ದಿನದ ಸುದ್ದಿ
ಬಿದರಗಡ್ಡೆಯಲಿಂದು ತರಳಬಾಳು ಜಗದ್ಗುರುಗಳ ಸಾನ್ನಿಧ್ಯದಿ ಅಕ್ಕಿ ಸಮರ್ಪಣೆ ; ದೇವಸ್ಥಾನಗಳ ಉದ್ಘಾಟನೆ, ಜಾನಪದ ಸಿರಿ ಸಂಭ್ರಮ

ಸುದ್ದಿದಿನ ಡೆಸ್ಕ್ : ಲೋಕದ ತರಳರ ಬಾಳಿನ ಆರಾಧ್ಯ ದೈವವಾದ ತರಳಬಾಳು ಗುರು ಪರಂಪರೆಯ 20 ನೇ ಪೀಠದ ಅಧಿಪತಿಗಳಾಗಿ ಪೀಠವು ಸೇವೆಯ ಸಾಧನ ಎಂಬಂತೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನಾಲ್ಕು ದಶಕಗಳ ಅಹರ್ನಿಶಿ ತಪೋನಿಷ್ಟರಂತೆ ಕಾರ್ಯಮಗ್ನರಾಗಿ ಬಿದ್ದ ಸಮಾಜವನ್ನೇ ಎದ್ದು ನಿಲ್ಲಿಸಿದ ಮಹಾಬೆಳಗಾಗಿ ಅಸಂಖ್ಯಾತ ಶಿಷ್ಯರ ಹೃದಯದ ನಿತ್ಯ ಪೂಜನೀಯಸಿಂಹಸಾನಾಧೀಶರಾಗಿವಿರಾಜಮಾನರಾಗಿರುವ ಸ್ಮರಣೀಯ ಪರಮಪೂಜನೀಯ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ 26 ನೇ ಶ್ರದ್ಧಾಂಜಲಿಯ ಸಮಾರಂಭ ಇದೇ 20 ರಿಂದ 24 ರವರೆಗೆ ಸಿರಿಗೆರೆಯಲ್ಲಿ ಜರುಗಲಿದೆ.
ಈ ಕಾರ್ಯಕ್ರಮಕ್ಕೆ ಆಗಮಿಸುವ ಲಕ್ಷಾಂತರ ಶಿಷ್ಯರ ದಾಸೋಹ ಪ್ರಸಾದ ಸೇವೆಗೆ ಶ್ರೀ ಮಠದ ಅಭಿಮಾನಿ ಶಿಷ್ಯ ಸಮಾಜ ತನು-ಮನ-ಧನ-ದವಸ-ಧಾನ್ಯ ಅರ್ಪಿಸುವ ಪ್ರತೀತಿ,ಸಂಪ್ರದಾಯವೆಂಬಂತೆ ಕಳೆದ ಇಪ್ಪತ್ತೈದು ವರ್ಷಗಳಿಂದಲೂ ನಡೆಯುತ್ತಿದೆ. ಈ ವರ್ಷದ ಶ್ರದ್ಧಾಂಜಲಿಯ ಸಮಾರಂಭಕ್ಕೆ ಈಗಾಗಲೇ ಹಲವಾರು ತಾಲ್ಲೂಕಿನ ಶ್ರದ್ದಾಳು ಶಿಷ್ಯರು ಭಕ್ತಿಯನ್ನು ಸೇವೆಯನ್ನು ಶ್ರೀಮಠಕ್ಕೆ ಅರ್ಪಿಸಿದ್ದಾರೆ.ಕಳೆದ 25 ವರ್ಷಗಳಿಂದಲೂ ಹೊನ್ನಾಳಿ ತಾಲ್ಲೂಕಿನ ಭಕ್ತ ಸಮುದಾಯ ಪುಣ್ಯ ಸ್ಮರಣೆಯ ತನ್ನಿಮಿತ್ತ ತನು, ಮನ, ಧನ, ಧವಸ, ಧಾನ್ಯವನ್ನು ಶ್ರೀ ಪೀಠಕ್ಕೆ ಅರ್ಪಿಸುವ ಪರಿಪಾಠದ ಸಂಪ್ರದಾಯ ಇದೆ.
ಅದರ ಮುಂದುವರಿದ ಭಾಗವಾಗಿ ಈ ವರ್ಷವೂ ಸಹ ಹೊನ್ನಾಳಿ ತಾಲ್ಲೂಕಿನ ಬಿದರಗಡ್ಡೆಯಲ್ಲಿ ಇಂದು ಲಿಂ.ಶ್ರೀ ಶಿವಕುಮಾರ ಶಿವಾಚಾರ್ಯ ಶ್ರೀಗಳ ಶ್ರದ್ದಾಂಜಲಿ ಸಮಾರಂಭದ ದಾಸೋಹ ಸೇವೆಗೆ ಅಕ್ಕಿ ಸಮರ್ಪಣೆ,ಶ್ರೀ ಶೈಲ ಮಲ್ಲಿಕಾರ್ಜುನ ಕಲ್ಯಾಣ ಮಂಟಪದ ಲೋಕಾರ್ಪಣೆಯೊಂದಿಗೆ ಗ್ರಾಮದ ನೂತನ ದೇವಸ್ಥಾನಗಳಾದ ಶ್ರೀ ಮಲ್ಲಿಕಾರ್ಜುನ,ಶ್ರೀ ಬಸವೇಶ್ವರ, ಶ್ರೀ ಚೌಡೇಶ್ವರಿ, ಶ್ರೀ ಮಾತಂಗಮ್ಮ ದೇವಸ್ಥಾನಗಳು ಹಾಗೂ ಮಹಾದ್ವಾರ ಉದ್ಘಾಟಿನೆಗೊಳ್ಳಲಿವೆ.
ಕಾರ್ಯಕ್ರಮದಲ್ಲಿ
ಇಂದಿನ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಪರಮಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಲಿದ್ದು, ಉದ್ಘಾಟನೆಯನ್ನು ನಾಡೋಜ ಶರಣ ಪಾಟೀಲ ಪುಟ್ಟಪ್ಪನವರು ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದರಾದ ಶರಣ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್,ಶಾಸಕರಾದ ಎಂ.ಪಿ ರೇಣುಕಾಚಾರ್ಯ,ವಿಧಾನ ಪರಿಷತ್ ಸದಸ್ಯರಾದ ಶರಣ ಎಸ್ ರುದ್ರೇಗೌಡ್ರು,ಮಾಜಿ ಶಾಸಕರಾದ ಡಿ ಜೆ ಶಾಂತನಗೌಡ್ರು ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ.
ಸಾಂಸ್ಕೃತಿಕ ಸಂಜೆ
ಸಾವಿರಾರು ಶರಣ ಬಂಧುಗಳ ಸಾಕ್ಷಿಯಲ್ಲಿ ಇಂದು ಸಂಜೆ ತರಳಬಾಳು ಜಾನಪದ ಸಂಭ್ರಮದ 350 ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
