ರಾಜಕೀಯ
ಹಿಂದಕ್ಕೆಳೆಸುವ ಸ್ಥಾವರ ಧ್ವನಿಗಳ ಅಬ್ಬರ..!

ಒಬ್ಬ ಸಣ್ಣ ಹುಡುಗ. ಅವನ ಕೈಯಲ್ಲಿ ದೊಡ್ಡ ದೊಡ್ಡ ನಾಲ್ಕು ಕಲ್ಲುಗಳು. ಆ ಫೋಟೋದೊಂದಿಗೆ ರಾರಾಜಿಸುತ್ತಿರುವ ಸಾಲುಗಳು – ‘ನಾನು ರಾಹುಲ್ ಗಾಂಧಿಯನ್ನು ಭೇಟಿ ಮಾಡಬೇಕಿದೆ’. ಫೇಸ್ಬುಕ್ನಲ್ಲಿ ಈಚೆಗೆ ಕಾಣಿಸಿಕೊಂಡ ಈ ಚಿತ್ರದೊಂದಿಗಿನ ಸಾಲುಗಳು ಭವಿಷ್ಯದ ಪೀಳಿಗೆಯ ಹೆಜ್ಜೆಗಳು ಏನಾಗಬಹುದು ಎಂಬುದರ ಸ್ಪಷ್ಟ ಸುಳಿವನ್ನು ನೀಡುವಂತೆಯೇ ಇವೆ. ಅವುಗಳು ಹಿಂಸೆಯೊಂದಿಗೇ ಗುರುತಿಸಿಕೊಳ್ಳಬೇಕು ಎಂಬ ಕಾರ್ಯಸೂಚಿಯ ಯಶಸ್ಸಿನ ದ್ಯೋತಕವಾಗಿಯೇ ಕಾಣಿಸುತ್ತಿವೆ. ಅಂಬೆಗಾಲಿಟ್ಟು, ಆ ಹಂತವನ್ನು ದಾಟಿಕೊಂಡು ಇದೀಗ ತಾನೆ ನಡೆಯುವುದನ್ನು ಕಲಿತಿರುವ ಅತ್ಯಂತ ಕಿರಿಯ ವಯಸ್ಸಿನ ಸಣ್ಣ ಹುಡುಗನಿಗೆ ಹಿಂಸೆಯ ಭಾಷೆ, ಪರಿಭಾಷೆ ಮತ್ತು ಸ್ವರೂಪವನ್ನು ಪರಿಚಯಿಸುವ ವಿಚಿತ್ರವಾದ ನಡೆಯೊಂದನ್ನು ಸಂಕೇತಿಸುತ್ತಿವೆ.
ಭ್ರಮಾತ್ಮಕ ಚೌಕಟ್ಟುಗಳು
ನಮ್ಮ ದೃಷ್ಟಿಕೋನಗಳು ಈ ಪರಿ ದುರವಸ್ಥೆ ತಲುಪಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾದದ್ದಾದರೂ ಏಕೆ? ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಯಿತೇ? ಆ ಉದ್ದೇಶದ ಹಿಂದೆ ಕಾರ್ಯೋನ್ಮುಖವಾಗಿರುವ ಶಕ್ತಿಗಳು ಯಾವುವು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೊದಲು ಈ ದೇಶದ ರಾಜಕಾರಣ ಮತ್ತು ಆಡಳಿತ ನೆಚ್ಚಿಕೊಂಡ ಹೊಸದನ್ನು ಬಹುಬೇಗ ಸ್ವೀಕರಿಸದ, ಸ್ವೀಕರಿಸಿದರೂ ನಿರಾಕರಣೆಯ ಭಾವವ ಸಾಂಪ್ರದಾಯಿಕತೆಯ ಚೌಕಟ್ಟುಗಳನ್ನು ಗೊತ್ತುಮಾಡಿಕೊಳ್ಳಬೇಕಾಗುತ್ತದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಭಾರತೀಯ ರಾಜಕಾರಣದ ವಿವಿಧ ಮಗ್ಗಲುಗಳು ಪರಿಚಯವಾಗುವುದರೊಂದಿಗೇ ಅಹಿಂಸೆಯ ಆಲೋಚನಾ ಕ್ರಮಗಳು ಹಿಂಸೆಯ ಸಂಕುಚಿತತೆಯೊಂದಿಗೆ ಮುಖಾಮುಖಿಯಾದ ವಿವಿಧ ಸಂದರ್ಭಗಳ ಚಾರಿತ್ರಿಕ ಹಿನ್ನೆಲೆ ಗಮನಕ್ಕೆ ಬರುತ್ತದೆ. ಅಹಿಂಸೆಯ ಮಾರ್ಗವು ಸ್ವಾತಂತ್ರ್ಯವನ್ನು ಕಂಡುಕೊಳ್ಳಲು ಸಹಾಯಕವಾದ ನಂತರ ಭಾರತೀಯ ಆಡಳಿತ ಅಳವಡಿಸಿಕೊಂಡ ನಿರ್ವಹಣೆಯ ಮಾದರಿಗೆ ಸಂಬಂಧಿಸಿದ ಸಂಗತಿಗಳು ತಿಳಿಯುತ್ತವೆ.
ಸಾರ್ಥಕತೆಯ ಹಾದಿಯ ನೆನಪು
ಬಾಲ್ಯದಲ್ಲಿ ನಮಗೆ ಹಲವು ಮಹನೀಯರ ತ್ಯಾಗದ ಕಾರಣಕ್ಕಾಗಿಯೇ ಸ್ವಾತಂತ್ರ್ಯ ಲಭಿಸಿರುವುದನ್ನು ಹಿರಿಯರ ಭಾಷಣಗಳು ಮನವರಿಕೆ ಮಾಡಿಕೊಡುತ್ತಿದ್ದವು. ಗಾಂಧಿ ಸೇರಿದಂತೆ ಹಲವರ ಹೋರಾಟದ ಪ್ರತಿಫಲವಾಗಿ ಸ್ವಾತಂತ್ರ್ಯ ನಮ್ಮೊಂದಿಗಿರುವುದನ್ನು ದೃಢೀಕರಿಸುತ್ತಿದ್ದವು. ಆಗ ನಮಗೆ ಹಿಂಸೆಯೇ ಶ್ರೇಷ್ಠ ಎಂಬಂಥ ದಾರಿತಪ್ಪಿಸುವ ದುರ್ಮಾರ್ಗದ ವೈಭವೀಕರಣ ಕಣ್ಣಮುಂದೆ ಬರುತ್ತಲೇ ಇರಲಿಲ್ಲ. ಬದಲಾಗಿ ಎಲ್ಲ ಭಾಷಣಗಳ ಚಿಂತನೆಗಳು ಪಡೆದುಕೊಂಡ ಸ್ವಾತಂತ್ರ್ಯವನ್ನು ಸಾರ್ಥಕಗೊಳಿಸಿಕೊಳ್ಳುವ ಹಾದಿ ಯಾವುದಾಗಿರಬೇಕು ಎಂಬುದನ್ನು ಹೊಳೆಸುವುದರ ಕಡೆಗೇ ಕೇಂದ್ರೀಕೃತವಾಗಿರುತ್ತಿದ್ದವು.ಬಾಲ್ಯದ ಅನುಭವವು ಹಲವು ಪಾಠಗಳನ್ನು ಕಲಿಸುತ್ತಿತ್ತು. ಮಕ್ಕಳು ಹೊಡೆದಾಡಿಕೊಂಡು ಬಂದರೆ ದೊಡ್ಡವರು ಬುದ್ಧಿವಾದ ಹೇಳುತ್ತಿದ್ದರು. ಹೊಡೆದಾಟ ಯಾಕೆ ಸರಿಯಲ್ಲ ಸ್ಪಷ್ಟಪಡಿಸುತ್ತಿದ್ದರು. ಹೊಡೆದವನು ಹೊಡೆತ ತಿಂದವನ ಮುಂದೆ ನಿಂತು ಕ್ಷಮೆ ಕೇಳಬೇಕಾಗುತ್ತಿತ್ತು. ಆ ಕ್ಷಮೆಯ ಪ್ರಸ್ತಾಪದೊಂದಿಗೇ ಇಬ್ಬರ ನಡುವೆ ಸ್ನೇಹ ಮತ್ತೆ ಚಿಗುರೊಡೆಯುತ್ತಿತ್ತು. ಸಣ್ಣ ಭಿನ್ನಾಭಿಪ್ರಾಯದ ಜಾಗವನ್ನು ಆಕ್ರಮಿಸಿಕೊಂಡು ಹೊಡೆದಾಡುವಷ್ಟರ ಮಟ್ಟಿಗೆ ಪ್ರಚೋದಿಸಿದ ದ್ವೇಷದ ದಟ್ಟ ಭಾವನೆಯನ್ನು ಆ ಕ್ಷಣವೇ ಅಳಿಸಿಹಾಕಿಬಿಡುತ್ತಿತ್ತು. ಆಮೇಲಾಮೇಲೆ ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳು, ಸಣ್ಣ ಸಣ್ಣ ಜಗಳಗಳು, ಮತ್ತೆ ಒಂದಾಗಿ ಮಾತನಾಡಿಕೊಳ್ಳುವ ಸೊಗಡಿನೊಂದಿಗೇ ಬಾಲ್ಯ ಕಳೆದುಬಿಡುತ್ತಿತ್ತು. ದೊಡ್ಡವರಾಗುತ್ತಿದ್ದಂತೆಯೇ ಸಣ್ಣವರಾಗಿದ್ದಾಗಿನ ಕೆಲವು ಸಣ್ಣತನಗಳ ಪೊರೆಗಳನ್ನು ಕಳಚಿಕೊಳ್ಳುತ್ತಾ ಸಾಗಬೇಕಾಗಿತ್ತು. ಮಕ್ಕಳಾಗಿದ್ದಾಗ ಸಾಧ್ಯವಾಗಿದ್ದ ಈ ವಿವೇಕ ದೊಡ್ಡವರ ಬದುಕಿನೊಳಗೆ ಇಲ್ಲವಾಗುತ್ತದೆ. ಅವಿವೇಕತನದ ಪರಮಾವಧಿಯನ್ನು ಮತ್ತೆ ಮತ್ತೆ ಸಾಬೀತುಪಡಿಸುವ ಹಾಗೆಯೇ ಅವರು ವಿಕೃತಿಗಳೊಂದಿಗೇ ಗುರುತಿಸಿಕೊಳ್ಳುತ್ತಾರೆ. ಈಗಿನ ರಾಜಕಾರಣ ಮತ್ತು ಅದು ಪೋಷಿಸುವ ಆಡಳಿತ ವ್ಯವಸ್ಥೆಯು ಆ ವಿಕೃತಿಗಳನ್ನು ದಟ್ಟವಾಗಿಸುವ ನಕಾರಾತ್ಮಕ ಪಾತ್ರವನ್ನು ಅತ್ಯಂತ ಚಾಣಾಕ್ಷಯುತವಾಗಿ ನಿಭಾಯಿಸುತ್ತಿದೆ.
ಧೀಮಂತಿಕೆಯ ಗೈರುಹಾಜರಿ
ರಾಜಕಾರಣ ಮತ್ತು ಆಡಳಿತ ಒಂದನ್ನೊಂದು ನೆಚ್ಚಿಕೊಂಡಿರುವ ಪರಸ್ಪರ ಪೂರಕವಾದ ಕ್ಷೇತ್ರಗಳು. ಒಂದು ಶಾಸಕಾಂಗಕ್ಕೆ ಬೇಕಾದ ನಾಯಕತ್ವದ ಸಂಪನ್ಮೂಲವನ್ನು ಒದಗಿಸಿಕೊಡುವ ವಲಯವಾದರೆ, ಮತ್ತೊಂದು ಆ ಸಂಪನ್ಮೂಲದ ಆಧಾರದಲ್ಲಿ ಬಹುಮುಖೀ ಪಾತ್ರವನ್ನು ನಿರ್ವಹಿಸುವ ಕ್ರಿಯಾತ್ಮಕ ವ್ಯವಸ್ಥೆ. ಇವೆರಡನ್ನೂ ಪ್ರತಿನಿಧಿಸುವವರು ದೊಡ್ಡವರಾಗಿರಬೇಕು. ಅವರ ದೊಡ್ಡತನವು ಕೇವಲ ವಯಸ್ಸಲ್ಲಷ್ಟೇ ಅಲ್ಲ, ಅವರ ಧೀಮಂತಿಕೆಯ ಮೂಲಕ ಸಾಬೀತಾಗುತ್ತಿರಬೇಕು.ರಾಜಕಾರಣದಲ್ಲಿ ಹಿರಿವಯಸ್ಕ ರಾಜಕಾರಣಿಗಳಿದ್ದಾರೆ. ಆಡಳಿತ ವಲಯದಲ್ಲಿ ಅನುಭವಿ ಅಧಿಕಾರಿಗಳಿದ್ದಾರೆ. ಆದರೆ ಈ ಹಿರಿತನ ಮತ್ತು ಅನುಭವ ಇಡೀ ಸಮಾಜವನ್ನು ಹೊಸ ಹಾದಿಯ ಕಡೆಗೆ ಕೊಂಡೊಯ್ಯುವ ಬದಲು ಹಿಂದಿನ ಅನಾಗರಿಕ ಜಗತ್ತಿನ ಕ್ರೌರ್ಯದ ಕಡೆಗೇ ಹಿಂತಿರುಗಿಸುತ್ತಿದೆಯೇನೋ ಎಂಬ ಆತಂಕ ಆವರಿಸಿಕೊಳ್ಳುತ್ತಿದೆ. ಒಬ್ಬ ರಾಜಕಾರಣಿ ಮತ್ತೊಬ್ಬ ರಾಜಕಾರಣಿಯ ಬಗ್ಗೆ ಕೆಟ್ಟದಾಗಿ ಮಾತನಾಡುವಿಕೆ, ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿಕಟ್ಟುವ ಭರದಲ್ಲಿ ಹಿಂಸೆಯ ಮನಸ್ಥಿತಿಯನ್ನೇ ಕಾಡಿಸಿಕೊಂಡು ಪ್ರಚೋದಿಸುವ ಬಗೆ – ಇವೆಲ್ಲವೂ ಹಿರಿತನದ ಸಂಕೇತಗಳಾಗುವುದೂ ಇಲ್ಲ. ಅನುಭವ ಶ್ರೇಷ್ಠತೆಯನ್ನೂ ನಿರೂಪಿಸುವುದಿಲ್ಲ.
ನಂಬಿಕೆಯ ನಡಿಗೆ ಮತ್ತು ನಿಜದ ಅರಿವು
ನಂಬಿಕೆಯ ತಂತಿ ಮೇಲಿನ ನಡಿಗೆಯ ಹಾಗೆಯೇ ಸೂಕ್ಷ್ಮಾತಿಸೂಕ್ಷ್ಮ ಸ್ವರೂಪದೊಂದಿಗೆ ಈ ದೇಶದ ಜನರ ತಿಳುವಳಿಕೆಯು ನಿಕಟನಂಟು ಹೊಂದಿದೆ. ಇದು ಅರಿವಿನ ಎತ್ತರ ತಲುಪಿಕೊಳ್ಳುವ ಮುನ್ನವೇ ಇಲ್ಲಿಯ ರಾಜಕಾರಣ ಅವರ ಮನೋಲೋಕವನ್ನುಆವರಿಸಿಕೊಂಡುಬಿಡುತ್ತದೆ. ನಂಬಿಸಿ ಆ ಮೂಲಕ ಸೃಷ್ಟಿಯಾಗುವ ಪರವಾದ ಅಲೆಯ ಮೇಲೆ ಅದು ಯಾವತ್ತೂ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳುತ್ತದೆ. ಇಲ್ಲಿಯ ವೈಚಾರಿಕತೆಯು ನಂಬಿಕೆಯೊಂದಿಗೆ ಆರೋಗ್ಯಕರ ಸಂವಾದವನ್ನು ಏರ್ಪಡಿಸಿಕೊಂಡು ಜನಸಮುದಾಯವನ್ನು ಒಂದು ಹೆಜ್ಜೆ ಮುಂದಕ್ಕೆ ಕರೆದೊಯ್ದರೆ, ಅದೇ ನಂಬಿಕೆಯ ಜಗತ್ತನ್ನು ಪ್ರತಿನಿಧಿಸುವ ಧಾರ್ಮಿಕ ಯಜಮಾನಿಕೆಯ ಪ್ರತಿನಿಧಿಗಳು ಮತ್ತು ಅವರೊಂದಿಗೆ ಗುರುತಿಸಿಕೊಂಡ ರಾಜಕೀಯ ಶಕ್ತಿಗಳು ಒಂದು ಹೆಜ್ಜೆ ಹಿಂದಕ್ಕೆ ಕರೆದೊಯ್ಯುತ್ತವೆ.
ಹಿಂದಕ್ಕೆಳೆಸುವ ಸ್ಥಾವರ ಧ್ವನಿಗಳು
ಈಗ ಏನಾಗಿದೆ ಎಂದರೆ ನಮ್ಮನ್ನು ಮುನ್ನಡೆಸುವ ಬೌದ್ಧಿಕ ಚಲನೆಯ ಜಂಗಮ ಶಕ್ತಿಗಳಿಗಿಂತ ನಮ್ಮನ್ನು ಹಿಂದೆಯೇ ಉಳಿಸಿ ತಟಸ್ಥವಾಗಿ ಉಳಿಸಿ ಸ್ಥಾವರಗೊಳಿಸುವ ಧ್ವನಿಗಳ ಅಬ್ಬರದ ಕಡೆಗಿನ ವ್ಯಾಮೋಹವೇ ಸಾಮೂಹಿಕ ಕಾಯಿಲೆಯಾಗಿ ಸಾರ್ವಜನಿಕ ವಲಯದಲ್ಲಿ ಬೇರೂರಿಬಿಟ್ಟಿದೆ. ಈ ಊನದ ಕಾರಣಕ್ಕಾಗಿಯೇ ಅರಿವಿನ ಆಂದೋಲನದ ಬದಲು ಇಲ್ಲೀಗ ಹಿಂಸೆಯ ದೃಷ್ಟಿಕೋನಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಪ್ರಾಮುಖ್ಯತೆ ಪಡೆಯುತ್ತಿವೆ. ಯಾರೊಳಗೂ ತಿಳಿದುಕೊಳ್ಳುವ ಸಂಯಮವಿಲ್ಲ. ಸಹನೆಯಿಂದ ಯೋಚಿಸುವ ತಾಳ್ಮೆಯಿಲ್ಲ. ತಕ್ಷಣವೇ ಪ್ರತಿಕ್ರಿಯಿಸುವ, ಹಾಗೆ ಪ್ರತಿಕ್ರಿಯಿಸುತ್ತಲೇ ಕ್ರೌರ್ಯ ಮೆರೆಯುವ ಪ್ರಚೋದಕ ಉತ್ಸಾಹ ಎಲ್ಲೆಲ್ಲೂ ಕಂಡುಬರುತ್ತಿದೆ. ಇದರ ಭಾಗವಾಗಿಯೇ ಸಣ್ಣ ಮಗುವಿನ ಕೈಯಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನಿಟ್ಟು ‘ನಾನು ರಾಹುಲ್ ಗಾಂಧಿಯನ್ನು ಭೇಟಿಯಾಗಲು ಇಚ್ಛಿಸುತ್ತಿದ್ದೇನೆ’ ಎಂಬ ಒಕ್ಕಣೆಯ ಫೋಟೋ ಫೇಸ್ಬುಕ್ನ ಆವರಣದಲ್ಲಿ ಕಾಣಿಸಿಕೊಳ್ಳುತ್ತದೆ. ದಿಢೀರನೆ ಅದು ಹಂಚಲ್ಪಡುತ್ತದೆ. ನಾಳಿನ ಪೀಳಿಗೆಯನ್ನು ಪ್ರತಿನಿಧಿಸುವ ಪೋರನ ಹಿಂಸಾಪರ ಫೋಟೋಕ್ಕೆ ಅಸಂಖ್ಯಾತ ಲೈಕ್ಗಳು ಹರಿದುಬರುತ್ತವೆ. ಇದು ಅರಿವನ್ನು ಎತ್ತರಿಸಿಕೊಳ್ಳುವ ಲಕ್ಷಣವಲ್ಲ. ಬದಲಾಗಿ ಜನರ ಸ್ವಯಂತಿಳುವಳಿಕೆಯ ಶಕ್ತಿಯ ಮೇಲೆ ತಣ್ಣಗೆ ಆಗುವ ಗದಾಪ್ರಹಾರ.
ರೂಢಿಗತ ಸಂಕುಚಿತ ವಿಧಾನ
ನಂಬಿಕೆಯ ಜಗತ್ತು ಆಧ್ಯಾತ್ಮಿಕ ತಾತ್ವಿಕತೆಯ ಪ್ರಖರತೆಯನ್ನು ತೀವ್ರಗೊಳಿಸುವುದು ಒಂದು ಸಾಧ್ಯತೆ. ಆದರೆ, ಇದೇ ಜಗತ್ತು ದೈವಿಕ ಮತ್ತು ಧಾರ್ಮಿಕ ಮೌಢ್ಯವನ್ನು ಪ್ರತಿಷ್ಠಾಪಿಸುವುದಕ್ಕೆ ಸಹಾಯಕವಾಗುತ್ತದೆ. ಅಷ್ಟೇ ಅಲ್ಲ, ರಾಜಕೀಯದ ಸ್ವರೂಪವನ್ನು ನಿರ್ಧರಿಸುವಷ್ಟರ ಮಟ್ಟಿಗೆ ತನ್ನ ಪ್ರಭಾವವನ್ನು ಪ್ರಬಲವಾಗಿ ಬೇರೂರಿಸಿಬಿಡುತ್ತದೆ. ಇದರ ಪರಿಣಾಮವು ಜನರ ಮನೋಧರ್ಮದ ಮೇಲಾಗುತ್ತದೆ. ಅಧಿಕಾರದಲ್ಲಿರುವ ಮತ್ತು ಅಧಿಕಾರದಲ್ಲಿ ಇಲ್ಲದೇ ಇರುವ ನಾಯಕರೆನ್ನಿಸಿಕೊಂಡವರನ್ನು ಗ್ರಹಿಸುವ ಸಂಕುಚಿತ ವಿಧಾನವನ್ನೂ ರೂಢಿಸಿಬಿಡುತ್ತದೆ. ರಾಹುಲ್ ಗಾಂಧಿ ಅವರನ್ನು ಭೇಟಿಯಾಗಬೇಕಿದೆ ಎನ್ನುವ ಪುಟ್ಟ ಪೋರನ ಕೈಯಲ್ಲಿನ ದೊಡ್ಡ ದೊಡ್ಡ ಕಲ್ಲುಗಳ ಫೋಟೋ ಈ ವಿಧಾನ ಎಂಥದ್ದು ಎಂಬುದನ್ನು ನಿರೂಪಿಸಿದೆ. ಲೋಕಸಭೆಯಲ್ಲಿ ನಿರರ್ಗಳವಾಗಿ ಮಾತನಾಡಿ ಭಾಷಿಕ ಪ್ರೌಢಿಮೆ ಮೆರೆದು ಅಧಿಕಾರದಲ್ಲಿರುವವರ ಊನಗಳ ಮೇಲೆ ಬೆಳಕು ಚೆಲ್ಲುವ ಪ್ರಬುದ್ಧ ನಡೆಯನ್ನು ಪ್ರದರ್ಶಿಸುವವರು ಉತ್ತಮ ಸಂಸದೀಯ ಪಟು ಎಂಬ ಹಿರಿಮೆ ಪಾತ್ರರಾಗುವ ಪರಂಪರೆ ಇದೆ. ಆದರೆ, ಇದಕ್ಕೆ ತದ್ವಿರುದ್ಧವಾದ ನಡೆಗಳೊಂದಿಗಿನ ಹೀನ ಸಂಪ್ರದಾಯವನ್ನು ರಾಜಕಾರಣಿಗಳು ಈಗಾಗಲೇ ಆರಂಭಿಸಿಬಿಟ್ಟಿದ್ದಾರೆ. ಅಷ್ಟಕ್ಕೇ ಅವರು ಸಮಾಧಾನಗೊಳ್ಳದೇ, ಸಾಮಾಜಿಕ ಜಾಲತಾಣಗಳ ವೇದಿಕೆಯ ತಾರ್ಕಿಕ ಸಾಧ್ಯತೆಗಳ ಆಯಾಮಕ್ಕೇ ಧಕ್ಕೆಯೊದಗಿಸುವ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಸದ್ಯದ ಮತ್ತು ಭವಿಷ್ಯದ ಹಿಂಸಾಪ್ರವೃತ್ತಿಗಳ ವಾತಾವರಣ ಸೃಷ್ಟಿಗೆ ಹೊಸ ಪೀಳಿಗೆಯ ಎಳೆ ಜೀವಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಬಿಂಬಗಳು ನಕಾರಾತ್ಮಕ ಸಂದೇಶವನ್ನು ಸಾರುತ್ತಿವೆ.
ದ್ವೇಷದ ವಿಷ
ಒಬ್ಬರನ್ನೊಬ್ಬರು ಹಿಂಸಿಸಿಕೊಳ್ಳುವ, ದ್ವೇಷ ಸಾಧಿಸುವ, ಆ ಮೂಲಕ ನೆಮ್ಮದಿಯನ್ನು ತಂದುಕೊಳ್ಳುವ ಭ್ರಮಾತ್ಮಕತೆಯೇ ಶ್ರೇಷ್ಠ ಎಂದು ನಂಬಿಸುವ ಆಟ ಈಗೀಗ ಅಧಿಕೃತತೆಯನ್ನು ಪಡೆದುಕೊಂಡಿದೆ. ಈ ಆಟದ ಓಟವು ಹಲವು ಜೀವಗಳ ಬಲಿಬೇಡುತ್ತದೆ ಎಂಬ ಸತ್ಯದ ಕಡೆಗೆ ಯಾರ ಗಮನವೂ ಇಲ್ಲ. ಅದು ನಮ್ಮನ್ನು ಯಾವ ಕೂಪಕ್ಕೆ ತಳ್ಳುತ್ತದೆ ಎಂಬ ಪರಿಜ್ಞಾನವಿಲ್ಲದೇ ದ್ವೇಷಕ್ಕೆ ಮನಸ್ಸನ್ನು ತಿರುಗಿಸಿಕೊಳ್ಳುವ ರಣೋತ್ಸಾಹವು ಪೀಳಿಗೆಯನ್ನು ಸರ್ವನಾಶದ ಕಡೆಗೆ ಕೊಂಡೊಯ್ಯುತ್ತಿದೆ. ನಮ್ಮ ನಾಯಕರ ಕುರಿತು ಅಸಮಾಧಾನಗೊಳ್ಳುವ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವ, ಆ ಮೂಲಕ ಅವರು ನಮ್ಮ ಅಗತ್ಯಗಳೇನೇನು ಎಂಬುದರ ಬಗ್ಗೆ ಆಲೋಚಿಸುವಂತೆ ಒತ್ತಡ ಹಾಕುವುದರ ಬದಲು ವಿರೋಧ ಪಕ್ಷಗಳವರ ಬಗ್ಗೆ ದ್ವೇಷ ಹುಟ್ಟುಹಾಕುವಂಥ ವಿಷದ ಬೀಜಗಳನ್ನು ಬಿತ್ತುವ ಪ್ರಯತ್ನಗಳು ಸಾಮಾಜಿಕ ಜಾಲತಾಣಗಳ ಮೂಲಕ ಮುನ್ನೆಲೆಗೆ ಬರುತ್ತಿರುವುದು ಭವಿಷ್ಯದ ಕರಾಳತೆಯ ಬಗ್ಗೆ ಮುನ್ಸೂಚನೆ ನೀಡುತ್ತಿವೆ.
ನಮಗೆ ಅಧಿಕಾರದಲ್ಲಿರುವವರೂ ಮುಖ್ಯ. ಅವರನ್ನು ಪ್ರಶ್ನಿಸುವ ವಿರೋಧ ಪಕ್ಷಗಳವರೂ ಮುಖ್ಯ. ಜೊತೆಗೆ ತಾರ್ಕಿಕವಾಗಿ ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ವೈಚಾರಿಕ ಚಿಂತಕರೂ ಪ್ರಧಾನ ಪಾತ್ರ ನಿರ್ವಹಿಸುತ್ತಾರೆ. ಈ ಮೂರೂ ವಲಯಗಳವರನ್ನೂ ಪರಸ್ಪರ ದ್ವೇಷದ ನೆಲೆಗಳಲ್ಲಿ ನೋಡುವಂತೆ ಪ್ರಚೋದಿಸುವ ಸಣ್ಣತನದ ರಾಜಕಾರಣ ತನ್ನ ವ್ಯತಿರಿಕ್ತತೆಯನ್ನು ಈಗಾಗಲೇ ಪ್ರದರ್ಶಿಸುತ್ತಿದೆ. ಅಧಿಕಾರ, ಹಣ ಮತ್ತು ಅದಕ್ಕನುಗುಣವಾದ ಎಲ್ಲ ಸೌಲಭ್ಯಗಳನ್ನು ದಕ್ಕಿಸಿಕೊಳ್ಳುವುದರಲ್ಲಿ ಒಂದಾಗುವ ಅಧಿಕಾರರೂಢರು ಮತ್ತು ವಿರೋಧ ಪಕ್ಷಗಳವರಿಗೆ ನಾವು ಸ್ಪಷ್ಟ ಸಂದೇಶ ರವಾನಿಸಬೇಕಿದೆ. ನೀವಿಬ್ಬರೂ ಈ ದೇಶದ ನಿಜವಾದ ಬೆಳವಣಿಗೆಯ ಬಗ್ಗೆ ಆಲೋಚಿಸಿ ಎಂದು ದಿಟ್ಟವಾಗಿ ಕಿವಿಮಾತು ಹೇಳಬೇಕಿದೆ. ಒಬ್ಬರಿಗೊಬ್ಬರು ಹೇಳಿಕೆಗಳ ಮೂಲಕ ಕಚ್ಚಾಡುತ್ತಾ, ಆ ಮೂಲಕವೇ ಹಿಂಸೆಗೆ ಪ್ರಚೋದನೆ ನೀಡುತ್ತಾ, ಬೀದಿಬದಿಯಲ್ಲಿ ಅಮಾಯಕ ಜೀವಗಳ ಮಾರಣಹೋಮಕ್ಕೆ ಕಾರಣವಾಗುವ ರಾಜಕೀಯ ಪ್ರವೃತ್ತಿಗಳನ್ನು ಗಟ್ಟಿದನಿಯಲ್ಲಿ ಖಂಡಿಸಬೇಕಿದೆ. ಹಾಗಾಗದಿದ್ದರೆ ನಮ್ಮ ದೇಶ ಮಹಾನ್ ಆಗುವುದಿಲ್ಲ. ಸಮೃದ್ಧ ಭಾರತದ ಕನಸುಗಳೂ ಸಾಕಾರಗೊಳ್ಳುವುದಿಲ್ಲ.
-ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ
ಇಂದಿನಿಂದಲೇ ಜಾರಿಗೆ ಬರುವಂತೆ ಕಚ್ಚಾ ಸೆಣಬಿನ ಮೇಲಿನ ಬೆಲೆ ಮಿತಿ ರದ್ದುಗೊಳಿಸಲು ಕೇಂದ್ರ ನಿರ್ಧಾರ

ಸುದ್ದಿದಿನ ಡೆಸ್ಕ್ : ಇಂದಿನಿಂದಲೇ ಜಾರಿಗೆ ಬರುವಂತೆ ಕಚ್ಚಾ ಸೆಣಬಿನ ಮೇಲಿನ ಬೆಲೆ ಮಿತಿಯನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕಳೆದ ವರ್ಷ ಸೆಪ್ಟಂಬರ್ 30ರಂದು ಸೆಣಬು ಕಾರ್ಖಾನೆಗಳು ಮತ್ತು ಇತರೆ ಬಳಕೆದಾರರು ಟಿಡಿ5 ದರ್ಜೆಯ ಸೆಣಬು ಖರೀದಿಸಲು ಪ್ರತಿ ಕ್ವಿಂಟಾಲ್ ಗೆ 6ಸಾವಿರದ 500 ರೂಪಾಯಿ ಬೆಲೆ ಮಿತಿ ನಿಗದಿಪಡಿಸಲಾಗಿತ್ತು. ಕಚ್ಚಾ ಸೆಣಬು ವ್ಯಾಪಾರದ ಮಾರುಕಟ್ಟೆಯ ಎಲ್ಲ ಆಯಾಮಗಳನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ದರ ಮಿತಿ ತೆರವಿನಿಂದ ರೈತರು, ಕಾರ್ಖಾನೆಗಳು ಮತ್ತು ಎಂಎಸ್ಎಂ ಇ ವಲಯಕ್ಕೆ ಸಹಾಯಕವಾಗಲಿದೆ ಎಂದು ಜವಳಿ ಸಚಿವಾಲಯ ಹೇಳಿದೆ. 40 ಲಕ್ಷ ರೈತರಲ್ಲದೆ, ಸುಮಾರು 7 ಲಕ್ಷ ಜನರು ಸೆಣಬು ವ್ಯಾಪಾರವನ್ನು ಅವಲಂಬಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಶುಕ್ರವಾರ | ಬೆಳಗಿನ ಪ್ರಮುಖ ಸುದ್ದಿಗಳು

ಶುಕ್ರವಾರ | ಬೆಳಗಿನ ಪ್ರಮುಖ ಸುದ್ದಿಗಳು
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದೂ ಕೂಡ ಬೆಂಗಳೂರಿನಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ವೀಕ್ಷಣೆಯನ್ನು ಮುಂದುವರೆಸಲಿದ್ದಾರೆ. ಸಾಯಿ ಬಡಾವಣೆ, ನಾಗಪ್ಪ ರೆಡ್ಡಿ ಬಡಾವಣೆ ಮತ್ತು ಪೈ ಬಡಾವಣೆಗಳಿಗೆ ಅವರು ಭೇಟಿ ನೀಡಲಿದ್ದಾರೆ.
- ಪರಿಷ್ಕೃತ ಕ್ರಿಯಾ ಯೋಜನೆ 2015 ರಲ್ಲಿ ಲೋಪವಿದೆ ಎಂಬ ಕಾರಣಕ್ಕೆ ಜಲ ಮೂಲಗಳ ಬಳಕೆಯನ್ನು ವಸತಿ ಉದ್ದೇಶಕ್ಕೆ ಪರಿವರ್ತಿಸುವ ಕುರಿತಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊರಡಿಸಿದ್ದ ಅಧಿಸೂಚನೆಯನ್ನು ತಕ್ಷಣವೇ ರದ್ದುಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡಿಎ ಆಯುಕ್ತರಿಗೆ ಸೂಚಿಸಿದ್ದಾರೆ. ಅದರಂತೆ ಬಿಡಿಎ ಆಯುಕ್ತರು ಅಧಿಸೂಚನೆ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
- ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ಉಡುಪಿ, ವಿಜಯಪುರ, ಬೆಳಗಾವಿ, ತಿಪಟೂರು ಸೇರಿ ಹಲವು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ವತಃ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
- ಬೆಸ್ಕಾಂನ ಎಲ್ಲ ಕಾರ್ಯ ಮತ್ತು ಪಾಲನ ವಿಭಾಗಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರದಂದು ಅಂದರೆ, ನಾಳೆ ಮಧ್ಯಾಹ್ನ 3 ಗಂಟೆಯಿಂದ 5.30ರವರೆಗೆ ಗ್ರಾಹಕ ಸಂವಾದ ಸಭೆಗಳನ್ನು ನಡೆಸಲಾಗುವುದು. ಗ್ರಾಹಕರು ವಿದ್ಯುತ್ಗೆ ಸಂಬಂಧಿಸಿದ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.
- ಜೈಪುರದಲ್ಲಿ ಇಂದು ನಡೆಯಲಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ನಂತರ ಅವರು ಪಕ್ಷದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
- ಇಂದಿನಿಂದಲೇ ಜಾರಿಗೆ ಬರುವಂತೆ ಕಚ್ಚಾ ಸೆಣಬಿನ ಮೇಲಿನ ಬೆಲೆ ಮಿತಿಯನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಳೆದ ವರ್ಷ ಸೆಪ್ಟಂಬರ್ 30ರಂದು ಸೆಣಬು ಕಾರ್ಖಾನೆಗಳು ಮತ್ತು ಇತರೆ ಬಳಕೆದಾರರು ಟಿಡಿ5 ದರ್ಜೆಯ ಸೆಣಬು ಖರೀದಿಸಲು ಪ್ರತಿ ಕ್ವಿಂಟಾಲ್ ಗೆ 6ಸಾವಿರದ 500ರೂಪಾಯಿ ಬೆಲೆ ಮಿತಿ ನಿಗದಿಪಡಿಸಲಾಗಿತ್ತು. ಕಚ್ಚಾ ಸೆಣಬು ವ್ಯಾಪಾರದ ಮಾರುಕಟ್ಟೆಯ ಎಲ್ಲ ಆಯಾಮಗಳನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
- ಐಪಿಎಲ್ ಟಿ-20 ಕ್ರಿಕೆಟ್ನಲ್ಲಿಂದು ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.
- ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
- ಇದೇ 22ರಂದು ಫಿಲ್ಮಾಹಾಲಿಕ್ ಫೌಂಡೇಶನ್ ವತಿಯಿಂದ 3ನೇ ವರ್ಷದ ಕರ್ನಾಟಕ ಯುವ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ ಮತ್ತು ಮೈಸೂರು ಅಂತಾರಾಷ್ಟ್ರೀಯ ಜಲ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ಮೈಸೂರಿನ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮೈಸೂರು ಅಂತರಾಷ್ಟ್ರೀಯ ಜಲ ಚಲನಚಿತ್ರೋತ್ಸವದ ಮುಖ್ಯ ಉದ್ದೇಶ ಹೊಸ ತಲೆಮಾರಿನ ಚಲನಚಿತ್ರ ತಯಾರಕರಿಗೆ ಕಲಾತ್ಮಕ ಸೃಜನಶೀಲತೆಯನ್ನು ಪೋಷಿಸಿ ಮತ್ತು ಉತ್ತೇಜಿಸಿ ಅವರ ಚಲನಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪ್ರದರ್ಶಿಸುವುದೇ ಆಗಿದೆ. 91ಕ್ಕೂ ಹೆಚ್ಚು ದೇಶಗಳ ಚಲನಚಿತ್ರ ತಯಾರಕರು ಭಾಗವಹಿಸಲಿದ್ದಾರೆ.
- ಚಾಮರಾಜನಗರ ತಾಲೂಕಿನ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು ಜಲಾಶಯಗಳು ಯಾವುದೇ ಸಮಯದಲ್ಲಿ ಭರ್ತಿಯಾಗಬಹುದಾಗಿದೆ. ಜಲಾಶಯಗಳ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಾವೇರಿ ನೀರಾವರಿ ನಿಗಮದ ಕಬಿನಿ ನಾಲೆಗಳ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮನವಿ ಮಾಡಿದ್ದಾರೆ.
- ಮಂಡ್ಯದಲ್ಲಿ ಭಾರಿ ಮಳೆಯಿಂದ ಬೀಡಿ ಕಾಲೋನಿಯ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲಾಧಿಕಾರಿ ಎಸ್. ಅಶ್ವತಿ ಬೀಡಿ ಕಾಲೋನಿಗೆ ಭೇಟಿ ನೀಡಿ, ಪರಿಶೀಲಿಸಿ ಸದ್ಯಕ್ಕೆ ಕಾಲೋನಿಯ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
- ಮುಂಗಾರು ಋತುವಿನಲ್ಲಿ ವಿದ್ಯುತ್ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಕೂಡಲೆ ಅಗತ್ಯ ಪ್ರಮಾಣದ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ವಿದ್ಯುತ್ ಉತ್ಪಾದನಾ ಸಂಸ್ಥೆಗಳಿಗೆ ಸೂಚಿಸುವಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರಕಾರ ಸಲಹೆ ನೀಡಿದೆ. ರಾಜ್ಯ ಸರ್ಕಾರಗಳು ವಿದ್ಯುತ್ ಉತ್ಪಾದನೆಗಾಗಿ ಕೂಡಲೇ ಅಗತ್ಯ ಕಲ್ಲಿದ್ದಲು ಪ್ರಮಾಣದ ಶೇಕಡ10ರಷ್ಟನ್ನು ಆಮದು ಮಾಡಿಕೊಳ್ಳುವಂತೆ ಹಾಗೂ ಈ ತಿಂಗಳ 31ರೊಳಗೆ ಕಲ್ಲಿದ್ದಲು ಆಮದು ಆರ್ಡರ್ ನೀಡುವಂತೆ ಸಚಿವ ಆರ್ಕೆ ಸಿಂಗ್ ಸೂಚಿಸಿದ್ದಾರೆ.
- ಇದೇ 21 ಮತ್ತು 22ರಂದು ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಯಾದಗಿರಿ ಜಿಲ್ಲೆಯಲ್ಲಿ ನಡೆಯಲಿದ್ದು, 6 ಸಾವಿರದ 625 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. 28 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ರಾಗಪ್ರಿಯಾ ಯಾದಗಿರಿಯಲ್ಲಿ ತಿಳಿಸಿದ್ದಾರೆ.
- ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೇ 21ರಂದು ನಿಗದಿಯಾಗಿದ್ದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಮೇ 27ಕ್ಕೆ ಮುಂದೂಡಲಾಗಿದೆ. ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿರುವುದರಿಂದ ಚುನಾವಣಾ ನೀತಿ ಸಂಹಿತೆ ಹಾಗೂ ಶಿಕ್ಷಣ ಇಲಾಖೆಯ ಟಿಇಟಿ ಪರೀಕ್ಷೆಯನ್ನು ಮೇ 21 ರಂದು ನಿಗದಿಗೊಳಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
- ದಾವಣಗೆರೆ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಯಿಂದ ಕೆರೆ ಕಟ್ಟೆಗಳಿಗೆ ನೀರು ಬಂದಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯ ಅಬ್ಬರಕ್ಕೆ ಹರಿಹರ ಮತ್ತು ಹೊನ್ನಾಳಿ ತಾಲ್ಲೂಕಿನಲ್ಲಿ ಕೊಯ್ಲಿಗೆ ಬಂದಿದ್ದ ಭತ್ತ ನೆಲ ಕಚ್ಚಿದ್ದು, 1 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಬೆಳೆ ಹಾಳಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
- ಅವಧಿಗೆ ಮುನ್ನವೇ ಮುಂಗಾರು ಅಪ್ಪಳಿಸಿರುವ ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಡುವೆ ಇಂದು ಕೂಡ ಕೇರಳ ರಾಜಧಾನಿ ತಿರುವನಂತಪುರಂ, ಕೊಲ್ಲಂ ಸೇರಿದಂತೆ ಒಟ್ಟು 12 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಿಸಿದೆ.
- ವಾರ್ಷಿಕ ಅಮರನಾಥ ಯಾತ್ರೆ ಹಾಗೂ ಮಚಲಿ ಯಾತ್ರೆಯ ಹಿನ್ನೆಲೆಯಲ್ಲಿ ಸೇನಾ ಪಡೆಗಳ ಹಾಗೂ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಭದ್ರತಾ ಪರಿಶೀಲನೆ ನಡೆಸಿದರು. ಲೆಫ್ಟಿನೆಂಟ್ ಜನರಲ್ ಮಂಜಿಂದರ್ ಸಿಂಗ್ ನೇತೃತ್ವದಲ್ಲಿ ಸೇನಾ ಪಡೆಗಳ ತಂಡ ಜಮ್ಮು ವಲಯದ ನಗ್ರೋಟಾ ಎಂಬಲ್ಲಿ ಭದ್ರತಾ ಸಿದ್ಧತೆಗಳ ಪರಿಶೀಲನೆ ನಡೆಸಿತು. ಜಮ್ಮು ಪೊಲೀಸ್ ಇಲಾಖೆಯ ಹೆಚ್ಚುವರಿ ಮಹಾ ನಿರ್ದೇಶಕ ಮುಖೇಶ್ ಸಿಂಗ್ ಹಾಗೂ ಗುಪ್ತಚರ ದಳದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
- ಐಪಿಎಲ್ ಕ್ರಿಕೆಟ್ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್ಗಳಿಂದ ಜಯಗಳಿಸಿದೆ. ಟೈಟನ್ಸ್ ತಂಡ ಒಡ್ಡಿದ 169ರನ್ಗಳ ಗುರಿ ಬೆನ್ನೆತ್ತಿದ ಬೆಂಗಳೂರು ತಂಡ ಇನ್ನೂ 8ಎಸೆತಗಳು ಬಾಕಿ ಇರುವಂತೆ 2 ವಿಕೆಟ್ ನಷ್ಟಕ್ಕೆ 170ರನ್ಗಳಿಸಿ ಗೆಲುವಿನ ನಗೆ ಬೀರಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪರಿಶಿಷ್ಟ ಸಮುದಾಯಕ್ಕೆ ಹೆಚ್ಚಿನ ಸರ್ಕಾರಿ ಸೌಲಭ್ಯ ಅಗತ್ಯ : ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ

ಸುದ್ದಿದಿನ, ಬೆಂಗಳೂರು : ಪರಿಶಿಷ್ಟ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯ ದೊರೆಯಬೇಕೆಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ಹೇಳಿದ್ದಾರೆ.
ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಅನೇಕ ಸಮುದಾಯಗಳ ಜತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಹಕ್ಕು ಮತ್ತು ಅವಕಾಶಗಳಿಂದ ವಂಚಿತವಾಗಿವೆ. ದೂರದರ್ಶನ ಕಾರ್ಯಕ್ರಮಗಳ ಮೂಲಕ ಈ ಸಮುದಾಯ ಜಾಗೃತಗೊಳಿಸಿ, ಅವರಿಗೆ ಸರ್ಕಾರಿ ಸೌಲಭ್ಯ ದೊರಕುವಂತೆ ಮಾಡಬೇಕು ಎಂದು ಸಚಿವರು ಹೇಳಿದರು. ಕಾರ್ಯಕ್ರಮದಲ್ಲಿ ದೂರದರ್ಶನ ಮತ್ತು ಆಕಾಶವಾಣಿಯ ಹಿರಿಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ7 days ago
ಇಂದಿನಿಂದಲೇ ಈ ರಾಶಿಗಳಿಗೆ ಧನ ಲಾಭ, ಸುಖ ಸಂಪತ್ತು ಪ್ರಾಪ್ತಿ! ಶನಿವಾರ ರಾಶಿ ಭವಿಷ್ಯ-ಮೇ-14,2022
-
ಅಂತರಂಗ7 days ago
ರಾಜ್ಯದ ಗಡಿಯಿಂದ ದೇಶದ ಗಡಿಗೆ ಪ್ರವಾಸದ ಕ್ಷಣಗಳು..!
-
ಬಹಿರಂಗ5 days ago
ಡಾಕಿನಿ ಎಂದರೆ ಬೌದ್ಧ ಭಿಕ್ಕುಣಿ / ಬೌದ್ಧ ಯೋಗಿಣಿ
-
ನೆಲದನಿ5 days ago
ಕಾಯಕ ಜೀವಿಗಳ ಚಳುವಳಿಯಲ್ಲಿ ಬುದ್ಧಪ್ರಜ್ಞೆ
-
ಬಹಿರಂಗ5 days ago
ದಯೆಯಾಗಿ ಚಳುವಳಿ ಕೈಗೊಂಡ ಮಹಾ ಜ್ಞಾನಿ ಬುದ್ಧ
-
ನಿತ್ಯ ಭವಿಷ್ಯ5 days ago
ಸೋಮವಾರ- ರಾಶಿ ಭವಿಷ್ಯ ಮೇ-16,2022 : ಈ ಚಂದ್ರ ಗ್ರಹಣದಿಂದಾಗಿ ಈ ರಾಶಿಗಳಿಗೆ ಸಂತೋಷವೇ ಸಂತೋಷ!
-
ದಿನದ ಸುದ್ದಿ4 days ago
ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ
-
ನಿತ್ಯ ಭವಿಷ್ಯ6 days ago
ಭಾನುವಾರ- ರಾಶಿ ಭವಿಷ್ಯ ಮೇ-15,2022