ರಾಜಕೀಯ
ಭಾಷೆ, ರಾಜಕಾರಣ ಮತ್ತು ವ್ಯಾಕರಣ

ಭಾಷೆಯೊಂದರ ಉಳಿವಿನ ಪ್ರಶ್ನೆ ಚಾಲ್ತಿಗೆ ಬಂದಾಗಲೆಲ್ಲ ಅಧಿಕಾರ ಕೇಂದ್ರವು ಪ್ರತಿಕ್ರಿಯಿಸುವ ಉತ್ಸಾಹವನ್ನೇನೋ ತೋರುತ್ತದೆ. ತಾನು ಈ ವಿಷಯದಲ್ಲಿ ಗಂಭೀರವಾಗಿರುವುದಾಗಿ ಸಂದೇಶ ರವಾನಿಸುತ್ತದೆ. ಭವಿಷ್ಯದಲ್ಲಿ ಭಾಷೆಯ ಬಳಕೆಗಳ ಬಗ್ಗೆ ಎಚ್ಚರ ಇರುವುದಾಗಿಯೂ ಸ್ಪಷ್ಟಪಡಿಸುತ್ತದೆ. ಎಲ್ಲ ಸಮುದಾಯಗಳ ಜನರೂ ಜಾಗತಿಕ ಮನ್ನಣೆ ಪಡೆದ ಪರಭಾಷೆಯ ಮೇಲೆ ಹಿಡಿತ ಸಾಧಿಸಿ ಸಾಮಾಜಿಕ ಪ್ರತಿಷ್ಠೆಯನ್ನು ಗಳಿಸಿಕೊಳ್ಳುವಂತಾಗಲಿ ಎಂಬ ಸದುದ್ದೇಶದೊಂದಿಗೆ ಹೆಜ್ಜೆಯಿರಿಸುತ್ತಿರುವುದಾಗಿ ಸಮಜಾಯಿಷಿ ನೀಡುತ್ತದೆ. ಆದರೆ, ನಮ್ಮದಲ್ಲದ ಭಾಷೆಯ ಮೇಲೆ ಹಿಡಿತ ಸಾಧಿಸಿ ಪ್ರತಿಷ್ಠೆ ಗಳಿಸಿಕೊಳ್ಳುವ ಉಮೇದು ಅತ್ಯಂತ ಸಂಕುಚಿತವಾದದ್ದು ಎಂಬುದು ಅದಕ್ಕೆ ಅರ್ಥವಾಗುವುದಿಲ್ಲ. ಇನ್ನೊಂದು ಭಾಷೆಯ ಮೇಲೆ ಹಿಡಿತ ಸಾಧಿಸುವುದಷ್ಟೇ ಮುಖ್ಯ ಎಂಬ ಸಾರ್ವತ್ರಿಕ ಭಾವನೆಯನ್ನೇ ಆಧರಿಸಿಕೊಂಡು ನಿರ್ಧಾರ ಕೈಗೊಳ್ಳುವುದರಲ್ಲಿಯೇ ಆಸಕ್ತಿ ತೋರುತ್ತದೆ.
ಪ್ರಾಯೋಗಿಕವಾಗಿ 1000 ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಸರ್ಕಾರಿ ಪ್ರಸ್ತಾವವು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಆಯೋಜಿತವಾದ 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ತಾರ್ಕಿಕ ಚರ್ಚೆಯನ್ನೂ ಹುಟ್ಟುಹಾಕಿದೆ. ಈ ವೇದಿಕೆಯ ಮೂಲಕ ವ್ಯಕ್ತವಾದ ತಾರ್ಕಿಕ ಪ್ರಶ್ನೆಗಳು ಅಧಿಕಾರ ಕೇಂದ್ರದ ಪ್ರತಿನಿಧಿಗಳೊಳಗೆ ನಿಜವಾದ ಭಾಷಾ ಪ್ರಜ್ಞೆಯನ್ನು ಬಿತ್ತುವ ರೀತಿಯಲ್ಲಿಯೇ ಇವೆ. ಆದರೆ, ಇವು ಮುನ್ನೆಲೆಗೆ ತಂದ ಚರ್ಚೆಯು ಸಂವಾದವನ್ನು ಹುಟ್ಟುಹಾಕುವ ಬದಲು ವಿವಾದವನ್ನೇ ಸೃಷ್ಟಿಸಿದೆ. ಇದಕ್ಕೆ ಕಾರಣ ಚರ್ಚೆಯ ವೇಳೆ ವ್ಯಕ್ತವಾದ ಅಭಿಪ್ರಾಯಗಳನ್ನು ವಿಶಾಲವಾಗಿ ಗ್ರಹಿಸದೇ ಇರುವುದು.
ರಾಜಕೀಯ ಚಾಣಾಕ್ಷತೆ
ಈ ಬಗೆಯ ವಿವಾದ ಇದೇ ಮೊದಲೇನಲ್ಲ. ಭಾಷೆ ಕುರಿತಾದ ಸರ್ಕಾರಿ ನಿರ್ಧಾರ ವ್ಯಕ್ತವಾದಾಗ ಸಹಜವಾಗಿಯೇ ಗೊಂದಲಗಳು ಏರ್ಪಡುತ್ತವೆ. ಅಂಥದ್ದೊಂದು ಗೊಂದಲದ ವಾತಾವರಣ ಸೃಷ್ಟಿಯಾಗುವಂತೆ ಅಧಿಕಾರ ರಾಜಕಾರಣ ಅತ್ಯಂತ ಚಾಣಾಕ್ಷಯುತವಾಗಿ ನೋಡಿಕೊಳ್ಳುತ್ತದೆ. ಭಾಷಾ ಸಂಬಂಧಿ ಚರ್ಚೆಯನ್ನು ಸಂವಾದಕ್ಕೆ ತಿರುಗಿಸಿ ಮಹತ್ವಪೂರ್ಣ ಭಾಷಾ ಆಂದೋಲನಕ್ಕೆ ಪ್ರೇರಣೆ ನೀಡುವ ಬದಲು ವಿವಾದದ ಸೀಮಿತ ಚೌಕಟ್ಟಿನೊಳಗೆ ಕಟ್ಟಿಹಾಕುವ ವೈಚಿತ್ರ್ಯವನ್ನು ಸೃಷ್ಟಿಸುತ್ತದೆ. ಇಂಥ ಸಂದರ್ಭದಲ್ಲೆಲ್ಲಾ ಭಾಷೆಯ ಉಳಿವಿನ ಕುರಿತು ಧ್ವನಿಯೆತ್ತುವ ನಾಟಕವಾಡುವ ಸಂಘಟನೆಗಳ ಪ್ರತಿನಿಧಿಗಳು ಮೌನಪ್ರೇಕ್ಷಕರಾಗಿಯೇ ಉಳಿದುಬಿಡುತ್ತಾರೆ. ನಿಜವಾದ ಕಾಳಜಿಯೊಂದಿಗೆ ಧ್ವನಿಯೆತ್ತುವ ಬೆರಳೆಣಿಕೆಯ ಹೋರಾಟಗಾರರು, ಚಿಂತಕರು ಮತ್ತು ರಾಜಕೀಯ ವಲಯದ ಪ್ರತಿನಿಧಿಗಳ ನಡುವೆ ಮಾತಿನ ಸಮರವೇ ನಿರ್ಮಾಣವಾಗಿಬಿಡುತ್ತದೆ. ಇಂಥ ವೇಳೆ ಸಾಹಿತ್ಯ ಸಮ್ಮೇಳನಗಳಂಥ ವೇದಿಕೆಗಳು ಜನಸಮೂಹದಲ್ಲಿ ಸರಿಯಾಗಿ ಆಲೋಚಿಸುವ ಒತ್ತಡವನ್ನುಂಟುಮಾಡುತ್ತವೆ. ಈ ವಿಷಯದಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ನಿಜವಾದ ಕಾಳಜಿಯನ್ನು ವ್ಯಕ್ತಪಡಿಸಿದೆ.
ತೀಕ್ಷ್ಣ ಪ್ರತಿಕ್ರಿಯೆ
ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ನಿರ್ಧಾರ ಪ್ರಚುರಪಡಿಸಿ ಸಾರ್ವಜನಿಕ ಶಿಕ್ಷಣ ವಲಯವನ್ನು ಪ್ರತಿಷ್ಠಿತವಾಗಿಸುವ ಯೋಚನೆಗೆ ಪ್ರತಿಯಾಗಿ ಸಮ್ಮೇಳನವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಉದ್ಘಾಟನೆಯ ದಿನದಿಂದಲೇ ಸ್ಪಷ್ಟ ಸಂದೇಶ ರವಾನಿಸಿದ ಸಮ್ಮೇಳನವು ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ಅನುಷ್ಠಾನಗೊಳಿಸಬಾರದು ಎಂಬ ಬಹುಮುಖ್ಯ ಆಗ್ರಹವನ್ನು ನಿರ್ಣಯದ ರೂಪದಲ್ಲಿ ಮುಂದಿಟ್ಟಿತು.
ಉದ್ಘಾಟನೆಯ ದಿನದಂದು ಸಾಹಿತಿ ಡಾ.ಚಂದ್ರಶೇಖರ ಪಾಟೀಲ್ ಅವರು ತಮ್ಮ ಎಂದಿನ ವ್ಯಂಗ್ಯದ ಧಾಟಿಯಲ್ಲಿ ಆಂಗ್ಲಮಾಧ್ಯಮ ಶಾಲೆಗಳ ಪರವಾದ ಪ್ರಸ್ತಾಪವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇಂಗ್ಲಿಷ್ ಪರವಾದ ನಿರ್ಧಾರಗಳನ್ನು ಅನುಷ್ಠಾನಗೊಳಿಸುವ ಉತ್ಸಾಹವು ಕನ್ನಡದ ಮೇಲೆ ಬಹುದೊಡ್ಡ ಪ್ರಹಾರದ ಮುನ್ಸೂಚನೆ ಎಂಬರ್ಥದ ವಿಶ್ಲೇಷಣೆಯನ್ನು ನೀಡಿದ್ದರು. ಆದರೆ, ಅವರ ಮಾತುಗಳಲ್ಲಿನ ತಾರ್ಕಿಕತೆಯು ಹಿನ್ನೆಲೆಗೆ ಸರಿದು ವ್ಯಕ್ತಿಗತ ದೃಷ್ಟಿಕೋನಗಳು ಆದ್ಯತೆ ಪಡೆದು ಚರ್ಚೆಗೊಳಪಟ್ಟವು.
ಭಾಷೆಯ ಬಗ್ಗೆ ಚರ್ಚಿಸುವಾಗಲೆಲ್ಲಾ ವ್ಯಕ್ತಿಗತ ಬದ್ಧತೆಯ ಪ್ರಶ್ನೆಗಳು ನುಸುಳಿಕೊಂಡು ಸಂವಾದದ ಸಾಧ್ಯತೆಯನ್ನು ಮೊಟಕುಗೊಳಿಸುತ್ತವೆ. ನಿಮ್ಮ ಮಕ್ಕಳು, ಮೊಮ್ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಕಳುಹಿಸಿ ಉಳಿದವರ ಮಕ್ಕಳು ಕನ್ನಡವನ್ನು ಕಲಿಯಬೇಕು ಎಂಬ ವಾದವನ್ನು ಮಂಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ವಾದವನ್ನು ಮುಂದಿಡಲಾಗುತ್ತದೆ. ಈ ಚಿಂತಕರು, ಬುದ್ಧಿಜೀವಿಗಳ ಜಾಯಮಾನವೇ ಹಾಗೆ ಎಂಬ ಉಡಾಫೆ ದೃಷ್ಟಿಕೋನದಲ್ಲಿ ಮಾತೃಭಾಷೆಯಲ್ಲಿನ ಪ್ರಾಥಮಿಕ ಶಿಕ್ಷಣದ ವ್ಯಾಪಕ ಪ್ರಯೋಜನಗಳ ಸಾಧ್ಯತೆಯನ್ನು ಅವಸರವಸರದಲ್ಲಿ ಅಲ್ಲಗಳೆಯಲಾಗುತ್ತದೆ.
ಗಟ್ಟಿತನದ ಅಡಿಪಾಯ
ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವುದನ್ನು ವ್ಯಕ್ತಿತ್ವವೊಂದು ಗಟ್ಟಿತನದ ಬೌದ್ಧಿಕ ಅಡಿಪಾಯ ರೂಪಿಸಿಕೊಳ್ಳುವ ಕ್ರಮ ಎಂದೇ ಪರಿಭಾವಿಸಿಕೊಳ್ಳಬೇಕು. ಪ್ರಾಥಮಿಕ ಸರ್ಕಾರಿ ಶಾಲೆಗಳನ್ನು ಈ ನೆಲೆಯಲ್ಲಿಯೇ ಬಲಪಡಿಸಬೇಕು. ಇಂಗ್ಲಿಷ್, ಹಿಂದಿ ಸೇರಿದಂತೆ ಇತರೆ ಭಾಷೆಗಳನ್ನು ಗ್ರಹಿಸಿಕೊಳ್ಳುವ ಶೈಕ್ಷಣಿಕ ಮಾದರಿಗಳನ್ನು ರೂಪಿಸಬೇಕು. ಅದಕ್ಕಾಗಿ ಶಿಕ್ಷಕ ಸಮುದಾಯವನ್ನು ಸಿದ್ಧಗೊಳಿಸಬೇಕು. ನೇಮಕಾತಿಯ ನಂತರ ಆಯಾ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಆದ್ಯತೆ ಪಡೆಯುವ ಭಾಷಾ ಶಿಕ್ಷಣದ ಹೊಸ ಆಯಾಮಗಳನ್ನು ಪರಿಚಯಿಸಿ ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಮೇಲೆ ಹಿಡಿತ ಸಾಧಿಸುವ ಸರಳ ಕ್ರಮಗಳ ಕಲಿಕೆಯ ಕಡೆಗೆ ಗಮನವೀಯುವ ಸಮಗ್ರ ನೀತಿಯನ್ನು ವಿನ್ಯಾಸಗೊಳಿಸಿ ಜಾರಿಗೆ ತರುವ ಬದ್ಧತೆಯನ್ನು ಸರ್ಕಾರದ ಶೈಕ್ಷಣಿಕ ಸಚಿವಾಲಯ ತೋರ್ಪಡಿಸಬೇಕು.
ಬದ್ಧತೆಯ ಕೊರತೆ
ಇಂಥ ಬದ್ಧತೆಯ ಕೊರತೆಯ ಕಾರಣಕ್ಕಾಗಿಯೇ ಪ್ರಾಥಮಿಕ ಹಂತದಿಂದಲೇ ಸರ್ಕಾರಿ ಶಾಲೆಯ ಮಕ್ಕಳು ಭಾಷೆಗೆ ಸಂಬಂಧಿಸಿದಂತೆ ಹಲವಾರು ಸಂಕೀರ್ಣ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂಗ್ಲಿಷ್ ಕಲಿಯಲೇಬೇಕು, ಕಲಿಯದಿದ್ದರೆ, ಆ ವಿಷಯದಲ್ಲಿ ಅನುತ್ತೀರ್ಣರಾದರೆ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂಬ ಸಾಮಾಜಿಕ ಅಂಜಿಕೆಯು ಅವರೊಳಗೆ ಕೀಳರಿಮೆಯನ್ನು ಮೂಡಿಸುತ್ತದೆ. ಕಾನ್ವೆಂಟ್ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳನ್ನು ಉದಾಹರಿಸಿ ಅವರೊಂದಿಗೆ ಹೋಲಿಸಿ ‘ಅವರ ಮುಂದೆ ನೀವೇನೂ ಅಲ್ಲ’ ಎಂಬ ತಿವಿತದೊಂದಿಗಿನ ಸಂಬಂಧಿಕರು ಮತ್ತು ಹಿರಿಯರ ಮಾತುಗಳು ಅವರೊಳಗಿನ ಸಕಾರಾತ್ಮಕ ದೃಷ್ಟಿಕೋನಗಳನ್ನೇ ಕೊಂದುಬಿಡುತ್ತವೆ.
ಇಂಗ್ಲಿಷ್ ಭಾಷೆಯ ವ್ಯಾಮೋಹದ ಗುಂಗಿನಲ್ಲಿ ಕನ್ನಡವನ್ನು ತುಚ್ಛವಾಗಿ ನೋಡುವ ಈ ಮನುಷ್ಯಮಿತಿಯು ಕೌಟುಂಬಿಕ ಆದ್ಯತೆಯನ್ನು ಪಡೆಯಬಾರದು. ಅಷ್ಟೇ ಅಲ್ಲ, ಆ ಆದ್ಯತೆಯು ಸರ್ಕಾರಿ ವಲಯದ ಪ್ರಾಶಸ್ತ್ಯವನ್ನೂ ಪಡೆಯಬಾರದು. ಹಾಗಾದರೆ, ಒಂದು ಪೀಳಿಗೆಯ ಭಾಷಿಕ ಸಾಮಥ್ರ್ಯ ಮತ್ತು ವೈಚಾರಿಕ ವಿವೇಚನೆಯ ಬೆಳವಣಿಗೆಯ ತೀವ್ರತೆಗೆ ಕುಂದುಂಟಾಗುತ್ತದೆ.
ಕನ್ನಡ ಶೈಕ್ಷಣಿಕ ಸಂಸ್ಕಾರದ ಶ್ರೇಷ್ಠತೆ
ಪ್ರಾಥಮಿಕ ಶಾಲಾಹಂತದ ಮಕ್ಕಳಿಗೆ ಕನ್ನಡದಿಂದಲೇ ಶಿಕ್ಷಣದ ಸಂಸ್ಕಾರ ಪ್ರಾಪ್ತವಾಗಬೇಕು ಎಂಬ ಪ್ರತಿಪಾದನೆಯು ಕೇವಲ ಭಾವುಕ ಲೇಪವನ್ನಷ್ಟೇ ಹೊಂದಿಲ್ಲ. ಅದು ಮಕ್ಕಳ ಕಲಿಕೆಯ ಸಾಮಥ್ರ್ಯಕ್ಕೆ ಬೇಕಾದ ಆಶಾವಾದವನ್ನು ನೆಲೆಗೊಳಿಸುವ ವೈಜ್ಞಾನಿಕ ಮಾರ್ಗೋಪಾಯದ ಆಧಾರವನ್ನೂ ಹೊಂದಿರುವುದನ್ನು ಗಮನಿಸಲೇಬೇಕು.
ಮಗುವೊಂದು ಮತ್ತೊಂದು ಭಾಷೆಯೊಂದಿಗೆ ಸಂಪರ್ಕ ಸಾಧಿಸುವುದಕ್ಕೆ ಮುನ್ನ ತಾನಿರುವ ಕೌಟುಂಬಿಕ ಪರಿಸರದ ಭಾಷಿಕ ಸಂವಹನದ ಕ್ರಮಗಳ ಅರಿವು ಹೊಂದಿರಬೇಕಾಗುತ್ತದೆ. ನೇರವಾಗಿ ಅದು ಬೇರೊಂದು ಭಾಷೆಯ ಸಂಪರ್ಕ ಸಾಧಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆ ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳನ್ನು ಕನ್ನಡದ ಪರಿಸರದಲ್ಲಿ ಬೆಳೆದ ಮಕ್ಕಳು ಕನ್ನಡದ ಮೂಲಕವೇ ಕಂಡುಕೊಳ್ಳಬೇಕಾಗುತ್ತದೆ. ನೇರವಾಗಿ ಇಂಗ್ಲಿಷ್ ಪದಗಳನ್ನು ಹೇಳಿ ಅದೇ ಭಾಷೆಯ ವಾಕ್ಯಗಳನ್ನು ಉಲ್ಲೇಖಿಸಿ ಆ ಭಾಷೆಯನ್ನು ಕಲಿಸಲಾಗದು. ಮಾತೃಭಾಷೆಯ ನೆರವಿನೊಂದಿಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳ ವ್ಯಾಕರಣ ಮತ್ತು ಅಭಿವ್ಯಕ್ತಿ ವಿಧಾನಗಳನ್ನು ಗೊತ್ತುಮಾಡಿಕೊಂಡರೆ ಮಕ್ಕಳೊಳಗೆ ಭಾಷಿಕ ಪ್ರಬುದ್ಧತೆ ಭಿನ್ನವಾಗಿ ನೆಲೆಯೂರುತ್ತದೆ. ಮಾತೃಭಾಷೆಯಲ್ಲಿ ಮಾತನಾಡುವ, ಮಾತನಾಡಿದ್ದನ್ನು ಸ್ಪಷ್ಟವಾಗಿ ಗ್ರಹಿಸುವ, ಗ್ರಹಿಸಿಕೊಂಡಿದ್ದನ್ನು ವಿವೇಚಿಸಿ ಅಭಿವ್ಯಕ್ತಿಸುವ ಕ್ರಮಗಳೊಂದಿಗೆ ಗುರುತಿಸಿಕೊಳ್ಳಲು ಅನುವಾಗುತ್ತದೆ. ಇದು ಪರಭಾಷೆಗಳ ಕಲಿಕೆಯಲ್ಲಿ ಗಮನಾರ್ಹ ಪಾತ್ರವಹಿಸುತ್ತದೆ.
ಭಾಷಾ ಸಂಕೀರ್ಣತೆಯ ಸವಾಲು
ಈ ಸೂಕ್ಷ್ಮವನ್ನು ಅರಿಯದೇ ಇದ್ದರೆ ಹೊಸ ಪೀಳಿಗೆಯ ಮಕ್ಕಳು ಭಾಷಾ ಸಂಕೀರ್ಣತೆಯನ್ನು ಎದುರಿಸುತ್ತಾರೆ. ಮುಂದಾಗುವ ಅಪಾಯವನ್ನು ಈಗಲೇ ಗ್ರಹಿಸಿರುವ ಕಾರಣಕ್ಕಾಗಿಯೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಉಳಿದೆಲ್ಲ ಪ್ರಚಲಿತ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಕೇವಲ ಭಾಷಿಕ ಸಮಸ್ಯೆಯನ್ನಷ್ಟೇ ಕಾಡಿಸಿಕೊಂಡು ಮಹತ್ವದ ಸಂದೇಶವನ್ನು ಸಾರುವಲ್ಲಿ ಯಶಸ್ವಿಯಾಗಿದೆ. ಸಾವಿರ ಆಂಗ್ಲಮಾಧ್ಯಮ ಶಾಲೆಗಳನ್ನು ಆರಂಭಿಸುವ ಯೋಚನೆಯನ್ನು ಅನುಷ್ಠಾನಗೊಳಿಸಬಾರದು ಎಂಬ ಸಮ್ಮೇಳನದ ಆಗ್ರಹ, ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವಂತೆ ಮುಂದಿಟ್ಟಿರುವ ಅದರ ಸಲಹಾತ್ಮಕ ನಿರ್ಣಯ ಮಹತ್ವಪೂರ್ಣ. ಆ ಮೂಲಕ ಸಮ್ಮೇಳನವು ಭಾಷೆಯ ಉಳಿವಿನ ಕುರಿತಾದ ತನ್ನ ಕಾಳಜಿ ಮತ್ತು ಬದ್ಧತೆಯನ್ನು ಸಾಬೀತುಪಡಿಸಿದೆ.
ಇಡೀ ಜಗತ್ತು ವಾಣಿಜ್ಯಿಕ ಲಾಭದ ಗುಂಗಿನೊಂದಿಗಿದ್ದಾಗ ಭಾಷೆ, ಸಂಸ್ಕøತಿ ಉಳಿವಿನ ಪ್ರಶ್ನೆಗಳು ಹಿನ್ನೆಲೆಗೆ ಸರಿಯುತ್ತವೆ. ಹಾಗೆ ಹಿನ್ನೆಲೆಗೆ ಸರಿಸುವ ಉದ್ದೇಶಪೂರ್ವಕ ಹುನ್ನಾರಗಳು ನಡೆದುಬಿಡುತ್ತವೆ. ವಾಣಿಜ್ಯಿಕ ಹಿತಾಸಕ್ತಿ ಮತ್ತು ಸಂಕುಚಿತ ರಾಜಕಾರಣದ ವಿಕಾರಗಳ ವಿಜೃಂಭಣೆಯ ಕಾರಣಕ್ಕಾಗಿಯೇ ಕನ್ನಡವು ಆಡಳಿತಾತ್ಮಕ ಆದ್ಯತೆಯ ಆವರಣದಿಂದ ಕ್ರಮೇಣ ಮರೆಯಾಗುವ ಮುನ್ಸೂಚನೆಗಳು ದೊರಕುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಸಮ್ಮೇಳನದ ಭಾಷಿಕ ನಿರ್ಣಯಗಳನ್ನು ಸಕಾಲಿಕ ಎಂದೇ ಪರಿಗಣಿಸಬೇಕಾಗುತ್ತದೆ.
ಮಾತೃಭಾಷೆಯೊಂದಿಗಿನ ಕಲಿಕಾನಂಟು
ಕಲಿಕೆಯು ಅತ್ಯಂತ ಸಹಜ ಪ್ರಕ್ರಿಯೆ. ಮಗುವಿನ ಬೆಳವಣಿಗೆಯ ವೇಳೆ ಕ್ರಮಾನಗುತವಾಗಿ ಆಂತರ್ಯದಲ್ಲಿ ಅಂತಸ್ಥಗೊಳ್ಳುವ ಪರಿಕಲ್ಪನೆ. ಇದನ್ನು ಒಳಗೊಳ್ಳುವ ಹಂಬಲದೊಂದಿಗೆ ಹೆಜ್ಜೆಯಿರಿಸುವ ಮಗು ಹಂತಹಂತವಾಗಿ ಪ್ರಬುದ್ಧತೆಯ ಹಾದಿಯನ್ನು ಕ್ರಮಿಸಲು ಸಾಧ್ಯವಾಗುತ್ತದೆ. ಈ ಹಾದಿಯಲ್ಲಿ ಮಾತೃಭಾಷೆಯದ್ದು ಅತ್ಯಂತ ಪ್ರಭಾವೀ ಪಾತ್ರ. ಆದರೆ, ಇದನ್ನು ನಿರ್ಲಕ್ಷಿಸಿ ಬೇರೊಂದು ಭಾಷೆಯನ್ನು ಮಕ್ಕಳ ಮನೋಲೋಕದಲ್ಲಿ ಒತ್ತಾಯಪೂರ್ವಕವಾಗಿ ಸೇರ್ಪಡೆಗೊಳಿಸುವ ಪ್ರಯತ್ನವು ಆಘಾತಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಸಮಗ್ರ ತಿಳುವಳಿಕೆಯನ್ನು ದಾಟಿಸುವುದಕ್ಕೆ ದಾರಿಮಾಡಿಕೊಡುವ ಕಲಿಕೆಯು ಭಾಷೆಯ ಪ್ರಸ್ತುತಿಯ ನೆರವಿನೊಂದಿಗೇ ಏರ್ಪಡಬೇಕಾಗುತ್ತದೆ.
ಮಗು ತನ್ನದಲ್ಲದ ಬೇರೊಂದು ಭಾಷೆಗೆ ಆರಂಭದಲ್ಲಿಯೇ ಒಗ್ಗಿಕೊಳ್ಳುವುದಿಲ್ಲ. ಅಪರಿಚಿತರನ್ನು ಕಂಡಾಕ್ಷಣ ಆತಂಕಗೊಳ್ಳುವ ಮನಸ್ಥಿತಿಯೇ ಬೇರೊಂದು ಭಾಷೆಯ ಅಭಿವ್ಯಕ್ತಿ ಎದುರುಗೊಂಡಾಗ ಪುನರಾವರ್ತಿತವಾಗುತ್ತದೆ. ಆಗ ಭಯ, ಆತಂಕ, ಅರ್ಥಕ್ಕೆಟುಕ್ಕುತ್ತಿಲ್ಲ ಎಂಬ ಕೊರಗುಗಳೆಲ್ಲವೂ ಒಟ್ಟಿಗೇ ದಾಳಿಗೈದು ಉದ್ದೇಶಿತ ಕಲಿಕೆ ಸಾಧ್ಯವಾಗುವುದೇ ಇಲ್ಲ. ಈ ಸೂಕ್ಷ್ಮತೆ ಅರಿತುಕೊಳ್ಳಲು ಭಾರೀ ಸಂಶೋಧನೆಯನ್ನೇನೋ ಕೈಗೊಳ್ಳಬೇಕಿಲ್ಲ. ಇಂಗ್ಲಿಷ್ನಿಂದಲೇ ಮಗುವಿನ ಕಲಿಕೆ ಆರಂಭವಾಗಬೇಕು ಎಂದು ವಾದಿಸುವ ಕನ್ನಡಿಗರು ತಮ್ಮ ತಮ್ಮ ಪ್ರಾಥಮಿಕ ಶಾಲಾ ದಿನಗಳನ್ನು ನೆನಪಿಸಿಕೊಂಡರೆ ಈ ಸೂಕ್ಷ್ಮ ಗಮನಕ್ಕೆ ಬರುತ್ತದೆ.
ಅಪಾಯದ ಮುನ್ಸೂಚನೆ
ಇಂಥ ಯಾವ ಸೂಕ್ಷ್ಮತೆಗಳನ್ನು ಪರಿಗಣಿಸದೇ ಪ್ರತಿಷ್ಠೆಯನ್ನಷ್ಟೇ ಕಾಡಿಸಿಕೊಂಡು ಮಕ್ಕಳ ಉದ್ಧಾರಕ್ಕೆ ಇಂಗ್ಲಿಷ್ ಮೂಲಕವೇ ಕಲಿಕೆಯ ಯಾನ ಶುರುವಾಗಬೇಕು ಎಂದು ಪ್ರತಿಪಾದಿಸುವುದು ತಾರ್ಕಿಕವೆನ್ನಿಸಿಕೊಳ್ಳುವುದಿಲ್ಲ. ಸಾಹಿತ್ಯ ಸಮ್ಮೇಳನಗಳಂಥ ವೇದಿಕೆಯ ಮೂಲಕ ಹೊರಹೊಮ್ಮುವ ಅಮೂಲ್ಯ ಚಿಂತನೆಗಳನ್ನು ಪರಿಗಣಿಸುವ ಆಡಳಿತಾತ್ಮಕ ಬದ್ಧತೆಯ ಕೊರತೆ ಎದ್ದುಕಾಣುತ್ತಿರುವಾಗ ಇಂಥ ವಿತಂಡವಾದಿ ದೃಷ್ಟಿಕೋನಗಳು ಕನ್ನಡದ ಮಕ್ಕಳ ಕಲಿಕಾ ಸಾಮಥ್ರ್ಯವನ್ನು ಮೊಟಕುಗೊಳಿಸುತ್ತವೆ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ನಮಗೆ ನಾಡಿನ ಕುರಿತಾದ ಹೆಮ್ಮೆಯ ಭಾವ ಮೂಡಿಸುವಂಥ ಗೀತೆಗಳನ್ನು ಶಿಕ್ಷಕರು ರಾಜ್ಯೋತ್ಸವದ ಸಂದರ್ಭದಲ್ಲಿ ಪರಿಚಯಿಸುತ್ತಿದ್ದರು.
ಕನ್ನಡದ ಕಲಿಕೆಯ ಜೊತೆಜೊತೆಗೇ ಇಂಥ ಪರಿಚಯಾತ್ಮಕ ಪ್ರಯತ್ನಗಳು ನಾಡಿನ ಕುರಿತಾದ ಹೆಮ್ಮೆಯನ್ನೂ ಹೆಚ್ಚಿಸುತ್ತಿದ್ದವು. ‘ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಕವಿತೆಯು ನಾಡಗೀತೆಯ ಆಡಳಿತಾತ್ಮಕ ಮನ್ನಣೆ ಪಡೆದು ಕಡ್ಡಾಯ ನಿಯಮಾವಳಿಯ ವ್ಯಾಪ್ತಿಗೆ ಬರುವುದಕ್ಕಿಂತ ಮುಂಚೆಯೇ ಕರ್ನಾಟಕದ ಶಾಲೆಗಳಲ್ಲಿ ಕನ್ನಡದ ವೈವಿಧ್ಯಮಯ ಜಗತ್ತು ಅದರ ಭಾಷಿಕ ಸೊಗಡಿನೊಂದಿಗೇ ಪರಿಚಿತವಾಗುತ್ತಿತ್ತು. ಈಗ ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಇಂಗ್ಲಿಷ್ ಮಾಧ್ಯಮದ ಆವರಣದ ಕೂಪಕ್ಕೆ ಮಕ್ಕಳನ್ನು ತಳ್ಳುವ ಪ್ರಯೋಗಾರ್ಥ ಪ್ರಯತ್ನದ ಹೆಜ್ಜೆಗಳು ಅಂಥ ವಾತಾವರಣವನ್ನು ಇಲ್ಲವಾಗಿಸುವ ಆತಂಕವನ್ನು ಮೂಡಿಸಿವೆ. ಮಕ್ಕಳ ಭಾಷಿಕ ಸಾಮಥ್ರ್ಯಕ್ಕೆ ಕೊಡಲಿಪೆಟ್ಟು ನೀಡುವ ಸುಳಿವು ನೀಡಿವೆ.
ಕಂಬಾರರ ಮೌಲಿಕ ಚಿಂತನೆ
ಸಮ್ಮೇಳನದ ಅಧ್ಯಕ್ಷರಾದ ಡಾ.ಚಂದ್ರಶೇಖರ ಕಂಬಾರ ಅವರ ನುಡಿಗಳಲ್ಲಿಯೇ ಆಡಳಿತವು ಕನ್ನಡ ಭಾಷೆಯ ಕುರಿತು ಯಾವ ನಿಲುವುಗಳನ್ನು ತಳೆಯಬೇಕು ಎಂಬ ಸ್ಪಷ್ಟ ಮಾರ್ಗದರ್ಶನವಿದೆ.“ಮಾತೃಭಾಷೆಯು ಬದುಕನ್ನು ಅಥಪೂರ್ಣಗೊಳಿಸುತ್ತದೆ. ಸಾಂಸ್ಕøತಿಕ ನಂಬಿಕೆ ಮತ್ತು ಮೌಲ್ಯಗಳು ಮಾತೃಭಾಷೆಯೊಂದಿಗೆ ತಳುಕುಹಾಕಿಕೊಂಡಿರುತ್ತವೆ. ಕನ್ನಡವನ್ನು ಸರಿಯಾಗಿ ಕಲಿಯುವುದರಿಂದ ಇಂಗ್ಲಿಷ್ ಸೇರಿದಂತೆ ಉಳಿದ ಭಾಷೆಗಳನ್ನು ಕಲಿಯುವುದಕ್ಕೂ ಸಹಾಯಕವಾಗುತ್ತದೆ” ಎಂಬ ಅವರ ನಿಲುವುಗಳು ಕೇವಲ ತಾತ್ವಿಕ ಚೌಕಟ್ಟನ್ನಷ್ಟೇ ಹೊಂದಿಲ್ಲ. ಸಮಸ್ತ ಕನ್ನಡಿಗರ ಅನುಭವಕ್ಕೆ ಬಂದ ಮೌಲಿಕ ಅಂಶಗಳನ್ನಾಗಿಯೂ ನಾವು ಅವುಗಳನ್ನು ಗ್ರಹಿಸಬೇಕು.
ಈ ರೀತಿಯಾಗಿ ಗ್ರಹಿಸುವ ಸಂಯಮ ಆಡಳಿತಾತ್ಮಕ ವಲಯದಿಂದ ವ್ಯಕ್ತವಾದರೆ ಕನ್ನಡ ಭಾಷೆಯು ಭವಿಷ್ಯದಲ್ಲಿ ಆತಂಕ ಎದುರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವಾಣಿಜ್ಯಿಕ ಹಿತಾಸಕ್ತಿಯ ಪ್ರಲೋಭನೆಗೆ ಒಳಗಾಗಿ ಭಾಷೆಗೆ ಸಂಬಂಧಿಸಿದಂತೆ ಅತಾರ್ಕಿಕವಾದ, ಪ್ರಾಯೋಗಿಕವಲ್ಲದ ತೀರ್ಮಾನಗಳು ಪ್ರಕಟವಾಗುವುದಿಲ್ಲ.
ಇಂಗ್ಲಿಷ್ ಗುಂಗಿನ ಕೃತಕತೆ
ಇಂಗ್ಲಿಷ್ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ಭಾಷೆಯಾಗಿ ನಮ್ಮೊಳಗೆ ಬೆರೆತುಹೋಗಬೇಕಿಲ್ಲ. ಆ ಭಾಷೆಯನ್ನು ಬಲವಂತವಾಗಿ ಪ್ರಾಥಮಿಕ ಹಂತದಿಂದಲೇ ಮಕ್ಕಳೊಳಗೆ ಬೆರೆಸುವ ಪ್ರಯತ್ನವು ಅವರ ಬೆಳವಣಿಗೆಯ ಸಹಜತೆಗೆ ಕಡಿವಾಣ ಬಿಗಿಯುತ್ತದೆ. ಆ ಸಹಜತೆಯ ಜಾಗವನ್ನು ಕೃತಕತೆ ಆವರಿಸಿಕೊಂಡುಬಿಡುತ್ತದೆ.
ಇಂಗ್ಲಿಷ್ ಗುಂಗಿನ ಕೃತಕ ಚೌಕಟ್ಟಿನೊಳಗೆ ಬಂಧಿಯಾಗಿ ಕನ್ನಡದ ಬಗ್ಗೆ ಕೀಳರಿಮೆ ರೂಪುಗೊಳ್ಳುತ್ತದೆ. ಇಂಗ್ಲಿಷ್ ಶ್ರೇಷ್ಠ ಎಂಬ ತಪ್ಪುಕಲ್ಪನೆಯನ್ನೇ ಮಕ್ಕಳು ಪರಮ ಆದರ್ಶವನ್ನಾಗಿ ಸ್ವೀಕರಿಸುತ್ತಾರೆ. ಹಾಗಾದಾಗ ಮಾತೃಭಾಷೆ, ಅದರೊಂದಿಗಿನ ಕರಳುಬಳ್ಳಿಯ ಸಂಬಂಧ, ಸಂಸ್ಕøತಿಯ ವೈವಿಧ್ಯಮಯ ಸ್ವರೂಪ ಅವರಿಂದ ಕ್ರಮೇಣ ದೂರವಾಗುತ್ತಾ ಹೋಗುತ್ತದೆ. ಅವರನ್ನು ಹೀಗೆ ಉದ್ದೇಶಪೂರ್ವಕವಾಗಿ ಕನ್ನಡದ್ದೇ ಪರಂಪರೆಯ ಬೇರುಗಳಿಂದ ಬೇರ್ಪಡಿಸುವಂಥ ಹೆಜ್ಜೆಗಳು ಭಾಷಿಕ ಸಂದಿಗ್ಧತೆಯನ್ನೇ ಸೃಷ್ಟಿಸುತ್ತವೆ.
ಕರುಳುಬಳ್ಳಿಯ ಸಂಬಂಧ
ಮಕ್ಕಳು ಕನ್ನಡದೊಂದಿಗಿನ ಕರುಳುಬಳ್ಳಿಯ ಸಂಬಂಧ ಕಡಿದುಕೊಂಡರೆ ಏನಾಗುತ್ತದೆ? ಬೆಳೆದು ದೊಡ್ಡವರಾದಾಗ ಕನ್ನಡದ ಭಾಷಿಕ ಸೊಗಡನ್ನೇ ವ್ಯಂಗ್ಯಕ್ಕೀಡುಮಾಡುತ್ತಾರೆ. ಕನ್ನಡದ ಉಳಿವಿನ ಕುರಿತು ಜನಪ್ರಿಯ ಶೈಲಿಯಲ್ಲಿ ಸಿನಿಮಾ ಹೀರೋಗಳು ಹೇಳುವ ಡೈಲಾಗ್ಗಳನ್ನಷ್ಟೇ ಕೇಳಿ ಚಪ್ಪಾಳೆ ಹೊಡೆದು ಆ ಕ್ಷಣಕ್ಕೇ ಮರೆತುಬಿಡುವ ಮನಃಸ್ಥಿತಿಗೆ ಪಕ್ಕಾಗಿಬಿಡುತ್ತಾರೆ. ಇಂಗ್ಲಿಷ್ ಮಾತನಾಡಿದರಷ್ಟೇ ಮರ್ಯಾದೆ ಎಂದುಕೊಂಡು ಪ್ರತಿಷ್ಠೆ ಮೆರೆಯುವ ಕೃತಕತೆಯನ್ನೇ ಗುಣಸ್ವಭಾವವನ್ನಾಗಿಸಿಕೊಳ್ಳುತ್ತಾರೆ.
ಕನ್ನಡದಲ್ಲೇ ಲಭ್ಯವಾಗುವ ಅದೆಷ್ಟೋ ಜ್ಞಾನ ಮಾದರಿಗಳ ಸಂಪರ್ಕದಿಂದ ದೂರವೇ ಉಳಿದುಬಿಡುತ್ತಾರೆ. ಎಲ್ಲದಕ್ಕೂ ಇಂಗ್ಲಿಷ್ನ್ನೇ ನೆಚ್ಚಿಕೊಂಡು ಅದರ ಮೂಲಕ ಹರಿದುಬರುವ ಮಾಹಿತಿಗಳನ್ನು ಮೇಲ್ನೋಟಕ್ಕಷ್ಟೇ ಗ್ರಹಿಸುವ ಅವಸರದ ಮಾದರಿಯನ್ನೇ ಅನುಸರಿಸುತ್ತಾರೆ. ವಿವಿಧ ಭಾಷೆಗಳಲ್ಲಿ ಲಭ್ಯವಾಗುವ ಮಾಹಿತಿಗಳನ್ನುಜ್ಞಾನಸಂಪನ್ಮೂಲವಾಗಿಸಿಕೊಳ್ಳುವ ಸಂಯಮ ರೂಢಿಸಿದ ಕನ್ನಡ ಓದಿನ ಸೊಗಡು ಸವಿಯುವ ಅಪೂರ್ವ ಅವಕಾಶದಿಂದ ಅವರು ವಂಚಿತರಾಗುತ್ತಾರೆ.ಮುಂದೆ ಎದುರಾಗಲಿರುವ ಅಂಥದ್ದೊಂದು ಸನ್ನಿವೇಶದಿಂದ ಕನ್ನಡದ ಮಕ್ಕಳನ್ನು ಪಾರುಮಾಡಬೇಕಿದೆ. ಸಮ್ಮೇಳನದ ನಿರ್ಣಯಗಳನ್ನು ಗಂಭೀರವಾಗಿ ಪರಿಗಣಿಸಿ ಕನ್ನಡಕ್ಕಿರುವ ಉಜ್ವಲ ಭವಿಷ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಭಾಷೆಗೆ ಸಂಬಂಧಿಸಿದಂತೆ ಕವಲು ಹಾದಿ ತುಳಿಯುವ ರಾಜಕಾರಣದ ಸಂಕುಚಿತ ವ್ಯಾಕರಣವನ್ನುಭಗ್ನಗೊಳಿಸಬೇಕಿದೆ.
-ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ
ಇಂದಿನಿಂದಲೇ ಜಾರಿಗೆ ಬರುವಂತೆ ಕಚ್ಚಾ ಸೆಣಬಿನ ಮೇಲಿನ ಬೆಲೆ ಮಿತಿ ರದ್ದುಗೊಳಿಸಲು ಕೇಂದ್ರ ನಿರ್ಧಾರ

ಸುದ್ದಿದಿನ ಡೆಸ್ಕ್ : ಇಂದಿನಿಂದಲೇ ಜಾರಿಗೆ ಬರುವಂತೆ ಕಚ್ಚಾ ಸೆಣಬಿನ ಮೇಲಿನ ಬೆಲೆ ಮಿತಿಯನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕಳೆದ ವರ್ಷ ಸೆಪ್ಟಂಬರ್ 30ರಂದು ಸೆಣಬು ಕಾರ್ಖಾನೆಗಳು ಮತ್ತು ಇತರೆ ಬಳಕೆದಾರರು ಟಿಡಿ5 ದರ್ಜೆಯ ಸೆಣಬು ಖರೀದಿಸಲು ಪ್ರತಿ ಕ್ವಿಂಟಾಲ್ ಗೆ 6ಸಾವಿರದ 500 ರೂಪಾಯಿ ಬೆಲೆ ಮಿತಿ ನಿಗದಿಪಡಿಸಲಾಗಿತ್ತು. ಕಚ್ಚಾ ಸೆಣಬು ವ್ಯಾಪಾರದ ಮಾರುಕಟ್ಟೆಯ ಎಲ್ಲ ಆಯಾಮಗಳನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ದರ ಮಿತಿ ತೆರವಿನಿಂದ ರೈತರು, ಕಾರ್ಖಾನೆಗಳು ಮತ್ತು ಎಂಎಸ್ಎಂ ಇ ವಲಯಕ್ಕೆ ಸಹಾಯಕವಾಗಲಿದೆ ಎಂದು ಜವಳಿ ಸಚಿವಾಲಯ ಹೇಳಿದೆ. 40 ಲಕ್ಷ ರೈತರಲ್ಲದೆ, ಸುಮಾರು 7 ಲಕ್ಷ ಜನರು ಸೆಣಬು ವ್ಯಾಪಾರವನ್ನು ಅವಲಂಬಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಶುಕ್ರವಾರ | ಬೆಳಗಿನ ಪ್ರಮುಖ ಸುದ್ದಿಗಳು

ಶುಕ್ರವಾರ | ಬೆಳಗಿನ ಪ್ರಮುಖ ಸುದ್ದಿಗಳು
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದೂ ಕೂಡ ಬೆಂಗಳೂರಿನಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ವೀಕ್ಷಣೆಯನ್ನು ಮುಂದುವರೆಸಲಿದ್ದಾರೆ. ಸಾಯಿ ಬಡಾವಣೆ, ನಾಗಪ್ಪ ರೆಡ್ಡಿ ಬಡಾವಣೆ ಮತ್ತು ಪೈ ಬಡಾವಣೆಗಳಿಗೆ ಅವರು ಭೇಟಿ ನೀಡಲಿದ್ದಾರೆ.
- ಪರಿಷ್ಕೃತ ಕ್ರಿಯಾ ಯೋಜನೆ 2015 ರಲ್ಲಿ ಲೋಪವಿದೆ ಎಂಬ ಕಾರಣಕ್ಕೆ ಜಲ ಮೂಲಗಳ ಬಳಕೆಯನ್ನು ವಸತಿ ಉದ್ದೇಶಕ್ಕೆ ಪರಿವರ್ತಿಸುವ ಕುರಿತಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊರಡಿಸಿದ್ದ ಅಧಿಸೂಚನೆಯನ್ನು ತಕ್ಷಣವೇ ರದ್ದುಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡಿಎ ಆಯುಕ್ತರಿಗೆ ಸೂಚಿಸಿದ್ದಾರೆ. ಅದರಂತೆ ಬಿಡಿಎ ಆಯುಕ್ತರು ಅಧಿಸೂಚನೆ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
- ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ಉಡುಪಿ, ವಿಜಯಪುರ, ಬೆಳಗಾವಿ, ತಿಪಟೂರು ಸೇರಿ ಹಲವು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ವತಃ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
- ಬೆಸ್ಕಾಂನ ಎಲ್ಲ ಕಾರ್ಯ ಮತ್ತು ಪಾಲನ ವಿಭಾಗಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರದಂದು ಅಂದರೆ, ನಾಳೆ ಮಧ್ಯಾಹ್ನ 3 ಗಂಟೆಯಿಂದ 5.30ರವರೆಗೆ ಗ್ರಾಹಕ ಸಂವಾದ ಸಭೆಗಳನ್ನು ನಡೆಸಲಾಗುವುದು. ಗ್ರಾಹಕರು ವಿದ್ಯುತ್ಗೆ ಸಂಬಂಧಿಸಿದ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.
- ಜೈಪುರದಲ್ಲಿ ಇಂದು ನಡೆಯಲಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ನಂತರ ಅವರು ಪಕ್ಷದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
- ಇಂದಿನಿಂದಲೇ ಜಾರಿಗೆ ಬರುವಂತೆ ಕಚ್ಚಾ ಸೆಣಬಿನ ಮೇಲಿನ ಬೆಲೆ ಮಿತಿಯನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಳೆದ ವರ್ಷ ಸೆಪ್ಟಂಬರ್ 30ರಂದು ಸೆಣಬು ಕಾರ್ಖಾನೆಗಳು ಮತ್ತು ಇತರೆ ಬಳಕೆದಾರರು ಟಿಡಿ5 ದರ್ಜೆಯ ಸೆಣಬು ಖರೀದಿಸಲು ಪ್ರತಿ ಕ್ವಿಂಟಾಲ್ ಗೆ 6ಸಾವಿರದ 500ರೂಪಾಯಿ ಬೆಲೆ ಮಿತಿ ನಿಗದಿಪಡಿಸಲಾಗಿತ್ತು. ಕಚ್ಚಾ ಸೆಣಬು ವ್ಯಾಪಾರದ ಮಾರುಕಟ್ಟೆಯ ಎಲ್ಲ ಆಯಾಮಗಳನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
- ಐಪಿಎಲ್ ಟಿ-20 ಕ್ರಿಕೆಟ್ನಲ್ಲಿಂದು ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.
- ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
- ಇದೇ 22ರಂದು ಫಿಲ್ಮಾಹಾಲಿಕ್ ಫೌಂಡೇಶನ್ ವತಿಯಿಂದ 3ನೇ ವರ್ಷದ ಕರ್ನಾಟಕ ಯುವ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ ಮತ್ತು ಮೈಸೂರು ಅಂತಾರಾಷ್ಟ್ರೀಯ ಜಲ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ಮೈಸೂರಿನ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮೈಸೂರು ಅಂತರಾಷ್ಟ್ರೀಯ ಜಲ ಚಲನಚಿತ್ರೋತ್ಸವದ ಮುಖ್ಯ ಉದ್ದೇಶ ಹೊಸ ತಲೆಮಾರಿನ ಚಲನಚಿತ್ರ ತಯಾರಕರಿಗೆ ಕಲಾತ್ಮಕ ಸೃಜನಶೀಲತೆಯನ್ನು ಪೋಷಿಸಿ ಮತ್ತು ಉತ್ತೇಜಿಸಿ ಅವರ ಚಲನಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪ್ರದರ್ಶಿಸುವುದೇ ಆಗಿದೆ. 91ಕ್ಕೂ ಹೆಚ್ಚು ದೇಶಗಳ ಚಲನಚಿತ್ರ ತಯಾರಕರು ಭಾಗವಹಿಸಲಿದ್ದಾರೆ.
- ಚಾಮರಾಜನಗರ ತಾಲೂಕಿನ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು ಜಲಾಶಯಗಳು ಯಾವುದೇ ಸಮಯದಲ್ಲಿ ಭರ್ತಿಯಾಗಬಹುದಾಗಿದೆ. ಜಲಾಶಯಗಳ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಾವೇರಿ ನೀರಾವರಿ ನಿಗಮದ ಕಬಿನಿ ನಾಲೆಗಳ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮನವಿ ಮಾಡಿದ್ದಾರೆ.
- ಮಂಡ್ಯದಲ್ಲಿ ಭಾರಿ ಮಳೆಯಿಂದ ಬೀಡಿ ಕಾಲೋನಿಯ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲಾಧಿಕಾರಿ ಎಸ್. ಅಶ್ವತಿ ಬೀಡಿ ಕಾಲೋನಿಗೆ ಭೇಟಿ ನೀಡಿ, ಪರಿಶೀಲಿಸಿ ಸದ್ಯಕ್ಕೆ ಕಾಲೋನಿಯ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
- ಮುಂಗಾರು ಋತುವಿನಲ್ಲಿ ವಿದ್ಯುತ್ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಕೂಡಲೆ ಅಗತ್ಯ ಪ್ರಮಾಣದ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ವಿದ್ಯುತ್ ಉತ್ಪಾದನಾ ಸಂಸ್ಥೆಗಳಿಗೆ ಸೂಚಿಸುವಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರಕಾರ ಸಲಹೆ ನೀಡಿದೆ. ರಾಜ್ಯ ಸರ್ಕಾರಗಳು ವಿದ್ಯುತ್ ಉತ್ಪಾದನೆಗಾಗಿ ಕೂಡಲೇ ಅಗತ್ಯ ಕಲ್ಲಿದ್ದಲು ಪ್ರಮಾಣದ ಶೇಕಡ10ರಷ್ಟನ್ನು ಆಮದು ಮಾಡಿಕೊಳ್ಳುವಂತೆ ಹಾಗೂ ಈ ತಿಂಗಳ 31ರೊಳಗೆ ಕಲ್ಲಿದ್ದಲು ಆಮದು ಆರ್ಡರ್ ನೀಡುವಂತೆ ಸಚಿವ ಆರ್ಕೆ ಸಿಂಗ್ ಸೂಚಿಸಿದ್ದಾರೆ.
- ಇದೇ 21 ಮತ್ತು 22ರಂದು ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಯಾದಗಿರಿ ಜಿಲ್ಲೆಯಲ್ಲಿ ನಡೆಯಲಿದ್ದು, 6 ಸಾವಿರದ 625 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. 28 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ರಾಗಪ್ರಿಯಾ ಯಾದಗಿರಿಯಲ್ಲಿ ತಿಳಿಸಿದ್ದಾರೆ.
- ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೇ 21ರಂದು ನಿಗದಿಯಾಗಿದ್ದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಮೇ 27ಕ್ಕೆ ಮುಂದೂಡಲಾಗಿದೆ. ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿರುವುದರಿಂದ ಚುನಾವಣಾ ನೀತಿ ಸಂಹಿತೆ ಹಾಗೂ ಶಿಕ್ಷಣ ಇಲಾಖೆಯ ಟಿಇಟಿ ಪರೀಕ್ಷೆಯನ್ನು ಮೇ 21 ರಂದು ನಿಗದಿಗೊಳಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
- ದಾವಣಗೆರೆ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಯಿಂದ ಕೆರೆ ಕಟ್ಟೆಗಳಿಗೆ ನೀರು ಬಂದಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯ ಅಬ್ಬರಕ್ಕೆ ಹರಿಹರ ಮತ್ತು ಹೊನ್ನಾಳಿ ತಾಲ್ಲೂಕಿನಲ್ಲಿ ಕೊಯ್ಲಿಗೆ ಬಂದಿದ್ದ ಭತ್ತ ನೆಲ ಕಚ್ಚಿದ್ದು, 1 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಬೆಳೆ ಹಾಳಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
- ಅವಧಿಗೆ ಮುನ್ನವೇ ಮುಂಗಾರು ಅಪ್ಪಳಿಸಿರುವ ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಡುವೆ ಇಂದು ಕೂಡ ಕೇರಳ ರಾಜಧಾನಿ ತಿರುವನಂತಪುರಂ, ಕೊಲ್ಲಂ ಸೇರಿದಂತೆ ಒಟ್ಟು 12 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಿಸಿದೆ.
- ವಾರ್ಷಿಕ ಅಮರನಾಥ ಯಾತ್ರೆ ಹಾಗೂ ಮಚಲಿ ಯಾತ್ರೆಯ ಹಿನ್ನೆಲೆಯಲ್ಲಿ ಸೇನಾ ಪಡೆಗಳ ಹಾಗೂ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಭದ್ರತಾ ಪರಿಶೀಲನೆ ನಡೆಸಿದರು. ಲೆಫ್ಟಿನೆಂಟ್ ಜನರಲ್ ಮಂಜಿಂದರ್ ಸಿಂಗ್ ನೇತೃತ್ವದಲ್ಲಿ ಸೇನಾ ಪಡೆಗಳ ತಂಡ ಜಮ್ಮು ವಲಯದ ನಗ್ರೋಟಾ ಎಂಬಲ್ಲಿ ಭದ್ರತಾ ಸಿದ್ಧತೆಗಳ ಪರಿಶೀಲನೆ ನಡೆಸಿತು. ಜಮ್ಮು ಪೊಲೀಸ್ ಇಲಾಖೆಯ ಹೆಚ್ಚುವರಿ ಮಹಾ ನಿರ್ದೇಶಕ ಮುಖೇಶ್ ಸಿಂಗ್ ಹಾಗೂ ಗುಪ್ತಚರ ದಳದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
- ಐಪಿಎಲ್ ಕ್ರಿಕೆಟ್ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್ಗಳಿಂದ ಜಯಗಳಿಸಿದೆ. ಟೈಟನ್ಸ್ ತಂಡ ಒಡ್ಡಿದ 169ರನ್ಗಳ ಗುರಿ ಬೆನ್ನೆತ್ತಿದ ಬೆಂಗಳೂರು ತಂಡ ಇನ್ನೂ 8ಎಸೆತಗಳು ಬಾಕಿ ಇರುವಂತೆ 2 ವಿಕೆಟ್ ನಷ್ಟಕ್ಕೆ 170ರನ್ಗಳಿಸಿ ಗೆಲುವಿನ ನಗೆ ಬೀರಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪರಿಶಿಷ್ಟ ಸಮುದಾಯಕ್ಕೆ ಹೆಚ್ಚಿನ ಸರ್ಕಾರಿ ಸೌಲಭ್ಯ ಅಗತ್ಯ : ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ

ಸುದ್ದಿದಿನ, ಬೆಂಗಳೂರು : ಪರಿಶಿಷ್ಟ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯ ದೊರೆಯಬೇಕೆಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ಹೇಳಿದ್ದಾರೆ.
ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಅನೇಕ ಸಮುದಾಯಗಳ ಜತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಹಕ್ಕು ಮತ್ತು ಅವಕಾಶಗಳಿಂದ ವಂಚಿತವಾಗಿವೆ. ದೂರದರ್ಶನ ಕಾರ್ಯಕ್ರಮಗಳ ಮೂಲಕ ಈ ಸಮುದಾಯ ಜಾಗೃತಗೊಳಿಸಿ, ಅವರಿಗೆ ಸರ್ಕಾರಿ ಸೌಲಭ್ಯ ದೊರಕುವಂತೆ ಮಾಡಬೇಕು ಎಂದು ಸಚಿವರು ಹೇಳಿದರು. ಕಾರ್ಯಕ್ರಮದಲ್ಲಿ ದೂರದರ್ಶನ ಮತ್ತು ಆಕಾಶವಾಣಿಯ ಹಿರಿಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ7 days ago
ಇಂದಿನಿಂದಲೇ ಈ ರಾಶಿಗಳಿಗೆ ಧನ ಲಾಭ, ಸುಖ ಸಂಪತ್ತು ಪ್ರಾಪ್ತಿ! ಶನಿವಾರ ರಾಶಿ ಭವಿಷ್ಯ-ಮೇ-14,2022
-
ಅಂತರಂಗ7 days ago
ರಾಜ್ಯದ ಗಡಿಯಿಂದ ದೇಶದ ಗಡಿಗೆ ಪ್ರವಾಸದ ಕ್ಷಣಗಳು..!
-
ಬಹಿರಂಗ5 days ago
ಡಾಕಿನಿ ಎಂದರೆ ಬೌದ್ಧ ಭಿಕ್ಕುಣಿ / ಬೌದ್ಧ ಯೋಗಿಣಿ
-
ನೆಲದನಿ5 days ago
ಕಾಯಕ ಜೀವಿಗಳ ಚಳುವಳಿಯಲ್ಲಿ ಬುದ್ಧಪ್ರಜ್ಞೆ
-
ಬಹಿರಂಗ5 days ago
ದಯೆಯಾಗಿ ಚಳುವಳಿ ಕೈಗೊಂಡ ಮಹಾ ಜ್ಞಾನಿ ಬುದ್ಧ
-
ನಿತ್ಯ ಭವಿಷ್ಯ5 days ago
ಸೋಮವಾರ- ರಾಶಿ ಭವಿಷ್ಯ ಮೇ-16,2022 : ಈ ಚಂದ್ರ ಗ್ರಹಣದಿಂದಾಗಿ ಈ ರಾಶಿಗಳಿಗೆ ಸಂತೋಷವೇ ಸಂತೋಷ!
-
ದಿನದ ಸುದ್ದಿ4 days ago
ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ
-
ನಿತ್ಯ ಭವಿಷ್ಯ6 days ago
ಭಾನುವಾರ- ರಾಶಿ ಭವಿಷ್ಯ ಮೇ-15,2022