Connect with us

ಭಾವ ಭೈರಾಗಿ

ಜಯಂತ್ ಕಾಯ್ಕಿಣಿ ; ಕಪ್ಪು ಬಿಳುಪು ಫೋಟೋ ಹಿಂದಿನ ಸವಿ ನೆನಪಿನ ಹೂರಣ..!

Published

on

ಫೋಟೋ ಮತ್ತು ಲೇಖನ ಕೃಪೆ : ಯೋಗರಾಜ್ ಭಟ್
  • ಜಯಂತ ಕಾಯ್ಕಿಣಿ

1953ರ ಈ ಕಪ್ಪು ಬಿಳುಪು ಗ್ರೂಪ್ ಫೋಟೋ ತನ್ನ ಇಡಿಯಲ್ಲಿಯೂ, ಬಿಡಿಯಲ್ಲಿಯೂ ವಿಶಿಷ್ಟವೊಂದನ್ನು ಉದ್ದೀಪೀಸುವಂತಿದೆ. ಇದು ಗೋಕರ್ಣದಲ್ಲಿ ನಮ್ಮ ಮನೆಯ ಪಕ್ಕದಲ್ಲಿರುವ ಮೂಲೆ ಶೇಷಂಭಟ್ಟರ ಮನೆಯ ಹಿಂಗಡೆಯ ಅಂಗಳದ ಬಾವಿ ಕಟ್ಟೆಯ ಬಳಿ ತೆಗೆದದ್ದು. ಈ ಶೇಷಂಭಟ್ಟರು ಬಿಷಪ್ಪರಿಗೆ ಹಸ್ತೋದಕ ಕೊಟ್ಟು ಉದ್ದಂಡ ನಮನ ಮಾಡಿದ ಧೀಮಂತ. ಈ ಮನೆಗೆ ಮೂಲೆ ಮನೆ ಅಂತಲೂ ಹೇಳುತ್ತೇವೆ. ನಾನು, ನನ್ನ ಬಾಲ್ಯದ ಗೆಳೆಯ ನೀಲಕಂಠ, ಪಮ್ಮೇಚ ಇದೇ ಬಾವಿಕಟ್ಟೆಯಲ್ಲಿ ಆಡುತ್ತಿದ್ದೆವು. ಅದರ ಹಿಂದಿನ ತೆಂಗಿನ ಮಡ್ಲಿನ ಪರ್ಣಕುಟಿಯಲ್ಲಿ ಕೊಟ್ಟಿಗೆ ಇದ್ದ ನೆನಪು.

ಆ ಬಾವಿ ಕಟ್ಟೆಯ ಮೇಲೆ ಈ ಕನ್ನಡದ ಕಣ್ಮಣಿಗಳು ಕೂತಿರುವ ಈ ಚಿತ್ರವನ್ನು ಇತ್ತೀಚೆಗೆ ನೋಡಿದ್ದೇ ಮೈ ಜುಮ್ ಎಂದಿತು. ಇದನ್ನು ತೆಗೆದವರು ಗಂಗಾರಾಮ ರಜಪೂತ ಎಂಬ ಛಾಯಾಗ್ರಾಹಕರು. ಅವರು ಆ ದಿನಗಳಲ್ಲಿ ಗೋಕರ್ಣದಲ್ಲಿದ್ದರು. ನಂತರ ಆತ ದಾಂಡೇಲಿಗೆ ಹೋಗಿ ಪೇಪರ್ ಮಿಲ್ ನಲ್ಲಿ ಛಾಯಾಗ್ರಾಹಕರಾಗಿ ಸೇರಿಕೊಂಡಿದ್ದರು. ಅವರ ಮಗ ಅಜಿತ್ ಈಗ ದಾಂಡೇಲಿಯಲ್ಲಿ ” ಗೀತಾ ಸ್ಟುಡಿಯೋ ” ಅಂತ ಇಟ್ಟುಕೊಂಡಿದ್ದಾನೆ. ಅವನು ಎರಡು ವರ್ಷಗಳ ಹಿಂದೆ ನನಗೆ ಉಡುಗೊರೆಯಾಗಿ ಈ ಚಿತ್ರ ಕೊಟ್ಟ.

ಇಲ್ಲಿ ಮುಂದಿನ ಸಾಲಿನಲ್ಲಿ ತೀರ ಎಡಕ್ಕೆ ಇದ್ದವರು ಬಿ. ಎಚ್.ಶ್ರೀಧರ. ಅವರ ಬದಿಗಿದ್ದವರು ವೈಎನ್ಕೆ ಎಂದು ನನ್ನ ಅನುಮಾನ. ಬೇಂದ್ರೆಯವರ ಪಕ್ಕದಿಂದ ತೊಡೆಗೆ ತೊಡೆ ಕೊಟ್ಟು ಆಪ್ತರಾಗಿ ಕೂತವರು : ತರಾಸು, ಗೌರೀಶ ಕಾಯ್ಕಿಣಿ, ಸು. ರಂ. ಎಕ್ಕುಂಡಿ (ಗದ್ದದ ಮೇಲೆ ಕೈ ನೋಡಿ!) , ರಾಮಚಂದ್ರ ಶರ್ಮ ಮತ್ತು ವಟುವಿನಂತೆ ಕಾಣುವ ಎಳೆ ಗೋಪಾಲ ಕೃಷ್ಣ ಅಡಿಗ! ತಮ್ಮ ತಮ್ಮ ಸಾಹಿತಿ ಗಂಡಂದಿರ ಹಿಂದೆ ಕೂತ ಆಯಾ ಹೆಂಡತಿಯರ ಬದ್ಧ ಭೂಮಿಕೆಯೂ ಚಂದ. ಗೌರೀಶರ ಹಿಂದೆ ನನ್ನ ತಾಯಿ ಶಾಂತಾ ಇದ್ದಾರೆ (ಮತ್ತೆ ಗದ್ದಕ್ಕೆ ಸ್ಟೈಲಿಶ್ ಆಗಿ ಕೈ ಯಿಟ್ಟುಕೊಂಡು). ಶಾಂತಾರ ಬಲಕ್ಕೆ ಹಿರಿಯರಾದ ದಾಮೋದರ ಚಿತ್ತಾಲ ಇದ್ದಾರೆ. ( ಕನ್ನಡಕ, ಕೋಟು) ಇವರ ಬಗ್ಗೆ ದಾಮಣ್ಣ ಎಂಬ ವಿಖ್ಯಾತ ಕವಿತೆಯೊಂದನ್ನು ಗಂಗಾಧರ ಚಿತ್ತಾಲರು ಬರೆದಿದ್ದಾರೆ.

ಈ ದಾಮೋದರ ಚಿತ್ತಾಲರ ಹಿಂಬದಿಗೆ ಬಲಕಟ್ಟೆಯ ಮೇಲೆ ಕೂತ ನೀಳ ಕಾಯದವರು ವಿಖ್ಯಾತ ಗಾಯಕ, ಸಂಗೀತಜ್ಞ ರಮೇಶ ನಾಡಕರ್ಣಿ. ಇವರು ಬೇಂದ್ರೆಯವರ “ಕಲ್ಪವೃಕ್ಷ “ಒಳಗೊಂಡು ಎಕ್ಕುಂಡಿಯವರ ಅನೇಕ ಗೀತೆಗಳನ್ನು ಆಕಾಶವಾಣಿಯಲ್ಲಿ ಹಾಡಿ ಆ ಕಾಲದಲ್ಲೇ ಜನಪ್ರಿಯಗೊಳಿಸಿದವರು. ನಂತರ ಮುಂಬೈಯಲ್ಲಿ ಬಹುಕಾಲ ರೇಡಿಯೋದಲ್ಲಿ ಸಂಗೀತ ತಜ್ಞರಾಗಿ ದುಡಿದವರು, ಮಲ್ಲಿಕಾರ್ಜುನ ಮನ್ಸೂರರ ಆಪ್ತವರ್ತಿ. ಹಿಂದಿನ ಸಾಲಿನಲ್ಲಿ ಮಧ್ಯದಲ್ಲಿ ಬಾವಿಕಟ್ಟೆಯ ಗಡಗಡೆಯ ಕೆಳಗೆ ಅಧ್ಯಕ್ಷನಂತೆ ಎರಡೂ ಕೈಗಳನ್ನು ಎರಡೂ ತೊಡೆಗಳ ಮೇಲೆ ಇಟ್ಟು ಕೂತವರು ಖ್ಯಾತ ಬೆಳಗಾಂ ವಕೀಲ, ಲೇಖಕ ರಂಗರಾವ ತಲಚೇರಕರ್ .

ಇವರು ವಿಶಿಷ್ಟ ವಕೀಲಿ ಕೇಸುಗಳನ್ನು ಆಧರಿಸಿ ಕಥೆಗಳನ್ನು ಬರೆಯುತ್ತಿದ್ದರು. ಈ ಕ್ಷಣ ಹೊಳೆಯುವ ವಿಷಾದದ ಸಂಗತಿ ಎಂದರೆ, ಮುಂದಿನ ಸಾಲಿನಲ್ಲಿ ಕೂತವರ ತೊಡೆಯ ಮೇಲಿರುವ ಅನಾಮಿಕ ಮಗು ಮತ್ತು ಈಗ ಗೋಕರ್ಣದ ಮನೆಯಲ್ಲಿ ಬಹುಪಾಲು ಮಗುವಿನಂತೆಯೇ ಆಗಿರುವ ಶಾಂತಾರನ್ನು ಬಿಟ್ಟರೆ ಈ ವೃಂದದ ಯಾರೂ ಈ ಉಪಗ್ರಹದ ಮೇಲೆ ಈಗ ಇದ್ದಂತಿಲ್ಲ.

ವ್ಯಕ್ತಿಗತವಾಗಿ ವಿಭಿನ್ನವಾದ ಹುಡುಕಾಟ, ನೋಟ, ನಿಲುವುಗಳಿದ್ದರೂ, ಒಟ್ಟಾರೆ ಸೇರಿ ಏನೋ ಒಂದು ಒಳ್ಳೆಯದರಲ್ಲಿ ತೊಡಗಿರುವ ಭಾವವೊಂದು ಇಲ್ಲಿ ನಿಚ್ಚಳವಾಗಿದೆ. ‘ಬೇಂದ್ರೆ – ತರಾಸು ತೊಡೆನಾಟ’ ಇದಕ್ಕೆ ಸೊಗಸಾದ ಸಾಕ್ಷಿ. ಬೇಂದ್ರೆ ಮತ್ತು ಅಡಿಗರ ನಡುವೆ ಕಾಯ್ಕಿಣಿ, ಎಕ್ಕುಂಡಿ, ಶರ್ಮ ಇರುವುದೇ ಒಂದು ರೂಪಕ. ಬಹುಶಃ ಇದು ಆಗ ನಡೆದಿದ್ದ ಕುಮಟಾ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ಇವರೆಲ್ಲ ಗೋಕರ್ಣವನ್ನೂ ನೋಡಿಕೊಂಡು ಹೋಗಲು ಬಂದಾಗ ನಡೆದ ಕೂಟ ಕಲಾಪ. ಬಾವಿಯಲ್ಲಿ ಹಾರುವುದು ಹೇಗೆ ಅಥವಾ ‘ ಹಾರಲೇಬೇಕೆ?’ ಎಂಬ ಕುರಿತು ತಲಸ್ಪರ್ಶಿ ಅಧ್ಯಯನ ನಡೆದಿರಬಹುದೆಂಬ ವಕ್ರ ನೋಟವನ್ನೂ ಇದು ಹೊಳೆಸುವಂತಿದೆ!

ಕೃಷ್ಣಾಜಿನದ ಮೇಲೆ ಸಿವಿಲ್ ಡ್ರೆಸ್ಸಿನಲ್ಲಿರುವ ಸ್ವಾಮಿಯಂತೆ ಕೂತಿರುವ ಬೇಂದ್ರೆಯವರ ನಗುವೂ – ” ಇದೂ ಒಂದು ಆಗಿ ಹೋಗಲಪ್ಪಾ” ಎನ್ನುವಂತಿದೆ. ಅಡಿಗರು ಮಾತ್ರ ಆಗಷ್ಟೇ ಅವರು ಮೊಳಗಿಸಿದ್ದ ಚಂಡೆ ಮದ್ದಳೆಯ ಅನುರಣದ ಸೂಕ್ಷ್ಮ ಸುಪ್ತ ಬಂಡಾಯದ ಸೌಮ್ಯ ಆವೃತ್ತಿಯಲ್ಲಿ, ಇನ್ನೂ ಹಚ್ಚದಿರುವ ಸಿಗರೇಟಿನಂತೆ ಕಾಣುತ್ತಿದ್ದಾರೆ. ಕುಮಟಾ ಸಮ್ಮೇಳನದಲ್ಲಿ ಬೇಂದ್ರೆ ಮತ್ತು ನವ್ಯದ ನಡುವಣ ಯುದ್ಧ ಘೋಷಣೆ ಅದಾಗಲೇ ಆಗಿತ್ತಂತೆ! ರಮ್ಯ, ಪ್ರಗತಿಶೀಲ, ನವ್ಯಗಳ ‘ ಶಾರ್ಟ್ ಸರ್ಕೀಟ್’ ಆಗುವಷ್ಟರ ಮಟ್ಟಿಗಿನ ವಿದ್ಯುದಾಲಿಂಗನ ಇಲ್ಲಿದೆ! ಇಷ್ಟೆಲ್ಲ ಬಿಡಿಗಳನ್ನು ಒಂದಾಗಿಸುವ ಸಂಯುಕ್ತವಾದ ಒಂದು ಇಡಿ ಮನಸ್ಸಿನ ಹಾಜರಿಯೇ ಈ ಚಿತ್ರವನ್ನು ಮತ್ತೆ ಮತ್ತೆ ನೋಡಲು ನಮ್ಮನ್ನು ಒತ್ತಾಯಿಸುವಂತಿದೆ. ಸ್ವಲ್ಪ ಪ್ರಯತ್ನಪಟ್ಟರೂ ಆ ಮನಸ್ಸನ್ನು ನಾವೂ ಎಟುಕಬಹುದಾಗಿದೆ ಎಂಬುದೇ ಖುಷಿಯ ಸಂಗತಿಯಾಗಿದೆ.

ಈ ಫೋಟೋ ನೋಡುತ್ತಿದ್ದರೆ ಹಳೆಯ ಕಪಾಟಿನ ಹಳೆಯ ಪುಸ್ತಕದ ಪುಟಗಳ ಗಂಧ, ತಲತ್ ಮಹಮೂದನ ಕಂಪಿತ ಸ್ವರಗಳ ಹಾಡುಗಳು, ಜಾತ್ರೆಗೆ ಬಂದ ನಾಟಕ ಕಂಪನಿಯ ಡೈನಮೋ ಸದ್ದು ಎಲ್ಲ ಸೇರಿದ ಅಮೂರ್ತವೊಂದನ್ನು ಉಕ್ಕಿಸುವ ಸಣ್ಣ ಗದ್ಗದ ಭಾವದ ಜೊತೆಗೆ ‘ ಸತ್ಯಾರ್ಥಿ’ಗಳ ದಾರಿಯ ವಿನಯ ಮತ್ತು ಮುಕ್ತಗೊಳಿಸಬಲ್ಲ ಭಂಗುರತೆಯೂ ಆವರಿಸಿಕೊಳ್ಳುತ್ತದೆ.

( ಸೌಜನ್ಯ: “ಹೊಸ ಮನುಷ್ಯ” ಮಾಸಿಕ, ನವೆಂಬರ್ 2012 ಸಂಚಿಕೆ )

  • ಈ‌ ಲೇಖನ ಮತ್ತು ಫೋಟೋವನ್ನು ಸಿನೆಮಾ ನಿರ್ದೇಶಕ ಯೋಗರಾಜ್ ಭಟ್ ತಮ್ಮ ಫೇಸ್ ಬುಕ್ ಫೇಜಿನಲ್ಲಿ ಹಂಚಿಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಮಣ್ಣ ಮಕ್ಕಳು

Published

on

ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
  • ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ

ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.

ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.

ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು

Published

on


ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.

ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.

  • ಬಸವರಾಜ ಹೂಗಾರ

ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.

ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.

  • ಡಾ.ರಹಮತ್ ತರೀಕೆರೆ

ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.

  • ಬಿ.ಶ್ರೀನಿವಾಸ,ಕೃತಿ ಲೇಖಕ

ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.

ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.

“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.

ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.

ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.

ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ

  • ಡಾ.ರಾಮಚಂದ್ರ ಹಂಸನೂರು, ಬೆಟಗೇರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending