Connect with us

ದಿನದ ಸುದ್ದಿ

ಕುರಿ ಸಾಕಾಣಿಕೆಯಲ್ಲಿ ರೈತರ ಕಷ್ಟಗಳು

Published

on

  • ಆಶಾ ಸಿದ್ದಲಿಂಗಯ್ಯ

ಕುರಿಗಾರರು ತಮ್ಮ ಕುರಿ ಹಿಂಡನ್ನು ಮೇಯಿಸಲು ಸಾಮಾನ್ಯವಾಗಿ ಬೆಟ್ಟ ಗುಡ್ಡ ಪ್ರದೇಶಗಳು, ಕಾಡುಗಳು, ಕೆರೆ ಮೈದಾನಗಳನ್ನು ಅವಲಂಬಿಸಿರುತ್ತಾರೆ. ಬೆಳೆ ಕಟಾವು ಮಾಡಿದ ನಂತರ ಖುಷ್ಕಿ ಜಮೀನುಗಳಲ್ಲಿ ಮೇಯಿಸುವುದು ಬಹಳ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ.

ಏಕೆಂದರೆ ಇವುಗಳನ್ನು ಕಟ್ಟಿ ಮೇಯಿಸುವುದಾಗಲಿ ಹಟ್ಟಿಗಳಲ್ಲಿ ಕೂಡಿ ಮೇಯಿಸುವುದಾಗಲಿ ಸಾಧ್ಯವಾಗುವುದಿಲ್ಲ. ಮಳೆಗಾಲದಲ್ಲಿ ಅಂದರೆ ಜೂನ್ ತಿಂಗಳಿಂದ ಸೆಪ್ಟೆಂಬರ‍್ವರೆಗೆ ಬೆಟ್ಟ ಗುಡ್ಡಗಳಲ್ಲಿ ಹಸಿರು ಹುಲ್ಲು ದೊರೆಯುವುದರಿಂದ ನಂತರ ಖುಷ್ಕಿ ಜಮೀನುಗಳಲ್ಲಿ ಪೈರುಗಳ ಉಳಿಕೆಗಳನ್ನು ಹಾಗೂ ಹೀಗೂ ಡಿಸೆಂಬರ್ ತಿಂಗಳವರೆಗೂ ಮೇಯಿಸಲು ಸಾಧ್ಯವಾಗಬಹುದು.

ಕುರಿಗಾರನ ನಿಜವಾದ ಕಷ್ಟದ ದಿನಗಳು ಜನವರಿಯಿಂದ ಪ್ರಾರಂಭವಾಗಿ ಮೇ ತಿಂಗಳವರೆಗೆ ಮುಂದುವರೆದು ಕುರಿಗಳ ಹೊಟ್ಟೆ ತುಂಬಿಸುವುದಕ್ಕಾಗಿ ಪಡಬಾರದ ಕಷ್ಟ ಪಡಬೇಕಾಗುತ್ತದೆ. ಇಂತಹ ದಿನಗಳಲ್ಲೇ ಕುರಿಗಾರರು ತಮ್ಮ ಹಿಂಡಿನೊಂದಿಗೆ ಜಿಲ್ಲೆಯಿಂದ ಜಿಲ್ಲೆಗೆ ವಲಸೆ ಹೋಗುತ್ತಾರೆ.

ಮಾರ್ಗಗಳ ಬದಿಯ ಮೇವಿನ ಮರಗಳ ಟೊಂಗೆಗಳನ್ನು ಕಡಿದು ಹಾಕಿ ಅವುಗಳನ್ನು ಬರಡುಗೊಳೆಸುತ್ತಾರೆ. ಮಲೆನಾಡಿನ ಕಾಡುಗಳಿಗೆ ಲಗ್ಗೆ ಇಡುತ್ತಾರೆ ಇಂತಹ ಸಂದರ್ಭಗಳಲ್ಲೇ ಕುರಿಗಳು ಕುಡಿಯಲು ಸಾಕಷ್ಟು ಮತ್ತು ಯೋಗ್ಯವಾದ ನೀರಿನ ಕೊರತೆಯಿಂದಾಗಿ ಜಂತು ಹುಳುವಿನ ಬಾಧೆ ಮತ್ತು ರೋಗ ರುಜಿನಗಳಿಗೆ ತುತ್ತಾಗುತ್ತವೆ.

ನೂರಾರು ವರ್ಷಗಳಿಂದ ಕುರಿಗಳು ಗೋಮಾಳಗಳಲ್ಲಿ, ಗುಡ್ಡ, ಬೆಟ್ಟ ಮತ್ತು ಅರಣ್ಯ ಪ್ರದೇಶಗಳಲ್ಲಿ ನಿರಂತರವಾಗಿ ಮೇದು ಅವುಗಳಲ್ಲಿ ಉಪಯುಕ್ತವಾದ ಮೇವಿನ ಮರಗಳು, ಹಸಿರು ಹುಲ್ಲಿನ ತಳಿಗಳು ಉಳಿಯದೆ ಭೂಮಿಯು ಬರಡಾಗಿ ಬರೀ ಮುಳ್ಳು ಕಂಟಿಗಳಿಂದಲೂ ಜಾನುವಾರುಗಳಿಗೆ ಉಪಯುಕ್ತವಲ್ಲದ ಸಸ್ಯಗಳಿಂದಲೂ ತುಂಬಿರುವುದಲ್ಲದೆ ಮಣ್ಣಿನ ಕೊರತಕ್ಕೆ ಎಡೆಕೊಟ್ಟು ಭೂಮಿಯ ಸಾರವು ನಿಸ್ಸಾರವಾಗುತ್ತಿದೆ.

ಇದರ ಜೊತೆಗೆ ಮಳೆಯು ಕಡಿಮೆ ಆಗುತ್ತಿದ್ದು, ಹಸಿರು ಹುಲ್ಲಿನ ಮತ್ತು ಗಿಡಮರಗಳ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ಇಂತಹ ಪ್ರದೇಶಗಳನ್ನು ಗುರುತಿಸಿ ಅಭಿವೃದ್ಧಿ ಪಡೆಸುವುದು ಸರ್ಕಾರದ ಹಾಗೂ ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ.

ಇತ್ತೀಚೆಗೆ ಸರ್ಕಾರ ಹಮ್ಮಿಕೊಂಡಿರುವ ಜಲಾನಯನ ಪ್ರದೇಶ ಅಭಿವೃದ್ಧಿ ಅಡಿಯಲ್ಲಿ ಕೆಲವು ಪ್ರದೇಶಗಳು ಅಭಿವೃದ್ಧಿಗೊಂಡಿದ್ದರೂ ಈ ದಿಸೆಯಲ್ಲಿ ಇನ್ನೂ ಬಹಳಷ್ಟು ಕೆಲಸವಾಗಬೇಕಿದೆ. ಸಂರಕ್ಷಿತ ಅರಣ್ಯ ಪ್ರದೇಶಗಳು ಸಾಮಾಜಿಕ ಅರಣ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಸ್ಥಳಗಳಲ್ಲಿ ಜಾನುವಾರು, ಕುರಿ, ಮೇಕೆಗಳನ್ನು ಮೇಯಿಸುಲು ಬಿಡುವುದಿಲ್ಲ. ಜಾನುವಾರುಗಳನ್ನು ಕಟ್ಟಿ ಮೇಯಿಸಬಹುದಾದರು ಕುರಿಗಳನ್ನು ಅರಣ್ಯಗಳ ಅಂಚು ಪ್ರದೇಶಗಳಲ್ಲಾದರೂ ಮೇಯಿಸಲು ಅವಕಾಶವಿರಬೇಕು.

ತ್ವರಿತವಾಗಿ ಬೆಳೆಯುವ ಮೇವಿನ ಮರಗಳಾದ ಸುಬಾಬುಲ್, ಬ್ರಿಜ ಬಾಬುಲ್, ಬೋರೆ ಮರ, ಗೊಬ್ಬರದ ಗಿಡ, ಗಾಳಿ ಮರ, ಹಾಲವಾಣ, ಕ್ಯಾಲಿಯೊಂಡ್ರ, ಅಗಸೆ, ಸೇವರಿ, ಸರ್ವೆ, ಹೂವರಸೆ, ನುಗ್ಗೆ, ಹೆಬ್ಬೇವು, ಬಳ್ಳಾರಿ ಜಾಲಿ, ಬೆಂಗಾಲ ಜಾಲಿ ಹಾಗೂ ಲಂಟಾನಾ ಮತ್ತು ಹಿಪ್ಪುನೇರಳೆ ಇತ್ಯಾದಿ ಮರಗಳನ್ನು ಹೊಲಗಳ ಬದುಗಳು, ಕೆರೆಕುಂಟೆಗಳ ಅಕ್ಕಪಕ್ಕ ಪಾಳು ಭೂಮಿಯಲ್ಲಿ ಬೆಳೆಯಬೇಕು, ಈ ಮರಗಳಿಂದ ಎಲೆ ಚಿಗುರನ್ನು ತಂದು ಬಾಡಿಸಿ ಕುರಿಗಳಿಗೆ ಕೊಡಬಹುದು.

ಸರ್ಕಾರದವರು ರೈತರ ಜಮೀನುಗಳಲ್ಲಿ ಒಡ್ಡುಗಳನ್ನು ನಿರ್ಮಿಸುತ್ತಿದ್ದು, ಈ ಒಡ್ಡುಗಳ ಮೇಲೆ ಹಾಗೂ ಬದಿಯಲ್ಲಿ ಹುಲ್ಲು ಹಾಗೂ ಮೇವಿನ ಮರಗಳನ್ನು ನೆಡುವುದರಿಂದ ಭೂಮಿಯ ಕೊರೆತ ತಪ್ಪುವುದಲ್ಲದೆ ಭೂಮಿಯ ಸಾರಜನಕದ ಅಂಶ ಸಹ ಹೆಚ್ಚುವುದು. ಆಹಾರ ಧಾನ್ಯಗಳ ಬೆಳೆಗಳನ್ನು ಕಟಾವು ಮಾಡಿದ ನಂತರ ಪರ್ಯಾಯ ಬೆಳೆಯಾಗಿ ಮೇವಿನ ಬೆಳೆಗಳನ್ನು ಬೆಳೆಯಬಹುದು.

ಸರ್ಕಾರವು ಈಗಾಗಲೇ ಹಮ್ಮಿಕೊಂಡಿರುವಂತೆ ಜಲಾನಯನ ಪ್ರದೇಶ ಅಭಿವೃದ್ಧಿ ಅಡಿಯಲ್ಲಿ ಸುಧಾರಿಸಿದ ಹುಲ್ಲು ಹಾಗೂ ಮೇವಿನ ಮರಗಿಡಗಳನ್ನು ಬೆಳೆಸುವುದು; ಈ ಮರಗಿಡಗಳಿಂದ ಹಸಿರೆಲೆಗಳನ್ನು ತಂದು ಒಣಗಿಸಿ ಹದ ಮಾಡಿ ಕೂಡಿಟ್ಟು ಕೊಂಡು ಮೇವಾಗಿ ಕೊಡುವುದು; ಹುಲ್ಲುಗಾವಲು ಪುನಶ್ಚೇತನ ಹಾಗೂ ವಿಕಾಸಗೊಳಿಸುವ ಯೋಜನೆ, ವೀವು ತಳಿಗಳ ಬೀಜೋತ್ಪತ್ತಿ ಸಂಸ್ಕರಣೆ ಹಾಗೂ ಬೀಜಾಭಿವೃದ್ಧಿ ಯೋಜನೆ, ಮೇವು ನಿಧಿ, ಪೌಂಡರ್ ಮಿನಿಕಿಟ್ ವಿತರಣೆ ಯೋಜನೆ; ಮೇವು ಮರಗಳ ಸಸಿ ಬೆಳೆಸುವಿಕೆ ಸಂರಕ್ಷಣೆ ಹಾಗೂ ವಿತರಣೆ ಯೋಜನೆಗಳನ್ನು ಕ್ರಿಯಾತ್ಮಕಗೊಳಿಸುವುದು.

ಪ್ರಚಲಿತ ವ್ಯವಸ್ಥೆಯಲ್ಲಿ ಹೆಚ್ಚುವರಿ ಕುರಿಗಳನ್ನು ರೈತರು ಸ್ಥಳಕ್ಕೆ ಬಂದು ಕೊಂಡುಕೊಳ್ಳುವ ಕಟುಕ ವ್ಯಾಪಾರಸ್ಥರಿಗೆ ಮಾರುತ್ತಿದ್ದಾರೆ. ಗ್ರಾಮಗಳಿಗೆ ಭೇಟಿ ನೀಡಿ ಕೊಂಡ ಕಟುಕರು ಗ್ರಾಮಸ್ಥರ ಮಾಂಸದ ಬೇಡಿಕೆಯನುಸಾರ ಅಲ್ಲಿಯೇ ಕಟಾವು ಮಾಡಬಹುದು. ಹತ್ತಿರದ ಪಟ್ಟಣಗಳಿಗೆ ಸಾಗಿಸಬಹುದು ಅಥವಾ ಗುತ್ತಿಗೆದಾರರು ದಲ್ಲಾಳಿಗಳಿಗೆ ಮಾರಲೂಬಹುದು.

ಗ್ರಾಹಕರ ಮಧ್ಯೆ 3-4 ದಲ್ಲಾಳಿಗಳಿರುತ್ತಾರೆ. ಕುರಿಗಳ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಸಹ ಕುರಿ ಮತ್ತು ಆಡುಗಳ ಸಂಘಟಿತ, ಸುವ್ಯವಸ್ಥಿತ ಮಾರುಕಟ್ಟೆ ಇಲ್ಲ. ಈ ಪದ್ಧತಿಯಲ್ಲಿ ಉತ್ಪತ್ತಿದಾರರಿಗೂ ಲಾಭವಿಲ್ಲ ಮತ್ತು ಉಪಯೋಗಿಸುವ ಗ್ರಾಹಕರಿಗೆ ಉತ್ತಮ ಮಾಂಸ ಸರಿಯಾದ ಬೆಲೆಗೆ ದೊರಕುತ್ತಿಲ್ಲ. ಹೆಚ್ಚು ಲಾಭಾಂಶ ಮಧ್ಯವರ್ತಿ ದಲ್ಲಾಳಿಗಳಿಗೆ ದಕ್ಕುತ್ತದೆ.

ಕುರಿಗಳನ್ನು ವೈಜ್ಞಾನಿಕವಾಗಿ ತೂಕದ ಮಾಂಸದ ಇಳುವರಿ ಆಧಾರಿತವಲ್ಲದ ಬರೀ ಮೇಲ್ನೋಟದ ಶರೀರ ಪ್ರಮಾಣದ ಕಣ್ಣಳತೆಯ ಮೇಲೆ ಕೊಳ್ಳಲಾಗುತ್ತದೆ. ಮಧ್ಯವರ್ತಿಗಳ ಹಿಡಿತದಿಂದ ಕುರಿ ಮತ್ತು ಆಡುಗಳ ಉತ್ಪಾದಕನನ್ನು ಮುಕ್ತಗೊಳಿಸಿ ಅವರಿಗೆ ನ್ಯಾಯವಾದ ಬೆಲೆ ದಕ್ಕುವಂತೆ ಮಾಡಬೇಕಾದರೆ ಸುವ್ಯವಸ್ಥಿತ ಮಾರುಕಟ್ಟೆಯನ್ನು ಕುರಿ ಉತ್ಪಾದಕರ ಸಂಘಗಳ ಮೂಲಕ ಏರ್ಪಾಡು ಮಾಡಬೇಕಾದ ಅಗತ್ಯವಿದೆ.

ಕುರಿ ಸಾಕಾಣಿಕೆ ಗ್ರಾಮೀಣ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಸಹಕಾರಿ

ಕುರಿ ಮತ್ತು ಕುರಿ ಉತ್ಪನ್ನಗಳು ರಾಜ್ಯದ ಆರ್ಥಿಕ ವಹಿವಾಟಿನಲ್ಲಿ ಬಹುಮುಖ್ಯ ಸ್ಥಾನವನ್ನು ಪಡೆದಿದ್ದು, ರಾಜ್ಯದ ವರಮಾನಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಿದೆ. ಕುರಿಗಳ ಮಾಂಸವು ಉತ್ತಮ ಗುಣಮಟ್ಟದಾಗಿದ್ದು, ದೇಶದ ಬಹು ದೊಡ್ಡ ಮಾಂಸಹಾರಿ ವರ್ಗದ ಆಹಾರದ ಮುಖ್ಯ ಅಂಶವಾಗಿದ್ದು, ಅಪೌಷ್ಟಿಕತೆಯನ್ನು ನಿವಾರಿಸುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದೆ. ಈ ಉಣ್ಣೆಯನ್ನು ಕಂಬಳಿ, ರತ್ನಗಂಬಳಿ, ಉಣ್ಣೆ ಶಾಲು, ಡ್ರಗೇಟ್ ಟೋಪಿ ಮುಂತಾದ ಉಣ್ಣೆ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ.

ಕುರಿಗಳನ್ನು ಚಲಿಸುವ ಬ್ಯಾಂಕುಗಳೆಂದು ಅಥವಾ ನಿಧಿಯೆಂದು ಕರೆಯಲಾಗುತ್ತದೆ. ಏಕೆಂದರೆ, ರೈತ ಬೇಕೆಂದಾಗ ಕುರಿಗಳನ್ನು ಮಾರಿ ತಕ್ಷಣ ಹಣ ಪಡೆಯಬಹುದು. ಆದರೆ ವ್ಯವಸಾಯದಿಂದಾಗಲಿ ಅಥವಾ ತೋಟಗಾರಿಕೆಯಿಂದಾಗಲಿ ಈ ರೇತಿ ದಿಢೀರನೆ ಹಣ ಗಳಿಸಲಾಗುವುದಿಲ್ಲ.

ನಿರುದ್ಯೋಗ ನಿವಾರಣೆ ಹಾಗೂ ರೈತರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸಲು ಕೈಗೊಂಡ ಕಾರ್ಯಕ್ರಮಗಳಲ್ಲಿ ಕುರಿ ಘಟಕ ಸ್ಥಾಪನೆಯೂ ಸಹ ಒಂದು ಇದಕ್ಕೆ ಮುಖ್ಯ ಕಾರಣವೆಂದರೆ ಕಡಿಮೆ ಬಂಡವಾಳವನ್ನು ಬಳಸಿಕೊಂಡು ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸಲು ಮತ್ತು ಲಾಭವನ್ನು ಪಡೆಯಲು ಸಹಾಯವಾಗುವುದು.

ಇದರಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಜನಾಂಗಗಳಲ್ಲೂ ಲಾಭದಾಯಕ ಕುರಿ ಸಾಕಾಣಿಕೆಯ ಮುಖಾಂತರ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು 20 ಕುರಿ ಮತ್ತು ಒಂದು ಟಗರಿನ ಘಟಕ ಹಮ್ಮಿಕೊಳ್ಳಲು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳ ಮುಖಾಂತರ ಸಾಲದ ವ್ಯವಸ್ಥೆಯನ್ನು ಸಹ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಮತ್ತು ಕ್ಷೇತ್ರಾಭಿವೃದ್ಧಿ ಅಧಿಕಾರಿಗಳ ಮೂಲಕ ಮಾಡಲಾಗಿದೆ.

ರಾಜ್ಯ ಸರ್ಕಾರವು ಕುರಿ ಅಭಿವೃದ್ಧಿಗಾಗಿ ಕರ್ನಾಟಕ ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃದ್ಧಿ ಮಂಡಳಿ ಹಮ್ಮಿಕೊಂಡಿರುವ ಆರು ಅಂಶಗಳ ಕಾರ್ಯಕ್ರಮಗಳಲ್ಲಿ ಒಂದಾದ ಕುರಿ ಸಾಕಾಣಿಕೆದಾರರ ಸಹಕಾರ ಸಂಘಗಳ ಸ್ಥಾಪನೆ ಯೋಜನೆಗೆ ಮಂಜೂರಾತಿ ನೀಡಿದೆ ಅದರಂತೆ ಸದರಿ ಕುರಿ ಸಾಕಾಣಿಕೆದಾರರ ಸಹಕಾರ ಸಂಘಗಳನ್ನು ಸ್ಥಾಪಿಸಲು ಸೂಕ್ತ ಕ್ರಮಗಳನ್ನು ಕೈಗೊಳಲು ಆಯಾ ಜಿಲ್ಲೆಗಳ ಸಹಕಾರ ಸಂಘಗಳ ಇಲಾಖೆಯ ಉಪ ನಿಬಂಧಕರಿಗೆ ಹಾಗೂ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರುಗಳನ್ನು ಕೋರಲಾಗಿದೆ.

ಈ ಸಂಘಗಳ ಮುಖ್ಯ ಉದ್ದೇಶ ಕುರಿ ಉಣ್ಣೆಯ ಮಾರುಕಟ್ಟೆಯನ್ನು ವ್ಯವಸ್ಥಿತಗೊಳಿಸುವುದು, ಕುರಿಗಾರರಿಗೆ ತಾಂತ್ರಿಕತೆ ಹಾಗೂ ಆರ್ಥಿಕ ಸವಲತ್ತುಗಳನ್ನು ಒದಗಿಸುವುದು, ಯಾಂತ್ರೀಕೃತ ಉಣ್ಣೆ ಕಟಾವು ಸೌಲಭ್ಯಗಳನ್ನು ಕಲ್ಪಿಸುವುದು.

ರೈತ ನಷ್ಟ ಅನುಭವಿಸಿದಾಗ ಕೈ ಹಿಡಿಯುವುದು ಕುರಿ ಸಾಕಾಣಿಕೆ ಆದರಿಂದ ಸರಕಾರ ಕುರಿ ಸಾಕಾಣಿಕೆಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending