Connect with us

ದಿನದ ಸುದ್ದಿ

ಆ ಗೆಳೆಯ ಮಹೇಶನ ನೆನಪಿನೊಂದಿಗೆ ರವಿ ಬೆಳಗೆರೆಗೆ ವಿದಾಯ

Published

on

 

  • ದಿನೇಶ್ ಅಮಿನ್ ಮಟ್ಟು

ಕೆಲವರು ಹೀಗೆ ಇರುತ್ತಾರೆ, ನೀವು ಅವರನ್ನು ಪ್ರೀತಿಸಬಹುದು, ದ್ವೇಷಿಸಬಹುದು, ಆದರೆ ನಿರ್ಲಕ್ಷಿಸುವಂತಿಲ್ಲ. ರವಿ ಬೆಳಗೆರೆ ಹೀಗೆ ಆರಾಧನೆ-ಅವಹೇಳನಗಳೆರಡನ್ನೂ ಆಹ್ಹಾನಿಸಿಕೊಂಡು ಬದುಕಿದ್ದ ವ್ಯಕ್ತಿ. ನನಗೇನು ಇವರು ಸ್ನೇಹಿತರಲ್ಲ. ಇವರನ್ನು ನಾನು ಎರಡು-ಮೂರು ಬಾರಿ ಸಮಾರಂಭಗಳಲ್ಲಿ ಭೇಟಿ ಮಾಡಿದ್ದೆ, ಎರಡು-ಮೂರು ಬಾರಿ ಮಾತನಾಡಿದ್ದೆ, ಕೊನೆಯ ಬಾರಿ ಅವರೇ ಪೋನ್ ಮಾಡಿ ಮಾತನಾಡಿದ್ದು ಹಕ್ಕುಚ್ಯುತಿಯ ಪ್ರಕರಣದಲ್ಲಿ ಪೊಲೀಸರು ಅವರನ್ನು ಬಂಧಿಸಲು ಹೊರಟ ಸಂದರ್ಭದಲ್ಲಿ.

ನನಗೆಂದೂ ಅವರನ್ನು ಭೇಟಿ ಮಾಡಬೇಕು, ಮಾತನಾಡಬೇಕೆಂದು ಅನಿಸಿರಲೇ ಇಲ್ಲ. ಸ್ನೇಹಿತರಾದ ಡಿ.ಉಮಾಪತಿ ಅವರಿಗೆ ರವಿ ಖಾಸಾದೋಸ್ತ್, ದೆಹಲಿಗೂ ಹಲವು ಬಾರಿ ಬಂದಿದ್ದರು. ನನ್ನನ್ನು ಅರಿತಿದ್ದ ಉಮಾಪತಿ ಎಂದೂ ಅವರನ್ನು ನನಗೆ ಭೇಟಿ ಮಾಡಿಸಿರಲಿಲ್ಲ. ನಾನೆಂದೂ ‘ಹಾಯ್ ಬೆಂಗಳೂರು’ ಪತ್ರಿಕೆಯನ್ನು ದುಡ್ಡು ಕೊಟ್ಟು ಖರೀದಿಸಿಲ್ಲ, ಎಲ್ಲಾದರೂ ಕಣ್ಣಿಗೆ ಬಿದ್ದರೆ ಪುಟಗಳನ್ನು ತಿರುವಿಹಾಕಿ ಖಾಸ್ ಬಾತ್ ಓದುತ್ತಿದ್ದೆ

ರವಿಯವರು ನಡೆಸುತ್ತಿದ್ದ ಪತ್ರಿಕೋದ್ಯಮ ಮತ್ತು ನಾನು ನಂಬಿರುವ ಪತ್ರಿಕೋದ್ಯೋಗ ಬೇರೆಬೇರೆ. ಟ್ಯಾಬ್ಲಾಯ್ಡ್ ಪತ್ರಿಕೆಗಳು ಎರಡಲಗಿನ ಕತ್ತಿ ಇದ್ದ ಹಾಗೆ. ಅದು ಲಂಕೇಶ್ ಪತ್ರಿಕೆಯೂ ಆಗಬಹುದು, ಹಾಯ್ ಬೆಂಗಳೂರು ಕೂಡಾ ಆಗಬಹುದು. ಲಂಕೇಶ್ ಪತ್ರಿಕೆಯನ್ನು ಒಂದು ತಲೆಮಾರಿನ ಕಣ್ಣು ತೆರೆಸಿದವರು ಎಂದು ಹೇಳುತ್ತಿದ್ದರು, ನನ್ನ ಕಣ್ಣು ತೆರೆಯಲು ಕೂಡಾ ಅವರ ಪತ್ರಿಕೆ ನೆರವಾಗಿರುವುದು ನಿಜ. ಆದರೆ ನನ್ನ ಪ್ರಕಾರ ರವಿ ಬೆಳಗೆರೆಗೆ ಕೂಡಾ ಅಂತಹ ಶಕ್ತಿ ಇತ್ತು, ಅದನ್ನು ಅವರು ಮಾಡದೆ ಹೋದರು ಎನ್ನುವುದು ಕೂಡಾ ಸತ್ಯ.

ನಮ್ಮ ಗುರಿ ಮತ್ತು ದಾರಿಯ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾದ ಸಂದರ್ಭದಲ್ಲಿ ನಾವೆಲ್ಲರೂ ನಮ್ಮನ್ನು ನಾವೇ ನಿಕಷಕ್ಕೆ ಒಡ್ಡಿಕೊಳ್ಳಬೇಕಾಗುತ್ತದೆ. ತಪ್ಪು ಗುರಿಯನ್ನು ಇಟ್ಟುಕೊಂಡು ಓಡುವ ಓಟಗಾರ ಎಷ್ಟೇ ಪ್ರತಿಭಾಶಾಲಿಯಾಗಿದ್ದರೂ ಆತನನ್ನು ಅನುಕರಿಸುವುದು ಕಷ್ಟ, ಗುಂಡಿಗೆ ಬೀಳುವ ಅಪಾಯ ಇದೆ. ಸರಿಯಾದ ಗುರಿಯನ್ನಿಟ್ಟುಕೊಂಡು ಓಡುವ ಓಟಗಾರನದ್ದು ಸಾಮಾನ್ಯ ಪ್ರತಿಭೆಯಾದರೂ ಆತನನ್ನು ಹಿಂಬಾಲಿಸಬಹುದು, ವಿಳಂಬವಾದರೂ ಸರಿಯಾದ ಗುರಿ ತಲುಪಬಹುದು.

ರವಿ ಬೆಳಗೆರೆಯವರದ್ದು ದೈತ್ಯ ಪ್ರತಿಭೆ ಅನ್ನುತ್ತಾರಲ್ಲಾ ಅಂತಹದ್ದು. ಓದುಗರನ್ನು ಸಮ್ಮೋಹನಗೊಳಿಸುವ ಅವರ ಭಾಷೆ ಮತ್ತು ಬರವಣಿಗೆಯ ಶೈಲಿ, ಅವರ ನೆನಪಿನ ಶಕ್ತಿ, ಮಾತುಗಳು ಎಲ್ಲವೂ ಅವರನ್ನು ಜನಪ್ರಿಯರನ್ನಾಗಿ ಮಾಡಿತ್ತು. ನನ್ನಂತಹರಲ್ಲಿಯೂ ಅಸೂಯೆ ಹುಟ್ಟಿಸುತ್ತಿತ್ತು. ರವಿ ತನ್ನ ಪ್ರತಿಭೆಯನ್ನು ಸರಿಯಾದ ಉದ್ದೇಶಕ್ಕೆ ಬಳಸದೆ ಹೋದರು. ಮನಸ್ಸಿನ ಮೇಲೆ ಎಚ್ಚರ ಇಲ್ಲದೆ ಓದಲು ಕಲಿತರೆ ನಮ್ಮನ್ನು ನಾವೆ ಅವರ ಕೈಗೆ ಒಪ್ಪಿಸಿಬಿಡುವಷ್ಟು ಪ್ರಭಾವಶಾಲಿಯಾಗಿ ಬರೆಯುತ್ತಿದ್ದ ರವಿ ಒಬ್ಬ ಸೃಜನಶೀಲ ಬರಹಗಾರ.

ಅವರ ಕೆಲವು ಕಾದಂಬರಿಗಳು ನನಗೆ ಇಷ್ಟ, ಅದಕ್ಕಿಂತಲೂ ಹೆಚ್ಚು ಮೆಚ್ಚಿಕೊಂಡಿರುವುದು ಅವರು ಈಟಿವಿ ಚಾನೆಲ್ ನಲ್ಲಿ ನಡೆಸಿಕೊಡುತ್ತಿದ್ದ ಸಂಗೀತ ಕಾರ್ಯಕ್ರಮಗಳನ್ನು. ಸೃಜನಶೀಲತೆಯ ಇನ್ನೊಂದು ಮುಖ ಅಶಿಸ್ತು. ಈ ಅಶಿಸ್ತು ರವಿ ಬದುಕನ್ನು ಅಡ್ಡಾದಿಡ್ಡಿ ದಾರಿಯಲ್ಲಿ ಕೊಂಡೊಯ್ದಿತ್ತು. ಅವರು ಮನಸ್ಸು ಮಾಡಿದ್ದರೆ, ಸರಿಯಾದ ಅವಕಾಶ ಸಿಕ್ಕಿದ್ದರೆ (ರವಿಯವರೇ ಅಭಿಮಾನ ಇಟ್ಟುಕೊಂಡಿರುವ) ಕನಿಷ್ಠ ಕನ್ನಡದ ಖುಷ್ ವಂತ್ ಸಿಂಗ್ ಆಗುತ್ತಿದ್ದರೇನೋ?

ಕಡುಕಷ್ಟದಲ್ಲಿ ಬೆಳೆದ ನೋವು ಮತ್ತು ತನ್ನ ಪ್ರತಿಭೆಗೆ ಸರಿಯಾದ ಅವಕಾಶ ಸಿಗಲಿಲ್ಲ, ಬಯಸಿದಂತೆ ಯಾವುದೂ ಆಗಲಿಲ್ಲ ಎಂಬ ಕೊರಗಿನಲ್ಲಿಯೇ ಹೆಚ್ಚುಕಡಿಮೆ ಅರ್ಧ ಆಯಷ್ಯವನ್ನು ಕಳೆದ ರವಿ ಬೆಳಗೆರೆ, ತನ್ನ ಪ್ರತಿಭೆಗೆ ಹಣವನ್ನು ಹುಟ್ಟಿಸುವ ಇನ್ನೊಂದು ಶಕ್ತಿ ಇದೆ ಎಂಬ ಅರಿವಾದಾಗ ತಪ್ಪು-ಸರಿ, ನ್ಯಾಯ-ಅನ್ಯಾಯದ ವಿಮರ್ಶೆಗೆ ಹೋಗದೆ ಆ ದಾರಿಯಲ್ಲಿ ಮುನ್ನುಗ್ಗಿ ಕಳೆದುಹೋಗಿಬಿಟ್ಟರು.

ಅವರಿಗೆ ಕನ್ನಡದ ಒಂದು ಮುಖ್ಯವಾಹಿನಿ ಪತ್ರಿಕೆ ಇಲ್ಲವೇ ಟಿವಿ ಚಾನೆಲ್ ನ ಸಂಪಾದಕರಾಗುವ ಅವಕಾಶ ಸಿಕ್ಕಿದ್ದರೆ, ನಾವೆಲ್ಲ ಬಯಸುವ ಪತ್ರಿಕೋದ್ಯಮವನ್ನು ಮುನ್ನಡೆಸುವ ಶಕ್ತಿ ಖಂಡಿತ ಇತ್ತು. ಆದರೆ ಅದರಲ್ಲಿ ಕಷ್ಟ-ನಷ್ಟ ಇತ್ತು, ರವಿ ಕೊನೆಗೆ ಹಿಡಿದ ದಾರಿಯಲ್ಲಿ ಸಿಕ್ಕ ದುಡ್ಡು ಮಾತ್ರ ಇರಲಿಲ್ಲ. ಆ ರೀತಿ ಭಿನ್ನವಾದ ದಾರಿ ಹಿಡಿದಿದ್ದರೆ ರವಿ ಇನ್ನೊಬ್ಬ ಅರ್ನಬ್ ಗೋಸ್ವಾಮಿ ಆಗುವ ಅಪಾಯ ಕೂಡಾ ಇತ್ತು.

ಕೊನೆಗೂ ರವಿಬೆಳಗೆರೆಯ ನೆನಪು ಉಳಿಸುವುದು ಅವರ ಪತ್ರಿಕೆಯ ಮುಖಪುಟದಲ್ಲಿ ರಾರಾಜಿಸುತ್ತಿದ್ದ ಹೆಡ್ಡಿಂಗ್ ಗಳು ಮಾತ್ರ, ಲೇಖನಗಳಲ್ಲ. ಶಾಶ್ವತವಾಗಿ ಅವರನ್ನು ಉಳಿಸಿರುವುದು ಅವರು ಬರೆದ ಕಾದಂಬರಿಗಳು,ಖಾಸ್ ಬಾತ್ ಅಂಕಣಗಳು, ನಡೆಸಿಕೊಡುತ್ತಿದ್ದ ಸಂಗೀತ ಕಾರ್ಯಕ್ರಮಗಳು ಮಾತ್ರ. ಇದನ್ನು ಪತ್ರಿಕೋದ್ಯಮ ಎಂದು ಹೇಳಬಹುದೇ?

ಬಹಳ ಮಂದಿ ರವಿಬೆಳಗೆರೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ, ಅವರಲ್ಲಿ ಯಾರಾದರೂ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಮೆಚ್ಚಿಕೊಂಡ ಎಷ್ಟು ವರದಿಗಳನ್ನು ಉಲ್ಲೇಖಿಸಲು ಸಾಧ್ಯವಿದೆ?

ಈ ಪೋಸ್ಟ್ ಜೊತೆ ರವಿ ಜೊತೆ ನಾನಿದ್ದ ಪೋಟೊ ಇದೆ. ಇದು ತುಮಕೂರಿನಲ್ಲಿದ್ದಾಗ ತೆಗೆದಿದ್ದ ಪೋಟೊ. ಅಲ್ಲಿ ನನಗೂ ಆತ್ಮೀಯನಾಗಿದ್ದ ಮಹೇಶ್ ಹೊನ್ನುಡಿಕೆ ಎಂಬ ರವಿಯ ಕಡುಅಭಿಮಾನಿ ಇದ್ದ.ಪತ್ರಕರ್ತ,ರಾಜಕಾರಣಿ,ಉದ್ಯಮಿ ಎಲ್ಲವೂ ಅರೆಕಾಲಿಕ ಆಗಿದ್ದ ಮಹೇಶನ ಪುಸ್ತಕ ಬಿಡುಗಡೆಗೆ ರವಿ ಬಂದಿದ್ದಾಗ ತೆಗೆದಿದ್ದ ಪೋಟೊ. ಹೊನ್ನುಡಿಕೆ ಪಾಲಿಗೆ ರವಿ ಆರಾಧ್ಯ ದೇವರಾಗಿದ್ದರು.

“ ಅವರ ಭಗ್ನಪ್ರೇಮದ ಕತೆ ನನ್ನದೂ ಕೂಡಾ ಸಾರ್, ಅವರು ಕುಡಿಯುವ ರಮ್ ನನ್ನ ಫೇವರೇಟ್ ಸಾರ್, ಅವರ ಬ್ರಾಂಡ್ ಖೋಡೆ ರಮ್ ಕೂಡಾ ನನ್ನದೇ ಬ್ರಾಂಡ್ ಸಾರ್, ಅವರ ಗಡ್ಡ ನನ್ನದೇ ಸಾರ್.” ಎಂದೆಲ್ಲ ರಾತ್ರಿ ಬಾರಿನಲ್ಲಿ ಕೂತು ಗಡ್ಡ ಕೆರೆಯುತ್ತಾ, ರಮ್ ಹೀರುತ್ತಾ ಮಹೇಶ್ ಬಡಬಡಿಸುವವ. ಕೊನೆಗೆ ಕುಡಿಯಬಾರದ್ದಷ್ಟನ್ನು ಕುಡಿದು ಸಾಯಬಾರದ ವಯಸ್ಸಿನಲ್ಲಿ ಮಹೇಶ್ ನಮ್ಮನಗಲಿ ಹೋದ.

ಈ ರೀತಿ ಕಣ್ಣುಮುಚ್ಚಿ ಆರಾಧಿಸುವ ಸಾವಿರಾರು ಯುವ ಅಭಿಮಾನಿಗಳು ರವಿ ಬೆಳಗೆರೆಗೆ ಇದ್ದರು, ರವಿ ಬೆಳಗೆರೆ ಖಾಸ್ ಬಾತ್ ಗಳು ಬಹಳ ಬೇಗ ಅವರಿಗೆ ಅರ್ಥವಾಗುತ್ತಿತ್ತು. ಅವರಿಗೆ ಕಣ್ಣು ತೆರೆಸುವ ನನ್ನಂತಹವರ ಮಾತುಗಳು ಅರ್ಥವಾಗುತ್ತಿರಲಿಲ್ಲ ಅರ್ಥಮಾಡಿಕೊಂಡಿದ್ದರೆ ಮಹೇಶ್ ಇಂದು ರವಿ ಮೃತದೇಹದ ಮುಂದೆ ಕಂಬನಿ ಸುರಿಸಲು ಬದುಕಿರುತ್ತಿದ್ದ.

ಆ ಗೆಳೆಯ ಮಹೇಶನ ನೆನಪಿನೊಂದಿಗೆ ರವಿ ಬೆಳಗೆರೆಗೆ ವಿದಾಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending