ದಿನದ ಸುದ್ದಿ
ಸೂಳೆಕೆರೆ ಎಂಬ ಬೃಹತ್ ಸರೋವರದ ಇತಿಹಾಸ

ನೂರಾರು ವರ್ಷಗಳ ಹಿಂದೆ ಕಟ್ಟಿಸಿದ ಕೆರೆಗಳು ಇಂದಿಗೂ ಸಾವಿರಾರು ರೈತ ಕುಟುಂಬಗಳಿಗೆ ಆಸರೆಯಾಗಿವೆ. ಚೆನ್ನಗಿರಿ ತಾಲ್ಲೂಕಿನ ”ಸೂಳೆಕೆರೆ’ ಅಂತಹ ಕೆರೆಗಳಲ್ಲಿ ಒಂದು. ಇದು ಏಷ್ಯಾ ಖಂಡದ ‘ಅತಿ ದೊಡ್ಡ ಕೆರೆ ‘ಎಂಬ ಖ್ಯಾತಿ ಪಡೆದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಏಷ್ಯಾಖಂಡದಲ್ಲೇ ಎರಡನೆ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಯಲು ಸೀಮೆಯ ಬಟ್ಟ ಬಯಲುಗಳ ನಡುವೆ ಮೈತಳೆದಿರುವ ಸೂಳೆಕೆರೆ ಈ ಭಾಗದ ಹೆಮ್ಮೆಯ ನಿಸರ್ಗ ತಾಣವೂ ಆಗಿದ್ದು ನೂರಾರು ರೈತ ಕುಟುಂಬಗಳ ಜೀವನಕ್ಕೆ ಆಧಾರವಾಗಿದೆ.
ಈ ಕೆರೆಯ ವಿಸ್ತೀರ್ಣ 4416 ಎಕರೆ 17 ಗುಂಟೆ. ಈ ವಿಸ್ತಾರದ ಕೆರೆ ನೋಡುಗರ ಕಣ್ಣಿಗೆ ಸಾಗರದಂತೆ ಕಾಣುತ್ತದೆ. ಎರಡು ಬೆಟ್ಟಗಳ ನಡುವೆ ಸುಮಾರು 950 ಅಡಿ ಉದ್ದದ ಏರಿಯನ್ನು ನಿರ್ಮಾಣ ಮಾಡಿ ನೀರು ನಿಲ್ಲಿಸಲಾಗಿದೆ. ಏರಿಯ ಅಗಲ ಒಂದೆಡೆ 60 ಅಡಿಗಳಾದರೆ, ಇನ್ನೊಂದೆಡೆ 80 ಅಡಿಗಳಷ್ಟಿದೆ.
ಐತಿಹಾಸಿಕ ಹಿನ್ನೆಲೆ: ಈ ಕೆರೆಯ ನಿರ್ಮಾಣದ ಹಿಂದೆ ಅಚ್ಚರಿಯ ಸಂಗತಿಗಳಿವೆ. ಕೆಲವು ಐತಿಹ್ಯದಂತಿವೆ. ಇವು ಇತಿಹಾಸಕ್ತರಿಗೆ ಹೆಚ್ಚಿನ ಸಂಶೋಧನೆಗೆ ಆಕರಗಳನ್ನು ಒದಗಿಸುತ್ತವೆ. ಈ ಕೆರೆ ಪ್ರದೇಶದಲ್ಲಿ ಹಿಂದೆ ಸ್ವರ್ಗವತಿ ಎಂಬ ಪಟ್ಟಣ ಇತ್ತೆಂಬ ಐತಿಹ್ಯವಿದೆ. ವಿಕ್ರಮರಾಯನೆಂಬ ರಾಜ ಸ್ವರ್ಗವತಿಯನ್ನು ಆಳುತ್ತಿದ್ದ. ನೂತನಾ ದೇವಿ ಅವನ ಪತ್ನಿ. ಈ ದಂಪತಿಗೆ ಶಾಂತಲಾದೇವಿ (ಶಾಂತಮ್ಮ ) ಎಂಬ ಒಬ್ಬಳೇ ಮಗಳು. ಅವಳು ಯೌವ್ವನಾವಸ್ಥೆಗೆ ಬಂದಾಗ ಒಮ್ಮೆ ತಂದೆಯ ಅನುಮತಿ ಪಡೆಯದೆ ಕಾರ್ಯ ನಿಮಿತ್ತ ನೆರೆಯ ಊರಿಗೆ ಹೋಗಿ ಅರಮನೆಗೆ ಹಿಂತಿರುಗುತ್ತಾಳೆ. ಆಕೆಯ ನಡವಳಿಕೆಯನ್ನು ತಂದೆ ವಿಕ್ರಮರಾಯ ಆಕ್ಷೇಪಿಸಿ ನಿಂದಿಸುತ್ತಾನೆ. ನಡತೆಗೆಟ್ಟವಳು ಎಂದು ಆರೋಪಿಸುತ್ತಾನೆ.
ತಂದೆಯ ಬೈಗುಳದ ಮಾತುಗಳನ್ನು ಕೇಳಿ ನೊಂದ ಶಾಂತಲಾದೇವಿ ಆರೋಪದಿಂದ ಮುಕ್ತಳಾಗಲು ತಂದೆಯ ನಂತರ ಒಂದು ಕೆರೆಯನ್ನು ನಿರ್ಮಿಸಲು ಸಂಕಲ್ಪ ಮಾಡುತ್ತಾಳೆ. ಸ್ವರ್ಗಾವತಿ ಪಟ್ಟಣದ ವೇಶ್ಯೆಯರು ವಾಸಿಸುತ್ತಿದ್ದ ಪ್ರದೇಶ ಕೆರೆ ನಿರ್ಮಾಣಕ್ಕೆ ಸೂಕ್ತವೆಂದು ನಿರ್ಧರಿಸುತ್ತಾಳೆ. ಆ ಜಾಗವನ್ನು ಬಿಟ್ಟುಕೊಡುವಂತೆ ವೇಶ್ಯೆಯರನ್ನು ಕೇಳುತ್ತಾಳೆ. ಕೆರೆಗೆ ‘ಸೂಳೆಕೆರೆ’ ಎಂದು ನಾಮಕರಣ ಮಾಡುವುದಾದರೆ ಆ ಪ್ರದೇಶವನ್ನು ಬಿಟ್ಟುಕೊಡುವುದಾಗಿ ಅವರು ಹೇಳುತ್ತಾರೆ.ಆ ಬೇಡಿಕೆಗೆ ಒಪ್ಪಿದ ರಾಜಪುತ್ರಿ ಅಲ್ಲಿ ಕೆರೆ ನಿರ್ಮಾಣ ಮಾಡಿದಳು ಎಂದು ಇತಿಹಾಸ ಹೇಳುತ್ತದೆ.
ಕೆರೆ ವಿಸ್ತಾರವಾದ ಬೆಟ್ಟ ಸಾಲುಗಳ ಪ್ರದೇಶದಲ್ಲಿದೆ. ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಬೀಳುವ ಮಳೆ ನೀರು ಈ ಕೆರೆಗೆ ಹರಿದು ಬರುತ್ತದೆ. ಹಳೇ ಮೈಸೂರು ರಾಜ್ಯದ ಬ್ರಿಟಿಷ್ ಇಂಜಿನಿಯರ್ ಸ್ಯಾಂಕಿ (ಕೆ) ಅವರು ‘ಈ ಪ್ರದೇಶ ಕೆರೆ ನಿರ್ಮಾಣಕ್ಕೆ ಸೂಕ್ತವಲ್ಲ. ಹಿಂದಿನ ಕಾಲದ ನೀರಾವರಿ ತಂತ್ರಜ್ಞರ ಚಾಣಾಕ್ಷತೆಯಿಂದ ಈ ಕೆರೆ ನಿರ್ಮಾಣವಾಗಿದೆ. ಅದು ಅಚ್ಚರಿಯ ಸಂಗತಿ’ ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.
ಕೆರೆಯ ಉತ್ತರದಲ್ಲಿ ಸಿದ್ಧ ನಾಲೆ ಹಾಗೂ ದಕ್ಷಿಣದಲ್ಲಿ ಬಸವ ನಾಲೆ ಎಂಬ ಎರಡು ನಾಲೆಗಳಿವೆ. ಈ ಕೆರೆ ಸುಮಾರು 15 ರಿಂದ 20 ಹಳ್ಳಿಗಳ ಕೃಷಿ ಭೂಮಿಗೆ (2000 ಎಕರೆ) ನೀರಾವರಿ ಸೌಲಭ್ಯ ಒದಗಿಸಿದೆ. ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರನ್ನೂ ಪೂರೈಸುತ್ತಿದೆ.
ಕೆರೆಯ ಪೂರ್ವ ದಿಕ್ಕಿಗೆ ಹೊಯ್ಸಳ ಮತ್ತು ಕೆಳದಿ ವಾಸ್ತುಶೈಲಿಯ ಸಿದ್ದೇಶ್ವರ ದೇವಾಲಯವಿದೆ. ಕೆರೆಯ ಅಂಚಿನಲ್ಲಿ ಆಕರ್ಷಕ ಕಲ್ಲು ಮಂಟಪವಿದೆ. ಇಲ್ಲಿಂದ ಕೆರೆಯನ್ನು ನೋಡುವುದು ಸೊಗಸಾದ ಅನುಭವ.
ಕೆರೆಗೆ ಸಿದ್ದೇಶ್ವರ ಸ್ವಾಮಿ, ಬಸವೇಶ್ವರ ಸ್ವಾಮಿ ಹಾಗೂ ಕತ್ತರಿ ತೂಬು ಎಂಬ ಮೂರು ತೂಬುಗಳಿವೆ. ಗುಡ್ಡಗಳ ಪರಿಸರದಲ್ಲಿ ಇರುವುದರಿಂದ ಈ ಪ್ರದೇಶದಲ್ಲಿ ಕಾಡು ಪ್ರಾಣಿಗಳಿವೆ.
ಸುಮಾರು 27 ಅಡಿ ನೀರಿನ ಮಟ್ಟವಿರುವ ಕೆರೆಯಲ್ಲಿ 10 ಅಡಿಗಳಷ್ಟು ಹೂಳು ತುಂಬಿಕೊಂಡಿದೆ. ಈ ಕೆರೆಯು 1992ರಲ್ಲಿ ಕೋಡಿ ಬಿದ್ದಿತ್ತು. ಹದಿನೇಳು ವರ್ಷದ ನಂತರ ಈ ವರ್ಷ (2009) ಮತ್ತೊಮ್ಮೆ ಕೋಡಿ ಬಿತ್ತು. ಇದರಿಂದ ಅಪಾರ ಹಾನಿಯೂ ಆಯಿತು. ಹಿನ್ನೀರಿನಿಂದಾಚೆಯ 3500 ಎಕರೆ ಪ್ರದೇಶ ಜಲಾವೃತ್ತಗೊಂಡಿತ್ತು. ಕೆರೆಯಲ್ಲಿರುವ ಹೂಳನ್ನು ಕಾಲಕಾಲಕ್ಕೆ ಎತ್ತಿದ್ದರೆ ಹಾನಿ ತಪ್ಪಿಸಬಹುದಿತ್ತು.
ಕೆರೆಗಳ ಹೂಳನ್ನು ಕಾಲಕಾಲಕ್ಕೆ ತೆಗೆದು ಕೆರೆಯನ್ನು ಬಲಪಡಿಸುವ ಗ್ರಾಮಗಳಿಗೆ ಹಿಂದಿನ ಕಾಲದಲ್ಲಿ ತೆರಿಗೆ ವಿನಾಯಿತಿ ನೀಡುವ ಪದ್ಧತಿ ಇತ್ತು ಎಂಬುದು ಕೌಟಿಲ್ಯನ ‘ಅರ್ಥಶಾಸ್ತ್ರ’ದಲ್ಲಿ ಉಲ್ಲೇಖವಾಗಿದೆ. ಆದರೆ ಈಗ ಹೂಳು ತೆಗೆಯುವ ವ್ಯವಸ್ಥೆಯೇ ಇಲ್ಲ.
ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಕೆರೆಗಳಲ್ಲಿ ಒಂದು ಎನ್ನಲಾದ ಈ ಕೆರೆಗೆ ಶಾಂತಿಸಾಗರ ಎಂದೂ ಹೆಸರಿದೆ. ಕೆರೆ ನಿರ್ಮಾಣ ಮಾಡಿದ ಶಾಂತಲಾದೇವಿಯನ್ನು ಸ್ಮರಿಸುವುದೂ ಇದರ ಉದ್ದೇಶ. ಸರ್ಕಾರಿ ದಾಖಲೆಗಳಲ್ಲಿ ಶಾಂತಿಸಾಗರ ಎಂದಿದ್ದರೂ ಜನ ಸಾಮಾನ್ಯರ ಬಾಯಲ್ಲಿ ಅದು ಇಂದಿಗೂ ಸೂಳೆಕೆರೆ ಆಗಿ ಉಳಿದಿದೆ.
ಕೆರೆಯ ಹೆಸರು ಬದಲಾವಣೆಗೆ ಇತಿಹಾಸಕ್ತರು, ಚಿಂತಕರು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಸಮದ್ರ ನೋಡಿಲ್ಲದ ಮಕ್ಕಳ ಪಾಲಿಗೆ ಈ ಕೆರೆ ಸಮುದ್ರದಂತೆ ಕಾಣುತ್ತದೆ.
(ಸಂಗ್ರಹ)

ದಿನದ ಸುದ್ದಿ
ಮೈಸೂರು ವಿ.ವಿಯಲ್ಲಿ ಬುದ್ಧಪೀಠ ಸ್ಥಾಪನೆ : ಜಾಗ ನೀಡುವ ಭರವಸೆ ಕೊಟ್ಟ ಕುಲಪತಿ

ಸುದ್ದಿದಿನ, ಮೈಸೂರು : ಸಂಸದ ಶ್ರೀನಿವಾಸ ಪ್ರಸಾದ್ ಅವರ ಮನವಿಗೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಸ್ಪಂದಿಸಿ, ಪೀಠ ಸ್ಥಾಪನೆಗೆ ಜಾಗ ನೀಡುವ ಭರವಸೆ ನೀಡಿದ್ದಾರೆ. ಬುದ್ಧ ಪೂರ್ಣಿಮೆ ಅಂಗವಾಗಿ ಮೈಸೂರಿನಲ್ಲಿಂದು ಸಮಕಾಲೀನ ಜಗತ್ತಿಗೆ ಬುದ್ಧನ ಚಿಂತನೆಗಳು ಎಂಬ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಸದ ಶ್ರೀನಿವಾಸ ಪ್ರಸಾದ್ ಮಾತನಾಡಿದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಬುದ್ಧಪೀಠ ಸ್ಥಾಪಿಸಬೇಕೆಂಬ ಸಂಸದ ಶ್ರೀನಿವಾಸ ಪ್ರಸಾದ್ ಅವರ ಮನವಿಗೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಸ್ಪಂದಿಸಿ, ಪೀಠ ಸ್ಥಾಪನೆಗೆ ಜಾಗ ನೀಡುವ ಭರವಸೆ ನೀಡಿದ್ದಾರೆ.
ಬುದ್ಧ ಪೂರ್ಣಿಮೆ ಅಂಗವಾಗಿ ಮೈಸೂರಿನಲ್ಲಿ ಸೋಮವಾರ ಸಮಕಾಲೀನ ಜಗತ್ತಿಗೆ ಬುದ್ಧನ ಚಿಂತನೆಗಳು ಎಂಬ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಸದ ಶ್ರೀನಿವಾಸ ಪ್ರಸಾದ್ ಮಾತನಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಯಲುಸೀಮೆ ಭಾಗಕ್ಕೆ ಶಾಶ್ವತ ನೀರಾವರಿ ಸೌಲಭ್ಯ : ಸಚಿವ ಜೆ.ಸಿ ಮಾಧುಸ್ವಾಮಿ

ಸುದ್ದಿದಿನ, ಚಿಕ್ಕಮಗಳೂರು : ಬಯಲುಸೀಮೆ ಭಾಗಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಭಕ್ತನಕಟ್ಟೆ ಗ್ರಾಮದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಭಾಗದಲ್ಲಿ ಮಳೆಯಾಧಾರಿತ ಬೆಳೆ ಬೆಳೆಯುವ ಬಯಲುಸೀಮೆ ಭಾಗಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ಚಿಂತಿಸಲಾಗಿದೆ ಎಂದರು.
ರಾಜ್ಯದಲ್ಲಿ ಅಗಾಧ ನೀರಿನ ಸಂಪತ್ತು ಇದ್ದರೂ ಸದ್ಬಳಕೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಇಲಾಖೆ ಹಲವು ಯೋಜನೆಗಳನ್ನು ಜಾರಿಗೆ ತರಲು ರೂಪುರೇಷೆ ಸಿದ್ಧಪಡಿಸುತ್ತಿದೆ. ತಾವು ಮಂತ್ರಿಯಾದ ನಂತರ ಸಣ್ಣ ನೀರಾವರಿ ಇಲಾಖೆಗೆ 8 ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಾಜ್ಯಾದ್ಯಂತ ಶಾಲೆಗಳು ಆರಂಭ : ಪಠ್ಯ, ಸಮವಸ್ತ್ರ ಪೂರೈಕೆಗೆ ಕ್ರಮ : ಸಿಎಂ ಬೊಮ್ಮಾಯಿ

ಸುದ್ದಿದಿನ, ಬೆಂಗಳೂರು : ಶಾಲಾ ವಿದ್ಯಾರ್ಥಿಗಳಿಗೆ ಅಗತ್ಯ ಪಠ್ಯಪುಸ್ತಕ, ಸಮವಸ್ತ್ರ ಮತ್ತು ಸೈಕಲ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಜೊತೆ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣ ಬಹಳಮುಖ್ಯ ಒಳ್ಳೆಯ ವಾತಾವರಣದಲ್ಲಿ ಶಾಲೆಗಳು ಆರಂಭವಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಈ ನಡುವೆ ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಆರಂಭವಾಗಿದ್ದು, ಶಾಲಾ ಆವರಣದಲ್ಲಿ ಚಿಣ್ಣರ ಕಲರವ ಕೇಳಿ ಬರುತ್ತಿದ್ದು, ವಿದ್ಯಾರ್ಥಿಗಳಲ್ಲಿ ಹೊಸ ಹುಮ್ಮಸ್ಸು, ಸಂಚಲನ ಮೂಡಿಸಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ನೆರವೇರಿತು. ಊರಿನ ಗಣ್ಯರು, ಶಿಕ್ಷಕರು ಮಕ್ಕಳಿಗೆ ಆರತಿ ಬೆಳಗಿ, ಹೂ ನೀಡಿ ಸ್ವಾಗತಿಸಿದರು.
ಜಿಲ್ಲೆಯ ಪುಂಜಾಲಕಟ್ಟೆ ಶಾಲೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಶಾಲಾ ಆರಂಭಕ್ಕೆ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಾಲೆಗಳನ್ನು ಸ್ವಚ್ಛಗೊಳಿಸಿ, ತಳಿರು ತೋರಣಗಳೊಂದಿಗೆ ಸಿಂಗರಿಸಲಾಗಿತ್ತು. ಮಕ್ಕಳಿಗೆ ಹೂ ಹಾಗೂ ಸಿಹಿ ನೀಡಿ ಸ್ವಾಗತಿಸಲಾಯಿತು. ಜಿಲ್ಲೆಯ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಮಕ್ಕಳಿಗೆ ಹೂ ಹಾಗೂ ಸಿಹಿ ನೀಡಿ ಸ್ವಾಗತಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಪ್ರಾಥಮಿಕ ಮತು ಪ್ರೌಢಶಾಲೆಗಳು ಇಂದು ಆರಂಭವಾಗಿವೆ. ಮಕ್ಕಳ ಸ್ವಾಗತಕ್ಕೆ ಶಾಲೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಮಕ್ಕಳು ಶಾಲಾ ಅಂಗಳಕ್ಕೆ ಬರುತ್ತಿದ್ದಂತೆಯೆ ಶಿಕ್ಷಕರು ಸಿಹಿತಿನಿಸು ಮತ್ತು ಹೂಗಳನ್ನು ನೀಡಿ ಸ್ವಾಗತಿಸಿದರು.
ಜಿಲ್ಲೆಯಲ್ಲಿ 587 ಕಿರಿಯ ಪ್ರಾಥಮಿಕ, 947 ಹಿರಿಯ ಪ್ರಾಥಮಿಕ ಮತ್ತು 503 ಪ್ರೌಢಶಾಲೆಗಳು ಸೇರಿದಂತೆ ಒಟ್ಟಾರೆ 2ಸಾವಿರದ 960 ಶಾಲೆಗಳು ಆರಂಭಗೊಂಡಿವೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಆರ್.ತಿಪ್ಪೇಶಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲೂ ಶಾಲೆಗಳ ಆವರಣದಲ್ಲಿ ಹಬ್ಬದ ಸಡಗರ-ಸಂಭ್ರಮ ಮನೆ ಮಾಡಿದೆ. 2 ವರ್ಷಗಳ ನಂತರ ಶಾಲೆ ಪುನಾರಂಭಗೊಂಡ ಹಿನ್ನೆಲೆಯಲ್ಲಿ ಶಿಕ್ಷಕರು, ಮಕ್ಕಳಿಗೆ ಹೂ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಲೆಗಳು ಆರಂಭವಾಗಿದ್ದು ನಗರದ ಬಸವನಹಳ್ಳಿ ಬಾಲಕಿಯರ ಶಾಲೆಯಲ್ಲಿ ಶಿಕ್ಷಣ ಅಧಿಕಾರಿಗಳು ಶಾಲಾ ಸಿಬ್ಬಂದಿ ಮಕ್ಕಳಿಗೆ ಹೂಗಳನ್ನು ನೀಡಿ ಸ್ವಾಗತಿಸಿದರು.
ಗದಗ ಜಿಲ್ಲೆಯಲ್ಲಿ ಇಂದಿನಿಂದ 1ಸಾವಿರದ 381ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭಗೊಂಡಿವೆ. ಲಕ್ಕುಂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಶಾಲಾ ಮಕ್ಕಳಿಗೆ ಸಿಹಿವಿತರಿಸಿ, ಹೂ ನೀಡುವ ಮೂಲಕ ಶಾಲೆಯ ಆರಂಭಕ್ಕೆ ಚಾಲನೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಕ್ರೀಡೆ7 days ago
ಮಧ್ಯಾಹ್ನದ ಪ್ರಮುಖ ಸುದ್ದಿಗಳು
-
ಸಿನಿ ಸುದ್ದಿ7 days ago
ವಿದ್ಯುತ್ ಶಾಕ್ ನಿಂದ ಜೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿನಾರಾಯಣ್ ಸಾವು
-
ದಿನದ ಸುದ್ದಿ7 days ago
ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ : ಆಯೋಗದಿಂದ ವೇಳಾಪಟ್ಟಿ ಪ್ರಕಟ
-
ನಿತ್ಯ ಭವಿಷ್ಯ6 days ago
ಈ ರಾಶಿಯ ನವದಂಪತಿಗಳಿಗೆ ಘರ್ಷಣೆ ಸಾಧ್ಯತೆ! ಈ ರಾಶಿಯ ಉದ್ಯೋಗಿಗಳು ಎದುರಾಳಿಯ ಪಿತೂರಿಗಳು ಎದುರಿಸಬೇಕಾಗುವುದು! ಬುಧವಾರ ರಾಶಿ ಭವಿಷ್ಯ-ಮೇ-11,2022
-
ದಿನದ ಸುದ್ದಿ6 days ago
ಸಮೀಕ್ಷೆ ಆಧಾರದಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ರೂಪಿಸಿ ; ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಅವಕಾಶ ಕೊಡಿ : ಸಿಎಂ ಬೊಮ್ಮಾಯಿ ಗೆ ಸಿದ್ದರಾಮಯ್ಯ ಆಗ್ರಹ
-
ದಿನದ ಸುದ್ದಿ6 days ago
ದಾವಣಗೆರೆ | ಮತದಾರರ ಪಟ್ಟಿ ಪರಿಷ್ಕರಣೆಗೆ ಮನೆ-ಮನೆ ಭೇಟಿ
-
ದಿನದ ಸುದ್ದಿ6 days ago
15 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ; ಆದೇಶ ಪಾಲಿಸಲು ಕ್ರಮ : ಸಿಎಂ ಬೊಮ್ಮಾಯಿ
-
ದಿನದ ಸುದ್ದಿ6 days ago
ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಭಾರತಕ್ಕೆ ಪಲಾಯನ ಕುರಿತ ವರದಿ ನಿರಾಧಾರ : ಕೊಲಂಬೊದ ಭಾರತೀಯ ರಾಯಭಾರಿ ಕಚೇರಿ ಸ್ಪಷ್ಟನೆ