Connect with us

ನೆಲದನಿ

ನೆಲಮೂಲ ಬದುಕಿನ ತತ್ವಾನುಸಂಧಾನ: ನಾಗತಿಹಳ್ಳಿ ರಮೇಶ್ ಅವರ ‘ಜೀವಜೀವದ ಹಾಡು’

Published

on

ಸಾಹಿತ್ಯವು ನಿಂತ ನೀರಲ್ಲ, ಅದು ಸದಾ ಪ್ರವಹಿಸುವ ನದಿಯಿದ್ದಂತೆ. ಅದು ವಿವಿಧ ಪ್ರಕಾರದಲ್ಲಿ ತನ್ನ ಅಸ್ಮಿತೆಯನ್ನು ಪ್ರದರ್ಶಿಸುತ್ತ ಬಂದಿರುವುದು ಚಾರಿತ್ರಿಕ ಸತ್ಯ. ಇಂತಹ ಸಾಹಿತ್ಯವನ್ನು ಪ್ರಮುಖ ಕೇಂದ್ರವಾಗಿಟ್ಟುಕೊಂಡು ಹಲವರು ಕೃಷಿ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಬಹುಬೇಗ ಜನತೆಯ ಮನತಟ್ಟುವ, ಅತ್ಯಂತ ವೇಗವಾಗಿ ಮನ ಮಿಡಿಯುವ ಕಾವ್ಯ ಪ್ರಕಾರವನ್ನು ಮುಖ್ಯವಾಗಿಟ್ಟುಕೊಂಡು ಹಲವು ಕವಿ ಮನಸುಗಳು ಕಾವ್ಯ ಪ್ರಯೋಗ ಮಾಡಿವೆ. ಇದಕ್ಕೆ ಕನ್ನಡ ಕಾವ್ಯ ಶ್ರೀಮಂತಿಕೆಯು ಜ್ವಲಂತ ಸಾಕ್ಷಿಯಾಗಿ ಕಂಡುಬರುತ್ತದೆ.

ಇಂತಹ ಕಾವ್ಯದ ಮರೆಯಲ್ಲಿ ಸಮಕಾಲೀನ ಸಂದರ್ಭದ ತುಡಿತ ಮಿಡಿತ, ಸಹಬಾಳ್ವೆ ಸಹಕಾರ, ಶಾಂತಿ ಸಹನೆ, ಕರುಣೆ ಅಹಿಂಸೆಯಂತಹ ಜೀವಕಾರುಣ್ಯವನ್ನು ಸಾರುವ ಕವಿಗಳ ಸಾಲಿನಲ್ಲಿ ಗುರುತಿಸಿಕೊಂಡವರು ನಾಗತಿಹಳ್ಳಿ ರಮೇಶ್ ಅವರು ಒಬ್ಬರಾಗಿದ್ದಾರೆ. ಇವರ ಕಾವ್ಯ ಸೊಗಡು ಶ್ರಮಮೂಲ ಬದುಕಿನ ಜೀವಂತಿಕೆಯಿಂದ ಕೂಡಿದೆ. ಈ ಶ್ರಮಮೂಲ ಬದುಕಿನ ಸಂವೇದನೆಗಳನ್ನು ಸೆರೆಹಿಡಿಯುವ ಇವರ ಪ್ರಯತ್ನ ಕೇವಲ ನೋಡಿ ಕಲಿತದ್ದಲ್ಲ. ಸ್ವತಃ ಅನುಭವ ಕಥನವಾಗಿ ಭಾವಗಳನ್ನು ತೆರೆದುಕೊಳ್ಳುತ್ತದೆ. ಆ ಮೂಲಕ ಬದುಕಿನ ವಿವಿಧ ಸ್ತರಗಳನ್ನು ಇವರ ಕಾವ್ಯಗಳು ಬಿಚ್ಚಿಕೊಳ್ಳುತ್ತವೆ.

ಕಾವ್ಯ ಕೇವಲ ಅಕ್ಷರ ರೂಪದಲ್ಲಿದ್ದಾಗ ಸಾಹಿತ್ಯಾಸಕ್ತ ಓದುಗ ವರ್ಗ ಮಾತ್ರ ಅದನ್ನು ಸವಿಯಬಹುದು. ಇಂದಿನ ಯಾಂತ್ರಿಕ ಮತ್ತು ಜಾಗತಿಕ ಒತ್ತಡದ ಕಾರಣದಿಂದಾಗಿ ಓದುವವರ ಪ್ರಮಾಣವು ಕಡಿಮೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಆದರೆ ಕಾವ್ಯವನ್ನು ಆಸ್ವಾಧಿಸುವ ಮನಸುಗಳಿಗೆ ಬರವಂತು ಇಲ್ಲ. ಬಹುಮುಖಿ ಪ್ರತಿಭೆಯಾಗಿರುವ ನಾಗತಿಹಳ್ಳಿ ರಮೇಶ್ ಅವರು ಈ ವಾಸ್ತವವನ್ನು ಅರಿತು, ತಮ್ಮ ಕಾವ್ಯಕ್ಕೆ ಸಂಗೀತ ಮತ್ತು ರಾಗ ಸಂಯೋಜನೆಯೊಂದಿಗೆ ಹೊಸದೊಂದು ಸ್ವರೂಪವನ್ನು ನೀಡಿ ಸಮಾಜಕ್ಕೆ ಸಮರ್ಪಿಸಿದ್ದಾರೆ. ಇದುವೆ ‘ಜೀವಜೀವದ ಹಾಡು’. ಎಂಬ ಧ್ವನಿ ಹೊತ್ತಿಗೆ. ಈ ಜೀವಜೀವದ ಹಾಡಿನ ಅಡಿಯಲ್ಲಿ ವ್ಯಕ್ತವಾಗಿರುವ ಕವಿತೆಗಳು ಬರೀ ಪ್ರೇಮ ಕವಿತೆಗಳಲ್ಲ, ಸರಸ ಸಲ್ಲಾಪ, ಪ್ರಣಯ ಪ್ರಸಂಗಗಳನ್ನು ಸೆರೆಹಿಡಿದ ಪದಗುಚ್ಚವಲ್ಲ. ಈ ನಾಡಿನ ಶ್ರಮಿಕ ವರ್ಗವು ತನ್ನ ದಿನನಿತ್ಯದ ಜೀವನದಲ್ಲಿ ಅನುಭವಿಸುವ ಸಂಕಷ್ಟ, ನೋವು, ಯಾತನೆ, ಶೋಷಣೆ ದಬ್ಬಾಳಿಕೆಗಳಿಂದ ಆರಂಭವಾಗಿ, ಈ ಎಲ್ಲಾ ವೇದನೆಗಳಾಚೆಗಿನ ಸಂವೇದನೆಗಳನ್ನು ಚಿತ್ರಿಸುವ ಕಾವ್ಯಗುಚ್ಚ ಜೀವಜೀವದ ಹಾಡು. ಶ್ರಮಿಕ ಬದುಕು ಮತ್ತು ಪ್ರಾಕೃತಿಕ ತತ್ವಗಳನ್ನು ಅನುಸಂಧಾನಗೊಳಿಸುವ ಈ ಕಾವ್ಯಗುಚ್ಚವು ಬರುಡ ನೆಲೆದಲ್ಲಿ ಚಿಗುರಿದ ಗರಿಕೆಯಂತೆ ಹೊಸ ಬದುಕಿಗೆ ನಾಂದಿಯಾಡುತ್ತದೆ. ಇಲ್ಲಿ ಕಡುಕಷ್ಟದ ನಡುವೆಯೂ ತನ್ನ ಕನಸುಗಳನ್ನು ಜೀವಂತಗೊಳಿಸುವ ಮನುಷ್ಯನ ಬದುಕಿನ ಚಿತ್ರಣವನ್ನು ಸಾರುವ ಕವಿತೆಯೊಂದು ಹೀಗಿದೆ:

ಸುಡುವ ಭೂಮಿಯ ಮೇಲೆ

ಮೋಡ ಕಣ್ಣ ಹಾಯಿಸಿ

ಹೊಲಗದ್ದೆ ಬಯಲಲ್ಲಿ

ಜೀವ ಜೀವದ ಹಾಡು

ಎಂದು ಆರಂಭವಾಗುವ ಕವಿತೆಯು ಮಾನವನ ಬದುಕಿನ ವಿವಿಧ ಸ್ತರಗಳನ್ನು ಅನುಸಂಧಾನಗೊಳಿಸುತ್ತ, ಯಾಂತ್ರಿಕೃತ ವಲಯದಲ್ಲಿ ಮಾನವ ಸಂಬಂಧಗಳು ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಸ್ವರೂಪವನ್ನು ಅನಾವರಣಗೊಳಿಸುತ್ತಲೆ, ಹೊಸ ಕನಸೊಂದಕ್ಕೆ ಮುನ್ನುಡಿಯನ್ನು ಬರೆಯುವ ಕ್ರಮವೊಂದು ಹೀಗಿದೆ;

ಮನುಜ ಮನುಜರ ನಡುವೆ

ಕೊಳೆತಿರುವ ಪ್ರೀತಿ ಬೇರೂರಿ

ಚಿಗುರೊಡೆದು ಜೀವ ಜೀವದ ಹಾಡು

ಎಂಬಲ್ಲಿ ಹೊಸ ಬದುಕಿನ ಆಶಾ ಗೋಪುರದ ನಿರ್ಮಾಣದ ಕನವರಿಕೆ ಈ ಕವಿತೆಯಲ್ಲಿ ವೇದ್ಯವಾಗುತ್ತದೆ. ಇಲ್ಲಿನ ಬಹುತೇಕ ಕವಿತೆಗಳಲ್ಲಿ ತಳಸಮುದಾಯದ ಶ್ರಮಿಕರ ಬದುಕನ್ನು ಪ್ರಕೃತಿಯೊಂದಿಗೆ ಅನುಸಾಂಧಾನಗೊಳಿಸುವ ಕ್ರಮವು ವಿಶಿಷ್ಟಯಿಂದ ಕೂಡಿದೆ. ಆ ಮೂಲಕ ಜೀವಪರ ನಿಲುವುಗಳನ್ನು ಪ್ರತಿಪಾದಿಸುವುದು ಕಂಡುಬರುತ್ತದೆ. ಪ್ರಕೃತಿಯ ಮಡಿಲಿನಲ್ಲಿ ಶ್ರೇಷ್ಟ ಕನಿಷ್ಟವೆಂಬ ಪರಿಕಲ್ಪನೆಗಳು ಎದುರಾಗುವುದಿಲ್ಲ. ಇದು ಮಾನವ ನಿರ್ಮಿತ ತಂತ್ರ. ಈ ತಂತ್ರಗಾರಿಕೆಯನ್ನು ಪ್ರಾಕೃತಿಕ ತತ್ವದ ಅಡಿಯಲ್ಲಿ ಮೀರುವ ಪ್ರಯತ್ನವೊಂದು ಜೀವಜಲದಂತೆ ಕವಿತೆಯ ಮೂಲಕ ಪ್ರವಹಿಸುತ್ತದೆ.

ಯಾರು ಬಡವ ಯಾರು ದನಿಕ

ಹುಟ್ಟು ಸಾವಿನೆದುರಲಿ

ಗಾಳಿ ಬೆಳಕು ಯಾರ ಸ್ವತ್ತು

ಎಂದು ಪ್ರಶ್ನೆ ಮಾಡುವ ಕವಿ, ಪ್ರಕೃತಿಯ ಮಡಿಲಿನಲ್ಲಿ ಮಾನವ ಜಗತ್ತೆಲ್ಲ ಒಂದೆ ಎಂಬುದನ್ನು ಪ್ರತಿಪಾದಿಸಲು ಮುಂದಾಗಿದ್ದಾರೆ. ಗಾಳಿ ಅಲೆಯುವುದಕ್ಕಾಗಲಿ, ನೀರು ಹರಿಯುವುದಕ್ಕಾಗಿ ಹಾಗೆಯೇ ಬೆಂಕಿ ಉರಿಯುವುದಕ್ಕೆ ಯಾರ ಅಪ್ಪಣೆಯ ಅಗತ್ಯವಿಲ್ಲ ಎಂಬ ಸಾರ್ವತ್ರಿಕ ಸತ್ಯವನ್ನು ಪ್ರತಿಪಾದಿಸುವಾಗ ಒಬ್ಬ ಸಂತನಾಗಿ, ತತ್ವಪದಕಾರನಾಗಿ ಲೋಕ ನೀತಿಯನ್ನು ಎತ್ತಿಹಿಡಿಯುವ ಪ್ರಯತ್ನ ಮಾಡುತ್ತಾರೆ. ಹಾಗೆಯೇ ಪ್ರಕೃತಿ ಮತ್ತು ಮಾನವ ಸಂಬಂಧದ ಸರಪಳಿಯು ವಿವಿಧ ಆಯಾಮಗಳಲ್ಲಿ ಕಾವ್ಯ ಸ್ವರೂಪವನ್ನು ಪಡೆದುಕೊಂಡಿದೆ. “ಆ ಬೆಟ್ಟದ ಮೇಲೆ ಕಾಡೆಲ್ಲ ಬರಡು, ಹೊಂಗೆಯ ಹೂವರಳಿ ಕೆಳಗೆ ಚೆಲ್ಲಿದೆ ನೆರಳು” ಎಂದು ಆರಂಭವಾಗುವ ಕವಿತೆಯು ಬೆಟ್ಟ ಗುಡ್ಡ, ನದಿ ಕಣಿವೆಗಳಲ್ಲಿ ಜೀವತಳೆದ ಜೀವರಾಶಿಗಳ ಜೀವನ ಕ್ರಮವನ್ನು ದರ್ಶಿಸುತ್ತಲೆ, ಆ ಪರಿಸರದಲ್ಲಿನ ಪರಸ್ಪರಾವಲಂಭಿ ಆಹಾರ ಕ್ರಮದಲ್ಲಿ “ಹಾವು ಕಪ್ಪೆಯ ಹಿಡಿದು ನುಂಗಲು ಕಾಯುತಿದೆ, ಕಪ್ಪೆಯು ತಲೆಯ ಮೇಲಿನ ನೊಣಕೆ ಬೇಸರಿಸಿದೆ” ಎಂಬ ಪ್ರಾಕೃತಿಕ ತತ್ವವನ್ನು ಅನಾವರಣಗೊಳಿಸುತ್ತದೆ.

ಜೀವ ಭಾವಗಳ ಬೆಸೆಯುವ ಸೇತುವೆಯಂತೆ ಸಿದ್ಧಗೊಂಡ ನಾಗತಿಹಳ್ಳಿ ರಮೇಶ್ ಅವರ ಕಾವ್ಯಗಳು ಸದಾ ತುಡಿತ ಮಿಡಿತವನ್ನು ಹೊರ ಸೂಸುತ್ತವೆ. ಎರಡು ಜೀವಗಳ ಭಾವಸೆಲೆಗಳನ್ನು “ನಾನೊಂದು ಮರ ನೀನೊಂದು ಮರ, ಒಂದೆ ತಾವು ನಮಗೆ” ಎಂಬ ಕವಿತೆಯ ಮೂಲಕ ಬೆಸೆಯುವ ಪ್ರಯತ್ನ ಮಾಡಿದ್ದಾರೆ. ಬಿಸಿಲ ಬೇಗೆಗೆ ಧಣಿದ ಮನಗಳೆರಡು ಮಳೆ ಹನಿಯಿಂದ ತಂಪಾಗುವ ಕ್ರಿಯೆಗೆ ಪರಿತಪಿಸುವ ಬಗೆಯು ಜೀವ ಕಾರುಣ್ಯದಿಂದ ಕೂಡಿದೆ. “ಯಾಕೊ ಹನಿಯ ಸುಳಿವಿಲ್ಲ, ಮುಗಿಲೆಡೆಗೆ ನಮ ಧ್ಯಾನ” ಎಂಬ ಕಾತರದ ನುಡಿಗಳು ಹಸಿವು ಮತ್ತು ಹಂಬಲಿಕೆಯ ಪ್ರತಿರೂಪವಾಗಿ ಕಂಡುಬರುತ್ತವೆ. ಹೀಗೆ ಪರಿತಪಿಸುವ ಮನಗಳಿಗೆ ಯಾರೋ ಇಬ್ಬರು ಬಂದು ನೀರೆರೆಯುವ ಬಗೆಯನ್ನು ಜ್ಯಾತ್ಯಾತೀತ ನೆಲೆಯ ಮೂಲಕ ವ್ಯಕ್ತಪಡಿಸುತ್ತಾರೆ. ‘ಯಾರೋ’ ಎನ್ನುವ ರೂಪಕವೆ ಜಾತಿ, ಮತ, ಪಂಥಗಳನ್ನು ಮೀರಿದ ಜೀವ ಜಗತ್ತಾಗಿದೆ. ಮಣ್ಣು, ನೀರು ಮಿಲನವಾಗಿ ಪ್ರಕೃತಿಯು ಮರುಜೀವ ಪಡೆಯುವ ದೃಷ್ಟಿಕೋನ ಇಲ್ಲಿ ಜೀವಂತಿಕೆಯಿಂದ ಕೂಡಿದೆ. ಈ ಮಿಲನದ ಅಡಿಯಲ್ಲಿ ಜೀವ ಭಾವಗಳು ಅನುಸಂಧಾನಗೊಳ್ಳುವ ಕ್ರಮ ಹೀಗೆ ಮುಂದುವರೆಯುತ್ತದೆ;

ಮುತ್ತು ಮುತ್ತಿಗೂ ಅರಳಿದೆ ಮಡಿಲು

ಬೆವರು ಮಳೆಯಾಗಿ ಸೇರಿದೆ ಕಡಲು

ತುಟಿಯಲಿ ಬೆಸೆದ ಆ ಕನಸು

ಚಿಪ್ಪಲಿ ಮುತ್ತಾಯ್ತು, ಮುತ್ತೆಲ್ಲ ಒಲವಾಯ್ತು

ಹೀಗೆ ಹಸಿವಿನಿಂದ ಬರಡಾದ ಜೀವಗಳೆರಡನ್ನು ಸಾಮರಸ್ಯದ ನೆಲೆಯಲ್ಲಿ ಬೆಸೆಯುವ ಮತ್ತು ಪ್ರಕೃತಿಯೊಂದಿಗೆ ಅನುಸಂಧಾನಗೊಳಿಸುವ ವಿಶಿಷ್ಟ ಆಯಾಮವೊಂದು ಇಲ್ಲಿ ಜೀವ ಭಾವಗಳ ಬಂಧವಾಗಿ ಮುಂದುವರೆಯುತ್ತದೆ.

‘ಜೀವಜೀವದ ಹಾಡು’ ಎಂಬ ಈ ಕಾವ್ಯಗುಚ್ಚದ ಮೂಲಕವಾಗಿ ಸಿದ್ಧಗೊಂಡ ಗಾನ ಸುರುಳಿಯು ಶ್ರಮ ಮತ್ತು ಹಸಿವಿನ ಸಂಕಥನವನ್ನು ಅನಾವರಣಗೊಳಿಸುತ್ತ ಮುಂದೆ ಸಾಗುತ್ತದೆ. ನಾಗತಿಹಳ್ಳಿ ರಮೇಶ್ ಅವರು ತಮ್ಮ ಬಾಲ್ಯ ಜೀವನದಲ್ಲಿ ಅನುಭವಿಸಿದ ಹಸಿವಿನ ಕಥನವನ್ನು ಕಾವ್ಯವಾಗಿಸಿದ ಬಗೆ ಗಮನಾರ್ಹವಾಗಿದೆ. ಬದುಕಿನ ಮುಮ್ಮುಖ ಚಲನೆಯಲ್ಲಿ ಸಾಗಿದ ವ್ಯಕ್ತಿಯೊಬ್ಬ, ತನ್ನ ಹಿಂದಿನ ದಿನಗಳನ್ನು ಹಿಂತಿರುಗಿ ನೋಡಿದಾಗ ಉಂಟಾಗುವ ಸಂವೇದನೆಗಳ ಭಾವಲಹರಿಯು ಇದಾಗಿದೆ. ಇದು ಪ್ರತಿಯೊಬ್ಬ ವ್ಯಕ್ತಿಯನ್ನು ಅವರ ಬಾಲ್ಯದ ಸಂವೇದನೆಗಳೊಂದಿಗೆ ಮುಖಾಮುಖಿಯಾಗಿಸುತ್ತದೆ. “ಎಲ್ಲಿರುವನು ಅವನು” ಎಂದು ತನ್ನ ಬಾಲ್ಯದ ಸಂಕಷ್ಟವನ್ನು ಅನುಭವಿಸಿದ ತನ್ನೊಳಗಿನ ತನ್ನನ್ನು ಹುಡುಕಿಕೊಳ್ಳು ಮೂಲಕವಾಗಿ, ಮಡಿಕೆಯ ತಳದ ಇಟ್ಟಿನ ಸೀಕಿಗೆ ಕಿತ್ತಾಡಿದ ದಿನಗಳನ್ನು ನೆನಪಿಸಿಕೊಳ್ಳುವ ಬಗೆಯು ಓದುಗ ಮತ್ತು ಕೇಳುಗರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಬಟ್ಟೆಯನ್ನು ನೀರೊಳಗಾಡಿಸಿ ಬಾರದ ಮೀನಿಗಾಗಿ ಕಾದಿದ್ದು, ತನ್ನೊಡಲ ಹಸಿವನ್ನು ನೀಗಿಸಲು ಬೇರೆಯವರ ಹೊಲದಲ್ಲಿ ಕದ್ದು ತಂದು ಸುಟ್ಟು ತಿನ್ನುವ ಬಡತನದ ವಿಶಿಷ್ಟ ಅನುಭವಗಳು ಮತ್ತೇ ನನ್ನನ್ನು ಇಪ್ಪತೈದು ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತಿವೆ. ನಮ್ಮೂರಿನ ಕಾಲುವೆಯಲ್ಲಿ ಅವ್ವ ಬಟ್ಟೆ ತೊಳೆಯುವಾಗ, ನಾನು ಮತ್ತು ನನ್ನ ಅಕ್ಕಂದಿರು ಬಟ್ಟೆಯನ್ನು ನೀರಿನ ತಳದಲ್ಲಿ ಹಾಸಿ, ಮೀನಿಗೆ ಆಮೀಷ ತೋರಿಸುವ ನೆಪದಲ್ಲಿ ಬಟ್ಟೆಯ ಮೇಲೆ ಮಧ್ಯಾಹ್ನದ ಊಟಕ್ಕೆಂದು ತಂದ ಅನ್ನವನ್ನು ಹಾಕಿ, ಮಿಸುಕಾಡದಂತೆ ಮೀನಿನ ಬರುವಿಕೆಗಾಗಿ ಕಾದುಕುಳಿತಿದ್ದ ನೆನಪುಗಳೆಲ್ಲ ಮಾಸಿ ಹೋಗಿದ್ದವು. ನಾನು ಹುಟ್ಟುವ ವೇಳೆಗೆ ನನ್ನಪ್ಪ ಇಟ್ಟು ಬಟ್ಟೆ ಸರಿಸಮಾನವಾದ ಜೀವನವನ್ನು ರೂಪಿಸಿಕೊಂಡಿದ್ದರು. ಹಾಗಾಗಿ ನಾನು ಇಟ್ಟಿನ ಬರದಿಂದ ದೂರವಿದ್ದವನು. ಆದರೆ ನನ್ನಪ್ಪ ಅವ್ವ ಹಾಗೂ ನನ್ನ ಅಕ್ಕಂದಿರು ಮೆಲುಕು ಹಾಕುತ್ತಿದ್ದ ಹಸಿವಿನ ಕಥನವು ಮಾತ್ರ ಮನದ ಮೂಲೆಯಲ್ಲಿತ್ತು. ಅಂತಹ ಮಾಸಿದ ನೆನೆಪುಗಳ ಪುಟವನ್ನು ಮತ್ತೇ ತೆರೆಸಿದ ನಾಗತಿಹಳ್ಳಿ ರಮೇಶ್ ಅವರ ಕಾವ್ಯಶಕ್ತಿಗೆ ನಾನು ತಲೆಭಾಗಿ ನಮಿಸುತ್ತೇನೆ. ಅವರ ಕೊಡುಗೆ ಹೀಗೆ ಮುಂದುವರೆಯಲ್ಲಿ ಎಂದು ಮನತುಂಬಿ ಹಾರೈಸುತ್ತೇನೆ.

ನಾಗತಿಹಳ್ಳಿ ರಮೇಶ್ ಅವರು ಸದಾ ಕ್ರಿಯಾಶೀಲರಾಗಿ ಒಂದಿಲ್ಲೊಂದು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ದೇಶ ಸುತ್ತುವ ಮೂಲಕ ಸಂವೇದನೆಗಳನ್ನು ಸೆರೆಹಿಡಿಯುವ ಮೋಡಿಗಾರ. ಇವರದು ನನ್ನದು ಸಾಮಾಜಿಕ ಜಾಲತಾಣದ ಸಂಬಂಧ. ಮುಖಪುಟದಲ್ಲಿ ಗೆಳೆಯನಾಗಿ ಅವರ ಎಲ್ಲಾ ಜೀವಪರ ಕಾಳಜಿಯನ್ನು ಸೂಕ್ಷ್ಮವಾಗಿ ಅರಿತಿದ್ದೇನೆ. ಅವರ ಈ ಜೀವಪರ ಮತ್ತು ಜೀವ ಕಾರುಣ್ಯದ ತುಡಿತ ಹೀಗೆ ಸಾಗಲಿ. ‘ಜೀವಜೀವದ ಹಾಡು’ ಮಾಧುರ್ಯದಿಂದ ಹೊರಬರಲು ಕಾರಣೀಭೂತರಾದ ಸಂಗೀತ ನಿರ್ದೇಶಕರಾದ ಎಸ್.ಆರ್.ರಾಮಕೃಷ್ಣ ಹಾಗೂ ಎಲ್ಲಾ ಹಿನ್ನೆಲೆ ಗಾಯಕರ ಶ್ರಮವು ಮಹತ್ವದ್ದಾಗಿದೆ. ಎಸ್.ಆರ್.ರಾಮಕೃಷ್ಣ ಬಹುಮುಖಿ ಕಲಾವಿದರಾಗಿದ್ದು ಒಬ್ಬ ನಿಷ್ಠಾವಂತ ಪತ್ರಕರ್ತರು, ಚಿಂತಕರು, ಭಾಷಾಂತರಕಾರರಾಗಿಯೂ ಸೇವೆ ಸಲ್ಲಿಸಿದ್ದು, ಸದಾ ಜೀವಪರವಾಗಿ ತುಡಿಯುವ ಸ್ವಭಾವದವರಾಗಿದ್ದಾರೆ. ಇವರ ಒತ್ತಾಸೆಯ ಫಲವಾಗಿ ನಾಗತಿಹಳ್ಳಿ ರಮೇಶ್ ಅವರ ಕವಿತೆಗಳು ಸಂಗೀತ ಮಾಧುರ್ಯದೊಂದಿಗೆ ಮರುಹುಟ್ಟು ಪಡೆದುಕೊಂಡಿವೆ. ಹಾಗೆಯೇ ನಾಗತಿಹಳ್ಳಿ ರಮೇಶ್ ಅವರ ಧ್ವನಿ ಹೊತ್ತಿಗೆಯು ಸಿದ್ಧಗೊಳ್ಳಲು ಅವರ ಆಪ್ತ ವಲಯವು ಹೆಗಲೊಡ್ಡಿ ದುಡಿದಿದೆ. ಇಲ್ಲಿ ಬಹು ಮನುಸುಗಳ ಶ್ರಮವಿದೆ.  ಆ ಮನಸುಗಳು ಈ ಸಮಾಜಕ್ಕೊಂದು ಮಹತ್ತರವಾದ, ಜೀವಪರವಾದ ಸಂದೇಶವನ್ನು ನೀಡಬೇಕೆಂಬ ತುಡಿತವನ್ನು ವ್ಯಕ್ತಪಡಿಸಿವೆ. ಈ ಎಲ್ಲ ಜೀವಪರ ಮನಸುಗಳು ಜೇನುಗೂಡಿನಂತೆ ಕಾರ್ಯನಿರ್ವಹಿಸಿ ಕನ್ನಡ ಸಾಹಿತ್ಯ ಹಾಗೂ ಸಂಗೀತ ಲೋಕಕ್ಕೆ ಮತ್ತಷ್ಟು ಕೊಡುಗೆಗಳನ್ನು ನೀಡುವಂತಾಗಲಿ ಎಂದು ಭಾವನೆಗಳನ್ನು ಬಡಿದೆಬ್ಬಿಸುವ ಈ ಧ್ವನಿ ಹೊತ್ತಿಗೆಯನ್ನು ನೀಡಿದ ಎಲ್ಲರಿಗೂ ಕನ್ನಡ ಸಹೃದಯರ ಪರವಾಗಿ ನಮಿಸುತ್ತೇನೆ.

(ಲೇಖಕರು: ಡಾ.ಕೆ.ಎ. ಓಬಳೇಶ್, ಸಂಶೋಧಕರು. ಇಮೇಲ್: [email protected] ಮೊ:
9538345639/ 9591420216 )

ನೆಲದನಿ

ನಮ್ಮ ಶಿವಮೊಗ್ಗ – ನಮ್ಮ ಹೆಮ್ಮೆ : ಕೊಡಚಾದ್ರಿ

Published

on

ಕೊಡಚಾದ್ರಿ ಬೆಟ್ಟ

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಂಡು ಬರುವ ಗಿರಿ ಶಿಖರಗಳು ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ. ಇಂತಹ ರಮಣೀಯ ಸ್ಥಳಗಳಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೊಡಚಾದ್ರಿ ಬೆಟ್ಟವು ಕೂಡ ಒಂದು. ಕೊಡಚಾದ್ರಿ ಬೆಟ್ಟ ಚಾರಣ ಪ್ರಿಯರಿಗೆ ಬಹು ಪರಿಚಿತ ಸ್ಥಳ. ಇಲ್ಲಿ ಶಂಕರಾಚಾರ್ಯರು ತಪಸ್ಸು ಮಾಡಿದ ಬಗ್ಗೆ ಪ್ರತೀತಿ ಇದೆ.

ಇಲ್ಲಿರುವ ಸರ್ವಜ್ಞ ಪೀಠ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ ಪೀಠ ಎನ್ನಲಾಗುತ್ತದೆ. ಈ ಬೆಟ್ಟದಿಂದ ಸೂರ್ಯೋದಯ ನೋಡುವುದೇ ಒಂದು ಅದ್ಭುತ ದೃಶ್ಯ. ಇಲ್ಲಿನ ಚಿತ್ರ ಮೂಲವೆಂಬ ಬೆಟ್ಟ ಕೂಡ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇದು ಆಯುರ್ವೇದ ಗಿಡಮೂಲಿಕೆಗಳ ಆಗರ. ಇಲ್ಲಿ ಹಲವು ಗುಹೆಗಳಿವೆ. ಅಲ್ಲದೇ ಇಲ್ಲಿನ ರಾಮತೀರ್ಥ ಎಂಬ ಸ್ಥಳದಲ್ಲಿ ಹರಿಯುವ ನೀರಿನ ಮಧ್ಯೆ ಈಶ್ವರಲಿಂಗದ ರಚನೆಯನ್ನು ಕಾಣಬಹುದು.

ಕೊಡಚಾದ್ರಿಗೆ ಪುರಾತನ ಕಾಲದಿಂದಲೂ ಜನರು ಯಾತ್ರೆ ಹೋಗುತ್ತಿದ್ದರು. ಇಲ್ಲಿಗೆ ಹತ್ತಿರದ ಸ್ಥಳವಾದ ನಿಲಸಕಲ್ಲು ಎಂಬಲ್ಲಿ ನವ ಶಿಲಾಯುಗದ ಕಾಲದ ನಿಲುವುಗಲ್ಲುಗಳ ಸಾಲುಗಳನ್ನು ಗಮನಿಸಿದರೆ, ಈ ಸುತ್ತಲಿನ ಪ್ರದೇಶದಲ್ಲಿ ಕನಿಷ್ಟ ಮೂರು ಸಾವಿರ ವರ್ಷಗಳ ಹಿಂದೆ ಜನ ವಸತಿ ಇದ್ದಿರಬೇಕು ಎಂದೆನಿಸುತ್ತದೆ.

ಕೊಡಚಾದ್ರಿಯಲ್ಲಿ ಪುರಾತನ ಜನವಸತಿ ಇದ್ದ ಕುರುಹುಗಳು ಇನ್ನೂ ಪತ್ತೆಯಾಗಿಲ್ಲವಾದರೂ, ಕ್ರಿ.ಶ ಏಳನೆಯ ಶತಮಾನದಲ್ಲಿ ಶಂಕರಾಚಾರ್ಯರು ಕೊಡಚಾದ್ರಿಗೆ ಬೇಟಿ ಕೊಟ್ಟಿದ್ದು, ಇಲ್ಲಿದ್ದ ಮೂಲ ಮೂಕಾಂಬಿಕೆಯನ್ನು ಪರ್ವತದ ತಳದಲ್ಲಿರುವ ಕೊಲ್ಲೂರಿನಲ್ಲಿ ಪ್ರತಿಷ್ಟೆ ಮಾಡಿದರು ಎಂದು ಕೊಲ್ಲೂರಿನ ಸ್ಥಳಪುರಾಣ ಹೇಳುತ್ತದೆ. ಶಿಖರದ ಹತ್ತಿರವಿರುವ ಮೂಲ ಮೂಕಾಂಬಿಕೆ ದೇವಾಲಯವೂ ಸಹ ಪುರಾತನವಾದುದ್ದು. ಈ ದೇವಾಲಯದ ಬಳಿ ಸುಮಾರು 40 ಅಡಿ ಎತ್ತರದ ಕಬ್ಬಿಣದ ಕಂಬವಿದ್ದು, ಇದನ್ನು ಮೂಕಾಸುರನನ್ನು ವಧಿಸಲು ದೇವಿ ಉಪಯೋಗಿಸಿದ ತ್ರಿಶೂಲ ಎಂದು ಸ್ಥಳೀಯರು ಹೇಳುತ್ತಾರೆ.

ಕೊಡಚಾದ್ರಿಯ ಸುತ್ತ ಮುತ್ತ ಇರುವುದು ಸಹ್ಯಾದ್ರಿಯ ನಿತ್ಯ ಹರಿದ್ವರ್ಣ ಕಾಡು. ಭಾರತದ ಅತಿ ಹೆಚ್ಚು ಮಳೆ ಬೀಳುವ ಈ ಪರ್ವತ ಶ್ರೇಣಿಯಲ್ಲಿ ಬೆಳೆದಿರುವ ಈ ಕಾಡುಗಳು ತನ್ನದೇ ಆದ ವಿಶಿಷ್ಟ ಶಕ್ತಿಯನ್ನು ಹೊಂದಿದೆ. ಕೊಡಚಾದ್ರಿಯ ತುದಿಯಲ್ಲಿ ನಿಂತು ನೋಡಿದರೆ ನಾಲ್ಕೂ ದಿಕ್ಕಿನಲ್ಲಿ ನಿಬಿಡಾರಣ್ಯವು ಅಲೆ ಅಲೆಯಂತೆ ಹರಡಿರುವ ದೃಶ್ಯ ಕಾಣುತ್ತದೆ.

ಇದೇ ನಾಡಿನಲ್ಲಿ ಹುಟ್ಟಿ ಬೆಳೆದ ರಾಷ್ಟ್ರಕವಿ ಕುವೆಂಪುರವರ ಕವಿತೆಯ ಒಂದು ಸಾಲಾಗಿರುವ “ಹಸುರಿತ್ತಲ್, ಹಸುರತ್ತಲ್, ಹಸುರೆತ್ತಲ್ ಕಡಲಿನಲಿ” ಎನ್ನುವ ಸಾಲು ನೆನಪಾಗುವಂತಹ ತಾಣ ಕೊಡಚಾದ್ರಿ. ಅಲ್ಲದೇ ಇಲ್ಲಿಯ ಸೂರ್ಯಾಸ್ತ ಅಪರೂಪದ ದೃಶ್ಯವಾಗಿದ್ದು, ಈ ರಮ್ಯ ಮನೋಹರ ದೃಶ್ಯವನ್ನು ಆಸ್ವಾದಿಸಲು ದೇಶದ ಎಲ್ಲಾ ಕಡೆಗಳಿಂದಲೂ ಜನರು ಬರುತ್ತಾರೆ.

ಇದು ಹೊಸನಗರ ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿ.ಮೀ ಅಂತರದಲ್ಲಿದೆ.

ಹೆಚ್ಚಿನ ಮಾಹಿತಿಗಾಗಿ

ಪರಾಮರ್ಶನ

https://kn.wikipedia.org

ಕೃಪೆ : dipr shimoga

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ( ವಿ.ಐ.ಎಸ್.ಎಲ್)

Published

on

ಮೈಸೂರು ಒಡೆಯರ ಆಳ್ವಕೆಗೆ ಒಳಪಟ್ಟ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ನಿರ್ಮಾಣ ಮಾಡುವ ಮಹತ್ತರ ಜವಾಬ್ದಾರಿಯನ್ನು ಸಂಸ್ಥಾನದ ಅಂದಿನ ಇಂಜಿನಿಯರ್ ಆಗಿದ್ದ ಸರ್. ಎಂ. ವಿಶ್ವೇಶ್ವರಯ್ಯ ಅವರಿಗೆ ವಹಿಸಲಾಗಿತ್ತು. ಈ ಸಂದರ್ಭದಲ್ಲಿ ಸರ್.ಎಂ.ವಿ ಯವರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸ್ಥಾಪನೆ ಮಾಡಲು ಆಯ್ಕೆ ಮಾಡಿಕೊಂಡ ಸ್ಥಳವೆ ಬೆಂಕಿಪುರ. ಅದುವೇ ಈಗಿನ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕು.

20ನೇ ಶತಮಾನದ ಆದಿಭಾಗದಲ್ಲಿ ಬೆಂಕಿಪುರದ ಭದ್ರಾನದಿಯ ದಂಡೆಯ ಮೇಲೆ ಸರ್.ಎಂ.ವಿ ಯವರು 1600 ಎಕರೆ ವಿಸ್ತೀರ್ಣದಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸ್ಥಾಪನೆ ಮಾಡಿದರು. ತದನಂತರ ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯಾರ್ ಆಳ್ವಕೆಯ ಕಾಲದಲ್ಲಿ ಬೆಂಕಿಪುರಕ್ಕೆ ಭದ್ರಾವತಿ ಎಂದು ಮರುನಾಮಕರಣ ಮಾಡಲಾಯಿತು.

ಬಾಬ ಬುಡನ್‌ಗಿರಿ ಬೆಟ್ಟಗಳಲ್ಲಿ ಮತ್ತು ಕೆಮ್ಮಣ್ಣುಗುಂಡಿ ಬಳಿ ಇರುವ ಶ್ರೀಮಂತ ಅದಿರು ನಿಕ್ಷೇಪಗಳನ್ನು ಸಮರ್ಥವಾಗಿ ಬಳಸಿಕೊಂಡು ಕಬ್ಬಿಣದ ಅದಿರು ಮತ್ತು ಇತರ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ಕೈಗಾರಿಕೆಯನ್ನು ಸ್ಥಾಪನೆ ಮಾಡಲಾಯಿತು. ಭದ್ರಾವತಿಯಲ್ಲಿ ಕಾರ್ಖಾನೆಯನ್ನು ಸ್ಥಾಪನೆ ಮಾಡುವ ಉದ್ದೇಶದಿಂದ 1915-16 ರಲ್ಲಿ ಪ್ರಾಥಮಿಕ ತನಿಖೆಯನ್ನು ಮಾಡಲಾಯಿತು. ಈ ಸಂಶೋಧನೆಯು ನ್ಯೂಯಾರ್ಕ್ ಮೂಲದ ಸಂಸ್ಥೆಯಿಂದ ಮಾಡಲ್ಪಟ್ಟಿತು. ನಂತರ 1918 ರಿಂದ 1922ರ ಕಾಲಾವಧಿಯಲ್ಲಿ ಸುಮಾರು 1600 ಎಕರೆ ವಿಸ್ತೀರ್ಣದಲ್ಲಿ ಕಾರ್ಖಾನೆ ಸ್ಥಾಪನೆಗೊಂಡಿತು.

ಮದ್ರಾಸ್, ಅಹಮದಾಬಾದ್, ಕರಾಚಿ ಮತ್ತು ಬಾಂಬೆಯಲ್ಲಿ ಮಾರಾಟ ಕಛೇರಿಗಳನ್ನು ತೆರೆಯಲಾಯಿತು. ತದನಂತರ ಕಾರ್ಖಾನೆಯ ಹೆಸರನ್ನು ಮೈಸೂರು ಐರನ್ ಮತ್ತು ಸ್ಟೀಲ್‌ವರ್ಕ್ಸ್ ಎಂದು ಬದಲಾಯಿಸಲಾಯಿತು.

1962ರಲ್ಲಿ ಕಂಪನಿಯ ಹೆಸರನ್ನು ದಿ ಮೈಸೂರು ಐರನ್ ಅಂಡ್ ಸ್ಟೀಲ್ ಲಿಮಿಟೆಡ್ ಎಂದು ಬದಲಾಯಸಲಾಯಿತು. ನಂತರ ಕಂಪನಿಯನ್ನು ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಒಡೆತನ ಸರ್ಕಾರಿ ಕಂಪನಿಯಾಗಿ ಅನುಕ್ರಮ 40:60ರ ಷೇರು ಅನುಪಾತದೊಂದಿಗೆ ಪರಿವರ್ತಿಸಲಾಯಿತು.

1962ರಲ್ಲಿ ಹೊಸ ಮಾದರಿಯ ಉಕ್ಕಿನ ಸ್ಥಾವರಗಳನ್ನು ಸ್ಥಾಪಿಸಲಾಯಿತು. ಮತ್ತು ಹೊಸ ಎಲ್‌ಡಿ ಪ್ರಕ್ರಿಯೆಯನ್ನು ಬಳಸಿಕೊಂಡು ಉಕ್ಕನ್ನು ತಯಾರಿಸುವಲ್ಲಿ ಯಶಸ್ವಿಯಾಯಿತು. ಕಂಪನಿಯ ಏಳಿಗೆಗೆ ಶ್ರಮಿಸಿದ ಸಂಸ್ಥಾಪಕರನ್ನು ಗೌರವಿಸುವ ನಿಟ್ಟಿನಲ್ಲಿ 1988ರಲ್ಲಿ ಕಂಪನಿಯ ಹೆಸರನ್ನು ವಿಶ್ವೇಶ್ವರಯ್ಯ ಐರನ್ ಆಂಡ್ ಸ್ಟೀಲ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು. 1989ರಲ್ಲಿ ಇದನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯು ತನ್ನ ಅಂಗಸಂಸ್ಥೆಯಾಗಿ ಸ್ವಾಧೀನಪಡಿಸಿಕೊಂಡಿತು. 1988ರಲ್ಲಿ ವಿಐಎಸ್‌ಎಲ್‌ಅನ್ನು ಎಸ್‌ಎಐಎಲ್‌ನಲ್ಲಿ ವಿಲೀನಗೊಳೀಸಲಾಯಿತು.

ಇದನ್ನೂ ಓದಿ |ಕುತೂಹಲ ಮೂಡಿಸಿದ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಟಿ : ವಿಶೇಷ ಆರ್ಥಿಕ ಪ್ಯಾಕೇಜ್ ನಿರೀಕ್ಷೆ..!?

ನಂತರ ಕಾರ್ಖಾನೆಗೆ ಹೊಸಪೇಟೆಯಿಂದ ಸರಬರಾಜಾಗುವ ಕಬ್ಬಿಣದ ಮ್ಯಾಂಗನೀಸ್ ಅದಿರುಗಳನ್ನು ಕಚ್ಚಾವಸ್ತುಗಳಾಗಿ ಬಳಸಿಕೊಂಡು ಆಲಾಯ್ ಸ್ಟೀಲ್‌ನ್ನು ತಯಾರು ಮಾಡಲಾಗುತ್ತಿತ್ತು. ಇದು ದೇಶದ ಇತರೆ ರಾಜ್ಯಗಳಿಗೆ ಮತ್ತು ವಿದೇಶಗಳಿಗೂ ರಫ್ತಾಗುತ್ತದೆ. ಕಾರ್ಖಾನೆಯು ಭಾರತ ಸರ್ಕಾರದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ನ ಆಡಳಿತಕ್ಕೆ ಒಳಪಟ್ಟಿದೆ.

ಹೀಗೆ ತನ್ನ ಕಾರ್ಯ ವೈಖರಿಯಿಂದ ಉತ್ತಮವಾಗಿ ನಡೆಯುತ್ತಿದ್ದ ಕಂಪನಿಯು ಹಲವಾರು ಕಾರಣಗಳಿಂದಾಗಿ ನಷ್ಟದ ಸುಳಿಗೆ ಸಿಕ್ಕಿ ಪ್ರಸ್ತುತ ಸಂಪೂರ್ಣವಾಗಿ ನಿಂತು ಹೋಗುವ ಹಂತವನ್ನು ತಲುಪಿದೆ.

ಇಲ್ಲಿಗೆ ಭೇಟಿ ನೀಡಲು ಪ್ರತಿ ಶನಿವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ಮಾತ್ರ ಅವಕಾಶವನ್ನು ನೀಡಲಾಗಿದ್ದು ಆಸಕ್ತರು 01 ತಿಂಗಳ ಮುಂಚಿತ ಅನುಮತಿಯನ್ನು ಪಡೆಯಬೇಕು.

ಹೆಚ್ಚಿನ ಮಾಹಿತಿಗಾಗಿ

https://www.youtube.com/watch?v=Tb6jxrMKvnQ

ಪರಾಮರ್ಶನ

https://kn.m.wikipedia.org

https://kanaja.karnataka.gov.in

ಕೃಪೆ : dipr shimoga

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ನಮ್ಮ ಶಿವಮೊಗ್ಗ – ನಮ್ಮ ಹೆಮ್ಮೆ : ಬಿದನೂರು ಕೋಟೆ

Published

on

ಬಿದನೂರು ಕೋಟೆ

ಎತ್ತ ನೋಡಿದರೂ ಕೊಡಚಾದ್ರಿ ಬೆಟ್ಟ ಶ್ರೇಣಿ, ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯ,.. ಮೈತುಂಬಿಕೊಂಡ ನದಿ, ಕೆರೆಗಳು. ಹಸಿರು ಹೊದ್ದ ಗದ್ದೆ–ತೋಟಗಳು, ತಲೆ ಮೇಲೆಯೇ ತೇಲಾಡುವ ಮೋಡಗಳು, ಹಿತ ಅನುಭವ ನೀಡುವ ಬೀಸುವ ತಂಗಾಳಿ. ಮೈ–ಮನ ಎರಡಕ್ಕೂ ಮುದ ನೀಡುವ ಬಿದನೂರು (ನಗರ) ಕೋಟೆ ಚಳಿಗಾಲದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಕೊಡಚಾದ್ರಿಯ ತಪ್ಪಲಿನಲ್ಲೇ ಬಿದನೂರು ಕೋಟೆ ಇದೆ. ಶಿವಮೊಗ್ಗ ಜಿಲ್ಲೆ ಹೊಸನಗರದಿಂದ ಕೊಡಚಾದ್ರಿ-ಕೊಲ್ಲೂರಿಗೆ ಹೋಗುವ ಹಾದಿಯಲ್ಲೇ ಬಿದನೂರು ಸಿಗುತ್ತದೆ. ಕರಾವಳಿಯಿಂದ ಬಾಳೆಬರೆ ಘಾಟಿ ಹತ್ತಿ ಮಾಸ್ತಿಕಟ್ಟೆ, ನಗರ ಮಾರ್ಗದಲ್ಲಿ ಬಂದರೆ ಹೆದ್ದಾರಿ ಬದಿಯಲ್ಲೇ ಈ ಕೋಟೆ ಎದುರಾಗುತ್ತದೆ. ಬೇಸಿಗೆಯಲ್ಲಿ ಬಿಸಿಲ ಝಳ, ಮಳೆಗಾಲದಲ್ಲಿ ಪಾಚಿಕಟ್ಟಿ ಕಾಲಿಡದ ಸ್ಥಿತಿ. ಚಳಿಗಾಲದ ವೇಳೆ ಇಡೀ ಪರಿಸರವೇ ಹಸಿರು ಹೊದ್ದು ಮಲಗಿದಂತೆ ಕಂಡು, ನಯನ ಮನೋಹರ ದೃಶ್ಯ ಸೃಷ್ಟಿಯಾಗುತ್ತದೆ.

ಬಿದನೂರು ಕೋಟೆ ಕೆಳದಿ ಅರಸರ ಮೂರನೇ ರಾಜಧಾನಿ. ವೆಂಕಟಪ್ಪನಾಯಕ ರಾಜ್ಯ ವಿಸ್ತರಣೆಯ ಸಂದರ್ಭದಲ್ಲಿ ಹೊನ್ನೆಯ ಕಂಬಳಿ ಅರಸರಿಂದ ಗೆದ್ದುಕೊಂಡಿದ್ದುದಾಗಿ ‘ಕೆಳದಿ ನೃಪವಿಜಯಂ’ನಿಂದ ತಿಳಿದು ಬರುತ್ತದೆ. 1561ರಲ್ಲಿ ಬಿದನೂರನ್ನು (ನಗರ) ವೀರಭದ್ರನಾಯಕನು ತನ್ನ ಆಡಳಿತ ಕೇಂದ್ರವನ್ನಾಗಿಸಿ 1568 ರಲ್ಲಿ ಶಿವಪ್ಪನಾಯಕನಿಗೆ ಇಲ್ಲಿ ಪಟ್ಟಾಭಿಷೇಕ ನೆರವೇರಿಸಿದ್ದ. ಕ್ರಿ.ಶ 1645 – 1665 ರಲ್ಲಿ ಬಿದನೂರಿನಲ್ಲಿ ರಾಜಧಾನಿಯನ್ನು ನಿರ್ಮಿಸಲು ಮುಂದಾದಾಗ ಈ ಕೋಟೆಯನ್ನು ಕೆಲವು ಮಾರ್ಪಾಡುಗಳೊಂದಿಗೆ ಭದ್ರಪಡಿಸಿದ ಎಂದು ಇತಿಹಾಸ ಹೇಳುತ್ತದೆ.

ಷಟ್ಕೋನ ವಿನ್ಯಾಸ ಹೊಂದಿರುವ ಈ ಕೋಟೆಗೆ ಉತ್ತರಭಾಗದಲ್ಲಿ ಕಂದಕಗಳಿಂದ ಹೊರಚಾಚಿದ ಹಾಗೂ ಬತೇರಿಯಿಂದ ಆವೃತವಾದ ಪ್ರವೇಶದ್ವಾರವಿದೆ. ಕೋಟೆಯ ಗೋಡೆಗೆ ಹೊಂದಿಕೊಂಡಂತೆ ನಾಲ್ಕೂ ದಿಕ್ಕುಗಳಲ್ಲಿ ದೈತ್ಯಾಕಾರದ ಕಲ್ಲುಗಳಿಂದ ಕಟ್ಟಿದ ಆರು ಬತ್ತೇರಿಗಳಿವೆ. ಒಳಗಡೆ ಒಪ್ಪವಾಗಿ ಕೂಡಿಟ್ಟ ಕಲ್ಲು ಹಾಸಿನ ಹಾದಿ ಇದೆ. ಕೋಟೆಯ ಗೋಡೆಯ ಮೇಲೆ ದಪ್ಪನಾದ ಮೇಲ್ಗೋಡೆಯಿದ್ದು, ಅದರಲ್ಲಿ ವೀಕ್ಷಣ ಗೋಪುರಗಳಿವೆ.

ಕೋಟೆಯ ಒಳಭಾಗದಲ್ಲಿ ಕಾವಲುಗಾರ ಕೋಣೆಗಳಿದ್ದು, ಕೋಟೆಯ ಹೊರಗೋಡೆಯ ಸುತ್ತಲೂ ಆಳವಾದ ಕಂದಕ ನಿರ್ಮಿಸಲಾಗಿದೆ. ಪ್ರವೇಶದ್ವಾರದಿಂದ ತುಸು ಮುಂದಕ್ಕೆ ಹೋದರೆ ಪಶ್ಚಿಮ ದಿಕ್ಕಿನಲ್ಲಿ ಒಂದು ಕೊಳ ಮತ್ತು ಆಗ್ನೇಯ ದಿಕ್ಕಿನಲ್ಲಿ ಅರಮನೆಯ ಭಗ್ನಾವಶೇಷಗಳೂ ಕಂಡುಬರುತ್ತವೆ.

ಇದನ್ನೂ ಓದಿ | ದಾವಣಗೆರೆ | ನಾಳೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಸಭೆ 

ಕೊಳದ ಬಾವಿಗೆ ನಾಲ್ಕೂ ದಿಕ್ಕುಗಳಿಂದ ಪ್ರವೇಶ ಪಾವಟಿಕೆಗಳಿವೆ. ಇದರ ದಕ್ಷಿಣಕ್ಕೆ ತುಸು ಎತ್ತರವಾದ ಸ್ಥಳದಲ್ಲಿ ಆಯತಾಕಾರದ ಅರಮನೆಯ ಅವಶೇಷಗಳಿದ್ದು, ಅವುಗಳಲ್ಲಿ ಅನೇಕ ಹಜಾರ ಹಾಗೂ ಕೋಣೆಗಳಿವೆ. ಇದರ ಪಶ್ಚಿಮಕ್ಕೆ ತೆರೆದಿರುವ ಸ್ಥಳವು ಪ್ರಾಯಶಃ ಸಭೆ ನಡೆಸುವ ಸ್ಥಳವಾಗಿದ್ದಿತು ಎಂದು ಇತಿಹಾಸ ತಜ್ಞರು ಹೇಳುತ್ತಾರೆ.

ನೈರುತ್ಯ ದಿಕ್ಕಿನಲ್ಲಿ ಒಂದು ಆಳವಾದ ಅಷ್ಟಮೂಲೆಯ ಬಾವಿಯಿದ್ದು, ಕೋಟೆಯ ಗೋಡೆಯನ್ನು ಆಧರಿಸಿ ನಿರ್ಮಿಸಲಾದ ಒಂದು ಕಡಿದಾದ ಹಾದಿಯು ಗೋಪುರಕ್ಕೆ ಕರೆದೊಯ್ಯುತ್ತದೆ. ಇದೇ ಅಲ್ಲದೇ ಅಷ್ಟಮೂಲೆ ಬಾವಿಯ ಬಳಿ ಮತ್ತೊಂದು ಕೊಳವು ಮತ್ತು ಇತರ ಕಟ್ಟಡಗಳ ಅವಶೇಷವೂ ಕಾಣುತ್ತವೆ.

ಹೆಚ್ಚಿನ ಮಾಹಿತಿಗಾಗಿ

ಪರಾಮರ್ಶನ
https://kn.wikipedia.org

ಕೃಪೆ : ಡಿಪಿಐಅರ್, ಶಿವಮೊಗ್ಗ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ6 hours ago

ದಾವಣಗೆರೆ | ನಾಳೆ ಎಂ.ಪಿ.ರೇಣುಕಾಚಾರ್ಯರ ಜಿಲ್ಲಾ ಪ್ರವಾಸ

ಸುದ್ದಿದಿನ,ದಾವಣಗೆರೆ : ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎಂ.ಪಿ.ರೇಣುಕಾಚಾರ್ಯರವರು ಮೇ 16 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಹೊನ್ನಾಳಿ...

ದಿನದ ಸುದ್ದಿ6 hours ago

ಭದ್ರಾ ನಾಲೆಗಳ ಮೂಲಕ ಹರಿಸುತ್ತಿರುವ ನೀರು, ಮೇ.20 ರವರೆಗೆ ಮುಂದೂಡಿಕೆ

ಸುದ್ದಿದಿನ,ದಾವಣಗೆರೆ : ಭದ್ರಾ ಜಲಾಶಯದಿಂದ ನೀರು ಸ್ಥಗಿತಗೊಳಿಸುವ ನಿರ್ಧಾರವನ್ನು ಕಾಡಾ ಮುಂದೂಡಿ, ಮೇ.20 ರವರೆಗೆ ನೀರು ಹರಿಸಲು ನಿರ್ಧರಿಸಿದೆ ಎಂದು ಭದ್ರಾ ಕಾಡಾ ಸಮಿತಿ ಅಧ್ಯಕ್ಷರಾದ ಪವಿತ್ರರಾಮಯ್ಯ...

ದಿನದ ಸುದ್ದಿ6 hours ago

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ : ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ: ಮೆಟ್ರಿಕ್ ನಂತರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿಗಳಿಂದ, 2020-21ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ...

ದಿನದ ಸುದ್ದಿ6 hours ago

ಪಾಲಿಕೆ ವತಿಯಿಂದ 60 ಆಕ್ಸಿಜನ್ ಕಾನ್ಸಂಟ್ರೇಟರ್ ಸಿಗಲಿವೆ, ಆಕ್ಸಿಜನ್ ಪರ್ಯಾಯ ವ್ಯವಸ್ಥೆಗೆ ಕೊಡುಗೈ ದಾನಿಗಳು ಮುಂದಾಗಿ : ಡಿಸಿ ಮಹಾಂತೇಶ್ ಬೀಳಗಿ ಮನವಿ

ಸುದ್ದಿದಿನ,ದಾವಣಗೆರೆ : ಕೋವಿಡ್ 2ನೇ ಅಲೆಯಲ್ಲಿ ಸೋಂಕಿತರಿಗೆ ಅತ್ಯವಶ್ಯವಾಗಿರುವ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್‍ಗೆ ಪರ್ಯಾಯವಾಗಿ ಆಕ್ಸಿಜನ್ ಒದಗಿಸುವಂತಹ ಮೆಡಿಕಲ್ ಆಕ್ಸಿಜನ್ ಜನರೇಟರ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ದಾನವಾಗಿ...

ದಿನದ ಸುದ್ದಿ6 hours ago

ದಾವಣಗೆರೆ | ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಇಲ್ಲ : ಜಿಲ್ಲಾಧಿಕಾರಿ

ಸುದ್ದಿದಿನ, ದಾವಣಗೆರೆ : ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಮಾಡಲಾಗುವುದಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಈಗಿರುವ ಮಾರ್ಗಸೂಚಿಗಳನ್ನೇ ಅತ್ಯಂತ ಕಠಿಣವಾಗಿ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ...

ದಿನದ ಸುದ್ದಿ6 hours ago

ಲಾಕ್‍ಡೌನ್ ಅವಧಿಯನ್ನು ಜ್ಞಾನಾರ್ಜನೆಗೆ ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು

ಸುದ್ದಿದಿನ,ದಾವಣಗೆರೆ : ಕೋವಿಡ್-19 ನಿಯಂತ್ರಣ ಹಿನ್ನೆಲೆ ಘೋಷಿಸಿರುವ ಲಾಕ್‍ಡೌನ್ ಅವಧಿಯನ್ನು ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ತೆಗದುಕೊಂಡು ಈ ಸಮಯವನ್ನು ಓದಿಗೆ, ಜ್ಞಾನರ್ಜನೆಗೆ ಬಳಸಿ ಹಾಗೂ ಕೇರಿಯರ್‍ಯನ್ನು ಉತ್ತಮಗೊಳಿಸಬಹುದಾದ ಯೋಜನೆಯನ್ನು...

ದಿನದ ಸುದ್ದಿ6 hours ago

ತರಳಬಾಳು ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ

ಸುದ್ದಿದಿನ,ದಾವಣಗೆರೆ : ಕೋವಿಡ್ ಸೋಂಕಿತರಿಗಾಗಿ ದಾವಣಗೆರೆ-ಶಿರಮಗೊಂಡನಹಳ್ಳಿ ಮಾರ್ಗದಲ್ಲಿರುವ ತರಳಬಾಳು ವಿದ್ಯಾರ್ಥಿನಿಯರ ವಸತಿ ನಿಲಯವನ್ನು ಕೋವಿಡ್ ಕೇರ್ ಸೆಂಟರ್ ಆಗಿ ವ್ಯವಸ್ಥೆಗೊಳಿಸಲಾಗಿದ್ದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಶನಿವಾರದಂದು...

ಸಿನಿ ಸುದ್ದಿ14 hours ago

ದಿ ಗ್ರೇಟ್ ಇಂಡಿಯನ್ ಕಿಚನ್ : ಮಹಿಳಾ ಅಸಮಾನತೆಯ ಕರಾಳ ಜಗತ್ತಿನ ಚಿತ್ರಣ

ಕ್ರಾಂತಿರಾಜ್ ಒಡೆಯರ್, ಸಹಾಯಕ ಪ್ರಾಧ್ಯಾಪಕರು, ಮೈಸೂರು “ಜಗತ್ತಿನ ಎಲ್ಲಾ ಧರ್ಮಗಳು ತಮ್ಮ ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರುತ್ತವೆ. ಆದರೆ ಮಹಿಳೆಯರಿಗೆ ಸ್ವಾತಂತ್ರ ಕೊಡಬಾರದೆಂಬ ವಿಷಯದಲ್ಲಿ ಎಲ್ಲಾ ಧರ್ಮಗಳೂ...

ದಿನದ ಸುದ್ದಿ14 hours ago

ಕೊರೋನಾ ಲಸಿಕೆ ಕುರಿತು ಇಂದು ಪಿಎಂ ನರೇಂದ್ರ ಮೋದಿ ಸಭೆ

ಸುದ್ದಿದಿನ ಡೆಸ್ಕ್ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೇಶದ ಕೊರೊನ ಪರಿಸ್ಥಿತಿ ಹಾಗೂ ಲಸಿಕೆ ಕುರಿತು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು...

ದಿನದ ಸುದ್ದಿ15 hours ago

ಸಂತಸದ ಸುದ್ದಿ | ದೇಶದಲ್ಲಿ ಶುಕ್ರವಾರ 3,53,299 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ

ಸುದ್ದಿದಿನ,ನವದೆಹಲಿ: ಕಳೆದ 24 ಗಂಟೆಗಳಲ್ಲಿ‌ ಭಾರತದಲ್ಲಿ 3,26,098 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 3,890 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಸಂತಸದ ಸಂಗತಿ ಎಂದರೆ 3,53,299 ಜನ ಗುಣಮುಖರಾಗಿ...

Trending