ದಿನದ ಸುದ್ದಿ
ಶಿಮ್ಲಾದಿಂದ ಕನ್ನಡತಿ ಕರೆತಂದ ವಿಕ ವರದಿಗಾರ ನಿಮಗೆ ಗೊತ್ತಾ?

ಸುದ್ದಿದಿನ ಡೆಸ್ಕ್: ಪತ್ರಕರ್ತರು ಚೌಕಟ್ಟಿನ ಹೊರಗೂ ಕೆಲಸ ಮಾಡಿ ಹೇಗೆ ಸತ್ಕಾರ್ಯ ಮಾಡಬಹುದು ಎನ್ನುವುದಕ್ಕೆ ಶಿಮ್ಲಾದ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರಿನ ಪಿರಿಯಾಪಟ್ಟಣ ಮೂಲದ ಕನ್ನಡತಿ ಪದ್ಮಾರನ್ನು ಕರೆತರಲು ಅವಿರತವಾಗಿ ಶ್ರಮಿಸಿದ ವಿಜಯ ಕರ್ನಾಟಕ ದಿನಪತ್ರಿಕೆಯ ಮೈಸೂರು ವಿಭಾಗದ ಹಿರಿಯ ಉಪ ಸಂಪಾದಕ ಚಾಣಕ್ಯ ನೀಲಕಂಠನಹಳ್ಳಿ ಅವರು ಮಾದರಿಯಾಗಿ ನಿಂತಿದ್ದಾರೆ.
ಚಾಣಕ್ಯ ಅವರ ಸೇವೆಯ ಬಗ್ಗೆ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೂ ಕೂಡ ಪದ್ಮಾ ಅವರನ್ನು ಭೇಟಿಯಾಗಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ವಿಜಯ ಕರ್ನಾಟಕ ಹೆಸರನ್ನು ಪ್ರಸ್ತಾಪಿಸಿ ವರದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳು ಸುಳ್ಳೋ ನಿಜವೋ ಎಂದು ಯೋಚಿಸದೆ ಯಥಾವತ್ತಾಗಿ ಭಟ್ಟಿ ಇಳಿಸುವ ಮಾಧ್ಯಮಗಳಿಗೆ ಹೀಗೂ ಕೆಲಸ ಮಾಡಬಹುದು ಎಂಬುದನ್ನು ಒಂದು ನಿದರ್ಶನ ಸಮೇತ ಚಾಣಕ್ಯ ಅವರು ಸಾಬೀತುಮಾಡಿ ತೋರಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ನೀಲಕಂಠನಹಳ್ಳಿ ಎಂಬ ಪುಟ್ಟ ಗ್ರಾಮ ಮೂಲದವರಾದ ಅವರು, ಸದ್ಯ ಮೈಸೂರಿನ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಹಿರಿಯ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಅಮೋಘ್ ಸ್ಥಳೀಯ ವಾಹಿನಿಯಲ್ಲಿ ವರದಿಗಾರರಾಗಿ, ಪ್ರಜಾವಾಣಿ ಬೆಂಗಳೂರು ವಿಭಾಗದಲ್ಲಿ ಟ್ರೇನಿಯಾಗಿ, ವಿಜಯವಾಣಿ ದಿನಪತ್ರಿಕೆಯ ಚಿತ್ರದುರ್ಗ ಹಾಗೂ ದಾವಣಗೆರೆಯ ವರದಿಗಾರನಾಗಿ ಕೆಲಸ ಮಾಡಿದ್ದ ಅವರು ಕಳೆದ ಐದು ವರ್ಷಗಳಿಂದ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಕರಣ ಭೇದಿಸಿದ್ದು ಹೀಗೆ…
ಪದ್ಮಾ ಪ್ರಕರಣ ಕುರಿತು ಟ್ವಿಟರ್ ಹಾಗೂ ಫೇಸ್ಬುಕ್ನಲ್ಲಿ ಕಾಣಿಸಿಕೊಂಡ ಒಂದು ಮಾಹಿತಿಯ ಬೆನ್ನು ಹತ್ತಿದ ಚಾಣಕ್ಯ ಅವರು ಶಿಮ್ಲಾ ಆಸ್ಪತ್ರೆಯ ದೂರವಾಣಿ ಸಂಖ್ಯೆಯನ್ನು ಗೂಗಲ್ನಲ್ಲಿ ಪತ್ತೆಮಾಡಿದರು. ತಮಗೆ ಗೊತ್ತಿದ್ದಷ್ಟು ಹಿಂದಿಯಲ್ಲಿ ಅಲ್ಲಿನ ಸ್ವಾಗತಕಾರನ ಹತ್ತಿರ ಮಾತನಾಡಿ ಹೇಗೋ ಅಲ್ಲಿನ ವೈದ್ಯ ಸಂಜಯ್ ಪಾಠಕ್ ಸಂಪರ್ಕ ಸಾಧಿಸಿ ಪದ್ಮಾ ಅವರೊಂದಿಗೆ ಮಾತನಾಡಲು ಯಶಸ್ವಿಯಾದರು. ಶಿಮ್ಲಾದಲ್ಲಿದ್ದ ಪದ್ಮಾರನ್ನು ಮೊದಲು ಗುರುತಿಸಿದ ಹಿಮಾಚಲಪ್ರದೇಶದ ಸಾಮಾಜಿಕ ಕಾರ್ಯಕರ್ತೆ ಸುನೀಲ ಶರ್ಮಾ ಅವರಿಗೆ ಫೇಸ್ ಬುಕ್ನಲ್ಲಿ ಸಂದೇಶ ಕಳಿಸಿ ಅವರ ಸಂಪರ್ಕವನ್ನೂ ಗಳಿಸಲು ಯಶಸ್ವಿಯಾದರು.
ವರದಿ ಮಾಡಿ ಸುಮ್ಮನಾಗಲಿಲ್ಲ
ಮೇಲಿನವರ ಗಮನಕ್ಕೆ ತಂದು ವರದಿಮಾಡಿ ತಣ್ಣಗಾಗಿದ್ದರೆ ಅವರು ಹತ್ತರಲ್ಲಿ ಹನ್ನೊಂದನೆಯವರಾಗಿರಬೇಕಾಗಿತ್ತು. ವಿಕ ಮೈಸೂರು ಸ್ಥಾನಿಕ ಸಂಪಾದಕ ಲೋಕೇಶ್ ಕಾಯರ್ಗ ಅವರು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಅವರಿಗೆ ವಿಷಯ ಮುಟ್ಟಿಸಿದರು. ಚಾಣಕ್ಯ ಮೈಸೂರು ಜಿಲ್ಲಾ ಮಾನಸಿಕ ಆರೋಗ್ಯ ಯೋಜನಾಧಿಕಾರಿ ಮಂಜುಪ್ರಸಾದ್ ಅವರಿಗೆ ವಿಷಯ ಮುಟ್ಟಿಸಿದರು. ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿಗೆ ಸುನೀಲ ಶರ್ಮಾ, ಸಂಜಯ್ ಪಾಠಕ್ ಅವರ ಮೊಬೈಲ್ ನಂಬರ್ ನೀಡಿ. ಈ ಪ್ರಕರಣದಲ್ಲಿ ವಿಜಯ ಕರ್ನಾಟಕ ಪತ್ರಿಕೆಯು ಮುಖ್ಯ ಸೂತ್ರಧಾರಿಯಾಗಿರುವಂತೆ ನೋಡಿಕೊಂಡರು.
ವರದಿ ಪರಕಟವಾದ ಮರುದಿನವೇ ವಿಜಯ ಕರ್ನಾಟಕದ ಪಿರಿಯಾಪಟ್ಟಣ ವರದಿಗಾರ ನವೀನ್ ಅವರು ಕಂಪಲಾಪುರದ ಮಾಕನಹಳ್ಳಿ ಪಾಳ್ಯದಲ್ಲಿರುವ ಪದ್ಮಾ ಅವರ ಮನೆಯನ್ನು ಪತ್ತೆ ಮಾಡಿದರು. ಮಾನಸಿಕ ಆರೋಗ್ಯಾಧಿಕಾರಿಗೆ ವಿಳಾಸ ತೋರಿಸಿ ಅವರನ್ನು ಕರೆದೊಯ್ದವರು ನವೀನ್.
ಮನೆ ಪರಿಸ್ಥಿತಿ ಸರಿ ಇರಲಿಲ್ಲ
ಪದ್ಮಾ ಅವರ ಕುಟುಂಬ ವರ್ಗವನ್ನು ಮಾನಸಿಕ ಆರೋಗ್ಯ ಇಲಾಖೆ ತಂಡ ಭೇಟಿಯಾದಾಗ ಅವರ ಮನೆ ಪರಿಸ್ಥಿತಿ ಕರಳು ಚುರುಕ್ ಎನ್ನುವಂತಿತ್ತು. ದುಡ್ಡಿಲ್ಲದೆ ಅರ್ಧಕ್ಕೆ ಮನೆ ನಿಂತಿದ್ದರಿಂದ ಪದ್ಮಾರ ತಾಯಿ ಪಾರ್ವತಮ್ಮನವರು ಅವರ ಮಗಳ ಮನೆಯಲ್ಲಿ ವಾಸಿಸುತ್ತಿದ್ದರು. ಕೂಲಿ ಮಾಡಿ ಬದುಕುವ ಕುಟುಂಬಕ್ಕೆ ಪದ್ಮಾ ಇನ್ನಷ್ಟು ಹೊರೆಯಾಗಬಹುದೆಂದು ಮೇಲ್ನೋಟದಲ್ಲೇ ಕಾಣುತ್ತಿತ್ತು. ಕೂಡಲೇ ಪಿರಿಯಾಪಟ್ಟಣ ಶಾಸಕ ಮಹದೇವು ಅವರನ್ನು ಸಂಪರ್ಕಿಸಿದ ಚಾಣಕ್ಯ ಅವರು ಪದ್ಮಾರ ಮನೆ ಪರಿಸ್ಥಿತಿಯನ್ನು ವಿವರಿಸಿ ಹೇಳಿದರು. ಇದರಿಂದ ಕರಗಿದ ಶಾಸಕರು ಪದ್ಮಾ ಕುಟುಂಬಕ್ಕೆ ನೆರವು ನೀಡುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ಅಭಿರಾಂ ಅವರೂ ಕೂಡ ಇದೇ ರೀತಿ ಭರವಸೆ ನೀಡಿದರು.
ಪ್ರೇರಣೆಯಾಗಿದ್ದು ಸಂಸ್ಥೆ ಹಾಗೂ ಗುರುಗಳು
ವರದಿಗಳು ಸಮಾಜದ ಮೂರನೇ ವ್ಯಕ್ತಿಗೆ ಲಾಭ ತಂದುಕೊಟ್ಟಾಗಲೇ ಸಾರ್ಥಕವಾಗುವುದು ಎಂದು ಚಾಣಕ್ಯ ಅವರು ತಮ್ಮ ಫೇಸ್ಬುಕ್ ಪೋಸ್ಟ್ವೊಂದರಲ್ಲಿ ಹೇಳಿದ್ದಾರೆ. ಇದಕ್ಕೆ ಕಾರಣವಾಗಿದ್ದು ನನ್ನ ಸಂಸ್ಥೆ ಹಾಗೂ ಸ್ಥಾನಿಕ ಸಂಪಾದಕರು ನೀಡಿದ ಪ್ರೋತ್ಸಾಹ ಎಂದು ಫೇಸ್ ಬುಕ್ ಮೆಸೆಂಜರ್ನಲ್ಲಿ ಸುದ್ದಿದಿನ ಕ್ಕೆ ತಿಳಿಸಿದ್ದಾರೆ.
ನಾನು ವಿಕ ಬಳಗಕ್ಕೆ ಸೇರಿದಾಗ ನನ್ನ ಆದ್ಯಗುರುಗಳು ನೀವು ಏನು ಬರೆಯುತ್ತೀರಾ ಎಂದು ಕೇಳಿದರು. ಕೃಷಿ, ವಿಜ್ಞಾನ, ಭಾಷಾಂತರ, ಲೈಫ್ ಸ್ಟೈಲ್ ವರದಿಗಾರಿಕೆ ಬಗ್ಗೆ ವಿವರಿಸಿದೆ. ಶ್ರೀಸಾಮಾನ್ಯನಿಗೆ ನೆರವಾಗುವಂತಹ ಯಾವುದಾದರೂ ಲೇಖನ ಬರೆದಿದ್ದೀರಾ ಎಂದು ಕೇಳಿದರು. ನನ್ನ ಬಳಿ ಉತ್ತರ ಇರಲಿಲ್ಲ. ಸಮಾಜದ ಮೂರನೇ ವ್ಯಕ್ತಿಗೆ ಲಾಭ ತಂದು ಕೊಟ್ಟಾಗ ಮಾತ್ರ ವರದಿ ಸಾರ್ಥಕವಾಗತ್ತದೆ ಎಂದು ಅವರು ಹೇಳಿದ್ದರು. ಇದು ಅರ್ಥವಾಗಲು ಐದು ವರ್ಷ ಹಿಡಿಯಿತು ಎಂದು ಚಾಣಕ್ಯ ಅವರು ತಮ್ಮ ಫೇಸ್ಬುಕ್ ಪೋಸ್ಟ್ ವೊಂದರಲ್ಲಿ ಬರೆದಿದ್ದಾರೆ.

ದಿನದ ಸುದ್ದಿ
ಮಾಧ್ಯಮ ಉದ್ಯಮವಾಗಿರುವ ಈ ಕಾಲಘಟ್ಟದಲ್ಲಿ ಜನರೇ ಜನಾಭಿಪ್ರಾಯ ರೂಪಿಸುವ ಹೊಣೆ ಹೊರಬೇಕು : ಹಿರಿಯ ಪತ್ರಕರ್ತ ಬಸವರಾಜ್ ದೊಡ್ಮನಿ

ಸುದ್ದಿದಿನ,ಹರಪನಹಳ್ಳಿ: ಮಾಧ್ಯಮರಂಗ ಕಾವಲು ನಾಯಿಯಾಗಿ ಕೆಲಸ ಮಾಡುವಂತಹ ಕಾಲವಿತ್ತು, ಆದ್ರೆ ಈಗ ಯಾರ ಮನೆಯ ನಾಯಿ ಎಂದು ಜನರೇ ಕೇಳುವ ಮಟ್ಟಕ್ಕೆ ಮಾಧ್ಯಮರಂಗ ತನ್ನ ನೈತಿಕ ಅಂಧ ಪತನ ಕಾಣುತ್ತಿದೆ ಎಂದು ಹಿರಿಯ ಪತ್ರಕರ್ತ ಬಸವರಾಜ ದೊಡ್ಮನಿ ಬೇಸರ ವ್ಯಕ್ತಪಡಿಸಿದ್ರು.
ಹರಪನಹಳ್ಳಿಯಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ “ಬುಡಕಟ್ಟು ಸಮುದಾಯಗಳ ಐಕ್ಯತಾ ವೇದಿಕೆ ಹಾಗೂ ಪೆರಿಯರ್ ಮತ್ತು ಎಂ ಪಿ ಪ್ರಕಾಶ್ ಸೇವಾ ಸಂಸ್ಥೆ ಆಯೋಜಿಸಿರುವ ಯುವಜನರ ಸವಾಲುಗಳು ಹಾಗೂ ನಾಯಕತ್ವ ಶಿಬಿರದ “ಮಾಧ್ಯಮ ಮತ್ತು ಯುವಜನ” ಗೋಷ್ಠಿ ಉದ್ದೇಶಿಸಿ ಮಾತ್ನಾಡಿದ್ರು.
ಇದನ್ನೂ ಓದಿ | ಪ್ರತಿರೋಧದ ದನಿಗಳು ಸರ್ವಾಧಿಕಾರಕ್ಕೆ ಸದಾ ಅಪಥ್ಯವೇ
ಜನಾಭಿಪ್ರಾಯ ರೂಪಿಸಬೇಕಾದ ಮಾಧ್ಯಮ ಇಂದು ಸುದ್ದಿ ಹಪಾಹಪಿತನದಿಂದ ಜನರನ್ನೇ ದಾರಿ ತಪ್ಪಿಸುವಂತಹ ಹಂತಕ್ಕೆ ಬಂದು ತಲುಪಿದೆ. ಸುದ್ದಿ ಪ್ರಮಾಖ್ಯತೆಗಳನ್ನ ಆಯ್ಕೆ ಮಾಡುವಾಗ ಜನರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ. ಆಳುವ ಜನರ ಕಪಿಮುಷ್ಠಿಯಿಂದ ಮಾಧ್ಯಮ ರಂಗವನ್ನ ಜನರೇ ಬಿಡಸಬೇಕಾದ ಅನಿವಾರ್ಯತೆ ಹಾಗೂ ಜವಾಬ್ದಾರಿ ನಮ್ಮ ಮೇಲಿದೆ. ಮಾಧ್ಯಮಗಳಿಗೆ ಈಗ ಸೆಕ್ಸ್, ಕ್ರೈಂ, ಫಿಲ್ಮ್ ಮಾತ್ರವೇ ಸುದ್ದಿಯ ಮೂಲವಾಗಿರುವುದು ನಿಜಕ್ಕೂ ದುರಂತ ಎಂದು ಅಭಿಪ್ರಾಯಿಸಿದ್ರು.
ಸುದ್ದಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ ವರದರಾಜ್ ಮಾತ್ನಾಡಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಬಹುದೊಡ್ಡ ಪಾತ್ರವಹಿಸಿದೆ. ಸಮಾಜದ ಓರೆಕೋರೆಗಳನ್ನ ತಿದ್ದುವಲ್ಲಿ ಹಾಗೂ ಸಮಾಜದ ಜ್ವಲಂತ ಸಮಸ್ಯೆಗಳನ್ನ ಬೆಳಕಿಗೆ ತರುವಲ್ಲಿ ಮಾಧ್ಯಮಗಳು ಪಾತ್ರವಹಿಸಿದೆ. ಕಟ್ಟಕಡೆಯ ಹಳ್ಳಿಗಳ ಸಮಸ್ಯೆಗಳನ್ನ ಸರ್ಕಾರದ ಅಧಿಕಾರಿಗಳ ಗಮನಕ್ಕೆ ತಂದು ಕಿವಿ ಹಿಂಡುವ ಕೆಲಸಗಳು ಇವೆ. ಇಂತಹ ದೊಡ್ಡ ಶಕ್ತಿ ಇರುವ ಮಾಧ್ಯಮ ಎಲ್ಲೋ ಒಂದು ಕಡೆ ದಾರಿ ತಪ್ಪುತ್ತಿರುವುದು ವಿಷಾದ. ರಾಜಕೀಯ ನಾಯಕರೇ ಮಾಧ್ಯಮಗಳನ್ನ ನಿಯಂತ್ರಿಸುತ್ತಿರುವುದರಿಂದ ಜನರು ಮಾಧ್ಯಮದ ಮೇಲೆ ನಂಬಿಕೆ ಕಳೆದುಕೊಳ್ಳಲು ಕಾರಣ ಎಂದು ಅಭಿಪ್ರಾಯಿಸಿದ್ರು.
ಸತೀಶ್ ನಾಯಕ್ ಮಾತ್ನಾಡಿ ಪ್ರಭುತ್ವವನ್ನ ಪ್ರಶ್ನೆ ಮಾಡುವಂತಹ ಪತ್ರಕರ್ತರ ಮೇಲೆ ಬಹುದೊಡ್ಡ ದಾಳಿಗಳು ನಡೆಯುತ್ತಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯುವಜನರು ಮಾಧ್ಯಮದ ಸವಾಲುಗಳ ಬಗ್ಗೆ ಚರ್ಚೆ ನಡೆಸುತ್ತಿರುವುದು ಆಶಾದಾಯಕ ಬೆಳವಣಿಗೆ. ಭವಿಷ್ಯತ್ತಿನಲ್ಲಿ ಯುವಜನರೇ ಮಾಧ್ಯಮದ ಜವಬ್ದಾರಿ ಹೊರಬೇಕಿದೆ ಎಂದು ಕರೆ ನೀಡಿದ್ರು.
ಕಾರ್ಯಕ್ರಮದಲ್ಲಿ ಕೋಡಿಹಳ್ಳಿ ಭೀಮಣ್ಣ, ಈಶ್ವರ್ ನಾಯಕ್ ಸೇರಿದಂತೆ ನೂರಾರು ಯುವಜನರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೊರೋನ ಲಸಿಕೆ ಪಡೆದ ಸಂಸದ ಜಿ.ಎಂ.ಸಿದ್ದೇಶ್ವರ್

ಸುದ್ದಿದಿನ,ದಾವಣಗೆರೆ: ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಮೂರನೇ ಹಂತದ ಕೋವಿಡ್-19 ಲಸಿಕೆ ನೀಡುವ ಅಭಿಯಾನವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಮಂಗಳವಾರ ನಗರದ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಭಿಯಾನದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ (69) ಹಾಗೂ ಅವರ ಪತ್ನಿ ಗಾಯತ್ರಮ್ಮ.ಜಿ.ಎಸ್ (66), ಹಿರಿಯ ನಾಗರೀಕರು ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟ ಅನಾರೋಗ್ಯ ಪೀಡಿತರು ಸೇರಿದಂತೆ ಒಟ್ಟು 74 ಜನರು ಲಸಿಕೆ ಪಡೆದುಕೊಂಡರು.
ಈ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ ತಮ್ಮ ಮಡದಿಯೊಂದಿಗೆ ಲಸಿಕೆ ಪಡೆದು ಮಾತನಾಡಿ, ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದ ಕೊರೋನ ನಿಯಂತ್ರಣಕ್ಕೆ 10 ತಿಂಗಳೊಳಗಾಗಿ ಲಸಿಕೆ ಕಂಡುಹಿಡಿದಿರುವುದು ಅಭಿನಂದನಾರ್ಹ.
ಮೊದಲ ಹಂತದಲ್ಲಿ ಕೋವಿಡ್ ನಿಯಂತ್ರಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ನಂತರ ಕಂದಾಯ, ಪೌರಾಡಳಿತ, ಪಂಚಾಯತ್ ರಾಜ್ ಇಲಾಖೆ, ಪೊಲೀಸ್ ಇಲಾಖೆ ಫಲಾನುಭವಿಗಳಿಗೆ ನೀಡಲಾಗಿದೆ. ಈ ಲಸಿಕೆ ಸುರಕ್ಷಿತವಾಗಿದ್ದು, ಇದುವರೆಗೂ ಯಾರಿಗೂ ತೊಂದರೆಯಾಗಿಲ್ಲ ಎಂದು ತಿಳಿಸಿದರು.
ಮಾರ್ಚ್ 1 ರಂದು ಲಸಿಕೆ ಪಡೆಯಬೇಕಿತ್ತು. ಕಾರಣಾಂತರಗಳಿಂದ ಲಸಿಕೆ ಪಡೆಯಲು ಸಾಧ್ಯವಾಗಲಿಲ್ಲ. ಇಂದು ಸ್ವ-ಇಚ್ಚೆಯಿಂದ ನನ್ನ ಮಡದಿಯೊಂದಿಗೆ ಬಂದು ಲಸಿಕೆ ಪಡೆದಿದ್ದು, ಯಾವುದೇ ತೊಂದರೆಯಾಗಿಲ್ಲ. ಸುರಕ್ಷಿರಾಗಿದ್ದೇವೆ. ಲಸಿಕೆ ಪಡೆಯುವುದಕ್ಕು ಮುನ್ನ ಇಲ್ಲಿ ಲಸಿಕೆ ಪಡೆದ ಹಿರಿಯರನ್ನು ವಿಚಾರಿಸಿದ್ದು, ಯಾವುದೇ ರೀತಿಯ ಅಡ್ಡಪರಿಣಾಮ ಸಂಭವಿಸಿಲ್ಲ ಎಂದು ಭರವಸೆ ನೀಡಿದ್ದಾರೆ.
ಆದ್ದರಿಂದ ಲಸಿಕೆ ಪಡೆಯದ ಎಲ್ಲಾ ಹಿರಿಯ ನಾಗರೀಕರು ಹಾಗೂ 45 ವರ್ಷ ಮೇಲ್ಪಟ್ಟ ಎಲ್ಲಾ ಅನಾರೋಗ್ಯ ಪೀಡಿತರು ಯಾವುದೇ ಭಯವಿಲ್ಲದೇ, ಹಿಂಜರಿಯದೆ ಲಸಿಕೆ ಪಡೆದುಕೊಂಡು ದೇಶಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.
ಅಭಿಯಾನದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಎರಡನೇ ಹಂತದಲ್ಲಿ ಮುಂಚೂಣಿ ಕೊರೋನ ವಾರಿಯರ್ಸ್ಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ಮಾರ್ಚ್ 1 ರಿಂದ ಮೂರನೇ ಹಂತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಅಂತಹವರು ತಮ್ಮ ಆಧಾರ ಕಾರ್ಡ್ನೊಂದಿಗೆ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಶೇಕಡ 80 ರಷ್ಟು ಜನರು ಲಸಿಕೆ ಪಡೆದುಕೊಂಡಿದ್ದು, ನಂತರ ಮುಂಚೂಣಿ ಕೊರೋನ ವಾರಿಯರ್ಸ್ಗಳಲ್ಲಿ ಶೇಕಡ 70 ರಷ್ಟು ಜನರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಇನ್ನೂ ಕಂದಾಯ ಇಲಾಖೆಯಲ್ಲಿ ಶೇಕಡ 55 ರಷ್ಟು ಹಾಗೂ ಇನ್ನಿತರರು ಸೇರಿ ಶೇಕಡ 60 ರಷ್ಟು ಜನರು ಲಸಿಕೆ ಪಡೆದುಕೊಂಡಿದ್ದು, ಲಸಿಕೆ ಪಡೆಯದವರಿಗೆ ಮಾ.6 ರವರೆಗೆ ಕಾಲವಕಾಶವಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು.
ಇದನ್ನೂ ಓದಿ | ಎ ಸಿ ಬಿ ಬಲೆಗೆ ಬಿದ್ದ ಕೊಪ್ಪಳದ ಬಿ ಇ ಓ ಮತ್ತು ಎಫ್ ಡಿ ಎ
ಮಾರ್ಚ್ 1 ರಿಂದ ಮೂರನೇ ಹಂತದ ಲಸಿಕೆ ಅಭಿಯಾನ ಪ್ರಾರಂಭವಾಗಿದ್ದು, ಮೊದಲ ದಿನ 11 ಜನ ಲಸಿಕೆ ಪಡೆದಿದ್ದರು. ಆದರೆ ಇಂದು ಸರ್ಕಾರಿ ಹಾಗೂ ಖಾಸಗಿ ಎರಡು ವಲಯಗಳು ಸೇರಿ 63 ಜನರು ಲಸಿಕೆ ಪಡೆದುಕೊಂಡಿದ್ದು, ಒಟ್ಟು 74 ಜನರು ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಮಂಗಳವಾರ ಸಂಸದರಾದ ಸಿದ್ದೇಶ್ವರ ಹಾಗೂ ಅವರ ಪತ್ನಿ ಲಸಿಕೆ ಹಾಕಿಸಿಕೊಂಡಿದ್ದು ಯಾವುದೇ ತೊಂದರೆಗಳು ಸಂಭವಿಸಿಲ್ಲ. ಆದ ಕಾರಣ ಯಾರು ಭಯ ಪಡದೇ, ಲಸಿಕೆ ಕುರಿತು ಪೂರ್ವಾಗ್ರಹ ಇಟ್ಟುಕೊಳ್ಳದೇ, ಧೈರ್ಯದಿಂದ ಮುಂದೆ ಬಂದು ಕೋವಿಶೀಲ್ಡ್ ವ್ಯಾಕ್ಸಿನ್ ತೆಗೆದುಕೊಳ್ಳಬೇಕು. ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರೊಂದಿಗೆ ತಮ್ಮ ಕುಟುಂಬದವರನ್ನು ರಕ್ಷಣೆ ಮಾಡಬೇಕು. ಕೊರೋನ ಮುಕ್ತ ದೇಶವನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಅಭಿಯಾನದಲ್ಲಿ ಸಂಸದರ ಪತ್ನಿ ಗಾಯತ್ರಮ್ಮ ಜಿ.ಎಸ್, ಕಾರ್ಪೋರೇಟರ್ ಆರ್.ಎಲ್.ಶಿವಪ್ರಕಾಶ್, ಆರ್ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀಕ್ಷಕ ನೀಲಕಂಠ, ಯುವ ಮುಖಂಡರಾದ ಶಿವಕುಮಾರ್, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎ ಸಿ ಬಿ ಬಲೆಗೆ ಬಿದ್ದ ಕೊಪ್ಪಳದ ಬಿ ಇ ಓ ಮತ್ತು ಎಫ್ ಡಿ ಎ

ಸುದ್ದಿದಿನ,ಕೊಪ್ಪಳ : ಬಂದ್ ಆಗಿರುವ ಶಾಲೆಯ ಡಿಪಾಸಿಟ್ ಅನ್ನು ವಾಪಾಸ್ ಪಡೆಯಲು ಮೂರುವರೆ (3.500ರೂ) ಲಂಚ ಕೇಳಿದ್ದ ಬಿ ಇ ಓ ಮತ್ತು ಎಫ್ ಡಿ ಎ ಇಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಭಾಗ್ಯನಗರದ ಎಸ್ ಎಸ್ ಕರ ಶಾಲೆಯ ಬಾಲಚಂದ್ರ ಕಬಾಡೆ ಎಂಬುವವರ ದೂರಿನ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ, ಮೂರೂವರೆ ಸಾವಿರ ಲಂಚ ಪಡೆಯುವಾಗವಾಗ ಬಿಇಓ ಉಮಾದೇವಿ ಸೊನ್ನದ, ಎಫ್ ಡಿ ಎ ಎ ಆರುಂಧತಿ ಬಲೆಗೆ ಬಿದ್ದಿದ್ದಾರೆ. ಶಾಲೆ 2002ರಲ್ಲಿ ಆರಂಭವಾಗಿದ್ದು ೨೦೦೯ 2009 ರಲ್ಲಿ ಬಂದಾಗಿತ್ತು.
ಇದನ್ನೂ ಓದಿ | ಅಶ್ಲೀಲ ಸಿಡಿ ವೈರಲ್ | ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ; ಆರೋಪ ಮುಕ್ತನಾದ ಮೇಲೆ ಸಚಿವ ಸ್ಥಾನ ನೀಡಿ
ಬಳ್ಳಾರಿ ಎಸ್ಪಿ ಗುರುನಾಥ ಮತ್ತೂರ ಮಾರ್ಗದರ್ಶನದಲ್ಲಿ ಡಿಎಸ್ಪಿ ಶಿವಕುಮಾರ್, ಎಸ್ ಐ ಎಸ್ ಎಸ್ ಬೀಳಗಿ, ಎಸೈ ಬಾಳನಗೌಡ ತಂಡವು ಈ ದಾಳಿ ನಡೆಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಕ್ರೀಡೆ7 days ago
ಅತಿ ಕಡಿಮೆ ಪಂದ್ಯ ; 400 ವಿಕೆಟ್ : ದಾಖಲೆ ಬರೆದ ಸ್ಪಿನ್ನರ್ ಆರ್ ಅಶ್ವಿನ್
-
ಕ್ರೀಡೆ7 days ago
ರಾಜ್ಯದ ಕ್ರೀಡಾ ವಿಜ್ಞಾನ ಸಂಸ್ಥೆಯಿಂದ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ
-
ಲೈಫ್ ಸ್ಟೈಲ್6 days ago
ರೆಸಿಪಿ | ಖರ್ಜೂರದ ಹೋಳಿಗೆ ಮಾಡೋದು ಹೇಗೆ ಗೊತ್ತಾ..?
-
ದಿನದ ಸುದ್ದಿ5 days ago
ಅಸ್ಸಾಂ | ಅಥ್ಲೀಟ್ ಹಿಮಾ ದಾಸ್ ಡಿಎಸ್ಪಿಯಾಗಿ ನೇಮಕ ; ನನ್ನ ಮತ್ತು ತಾಯಿಯ ಕನಸು ನನಸಾದ ದಿನವಿದು : ಹಿಮಾ ಭಾವುಕ ನುಡಿ
-
ಸಿನಿ ಸುದ್ದಿ4 days ago
ಇಂದು ಕನ್ನಡ ಬಿಗ್ ಬಾಸ್ ಸೀಸನ್ 8 ಗ್ರ್ಯಾಂಡ್ ಓಪನಿಂಗ್ | ಒಂಟಿ ಮನೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಗೊತ್ತಾ..?
-
ದಿನದ ಸುದ್ದಿ7 days ago
ಹೆಚ್.ಎ.ಎಲ್ ನಲ್ಲಿ ತರಬೇತಿಗಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
ಜನರಿಗೆ ತಮ್ಮ ಕೆಲಸಗಳಾಗುವ ಭರವಸೆ,15 ದಿನಕ್ಕೊಮ್ಮೆ ಜನಸ್ಪಂದನ : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ | ಜನಸ್ಪಂದನದ ಕಂಪ್ಲೀಟ್ ಡೀಟೆಲ್ಸ್ ; ಮಿಸ್ ಮಾಡ್ದೆ ಓದಿ
-
ದಿನದ ಸುದ್ದಿ7 days ago
ಕಲ್ಲು ಕ್ವಾರಿ ವಿರುದ್ದ ಎಫ್ಐಆರ್ ದಾಖಲು | ಕಲ್ಲುಗಣಿ ಮತ್ತು ಕ್ರಷರ್ ಘಟಕಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸದಿದ್ದರೆ ಕ್ರಮ : ಡಿಸಿ ಮಹಾಂತೇಶ ಬೀಳಗಿ ಎಚ್ಚರಿಕೆ