ಭಾವ ಭೈರಾಗಿ
ಕವಿತೆ | ಪ್ರೇಮ ಕುಲುಮೆ

ನೀನೊಂದು ಪ್ರೇಮ ಕುಲುಮೆ
ನೀ ಕಾಸಿದಷ್ಟು ಕರಗಲಿಲ್ಲ ನಾನು
ಯಾರೊ ತಟ್ಟಿದ ಅವರಿಚ್ಚೆಯ ಆಕಾರದ ಅಸ್ತ್ರವಾದೆ.
ಮತ್ತೇ ಮತ್ತೇ ಬರುತ್ತಲೆ ಇರುತ್ತೇನೆ
ನಿನ್ನ ಪ್ರೇಮ ಕುಲುಮೆಗೆ
ಆಗಲೂ ನೀ ಕಾಯಿಸುತ್ತಿಯಾ
ನಾ ಕರಗದೆ ಬಾಗುತ್ತೇನೆ
ಯಾರೋ ತಟ್ಟಿಕೊಳ್ಳುತ್ತಾರೆ ಅವರಿಚ್ಚಯ ಆಕಾರಕ್ಕೆ.
ನಮ್ಮಿಬ್ಬರದು ಕುಲುಮೆ ಕಬ್ಬಿಣದ ನಂಟು
ಕಾಸಿದ್ದು ನೀನು ಕಾದಿದ್ದು ನಾನು
ನೊಂದಿದ್ದು ನೀನು ಬೆಂದಿದ್ದು ನಾನು
ಯಾರದೊ ಕೈಯಲ್ಲಿ ಅವರಿಚ್ಚೆ ಪಡೆದು ನೀರಲ್ಲಿ ಮಿಂದಾಗ
ತಳಮಳ ತಾಪ ನಂದು ನಿಟ್ಟುಸಿರು ನಿಂದು.
-ಏಕಾಂತಗಿರಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಭಾವ ಭೈರಾಗಿ
ಕವಿತೆ | ಡಿವೈಡರುಗಳು

- ವಿಲ್ಸನ್ ಕಟೀಲ್
ಈಗೀಗ ರಸ್ತೆಗಳಿಗಿಂತ
ಡಿವೈಡರುಗಳೇ ಅತ್ಯಾಕರ್ಶಕ..!
ಮೆತ್ತನೆ ಹುಲ್ಲುಹಾಸು, ಚೆಂದದ ಹೂಗಿಡಗಳು..
ಸುಂದರ ಜಾಹೀರಾತುಗಳು…
ರಸ್ತೆಗಳ ಆರೋಗ್ಯಕ್ಕಿಂತ
ಡಿವೈಡರುಗಳ ಸೌಂದರ್ಯಕ್ಕೇ
ಸರಕಾರ ಹೆಚ್ಚು ಹಣ ಖರ್ಚು ಮಾಡುತ್ತದೆ.
ಕೆಲವು ಕಡೆ ಈ ಡಿವೈಡರುಗಳೇ
ರಸ್ತೆಯ ತಿರುವುಗಳನ್ನು,
ಮುಟ್ಟುವ ಗುರಿಯನ್ನು
ನಿಯಂತ್ರಿಸುತ್ತವೆ..!
ಡಿವೈಡರುಗಳಿಗೆ ರಸ್ತೆಗಳಂತೆ
ಮೈಮಾಂಸ ಕಿತ್ತುಬರುವ,
ಚರಂಡಿಗಳು ಉಕ್ಕಿ ಹರಿಯುವ,
ಮಳೆಗಾಲದಲ್ಲಿ ಮುಳುಗಿ ಉಸಿರುಗಟ್ಟುವ ಚಿಂತೆಯಿಲ್ಲ
ರಸ್ತೆಪಕ್ಕದ ಮನೆಗಳನ್ನೂ
ಸಲೀಸಾಗಿ ಕೆಡವುವ ಬುಲ್ಡೋಜರುಗಳು
ಡಿವೈಡರುಗಳಿಗೆ ಹಾನಿ ಮಾಡುವುದಿಲ್ಲ.
ಇತ್ತೀಚೆಗೆ ಹೆಚ್ಚಿನವರು
ರಸ್ತೆಗಳಲ್ಲಿ ಸಾಗುವುದಕ್ಕಿಂತ
ಡಿವೈಡರಿನಲ್ಲಿ ಅಡ್ಡಾಡುವುದನ್ನೇ ಇಷ್ಟಪಡುತ್ತಾರೆ.
ಡಿವೈಡರಿನಲ್ಲಿ ನಿಂತವರಿಗೆ
ಎರಡೂ ಬದಿಯವರಿಗೆ
ತಮಾಶೆ ಮಾಡಲು ತುಂಬಾ ಸಲೀಸು
ಹಾಗೆಂದು ಮೈಮರೆಯುವಂತಿಲ್ಲ
ಡಿವೈಡರಿನಲ್ಲಿದ್ದವರೂ ಎಚ್ಚರ ಇರಲೇಬೇಕು
ಮೊನ್ನೆ
ಬಲಗಡೆಯಿಂದ ಬಂದ
ನಿಯಂತ್ರಣ ತಪ್ಪಿದ ಮಂತ್ರಿಯ ಕಾರು
ಡಿವೈಡರಿಗೇ ನುಗ್ಗಿತ್ತು!
ಡಿವೈಡರಿನಲ್ಲಿದ್ದವರು
ಎಡಕ್ಕೆ ಹಾರಿ
ಜೀವ ಉಳಿಸಿಕೊಂಡರು..!
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಒಂದು ಕವಿತೆ ಬರೆದು ಕೊಡಿ

- ಮಾನಸ ಗಂಗೆ
ಹಸಿವನ್ನ ನೀಗಿಸುವ
ಒಂದು ಕವಿತೆ ಬರೆದು ಕೊಡಿ,
ಎರಡ್ಹೊತ್ತು ತಿಂದು
ನಾಳೆಗೊಂದಿಷ್ಟು ಉಳಿಸಿಕೊಳ್ಳುವೆ
ಸಸ್ಯದ್ದೊ ,ಮಾಂಸದ್ದೊ
ಬೆಂದದ್ದೊ ,ಹಸಿ ಹಸಿಯೋ
ಯಾವುದೋ ಒಂದು
ನಾಲ್ಕು ಸಾಲು ಗೀಚಿ ಬಿಡಿ
ನನಗೀಗ ತುಂಬಾ ಹಸಿವಿದೆ
ನೀವು ಬರೆದು ಕೊಟ್ಟ
ಕವಿತೆಗಳ ಕೊನೆಯಲ್ಲಿ
ನಿಮ್ಮ ಹೆಸರನ್ನು ದಯವಿಟ್ಟೂ
ಬರೆಯಬೇಡಿ,
ಹಸಿವಿಗೆ ಋಣಭಾರವನ್ನ
ಹೊರುವ ಶಕ್ತಿ ಇಲ್ಲ
ಇನ್ನೊಂದು ಮನವಿ
ಹಸಿವಿನ ಬಗ್ಗೆ
ಕವಿತೆ ಬರೆಯುವಾಗ
ನೀವು ಸ್ವಲ್ಪ ಹಸಿವನ್ನಿಟ್ಟುಕೊಳ್ಳಿ
ಹೊಟ್ಟೆ ತುಂಬಿದ ಪದಗಳಿಗೆ
ನಿದ್ದೆ ಜಾಸ್ತಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಹೆಣಗಳ ಹೂಳಲು ಒಂದಿಷ್ಟು ಭೂಮಿ ಕೊಡಿ

- ರುಜು, ಸಂಶೋಧನಾ ವಿದ್ಯಾರ್ಥಿ, ದಾವಣಗೆರೆ
ಅಂಗಲಾಚಿ ಬೇಡುವೆ…
ಒಂದಿಷ್ಟು ಭೂಮಿ ಕೊಡಿಸಿ
ಬದುಕು ಕಟ್ಟಿಕೊಳ್ಳಲು ಅಲ್ಲ
ಸತ್ತ ನನ್ನ ಹೆಣದ ಗೂಡು ಕಟ್ಟಲು
ಬೀಳುವ ನನ್ನ ಜನಗಳ
ಹೆಣಗಳ ಹೂಳಲು.
ಈ ಹಿಂದೆ ಸತ್ತ
ನನ್ನ ಜನಗಳ ಹೆಣಗಳು
ರಸ್ತೆ ಬದಿಯ ಮೋರಿಯಲ್ಲಿ ಮಣ್ಣಾಗಿವೆ,
ಮಳೆ ಹೊಯ್ದು, ಕಾಲುವೆಯು ಬಂದು
ಒಂದಿಷ್ಟು ಕುರುಹಿಲ್ಲದೆ ನೆಲಸಮವಾಗಿವೆ
ಹುಡುಕಿದರು ಸಿಗುತ್ತಿಲ್ಲ
ನನ್ನಪ್ಪನ ಹೆಣದ ದಿಬ್ಬ
ಪ್ರತಿ ವರ್ಷದ ಕ್ರಿಯಾ ಕರ್ಮವಿಲ್ಲದೆ
ಅನಾಥವಾಗಿದ್ದಾನೆ.
ಅದಕ್ಕಾಗಿ ಕೈ ಮುಗಿದು ಬೇಡುವೆ
ಮುಂದೆ ಬೀಳಲಿರುವ
ಹೆಣಗಳ ದಿಬ್ಬವನ್ನಾದರೂ ಕಾಣುತ್ತೇವೆ
ನಮಗೊಂದಿಷ್ಟು ಭೂಮಿ ಕೊಡಿ
ನಮ್ಮವರ ಹೆಣಗಳನ್ನು ಗುರುತಿಟ್ಟುಕೊಳ್ಳಲು.
ಕೋರ್ಟು ಕಚೇರಿ ತಿಳಿದವರಲ್ಲ ನನ್ನ ಜನ
ಪುಡಿ ಭೂಮಿಗಾಗಿ ಚಪ್ಪಲಿಗಳನ್ನ ಸವೆಸಿದ್ದಾರೆ
ಸಿಕ್ಕ ಸಿಕ್ಕವರಿಗೆ ಸಲಾಮು ಹೊಡೆದಿದ್ದಾರೆ
ರೊಕ್ಕ ಕೇಳಿದವರಿಗೆ ರೊಕ್ಕ
ಬಿರಿಯಾನಿ ಎಂದವರಿಗೆ ಬಿರಿಯಾನಿ
ಇಷ್ಟಾದರೂ ಒಂದಿಂಚು ಭೂಮಿ ಸಿಗಲಿಲ್ಲ
ಜೇಬು ಖಾಲಿ, ಮನಸು ಖಾಲಿ
ಪ್ರತಿರೋಧಿಸುತ್ತಿಲ್ಲ ಪರಿತಪಿಸುತ್ತಿದ್ದಾರೆ.
ಈ ಮುಗ್ದ ಮನಗಳ ತಣಿಯಲು
ಒಂದಿಷ್ಟು ಭೂಮಿ ಕೊಡಿ
ಸುಖ ಸುಪ್ಪತ್ತಿಗೆಯಿಂದ ಮೆರೆಯಲು ಅಲ್ಲ
ಸತ್ತಾಗಲಾದರೂ ನೆಮ್ಮದಿಯಿಂದ ಮಲಗಲು
ಊರೂರು ಅಲೆದು,
ಹತ್ತಿಯನು ಪಿಂಜಿ,
ಹಾಸಿಗೆಯನು ಹೊಲೆದು
ಇನ್ನೊಬ್ಬರ ಸುಖ ನಿದ್ರೆಗೆ ಕಾರಣರಾದ
ಪಿಂಜಾರರು ನಾವು,
ನಮ್ಮಗಳ ಚಿರ ನಿದ್ರೆಗೆ
ಗೂಡೊಂದು ಇಲ್ಲ,
ನಾವು ನಿದ್ರಿಸಬೇಕಿದೆ ಎಲ್ಲರಂತೆ ನೆಮ್ಮದಿಯಲಿ
ಹಾಸಿಗೆಯ ಮೇಲಲ್ಲ, ಘೋರಿಯ ಒಳಗಲ್ಲಿ,
ನಮ್ಮದಾದೊಂದು ಭೂಮಿಯಿಲ್ಲ
ನಮ್ಮವರ ಹೆಣಗಳ ಹೂಳಲು
ಜಾಣರಾದ ನೀವು ಜಾಗವೊಂದು ಕೊಡಿಸಿರಿ
ನಮ್ಮವರ ಹೆಣಗಳಿಗೆ ಮುಕ್ತಿಯನು ನೀಡಿರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ರಾಜಕೀಯ4 days ago
ಮಹಾರಾಷ್ಟ್ರ ಸರ್ಕಾರ ಉರುಳಲು ಬಿಜೆಪಿ ಕುತಂತ್ರ ಕಾರಣ, ಇದು ದೇಶಕ್ಕೆ ಮಾರಕ : ಮಲ್ಲಿಕಾರ್ಜುನ ಖರ್ಗೆ
-
ನಿತ್ಯ ಭವಿಷ್ಯ6 days ago
ಗುರುವಾರ ರಾಶಿ ಭವಿಷ್ಯ-ಜೂನ್-30,2022 : ಈ ರಾಶಿಯವರು ನಿಮ್ಮ ಸಂಗಾತಿಗೆ ಹೃದಯದಲ್ಲಿ ಅಡಿಗಿರುವ ಸತ್ಯಾಂಶ ಬಹಿರಂಗಪಡಿಸುವ ದಿನ
-
ನಿತ್ಯ ಭವಿಷ್ಯ5 days ago
ಶುಕ್ರವಾರ- ರಾಶಿ ಭವಿಷ್ಯ ಜುಲೈ-1,2022 : ಈ ರಾಶಿಯವರಿಗೆ ಇಷ್ಟ ಇರದ ಮದುವೆ! ಆದರೆ ಈ ರಾಶಿಯವರಿಗೆ ಇಷ್ಟ ಇರದ ಉದ್ಯೋಗ!
-
ದಿನದ ಸುದ್ದಿ4 days ago
ಅಕ್ರಮ ಹಣ ವರ್ಗಾವಣೆ ಕೇಸ್ : ಡಿ.ಕೆ ಶಿವಕುಮಾರ್’ಗೆ ಜಾಮೀನು ಅರ್ಜಿ ವಿಚಾರಣೆ ಜುಲೈ 30 ಕ್ಕೆ ಮುಂದೂಡಿಕೆ
-
ದಿನದ ಸುದ್ದಿ4 days ago
ನೇರ ಪಾವತಿ ಪೌರಕಾರ್ಮಿಕರ ಸೇವೆ ಕಾಯಂಗೆ ಸರ್ಕಾರದ ಒಪ್ಪಿಗೆ : ಸಿಎಂ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ4 days ago
ಶಿಕ್ಷಕನೋರ್ವ ಮಕ್ಕಳ ಬಿಸಿಯೂಟದ ತೊಗರಿ ಬೇಳೆ ಕದ್ದು ಮಾರುತ್ತಿರುವ ವಿಡಿಯೋ ವೈರಲ್.!
-
ದಿನದ ಸುದ್ದಿ7 days ago
ಉದಯಪುರ ಹತ್ಯೆ ಭಯೋತ್ಪಾದಕ ಕೃತ್ಯ ; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡನೆ
-
ದಿನದ ಸುದ್ದಿ4 days ago
ಬಿಜೆಪಿಯ ನೂಪುರ್ ಶರ್ಮಾ’ಗೆ ಸುಪ್ರೀಂಕೋರ್ಟ್ ತರಾಟೆ