ಭಾವ ಭೈರಾಗಿ
#Second Hand ಹುಡುಗ್ರು ಅಂದ್ರೆ ಅಷ್ಟೊಂದು ಸದರ ಆಗೋಯ್ತಾ..!

ಲೋ ನಾಯಿ, ಹಂದಿ, ಕಪ್ಪೆರಾಯ, ಕತ್ತೆ, ಕೋತಿ, ಹೋತಿಕ್ಯಾತ, ಹಲ್ಲಿ, ಲೋಫರ್, ಪಾಪರ್, ಸಿಗೋ ನನ್ ಕೈಗೆ. ಆಹಾ… ನನ್ ಬಂಗಾರ,,,, ಅದೆಷ್ಟು ಮುದ್ದಾಗ್ ಬಯ್ತಿಯೆ ನನ್ ಗಿಣಿ. ನನ್ನ ಬಯ್ಯೋದ್ರಲ್ಲಿ ಅದೇನ್ ಖುಷಿನೆ ನಿಂಗೆ. ನಂಗೊತ್ತು ಕಣೆ ನಿಂಗ್ ಇದ್ಕಿಂತ ಜಾಸ್ತಿ ಬಯ್ಯೊಕ್ ಬರಲ್ಲ ಅಂತ. ಇನ್ನೊಮ್ಮೆ ಸಿಕ್ಕಾಗ ಬಯ್ಗುಳದ ಬಗ್ಗೆ ಒಂದ್ ಕ್ಲಾಸ್ ಮಾಡ್ತಿನಿ ಕೇಳು ಸರೀನಾ…
ಕಾಲ್ ರಿಸೀವ್ ಮಾಡ್ಲಿಲ್ಲ ಅನ್ನೊ ಒಂದೇ ಕಾರಣಕ್ಕೆ ನೀನು ಶಿರಸಿ ಮಾರಿಕಾಂಬೆ ಅವತಾರ ತಗೊತಿಯಲ್ಲ ಇದು ಸರಿನಾ.. ಅಲ್ವೆ ಬಂಗಾರ ನಿನ್ ಬರ್ತಡೆಗೆ ಏನ್ ಗಿಫ್ಟ್ ಕೊಡೋದು ಅಂತ ರಾತ್ರಿಯಿಡೀ ಯೋಚಿಸಿ ಬೆಳೆಗ್ಗೆ ಎದ್ದು ಅನಾಥಾಶ್ರಮಕ್ಕೆ ಹೋಗಿ ನಿನ್ ಹೆಸರಲ್ಲಿ ಒಂದು ಮಗೂನ ದತ್ತು ತಗೊಂಡೆ. ಇಡೀ ಆಶ್ರಮವನ್ನೆ ತಗೊಳೊ ಮನಸು, but ಏನ್ ಮಾಡ್ಲಿ ನಿನ್ ಭಾವಿ ಗಂಡ ದುಡಿಯೋದು ಜೇಬಿನ ತುಂಬಾನೆ ಹೊರತು ಬ್ಯಾಗಿನ ತುಂಬಾ ಅಲ್ವಲ್ಲ. ಚಿಂತೆ ಮಾಡ್ಬೇಡ ಇನ್ ಹತ್ತು ವರ್ಷ ಕಾಯಿ ಅಮ್ಮನ ಹೆಸರಲ್ಲಿ ಒಂದು ಆಶ್ರಮ ಕಟ್ತೇನೆ ಅದರ ಎಲ್ಲ ಮಕ್ಕಳಿಗೂ ನೀನೆ ಅಮ್ಮ. ಅದ್ಬಿಡು ಈ ದತ್ತು ತಗೊಳೋಕ್ ಹೋದಾಗ ಅಲ್ಲಿ ನಿನ್ ಥರಾನೆ ನಗೊ ಒಬ್ಬ ಮುದ್ದು ಹುಡುಗಿ ಸಿಕ್ಳು ಅವಳ ಇಡೀ ವರ್ಷದ ಸ್ಕೂಲ್ ಫೀಸು, ಊಟದ ಖರ್ಚು, ಬಟ್ಟೆಬರೆ ಎಲ್ಲದಕ್ಕೂ ಸೇರಿ ಹಣ ಕೊಟ್ಟು , ಅವಳಿಗೆ ನಾನು ನಿನ್ ಅಪ್ಪ ಕಣೊ ಅಮ್ಮನ ಬರ್ತಡೇಗೆ ವಿಶ್ ಮಾಡು ಅಂತ ವಿಶ್ ಮಾಡಿಸಿ ಅದನ್ನ ವಿಶ್ ಮಾಡಿಸಿ ನಿನಗೆ ತೋರ್ಸೋಕೆ ವಿಡಿಯೋ ಮಾಡಿಕೊಳ್ತಿದ್ದೆ. ಆಗ ನಿನ್ನ ಮೂರು ಮಿಸ್ಡ್ ಕಾಲ್ಸ್ ಬಂದಿದೆ. ತಿರುಗಿ ಕಾಲ್ ಮಾಡಿದ್ರೆ ಅಮ್ಮಾವ್ರಿಗೆ ಕೋಪ. ಈಗ ಹೇಳು ನಾನ್ ಮಾಡಿದ್ದು ತಪ್ಪಾ..?
ನಂಗೊತ್ತುಕಣೆ ನಿನಗೆ ನನ್ನ ಬಿಟ್ಟಿರೋಕಾಗಲ್ಲ ಅದಕ್ಕೆ ನಾನು ಅರ್ಧಗಂಟೆ ಮಾತಡದೆ ಇದ್ರು ಒದ್ದಾಡ್ತಿಯ, ಮೂರು ಮಿಸ್ಡ್ ಕಾಲ್ ಇದೆ, ನೋಡಿದ್ರೆ ಆರುಬಾರಿ ಕಾಲ್ ಮಾಡಿದಿನಿ ಅಂತ ಸುಳ್ಳು ಹೇಳ್ತಿಯ. ಅದ್ಯಾಕೆ ನಿನಗೆ ನಾನ್ ಹಾಕಿಸೋ ಯಾವ ಕಾಲರ್ ಟ್ಯೂನ್ ಕೂಡ ಇಷ್ಟ ಆಗಲ್ಲ, ಯಾವ್ದನ್ನೆ ಹಾಕಿದ್ರು ಬಯ್ತಿಯ. ಹೀಗೆ ಆಡ್ತಿರು ಅದೇ ಹಳೇ ಟ್ರೀಣ್ ಟ್ರಿಣ್ ಕೇಳೋತರ ಮಾಡ್ತಿನಿ. ಏನೊ ನನ್ ಹುಡುಗಿಗೆ ಮ್ಯೂಸಿಕ್ ಇಷ್ಟ ಅಂತ ಹಾಗ್ ಹಾಕ್ಸಿದೆ ತಪ್ಪಾ,,?
ಏನಾದ್ರು ಒಂದ್ ಕ್ಯಾತೆ ತೆಗೆದು ನನ್ನ ಬಯ್ಲಿಲ್ಲ ಅಂದ್ರೆ ನಿನಗೆ ಊಟ ಸೇರಲ್ಲ ಅಂತ ಗೊತ್ತು, ಹೀಗೆ ಬಯ್ತಿರು ಪ್ರಾಣಿದಯಾ ಸಂಘಕ್ಕೆ ಕಂಪ್ಲೆಂಟ್ ಕೊಡ್ತಿನಿ. ವೆಜಿಟೇರಿಯನ್ ಆಗಿನೇ ಈ ಮಟ್ಟಕ್ಕೆ ನನ್ ತಲೆ ತಿನ್ನೊ ನೀನು ನಾನ್ ವೆಜಿಟೇರಿಯನ್ ಆಗಿದ್ರೆ ನನ್ನ ಹಂಗಂಗೆ ನುಂಗಿ ಬಿಡ್ತಿದ್ಯೇನೊ. ನೀನ್ ಯಾವ ಸೀಮೆ ವೆಜಿಟೇರಿಯನ್ ನಾನೂ ವೆಜಿಟೇರಿಯನ್ ಆಗಿರೋದಕ್ಕೆ ನಿನ್ ತಲೆ ತಿನ್ನದೆ ಸುಮ್ನಿರ್ತೀನಿ ನೋಡಿ ಕಲಿ ಹೀಗಿರ್ಬೇಕು ಸಸ್ಯಾಹಾರಿಗಳು. ನನ್ ಬೊಂಬೆ ಎಷ್ಟೇ ಕೋಪ ಮಾಡ್ಕೊಂಡ್ರು ನಾನ್ sorry ಕೇಳೋಕೆ ಮಧ್ಯರಾತ್ರಿನೆ ಕಾಲ್ ಮಾಡ್ತಿನಿ ಯಾಕೆ ಗೊತ್ತಾ ಅವಾಗಾದ್ರೆ ನೀನ್ ಮನೆಲಿರ್ತಿಯ ಬಯ್ಯಲ್ಲ ಅನ್ನೋ ಧೈರ್ಯ. ನೀನ್ ಮಾತಾಡದೆ ಇದ್ರೂ ನನ್ ಮಾತು ಕೇಳೋಕೆ ಕಾಲ್ ರಿಸೀವ್ ಮಾಡೇ ಮಾಡ್ತಿಯ ಅನ್ನೊ ನಂಬಿಕೆ ಕಣೊ.
ಮಾತಿಗೊಂದ್ಸಲ ನನ್ನ ಸೆಕೆಂಡ್ ಹ್ಯಾಂಡ್ ಹುಡುಗ ಅಂತ ಚುಡಾಯ್ಸೋದೆ ಆಯ್ತು. ನಿಂಗೊತ್ತ ಲವ್ ಫೇಲ್ವರ್ ಹುಡುಗ್ರು ಯಾವತ್ತು ಪ್ರೀತ್ಸಿದ್ ಹುಡುಗಿ ಮನಸಿಗೆ ನೋವು ಮಾಡಲ್ಲ ಕಣೊ. ಅಷ್ಟಕ್ಕೂ ಅವಳೆ ನನ್ ಹಿಂದೆ ಬಿದ್ದಿದ್ದು ನಾನಲ್ಲ. ಕೊನೆಗೆ ಎರಡು ವರ್ಷ ರಿಜೆಕ್ಟ್ ಮಾಡ್ತಾನೆ ಬಂದೆ. ಅದೊಂದಿನ ಅವಳ ಪ್ರೀತಿಗೆ ಮನಸು ಕರಗದೆ ಇರೋಕಾಗಲಿಲ್ಲ. ಒಪ್ಕೊಂಡೆ ಆದ್ರೆ ಅವತ್ತೆ ವಿಷಯ ಅವರಪ್ಪನಿಗೆ ಗೊತ್ತಾಗಿ ಅವಳನ್ನ ಮೂಡಬುದ್ರೆಯ ಆಳ್ವಾಸ್ ಗೆ ಸೇರಿಸಿದ್ರು. ಇನ್ಮೇಲೆ ಅವಳನ್ನ ಮೀಟ್ ಮಾಡೋ ಪ್ರಯತ್ನ ಮಾಡಿದ್ರೆ ಅವಳಮ್ಮನನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ತೇನೆ ಅಂದ್ರು. ನನ್ ಪ್ರೀತಿಗಾಗಿ ನಾನ್ ಪ್ರೀತಿಸಿದ ಹುಡುಗಿ ಅಪ್ಪ ಅಮ್ಮ ಸಾಯ್ಬೇಕಾ… ಬೇಡ ಅನಿಸ್ತು ಕಣೊ ಅದಕ್ಕೆ ಅಲ್ಲಿಂದ ದೂರ ಬಂದೆ. ಅದಾದ ಒಂದೇ ವರ್ಷದಲ್ಲಿ ಗೊತ್ತಾಯ್ತು ಆಕ್ಸಿಡೆಂಟ್ ಒಂದರಲ್ಲಿ ಆ ದೇವರು ಅವಳನ್ನ ಕರ್ಕೊಂಡ್ ಬಿಟ್ಟ ಅಂತ. ಮೂರು ವರ್ಷದ ನಂತರ ನೀನ್ ಸಿಕ್ಕೆ. ಫಸ್ಟ್ ಟೈಮ್ ನನಗೆ ಹೊಟ್ಟೆಲಿ ಚಿಟ್ಟೆ ಬಿಟ್ಟ ಹಾಗಾಯ್ತು. ಅಮ್ಮನ ವಾರಸುದಾರಿಣಿ ನೀನೆ ಅನಿಸ್ತು. ನೀನ್ ಸಿಕ್ಕ ಮೇಲೆ ನನಗೆ ಜಗತ್ತು ಪ್ರತಿದಿನ ಹೊಸದಾಗಿ ಕಾಣ್ಸತ್ತೆ ಕಣೊ. ನಾನು ನಿನಗಿಂತ ನಿನ್ ಅಪ್ಪ ಅಮ್ಮನ್ನ ಜಾಸ್ತಿ ಪ್ರೀತಿ ಮಾಡ್ತಿನಿ. ಅವರಿಗೆ ನೋವಾದ್ರೆ ನಿನಗೂ ನೋವಾಗುತ್ತೆ ಅನ್ನೊ ಸತ್ಯ ಗೊತ್ತು. ಈಗ ಹೇಳು ಈ ಸೆಕೆಂಡ್ ಹ್ಯಾಂಡ್ ಹುಡುಗ ಬೆಸ್ಟ್ ಅಲ್ವಾ..
ನನ್ ಮೇಲೆ ಕೋಪ ಬಂದ್ರೆ ನಾನ್ ಕೊಡಿಸಿರೋ ಟೆಡ್ಡಿಬೇರ್ ಗೆ ನಾಲಕ್ ಏಟು ಹೆಚ್ಚಾಗೆ ಕೊಡ್ತಿಯ ಅಂತ ಗೊತ್ತು. ಹೊಡಿ ನನಗೇನು ಬೇಜಾರಿಲ್ಲ. ಅವನ ಮೇಲೆ ನನಗೂ ಹೊಟ್ಟೆಕಿಚ್ಚಿದೆ. ನನ್ ಹೊಟ್ಟೆ ಉರ್ಸೋಕೆ ಅಂತ ಅದೆಷ್ಟುದಿನ ನೀನ್ ಅವನನ್ನ ಹಿಡಿದು ಮುದ್ದಾಡಿಲ್ಲ, ಈಗ ಹೊಡಿ ಅವನಿಗೆ ಬುದ್ದಿ ಬರಲಿ.
ನಂಗೊತ್ತು ನೀನು ಇಷ್ಟರಲ್ಲಿ ಕೋಪ ತಣ್ಣಗಾಗಿ ನೂರಾ ಒಂದು ಬಾರಿ ನಿನ್ ಮೊಬೈಲ್ ನೋಡಿರ್ತಿಯ ಅಂತ. ಕಾಲ್ ಮಾಡೋಕೆ ಮೇಡಮ್ಮವರಿಗೆ ಸ್ವಾಭಿಮಾನ ಅಡ್ಡ ಬರುತ್ತೆ. ರಾತ್ರಿ ನಾನ್ ಕಾಲ್ ಮಾಡೇ ಮಾಡ್ತೇನೆ ಅಂತ ನಿಂಗೊತ್ತು. ಅದಕ್ಕೆ ಬೇಜಾನ್ ಬಿಲ್ಡಪ್ ಕೊಡ್ತಿದಿಯ. ಇರಲಿ ಬಿಡು ನಾನೆ ಸೋಲ್ತೇನೆ. ನಿನ್ ಮುಂದೆ ಸೋಲೋದ್ರಲ್ಲಿ ನನಗೊಂಥರಾ ಧನ್ಯತಾ ಭಾವ ಕಣೆ. ಅಂದಹಾಗೆ ಈ ಗ್ಯಾಪಲ್ಲಿ ಹೊಸದಾಗಿ ಎರಡು ಪದ್ಯ ಬರ್ದಿದಿನಿ. ನನ್ ಕವಿತೆ ಅಂದ್ರೆ ನಿನಗೆಷ್ಟು ಇಷ್ಟ ಅಂತ ಗೊತ್ತು ಸರಿರಾತ್ರಿ ಕಾಲ್ ಮಾಡಿದಾಗ ಒಂದನ್ನ ಫೋನಲ್ಲಿ ಓದಿ ಹೇಳ್ತೇನೆ. ಮತ್ತೊಂದನ್ನ ಫೋನಿಡುವ ಕೊನೆಯಲ್ಲಿ ಫೋನಿಗೆ ಕೊಡ್ತೇನೆ ಇಸ್ಕೊ.
ಒಂದ್ ವಿಷಯ ತಿಳ್ಕೊ ನೀನ್ ಹಿಂಗೆಲ್ಲ ಮುದ್ ಮದ್ದಾಗಿ ಪೆದ್ ಪದ್ದಾಗಿ ಆಡೋದಕ್ಕೆ ನೀನಂದ್ರೆ ನನಗೆ ಸಾಯೊವಷ್ಟ್ ಇಷ್ಟ ಕಣೆ.
Bye ಪುಟ್ಟಕ್ಕ
-ಇಂತಿ ಎಂದೆಂದಿಗೂ ನಿನ್ನವನು
ಭಾವ ಭೈರಾಗಿ
ಕವಿತೆ | ಅವಳು

- ವಾಯ್.ಜೆ.ಮಹಿಬೂಬ
ಅವಳು ಬರೀ ಅವಳಲ್ಲ..!
ದಿನ ಬೆಳಗುವ ಬೆಳಕು-!
ಅವ ಬಯಸುವ ಬದುಕು
ಅವನಿಯೊಳಗಣ ಜನನಿ
ಭಾವದೊಳಗಿನ ಬಾಗಿನ
ಭಾನಿನಗಲದ ಭಕ್ತಿ..!
ಅವನ ಬಯಕೆಯ ಶಕ್ತಿ ..!
ಅವಳು ಬರೀ ಅವಳಲ್ಲ..!
ಬಾಳಿಗಂಟಿದ ಸಮತೆ
ಹಿತವನುಣಿಸುವ ಭಕ್ತೆ
ಮಿತವ ಬಯಸುವ ಶಾಂತೆ
ಅವನು ಆರಾದಿಸುವ ದಾತೆ
ಒಲವ ಉಳಿಸುವ ಕ್ಷಮತೆ
ಬಾಳ ದಂಡೆಯ ದೃಡತೆ..!
ಅವಳು ಬರೀ ಅವಳಲ್ಲ..!
ಕೋಪಗೊಳ್ಳುವ ಕೆಂಡ
ಎಲ್ಲಾ ತಿಳಿಯುವ ಹಂಡ
ಹಠವೂ ಮಾಡುವ ದಿಂಬ
ಕಾಡಿ ಕರೆಯುವ ಬೀಗು
ಮಾವಿನೊಳಗಿನ ಮಾಗು
ಚಂದನದ ಚೆಲುವು..!
ಅವಳು ಬರೀ ಅವಳಲ್ಲ
ಬರಹದೊಳಗಿನ ಭಾವ
ದೇವರೊಳಗಿನ ತ್ಯಾಗ
ನಿತ್ಯ ಬದುಕಿಸುವ ಆಸೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಭಾವ ಭೈರಾಗಿ
ಕರುಣಾಳು ಅವನು, ಅವನು ನನ್ನವನು..!

- ಸಿಂಚನ ಜಿ. ಏನ್, ಮೈಸೂರು
ಯಾರಿಟ್ಟ ಪ್ರೀತಿಯೋ, ಏನು ಇದರ ರೀತಿಯೋ ಎಂಬ ಮಾತಿನಂತೆ ಪ್ರೀತಿಯ ರೀತಿ -ನೀತಿಗಳ ತಿಳಿಯಲು ಇಡೀ ಬದುಕು ಸಾಲುವುದಿಲ್ಲ. ಆದರೂ ನನ್ನ ಮನದಲ್ಲಿ ಮಿಂಚಿದ ಪ್ರೇಮದ ಮಿಂಚೆ ಒಂದು ರೀತಿಯ ರೋಮಾಂಚನಕಾರಿ ಮೊದ ಮೊದಲಿಗೆ ” ಕ್ರಶ್ ” ಎಂದು ನಾಮಕರಣಗೊಂಡಿದ್ದು ತದ ನಂತರ ಆ ಕ್ರಶ್ ನಾ ಅಲ್ಲಿಗೆ ಬಿಡಲಾರದೆ ಮುಂದಿನ ಪೀಠಿಕೆ ಹಾಕಿ ನನ್ನ ಮನಸ್ಸು ಮುಂದೆ ಓಡುತಿತ್ತು.
ಹೂ ಮನಸ್ಸಿನಲ್ಲಿ ಪ್ರೇಮದ ಅರಮನೆಯ ಕಟ್ಟುವ ಛಲ ನನ್ನದು ಹೀಗಿರುವಾಗ ಸುಮ್ಮನೆ ಇರಲು ಮನಸ್ಸು ಬಿಡಬೇಕಲ್ಲ ಮನಸ್ಸು ನನ್ನನ್ನು ಮೋಸಗಾತಿಯಾಗಿ ಕಾಡುವುದಿಲ್ಲವೇ? ಅಷ್ಟಕ್ಕೂ ಅವನು ನನ್ನವನು ಪ್ರೀತಿ ಮಾಡಿದರು , ಪ್ರೀತಿ ಕೊಟ್ಟರು, ಪ್ರೀತಿ ಬಯಸಿದರು ಅದಕೆಲ್ಲ ಪ್ರತಿಧ್ವನಿ ಬರುತ್ತೆ ಯಾಕೆಂದರೆ ಅವನು ನನ್ನವನು.
ಕಣ್ಣು ತೆರೆದು ಅವನನ್ನು ಕಣ್ಣು ತುಂಬಿಸಿಕೊಳ್ಳುವ ಮುನ್ನವೇ ಮನದೊಳಗೆ ಮನೆ ಮಾಡಿದ ಅವನು ನನ್ನವನು, ಪ್ರೇಮ ಲೋಕವೇ ಹಾಗೆ ಕಲ್ಪನೆಯಲ್ಲಿಯೇ ಅರ್ಧ ಜೀವನ ಕಳೆದು ಬಿಡುತ್ತೆ . ಕಲ್ಪನೆಯ ಲೋಕಕ್ಕಿಂತ ನೈಜ್ಯವಾಗಿಯೇ ನನ್ನನು ಕಾಡಿಸಿ , ಪೀಡಿಸಿ ಪ್ರೀತಿ ಕೊಟ್ಟವನು ಅವನು ನನ್ನವನು, ನನ್ನೆಲ್ಲಾ ಪುಟ್ಟ ಆಸೆ ಈಡೇರಿಸುವ ಅವನು ನನಗೆ ಉತ್ತಮ ಗೆಳೆಯನಾದ.
ನನ್ನ ತುಂಟಾಟ ಸಹಿಸುವಾಗ ತಂದೆಯಾಗಿ ಸಲಹಿದ, ಅವನೆಲ್ಲ ಕಷ್ಟಗಳನ್ನು ಕೇಳುವ ನನ್ನೊಳಗೆ ಒಬ್ಬ ಅಮ್ಮ ಇರುತ್ತಿದ್ದಳು, ಅವನೆಲ್ಲ ದುಃಖಗಳಿಗೆ ಸ್ಪಂದಿಸುವಾಗ ಅವನಿಗೆ ಇಷ್ಟ ಆಗುವ ಗೆಳತಿ ನನ್ನೊಳಗೆ ಇರುತ್ತಿದ್ದಳು ಪ್ರೇಮ ಲೋಕದ ಪಾರಿವಾಳಗಳು ನಾವು , ನಿರ್ಭಯವಾಗಿದೆ ನಮ್ಮ ಲೋಕವು ಅವನು ನನ್ನವನು , ಅವನ ಹಠಕ್ಕೆ ಅವನ ಕೋಪಕ್ಕೆ ನಾನೇ ದೊಡ್ಡ ಅಭಿಮಾನಿ.
ಅವನಂತೆ ನನಗೂ ಮುನಿಸು ಕೂಡಲೇ ನನ್ನ ಮುದ್ದು ಮಗುವಾಗಿ ಬೇಡುತ್ತಿದ್ದನು . ಕಾಳಜಿ ತೋರ್ಪಡಿಸದೆ ಮುಚ್ಚಿಡುತ್ತಿದ್ದನ್ನು ಮನದಲ್ಲಿ, ಹುಡುಕಿಸುವ ಗುಂಗಿನಲ್ಲೆ ಕಾಡಿಸುತ್ತಿದ್ದನ್ನು ಅವನು ಏನೆ ಆಗಲಿ ಅವನು ನನ್ನವನು , ನನಗಾಗಿ ಬಂದವನು , ನನಗಾಗಿಯೆ ಬದುಕುವನು ಮೌನವಾಗಿಯೇ ಕಣ್ಣ ಸನ್ನೆಯಲ್ಲಿ ನನ್ನ ಮುದ್ದಾಡಿ ಮುತ್ತು ಇಡುವವನು.
ಪ್ರೇಮ ಲೋಕದ ಬಣ್ಣ ಬಣ್ಣದ ಬದುಕು ಹೇಳಿಕೊಟ್ಟವನು ನನ್ನ ಪ್ರತಿ ಪದಗಳ ಸ್ಫೂರ್ತಿದಾರನು ಅವನು ನನ್ನವನು ಗುಡ್ ಮಾರ್ನಿಂಗ್ ಸಂದೇಶದಿಂದ ಶುರುವಾಗಿ ಹುಷಾರು ಎಂಬ ಜೋಪಾನದ ತವಕದಲ್ಲಿ ನಿದ್ರೆಗೆ ಕಳುಹಿಸುತ್ತಿದ್ದನು ದಿನಕ್ಕೆರಡು ಬಾರಿ ಆದರೂ, ಕೆರಳಿಸಿ ಜಗಳ ಮಾಡುತ್ತಿದ್ದವನು ಒಂದೆರಡು ಮಾತುಗಳ ಕೆಟ್ಟದಾಗಿ ಆಡದೆ, ಮನ ನೋಯಿಸದೆ ಜೀವನವ ಸಂತೈಸುತ್ತ ನನ್ನೊಂದಿಗೆ ಹೆಜ್ಜೆ ಇಟ್ಟವನು ಅವನು ನನ್ನವನು.
ನನ್ನ ಪ್ರಪಂಚವೇ ಅವನು , ನಮ್ಮ ಲೋಕವೇ ಪುಣ್ಯದ ಪ್ರೇಮ ಲೋಕ , ವಿರಸ ಸರಸಗಳ ಸಮ್ಮಿಲನವೇ ನಮ್ಮ ನೂತನ ಶೈಲಿಯ ಪ್ರೀತಿ ಲವ್ ಯು ಎಂಬ ಪದದ ತಿದ್ದುಪಡಿ ನಮ್ಮಲಿಲ್ಲ ಈ ಪದವನ್ನು ಅರ್ಥೈಸುವ ಬಂಧನ ನಮ್ಮದು .
ಐ ವಾಂಟ್ ಯು ಎಂದು ಬೇಡುವುದಿಲ್ಲ ಬೇಕಾಗಿರುವ ಜೀವನ ಜೀವ ಇಬ್ಬರಿಗೂ ದೊರಕಿವೆ ನನ್ನ ಅದೆಷ್ಟೋ ಪತ್ರಗಳ ಮೀರಿ ಮೆರೆದ ಪದಗಳು ಇವು ಕಾರಣ ಅವನು ನನ್ನವನು.
ಬೈ ಸಿಂಪಲ್ ಸಿಂಚು ಹೂ ಮನಸಿಗರಿಗೆಲ್ಲ ಪ್ರೇಮಿಗಳ ದಿನದ ಶುಭಾಶಯಗಳು ನಿಮ್ಮ ಪ್ರೇಮ ಪಲ್ಲಕ್ಕಿಯಿಂದ ಬಿಡಿಸಿಕೊಂಡು ಪಕ್ಷಿಗಳು ಆದಷ್ಟು ಬೇಗ ಆಕಾಶದಲ್ಲಿ ಹಾರಾಡಿ ಎಂದು ಹಾರೈಸುವೆ… ಶುಭವಾಗಲಿ ಸ್ನೇಹಿತರೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಭಾವ ಭೈರಾಗಿ
ಕವಿತೆ | ಪ್ರೀತಿ ಇಲ್ಲದ ಮೇಲೆ

- ಜಿ.ಎಸ್. ಶಿವರುದ್ರಪ್ಪ
ಪ್ರೀತಿ ಇಲ್ಲದ ಮೇಲೆ –
ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?
ಪ್ರೀತಿ ಇಲ್ಲದ ಮೇಲೆ –
ಮಾತಿಗೆ ಮಾತು ಕೂಡೀತು ಹೇಗೆ?
ಅರ್ಥ ಹುಟ್ಟೀತು ಹೇಗೆ?
ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ
ಪದ್ಯವಾದೀತು ಹೇಗೆ?
ಪ್ರೀತಿ ಇಲ್ಲದ ಮೇಲೆ –
ದಕ್ಷಿಣಾಫ್ರಿಕದ ಕಗ್ಗತ್ತಲಿಗೆ
ಬೆಳಕು ಮೂಡೀತು ಹೇಗೆ?
ಸೆರೆಮನೆಯ ಕಂಬಿಯ ನಡುವೆ
ಕಮರುವ ಕನಸು ಕೊನರೀತು ಹೇಗೆ?
ಬಿಳಿ ಜನರ ಕರಾಳ ಕಪ್ಪು ಹೃದಯಕ್ಕೆ
ಕ್ರಿಸ್ತನ ಕರುಣೆ ಅರ್ಥವಾದೀತು ಹೇಗೆ?
ಪ್ರೀತಿ ಇಲ್ಲದ ಮೇಲೆ –
ಸಂಶಯದ ಗಡಿಗಳುದ್ದಕ್ಕು
ಸಿಡಿಗುಂಡುಗಳ ಕದನ ನಿಂತೀತು ಹೇಗೆ?
ಜಾತಿ-ಮತ-ಭಾಷೆ-ಬಣ್ಣಗಳ ಗೋಡೆಯ ನಡುವೆ
ನರಳುವ ಪಾಡು ತಪ್ಪೀತು ಹೇಗೆ?
ನಮ್ಮ ನಿಮ್ಮ ಮನಸ್ಸು
ಮರುಭೂಮಿಯಾಗದ ಹಾಗೆ
ತಡೆಗಟ್ಟುವುದು ಹೇಗೆ?
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ಅಂತರಂಗ5 days ago
‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’..!
-
ದಿನದ ಸುದ್ದಿ5 days ago
ಬಡವರನ್ನು ಸಬಲೀಕರಣಗೊಳಿಸಲು ಉಚಿತ ಅನಿಲ ಸಂಪರ್ಕ ನೀಡಿದ್ದೇವೆ : ಪ್ರಧಾನಿ ಮೋದಿ
-
ಭಾವ ಭೈರಾಗಿ5 days ago
ಕರುಣಾಳು ಅವನು, ಅವನು ನನ್ನವನು..!
-
ದಿನದ ಸುದ್ದಿ4 days ago
ದಿಶಾ ಕೇಸ್ | ನನ್ನ ಆತ್ಮಸಾಕ್ಷಿಯನ್ನು ದಾಖಲೆ ಸಹಿತ ಒಪ್ಪಿಸಿ..! ಮೂರು ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದ ನ್ಯಾಯಾಧೀಶರು..!
-
ಅಂತರಂಗ7 days ago
ಸ್ಫೂರ್ತಿ ಚೇತನ ; ಈ ಗುರುಚೇತನ ಡಾ. ಜಿ ಎಂ ಗಣೇಶ್
-
ಲೈಫ್ ಸ್ಟೈಲ್4 days ago
ಮೂತ್ರದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತೆ ಈ ಸೀಮೆ ಬದನೆಕಾಯಿ..!
-
ಕ್ರೀಡೆ4 days ago
ಭಾರತ ಟಿ20ಐ ಪಂದ್ಯಾವಳಿಗೆ ತಂಡ ಪ್ರಕಟಿಸಿದ ಬಿಸಿಸಿಐ
-
ಲೈಫ್ ಸ್ಟೈಲ್4 days ago
ರೆಸಿಪಿ | ಮನೇಲೇ ಮಾಡಿ ಜಿಲೇಬಿ