Connect with us

ದಿನದ ಸುದ್ದಿ

‘ಸಂಜೀವಿನಿ’ ಕೆರೆ ಗೌಡರು..!

Published

on

  • ನಾಗರಾಜ ಸಿರಿಗೆರೆ

ಳೆದ ಎರಡೂ ದಿನಗಳಿಂದ ತುಂಬಾ ಹತ್ತಿರದ, ಪರಿಚಿತರ, ಆತ್ಮೀಯರ ಸಾವಿನ ಸುದ್ದಿಗಳು ಬೇಡವಂದರೂ ಕಿವಿಗೆ ಅಪ್ಪಳಿಸುತ್ತಿದ್ದವು. “ಈ ಸುದ್ದಿ ಸುಳ್ಳಾಗಲಿ” ಎಂಬ ಪ್ರಾರ್ಥನೆ “ನರಿ ಕೂಗು ಗಿರಿಗೆ ಕೇಳೀತೆ” ಎನ್ನುವಂತಾಯಿತು. ನಿನ್ನೆ ಬೆಳಗಿನಿಂದ “ಡಾ. ಮಂಜುನಾಥ ಗೌಡರ ಆರೋಗ್ಯದ ಸ್ಥಿತಿ ಗಂಭೀರ” ಎಂಬ ಸುದ್ದಿ ಸುಳ್ಳಾಗಲಿ ಎಂದು ಹಂಬಲಿಸಿದ ಮನಸ್ಸುಗಳೆಷ್ಟೊ. ಕ್ಷಣ ಕ್ಷಣಕ್ಕೂ ಪೊನ್ ಕರೆಗಳು. ”ಗೌಡರ ಆರೋಗ್ಯ ಸುಧಾರಿಸಲಿ” ಎಂಬ ಒಂದೇ ಮಂತ್ರ ಎಲ್ಲರ ಬಾಯಲ್ಲೂ.

ಆದರೆ ಕ್ರೂರ ವಿಧಿ ಹಾಗೆ ಮಾಡಲಿಲ್ಲ. “ಜವರಾಯ ಬಂದರೆ ಬರಿಗೈಲಿ ಬರಲಿಲ್ಲ ಒಳ್ಳೊಳ್ಳೆ ಮರಗಳ ಕಡಿಯುತ ಬಂದ” ಎಂಬ ಜನಪದ ಗೀತೆಯಂತೆ ಸಮಾಜದ ಬಹುದೊಡ್ಡ ಆಸ್ತಿಯಾಗಿದ್ದ ಮಂಜುನಾಥ ಗೌಡರನ್ನು ಕ್ರೂರ ವಿಧಿ ಬಲಿತೆಗೆದುಕೊಂಡಿತು. ಅವರ ಸಾವು ಕೇವಲ ಯಾವುದೊ ಒಂದು ವರ್ಗದವರಿಗೆ ಮಾತ್ರವಲ್ಲ. ಎಲ್ಲಾ ವರ್ಗಕ್ಕೂ ತುಂಬಲಾರದ ನಷ್ಟ ಎಂದರೆ ಕ್ಷೀಷೆಯಾಗಲಾರದು.‌ ನೂರಾರು ಜನಕ್ಕೆ ಅನ್ನ, ಆಶ್ರಯ ನೀಡಿದ್ದರು. ರೈತರಿಗೆ, ಯುವಕರಿಗೆ ಆದರ್ಶಪ್ರಾಯರಾಗಿದ್ದರು.

ಗೌಡರು ಗುಜರಾತಿನಲ್ಲಿ
ಮೆಡಿಕಲ್ ಸೈನ್ಸ್ ಓದುತ್ತಿರುವಾಗ ಅಲ್ಲಿಯ ಏತ ನೀರಾವರಿ ಯೋಜನೆಗಳನ್ನು ಹತ್ತಿರದಿಂದ ಕಂಡಿದ್ದರು. ಆ ಮಾದರಿಯಲ್ಲಿ ಕರ್ನಾಟಕದಲ್ಲೂ ನೀರಾವರಿ ಯೋಜನೆ ರೂಪಿಸಬೇಕು ಎಂದು ದಶಕಗಳ ಹಿಂದೆ ಕನಸು ಕಂಡಿದ್ದರು. ಮೊದಲ ಹಂತದಲ್ಲಿ ದಾವಣಗೆರೆ ಜಿಲ್ಲೆಯ 22 ಕೆರೆಗಳನ್ನು ತುಂಬಿಸಲು ರೈತರನ್ನು ಸಂಘಟಿಸಿ, ವಿಧಾನ ಸೌಧದ ಮೆಟ್ಟಿಲೇರಿದ್ದರು.

ಹಗಲಿರಳೆನ್ನದೆ ಅವಿರತ ಹೋರಾಟಕ್ಕಿಳಿದರು. ಆಡಳಿತ ವರ್ಗ ಕಿವಿಗೊಡದಿದ್ದಾಗ ಉಪವಾಸ ಸತ್ಯಾಗ್ರಹಕ್ಕೂ ಇಳಿದರು. ‌ ಆನಂತರ ಸಿರಿಗೆರೆಯ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಯಶಸ್ವಿಯಾದರು. ತಮ್ಮ ಊರಾದ ತುಪ್ಪದಳ್ಳಿಯ ಕೆರೆಗೆ ಈ ಯೋಜನೆಯಲ್ಲಿ ತುಂಬಿಸಲು ಆಗದಿದ್ದಾಗ ಸ್ಥಿತಪ್ರಜ್ಞರಾಗಿದ್ದರು.

ಕೆರೆ ಯೋಜನೆಗಳ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರು. ಲಯನ್ಸ್ ಕ್ಲಬ್ ಮತ್ತಿತರ ಸಂಘಸಂಸ್ಥೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು. ರಾಜಕೀಯ ನಾಯಕತ್ವದ ಕನಸು ಕಂಡರು. ದಾವಣಗೆರೆ ನಗರದಲ್ಲಿ ‘ಸಂಜೀವಿನಿ ನರ್ಸಿಂಗ್ ಹೋಂ’ ಮತ್ತು ‘ಸಂಜೀವಿನಿ ಆಸ್ಪತ್ರೆ’ ಎಂಬ ಎರಡು ಆಸ್ಪತ್ರೆಗಳನ್ನು ತೆರೆದು ಗ್ರಾಮೀಣ ಜನರ ನೋವಿಗೆ ಸ್ಪಂದಿಸುತ್ತಿದ್ದರು. ಎಲ್ಲರನ್ನೂ ಸದಾ ನಗುಮೊಗದಿಂದ ಮಾತನಾಡಿಸುತ್ತಿದ್ದರು.‌

ಸಿರಿಗೆರೆ ಗುರುಗಳ ನಿಕಟವರ್ತಿಯಾಗಿ ಪೂಜ್ಯರುಗಳೊಂದಿಗೆ ಸದಾ ಸಮಾಜದ ಹಿತಚಿಂತನೆಯಲ್ಲಿದ್ದರು. ಎರಡು ವರ್ಷಗಳ ಹಿಂದೆ ಜಗಳೂರಿನಲ್ಲಿ ಜರುಗಿದ ‘ತರಳಬಾಳು ಹುಣ್ಣಿಮೆ’ಯ ಪ್ರಧಾನ ಕಾರ್ಯದರ್ಶಿಯಾಗಿ ಅದರ ಸಂಪೂರ್ಣ ಯಶಸ್ಸಿಗೆ ಕಾರಣರಾಗಿದ್ದವರು. ಕಳೆದ ವರ್ಷ ಗೋಕಾಕ್ ಮತ್ತು ಹಾವೇರಿ ತಾಲ್ಲೂಕಿನ ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಣೆ ಸಂದರ್ಭದಲ್ಲಿ ಶ್ರೀಗಳೊಂದಿಗೆ ಮುಂಚೂಣಿಯಲ್ಲಿದ್ದರು.

ಶಾಶ್ವತ ಬರಪೀಡಿತ ತಾಲ್ಲೂಕು ಎನಿಸಿದ ಜಗಳೂರನ್ನು ಸಮೃದ್ಧ ನೆಲವನ್ನಾಗಿಸಬೇಕೆಂದು ತುಂಗಭದ್ರಾ ನದಿಯಿಂದ ನೀರು ಹರಿಸುವ ಕಾರ್ಯಕ್ಕೆ ಸಿರಿಗೆರೆ ಶ್ರೀಗಳಿಗೆ ಬೆನ್ನೆಲೆಬಾಗಿದ್ದರು.
ಜಗಳೂರು ತಾಲೂಕಿನ ತುಪ್ಪದಹಳ್ಳಿ ಗ್ರಾಮದ ಗೌಡರ ಮನೆತನದವರಾದ ಮಂಜುನಾಥ್ ಆರುಜನ ಅಕ್ಕತಂಗಿಯರ ನಡುವೆ ಒಬ್ಬನೇ ಗಂಡುಮಗ. ಸೋದರ ಸೊಸೆಯನ್ನೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರು.

ಇವರ ಕಾರ್ಯ ಯೋಜನೆಗಳ ಬಗ್ಗೆ ಒಂದು ಲೇಖನ ಬರೆಯಲು ಸಂದರ್ಶನಕ್ಕೆ ಸಮಯ ಕೇಳಿದಾಗಲೆಲ್ಲ “ನಾನೇ ಕರೆಮಾಡಿ ಹೇಳುತ್ತೇನೆ” ಎಂದಿದ್ದರು. ‌ಅಷ್ಟೊತ್ತಿಗೆ ಕೊರೊನಾ ಮಾರಿ ಒಕ್ಕರಿಸಿ, ಸಮಯ ಹೊಂದಿಸಿಕೊಳ್ಳಲು ಅವಕಾಶ ನೀಡಲೇಯಿಲ್ಲ. ಬನಶಂಕರಿ ಬಡಾವಣೆಯಲ್ಲಿ ಬೆಳಗಿನ ವಾಕಿಂಗ್ ನಲ್ಲಿ ಕೊರೊನಾ ಕಾರಣಕ್ಕೆ ದೂರದಿಂದಲೇ ಶುಭಾಶಯಗಳ ವಿನಿಮಯ ಅನಿವಾರ್ಯವಾಗಿತ್ತು.

ತಲೆತುಂಬ ಕನಸುಗಳು ಹೊತ್ತು, ರೈತಪರ ಚಿಂತಕರಾಗಿ, ಯುವಜನಾಂಗಕ್ಕೆ ಸ್ಫೂರ್ತಿಯಾಗಿದ್ದ ಗೌಡರಿಗೆ 52 ನಿಜಕ್ಕೂ ಸಾವಿನ ವಯಸ್ಸಲ್ಲ.ಆದರೆ ಸ್ವತಃ ವೈದ್ಯರಾಗಿ ತಮ್ಮ ಸಾವನ್ನು ಅರಿಯದೆ ಹೋಗಿದ್ದು ವಿಧಿಯ ಅಟ್ಟಹಾಸ. ಈ ಹಿಂದೆ ರೈತ ನಾಯಕ ಎನ್ ಡಿ ಸುಂದರೇಶ್, ಕಾರ್ಮಿಕ ನಾಯಕ ಬಿ ಕೆ ಸುಂದರೇಶ್ ಹೀಗೆ ಅಕಾಲ ಮೃತ್ಯುವಿಗೆ ಈಡಾದರು. ಸಮಾಜಕ್ಕೆ ಬೇಕಾದ ಇಂತಹ ಕಳಕಳಿಯ ನಾಯಕರು ನಡುವಿನಲ್ಲಿಯೇ ತುತ್ತಾಗುತ್ತಾರೆ. ಎಸ್ ಪಿ ಬಿ ಯಂತೆ ಗೌಡರ ಆರೋಗ್ಯ ಸುಧಾರಿಸಬಹುದು ಎಂಬ ಕನವರಿಕೆ ಕನವರಿಕೆಯಾಗಿಯೇ ಉಳಿಯಿತು.

ಸುದ್ದಿದಿನ.ಕಾಂ|ವಾಟ್ಸಾಪ್ |9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending