ದಿನದ ಸುದ್ದಿ
ಕೊಡಗು ಮಹಾಮಳೆ | ವಿಪತ್ತು ನಿರ್ವಹಣಾ ಕೇಂದ್ರಗಳ ಕಂಪ್ಲೀಟ್ ಡೀಟೇಲ್ಸ್

ಸುದ್ದಿದಿನ ಡೆಸ್ಕ್ |ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಬೀಳುತ್ತಿರುವ ಭಾರೀ ಗಾಳಿ ಮಳೆಯಿಂದ ಜಿಲ್ಲೆಯ ಅನೇಕ ಭಾಗಗಳಲ್ಲಿ ಭೂಕುಸಿತ ಉಂಟಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಅನೇಕ ಸಂತ್ರಸ್ಥರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಪಾಯದಲ್ಲಿ ಸಿಲುಕಿದ್ದು, ತುರ್ತು ರಕ್ಷಣಾ ಕಾರ್ಯ ಕೈಗೊಳ್ಳಲು ದೂರವಾಣಿ ಮುಖಾಂತರ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ತಾಲ್ಲೂಕು ಕಚೇರಿ, ಪೊಲೀಸ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ 24*7 ವಿಪತ್ತು ನಿಯಂತ್ರಣಾ ಕೊಠಡಿಗೆ ವಿನಂತಿಸುತ್ತಿದ್ದಾರೆ.
ಜಿಲ್ಲಾಡಳಿತವು ಅಪಾಯದಲ್ಲಿ ಸಿಲುಕಿರುವ ಸಂತ್ರಸ್ಥರ ನೆರವಿಗೆ ಸ್ಪಂದಿಸಲು ಸಕಲ ಪರಿಹಾರ ತುರ್ತು ಕ್ರಮಗಳನ್ನು ಕೈಗೊಂಡಿರುತ್ತದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು. ಜಿಲ್ಲಾ ಕಚೇರಿ, ಪೊಲೀಸ್ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಸಹಾಯವಾಣಿಯು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿರುತ್ತದೆ. ಹಾಗೂ ಸ್ವೀಕೃತವಾಗುವ ಎಲ್ಲಾ ಕರೆಗಳಿಗೆ ಸ್ಪಂದಿಸಿ, ಶೀಘ್ರ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜಿಲ್ಲೆಯಾದ್ಯಂತ ಈವರೆವಿಗೆ ಒಟ್ಟು 2569 ಸಂತ್ರಸ್ಥರನ್ನು ರಕ್ಷಿಸಿದ್ದು, ಸುರಕ್ಷಿತ ಸ್ಥಳ/ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಜಿಲ್ಲೆಯಾದ್ಯಂತ ಒಟ್ಟು 31 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರದಲ್ಲಿ ಸಂತ್ರಸ್ಥರಿಗೆ ಊಟೋಪಚಾರ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ, ಹಾಸಿಗೆ ಮತ್ತು ಹೊದಿಕೆ ಮುಂತಾದ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎಂದು ಸಚಿವ ಮಹೇಶ್ ತಿಳಿಸಿದರು.
ಮಡಿಕೇರಿ ತಾಲ್ಲೂಕಿನ ಕೊಟ್ಟಮುಡಿ, ಗಾಳಿಬೀಡು, ಕರ್ಣಂಗೇರಿ, ಮಕ್ಕಂದೂರು, ಜೋಡುಪಾಲ, ಕಾಟಕೇರಿ, ಹೊದವಾಡ, ಐಕೊಳ, ಮಡಿಕೇರಿ ನಗರ-2 ಪುನರ್ವಸತಿ ಕೇಂದ್ರದಲ್ಲಿ 550 ಸಂತ್ರಸ್ಥರು. ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ, ಕಾಂಡನಕೊಲ್ಲಿ, ಮಂಜುನಾಥ ಕಲ್ಯಾಣ, ಮದರಸಾ, ಸೇಂಟ್ ಮೇರೀಸ್ ಸ್ಕೂಲ್, ರಾಮಮಂದಿರ, ಪನ್ಯ ಎಸ್ಟೇಟ್ ಸುಂಟಿಕೊಪ್ಪ, ಬೆಟ್ಟದಕಾಡು, ಗುಡ್ಡೆಹೊಸೂರು, ಮದಲಾಪುರ, ಹಾರಂಗಿ, ದಂಡಿನಪೇಟೆ, ಕೊಡವ ಸಮಾಜ, ಗಂಧದಕೋಟೆ, ಶಾಂತಳ್ಳಿ, ಸೋಮವಾರಪೇಟೆ ಪುನರ್ವಸತಿ ಕೇಂದ್ರದಲ್ಲಿ 2233 ಸಂತ್ರಸ್ಥರು.
ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು-3, ಅಮ್ಮತ್ತಿ-1, ವಿರಾಜಪೇಟೆ-1, ಪುನರ್ವಸತಿ ಕೇಂದ್ರದಲ್ಲಿ 376 ಸಂತ್ರಸ್ಥರು. ಜಲ್ಲೆಯ ಒಟ್ಟು 31 ಪುನರ್ವಸತಿ ಕೇಂದ್ರದಲ್ಲಿ 3159 ಸಂತ್ರಸ್ಥರಿಗೆ ಆಶ್ರಯವನ್ನು ಕಲ್ಪಿಸಲಾಗಿದೆ. ಪುನರ್ವಸತಿ ಕೇಂದ್ರದಲ್ಲಿ ಸಂತ್ರಸ್ಥರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲು ಪ್ರತಿ ಕೇಂದ್ರಕ್ಕೆ ತಲಾ ಇಬ್ಬರಂತೆ ಅಧಿಕಾರಿ/ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ರಕ್ಷಣಾ ಪರಿಹಾರ ಕಾರ್ಯಾಚರಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್.ಡಿ.ಆರ್.ಎಫ್), ನಾಗರಿಕ ರಕ್ಷಣಾ ಪಡೆ (ಸಿವಿಲ್ ಡಿಫೆನ್ಸ್ ಫೋರ್ಸ್-ಕ್ಯೂ.ಆರ್.ಟಿ), ಭಾರತೀಯ ಸೇನೆಯ ಒಂದು ತುಕಡಿಯ 167 ಜನರು ತಲಾ 10 ಸದಸ್ಯರಂತೆ 16 ತಂಡಗಳಾಗಿ ಸ್ಥಳೀಯ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿಗಳು ಹಾಗೂ ಸ್ಥಳೀಯರ ಸಹಕಾರದೊಂದಿಗೆ ತುರ್ತು ಪರಿಸ್ಥಿತಿ ಇರುವ ಪ್ರದೇಶಗಳಾದ ಕಾಟಕೇರಿ, ಜೋಡುಪಾಲ, ಕಾಲೂರು, ಮುಕ್ಕೋಡ್ಲು, ಮಕ್ಕಂದೂರು, ಹೆಮ್ಮೆತ್ತಾಳು, ಮೇಘತ್ತಾಳು, ದೇವಸ್ತೂರು, ದೇವಮಾನಿ, ಹಟ್ಟಿಹೊಳೆ ಪ್ರದೇಶಗಳಲ್ಲಿ ಸಂತ್ರಸ್ಥರ ರಕ್ಷಣೆ ಮತ್ತು ಸ್ಥಳಾಂತರಕ್ಕೆ ಕಾರ್ಯನಿರ್ವಹಿಸುತ್ತಿವೆ ಎಂದು ಸಾ.ರಾ.ಮಹೇಶ್ ಅವರು ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯ ಹಲವು ಭಾಗಗಳು ಮಳೆಯಿಂದ ಜಲಾವೃತಗೊಂಡಿದ್ದು, ಭಾರಿ ಭೂ ಕುಸಿತದಿಂದ ಅಪಾಯದಂಚಿನಲ್ಲಿ ಸಂತ್ರಸ್ಥರು ಸಿಲುಕಿದ್ದು, ಇವರುಗಳನ್ನು ರಕ್ಷಿಸಲು ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ವಾಯು ಮಾರ್ಗದ ಮುಖಾಂತರ ರಕ್ಷಣಾ ಕಾರ್ಯ ನಡೆಸಲು ಪ್ರಯತ್ನಿಸಲಾಗಿ, ಪ್ರತಿಕೂಲ ಹವಾಮಾನದಿಂದ ಹೆಲಿಕಾಪ್ಟರ್ ಮೂಲಕ ಈ ಕಾರ್ಯ ನಡೆಸಲು ಸಾಧ್ಯವಾಗಿರುವುದಿಲ್ಲ. ಮಡಿಕೇರಿ ತಾಲ್ಲೂಕಿನ ಸಂಪಾಜೆ ಹೋಬಳಿಯ ಜೋಡುಪಾಲ ಗ್ರಾಮದಲ್ಲಿ ಅಪಾಯದ ಪರಿಸ್ಥಿತಿಗೆ ಸಿಲುಕಿದ್ದ 140 ಸಂತ್ರಸ್ಥರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಹಾಯದಿಂದ ರಕ್ಷಿಸಿ, ಸುರಕ್ಷಿತ ಸ್ಥಳವಾದ ಸಂಪಾಜೆಯ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಸುಂಟಿಕೊಪ್ಪ ಹೋಬಳಿಯ ನಂದಿಮೊಟ್ಟೆಯಲ್ಲಿ ಅಪಾಯದ ಪರಿಸ್ಥಿತಿಗೆ ಸಿಲುಕಿದ್ದ ಇಬ್ಬರು ಗರ್ಭಿಣಿಯರನ್ನು ಒಳಗೊಂಡ ಒಟ್ಟು 30 ಮಂದಿ ಸಂತ್ರಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇವರಲ್ಲಿ 4 ಮಂದಿ ಗಾಯಾಳುಗಳಿರುವ ಬಗ್ಗೆ ವರದಿ ಸ್ವೀಕೃತವಾಗಿರುತ್ತದೆ. ಹಟ್ಟಿಹೊಳೆಯಿಂದ 10 ಕಿ.ಮೀ ಅಂತರದಲ್ಲಿರುವ ಸೂರ್ಯಕಿರಣ ಎಸ್ಟೇಟ್ನಲ್ಲಿ ಸಿಲುಕಿದ್ದ 12 ಮಹಿಳೆಯರು ಮತ್ತು 3 ಮಕ್ಕಳನ್ನು ಒಳಗೊಂಡಂತೆ ಒಟ್ಟು 37 ಮಂದಿಯನ್ನು ಭಾರತೀಯ ಸೇನೆ ಹಾಗೂ ತುರ್ತು ರಕ್ಷಣಾ ತಂಡದ ಸಹಾಯದಿಂದ ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಭಾರತೀಯ ಸೇನಾ ತುಕಡಿ ಮತ್ತು ಕ್ಯೂ.ಆರ್.ಟಿ ತಂಡಗಳು ಮುಕ್ಕೋಡ್ಲುವಿನ ಸಂತ್ರಸ್ಥರೊಂದಿಗೆ ಸಂಪರ್ಕ ಸಾಧಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಚಿವರು ಹೇಳಿದರು.
ಅಲ್ಲದೆ ಮಡಿಕೇರಿ ತಾಲ್ಲೂಕಿನ ಹೆಮ್ಮತ್ತಾಳು ಮತ್ತು ಮಕ್ಕಂದೂರು ಗ್ರಾಮದಲ್ಲಿ 130, ಕಾಲೂರು ಮತ್ತು ಗಾಳಿಬೀಡುವಿನಲ್ಲಿ 200, ಕಟ್ಟೆಮಾಡು ಮತ್ತು ಪರಂಬು ಪೈಸಾರಿ (ಮರಗೋಡು) ಯಲ್ಲಿ 60 ಕುಟುಂಬಗಳು, 2ನೇ ಮೊಣ್ಣಂಗೇರಿ-20, ಜೋಡುಪಾಲದಲ್ಲಿ 130 ಸಂತ್ರಸ್ಥರನ್ನು ಭಾರತೀಯ ಸೇನೆ, ಎಸ್.ಡಿ.ಆರ್.ಎಫ್ ಮತ್ತು ನಾಗರೀಕ ರಕ್ಷಣಾ ಪಡೆಗಳ ಜಂಟಿ ಕಾರ್ಯಾಚರಣೆಯಿಂದ ರಕ್ಷಿಸಲಾಗಿದೆ. ದಿನಾಂಕ:16-08-2018 ಹಾಗೂ 17-08-2018 ರಂದು ಜಿಲ್ಲೆಯಲ್ಲಿ ಬಿದ್ದ ಧಾರಾಕಾರ ಮಳೆಯಿಂದಾಗಿ ಒಟ್ಟು 05 ಜನರು ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನಿಡಿದರು.
ಕಂದಾಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡಿ ಕೈಗೊಳ್ಳಬೇಕಾದ ತುರ್ತು ರಕ್ಷಣಾ ಕ್ರಮಗಳ ಬಗ್ಗೆ ಚರ್ಚಿಸಿ ನಿರ್ದೇಶನ ನೀಡಿದ್ದು, ಜಿಲ್ಲೆಯ ಒಟ್ಟು 07 ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ ಹಾಗೂ ತುರ್ತು ಕಾರ್ಯಾಚರಣೆ ಮತ್ತು ಪುನರ್ವಸತಿ ಕೇಂದ್ರಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿರುತ್ತಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಜಿಲ್ಲಾಡಳಿತದಿಂದ ಕೈಗೊಂಡಿದೆ ಎಂದು ಸಚಿವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
