Connect with us

ದಿನದ ಸುದ್ದಿ

ದೇಗುಲದಲ್ಲೇ ನಡೀತು ಈದ್ ನಮಾಜ್; ಭ್ರಾತೃತ್ವ ಮೆರೆದ ಹಿಂದುಗಳು

Published

on

ಸುದ್ದಿದಿನ ಡೆಸ್ಕ್: ಸಾಮಾನ್ಯವಾಗಿ ಮಸೀದಿಯಲ್ಲಿ ನಮಾಜ್, ಹಬ್ಬದಲ್ಲಿ ಈದ್ಗಾ ಮೈದಾನಗಳಲ್ಲಿ ನಮಾಜ್ ಮಾಡಲಾಗುತ್ತದೆ. ಮಹಾಮಳೆಯಲ್ಲಿ ಮನೆ, ಮಠ ಕೊಚ್ಚಿಕೊಂಡು ಹೋಗಿರುವ ಕೇರಳದ ದೇಗುಲವೊಂದರಲ್ಲಿ ನಮಾಜ್ ಮಾಡಲು ಅವಕಾಶ ನೀಡಿ ಹಿಂದುಗಳು ಭ್ರಾತೃತ್ವ ಮೆರೆದಿದ್ದಾರೆ.

ತ್ರಿಶೂರ್ ಜಿಲ್ಲೆಯ ಈರವತ್ತೂರು ಹತ್ತಿರದ ಮಲ ಗ್ರಾಮದ ಪುರಪುಲಿಕ್ಕವು ರತ್ನೇಶ್ವರಿ ದೇವಸ್ಥಾನದಲ್ಲಿ ಬಕ್ರೀದ್ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಟ್ಟು ಸೌಹಾರ್ದತೆ ಮೆರೆಯಲಾಗಿದೆ. ತ್ರಿಶೂರ್ ಜಿಲ್ಲೆಯ ದಕ್ಷಿಣ ಭಾಗದಲ್ಲಿರುವ ಕೊಚುಕೊಡವು, ಇರವತ್ತೂರು ಗ್ರಾಮಗಳು ಪ್ರವಾಹ ಪೀಡಿತ ಪ್ರದೇಶಗಳಾಗಿವೆ. ಇಲ್ಲಿನ ಮನೆ, ಮಠ, ಆಸ್ತಿ ಪಾಸ್ತಿ ಸಾಕಷ್ಟು ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮಸೀದಿಗಳು ನೀರಿನಲ್ಲಿ ಮುಳುಗಡೆ ಆಗಿದ್ದರಿಂದ ದೇವಸ್ಥಾನಗಳಲ್ಲಿ 200ಕ್ಕೂ ಅಧಿಕ ಮುಸ್ಲಿಮರು ಬಕ್ರೀದ್ ಪ್ರಾರ್ಥನೆ ಸಲ್ಲಿಸಲಾಯಿತು.

ಮಸೀದಿಯಲ್ಲಿ ಆಶ್ರಯ ಪಡೆದ ಹಿಂದುಗಳು:
ಮಲಪ್ಪುರಂ ಜಿಲ್ಲೆಯ ಮಸೀದಿಯೊಂದರಲ್ಲಿ ಹಿಂದುಗಳು ಆಶ್ರಯ ಪಡೆದುಕೊಂಡಿದ್ದಾರೆ. ಮುಸ್ಲಿಂ ಸಮುದಾಯದವರು ಎರಡು ದೇವಾಲಯಗಳನ್ನು ಸ್ವಚ್ಛಗೊಳಿಸಿದ್ದಾರೆ. ಇನ್ನು ಕೆಲವು ಕಡೆ ಮಸೀದಿ, ದೇಗುಲಗಳಲ್ಲಿ ಟ್ರಸ್ಟ್ ಸಮಿತಿಗಳು ಜಾತಿ, ಧರ್ಮ ಭೇದ ಇಲ್ಲದೆ ಆಶ್ರಯ ನೀಡಿವೆೆ.

ದಿನದ ಸುದ್ದಿ

ಹನಿಗವಿತೆಗಳ ಸರದಾರ – ಜರಗನಹಳ್ಳಿ ಶಿವಶಂಕರ್

Published

on

  • ಕೆ.ರಾಘವೇಂದ್ರ ನಾಯರಿ, ದಾವಣಗೆರೆ

ನಾಡಿನ ಹಿರಿಯ ಸಾಹಿತಿಗಳಾದ ಜರಗನಹಳ್ಳಿ ಶಿವಶಂಕರ್ ಅವರ ನಿಧನ ಸಂದರ್ಭದಲ್ಲಿ ಅವರಿಗೆ ಅಕ್ಷರ ನಮನ

ನ್ನಡದ ನಾಡಿನ ಹಿರಿಯ ಕವಿ, ಚಿಂತಕ, ಖ್ಯಾತ ಹನಿಗವನ ರಚನೆಗಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜರಗನಹಳ್ಳಿ ಶಿವಶಂಕರ್ 05-05-2021 ರಂದು ನಿಧನರಾಗಿರುವುದು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕೊರೋನಾ ಇನ್ನೊಬ್ಬ ಪ್ರತಿಭಾವಂತ ಸಾಹಿತಿಯ ಬಲಿ ಪಡೆದಿರುವುದು ಅತ್ಯಂತ ವಿಷಾದನೀಯ.

ನಾಡು ಕಂಡ ಅಪ್ರತಿಮ ಬಹುಮುಖ ಪ್ರತಿಭೆಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ. ಅವರ ಖ್ಯಾತ ಹನಿಗವನವಾದ “ಬಾಳಿಕೆ” ಯಲ್ಲಿ ಅವರು ಬರೆದಿರುವಂತೆ…

ಹತ್ತಾರು ವರುಷ
ನೆರಳಾಗಿ ನಿಂತ ಮರ
ತೊಲೆಯಾಗಿ ಉಳಿಯಿತು
ನೂರಾರು ವರುಷ

ನೂರು ವರುಷ
ಆಳಿದ ಅರಸ
ಹೆಣವಾಗಿ ಉಳಿಯಲಿಲ್ಲ
ಮೂರು ದಿವಸ.‌.. !

ಎಂಥಹ ಅದ್ಭುತವಾದ ಹನಿಗವನವಿದು. ಮನುಷ್ಯನ ಜೀವನದ ಸಾರ್ಥಕ್ಯದ ಕುರಿತಾಗಿ ನೇರವಾಗಿ ಬಾಣ ಹೊಡೆದು ಸಮಾಜವನ್ನು ಚಿಂತನೆಗೆ ದೂಡಿದ ಕವನವಿದು. ಮನುಷ್ಯನ ಕಳೇಬರ ಮೂರು ದಿವಸವೂ ಉಳಿಯುವುದಿಲ್ಲ. ಆದರೆ ಮರಗಿಡಗಳು ತಮ್ಮ ಅಳಿವಿನ ನಂತರವೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಮೂಲಕ ಮಾನವ ಸಂಕುಲಕ್ಕೆ ಸಹಕಾರಿಯಾಗಿರುತ್ತವೆ.

ಹಾಗೆಯೇ ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಮಾಡಿರುವ ಸಾಧನೆ, ಒಳ್ಳೆಯ ಕೆಲಸಗಳೇ ಆತನ ಹೆಸರನ್ನು ಅಜರಾಮರವಾಗುವಂತೆ ಮಾಡಬಲ್ಲದು ಎನ್ನುವುದು ಈ ಕವಿತೆಯ ಮೂಲಕವಾಗಿ ಕವಿಯ ಆಶಯವಾಗಿದೆ. ಈ ನಿಟ್ಟಿನಲ್ಲಿ ಜರಗನಹಳ್ಳಿಯವರು ತನ್ನದೇ ಹನಿಗವನದ ಆಶಯಕ್ಕೆ ತಕ್ಕಂತೆಯೇ ತನ್ನ ಜೀವನವನ್ನು ರೂಪಿಸಿಕೊಂಡವರು. ಅವರು ಬರೆದಿರುವ ಅಸಂಖ್ಯಾತ ಹನಿಗವನಗಳು, ಕವಿತೆಗಳು, ಬರಹಗಳು ಮತ್ತು ಅವರ ಕನ್ನಡದ ಸೇವೆ ಅವರ ಹೆಸರನ್ನು ಅಜರಾಮರವಾಗಿ ಜನರ ಮಧ್ಯೆ ಇಡುವುದರಲ್ಲಿ ಸಂಶಯವಿಲ್ಲ.

ಖ್ಯಾತ ಹನಿಗವನ ರಚನೆಕಾರರಾಗಿದ್ದ ಅವರ ಹನಿಗವನಗಳು ಅತ್ಯಂತ ಜನಪ್ರಿಯವಾಗಿದ್ದವು‌. ನಾನೂ ಸಹ ಎಷ್ಟೋ ಸಮಾರಂಭಗಳಲ್ಲಿ ಭಾಷಣ ಮಾಡುವಾಗ, ನಿರೂಪಣೆ ಮಾಡುವ ಸಂದರ್ಭಗಳಲ್ಲಿ ಅವರ ಹೆಸರನ್ನು ಮತ್ತು ಅವರ ಹನಿಗವನಗಳನ್ನು ಯಾವಾಗಲೂ ಬಳಸಿಕೊಳ್ಳುತ್ತಿದ್ದೆ‌. ಅಷ್ಟರ ಮಟ್ಟಿಗೆ ಅವುಗಳು ವೈಯಕ್ತಿಕವಾಗಿ ನನ್ನನ್ನು ತುಂಬಾ ಆಕರ್ಷಿಸಿದ್ದವು ಎಂದರೂ ತಪ್ಪಿಲ್ಲ.

ಅವರ ಹನಿಗವನಗಳಲ್ಲಿನ ವ್ಯಂಗ್ಯ, ವಿಡಂಬನೆ, ವಿನೋದ, ದಿಟ್ಟತನ, ವೈಚಾರಿಕತೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿದ್ದವು. ಅವರನ್ನು ಅವರ ಹನಿಗವನಗಳ ಮೂಲಕ ನನಗೆ ಪರಿಚಯ ಮಾಡಿದವರು ಕೆನರಾಬ್ಯಾಂಕಿನ ವಿಶ್ರಾಂತ ವಿಭಾಗೀಯ ಪ್ರಬಂಧಕರು ಹಾಗೂ ಹಿರಿಯ ಸಾಹಿತಿಗಳಾದ ಎನ್.ಟಿ.ಎರ್ರಿಸ್ವಾಮಿಯವರು.

ಕೆನರಾ ಬ್ಯಾಂಕಿನಲ್ಲಿ 28 ವರ್ಷಗಳ ಕಾಲ ಅಧಿಕಾರಿಯಾಗಿ ಸೇವೆ ಮಾಡಿದ್ದ ಜರಗನಗಳ್ಳಿ ಶಿವಶಂಕರ್ ಅವರು ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ (2004-2008 ರ ಅವಧಿಯಲ್ಲಿ) ಕಾರ್ಯ ನಿರ್ವಹಿಸಿ ಕನ್ನಡ ನಾಡು ನುಡಿಗಳ ಕೈಂಕರ್ಯವನ್ನು ಪ್ರಾಮಾಣಿಕವಾಗಿ ಮತ್ತು ಬಲು ಪರಿಣಾಮಾಕಾರಿಯಾಗಿ ನಿರ್ವಹಿಸಿದ್ದರು.

ಕನ್ನಡಪರ ಹೋರಾಟಗಳಲ್ಲಿಯೂ ಸದಾ ಮುಂಚೂಣಿಯಲ್ಲಿದ್ದವರು ಜರಗನಹಳ್ಳಿ ಶಿವಶಂಕರ್ ಅವರು. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಕಾಸರಗೋಡಿನಲ್ಲಿ ನಡೆದ ಅಖಿಲ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ, ಕೋಲಾರ ಜಿಲ್ಲಾ ದ್ವಿತೀಯ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ, ಆಕಾಶವಾಣಿ, ದೂರದರ್ಶನ, ವಿಶ್ವವಿದ್ಯಾನಿಲಯ, ಅಕಾಡೆಮಿ, ದಸರಾ ಕವಿಗೋಷ್ಠಿಗಳ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಅಧ್ಯಕ್ಷ ಹಾಗೂ ಪ್ರತಿನಿಧಿಯಾಗಿ ಭಾಗಿಯಾಗಿ ಕಾರ್ಯನಿರ್ವಹಿಸಿದ ಅನುಭವ ಅವರದು.

ಕನ್ನಡದ ಹಲವಾರು ಪ್ರಮುಖ ದಿನಪತ್ರಿಕೆಗಳಲ್ಲಿ ಇವರ ಹನಿಗವಿತೆಗಳು, ಲೇಖನಗಳು ಸುಮಾರು 4 ದಶಕಗಳ ಕಾಲ ಪ್ರಕಟಗೊಂಡಿವೆ. ಅವರ ಕೃತಿಗಳಾದ “ಶುಭಾಂಗಿ” (ಕವಿತೆ – 1985 ರಲ್ಲಿ), “ಜೊತೆಯಾದವರು” (ಕವನ ವಿಮರ್ಶೆ – 1987 ರಲ್ಲಿ), “ಬುಗ್ಗೆ” (ಹನಿಗವಿತೆ – 1991 ರಲ್ಲಿ), “ಮಳೆ” (ಹನಿಗವಿತೆ – 2000 ರಲ್ಲಿ), “ಎರೆಹುಳು” (ಕವಿತೆ – 2001 ರಲ್ಲಿ), “ಆಲಿಕಲ್ಲು” (ಹನಿಗವಿತೆ), “ಮರಗಳು” (ಹನಿಗವಿತೆ – 1998 ರಲ್ಲಿ), “ಝರಿ” (ಹನಿಗವಿತೆ – 2002 ರಲ್ಲಿ), “ಭಾವ-ಬದುಕು” (ಅಂಕಣ ಬರಹಗಳು – ತರಂಗ), “ದೇವರ ನೆರಳು” (ದೇವರ ಕವಿತೆಗಳು – 2004 ರಲ್ಲಿ), “ನೆನಪಿನ ನೆಂಟರು” (ಅಂಕಣ ಬರಹಗಳು – ವಿಜಯ ಕರ್ನಾಟಕ 2007 ರಲ್ಲಿ), “ತುಂತುರು” (ಅಭಿನಂದನಾ ಗ್ರಂಥ – 2009 ರಲ್ಲಿ), “ಹೊಳೆ” (ಹನಿಗವಿತೆ – 2011 ರಲ್ಲಿ), “ಜಾತಕ” (ಅಂಕಣ ಬರಹಗಳು – ಕರ್ಮವೀರ 2011 ರಲ್ಲಿ) ಜನಮಾನಸದಲ್ಲಿ ಅತ್ಯಂತ ಜನಪ್ರಿಯವಾಗಿದ್ದವು. ಅವರ ಹನಿಗವನಗಳು ಈಗಲೂ ಸಾವಿರಾರು ಜನರ ಬಾಯಲ್ಲಿ ಹರಿದಾಡುತ್ತಿವೆ.

ಅವರ ಪ್ರಸಿದ್ಧ ಹನಿಗವಿತೆಗಳು

1. ಅಂತರ
=========

ಏರಿದರೆ
ಮಂಚ, ಗದ್ದುಗೆ, ಸಿಂಹಾಸನ
ಹೆಚ್ಚೆಂದರೆ
ಎರಡು ಮೂರಡಿ ಮೇಲೆ

ಜಾರಿದರೆ
ಗೋರಿ, ಸಮಾಧಿ, ಬೃಂದಾವನ
ಹೆಚ್ಚೆಂದರೆ
ಎರಡು ಮೂರಡಿ ಕೆಳಗೆ !

2. ದೇಹ
=======

ಈ ದೇಹ
ಹುಟ್ಟಿಗೆ ಮೊದಲು
ಕಣ್ಣಿಗೆ ಕಾಣದ
ಒಂದು ಕಣ

ಸತ್ತ ಮೇಲೆ
ಒಂದು ದಿನವೂ
ಉಳಿಯದ ಹೆಣ

ಬದುಕಿರುವಾಗ
ಬ್ರಹ್ಮಾಂಡವನ್ನೇ
ಬಯಸುವ ಗುಣ !

3. ಮಾತೃಛಾಯ
============

ತೊನೆಯದಿದ್ದರೂ
ಹಣ್ಣು ಕಾಯಿ ಹೂಗಳನ್ನು
ಬಿದಿರು
ತೊಟ್ಟಿಲಾಗಿ ತೂಗುವುದು
ಮಕ್ಕಳನ್ನು
ಬುಟ್ಟಿಯಾಗಿ ಹೊರುವುದು
ಹಣ್ಣು ಕಾಯಿ ಹೂಗಳನ್ನು !

4. ಹಣತೆ
=======

ಕುಂಬಾರರು ಮಾಡಿದ ಹಣತೆಗೆ
ಗಾಣಿಗರ ಎಣ್ಣೆಯ ತುಂಬಿ
ಒಕ್ಕಲಿಗರು ಬೆಳೆದ ಹತ್ತಿಯ ಹೊಸೆದು
ಬತ್ತಿಯ ಮಾಡಿ ದೀಪವ ಹಚ್ಚಿದರೆ
ಹಲವು ಜಾತಿಗಳು ಕೂಡಿ
ಕುಲಗೆಟ್ಟ ಬೆಳಕು ನೋಡ !

5. ಆಕಾರ
=======

ದೊಡ್ಡ ಆನೆ ಒಂಟೆಯಲ್ಲಿಲ್ಲದ ವಿಷ
ಸಣ್ಣ ಹಾವು ಚೇಳಿನೊಳಗೆ ಬಂತು

ಉದ್ದ ತಾಳೆ ತೆಂಗಿಗಿಲ್ಲದ ಖಾರ
ಗಿಡ್ಡ ಮಣಸಿನ ಗಿಡದೊಳಗೆ ಬಂತು

ಬೆಟ್ಟಕ್ಕೆ ಸಲ್ಲದ ಭಯ ಭೀತಿ
ಅದರ ಸಣ್ಣ ಕವಣೆ ಕಲ್ಲಿಗೆ ಬಂತು !

6. ವಿಪರ್ಯಾಸ
============

ಒಳಗೆ ಬೇಕು ಅನ್ನ
ಹೊರಗೆ ಬೇಕು ಚಿನ್ನ
ಏನು ಇದರ ಮರ್ಮ

ಹೊರಗೆ ಕಿಸಿವ ಹಲ್ಲು
ಒಳಗೆ ಮಸೆವ ಕಲ್ಲು
ಇದು ಯಾವ ಧರ್ಮ

ತಾನೆ ಬೆಳೆದ ಅತ್ತಿಹಣ್ಣ
ನೋಡಿ
ನಾಚಿ ಕುಳಿತ ಬ್ರಹ್ಮ !

ಅವರ ಕವಿತೆಗಳ ಹಿಂದೆ ಭಾಷೆಯನ್ನು ಮತ್ತು ಭಾವನೆಗಳನ್ನು ಆಳವಾಗಿ ಗ್ರಹಿಸುವ ಪ್ರಯತ್ನವಿರುತಿತ್ತು. ಮಾನವೀಯ ಸಂಬಂಧಗಳ ನಡುವಿನ ಮಾನವನ ವಕ್ರ ನಡತೆಗಳ ವ್ಯಂಗ ಚಿತ್ರವನ್ನು ಅತ್ಯಂತ ಸ್ಪಷ್ಟವಾಗಿ ಅಭಿವ್ಯಕ್ತಿಸುತ್ತಿದ್ದರು. ಅವರ ಹನಿಗವನಗಳಲ್ಲಿ ಅವರದೇ ಆದ ದೃಷ್ಟಿಕೋನ, ಮೊನಚಾದ ವೈಚಾರಿಕತೆ, ಚುಚ್ಚುವಂತಹ ವಿಡಂಬನೆ, ಸರಳವಾದ ಭಾಷೆ, ಶುದ್ಧವಾದ ಜಾತ್ಯಾತೀತ ಭಾವನೆ, ಮೊನಚು, ಆಶ್ಚರ್ಯ, ಅನುಕಂಪಗಳನ್ನು ಹೇರಳವಾಗಿ ಕಾಣಬಹುದಾಗಿತ್ತು.

ಒಟ್ಟಿನಲ್ಲಿ ಅವರ ಕೃತಿಗಳು ಪ್ರೀತಿಸಲು ಆತ್ಮೀಯವಾಗಿ ಅನುಭವಿಸಲು ಯೋಗ್ಯವಾಗಿವೆ. ಇವರ ಹನಿಗವನಗಳು ತುಮಕೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ‌. ಇವರ ಹನಿಗವನಗಳ ಸಂಕಲನ “ಝರಿ” ಉರ್ದು, ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಗುಜರಾತಿ ಭಾಷೆಗಳಿಗೂ ಅನುವಾದಗೊಂಡಿದೆ‌.

ಜರಗನಹಳ್ಳಿ ಶಿವಶಂಕರ್ ಅವರಿಗೆ ಕರ್ನಾಟಕ ಸರಕಾರದಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2005), ದಿನಕರ ದೇಸಾಯಿ ಸಾಹಿತ್ಯ ಪ್ರಶಸ್ತಿ (2006) ಸೇರಿದಂತೆ ಚುಟುಕು ರತ್ನ, ಗೊರೂರು ಸಾಹಿತ್ಯ ಪ್ರಶಸ್ತಿ, ಬೆಂಗಳೂರು ಮಹಾನಗರ ಪಾಲಿಕೆಯಿಂದ ಕೆಂಪೇಗೌಡ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ದುಬೈ ಧ್ವನಿ ಪ್ರತಿಷ್ಠಾನದ ಧ್ವನಿ ಪುರಸ್ಕಾರ, ಸುವರ್ಣ ಕರ್ನಾಟಕ ಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿವೆ. 2004, 2008 ಮತ್ತು 2010 ರಲ್ಲಿ ದುಬೈ ಹಾಗೂ ಶಾರ್ಜಾ ದೇಶಗಳಿಗೆ ಪ್ರವಾಸ ಮಾಡಿ ಉಪನ್ಯಾಸ ನೀಡಿದ ಅನುಭವವೂ ಅವರಿಗಿತ್ತು.

ಇಂತಹ ಕನ್ನಡದ ಮೇರು ಪ್ರತಿಭೆ ಕೊರೋನಾದಿಂದಾಗಿ ನಮ್ಮನ್ನು ಅಗಲಿರುವುದು ಎಲ್ಲ ಕನ್ನಡ ಅಭಿಮಾನಿಗಳಿಗೆ ಅತೀವ ದುಃಖವಾಗಿದೆ. ಅವರ ನೆನಪು ಹಾಗೂ ಹೆಸರು ನಮ್ಮ ಹೃದಯಂಗಳದಲ್ಲಿ ಅಜರಾಮರವಾಗಿ ಉಳಿಯಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಇಎಸ್‍ಐ ಆಸ್ಪತ್ರೆಯಲ್ಲಿ 80 ಬೆಡ್ ವ್ಯವಸ್ಥೆ : ಡಿಸಿ ಮಹಾಂತೇಶ್ ಬೀಳಗಿ ಪರಿಶೀಲನೆ

Published

on

ಸುದ್ದಿದಿನ,ದಾವಣಗೆರೆ : ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಕೋವಿಡ್ ಕೇರ್ ಸೆಂಟರ್ ತೆರೆಯಲು ನಗರದ ಇಎಸ್‍ಐ ಆಸ್ಪತ್ರೆಯಲ್ಲಿ 80 ಬೆಡ್ ವ್ಯವಸ್ಥೆಯುಳ್ಳ ಕೋವಿಡ್ ಸೆಂಟರ್ ತೆರೆಯುವ ಬಗ್ಗೆ ಪರಿಶೀಲಿಸಿ ವೈದ್ಯರುಗಳೊಂದಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಚರ್ಚೆ ನಡೆಸಿದರು.

ಬುಧವಾರ ಇಎಸ್‍ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಇಎಸ್‍ಐ ಆಸ್ಪತ್ರೆಯಲ್ಲಿ 40 ಆಕ್ಸಿಜನ್ ಮತ್ತು 40 ಐಸೊಲೇಶನ್ ಬೆಡ್‍ಗಳು ಸೇರಿದಂತೆ ಒಟ್ಟು 80 ಬೆಡ್‍ಗಳ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲು ಬೇಕಾದ ಅಗತ್ಯತೆಗಳ ಬಗ್ಗೆ ಅಲ್ಲಿನ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ವೇಳೆ ಇಎಸ್‍ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಬಸವನಗೌಡ ಮಾತನಾಡಿ, ಆಸ್ಪತ್ರೆಯಲ್ಲಿ ಆಕ್ಸಿಜನ್ ಮತ್ತು ವೆಂಟಿಲೇಟರ್ ವ್ಯವಸ್ಥೆಗೆ 19 ಪಾಯಿಂಟ್‍ಗಳು ಇದ್ದು, ಅದರಲ್ಲಿ 2 ಕಡೆ ಲೀಕೇಜ್ ಆಗುತ್ತಿದೆ. ಆಸ್ಪತ್ರೆಯಲ್ಲಿ ಒಬ್ಬ ಟೆಕ್ನೀಷಿಯನ್ ಇದ್ದು ಇನ್ನೊಬ್ಬರ ಅಗತ್ಯವಿದೆ. ಹಾಗೂ ಬೆಡ್, ಸಿಲಿಂಡರ್ ವ್ಯವಸ್ಥೆ, ಫ್ಯಾನ್ ಸೇರಿದಂತೆ ಮೂಲ ಸೌಕರ್ಯಗಳು ಮತ್ತು ಮಾನವ ಸಂಪನ್ಮೂಲ ಕೊರತೆ ಇದ್ದು, ಸಾಧ್ಯವಾದಷ್ಟು ಜಿಲ್ಲಾಡಳಿತಕ್ಕೆ ಸಹಾಯ ಮಾಡಲು ತಾವು ಬದ್ಧರಿದ್ದೇವೆ ಎಂದರು.

ಅರಿವಳಿಕೆ ತಜ್ಞೆ ಡಾ.ನಂದಿನಿ ಮಾತನಾಡಿ, ಆಸ್ಪತ್ರೆಯಲ್ಲಿ ಐಸಿಯು ಇಲ್ಲವಾದ್ದರಿಂದ ಇಲ್ಲಿರುವ ಸಿಬ್ಬಂದಿಗಳಿಗೆÉ ಐಸಿಯು ನಿರ್ವಹಣೆ ಅನುಭವ ಇಲ್ಲ. ಅವರಿಗೆ ಒಂದು ವಾರದ ಮಟ್ಟಿಗೆ ತರಬೇತಿ ಕೊಟ್ಟಲ್ಲಿ ಅನುಕೂಲವಾಗುತ್ತದೆ. ಈಗಾಗಲೇ ಆಸ್ಪತ್ರೆಯಲ್ಲಿ 19 ಬೆಡ್‍ಗಳಿಗೆ ಆಕ್ಸಿಜನ್ ವ್ಯವಸ್ಥೆ ಇದೆ. 11 ಜಂಬೋ ಸಿಲಿಂಡರ್‍ಗಳು, 26 ಸಣ್ಣ ಸಿಲಿಂಡರ್‍ಗಳು ಹಾಗೂ 15 ಔಟ್‍ಲೆಟ್‍ಗಳು ಬೇಕಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ | ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಳ್ಳಲು ವಿಕಲಚೇತನರಿಗೆ ಸೂಚನೆ

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆಗೆ 100 ಜಂಬೋ ಸಿಲಿಂಡರ್ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ವಹಿಸಲಾಗುವುದು. ಆಸ್ಪತ್ರೆಗೆ ಬೇಕಾದ 70 ಮಂಚಗಳನ್ನು ಹೊರಗಡೆಯಿಂದ ತರಿಸುತ್ತೇವೆ. ಹಾಗೂ ಕಾಟನ್ ಬೆಡ್, ಫ್ಯಾನ್, ಐವಿ ಡ್ರಿಪ್, ಆಕ್ಸಿಜನ್ ಸಿಲಿಂಡರ್, ಬಿಪಿ ಆಪರೇಟರ್ಸ್‍ಗಳನ್ನು ದಾನಿಗಳಿಂದ ಪೂರೈಸುತ್ತೇವೆ. ಅಲ್ಲದೇ ಆಸ್ಪತ್ರೆಗೆ ಬೇಕಾದ ಟ್ರಾಲಿಗಳು, ವ್ಹೀಲ್‍ಚೇರ್‍ಗಳು, ಐವಿ ಸ್ಟ್ಯಾಂಡ್ ಇತರೆ ಸವಲತ್ತುಗಳ ಕುರಿತು ಮಾಹಿತಿ ನೀಡಿದರೆ ಜಿಲ್ಲಾಡಳಿತದಿಂದ ಪೂರೈಸುತ್ತೇವೆ ಎಂದರು.

ಆಸ್ಪತ್ರೆಯಲ್ಲಿ ಈಗಾಗಲೇ ಹೊರರೋಗಿಗಳ ಚಿಕಿತ್ಸೆ ನಡೆಯುತ್ತಿದ್ದು ಈ ವ್ಯವಸ್ಥೆಗೆ ಧಕ್ಕೆ ಆಗದಂತೆ ಕೋವಿಡ್ ಸೆಂಟರ್‍ನ್ನು ತೆರೆಯಬೇಕು. ಸಾಮಾನ್ಯ ರೋಗಿಗಳು ಹಾಗೂ ಕೋವಿಡ್ ಸೋಂಕಿತ ರೋಗಿಗಳಿಗೆ ಪ್ರತ್ಯೇಕ ದ್ವಾರಗಳನ್ನು ಮಾಡಬೇಕು ಹಾಗೂ ಸಂಬಂಧಪಟ್ಟ ವೈದ್ಯರು, ಸಿಬ್ಬಂದಿಗಳು ಸಹ ಆಯಾ ದ್ವಾರಗಳ ಮೂಲಕವೇ ಹೋಗಿಬರಬೇಕು. ಹಾಗೂ ಸೋಂಕಿತರಿಗೆ ಬಿಸಿನೀರು ವ್ಯವಸ್ಥೆ ಮಾಡಲು ಮತ್ತು ಆಸ್ಪತ್ರೆಗೆ ಬಂದ ರೋಗಿಗಳು ಬಿಸಿ ನೀರು ಕುಡಿಯಲು 2 ಯೂನಿಟ್‍ಗೆ ಒಂದರಂತೆ ಸ್ಟೌವ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಸಿಜಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಂಜಯ್ ಮಾತನಾಡಿ, ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ವ್ಯವಸ್ಥೆ ಇಲ್ಲ. ಎಕ್ಸ್‍ರೇ ಯೂನಿಟ್ ಇದೆ ಆದರೆ ಫಿಲ್ಮ್‍ಗಳು ಇಲ್ಲ. ಆದ್ದರಿಂದ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರನ್ನು ಮೊದಲ ಹಂತದ ಚಿಕಿತ್ಸೆ ಪೂರೈಸಿದ ಬಳಿಕ ಚೇತರಿಸಿಕೊಂಡ ರೋಗಿಗಳನ್ನು ಈ ಆಸ್ಪತ್ರೆಗೆ ವರ್ಗಾವಣೆ ಮಾಡಬಹುದು ಎಂದರು.

ನಂತರ ಜಿಲ್ಲಾಧಿಕಾರಿಗಳು ಮಾತನಾಡಿ, ಕೋವಿಡ್ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಮತ್ತು ಡಿ ಗ್ರೂಪ್ ನೌಕರ ವರ್ಗದವರು ಸೇರಿ ಒಟ್ಟು 3 ತಂಡಗಳನ್ನು ರಚಿಸಿಕೊಳ್ಳಬೇಕು. ಪ್ರತಿ ತಂಡಕ್ಕೂ 3 ವೈದ್ಯರು, 3 ಸ್ಟಾಫ್ ನರ್ಸ್, 3 ಡಿ-ಗ್ರೂಪ್ ಸೇರಿದಂತೆ 9 ಜನರ ತಂಡ ರಚಿಸಬೇಕೆಂದು ಸೂಚನೆ ನೀಡಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ಹಾಗೂ ವೆಂಟಿಲೇಟರ್ ಸಾಮಥ್ರ್ಯ ಹೆಚ್ಚಿಸಿಕೊಳ್ಳಬೇಕು ಎಂದು ಈಗಾಗಲೇ ಮನವಿ ಮಾಡಲಾಗಿದೆ. ಪ್ರತಿ ಆಸ್ಪತ್ರೆಗೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು, ಆಸ್ಪತ್ರೆಯ ಪ್ರತಿ ವಿಭಾಗದ ವರದಿಯನ್ನು ನೋಡಿಕೊಳ್ಳುವ ಮೂಲಕ ಪ್ರತಿನಿತ್ಯ ವರದಿ ನೀಡುತ್ತಿದ್ದಾರೆ. ಅನಗತ್ಯವಾಗಿ ಆಕ್ಸಿಜನ್ ಬಳಕೆ ಮಾಡಬಾರದು. ಅದನ್ನು ಔಷಧಿಯಂತೆ ಸಮರ್ಪಕವಾಗಿ ಬಳಸಬೇಕು ಎಂದು ತಿಳಿಸಿದರು.

ತಾಲ್ಲೂಕು ಆಸ್ಪತ್ರೆಗಳಲ್ಲಿರುವ ವೈದ್ಯರು ಅನಗತ್ಯವಾಗಿ ಅಲ್ಲಿರುವ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಿರುವುದು ಗಮನಕ್ಕೆ ಬಂದಿದೆ. ಸ್ಥಳೀಯವಾಗಿ ಗುಣಮುಖರಾಗುವ ರೋಗಿಗಳನ್ನು ಆದಷ್ಟು ಅಲ್ಲಿಯೇ ಚಿಕಿತ್ಸೆ ನೀಡಬೇಕೇ ಹೊರತು ನಗರದ ಆಸ್ಪತ್ರೆಗಳಿಗೆ ಕಳುಹಿಸಬಾರದು ಎಂದು ನಿರ್ದೇಶಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್‍ನಾಯಕ್, ಆರ್.ಎಂ.ಒ ಡಾ.ಸಂಧ್ಯಾರಾಣಿ, ಹಿರಿಯ ತಜ್ಞ ಡಾ.ಅಣ್ಣಪ್ಪಸ್ವಾಮಿ, ಉಪ ವೈದ್ಯಕೀಯ ಅಧೀಕ್ಷಕ ಡಾ.ಚಿದಾನಂದ್, ಡಾ.ನಂದಿನಿ, ಡಾ.ಚಂದನ, ಡಾ.ಪ್ರಸನ್ನ, ಡಾ.ಅನಿತರಾಣಿ ಸೇರಿದಂತೆ ಹಿರಿಯ ತಜ್ಞರು ಉಪಸ್ಥಿತರಿದ್ದರು.

ಎಸ್.ಎಸ್.ಆಸ್ಪತ್ರೆಗೆ ಜಿಲ್ಲಾಧಿಕಾರಿಗಳ ಅನಿರೀಕ್ಷಿತ ಭೇಟಿ :
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಇಎಸ್‍ಐ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಅನಿರೀಕ್ಷಿತÀವಾಗಿ ಎಸ್.ಎಸ್.ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಆಸ್ಪತ್ರೆಯ ಎಂಐಸಿಯು, ಐಸೋಲೇಷನ್ ಹಾಗೂ ಐಸಿಯು ವಾರ್ಡ್‍ಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಕುರಿತು ವೈದ್ಯರ ಬಳಿ ಮಾಹಿತಿ ಪಡೆದುಕೊಂಡರು.

ಎಸ್.ಎಸ್.ಆಸ್ಪತ್ರೆಯು ಕೋವಿಡ್ ಸೋಂಕಿತ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದು ಹೆಚ್ಚು ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಗುಣಮುಖರಾದ ರೋಗಿಗಳನ್ನು ಆದಷ್ಟು ಬೇಗ ಬಿಡುಗೊಡೆಗೊಳಿಸಿ ಅಗತ್ಯವಿರುವ ಅಥವಾ ತುರ್ತು ಇರುವ ರೋಗಿಗಳಿಗೆ ಐಸಿಯು ಬೆಡ್‍ಗಳನ್ನು ನೀಡಬೇಕು. ಇಂದು ಐಸಿಎಂಆರ್ ಪೋರ್ಟಲ್‍ನಲ್ಲಿ 700 ಕ್ಕೂ ಹೆಚ್ಚು ಸೋಂಕಿತರು ಬರುವ ನಿರೀಕ್ಷೆ ಇದೆ. ಹಾಗಾಗಿ ಬೆಡ್ ವಿಸ್ತರಣೆ ಅನಿವಾರ್ಯವಾಗಿದ್ದು, ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್ ಸೇರಿದಂತೆ ಎಲ್ಲಾ ಸವಲತ್ತುಗಳ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಆಸ್ಪತ್ರೆಯಲ್ಲಿ ಆಕ್ಸಿಜನ್ ದುರ್ಬಳಕೆ ತಡೆಗಟ್ಟಲು ಆಕ್ಸಿಜನ್ ಆಡಿಟ್ ಮಾಡಿಸಲಾಗುತ್ತಿದ್ದು, ಇದರಿಂದ ಅನಗತ್ಯವಾಗಿ ಬಳಕೆಯಾಗುವ ಆಕ್ಸಿಜನ್ ಉಳಿಸಿ ಅಗತ್ಯವಿರುವವರಿಗೆ ಆಕ್ಸಿಜನ್ ನೀಡಬಹುದು. ಇದರಿಂದ ಎಸ್.ಎಸ್.ಆಸ್ಪತ್ರೆಯವರು ಕೂಡ ಪ್ರತಿನಿತ್ಯ ಆಕ್ಸಿಜನ್ ಆಡಿಟ್ ವರದಿಯನ್ನು ಜಿಲ್ಲಾಡಳಿತಕ್ಕೆ ವರದಿ ನೀಡಬೇಕು ಎಂದು ತಿಳಿಸಿದರು.

ಆಸ್ಪತ್ರೆಯ ಕೊಠಡಿಗಳು ಹಾಗೂ ಹೊರ ಆವರಣ ಸ್ವಚ್ಛತೆಯಿಂದ ಕೂಡಿದ್ದು ಎಲ್ಲಾ ವಾರ್ಡ್‍ಗಳನ್ನು ಆಗಾಗ ಸ್ಯಾನಿಟೈಸ್ ಮಾಡಬೇಕು. ಹಾಗೂ ಜಿಲ್ಲಾಸ್ಪತ್ರೆಯಿಂದ ರೆಫೆರ್ ಮಾಡಿದ ಕೋವಿಡ್ ಸೋಂಕಿತ ರೋಗಿಗಳನ್ನು ದಾಖಲು ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಎಸ್.ಎಸ್.ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಸಾದ್, ವೈದ್ಯಕೀಯ ಅಧೀಕ್ಷಕ ಡಾ.ಕಾಳಪ್ಪನವರ್ ಸೇರಿದಂತೆ ಮತ್ತಿತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಳ್ಳಲು ವಿಕಲಚೇತನರಿಗೆ ಸೂಚನೆ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿರುವ ಎಲ್ಲ 18ವರ್ಷ ಮೇಲ್ಪಟ್ಟ ವಿಕಲಚೇತನರು ಕೋವಿಡ್-19ಗೆ ಸಂಬಂಧಿಸಿದಂತೆ ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯವಿದ್ದು, 18 ವರ್ಷ ಮೇಲ್ಪಟ್ಟ ಎಲ್ಲಾ ವಿಕಲಚೇತನರು ಕೋವಿನ್ ಆಪ್ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಜಿಲ್ಲೆಯ 18 ವರ್ಷ ಮೇಲ್ಪಟ್ಟ ಎಲ್ಲಾ ವಿಕಲಚೇತನರು ಕೋವಿನ್ ಆಪ್‍ನಲ್ಲಿ ನೋಂದಣಿ ಮಾಡಿಕೊಂಡು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಅಥವಾ ಜಿಲ್ಲಾ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನಲ್ಲಿ ತಾಲ್ಲೂಕು ನೋಡಲ್ ಅಧಿಕಾರಿಗಳಾಗಿ ನೇಮಿಸಿರುವ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಥವಾ ಹಿರಿಯ ಮೇಲ್ವಿಚಾರಕರನ್ನು ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನೇಮಿಸಿರುವ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಆರ್‍ಡಬ್ಲ್ಯೂ (ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು).

ಇದನ್ನೂ ಓದಿ | ದಾವಣಗೆರೆ | ವೈದ್ಯಕೀಯ, ಅರೆ ವೈದ್ಯಕೀಯ 63 ಸಿಬ್ಬಂದಿಗಳ ನೇಮಕ : ಮೇ. 10 ರಂದು ನೇರಸಂದರ್ಶನ

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯುಆರ್‍ಡಬ್ಲ್ಯೂ (ನಗರ ಪುನರ್ವಸತಿ ಕಾರ್ಯಕರ್ತರು, ಪರಶುರಾಮ- 7353150170, ಕಮಲಮ್ಮ – 9980581755), ಮತ್ತು ಪ್ರತಿ ತಾಲ್ಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಆರ್‍ಡಬ್ಲ್ಯೂ (ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು ತಾಲ್ಲೂಕು ಪಂಚಾಯಿತಿ, ದಾವಣಗೆರೆ ದೂರವಾಣಿ ಸಂಖ್ಯೆ: 9590829024, ಹರಿಹರ – 9886366809/9844955315/ಯು.ಆರ್.ಡಬ್ಲ್ಯೂ -7406079109, ಹೊನ್ನಾಳಿ – 9886366809, ಜಗಳೂರು – 9902105734, ಚನ್ನಗಿರಿ – 9945738141, ನ್ಯಾಮತಿ – 9886366809) ರವರಿಂದ ಮಾಹಿತಿ ಪಡೆದು ಎಲ್ಲ ವಿಕಲಚೇತನರು ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending