Connect with us

ಭಾವ ಭೈರಾಗಿ

ಕಥೆ | ಜೀವಧ್ವನಿ

Published

on

  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ಬೆಟ್ಟದ ತುತ್ತತುದಿಗೆ ಚಿಮ್ಮುತ್ತಾ ನೀರು ತನ್ನೊಳಗಿನ ಅಳಲನ್ನೆಲ್ಲಾ ತೋಡಿಕೊಳ್ಳತೊಡಗಿತು. ಮೋಡದೊಳಗಿಂದ ತೂರಿಬಂದು ಭೂಮಿಗೆ ಸುರಿದು ನದಿಯಾಗಿ ಹರಿಯುತ್ತಾ ಸಾಗರದವರೆಗೆ ತಲುಪಿಕೊಳ್ಳುವವರೆಗೆ ಎದುರುಗೊಳ್ಳುವ ತರಹೇವಾರಿ ಸಂಕಟಗಳನ್ನು ನಿವೇದಿಸಿಕೊಳ್ಳತೊಡಗಿತು.

ನೀಲಾಕಾಶದೆತ್ತರಕ್ಕೆ ಚಿಮ್ಮುತ್ತಲೇ ತನ್ನನ್ನು ಅರ್ಥಮಾಡಿಕೊಳ್ಳುವವರು ಯಾರಾದರೂ ಇದ್ದಾರಾ ಎಂದು ಪ್ರಶ್ನಿಸತೊಡಗಿತು. ಬಾವಿ, ಕೆರೆ, ಸಮುದ್ರ ಎಲ್ಲಿಯೂ ತಾನು ನೆಮ್ಮದಿಯಾಗಿಲ್ಲ ಎಂಬುದನ್ನು ಸಾರಿ ಸಾರಿ ಹೇಳತೊಡಗಿತು. ತಾನು ಖಾಲಿಯಾಗುತ್ತಾ ಭೂಮಿಯನ್ನು ಬರಡಾಗಿಸುವ ಎಚ್ಚರಿಸುವ ಎಲ್ಲ ಬಗೆಯ ತಂತ್ರಗಳನ್ನು ತೂರಿದರೂ ನರರ ಅತಿರೇಕಗಳು ಮುಂದುವರೆಯುತ್ತಿರುವುದರ ಬಗೆಗಿನ ಒಡಲಾಳದ ಬೇಗೆಯನ್ನು ವ್ಯಕ್ತಪಡಿಸುತ್ತಲೇ ಇತ್ತು.

ಸಮುದ್ರದ ದಂಡೆಯ ಕಡೆಗೆ ನುಗ್ಗುತ್ತಾ ಅಲೆಗಳ ಮೂಲಕ ಆರ್ಭಟಿಸಿದರೂ ಪ್ರಯೋಜನವಾಗದ ಕುರಿತು ಬೇಸರಿಸಿಕೊಳ್ಳುತ್ತಿತ್ತು. ಕೆಲಕಾಲ ಭೂಮಿಗೆ ಹನಿಯಾಗಿ ಬಾರದೇ ಎಲ್ಲೋ ಅಡಗಿ ಕುಳಿತುಕೊಂಡರೂ ಜಗತ್ತು ಮತ್ತಷ್ಟು ಕಠಿಣವಾಗುತ್ತಿರುವುದು ಅರಿವಿಗೆ ಬರುತ್ತಲೇ ಇತ್ತು. ಇವೆಲ್ಲವುಗಳ ನಡುವೆಯೇ ತನ್ನೊಳಗಿನ ಸೃಷ್ಟಿಪರ ಬದ್ಧತೆ ಈಗಲೂ ಮುಂದುವರೆಯುತ್ತಿರುವುದರ ಬಗ್ಗೆ ಒಂದಷ್ಟು ಹೆಮ್ಮೆಯ ಭಾವವೂ ಆಗಾಗ ಮಿಂಚಿ ಮಾಯವಾಗುತ್ತಿತ್ತು.

ತನ್ನ ಇರುವಿನೊಂದಿಗಿನ ಜಗದ ಅಸ್ತಿತ್ವದ ಬಗ್ಗೆ ನೆನಪಿಸಿಕೊಂಡು ಖುಷಿಯಾಗುತ್ತಿತ್ತು. ಜಗವನ್ನು ಶುದ್ಧವಾಗಿಸುವ ಜವಾಬ್ದಾರಿ ಸಿಕ್ಕಿರುವುದೇ ತನ್ನ ಹೆಚ್ಚುಗಾರಿಕೆ ಎಂಬ ಭಾವ ಒಡಲುಗೊಳ್ಳುತ್ತಿತ್ತು. ತಕ್ಷಣವೇ ತನ್ನನ್ನು ಯಾರೋ ಮತ್ತೆ ಮತ್ತೆ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ ಎಂಬ ಆತಂಕ ಆವರಿಸಿಕೊಳ್ಳುತ್ತಿತ್ತು. ತನ್ನನ್ನೇ ಇಲ್ಲವಾಗಿಸುವ ಹುನ್ನಾರಗಳು ಜಗದಾದ್ಯಂತ ನಡೆಯುತ್ತಿರುವ ಸುಳಿವುಗಳು ಗಮನಕ್ಕೆ ಬಂದಾಗಲಂತೂ ಭಯಭೀತಗೊಳ್ಳುತ್ತಿತ್ತು. ತನ್ನ ವಿರುದ್ಧ ಸಮರ ಸಾರುವ ಮತ್ತು ತನ್ನನ್ನು ಉಳಿಸಿಕೊಳ್ಳುವ ಇರಾದೆಯನ್ನು ಬೆಂಬಲಿಸುವ ಎರಡು ಬಗೆಯ ವೈಚಿತ್ರ್ಯವು ಒಗಟೆನ್ನಿಸುತ್ತಿತ್ತು.

ತಾನು ಇಲ್ಲವಾದರೇನಂತೆ, ಸೃಷ್ಟಿ ಮತ್ತೊಂದನ್ನು ರೂಪಿಸಬಹುದು ಎಂಬ ಸಮಾಧಾನವನ್ನೂ ತಂದುಕೊಳ್ಳುತ್ತಿತ್ತು. ತನ್ನೊಳಗಿನ ಚಲನೆಯ ಯಾನವನ್ನು ಮುಂದುವರೆಸಿಕೊಳ್ಳಬೇಕೆಂಬ ಆಶಾವಾದ ಎಂದೂ ಬಿಟ್ಟುಕೊಡಬಾರದು ಎಂದುಕೊಳ್ಳುತ್ತಿತ್ತು. ಬಹುಹಿಂದಿನಿಂದಲೂ ಸಿಹಿ-ಕಹಿಯ ಜೊತೆಗಿನ ಪ್ರಯಾಣದ ಅನಿವಾರ್ಯತೆಯನ್ನು ಕಂಡುಕೊಳ್ಳುತ್ತಾ ತನ್ನೊಳಗೆ ಚೈತನ್ಯವನ್ನು ರೂಪಿಸಿಕೊಳ್ಳುತ್ತಿತ್ತು.

ತೀರಾ ಇತ್ತೀಚೆಗಂತೂ ತನಗೆ ಮಾತು ಬಾರದ್ದರ ಬಗೆಗೆ ಕೊರಗಿಕೊಳ್ಳುತ್ತಿತ್ತು. ‘ಮಾತು ಬಾರದಿದ್ದರೇನಂತೆ, ಹರಿಯುವಾಗ ನಿನ್ನೊಳಗಿನ ನಿನಾದ ನಿನ್ನನ್ನು ಸಂಗೀತ ಜಗತ್ತಿನ ಶ್ರೇಷ್ಠ ಪ್ರತಿನಿಧಿಯನ್ನಾಗಿಸಿದೆ’ ಎಂದು ಆತ್ಮಸಾಕ್ಷಿ ಹೇಳಿದಾಕ್ಷಣ ಸಂತಸಗೊಳ್ಳುತ್ತಿತ್ತು. ಧುಮ್ಮಿಕ್ಕುವ ಜೀವಂತಿಕೆಯ ದನಿಯ ಭಾಷೆಯೇ ನಿನ್ನದಾಗಿರುವಾಗ ಮಾತಿನ ಸೀಮಿತ ಚೌಕಟ್ಟಿನ ಹಂಗೇಕೆ ನಿನಗೆ? ಎಂಬ ಪ್ರಶ್ನೆ ಎದುರುಗೊಳ್ಳುತ್ತಿತ್ತು. ಜಗತ್ತನ್ನು ನಾನೂ ಒಂದಿಷ್ಟು ನೋಡಬೇಕಿತ್ತು ಎಂದುಕೊಂಡಾಗಲೆಲ್ಲಾ ಕೋಟಿಕೋಟಿ ಜೀವರಾಶಿಗಳಿಗೆ ಇಂಬುಗೊಟ್ಟ ಹೆಗ್ಗಳಿಕೆಯೇ ನಿನ್ನೊಂದಿಗಿರುವಾಗ ಕಣ್ಣುಗಳನ್ನು ಹೊಂದುವ ಯಕಃಶ್ಚಿತ್ ಆಸೆ ಅತ್ಯಂತ ಸಣ್ಣದು ಎಂಬ ಒಳಸಾಂತ್ವನ ತೂರಿಬರುತ್ತಿತ್ತು.

ಸ್ಪರ್ಶಮಾತ್ರದಿಂದ ಜೀವಸಂಕುಲಕ್ಕೆ ಹಿತಾನುಭವ ನೀಡಿದಾಗಿನ ಪರಿಣಾಮಗಳನ್ನು ಗೊತ್ತುಮಾಡಿಕೊಳ್ಳುವ ಇರಾದೆ ಒಳಗೊಳಗೆ ಮೂಡಿದಾಗಲೆಲ್ಲಾ ಪ್ರತಿಫಲಾಪೇಕ್ಷೆ ಸಲ್ಲದು ಎಂಬ ಎಚ್ಚರ ಗೋಚರವಾಗಿಬಿಡುತ್ತಿತ್ತು. ಚಿಗುರಿಸುವ ತನ್ನೊಳಗಿನ ಶಕ್ತಿಯ ಸ್ವರೂಪವನ್ನು ಸ್ವತಃ ತಿಳಿದುಕೊಳ್ಳುವ ಶತಪ್ರಯತ್ನ ನಡೆಸುವಾಗ ಪ್ರಾಕೃತಿಕ ನಿಯುಕ್ತಿಯಿಂದ ವಿಮುಖಗೊಳ್ಳಕೂಡದು ಎಂಬ ಅಂತರಂಗದ ತಾಕೀತು ಸರಿಹಾದಿಯಲ್ಲಿರಿಸುತ್ತಿತ್ತು.
ಹೀಗೆ ಯೋಚಿಸುತ್ತಿರುವಾಗಲೇ ನನ್ನಿರುವೇ ಇಲ್ಲವಾಗಿಬಿಟ್ಟರೆ ಹೇಗೆ ಎಂಬುದು ಹೊಳೆಯಿತು.

ಆಗಲಾದರೂ ಮನುಷ್ಯರೆನ್ನಿಸಿಕೊಂಡವರೆಲ್ಲರೂ ಒಂದಾಗಿಬಿಡಬಹುದು ಎಂಬ ಆಶಾವಾದವು ಚಿಗುರೊಡೆಯಿತು. ತಕ್ಷಣವೇ ನಾನಿಲ್ಲದಿದ್ದರೆ ಮನುಷ್ಯ ಸೇರಿದಂತೆ ಸಕಲ ಜೀವಸಂಕುಲವೇ ಇಲ್ಲವಾಗಿಬಿಡುತ್ತದೆ ಎಂಬುದು ಅರಿವಿಗೆ ಬಂತು. ಹೀಗೆಲ್ಲಾ ನೀರು ತನ್ನೊಳಗೆ ಅಲ್ಲೋಲಕಲ್ಲೋಲ ಅಲೆಗಳನ್ನೆಬ್ಬಿಸಿಕೊಳ್ಳುತ್ತಿರುವುದಕ್ಕೆ ಕಾರಣಗಳೂ ಇವೆ. ನನ್ನ ಮೇಲೆ ಹಕ್ಕು ಸ್ಥಾಪಿಸಿಕೊಂಡವರೆಲ್ಲರೂ ಮತ್ತೊಬ್ಬರ ಮೇಲೆ ಪ್ರಾಬಲ್ಯ ಮೆರೆಯುವ ಸಂಕೇತವಾಗಿಸಿಕೊಂಡಿದ್ದರ ನೆನಪು ನೀರಿನಾಳದಲ್ಲೆಲ್ಲೋ ಈಗಲೂ ಇದೆ.

ನನ್ನನ್ನು ಒಬ್ಬರು ಮುಟ್ಟಿದರೆ ಸರಿ, ಮತ್ತೊಬ್ಬರು ಮುಟ್ಟಿದರೆ ಅಪವಿತ್ರ, ಮೈಲಿಗೆ ಎಂಬ ಸಂಕುಚಿತೆಯ ಪಳೆಯುಳಿಕೆ ಮತ್ತಷ್ಟು ಉತ್ಸಾಹ ಗಳಿಸಿಕೊಳ್ಳುತ್ತಿರುವ ಸುಳಿವುಗಳು ಸಿಗುತ್ತಿದ್ದವು. ದಣಿವಾರಿಸಿಕೊಳ್ಳುವಾಗ ಜೀವಗಳಿಗೆ ಸಾಥಿಯಾಗಿರುವ ಬಗ್ಗೆ ಧನ್ಯತೆ ಇರಿಸಿಕೊಳ್ಳುವ ಕಾಲಕ್ಕೆ ಮನುಜನೆಂಬೋ ಮನುಜನಿಂದ ಎದುರುಗೊಳ್ಳುವ ಸಂಕಟಗಳನ್ನು ನೆನೆದು ವ್ಯಥೆಯ ತೆಕ್ಕೆಗೀಡಾಗುತ್ತಿತ್ತು. ಆ ಕ್ಷಣಕ್ಕೆ ಇವರೆಲ್ಲರಿಗೆ ಪಾಠ ಕಲಿಸಬೇಕು ಎಂದುಕೊಳ್ಳುತ್ತಿತ್ತು.

ಒಂದು ತಿಂಗಳ ಕಾಲ ಕಣ್ಮರೆಯಾಗಬೇಕು ಎಂಬ ಠರಾವು ತೆಗೆದುಕೊಳ್ಳುತ್ತಿತ್ತು. ಸೂರ್ಯನ ಶಾಖವ ಎದುರುಗೊಂಡು ಅದೃಶ್ಯಗೊಳ್ಳಬಹುದು ಎಂದು ಲೆಕ್ಕ ಹಾಕುತ್ತಿತ್ತು. ಈ ಕಾರಣಕ್ಕಾಗಿಯೇ ತನ್ನೊಳಗೆ ಮಂಕು ಕವಿದು ಭೂಮಿತಾಯಿಯ ಗರ್ಭದೊಳಗೆ ಅಡಗಿ ಕುಳಿತುಕೊಂಡಾಗ ಜೀವಜಗದೊಳಗೆ ಏನೆಲ್ಲಾ ತಳಮಗಳಾಗುತ್ತಿದ್ದವು.

ಮನುಜನೆಡೆಗಿನ ಅಸಮಾಧಾನಕ್ಕೆ ಉಳಿದ ಜೀವಸಂಕುಲವ ಇಕ್ಕಟ್ಟಿಗೆ ಸಿಲುಕಿಸುವುದು ಸರಿಯಲ್ಲ ಎಂಬ ವಿವೇಚನೆ ಹೊಳೆದು ಮತ್ತೆ ನೆಲದ ಮೇಲಿನ ತನ್ನ ನಡಿಗೆಯನ್ನು ಮುಂದುವರೆಸುತ್ತಿತ್ತು. ಮೋಡದೊಳಗಿನ ಹನಿಗಳ ಬಳಗವನ್ನು ಸೇರಿಕೊಂಡು ಮತ್ತೆ ನೆಲದೆಡೆಗೆ ಪ್ರಯಾಣ ಬೆಳೆಸುವ ತನ್ನ ಎಂದಿನ ದಿನಚರಿಯನ್ನು ಚಾಲ್ತಿಯಿರಿಸಿಕೊಳ್ಳುತ್ತಿತ್ತು.

ಆದರೂ ಈ ಮನುಜಲೋಕ ತನ್ನೊಳಗೆ ಏನೆಲ್ಲಾ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಿದೆಯಲ್ಲಾ ಎಂಬ ಬಗೆಗಿನ ಕೊರಗಂತೂ ಕರಗುತ್ತಲೇ ಇರಲಿಲ್ಲ. ತಾನು ಹರಿಯುವ ನೆಲದ ಮೇಲೆಲ್ಲಾ ಮನುಷ್ಯನ ಹೆಜ್ಜೆಗುರುತುಗಳು ಅಮ್ಮನ ಮಡಿಲಲ್ಲಿ ಆಡುವ ಮಗುವಿನ ಮುಗ್ಧತೆಯನ್ನು ಸಂಕೇತಿಸುವ ಬದಲು ಮತ್ತೆ ಮತ್ತೆ ಸವಾಲೆಸೆಯುತ್ತಿದ್ದವು.

ತನ್ನೊಳಗೆ ವಿಷ ಬೆರೆಸುವ ಅವನ ಆಟಾಟೋಪದಿಂದ ಮೈಯೆಲ್ಲಾ ಉರಿದಂತಾಗುತ್ತದೆ. ಹರಿಯುವೆಡೆಯೆಲ್ಲೆಲ್ಲಾ ಇರುವ ಜೀವಗಳು ಕ್ರಮೇಣ ಜೀವ ಕಳೆದುಕೊಳ್ಳುತ್ತವೆ. ಹರಿಯುವುದಕ್ಕೆ ಬೇಕಾದ ತಳಪಾಯದ ಗರ್ಭಕ್ಕೇ ಕನ್ನ ಹಾಕಿ ದೋಚುವ ಅವನ ವಿಲಕ್ಷಣ ಸ್ವಭಾವದ ಬಗ್ಗೆ ವಿಪರೀತ ಸಿಟ್ಟಿದ್ದರೂ ತನ್ನೊಳಗಿನ ಮಾತೃತ್ವ ಅವನ ವಿರುದ್ಧ ದ್ವೇಷದ ಭಾವ ತಳೆಯುವುದಕ್ಕೆ ಬಿಡುತ್ತಿರಲಿಲ್ಲ.

ತನ್ನನ್ನು ಪೂಜಿಸಿ ದೈವತ್ವದ ಪಟ್ಟ ಕಟ್ಟುವ ಇದೇ ಮನುಜಕುಲದವರಿಂದಲೇ ತನಗೆ ಮತ್ತೆ ಮತ್ತೆ ಸಂಕಷ್ಟ ಬಂದೊದಗುತ್ತಿರುವುದನ್ನು ನೆನೆದು ವಿಸ್ಮಯಗೊಳ್ಳುತ್ತಿತ್ತು. ತನ್ನನ್ನು ಪ್ರೋಕ್ಷಿಸಿ ಮಂತ್ರದ ಉದ್ಘೋಷ ಮೊಳಗಿಸಿ ದೊಡ್ಡ ದೊಡ್ಡ ಬಂಗಲೆಗಳನ್ನು ಪ್ರವೇಶಿಸುವ ಮನುಷ್ಯರ ನಡವಳಿಕೆಗಳು ವಿಚಿತ್ರವೆನ್ನಿಸುತ್ತಿದ್ದವು. ಪ್ರೋಕ್ಷಣೆಯ ಬೆಂಬಲದಿಂದ ಬಣ್ಣಬಣ್ಣದ ಗೋಡೆಗಳಿಗೆ ಅಪ್ಪಳಿಸಿದಾಗ ಅವುಗಳೊಳಗೆ ಅವಿತು ಕುಳಿತ ಮರಳಿನ ಕಣಗಳು ರೋಧಿಸುತ್ತಿರುವುದು ಕೇಳುತ್ತಿತ್ತು.

ಸಿಮೆಂಟಿನ ಕಬಂಧ ಬಾಹುವಿನಲ್ಲಿ ಬಿಗಿಯಲ್ಪಟ್ಟು ನನ್ನೊಳಗೆ ಉಸಿರುಗಟ್ಟುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಿರುವುದನ್ನು ಆಲಿಸುತ್ತಿತ್ತು. ಪೂಜಾಕಳಸಗಳೊಳಗಿದ್ದಾಗ ಕೆಳಗಿನಿಂದಲೂ ಆ ಕಣಗಳು ಒಟ್ಟಾಗಿ ನಮ್ಮೆಲ್ಲರನ್ನೂ ನಿನ್ನ ಹರಿವಿನ ಯಾನದಲ್ಲಿ ಸೇರಿಸಿಕೊಂಡುಬಿಡು, ಈ ಗೃಹಬಂಧನಕ್ಕೊಳಗಾಗಿ ಅಸ್ತಿತ್ವವೇ ಇಲ್ಲವಾಗಿದೆ ಎಂದು ಕೂಗುತ್ತಿದ್ದವು.

ನೆಲದಮ್ಮನ ಸಹನೆಯ ಮುಂದೆ ತನಗೆದುರಾಗುತ್ತಿರುವ ಸಂಕಟಗಳು ಏನೂ ಅಲ್ಲ ಎಂದುಕೊಂಡ ಕಾರಣಕ್ಕಾಗಿಯೇ ಮನುಷ್ಯರಲ್ಲದ ಮನುಷ್ಯರ ಅತಿರೇಕಗಳನ್ನು ತಡೆದುಕೊಳ್ಳುವುದಕ್ಕೆ ಸಾಧ್ಯವಾಗಿತ್ತು. ಆದರೆ, ಇದೇಬಗೆಯ ಆಲೋಚನೆ ಮೋಡಗಳಿಗೆ ಬರುತ್ತಲೇ ಇರಲಿಲ್ಲ. ಅವುಗಳದ್ದೇನಿದ್ದರೂ ನೇರನಿಷ್ಠುರ ನಿಲುವು. ಅಯ್ಯೋ ಎಂದು ಕೊರಗುವಂಥ ಸ್ವಭಾವ ಅವುಗಳದ್ದಲ್ಲ. ಜಗದ ಉದ್ದಗಲ ಇದ್ದ ಮರಗಳ ಮಾರಣಹೋಮಕ್ಕೆ ಕಾರಣವಾಗಿರುವ ಅವರಿಗೆ ಪಾಠ ಕಲಿಸುವ ಹಠ.

ಈ ಹಠದ ಕಾರಣಕ್ಕಾಗಿಯೇ ಅವು ಸ್ಥಗಿತಗೊಳ್ಳುತ್ತಿದ್ದವು. ಕಣ್ಮರೆಯಾಗುತ್ತಿದ್ದವು. ಅವುಗಳ ನೆರವಿಲ್ಲದೇ ತನಗೆ ಸ್ವತಂತ್ರ ಅಸ್ತಿತ್ವವಿಲ್ಲ ಎಂಬುದು ನೀರಿಗೆ ತಿಳಿದಿರುವುದರಿಂದ ಏನೂ ಮಾಡುವಂತಿರಲಿಲ್ಲ. ಒಮ್ಮೊಮ್ಮೆ ಅವುಗಳ ಸಿಟ್ಟು ಹೇಗಿರುತ್ತದೆಂದರೆ ದಿಢೀರನೆ ಪ್ರತ್ಯಕ್ಷಗೊಂಡು ತನ್ನನ್ನು ಸೆಳೆದುಕೊಂಡು ಒಂದೇ ಸಮನೆ ನೆಲಕ್ಕಪ್ಪಳಿಸಿ ಸಕಲ ಜೀವರಾಶಿ ದಿಗಿಲುಗೊಳ್ಳುವಂತಾಗುತ್ತದೆ.

ಇದರ ಅಂತರಾಳವೆಲ್ಲವನ್ನೂ ಬಲ್ಲ ರಾಮು ಸುಮ್ಮನಿರುತ್ತಿರಲಿಲ್ಲ. ಅದಕ್ಕೆ ಕನ್ನಡಿ ಹಿಡಿಯುವ ಹಂಬಲ ಅವನದ್ದು. ಇವನ ಊರಿನವರೆಲ್ಲರೂ ತನ್ನನ್ನು ಗಂಗೆಯ ಹೆಸರಿನಲ್ಲಿ ಕರೆಯುತ್ತಿದ್ದರು. ಅವರೆಲ್ಲರಿಗೆ ಗಂಗೆಯಾದರೆ ಇವನಿಗೆ ಬರೀ ಹೆಸರಿನಿಂದ ಕರೆಯುವ ವ್ಯಕ್ತಿತ್ವವಷ್ಟೇ ಅಲ್ಲ. ತನ್ನೊಳಗೆ ಜೀವಂತಿಕೆಯನ್ನು ನೆಲೆಗೊಳಿಸಿದ ಮಾತೃತ್ವದ ಆದರ್ಶ. ರಾಮು ಎಂಬ ಮನುಷ್ಯ ದೇಹಿ ನದಿಯ ಸ್ವರೂಪದ ತನ್ನೊಂದಿಗೆ ಏರ್ಪಡಿಸಿಕೊಂಡ ಮಾತುಕತೆ ಉಳಿದ ಯಾವ ಜೀವಿಗಳಿಗೂ ಸಾಧ್ಯವಾಗಿರಲಿಲ್ಲ. ಇವನು ಬಂದನೆಂದರೆ ಆಯಿತು.

ಗಂಗೆಗೆ ಖುಷಿಯಾಗುತ್ತಿತ್ತು. ನರಲೋಕದ ಬಗ್ಗೆ ಇದ್ದ ಎಲ್ಲ ಬಗೆಯ ತಪ್ಪುಕಲ್ಪನೆಗಳನ್ನು ಇವನೊಬ್ಬನ ಮಗುವಿನಂಥ ಸ್ಪರ್ಶ ಇಲ್ಲವಾಗಿಸಿಬಿಡುತ್ತಿತ್ತು. ಗಂಗೆಯ ಮಾತೃತ್ವದ ಕಾರಣಕ್ಕಾಗಿಯೇ ಸೃಷ್ಟಿಯ ವಿಶೇಷತೆಯ ಬಗ್ಗೆ ರಾಮುವಿನಲ್ಲಿ ಹೆಮ್ಮೆಯ ಭಾವಗಳಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಹೇಳಬೇಕಾದ ವಿಷಯ ಮತ್ತೊಂದಿದೆ. ಮನುಷ್ಯಲೋಕದ ಎರಡು ಜೀವಗಳು ಒಂದಾಗಿ ಅವುಗಳ ಮೂಲಕ ಜನ್ಮವೆತ್ತಿದ ನರಶಿಶುಗಳನ್ನು ತನ್ನೆಡೆಗೆ ಎಸೆದಾಗ ಅವುಗಳ್ಯಾವುವೂ ಬದುಕಿರಲಿಲ್ಲ. ಬದುಕುತ್ತಲೂ ಇರಲಿಲ್ಲ.

ಮನುಷ್ಯಲೋಕ ಹೆಸರಿಸಿಕೊಂಡ ಜಾತಿ, ಧರ್ಮಗಳ ಕಟ್ಟಳೆಗಳ ನೆಪದಲ್ಲಿ ಅತ್ಯಂತ ಕ್ರೂರವಾಗಿ ತನ್ನೆಡೆಗೆ ಎಸೆದಾಗ ತಾನು ಆ ಅಮಾಯಕ ಶಿಶುಗಳನ್ನು ತೇಲಿಸುವ ಪ್ರಯತ್ನ ನಡೆಸುತ್ತಿದ್ದೆನಾದರೂ ಆ ರಾಕ್ಷಸರು ಮತ್ತೆ ಧುಮುಕಿ ನನ್ನೊಳಗೆ ಮುಳುಗಿಸಿಬಿಡುತ್ತಿದ್ದರು. ಅವುಗಳ ಉಸಿರುಗಟ್ಟಿಸುತ್ತಿದ್ದರು. ಅವು ಸಾಯುವವರೆಗೂ ಬಿಡುತ್ತಿರಲಿಲ್ಲ. ಅಷ್ಟೇ ಅಲ್ಲ, ಅವುಗಳಿಗೆ ಜನ್ಮ ನೀಡಿದ ಹೆತ್ತವರ ಜಾತಿ ಮರ್ಯಾದೆಯನ್ನು ಕೆಡಿಸಿದ್ದೀರಿ ಎಂಬ ಆಪಾದನೆ ಹೊರಿಸಿ ನನ್ನ ಮೇಲೆ ಎಸೆದು ಮುಳುಗಿಸಿಬಿಡುತ್ತಿದ್ದರು.

ತನಗೋ ಮತ್ತೆ ಮತ್ತೆ ಪಾಪಪ್ರಜ್ಞೆ ಕಾಡುತ್ತಲೇ ಇತ್ತು. ಕೊಲೆಗೀಡಾದ ಈ ಅಮಾಯಕರ ರಕ್ತ ನದಿಯ ರೂಪದ ತನ್ನೊಳಗೆ ಬೆರೆತಾಗ ತನ್ನ ಅಸ್ತಿತ್ವದ ಬಗೆಗೇ ಜಿಗುಪ್ಸೆಯ ಭಾವ ಗಂಗೆಯನ್ನು ಮತ್ತೆ ಮತ್ತೆ ಆವರಿಸಿಕೊಂಡದ್ದೂ ಇದೆ. ಆದರೆ, ಇವನೊಬ್ಬನನ್ನು ಬದುಕಿಸಿದ ಒಂದಷ್ಟು ತೃಪ್ತಿ ಗಂಗೆಗಿದೆ. ಮುಂಚಿನ ಯಾರನ್ನೂ ಉಳಿಸಿಕೊಳ್ಳಲಾಗದ ಈ ಗಂಗೆ ರಾಮುವನ್ನು ಉಳಿಸಿಕೊಂಡ ಘಳಿಗೆ ಆಕೆಯೊಳಗೇ ವಿಸ್ಮಯವನ್ನುಂಟುಮಾಡಿದೆ.

ಪ್ರಕೃತಿಯೇ ಯಾವುದೋ ಮಹತ್ವದ ಉದ್ದೇಶಕ್ಕಾಗಿ ಈ ಕೂಸನ್ನು ಉಳಿಸಿರಬಹುದು ಎಂದುಕೊಳ್ಳುತ್ತಿದ್ದಳು. ಅಂದು ಇವನ ಹೆತ್ತವರನ್ನು ನನ್ನೆಡೆಗೆ ನೂಕಿ ಸಾಯಿಸಿದ ನಂತರ ಇವನ ದೇಹವನ್ನೂ ಎಸೆದುಬಿಟ್ಟಿದ್ದರು. ಅದ್ಯಾವುದೋ ಚೈತನ್ಯಶಕ್ತಿ ನನ್ನೊಳಗೆ ಧುಮುಕಿದ ಅನುಭವವಾಗಿತ್ತು. ಆ ಕ್ಷಣಕ್ಕೆ ಆ ಪುಟ್ಟ ಶಿಶುದೇಹ ನನ್ನಿರುವಿನ ನೆಲದಾಳದೊಳಕ್ಕಿಳಿದರೂ ಮುಳುಗಲೇ ಇಲ್ಲ. ಒಂದಷ್ಟು ಮುಂದಕ್ಕೆ ಹೋಗಿ ತೇಲಿಬಿಟ್ಟಿತು. ಬಹುದೂರ ಹೋಗುತ್ತಲೇ ದಡ ಸೇರಿಕೊಂಡುಬಿಟ್ಟಿತು.

ಆಗಲೇ ಅದು ಹೊಸಹುಟ್ಟು ಪಡೆದದ್ದು. ಅಲ್ಲಿಂದಲೇ ಗಂಗೆಗೆ ಅದರೊಂದಿಗೆ ಕರುಳಬಳ್ಳಿಯ ನಂಟು ಶುರುವಾಗಿತ್ತು. ಆಗಿನಿಂದಲೂ ಗಂಗೆ ಮತ್ತು ರಾಮು ಇಬ್ಬರೂ ಪರಮಾಪ್ತ ಆತ್ಮಗಳ ಹಾಗೆ ನಂಟನ್ನು ಬೆಸೆದುಕೊಂಡಿದ್ದಾರೆ. ಬಾಲ್ಯದಿಂದ ಹಿಡಿದು ಇಲ್ಲಿಯವರೆಗೆ ಸದಾ ಹರಿವ ಅಂತಃಕರಣದ ಗುಣದೊಂದಿಗೆ ಆಕೆ ಇವನನ್ನು ಆರೈಕೆ ಮಾಡಿದ್ದಾಳೆ. ಒಡಲಬೇಗೆಯ ಕಾರಣಕ್ಕಾಗಿಯೇ ಧುಮ್ಮಿಕ್ಕಿದ ಕಣ್ಣಹನಿಗಳನ್ನು ಒರೆಸಿ ಸಾಂತ್ವನ ಹೇಳಿದ್ದಾಳೆ.

ಹೆಜ್ಜೆಹೆಜ್ಜೆಗೂ ಬಡತನವು ಮತ್ತೆ ಮತ್ತೆ ಮುಖಾಮುಖಿಯಾಗಿಸಿದ ಅವಮಾನದ ತಾಪಗಳನ್ನು ನೀಗಿಸಿದ್ದಾಳೆ. ಊಟ ಇಲ್ಲದೇ ಹೊಟ್ಟೆ ಚುರುಗುಟ್ಟುವಾಗಲೆಲ್ಲಾ ಅವಳ ಅಮೃತಧಾರೆ ಜೀವನಪ್ರೀತಿಯನ್ನು ಹೆಚ್ಚಿಸಿದೆ. ದಣಿವಾರಿಸಿದ್ದಾಳೆ. ಊರಿಗೆ ಊರೇ ಬರಗಾಲದ ಹೊಡೆತಕ್ಕೆ ಸಿಲುಕಿದಾಗಲೆಲ್ಲಾ ಯಾವತ್ತೂ ಬತ್ತದ ತನ್ನ ಎಂದಿನ ಉತ್ಸಾಹಿ ನಡಿಗೆಯೊಂದಿಗೆ ಸ್ಫೂರ್ತಿ ತುಂಬಿದ್ದಾಳೆ. ಊರಿನವರ ಎಲ್ಲ ಬಗೆಯ ಸುಖ-ದುಃಖಗಳ ಸಾಕ್ಷಿಯಾಗಿ ಜೀವಂತಿಕೆಯನ್ನು ಮೆರೆದಿದ್ದಾಳೆ.

ಗಂಗೆಯೊಂದಿಗೆ ಮಾತನಾಡುವುದೆಂದರೆ ರಾಮುವಿಗೆ ಎಲ್ಲಿಲ್ಲದ ಖುಷಿ. ದಂಡೆಯ ಮೇಲೆ ನಿಂತುಕೊAಡು ಚೈತನ್ಯದ ಸಂಕೇತದಂತೆ ಕಂಗೊಳಿಸುವ ಅವಳೊಂದಿಗಿನ ಮೌನಸಂವಾದ ಆಂತರ್ಯದಲ್ಲಿ ಮೂಡಿಸುವ ತರಹೇವಾರಿ ಆಲೋಚನೆಗಳ ಅಲೆಗಳ ಅನುಭೂತಿಯಲ್ಲಿ ಮಿಂದೆದ್ದು ಕೃತಾರ್ಥನಾಗುವ ಅವನ ಭಾವಸಮೃದ್ಧಿಯನ್ನು ಅಷ್ಟು ಸುಲಭವಾಗಿ ಮಾತಿನಲ್ಲಿ ಹೇಳಲಾಗದು. ಇಷ್ಟಕ್ಕೂ ಅವನು ಹುಟ್ಟಿದ ಘಳಿಗೆಯೇ ಇಡೀ ಹೆತ್ತವರಿಗೆ ನಿರಾಳತೆಯನ್ನು ತಂದುಕೊಟ್ಟಿತ್ತು.

ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕಾಗಿಯೇ ಸದಾ ಕೊಲ್ಲಲು ತವಕಿಸುತ್ತಿದ್ದ ಮನೆಯವರ ಕಣ್ಣು ತಪ್ಪಿಸಿ ದೂರದೂರ ಓಡಿಬಂದಿದ್ದ ಇವನ ಅಪ್ಪ-ಅಮ್ಮನ ಬದುಕಿನಲ್ಲಿ ಹೊಸ ಆಶಾವಾದದ ಬೆಳಕನ್ನು ಬೆಳಗಿಸಿದ್ದ ಮಗನಿವನು. ತಮ್ಮ ಜಾತಿಯವರನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾಗಿದ್ದು ಅಮ್ಮನ ಕಡೆಯವರೂ, ತಮ್ಮ ಧರ್ಮಕ್ಕೆ ಸೇರದವಳ ಜೊತೆಯಾಗಿ ಮರ್ಯಾದೆ ಹರಾಜು ಹಾಕಿದನು ಎಂದು ಅಪ್ಪನ ಕಡೆಯವರೂ ಕಿಚ್ಚಿನಿಂದ ಕುದಿದು ಕೊಲ್ಲಲು ಪ್ರಯತ್ನಿಸಿದ್ದರು.

ಅವರಿಂದ ತಪ್ಪಿಸಿಕೊಳ್ಳುತ್ತ ಇವರಿಬ್ಬರೂ ಬಹುದೂರ ಸಾಗಿದ್ದರು. ತಮ್ಮ ಪಾಡಿಗೆ ತಾವು ಬದುಕು ಕಟ್ಟಿಕೊಳ್ಳುವ ಸಂಕಲ್ಪ ಗಟ್ಟಿಗೊಳಿಸಿಕೊಂಡಿದ್ದರು. ಇದೇ ಘಳಿಗೆಯಲ್ಲಿಯೇ ಹುಟ್ಟಿದ್ದ ಮಗು ಅವರ ಖುಷಿಯನ್ನು ಇಮ್ಮಡಿಗೊಳಿಸಿತ್ತು. ಅದಕ್ಕಾಗಿಯೇ ಜಗತ್ತಿನ ಎಲ್ಲ ಬಗೆಯ ವಿಕಾರಗಳನ್ನು ಎದುರಿಸಿಬಿಡುವ ಛಲವನ್ನು ತೊಟ್ಟಿದ್ದರು. ಹೀಗಿರುವಾಗಲೇ ಮತ್ತೆ ಇಬ್ಬರ ಮನೆಯವರ ಕಡೆಯವರು ಬೆನ್ನತ್ತಿ ತುಂಬಿ ಹರಿಯುತ್ತಿದ್ದ ಗಂಗೆಯೊಳಗೆ ಮುಳುಗಿಸಿಬಿಟ್ಟಿದ್ದರು.

ತನ್ನಪ್ಪ, ಅಮ್ಮನನ್ನು ಕೊಂದು ಇದೇ ಗಂಗೆಯ ಮಡಿಲಿಗೆ ನೂಕಿಬಿಟ್ಟಿದ್ದರು ಎಂಬ ಸತ್ಯ ಗೊತ್ತಾಗಿನಿಂದಲಂತೂ ರಾಮು ಅತ್ಯಂತ ಭಾವುಕನಾಗಿ ಇವಳ ಹತ್ತಿರ ಬರುತ್ತಿದ್ದ. ತನನ್ನು ಉಳಿಸಿ ಕಾಪಾಡಿದ ಅವಳ ತಾಯ್ತನಕ್ಕೆ ಬೆರಗಾಗಿದ್ದ. ಯಾರೂ ಇಲ್ಲ ಎಂಬ ಅನಾಥ ಭಾವ ಗಾಢವಾಗಿ ಬೇರೂರಿದ ತಕ್ಷಣವೇ ಅವನು ಗಂಗೆಯ ಮುಂದೆ ನಿಂತು ನಿರಾಳವಾಗುವ ವಿಮುಕ್ತಿಯ ಅದ್ಭುತಮಾರ್ಗವನ್ನು ಕಂಡುಕೊಂಡಿದ್ದ. ಅದು ಅವನಿಗೆ ಅದ್ಭುತ ಮಾರ್ಗವಾಗಿದ್ದರೂ ಉಳಿದವರೆಲ್ಲರಿಗೂ ವಿಚಿತ್ರವೆನ್ನಿಸಿತ್ತು.
ವಿಚಿತ್ರವಾಗಿ ಕಾಣಿಸಿದ್ದಕ್ಕೂ ಕಾರಣವಿದೆ.

ಅಪ್ಪ ಹಾಕಿದ ಆಲದ ಮರಕ್ಕೆ ಜೋತುಬೀಳುವ ಸಂಪ್ರದಾಯಗಳೊಂದಿಗಿದ್ದವರನ್ನು ನಾರ್ಮಲ್ ಎಂತಲೂ, ಉಳಿದೆಲ್ಲರಿಗಿಂತ ಭಿನ್ನವಾಗಿರುವುದಕ್ಕೆ ಪ್ರಯತ್ನಿಸುವವರನ್ನು ಅಬ್‌ನಾರ್ಮಲ್ ಎಂದು ಪರಿಗಣಿಸುವ ಜಾಯಮಾನವೇ ಜಗದ ಅಲಿಖಿತ ನಿಯಮವಾದಾಗ ವಿನೂತನವಾದದ್ದೂ ಹಲವರಿಗೆ ವಿಚಿತ್ರವಾಗಿ ಕಾಣಿಸುತ್ತದೆ. ಈ ಮನುಷ್ಯ ಇಷ್ಟು ಭಾವುಕ ಆದರೆ ಹೇಗೆ ಎಂಬ ತಿವಿತದ ಮಾತುಗಳೂ ಬೋನಸ್‌ನ ರೂಪದಲ್ಲಿ ಹೊಡೆತ ನೀಡುತ್ತವೆ.

ಮೌನವಾಗಿ ನಿಲ್ಲುವುದಂತೆ, ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುವುದಂತೆ, ಮದುವೆಯಿಲ್ಲ, ಮಕ್ಕಳಿಲ್ಲ, ಈ ವಯಸ್ಸಿಗೇ ಹೀಗೆ ಆಡಿದರೆ ಮುದುಕನಾದ ಮೇಲೆ ಏನಾಗಿರುತ್ತಾನೋ? ಎನ್ನುವ ಕೊಂಕುನುಡಿಗಳೂ ಮತ್ತಷ್ಟು ಘಾಸಿಗೊಳಿಸುತ್ತವೆ. “ಅಲ್ಲೆಲ್ಲಾ ಹೋಗಿ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಹುಡುಕಿ ತೆಗೆಯುವುದು, ಪ್ಲಾಸ್ಟಿಕ್ ಬಾಟಲ್‌ಗಳನ್ನು ಆಯುವುದು, ಗಂಗೆಯ ಗರ್ಭವನ್ನು ಸೀಳುವ ದೊಡ್ಡ ದೊಡ್ಡ ಯಂತ್ರಗಳ ಗಾಡಿಗಳವರ ಗಾಡಿಗಳವರ ಹತ್ತಿರ ಹೋಗಿ ವಾಗ್ವಾದಕ್ಕಿಳಿಯುವುದು, ಅವರು ಇವನನ್ನು ನಿರ್ಲಕ್ಷಿಸಿದಾಗ ಸನ್ನಿವೇಶ ಬಿಗಡಾಯಿಸುವುದು….” ಇವೆಲ್ಲವೂ ಜನರಿಗೆ ವಿಚಿತ್ರವಾಗಿ ಕಾಣಿಸಿದ್ದವು. ಇಲ್ಲದ ಉಸಾಬರಿ ಇವನಿಗ್ಯಾಕೋ ಎಂಬ ಟೀಕೆಗಳು ಅವನ ಸ್ವಭಾವವನ್ನು ‘ವಿಚಿತ್ರ’ ಎಂಬ ಅಪವ್ಯಾಖ್ಯಾನದ ವ್ಯಾಪ್ತಿಗೆ ತಂದು ನಿಲ್ಲಿಸಿದ್ದವು.

ಬೇವೂರಿನವರ ಪ್ರಯಾಣ, ವ್ಯಾಪಾರ-ವಹಿವಾಟು, ಸರಕು-ಸಾಗಣೆಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ದೊಡ್ಡದಾದ ಸೇತುವೆ ಕಟ್ಟುವ ಯೋಚನೆ ಪ್ರಸ್ತಾಪವಾದಾಗ ಈ ಹುಡುಗ ರಾಮು ಭಾರೀ ಆಘಾತವಾಗಿದೆ ಎನ್ನುವ ಹಾಗೆ ತಗಾದೆ ತೆಗೆದಿದ್ದ. ನೂರಾರು ಕಿಲೋಮೀಟರ್ ದೂರ ಇರುವ ಊರುಗಳವರ ಪ್ರಯೋಜನಕ್ಕಾಗಿ ಅಣೆಕಟ್ಟು ಕಟ್ಟಲು ಯೋಜನೆ ರೂಪಿಸುತ್ತಿದ್ದಾಗ ಇದೇ ಹುಡುಗ ಬಂಡಾಯದ ಧ್ವನಿ ಎತ್ತಿದ್ದ.

ಜನದಟ್ಟಣೆ ಹೆಚ್ಚಿದಂತೆಲ್ಲಾ ಊರೆಂಬೋ ಊರು ತನ್ನತನವನ್ನು ಕಳೆದುಕೊಂಡು ಕೃತಕತೆಯನ್ನು ಹೊದ್ದುಕೊಳ್ಳುವಾಗಲೆಲ್ಲಾ ಸಿಡಿಮಿಡಿಗೊಳ್ಳುತ್ತಲೇ ಇದ್ದ. ಇಂಥ ಸಂದರ್ಭಗಳಲ್ಲೆಲ್ಲಾ ‘ಒಳ್ಳೇ ಹುಚ್ಚನ ಸಹವಾಸವಾಯಿತಲ್ಲಾ’ ಎಂದುಕೊಳ್ಳುತ್ತಿದ್ದರೇ ಹೊರತು ಅವನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಗೊಡವೆಗೇ ಹೋಗಲಿಲ್ಲ. ಫಲವತ್ತಾದ ಜಮೀನುಗಳನ್ನು ದೊಡ್ಡ ದೊಡ್ಡ ಕಂಪನಿಗಳು ದೊಡ್ಡ ಮೊತ್ತದ ಆಮಿಷವೊಡ್ಡಿ ಖರೀದಿಸುವಾಗಲೆಲ್ಲಾ ಇವನ ವಿರೋಧವನ್ನು ಹುಚ್ಚುತನದ ಪರಮಾವಧಿ ಎಂದು ಪರಿಗಣಿಸಿದವರೇ ಹೆಚ್ಚು.

ಇವನು ತುಂಗೆಯ ಪ್ರೇಮಕ್ಕೆ ಬಿದ್ದಾಗ ಗಂಗೆಯೇ ಮಧುರಭಾವಗಳ ಪ್ರವಹಿಸುವುದಕ್ಕೆ ವೇದಿಕೆಯಾಗಿದ್ದಾಳೆ. ಗಂಗೆಯ ಸಾನಿಧ್ಯದಲ್ಲೇ ತುಂಗೆಯೊಂದಿಗಿನ ಪ್ರೇಮದ ಭಾವಗಳನ್ನು ಹೊರಗೆಡಹಿದವನು ಇವನು. ಗಂಗೆಯೊಬ್ಬಳನ್ನು ಬಿಟ್ಟು ಈ ಜಗತ್ತಿನಲ್ಲಿ ಮತ್ತಿನ್ಯಾರೂ ಇಲ್ಲ ಎಂಬ ನಿರ್ಧಾರಕ್ಕೆ ಬರುವುದಕ್ಕೆ ಮುನ್ನ ತುಂಗೆಯ ಮಾಧುರ್ಯ ಅವನ ಬದುಕಿನಲ್ಲಿ ಪ್ರವೇಶಿಸಿತ್ತು. ಜಗತ್ತಿನಲ್ಲಿರುವವರು ಬಹುವಾಗಿ ಇಷ್ಟಪಡುವ ಯಾವ ಲಕ್ಷಣಗಳೂ ಇಲ್ಲದಿದ್ದರೂ ತುಂಗೆಯ ಪ್ರೇಮಕ್ಕೆ ಪಾತ್ರನಾದದ್ದು ಹೇಗೆ ಎಂಬ ಅಚ್ಚರಿ ಒಳಗೊಳಗೇ ಇದೆ.

ಒಂದು ಜೀವಕ್ಕೆ ಮತ್ತೊಂದು ಜೀವ ಇದ್ದೇ ಇರುತ್ತದೆ ಎಂಬ ಜಗದ ವೇದಾಂತವನ್ನು ದೃಢಪಡಿಸುವಂತೆಯೇ ತುಂಗೆ ತನ್ನನ್ನು ಸೆಳೆದಿದ್ದಾಳೆ ಎಂದೆನ್ನಿಸಿ ಆ ಕ್ಷಣದ ಖುಷಿಯನ್ನು ಅನುಭವಿಸುತ್ತಾನೆ ಅವನು. ಮನುಷ್ಯರೆನ್ನಿಸಿಕೊಂಡವರ ದಗಲ್ಬಾಜಿತನದ ಎಲ್ಲ ಬಗೆಯ ಅನುಭವಗಳಿಂದ ಹೈರಾಣಾದ ಸಂದರ್ಭದಲ್ಲಿ ಗಂಗೆಯ ಭೇಟಿಯಾಗಿತ್ತು. “ನೀನೇ ಕಣ್ಣೀರೊರೆಸಿಕೊಳ್ಳಬೇಕು, ಒರೆಸುವ ಮನುಷ್ಯ ಕೈಗಳೆಡೆಗಿನ ನಿರೀಕ್ಷೆ ಲಾಭದೊಪ್ಪಂದದ ಲೆಕ್ಕಾಚಾರದ ಬೆಳೆ ತೆಗೆದುಬಿಟ್ಟೀತು ಜೋಕೆ?” ಯಾರದ್ದೋ ಮಾತನ್ನು ಉದ್ಧರಿಸಿ ಯಾವಾಗಲೂ ಎಚ್ಚರಿಸುತ್ತಿದ್ದ ಗಂಗೆಯ ಮಾತುಗಳನ್ನು ಮತ್ತೆ ಮತ್ತೆ ದೃಢಪಡಿಸುತ್ತಿದ್ದ ಪ್ರಸಂಗಗಳು ನಡೆಯುತ್ತಲೇ ಇದ್ದವು.

ಅವುಗಳು ತೀವ್ರವಾಗಿ ಘಾಸಿಗೊಳಿಸಿದ್ದ ವೇಳೆ ತುಂಗೆ ಕಂಡಿದ್ದಳು. ಅಷ್ಟೇ ಅಲ್ಲ, ತನ್ನೊಂದಿಗೆ ಮಾತಿಗೆ ನಿಂತು ಮೊದಲ ನೋಟದಲ್ಲೇ ಸೆಳೆದಿದ್ದಳು. ಮೊದಲ ನೋಟವೆಂದರೆ ಅದು ಮೊದಲ ಸ್ಪರ್ಶದ ಕಥೆಯೇ ಹೌದು. ಅದಕ್ಕೆ ಮಳೆಯೇ ಮುನ್ನುಡಿಯಾಗಿದ್ದನ್ನು ಪ್ರಾಸಂಗಿಕ ಎಂದು ಗುರುತಿಸಬಹುದಾದರೂ ಪ್ರಕೃತಿಯ ಮಧುರ ಕುಮ್ಮಕ್ಕು ಎನ್ನುವುದೇ ಸೂಕ್ತವೇನೋ. ತುಂಗೆಯ ಭೇಟಿ ಜನ್ಮಜನ್ಮಾಂತರಗಳಲ್ಲಿ ಜೊತೆಯಾಗಿ ಬದುಕುವ ಸಂಕಲ್ಪವನ್ನು ಮೂಡಿಸಿತ್ತು.

ಡಾಕ್ಟರು, ಇಂಜಿನಿಯರಿಗಳಿಗಿದ್ದಷ್ಟು ಮಾರ್ಕೆಟ್ಟು ಬರಹಗಾರರಿಗೆಲ್ಲಿದೆ ಎಂಬ ಚುಚ್ಚುಮಾತುಗಳೇ ಕೇಳಿಬರುತ್ತಿದ್ದ ಕಾಲದಲ್ಲಿ ‘ಅವರಿಗಷ್ಟೇ ಅಲ್ಲ, ನಮ್ಮಂಥವರಿಗೂ ಬೆಲೆ ಇದ್ದೇ ಇದೆ’ ಎನ್ನುವ ಆಶಾವಾದ ಮೂಡಿಸುವ ಹಾಗೆ ತುಂಗೆ ಅವನೊಳಗೆ ಮೂಡಿಬಂದಿದ್ದಳು. ಸಿಟಿಯೊಂದರ ಕೆಟ್ಟ ಗಾಳಿಯ ನಡುವೆ ಬದುಕು ಹೊರೆಯುವುದಕ್ಕಾಗಿ ಕೆಲಸ ಮಾಡುತ್ತಿದ್ದ ರಾಮುವಿಗೆ ಮರಳಿ ಊರಿಗೆ ವಾಪಸ್ಸಾಗಿ ಉಳಿಯುವ ತವಕ.

ಹಾಗಾದರೆ, ತನಗೆ ಅತ್ಯಂತ ಇಷ್ಟವಾದ ಬರೆಯುವ ಕೆಲಸಕ್ಕೆ ಊರಲ್ಲಿ ಬೆಲೆಯಿಲ್ಲ. ಸಿಟಿಯಲ್ಲಿದ್ದರೆ ಮಾತ್ರ ಸಂಬಳದ ನೆರವು. ಅವತ್ಯಾವತ್ತೋ ರಾಮು ತನ್ನೂರಿನ ಗಂಗೆಯ ಹರಿವ ನಾದನಿನಾದ ಸೌಂದರ್ಯದ ಬಗ್ಗೆ ಬರೆದ ಬರಹವನ್ನು ಪತ್ರಿಕೆಗೆ ಕಳುಹಿಸಿದ್ದ. ಆ ಪತ್ರಿಕೆಯವರು ಇವನ ಬರೆವ ಪ್ರತಿಭೆಯನ್ನು ಗುರುತಿಸಿ ಕೆಲಸಕ್ಕೆ ನೇಮಿಸಿಕೊಂಡಿದ್ದರು.

ಆ ದೊಡ್ಡ ಮಹಾನಗರದಲ್ಲಿ ಸುದ್ದಿಪತ್ರಿಕೆಯ ಬರೆಯುವ ಕೆಲಸಕ್ಕೆ ಸೇರಿಕೊಂಡ ನಂತರ ರಾಮುವಿನೊಳಗಿನ ಕವಿಮನಸ್ಸನ್ನು ಘಾಸಿಗೊಳಿಸುವ ಅನೇಕಾನೇಕ ಅನುಭವಗಳು ಮತ್ತೆ ಮತ್ತೆ ಆಕ್ರಮಣಗೈಯ್ಯುತ್ತಲೇ ಇದ್ದವು. ಆ ದೊಡ್ಡ ಸಿಟಿ ಮಳೆಯ ಪ್ರವಾಹಕ್ಕೀಡಾಗಿ ತೊಂದರೆಗಳನ್ನೆದುರಿಸಿದ್ದ ನಂತರ ಬಹಳ ವಿಸ್ತಾರವಾದ ತನಿಖಾ ವರದಿ ಸಿದ್ಧಪಡಿಸಿದ್ದ. ಈ ಹಿಂದೆ ಇದ್ದ ಕೆರೆಗಳನ್ನು ಇಲ್ಲವಾಗಿಸಿ ದೊಡ್ಡ ದೊಡ್ಡ ಅಪಾರ್ಟುಮೆಂಟುಗಳಿಗಾಗಿ ಜಾಗವನ್ನು ಮಾರಾಟ ಮಾಡಿದ ಜಾಲವನ್ನು ಪತ್ತೆ ಹಚ್ಚಿ ಎಲ್ಲಿಂದ ಎಲ್ಲಿಯವರೆಗೆ ಲಿಂಕ್ ಇದೆ ಎನ್ನುವುದನ್ನು ಆಧಾರಸಹಿತ ಪ್ರಸ್ತುತಪಡಿಸಿದ್ದ. ಈ ವರದಿಯಿಂದಾಗಿ ಸಿಎಮ್ಮು ಗಾದಿ ಅಲ್ಲಾಡತೊಡಗಿತ್ತು.

ವಿರೋಧ ಪಕ್ಷಗಳವರು ಇದನ್ನೇ ಅಸ್ತ್ರವಾಗಿಸಿಕೊಂಡು ರಾಜೀನಾಮೆ ಆಗ್ರಹಿಸತೊಡಗಿದ್ದರು. ಮುಜುಗರದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆಡಳಿತ ಪಕ್ಷದವರೇ ಬಲವಂತವಾಗಿ ರಾಜೀನಾಮೆ ಕೊಡಿಸಿ ಮತ್ತೊಬ್ಬ ಅಪಾಯಕಾರಿ ಮನುಷ್ಯನನ್ನು ಸಿಎಂ ಪಟ್ಟದಲ್ಲಿ ಕೂರಿಸಿಬಿಟ್ಟಿದ್ದರು. ಆತ ಅಧಿಕಾರಕ್ಕೆ ಬಂದ ತಕ್ಷಣವೇ ತನ್ನೂರಿನ ಸಮೀಪದಲ್ಲಿ ಭೂಗರ್ಭವನ್ನು ಸೀಳಿ ಜಲದ ಸಿರಿಯನ್ನು ದೋಚುವ ಯೋಜನೆಯನ್ನು ದೊಡ್ಡ ದೊಡ್ಡ ಕಂಪನಿಗಳೊಂದಿಗೆ ಶಾಮೀಲಾಗಿ ಅಂಗೀಕರಿಸಿಬಿಟ್ಟಿದ್ದ.

ವಿರೋಧ ಪಕ್ಷಗಳವರು ಉಸಿರೆತ್ತದಂತೆ ಹಣದ ಆಮಿಷಕ್ಕೀಡುಮಾಡಿ ಖುರ್ಚಿಯನ್ನು ಭದ್ರಪಡಿಸಿಕೊಂಡಿದ್ದ. ಈ ಬಗ್ಗೆ ಇಂಚಿಂಚು ಮಾಹಿತಿ ಸಂಗ್ರಹಿಸಿ ರಾಮು ಬರೆದ ಸುದ್ದಿಗಳು ಆಳುವವರಿಗೆ ಕಿರಿಕಿರಿಯನ್ನುಂಟುಮಾಡಿದ್ದವು. ಆಮೇಲೇನಾಯ್ತೋ ಏನೋ. ಇದಕ್ಕೆ ಸಂಬಂಧಿಸಿದ ವಿವಿಧ ತೆರನಾದ ಬರಹಗಳು ತದನಂತರ ಪ್ರಕಟವಾಗಲೇ ಇಲ್ಲ.

ಪ್ರಕಟವಾಗದೇ ಇರುವುದರ ಬಗ್ಗೆ ಸಂಪಾದಕರು ಸಮಜಾಯಿಷಿ ನೀಡಲೂ ಇಲ್ಲ. ಆ ಪಕ್ಷದ ಭಾರೀ ಆಸಾಮಿಯೇ ಪತ್ರಿಕೆಗೆ ಬಂಡವಾಳ ಹಾಕಿದ್ದನಾದ್ದರಿಂದ ಇಂಥ ವರದಿಗಳು ಬರದಂತೆ ನೋಡಿಕೊಳ್ಳುವ ಮುಂಚೂಣಿ ಜವಾಬ್ದಾರಿ ನಿರ್ವಹಿಸಿ ಸಿಎಂ ಖುರ್ಚಿ ಅಲುಗಾಡದಂತೆ ನೋಡಿಕೊಂಡಿದ್ದ.

ಖುದ್ದು ಸಿಎಂ ಮಗನೇ ನಿಂತುಕೊಂಡು ವಿವಿಧ ಕಡೆಗೆ ಹರಿವ ನೀರಿನ ನೆಲದ ನೆಲೆಗಳನ್ನು ಬಗೆದು ಅಕ್ರಮ ಧಂಧೆಯಲ್ಲಿದ್ದುದನ್ನೂ, ಜೀವಜಲದ ಸಲೆಗಳನ್ನು ಇಲ್ಲವಾಗಿಸಿ ಹರಿವ ಚಲನೆಯ ಶಕ್ತಿಯನ್ನು ಇಲ್ಲವಾಗಿಸುತ್ತಿರುವ ಹುನ್ನಾರಗಳನ್ನು ಕಾಣಿಸುವ ಎಲ್ಲ ಪ್ರಯತ್ನಗಳೂ ನಿಷ್ಪ್ರಯೋಜಕ ಜಕವೆನ್ನಿಸಿದ್ದವು. ಆದರೂ ಛಲಬಿಡದೇ ಬರಹಗಳನ್ನು ಅನಾಮಿಕ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೇಲಿಬಿಡುತ್ತಿದ್ದ.

ಆದರೆ, ಅಲ್ಲಿರುವವರೆಲ್ಲರೂ ಸದ್ಯದ ಖುಷಿಯ ಅಮಲಲ್ಲಿ ಭವಿಷ್ಯವನ್ನೇ ಮರೆತವಾದ್ದರಿಂದ ಪೂರಕ ಬೆಂಬಲ ಸಿಗುತ್ತಲೇ ಇರಲಿಲ್ಲ. ಫೇಸ್ಬುಕ್‌ನಲ್ಲಿ ಏನಾದರೂ ಈ ಬಗ್ಗೆ ಬರೆದರೆ ‘ಹೀಗೆ ಯೋಚಿಸುವವರನ್ನು ಅನ್ನ, ನೀರಿಲ್ಲದ ಕಡೆಗೆ ಬಿಟ್ಟು ಬರಬೇಕು, ಆವಾಗಲೇ ಇವರಿಗೆ ಬುದ್ಧಿಬರೋದು’ ಅಂತ ಅತ್ಯಂತ ಕೆಟ್ಟದಾದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದವು. ಪ್ರಬಲರ ಪರವಾದ ಆರಾಧನೆಯ ಭಕ್ತಿ ಭಾವಗಳ ಪ್ರದರ್ಶನ ಹಿಂದೆಂದಿಗಿಂತಲೂ ಹೆಚ್ಚಾಗುತ್ತಲೇ ಇತ್ತು.

ಆ ದೊಡ್ಡ ಸಿಟಿಯಲ್ಲಿದ್ದವರು ಮನುಷ್ಯ ಸಂಬಂಧಗಳ ಸೊಗಡನ್ನೇ ಮರೆತು ಬದುಕನ್ನೇ ಯಾಂತ್ರಿಕಗೊಳಿಸಿಕೊಂಡು ಕಳೆದುಹೋಗಿದ್ದುದು ಅನುಭವಕ್ಕೆ ಬರುತ್ತಲೇ ಇತ್ತು. ಆದರೂ ರಾಮುವಿನೊಳಗೆ ಒಂದಷ್ಟೂ ವ್ಯಥೆಯಿರಲಿಲ್ಲ. ಮನುಷ್ಯ ಜನುಮದ ಸಾರ್ಥಕತೆ ಇರುವುದು ಸಮಾಜಕ್ಕಾಗಿ ಬದುಕನ್ನು ಮೀಸಲಿಟ್ಟಾಗಲೇ ಎಂಬುದನ್ನು ಗುರುಹಿರಿಯರು ಇವನೊಳಗೆ ಬೇರೂರಿಸಸಿಬಿಟ್ಟಿದ್ದರಿಂದ ಜಗತ್ತಿನ ಎಲ್ಲ ಬಗೆಯ ಊನಗಳ ಪ್ರವಾಹದ ವಿರುದ್ಧ ಈಜುವಂಥ ಅದಮ್ಯ ವಿಶ್ವಾಸವನ್ನು ತನ್ನದಾಗಿಸಿಕೊಂಡಿದ್ದ.

ಹಳೆಯದರೊಂದಿಗಿನ ನೆನಪುಗಳಿಂದ ದೂರವಾಗಬಾರದು ಎಂಬ ಕಾರಣದಿಂದಲೇ ತನ್ನೂರಿಗೆ ಮರಳುತ್ತಿದ್ದ ಇವನು ಈ ಗಂಗೆಯ ಮಡಿಲಿನಡೆಗೆ ಮತ್ತೆ ಮತ್ತೆ ವಾಪಸ್ಸಾಗುತ್ತಿದ್ದ. ತನ್ನ ಪ್ರಾಮಾಣಿಕ ಪ್ರಯತ್ನಗಳಿಗೆ ಪೂರಕವಾದ ವಾತಾವರಣ ಇಲ್ಲ ಎಂಬ ಸತ್ಯ ಗೊತ್ತಾಗುತ್ತಲೇ ಮನಸ್ಸು ಬೇಸರಿಸಿಕೊಂಡು ಕುಳಿತುಕೊಳ್ಳುತ್ತಿರಲಿಲ್ಲ. ಹಾಗನ್ನಿಸುತ್ತಲೇ ಅವನು ತನ್ನೂರಿನ ಗಂಗೆಯೆಡೆಗೆ ಬಂದುಬಿಡುತ್ತಿದ್ದ. ಒಂದಷ್ಟು ಚೇತರಿಸಿಕೊಂಡು ಮತ್ತೆ ಮಹಾನಗರದ ಸಂತೆಗೆ ಮರಳಿಬಿಡುತ್ತಿದ್ದ.

ಎಲ್ಲವೂ ಸರಿಯಿಲ್ಲ ಎನ್ನುವ ನೋವುಗಳ ಮಧ್ಯೆಯೇ ಇವನು ಮಧುರ ಭಾವಗಳ ತೆಕ್ಕೆಗೀಡಾಗಿ ಕವಿತೆ ಗೀಚುವುದನ್ನು ಬಿಟ್ಟಿರಲಿಲ್ಲ. ವರದಿಗಾರ ಕವಿಯಾಗಬಾರದು ಎಂಬ ಕಠಿಣ ಕಾನೂನೇನೂ ಇಲ್ಲವಲ್ಲ ಎಂಬ ಹುಮ್ಮಸ್ಸಿನೊಂದಿಗೇ ಇವನ ಕಾವ್ಯನಿನಾದ ಹೊರಹೊಮ್ಮುತ್ತಿತ್ತು…….. ಗಗನಕ್ಕೆ ಈಗ ಚಿತ್ರ ಬರೆಯುವಾಸೆ; ಕಾರಣ ಕೆದಕಿದರೆ ಅದು ನಿನ್ನ ಕಡೆಗೇ ನೋಟ ನೆಡುತ್ತಿದೆ…. ತಣ್ಣನೆಯ ಗಾಳಿಗೆ ತರುಣನಾಗುವ ಕನಸು; ವಿಚಾರಿಸಿದರೆ ಅದು ನಿನ್ನದೇ ಧ್ಯಾನದಲ್ಲಿದೆ… ನೀರಿಗೆ ನಿನ್ನ ಸ್ಪರ್ಶದ ತವಕ; ಕೇಳಿದರೆ ಅದು ನಿನ್ನ ನೆರವಿನಿಂದ ಶುದ್ಧವಾಗುವ ಹಂಬಲದಲ್ಲಿದೆ.

ಹೂವಿಗೆ ನಿನ್ನನ್ನೇ ತನ್ನ ಬಣ್ಣವಾಗಿಸಿಕೊಳ್ಳುವ ಉತ್ಸಾಹ; ಸಕಾರಣ ಹುಡುಕಿದರೆ ಅದರ ತುಂಬ ನಿನ್ನದೇ ಪ್ರತಿಬಿಂಬ…ಬೇರು ಮರವಾಗುವ ಬದಲು ಮನುಜನಾಗಲು ಪಟ್ಟು ಹಿಡಿದಿದೆ; ಅದಕ್ಕೆ ನಿನ್ನ ಇರುವಿನ ಉಳಿವು ಸಿಕ್ಕಿದೆ… ಹಸಿರ ಸಿರಿ ನಿನ್ನನ್ನೇ ತನ್ನ ಆಭರಣವಾಗಿಸುವ ಆತುರದಲ್ಲಿದೆ; ನೋಡಿದರೆ ಅದರ ಕಣ್ಣಲ್ಲಿ ನಿನ್ನದೇ ಗುನುಗು…. ಸದಾ ನಿನ್ನವನಾಗುವ ಪ್ರೀತಿ; ಅದರ ಪ್ರಭೆ ಕಾರಣ ಕೇಳುವ ಮನಸ್ಸುಗಳನ್ನು ಸುಮ್ಮನಾಗಿಸಿದೆ.. ಅದ್ಯಾವುದೋ ಅಮೃತಘಳಿಗೆಯಲ್ಲಿ ಇವನಿಂದ ಬರೆಸಿಕೊಂಡಿದ್ದ ಕವಿತೆಯನ್ನು ಓದಿದ ಕ್ಷಣದಿಂದಲೇ ತುಂಗೆಯ ಮಾಧುರ್ಯದ ಸುಳಿವು ಸಿಕ್ಕಿಬಿಟ್ಟಿತ್ತು. ತುಂಗೆಗಾಗಿಯೇ ಈ ಸಾಲುಗಳು ಹೊಳೆದಿದ್ದವು ಎಂಬುದನ್ನು ಆಕೆಯ ಫೋಟೋ ನೋಡಿದ ತಕ್ಷಣ ರಾಮುವೇ ಸ್ವತಃ ಸ್ಪಷ್ಟಪಡಿಸಿಕೊಂಡಿದ್ದ.

ಈ ಸಾಲುಗಳನ್ನು ಓದಿದ ತಕ್ಷಣವೇ ತುಂಗೆಯು ಇವನನ್ನು ಭೇಟಿಯಾಗುವ ಹಂಬಲವನ್ನು ವ್ಯಕ್ತಪಡಿಸಿದ್ದಳು. ರಾಮುವಿಗೆ ಇದು ಆಧುನಿಕ ಕಾಲದ ಅತ್ಯದ್ಭುತ ರಮ್ಯ ಪವಾಡ ಎನ್ನಿಸಿಬಿಟ್ಟಿತ್ತು. ಭೇಟಿಯಾದಾಗಲಂತೂ ಮತ್ತೂ ಖುಷಿಯಾಗಿತ್ತು.
ಅವಳು ತನ್ನೆಡೆಗೆ ಎಸೆದ ಮೊದಲ ಪ್ರಶ್ನೆ ಘಾಸಿಗೊಳಿಸಿತ್ತಾದರೂ ಅದರ ಹಿಂದಿನ ಉದ್ದೇಶ ತಿಳಿದುಕೊಂಡ ನಂತರ ಇವನು ನಿರಾಳವಾಗಿದ್ದ. ಹೆತ್ತವರು ಮನುಷ್ಯರಲ್ಲದವರು ರೂಪಿಸಿದ ಕಟ್ಟು-ಕಟ್ಟಳೆಗಳ ಭಯದಲ್ಲಿ, ಮರ್ಯಾದೆ ಹೋಗುತ್ತದೆ ಎಂಬ ಅಳುಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ತನ್ನನ್ನು ಅನಾಥಳನ್ನಾಗಿಸಿದ ವೇದನೆಯ ಕಥೆಯನ್ನು ನಿವೇದಿಸಿಕೊಂಡಾಗಲಂತೂ ತನ್ನ ಕಥೆಯೂ ಅಂಥದ್ದನ್ನೇ ಹೋಲುತ್ತದಲ್ಲ ಎಂದುಕೊಂಡಿದ್ದ.

ಜಗಕ್ಕೆ ಹೆದರಬಾರದು, ನಾವೂ ಬದುಕಿ, ಮಗುವನ್ನೂ ಉಳಿಸಿ ಮನುಷ್ಯತ್ವದ ಮೌಲ್ಯ ಸಾರಬೇಕು ಎಂಬ ಅವಳೊಳಗಿನ ಸಂಕಲ್ಪ ಇವನೊಳಗೆ ಅದಮ್ಯ ಚೈತನ್ಯವನ್ನು ಮಿಂಚಿಸಿತು. ಇಬ್ಬರೂ ಒಂದಾಗುವ ಸಂಕಲ್ಪ ತೊಟ್ಟರು. ಅಷ್ಟರಲ್ಲಾಗಲೇ ತನ್ನನ್ನು ಯಾವತ್ತೂ ತೊಡವಿಕೊಳ್ಳುತ್ತಿದ್ದ ಯುವಕರ ಗುಂಪೊಂದು ತಮ್ಮೆಡೆಗೆ ಬರುತ್ತಿರುವುದು ಕಂಡಿತು.

ನೋಡಿದ ತಕ್ಷಣವೇ ರಾಮುವಿಗೆ ಹಿಂದಿನ ಕಹಿಪ್ರಸಂಗಗಳು ನೆನಪಾದವು. ತನ್ನ ಬರಹಗಳ ಕಾರಣಕ್ಕಾಗಿಯೇ ತನ್ನನ್ನು ಕೊಲ್ಲಿಸುವ ಪ್ರಯತ್ನಗಳು ನಡೆದಿದ್ದವು. ಹೇಗೋ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದ. ಈಗ ಅದೇ ಗುಂಪು ತಮ್ಮೆಡೆಗೆ ಬರುತ್ತಿರುವುದನ್ನು ನೋಡಿದ. ಗುಂಪಿನಲ್ಲಿದ್ದವನು ಜಾತಿ, ಧರ್ಮದ ಗೊಡವೆಯಿಲ್ಲದ ಇಂಥ ನಾಯಿಗಳಿಗೆ ಪಾಠ ಕಲಿಸಬೇಕು ಎಂದು ಕೂಗಿ ಹೇಳುತ್ತಾ ಕತ್ತಿ ಝಳಪಿಸುತ್ತಾ ಉಳಿದವರಿಗೆ ಕುಮ್ಮಕ್ಕು ನೀಡುತ್ತಿದ್ದ. ಅದನ್ನು ನೋಡಿದ ತುಂಗೆಗೆ ಸ್ಪಷ್ಟವಾಗಿ ಹೋಯಿತು. ತನ್ನ ಬಂಧುಗಳೂ ಇವರೊಂದಿಗೆ ಸೇರಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಯಿತು.

ಇಬ್ಬರೂ ಆ ಕ್ಷಣಕ್ಕೆ ಗಂಗೆಯ ಮಡಿಲಿಗೆ ಧುಮುಕಿದರು. ಅವರು ದುಂಬಾಲು ಬಿದ್ದಿದ್ದರು. ಇವರಿಬ್ಬರ ನಡುವಿನ ಪ್ರೇಮದ ಜೀವಕಾರುಣ್ಯ ಕೊಲೆಗೈಯ್ಯುವವರಿಗೆ ಸವಾಲೆನ್ನಿಸಬಿಟ್ಟಿತ್ತು. ಇಬ್ಬರೂ ಬದುಕುವ ಪಣ ತೊಟ್ಟಿದ್ದರು. ನೀವು ಕೊಲ್ಲುವ ಹಠ ತೊಟ್ಟ ಮಾತ್ರಕ್ಕೆ ನಾವು ಸಾಯಲು ಸಿದ್ಧರಿಲ್ಲ ಎನ್ನುವುದನ್ನು ನಿರೂಪಿಸಲು ಸನ್ನದ್ಧವಾದಂತಿತ್ತು ಇಬ್ಬರ ಜೋಡಿ. ಅವರ ಬದುಕಿನ ಪ್ರೀತಿಯ ಉತ್ಸಾಹಕ್ಕೆ ಸಾಕುತಾಯಿ ಗಂಗೆ ಸಾಥಿಯಾಗಿದ್ದಳು. ತನ್ನ ಮಡಿಲಿಗೆ ಬಿದ್ದ ಈ ಎರಡೂ ಜೀವಗಳು ತನ್ನ ಬೆಂಬಲದ ಬಲದಲ್ಲಿ ಅರಳಿಕೊಳ್ಳಬೇಕು.

ಹಾಗೆ ಅರಳಿಕೊಳ್ಳುತ್ತಲೇ ಜಗಕ್ಕೆ ಮಾದರಿಯಾಗಬೇಕು. ಒಂದಾಗುವ ಜೀವಗಳನ್ನು ಇಲ್ಲವಾಗಿಸುವ ಜಗದ ಕ್ರೌರ್ಯ ಇಲ್ಲವಾಗಿಬಿಡಬೇಕು. ಹಾಗಂತ ತಾನು ಹರಿಯುವ ವ್ಯಾಪ್ತಿಯ ನೆಲದ ಹಾದಿಯಲ್ಲೆಲ್ಲಾ ಸಾರುತ್ತಾ ಕರೆದೊಯ್ದಳು. ಹಿಂದೆಂದಿಗಿಂತಲೂ ಹೆಚ್ಚಿನ ವೇಗದಲ್ಲಿ ಹರಿದಳು. ದೂರದೂರಕ್ಕೆ ಬಹುದೂರದವರೆಗೆ ಇವರಿಬ್ಬರನ್ನು ತೇಲಿಸಿಕೊಂಡು ಹರಿಯುತ್ತಲೇ ಇದ್ದಳು. ಮನುಷ್ಯಲೋಕದ ಯಾವ ಬಗೆಯ ಕ್ರೌರ್ಯವೂ ಇಲ್ಲದ ಆವರಣಕ್ಕೆ ಇವರನ್ನು ಸೇರಿಸಿಬಿಡಬೇಕು ಎಂಬ ಛಲ ಅವಳೊಳಗೆ ಎಲ್ಲಿಲ್ಲದ ಶಕ್ತಿಯನ್ನು ನೆಲೆಗೊಳಿಸಿತ್ತು. ಇಬ್ಬರನ್ನೂ ಜೋಡಿಯಾಗಿಸಿ ದಡಕ್ಕೆ ತಂದು ಮಲಗಿಸಿಬಿಟ್ಟಳು.

ಆ ಕ್ಷಣಕ್ಕೆ ನಿಸರ್ಗ ಮರುಕಪಟ್ಟಿತು. ಈ ಎರಡೂ ಜೀವಗಳು ಇಲ್ಲವಾದರೆ ಹೇಗೆ? ಎಂದು ಅದು ಕೊರಗುತ್ತಿದೆಯೇನೋ ಎನ್ನುವ ಹಾಗೆ ಸ್ತಬ್ಧವಾಗಿತ್ತು. ಅಷ್ಟರಲ್ಲಿ ರಾಮುವಿನ ಕೈಯ ಮೇಲಿದ್ದ ತುಂಗೆಯ ಕೈ ಸಣ್ಣಗೆ ಅಲುಗಾಡಿತು. ಅವರಿಬ್ಬರ ಕಣ್ಣರೆಪ್ಪೆಗಳು ಮಿಟುಕಿದವು. ಅವರಿಗೆ ನೀರಿಗೆ ಧುಮುಕಿದ್ದಷ್ಟೇ ನೆನಪು. ಇವರ ಮುಂದೆ ದಂಡೆಯ ಬಹುದೊಡ್ಡ ಪ್ರದೇಶ ಅನಂತವಾಗಿ ವ್ಯಾಪಿಸಿಕೊಂಡಂತೆ ಭಾಸವಾಯಿತು. ಅಲ್ಲಿ ಯಾವುದೇ ಬಗೆಯ ಚೌಕಟ್ಟುಗಳಿಲ್ಲ ಎಂಬುದನ್ನು ನೀಲಾಕಾಶ ದೃಢಪಡಿಸುತ್ತಿತ್ತು.

ಅದರೆಡೆಗೆ ನೋಡುತ್ತಲೇ ಇವರಿಬ್ಬರೊಳಗಿನ ಜೀವನೋತ್ಸಾಹ ಚಿಗುರಿಕೊಂಡಿತು. ಎದ್ದು ನಡೆಯಲಾರಂಭಿಸಿದರು. ಈ ಎರಡೂ ಜೀವಗಳು ಜೊತೆಯಾಗಿ ನಡೆಯುತ್ತಿರುವ ಸಂಭ್ರಮವನ್ನು ನಿಸರ್ಗ ಕಣ್ಣುತುಂಬಿಕೊಂಡಿತು. ಅವರ ಹೆಜ್ಜೆಗುರುತುಗಳ ಒಳಗೇ ತನ್ನ ಸೌಂದರ್ಯ ವಿಸ್ತಾರವಾಗುವ ಪರಿಯ ಸೊಬಗನ್ನು ಕಲ್ಪಿಸಿಕೊಂಡಿತು. ಇದಕ್ಕೆ ಸಮ್ಮತಿ ಸೂಚಿಸುವಂತೆ ಅಲ್ಲಿದ್ದ ಹೂವುಗಳೆಲ್ಲವೂ ತಮ್ಮ ಅಂದವನ್ನು ಹೆಚ್ಚಿಸಿಕೊಂಡಿದ್ದವು. ಗಂಗೆ ನಕ್ಕಳು. ಅವಳೊಳಗೆ ನೀರಿನಲೆಗಳ ಮಾಧುರ್ಯದ ನಿನಾದ ಹೊಮ್ಮುತ್ತಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಮಣ್ಣ ಮಕ್ಕಳು

Published

on

ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
  • ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ

ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.

ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.

ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು

Published

on


ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.

ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.

  • ಬಸವರಾಜ ಹೂಗಾರ

ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.

ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.

  • ಡಾ.ರಹಮತ್ ತರೀಕೆರೆ

ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.

  • ಬಿ.ಶ್ರೀನಿವಾಸ,ಕೃತಿ ಲೇಖಕ

ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.

ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.

“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.

ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.

ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.

ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ

  • ಡಾ.ರಾಮಚಂದ್ರ ಹಂಸನೂರು, ಬೆಟಗೇರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending