Connect with us

ಅಂತರಂಗ

ಅರಿಮೆಯ ಅರಿವಿರಲಿ-34 : ಕೌಟುಂಬಿಕ ವ್ಯವಹಾರ

Published

on

  • ಯೋಗೇಶ್ ಮಾಸ್ಟರ್

ಬ್ಬ ವ್ಯಕ್ತಿ ಆ ಒಂದು ಘಟನೆಯ ಮುಂಚೆ ಆರೋಗ್ಯಕರವಾಗಿದ್ದ. ಆದರೆ ಆ ಘಟನೆಯ ನಂತರ ಪೂರ್ತಿ ಅಸ್ವಸ್ಥ. ಅದು ಕೆಲವು ಘಟನೆಗಳು ಮಾಡುವ ಆಘಾತ.‌ ಈ posttraumatic embitterment disorder (PTED) ವಕ್ಕರಿಸಿದ ನಂತರ ಎಷ್ಟು ಕಾಲ ಇರುವುದೋ, ಏನೇನೆಲ್ಲಾ ಪ್ರಭಾವಗಳನ್ನು ಬೀರುವುದೋ ಹೇಳಲಾಗದು. ಗಂಡ ಹೆಂಡಿರ ನಡುವಿನ ಜಗಳ ಹೆಚ್ಚಾಗಿ ಇಬ್ಬರಿಗೂ ಸಹಿಸಲು ಸಾಧ್ಯವಾಗುವುದಿಲ್ಲ ಎಂದಾದಾಗ ನ್ಯಾಯಾಲಯದ ಮೊರೆ ಹೋಗಿ ವಿಚ್ಛೇದನೆ ಪಡೆದುಕೊಳ್ಳುತ್ತಾರೆ.

ಆದರೆ ಈ ವಿಚ್ಛೇದನೆಯ ನಂತರ ಭೌತಿಕವಾಗಿ, ಲೌಕಿಕವಾಗಿ ಇಬ್ಬರಿಗೂ ಅಂತರವೇನೋ ಉಂಟಾಗುತ್ತದೆ. ಆದರೆ, ಇಬ್ಬರಲ್ಲೂ ಮಾನಸಿಕವಾದಂತಹ ಒಂದು ಛಾಯೆ ಆವರಿಸಿಯೇ ಇರುತ್ತದೆ. ಆದ್ದರಿಂದಲೇ ವಿಚ್ಛೇದನೆಯ ನಂತರ ಇಬ್ಬರಿಗೂ ಆಪ್ತ ಸಮಾಲೋಚನೆಯ ಅಗತ್ಯವಿರುತ್ತದೆ. ಅದರಲ್ಲೂ ಮಕ್ಕಳೇನಾದರೂ ಇದ್ದಲ್ಲಿ ಈ ಬಗೆಯ ಸಮಾಲೋಚನೆಯ ಅಗತ್ಯ ಹೆಚ್ಚಿರುತ್ತದೆ.

ಒಂದೇ ಬಳ್ಳಿಯ ಹೂಗಳು

ಗಂಡ ಹೆಂಡರ ಸಂಬಂಧವೇನೋ ಕಾನೂನಾತ್ಮಕವಾಗಿ ಕತ್ತರಿಸಿಕೊಳ್ಳಲಾಗುವುದು. ಆದರೆ ಅದಕ್ಕಿಂತಲೂ ಕೆಟ್ಟದಾದ ಸಂಘರ್ಷಗಳು ವಿಚ್ಛೇದನದ ವ್ಯಾಪ್ತಿಗೇ ಬರದಂತಹ ಕೌಟುಂಬಿಕ ಸಂಬಂಧಗಳಲ್ಲಿರುತ್ತವೆ. ಅವುಗಳನ್ನು ಹೇಗೆ ಕತ್ತರಿಸಿಕೊಳ್ಳಲಾಗುತ್ತದೆ. ಒಂದೇ ಕಳ್ಳುಬಳ್ಳಿ, ಒಂದೇ ರಕ್ತ, ಹೆತ್ತ ತಾಯಿ ತಂದೆ, ಒಡಹುಟ್ಟಿದವರು; ಹೀಗೆ ಭಾವುಕ ಕಟ್ಟುಗಳು ಬಿಗಿದಿರುತ್ತವೆ. ಈ ಭಾವುಕತೆಯು ಮತ್ತದೇ ಸಮಾಜ ಸೃಷ್ಟಿಸಿರುವುದು. ಮಗ ತಾಯಿಯ ಜೊತೆ ಜಗಳ ಮಾಡಿದರೆ ಸಮಾಜವೇ ಹೇಳುತ್ತದೆ. ಅವಳು ಹೆತ್ತ ತಾಯಿ ನೀನು ಹೀಗೆ ವರ್ತಿಸಬಾರದು ಎಂದು.

ಹೀಗಾಗಿ ಎಷ್ಟೆಷ್ಟೋ ಮನೆಗಳಲ್ಲಿ ಕುಟುಂಬದ ಸದಸ್ಯರು ತಮ್ಮ ತಮ್ಮ ನಡುವೆ ಗೋಡೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುತ್ತಾರೆ. ಹೊರಗಿನ ನೋಟಕ್ಕೆ ಅವರು ಒಂದೇ ಮನೆಯ ಒಂದು ಕುಟುಂಬದ ಸದಸ್ಯರು. ಆದರೆ ಅವರ ನಡುವೆ ದೊಡ್ಡ ದೊಡ್ಡ ಕಂದಕಗಳು ಇದ್ದು, ಅವರು ಅವುಗಳನ್ನು ಎಂದಿಗೂ ದಾಟದಂತಹ ಸ್ಥಿತಿಯಲ್ಲಿ ಇರುತ್ತಾರೆ. ಪ್ರತಿದಿನವೂ ಒಬ್ಬರಿಗೊಬ್ಬರು ಅನುಮಾನಿಸುತ್ತಿರುತ್ತಾರೆ, ಅಪಮಾನಿಸುತ್ತಿರುತ್ತಾರೆ, ತಿಕ್ಕಾಟಗಳು ನಡೆಯುತ್ತಲೇ ಇರುತ್ತವೆ. ಯಾರಾದರೂ ಸತ್ತಾಗ ಎಲ್ಲರೂ ಒಟ್ಟಿಗೇ ಹೋಗುತ್ತಾರೆ. ಮದುವೆಯೇ ಮೊದಲಾದ ಸಮಾರಂಭಗಳಿಗೆ ಒಟ್ಟಿಗಿರುತ್ತಾರೆ.ಅವರ ನಡುವೆ ನಡೆಯುವ ಎಲ್ಲಾ ವಿದ್ಯಮಾನಗಳೂ ಕೌಟುಂಬಿಕ ವ್ಯವಹಾರ.ವ್ಯಾವಹಾರಿಕವಾಗಿರುವ ಕೌಟುಂಬಿಕ ಸಂಬಂಧಗಳು ಪರಸ್ಪರ ಸೇಡಿನ ಮನೋಭಾವವನ್ನು ಗಾಢಗೊಳಿಸುತ್ತಿರುತ್ತದೆ.

ಕಾರಣ ಬೇಡದ ಆಪ್ತತೆಗಳು

ವಾಸ್ತವವಾಗಿ ಸಂಬಂಧಗಳು ಭಾವನಾತ್ಮಕವಾಗಿರಲು ಆ ಸಂಬಂಧಕ್ಕೆ ಹೆಸರೇ ಬೇಕಾಗಿರುವುದಿಲ್ಲ. ಆತ್ಮೀಯತೆ ಮತ್ತು ಆಪ್ತತೆಯು ವ್ಯಕ್ತಿಗಳ ನಡುವೆ ಅಕಾರಣವಾಗಿಯೋ, ಕಾರಣವಿದ್ದೋ ಬೆಳೆಯುವುದು. ಆ ಬಗೆಯ ಸಂಬಂಧಗಳು ಮುದ ಕೊಡುತ್ತಿರುತ್ತವೆ ಮತ್ತು ಸಾಂತ್ವಾನ ನೀಡುತ್ತಿರುತ್ತವೆ.
ಬಹುಕಾಲದಿಂದ ನೋಡಿರುವ ಮನೆಯೊಳಗಿನ ವ್ಯಕ್ತಿಯು ಹೀಗೆ ಎಂಬ ಹಣೆಪಟ್ಟಿ ಕಟ್ಟಿ ಅವನ ಬೇರೆ ಯಾವ ಬದಲಾವಣೆಯನ್ನೂ ನೋಡಲು ಮತ್ತೊಂದು ವ್ಯಕ್ತಿಗೆ ಇಚ್ಛೆಯೇ ಇರುವುದಿಲ್ಲ.

ಹಾಗಾಗಿ, ವ್ಯಕ್ತಿಯಲ್ಲಿನ ಆಲೋಚನೆಗಳಲ್ಲಿ, ವಿಚಾರಗಳಲ್ಲಿ, ಧೋರಣೆಗಳಲ್ಲಿ ಬದಲಾವಣೆಯು ಶುರುವಾಗಿದ್ದರೂ ಆ ವ್ಯಕ್ತಿಯ ಬಗ್ಗೆ ತಾನು ಹಾಕಿಕೊಂಡಿರುವ ಕನ್ನಡಕದ ಮೂಲಕವೇ ನೋಡುವುದರಿಂದ ಆ ಬದಲಾವಣೆಗಳನ್ನು ಗುರುತಿಸಲಾಗುವುದಿಲ್ಲ. ತಿರಸ್ಕಾರದ ಭಾವ ಎಷ್ಟು ಗಾಢವಾಗಿರಬಹುದೆಂದರೆ ಅಂತಹ ಬದಲಾವಣೆಗಳನ್ನು ಬಯಸುವುದೂ ಇಲ್ಲ. ಕೆಲವರು ತಮ್ಮ ಮನೆಯ ಸದಸ್ಯರ ನಡುವೆ ಜಗಳವಾಗಿ ಸಮಾಲೋಚನೆಗೆಂದು ಬಂದಾಗ, “ನೀವು ಹೀಗೆ ವರ್ತಿಸಿ, ಹೀಗೆ ಪ್ರತಿಕ್ರಿಯೆಗಳನ್ನು ನೀಡಿ. ಅವರು ಬದಲಾಗಬಹುದು. ಸರಿ ಹೋಗುವ ಸಾಧ್ಯತೆಗಳಿವೆ.

ಅವರಿಗೆ ಇಂತಹ ಸಮಸ್ಯೆ ಇದೆ. ಆ ಸಮಸ್ಯೆ ನಿವಾರಣೆಯಾಗಬೇಕೆಂದರೆ ನೀವು ಹೀಗೆ ಮಾಡಬೇಕೆಂದು” ಸಲಹೆ ನೀಡಿದರೆ, “ಇಲ್ಲ ಸಾರ್, ಅವರು ಸರಿ ಹೋಗುವುದಿಲ್ಲ. ನಾನಿಷ್ಟು ವರ್ಷಗಳಿಂದ ನೋಡಿದ್ದೇನಲ್ಲವಾ? ಅವರು ಎಂದಿಗೂ ಸರಿ ಹೋಗುವುದಿಲ್ಲ” ಎಂದು ನಕಾರಾತ್ಮಕವಾಗಿಯೇ ಪ್ರತಿಕ್ರಿಯಿಸುತ್ತಾರೆ. ನಿಜ ಹೇಳಬೇಕೆಂದರೆ ಇವರಿಗೂ ಅವರು ಸರಿ ಹೋಗುವುದು ಬೇಡ. ಇವರು ಅವರ ಬಗ್ಗೆ ಈ ಹಿಂದೆ ದೂರಿರುವುದು, ಈಗ ದೂರುತ್ತಿರುವುದು; ಯಾವುದೂ ಸುಳ್ಳಾಗಬಾರದು. ಅಷ್ಟೇ ಅಲ್ಲ. ಇವರು ಅವರಿಗೆ ‘ಹೀಗೆ’ ಎಂದು ಕಟ್ಟಿರುವ ಹಣೆಪಟ್ಟಿಯು ವಿಫಲವಾಗಬಾರದು. ಈ ಬಗೆಯ ಸಮಸ್ಯೆಗಳು ಕೂಡಾ ತನ್ನೊಡನೆ ಬಾಳುತ್ತಿರುವ ವ್ಯಕ್ತಿಯ ಬದಲಾವಣೆಯನ್ನು ನೋಡಲು ಸಮ್ಮತಿಸುವುದಿಲ್ಲ.

ಅಕ್ಕ ತಂಗಿಯ ನಡುವಿನ ಸಂಘರ್ಷದಲ್ಲಿ ಅಕ್ಕ ತನ್ನ ತಂಗಿಯನ್ನು ಖಳನಾಯಕಿಯನ್ನಾಗಿ ಚಿತ್ರಿಸಿರುವಾಗ ಅವಳು ಒಮ್ಮಿಂದೊಮ್ಮೆಲೇ ಯಾವುದೇ ಕಾರಣಕ್ಕೆ ಒಳ್ಳೆಯವಳಾಗಿ ನಾಯಕಿಯಾಗಲು ಅಕ್ಕಗೆ ಇಷ್ಟವಿರುವುದಿಲ್ಲ. ಅವಳು ಒಳ್ಳೆಯವಳಾಗಿಬಿಟ್ಟರೆ, ತಾನು ದೂರಿರುವವರ ಮುಂದೆ ಸುಳ್ಳಿಯಾಗಿಬಿಡುತ್ತೇನೆ ಎಂಬ ಆತಂಕ. ಇದು ಸೇಡಿನ ಮನೋಭಾವವೇ. ಹೀಗೆ ಜೀವನ ಪೂರ್ತಿ ತಮ್ಮ ಮನಸ್ಸಿನ ಸ್ವಾಸ್ಥ್ಯವನ್ನು ಪದೇಪದೇ ಹಾಳುಗೆಡವಿಕೊಳ್ಳುತ್ತಲೇ ಇರುತ್ತಾರೆ.

ಸೇಡಿನ ರೋಗದ ಲಕ್ಷಣಗಳು

ಸೇಡಿನ ರೋಗದ ಲಕ್ಷಣಗಳೇನೆಂದರೆ, ತಮ್ಮ ಖಿನ್ನತೆ, ಬಳಲಿಕೆ, ಅಹಿತಕರವಾದ ಸ್ಥಿತಿಗೆ ಯಾರು ಕಾರಣ ಮತ್ತು ಯಾವುದು ಕಾರಣ ಎಂದು ತಿಳಿದಿರುತ್ತಾರೆ. ತನಗೆ ಆಗಿರುವುದು ಅನ್ಯಾಯ, ದ್ರೋಹ ಎಂದು ಸ್ಪಷ್ಟವಾಗಿ ತಿಳಿದಿರುತ್ತಾರೆ. ಆ ಸಂಗತಿ ಅಥವಾ ವ್ಯಕ್ತಿಯ ಕಾರಣದಿಂದ ತಾನು ಈ ಅಸಹಾಯಕ ಸ್ಥಿತಿಯಲ್ಲಿದ್ದೇನೆ, ಕೋಪಗೊಂಡಿದ್ದೇನೆ, ಆಘಾತಗೊಂಡಿದ್ದೇನೆ ಎಂದು ಪದೇ ಪದೇ ನೆನೆಸಿಕೊಳ್ಳುತ್ತಿರುತ್ತಾರೆ.

ಸಾಧ್ಯವಾದ ಕಡೆಗಳಲ್ಲೆಲ್ಲಾ ಹೇಳುತ್ತಿರುತ್ತಾರೆ ಮತ್ತು ಹಾಗೆ ಹೇಳುವಾಗ ಪದೇ ಪದೇ ನೆನಪಿಸಿಕೊಳ್ಳುವುದರಿಂದ ಅವರು ಅವರ ಬಗ್ಗೆ ಹೊಂದಿರುವ ನಕಾರಾತ್ಮಕವಾದ ಆಲೋಚನೆಯು ಬಲಗೊಳ್ಳುತ್ತಿರುತ್ತದೆ. ಹಾಗೂ ಅದರ ಕುರಿತಾದ ಭಾವನಾತ್ಮಕವಾದ ನೋವು ಆಳವಾಗುತ್ತಾ ಹೋಗುತ್ತದೆ. ಮಾನಸಿಕವಾಗಿ ಆ ನೋವನ್ನು ಜೀವಂತವಾಗಿಡುವ ಕಾರಣದಿಂದ ಭಾವನಾತ್ಮಕವಾಗಿ ಆ ನೋವು ನಿಜವಾಗಿ ಇಲ್ಲದಿದ್ದರೂ, ಕೃತಕವಾಗಿಯಾದರೂ ಶೋಕ, ಖಿನ್ನತೆ ಮತ್ತು ಆಘಾತವನ್ನು ಪ್ರದರ್ಶಿಸುವ ಅನಿವಾರ್ಯತೆ ಅವರಿಗಿರುತ್ತದೆ.

ಇನ್ನೂ ಕೆಲವರಿಗೆ ಅದೊಂದು ರೀತಿಯಲ್ಲಿ ಅಡಗಿಕೊಂಡಿರುವ ನಾಗರದಂತೆ ಇದ್ದು, ನೆನಪಿನ ಬುಟ್ಟಿ ತೆರೆದಾಗೆಲ್ಲಾ ಹೆಡೆ ಎತ್ತಿ ರೋಷದಿಂದ ಬುಸುಗುಡುತ್ತದೆ ಮತ್ತು ಕಚ್ಚಲು ಪ್ರಯತ್ನಿಸುತ್ತಲೇ ಇರುತ್ತದೆ. ಆ ಒಂದು ದಿನ ಅನುಭವಿಸಿದ ನೋವು, ನಿರಾಸೆ, ಕೋಪ ಮತ್ತು ಅಸಹಾಯಕತೆಗಳನ್ನೆಲ್ಲಾ ಮತ್ತೆ ಮತ್ತೆ ನೆನಪಿನೊಂದಿಗೆ ಮರುಕಳಿಸುವಂತೆ ಮಾಡಿಕೊಳ್ಳುತ್ತಾರೆ. ತಾವು ಸಂಘರ್ಷವನ್ನು ಹೊಂದಿರುವ ವ್ಯಕ್ತಿಯ ಜೊತೆ ಮತ್ತೆ ಸಂಬಂಧವನ್ನು ಸರಿಮಾಡಿಕೊಳ್ಳಲು ಇವರಿಗೇ ಸಲಹೆ ಮತ್ತು ನಿರ್ದೇಶನಗಳನ್ನು ಕೊಡಲು ಪ್ರಾರಂಭಿಸಿದರೆ, ಇವರ ಸಂಬಂಧವನ್ನೇ ಕಡೆದುಕೊಳ್ಳಬಹುದು.

ಏಕೆಂದರೆ ಈಗ ಅವರಿಗೆ ಬೇಕಾಗಿರುವುದು ಸಂಬಂಧದಲ್ಲಿ ಸುಧಾರಣೆಯಲ್ಲ. ತಮ್ಮ ನೋವಿಗೆ ಪ್ರತಿಕಾರವನ್ನು ತೀರಿಸಿಕೊಳ್ಳಬೇಕು. ಸೇಡು! ಅದು ಎಷ್ಟರಮಟ್ಟಿಗೆ ಮುಟ್ಟಬಹುದು ಎಂದರೆ, ಕೊಲೆ ಅಥವಾ ಆತ್ಮಹತ್ಯೆಯವರೆಗೂ ಹೋಗಬಹುದು.
ಇದಕ್ಕೆ ಪರಿಹಾರವೆಂದರೆ, ಪ್ರತಿಯೊಂದನ್ನು ತನ್ನ ಆಲೋಚನೆಯಂತೆಯೇ ನೋಡುವುದನ್ನು ನಿಲ್ಲಿಸುವುದು. ಅಂದರೆ ಯಾವುದೇ ಒಂದು ವಸ್ತುವನ್ನು, ಸಂಗತಿಯನ್ನು ಅಥವಾ ವ್ಯಕ್ತಿಯನ್ನು ತಮ್ಮಲ್ಲಿ ಈಗಾಗಲೇ ಇರುವಂತಹ ಆಲೋಚನೆಗಳ ಚೌಕಟ್ಟಿನಲ್ಲಿ ಅಳವಡಿಸದಂತಹ ಎಚ್ಚರಿಕೆಯನ್ನು ಹೊಂದುವುದು.

ಯಾವುದೇ ವ್ಯಕ್ತಿಯನ್ನು ನೋಡಿದ ಕೂಡಲೇ “ಇವರು ಹೀಗೆ” ಎಂದು ಭಾವ ಮೂಡುತ್ತಿದ್ದಂತೆ ಎಚ್ಚರಿಕೆಯನ್ನು ಹೊಂದುವುದು. ಯಾರಿಗೂ ಹಣೆಪಟ್ಟಿಯನ್ನು ಕಟ್ಟದೇ, ತಾನೂ ಕಟ್ಟಿಕೊಳ್ಳದಂತೆ ಇರುವ ಅಭ್ಯಾಸವನ್ನು ಉದ್ದೇಶಪೂರ್ವಕವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಮಾಡುವುದು. ಯಾವುದೋ ಕಾಗದವನ್ನು ಬರೆಯುತ್ತೀರಿ. ಅದು ಸರಿಹೋಗಲಿಲ್ಲವೆಂದರೆ ಬೇಸರದಿಂದ ಹರಿದು ಚೂರು ಚೂರು ಮಾಡದೇ ಅದನ್ನು ಹಾಗೆಯೇ ಪಕ್ಕಕ್ಕಿರಿಸುವುದು ರೂಢಿ ಮಾಡಿಕೊಳ್ಳಬೇಕು. ಯಾವುದಾದರೂ ವಸ್ತುಗಳಿಂದ ಕೆಲಸ ಮಾಡುತ್ತಿದ್ದಾಗ ಅವು ಸರಿಹೋಗದಿದ್ದರೆ ಅದನ್ನು ನಾಶ ಮಾಡುವ ರೂಢಿ ಇದ್ದರೆ ಅದನ್ನು ಮೊದಲು ತಪ್ಪಿಸಬೇಕು.

ಎಲ್ಲದರಲ್ಲೂ ನನಗೇನು ಲಾಭ ಎನ್ನುವಂತಹ ಆಲೋಚನೆಯೇ ಒಂದು ಮಾನಸಿಕ ಸಮಸ್ಯೆ. ಯಾರಿಂದ, ಯಾವುದರಿಂದ ನನಗೇನಾಗಬೇಕಿದೆ ಎಂಬ ಜಿಗುಪ್ಸೆಯೂ ಕೂಡಾ ಅದೇ ಮಾನಸಿಕ ಸಮಸ್ಯೆಯ ಮತ್ತೊಂದು ಮುಖ. ಕನ್ನಡಕವಿಲ್ಲದೇ, ಲಾಭ ನಷ್ಟಗಳ ಆಲೋಚನೆ ಇಲ್ಲದೆ ಸಂಗತಿಗಳನ್ನು ಮತ್ತು ವ್ಯಕ್ತಿಗಳನ್ನು ನೋಡುವ ಜಾಣರು ತಮ್ಮ ಮನದಲ್ಲಿ ಗಾಯ ಮಾಡಿಕೊಳ್ಳಲಾರರು ಮತ್ತು ಅದನ್ನು ಪದೇ ಪದೇ ಕೆರೆದುಕೊಂಡು ಹುಣ್ಣು ಮಾಡಿಕೊಳ್ಳಲಾರರು.

ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ
ಕೊರತೆಯೊಂದನು ನೀನು ನೆನೆನೆನೆದು ಕೆರಳಿ
ಧರೆಯಲ್ಲವನು ಶಪಿಸಿ ಮನದಿ ನರಕವ ನಿಲಿಸಿ
ನರಳುವುದು ಬದುಕೇನೋ ಮಂಕುತಿಮ್ಮ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಹಳ್ಳಿ ಹೆಜ್ಜೆಯ ಸುತ್ತು

Published

on

ಸಾಂದರ್ಭಿಕ ಚಿತ್ರ
  • ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್

ಭಾರತದ ಜನಸಂಖ್ಯೆಯ ಸುಮಾರು 70% ಕ್ಕಿಂತ ಹೆಚ್ಚು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಅಂತೆಯೇ ನಾವು ಸೇವಿಸುವ ಆಹಾರ ಮತ್ತು ಕೃಷಿ ಉತ್ಪನ್ನಗಳ ಮುಖ್ಯ ಮೂಲ ಗ್ರಾಮಗಳು. ಸ್ವಾತಂತ್ರ್ಯದ ನಂತರ ಗ್ರಾಮಗಳು ಜನಸಂಖ್ಯೆ ಮತ್ತು ಶಿಕ್ಷಣ ಎರಡರಲ್ಲೂ ಹೆಚ್ಚು ಬೆಳೆದಿದೆ.

ಹಳ್ಳಿಯ ಜನರು ತಮ್ಮ ಕೆಲಸಕ್ಕೆ ಹೆಚ್ಚು ಸಮರ್ಪಿತರಾಗಿದ್ದಾರೆ, ನಗರದ ಜನರು ಸಹ ಹೆಚ್ಚಿನ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿರುತ್ತಾರೆ ಮತ್ತು ನಗರ ಪ್ರದೇಶದ ಜನರಿಗು ಹಳ್ಳಿ ಜನರಿಗು ತುಂಬಾನೆ ವ್ಯತ್ಯಾಸಗಳನ್ನು ಕಾಣಬಹುದು. (ಉಡುಗೆ-ತೊಡುಗೆ, ಕೆಲಸ-ಕಾರ್ಯಗಳಲ್ಲಿ, ಊಟೋಪಚಾರದಲ್ಲಿ)

ಇದಲ್ಲದೆ ಇಡೀ ಗ್ರಾಮವು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುತ್ತದೆ ಮತ್ತು ಯಾವುದೇ ರೀತಿಯ ಸಂಘರ್ಷವಿಲ್ಲದೆ ಗ್ರಾಮಸ್ಥರು ಪರಸ್ಪರ ದುಃಖ ಮತ್ತು ಸಂತೋಷದಲ್ಲಿ ಮುಂದೆ ಬರುತ್ತಾರೆ ಮತ್ತು ಅವರು ಸಹಾಯಕ ಸ್ವಭಾವವನ್ನು ಹೊಂದಿದ್ದಾರೆ.

ಗ್ರಾಮದ ಮಹತ್ವ

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಗ್ರಾಮಗಳು ಅಸ್ತಿತ್ವದಲ್ಲಿವೆ ಮತ್ತು ಸರಕುಗಳ ಬೇಡಿಕೆ ಮತ್ತು ಪೂರೈಕೆಗಾಗಿ ಅವು ಪರಸ್ಪರ ಅವಲಂಬಿತವಾಗಿವೆ. ಅಂತೆಯೇ ಅವು ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿವೆ. ಭಾರತವು ತನ್ನ ದ್ವಿತೀಯ ಮತ್ತು ತೃತೀಯ ಕ್ಷೇತ್ರಕ್ಕಿಂತ ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿರುವ ದೇಶ.

ಅಲ್ಲದೆ ಭಾರತವು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ ಮತ್ತು ಈ ದೊಡ್ಡ ಜನಸಂಖ್ಯೆಯನ್ನು ಪೋಷಿಸಲು ಅವರಿಗೆ ಹಳ್ಳಿಗಳಿಂದ ಬರುವ ಆಹಾರ ಬೇಕು ಇದು ನಮಗೆ ಮತ್ತು ಪ್ರತಿಯೊಬ್ಬರಿಗೂ ಏಕೆ ಮುಖ್ಯವಾಗಿದೆ ಎಂಬುದನ್ನು ಇದು ವಿವರಿಸುತ್ತದೆ. ಗ್ರಾಮಗಳು ಆರ್ಥಿಕತೆಯ ಬೆನ್ನೆಲುಬು ಎಂದು ನಾವು ಹೇಳಬಹುದು.

ಇದನ್ನೂ ಓದಿ | ಚಿತ್ರದುರ್ಗ | ಕೊರೋನಾದಿಂದ ಪಬ್ಲಿಕ್ ಟಿವಿ ಕ್ಯಾಮೆರಾಮನ್ ಬಸವರಾಜ್ ಕೋಟಿ‌ ಸಾವು

ಅಲ್ಲದೆ ನನ್ನ ಗ್ರಾಮವು ಭಾರತದ ಎಲ್ಲಾ ಹಳ್ಳಿಗಳ ಒಂದು ಭಾಗವಾಗಿದ್ದು, ಜನರು ಇನ್ನೂ ಶಾಂತಿ ಮತ್ತು ಸೌಹಾರ್ದಯುತವಾಗಿ ವಾಸಿಸುತ್ತಿದ್ದಾರೆ. ಗ್ರಾಮಗಳ ಜನರು ಸ್ನೇಹಪರರಾಗಿದ್ದಾರೆ ನಗರ ಪ್ರದೇಶದ ಜನರಿಗೆ ಹೋಲಿಸಿದರೆ ಸಂತೋಷದಾಯಕ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಾರೆ.

ಇದಲ್ಲದೆ ಮರಗಳು, ವೈವಿಧ್ಯಮಯ ಬೆಳೆಗಳು, ಗದ್ದೆ-ತೋಟ, ಹೂವುಗಳ ವೈವಿಧ್ಯತೆ ಮತ್ತು ಹಳ್ಳಕೊಳ್ಳಗಳು ಇತ್ಯಾದಿಗಳಿವೆ. ಇವೆಲ್ಲವುಗಳಲ್ಲದೆ ರಾತ್ರಿಯಲ್ಲಿ ತಂಪಾದ ಆಹ್ಲಾದಕರವಾದ ಗಾಳಿ ಮತ್ತು ಹಗಲಿನಲ್ಲಿ ಬೆಚ್ಚಗಿನ ಗಾಳಿ ಜೋತೆಗೆ ಪೈರಿನ ಸುವಾಸನೆ ಬೀಸುತ್ತದೆ.

ನನ್ನ ಹಳ್ಳಿ

ನನ್ನ ಹಳ್ಳಿಯು ತಗ್ಗು ಪ್ರದೇಶದಲ್ಲಿದ್ದು ಬೆಚ್ಚಗಿನ ಬೇಸಿಗೆಯನ್ನು, ಜಿಟಿ-ಜಿಟಿ ಮಳೆಯನ್ನು ಮತ್ತು ಚುಮು-ಚುಮು ಚಳಿಗಾಲವನ್ನು ಹೊಂದಿದೆ. ಹೆಚ್ಚಾಗಿ ರಜಾದಿನಗಳ ಕಾರಣ ಬೇಸಿಗೆಯಲ್ಲಿ ಪ್ರತಿಯೊಬ್ಬರೂ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಬೇಸಿಗೆಯಲ್ಲಿ ನಗರಕ್ಕಿಂತ ಗ್ರಾಮವು ತಂಪಾಗಿರುತ್ತದೆ. ಅಲ್ಲದೆ ತಂಗಾಳಿಯಿಂದಾಗಿ ನಮಗೆ ಹಳ್ಳಿಯಲ್ಲಿ ಹವಾನಿಯಂತ್ರಣ ಅಗತ್ಯವಿಲ್ಲ.

ಒಂದು ಹಳ್ಳಿಯಲ್ಲಿ ನೀವು ಹಸಿರನ್ನು ನೋಡುತ್ತೀರಿ ಮತ್ತು ಪ್ರತಿಯೊಂದು ಮನೆಯಲ್ಲೂ ಅವರ ಅಂಗಳದಲ್ಲಿ ಕನಿಷ್ಠ ಒಂದು ಮರವಿರುತ್ತದೆ. ಇದಲ್ಲದೆ ಬೇಸಿಗೆ ಸುಗ್ಗಿಯ ಕಾಲವಾಗಿರುವುದರಿಂದ ಹಳ್ಳಿಯಲ್ಲಿ ರೈತರು ತಮ್ಮ ಬೆಳೆಗಳನ್ನು ವಕ್ಕಲು ಮಾಡಿಕೊಳ್ಳುವುದನ್ನು ಕಾಣಬಹುದು ಹಳ್ಳಿಯಲ್ಲಿ ಮೊದಲು ಹೆಚ್ಚು ಕಚ್ಚಾ ಮನೆ (ಮಣ್ಣು ಮತ್ತು ಇಟ್ಟಿಗೆಗಳಿಂದ ಮಾಡಿದ ಮನೆಗಳು) ಇರುವುದನ್ನು ಕಾಣುತ್ತಿದ್ದೆವು ಆದರೆ ಈಗ ಸನ್ನಿವೇಶವು ಬದಲಾಗಿದೆ ಇಂದು ಪಕ್ಕಾ ಮನೆಯ ಸಂಖ್ಯೆ (ಕಾಂಕ್ರೀಟ್ ಮತ್ತು ಇತರ ವಸ್ತುಗಳಿಂದ ಮಾಡಲ್ಪಟ್ಟಿದೆ) ಹೆಚ್ಚಾಗಿದೆ. ಅಲ್ಲದೆ ಗ್ರಾಮದ ಜನರಿಗಿಂತ ಹಳ್ಳಿಯ ಜನರು ಸ್ನೇಹಪರರಾಗಿದ್ದಾರೆ.

ನನ್ನ ಹಳ್ಳಿಯ ಬಗ್ಗೆ ನಾನು ಹೆಚ್ಚು ಇಷ್ಟಪಡುವ ವಿಷಯವೆಂದರೆ ತಾಜಾ ಮತ್ತು ಪುನರುಜ್ಜೀವನಗೊಳಿಸುವ ಗಾಳಿ. ನಾವು 4-5 ಗಂಟೆಗಳ ಕಾಲ ಮಲಗಿದ್ದರೂ ಗಾಳಿಯು ಉಲ್ಲಾಸದ ಭಾವನೆಯನ್ನು ನೀಡುತ್ತದೆ. ಬಹು ಮುಖ್ಯವಾಗಿ ರಾತ್ರಿಯಲ್ಲಿ ನಾನು ನಗರದಲ್ಲಿ ನೋಡಲು ಸಾಧ್ಯವಾಗದ ನಕ್ಷತ್ರಗಳನ್ನು ನೋಡುತ್ತೇನೆ ಮತ್ತು ಎಣಿಸುತ್ತೇನೆ.

ನಮ್ಮ ಹಳ್ಳಿಯು ನಮ್ಮ ರಜಾದಿನಗಳಲ್ಲಿ ಅಥವಾ ನಾವು ದಣಿದಿದ್ದಾಗ ಮತ್ತು ವಿಶ್ರಾಂತಿ ಪಡೆಯಲು ಬಯಸಿದಾಗ ಭೇಟಿ ನೀಡಲು ಇಷ್ಟಪಡುವ ಸ್ಥಳವಾಗಿದೆ. ಹಳ್ಳಿಯು ನಗರದ ಮಾಲಿನ್ಯ ಮತ್ತು ಶಬ್ದದಿಂದ ದೂರವಿರುವ ಸ್ಥಳವಾಗಿದೆ. ಅಲ್ಲದೆ ನೀವು ಹಳ್ಳಿಯ ಮಣ್ಣಿನೊಂದಿಗೆ ಸಂಪರ್ಕವನ್ನು ಅನುಭವಿಸಿದ್ದಾದರೆ ನಿಮ್ಮ ಜೀವನ ತುಂಬಾ ಸುಖಕರವಾಗಿರುವುದಾಗಿದೆ ಎಂಬುದನ್ನ ತಿಳಿದುಕೊಳ್ಳಿ ಏಕೆಂದರೆ ಮಣ್ಣಿನ ವಾಸನೆಯೇ ಹಾಗೆ ಅದನ್ನ ಪಡೆಯಲು ಅದೃಷ್ಟವೇ ಮಾಡಿರಬೇಕು.

ಯಾರಾದರು ಹಳ್ಳಿಗಳ ಬಗ್ಗೆ ಯಾವುದು ಉತ್ತಮ ಎಂಬ ಪ್ರಶ್ನೆಗೆ ಹಳ್ಳಿಗಳಲ್ಲಿ ತಾಜಾ ಗಾಳಿ, ನದಿಗಳು, ಮರಗಳು, ಮಾಲಿನ್ಯವಿಲ್ಲದ ವಾತವರಣ, ಮಣ್ಣಿನ ವಾಸನೆ, ತಾಜಾ ಮತ್ತು ಸಾವಯವ ಆಹಾರ, ಮತ್ತು ಇನ್ನೂ ಅನೇಕ ಉತ್ತಮ ಒಳ್ಳೆಯ ವಿಷಯಗಳಿವೆ ಎಂಬ ಉತ್ತರ ಪ್ರತ್ಯಕ್ಷವಾಗಿ ಕಾಣಸಿಗುತ್ತದೆ.

ಗ್ರಾಮಗಳಲ್ಲಿ ಅಭಿವೃದ್ಧಿಯ ಕೊರತೆಯಿದೆ ಎಂಬುದು ಹಾಸ್ಯಸ್ಪದವಾದ ಸಂಗತಿಯಾಗಿದೆ ಹಳ್ಳಿಗಳು ಸಾಕಷ್ಟು ಉತ್ತಮವಾಗಿ ಅಭಿವೃದ್ಧಿಗೊಂಡಿವೆ ಮತ್ತು ಅವು ನಗರಗಳಿಗಿಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಎಂಬುದು ಸಂತಸದ ಸಂಗತಿಯಾಗಿದೆ.

ಕೋನೆಯದಾಗಿ ಒಂದು ಮಾತು ಹೇಳುವುದಾದರೆ ದೇಶದ ಬೆನ್ನೆಲುಬು ರೈತರಾದರೆ. ದೇಶದ ಹೆಜ್ಜೆಗುರುತು ಹಳ್ಳಿಗಳಾಗಿವೆ ಹಳ್ಳಿಗಳನ್ನ ಬಿಟ್ಟು ದೇಶವಿಲ್ಲ ಎಂಬುದು ವಾಸ್ತವದ ಸಂಗತಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ನುಡಿ ನಮನ | ಡಾ. ವಿಠಲ ಭಂಡಾರಿ, ಕ್ಷಮಿಸಿ ಸರ್

Published

on

ಡಾ. ವಿಠಲ ಭಂಡಾರಿ
  • ಡಾ. ಗಿರೀಶ್ ಮೂಗ್ತಿಹಳ್ಳಿ, ಚಿಕ್ಕಮಗಳೂರು

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಂಶೋಧನೆ ಮಾಡುವಾಗ ಡಾ. ಆನಂದ ಪಾಟೀಲ ಅವರ ಸಲಹೆಯಂತೆ ‘ಪ್ರೀತಿಯ ಕಾಳು’ ಪುಸ್ತಕ ಬೇಕಿತ್ತು. ಈ ಪುಸ್ತಕ ವಿಠಲ ಭಂಡಾರಿ ಅವರ ತಂದೆ ಆರ್. ವಿ. ಭಂಡಾರಿ ಅವರ 13 ಮಕ್ಕಳ ನಾಟಕಗಳ ಸಂಕಲನ. ಈ ಕೃತಿಯನ್ನು ಡಾ. ವಿಠಲ ಭಂಡಾರಿ ಅವರು ಸಂಪಾದಿಸಿದ್ದರು. ಮಾನ್ಯ ಭಂಡಾರಿಯವರನ್ನು ಕೇಳಿಕೊಂಡಾಗ ನನಗೆ ಅಂಚೆ ಮೂಲಕ ಕಳುಹಿಸಿಕೊಟ್ಟಿದ್ದರು.

ಬೇಕಾದ ಪೂರಕ ಮಾಹಿತಿಯನ್ನು ಫೋನಿನಲ್ಲಿಯೇ ಚರ್ಚಿಸಿದ್ದರು. ನನ್ನ ಸಂಶೋಧನೆಯಲ್ಲಿ ಜತೆ ಇದ್ದರು. ಆದರೆ ಒಮ್ಮೆ ಎಂದೂ ಭೇಟಿಯಾದವರಲ್ಲ. ಕಾರಣ ದೂರದೂರು ಎಂದು! ಕರೆ ಮಾಡಿದರೆ, ಅವರು ಎಷ್ಟೇ ಕಾರ್ಯನಿರತರಾಗಿದ್ದರೂ ಕರೆ ಸ್ವೀಕರಿಸಿ ವರ್ತಮಾನವನ್ನು ತಿಳಿಸುತ್ತಿದ್ದರು. ಸಂಶೋಧನಾ ಪ್ರಬಂಧವು ಕೃತಿಯಾದಾಗ ಅವರಿಗೆ ಒಂದು ಪ್ರತಿ ಕಳುಹಿಸಿ ಕೊಟ್ಟೆ.. ತುಂಬಾ ಸಂಭ್ರಮಿಸಿದ್ದರು. ಮೆಚ್ಚುಗೆ ಮಾತುಗಳನ್ನಾಡಿದ್ದರು.

ಕಳೆದ ಲಾಕ್ ಡೌನ್ ಸಮಯದಲ್ಲಿ ನನ್ನ ಪುಸ್ತಕವನ್ನು ಆನ್ ಲೈನ್ ಬಿಡುಗಡೆ ಮಾಡೋಣ ಎಂದು ಕಾರ್ಯಕ್ರಮದ ಕ್ರಿಯಾಯೋಜನೆಯನ್ನು ತಯಾರಿಸಿದ್ದರು… ಇಷ್ಟೆಲ್ಲ ಕಾರ್ಯಗಳು ಪರಸ್ಪರ ಭೇಟಿಯಾಗದೆ ಆದ ವಿಶೇಷ ಅನುಭವಗಳು. ಈ ಮಧ್ಯೆ ಅವರಿಗೆ ಕರೆ ಮಾಡುವುದಕ್ಕೆ ಆಗಿರಲಿಲ್ಲ.

ಆದರೆ ಇಂದಿನ ಅವರ ಅಗಲಿಕೆಯ ಸುದ್ದಿ ನನ್ನನ್ನ ನಿಶ್ಚಲವಾಗಿಸಿದೆ…! ಸಾಮಾನ್ಯ ರೀತಿಯಲ್ಲಿ ಮಾನ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಬಹುದು.. ಆದರೆ ಅವರನ್ನು ಭೇಟಿ ಮಾಡಬೇಕೆಂಬ ಆಸೆಯ ಚಿಗುರಿಗೆ ಕೆಟ್ಟ ಸುದ್ದಿಯ ಸಿಡಿಲೊಡೆದಿದೆ… ಕ್ಷಮಿಸಿ ಸರ್… ನನ್ನ ಸರದಿಯೂ ಬಂದಾಗ ಮೇಲೆ ಬರುವೆ.. ಸಿಕ್ಕೋಣ.. ಈ ಅಮಾನವೀಯ ವ್ಯವಸ್ಥೆಯ ಬಗ್ಗೆ ಚರ್ಚೆ ಮಾಡೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಏನಿದು ವರ್ಷದುಡುಕು;ಹೊಸ್ತುಡುಕು..?

Published

on

ಕೆ.ಶ್ರೀಧರ್ (ಕೆ.ಸಿರಿ)
  • ಕೆ.ಶ್ರೀಧರ್ (ಕೆ.ಸಿರಿ)

ಏಪ್ರಿಲ್ 13 ಕ್ಕೆ ಚಾಂದ್ರಮಾನ ಯುಗಾದಿ ಹಬ್ಬ ನಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯರಿಗೆ ನಿಜವಾದ ಹೊಸ ವರ್ಷ ಬೆಳಗ್ಗೆ ಎದ್ದು ನೀರಿಗೆ ಬೇವಿನ ಎಲೆ ಹಾಕಿ ಮೈಗೆಲ್ಲಾ ಎಣ್ಣೆ ಸವರಿಕೊಂಡು ಎಣ್ಣೆ ಸ್ನಾನ ಮಾಡಿ ಹೊಸ ಹುಡುಪುಗಳನ್ನು ಧರಿಸಿ ಮನೆಗೆ ತಳಿರು ತೋರಣ ಕಟ್ಟಿ ಇಷ್ಟ ದೇವರಿಗೆ ಪೂಜೆ ಸಲ್ಲಿಸಿ ಬೇವು ಬೆಲ್ಲ ಸವಿದು ತಾಯಿ ಮಾಡಿದ ಸಿಹಿಯಾದ ತಿಂಡಿ ತಿನಿಸುಗಳ ತಿಂದು ಇಡೀ ದಿನ ಸಂಭ್ರಮದಿಂದ ಹಬ್ಬ ಆಚರಿಸುವುದು ಬಂಧು ಬಾಂಧವರೆಲ್ಲರೂ ಸಂಭ್ರಮ ಪಡುವುದು ಸಂಜೆಯ ನಂತರ ಚಂದ್ರನನ್ನು ನೋಡಿ ಹೊಸ ವರ್ಷ ಆರಂಭಿಸುವುದು ವಿಶೇಷ.

ಯುಗಾದಿ ಎಂದರೆ ಇಷ್ಟೇ ಎಂದು ನಾನು ತಿಳಿದಿದ್ದೆ. ಆದರೆ ಇನ್ನೊಂದು ದಿನವೂ ಹಬ್ಬವಿದೆ ಆ ಹಬ್ಬ ತುಂಬಾ ವಿಶೇಷ ಎನಿಸಿದ್ದು ಈ ವರ್ಷದುಡುಕಿನ ಸಂಭಾಷಣೆ ಕೇಳಿದ ನಂತರವೆ. ನಾನು ಏಪ್ರಿಲ್ 14 ರಂದು ನನ್ನ ಕೆಲಸದ ನಿಮಿತ್ತ ಎಲ್ಲಿಯೋ ಹೊರಟಿದ್ದೆ ಪೆಟ್ರೋಲ್ ಹಾಕಿಸಲು ಬಂಕ್ ನ ಬಳಿ ಹೋದಾಗ ಯಾರೋ ಒಬ್ಬ ಯುವಕ ಬ್ಯಾಗ್ ಹಾಕಿಕೊಂಡು ಯಾವುದೋ ಊರಿಗೆ ಹೋಗುವಂತಿತ್ತು ಅದೇ ಸಂದರ್ಭದಲ್ಲಿ ಬಂದ ಆ ಯುವಕನ ಗೆಳೆಯ ಈ ರೀತಿಯಾಗಿ ಸಂಭಾಷಣೆ ಬೆಳೆಸಿದ.

“ಡೋ ಎಲ್ಲಿಗಡಾ ಹೋಗ್ತಿದೇ’?_
“ಬೆಂಗಳೂರಿಗೆ ಹೋಯ್ತಾವ್ನೀ ಕಯ್ಯಾ”_
“ಯೋ ಎಲ್ಗೋದೇ ಬಾ ನಾಳೆ ಹೊಸ್ತುಡುಕದೆ ಕಣಾ ತೀರಿಸ್ಗಂಡ್ ಹೋಗೈ”
“ಇಲ್ಲ ಬಾಮೈದ ಟೇಮಾಗದ ಆಗಲೇ ರಜಾ ತೀರದ ಕಣಾ ಹೋಗ್ಬೇಕ”
“ಇದ್ಯಾಂವಂಡಾ ಇವಾ ವರ್ಷದುಡುಕು ಮಾಡಾದ್ ಬುಟ್ಟು ಕೆಲಸಕ್ಕ ಹೋದನಂತೆ ಇಮ”
“ಯಾನ್ ಮಾಡದಯ್ಯ ನೀವ್ ಮಾಡ್ರೀ ಹೊಸ್ತುಡುಕ ನಾ ಮುಂದಿನ ಕಿತ ಬರ್ತೀನಿ ಕಣಾ”
“ಆಯ್ತು ಹೋಗಿದ್ದ್ ಬೊಯ್ಯ”
“ನೋಡ್ದಾ ಬಾವೋಜಿ ಇವನ್ ಸುಮಾನ್ವಾ ಹಬ್ಬ ಮಾಡೋ ಬಡ್ಡಿದೇ ಅಂದ್ರೆ ಕೆಲಸಕ್ಕೆ ಹೋದನಂತೆ ಇಮ”
“ನಡೈ ಬಾಮೈದ ಯಾನ್ಹಾ ಮಾಡ್ಲಿ ಹೊಣ್ಣೇರ್ ಕಟ್ಬೇಕು ಬ್ಯಾಗನ್ ನಡೈ ಊರ್ಗೋಗಮು”

ಎಂದು ಮಾತನಾಡುತ್ತಾ ಮಾತನಾಡುತ್ತಾ ಹಾಗೇಯೇ ದ್ವಿಚಕ್ರ ವಾಹನದಲ್ಲಿ ಊರ ಕಡೆ ಹೊರಟರು. ನಾನು ವಿಜಯನಗರ ಜಿಲ್ಲೆಯವನಾದುದರಿಂದ ಈ ವರ್ಷದುಡುಕು/ಹೊಸ್ತುಡುಕು,ಹೊಣ್ಣೇರ್ ಕಟ್ಟೋದು ಈ ಪದಗಳು ಅಪರಿಚಿತ ಅನಿಸ್ತು ತಲೆಯಲ್ಲಿ ಒಂಥರಾ ಈ ಪದಗಳು ಕೊರೆಯಲು ಶುರುಮಾಡಿದವು.

ಚಾಮರಾಜನಗರ ಮೊದಲೇ ದೇಸಿ ಭಾಷೆಯ ಪದಗಳಿಗೆ ಫೇಮಸ್ಸು ಅಂತ ನನಗೆ ಗೊತ್ತಿತ್ತು ಆ ಕುತೂಹಲ ಇನ್ನೂ ನನ್ನಲ್ಲಿ ಹೆಚ್ಚಾಯ್ತು ಹೇಗಾದರೂ ಮಾಡಿ ಈ ಪದಗಳ ಅರ್ಥ ತಿಳ್ಕೋಬೇಕು ಇದ್ಯಾವುದೂ ಇದು ವರ್ಷದುಡುಕು/ಹೊಸ್ತುಡುಕು ಹಬ್ಬ ಅನ್ನೋ ಉತ್ಕಟ ಆಸಕ್ತಿ ಹೆಚ್ಚಾಯಿತು ಹೀಗೆಯೇ ಹಳ್ಳಿಗೆ ಹೋದಾಗ ಗ್ರಾಮಸ್ಥರನ್ನು ಕುರಿತು ಹೀಗೆ ಸಂಭೋಧಿಸಿದೆ.

“ಏನ್ರೀ ಯಜಮಾನ್ರೇ ವರ್ಷದುಡುಕು ಜೋರಾ”?
“ವ್ಹಾ ಬನ್ನಿ ಸಾ ಜೋರದ ಕಣಾ, ಹಬ್ಬ ಅಂದಮ್ಯಾಗ ಇದ್ದಿದ್ದೇ ಅಲ್ವಾ ಕಣೀ ಸಾ”
“ಅದ್ಸರಿ ಏನೀ ಈ ಹೊಸ್ತುಡುಕು ಅಂದ್ರೆ”?
“ವ್ಹಾ ನೀವು ಸರಿಗೆ ಕೇಳಿದ್ರೀ ಕಪಾ ಇನ್ನೇನಾ ಸಾ ಯುಗಾದಿ ಮುಗಿದ ಮಾರ್ನೇ ದಿನಾ, ಎಲ್ಲರೂ ಮನೇಲೆ ಇರ್ತಾರ, ಹೈಕ ಮಕ್ಕ ನೀರೇರೆಚಗತಾರ, ಒಬ್ಬಿಟ್ಟು ಪಾಯಾಸ,ತಿಂಡಿ ಗಿಂಡಿ ಮಾಡ್ಕಂಡಮಾ ದ್ಯಾವ್ರಗ ಎಡೆ ಗಿಡೆ ಮಡಗಿ ಮಕ್ಕ ಮರಿ ತಿನ್ಕಂಡು ಉಣ್ಕಂಡು ಹಟ್ಟೀಲಿ ಜಾಲಿಯಾಗಿ ಇರ್ತಾರ”.
“ಇಷ್ಟೇಯಾ ವರ್ಷದುಡುಕು ಅಂದ್ರೆ”?
“ಅದ ಸಾ ಆಡೋರು ಇಸ್ಪೀಟ್ ಗಿಸ್ಪೀಟ್ ಆಡ್ತಾರ ಒಂಥರಾ ರಜೆ ಇದ್ದಂಗೆ ಸಾ ದಿನವೆಲ್ಲಾ ಹಟ್ಟೀಲೆ ಇರ್ತಾರ”

“ಅದ್ಸರಿ ಈ ಹೊಣ್ಣೇರ್ ಕಟ್ಟೋದು ಅಂದ್ರೆ ಏನು”?”ಅದಿನ್ಯಾನಿದ್ದು ಸಾ ಆರಂಭಕಾರ್ರಿಗೆ ಇದು ಹೊಸ್ವರ್ಸ ಇದ್ದಂಗ ಎತ್ಗಳಿಗ ನೊಗ ಹಾಕಿ,ನೇಗ್ಲು ಹೂಡಿ, ಕಕ್ಕೆ ಹೂವ,ಗಣಿಗಲ ಹೂವ ಎತ್ಗೋಳ್ ಕೊಂಬಿಗೆ ಕಟ್ಟಿ ಊರಾಗ ಒಂದ್ ರೌಂಡ್ ಸುತ್ತಿಸಿಗಂಡಮಾ ಪೂಜಾ ಗೀಜಾ ಮಾಡಿ ಆರಂಭ ಶುರು ಮಾಡೋದಕ್ಕ ಹೊಣ್ಣೇರ್ ಕಟ್ಟೋದು ಅಂತಾರೆ ಅಷ್ಟೇಯಾ ಅದು ಈಗ ಅಷ್ಟೋಂದಿಲ್ಲ ಸಾ ಕೆಲವು ಕಡಿಗ್ಯಾ ಮಾಡ್ತಾರಾ ಕೆಲವು ಕಡಿಗ್ಯಾ ಬುಡ್ತಾರಾ ಅದೆಲ್ಲಾ ಒಂದ್ ಜಮಾನ್ದಾಗಿತ್ತು”

“ಓಹ್ ಸರಿ ಈ ಕಕ್ಕೆ ಹೂವು ಗಣಗಲ ಹೂವು ಅಂದ್ರೆ ಯಾವುದು”? “ಅದೇ ಸಾ ಈ ರೋಡ್ಚೋರಿ ಕೆಂಪ್ಗ ಇರ್ತಾವಲ್ಲ ಅವೇ ಕಕ್ಕೆ ಹೂವು, ಅರಿಶಿಣ ಬಣ್ಣದ ಹೂವ್ ಇರ್ತಾವಲ್ಲ ಅವು ಗಣಿಗಲ್ವೂ ಈ ರಸ್ತಿ ಅಗಲೀಕರಣದಿಂದ ಆ ಹೂವುಗಳು ಸಿಗೋದೆ ಅಪರೂಪ ಆಗ್ಬುಟ್ಟದಾ!”

“ಹೂಂ… ಸರಿ ಇಷ್ಟೇಯಾ ಹಾಗಾರೆ ಹೊಸ್ತುಡುಕು ಅಂದ್ರೆ”?
“ಹೂಂ ಇನ್ನೂ ಅದೆ ಮಾಡೋರು ಮರಿ ಕೂದು ಬಾಡ್ಗಿಡೂಟಾ ಮಾಡ್ತಾರೆ ಎಣ್ಣಿ ಗಿಣ್ಣಿ ಹೊಡ್ದು ಜಾಲಿ ಮಾಡ್ತಾರೆ”
“ಈ ವರ್ಷದುಡುಕ್ಲೀ ಮಾಂಸದೂಟ ಕಡ್ಡಾಯಾ ನಾ”?
“ಹೇ ಹಾಗೇನಿಲ್ಲಾ ಸಾ ಆದರೆ ಒಂದ್ ಜಮಾನ್ದಾಗಿತ್ತಂತೆ ಯುಗಾದಿ ಆದ್ ಮರುದಿನ ಮಾಂಸ ತಿನ್ನಲಿಲ್ಲ ಅಂದ್ರೆ ಸ್ವರ್ಗಕ್ಕೆ ಬಿಡೋಲ್ಲ ಮಾಂಸ ತಿನ್ನಬೇಕು ಅನ್ನೋ ಪ್ರತೀತಿ ಇತ್ತಂತೆ ಇದನ್ನೆಲ್ಲ ನಿಮ್ಮ ಜಮಾನ್ದೋರಿಗೆ ಹೇಳಿದ್ರ ಬಿದ್ದು ಬಿದ್ದು ನಗನಾಡ್ತಿರೀ, ಕೆಲವರು ಆ ದಿನ ದುಡ್ಡು ಕಾಸು ಯಾರಿಗೂ ಕೊಡಾಕಿಲ್ಲ ಹಿಂಗ ಹತ್ತಲವು ಸಂಪ್ರದಾಯಾಗಳು ನೇಮ್ಗಳನ್ನ ಮಾಡ್ತಾರೆ”

“ಜಮೀನಿಗೆ ಹೋಗಿ ಉಳುಮೆ ಗಿಳುಮೆ ಮಾಡೋಲ್ವೋ”?
“ಕಂಡೀಸನ್ನಾಗಿ ಯಾರು ಹೊಲ್ನ ಊಳೋಲ್ಲ ಅಪ್ಪಿ ತಪ್ಪಿ ಮಳಿ ಗಿಳಿ ಉಯ್ಯ್ದ್ರೆ ಸ್ಥಳೀಯ್ ಜ್ವಾಳ ಗೀಳ ಬಿತ್ತೋರು ಬಿತ್ತಾರ ಅಷ್ಟೇ” “ಹೂಂ ಆಯ್ತು ಯಜಮಾನ್ರೆ ಥ್ಯಾಂಕ್ಯೂ ನಾನು ಬರ್ತೀನಿ” “ಹೂಂ ಆಯ್ತು ಕಣೀ ಹೋಗಿ ಬುದ್ದೀ ನಂಗು ಹೊಟ್ಟೈಸಿತೈತಿ ಹಟ್ಟಿಗೆ ಹೋಗ್ಬೇಕು ಒಬ್ಬಿಟ್ಟು ತಿನ್ಬೇಕು”.

ನೋಡಿ ನಮ್ಮ ಗ್ರಾಮೀಣ ಭಾಗದ ಸಂಪ್ರದಾಯಗಳು ಎಷ್ಟು ಚೆಂದ ಅಲ್ವಾ ಈ ದೇಸಿ ಭಾಷೆಯಲ್ಲಿ ಎಷ್ಟು ತಾಕತ್ತಿದೆ ಎಷ್ಟು ಗ್ರಾಮೀಣತೆಯ ಸೊಗಡಿದೆ ಈ ಭಾಷೆನಾ ಹಳ್ಳಿಗಳಲ್ಲಿ ಬಿಟ್ರೆ ಜಗತ್ತಿನ ಯಾವ ವಿಶ್ವ ವಿದ್ಯಾಲಯಗಳಲ್ಲೂ ಕೂಡ ಕಲಿಯಲಿಕ್ಕೆ ಆಗೋದಿಲ್ಲ. ನಮ್ಮ ಹಿಂದಿನವರು ನಡೆಸಿಕೊಂಡು ಬಂದ ಕೆಲವೊಂದು ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯ ನಮ್ಮ ಪರಂಪರೆ ಎಂತದ್ದು ಅಂತ ಹೇಳ್ತವೆ. ಈ ಚಾಮರಾಜನಗರದ ವರ್ಷದುಡುಕು ಹಾಗೇನೆ ಒಂಥರಾ ದೇಸಿಯ ಭಾಷೆಯ ಹಬ್ಬ ಹರಿದಿನಗಳ ಪರಿಚಯ ನನಗಾಯ್ತು ಧನ್ಯವಾದಗಳು ಚಾಮರಾಜನಗರ.

(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿಗಳು
ಚಾಮರಾಜನಗರ
9741270125)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending