Connect with us

ದಿನದ ಸುದ್ದಿ

ಕೋವಿಡ್ ಸೋಂಕಿತರಿಗೆ ಹೋಂ ಐಸೋಲೇಷನ್ ಇಲ್ಲ, ಕೇರ್ ಸೆಂಟರ್ ದಾಖಲು ಕಡ್ಡಾಯ : ಸಚಿವ ಡಾ. ಕೆ. ಸುಧಾಕರ್

Published

on

ಸುದ್ದಿದಿನ,ದಾವಣಗೆರೆ : ಹೋಂ ಐಸೋಲೇಷನ್‍ಗೆ ಒಳಗಾಗುವ ಕೋವಿಡ್ ಸೋಂಕಿತರಿಂದಲೇ ಇತರರಿಗೆ ಸೋಂಕು ಹೆಚ್ಚು ಹರಡುತ್ತಿರುವುದು ಕಂಡುಬಂದಿದ್ದು, ಹೀಗಾಗಿ ಇನ್ನು ಮುಂದೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಹೋಂ ಐಸೋಲೇಷನ್‍ಗೆ ಅವಕಾಶ ನೀಡದೆ, ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ನಲ್ಲಿಯೇ ದಾಖಲು ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಕುರಿತಂತೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸದ್ಯ 4789 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಇದರಲ್ಲಿ 3259 ಜನ ಹೋಂ ಐಸೋಲೇಷನ್‍ನಲ್ಲಿದ್ದಾರೆ, ಉಳಿದಂತೆ 1530 ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾವಣಗೆರೆ ತಾಲ್ಲೂಕು ಒಂದರಲ್ಲಿಯೇ 1986 ಜನ ಹೋಂ ಐಸೋಲೇಷನ್‍ನಲ್ಲಿ ಇದ್ದಾರೆ. ಸೂಕ್ತ ಸೌಲಭ್ಯಗಳಿಲ್ಲದೇ ಹೋಂ ಐಸೋಲೇಷನ್‍ನಲ್ಲಿ ಇರುವವರಿಂದ, ಹಾಗೂ ಮಾರ್ಗಸೂಚಿ ಪಾಲನೆ ಮಾಡದಿರುವ ಕಾರಣಗಳಿಂದ, ಕುಟುಂಬ ಸದಸ್ಯರಿಗೆ ಹಾಗೂ ಇತರರಿಗೆ ಸೋಂಕು ಹರಡುತ್ತಿರುವುದು ಕಂಡುಬಂದಿದೆ.

ಜಿಲ್ಲೆಯಲ್ಲಿ ಒಟ್ಟು 12 ಕೋವಿಡ್ ಕೇರ್ ಸೆಂಟರ್‍ಗಳು (ಸಿಸಿಸಿ) ಕಾರ್ಯನಿರ್ವಹಿಸುತ್ತಿದ್ದು, 760 ಜನ ಸದ್ಯ ಸಿಸಿಸಿ ನಲ್ಲಿ ಇದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ಸಾವು ಹಾಗೂ ಸೋಂಕಿನ ಪ್ರಮಾಣ ಕಡಿಮೆಯಾಗಬೇಕು, ಜಿಲ್ಲೆಯಲ್ಲಿ ಉತ್ತಮ ಸೌಲಭ್ಯಗಳಿರುವ ವಸತಿ ನಿಲಯಗಳು, ಸರ್ಕಾರಿ ಹಾಗೂ ಖಾಸಗಿ ಸಮುದಾಯ ಭವನಗಳನ್ನು ಗುರುತಿಸಿ, ಕೋವಿಡ್ ಕೇರ್ ಸೆಂಟರ್‍ಗಳನ್ನಾಗಿ ಪರಿವರ್ತಿಸಬೇಕು.

ಸೋಂಕಿತರು ಯಾವುದೇ ಕಾರಣಕ್ಕೂ ಹೋಂ ಐಸೋಲೇಷನ್‍ನಲ್ಲಿ ಇರುವುದು ಬೇಡ. ಕಡ್ಡಾಯವಾಗಿ ಅವರನ್ನು ಸಿಸಿಸಿ ನಲ್ಲಿಯೇ ದಾಖಲಿಸಬೇಕು. ದಾಖಲಿಸಿದ 5 ಗಂಟೆಯ ಒಳಗಾಗಿ ಅವರಿಗೆ ನಿಗದಿತ ಎಲ್ಲ ಔಷಧಿ, ಸಾಮಗ್ರಿಗಳುಳ್ಳ ಮೆಡಿಕಲ್ ಕಿಟ್ ಕೊಡಬೇಕು, ಅಲ್ಲದೆ ಅವರಿಗೆ ವೈದ್ಯರಿಂದ ಚಿಕಿತ್ಸೆ ಪ್ರಾರಂಭವಾಗಬೇಕು. ಸಿಸಿಸಿ ಗಳಲ್ಲಿ ಉತ್ತಮ ರೀತಿಯಲ್ಲಿ ವಸತಿ, ಊಟೋಪಹಾರ ಗುಣಮಟ್ಟದ್ದಾಗಿರಬೇಕು.

ಇದನ್ನೂ ಓದಿ | ಸೋಂಕು ದೃಢಪಟ್ಟ 5 ತಾಸಿನೊಳಗಾಗಿ ಕೋವಿಡ್ ಕಿಟ್ ಒದಗಿಸಿ : ಸಚಿವ ಡಾ‌.ಕೆ.ಸುಧಾಕರ್ 

ಉತ್ತಮ ಪೌಷ್ಠಿಕ ಆಹಾರ ನೀಡಲು ಈಗಾಗಲೆ ಆದೇಶಿಸಲಾಗಿದೆ ಎಂದು ಸಚಿವರು ಹೇಳಿದರು. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ನಲ್ಲಿ ದಾಖಲಿಸುವ ದಿಸೆಯಲ್ಲಿ ಸ್ಥಳೀಯ ಟಾಸ್ಕ್ ಫೋರ್ಸ್ ಸಮಿತಿ ಜಿಲ್ಲೆಯಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸ್ಥಳೀಯ ಮಟ್ಟದ ಸಮಿತಿಯ ನಿರ್ಲಕ್ಷ್ಯ ಕಾರಣ ಗ್ರಾಮಗಳಲ್ಲಿ ಸೋಂಕು ಹೆಚ್ಚು ಹರಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಗದಿತ ಬೆಡ್‍ಗಳನ್ನು ಕೊಡಲೇಬೇಕು

ರಾಜ್ಯದಲ್ಲಿ ಸದ್ಯ ಕೋವಿಡ್ ತುರ್ತು ಸ್ಥಿತಿ ಇದೆ. ಎಲ್ಲ ಖಾಸಗಿ ಮೆಡಿಕಲ್ ಕಾಲೇಜುಗಳು ಶೇ. 75 ಹಾಗೂ ಖಾಸಗಿ ಆಸ್ಪತ್ರೆಗಳು ಶೇ. 50 ರಷ್ಟು ಬೆಡ್‍ಗಳನ್ನು ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸು ಮಾಡಲಾದ ರೋಗಿಗಳಿಗಾಗಿ ಒದಗಿಸಲೇಬೇಕು. ಇದರಲ್ಲಿ ಯಾವುದೇ ರಿಯಾಯಿತಿ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಜನರ ಪ್ರಾಣ ರಕ್ಷಿಸುವುದು ನನ್ನ ಕರ್ತವ್ಯ.

ಆದರೆ ದಾವಣಗೆರೆಯಲ್ಲಿ 850 ಬೆಡ್ ಸಾಮಥ್ರ್ಯ ಹೊಂದಿರುವ ಎಸ್‍ಎಸ್ ಮೆಡಿಕಲ್ ಕಾಲೇಜಿನಲ್ಲಿ ಕೇವಲ 54 ಹಾಗೂ 850 ಬೆಡ್ ಸಾಮಥ್ರ್ಯದ ಬಾಪೂಜಿ ಜೆಜೆಎಂಸಿ ಕಾಲೇಜಿನಲ್ಲಿ ಕೇವಲ 37 ಬೆಡ್‍ಗಳನ್ನು ಮಾತ್ರ ನೀಡಿದ್ದು, ಸರ್ಕಾರದ ಸೂಚನೆ ಪಾಲಿಸುತ್ತಿಲ್ಲ ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ್ ಅವರು ಆರೋಗ್ಯ ಸಚಿವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ರಾಜ್ಯ ಮಟ್ಟದಲ್ಲಿ ಸರ್ಕಾರ ಕೈಗೊಂಡ ನಿರ್ಧಾರವನ್ನು ಇಲ್ಲಿನ ಖಾಸಗಿ ಮೆಡಿಕಲ್ ಕಾಲೇಜುಗಳು ಪಾಲಿಸದಿರುವುದು ನಿಜಕ್ಕೂ ಅಚ್ಚರಿ ಹಾಗೂ ನೋವು ತಂದಿದೆ. ಸರ್ಕಾರ ಖಾಸಗಿ ಆಡಳಿತ ಮಂಡಳಿಯೊಂದಿಗೆ ಘರ್ಷಣೆಯನ್ನು ಬಯಸುವುದಿಲ್ಲ. ರಾಜ್ಯದಲ್ಲಿ ಎಲ್ಲ ಖಾಸಗಿ ಮೆಡಿಕಲ್ ಕಾಲೇಜಗಳೂ ಕೂಡ ನಿಗದಿತ ಪ್ರಮಾಣದಲ್ಲಿ ಬೆಡ್ ನೀಡುವ ಮೂಲಕ ಸ್ಪಂದಿಸಿದ್ದಾರೆ. ಎಲ್ಲಿಯೂ ಕೂಡ ಈ ರೀತಿಯ ಅಸಹಾಕಾರ ಕಂಡುಬಂದಿಲ್ಲ.

ರಾಜ್ಯದ ಜನರ ಆರೋಗ್ಯ ಹಾಗೂ ಪ್ರಾಣ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಸರ್ಕಾರಿ ಆಸ್ಪತ್ರೆಗಳಿಂದ ಶಿಫಾರಸ್ಸು ಮಾಡುವ ರೋಗಿಗಳಿಗೆ ನಿಗದಿತ ಸಂಖ್ಯೆಯಷ್ಟು ಬೆಡ್ ನೀಡಲೇಬೇಕು. ನಾವೇನು ಉಚಿತವಾಗಿ ಚಿಕಿತ್ಸೆ ನೀಡಿ ಎಂದು ಹೇಳುತ್ತಿಲ್ಲ. ಪ್ರತಿ ರೋಗಿಗೂ ಸರ್ಕಾರದಿಂದ ಹಣ ಪಾವತಿಸುತ್ತೇವೆ. ಇದು ಹೆಲ್ತ್ ಎಮರ್ಜೆನ್ಸಿ ಕಾಲವಾಗಿದ್ದು ಅತ್ಯಂತ ತುರ್ತು ನಾನ್ ಕೋವಿಡ್ ರೋಗಿಗಳಿಗೆ ಮಾತ್ರ ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳು ಚಿಕಿತ್ಸೆ ನೀಡಬೇಕು.

ಇತರೆ ಚಿಕಿತ್ಸೆಗಳನ್ನು 2-3 ತಿಂಗಳು ಮುಂದೂಡಬೇಕು. ಕೋವಿಡ್ ರೋಗಿಗಳಿಗೇ ಬೆಡ್‍ಗಳನ್ನು ಒದಗಿಸಬೇಕು. ಖಾಸಗಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳು ನಿಗದಿಯಂತೆ ಕ್ರಮವಾಗಿ ಶೇ. 75 ಹಾಗೂ ಶೇ. 50 ರಷ್ಟು ಬೆಡ್‍ಗಳನ್ನು ನೀಡಲೇಬೇಕು ಹಾಗೂ ಬೆಡ್ ಲಭ್ಯತೆಯ ಸ್ಥಿತಿಗತಿಯ ಬೋರ್ಡ್ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಕಾನೂನು ಪ್ರಕಾರ ನಾವು ತೆಗೆದುಕೊಳ್ಳಬೇಕಾಗುತ್ತದೆ.

ನಿಗದಿಯಂತೆ ಬೆಡ್‍ಗಳನ್ನು ಪಡೆಯದಿದ್ದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಸಹಕಾರ ನೀಡದವರ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಡಿಹೆಚ್‍ಒ ಅವರು ಸಾಂಕ್ರಾಮಿಕ ರೋಗ ನಿರ್ವಹಣೆ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವರು ಸೂಚನೆ ನೀಡಿದರು.

2150 ವೈದ್ಯರ ನೇಮಕ

ಜಿಲ್ಲೆಯಲ್ಲಿನ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್, ವೆಂಟಿಲೇಟರ್‍ಗಳನ್ನು ಒದಗಿಸಲಾಗಿದ್ದು, ಕೆಲವೆಡೆ ತಜ್ಞ ವೈದ್ಯರು ಹಾಗೂ ನುರಿತ ಸಿಬ್ಬಂದಿ ಕೊರತೆ ಕಾರಣ ಬಳಕೆಗೆ ತೊಂದರೆಯಾಗಿದೆ ಎಂಬುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ರಾಜ್ಯದಲ್ಲಿ 2150 ವೈದ್ಯರು, 780 ತಜ್ಞ ವೈದ್ಯರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೆರಡು ದಿನಗಳಲ್ಲಿ ಅವರಿಗೆ ಸ್ಥಳ ನಿಯುಕ್ತಿ ಆದೇಶ ಆಗಲಿದೆ.

ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ ನೀಗಲಿದೆ. ಆಕ್ಸಿಜನ್ ಬೆಡ್, ವೆಂಟಿಲೇಟರ್ ಬಳಕೆಗೆ ಸಂಬಂಧಿಸಿದಂತೆ ಲಭ್ಯವಿರುವ ಸಿಬ್ಬಂದಿಗಳಿಗೆ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಸೂಕ್ತ ತರಬೇತಿಯನ್ನು ಕೊಡಿಸಬೇಕು, ಜಿಲ್ಲೆಯಲ್ಲಿ ಕೂಡಲೆ ಈ ಕಾರ್ಯ ಆಗಬೇಕು ಎಂದು ಸಚಿವರು ತಾಕೀತು ಮಾಡಿದರು.

ಆಂಬುಲೆನ್ಸ್‍ಗೆ ದರ ನಿಗದಿ

ರಾಜ್ಯದಲ್ಲಿ ಕೋವಿಡ್ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡುತ್ತಿರುವ ಸಂದರ್ಭದ ಪರಿಸ್ಥಿತಿಯ ದುರ್ಲಾಭ ಪಡೆದು, ಖಾಸಗಿ ಆಂಬುಲೆನ್ಸ್‍ಗಳು ರೋಗಿಗಳಿಂದ ಹೆಚ್ಚಿನ ದರ ವಸೂಲಿ ಮಾಡುವ ಮೂಲಕ, ಮೊದಲೇ ನೊಂದಿರುವವರಿಗೆ ಇನ್ನಷ್ಟು ಹಿಂಸೆ ನೀಡುವಂತಹ ಅಮಾನವೀಯ ವರ್ತನೆ ತೋರುವುದು ಸಮಂಜಸವಲ್ಲ.

ಈ ಕುರಿತು ಬಹಳಷ್ಟು ದೂರುಗಳು ಕೇಳಿಬಂದಿದ್ದು, ಈಗಾಗಲೆ ಈ ದಿಸೆಯಲ್ಲಿ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಖಾಸಗಿ ಆಂಬುಲೆನ್ಸ್‍ಗಳಿಗೆ ದರವನ್ನು ನಿಗದಿಪಡಿಸಲಾಗುವುದು. ನಿಗದಿಗಿಂತ ಹೆಚ್ಚಿನ ದರ ಪಡೆಯುವವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.

ಎಲ್ಲ ತಾಲ್ಲೂಕುಗಳಿಗೆ ಆಕ್ಸಿಜನ್ ಘಟಕ : ಕೋವಿಡ್ ರೋಗಿಗಳಿಗಾಗಿ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ನೀಗಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿಯೂ ಆಕ್ಸಿಜನ್ ಘಟಕವನ್ನು ಸ್ಥಾಪಿಸುವ ಆಲೋಚನೆ ಇದೆ. ದಾವಣಗೆರೆ ಜಿಲ್ಲೆಯಲ್ಲಿ ಸಂಸದರಾದ ಜಿ.ಎಂ. ಸಿದ್ದೇಶ್ವರ್ ಅವರು ತಮ್ಮ ಟ್ರಸ್ಟ್ ವತಿಯಿಂದ 1.5 ಕೋಟಿ ರೂ. ವೆಚ್ಚದಲ್ಲಿ ಆಕ್ಸಿಜನ್ ಘಟಕ ನೀಡಲು ಕ್ರಮ ವಹಿಸಿದ್ದಕ್ಕಾಗಿ ಹಾಗೂ ಚನ್ನಗಿರಿ ಶಾಸಕರು ಹಾಗೂ ಕೆಸ್‍ಎಸ್‍ಡಿಎಲ್ ಅಧ್ಯಕ್ಷರಾದ ಮಾಡಾಳ್ ವಿರುಪಾಕ್ಷಪ್ಪ ಅವರು ಕೂಡ ಚನ್ನಗಿರಿಯಲ್ಲಿ ನಿಗಮದ ವತಿಯಿಂದ ಆಕ್ಸಿಜನ್ ಘಟಕ ಸ್ಥಾಪಿಸಲು ಮುಂದಾಗಿದ್ದಕ್ಕಾಗಿ ಸರ್ಕಾರದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.

ದಾವಣಗೆರೆ ಜಿಲ್ಲೆಗೆ ಒಟ್ಟು 115 ಆಕ್ಸಿಜನ್ ಕಾನ್ಸನ್‍ಟ್ರೇಟರ್‍ಗಳನ್ನು ವಿವಿಧ ಮೂಲಗಳಿಂದ ಒದಗಿಸಲಾಗಿದೆ. ರಾಜ್ಯದಲ್ಲಿ 18-44 ವರ್ಷದವರಿಗೆ ಲಸಿಕೆಯನ್ನು ನೀಡುವ ಕಾರ್ಯಕ್ಕೆ ಮರು ಚಾಲನೆ ನೀಡಲಾಗುತ್ತಿದ್ದು, ಡಿಸೆಂಬರ್ ಒಳಗಾಗಿ ಎಲ್ಲರಿಗೂ ಲಸಿಕೆ ಕೊಡಿಸುವ ಪ್ರಯತ್ನ ಮಾಡಲಾಗುವುದು. ಜಿಲ್ಲೆಗೆ ಕೋವಿಡ್‍ಗೆ ನೀಡಲಾಗುವ ಯಾವುದೇ ಔಷಧಿಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿಲ್ಲ ಎಂದು ಸಚಿವ ಸುಧಾಕರ್ ಹೇಳಿದರು.

ಬ್ಲ್ಯಾಕ್ ಫಂಗಸ್ ಆತಂಕದ ಅಗತ್ಯವಿಲ್ಲ

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಂಡುಬಂದಿದ್ದು, ಜಿಲ್ಲೆಯಲ್ಲಿಯೂ ಈವರೆಗೆ 15 ರಿಂದ 20 ಜನರಿಗೆ ಸೋಂಕು ಕಂಡುಬಂದಿದೆ. ಈ ಸೋಂಕಿಗೆ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕುವಂತೆ ಮಾಡಲಾಗಿದೆ. ಸೋಂಕು ನಿವಾರಣೆಗೆ ಅಗತ್ಯವಿರುವ ಔಷಧಿ ಪೂರೈಕೆಗೂ ಕ್ರಮ ವಹಿಸಲಾಗಿದ್ದು, ಇದು ಸಾಂಕ್ರಾಮಿಕ ರೋಗವಲ್ಲ, ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ.

ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ಕೋವಿಡ್ ಚಿಕಿತ್ಸೆಯಲ್ಲಿ ಅತಿಯಾದ ಸ್ಟಿರಾಯ್ಡ್ ಬಳಕೆ, ಅನಿಯಂತ್ರಿತ ಮಧುಮೇಹ ಮುಂತಾದ ಕಾರಣಗಳಿಂದ ಈ ಸೋಂಕು ಉಂಟಾಗುತ್ತಿದೆ. ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಹೊಂದಿರುವವರ ಆರೋಗ್ಯ ತಪಾಸಣೆಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಬಿಡುಗಡೆಯಾದ ದಿನದಿಂದ 03, 07, 15 ದಿನಗಳ ಅವಧಿಯಲ್ಲಿ ಅವರಿಗೆ ಯಾವ ಬಗೆಯ ಪರೀಕ್ಷೆ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಬ್ಲ್ಯಾಕ್ ಫಂಗಸ್ ಸೋಂಕಿನ ಬಗ್ಗೆ ಮಾಧ್ಯಮಗಳು ದಯವಿಟ್ಟು ವೈಭವೀಕರಿಸುವ ಮೂಲಕ, ಈಗಾಗಲೆ ಕೋವಿಡ್‍ನಿಂದ ಮಾನಸಿಕವಾಗಿ ಆತಂಕದಲ್ಲಿರುವ ಸಮಾಜದಲ್ಲಿ ಇನ್ನಷ್ಟು ಭಯದ ವಾತಾವರಣ ಕಲ್ಪಿಸಬೇಡಿ ಎಂದು ಆರೋಗ್ಯ ಸಚಿವರು ಮನವಿ ಮಾಡಿದರು.

ವಿಧಾನಪರಿಷತ್ ಸದಸ್ಯ ಭೋಜೇಗೌಡ ಅವರು ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಸೋಂಕಿತರಿಗೆ ಯಾವುದೇ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ, ಯಾರು ಯಾವುದೇ ಮಟ್ಟದ ಪ್ರಭಾವ ಬಳಸಿದರೂ, ಬೆಡ್ ದೊರೆಯುತ್ತಿಲ್ಲ. ಖಾಸಗಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳಿಂದ ನಿಗದಿತ ಪ್ರಮಾಣದಲ್ಲಿ ಬೆಡ್ ಪಡೆಯದಿರುವುದನ್ನು ಪ್ರಸ್ತಾಪಿಸಿ, ಈ ನಿಟ್ಟಿನಲ್ಲಿ ಸಚಿವರು ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಶಿಕ್ಷಕರನ್ನು ಕೋವಿಡ್ ವಾರಿಯರ್ಸ್ ಎಂದು ಸರ್ಕಾರ ಪರಿಗಣಿಸಿದ್ದು, ಎಲ್ಲ ಶಿಕ್ಷಕರಿಗೂ ಲಸಿಕಾಕರಣ ಆಗಬೇಕು. ಜಿಲ್ಲೆಯಲ್ಲಿ ಇನ್ನೂ 700 ಕ್ಕೂ ಹೆಚ್ಚು ಶಿಕ್ಷಕರಿಗೆ ಲಸಿಕೆ ನೀಡಿಲ್ಲ. ಸೋಂಕಿತರ ಪ್ರಾಥಮಿಕ 10 ಹಾಗೂ ದ್ವಿತೀಯ ಹಂತದ 20 ಸಂಪರ್ಕಿತರಿಗೆ ಕೋವಿಡ್ ಟೆಸ್ಟ್ ಮಾಡಬೇಕು, ಆದರೆ ಜಿಲ್ಲೆಯಲ್ಲಿ ಇದು ಆಗುತ್ತಿಲ್ಲ. ಹೀಗಾಗಿ ಸೋಂಕು ಏರಿಕೆಯಾಗುತ್ತಿದೆ ಎಂದು ಅಸಮಾಧನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ಈಗಾಗಲೆ ಕೋವಿಡ್ ಕರ್ತವ್ಯದಲ್ಲಿರುವ ಸರ್ಕಾರಿ ನೌಕರರು, ಶಿಕ್ಷಕರು, ಆರೋಗ್ಯ ಕಾರ್ಯಕರ್ತರು, ಮಾಧ್ಯಮದವರು, ಬ್ಯಾಂಕ್ ಹಾಗೂ ರೈಲ್ವೆ ಸಿಬ್ಬಂದಿಗಳಿಗೆ ಲಸಿಕೆ ನೀಡುವಂತೆ ನಿರ್ದೇಶನ ನೀಡಲಾಗಿದೆ. ಖಾಸಗಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳಿಂದ ನಿಗದಿತ ಪ್ರಮಾಣದ ಬೆಡ್ ಗಳನ್ನು ಸರ್ಕಾರದ ಆದೇಶಕ್ಕೆ ಅನುಗುಣವಾಗಿ ತಪ್ಪದೆ ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಸಭೆಯಲ್ಲಿ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರುಗಳಾದ ಮಾಡಾಳ್ ವಿರುಪಾಕ್ಷಪ್ಪ, ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ರಾಮಪ್ಪ, ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯತ್ ಸಿಇಒ ಡಾ. ವಿಜಯ ಮಹಾಂತೇಶ್, ಜೆಜೆಎಂಸಿ ಹಾಗೂ ಎಸ್‍ಎಸ್ ವೈದ್ಯಕೀಯ ಕಾಲೇಜುಗಳ ನಿರ್ದೇಶಕರು, ಪ್ರಾಂಶುಪಾಲರು, ಡಿಹೆಚ್‍ಒ ಡಾ. ನಾಗರಾಜ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್‍ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್‍ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.

ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್‍ಸೆಟ್‍ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ

Published

on

ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.

ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.

ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್‌ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ

Published

on

ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.

ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್‌ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.

ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.

ದೂರುಗಳನ್ನು ಆನ್‌ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.

ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending