ದಿನದ ಸುದ್ದಿ
ಹಿಂದಿ, ಇಂಗ್ಲಿಷ್ ನಂತರ ಕನ್ನಡ ಪತ್ರಿಕೋದ್ಯಮ ಸ್ವಾತಂತ್ರ್ಯಕ್ಕೂ ಬಂತು ಕುತ್ತು

ಸುದ್ದಿದಿನ ಡೆಸ್ಕ್: ಅನ್ಯಾಯಗಳ ವಿರುದ್ಧ ಅಕ್ಷರಗಳ ಬೆಂಕಿಯುಂಡೆ ಉಗುಳುತ್ತಾ ದೇಶದ ರಾಜಕಾರಣಿಗಳ ಚಳಿ ಬಿಡಿಸಿದ ಗೌರಿ ಲಂಕೇಶ್ ಹತ್ಯೆ ನಡೆದು ಇಂದಿಗೆ ಒಂದು ವರ್ಷವಾಗಿದೆ. ಹತ್ಯೆ ಮಾಡಿದವರು ಯಾರೆಂಬ ಊಹೆಗಳು ನಿಜವಾಗುತ್ತವೆ. ಸತ್ಯ ಹೇಳುವ ಪತ್ರಿಕೋದ್ಯಮ ಇನ್ನು ಮುಂದುವರಿದರೆ ನಾವೆಷ್ಟು ಗೌರಿಗಳನ್ನು ಕಳೆದುಕೊಳ್ಳಬೇಕೋ ಗೊತ್ತಿಲ್ಲ. ಇದಕ್ಕಾಗಿಯೇ ಭಾರತದ ಕೆಲವು ಬಹು ದೊಡ್ಡ ಮಾಧ್ಯಮ ಸಂಸ್ಥೆಗಳು ಹಾಗೂ ಪತ್ರಿಕೆಗಳು ಶರಣಾಗತಿಯ ತಂತ್ರಗಳನ್ನು ಅನುಸರಿಸುತ್ತಿವೆ.
ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಮೊನ್ನೆಯಷ್ಟೆ ಹೊಸಪೇಟೆಗೆ ಬಂದಿದ್ದರು. ವಿಚಾರ ಸಂಕಿರಣವೊಂದರಲ್ಲಿ ಮಾತನಾಡುತ್ತ ಪತ್ರಿಕೋದ್ಯಮಿಗಳನ್ನು ಹೇಗೆ ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ತಮ್ಮ ವಿರುದ್ಧ ಬರೆಯದಂತೆ ಹೇಗೆ ನಿಯಂತ್ರಿಸುತ್ತದೆ ಎಂಬ ಮಾಹಿತಿಗಳನ್ನು ಪುಂಖಾನುಪುಂಖವಾಗಿ ನೀಡುತ್ತಾ ಹೋದರು. ಆದರೆ, ಇದನ್ನು ವರದಿ ಮಾಡಿದ ಮಾಧ್ಯಮಗಳು ಭೂಷಣ್ ಈ ಕುರಿತು ನೀಡಿದ ಹೇಳಿಕೆಗಳನ್ನು ತೇಲಿಸಿ ಬರೆದು ತಮಗೇನು ಗೊತ್ತೇ ಇಲ್ಲವೇನೋ ಎಂಬಂತೆ ಮೌನಕ್ಕೆ ಶರಣಾಗಿವೆ. ಅಸಲಿಗೆ ಭೂಷಣ್ ಹೇಳಿದ್ದು ಹೀಗಿತ್ತು. ಸದ್ಯ ಪತ್ರಿಕೋದ್ಯಮ ತುರ್ತು ಪರಿಸ್ಥಿತಿ ದೇಶದಲ್ಲಿದೆ.ಪತ್ರಿಕೆಗಳು, ಹಾಗೂ ಮಾಧ್ಯಮಗಳನ್ನು ಬ್ಲಾಕ್ ಮೇಲ್ ಮಾಡಿ ರಾಜಕೀಯ ಪಕ್ಷ ಹಾಗೂ ಅದಕ್ಕೆ ಸಂಬಂಧಿಸಿದ ಸಂಘಟನೆಯೊಂದು ತಮ್ಮ ವಿರುದ್ಧ ಏನೂ ಬರೆಯದಂತೆ ಷಡ್ಯಂತ್ರ ರೂಪಿಸುತ್ತಿದೆ. ಈ ಪಕ್ಷವು ತನ್ನದೇ ಆದ ದೊಡ್ಡ ಐಟಿ ಸೆಲ್ ರೂಪಿಸಿಕೊಂಡಿದ್ದು ದೇಶದ ಪ್ರಾದೇಶಿಕ ಮಾಧ್ಯಮಗಳು ಹಾಗೂ ಪತ್ರಿಕೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ. ಅದರಲ್ಲಿ ಈಗ ಬಹುತೇಕ ಸಫಲವಾಗಿದೆ ಕೂಡ. ಈ ಐಟಿ ಸೆಲ್ ಶಿವಮೊಗ್ಗದಂತ ಸಣ್ಣ ಊರಿನಿಂದ ಹಿಡಿದು ಮುಂಬಯಿಯಂತ ದೊಡ್ಡ ನಗರಗಳಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಒಂದು ಮೂಲದ ಪ್ರಕಾರ ಈ ಐಟಿ ಸೆಲ್ನಲ್ಲಿ ಕೆಲಸ ಮಾಡುವ ಪ್ರತಿ ಬರಹಗಾರನಿಗೆ ಕನಿಷ್ಠ 50 ಸಾವಿರ ರೂಪಾಯಿ ಸಂಬಳ ನೀಡಲಾಗುತ್ತಿದೆ.ಹೀಗೆ ಅರ್ಧ ಲಕ್ಷ ರೂ. ಸಂಬಳ ಪಡೆಯುತ್ತಿರುವ ಇವರು ಸುಳ್ಳು ಸುದ್ದಿಗಳನ್ನು ಬಿತ್ತುವುದು, ಕೋಮು ಗಲಭೆ ಸೃಷ್ಟಿಸುವುದು. ಒಂದು ಧರ್ಮದ ಕುರಿತು ಇಲ್ಲ ಸಲ್ಲದ ಸುದ್ದಿ ಬರೆಯುವುದು. ಇನ್ನೊಂದು ಧರ್ಮವನ್ನು ಪ್ರಚೋದಿಸುವಂತಹ ಸುದ್ದಿಗಳನ್ನು ಬರೆಯುತ್ತಿದ್ದಾರೆ. ಇದಿಷ್ಟೆ ಅಲ್ಲ ಈ ಐಟಿ ಸೆಲ್ ಸಾಕುತ್ತಿರುವ ರಾಜಕೀಯ ಪಕ್ಷವು ದೇಶವನ್ನು ಉದ್ಧಾರ ಮಾಡುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಫೇಸ್ಬುಕ್, ಟ್ವಿಟರ್, ವಾಟ್ಸ್ ಆಪ್ ಮೂಲಕ ಹರಡುವುದು ಇದರ ಮುಖ್ಯ ಉದ್ದೇಶ.
ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಪತ್ರಿಕೆಗಳು ನಡೆಯಲು ಅಗತ್ಯವಾಗಿ ಬೇಕಿರುವ ನ್ಯೂಸ್ಪ್ರಿಂಟ್ಗಳ ಬೆಲೆ ಈಗ ಶೇ. 50ರಷ್ಟು ಹೆಚ್ಚಾಗಿದೆ. ಹಣ ಹೆಚ್ಚಿಗೆ ಕೊಟ್ಟರೂ ನ್ಯೂಸ್ ಪ್ರಿಂಟ್ಗಳನ್ನು ಖರೀದಿಸಲು ಅನುಮತಿ ಸಿಗುತ್ತಿಲ್ಲ. ಪರಿಸರವನ್ನು ಉಳಿಸುವ ಸಲುವಾಗಿ ನ್ಯೂಸ್ಪ್ರಿಂಟ್ ಬೆಲೆ ಏರಿಕೆ ಮಾಡಿ ಅದರ ಬಳಕೆ ಕಡಿಮೆ ಮಾಡಲಾಗುತ್ತಿದೆ ಎಂದು ಬೂಸಿ ಬಿಡಲಾಗುತ್ತಿದೆ. ಆದರೆ, ಪತ್ರಿಕೋದ್ಯಮವನ್ನು ನಿಯಂತ್ರಿಸಲು ಕಂಡುಕೊಂಡಿರುವ ಬಹು ದೊಡ್ಡ ದಾರಿ ಇದು.
ಕನ್ನಡದ ದೊಡ್ಡ ಪತ್ರಿಕೆ ಮೇಲೆ ರಾಜಕೀಯ ಪ್ರಭಾವ
ರಾಜಕೀಯ ಸಂಘಟನೆಯೊಂದು ತಾನು ಮಾಧ್ಯಮಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿರುವ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡು ಓಡಾಡುತ್ತಿದೆ. ತಾನು ಕನ್ನಡದ ಒಂದು ದೊಡ್ಡ ಪತ್ರಿಕೆಗೆ ವಾರ್ನಿಂಗ್ ಕೊಟ್ಟಿರುವುದಾಗಿ ಅದು ಬೀಗುತ್ತಿದೆ. ಆ ಸಂಘಟನೆಯ ಕಾರ್ಯಕರ್ತರ ಪ್ರಕಾರ. ಇತ್ತೀಚೆಗೆ ಬಹುಮತ ಸಾಬೀತುಪಡಿಸಲು ವಿಫಲವಾದ ಪಕ್ಷವೊಂದು ತನ್ನ ಆತ್ಮಾವಲೋಕನಾ ಸಭೆಯಲ್ಲಿ ತನ್ನ ವಿಫಲತೆಗೆ ಕಾರಣವಾದ 20 ಅಂಶಗಳ ಪಟ್ಟಿ ಮಾಡಿತು.
ಪ್ರಾದೇಶಿಕ ಹಾಗೂ ರಾಷ್ಟೀಯ ಪಕ್ಷಗಳು ಅಧಿಕಾರ ರಚಿಸಲು ನಾವು ಬಿಡುವುದಿಲ್ಲ ಎಂದು ದೇಶದ ಉನ್ನತ ಸ್ಥಾನದಲ್ಲಿರುವ ರಾಜಕೀಯ ನಾಯಕರೊಬ್ಬರು ದಿಲ್ಲಿಯಲ್ಲಿ ಮಾಡಿದ್ದ ಭಾಷಣವನ್ನು ಕನ್ನಡ ಪತ್ರಿಕೆಯು ತನ್ನ ಮುಖಪುಟದಲ್ಲಿ ವರದಿ ಮಾಡಿತ್ತು. ಈ ವರದಿಯು , ಹೇಳಿಕೆ ನೀಡಿದ ರಾಜಕಾರಣಿಯ ಪಕ್ಷದ ವಿರುದ್ಧ ಕನ್ನಡಿಗರು ಸಂಘಟನೆಯಾಗಲು ಕಾರಣವಾಯಿತು ಎಂಬ ಅಭಿಪ್ರಾಯಗಳು ವ್ಯಕ್ತವಾದವು.
ಈ ಸುದ್ದಿಯನ್ನು ಪಿಟಿಐ ವರದಿ ಮಾಡಿದೆ ಎಂದು ಪತ್ರಿಕೆ ಹೇಳಿತ್ತು. ಇದನ್ನು ಆಧರಿಸಿ ಆ ರಾಜಕೀಯ ಪಕ್ಷವು ಪಿಟಿಐ ಕಚೇರಿಯಾದ್ಯಂತ ತಡಕಾಡಿ ಆ ಸುದ್ದಿ ಪಿಟಿಐನಿಂದ ವರದಿಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಆ ಪತ್ರಿಕೆಯ ಕಚೇರಿಗೆ ಹೋಯಿತು. ಆ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವರು ಸಂಪಾದಕರೊಂದಿಗೆ ಮಾತನಾಡಿ ಈ ಸುದ್ದಿ ಕೊಟ್ಟವರು ಯಾರು ಎಂಬುದಾಗಿ ಪ್ರಶ್ನಿಸಿತು. ಅಂದಹಾಗೆ ಅದು ಪಿಟಿಐನಿಂದ ವರದಿಯಾಗಿದ್ದ ಸುದ್ದಿ ಆಗಿರಲಿಲ್ಲ ಬದಲಾಗಿ ಅದೇ ಸಂಸ್ಥೆಯ ಇಂಗ್ಲಿಷ್ ವರದಿಗಾರರು ದಿಲ್ಲಿಯಿಂದ ನೀಡಿದ ವರದಿಯಾಗಿತ್ತು. ಅದನ್ನು ಯತಾವತ್ತಾಗಿ ಭಾಷಾಂತರ ಮಾಡಲಾಗಿತ್ತು. ಭಾಷಾಂತರಿಸಿದ ಹಿರಿಯ ಪತ್ರಕರ್ತರಿಗೆ ಕ್ಷಮಾಧಾನ ನೀಡಲಾಗಿದೆಯಾದರೂ ಅದನ್ನು ವರದಿ ಮಾಡಿದ ಇಂಗ್ಲಿಷ್ ಪತ್ರಿಕೆ ವರದಿಗಾರನಿಗೆ ಇನ್ನು ಕಿರುಕುಳ ತಪ್ಪಿಲ್ಲ ಎಂಬ ಮಾಹಿತಿಗಳು ಬಂದಿವೆ.
ಕನ್ನಡಿಗರ ವಿಶ್ವಾಸ ಗಳಿಸಿ ಸ್ವಾತಂತ್ರ ನಂತರದ ದಿನಗಳಿಂದಲೂ ಸಮಾಜದ ಕಟ್ಟಕಡೆಯ ವ್ಯಕ್ತಿಪರವಾಗಿ ನಿಂತಿದ್ದ ಈ ದೊಡ್ಡ ಪತ್ರಿಕೆಯ ಕತೆಯೇ ಹೀಗಾದರೆ ಮಿಕ್ಕ ಪತ್ರಿಕೆಗಳ ಕತೆಯೇನು? ಕೋಬ್ರಾ ಪೋಸ್ಟ್ ಈಗಾಗಲೇ ನೀಡಿರುವ ಸೂಜಿ ಮೊನೆ ಕಾರ್ಯಚರಣೆಯಲ್ಲಿ ಸಿಕ್ಕಿಬಿದ್ದಿರುವ ಸಂಪಾದಕರನ್ನು ನೋಡಿದ್ದೀರ. ಇದರರ್ಥ ಕೆಲವರು ಆ ಪಕ್ಷದ ಜತೆ ಕೈ ಜೋಡಿಸಿ ಡೀಲ್ ಆಗಿದ್ದಾರೆ. ಇನ್ನೂ ಕೆಲವರು ಡೀಲ್ ಆಗದೆ ಬೆದರಿಕೆ ಎದುರಿಸುತ್ತಿದ್ದಾರೆ.
ಏನು ಮಾಡಬೇಕು?
ಮಾಧ್ಯಮ ಸಂಸ್ಥೆಗಳ ಮೇಲೆ ರಾಜಕೀಯ ನಾಯಕರು, ಪಕ್ಷಗಳ ಪ್ರಭಾವ ಬೀರುತ್ತಿರುವುದು ಇಂದು ನಿನ್ನೆಯದಲ್ಲ. ಯಾವ ಸರಕಾರ ಬಂದರೂ, ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಇಂಥ ಅನಾಚಾರ ತಪ್ಪಲ್ಲ. ಈಗ ಸ್ವಲ್ಪ ಹೆಚ್ಚಾಗಿದೆ ಎಂದುಕೊಳ್ಳೋಣ. ವಿಶ್ವಾಸಾರ್ಹವಾದ ಸುದ್ದಿಗಳನ್ನು ತಿಳಿಯಬೇಕಿದ್ದರೆ ನವ ಹಾಗೂ ಸ್ವತಂತ್ರ ಮಾಧ್ಯಮಗಳನ್ನು ಆಯ್ಕೆ ಮಾಡಿಕೊಳ್ಳಿ. ಅವುಗಳಿ ಆಗಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಐದು ರೂಪಾಯಿಂದ ಸಾವಿರ ರೂ. ವರೆಗೆ ಆರ್ಥಿಕ ಸಹಾಯ ಮಾಡಿ ಅವನ್ನು ಪೋಷಿಸಿ.
ನಮಸ್ಕಾರ
ಸುದ್ದಿದಿನ ಸಂಪಾದಕೀಯ ಬಳಗ

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
