ಅಂತರಂಗ
ಸ್ಮಾರ್ಟ್ ಅಂಡ್ ಬ್ರೈಟ್ ಸಾಹಸ ಕ್ರೀಡಾ ತರಬೇತುದಾರ ಎನ್.ಕೆ. ಕೊಟ್ರೇಶ್
ಬರೆಯುವ ಮುನ್ನ ಒಂದಷ್ಟು
ಒಬ್ಬೊಬ್ಬರದು ಒಂದೊಂದು ಹವ್ಯಾಸ ಈ ಜಗದಲ್ಲಿ. ಹಾಗೆ ರೂಢಿಸಿಕೊಂಡ ಹವ್ಯಾಸಗಳು ಇತರರಿಗೆ ಪ್ರಯೋಜನವಾಗಲಿ ಮತ್ತು ಪ್ರೇರಣಾದಾಯಕವಾಗಲಿ ಎಂದು ಬಯಸುವ – ಯೋಚಿಸುವ ಹವ್ಯಾಸಿಗರ ಸಂಖ್ಯೆಯಂತೂ ವಿರಳವೇ ಸರಿ. ಆದರೆ ತಾನು ರೂಢಿಸಿಕೊಂಡ ಹವ್ಯಾಸ ಪರರ ಬದುಕಿನ ಉನ್ನತ ಕನಸಿಗೆ ಆಸರೆಯಾಗಲಿ. ಅಂತೆಯೇ ಧೈರ್ಯಯುತ – ಸಾಹಸದ ಬದುಕಿಗೂ ಸಹಕಾರಿಯಾಗಲಿ ಎಂಬ ಉದಾತ್ತ ದ್ಯೇಯದೊಂದಿಗೆ ತಮ್ಮ ಸಾಹಸ ಕ್ರೀಡೆಯ ಹವ್ಯಾಸವನ್ನೇ ಸಮಾಜ ಸೇವೆಯಾಗಿ ಸ್ವೀಕರಿಸಿ ಆ ಕ್ಷೇತ್ರದಲ್ಲಿ ಸದ್ದಿಲ್ಲದೆ ಸಾಧನೆ ಮೆರೆಯುತ್ತಿದ್ದಾರೆ ನಮ್ಮ ದಾವಣಗೆರೆಯ ಯುವ ಸಾಹಸ ಕ್ರೀಡಾ ತರಬೇತುದಾರರಾದ ಎನ್.ಕೆ ಕೊಟ್ರೇಶ್ರವರು.
ಒಂದಷ್ಟು ಪರಿಚಯ
ಬಾಲ್ಯದಿಂದಲೂ ಸಾಹಸ ಕ್ರೀಡೆಗಳ ಬಗ್ಗೆ ಅಪಾರ ಒಲವು ಹೊಂದಿದ್ದ ಕೊಟ್ರೇಶ್ ಅವರು, ಸದಾ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡವರು. ಪ್ರಕೃತಿ ವಿಸ್ಮಯಗಳ ಬಗ್ಗೆ ವಿಶೇಷ ಕೌತುಕ ದೃಷ್ಟಿ ಹೊಂದಿರುವ ಅವರದು ಪ್ರಕೃತಿಯೊಡನೆ ಸದಾ ಅವಿನಾಭಾವ ನಂಟು. ತಮ್ಮ ಸಹಜ ಕುತೂಹಲಕ್ಕೆ ಜ್ಞಾನ – ವಿಜ್ಞಾನಗಳ ಬೆಸೆದು ಪರಿಪಕ್ವತೆ ತಂದುಕೊಳ್ಳುವ ಅವರದು ಜಾಣ್ಮೆಯ ನಡೆ. ಏಕೆಂದರೆ ಸಾಹಸ ಕ್ರೀಡೆಗಳಲ್ಲಿ ಅನಗತ್ಯ ಕುತೂಹಲಗಳು ಅಪಾಯ ತಂದೊಡ್ಡುವ ಸಾಧ್ಯತೆಯೂ ಕೂಡ ಉಂಟು. ಹಾಗಾಗಿಯೇ ಸದಾ ಜಾಗೃತ ಮನಸ್ಸಿನ ಕಲಿಕೆಗೆ ಇಂಬು ಕೊಟ್ಟು, ತಾವು ಪರಿಪಕ್ವ ತರಬೇತಿ ಹೊಂದಿದ ನಂತರವೇ ಇತರರಿಗೆ ಮಾರ್ಗದರ್ಶನ ನೀಡಲು ಮುನ್ನಡಿ ಇಟ್ಟವರು. ಆ ಕಾರಣವೇ ಅವರ ಬಳಿ ತರಬೇತಿ ಪಡೆದವರು ಯಶಸ್ವಿ ಸಾಹಸ ಕ್ರೀಡಾಪಟುಗಳಾಗಿ ಹೊರಹೊಮ್ಮುತ್ತಿದ್ದಾರೆ. ಇದು ಕೊಟ್ರೇಶ್ ಅವರ ಜ್ಞಾನ – ಕೌಶಲ್ಯ – ಪ್ರತಿಭೆ ಹಾಗೂ ಕಾಳಜಿಗೂ ಸಾಕ್ಷಿ ಎಂದರೆ ಅತಿಶಯೋಕ್ತಿ ಏನಲ್ಲ.
ಸಾಹಸ ಯಾತ್ರೆ
ಬಾಲ್ಯದಿಂದಲೇ ಆರಂಭಗೊಂಡ ಕೊಟ್ರೇಶ್ ಅವರ ಸಾಹಸ ಪಯಣ ಸುಮಾರು 22 ವರ್ಷಗಳಿಂದ ನಿರಂತರ ನಡೆಯುತ್ತಲೇ ಇದೆ. ಒಂದಿಲ್ಲ ಒಂದು ಸಾಹಸ ಕ್ರೀಡೆಯ ಮೂಲಕ ತಮ್ಮ ಪ್ರತಿಭೆ ಮೆರೆಯುವ ಜತೆ ಅನೇಕ ಸಾಹಸ ಶಿಬಿರಗಳನ್ನು ಏರ್ಪಡಿಸಿ ಸೈ ಎನಿಸಿಕೊಂಡಿದ್ದಾರೆ. ಅಂತೆಯೇ ಹತ್ತು ಹಲವು ವಿಧದ ಸಾಹಸ ಕ್ರೀಡೆಗಳ ತರಬೇತಿ ನೀಡುವ ಮೂಲಕ ಯುವಪೀಳಿಗೆಗೆ ಉತ್ಸಾಹ ತುಂಬುತ್ತಲೇ ಇದ್ದಾರೆ.ಬಳ್ಳಾರಿ, ಸೊಂಡೂರು, ಹಂಪಿ, ರಾಮನಗರ, ಸಾವನ ದುರ್ಗ, ದಾಂಡೇಲಿ, ಚಿತ್ರದುರ್ಗ, ರಾಯಚೂರು, ಗುಲ್ಬರ್ಗ, ಬಿಜಾಪುರ, ಮೈಸೂರು, ಬದಾಮಿ, ಆಗುಂಬೆ, ಕೊಡಚಾದ್ರಿ, ತಮಿಳುನಾಡಿನ ಸೇಲಂ ಸೇರಿದಂತೆ ರಾಜ್ಯ – ಹೊರ ರಾಜ್ಯಗಳಲ್ಲೂ ಸಹ ಸಾಹಸ ಕ್ರೀಡಾ ತರಬೇತಿ ನೀಡಿ ಮೆಚ್ಚುಗೆ ಗಳಿಸಿದ್ದಾರೆ.
ದಾವಣಗೆರೆಯ ಪುಟ್ಟಮ್ಮ ಅನಾಥಾಶ್ರಮದ ವಿದ್ಯಾರ್ಥಿಗಳಿಗೆ, ರಶ್ಮಿ ಹೆಣ್ಣು ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ, ಅಂಗನವಾಡಿ ಕಾರ್ಯಕರ್ತ ಮಹಿಳೆಯರಿಗೆ, ಸುವರ್ಣ ಲೇಡಿಸ್ ಕ್ಲಬ್ನ ಮಹಿಳೆಯರಿಗೂ ಸಹ ಸಾಹಸ ಕ್ರೀಡಾ ತರಬೇತಿ ನೀಡಿ ಅವರಲ್ಲಿ ಧೈರ್ಯ ತುಂಬಿದ್ದಾರೆ.ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಹಬ್ಬ ಹಾಗೂ ದಾವಣಗೆರೆಯ ಮಕ್ಕಳ ಹಬ್ಬಗಳಲ್ಲಿ ಸಾಹಸ ಕ್ರೀಡಾ ತರಬೇತುದಾರರಾಗಿ ಭಾಗವಹಿಸಿ ಮಕ್ಕಳಿಗೆ ಅನೇಕ ಸಾಹಸ ಕ್ರೀಡೆಗಳನ್ನು ಪರಿಚಯಿಸಿ, ಕ್ರೀಡಾ ಸಾಧನೆಗೆ ಸ್ಪೂರ್ತಿ ನೀಡಿದ್ದಾರೆ.
ಕಳಕಳಿ ಮತ್ತು ಕಾಳಜಿ
ಪರಿಸರದ ಸದ್ಭಳಕೆ ಹಾಗೂ ಮುಂದಿನ ಪೀಳಿಗೆಗೆ ಪರಿಸರ ಉಳಿಸಿ – ಬೆಳೆಸುವ ಜಾಗೃತಿ ಮೂಡಿಸುವ ಸಲುವಾಗಿ, ಪರಿಸರ ಸಂರಕ್ಷಣೆಯ ಸಂದೇಶ ನೀಡುವ ನಿಟ್ಟಿನಲ್ಲಿ ಅನೇಕ ಶಾಲಾ – ಕಾಲೇಜುಗಳಲ್ಲಿ ಸಸಿ ನೆಡುವ ಮೂಲಕ ಪರಿಸರ ಮತ್ತು ಮಾನವ ಜನ್ಯ ಕಾಳಜಿ ಮೆರೆದಿದ್ದಾರೆ.
ಹೆಗ್ಗಳಿಕೆ
ತಮ್ಮ ಶಾಂತಿ, ಸಮಾಧಾನ, ತಾಳ್ಮೆಗೆ ಸವಾಲಿನ ಪ್ರಶ್ನೆ ಎಂಬಂತೆ ಕ್ಲಿಷ್ಟ ಪರಿಸ್ಥಿತಿ ಎದುರಿಸಿದರೂ ಸಹ ಸಾಮಾನ್ಯರಿಗೆ ಮಾತ್ರವಲ್ಲದೆ, ಬುದ್ಧಿಮಾಂದ್ಯ ಮತ್ತು ಅಂಧ ಮಕ್ಕಳಿಗೂ ಸಹ ಸಾಹಸ ಕ್ರೀಡಾ ತರಬೇತಿ ನೀಡಿ ಅವರೊಳಗಿನ ಅಂತಃ ಚೇತನವನ್ನು ಉದ್ದೀಪನಗೊಳಿಸಿ ಹೊಸ ಹುರುಪು ತುಂಬುತ್ತಿರುವುದು ಕೊಟ್ರೇಶ್ ಅವರ ಕಲಾ ಕೌಶಲ್ಯ ಹಾಗೂ ಸಾಮಾಜಿಕ ಕಳಕಳಿಗೆ ಹೆಗ್ಗಳಿಕೆ ತಂದು ಕೊಟ್ಟಿರುವ ಸಂಗತಿಯೇ ಸರಿ.
ಪ್ರತಿಭಾ ಪ್ರದರ್ಶನ
ಮೈಸೂರು ದಸರಾ, ಹಂಪಿ ಉತ್ಸವ, ಕದಂಬ ಉತ್ಸವ, ಬಿಜಾಪುರ ನವರಪುರ ಉತ್ಸವ ಸೇರಿದಂತೆ ರಾಜ್ಯ ಮತ್ತು ಹೊರ ರಾಜ್ಯದ ಅನೇಕ ಮಹೋನ್ನತ ಉತ್ಸವಾಚರಣೆಗÀಳಲ್ಲಿ ತಮ್ಮ ಪ್ರತಿಭೆ ಮತ್ತು ಸ್ವ ಸಾಮಥ್ರ್ಯದಿಂದಲೇ ಅವಕಾಶ ಗಿಟ್ಟಿಸಿಕೊಂಡಿರುವ ಕೊಟ್ರೇಶ್ ಅವರು ಹೋದೆಡೆಯಲ್ಲೆಲ್ಲಾ ತಮ್ಮ ವಿಶಿಷ್ಠ ಸಾಹಸ ಕಲೆಯ ಪ್ರದರ್ಶನ ಮಾಡಿ ಗುರುತಿಸಿಕೊಂಡಿದ್ದಾರೆ. ಅಂತೆಯೇ ಸಾರ್ವಜನಿಕರ ಮನಗೆಲ್ಲುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಶಾಲಾ – ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸಾಹಸ ಪ್ರವೃತ್ತಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಸಾಮಥ್ರ್ಯವನ್ನು ಬಲಗೊಳಿಸುವ ಹಿನ್ನೆಲೆಯಲ್ಲಿ ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಅವರ ಮಾತು ಮತ್ತು ಕೃತಿ ಎರಡರ ಪ್ರಭಾವವೂ ಕೂಡ ಅತ್ಯಂತ ಆಳವಾದ ಪ್ರಭಾವ ಬೀರುವಂತದ್ದೇ. ಹಾಗಾಗಿ ಅನೇಕ ವಿದ್ಯಾರ್ಥಿಗಳಲ್ಲಿ ಕೊಟ್ರೇಶ್ರವರ ಮಾತುಗಳು ಮನೋಸ್ಥೈರ್ಯ ತುಂಬಿವೆ. ಅವರ ಬದುಕಿನ ದಿಕ್ಕು ದೆಸೆಯನ್ನು ಉನ್ನತಿಗೆ ಕೊಂಡೊಯ್ದಿವೆ.
ಕೊಟ್ರೇಶ್ರವರ ಸಾಹಸ ಯಾತ್ರೆ ಕೇವಲ ನಗರ ಪ್ರದೇಶಗಳಿಗಷ್ಟೇ ಸೀಮಿತವಾಗದೆ ಗ್ರಾಮೀಣ ಪ್ರದೇಶಕ್ಕೂ ದಾಪುಗಾಲು ಇಟ್ಟಿದೆ. ಇವರ ಸಾಹಸ ಕ್ರೀಡಾ ತರಬೇತಿಗಳು ಗ್ರಾಮೀಣ ಯುವಜನರಲ್ಲಿಯೂ ನವೋಲ್ಲಾಸ – ನವೋನ್ಮೇಷ ತುಂಬಿವೆ.
ಹಿಮಾಲಯ ಪರ್ವತಾರೋಹಣ
ಸಣ್ಣ ಪುಟ್ಟ ಚಾರಣಗಳು, ಬೆಟ್ಟ ಗುಡ್ಡಗಳ ಏರುವಿಕೆಗೆ ಮಾತ್ರವೇ ತೃಪ್ತರಾಗದ ಕೊಟ್ರೇಶ್ ಅವರು ಜೀವನದಲ್ಲಿ ಉನ್ನತ ಗುರಿ ಹೊಂದಿದವರು. ಹಾಗಾಗಿಯೇ 2010 ರ ಮೇ ತಿಂಗಳಲ್ಲಿ, ಒಂದು ತಿಂಗಳ ಕಾಲ ಹಿಮಾಲಯ ಪರ್ವತಾರೋಹಣ ತರಬೇತಿ ಪಡೆದ ಅವರು 17,800 ಅಡಿ ಎತ್ತರ ಹಿಮಾಲಯವನ್ನು ಏರಿ ಯಶಸ್ವಿಗಳಾಗಿದ್ದಾರೆ. ಅಲ್ಲದೆ ಅದರಲ್ಲಿ ಉನ್ನತ ದರ್ಜೆಯಾದ “A” ಗ್ರೇಡ್ ಪಡೆದು ತಮ್ಮ ಸಾಹಸ ಕ್ರೀಡೆಗಳ ಬಗೆಗಿನ ಅಪರಿಮಿತ ಆಸಕ್ತಿ, ನಿರಂತರ ಅಭ್ಯಾಸ, ಪರಿಶ್ರಮಕ್ಕೆ ಮಾದರಿ ಎನಿಸಿದ್ದಾರೆ.
ಟಿ.ವಿ ಮಾಧ್ಯಮಗಳಲ್ಲೂ ಅವಕಾಶ – ಆಹ್ವಾನ
ಕೊಟ್ರೇಶ್ ಅವರ ಸಾಹಸ ಕಲಾ ನೈಪುಣ್ಯತೆಗೆ ಟಿ.ವಿ ಮಾಧ್ಯಮಗಳಿಂದಲೂ ಕೂಡ ಅವಕಾಶ ಮತ್ತು ಆಹ್ವಾನಗಳು ಅರಸಿಕೊಂಡು ಬಂದಿವೆ.
ವಿಶೇಷವಾಗಿ ಅಂತರ್ರಾಷ್ಟ್ರೀಯ ವಾಹಿನಿಯಾದ Mtvಯಲ್ಲಿ ಪ್ರಸಾರವಾದ “ಹೀರೋ ಹೋಂಡಾ ರೋಡಿಸ್” ಎನ್ನುವ ರಿಯಾಲಿಟಿ ಶೋಗೆ 45 ದಿನ ಸಾಹಸ ತರಬೇತು ತಂತ್ರಜ್ಞಾನರಾಗಿ ಹಾಗೂ ಸುವರ್ಣ ವಾಹಿನಿಯ “ಹಳ್ಳಿ ಹೈದ ಪ್ಯಾಟಿಗ್ ಬಂದ” ರಿಯಾಲಿಟಿ ಶೋ ನಲ್ಲೂ ಕೂಡ ತರಬೇತಿ ನೀಡಿದ ಕೀರ್ತಿಗೆ ಕೊಟ್ರೇಶ್ ಭಾಜನರಾಗಿದ್ದಾರೆ.
ಕೊನೆಯ ನುಡಿ
ಇಷ್ಟೆಲ್ಲಾ ಕಲೆ, ಪ್ರತಿಭೆ, ಸಾಧನಾ ಸಾಮಥ್ರ್ಯ ಇರುವ ಕೊಟ್ರೇಶ್ ಅವರು ನಮ್ಮ ದಾವಣಗೆರೆಯವರು ಎಂಬುದೇ ಒಂದು ಹೆಮ್ಮೆಯ ಸಂಗತಿ.
ಅದರಲ್ಲೂ ತಮ್ಮ ಕಲೆ – ಪ್ರತಿಭೆಗಳನ್ನು ಕೇವಲ ತೋರಿಕೆಗಾಗಿ ಪ್ರದರ್ಶಿಸುವ ಬಹು ಸಂಖ್ಯಾತರ ನಡುವೆ ತಮ್ಮ ಆತ್ಮ ತೃಪ್ತಿ ಹಾಗೂ ಪರಹಿತಕ್ಕಾಗಿಯೇ ತಮ್ಮ ಸಾಹಸ ಕಲೆಯನ್ನು ಮುಡುಪಾಗಿಟ್ಟಿರುವ ಕೊಟ್ರೇಶ್ರಂಥವರು ಇತರರಿಗೆ ಮಾದರಿಯಾಗಿ ನಿಲ್ಲುತಾರೆ. ಈ ದೆಸೆಯಲ್ಲಿ, “ಸ್ಮಾರ್ಟ್ ಸಿಟಿಯ ಸ್ಮಾರ್ಟ್ ಅಂಡ್ ಬ್ರೈಟ್” ಯುವ ಸಾಹಸ ತರಬೇತುದಾರರಾದ ಕೊಟ್ರೇಶ್ ಅವರ ಸದ್ದಿಲ್ಲದ ಸಾಧನೆಗೆ ನೀವು ಸಹ ಅವರ ಮೊ.ಸಂ : 9844206869 ಕ್ಕೆ ಕರೆ ಮಾಡಿ ಅಭಿನಂದನೆ ಸಲ್ಲಿಸಿ ಮತ್ತಷ್ಟು ಉತ್ಸಾಹ ತುಂಬ ಬಹುದು.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ಅಂತರಂಗ
ಅನಾಥರನ್ನಾಗಿಸದ ಅಂತಿಮ ಸಂಗಾತಿ

- ಅಲ್ಮೆಡಾ ಗ್ಲಾಡ್ ಸನ್
ಒಂಬತ್ತು ವರ್ಷ ವಯಸ್ಸಿನ ಹುಡುಗನೊಬ್ಬನ ತಲೆಗೆ ಶಿಕ್ಷಣವೇ ಹತ್ತುತಿರಲಿಲ್ಲವಾಗಿ ಆತ ಮೂರನೇ ಕ್ಲಾಸಿನಿಂದ ಮೇಲೇರಿರಲಿಲ್ಲ! ಆದರೂ ಆತನ ಮಾನವೀಯ ಸೂಕ್ಷ್ಮ ಸಂವೇದನೆಯ ಉತ್ಕಟತೆ ಎಷ್ಟಿತೆಂದರೆ ದೇವಸ್ಥಾನ, ಮಸೀದಿ, ಚರ್ಚುಗಳ ಮುಂಭಾಗ ಭಿಕ್ಷುಕರ ಮಧ್ಯೆ ತಾನೂ ತಲೆಯ ಮೇಲೆ ಟವಲ್ ಹಾಕಿಕೊಂಡು ಕುಳಿತು ಭಿಕ್ಷೆ ಬೇಡಿ ಬಂದ ಹಣವನ್ನು ಅಲ್ಲಿದ್ದವರಿಗೆಲ್ಲಾ ಹಂಚುತ್ತಿದ್ದ.
ಇದನ್ನರಿತ ಆತನ ಸಂಬಂಧಿಕರು ಚರ್ಮ ಕಿತ್ತು ಬರುವ ಹಾಗೆ ಬಾರಿಸಿ ಕೆಡವುತ್ತಿದ್ದರೆ ಅಲ್ಲಿದ್ದ ಭಿಕ್ಷುಕರೇ ಆತನ ಪರವಾಗಿ ವಕಾಲತ್ತು ಹಾಕಿ ಬೇಡಿದ ಭಿಕ್ಷೆಯನ್ನೆಲ್ಲಾ ಭಿಕ್ಷುಕರಿಗೆ ಹಂಚುತ್ತಿದ್ದಾನೆ ಎಂದು ಶ್ಯೂರಿಟಿ ಕೊಟ್ಟ ಮೇಲೆಯೇ ಏನಾದರೂ ಆಗಿ ಹಾಳಾಗಿ ಹೋಗು ಎಂದು ಕೈ ಚೆಲ್ಲುತ್ತಿದ್ದರು.
ಹುಡುಗ ಮಾತ್ರ ತನ್ನ ಅಪ್ಪ ಪ್ರತಿದಿನ ನೀಡುತ್ತಿದ್ದ ಒಂದು ರೂಪಾಯಿಯಲ್ಲಿ ನೆಲ್ಲಿಕಾಯಿಗಳನ್ನು ಕೊಂಡು ಮಾರಿ, ಅದರಿಂದ ಬಂದ ಹಣದಲ್ಲಿ ಇಡ್ಲಿಯನ್ನೋ, ಚಿತ್ರಾನ್ನವನ್ನೋ ಕೊಂಡು ಜನರಿಗೆ ಹಂಚಿಬಿಡುತ್ತಿದ್ದ. ನೋಡುಗರಿಗೆ ಹುಡುಗನ ವರ್ತನೆಗಳು ವಿಲಕ್ಷಣ ಹಾಗೂ ಅತಿರೇಕವಾಗಿ ಕಾಣುತ್ತಿದ್ದರೂ ಆತನಿಗದು ಸಹಜವಾಗಿತ್ತು.
ಇವನನ್ನು ಹೀಗೆಯೆ ಬಿಟ್ಟರೆ ಕಳ್ಳನೋ, ಸುಳ್ಳನೋ ಆಗುತ್ತಾನೆಂದು ತೀರ್ಮಾನಿಸಿ, ದೆಹಲಿಯಲ್ಲಿ ಧರ್ಮಶಾಸ್ತ್ರ ಅಧ್ಯಯನ ನಡೆಸುತ್ತಿದ್ದ ಅಣ್ಣನ ಬಳಿಗೆ ಕಳುಹಿಸಿದ್ದರು. ಅಲ್ಲಿಯೂ ಇದೇ ವರ್ತನೆ! ಧರ್ಮಗುರುಗಳು ನಿಮ್ಮ ಮಗ ಯಾವ ಕಾರಣಕ್ಕೂ ಓದಲಾರ ಎಂಬ ಪ್ರಶಂಸಾ ಪತ್ರದೊಡನೆ ಆತನನ್ನು ವಾಪಸ್ ಕಳುಹಿಸಿದಾಗಲೂ ಪೋರ ತನ್ನ ಯೋಚನಾ ಕ್ರಮದಿಂದ ವಿಚಲಿತನಾಗಿರಲಿಲ್ಲ.
ಇಂದು ಆತ ನಲವತ್ತೆರೆಡರ ಯುವಕ. ವಿಶೇಷ ಅಂತಃಶಕ್ತಿ, ಧಾರ್ಮಿಕ ಬದ್ಧತೆ, ಇಚ್ಛಾಶಕ್ತಿ ಹಾಗೂ ತಾತ್ವಿಕತೆಯನ್ನು ತನ್ನ ಸರಳ ಬದುಕಿನೊಂದಿಗೆ ಮೇಳೈಸಿಕೊಂಡಿರುವ ಈತನ ನಾಜುಕಿಲ್ಲದ ಮಾತುಗಳು ಒಬ್ಬ ಪ್ರಬುದ್ಧ ಮೌಲ್ವಿಯದ್ದೋ, ಸೂಫಿಸಂತನದ್ದೋ ಎಂದೆನ್ನಿಸದಿರಲಾರದು. ಯಾರಿಗೂ ಬೇಡವಾದ ಸುಮಾರು ಹದಿಮೂರು ಸಾವಿರ ಅನಾಥ ಶವಗಳಿಗೆ ಗೌರವಪೂರ್ಣ ಶ್ರದ್ಧಾಂಜಲಿಯೊಡನೆ ವಿದಾಯ ನೀಡಿದ ಶ್ರೇಷ್ಠ ಕಾಯಕ ರತ್ನ ನಮ್ಮ ಅಯೂಬ್ ಅಹಮದ್.
ಮೈಸೂರು ನಗರ ಇವರನ್ನು ‘ಬಾಡಿಮಿಯಾ ಎಂದೂ ಪ್ರೀತಿಯಿಂದ ಕರೆಯುತ್ತಿದೆ. ಜನಸ್ನೇಹಿ ಅಯೂಬ್ ಬಾಡಿಮಿಯಾ ಎಂದೆನ್ನಿಸಿಕೊಂಡಿದ್ದೇ ರೋಚಕವಾದುದ್ದು. ಯಾವುದೋ ವೈರಾಗ್ಯಕ್ಕೋ, ಭಾವೋದ್ರೇಕಕ್ಕೋ, ಗುರುತಿಸಿಕೊಳ್ಳುವ ಪ್ರವೃತ್ತಿಗೋ ಸಿಲುಕಿ ಅಯೂಬ್ ಈ ಕಾರ್ಯಕ್ಕೊಡ್ಡಿಕೊಂಡವರಲ್ಲ.
ಬದಲಾಗಿ ಎಳವೆಯಲ್ಲೇ ತನ್ನ ಅಪ್ಪ ಪಠಿಸುತ್ತಿದ್ದ ಖುರಾನನಿನ ನುಡಿಮುತ್ತುಗಳನ್ನೆ ಎದೆಯೊಳಗಿಳಿಸಿಕೊಂಡು ಇನ್ಸಾನಿಯಾತ್ ಜಿಂದಾಬಾದ್ ಎಂದು ಹೃದಯದೊಳಗೆ ಬರೆದುಕೊಂಡು ಸಂತೃಪ್ತನಾದ ಯುವಕನೀತ . “ನಮ್ದುಕೆ ಅಪ್ಪಾಜಿನೆ ನಮ್ಗೆ ಗುರುಗಳಿದಂಗೆ. ಚಿಕ್ಕದ್ರಿಂದ ಖುರಾನ್ ಓದಿ ನಮ್ಗೆ ಅರ್ಥ ಹೇಳ್ಕೊಡೊರು. ಖುರಾನ್ ಒಂದ್ಕಡೆ ಹೇಳ್ತೈತೆ, ಮಂದಿ ಬದ್ಕಿದ್ರೂ, ಸತ್ರೂ ಅವರ್ನ ಗೌರವದಿಂದ ನೋಡು ಅಂತ.
ಹಸ್ದವರ್ಗೆ ಊಟ, ಚಳಿಯಲ್ಲಿದ್ದೋರ್ಗೆ ಬಟ್ಟೆ ಕೊಟ್ಟು, ಸತ್ತೋದೊರ್ಗೇ ಗೌರವದಿಂದ ಕಳ್ಸಿಕೊಡು ಅಂತನೇ ಎಲ್ಲಾ ದೇವ್ರು ಹೇಳ್ತಿರೋದು. ನಾವೆಲ್ಲಾ ಭೂಮೀಲಿ ಬಾಡಿಗೆ ಮನೆಯಾಗೆ ಇದೀವಿ. ಯಾರ್ದು ಪರ್ಮನೆಂಟ್ ಇಲ್ಲ. ಹೋಗೊದ್ರೊಳ್ಗೆ ಅಲ್ಲಾ ಮಾಲೀಕ್ದು ಬಾಡಿಗೆ ಕಟ್ಟ್ಬೇಕು. ನಾನು ಅದನ್ನೇ ಮಾಡ್ತಾ ಇದೀನಿ ಅಷ್ಟೇ “ಎಂದು ಹೇಳುವ ಅಯೂಬ್ ಜಿ ‘ಬಾಡಿಮಿಯಾ’ನಾಗಿ ಇಪ್ಪತ್ತೆರಡು ವರ್ಷಗಳಾಗಿವೆ.
“ನಮ್ದು ಚಿಕ್ಕ್ದ್ರಲ್ಲಿ ಯೆಲ್ಡ್ಮೂರು ಸೈಂಕಲ್ ಇಟ್ಟಿದ್ವಿ. ದೊಡ್ಡವನಾದಾಗ ಒಂದು ಸೆಕೆಂಡ್ ಹ್ಯಾಂಡ್ಲು ಕಾರು ಮಡಗ್ಬೇಕು ಅನ್ಸಿತ್ತು” ಎಂದು ತನ್ನ 18ರ ಹರೆಯವನ್ನು ನೆನಪಿಸಿಕೊಂಡ ಅಯೂಬ್ ಕಾರೊಂದನ್ನು ಖರೀದಿ ಮಾಡಲು ಬಸ್ನಲ್ಲಿ ಹೋಗ್ತಿದ್ದಾಗ ಬಂಡಿಪಾಳ್ಯದ ಬಳಿ ಶವವೊಂದು ಬಿದ್ದಿತ್ತಂತೆ. ಸಂಜೆ ತನ್ನ ಕಾರಿನೊಂದಿಗೆ ಮರಳುತ್ತಿದ್ದಾಗಲೂ ಶವ ಅಲ್ಲೇ ಬಿದ್ದಿತ್ತು. “ಖುರಾನ್ ಪ್ರಕಾರ ಯಾವುದೇ ಶವಾ ಬಿದ್ದಿಲ್ರಿ, ನಾವು ಅದ್ರ ಮಕ ನೋಡ್ದೆ, ಶವದ್ ಮೆರವಣಿಗೆಯಲ್ಲಿ ನಾಲ್ಕೆಜ್ಜೆ ಹಾಕ್ದೆ ಮುಂದುಕ್ಕೋಗ್ಬಾರ್ದು.
ನಾನು ಮಕ ನೋಡಿ ಅಲ್ಲಿದ್ದವರ್ಗೆ ‘ಕ್ಯಾ ಸಾಬ್ ಅಭಿ ಐಸಾ ಹೀ ಹೈನಾ? ಅಂತ ಕೇಳ್ದೆ. ‘ಕ್ಯಾ ಕರ್ನಾ ಕೋಹಿ ನಹೀ ಹೈನಾ?’ ಅಂದಾಗ ಛೋಡೊ ಭಾಯ್ ಮೈ ಹೂನಾ? ಅಂತ ಹೇಳ್ಬುಟ್ಟಿದ್ದೇ ಹೆಣ ಎತ್ತ್ಕೊಂದಿ ಕೆ.ಆರ್.ಆಸ್ಪತ್ರೆಗೆ ತಂದಿದ್ದೆ. ಎಲ್ಲರೂ ಹೊಸ ಕಾರ್ ನ ಚಾಮುಂಡಿಗೋ, ದರ್ಗಕ್ಕೋ ತಗೊಂದಿ ಹೋಗ್ತಾರೆ. ಇಲ್ಲ ಅಪ್ಪ-ಅಮ್ಮಂಗೆ ಕುಂದ್ರಿಸ್ಕೊಂದಿ ರೌಂಡ್ ಹೋಗ್ತಾರೆ, ನಾನ್ ಮಾಡಿದ್ದು ನೋಡಿ ನಮ್ಮವ್ರು ನಮ್ಗೆ ದನಕ್ಕೆ ಬಡ್ದಂಗೆ ಬಡ್ದುಬಿಟ್ರು.
ನಂಗೇನಾದ್ರೂ ದಯ್ಯ-ಪಯ್ಯ ಏನಾದ್ರೂ ಹಿಡ್ಕೊಂಡು ಬಿಟ್ರೆ ಅಂತ ಅವರ್ಗೆ ಬಯ್ಯ. ನಾನು,’ ನಾನೇನ್ ತಪ್ಪು ಕೆಲಸ ಮಾಡ್ದೆ? ‘ ಅಂತ ತಲೆ ಕೆರ್ಕಂಡಿ ಮೈಸೂರು ಬೇಡ್ನಕ್ಕೇ ಬೇಡ ಅಂತ ಬೆಂಗಳೂರ್ಗೆ ಹೊಂಟ್ಬಿಟ್ಟೆ. ಒಂದ್ಸಲ ಲಾಲ್ಬಾಗ್ನಲ್ಲಿ ಜನ ಗುಂಪು ಸೇರಿದ್ರು. ನಾನು ಫಿಲಿಂ ಶೂಟಿಂಗ್ ಇರ್ಬೋದು, ಹೀರೊಗೆ ಒಂದ್ಸಲ ಕೈ ಮಿಲಾಯ್ಸ್ಬೋದು ಅಂತ ನುಗ್ಗಿ ಹೋದ್ರೆ ಮತ್ತೆ ಹೆಣ ಬಿದ್ದಿತ್ತು. ನಾನ್ ಹೆದ್ರಿ ‘ಯಾ ಅಲ್ಲಾ ಏನಿದೆಲ್ಲಾ’ ನನ್ ಗಿರಾಚಾರ ನೆಟ್ಗಿಲ್ಲ ಅಂತ ಹೇಳ್ತಿದ್ರುವೇ ಬಾಡಿನ ಬಿಟ್ಟೋಗೋಕೆ ಮನ್ಸಾಗ್ನಿಲ್ಲ.
ಮತ್ತೆ ಹೆಣ ಹೊತ್ತ್ಕೊಂದಿ ಹೊಂಟಾಗ ಅಲ್ಲಿದ್ದ ಮುದುಕ್ರು ನನ್ ಕೈ ಮುಗ್ದು ಮಗಾ ನೀನು ಮಾಡಿದ್ದು ಅಂತಿಂಥಾ ಸಣ್ಣ್ ಕೆಲ್ಸ ಅಲ್ಲಾ, ನಿನ್ಗೆ ಒಳ್ಳೆದಾಗ್ತುದೆ ಅಂತ ಆಶೀವಾರ್ದ ಮಾಡಿದ್ರು ಎಂದು ನೆನಪಿಸಿಕೊಂಡ ಅಯೂಬ್. ತನ್ನ ಬದುಕಿಗಾಗಿ ಬಾಡಿಗೆ ಆಟೋ, ಟ್ಯಾಕ್ಸಿ ಚಾಲನೆ ಮಾಡುತ್ತಾ, ಲಾರಿಗಳಿಗೆ ಹಣ್ಣು-ತರಕಾರಿಗಳನ್ನು ತುಂಬುತ್ತಾ ತನ್ನ ಒಡನಾಡಿಗಳ ಸಂಕಷ್ಟಗಳಿಗೆ ಪ್ರತೀ ಕ್ಷಣ ಮಿಡಿಯುತ್ತಾ ಸಾಗುತ್ತಿದ್ದಾರೆ.
ಮೊದಮೊದಲು ಈ ವಿಶಿಷ್ಟ ಕಾಯಕ ಅಯೂಬ್ ರವರನ್ನು ಅಗ್ನಿಪರೀಕ್ಷೆಗೊಳಿಸಿದ್ದಿದೆ. ಸ್ನೇಹಿತರು, ಸಂಬಂಧಿಕರು ದೂರವಾಗಿ ತಿರಸ್ಕಾರ, ಅನಾಥ ಪ್ರಜ್ಞೆಗಳು ಇನ್ನಿಲ್ಲದಂತೆ ಕಾಡಿದಾಗ ಯಾ ಅಲ್ಲಾ ಏನಿದು ಈ ಥರಾ ಎಕ್ಸಾಮು ತಗೊಂದಿದಿ? ಎಂದು ಅತ್ತದುಂಟು. ಸಣ್ಣ ವಾಹನದಲ್ಲಿ ಹೆಣವನ್ನು ತುಂಬಿ ಒಬ್ಬಂಟಿಯಾಗ ಬರುವಾಗ ಭಯವೆಂಬುದು ದೆವ್ವಗಳಾಗಿ ಕಾಡಿದುಂಟು.
ಆದರೆ ತನ್ನನರಿತ ಹೆತ್ತಪ್ಪ ನೀಡಿದ ನೈತಿಕ ಹಾಗೂ ಧಾರ್ಮಿಕ ಶಕ್ತಿ ಅಯೂಬ್ರನ್ನು ‘ಮೆಸ್ಸಾಯಾ’ನನ್ನಾಗಿಸಿದೆ. ಅನಾಥ ಹೆಣಗಳ ಒಡನಾಡಿಯೆಂದೇ ಗುರುತಿಸಲ್ಪಟ್ಟ ಬಾಡಿಮಿಯಾ ಅಯೂಬ್ ಮಾಡದಿರುವ ಸೇವಾ ಕಾರ್ಯಗಳಿಲ್ಲ. ಮೊದಲೆಲ್ಲಾ ಅರಮನೆ ಮುಂಭಾಗ ಅನ್ನ ಇಲ್ದೆ ಕುಳಿತಿರುವವರಿಗೆ ಅನ್ನ ಕೊಡುತ್ತಿದ್ದರಂತೆ. ಕೆಲವರು ಬಂದು ಇಲ್ಲೇ ಊಟ ಕೊಡಬೇಡಿ ಅರಮನೆಗೆ ಅವಮಾನ ಆಗುತ್ತೆ ಅಂತ ಹೇಳಿದ್ರಂತೆ. ಅದಕ್ಕೆ ನಮ್ಮ ಅಯುಬ್ “ಹರೇ ಬಾಯ್ ನಮ್ದುಕ್ಕೆ ಏನಾದ್ರೂ ಇಲ್ಲಿದು ರಾಜಕುಮಾರ್ ಆಗಿದ್ದಿದ್ರೆ ಇವರನ್ನೆಲ್ಲ ಒಳಗೆ ಕರ್ಕೊಂಡು ಹೋಗಿ ಕುಂದ್ರಿಸಿ ಊಟ ಕೊಡ್ತ್ತಿದ್ದೆ” ಅಂತ ಹೇಳಿ ನಕ್ಕಿದ್ದ ರಂತೆ!
ಫೆಬ್ರವರಿ 22ನೇ ತಾರೀಕು ಅಹಮದ್ ರವರ ಹುಟ್ಟುಹಬ್ಬ. ಆ ದಿನ ಆಯುಬ್ ಜನರಿಗೆ ಒಂದು ಸಂದೇಶವನ್ನು ನೀಡಲಿಕ್ಕೆ ಇಷ್ಟಪಟ್ಟಿದ್ದಾರೆ. “ಅಲ್ಲಾ ಭಾಯ್! ಏನ್ ಘನಂದಾರಿ ಕಾಮ್ ಜೀವನದಲ್ಲಿ ಮಾಡಿಬಿಟ್ಟಿದ್ದೀರಿ ಅಂತ ಹುಟ್ದಬ್ಬ ಸೆಲೆಬ್ರೇಟ್ ಮಾಡ್ತೀರಿ? ಹಾಗೆ ನೋಡಿದರೆ ಒಂದು ವರ್ಷ ವೇಸ್ಟೇಜ್ ಆಗಿ ಇನ್ನೊಂದ್ ವರ್ಷ ವೇಸ್ಟೇಜ್ ಆಗ್ತಾಯಿದೆ.
ಇದಕ್ಕೆ ಹೋಗಿ ಕೇಕ್ ಪಾಕ್ ವೇಸ್ಟೇಜ್ ಎಲ್ಲ ಜನ್ರಿಗೆ ತಿನ್ಸೋ ಬದ್ಲು ಒಬ್ಬ ರೋಗಿದ್ದು ಬಿಲ್ ಕಟ್ಟಿ? ಒಂದು ಬಡ ಮಗಂದು ಸ್ಕೂಲ್ ಫೀಸು ಚುಕ್ತಾ ಮಾಡಿ? ಮೇಲ್ಗಡೆಯವಂದು ಅಕೌಂಟ್ ನಲ್ಲಿ ಒಂದಿಷ್ಟು ಜಮಾ ಮಾಡಿಕೊಂಡು ಬನ್ನಿ? ನಿಮಗೂ ಒಳ್ಳೆಯದಾಗುತ್ತದೆ ಜನರಿಗೂ ಒಳ್ಳೆಯದಾಗುತ್ತದೆ.” ಅಂತ! ಹೇಗಿದೆ ಸಂದೇಶ?
ಈಗ ಸ್ಲಂ ಹಾಗೂ ರೈಲ್ವೆ ಸ್ಟೇಷನ್ಗಳಲ್ಲಿನ ಹಸಿದ ಹೊಟ್ಟೆಗಳನ್ನು ಸಮಾಧಾನಿಸುತ್ತ, ಪಡಿತರಗಳನ್ನು ವಿತರಿಸುತ್ತಿರುವ ಆಯುಬ್ ‘ಇಂಡಿಯಾ ಯುಟಿಲಿಟಿ ಬ್ಯಾಂಕ್’ ಎಂಬುದನ್ನು ಸ್ಥಾಪಿಸಿ ಜನರಿಂದ ಉಪಯೋಗಿಸಲ್ಪಟ್ಟ ಆದರೆ ಚೆನ್ನಾಗಿರುವ ಪದಾರ್ಥಗಳನ್ನು ಸಂಗ್ರಹಿಸಿ ಇಲ್ಲದವರಿಗೆ ಹಂಚುವ ಪ್ರವೃತ್ತಿಯಲ್ಲಿದ್ದಾರೆ. ಅನೇಕ ಬಡ ಹೆಣ್ಣುಮಕ್ಕಳ ಮಾಂಗಲ್ಯಭಾಗ್ಯಕ್ಕೂ ಕಾರಣೀಭೂತರಾಗಿದ್ದಾರೆ.
ತನ್ನ ಮಗಳ ಹೆಸರಿನಲ್ಲಿ ಉಚಿತ ಟೈಲರಿಂಗ್ ತರಬೇತಿಯನ್ನು ನೀಡುತ್ತಿದ್ದಾರೆ. ನೂರಾರು ಕೊರೊನಾ ಹೆಣಗಳನ್ನು ಧೃತಿಗೆಡದೇ ಸಾಗಿಸಿ ‘ವಾರಿಯರ್’ ಎಂದೆನ್ನಿಸಿಕೊಂಡಿದ್ದಾರೆ. ಹಾರ್ಮೋನಿ ಯೂನಿವರ್ಸಿಟಿ ಆಫ್ ಅಮೆರಿಕ ನೀಡಿದ ಗೌರವ ಡಾಕ್ಟರೇಟ್, ಮೈಸೂರು ದಸರಾದಲ್ಲಿ ನ ನಾಗರಿಕ ಸನ್ಮಾನ,ಹತ್ತಾರು ಪ್ರಶಸ್ತಿಗಳು, ಸನ್ಮಾನಗಳು ತನ್ನನರಸಿ ಬಂದರೂ ಹೊನ್ನಶೂಲಕ್ಕೇರದೇ ಮಂದಹಾಸದೊಡನೆ ಪ್ರಶಸ್ತಿಗಳು ಬೇಡ, ದೇವರ ಕೆಲಸಕ್ಕೆ ಕೈ ಜೋಡಿಸಿ ಎನ್ನುವ ಬಾಡಿಮಿಯಾನ ಸುಳ್ಳು, ತಟವಟಗಳಿಲ್ಲದ, ಅನುಕರಣೆಗೂ ಅಸಾಧ್ಯವಾದ ಅಪ್ಪಟ ಅಪರಂಜಿಯ ಬದುಕು ನಮ್ಮೊಡನಿರುವವರನ್ನು ಪ್ರೀತಿಸುವ, ನಮ್ಮನಗಲಿದವರನ್ನೂ ಗೌರವಿಸುವ ಮೌಲ್ಯವೊಂದನ್ನು ಬಿತ್ತುತ್ತಾ ಎಲ್ಲಾ ಧರ್ಮಗಳ ಧರ್ಮಗುರುಗಳನ್ನೂ ವಿಸ್ಮಿತರನ್ನಾಗಿಸಿದೆ.
ಹ್ಯಾಪಿ ಬರ್ತಡೇ ಭಾಯಿ! ನಿಮ್ಮಂತಹ ಹೃದಯವಂತರ ಸಂತತಿ ಇನ್ನೂ ಹೆಚ್ಚಲಿ!!
(21 ಫೆಬ್ರವರಿ ಯ ಫೇಸ್ ಬುಕ್ ಬರಹ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’..!

- ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್
ಜೀವನ ಎಂಬುದು ಕಲಿಕಾ ತೋಟ, ಪ್ರತಿದಿನ ಹೊಸ ಚಿಗುರಿನ ತರಹ ನಮ್ಮ ಸುತ್ತ-ಮುತ್ತಲಿನ ಪರಿಸರದಲ್ಲಿ ನಮ್ಮ ಮಾನಸಿಕ ಸ್ಥಿತಿಗಳಲ್ಲಾ ಹೊಸ ಹೊಸ ಚಿಗುರಿನಿಂದ ಕೂಡಿರುತ್ತವೆ, ಈ ತೆರನಾದ ಕಲಿಕಾ ತೋಟದಲ್ಲಿ ನಮ್ಮಗಳ ಗಿಡವು ಬಹುಪಾಲು ಪ್ರೀತಿ ಎಂಬ ನೀರುಣಿಸುತ್ತಾ ಬೆಳೆಯಲು ಸಹಕಾರಿಯಾಗುತ್ತದೆ, ಜಗತ್ತಿನಲ್ಲಿ ಪ್ರೀತಿ ಇಲ್ಲದ ಮನಸ್ಸು ಇಲ್ಲದಿರುವುದಿಲ್ಲ ಎಂಬುದು ಅಸಾಧ್ಯದ ಮಾತು ಎಂದರೆ ತಪ್ಪಾಗಲಾರದು.
ಇಲ್ಲಿ ಹೇಳಲ್ಹೊರಟಿರುವುದು ಈ ಪ್ರೀತಿ ಬಗೆಗಿನ ಒಂದು ವಿಚಿತ್ರ ಮತ್ತು ಸಚಿತ್ರವಾದ ಸಂಗತಿ ಇದು ಬರಿಯ ಯೌವನದಲ್ಲಿನ ಪ್ರೀತಿಯ ಪರಿಪಾಡು ಎನ್ನಲಾಗದು ಏಕೆಂದರೆ ವೃತ್ತಿಯಲ್ಲಿ ಒಬ್ಬ ವ್ಯವಸಾಯದ ಹಿನ್ನಲೆಯನ್ನೊಳಗೊಂಡ ‘ಸಂಪತ್’ ಎಂಬ ಯುವಕನ ತಂದೆ ಜಮೀನಿನಲ್ಲಿ ಕೆಲಸ ಮಾಡುತ್ತಾ ಯಾರ ಗೋಜಿಗೂ ಹೋಗದೆ ತಾನಾಯ್ತು ತನ್ನ ಪಾಡಾಯ್ತು ಎಂಬ ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಊರಿನಲ್ಲಿ ಕಾಣಿಸಿಕೊಂಡವರು ಇವರಿಗೆ ಮೂರು ಹೆಣ್ಣು ಮಕ್ಕಳೊಟ್ಟಿಗೆ ಜನಿಸಿದ ಸುರ ಸುಂದರ ಸುಪುತ್ರನೇ ಸಂಪತ್ ಎಂಬ ಯುವಕ.
ಇವನನ್ನು ಬಹುಪಾಲು ರಾಜಕುಮಾರನಂತೆ ಸಾಕಿದ್ದರು ಸಂಪತ್ ಕೂಡ ಚಿಕ್ಕಂದಿನಿಂದಲೂ ಅಷ್ಟೆ ಚೂಟಿಯಾದವನು ಶಾಲಾ ಹಂತವಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲಿ ಶಾಲೆಯ ನೆಚ್ಚಿನ ವಿದ್ಯಾರ್ಥಿಯಾಗಿ ತಾಲ್ಲೂಕಿಗೆ ಉತ್ತಮವಾದ ಅಂಕಗಳೊಂದಿಗೆ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾಗಿ ಊರಿಗೆ ಕೀರ್ತಿತಂದವನು, ಮುಂದೆ ಪದವಿ ಪೂರ್ವ ಮತ್ತು ಪದವಿ ಹಂತವನ್ನು ಮುಗಿಸಿದ ಸಂಪತ್ ಡಿ,ಇಡಿ ಪದವಿದರನಾಗಿ ಶಿಕ್ಷಕ ವೃತ್ತಿ ಜೀವನಕ್ಕೆ ಕಾಲಿಡಬೇಕಿದ್ದವನಿಗೆ ಸರಕಾರ ಯಾವುದೇ ತರಹದ ಹುದ್ದೆಗಳನ್ನೂ ಕರೆಯದ ಸಂದರ್ಭ ಸಂಪತ್ ಮಾನಸಿಕ ಸ್ಥಿತಿ ಸ್ವಲ್ಪ ಮಟ್ಟಿಗೆ ಏರುಪೇರಾಗಿರುತ್ತದೆ
ಈ ಮಧ್ಯ ಮೊಬೈಲ್ ಎಂಬುದು ಉತ್ತಮವಾದ ಸ್ನೇಹಿತನಾಗಿ ತನ್ನ ಮನಸ್ಸಿಗೆ ಹೊಗ್ಗಿಕೊಡಿರುತ್ತದೆ ಹೀಗಿರುವಾಗ ಒಮ್ಮೆ ಅಚಾನಕ್ ಆಗಿ ಒಂದು ಅಪರಿಚಿತ ಸಂಖ್ಯೆಯಿಂದ ಕರೆ ಬರುತ್ತದೆ ಆದರೆ ಅದು ತಪ್ಪಿದ ಕರೆಯಾಗಿರುತ್ತೆ (ಮಿಸ್ ಕಾಲ್) ಕೆಲಸವಿಲ್ಲದೆ ಖಾಲಿ ಕೂತಿದ್ದ ಸಂಪತ್ಗೆ ಈ ಕರೆ ಒಂದು ಬ್ರೇಕ್ ತರ ಯಾವುದಿರಬಹುದು ಈ ನಂಬರ್ ಎಂದು ಮನಸ್ಸಿನಲ್ಲಿ ಕ್ಯರ್ಯಾಸಿಟಿ ಹುಟ್ಟತೊಡಗಿ ಪಟ್ಟನೆ ಮೊಬೈಲ್ ಎತ್ತಿಕೊಂಡು ಆ ನಂರ್ಗೆ ಕರೆ ಮಾಡಿದಾಗ ಸಂಪತ್ ಮೂಖ ವಿಸ್ಮಿತನಾಗುತ್ತಾನೆ.
ಯಾಕಂದ್ರೆ ಆ ಕರೆಯಲ್ಲಿದ್ದ ಧ್ವನಿ ಸುಂದರ ಸುಮಧುರವಾದ ಕೋಗಿಲೆಗೂ ಮಿಗಿಲಾದ ವಾಯ್ಸ್ ಸಂಪತ್ ಕಿವಿಗಳಿಗೆ ಬೀಳುತ್ತಿದ್ದಂತೆ ತಟ್ಟನೆ ಕಿವಿ ನಿಮಿರಿ ಮನಸ್ಸು ಅಲ್ಲೋಲ ಕಲ್ಲೋಲವಾಗಿ ‘ಲವ್ ಈಸ್ ಬ್ಲೈಂಡ್’ ಅನ್ನೋ ಮಾತಿನಂತೆಯೇ ನಮ್ಮ ಸಂಪತ್ಗೆ ಆ ಮೊದಲ ಕರೆಯ ಹಾಯ್ ಎಂಬ ಮಾತಿನೊಂದಿಗೆ ಪ್ರೇಮಾಕುರವಾಗಿಯೇ ಬಿಡ್ತು.
ಮೊದ ಮೊದಲು ಪ್ರೀತಿ ಇಲ್ಲದಂತೆ ನಟಿಸಿದರೂ ನಂತರದಲ್ಲಿ ಸಂಜುಗೂ ಸಂಪತ್ ಮೇಲಿನ ಪ್ರೇಮ ಸ್ಫೊಟವಾಯ್ತು, ಅಲ್ಲಿಂದ ಶುರುವಾದ ಮೊಬೈಲ್ ಪ್ರೀತಿಯೂ ಒಮ್ಮೆಯೂ ಮುಖ ನೋಡದ ಸಂಜು ಮತ್ತು ಸಂಪತ್ ಇಬ್ಬರು ನೇರ ಭೇಟಿಗಾಗಿ ಒಂದು ದಿನ ಗೊತ್ತುಮಾಡಿಕೊಂಡರು ಅದರಂತೆ ಭೇಟಿ ಮಾಡಿದರು ಅದುವೆ ‘ಕುರುಡು ಪ್ರೀತಿಯ ಮೊದಲ ಭೇಟಿ’, ಇಲ್ಲಿಂದ ಇವರಿಗೆ ಪ್ರತಿದಿನ ಸಂಕಷ್ಟಗಳ ಸರಮಾಲೆ ಶುರುವಾದವು ಅದಾಗಲೆ ಇವರ ಈ ಪ್ರೀತಿ ಇಬ್ಬರ ಮನೆಯಲ್ಲೂ ಗೊತ್ತಾಗಿತ್ತು. ಸಂಪತ್ ಮನೆಯಲ್ಲಿ ಅಷ್ಟು ಕಿರಿಕಿರಿ ಇಲ್ಲವಾದರು ಸಂಜು ಮನೆಯಲ್ಲಿ ಇದೊಂದು ದೊಡ್ಡ ಸಮಸ್ಸೆಯಾಗಿ ಪರಿಣಮಿಸಿತ್ತು. ಅಡೆತಡೆ ಇಲ್ಲದ ಪ್ರೀತಿಗೆ ಸ್ಟೇಟಸ್ ಎಂಬುದು ಅಡ್ಡಿಯಾಗಿ ಪ್ರೇಮಿಗಳನ್ನ ವಿರಹಿಗಳಾಗಿಸಿತ್ತು,
ಇದೆಲ್ಲದರ ಮಧ್ಯೆ ಸಂಪತ್ ಜೊತೆ ಸಂಜು ಕೊನೆವರೆಗೂ ಜೀವಿಸಬೇಕೆಂಬ ಹಂಬಲದಿಂದ ಮನೆಬಿಟ್ಟು ಸಂಪತ್ ಊರಿಗೆ ಬರುವಳು ಮನೆಯಲ್ಲಿ ಮಗಳು ಕಾಣದಿರುವುದ ತಿಳಿದ ಸಂಜುವಿನ ತಂದೆ ವೃತ್ತಿಯಲ್ಲಿ ಪೋಲಿಸ್ ಅಧಿಕಾರಿಯಾಗಿದ್ದ ಅಷ್ಟೇ ಅಲ್ಲದೆ ಇಡೀ ಕುಟುಂಬಕ್ಕೆ ಕುಟುಂಬವೆ ಪೋಲಿಸ್ ಅಧಿಕಾರಿಗಳಾಗಿದ್ದರು ಈ ಅಧಿಕಾರದಿಂದ ಸಂಪತ್ ಮೇಲೆ ಸಂಜುವಿನ ಕಿಡ್ನಾಪ್ ದೂರು ನೀಡಿದರು.
ಈ ವಿಷಯ ತಿಳಿದಂತೆ ಸಂಪತ್ ಜೊತೆ ಇದ್ದ ಊರಿನ ಕೆಲವರು ಪೋಲಿಸ್ ಫ್ಯಾಮಿಲಿ ಸಹವಾಸ ನಮ್ಗಾಕೆ ಏನಾದ್ರೂ ಮಾಡ್ತರೆ ಈ ಪೋಲಿಸ್ ಅವರು ಎನ್ನುತ್ತ, ಸಂಪತ್ಗೆ ಸಹಾಯ ಮಾಡಲು ಯಾರು ಮುಂದೆ ಬರುವುದಿಲ್ಲ ಈ ಪರಿಸ್ಥಿತಿಯಲ್ಲಿ ಸಂಪತ್ ಒಬ್ಬನೇ ಈ ಸಮಸ್ಸೆ ಎದುರಿಸಿದನಾದರು ಅಡೆತಡೆಗಳು ವಿಪರೀತವಾಗಿದ್ದವು,
ಇದೆಲ್ಲದರ ನಡುವೆ ಮತ್ತೆ ಸಂಜು ಮತ್ತು ಸಂಪತ್ ಯಾರಿಗೂ ಗೊತ್ತಾಗದಂತೆ ಸಂಜುವಿನ ಸ್ಟೇಟ್ಮೆಂಟಿನೊಂದಿಗೆ ರಿಜಿಸ್ಟರ್ ಮ್ಯಾರೇಜ್ ಆಗಿ ಊರಿಗೆ ಬಂದರಾದರೂ ಇಲ್ಲಿಗೆ ನೆಮ್ಮದಿ ಬಂದೊದಗಲಿಲ್ಲ ಸಂಪತ್ನ ಮನೆಯವರೆಲ್ಲರೂ ದಿನ ಕಿರಿಕಿರಿ ಮಾಡುತ್ತಾ ಇವನಿಗೆ ಅಂಗಿಸುತ್ತಿದ್ದರು ಈ ನಡುವೆ ಕೆಲಸ ಇಲ್ಲದೇ ಖಾಲಿ ಇದ್ದ ಸಂಪತ್ ಕೂಲಿ ಕೆಲಸಕ್ಕೆ ಹೋಗಲೂ ಶುರುಮಾಡುತ್ತಾನೆ.
ಹೀಗೆ ಸ್ನೇಹಿತರೊಟ್ಟಿಗೆ ಸೇರಿ ಕೆಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿರುವಾಗ ಸರಕಾರ ಗ್ರಾಮ ಪಂಚಾಯ್ತಿ ಚುನಾವಣೆಯ ಅದಿಸೂಚನೆ ಹೊರಡಿಸುವುದು ಊರಿನ ಕೆಲ ಹಿರಿಯರ ಸಲಹೆಯಂತೆ ಸಂಪತ್ ತನ್ನೂರಿನ ಒಂದು ವಾರ್ಡ್ನ ಅಭ್ಯಾರ್ಥಿಯೆಂದು ತೀರ್ಮಾನಿಸಿದರು ಆದರೆ ಅಲ್ಲಿ ಮಹಿಳಾ ಅಭ್ಯಾರ್ಥಿ ಬಂದ ಕಾರಣ ಸಂಜುವಿನ ಹೆಸರು ಕೇಳಿ ಬರುತ್ತದೆ ಇದರಂತೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಗೆಲುವು ಕೊಟ್ಟ ಜನತೆ ಮುಂದೆ ಅಧ್ಯಕ್ಷ ಸ್ಥಾನವನ್ನು ಸಂಜುಳನ್ನ ಆಯ್ಕೆ ಮಾಡುತ್ತಾರೆ.
ತಾನು ಮುಖ ನೋಡದೇನೆ ಪ್ರೀತಿಸಿ ಮದುವೆಯಾದ ತನ್ನೊಡತಿಯನ್ನ ಅಧ್ಯಕ್ಷಳನ್ನಾಗಿಸಿ ತನ್ನ ಪ್ರೀತಿಯನ್ನು ಮೇಲ್ಮಟ್ಟಕ್ಕೇರಿಸಿದ ಈ ಯುವಕನ ಸಾಧನೆಯು ಸುಲಭದ ಮಾತಲ್ಲ. ‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’.
ಎಲ್ಲಾ ಕೆಟ್ಟ ಪರಿಸ್ಥಿತಿಗಳಿಗೆಲ್ಲಾ ಸರಿಯದ ಸಮಯಕ್ಕೆ ಉತ್ತರಿಸುತ್ತಾ ಪ್ರೀತಿ ಎಂಬ ಹೆಸರಲ್ಲಿ ಮೋಹಕ್ಕೆ ಬಲಿಯಾಗುವವರಿರುವವರ ಜೊತೆ ಸಂಪತ್ ಮತ್ತು ಸಂಜು ಇಬ್ಬರೂ ತಮ್ಮ ಪ್ರೀತಿಯನ್ನು ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ ಇವರಿಗೀಗ ಸುಂದರವಾದ ಮೂರು ಮಕ್ಕಳು, ಎರಡು ಹೆಣ್ಣು, ಒಂದು ಗಂಡು ಮಗು. ಸಂಪತ್ ಸಂಜು ಸುಖಕರವಾದ ಸಂಸಾರದಲ್ಲಿ ಸಮಾಜ ಸೇವೆಯನ್ನು ಮಾಡಲ್ಹೊರಟ್ಟಿದ್ದಾರೆ ಇವರಿಗೆ ಇವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತಾ..
ಇಲ್ಲಿ ಪ್ರೀತಿ, ಪ್ರೇಮ, ಆಸೆ, ಆಕಾಂಕ್ಷೆಗಳು ಅಪ್ಪ, ಅಮ್ಮ, ಕುಟುಂಬದ ಸದಸ್ಯರು ಊರು, ಊರಿನ ಜನರ ಮನಸ್ಥಿತಿ ಇದೆಲ್ಲದರ ನಡುವೆ ತನ್ನ ಒಂದು ಪಾಸಿಟಿವ್ ಥಿಂಕಿಂಗ್ ಎಂಬುದು ಸಂಪತ್ ಎಂಬ ಯುವಕನ ಜೀವನದ ದಿಕ್ಕನ್ನೇ ಸೀರಿಯಸ್ ಆಗಿ ಬದಲಿಸುತ್ತದೆ, ಇರುವ ಕಷ್ಟದ ಜೊತೆ ಬರುತಿದ್ದ ಕಷ್ಟಗಳನ್ನೇಲ್ಲಾ ಎದರಿಸುತ್ತಾ ಬದಲಾದ ಸಂಪತ್, ಪ್ರೀತಿ ಮಾಡಿ ಸಾಯುವ ಕೆಲ ಯುವಕ ಯುವತಿಯರಿಗೆ ಒಂದು ನಿದರ್ಶನವಾಗಿದ್ದಾನೆ ಎಂದು ಹೇಳುತ್ತಾ ಈ ಬರಹಕ್ಕೆ ಪೂರ್ಣವಿರಾಮವನ್ನಿಡುತ್ತಿದ್ದೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸ್ಫೂರ್ತಿ ಚೇತನ ; ಈ ಗುರುಚೇತನ ಡಾ. ಜಿ ಎಂ ಗಣೇಶ್

ದಾವಣಗೆರೆಯಲ್ಲಿಂದು `ಗುರುಚೇತನ’ ಮತ್ತು `ಗುರುಶ್ರೆಷ್ಠ’ ಪ್ರಶಸ್ತಿ ಪ್ರದಾನ; ವಾಗ್ಮಿ ಹಿರೇಮಗಳೂರು ಕಣ್ಣನ್ ಭಾಗಿ
- ನಾಗರಾಜ ಸಿರಿಗೆರೆ,ಕನ್ನಡ ಅಧ್ಯಾಪಕರು, ದಾವಣಗೆರೆ
`ಸಾಮಾನ್ಯ ಶಿಕ್ಷಕ ಬೋಧಿಸುತ್ತಾನೆ, ಒಳ್ಳೆಯ ಶಿಕ್ಷಕ ವಿವರಿಸುತ್ತಾನೆ, ಉತ್ತಮ ಶಿಕ್ಷಕ ಪ್ರಾತ್ಯೇಕ್ಷಿಸುತ್ತಾನೆ, ಅತ್ಯುತ್ತಮ ಶಿಕ್ಷಕ ಸ್ಫೂರ್ತಿ ನೀಡುತ್ತಾನೆ’ ಎಂಬುದು ಶಿಕ್ಷಕರ ವಿವಿಧ ಗುಣಮಟ್ಟವನ್ನು ತಿಳಿಸುವ ಮಾತು. ಮೊದಲ ಎರಡು ವರ್ಗದ ಶಿಕ್ಷಕರು ನಮಗೆ ಎಲ್ಲಕಡೆ ಕಂಡುಬರುತ್ತಾರೆ. ಮೂರನೆಯ ವರ್ಗದವರು ಬೆರಳೆಣಿಕೆಯಷ್ಟು. ಆದರೆ ನಾಲ್ಕನೆಯ ವರ್ಗದ ಶಿಕ್ಷಕರ ಸಂಖ್ಯೆ ಮಾತ್ರ ಇನ್ನೂ ಅಪರೂಪದಲ್ಲಿ ಅಪರೂಪ.
ಈ ನಾಲ್ಕನೆಯ ವರ್ಗದ ಶಿಕ್ಷಕರ ಗುಂಪಿಗೆ ಸೇರುವ ನಮ್ಮ ನಡುವಿನ ಪ್ರತಿಭೆ ಎಂದರೆ ಡಾ. ಜಿ ಎಂ ಗಣೇಶ್. ಚಿಕ್ಕಮಗಳೂರಿನ ಎಂ ಎಲ್ ಎಂ ಎನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಗಣೇಶ್ ಮೂಲತಃ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆಯವರು. ಶಿಕ್ಷಣ ಕಾಲೇಜು ಎಂದರೆ ಭಾವಿ ಶಿಕ್ಷಕರನ್ನು ರೂಪಿಸುವ ಮಹತ್ವದ ಸಂಸ್ಥೆ. ಅಂತಹ ಸಂಸ್ಥೆಯಲ್ಲಿ ಶ್ರದ್ಧೆ, ಪರಿಶ್ರಮ, ಪ್ರತಿಭೆ, ಕೌಶಲ್ಯ, ಪ್ರಾಮಾಣಿಕ ಸೇವೆಯ ಮೂಲಕ ಪ್ರಶಿಕ್ಷಕರ ಅಚ್ಚಮೆಚ್ಚಿನ ಪ್ರಾಧ್ಯಾಪಕರೆನಿಸಿರುವ ಗಣೇಶ್ ಯುವಕರನ್ನು ನಾಚಿಸುವಂತಹ ಉತ್ಸಾಹಿ. ಸದಾ ಹೊಸತನಕ್ಕೆ ತುಡಿಯುತ್ತಿರುವ ಮನಸ್ಸಿನವರು.
ಕ್ರಿಯಾಶೀಲತೆಗೆ ಮತ್ತೊಂದು ಹೆಸರಾಗಿರುವ ಇವರು ನಿತ್ಯ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಾರೆ.
ವೃತ್ತಿ ಮತ್ತು ಪ್ರವೃತ್ತಿಗಳು ಒಂದೇ ಆದರೆ `ಕಬ್ಬಿನ ಮೇಲೆ ಜೇನು ಗೂಡು ಕಟ್ಟಿದಂತೆ’ ಎಂಬ ಮಾತೊಂದಿದೆ. ಹಾಗೆಯೇ `ಅಧ್ಯಾಪಕ ಎಂದರೆ ಸದಾ ಅಧ್ಯಾಯನಶೀಲ’. ಅದರಂತೆ ಡಾ. ಗಣೇಶ್ ಅಧ್ಯಯನ ಅಧ್ಯಾಪನಗಳ ಜೊತೆಗೆ ವೃತ್ತಿಗೆ ಪೂರಕವಾದ ಹಲವು ಹವ್ಯಾಸಗಳನ್ನು, ಪ್ರವೃತ್ತಿಗಳನ್ನು ರೂಢಿಸಿಕೊಂಡು ನಿಜಾರ್ಥದಲ್ಲಿ ಶಿಕ್ಷಕರ ಶಿಕ್ಷಕರಾಗಿದ್ದಾರೆ.
ಕಂಪ್ಯೂಟರ್ ಜ್ಞಾನದಲ್ಲಿ ಡಿಪ್ಲೊಮಾ ಪದವಿ ಪಡೆದ ಗಣೇಶ್ ಆ ತಂತ್ರಜ್ಞಾನವನ್ನು ತನ್ನ ವೃತ್ತಿಯಲ್ಲಿ ಸಮರ್ಪಕವಾಗಿ ಬಳಸಿಕೊಂಡವರು. ಕಂಪ್ಯೂಟರ್ ತಂತ್ರಜ್ಞಾನದ ಜೊತೆಗೆ ಇಂಗ್ಲಿಷ್ ಭಾಷಾ ಪ್ರೌಢಿಮೆ ಇದ್ದರೆ ಹೇಗೆ ಯಶಸ್ವಿ ಶಿಕ್ಷಕನಾಗಬಹುದು ಎಂಬುದಕ್ಕೆ ಡಾ. ಗಣೇಶ್ ಸಾಕ್ಷಿಯಾಗಿದ್ದಾರೆ. ಕಂಪ್ಯೂಟರ್ ಬಳಕೆಯನ್ನು ಸೃಜನಾತ್ಮಕವಾಗಿ, ಅತ್ಯಂತ ಸಮರ್ಥವಾಗಿ ಬಳಸಿಕೊಂಡು ರಾಜ್ಯದಲ್ಲಿಯೇ ಶ್ರೇಷ್ಠ ಸಂಪನ್ಮೂಲವ್ಯಕ್ತಿ ಎನಿಸಿಕೊಂಡಿದ್ದಾರೆ.
ಯುಜಿಸಿಯ FIP ಯೋಜನೆ ಅಡಿಯಲ್ಲಿ ಶಿಷ್ಯವೇತನ ಪಡೆದು `’ಪ್ರೌಢಶಾಲಾ ವಿದ್ಯಾರ್ಥಿಗಳ ಆಲಿಸುವಿಕೆ ಮತ್ತು ಓದುವಿಕೆಯ ಗ್ರಹಣ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಚಟುವಟಿಕೆಗಳ ಸಾಫಲ್ಯ – ಒಂದು ಪ್ರಾಯೋಗಿಕ ಅಧ್ಯಯನ’’ ಎಂಬ ವಿಷಯದ ಮೇಲೆ ಕುವೆಂಪು ವಿವಿಯಿಂದ ಪಿಎಚ್ ಡಿ ಪದವಿ ಪಡೆದಿರುತ್ತಾರೆ. ಅಲ್ಲದೆ ಮೂರು ಸಂಶೋಧನಾರ್ಥಿಗಳಿಗೆ ಎಂ ಫಿಲ್ ಪದವಿಗೂ ಮಾರ್ಗದರ್ಶಕರಾಗಿರುತ್ತಾರೆ.
ಸಂಘಟನಾ ಚತುರರು, ವಾಗ್ಮಿಗಳು ಮತ್ತು ಸಾಹಿತ್ಯದ ಅಭಿರುಚಿಯುಳ್ಳವರು ಆದ ಗಣೇಶ್ ಮೂಲತಃ ಕನ್ನಡ ಭಾಷಾ ಬೋಧನಾ ಪದ್ಧತಿಯ ಬೋಧಕರು. ಆದರೆ ಇವರ ಹವ್ಯಾಸಗಳ ಹರವು ಬಹಳ ವಿಸ್ತಾರವಾದುದು. ಭಾಷೆ, ಸಾಹಿತ್ಯದ ಬೋಧಕರಾದ ಇವರಿಗೆ ವಿಜ್ಞಾನದಲ್ಲೂ ಅಪಾರ ಆಸಕ್ತಿ. ಹಾಗಾಗಿ ಭಾರತ ಜ್ಞಾನವಿಜ್ಞಾನ ಜಾಥಾ, ಬೀದಿನಾಟಕ, ವಿಜ್ಞಾನ ಬಾಲೋತ್ಸವದಂತಹ ಚಟುವಟಿಕೆಗಳಲ್ಲೂ ಸದಾ ಕ್ರಿಯಾಶೀಲರು. `ಪವಾಡ ರಹಸ್ಯ ಬಯಲು ಮಾಡುವುದರಲ್ಲೂ ಸಿದ್ಧಹಸ್ತ’ರಾದ ಇವರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಭಾವನೆಗಳನ್ನು ಮೂಡಿಸುವುದರಲ್ಲೂ ಮುಂದು.
ರಾಜ್ಯ, ರಾಷ್ಟ್ರ ಮಟ್ಟದ ಅನೇಕ ವಿಚಾರ ಸಂಕಿರಣಗಳು, ಶಿಕ್ಷಕರ ತರಬೇತಿ ಕಾರ್ಯಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿದ್ದಾರೆ. ಪಠ್ಯಕ್ರಮ,ಪಠ್ಯವಸ್ತು, ಪಠ್ಯಪುಸ್ತಕ ರಚನೆ, ಪಠ್ಯಪುಸ್ತಕ ಆಯ್ಕೆ ಮುಂತಾದ ಶೈಕ್ಷಣಿಕ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿರುವ ಗಣೇಶ್ ಅವರದು ಬಹುಮುಖ ವ್ಯಕ್ತಿತ್ವ. ಚಿಕ್ಕಮಗಳೂರು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪ ಆಯುಕ್ತರಾಗಿ ಸಲ್ಲಿಸಿರುವ ಸೇವೆ ಅನನ್ಯ.
ಇವರ ಲೇಖನಿಯಿಂದ ಶಿರೋನ್ನತ ಪ್ರಕ್ಷೇಪಣೆ-ಶಿಕ್ಷಕರಿಗೊಂದು ಕೈಪಿಡಿ, ಭಾಷಾ ಕೌಶಲ್ಯ ಸಾಫಲ್ಯ, ಪರೀಕ್ಷೆಯ ಆತಂಕ ಬೇಡ, ಮಹಾಬೆಳಕು, ಸವೆದ ಜೀವ-ಸವಿದ ಬದುಕು ಮುಂತಾದ ಕೃತಿಗಳು ಹೊರಬಂದಿವೆ. ಗಿರಿಸೌರಭ, ಮನೋಜ್ಞ ಮತ್ತು ಮುನ್ನೇಸರ ಎಂಬ ಮಹತ್ವದ ಸ್ಮರಣ ಸಂಚಿಕೆಗಳ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಗೊ ರು ಚ ನೇತೃತ್ವದ `ಜಾನಪದ ನಿಘಂಟು’ ರಚನೆಯಲ್ಲೂ ಸೇವೆ ಸಲ್ಲಿಸಿದ್ದಾರೆ. ಅತ್ಯುತ್ತಮ ಸಂಘಟನಕಾರರಾದ ಗಣೇಶ್ ತಮ್ಮ ಹುಟ್ಟಿದ ಊರು ಕತ್ತಲಗೆರೆಯಲ್ಲಿ 1994ರಲ್ಲಿ ಜರುಗಿದ ಚನ್ನಗಿರಿ ತಾಲ್ಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯಲ್ಲಿ ಮಹತ್ವದ ಪಾತ್ರವಹಿಸಿದ್ದರು.
ಡಾ. ಜಿ ಎಸ್ ಶಿವರುದ್ರಪ್ಪ, ಡಾ. ಸುಮತೀಂದ್ರ ನಾಡಿಗ, ಡಾ. ಶ್ರೀಕಂಠ ಕೂಡಿಗೆ ಮುಂತಾದ ಸಾಹಿತ್ಯ ದಿಗ್ಗಜರನ್ನು ತಮ್ಮ ಪುಟ್ಟಹಳ್ಳಿಗೆ ಕರೆಸಿದ್ದ ನೆನಪು ಇಂದಿಗೂ ಆ ಊರಿನ ಜನತೆಯಲ್ಲಿ ಹಚ್ಚಹಸಿರಾಗಿದೆ.
ಸಾಂಸ್ಕೃತಿಕ ಮತ್ತು ಸೃಜನಶೀಲ ವ್ಯಕ್ತಿತ್ವ ರೂಢಿಸಿಕೊಳ್ಳಲು ಪ್ರೌಢಶಾಲಾ ಶಿಕ್ಷಣ ಪಡೆದ ದಾವಣಗೆರೆಯ ಅನುಭವ ಮಂಟಪ ಶಾಲೆ ಹಾಗೂ ಪದವಿ ಶಿಕ್ಷಣ ಪಡೆದ ಸಿರಿಗೆರೆಯ ಮೈಸೂರು ಬಸವಯ್ಯ ವಸತಿ ಮಹಾವಿದ್ಯಾಲದ ವಾತಾವರಣ ಕಾರಣವಾಗಿದೆ ಎಂದು ಗಣೇಶ್ ತಮ್ಮ ವಿದ್ಯಾಭ್ಯಾಸದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.ಮಾಡುವ ಕೆಲಸದಲ್ಲಿ ಶ್ರದ್ದೆ, ಆತ್ಮತೃಪ್ತಿ, ಧನಾತ್ಮಕ ಚಿಂತನೆಯ ಮೂಲಕ ವಿದ್ಯಾರ್ಥಿಗಳ ಮೆಚ್ಚಿನ ಅಧ್ಯಾಪಕರಾಗಿರುವ ಡಾ. ಗಣೇಶ್ ಅವರಿಗೆ ಈ ಸಲದ `ಗುರುಚೇತನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. .
ದಾವಣಗೆರೆಯ ಶಿಕ್ಷಣತಜ್ಞ ಡಾ. ಎಚ್ ವಿ ವಾಮದೇವಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷ ಶ್ರೇಷ್ಠ ಶಿಕ್ಷಕರಿಗೆ ಗುರುಚೇತನ’ ಮತ್ತು `ಗುರುಶ್ರೇಷ್ಠ’ ಪ್ರಶಸ್ತಿಯನ್ನು ಪ್ರದಾನ ನೀಡಲಾಗುತ್ತದೆ. ಇಂದು ನಗರದ ಮಾಗನೂರು ಬಸಪ್ಪ ಸಭಾಂಗಣದಲ್ಲಿ ಮಧ್ಯಾಹ್ನ 3-30ಕ್ಕೆ ನಡೆಯುವ ಸಮಾರಂಭದಲ್ಲಿ ಡಾ. ಗಣೇಶ್ ಅವರಿಗೆ `ಗುರುಚೇತನ’ ಮತ್ತು ತಾವರಕೆರೆ ಸರಕಾರಿ ಪ್ರಾಢಶಾಲಾ ಮುಖ್ಯೋಪಾಧ್ಯಾಯ ಜಿ ಪಿ ಲಿಂಗೇಶ್ ಮೂರ್ತಿಯವರಿಗೆ `ಗುರುಶ್ರೇಷ್ಠ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್, ಕುಲಪತಿ ಶರಣಪ್ಪ ಹಲಸೆ, ಮಾಗನೂರು ಸಂಗಮೇಶಗೌಡ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ರಾಜಕೀಯ6 days ago
ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು
-
ರಾಜಕೀಯ6 days ago
ದೇವರಮನೆ ಶಿವಕುಮಾರ್ ಬಿಜೆಪಿ ಸೇರ್ಪಡೆ | ನಾವು ಯಾರಿಗೂ ಆಮಿಷ ಒಡ್ಡಿಲ್ಲ : ಸಂಸದ ಜಿಎಂ ಸಿದ್ದೇಶ್ವರ್
-
ರಾಜಕೀಯ6 days ago
ದಾವಣಗೆರೆ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ : ಮೇಯರ್ ಆಗಿ ಎಸ್.ಟಿ.ವೀರೇಶ್, ಉಪಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್
-
ಲೈಫ್ ಸ್ಟೈಲ್7 days ago
ನರದೌರ್ಬಲ್ಯ ನಿವಾರಣೆಗೆ ಬೆಳ್ಳುಳ್ಳಿ ಬಳಸಿ
-
ರಾಜಕೀಯ7 days ago
ಗುಜರಾತ್ | ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು
-
ಬಹಿರಂಗ5 days ago
ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇ ಮೊದಲ ತಪ್ಪು..!
-
ಸಿನಿ ಸುದ್ದಿ7 days ago
ಪೊಗರು ವಿವಾದ ಅಂತ್ಯ | ಸೀನ್ ಕಟ್ ; ಶುಭಹಾರೈಸಿದ ಬ್ರಾಹ್ಮಣ ಸಮುದಾಯ
-
ಕ್ರೀಡೆ5 days ago
ಅತಿ ಕಡಿಮೆ ಪಂದ್ಯ ; 400 ವಿಕೆಟ್ : ದಾಖಲೆ ಬರೆದ ಸ್ಪಿನ್ನರ್ ಆರ್ ಅಶ್ವಿನ್