ದಿನದ ಸುದ್ದಿ
ಮಾನವೀಯ ಮೌಲ್ಯ ಕಣ್ಮರೆ ; ಪ್ರಸಾದ ನೀಡುವ ಕೈಯಲ್ಲಿ ವಿಷ ಪ್ರಾಶನ ನೋವಿನ ಸಂಗತಿ : ತರಳಬಾಳು ಶ್ರೀ

ಸುದ್ದಿದಿನ,ಅರಸೀಕೆರೆ: ಆಧುನಿಕತೆಯ ನಾಗರಿಕ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.
ತಾಲೂಕು ಮಾಡಾಳು ಗ್ರಾಮದ ನಿರಂಜನ ಪೀಠದಲ್ಲಿ ಆಯೋಜಿಸಿದ್ದ ಲಿಂ. ಚಂದ್ರಶೇಖರ ಸ್ವಾಮೀಜಿಯವರ 12ನೇ ವರ್ಷದ ಪುಣ್ಯಸ್ಮರಣೆ ಹಾಗೂ 19ನೇ ವರ್ಷದ ಅರಿವಿನ ಜಾಗೃತಿ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಬೇಕಾದ ಕೆಲವು ಮಠಾಧಿಪತಿಗಳು ಐಶ್ವರ್ಯ ಹಾಗೂ ಅಧಿಕಾರದ ವ್ಯಾಮೋಹಕ್ಕೆ ಒಳಗಾಗಿ ಪ್ರಸಾದ ನೀಡುವ ಕೈಯಲ್ಲಿ ವಿಷ ಪ್ರಾಷನ ಮಾಡಿ 19 ಮಂದಿ ಬಲಿ ತೆಗೆದುಕೊಂಡಿರುವುದು ತುಂಬಾ ನೋವಿನ ಸಂಗತಿ ಎಂದರು.
ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ವೈಜ್ಞಾನಿಕವಾಗಿ ಬೆಳೆದಂತೆ ಆತನಲ್ಲಿ ಮಾನವೀಯ ಮೌಲ್ಯಗಳು ದೂರವಾಗು ತ್ತಿರುವ ಪರಿಣಾಮ ಸಮಾಜದ ನಡುವೆ ಕಂದಕ ಸೃಷ್ಟಿಯಾಗು ತ್ತಿದೆ. ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಗಳು ಮಾಯವಾಗುತ್ತಿವೆ ಎಂದು ಹೇಳಿದರು.
ಅಶಾಂತಿಯ ವಾತಾವರಣ: ಮನುಷ್ಯ ಮಾನಸಿಕವಾಗಿ ಪ್ರಬುದ್ಧನಾಗಿ ಬೆಳೆದರೂ ಭೌತಿಕವಾಗಿ ಪ್ರಬುದ್ಧನಾಗಿ ಬೆಳೆಯದ ಕಾರಣ ಸಮಾಜದ ಎಲ್ಲೆಡೆಯಲ್ಲೂ ಅ ಶಾಂತಿಯ ಹೊಗೆಯಾಡುತ್ತಿದೆ ಎಂದು ವಿಷಾದಿಸಿದರು.
ಈ ಹಿಂದೆ ಧರ್ಮಪೀಠದಲ್ಲಿನ ಮಠಾಧೀಶರ ಬಗ್ಗೆ ಭಕ್ತಿ ಭಾವದಿಂದ ಭಕ್ತರ ಸಮೂಹ ನಡೆದುಕೊಳ್ಳುತ್ತಿತ್ತು. ಭಕ್ತ ಸಮೂಹದ ನಂಬಿಕೆಗೆ ಚ್ಯುತಿ ಬಾರದಂತೆ ಮಠಾಧೀಶರು ನಡೆಯುತ್ತಿದ್ದರು. ಆದರೆ ಪ್ರಸ್ತುತ ಬದಲಾದ ಕಾಲದಲ್ಲಿ ಅಂಜುವುದಿರಲಿ ಅನುಮಾನದಿಂದ ನೋಡುವಂತಹ ದುಸ್ಥಿತಿ ಯನ್ನು ನಾವುಗಳು ಕಾಣುತ್ತಿದ್ದೇವೆ ಎಂದರು.
ಇತ್ತೀಚೆಗೆ ಸುಳ್ವಾಡಿ ದೇವಾಲಯದಲ್ಲಿ ನಡೆದ ವಿಷ ಪ್ರಾಷನ ಕಹಿ ಘಟನೆ ಮಠಾಧೀಶರು ಹಾಗೂ ಸಾಧುಸಂತರನ್ನು ಅನು ಮಾನದಿಂದ ನೋಡುವಂತಾಗಿದ್ದು ಭಕ್ತ ಸಮೂಹವನ್ನು ಸನ್ಮಾರ್ಗದತ್ತ ಕರೆದೊಯ್ಯವ ಮಠಾಧೀಶರೇ ದೇವರ ಪ್ರಸಾದ ದಲ್ಲಿ ವಿಷ ಪ್ರಾಷನ ಮಾಡಿಸಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅವಿಭಕ್ತ ಕುಟುಂಬಗಳು ಕಣ್ಮರೆ: ಇತ್ತೀಚಿನ ದಿನಗಳಲ್ಲಿ ನಾನು, ನನ್ನದು ಎಂಬ ಅಹಂಕಾರದಿಂದ ಕುಟುಂಬಗಳು ಒಡೆಯು ತ್ತಿದ್ದು, ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಪ್ರಸ್ತುತ ಕೌಟುಂಬಿಕ ಜೀವನ ಸಹ ವ್ಯಾವಹಾರಿಕವಾಗಿದೆ. ಇಂತಹಾ ಆಧ್ಯಾತ್ಮಿಕತೆಯ ಅರಿವಿನ ಜಾಗೃತಿ ಸಮಾರಂಭಗಳು ಉತ್ತಮ ಸಂಸ್ಕೃತಿ ಹಾಗೂ ಗುರು ಪರಂಪರೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಸ್ವಾಮೀಜಿ ಪ್ರತಿಪಾದಿಸಿದರು.
ಸಂಸ್ಕೃತಿಯ ಅರಿವು ಮೂಡಿಸಿ: ಸಾನ್ನಿಧ್ಯ ವಹಿಸಿದ್ದ ಕೆರೆಗೋಡಿ ರಂಗಾಪುರ ಮಠದ ಗುರುಪರದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯ ಆಚಾರ, ವಿಚಾರಗಳನ್ನು ಯುವ ಜನತೆಯಲ್ಲಿ ಬಿತ್ತುವ ಕಾರ್ಯವನ್ನು ಮಠಗಳು ಹಾಗೂ ಮಠಾಧೀಶರು ಪ್ರಸ್ತುತ ದಿನಗಳಲ್ಲಿ ಅತ್ಯಂತ ಅವಶ್ಯಕವಾಗಿ ಮಾಡಬೇಕಿದೆ ಎಂದರು.
ಸಮಾರಂಭದಲ್ಲಿ ಕೃಷಿಕರಾದ ಟಿ.ಜಿ ರುದ್ರಪ್ಪ,ಉದ್ಯಮಿ ಅರುಣ್ಕುಮಾರ್, ಡಾ.ಪೂರ್ಣಿಮಾ, ವೈದ್ಯ ಸಂಗಣ್ಣ ಶ್ಯಾಮಸುಂದರ್ ಅವರನ್ನು ಸನ್ಮಾನಿಸಲಾಯಿತು. ಸಮಾ ರಂಭದ ಅಧ್ಯಕ್ಷತೆಯನ್ನು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ವಹಿಸಿದ್ದರು. ಪಾಂಡೋಮಟ್ಟಿ ವಿರಕ್ತ ಮಠದ ಗುರು ಬಸವ ಸ್ವಾಮೀಜಿ, ಕಿರಿಕೊಡ್ಲಿಪೇಟೆಯ ಸದಾಶಿವ ಸ್ವಾಮೀಜಿ, ಸುಜಾತ ಮೇಲೇಗೌಡ ಮೊದಲಾದವರು ಮಾತನಾಡಿದರು.
ಕೊಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ, ಕರಡಿಗವಿ ಮಠದ ಶಂಕರಾನಂದ ಸ್ವಾಮೀಜಿ, ಶಿವಬಸವ ಕುಮಾರಾಶ್ರಮದ ಅಭಿನವ ಶಿವಲಿಂಗ ಸ್ವಾಮೀಜಿ, ಡಿ.ಎಂ.ಕುರ್ಕೆ ವಿರಕ್ತ ಮಠದ ಶಶಿಶೇಖರ ಸಿದ್ದಬಸವಸ್ವಾಮೀಜಿ, ಜಿಪಂ ಸದಸ್ಯ ಮಾಡಾಳು ಎಂ.ಎಸ್.ವಿ. ಸ್ವಾಮಿ, ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಚ್.ಜಿ.ರೇವಣ್ಣ, ಎನ್. ಜಿ. ಮಧು, ಯುವ ಕಾಂಗ್ರೆಸ್ಮಾಜಿ ಅಧ್ಯಕ್ಷ ಅಣ್ಣಾಯಕನಹಳ್ಳಿ ವಿಜಯ್ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
