Connect with us

ದಿನದ ಸುದ್ದಿ

ಕನ್ನಡ ರಾಜ್ಯೋತ್ಸವ ಮತ್ತು ಅಂಬೇಡ್ಕರ್

Published

on

  • ರಘೋತ್ತಮ ಹೊ.ಬ

ರ್ನಾಟಕ 1956 ನವೆಂಬರ್ 1 ರಂದು ಕನ್ನಡ ಮಾತಾಡುವ ಜನರನ್ನೊಳಗೊಂಡ ಪ್ರತ್ಯೇಕ ಭಾಷಾವಾರು ರಾಜ್ಯವಾದದ್ದು ಎಲ್ಲರಿಗೂ ತಿಳಿದದ್ದೆ. ಆ ಕಾರಣಕ್ಕೆ ಪ್ರತಿ ವರ್ಷ ನವೆಂಬರ್ 1 ರಂದು ನಾವು ಕನ್ನಡ ರಾಜ್ಯೋತ್ಸವ ಆಚರಿಸುತ್ತೇವೆ. ಹಾಗಿದ್ದರೆ ಇಲ್ಲಿ ಅಂಬೇಡ್ಕರ್ ಹೇಗೆ ಪ್ರಾಮುಖ್ಯತೆ ಪಡೆಯುತ್ತಾರೆ ಎಂದು ಕೆಲವರಿಗಾದರೂ ಆಶ್ಚರ್ಯವಾಗಬಹುದು. ಆದರೆ ಅಂಬೇಡ್ಕರ್ ಪ್ರಾಮುಖ್ಯತೆ ಪಡೆಯುತ್ತಾರೆ.

ಏಕೆಂದರೆ ರಾಜ್ಯಗಳ ಪುನರ್ರಚನೆಗೆ ಸಂಬಂಧಿಸಿದಂತೆ 1955 ರಲ್ಲಿ ರಚನೆಯಾಗಿದ್ದ ಆಯೋಗದ ಮುಂದೆ ಬಾಬಾಸಾಹೇಬರು ತಮ್ಮ ಚಿಂತನೆಗಳನ್ನು ಪ್ರಸ್ತಾಪಿಸಿದ್ದಾರೆ. ಆ ಮೂಲಕ ಭಾಷಾವಾರು ರಾಜ್ಯಗಳ ರಚನೆಗೆ ಅಂಬೇಡ್ಕರರು ತಮ್ಮ ಪ್ರಬಲ ವಾದ ಮಂಡಿಸಿದ್ದಾರೆ.

ಈ ನಿಟ್ಟಿನಲ್ಲಿ ಅಂಬೇಡ್ಕರ್ ರವರ ಮತ್ತು ಅವರ ಹಾಗೆಯೇ ವಾದ ಮಂಡಿಸಿದ ಇತರರ ವಾದದ ಆಧಾರದ ಮೇಲೆ ರಾಜ್ಯ ಪುನರ್ ವಿಂಗಡಣಾ ಆಯೋಗ ಭಾಷಾವಾರು ರಾಜ್ಯಗಳ ರಚನೆಗೆ ಶಿಫಾರಸ್ಸು ಮಾಡುತ್ತದೆ. ಅಂದಹಾಗೆ ಹಾಗೆ ಶಿಫಾರಸ್ಸುಗೊಂಡು ರಚಿತವಾದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಮತ್ತು ಈ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವದ ಈ ಹಿನ್ನೆಲೆಯಲ್ಲಿ ಅಂಬೇಡ್ಕರರು ಕೂಡ ಪ್ರಾಮುಖ್ಯತೆ ಪಡೆಯುತ್ತಾರೆ ಎಂಬುದು ಗಮನಿಸತಕ್ಕ ಅಂಶ.

ಅಂದಹಾಗೆ ಈ ದಿಸೆಯಲ್ಲಿ, ಕರ್ನಾಟಕ ಮತ್ತು ಆ ತರಹದ ಅನೇಕ ಭಾಷಾವಾರು ರಾಜ್ಯಗಳ ರಚನೆಯ ಹಿನ್ನೆಲೆಯಲ್ಲಿ ಅಂಬೇಡ್ಕರರ ವಿಚಾರಗಳೇನು? ನೇರ ದಾಖಲಿಸುವುದಾದರೆ, ಅಂಬೇಡ್ಕರರು ಬರೆಯುತ್ತಾರೆ “ಒಂದು ಭಾಷೆ- ಒಂದು ರಾಜ್ಯ ಎಂಬುದು ಬಹುತೇಕ ಆಡಳಿತ ವ್ಯವಸ್ಥೆಯ ಸರ್ವ ಸಾಮಾನ್ಯ ಲಕ್ಷಣವಾಗಿದೆ.

ಉದಾಹರಣೆಗೆ ಜರ್ಮನಿಯ ಸಂವಿಧಾನವನ್ನು ಗಮನಿಸಿ, ಪ್ರಾನ್ಸ್ ನ ಸಂವಿಧಾನವನ್ನು ಗಮನಿಸಿ, ಇಟಲಿಯ ಸಂವಿಧಾನ, ಇಂಗ್ಲೆಂಡ್ ನ ಸಂವಿಧಾನ ಮತ್ತು ಅಮೆರಿಕದ ಸಂವಿಧಾನ ಹೀಗೆ ಸಂವಿಧಾನಗಳನ್ನು ಗಮನಿಸಿ “ಒಂದು ಭಾಷೆ- ಒಂದು ರಾಜ್ಯ” ಎಂಬುದು ಕಡ್ಡಾಯ ನಿಯಮವಾಗಿದೆ ಮತ್ತು ಈ ನಿಯಮದಿಂದ ಎಲ್ಲೆಲ್ಲಿ ವಿಮುಖತೆಯು ನಡೆದಿದೆಯೋ ಅಲ್ಲೆಲ್ಲ ಆಡಳಿತ ವ್ಯವಸ್ಥೆಗೆ ಅಪಾಯ ಒದಗಿದೆ.

ಅಂದಹಾಗೆ ಹಳೆಯ ಟರ್ಕಿಷ್ ಸಾಮ್ರಾಜ್ಯ ಮತ್ತು ಆಸ್ಟ್ರಿಯನ್ ಸಾಮ್ರಾಜ್ಯಗಳಲ್ಲಿ ನಾವು ಇಂತಹ ಮಿಶ್ರ ಭಾಷಾ ರಾಜ್ಯಗಳನ್ನು ಕಾಣಬಹುದು. ಈ ನಿಟ್ಟಿನಲ್ಲಿ ಬಹುಭಾಷಾ ರಾಜ್ಯಗಳು ಎಂಬುದರ ಅರ್ಥವನ್ನು ನಾವು ಹುಡುಕುವುದಾದರೆ ಸದರಿ ರಾಜ್ಯಗಳು (ಹಳೆಯ ಟರ್ಕಿ ಮತ್ತು ಆಸ್ಟ್ರಿಯಾ ರಾಜ್ಯ ಗಳು) ಬಹುಭಾಷೆಯ ತಮ್ಮ ಕಾರಣಕ್ಕಾಗಿಯೇ ಛಿದ್ರಗೊಂಡು ನಾಶವಾದವು.

ಭಾರತವೂ ಕೂಡ ಹೀಗೆ ಮಿಶ್ರ ಭಾಷೆಗಳ ರಾಜ್ಯಗಳ ಸಮುದಾಯವಾಗಿಯೇ ಮುಂದುವರೆದರೆ ಅದೂ ಕೂಡ (ಆಸ್ಟ್ರಿಯಾ ಮತ್ತು ಟರ್ಕಿ ದೇಶಗಳು ಅನುಭವಿಸಿದ) ಅಂತಹ ದುರಂತ ಪರಿಸ್ಥಿತಿ ತಪ್ಪಿಸಿಕೊಳ್ಳುವುದು ಅಸಾಧ್ಯ.” ಬಾಬಾಸಾಹೇಬರು ಸ್ಪಷ್ಟ ಪಡಿಸುತ್ತಾರೆ. ಅವರು ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್, ಇಟಲಿ ಸಂವಿಧಾನ ಗಳ ಉದಾಹರಣೆ ಕೊಡುತ್ತಾರೆ ಹಾಗೆಯೇ ಬಹುಭಾಷೆಗಳ ರಾಜ್ಯ ವಾಗಿ ಆಸ್ಟ್ರಿಯಾ ಮತ್ತು ಟರ್ಕಿ ನಾಶವಾದದ್ದನ್ನು ಕೂಡ ಉಲ್ಲೇಖಿಸುತ್ತಾರೆ.

ಹಾಗಿದ್ದರೆ ಬಹು ಭಾಷೆಗಳ ರಾಜ್ಯ ಏಕೆ ಅಸ್ಥಿರ ಮತ್ತು ಏಕ ಭಾಷೆಯ ರಾಜ್ಯ ಏಕೆ ಸ್ಥಿರ? ಈ ಪ್ರಶ್ನೆಗೆ ಅಂಬೇಡ್ಕರರು ನೀಡುವ ಉತ್ತರ, “ರಾಜ್ಯ ಎಂಬುದು ನಾವು ಮತ್ತು ನಮ್ಮವರು ಎಂಬ ಸಹ ಭಾವನೆಯ ಆಧಾರದ ಮೇಲೆ ಕಟ್ಟಲ್ಪಟ್ಟಿದೆ” ಎಂದು. ಹಾಗಿದ್ದರೆ “ನಾವು ಮತ್ತು ನಮ್ಮವರು, ಈ ಭಾವನೆ ಹಾಗೆಂದರೇನು?” ಹೀಗೆ ಪ್ರಶ್ನಿಸುತ್ತಾ ಅಂಬೇಡ್ಕರರು ಹೇಳುವುದು “ಸಂಕ್ಷಿಪ್ತವಾಗಿ ಹೇಳುವುದಾದರೆ ಅದೊಂದು ರೀತಿ ನಾವೆಲ್ಲ ಒಂದೇ ಎಂಬ ಸಾಂಸ್ಥಿಕ ಭಾವನೆಯನ್ನು ಅನುಭವಿಸುವುದು ಮತ್ತು ಅಂತಹ ಅನುಭವ ಅಥವಾ ಭಾವ ಅವರಲ್ಲಿ ತಾವು ಪರಸ್ಪರ ಬಂಧುಗಳು ಎಂಬ ಭಾವವನ್ನು ಸೃಜಿಸುತ್ತದೆ.

ಈ ನಿಟ್ಟಿನಲ್ಲಿ ಈ ಭಾವ ಇದೊಂದು ರೀತಿ ಎರಡು ಅಲಗಿನ ಕತ್ತಿಯ ಮಾದರಿಯದು. ಯಾಕೆಂದರೆ ಒಂದೆಡೆ ಇದು ತನ್ನ ಬಂಧು ಬಳಗದವರೆಡೆ ಒಂದು ರೀತಿಯ ತನ್ನವರು ಭಾವ ಎಂಬ ಸೃಜಿಸುತ್ತದೆ ಮತ್ತೊಂದೆಡೆ ತನ್ನ ಬಂಧು ಬಳಗದವರಲ್ಲದವರೆಡೆ ತನ್ನವರಲ್ಲ ಎಂಬ ಭಾವ ಸೃಜಿಸುತ್ತದೆ. ಈ ಕಾರಣಕ್ಕಾಗಿ ಇದೊಂದು ರೀತಿ ನಾವೆಲ್ಲ ಒಂದೇ ಎಂಬ ಭಾವ. ಈ ದಿಸೆಯಲ್ಲಿ ಇಂತಹ ಭಾವ ಹಾಗೆ ಪರಸ್ಪರ ಪ್ರಬಲ ಭಾವನೆಯುಳ್ಳವರನ್ನು ಅದು
ಸಾಮಾಜಿಕ ತಾರತಮ್ಯ ಮತ್ತು ಆರ್ಥಿಕ ಸಂಕಷ್ಟಗಳ ಹೊರತಾಗಿಯೂ ಪರಸ್ಪರ ಕಟ್ಟುತ್ತದೆ ಮತ್ತು ತಮ್ಮವರಲ್ಲದವರನ್ನು ಅದು ದೂರ ತಳ್ಳುತ್ತದೆ.

ಒಟ್ಟಾರೆ ಅದು ಒಂದು ಜನ ಸಮೂಹ ಬೇರೆ ಯಾವುದೇ ಗುಂಪುಗಳಿಗೆ ಸೇರದೆ
ಪರಸ್ಪರ ಬೆರೆಯಲು ಹಾತೊರೆಯುವುದಾಗಿದೆ”. ಹೀಗೆ ಅಂಬೇಡ್ಕರರು ಭಾಷಾವಾರು ರಾಜ್ಯಗಳು ಮತ್ತು ಅಂತಹ ರಾಜ್ಯ ಗಳಲ್ಲಿ ಒಂದೇ ಭಾಷೆಯವರು ಒಂದೇ ಎಂಬ ಭಾವದಲ್ಲಿ ಬರೆಯುವುದನ್ನು ತಮ್ಮ ಉತ್ಕೃಷ್ಟ ಬರವಣಿಗೆಯಲ್ಲಿ ಉಪಮೆಗಳಲ್ಲಿ‌ ಹಿಡಿದಿರುತ್ತಾರೆ. ಹಾಗಿದ್ದರೆ “ನಾವು ನಮ್ಮ ವರು” ಎಂಬ ಈ ಭಾವ ತಪ್ಪಲ್ಲವೆ? ಯಾಕೆಂದರೆ ಅಂಬೇಡ್ಕರರ ಈ ಮಾತಿನಂತೆ “ನಾವು ಕನ್ನಡಿಗರು, ಅವರು ತಮಿಳಿನವರು” ಎಂದು ನಾವು ಈಗಲೂ ಹೇಳುತ್ತೇವಲ್ಲ ಅದು ತಪ್ಪು ಎಂಬುದಲ್ಲವೆ ಎನ್ನುವುದಾದರೆ ಇದಕ್ಕೆ ಬಾಬಾಸಾಹೇಬರು ಹೇಳುವುದು “ನಾವು ನಮ್ಮವರು ಎಂಬ ಈ ಭಾವದ ಅಸ್ತಿತ್ವವೇ
ಸ್ಥಿರ ಮತ್ತು ಪ್ರಜಾಪ್ರಭುತ್ವ ಮಾದರಿಯ ರಾಜ್ಯದ ಪ್ರಮುಖ ಲಕ್ಷಣ” ಎಂದು. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.1, ಪು.143 ಮತ್ತು 144)

ಹೌದು, ಪ್ರಜಾಪ್ರಭುತ್ವದ ಪ್ರಬಲ ಪ್ರತಿಪಾದಕರಾದ ಬಾಬಾಸಾಹೇಬರು ಹೇಳುವುದು ಅಥವಾ ಏಕಭಾಷೆಯ ರಾಜ್ಯಗಳ ಅಸ್ತಿತ್ವಕ್ಕೆ ಅವರು ನೀಡುವ ಎರಡು ಕಾರಣಗಳಲ್ಲಿ ಪ್ರಮುಖವಾದದ್ದು ಅಥವಾ ಮೊದಲನೆಯದು ಪ್ರಜಾಪ್ರಭುತ್ವ. ಅಂದರೆ ಬಾಬಾಸಾಹೇಬರು ಹೇಳುವುದು “ಘರ್ಷಣೆ ಇಲ್ಲದೆ ಪ್ರಜಾಪ್ರಭುತ್ವವಿಲ್ಲ. ಆದ್ದರಿಂದ ನಾವು ನಮ್ಮವರು ಎಂಬ ಭಾವವಿಲ್ಲದೆ ಪ್ರಜಾಪ್ರಭುತ್ವ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ” ಎಂದು. ಇನ್ನು ಎರಡನೆಯ ಕಾರಣ ಅವರು ನೀಡುವುದು “ಜನಾಂಗೀಯ ಮತ್ತು ಸಾಂಸ್ಕೃತಿಕ ಸಿಕ್ಕುಗಳನ್ನು ಪರಿಹರಿಸಲು ಏಕ ಭಾಷೆ ರಾಜ್ಯ ಅಗತ್ಯ” ಎಂದು.

ಯಾಕೆಂದರೆ ಇದಕ್ಕೆ ಬಾಬಾಸಾಹೇಬರೇ ಉದಾಹರಣೆ ನೀಡುತ್ತಾರೆ ಅದೆಂದರೆ “ಆಂಧ್ರ ಮತ್ತು ತಮಿಳಿಗರ ಕಚ್ಚಾಟ, ಆಂಧ್ರ ಮತ್ತು ಮಹಾರಾಷ್ಟ್ರಿಗರ ಕಚ್ಚಾಟ, ಗುಜರಾತ್ ಮತ್ತು ಮಹಾರಾಷ್ಟ್ರಿಗರ ಕಚ್ಚಾಟ… ಇತ್ಯಾದಿ” (ಗಮನಿಸಿ, ಅಂಬೇಡ್ಕರರು ತಮಿಳಿಗರು ಮತ್ತು ಕನ್ನಡಿಗರ ಕಚ್ಚಾಟ ಪ್ರಸ್ತಾಪಿಸಿಲ್ಲ! ಯಾಕೆಂದರೆ ಆಗಿನ್ನೂ ಸಮಗ್ರ ಕರ್ನಾಟಕ ಅಸ್ತಿತ್ವಕ್ಕೆ ಬಂದಿರಲಿಲ್ಲವಲ್ಲ!)
ಒಟ್ಟಾರೆ ಬಾಬಾಸಾಹೇಬ್ ಅಂಬೇಡ್ಕರ್ ರವರು “ಒಂದೇ ಭಾಷೆ – ಒಂದೇ ರಾಜ್ಯ” ಹಿನ್ನೆಲೆಯಲ್ಲಿ ಪ್ರತ್ಯೇಕ ಭಾಷಾವಾರು ರಾಜ್ಯಗಳ ರಚನೆಯನ್ನು ಪ್ರತಿಪಾದಿಸಿದ್ದಾರೆ.

ಅಂದಹಾಗೆ ಅಂಬೇಡ್ಕರರು ಅಂದು ಪ್ರಸ್ತಾಪಿಸಿದ ಕರ್ನಾಟಕ ರಾಜ್ಯದಲ್ಲಿ ಅಂದು 1.90 ಕೋಟಿ ಜನರಿದ್ದರು (1951 ರ ಗಣತಿ) ಮತ್ತು ಕರ್ನಾಟಕದ ಪ್ರಸ್ತಾಪಿತ ವಿಸ್ತೀರ್ಣ 72,730 ಚ.ಮೈಲುಗಳು ಇತ್ತು. ಅದರ ಆಧಾರದಲ್ಲಿ ಕರ್ನಾಟಕ ರಾಜ್ಯ 1956 ನವೆಂಬರ್ 1 ರಂದು ಅಸ್ತಿತ್ವಕ್ಕೆ ಬಂತು. ಈ ಹಿನ್ನೆಲೆಯಲ್ಲಿ ರಾಜ್ಯೋತ್ಸವದ ಈ ದಿನ ಕನ್ನಡಿಗರು ಬಾಬಾಸಾಹೇಬರನ್ನು ಸ್ಮರಿಸಿಕೊಳ್ಳಬೇಕು‌. ಭಾಷಾ ಆಧಾರದಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಉದಯಕ್ಕೆ “ಭಾಷಾವಾರು ರಾಜ್ಯ ರಚನೆಯ ಉದ್ದೇಶದ ಅವರ ಚಿಂತನೆಗಳು ಕಾರಣ” ಎಂಬುದನ್ನು ಅರಿಯಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending