Connect with us

ದಿನದ ಸುದ್ದಿ

ಒಂದೇ ಸೂರಿನಡಿ 750 ಸರ್ಕಾರಿ ಸೇವೆಗಳು ಗ್ರಾಮ-ಒನ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ

Published

on

ಸುದ್ದಿದಿನ ,ದಾವಣಗೆರೆ : ಗ್ರಾಮೀಣ ಭಾಗದ ನಾಗರೀಕರಿಗೆ ಹಲವು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಗ್ರಾಮ-ಒನ್ ಸೇವಾ ವೇದಿಕೆಗೆ ಮಾನ್ಯ ಮುಖ್ಯಮಂತ್ರಿಗಳು ಇಂದು(ಗುರುವಾರ) ಚಾಲನೆ ನೀಡಿದರು.

ದಾವಣಗೆರೆ ತಾಲೂಕಿನ ಮಾಳಗೊಂಡನಹಳ್ಳಿ ಗ್ರಾಮದಲ್ಲಿ ಇಡಿಸಿಎಸ್ ನಿರ್ದೇಶನಾಲಯ,ಇ-ಆಡಳಿತ ಇಲಾಖೆ ವತಿಯಿಂದ ಆಯೋಜಿಸಿದ್ದ ಗ್ರಾಮ ಒನ್ ವರ್ಚುಯಲ್ ಕಾರ್ಯಕ್ರಮವನ್ನು ಬೆಂಗಳೂರಿನಿಂದ ಉದ್ಘಾಟಿಸಿ ಮಾತಾನಾಡಿದ ಅವರು ಸರ್ಕಾರದ ಮಹಾತ್ವಾಕಾಂಕ್ಷಿ ಕಾರ್ಯಕ್ರಮ ಇದಾಗಿದ್ದು ಸುಮಾರು 750 ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಿರುವುದರಿಂದ ಸಾರ್ವಜನಿಕರು ತಮ್ಮ ಕೆಲಸಗಳಿಗೆ ನಗರಕ್ಕೆ ಅಲೆಯುವುದು ತಪ್ಪುತ್ತದೆ ಎಂದರು.

ಈ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲೆಯ ನೂರು ಗ್ರಾಮಗಳಲ್ಲಿ ಈ ಸೇವೆ ಸಿಗಲಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರು-ಒನ್ ಕರ್ನಾಟಕ-ಒನ್ ರೀತಿಯಲ್ಲಿ ಹಲವು ಸೇವೆಗಳು ಸಿಗಲಿವೆ.

ಮಾಹಿತಿ ಹಕ್ಕು ಕಾಯ್ದೆ ಸೇವೆಗಳು, ಮುಖ್ಯಮಂತ್ರಿಗಳ ಪರಿಹಾರ ಸೇವೆಗಳು, ಕೃಷಿ ಇಲಾಖೆ ಸೇವೆಗಳು, ಕಾರ್ಮಿಕ ಇಲಾಖೆ ಸೇವೆಗಳು, ವೃದ್ದಪ್ಯಾ ವೇತನ, ಅಂಗವಿಕಲರ ವೇತನ, ಒಳಗೊಂಡಂತೆ ಹಲವು ಸೇವೆಗಳು ತಮ್ಮ ಮನೆಬಾಗಿಲಲ್ಲಿ ಸಿಗಲಿವೆ. ಇದರಿಂದ ತಮ್ಮ ಸಮಯ ಉಳಿತಾಯವಾಗುವುದರೊಂದಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು. ಈ ಕೇಂದ್ರಗಳು ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರಿಗೆ ಸುಗಮವಾಗಿ ಸೇವೆಗಳನ್ನು ನೀಡಲಿವೆ.

ಈಗಾಗಲೇ ಸಕಾಲ ಯೋಜನೆಯಡಿ ಸಕಾಲದಲ್ಲಿ ಹಲವು ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರೊಂದಿಗೆ ಮೈಕ್ರೋ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಲ್ಲಿಸಲಾಗುತ್ತಿದ್ದು, ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಇಂಥಹ ಕೇಂದ್ರಗಳು ಆರಂಭವಾಗಲಿದ್ದು ನಾಗರೀಕರಿಗೆ ಸೇವೆಗಳು ಮತ್ತಷ್ಟು ಹತ್ತಿರವಾಗಲಿವೆ ಎಂದರು.

ಪ್ರಾಥಮಿಕ ಪೌಢ್ರಶಿಕ್ಷಣ ಹಾಗೂ ಸಕಾಲ ಸಚಿವರಾದ ಎಸ್. ಸುರೇಶ್ ಕುಮಾರ್ ಮಾತಾನಾಡಿ, ಮಾನ್ಯ ಮುಖ್ಯಮಂತ್ರಿಗಳು ಆಯವ್ಯಯ ಭಾಷಣದಲ್ಲಿ ಗ್ರಾಮ-ಒನ್ ಯೋಜನೆ ಘೋಷಿಸಿದ್ದರು. ಅದರಂತೆ ಇಂದು ಮಾಳಗೊಂಡನಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು ಇದೊಂದು ಚರಿತ್ರಾರ್ಹ ಕಾರ್ಯಕ್ರಮವಾಗಿದೆ. ಹಾಗೂ ಈ ಗ್ರಾಮದ ಹೆಸರು ರಾಜ್ಯಾಂದ್ಯಂತ ಚಿರಪರಿಚಿತವಾಗಲಿದೆ ಎಂದರು
5000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಇಂತಹ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು ದಾವಣಗೆರೆ ಜಿಲ್ಲೆಯಲ್ಲಿ 100 ಗ್ರಾಮಗಳಲ್ಲಿ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.

ಮಾನ್ಯ ಮುಖ್ಯಮಂತ್ರಿಗಳು ಇಂತಹ ಕಾರ್ಯಕ್ರಮಕ್ಕೆ ಬೆಂಬಲ ನೀಡಿ ಬೆನ್ನು ತಟ್ಟಿ ನಮ್ಮನ್ನು ಪ್ರೋತ್ಸಾಹಿಸಿದ್ದಾರೆ. ಈ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಎಲ್ಲಾ ಸವಾಲುಗಳನ್ನು ಎದುರಿಸಿ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕಾಗಿದೆ. ರಾಜ್ಯದ ಸಾಮಾನ್ಯ ನಾಗರೀಕನಿಗೂ ಸೇವೆ ಸಿಗುವಂತಹ ಕಾರ್ಯಕ್ರಮ ಇದೊಂದು ಮೈಲಿಗಲ್ಲು ಆಗಲಿದೆ. ಇದರೊಂದಿಗೆ ಮೈಕ್ರೋ ಬ್ಯಾಂಕಿಂಗ್ ಸೇವೆಗಳನ್ನು ಆರಂಭಿಸಲಾಗುತ್ತಿದ್ದು, ಗ್ರಾಮೀಣ ಭಾಗದ ಸ್ತ್ರೀಶಕ್ತಿ ಸಂಘಗಳಿಗೆ ಅನುಕೂಲವಾಗಲಿದೆ. ಈ ಹಿಂದೆ 2012ರಲ್ಲಿ ಮುಖ್ಯಮಂತ್ರಿಗಳು ಸಕಾಲ ಜವಾಬ್ದಾರಿ ನನಗೆ ನೀಡಿದಾಗ ಅದರಲ್ಲಿ 151 ಸೇವೆಗಳು ಇದ್ದವು.

ಇಂದು 1050ಕ್ಕೂ ಹೆಚ್ಚು ಸೇವೆಗಳು ಸಕಾಲದಲ್ಲಿ ಇದ್ದು, ಅದರಂತೆ ಗ್ರಾಮ-ಒನ್ ಕಾರ್ಯಕ್ರಮ ಕೂಡ ಯಶಸ್ವಿ ಆಗಲಿದೆ ಎಂದರು.
ಸಂಸದರಾದ ಜಿ.ಎಂ ಸಿದ್ದೇಶ್ವರ್ ಮಾತಾನಾಡಿ, ಸರ್ಕಾರದ ಹಲವಾರು ಸೇವೆಗಳನ್ನು ಈ ಕೇಂದ್ರಗಳಿಂದ ಪಡೆಯಬಹುದು. ಹಿರಿಯ ನಾಗರೀಕರು ತಮ್ಮ ಮನೆಬಾಗಿಲಲ್ಲಿ ಸೇವೆ ಪಡೆಯಬಹುದಾಗಿದ್ದು ಅಧಿಕಾರಿಗಳು ತಮ್ಮ ಮನೆ ಬಾಗಿಲಲಿಗೆ ಬಂದು ಸೇವೆ ನೀಡಲಿದ್ದಾರೆ ಹಾಗಾಗಿ ಈ ಕೇಂದ್ರಗಳ ಸದ್ಬಳಕೆ ಮಾಡಿಕೊಳ್ಳಬೇಕು. ಹಾಗೂ ಇಡೀ ರಾಜ್ಯಾಂದ್ಯಾಂತ ಈ ಕೇಂದ್ರಗಳು ಸೇವೆ ನೀಡಲಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಎಸ್.ಎ ರವೀಂದ್ರನಾಥ್ ಮಾತಾನಾಡಿ, ಇಂತಹ ಒಂದು ಅಭೂತಪೂರ್ವ ಕಾರ್ಯಕ್ರಮಕ್ಕೆ ನನ್ನ ಕ್ಷೇತ್ರವನ್ನು ಆಯ್ಕೆಮಾಡಿಕೊಂಡಿರುವುದು ಅಭಿನಂದನಾರ್ಹ ಹಾಗೂ ರಾಜ್ಯದಲ್ಲಿಯೇ ಗ್ರಾಮ-ಒನ್ ಕಾರ್ಯಕ್ರಮ ಆರಂಭವಾಗುತ್ತಿರುವ ಈ ಸೇವೆ ನೀಡುತ್ತಿರುವ ಮೊದಲ ಗ್ರಾಮ ಇದಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎಂ.ಪಿ. ರೇಣುಕಾಚಾರ್ಯ, ಜಗಳೂರು ಶಾಸಕರಾದ ಎಸ್.ವಿ ರಾಮಚಂದ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾಜಗದೀಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ ಸಿಇಒ ಪದ್ಮಬಸವಂತಪ್ಪ, ಎಸ್.ಪಿ. ಹನುಮಂತರಾಯ ಉಪಸ್ಥಿತಿರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಚಾಲನೆ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 125 ಕೋಟಿ ರೂ. ವೆಚ್ಚದಲ್ಲಿ ಒಟ್ಟು 49 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ದಾವಣಗೆರೆ ನಗರ ಸಮಗ್ರ ಅಭಿವೃದ್ಧಿ ಹೊಂದಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಭಾನುವಾರ ನಗರದ ಪಿಜಿ ಬಡಾವಣೆಯ ಡಾ.ಎಂ.ಸಿ.ಮೋದಿ ರಸ್ತೆಯಲ್ಲಿ ಮಹಾನಗರಪಾಲಿಕೆಯ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಶಿಲನ್ಯಾಸ ನೆರವೇರಿಸುವ ಮೂಲಕ ಚಾಲನೆ ನೀಡಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 1500 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ 10 ನಗರಪಾಲಿಕೆಗಳಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ಯಡಿಯೂರಪ್ಪ ನಾಯಕತ್ವದಲ್ಲಿ ಈಗಾಗಲೇ ಹಲವು ಯೋಜನೆ ನೆರವೇರಿದೆ.

ಕೇಂದ್ರ ಸರ್ಕಾರವು ರಾಜ್ಯದ ಹಲವು ಯೋಜನೆಗಳಿಗೆ ಹೆಚ್ಚಾಗಿ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿದ್ದು, ಈ ಕುರಿತು ವಾಣಿಜ್ಯ ಮತ್ತು ಕೈಗಾರಿಕ ಸಚಿವರಾದ ಪಿಯೂಷ್ ಗೋಯಲ್ ಜೊತೆ ಮಾತನಾಡಿದ್ದೇನೆ ಎಂದ ಅವರು,
ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ 8 ರಿಂದ 10 ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮೆಗಾ ಟೆಕ್ಸ್‍ಟೈಲ್ ಪಾರ್ಕ್‍ಗಳನ್ನು ಮಾಡಬೇಕು.

ಹಾಗೂ ರಾಜ್ಯಕ್ಕೆ 3 ಮೆಗಾ ಟೆಕ್ಸ್‍ಟೆಲ್ ಆಗಬೇಕು. ಆಟೋ ಮೊಬೈಲ್ ಕ್ಷೇತ್ರಗಳಲ್ಲಿ ಕ್ಲಸ್ಟರ್ ಹೆಚ್ಚಿಗೆ ಮಾಡಬೇಕು ಎನ್ನುವ ಉದ್ದೇಶದಿಂದ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಹಂತ ಹಂತವಾಗಿ ಇವುಗಳನ್ನು ಸಾಕಾರ ಮಾಡುವ ಭರವಸೆ ಹೊಂದಿದ್ದೇನೆ ಎಂದು ಹೇಳಿದರು.

ಅಮೃತ ಗ್ರಾಮಗಳ ಯೋಜನೆಯಡಿ ಹಲವು ಹಣಕಾಸಿನ ಯೋಜನೆಗಳನ್ನು ರೂಪಿಸಿ ಕೆಲಸ ಮಾಡಿದಾಗ ಹೆಚ್ಚುವರಿಯಾಗಿ ಪ್ರತೀ ಗ್ರಾಮ ಪಂಚಾಯಿತಿಗೆ ರೂ.25 ಲಕ್ಷ ಅನುದಾನ ಸಿಗಲಿದೆ. ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರೈತರು ರೇಷ್ಮೆ ಕೃಷಿಯನ್ನು ಅಭಿವೃದ್ಧಿ ಪಡಿಸಿದ್ದು, ಶ್ರೇಷ್ಠ ಗುಣಮಟ್ಟದ ರೇಷ್ಮೆ ಬೆಳೆಯುತ್ತಿದ್ದು, ವಿದೇಶದಿಂದ ಆಮದಾಗುವ ರೇಷ್ಮೆಗೆ ಸರಿಸಮಾನವಾಗಿದ್ದರಿಂದ ಹೆಚ್ಚಿನ ಬೇಡಿಕೆಯಿದೆ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿಯೊಂದಿಗೆ ಹಲವಾರು ಕಾಮಗಾರಿಗಳನ್ನು ಒಂದೆ ಕಡೆ ಮಾಡಿದ್ದು, ದಾವಣಗೆರೆಯ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಎಸ್.ಸಿ.ಎಸ್.ಪಿ (ಪರಿಶಿಷ್ಟ ಜಾತಿ)ಯಡಿ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಗೆ 360 ಲಕ್ಷ ರೂ., ಕಾಮಗಾರಿಗಳಿಗೆ 1440 ಲಕ್ಷ ರೂ., ಹಾಗೂ ಟಿಎಸ್‍ಪಿ (ಪರಿಶಿಷ್ಟ ಪಂಗಡ) ದಡಿ ಪೌರಕಾರ್ಮಿಕರಿಕರ ಗೃಹ ಭಾಗ್ಯ ಯೋಜನೆಗೆ 146.10 ಲಕ್ಷ ರೂ., ಕಾಮಗಾರಿಗಳಿಗೆ 584.40 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಇನ್ನೂ ಸಾಮಾನ್ಯ ಕಾಮಗಾರಿಗಳಿಗೆ 5469.50 ಲಕ್ಷ ರೂ. ಮೀಸಲಿಡಲಾಗಿದೆ ಎಂದರು.

ಮಹಾನಗರ ಪಾಲಿಕೆಯ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 10 ಉದ್ಯಾನವನಗಳು, 2 ಕಾಲೇಜುಗಳಿಗೆ ಪರಿಕರ ಒದಗಿಸುವುದು, 74.995 ಕಿ.ಮೀ ಸಿ.ಸಿ. ಚರಂಡಿ ನಿರ್ಮಾಣ, 03.750 ಕಿ.ಮೀ ಒಳಚರಂಡಿ ನಿರ್ಮಾಣ, 18.551 ಕಿ.ಮೀ ಡಾಂಬಾರ್ ರಸ್ತೆ, 17.932 ಕಿ.ಮೀ ಕಾಂಕ್ರಿಟ್ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಎ.ಶಿವಯೋಗಿ ಸ್ವಾಮಿ, ಮಹಾನಗರಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ರಿಷ್ಯಂತ್, ಮಹಾನಗರಪಾಲಿಕೆ ಉಪಮೇಯರ್ ಸೌಮ್ಯ ನರೇಂದ್ರಕುಮಾರ್, ನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಪಾಲಿಕೆ ಸದಸ್ಯರಾದ ಪ್ರಸನ್ನ ಕುಮಾರ್, ಕೆ.ಟಿ.ವೀರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಜಿಲ್ಲೆಯ 582 ಕೇಂದ್ರಗಳಲ್ಲಿ ಬೃಹತ್ ಲಸಿಕಾ ಮೇಳ ; ನಗರದಲ್ಲಿ ವ್ಯಾಕ್ಸಿನೇಷನ್ ವೀಕ್ಷಿಸಿದ ಸಂಸದರು

Published

on

ಸುದ್ದಿದಿನ,ದಾವಣಗೆರೆ : ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಸೂಚನೆಯಂತೆ ದಾವಣಗೆರೆ ನಗರದಲ್ಲಿ ಶುಕ್ರವಾರ ವಿದ್ಯಾನಗರದ ಶಿವ ಪಾರ್ವತಿ ದೇವಸ್ಥಾನದಲ್ಲಿ ಏರ್ಪಡಿಸಿದ ಬೃಹತ್ ಲಸಿಕಾ ಮೇಳದ ಅಂಗವಾಗಿ ನಡೆದ ಲಸಿಕಾಕರಣ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಭಾಗವಹಿಸಿ, ಫಲಾನುಭವಿಗಳ ಯೋಗಕ್ಷೇಮ ವಿಚಾರಿಸಿದರು.

ಜಿಲ್ಲೆಯಾದ್ಯಂತ ಶುಕ್ರವಾರದಂದು ಬೃಹತ್ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದ್ದು, ನಗರದ ಮೋತಿವೀರಪ್ಪ ಕಾಲೇಜು ಹಾಗೂ ಸೂಪರ್ ಮಾರ್ಕೆಟ್ ಕೇಂದ್ರಗಳಲ್ಲಿ ಸಂಸದರೊಂದಿಗೆ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮುಂತಾದ ಅಧಿಕಾರಿಗಳು ಭೇಟಿ ನೀಡಿ ಲಸಿಕೆ ಮೇಳದಲ್ಲಿ ಪಾಲ್ಗೊಂಡು, ಲಸಿಕೆ ಕಾರ್ಯಕ್ರಮ ವೀಕ್ಷಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಪ್ರಪಂಚದಲ್ಲೇ ಅತೀ ದೊಡ್ಡ ವ್ಯಾಕ್ಸಿನೇಷನ್ ಮೇಳ ಇದಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮ್ಮ ಸರ್ಕಾರ ಜನರ ಹಿತಕ್ಕೆ ಬದ್ಧವಾಗಿದೆ ಎಂದರು.

ಜಿಲ್ಲೆಯ 195 ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಪಟ್ಟಣ ಪಂಚಾಯಿತಿ, ನಗರ ಸಭೆ, ವ್ಯಾಪ್ತಿಯಲ್ಲಿ 5 ರಿಂದ 6 ಕಡೆ ಕೋವಿಡ್ ನಿರೋಧಕ ಲಸಿಕೆ ಹಾಕಲಾಗುತ್ತಿದ್ದು, ದಾವಣಗೆರೆ ನಗರದ ಒಟ್ಟು 57 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ನಗರದ 45 ವಾರ್ಡ್ ಹಾಗೂ ಸಿ.ಜಿ. ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್ ನೀಡುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ 200 ರಿಂದ 500 ಜನರಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಶುಕ್ರವಾರ ಒಂದೇ ದಿನ ಒಟ್ಟು 01 ಲಕ್ಷ ಲಸಿಕೆ ನೀಡುವ ಗುರಿ ಹೊಂದಿದ್ದೇವೆ. ಈಗಾಗಲೇ 10 ಲಕ್ಷದ 52 ಸಾವಿರ ಜನರಿಗೆ ಲಸಿಕೆ ನೀಡಲಾಗಿದ್ದು, 11.5 ಲಕ್ಷದ ಗುರಿ ಸಾಧಿಸಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ ಎಂದರು.

ನಗರದ ದೊಗ್ಗಳ್ಳಿ ಕಾಂಪೌಡ್‍ಗೆ ಭೇಟಿ

ನಗರದ ದೊಗ್ಗಳ್ಳಿ ಕಾಂಪೌಡ್‍ಗೆ ಭೇಟಿ ನೀಡಿ, ಅಲ್ಲಿಯ ಕೊಳಚೆ ಪ್ರದೇಶವನ್ನು ವೀಕ್ಷಿಸಿದ ಸಂಸದರು, ಅಲ್ಲಿಯ ಜನರಿಗೆ ಕೊಳಚೆ ಪ್ರದೇಶದಲ್ಲಿ ಓಡಾಡಲು ಅವ್ಯವಸ್ಥೆಯಾಗುತ್ತಿದೆ. ಮಳೆಗಾಲದಲ್ಲಿ ನೀರು ಶೇಖರಣೆಯಾಗಿ ಸುತ್ತ-ಮುತ್ತಲಿನ ಪ್ರದೇಶ ಮಲಿನಗೊಂಡಿದ್ದು, ಜನ-ಜೀವನ ಜೀವಿಸಲು ಕಷ್ಟಕರವಾಗಿದೆ. ಕೂಡಲೇ ಈ ಸ್ಥಳವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಸುವ್ಯವಸ್ಥಿತ ರಸ್ತೆ ಹಾಗೂ ಯುಜಿಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಿದರು.

ಈ ವೇಳೆ ಮಹಾನಗರ ಪಾಲಿಕೆಯ ಮಹಾಪೌರ ಎಸ್.ಟಿ.ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಡಿಹೆಚ್‍ಒ ಡಾ.ನಾಗರಾಜ್, ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಸೆ.30 ರಂದು ಬೃಹತ್ ಲೋಕ್‍ಅದಾಲತ್

Published

on

ಸುದ್ದಿದಿನ,ದಾವಣಗೆರೆ : ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ ಹಾಗೂ ಜಗಳೂರು ನ್ಯಾಯಾಲಯಗಳ ಆವರಣದಲ್ಲಿ ಸೆಪ್ಟಂಬರ್ 30 ರಂದು ಮೆಗಾ ಲೋಕ್ ಅದಾಲತ್ ಆಯೋಜಿಸಲಾಗಿದೆ.

ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಹಾಗೂ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್‍ರವರು ಲೋಕ್ ಅದಾಲತ್ ಮೂಲಕ ಅತೀ ಹೆಚ್ಚು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಬಯಸಿದ್ದು, ಈಗ ಮತ್ತೊಮ್ಮೆ ಪ್ರಾಧಿಕಾರವು ಸೆ.30 ರಂದು ಮೆಗಾ ಲೋಕ್ ಅದಾಲತ್ ಮೂಲಕ ಅತೀ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಲಾಗಿದೆ. ಹೀಗಾಗಿ ಜಿಲ್ಲೆಗಳಲ್ಲಿರುವ ಎಲ್ಲಾ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಮೆಗಾ ಲೋಕ್ ಅದಾಲತ್‍ನ್ನು ಸೆ. 30 ರಂದು ಆಯೋಜಿಸಲಾಗಿದೆ.

ಮೆಗಾ ಲೋಕ್ ಅದಾಲತ್‍ನಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಪರಿಹರಿಸಿಕೊಳ್ಳಲು ಸಾರ್ವಜನಿಕರಿಗೆ ಮೆಗಾ ಲೋಕ್ ಅದಾಲತ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ. ರಾಜಿಯಾಗಬಲ್ಲ ಎಲ್ಲಾ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟರ್ ವಾಹನ ಅಪಘಾತ ಪರಿಹಾರ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಭೂಸ್ವಾಧೀನ ಪರಿಹಾರ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಎಂ.ಎಂ.ಡಿ.ಆರ್ ಕಾಯ್ದೆಯಡಿಯ ಪ್ರಕರಣಗಳನ್ನು ಮೆಗಾ ಲೋಕ್ ಅದಾಲತ್ ನಲ್ಲಿ ಪರಿಹರಿಸಿಕೊಳ್ಳಬಹುದು.

ವೈವಾಹಿಕ ಕುಟುಂಬ ನ್ಯಾಯಾಲಯದ ಪ್ರಕರಣಗಳು (ವಿಚ್ಚೇದನ ಹೊರತುಪಡಿಸಿ), ಪಿಂಚಣಿ ಪ್ರಕರಣಗಳು, ವೇತನ ಭತ್ಯೆ ಸಂಬಂಧಿಸಿದ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕ, ಕೈಗಾರಿಕೆ ಕಾರ್ಮಿಕರ ವೇತನ, ಕಾರ್ಮಿಕ ವಿವಾದ ಇತ್ಯಾದಿ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು.

ಕೋವಿಡ್-19 ಸೋಂಕಿನಿಂದ ಸಾರ್ವಜನಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ಆರ್ಥಿಕ ಸಂಕಷ್ಟದಿಂದ ಹೊರಬರಲು ಅವಕಾಶವಿದೆ. ನ್ಯಾಯಾಲಯದ ಸಂಪೂರ್ಣ ಶುಲ್ಕವನ್ನು ಮರುಪಾವತಿ ಮಾಡಲಾಗುವುದು. ಕಕ್ಷಿಗಾರರು ಭೌತಿಕವಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮುಖಾಂತರ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು.

ಕಳೆದ ಆ.14 ರಂದು ಜರುಗಿದ ಮೆಗಾ ಲೋಕ್ ಅದಾಲತ್‍ನಲ್ಲಿ ಜಿಲ್ಲೆಯಲ್ಲಿ 8050 ಪ್ರಕರಣಗಳು ಇತ್ಯರ್ಥಗೊಂಡು 13.88 ಕೋಟಿ ರೂ. ಗಳ ಪರಿಹಾರ ಒದಗಿಸಲಾಗಿದೆ. ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಜೀವ ವಿಮಾ ನಿಗಮ ಅಧಿಕರಿಗಳು, ವಕೀಲರು, ಎಂ.ವಿ.ಸಿ ಪ್ರಕರಣದ ಅರ್ಜಿದಾರ ವಕೀಲರುಗಳು, ಭೂ ವಿಜ್ಞಾನ ಇಲಾಖೆ, ಬ್ಯಾಂಕ್ ಅಧಿಕಾರಿಗಳು, ಶಿಕ್ಷಣ ಇಲಾಖೆ ಸೇರಿದಂತೆ ಲೋಕ್ ಅದಾಲತ್ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ಸಾರ್ವಜನಿಕರು ಮೆಗಾ ಲೋಕ್ ಅದಾಲತ್ ನ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಹಳೆಯ ನ್ಯಾಯಾಲಯ ಸಂಕಿರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದಾವಣಗೆರೆ ಇವರನ್ನು ದೂ.ಸ:08192-296364, ತಾಲ್ಲೂಕು ಕಾನೂನು ಸೇವಾ ಸಮಿತಿಗಳಾದ ಹರಿಹರ 08192-296885, ಹೊನ್ನಾಳಿ 08188-251732, ಚನ್ನಗಿರಿ 08189-229195 ಮತ್ತು ಜಗಳೂರು 08196-227600 ಇವರನ್ನು ಸಂಪರ್ಕಿಸಬಹುದೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಹಾಗೂ ಹಿರಿಯ ಸಿವಿಲ್ ನ್ಯಾಯಾದೀಶರಾದ ಪ್ರವೀಣ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending