳ್ಳಿಯಲ್ಲಿ ಆಶ್ರಮವನ್ನು ಕಟ್ಟಿ, ಅದರಲ್ಲೇ ನೆಲಸಬೇಕೆಂಬುದಾಗಿತ್ತು!

1970ರಲ್ಲಿ ಗರ್ವಾಲ್ ಹಿಮಾಲಯದ ಅಲಕಾನಂದ ನದಿಯಲ್ಲಿ ಪ್ರವಾಹವಾಗಿ ಅನೇಕ ಹಳ್ಳಿಗಳು, ಸೇತುವೆಗಳು, ರಸ್ತೆಗಳು ಕೊಚ್ಚಿಕೊಂಡು ಹೋದವು. ಆ ಪ್ರದೇಶದಲ್ಲಿ ಸಿವಿಲ್ ಇಂಜಿನಿಯರಿಂಗ್ ಗೆ ಸಂಬಂಧಿಸಿದ ಅನೇಕ ನಿರ್ಮಾಣ ಕಾರ್ಯಗಳು ಜರಗುತ್ತಿದ್ದವು.

ನಂತರ ಭೂಕುಸಿತಗಳು ಹೆಚ್ಚಿದವು. ಅಲ್ಲದೆ, ದೊಡ್ಡ ಕಂಟ್ರಾಕ್ಟುದಾರರಿಗೆ ಅರಣ್ಯ ಪ್ರದೇಶಗಳಲ್ಲಿ ಮರಮಟ್ಟು(ಚೌಬೀನೆ)ಗಳಿಗಾಗಿ ಮರಗಳನ್ನು ಕಡಿಯುವ ಪರವಾನಗಿಯನ್ನು ನೀಡಲಾಗಿತ್ತು. ಇದರ ವಿರುದ್ಧ ಕ್ರಮೇಣ ಚಂಡಿಪ್ರಸಾದ್ ಭಟ್ಟ್ ಮುಂತಾದ ಪರಿಸರವಾದಿಗಳು ಹೋರಾಟದಲ್ಲಿ ತೊಡಗಿದರು. ಕ್ರಮೇಣ ಈ ಚಳವಳಿ ಕಾವನ್ನು ಪಡೆದುಕೊಂಡಿತು.

ಲೇಖಕ : ಮ ಶ್ರೀ ಮುರಳಿ ಕೃಷ್ಣ

ನಂತರ ಮಾರ್ಚಿ 1974ರಲ್ಲಿ ರೇಣಿ ಹಳ್ಳಿಯಲ್ಲಿ (ಇದರ ಸಮೀಪವೇ ಕಳೆದ ವರ್ಷ ಹಿಮನದಿ(ಗ್ಲೇಷಿಯರ್) ಸ್ಪೋಟಿಸಿದ್ದು), ಕಂಟ್ರಾಕ್ಟುದಾರರ ಕೆಲಸಗಾರರು ಮರಗಳನ್ನು ಕಡಿಯಲು ಶುರುಮಾಡಿದಾಗ, ಒಬ್ಬ ಹುಡುಗಿ ಆ ಗ್ರಾಮದ ಮಹಿಳಾ ದಳದ ಮುಖ್ಯಸ್ಥೆ ಗೌರಾ ದೇವಿಗೆ ಈ ವಿಷಯವನ್ನು ತಿಳಿಸಿದಳು. ಗೌರಾ ದೇವಿ ಸುಮಾರು 25 ಮಹಿಳೆಯರನ್ನು ಸಂಘಟಿಸಿ, ಮರಗಳ ಕಡಿಯುವ ಪ್ರದೇಶಕ್ಕೆ ತೆರಳಿದರು.

ಆಗ ಕೆಲಸಗಾರರು ಬಂದೂಕುಗಳನ್ನು ತಮ್ಮತ್ತ ಗುರಿಮಾಡಿದಾಗ, ಅಲ್ಲಿ ನೆರೆದಿದ್ದ ಮಹಿಳೆಯರು ಮರಗಳನ್ನು ಅಪ್ಪಿಕೊಂಡರು. ‘ ಚಿಪ್ಕೊ ‘ ಎಂದರೆ ‘ ಅಪ್ಪಿಕೊ ‘ ಎಂದರ್ಥ. ತರುವಾಯ ಈ ಚಳವಳಿ ವಿಸ್ತೃತ ರೂಪವನ್ನು ಪಡೆಯಿತು. ಇದರ ಮುಂಚೂಣಿಯಲ್ಲಿದ್ದರು ಸುಂದರಲಾಲ್ ಬಹುಗುಣ, ಚಂಡಿಪ್ರಸಾದ್ ಭಟ್ಟ್, ಗೌರಾ ದೇವಿ, ಸುದೇಶ ದೇವಿ ಮತ್ತಿತರ ಕೆಲವು ಮಹಿಳೆಯರು. ಒಂದರ್ಥದಲ್ಲಿ, ಇದು ಎಕೊ-ಫೆಮನಿಸಂನ ಪ್ರಾರಂಭಿಕ ನಡೆ ಎನ್ನಬಹುದು.

‘ ಚಿಪ್ಕೊ ‘ ಚಳವಳಿಯನ್ನು ವಿಸ್ತರಿಸುತ್ತ 1980ರ ದಶಕದ ಆದಿಯಲ್ಲಿ ಸುಂದರಲಾಲ್ ಬಹುಗುಣರು ಹಿಮಾಲಯದಲ್ಲಿ ಸುಮಾರು 5,000 ಕಿಮಿ ಪಾದಯಾತ್ರೆಯನ್ನು ನಡೆಸಿದರು. ನಂತರ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಭೇಟಿ ಮಾಡಿದರು. ಇದರ ಪರಿಣಾಮವಾಗಿ, ಪ್ರಧಾನಿಯವರು 15 ವರ್ಷಗಳ ಕಾಲ ಮರ ಕಡಿಯುವುದನ್ನು ನಿಷೇಧಿಸಿದರು.

ಇಂತಹ ಚಳವಳಿಯ ನಡುವೆಯೇ, 1978ರಲ್ಲೇ ತೆಹರಿ ಅಣೆಕಟ್ಟಿನ ಯೋಜನೆಯ ಕಾಮಗಾರಿ ಕೆಲಸಗಳು ಪ್ರಾರಂಭವಾದವು. ಇದರ ವಿರುದ್ಧ ಸುಂದರಲಾಲ್ ಬಹುಗುಣ ಮತ್ತು ಇತರ ಪರಿಸರ ಹೋರಾಟಗಾರರು ತಮ್ಮ ದನಿಯನ್ನು ಎತ್ತಿದರು. ಅಹಿಂಸಾತ್ಮಕ ಹೋರಾಟಗಳನ್ನು ಹಮ್ಮಿಕೊಂಡರು. ಭಾಗೀರಥಿ ನದಿಯ ದಡದಲ್ಲಿ ಸುಂದರಲಾಲ್ ಬಹುಗುಣರು ಅನೇಕ ಬಾರಿ ಉಪವಾಸದ ಸತ್ಯಾಗ್ರಹದಲ್ಲಿ ನಿರತರಾದರು.

1995ರಲ್ಲಿ ಅಂದಿನ ಪ್ರಧಾನಿ ಪಿ ವಿ ನರಸಿಂಹ ರಾವ್ ನೀಡಿದ ಪರಾಮರ್ಶೆ ಸಮಿತಿಯ ರಚನೆಯ ಆಶ್ವಾಸನೆಯ ಮೇರೆಗೆ ಅವರು ತಮ್ಮ 45 ದಿನಗಳ ಉಪವಾಸವನ್ನು ಕೊನೆಗೊಳಿಸಿದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿಯ ರಾಜಘಾಟ್ನಲ್ಲಿ 74 ದಿನಗಳ ಕಾಲ ನಿರಶನವನ್ನು ನಡೆಸಿದ್ದರು.

ಕೊನೆಗೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಹತ್ತು ವರ್ಷಗಳ ಕಾಲ ಕೇಸು ಜರುಗಿತು. ಆದರೂ 2001ರಲ್ಲಿ ಅಣೆಕಟ್ಟಿನ ಕಾರ್ಯ ಮುಂದುವರೆಯಿತು. ಸುಂದರಲಾಲ್ ಬಹುಗುಣರು ದಸ್ತಗಿರಿಗೆ ಒಳಗಾದರು. ತೆಹರಿ ಸಮೀಪವಿದ್ದ ಅವರ ನಿವಾಸವೂ ಮುಳುಗಡೆಯಾಯಿತು.

‘ ಚಿಪ್ಕೊ’ ಆಂದೋಳನದಿಂದ ಪ್ರಭಾವಿತಗೊಂಡ ಪಾಂಡುರಂಗ ಹೆಗಡೆ 1980ರ ದಶಕದಲ್ಲಿ ‘ ಅಪ್ಪಿಕೊ ‘ ಚಳವಳಿಯನ್ನು ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಶುರುಮಾಡಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮತ್ತು ಇತರ ಕೆಲವು ಸಂದರ್ಭಗಳಲ್ಲಿ ಸುಂದರಲಾಲ್ ಬಹುಗುಣರು ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಅವರು ಪದ್ಮವಿಭೂಷಣ, ರೈಟ್ ಲೈವ್ಲಿಹುಡ್ ಮತ್ತು ಇತರ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರಿಗೆ ಅಂತಿಮ ನಮನಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ಕವಲೇದುರ್ಗ

Published

on

ಕವಲೇದುರ್ಗ

ತೀರ್ಥಹಳ್ಳಿ ಅನೇಕ ರಾಜಮನೆತನಗಳು ಆಳ್ವಿಕೆ ನಡೆಸಿದ ನೆಲ. ಇಲ್ಲಿನ ಪ್ರತಿಯೊಂದು ಸ್ಥಳವೂ ತನ್ನದೇ ಆದ ಐತಿಹಾಸಿಕ ಮತ್ತು ಪೌರಾಣಿಕ ಇತಿಹಾಸವನ್ನು ಹೊಂದಿದೆ. ಅವುಗಳಲ್ಲಿ ಕವಲೇದುರ್ಗಾ ಕೂಡಾ ಒಂದು. ಸಹ್ಯಾದ್ರಿ ಶ್ರೇಣಿಯ ಮಡಿಲಿನಲ್ಲಿ ಕಂಡು ಬರುವ ಈ ದುರ್ಗಾ ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ನೈಸರ್ಗಿಕ ತಾಣ.

09ನೇ ಶತಮಾನದಲ್ಲಿ ನಿರ್ಮಾಣವಾದ ಈ ಕೋಟೆ ಕೆಳದಿ ಸಂಸ್ಥಾನದ ನಾಲ್ಕನೇಯ ಹಾಗೂ ಕೊನೆಯ ರಾಜಧಾನಿಯಾಗಿತ್ತು ಎಂದು ಹೇಳಲಾಗುತ್ತದೆ. ಕೆಳದಿ ಸಂಸ್ಥಾನದ ಅನೇಕ ಐತಿಹ್ಯ ಹಾಗೂ ಅಂದಿನ ವಾಸ್ತುಶಿಲ್ಪ, ಕಲೆ ಮತ್ತು ಸಂಸ್ಕೃತಿಗಳಿಗೆ ಈ ಕೋಟೆ ಇಂದೂ ಸಾಕ್ಷಿಯಾಗಿ ನಿಲ್ಲುತ್ತದೆ. ಪಶ್ಚಿಮ ಘಟ್ಟದ ಗಿರಿಕಂದರಗಳಿಂದ ಆವೃತವಾದ ಈ ಪ್ರದೇಶವನ್ನು ಕವಲೇದುರ್ಗ, ಕಪಿಲೇದುರ್ಗ, ಕಾವಲುದುರ್ಗ, ಭುವನಗಿರಿದುರ್ಗ ಎಂಬ ಹೆಸರುಗಳಿಂದ ಕರೆಯುತ್ತಾರೆ.

ಕವಲೇದುರ್ಗಾ ಗಿರಿಪ್ರದೇಶ ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎಂಬ ಪಾಳೆಗಾರ ಸಹೋದರರ ಸ್ವಾದೀನದಲ್ಲಿತ್ತು. ಈ ಸಹೋದರರನ್ನು ಸೋಲಿಸಿದ ಮಲ್ಲವರು ಕವಲೇದುರ್ಗಾ ಕೋಟೆಯನ್ನು ವಶಕ್ಕೆ ಪಡೆದರು. ನಂತರ ಮಲ್ಲವ ಸಾಮ್ರಾಜ್ಯದ ವೆಂಕಟಪ್ಪ ನಾಯಕ ಇಲ್ಲಿ ಬೃಹತ್ ಕೋಟೆಯನ್ನು ನಿರ್ಮಾಣ ಮಾಡಿ ಭದ್ರ ಬುನಾದಿಯನ್ನು ಹಾಕಿದರು.

ನಂತರ ಶಿವಪ್ಪ ನಾಯಕ, ರಾಣಿ ಚನ್ನಮ್ಮ ಮತ್ತು ರಾಣಿ ವೀರಮ್ಮಾಜಿ ಆಳ್ವಿಕೆ ಮಾಡಿದರು. ಅಲ್ಲದೇ ಛತ್ರಪತಿ ಶಿವಾಜಿಯ ಮಗ ರಾಜಾರಾಮನಿಗೆ ಇಲ್ಲಿ ಆಶ್ರಯ ನೀಡಿದ್ದರು ಎಂದು ಇಲ್ಲಿನ ಇತಿಹಾಸ ಹೇಳುತ್ತದೆ. ಇದೇ ವಿಷಯವಾಗಿ ಮೊಘಲ್ ದೊರೆ ಔರಂಗಜೇಬನೋಂದಿಗೆ ಯುದ್ಧಮಾಡಿ ಗೆದ್ದ ಕೀರ್ತಿ ರಾಣಿ ಚೆನ್ನಾಮ್ಮಾಜಿಗೆ ಸಂದಿದೆ. 18ನೇ ಶತಮಾನದಲ್ಲಿ ಮೈಸೂರು ರಾಜ ಹೈದರಾಲಿ ಹಾಗೂ ಟಿಪ್ಪೂ ಸುಲ್ತಾನರ ದಾಳಿಗೆ ಕವಲೇದುರ್ಗಾ ತುತ್ತಾಯಿತು.

ಮೂರು ಸುತ್ತಿನ ಕೋಟೆ ಇದಾಗಿದ್ದು, ಪಡಸು ಕಲ್ಲುಗಳಿಂದ ಕೋಟೆಯನ್ನು ನಿರ್ಮಾಣ ಮಾಡಲಾಗಿದೆ. ಕೋಟೆಯ ಒಳಭಾಗದಲ್ಲಿ ಶ್ರೀ ಲಕ್ಷ್ಮೀನಾರಾಯಣ ದೇವಾಲಯವಿದೆ. ಅಲ್ಲದೇ ಬಯಲು ಬಸವ, ಗದಾತೀರ್ಥ ಶಿಖರೇಶ್ವರ ದೇವಾಲಯ, ತಿಮ್ಮಣ್ಣ ನಾಯಕ ಕೆರೆ, ಬಹು ಸುಂದರ ಕಲ್ಯಾಣ ಮಹಲ್, ಮಾರಿಕಾಂಬ ದೇವಾಲಯ, ಎಣ್ಣೆ ಮತ್ತು ತುಪ್ಪದ ಬಾವಿ, ಹಾಗೂ ಐತಿಹಾಸಿಕ ಕೋಟೆ ಮತ್ತು ಅರಮನೆ ಪ್ರವಾಸಿಗರ ಕಣ್ಗಳಿಗೆ ಹಬ್ಬವನ್ನುಂಟುಮಾಡುತ್ತವೆ.

ಕವಲೇದುರ್ಗಾ ಕೋಟೆಯು ಜಿಲ್ಲಾ ಕೇಂದ್ರದಿಂದ 80 ಕಿ.ಮೀ ಮತ್ತು ತೀರ್ಥಹಳ್ಳಿ ತಾಲ್ಲೂಕು ಕೇಂದ್ರದಿಂದ 20 ಕಿ.ಮೀ ದೂರದಲ್ಲಿದೆ. ತೀರ್ಥಹಳ್ಳಿಯಿಂದ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ಈ ಸ್ಥಳ ಸಿಗುತ್ತದೆ.

ಹೆಚ್ಚಿನ ಮಾಹಿತಿಗಾಗಿ

ಪರಾಮರ್ಶನ

https://kn.wikipedia.or

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending