ದಿನದ ಸುದ್ದಿ
ನಡೆದಾಡುವ ದೇವರು ನನ್ನ ಪಾಲಿಗೆ ‘ನಡೆದಾಡುತ್ತಿದ್ದ ಬಸವಣ್ಣ’ : ಸಿದ್ದರಾಮಯ್ಯ

ಸುದ್ದಿದಿನ ಡೆಸ್ಕ್ : ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಲಿಂಗೈಕ್ಯದಿಂದ ನಾನು ಆಘಾತಕ್ಕೀಡಾಗಿದ್ದೇನೆ. ಇತ್ತೀಚಿನ ಕೆಲವು ದಿನಗಳಲ್ಲಿ ಅವರ ಆರೋಗ್ಯದಲ್ಲಿ ನಡೆಯುತ್ತಿದ್ದ ಏರುಪೇರು ನಮ್ಮೆಲ್ಲರನ್ನೂ ಆತಂಕಕ್ಕೀಡುಮಾಡಿತ್ತು. ಇಂತಹದ್ದೊಂದು ದಿನ ಎದುರಾಗಬಹುದೆಂಬ ನಮ್ಮ ಭಯ ನಿಜವಾಗಿದೆ. ಸಾಧನೆಯ ಮೂಲಕ ಲೋಕವನ್ನೇ ಗೆದ್ದಿರುವ ಸ್ವಾಮಿಗಳು ಕೊನೆಗೂ ಸಾವನ್ನು ಗೆಲ್ಲಲಾಗದೆ ಶರಣಾಗಿ ನಮ್ಮನ್ನು ಅನಾಥರಾಗಿಸಿದ್ದಾರೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತುಂಬಿದ ಹೃದಯದಿಂದ ಹಾರೈಸುತ್ತೇನೆ. ದು:ಖದಲ್ಲಿರುವ ಸಮಸ್ತ ಭಕ್ತಾಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ನಾವು ಬಸವಣ್ಣನವರನ್ನು ಕಣ್ಣಾರೆ ನೋಡಿಲ್ಲ, ನಾನು ಡಾ.ಶಿವಕುಮಾರ ಸ್ವಾಮೀಜಿಗಳಲ್ಲಿ ಬಸವಣ್ಣನನ್ನು ಕಾಣುತ್ತಿದ್ದೆ. ಅವರನ್ನು ‘’ನಡೆದಾಡುವ ದೇವರು’’ ಎನ್ನುತ್ತಾರೆ. ನನ್ನ ಪಾಲಿಗೆ ಅವರು ‘’ನಡೆದಾಡುತ್ತಿದ್ದ ಬಸವಣ್ಣ’’ ಆಗಿದ್ದರು. ಅಂತಹದ್ದೊಂದು ಆದರ್ಶ ಬದುಕನ್ನು ಅವರು ಬದುಕಿ ತೋರಿಸಿ ನಮಗೆ ಮಾದರಿಯಾಗಿ ಬಿಟ್ಟು ಹೋಗಿದ್ದಾರೆ. ಆ ದಾರಿಯಲ್ಲಿ ನಡೆಯುವುದೇ ಸ್ವಾಮೀಜಿಗಳಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ.
ವೈಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ಬಸವಣ್ಣ ನನ್ನ ನಾಯಕ. ಇದಕ್ಕಾಗಿಯೇ ಬಸವ ಜಯಂತಿಯಂದೇ ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವನು. ಸ್ವಾಮೀಜಿಗಳು ಬಸವಣ್ಣನವರ ತತ್ವಕ್ಕೆ ನೂರಕ್ಕೆ ನೂರರಷ್ಟು ಬದ್ಧರಾಗಿ ಬದುಕಿದವರು. ಹಸಿದವರಿಗೆ ಅನ್ನ, ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ಕಲ್ಪಿಸಲು ತಮ್ಮ ಜೀವವನ್ನೇ ತೇದ ಸ್ವಾಮೀಜಿಯವರ ಬದುಕು ಮತ್ತು ಸಾಧನೆ ನಮಗೆಲ್ಲ ಮಾದರಿ.
ಮುಖ್ಯಮಂತ್ರಿಯಾಗಿದ್ದಾಗ ನಾನು ಅನುಷ್ಠಾನಗೊಳಿಸಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಮೊದಲಾದ ಅನೇಕ ಕಾರ್ಯಕ್ರಮಗಳಿಗೆ ಸ್ವಾಮೀಜಿಯವರ ಸೇವಾ ಕಾರ್ಯಕ್ರಮಗಳೂ ಕೂಡಾ ಸ್ವೂರ್ತಿಯಾಗಿತ್ತು.
ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದುದು. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಅನೇಕ ಸಂಸ್ಥೆಗಳನ್ನು ಕಟ್ಟಿ ಮುನ್ನಡೆಸಿದ್ದ ಸ್ವಾಮೀಜಿಗಳು ಕೊನೆಯ ವರೆಗೂ ಶಿಕ್ಷಣವನ್ನು ಸೇವೆಯೆಂದೇ ತಿಳಿದಿದ್ದರೆ ಹೊರತು ಅದನ್ನು ವ್ಯಾಪಾರ-ಉದ್ಯಮ ಮಾಡಲು ಹೋಗಲೇ ಇಲ್ಲ. ಶಿಕ್ಷಣ ಕ್ಷೇತ್ರವೇ ಉದ್ಯಮವಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಾಮೀಜಿಯವರ ಈ ಸಂದೇಶವನ್ನು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ ಮತ್ತು ಶಿಕ್ಷಣೋದ್ಯಮಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಉದ್ಧಾನ ಸ್ವಾಮೀಜಿಗಳಿಂದ ಪ್ರಾರಂಭವಾಗಿದ್ದ ಅನ್ನ-ಅರಿವುಗಳ ದಾಸೋಹವನ್ನು ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ಸರ್ವರನ್ನೂ ಒಳಗೊಂಡ ದಾಸೋಹವನ್ನಾಗಿ ವಿಸ್ತರಿಸಿದರು. ಸ್ವಾಮೀಜಿಗಳ ತುಮಕೂರಿನ ಸಿದ್ದಗಂಗಾ ಮಠ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ನೇತೃತ್ವದಲ್ಲಿ ಒಂದು ವಿಶ್ವವಿದ್ಯಾಲಯವೇ ಯಾಕೆ, ಒಂದು ಸರ್ಕಾರವೇ ಮಾಡಬೇಕಾಗಿರುವ ಕೆಲಸವನ್ನು ಮಾಡುತ್ತಾ ಬಂದಿದೆ.
ಅಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿರುವವರು ಇಂದು ವಿಶ್ವದಾದ್ಯಂತ ಇದ್ದಾರೆ. ಸ್ವಾಮೀಜಿಗಳು ಎಂದೂ ಹೆಚ್ಚು ಮಾತನಾಡಿದವರಲ್ಲ, ಮಾತಿಗಿಂತ ಮೌನದಲ್ಲಿಯೇ ಸಾಧನೆ ಮಾಡಿದವರು. ಅವರು ನುಡಿದಂತೆಯೇ ನಡೆದವರು. ಕಾಯಕಪ್ರಜ್ಞೆಯನ್ನು ಬಾಳಿ ಬದುಕಿದವರು. ಕೊನೆಗೂ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಅವರೇ ಸಾಟಿ ಹೊರತು ಆ ಸ್ಥಾನದಲ್ಲಿ ಭವಿಷ್ಯದಲ್ಲಿಯೂ ಇನ್ನೊಬ್ಬರನ್ನು ಊಹಿಸುವುದು ಕಷ್ಟ.
ಸ್ವಾಮೀಜಿಗಳ ಲಿಂಗೈಕದಿಂದ ರಾಜ್ಯ,ದೇಶಕ್ಕೆ ಮಾತ್ರವಲ್ಲ ಇಡೀ ಮನುಕುಲಕ್ಕೆ ಆಗಿರುವ ನಷ್ಟವನ್ನು ಶಬ್ದಗಳಿಂದ ಹೇಳಿಕೊಳ್ಳಲು ಸಾಧ್ಯ ಇಲ್ಲ. ನಮ್ಮಿಂದ ಮರೆಯಾದ ಸ್ವಾಮೀಜಿಗಳು ಒಂದು ದೊಡ್ಡ ನಿರ್ವಾತವನ್ನು ಬಿಟ್ಟು ಹೋಗಿದ್ದಾರೆ, ಅದನ್ನು ತುಂಬಲು ಬಹುಷ: ಮುಂದೆಯೂ ಯಾರಿಗೂ ಸಾಧ್ಯವಾಗಲಾರದು. ಸ್ವಾಮೀಜಿಯವರಿಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ನೀಡಬೇಕೆಂದು ನಾನು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆ. ಸ್ವಾಮೀಜಿಗಳು ಇಂತಹ ಪ್ರಶಸ್ತಿ-ಪಾರಿತೋಷಕಗಳನ್ನು ಮೀರಿ ಬದುಕಿದವರು. ಆದರೆ ಆ ಗೌರವ ಸ್ವಾಮೀಜಿಯವರಿಗೆ ಸಂದಿದ್ದರೆ ಆ ಪ್ರಶಸ್ತಿಯ ಗೌರವ ಹೆಚ್ಚಾಗುತ್ತಿತ್ತು.
https://www.facebook.com/595111904167609/posts/807113292967468/
ಸುದ್ದಿದಿನ.ಕಾಂ|ವಾಟ್ಸಾಪ್| 9986715401

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
