ಬಹಿರಂಗ
ಅಮ್ಮ ನಡೆದಾಡುವ ದೇವರು

ಆ ಟ್ರೈನು ಬಂದಿದ್ದೇ ಅರ್ಧ ಗಂಟೆ ಲೇಟು..
ನಂಗು ನಿಂತು ನಿಂತು ಸಾಕಾಗಿತ್ತು , ವಿಶ್ವಮಾನವ ಎಕ್ಸ್ಪ್ರೆಸ್ ಹುಬ್ಬಳ್ಳಿ ಯಿಂದ ಮೈಸೂರ್ ಕಡೆಗೆ ಹೊರಟಿದ್ ಟ್ರೈನ್ . ಪ್ಲಾಟ್ ಫಾರ್ಮ್ ಬಂದ್ ಕೂಡ್ಲೆ ಹಂಗೆನೆ ಚಂಗ್ ಅಂತಾ ಜಂಪ್ ಮಾಡಿ , ಕಿಟಕಿ ಪಕ್ಕನೇ ಸೀಟ್ ನೋಡ್ದೇ ಎಲ್ಲಾ ಕಡೆನು ಫುಲ್ ಆಗಿತ್ತು . ಆ ಸೀಟಲ್ಲಿ ಮಲಗಿದವರ್ನ ಮನವಿ ಮಾಡ್ಕೊಂಡೆ . ಪಾಪ ಜಾಗ ಬಿಟ್ರು.
ನಂಗೆ ಈ ಕಿಟಕಿ ಸೈಡಲ್ಲಿ ಕೂತ್ಕೊಳ್ಳೋದು ಅಂದ್ರೆ ಸಿಕ್ಕಾ ಪಟ್ಟೇ ಮಜಾ.. ಅಂಡ್ ಖುಷಿ.. ಟ್ರೈನು ಅದ್ಮೇಲ್ ಕೇಳ್ಬೇಕಾ ! ಸಿಕ್ಕಾಪಟ್ಟೆ ಜನಗಳ ಗೊಣಗೊಣ.. ಅದ್ರಲೂ ಎಲ್ಲಾ ಥರದ ಮನಸ್ಥಿಯ ಜನಗಳ ಒಂದು ಸಮಾಗಮ ಈ ರೈಲು ಪ್ರಯಾಣ… ನಂಗೆ ವಿಮಾನದಲ್ಲಿ ಹಾರಾಟಮಾಡದ್ಕಿಂತ ಟ್ರೈನ್ ನಲ್ಲಿ ಟ್ರಾವೆಲ್ ಮಾಡದು ಅಂದ್ರು ಒಂಥರ ಕ್ರೇಜ್ ಅಂಡ್ ಸಮ್ ಥಿಂಗ್ ಇಷ್ಟ… ಓಹೋ ಬುರುಡೆ ಬಿಡ್ತಾವ್ನೇ ಅಂನ್ಕೋತಿದಿರಾ… ?
ಇಲ್ಲ ಬಸ್ಸು ಚಿಕ್ಕದು ಅದ್ರಲ್ಲಿ ಹಾಡೇಳ್ಬೇಕು ಅಂತ ಏನಾದ್ರು ಅರ್ಜೆಂಟ್ ಆದ್ರೆ ಮುಗೀತು, ಡ್ರೈವರ್ ನಿಲ್ಲಿಸ್ತಾನ ಇಲ್ಲ. ಜಪ್ಪಯ್ಯ ಅಂದ್ರು ನಿಲ್ಸಲ್ಲ… ಅಮೇಲೆ ಈ ರೋಡ್ ಆಕ್ಸಿಡೆಂಟ್ ಗಳನ್ನ ನೋಡಿದ್ಮೇಲೆ ನಂಗೆ ಸಿಕ್ಕಾಪಟ್ಟೆ ಭಯ ಅದ್ಕೆ , ಲಾಂಗ್ ರೂಟ್ ಏನಿದ್ರು ರೈಲನಲ್ಲೆ ನನ್ ಜರ್ನಿ..ಇದ್ರಲ್ಲಿ ಎಲ್ಲಾ ರೀತಿ ಫೆಸಿಲಿಟಿ ಲಭ್ಯವಿದೆ. ಇನ್ನು ನಾವ್ ಕೂರೋ ಕ್ಯಾಬಿನ್ ನಲ್ಲಿ ಕಲರ್ ಕಲರ್ ಹುಡುಗಿರೇನಾದ್ರು ಕೂತಿದ್ರಂತು ಸ್ವರ್ಗಕ್ಕೆ ಮೂರೇ ಗೇಣು… ನಮ್ ಕಣ್ಣಿನ ಮಿಣ ಮಿಣ … ( ಬಟ್ ಕಂಡಿಷನ್ಸ್ ಅಪ್ಲೈ ಅದು ನಾನಲ್ಲ) . ಆ ಕಡೆನೆ ಸೈಟು , ವಿಸಿಟ್ಟು ಎಲ್ಲಾನು… ಎಲ್ಲಾ ಹೇಳಕ್ ಆಗಲ್ಲ , ನೀವೆ ಕನಸ್ ಕಾಣ್ಕೊಳಿ…
ಈ ರೈಲಲ್ಲಿ ಜಾತಿ, ಧರ್ಮ ಏನು ಇಲ್ದಲೆ ಎಲ್ಲಾ ರೀತಿಯ ನಾನಾ ಮನಸುಗಳು ಜರ್ನಿ ಮಾಡ್ತವೆ….ಯಾರ್ಗೆ ಯಾರು ಅಂತ ಗೊತ್ತಿರಲ್ಲ, ಪಕ್ಕದಲ್ಲಿ ಕೂತಾಗ ಏನಾದ್ರು ಮನೆ ಇಂದ ತಂದು ತಿಂತಿದಾಗ ತಗೋಳಪ್ಪ ಅಂತ ಒಂದು ಭಾವನೆ ಇರುತ್ತಲ್ಲ ಅದ್ಕೆ ಎರಡು ಮಾತು ಸಿಗಲ್ಲ… ಎಲ್ಲಿಂದಲೋ ಬಂದೋವ್ರು… ಇಳಿಯೋ ಅಷ್ಟರಲ್ಲಿ ಫ್ರೆಂಡ್ಸಿಪ್ ಅನ್ನೋ ಸಂಬಂಧನ ಬೆಳೆಸಿ ಹೋಗಿರ್ತೀವಿ…
ಚೆನ್ನಾಗಿರೋ ಹುಡುಗೀರ್ ಏನಾದ್ರು ಸಿಕ್ಕಿದ್ರು ಅಂದ್ರೆ ಮುಗಿತು. ಏನು ಮಾತಿಲ್ಲ ಅಂದ್ರು ಕೊರ್ಕೊಂಡು ಕೂತಿರ್ತಿವಿ.. ಅವಳೇನಾದ್ರು ನಮ್ ಮಾತ್ ಕೇಳಕ್ಕೆ ಇಂಟರೆಸ್ಟ್ ತೋರ್ಸಿದಾಳೆ ಅಂತಂದ್ರೆ ಇಲ್ದಲೆ ಇರೋ ಬಿಲ್ಡಪ್ನೆಲ್ಲಾ ನಮಗ್ ನಾವೆ ಕೊಟ್ಕೊತಿರ್ತಿವಿ… ಇನ್ನು ಒಂಚೂರು ಮುಂದಕ್ ಹೋಗಿ , ಫೇಸ್ ಬುಕ್ , ಇನ್ಸ್ಟಾ ಐಡಿ ಕೇಳಿರ್ತಿವಿ. ಇನ್ನೂ ಮೀಟರ್ ಜಾಸ್ತಿ ಇದ್ರೆ ಮೊಬೈಲ್ ನಂಬರ್ ಗಳು ಗೊತ್ತಿಲ್ದಲೆನೆ ಎಕ್ಸೇಂಜ್ ಆಗಿರ್ತವೆ.. ಅಮೇಲ್ ಮಿಕ್ಕಿದ್ ಏನ್ ಅನ್ಕೋತಿರೋ ನೀವೆ ಅನ್ಕೊಳ್ಳಿ…
ಹಿಂಗೆ ಎಲ್ಲಾ ಸೀನ್ ಗಳು ನಮ್ ಸುತ್ತ ಮುತ್ತ ನಡೆದ್ರು ಮನಸ್ ಮುಟ್ಟಿದ್ ಮಾತ್ರ ಈ ಸ್ಟೋರಿನೇ … ನಿಮ್ಗೂ ನೆನಪಾಗ್ಬೊದೇನೋ
ಓದ್ನೋಡಿ…
ತನ್ನ ಎರಡು ಮಕ್ಕಳು ಟ್ರೈನ್ ನಲ್ಲಿ ಏನೆ ಕೇಳುದ್ರು ಅದ್ನೆಲ್ಲ ಕೇಳಿದ್ನೆಲ್ಲ ಕೊಡಿಸಿದ್ರು, ಯಾರಾದ್ರು ಚರ್ಮುರಿ ತರ್ಲಿ, ವಡೆ ತರ್ಲಿ ಅವರ್ ಬಾಯಲ್ಲಿ ಒಂದೇ ಸೌಂಡು ಅಮ್ಮಾ… ಅಮ್ಮಾ.. ಅಷ್ಟೆ ಕೇಳಿದೆಲ್ಲ ಗ್ರಾಂಟೆಡ್ .. ಅವಳ್ ಅತ್ರ ದುಡ್ಡಿದ್ಯೋ ಇಲ್ವೋ ಆ ಮಕ್ಕಳಿಗೇನ್ ಗೊತ್ತು ,ಆದ್ರೆ ಎಷ್ಟೆ ಕಷ್ಟ ಇದ್ರು ಕೂಡ ಕೇಳಿದ್ನ ಇಲ್ಲ ಅಂದಲೆ ಕೊಡಿಸ್ತಿದ್ಲು… ಅರಸಿಕೆರೆ ಜಂಕ್ಷನ್ ನಲ್ಲಿ ಟ್ರೈನ್ ಸ್ಟಾಪ್ ಕೊಟ್ಟಾಗ . ಇಡ್ಲಿ ಇಡ್ಲಿ ಅಂತಾ ಪಕ್ಕದಲ್ಲಿ ತಳ್ಳೋ ಗಾಡೀಲ್ ಕೂಗ್ತಾ ಬರ್ತಿದ್ನಾ ,ಆ ಮಕ್ಕಳು ಆ ಮಕ್ಕಳು ನೋಡಿದ್ ಕೂಡ್ಲೆನೆ . ಕರುಳಿನ ಹಸಿವು ಗೊತ್ತಾಗಿ ಅವ್ರಿಗೆ ಹೊಟ್ಟೆಗೆ ಊಟ ಕೊಡ್ಸಿದ್ಲು… ಮಕ್ಕಳಿಗೆ ಇಡ್ಲಿ ಕೊಡಿಸಿದ್ಲು , ನೀರಮ್ಮ ಅಂದ್ಕೋಡ್ಲೆ ಕಾಲಿ ಬಾಟಲ್ ನೊಡ್ತಿದ್ಲು ಅವಾಗ ನಾನು ದಾವಣಗೆರೆ ಸ್ಟೇಷನ್ ನಲ್ಲಿ 12ರುಪಾಯಿಗೆ 2 ಲೀಟರ್ ವಾಟರ್ ಬಾಟಲ್ ತಗೊಂಡಿದ್ದೆ ಅದ್ನೆ ಕೊಟ್ಟೆ.. ಕೊನೆಗೆ ಅದೇ ಚಿಕ್ಕ ಪೇಪರ್ ತಟ್ಟೆನಲ್ಲಿ ಕೈ ತೊಳೆಸಿದ್ಲು ,ಆ ಕೈ ನೀರು ಮೈಮೇಲೆ ಬಿದ್ದು , ಪಕ್ಕದಲ್ಲಿ ಕೂತಿರೋರ್ ಮೇಲ್ ಬಿದ್ದಾಗ ಸಾರಿಕಣವ್ವ. ಅಂದ್ರು..ಅಮೇಲ್ ತನ್ನ ಸೆರಗಿನಲ್ಲಿ ಕೈ ಹೊರೆಸಿದಳು. ಮಕ್ಕಳು ಖಷ್ ಖುಷಿಯಿಂದ ಆಟಾಡ್ಕೊಂಡು ಸುಮ್ನಾದ್ರು…
ಅದರೆ…
ತಾನು ಮಾತ್ರ ಹಸಿವಿದ್ದರು ಕೂಡ ಸುಮ್ಮನೇ ಕುಳಿತಳು, ತನ್ನ ಹಸಿವನ್ನು ಲೆಕ್ಕಿಸದೆ ತನ್ನ ಕರುಳ ಬಳ್ಳಿಯ ನಲಿವಲ್ಲಿ ತನ್ನ ನೋವನ್ನು ನುಂಗಿದಳು…ಕೊನೆಗೆ ನೀರನ್ನು ಕೂಡ ಆ ತಾಯಿ ನೀರು ಕುಡಿಲಿಲ್ಲ ಆ ಮಕ್ಳಿಗೆ ಬಾಟಲ್ ಕೊಟ್ಳು…. !!!!
ಇದೆ ಅಲ್ವಾ ತಾಯಿ ಪ್ರೀತಿ ,ಆ ದೇವರು ನಮಗೆ ಕಾಣಿಸ್ತನೋ ಇಲ್ವೋ ಗೊತ್ತಿಲ್ಲ ,ಹಸಿವು ಅಂದಾಗ ಪ್ರತ್ಯಕ್ಷ ಆಗಿ ಅನ್ನ ಕೊಡ್ತಾನೋ ಇಲ್ವೋ ,ಬಟ್ ತಾಯಿ ಮಾತ್ರ ಬೇಡಿದ್ನೆಲ್ಲ ನೀಡೋ ಅನ್ನಪೂರ್ಣೇಶ್ವರಿ, ವರಲಕ್ಷ್ಮಿ ,ಅಮ್ಮನ ಬಗ್ಗೆ ಹೇಳಕ್ಕೆ ಈ ಸಾಲುಗಳು ಸಾಲಲ್ಲ..
(ಆಗ ನೆನಪಾಗಿದ್ದು ನನ್
ನನ್ ಅಮ್ಮ…
ಅಮ್ಮ … ಅಮ್ಮ ಐ ಲವ್ ಯೂ )
ಕೃಷ್ಣ ನ್ ಹೆತ್ತ ತಾಯಿ ದೇವಕಿ ಅದ್ರೆ ಸಾಕಿದ್ ಮಾತ್ರ ಯಶೋದೆ… ಹಂಗೆ ನನ್ ಹೆತ್ತಿದ್ ರತ್ನಮ್ಮ ಅನ್ನೋ ದೇವಕಿ ಆದ್ರೂ , ಸಾಕಿದ್ ಮಾತ್ರ ನಂಜಮ್ಮ, ಶಾರದಮ್ಮ , ಅಕರ್ಸಮ್ಮನಂತಹ ಯಶೋ ಮಾತೆಯರು …
ನನ್ ತಾಯಿನು ಕೂಡ ಏನು ಇಲ್ದಲೆ ಇದ್ದಾಗ ಕೂಲಿ ಮಾಡಿ ನನ್ ಸಾಕಿದ್ದಾಳೆ.. ನಂಗೆ ಅನ್ನ ಹಾಕಿ ಸಾಕಿದ್ ಎಲ್ಲಾ ನನ್ ತಾಯಂದಿರ್ಗೂ ನನ್ ಸಾಷ್ಟಾಂಗ ಪ್ರಣಾಮಗಳು..
ನಾವ್ ಹುಟ್ಟೋ ಟೈಮಲ್ಲಿ ಅವಳಿಗಾಗೋ ವೇದನೆ ಇದ್ಯಲ್ಲ.. ತಾಯಿ…
ನೀವ್ ನೆನ್ಸ್ಕೋಳಕ್ಕು ಆಗಲ್ಲ . ನಮ್ಮ ಬಾಡಿಲಿರೋ ಒಟ್ಟು ಮೂಳೆಗಳನ್ನ ಒಟ್ಟಿಗೆ ಮುರುದ್ರೆ ಎಷ್ಟು ನೋವಾಗುತ್ತೋ ! ಅಷ್ಟ್ ನೋವ್ ಪಡ್ತಾಳಂತೆ ನಮ್ ಅಮ್ಮ… !!!
ಅದೇ ಇರ್ಬೇಕು ನೋಡಿ ತಾಯಿಯೊಬ್ಬಳು ಅತ್ತು ನಮ್ ಜನನದಿಂದ ಖುಷಿ ಪಡೋ ಸನ್ನಿವೇಶ…
ಇನ್ನು ಹೇಳ್ಬೇಕ ???
ಅಮ್ಮ ಅಂದ್ರೆ ಏನು ಅಂತಾ , ಅವಳು ದೇವರಿಗಿಂತ ನೂರು ಪಟ್ಟು ಜಾಸ್ತಿನೆ…
ಅದಕ್ಕೆ ನಾನ್ ಹೇಳೋದು ಏನೆ ಮಾಡ್ರಿ ತಾಯಿಗೆ ನೋವು ಮಾತ್ರ ಕೊಡ್ಬೇಡಿ… ಬೆಳೆಗ್ಗೆ ಎದ್ದು ದೇವರ್ನ ನೆನಿತಿರೋ ಇಲ್ವೋ , ತಾಯಿನ ನೆನಪು ಮಾಡ್ಕೊಳಿ ಸಾಕು… ಅವತ್ತೆಲ್ಲ ಅರಾಮಾಗಿರ್ತಿರ..
ಇನ್ನೂ ಒಂದ್ ಕಥೆ ನೆನಪಾಯ್ತು ನಾನು 8ನೇ ಕ್ಲಾಸ್ ಓದ್ವಾಗ 9ನೆಕ್ಲಾಸ್ ಕನ್ನಡ ಬುಕ್ಕಲ್ಲಿ ಅವ್ವ ಅಂತ ಏನೋ ಒಂದು ಪಾಠ ಇತ್ತು ರೀ .. ಅತ್ತ್ ಬಿಟ್ಟಿದಿನಿ. ಆ ತಾಯಿ ತನ್ ಮಗುಗೆ ಹುಷಾರಿಲ್ಲ ಅಂತಾ ಆಸ್ಪತ್ರೆಗೆ ಕರ್ಕೊಂಡು ಹೋಗ್ತಾಳೆ ಆದ್ರೆ ಮೆಡಿಷನ್ ತರಕ್ ದುಡ್ಡು ಇಲ್ಲ ಅಂದಾಗ ಕೊನೆಗೆ ತನ್ನನ್ನೇ ತಾನು ಮಾರಿಕೊಂಡು ಔಷಧಿ ತರ್ತಾಳೆ…
ಎಷ್ಟೋ ಜನ ತಂದೆ ಇಲ್ಲ ಅಂದ್ರು ಅಮ್ಮನ ಆರೈಕೆನಲ್ಲಿ ಬೆಳಿತಾರೆ, ತಾಯಿ ಕೂಲಿನೋ,ನಾಲಿನೊ ಭಿಕ್ಷೆಯೊನೋ ಬೇಡಿ ತಂದು ನಿಮ್ಮನ್ ಸಾಕ್ತಾಳೆ, ಓದಿಸ್ತಾಳೆ , ಬೆಳುಸ್ತಾಳೆ… ಇದೆ ನಿಮ್ ತಾಯಿ ಮಮತೆ ಯಿಂದ ವಿದೇಶದಲ್ಲೋ ಓದಿಸ್ತಳೆ, ಒಳ್ಳೆ ಕೆಲಸನು ಕೊಡ್ಸಿರ್ತಾಳೆ. ಅದೂ ಅಲ್ದಲೆ ನಿಮ್ ಮದ್ವೇನು ಮಾಡಿರ್ತಾಳೆ…
ನೀವ್ ಇಷ್ಟ ಪಟ್ಟಿರೋ ಹುಡುಗಿ ಇದ್ರು ಅದಕ್ಕೆ ಇಲ್ಲ ಅಂದಲೆ , ಹಿಂದೆಮುಂದೆ ಯೋಚನೆ ಮಾಡ್ದಲೆ , ಅವಳ ಜೊತೆಲೆ ಮದ್ವೆ ಮಾಡಿ , ನನ್ ಮಗಳು ಅಂತಾ ಅರೈಸ್ತಾಳೆ. ಅದ್ರೆ ಹೆಂಡತಿ ಅನ್ನೋಳು ಬಂದ್ಕೂಡ್ಲೆ…ಅವಳ್ ಭಿನ್ನಾಣದ ಮಾತಿಂದ ಕೆಲವರು ತಾಯಿನ ಲಘುವಾಗಿ ನೋಡ್ತೀರ , ಕೊನೆಗೆ ವೃದ್ದಾಶ್ರಮ ಅನ್ನೋ ಕಾಡಿಗ್ ಕಳಿಸ್ತೀರ ..
ಇನ್ನೂ ಕೆಲವರು ಇದಾರೆ ಕಣ್ರಿ ನಮ್ ಸೋದರ ಮಾವನ್ ಥರ ಶ್ರವಣ ಕುಮಾರನಂಗೆ ತಂದೆ ತಾಯಿನ ಯಾವಾಗ್ಲೂ ಕಾವಲು ಕಾಯ್ತ ಆರೈಕೆ ಮಾಡಿತಿರ್ತರೆ… ಏನೆ ಆಗ್ಲಿ ರೀ ಯಾರ್ ಬರ್ಲಿ ಯಾರ್ ಹೋಗ್ಲಿ ..
ತಾಯಿನೆ ದೇವರು… ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ದೇವರಿಲ್ಲ..
ಹಿಂಗಿದ್ರೆ ಯಾವ್ ಯಮನೆ ಬಂದ್ರು ನಿಮ್ನ ಏನು ಮಾಡಕ್ ಆಗಲ್ಲ…
ಮಾತೃ ದೇವೋ ಭವ
ನೋಡ್ರಪ್ಪ ಜಾಸ್ತಿ ಏನಾದ್ರು ಕುಯ್ಯ್ ತಾವ್ನೆ ಅಂತ ಅನ್ಸಿದ್ರೆ ಈ ಕಣ್ಣಲ್ ನೋಡಿ , ಆ ಕಣ್ಲಲ್ ಬಿಟ್ ಬಿಡಿ , ಬಯ್ಕೊಳೊ ಹಾಗಿದ್ರೆ ನಾನೆ ನೀನು ಅನ್ಕೊಂಡು ನೀವೆ ಬೈಯ್ಕೋ ಬಿಡಿ… ಇಷ್ಟ ಆದ್ರೆ ಶೇರ ಮಾಡಿ ಬೇರೆ ಅವರು ಓದ್ಲೀ ,ಮರೆತಿದ್ರೆ ಅವರ್ ತಾಯಿನ ನೆನ್ಸ್ಕೊಳ್ಳಿ…
ಇಂತಿ ನಿಮ್ಮ ಪ್ರೀತಿಯ
ತಾಯಿಗೊಬ್ಬ ತರ್ಲೆ ಮಗ
ವಿದ್ಯಾರ್ಥಿ ಮಿತ್ರ ಕಿರಣ್


ಬಹಿರಂಗ
ಸುಳ್ಳಿನ ಸುಳಿಯಲ್ಲಿ ಸುಲ್ತಾನ

- ಸುರೇಶ ಎನ್ ಶಿಕಾರಿಪುರ
ಛತ್ರಪತಿ ಶಿವಾಜಿ ಕ್ರಿ.ಶ. 1627ಅಥವಾ 19 ಫೆಬ್ರವರಿ1630 ರಂದು ಜನಿಸಿದ. 6 ಜೂನ್ 1674ರಲ್ಲಿ ಮರಾಠಾ ರಾಜ್ಯದ ರಾಜನಾಗಿ ಪಟ್ಟಾಭಿಶಿಕ್ತನಾಗಿ ಸುಮಾರು 1680 ಏಪ್ರಿಲ್ 14 ರಲ್ಲಿ ಮಹಾರಾಷ್ಟ್ರದ ರಾಯಗಡದಲ್ಲಿ ಸುಮಾರು ತನ್ನ 53ನೇ ವಯಸ್ಸಿನಲ್ಲಿ ಮರಣಹೊಂದಿದ. ಈ ನಡುವೆ ಶಿವಾಜಿ ಮರಾಠಾ ಸಾಮ್ರಾಜ್ಯ ವಿಸ್ತರಣೆಗೂ ಮುಂದಾದ. ದಕ್ಷಿಣದ ಕರ್ನಾಟಕದ ಅನೇಕ ಸಂಸ್ಥಾನಗಳ ಮೇಲೆ ದಾಳಿನೆಡೆಸಿದ.
ಇಷ್ಟನ್ನೆಲ್ಲಾ ಏಕೆ ಹೇಳುತ್ತಿದ್ದೇನೆ ಎಂದರೆ, ಶಿವಾಜಿ ಹದಿನೇಳನೇ ಶತಮಾನದಲ್ಲಿ ಹುಟ್ಟಿ ಹದಿನೇಳನೇ ಶತಮಾನದಲ್ಲೇ ತೀರಿಹೋದ. ಆತನಿಗೂ ಕರುನಾಡಿನ ಬೆಳಗಾವಿ ಜಿಲ್ಲೆಯ ಕಿತ್ತೂರು ಹಾಗು ಬೈಲಹೊಂಗಲಗಳಿಗೂ ಸಮೀಪವಿರುವ ಬೆಳವಡಿ ಸಂಸ್ಥಾನದ ರಾಣಿ ಮಲ್ಲಮ್ಮನಿಗೂ ಘೋರವಾದ ಯುದ್ಧ ನಡೆದು ಅಕ್ಷರಷಃ ಶಿವಾಜಿ ವೀರ ಮಲ್ಲಮ್ಮನಿಂದ ಸೋತುಹೋದ.
ಬಹುಷಃ ಶಿವಾಜಿ ಛತ್ರಪತಿ ಶಿವಾಜಿರಾಜೆ ಷಹಾಜಿರಾಜೇ ಭೋಂಸ್ಲೆ ಆಗುವುದಕ್ಕೆ ಮುನ್ನವೇ ಅಂದರೆ 1674ಕ್ಕೂ ಮೊದಲೇ ಬೆಳವಡಿ ಎಂಬ ಪುಟ್ಟ ಸಂಸ್ಥಾನದ ಮೇಲೆ ಈ ದಾಳಿ ನೆಡೆಸಿರಬೇಕು. ಆತ ದಕ್ಷಿಣದಲ್ಲಿ ತನ್ನ ಸಾಮ್ರಾಜ್ಯ ವಿಸ್ತರಿಸುವುದಕ್ಕಿಂತ ಇಲ್ಲಿ ಸರ್ದೇಶ್ ಮುಖಿ ಮತ್ತು ಚೌತ ಕಂದಾಯ ವಸೂಲಿ ಮಾಡುವ ಉದ್ದೇಶ ಹೊಂದಿದ್ದನೆಂದು ಕೆಲವು ಇತಿಹಾಸಕಾರರು ಹೇಳುತ್ತಾರೆ. ಅದೇನೇ ಇರಲಿ ಈ ಲೇಖನದ ಉದ್ಧೇಶ ಶಿವಾಜಿ ಬದುಕಿದ್ದು ಹಾಗೂ ಬೆಳವಡಿಯಲ್ಲಿ ಈಶಪ್ರಭು ಮತ್ತು ರಾಣಿ ಮಲ್ಲಮ್ಮ ಆಳುತ್ತಿದ್ದುದು ಹದಿನೇಳನೇ ಶತಮಾನದಲ್ಲಿ ಎನ್ನುವುದು ಸ್ಪಷ್ಟ.
ಈಗ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ವಿಚಾರಕ್ಕೆ ಬರೋಣ. ಹೈದರಾಲಿ ಹುಟ್ಟಿದ್ದು ಕ್ರಿ.ಶ 1720 ರಲ್ಲಿ ಇಂದಿನ ನಮ್ಮ ಕೋಲಾರ ಜಿಲ್ಲೆಯ ಬೂದಿಕೋಟೆಯಲ್ಲಿ. ಅಂದರೆ ಮಹಾರಾಠಾ ರಾಜ ಶಿವಾಜಿ ಜನಿಸಿ ಸುಮಾರು60 ವರ್ಷದ ನಂತರ ಮೈಸೂರು ಸಂಸ್ಥಾನದಲ್ಲಿ ಹೈದರಾಲಿ ಜನಿಸಿದ. ಹೈದರ್ ಶಿವಾಜಿ ಪಟ್ಟಾಭಿಶಿಕ್ತನಾಗಿ ಸುಮಾರು 46ವರ್ಷಗಳ ನಂತರ, ಶಿವಾಜಿ ಮಡಿದು ಸುಮಾರು 40ವರ್ಷದ ನಂತರ ಜನಿಸಿದ.
ಟಿಪ್ಪು ಜನಿಸಿದ್ದು 1750ರ ನವಂಬರ್ 7ನೇ ತಾರೀಖು. ಬೆಂಗಳೂರು ಸಮೀಪದ ದೇವನಹಳ್ಳಿಯ ಕೋಟೆಯಲ್ಲಿ ಶಿವಾಜಿ ಜನಿಸಿ ಸುಮಾರು 120ವರ್ಷಗಳ ನಂತರ ಬರೋಬ್ಬರಿ ಒಂದೂ ಕಾಲು ಶತಮಾನದ ಬಳಿಕ, ಶಿವಾಜಿ ಪಟ್ಟಾಭಿಶಿಕ್ತನಾಗಿ ಸುಮಾರು 76ವರ್ಷಗಳ ಬಳಿಕ, ಶಿವಾಜಿ ನಿಧನನಾಗಿ ಸುಮಾರು 70ವರ್ಷಗಳ ನಂತರ ಟಿಪ್ಪೂ ಜನಿಸಿದ.
ಬಹುಷಃ ಟಿಪ್ಪು ಜನಿಸುವ ಸುಮಾರು 80 ವರ್ಷಗಳ ಮುಂಚೆಯೇ ಬೆಳವಡಿ ಮಲ್ಲಮ ಜೀವಿಸಿದ್ದಳು ಶಿವಾಜಿಯೊಂದಿಗೆ ಹೋರಾಡಿದ್ದಳು. ಹೆಚ್ಚೂ ಕಡಿಮೆ ಟಿಪ್ಪೂ ಜನಿಸುವ 70-80 ವರ್ಷಗಳ ಮೊದಲೇ ತೀರಿಕೊಂಡು ಇತಿಹಾಸದ ಪುಟ ಸೇರಿದ್ದಳು. ಆಕೆ ವಯಸ್ಸಿನ ಲೆಕ್ಕದಲ್ಲಿ ಟಿಪ್ಪುವಿನ ಮುತ್ತಜ್ಜಿಗಿಂತಲೂ ಹಿರೀಕಳಾಗುತ್ತಾಳೆ.
ಸತ್ತು ಕಾಲಗರ್ಭದಲ್ಲಿ ಕರಗಿಹೋದ ಬೆಳವಡಿ ಮಲ್ಲಮ್ಮನನ್ನು ಟಿಪ್ಪು ಅತ್ಯಾಚಾರ ಮಾಡಲು ಹೇಗೆ ಸಾಧ್ಯ…? ಸಂಘಿಗಳೋ ಸಂಘದ ಸುಳ್ಳು ಇತಿಹಾಸದ ಪಾಠಗಳಿಂದ ಮೆದುಳು ಕೊಳೆತ ಯಾರೋ ಅವಿವೇಕಿಗಳು ಟಿಪ್ಪು ಬೆಳವಡಿ ಮಲ್ಲಮ್ಮನನ್ನು ಅತ್ಯಾಚಾರ ಮಾಡಿದ್ದನೆಂದು ಸುಳ್ಳು ಸುದ್ದಿ ಹರಿಯಬಿಟ್ಟು ಅಪಪ್ರಚಾರ ಮಾಡುತ್ತಿರುವ ಪೋಷ್ಟ್ ಗಳು ಕೆಲವನ್ನ ಇತ್ತೀಚೆಗೆ ಗಮನಿಸುತ್ತಿದ್ದೇನೆ.
ಶಿಕ್ಷಣವಿಲ್ಲದೇ ಹೋದರೆ ನಮ್ಮ ಯುವ ಸಮುದಾಯ ಏನಾಗಬಹುದು ಎಂದು ಕಲ್ಪಿಸಿಕೊಂಡರೆ ಗಾಬರಿಯಾಗುತ್ತದೆ. ಕಿತ್ತೂರು ಚನ್ನಮ್ಮನ ಕುರಿತು ಸಂಸಂದ ಪ್ರತಾಪಸಿಂಹ ಎಷ್ಟು ನಿಕೃಷ್ಟವಾದ ಹೇಳಿಕೆ ಕೊಟ್ಟಿದ್ದನೆಂಬುದನ್ನು ಮರೆಯುವ, ಕೇಳಿದರೂ ಕೇಳದಂತಿರುವ ನಮ್ಮ ಯುವಕರು ಓದುವುದಿಲ್ಲ ಹುಡುಕಾಡುವುದಿಲ್ಲ. ಸುಳ್ಳಿನ ಚಟ್ನಿ ಹಚ್ಚಿಕೊಟ್ಟ ಸುಳ್ಳಿನ ಬುತ್ತಿ ಉಂಡು ಹಾಳುಬೀಳುತ್ತಿದ್ದಾರೆ.
ಟಿಪ್ಪುವಿನ ಬಗೆಗೆ ಇಂಥಾ ಸುಳ್ಳುಗಳಿಗೇನೂ ಕೊರತೆಯಿಲ್ಲ. ಉತ್ತರಭಾರತದ ವಿಶ್ವವಿದ್ಯಾನಿಲಯವೊಂದರ ಪಠ್ಯದಲ್ಲಿ ಟಿಪ್ಪೂ ಕುರಿತ ಅಧ್ಯಾಯದಲ್ಲಿ ಆತ ಸುಮಾರು ಎರಡುವರೆ ಸಾವಿರ ಬ್ರಾಹ್ಮಣ ಪುರೋಹಿತರನ್ನು ಹತ್ಯೆ ಮಾಡಿದನೆಂದು ಉಲ್ಲೇಖಿಸಲಾಗಿದ್ದಿತಂತೆ.
ಹಿರಿಯ ಇತಿಹಾಸ ವಿಧ್ವಾಂಸರಾದ ಬಿಶ್ವಂಬರನಾಥ್ ಪಂಡಿತ ಎನ್ನುವವರು ಅಚ್ಚರಿಗೊಂಡು ಇದರ ಸತ್ಯಾಸತ್ಯತೆಯನ್ನು ತಿಳಿಯಲು ಬೆನ್ನುಹತ್ತಲಾಗಿ ಸದರಿ ಪಠ್ಯವನ್ನು ನಿಯೋಜಿಸಿದ್ದ ಬ್ರಾಹ್ಮಣ ವಿದ್ವಾಂಸರಿಗೆ ವಿಚಾರಿಸಿದರೆ ಅವರು ಅನೇಕ ದಾಖಲೆಗಳ ಸುಳ್ಳು ಮಾಹಿತಿ ಕೊಡುತ್ತಾರೆ ಕಡೆಗೆ ಮೈಸೂರಿನ ಗ್ಯಾಜೆಟಿಯರ್ ನಲ್ಲಿ ತಾನು ಓದಿದ್ದುದಾಗಿ ಹೇಳುತ್ತಾರೆ.
ಆದರೆ ಬಿಶ್ವಂಬರನಾಥರು ಆಗಲೂ ಬಿಡದೆ ವಿಶ್ವವಿದ್ಯಾನಿಲಯದ ಗ್ಯಾಜಟಿಯರ್ ಸಂಪಾದಕರಿಗೆ ಪತ್ರ ಬರೆಯಲಾಗಿ ಆ ಯಾವುದೇ ದಾಖಲೆಗಳು ಮೈಸೂರು ಗ್ಯಾಜಟಿಯರ್ ಸಂಪಾದನೆಯ ವೇಳೆ ದೊರೆತಿಲ್ಲವೆಂದು ಮಾಹಿತಿ ಪಡೆದು ಹಾಗೂ ಬೇರಾವುದೇ ದಾಖಲೆಗಳಲ್ಲಾಗಲೀ ಮಾಹಿತಿ ಸಿಗಲಿಲ್ಲವಾಗಿ ಆ ಸುಳ್ಳು ಬಿತ್ತಿದ ಪಠ್ಯವನ್ನು ಕಿತ್ತುಹಾಕಿಸುತ್ತಾರೆ. ಇಂತವೇ ಸುಳ್ಳುಗಳು ಕೊಡಗಿನಲ್ಲಿ ನೆಡೆಯಿತೆನ್ನಲಾದ ಮಾರಣಹೋಮಕ್ಕೆ ಸಂಬಂಧಿಸಿದವು.
ನಿಜವಾಗಲೂ ಸಂಘಪರಿವಾರದ ಹಿನ್ನೆಲೆಯ ಕೆಲವು ಪೂರ್ವಾಗ್ರಹಪೀಡಿತ ನಕಲಿ ಇತಿಹಾಸಕಾರರು ಕೊಡುವ ಲೆಕ್ಕ ಅಚ್ಚರಿ ಹುಟ್ಟಿಸುತ್ತದೆ. ಟಿಪ್ಪು ತೀರಿಕೊಂಡ ಸುಮಾರು ತೊಂಬತ್ತು ವರ್ಷಗಳ ಬಳಿಕ ನೆಡೆಸಿದ ಸೆನ್ಸಸ್ ನಲ್ಲಿ ಕರ್ನಾಟಕದ ಮೈಸೂರಿನ ಜನಸಂಖ್ಯೆ ಸುಮಾರು ಮೂವತ್ತಾರು ಲಕ್ಷ. ಕೊಡಗಿನಲ್ಲಿ ಹಾಗಾದರೆ ಟಿಪ್ಪು ಬದುಕಿದ್ದ ಕಾಲಕ್ಕೆ ಒಂದಿಪ್ಪತ್ತು ಲಕ್ಷ ಜನಸಂಖ್ಯೆ ಅವನ ರಾಜ್ಯದಲ್ಲಿದ್ದಿರಬಹುದು.
ಕೊಡಗು ಒಂದರಲ್ಲೇ ಅದೂ ದಟ್ಟ ಕಾಡು ಕಣಿವೆ ಬೆಟ್ಟಗಳೇ ತುಂಬಿರುವ ಕೊಡಗಿನಲ್ಲಿಯೇ ಐದು ಲಕ್ಷ ಜನ ಇರಲು ಸಾಧ್ಯವೇ? ಇನ್ನು ಲಕ್ಷಾಂತರ ಜನರನ್ನು ಕೊಂದರೆಂಬುದು ಎಂಥಹಾ ಹಸಿಸುಳ್ಳು ಅಲ್ಲವೇ? ಜನತೆ ಯೋಚಿಸಬೇಕು. ಯುವಕರು ಓದಬೇಕು ಚರಿತ್ರೆಯನ್ನು ನಿಮ್ಮ ವಿವೇಕಕ್ಕೆ ಕಪ್ಪು ಬಟ್ಟೆ ಕಟ್ಟಿ ಒಪ್ಪಿಸಲಾಗುತ್ತಿದೆ ಅದನ್ನು ಕಿತ್ತೆಸೆದು ನಿಮ್ಮದೇ ಒಳನೋಟದಿಂದ ಓದಿ ಸತ್ಯಾಸತ್ಯತೆಯನ್ನು ಕಂಡುಕೊಳ್ಳಬೇಕು.
ಟಿಪ್ಪುವನ್ನು ಅಥವಾ ಮುಸ್ಲಿಮರನ್ನು ಈ ಬಗೆಯ ಸುಳ್ಳುಗಳ ಮೂಲಕ ಕ್ರೂರಿಗಳನ್ನಾಗಿ ಚಿತ್ರಿಸಿ ಆ ಇಡೀ ಸಮುದಾಯದ ವಿರುದ್ಧ ದಲಿತ ಮತ್ತು ಶೂದ್ರರೆಂಬ ಹುಂಬರನ್ನು ಎತ್ತಿಕಟ್ಟಿ ತಾವು ಅಧಿಕಾರದ ಗದ್ದುಗೆ ಏರುವ ಕುತಂತ್ರವನ್ನು ಈ ದೇಶದ ಪುರೋಹಿತಶಾಹಿ ಯಾವ ಮಾನವೀಯ ಅಂತಃಕ್ಕರಣವನ್ನೂ ಇಟ್ಟುಕೊಳ್ಳದೆ ನಿರಂತರವಾಗಿ ಪ್ರಯೋಗಿಸುತ್ತಲೇ ಬಂದಿದೆ.
ಟಿಪ್ಪು ಮುಸ್ಲಿಮನಾಗಿ ಹುಟ್ಟಿದ್ದೇ ತಪ್ಪಾಗಿದೆ. ಆತ ಹಿಂದೂವಾಗಿದ್ದರೆ ಯಾವ ಶಿವಾಜಿಗೂ ಸಿಗದ ಮಹತ್ವ ಪ್ರಚಾರ ಬಹುಪರಾಕು ಉತ್ಸವ ಮೆರೆದಾಟಗಳು ಟಿಪ್ಪುವಿಗೂ ಸಲ್ಲುತ್ತಿದ್ದವು. ಅವನ ಹೆಸರಲ್ಲಿ ಎಷ್ಟು ಜನ ಮುಖ್ಯಮಂತ್ರಿಗಳು ಶಾಸಕರು ಎಂಪಿಗಳು ಹುಟ್ಟುತ್ತಿದ್ದರೋ ಗೊತ್ತಿಲ್ಲ. ಬೆಳವಡಿ ಮಲ್ಲಮ್ಮನನ್ನು ಟಿಪ್ಪು ಅತ್ಯಾಚಾರ ಮಾಡಿದ್ದ ಎಂಬುದು ಎಷ್ಟು ಸುಳ್ಳೋ ಅಷ್ಟೇ ಚಾರಿತ್ರಿಕ ಅಪಚಾರವೂ ಹೌದು.
ತಮ್ಮ ಸುಳ್ಳುಗಳ ಮೂಲಕ ಸತ್ಯವನ್ನು ತೆರೆದಿಡಲು ನಮ್ಮಂತವರಿಗೆ ಅವಕಾಶ ಮಾಡಿಕೊಡುತ್ತಿರುವ ಕೋಮುವಾದಿಗಳಿಗೆ ಅನಂತ ಧನ್ಯವಾದಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ
ಗಾಳಿಪಟ ವೇಗದ ರಾಜಕುಮಾರ ‘ಬೀರ್ ಚಿಲಾರಾಯ್’..!

- ಡಾ. ಗಿರೀಶ್ ಮೂಗ್ತಿಹಳ್ಳಿ, ಸಂಶೋಧಕರು, ಚಿಕ್ಕಮಗಳೂರು
ಫೆಬ್ರವರಿ- 27-2021 ರಂದು ಮಾನ್ಯ ಪ್ರಧಾನ ಮಂತ್ರಿ ಅವರು, “ಬೀರ್ ಚಿಲಾರಾಯ್ ಅವರು ಅಪ್ರತಿಮ ಶೌರ್ಯ ಮತ್ತು ದೇಶಭಕ್ತಿಗೆ ಸಮಾನಾರ್ಥಕವಾಗಿದ್ದರು. ಅವರು ಮಹೋನ್ನತ ಯೋಧರಾಗಿದ್ದರು. ಜನರಿಗಾಗಿ ಜೀವನಪೂರ್ತಿ ಹೋರಾಟ ನಡೆಸಿದ್ದ ಅವರು, ತಾವು ನಂಬಿದ್ದ ತತ್ವಗಳನ್ನು ಕೊನೆಯ ತನಕ ಪಾಲಿಸಿಕೊಂಡು ಬಂದಿದ್ದರು.
ಅವರ ಕೆಚ್ಚೆದೆಯ ಧೈರ್ಯವು ಮುಂಬರುವ ಪೀಳಿಗೆಗೆ ಸದಾ ಪ್ರೇರಣೆಯಾಗಿ ಮುಂದುವರಿಯಲಿದೆ. ಬೀರ್ ಚಿಲಾರಾಯ್ ಜಯಂತಿಯಂದು ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದೇನೆ.” ಎಂದು ಟ್ವೀಟ್ ಮಾಡಿದ್ದರು. ಯಾರು ಈ ಬೀರ್ ಚಿಲಾರೈ? ಎಂದು ಹುಡುಕಿದಾಗ ಅವನ ಬಗೆಗೆ ದಕ್ಕಿರುವ ವಿಚಾರವಿದು.
The great Bir Chilarai is synonymous with valour and patriotism. He was an outstanding warrior, who fought for people and the principles he held sacred. His bravery will continue to motivate the coming generations. Remembering him on his Jayanti.
— Narendra Modi (@narendramodi) February 27, 2021
ಅಸ್ಸಾಂ ನ ಕೋಚ್ ರಾಜವಂಶದ ಸ್ಥಾಪಕ ಆಡಳಿತಗಾರನಾಗಿದ್ದ ಮಹಾರಾಜ ವಿಶ್ವ ಸಿಂಘನ ಮೂರನೇ ಮಗ, ಕಮಟಾ ಸಾಮ್ರಾಜ್ಯದ ರಾಜ ನಾರ ನಾರಾಯಣ ನ ಕಿರಿಯ ಸಹೋದರನೇ ಶುಕ್ಲಧ್ವಾಜ. ಹುಣ್ಣಿಮೆಯ ದಿನದಂದು ಜನಿಸಿದ ಶುಕ್ಲಧ್ವಾಜನು ಉನ್ನತ ಶಿಕ್ಷಣ ಸಾಧಿಸಲು ಹಿರಿಯ ಸಹೋದರ ಮಲ್ಲಾದೇವನ ಜತೆ ವಾರಣಾಸಿಗೆ ಹೋದನು. ಸಂಗೀತ, ಸಾಹಿತ್ಯ, ವ್ಯಾಕರಣ, ಕಾನೂನು, ಜ್ಯೋತಿಷಿ ಮುಂತಾದ ವಿಷಯಗಳಲ್ಲಿ ಪರಿಣತಿ ಹೊಂದಿದನು.
ಅನಂತರ ನಾರ ನಾರಾಯಣನ ಸಾಮ್ರಾಜ್ಯವನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದನು. ಇವನ ಸೈನ್ಯದಲ್ಲಿ ಕಮಾಂಡರ್ -ಇನ್- ಚೀಫ್ ಆಗಿ ಕಾರ್ಯಭಾರ ನಿರ್ವಹಿಸಿದನು. ಜನರಲ್ ಆಗಿ ಇವನ ಚಲನೆಯು ಚಿಲಾ( ಗಾಳಿಪಟ)ದಷ್ಟು ವೇಗವಾಗಿದ್ದರಿಂದ ಇವನಿಗೆ ‘ಚಿಲರೈ’ ಎಂಬ ಹೆಸರು ಬಂತು.
ಚಿಲಾರೈ ನ ಶೌರ್ಯವು ಭೂಟಿಯಾ, ಕಾಚಾರಿ ಸಾಮ್ರಾಜ್ಯ ಮತ್ತು ಅಹೋಮ್ಸ್ ( ಕೋಚೆನ್ ಮತ್ತು ಅಹೋಮ್ಸ್ ನಡುವೆ ಹಲವಾರು ಕದನಗಳಲ್ಲಿ ಹೋರಾಡಿದರೂ ಎರಡೂ ಕಡೆಯಿಂದ ಎಣಿಸಬಹುದಾದ ವಿಜಯಗಳೊಂದಿಗೆ) ಕೋಚ್ ಪ್ರಾಬಲ್ಯವನ್ನು ಖಚಿತಪಡಿಸಿತು.1563ರಲ್ಲಿ ಚಿಲಾರೈ ನೇತೃತ್ವದಲ್ಲಿ ಕೋಚೆನ್ ಬ್ರಹ್ಮಪುತ್ರ ನದಿಯನ್ನು ದಾಟಿ ಗಾರ್ಗಾಂವ್ ನ ಅಹೋಮ್ ಸಾಮ್ರಾಜ್ಯದ ಮೇಲೆ ದಾಳಿ ಮಾಡಿ ತನ್ನ ಸೈನಿಕರಿಗೆ ಭೂಮಿಯಲ್ಲಿ ಮತ್ತು ನೀರಿನಲ್ಲಿ ಹೋರಾಡಲು ಆಜ್ಞಾಪಿಸಿ ದನು. ಸೋತ ರಾಜನ ನಡುವೆ ಒಪ್ಪಂದವಾಯಿತು.
ನಾರ ನಾರಾಯಣನು ಕ್ಯಾಚರ್ ರಾಜನನ್ನು ಸೋಲಿಸಿ ತನ್ನ ಆಳ್ವಿಕೆಯನ್ನು ತಂದನು. ಇಂಥ ಪ್ರಬಲ ರಾಜನೊಂದಿಗೆ ಹೋರಾಡದಿರಲು ನಿರ್ಧರಿಸಿದ ಮಣಿಪುರದ ರಾಜನು ಇವನಿಗೆ ಶರಣಾದನು. ನಂತರ ಚಿಲಾರೈ ಜಯಂತಿಯಾ, ತ್ರಿಪುರ ಮತ್ತು ಸಿಲ್ಹೆಟ್ ರಾಜ್ಯಗಳ ಮೇಲೆ ದಾಳಿ ಮಾಡಿದನು.ರಾಜರನ್ನು ಸೋಲಿಸಿ ಕೊಂದನು. ಇದರಿಂದ ಭಯಭೀತರಾದ ಖೈರಾಮ್ ಮತ್ತು ದಿಮೋರಿಯಾ ದೊರೆಗಳು ತಮ್ಮ ಸಣ್ಣ ರಾಜ್ಯಗಳನ್ನು ಒಪ್ಪಿಸಿದರು. ಚಿಲಾರೈನ ಇಂಥ ಶೌರ್ಯದ ಸಹಾಯದಿಂದ ರಾಜ ನಾರ ನಾರಾಯಣನ ಸಾಮ್ರಾಕ್ಯ ವಿಸ್ತಾರವಾಯಿತು.
೧೫೬೮ರಲ್ಲಿ ಸೊಲೆಮನ್ ಆಳ್ವಿಕೆ ನಡೆಸಿದ ಗೌರ್ ಮೇಲೆ ನಾರ ನಾರಾಯಣ ದಾಳಿ ಮಾಡಿದನು. ಆದರೆ ಕಾಲಾಪಹಾರ್ ಎದುರು ಸೋಲನ್ನು ಅನುಭವಿಸಿದರು. ಕಾಲಾಪಹಾರ್ ತನ್ನ ಸೈನ್ಯದೊಂದಿಗೆ ತಮಜ್ ಪುರದತ್ತ ಸಾಗುತ್ತಿರುವಾಗ ಕಾಮಾಕ್ಯ ಸೇರಿದಂತೆ ಅನೇಕ ದೇವಾಲಯಗಳನ್ನು ನಾಶಪಡಿಸಿದನು.
ಕೋಚ್ ಸಾಮ್ರಾಜ್ಯದ ಬಹುಪಾಲು ಭಾಗವನ್ನು ಅಫ್ಘನ್ನರು ವಶಪಡಿಸಿಕೊಂಡರು. ಆದಾಗ್ಯೂ ಚಿಲಾರೈ ಮತ್ತು ನಾರ ನಾರಾಯಣ ಇಬ್ಬರೂ ಸೇರಿ ಕಾಮಾಕ್ಯ ದೇವಾಲಯವನ್ನು ಪುನರ್ನಿರ್ಮಾಣ ಮಾಡಿದರು. ಶಂಕಾರ್ದೇವನ ಮಹಾವೈಷ್ಣವ ಚಳವಳಿಗೆ ಪ್ರೋತ್ಸಾಹ ನೀಡಿದರು.
ಮೊಘಲ್ ಚಕ್ರವರ್ತಿ ಅಕ್ಬರ್ ನು ಇವರ ಬಳಿ ಸಹಾಯ ಕೋರಿದಾಗ ನಾರ ನಾರಾಯಣನು ಎರಡನೇ ಬಾರಿಗೆ ಗೌರ್ ಮೇಲೆ ದಾಲಿ ಮಾಡಿದನು. ಅನಂತರ ಸಿಸ್ಯಾ ಸಂಘಾ ರಾಯ್ಕತ್ ಮತ್ತು ಭೂತಾನ್ ರಾಜ ಡೆಬ್ರಾಜ್ ಅವರೊಂದಿಗೆ ಮೈತ್ರಿ ಮಾಡಿಕೊಂಡರು. ಚಿಲಾರೈ ಘೋರ್ ಘಾಟ್ ಅನ್ನು ವಶವಡಿಸಿಕೊಂಡನು.
ರಾಜ ಗೌರ ಪಾಷನನ್ನು ಸೋಲಿಸಿದ ನಂತರ ರಾಜ್ಯವನ್ನು ನಾರ ನಾರಾಯಣ ಮತ್ತು ಅಕ್ಬರ್ ನಡುವೆ ಹಂಚಲಾಯಿತು. ಗೌರ್ ನ ಎರಡನೇ ಆಕ್ರಮಣದ ಸಮಯದಲ್ಲಿ ಗಡ್ಡೆ ನೋವಿನಿಂದ ಬಳಲುತ್ತಿದ್ದ ಚಿಲಾರೈ ಗಂಗಾನದಿ ದಡದಲ್ಲಿ ಅಸು ನೀಗಿದನು(1577). ಚಿಲಾರೈ ನ ಇಂಥ ಧೈರ್ಯಶಾಲಿ ಕಾರ್ಯಗಳೇ ಕೋಚ್ ಸಾಮ್ರಾಜ್ಯವನ್ನು ಉತ್ತುಂಗಕ್ಕೆ ಏರಿಸಿತ್ತು.
ಅಸ್ಸಾಂ ಸರ್ಕಾರವು ಮಹಾನ್ ಕಮಾಂಡರ್-ಇನ್- ಚೀಫ್ ಆದ ಚಿಲಾರೈ ಜನ್ಮದಿನವನ್ನು 2004ರಲ್ಲಿ ‘ಬಿರ್ ಚಿಲಾರಾಯ್ ದಿವಸ್’ ಎಂದು ಘೋಷಿಸಿತು. ಇದರ ಅಂಗವಾಗಿ ಅಸ್ಸಾಂನ ಧೈರ್ಯಶಾಲಿ ವ್ಯಕ್ತಿಗಳಿಗೆ ಅತ್ಯುನ್ನತ ಗೌರವವಾಗಿ ‘ಬಿರ್ ಚಿಲಾರೈ ಪ್ರಶಸ್ತಿ’ ಯನ್ನು ನೀಡುತ್ತಿರುವುದು ಗಮನಾರ್ಹ ಸಂಗತಿ.
Warm greetings to the people of Assam on Bir Chilarai Divas, the birth anniversary of Shukladhwaja. This valiant scion of the Koch dynasty was famously known as Bir Chilarai, for commanding troop movements that were as fast as a chila (kite). pic.twitter.com/eFIEWMk8pR
— Congress (@INCIndia) February 9, 2020
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ
ಪ್ರತಿರೋಧದ ದನಿಗಳು ಸರ್ವಾಧಿಕಾರಕ್ಕೆ ಸದಾ ಅಪಥ್ಯವೇ

- ನಾ ದಿವಾಕರ
ಒಂದು ಸ್ವಸ್ಥ ಸಮಾಜ ತನ್ನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು, ಮುಂದಿನ ಪೀಳಿಗೆಗೆ ಆರೋಗ್ಯಕರ ನೆಲೆಗಳನ್ನು ಬಿಟ್ಟುಹೋಗಲು ಬಯಸುವುದು ಸಹಜ. ಮಾನವ ಸಮಾಜದ ಅಭ್ಯುದಯದ ಹಾದಿಯಲ್ಲಿ ಈ ಸ್ವಾಸ್ಥ್ಯ ಸಂರಕ್ಷಣೆಯ ಪ್ರಯತ್ನಗಳು ನಡೆಯುತ್ತಾ ಬಂದಿರುವುದರಿಂದಲೇ ಮನುಕುಲ ಇಂದಿಗೂ ಸಹ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡುಬಂದಿದೆ. ಒಬ್ಬ ಹಿಟ್ಲರಿಗೆ ನೂರಾರು ಗಾಂಧಿ ಮಂಡೇಲಾಗಳು ಹುಟ್ಟಿಕೊಳ್ಳುತ್ತಾ ಬಂದಿದ್ದಾರೆ. ಒಬ್ಬ ಮುಸೋಲಿನಿಗೆ ನೂರಾರು ಅಂಬೇಡ್ಕರುಗಳು ಉದಯಿಸುತ್ತಾ ಬಂದಿದ್ದಾರೆ.
ಮತಾಂಧನೊಬ್ಬನಿಂದ ಹತ್ಯೆಗೀಡಾದರೂ ಗಾಂಧಿ ಬೌದ್ಧಿಕವಾಗಿ ನಮ್ಮ ನಡುವೆ ಇದ್ದಾರೆ. ಭಾರತದ ಮೇಲ್ಜಾತಿ ಮನಸುಗಳಿಂದ ಬಹಿಷ್ಕೃತರಾಗಿದ್ದರೂ ಪೆರಿಯಾರ್, ಅಂಬೇಡ್ಕರ್ ಇಂದು ಭಾರತೀಯ ಸಮಾಜದ ಅಂತಃಸತ್ವದ ಬುನಾದಿಯಾಗುತ್ತಾರೆ. ಸಾಂಸ್ಕೃತಿಕ ರಾಜಕಾರಣದ ರಾಯಭಾರಿಗಳ ಗುಂಡೇಟಿಗೆ ಬಲಿಯಾದರೂ ಧಬೋಲ್ಕರ್, ಪನ್ಸಾರೆ, ಗೌರಿ, ಕಲಬುರ್ಗಿ ನಮ್ಮ ನಡುವೆ ಚಿಂತನೆಗಳ ರೂಪದಲ್ಲಿ ಜೀವಂತಿಕೆಯಿಂದಿದ್ದಾರೆ.
ಸಮಾಜದಲ್ಲಿ ಅಂತರ್ಗತವಾಗಿರುವ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಿ ಬೆಳೆಸಲು ಈ ಚಿಂತಕರ ಚಿಂತನೆಗಳು, ಬೋಧನೆಗಳು ಸುಭದ್ರ ಬುನಾದಿಯನ್ನು ನಿರ್ಮಿಸುತ್ತವೆ. ಶತಮಾನಗಳ ಹಿಂದೆ ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿದ್ದ ಅಸಮಾನತೆ, ಅಸಹಿಷ್ಣುತೆ ಮತ್ತು ಜಾತಿ ಶ್ರೇಷ್ಠತೆಯ ಚಿಂತನೆಗಳಿಗೆ ಪ್ರತಿರೋಧದ ರೂಪದಲ್ಲೇ ಭಾರತದಲ್ಲಿ ಜೈನ, ಬೌದ್ಧ, ಸಿಖ್ ಧರ್ಮಗಳು ಉದಯಿಸಿದ್ದವು.
ಸಾಂಪ್ರದಾಯಿಕ ಸಮಾಜದ, ವೈದಿಕ ಪರಂಪರೆಯ ಡಂಭಾಚಾರ, ಶೋಷಣೆ, ಕಂದಾಚಾರಗಳ ವಿರುದ್ಧ ಭಕ್ತಿ ಪಂಥ, ಸೂಫಿ ಪರಂಪರೆಗಳು ಹುಟ್ಟಿಕೊಂಡಿದ್ದವು. ಈ ಪ್ರತಿರೋಧದ ದನಿಗಳು ಇಂದಿಗೂ ನಮ್ಮ ನಡುವೆ ಜೀವಂತವಾಗಿದ್ದರೆ ಅದರ ಹಿಂದೆ ಅನೇಕ ಸಮಕಾಲೀನ ಚಿಂತಕರ, ಸಾಹಿತಿಗಳ ಮತ್ತು ಸಮಾಜ ಸುಧಾರಕರ ಪರಿಶ್ರಮ ಇದೆ.
ಬುದ್ಧನಿಂದ ಗಾಂಧಿ ಅಂಬೇಡ್ಕರ್ ವರೆಗೆ ಈ ಚಿಂತನಾ ವಾಹಿನಿಗಳು ಭಾರತೀಯ ಸಮಾಜಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ಒದಗಿಸಿವೆ. ಸಾವಿರಾರು ಭಾಷೆಗಳು, ನೂರಾರು ಸಂಸ್ಕೃತಿಗಳು ಭಾರತೀಯ ಸಮಾಜದ ವೈವಿಧ್ಯತೆಯನ್ನು, ಬಹುಸಂಸ್ಕೃತಿಯ ನೆಲೆಗಳನ್ನು ಕಾಪಾಡಿಕೊಂಡು ಬಂದಿದ್ದರೆ ಅದಕ್ಕೆ ಕಾರಣ ಈ ಮಹಾನ್ ಚಿಂತಕರು ಬಿಟ್ಟುಹೋಗಿರುವ, ಕೊಟ್ಟುಹೋಗಿರುವ ಟೂಲ್ಕಿಿಟ್ಗದಳು.
ಭಾರತದ ಫ್ಯಾಸಿಸ್ಟ್ ಆಡಳಿತ ವ್ಯವಸ್ಥೆಯ ದೃಷ್ಟಿಯಲ್ಲಿ, ವಂದಿಮಾಗಧ ಸುದ್ದಿಮನೆಗಳ ದೃಷ್ಟಿಯಲ್ಲಿ ರಾಜದ್ರೋಹದ ಅಸ್ತ್ರದಂತೆ ಕಾಣುವ ಒಂದು ಸಾಧಾರಣ ಟೂಲ್ಕಿ ಟ್ ದಿಶಾ ರವಿ ಎಂಬ 21 ವರ್ಷದ ಪರಿಸರವಾದಿಯನ್ನು ದೇಶದ್ರೋಹಿಯನ್ನಾಗಿ ಮಾಡುತ್ತದೆ. ಆದರೆ ಇಂತಹ ನೂರಾರು ಟೂಲ್ಕಿಷಟ್ಗರಳೇ ಭಾರತದಲ್ಲಿ ಪ್ರಜಾತಂತ್ರ ಮೌಲ್ಯಗಳನ್ನು ಸಂರಕ್ಷಿಸಿಕೊಂಡುಬಂದಿದೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತ ಮುಷ್ಕರವನ್ನು ಬೆಂಬಲಿಸುವ ಒಂದು ಟೂಲ್ಕಿ ಟ್ 136 ಕೋಟಿ ಜನತೆಯನ್ನು ಪ್ರತಿನಿಧಿಸುವ ಒಂದು ಚುನಾಯಿತ ಸರ್ಕಾರವನ್ನು ವಿಚಲಿತಗೊಳಿಸುತ್ತದೆ ಎಂದರೆ ನಮ್ಮನ್ನು ಆಳುವ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ದೆಹಲಿಯ ಪೊಲೀಸರು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿದ್ದ ಒಬ್ಬ ಹೋರಾಟಗಾರ್ತಿಯನ್ನು ರಾತ್ರೋರಾತ್ರಿ ಬಂಧಿಸುತ್ತಾರೆ, ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಯಾವುದೇ ಸುಳಿವು ನೀಡದೆ ಆಕೆಯನ್ನು ದೆಹಲಿಗೆ ಕರೆದೊಯ್ಯುತ್ತಾರೆ. ಒಂದು ಒಕ್ಕೂಟ ವ್ಯವಸ್ಥೆಯಲ್ಲಿ, ಗಣತಂತ್ರದ ಚೌಕಟ್ಟಿನಲ್ಲಿ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಮ್ಮನ್ನು ಕಾಡದೆ ಹೋದರೆ ನಾವು ಪ್ರಜ್ಞಾಶೂನ್ಯರಾಗಿದ್ದೇವೆ ಎಂದೇ ಭಾವಿಸಬೇಕಾಗುತ್ತದೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಮುಷ್ಕರ ಮೂರು ತಿಂಗಳು ಪೂರೈಸಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಷ್ಟು ದೀರ್ಘಕಾಲಿಕ ಮುಷ್ಕರ ಈವರೆಗೂ ಕಂಡಿರಲಿಲ್ಲ. ಹಾಗೆಯೇ ಮುಷ್ಕರನಿರತರಲ್ಲಿನ ಈ ಪ್ರಮಾಣದ ಬದ್ಧತೆ ಮತ್ತು ಆತ್ಮಸ್ಥೈರ್ಯವನ್ನೂ ಭಾರತ ಕಂಡಿರಲಿಲ್ಲ. ಮತ್ತೊಂದು ಮಜಲಿನಲ್ಲಿ ನೋಡಿದಾಗ ಭಾರತದ ಗಣತಂತ್ರ ವ್ಯವಸ್ಥೆಯಲ್ಲಿ ಈ ರೀತಿಯ ನಿಷ್ಕ್ರಿಯ, ನಿರ್ದಯಿ ಮತ್ತು ನಿರ್ಲಕ್ಷ್ಯ ಸರ್ಕಾರವನ್ನೂ ಈವರೆಗೂ ನಾವು ಕಂಡಿರಲಿಲ್ಲ. ಇವೆಲ್ಲದರ ನಡುವೆ ಕೇಂದ್ರ ಸರ್ಕಾರ ರೈತ ಮುಷ್ಕರದ ನೈತಿಕ ಉದ್ದೇಶವನ್ನೇ ಪ್ರಶ್ನಿಸುತ್ತಿದ್ದು ಸರ್ಕಾರ ಜಾರಿಗೊಳಿಸಿರುವ ಅಸಾಂವಿಧಾನಿಕ ಕರಾಳ ಮರಣ ಶಾಸನಗಳನ್ನು ವಿರೋಧಿಸುವುದನ್ನೇ ರಾಜದ್ರೋಹ ಎಂದು ಪರಿಗಣಿಸುತ್ತಿದೆ. ಮುಷ್ಕರವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಅನುಸರಿಸಿದ ಕ್ರೂರ, ಅಸಾಂವಿಧಾನಿಕ ಕುಟಿಲೋಪಾಯಗಳು ವಿಫಲವಾದ ನಂತರ ಈಗ ಈ ಮುಷ್ಕರವನ್ನು ಬೆಂಬಲಿಸುವ ದನಿಗಳನ್ನೇ ಶಾಶ್ವತವಾಗಿ ಅಡಗಿಸುವ ಪ್ರಯತ್ನಗಳು ನಡೆಯುತ್ತಿವೆ. ದಿಶಾರವಿ ಇಂತಹ ಕುತಂತ್ರಕ್ಕೆ ಬಲಿಯಾದ ಪರಿಸರ ಹೋರಾಟಗಾರ್ತಿ.
ಕೆನಡಾದಲ್ಲಿ 2020ರ ಮಾರ್ಚ್ ತಿಂಗಳಲ್ಲಿ ಸ್ಥಾಪಿಸಲಾದ ಪೋಯೆಟಿಕ್ ಜಸ್ಟಿಸ್ ಫೌಂಡೇಷನ್ ಮೂಲತಃ ಜಗತ್ತಿನಾದ್ಯಂತ ನಡೆಯುವ ಜನಾಂದೋಲನಗಳನ್ನು, ಪರಿಸರ ಹೋರಾಟಗಳನ್ನು ಮತ್ತು ಹಕ್ಕೊತ್ತಾಯಗಳ ಹೋರಾಟಗಳನ್ನು ಬೆಂಬಲಿಸುವ ಒಂದು ಸಂಸ್ಥೆ. ದೆಹಲಿ ಪೊಲೀಸರು ಆರೋಪಿಸಿರುವಂತೆ ಇದು ಖಲಿಸ್ತಾನಿ ಬೆಂಬಲಿಗ ಸಂಘಟನೆ ಎಂದು ನಿರೂಪಿಸಲು ಯಾವುದೇ ಪುರಾವೆಗಳಿಲ್ಲ. ಸಾಮಾಜಿಕ ಮಾಧ್ಯಮಗಳು ಹೆಚ್ಚು ಪ್ರಚಲಿತವಾದ ನಂತರ ಇಂತಹ ಜಾಗತಿಕ ವೇದಿಕೆಗಳು ವಿಶ್ವದಾದ್ಯಂತ ನಡೆಯುವ ಜನಾಂದೋಲನಗಳಿಗೆ ಪ್ರೋತ್ಸಾಹ, ಬೆಂಬಲ ವ್ಯಕ್ತಪಡಿಸಲು ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುತ್ತವೆ. ಈ ಸೂತ್ರಗಳ ಮೂಲಕ ಹೋರಾಟಗಳನ್ನು ಹೇಗೆ ಮುನ್ನಡೆಸಬೇಕು, ಜನರನ್ನು ಹೇಗೆ ಕ್ರೋಢೀಕರಿಸಬೇಕು ಎಂದು ಸೂಚಿಸಲಾಗುತ್ತದೆ. ಇದನ್ನು ಟೂಲ್ಕಿೆಟ್ ಎಂದು ಕರೆಯಲಾಗುತ್ತದೆ. ಅಂದರೆ ಹೋರಾಟದ ಅಸ್ತ್ರಗಳನ್ನೊಳಗೊಂಡ ಒಂದು ಆಕರ. ಇಲ್ಲಿ ಮೌಖಿಕ, ಲಿಖಿತ, ಸಾಂಕೇತಿಕ ಸೂಚನೆಗಳಿರುತ್ತವೆಯೇ ಹೊರತು ಶಸ್ತ್ರಾಸ್ತ್ರಗಳ ಸುಳಿವೂ ಇರುವುದಿಲ್ಲ.
ಭಾರತದಲ್ಲಿ ನಡೆಯುತ್ತಿರುವ ರೈತ ಮುಷ್ಕರದ ಬಗ್ಗೆಯೂ ಸಹ ಇಂತಹುದೇ ಟೂಲ್ಕಿೇಟ್ ಒಂದನ್ನು ಸಿದ್ಧಪಡಿಸಲಾಗಿದ್ದು ಇದರಲ್ಲಿ ಮುಷ್ಕರ ನಿರತ ರೈತರು ಅನುಸರಿಸಬೇಕಾದ ಅಹಿಂಸಾತ್ಮಕ ಕಾರ್ಯ ಚಟುವಟಿಕೆಗಳನ್ನು ಸೂಚಿಸಲಾಗಿದೆ. ಟ್ವೀಟ್ಗ ಳ ಮೂಲಕ ಪ್ರತಿಭಟಿಸುವುದು, ಅರ್ಜಿಗಳನ್ನು ಸಲ್ಲಿಸುವುದು, ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಧರಣಿ ನಡೆಸುವುದು ಹೀಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ಭಾರತದ ಎಂಬೆಸಿ ಕಚೇರಿಯ ಮುಂದೆ ಧರಣಿ ನಡೆಸಲು ಸೂಚಿಸುವುದು , ಸಂಸತ್ತಿನ ಮುಂದೆ ಪ್ರತಿಭಟನೆ ನಡೆಸಲು ಸೂಚಿಸುವುದು ಸಂವಿಧಾನವಿರೋಧಿಯೂ ಆಗುವುದಿಲ್ಲ, ದೇಶದ್ರೋಹವೂ ಆಗುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾರ್ವಭೌಮ ಪ್ರಜೆಗಳಿಗೆ ಈ ಹಕ್ಕು ಇರುತ್ತದೆ ಎನ್ನುವುದನ್ನು ನಾವು ಗಮನಿಸಬೇಕು.
ಜನವರಿ 26ರಂದು ರೈತರ ಟ್ರಾಕ್ಟರ್ ಪರೇಡ್ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಟೂಲ್ಕಿಟಟ್ ಮತ್ತು ಇತರ ಸಂಘಟಕರನ್ನು ಅನುಮಾನಾಸ್ಪದವಾಗಿ ನೋಡುತ್ತಿದೆ. ಆದರೆ ಕೆಂಪುಕೋಟೆಯಲ್ಲಿ ನಡೆದ ಘಟನೆ ಯಾವುದೇ ಒಂದು ಬೃಹತ್ ಜನಾಂದೋಲನದ ಸಂದರ್ಭದಲ್ಲಿ ಸಹಜವಾಗಿ ನಡೆಯುವಂತಹುದೇ ಆಗಿದ್ದು, ಭಾರತದ ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ ಎನ್ನುವ ಆರೋಪಗಳೂ ಸಹ ಹುಸಿ ಎಂದು ಸಾಬೀತಾಗಿದೆ.
ರೈತ ಮುಷ್ಕರವನ್ನು ಸಾರ್ವಜನಿಕರ ದೃಷ್ಟಿಯಲ್ಲಿ ತಪ್ಪಾಗಿ ತೋರಿಸುವ ಒಂದು ಹುನ್ನಾರವನ್ನೂ ಈ ಘಟನೆಗಳಲ್ಲಿ ಕಾಣಬಹುದಾಗಿದೆ. ಆದರೆ ಈ ಘಟನೆಗಳನ್ನು ನೆಪವಾಗಿಟ್ಟುಕೊಂಡೇ ಕೇಂದ್ರ ಸರ್ಕಾರ ರೈತ ಮುಷ್ಕರದ ಪರ ವಹಿಸುವ ಪ್ರಜಾಸತ್ತಾತ್ಮಕ ದನಿಗಳನ್ನು ಅಡಗಿಸಲು ಪ್ರಯತ್ನಿಸುತ್ತಿದೆ. ದಿಶಾ ರವಿ ಪ್ರಕರಣದಲ್ಲಿ ಇದರ ಉದ್ದೇಶ ಸ್ಪಷ್ಟವಾಗಿ ಕಾಣುತ್ತದೆ.
ಫ್ರೈಡೇಸ್ ಫಾರ್ ಫ್ಯೂಚರ್ ಪ್ರಚಾರಾಂದೋಲನ ಎನ್ನುವ ಒಂದು ಟೂಲ್ಕಿುಟ್ ಸಂಪಾದಿಸುವಲ್ಲಿ ದಿಶಾರವಿ ಪಾತ್ರವಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ. ಈ ಟೂಲ್ಕಿಲಟ್ ಸಿದ್ಧಪಡಿಸಿದ ಖ್ಯಾತ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬಪರ್ಗ್ ಜಾಗತಿಕ ಮಟ್ಟದಲ್ಲೇ ಭಾರತದ ರೈತರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇವರು ಸಿದ್ಧಪಡಿಸಿರುವ ಟೂಲ್ಕಿರಟ್ ಸಾರ್ವಜನಿಕ ಓದಿಗೂ ಲಭ್ಯವಿದ್ದು, ಅದರಲ್ಲಿ ಹೋರಾಟದ ರೂಪುರೇಷೆಗಳನ್ನು ಹೊರತುಪಡಿಸಿ ಮತ್ತಾವುದೇ ಸಂವಿಧಾನವಿರೋಧಿ ಸಂದೇಶಗಳಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಈ ಟೂಲ್ಕಿಾಟ್ನಿಲ್ಲಿನ ಕೆಲವು ಅಂಶಗಳನ್ನು ತಾನು ಸಂಪಾದಿಸಿರುವುದಾಗಿ ದಿಶಾರವಿ ಒಪ್ಪಿಕೊಂಡಿದ್ದಾರೆ ಆದರೆ ಈ ಚಟುವಟಿಕೆಯನ್ನೇ ಆಧರಿಸಿ ಆಕೆಯನ್ನು ರಾಜದ್ರೋಹದ ಕಾಯ್ದೆಯಡಿ ಬಂಧಿಸುವುದು ಸಂವಿಧಾನ ವಿರೋಧಿ ಕ್ರಮವಾಗಿದೆ. ಒಂದು ವೇಳೆ ಇಡೀ ಟೂಲ್ ಕಿಟ್ ದಿಶಾ ರವಿ ಅವರಿಂದಲೇ ರಚಿಸಲ್ಪಟ್ಟಿದ್ದರೂ ಅಪರಾಧವೇನೂ ಆಗುವುದಿಲ್ಲ.
ಟೂಲ್ ಕಿಟ್ ನಲ್ಲಿ ಏನಿದೆ ?
ಭಾರತದಲ್ಲಿ ನಡೆಯುತ್ತಿರುವ ರೈತ ಮುಷ್ಕರಕ್ಕೆ ಬೆಂಬಲ ಸೂಚಿಸಲು ಗ್ರೇಟಾ ಥನ್ಬದರ್ಗ್ ಸಿದ್ಧಪಡಿಸಿರುವ ಟೂಲ್ಕಿಬಟ್ನಲಲ್ಲಿ ಭಾರತ ಸರ್ಕಾರದ ಹೊಸ ಕೃಷಿ ಮಸೂದೆಗಳನ್ನು ರೈತ ವಿರೋಧಿ ಎಂದು ಗುರುತಿಸಲಾಗಿದ್ದು, ಈ ಕಾಯ್ದೆಗಳು ನವ ಉದಾರವಾದಿ ಆರ್ಥಿಕ ನೀತಿಗಳ ಪರಿಣಾಮವಾಗಿ ಮೂಡಿಬಂದಿರುವುದನ್ನು ಸ್ಪಷ್ಟಪಡಿಸಲಾಗಿದೆ. ರೈತರನ್ನು ಸಂಪರ್ಕಿಸದೆ, ಸಂಸತ್ತಿನಲ್ಲಿ ಚರ್ಚೆ ನಡೆಸದೆ ಈ ಕಾಯ್ದೆಗಳನ್ನು ಜಾರಿಗೊಳಿಸಿರುವುದನ್ನೂ ಟೂಲ್ಕಿಪಟ್ನನಲ್ಲಿ ಉಲ್ಲೇಖಿಸಲಾಗಿದೆ.
ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ವಹಿಸುವುದರಿಂದ ಪರಿಸರ ವಿನಾಶಕ್ಕೂ ದಾರಿಮಾಡಿಕೊಟ್ಟಂತಾಗುತ್ತದೆ ಎನ್ನುವ ಅಂಶವನ್ನೂ ಉಲ್ಲೇಖಿಸಲಾಗಿದೆ. ಈ ನಿಟ್ಟಿನಲ್ಲಿ ರೈತ ಮುಷ್ಕರಕ್ಕೆ ಭಾರತದ ಜನತೆ ಮತ್ತು ವಿಶ್ವದ ಇತರ ರಾಷ್ಟ್ರಗಳ ಜನತೆ ಹೇಗೆ ಪ್ರತಿಕ್ರಯಿಸಬೇಕು ಎನ್ನುವುದನ್ನು ಟೂಲ್ಕಿ್ಟ್ನಷಲ್ಲಿ ವಿವರಿಸಲಾಗಿದೆ. ರೈತರಿಗೆ ಬೆಂಬಲಿಸಿ ಟ್ವೀಟ್ ಮಾಡುವುದು, ಹ್ಯಾಷ್ಟ್ಯಾ ಗ್ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಬಲ ವ್ಯಕ್ತಪಡಿಸುವುದು, ಸರ್ಕಾರದ ಪ್ರತಿನಿಧಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಇ ಮೇಲ್ ಕಳಿಸುವುದು, ಫೆಬ್ರವರಿ 13-14ರಂದು ಭಾರತೀಯ ರಾಯಭಾರ ಕಚೇರಿಯ ಮುಂದೆ, ಸ್ಥಳೀಯ ಸರ್ಕಾರಿ ಕಚೇರಿಗಳ ಮುಂದೆ ಧರಣಿ ನಡೆಸುವುದು, ಸತತ ಟ್ವೀಟ್ ಮಾಡುವುದು, ಮುಖ್ಯ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಹೀಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ಇದರ ಪೂರ್ಣ ವಿವರಗಳು ಇಲ್ಲಿ ಲಭ್ಯವಿದೆ :Farming and its Crisis
ಈ ಟೂಲ್ ಕಿಟ್ ಆಧಾರದಲ್ಲೇ ದಿಶಾ ರವಿ ಅವರನ್ನು ಬಂಧಿಸಲಾಗಿದ್ದು ಇದೀಗ ದೆಹಲಿಯ ಪಟಿಯಾಲಾ ನ್ಯಾಯಾಲಯದಲ್ಲಿ ಆಕೆಗೆ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ಧರ್ಮೇಂದ್ರ ರಾಣಾ ಅವರು ವ್ಯಕ್ತಪಡಿಸಿರುವ ಕೆಲವು ಅಭಿಪ್ರಾಯಗಳು ಇಂದಿನ ಸಂದರ್ಭದಲ್ಲಿ ಬಹಳ ಮುಖ್ಯವಾಗುತ್ತದೆ. ಎಲ್ಗಾರ್ ಪರಿಷತ್ ಮತ್ತು ಭೀಮಾ ಕೊರೆಗಾಂವ್ ಘಟನೆಯ ಹಿನ್ನೆಲೆಯಲ್ಲಿ ಹಲವಾರು ವಕೀಲರನ್ನು, ಬರಹಗಾರರನ್ನು, ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಇವರ ವಿರುದ್ಧ ಯುಎಪಿಎ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ. ರಾಜದ್ರೋಹ ಕಾಯ್ದೆ ಸೆಕ್ಷನ್ 124ಎ ಮತ್ತು ಯುಎಪಿಎ, ಈ ಎರಡು ಕರಾಳ ಶಾಸನಗಳು ಪ್ರತಿರೋಧದ ದನಿಗಳನ್ನು ಅಡಗಿಸುವ ಅಸ್ತ್ರಗಳಾಗಿ ಪರಿಣಮಿಸಿರುವುದು ಭಾರತೀಯ ಪ್ರಜಾತಂತ್ರದ ದುರಂತ.
ದಿಶಾ ರವಿಯವರ ಬಂಧನದ ಹಿಂದೆ ದೇಶದ ಯುವ ಸಮುದಾಯದ ಜಾಗೃತ ಪ್ರಜ್ಞೆಯನ್ನು ಕುಡಿಯಲ್ಲೇ ಚಿವುಟುವ ಹುನ್ನಾರವನ್ನೂ ಗುರುತಿಸಬಹುದಾಗಿದೆ. ಇಂದು ದೇಶ ಎದುರಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳಿಗೆ ಮೋದಿ ಸರ್ಕಾರದ ಆಡಳಿತ ನೀತಿಗಳೇ ಕಾರಣ ಎನ್ನುವುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ, ಉತ್ಪಾದನೆಯ ಕೊರತೆ, ಅಭಿವೃದ್ಧಿ ಸೂಚ್ಯಂಕದಲ್ಲಿ ಕುಸಿತ, ಉದ್ಯೋಗ ಸೃಷ್ಟಿಯಲ್ಲಿನ ವೈಫಲ್ಯ, ತೈಲ ಮತ್ತು ಅವಶ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು ಮತ್ತು ಹಣಕಾಸು ಬಿಕ್ಕಟ್ಟು ಜನಸಾಮಾನ್ಯರನ್ನು ಬಾಧಿಸುತ್ತಿದೆ.
ಈ ಗಂಭೀರ ಸಮಸ್ಯೆಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಯಥಾಸ್ಥಿತಿಯಲ್ಲಿದ್ದರೆ ಅದಕ್ಕೆ ಕಾರಣ ಯುವ ಸಮುದಾಯವನ್ನು ಆವರಿಸಿರುವ ಸಮೂಹ ಸನ್ನಿ ಮತ್ತು ಮಧ್ಯಮ, ಮೇಲ್ ಮಧ್ಯಮ ವರ್ಗವನ್ನು ಆವರಿಸಿರುವ ಅಂಧ ಶ್ರದ್ಧೆ.
ಈ ಸಮೂಹ ಸನ್ನಿಗೊಳಗಾಗಿರುವ ಯುವಸಮುದಾಯದ ಒಂದು ವರ್ಗ ಇತ್ತೀಚಿನ ದಿನಗಳಲ್ಲಿ ಜಾಗೃತವಾಗುತ್ತಿದೆ. ರೈತ ಮುಷ್ಕರದ ಹಿನ್ನೆಲೆಯಲ್ಲಿ ಉತ್ತರದ ಹಲವು ರಾಜ್ಯಗಳಲ್ಲಿ ಜನಾಭಿಪ್ರಾಯ ಬದಲಾಗುತ್ತಿದೆ. ಭ್ರಮನಿರಸನಗೊಂಡ ಯುವ ಸಮುದಾಯ ಭಿನ್ನ ನೆಲೆಯಲ್ಲಿ ಯೋಚಿಸಲಾರಂಭಿಸಿದೆ. ಈ ಜಾಗೃತ ಮನಸುಗಳನ್ನು ಪುನಃ ಪರಿವರ್ತಿಸುವುದು ಇಂದಿನ ದುಸ್ಥಿತಿಯಲ್ಲಿ ಕಷ್ಟ ಎನ್ನುವುದೂ ಮೋದಿ ಸರ್ಕಾರಕ್ಕೆ ತಿಳಿದಿದೆ.
ಹಾಗಾಗಿ ಯುವ ಮನಸುಗಳಲ್ಲಿ ಭೀತಿ ಉಂಟುಮಾಡುವ ಉದ್ದೇಶದಿಂದಲೇ 21 ವರ್ಷದ ಪರಿಸರ ಹೋರಾಟಗಾರ್ತಿ ದಿಶಾರವಿ ವಿರುದ್ಧ ರಾಜದ್ರೋಹದಂತಹ ಗಂಭೀರ ಆರೋಪ ಹೊರಿಸಿ ಬಂಧಿಸಲಾಗುತ್ತದೆ. ಇದು ಜನಸಾಮಾನ್ಯರಲ್ಲಿ ಭೀತಿ ಸೃಷ್ಟಿಸಿ ಜಾಗೃತಿಗೆ ಧಕ್ಕೆ ಉಂಟುಮಾಡುವ ತಂತ್ರಗಾರಿಕೆ ಎನ್ನುವುದು ಸುಸ್ಪಷ್ಟ.
ಸ್ವತಂತ್ರ ಆಲೋಚನೆಗೆ ಅವಕಾಶವೇ ನೀಡದೆ ಅಧಿಪತ್ಯ ರಾಜಕಾರಣವನ್ನು ಬಲಪಡಿಸುವ ನಿಟ್ಟಿನಲ್ಲಿ ಮೋದಿ-ಶಾ ಜೋಡಿ ಹಲವು ವ್ಯೂಹಗಳನ್ನು ರಚಿಸುತ್ತಿದ್ದು, ದಿಶಾರವಿಯ ಪ್ರಕರಣವೂ ಇಂತಹುದೇ ಪ್ರಯತ್ನವಾಗಿದೆ. ಮಾಧ್ಯಮಗಳು ವಂದಿಮಾಗಧ ಸಂಸ್ಕೃತಿಯ ಶಿಖರ ತಲುಪಿರುವ ಹೊತ್ತಿನಲ್ಲಿ ಸರ್ಕಾರದ ತಪ್ಪುಒಪ್ಪುಗಳನ್ನು ಪರಾಮರ್ಶಿಸುವ ಅವಕಾಶವೇ ಇಲ್ಲವಾಗಿದ್ದು, ಈ ಸಂದರ್ಭದಲ್ಲಿ ವಿದ್ಯಾರ್ಥಿ ಯುವ ಸಮುದಾಯದ ಸ್ವತಂತ್ರ ಆಲೋಚನೆ ಪ್ರಜಾತಂತ್ರ ಮೌಲ್ಯಗಳ ರಕ್ಷಣೆಗೆ ಅತ್ಯವಶ್ಯವಾಗಿರುತ್ತದೆ.
ಈ ಬೆಳವಣಿಗೆಗೆ ಅವಕಾಶ ನೀಡದಿರಲು ಸರ್ಕಾರ ಕರಾಳ ಶಾಸನಗಳ ಮೊರೆ ಹೋಗುತ್ತಿದೆ. ಭಾರತದ ಬಹುತ್ವ ಸಂಸ್ಕೃತಿಯನ್ನು ಮತ್ತು ಬಹುಮುಖೀ ಸಾಂಸ್ಕೃತಿಕ ನೆಲೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡು ಮುಂದಿನ ಪೀಳಿಗೆಗೆ ರವಾನಿಸುವ ಗುರುತರ ಹೊಣೆ ಹೊತ್ತಿರುವ ಯುವ ಸಮುದಾಯದ ಮೇಲೆ ಕರಾಳ ಶಾಸನಗಳ ಪ್ರಹಾರದ ಮೂಲಕ ಒತ್ತಡ ಹೇರುವ ತಂತ್ರವನ್ನು ನಾವಿಂದು ನೋಡುತ್ತಿದ್ದೇವೆ.
ಈ ಹಿನ್ನೆಲೆಯಲ್ಲಿ ದಿಶಾರವಿ ಜಾಮೀನು ತೀರ್ಪಿನಲ್ಲಿ ಪಟಿಯಾಲಾ ನ್ಯಾಯಾಲಯದ ನ್ಯಾಯಮೂರ್ತಿ ಧರ್ಮೇಂದ್ರರಾಣಾ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಸಾರ್ವಕಾಲಿಕ ಮಾನ್ಯತೆ ಪಡೆಯುತ್ತವೆ. ಇದೇ ನ್ಯಾಯಮೂರ್ತಿಗಳು ಈ ಹಿಂದೆ ಜೆಎನ್ಯುಕ ವಿದ್ಯಾರ್ಥಿನಿ ಸಫೂರ ಜರ್ಗರ್ ಪ್ರಕರಣದಲ್ಲಿ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ದಿಶಾರವಿ ಪ್ರಕರಣದ ತೀರ್ಪು ಇಂದಿನ ಸಂದರ್ಭದಲ್ಲಿ ಸ್ವಾಗತಾರ್ಹ ಎನಿಸುತ್ತದೆ.
ನ್ಯಾ ಧರ್ಮೇಂದ್ರ ರಾಣಾ ತಮ್ಮ ತೀರ್ಪಿನಲ್ಲಿ ಹೀಗೆ ಹೇಳಿದ್ದಾರೆ:-“ ಒಬ್ಬ ವ್ಯಕ್ತಿಯು ಕೆಲವು ಸಂಶಯಾಸ್ಪದ ವ್ಯಕ್ತಿಗಳ ಜೊತೆಗೆ ಸಂಪರ್ಕದಲ್ಲಿದ್ದ ಮಾತ್ರಕ್ಕೆ ಆ ವ್ಯಕ್ತಿಯ ಎಲ್ಲ ಚಟುವಟಿಕೆಗಳನ್ನೂ ಸಂಶಯಾಸ್ಪದವಾಗಿ ನೋಡುವ ಅಗತ್ಯವಿಲ್ಲ , ಕಾನೂನಿನ ಚೌಕಟ್ಟಿನೊಳಗೆ ನಡೆಸುವ ಚಟುವಟಿಕೆಗಳನ್ನು ಆಧರಿಸಿ ಕಳಂಕ ಹೊರಿಸುವುದು ಸಮರ್ಥನೀಯವಲ್ಲ. ಸರ್ಕಾರ ಜಾರಿಗೊಳಿಸಿರುವ ಒಂದು ಶಾಸನವನ್ನು ವಿರೋಧಿಸುವ ವೇದಿಕೆ ಅಥವಾ ಸಂಘಟನೆಯನ್ನು ಬೆಂಬಲಿಸದ ಮಾತ್ರಕ್ಕೆ ಊಹಾಪೋಹಗಳನ್ನು ಆಧರಿಸಿ ಯಾರನ್ನೂ ಭಯೋತ್ಪಾದಕರಂತೆ ನೋಡುವುದು ತರವಲ್ಲ.
ಭಾರತದ ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮನ್ನಣೆ ನೀಡಿದ್ದು, ಇದಕ್ಕೆ ಯಾವುದೇ ಭೌಗೋಳಿಕ ಚೌಕಟ್ಟು, ಗಡಿರೇಖೆ ಇರುವುದಿಲ್ಲ, ಜಾಗತಿಕ ಅಭಿಪ್ರಾಯ ಮೂಡಿಸಲೂ ಸಹ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಬಳಸಬಹುದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ಕಾರದ ಕೆಲವು ಯೋಜನೆಗಳನ್ನು, ನೀತಿಗಳನ್ನು ವಿರೋಧಿಸುವುದೇ ರಾಜದ್ರೋಹ ಎನಿಸಿಕೊಳ್ಳುವುದಿಲ್ಲ, ಈ ಕಾರಣಕ್ಕಾಗಿ ಪ್ರಜೆಗಳನ್ನು ಜೈಲಿಗೆ ತಳ್ಳುವುದು, ಮತ್ತು ಘಾಸಿಗೊಂಡ ಸರ್ಕಾರದ ದುರಭಿಮಾನವನ್ನು ತಣಿಸಲು ರಾಜದ್ರೋಹ ಪ್ರಕರಣ ದಾಖಲಿಸುವುದು ನ್ಯಾಯಯುತವಲ್ಲ. ಭಾರತ ಸಾವಿರಾರು ವರ್ಷಗಳಿಂದ ಹಲವಾರು ಭಿನ್ನ ಚಿಂತನೆಗಳನ್ನು, ಅಭಿಪ್ರಾಯಗಳನ್ನು ಗೌರವಿಸುತ್ತಲೇ ಬಂದಿದೆ ಎಂದು ಹೇಳುತ್ತಾ ಋಗ್ವೇದದ ವಾಕ್ಯವೊಂದನ್ನು ಉದ್ಧರಿಸಿರುವ ನ್ಯಾಯಮೂರ್ತಿಗಳು, ವಾಟ್ಸಾಪ್ ಗುಂಪು ರಚಿಸುವುದು, ಟೂಲ್ ಕಿಟ್ ಸಿದ್ಧಪಡಿಸುವುದು ಶಿಕ್ಷಾರ್ಹ ಅಪರಾಧವಾಗುವುದಿಲ್ಲ ”
ರಾಜದ್ರೋಹ ಕಾಯ್ದೆಯನ್ನು ಸಂತೆಯ ಸರಕಿನಂತೆ ಬಳಸುತ್ತಿರುವ ಕೇಂದ್ರ ಸರ್ಕಾರ, ಆಡಳಿತ ನೀತಿಯ ವಿರುದ್ಧ ಮಾತನಾಡುವುದನ್ನೇ ಅಪರಾಧ ಎಂದು ಭಾವಿಸುತ್ತಿದೆ. ಸರ್ಕಾರದ ವಿರುದ್ಧ ಮಾತನಾಡುವುದನ್ನೇ ದೇಶದ್ರೋಹ ಎಂದು ಪರಿಗಣಿಸುತ್ತಿದೆ. 2010ರ ನಂತರ ದೇಶದಲ್ಲಿ 11 ಸಾವಿರ ಜನರ ವಿರುದ್ಧ 816 ರಾಜದ್ರೋಹ ಮೊಕದ್ದಮೆಗಳು ದಾಖಲಾಗಿವೆ. ಪತ್ರಕರ್ತರು, ವಿದ್ಯಾರ್ಥಿಗಳು, ವಿರೋಧಪಕ್ಷ ನಾಯಕರು, ಲೇಖಕರು, ಬೋಧಕರು, ಕಲಾವಿದರು ಈ ಕರಾಳ ಶಾಸನದಡಿ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ.
2010 ರಿಂದ 2014ರ ಯುಪಿಎ ಅವಧಿಯಲ್ಲಿ 279 ಪ್ರಕರಣಗಳು ದಾಖಲಾಗಿದ್ದರೆ, 2014ರ ನಂತರ 519 ರಾಜದ್ರೋಹ ಮೊಕದ್ದಮೆಗಳು ದಾಖಲಾಗಿವೆ. ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ 144 ಜನರು ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ 149 ಮಂದಿಯ ವಿರುದ್ಧ ರಾಜದ್ರೋಹ ಪ್ರಕರಣಗಳು ದಾಖಲಾಗಿವೆ.
ಈ ಹಿನ್ನೆಲೆಯಲ್ಲಿ ದಿಶಾ ರವಿ ಪ್ರಕರಣ ಪ್ರಭುತ್ವದ ದಮನಕಾರಿ ನೀತಿಯ ಒಂದು ಆಯಾಮವಾಗಿದ್ದರೆ, ಪಟಿಯಾಲ ನ್ಯಾಯಾಲಯದ ಮಹತ್ವದ ತೀರ್ಪು ನ್ಯಾಯ ವ್ಯವಸ್ಥೆಗೆ ಚುರುಕುಮುಟ್ಟಿಸುವಂತಿದೆ. ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದಂತೆಯೂ ಇದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳ ದನಿಯೇ ಅಂತಿಮ ಎನ್ನುವ ಸತ್ಯವನ್ನು ಸರ್ಕಾರಕ್ಕಿಂತಲೂ ಹೆಚ್ಚಾಗಿ ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕಿದೆ. ಆಗಲಾದರೂ ಭಾರತದ ಯುವ ಸಮುದಾಯ ಸಮೂಹ ಸನ್ನಿಯಿಂದ ಮುಕ್ತವಾಗಿ ಸ್ವತಂತ್ರವಾಗಿ ಆಲೋಚಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಸಿನಿ ಸುದ್ದಿ7 days ago
ರಾಬರ್ಟ್ ನ ಫಸ್ಟ್ ವಿಡಿಯೋ ಸಾಂಗ್ ರಿಲೀಸ್ : ಬೇಬಿ ಡಾನ್ಸ್ ವಿಡಿಯೋ ನೀವೂ ನೋಡಿ..!
-
ಭಾವ ಭೈರಾಗಿ7 days ago
ಕವಿತೆ | ಕಾಮಧೇನು
-
ದಿನದ ಸುದ್ದಿ6 days ago
‘ಅನುಗ್ರಹ’ ಯೋಜನೆ ರಾಜ್ಯದಲ್ಲಿ ಮರುಜಾರಿಗೊಳಿಸದಿದ್ದರೆ ವಿಧಾನಸಭೆಯಲ್ಲಿ ಹೋರಾಟ : ಸಿದ್ದರಾಮಯ್ಯ ಎಚ್ಚರಿಕೆ
-
ನಿತ್ಯ ಭವಿಷ್ಯ6 days ago
ಸೋಮವಾರ ರಾಶಿ ಭವಿಷ್ಯ : ಕರೆ ಮಾಡಿ ಕಷ್ಟಗಳನ್ನು ಪರಿಹರಿಸಿಕೊಳ್ಳಿ
-
ನಿತ್ಯ ಭವಿಷ್ಯ6 days ago
ಮೂಲಾ ನಕ್ಷತ್ರದಲ್ಲಿ ಜನಿಸಿದರೆ ಅದರ ಮಹತ್ವ ಹಾಗೂ ಅದರ ಮಾಹಿತಿ..!
-
ದಿನದ ಸುದ್ದಿ7 days ago
ಹಾವೇರಿ | ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ
-
ನಿತ್ಯ ಭವಿಷ್ಯ5 days ago
ಈ ಯೋಗ ಇದ್ದರೆ ಖಂಡಿತ ದೊಡ್ಡ ರಾಜಕಾರಣಿ, ಸಮಾಜ ಸೇವಕ, ಜಿಲ್ಲಾಧಿಕಾರಿ(IAS),IPS, ಸಾಹಿತಿಗಳು, ಗಾಯಕರು, ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆಗುವ ಸಂಭವ
-
ಬಹಿರಂಗ5 days ago
ಪ್ರತಿರೋಧದ ದನಿಗಳು ಸರ್ವಾಧಿಕಾರಕ್ಕೆ ಸದಾ ಅಪಥ್ಯವೇ