ಭಾವ ಭೈರಾಗಿ
ಅವಳ ಪ್ರೇಮದ ಅಲೆಗಳು

ನಾ ಓದಿದ ಪುಸ್ತಕ
ಕಾದಂಬರಿ: ಅವಳ ಪ್ರೇಮದ ಅಲೆಗಳು
ಸಾಹಿತಿ: ಎಸ್.ರಾಜು ಸೂಲೇನಹಳ್ಳಿ.ಚಿತ್ರದುರ್ಗ
ಜೀವನ ದ್ವಂದ್ವ, ದಂಗೆ, ದಾಂಧಲೆ, ಅಂಧಪ್ರೇಮ, ಸ್ನೇಹ ಸಾಗರದ ಭಂಡಾರ. ಈಸಬೇಕು ಇದ್ದು ಜಯಿಸಬೇಕು. ಜೀವನದ ಪಯಣದಲಿ ಅನೇಕ ತಿರುವುಗಳು ಬರುವದು ಸಹಜ, ಸದಾ ಪಯಣಿಸಿ ಮುಂದೆ ಸಾಗಬೇಕು.
ಕರುನಾಡಿನ ಕಲ್ಪನಾ ಲೋಕದ ಸ್ವರ್ಗವಾದ , ಸಾಹಿತ್ಯದ ಸತ್ವಸೆಲೆಯಾದ ಮಲೆನಾಡಿನ ಸಹ್ಯಾದ್ರಿ ಬೆಟ್ಟಗಳ ತಣ್ಣನೆಯ ಹಸಿರಿನ ವಾತಾವರಣ, ಸಾವು ಎದುರಾಗುವ ರೋಗಿಗಳ ರೋಗ ದೂರಾಗಿಸುವ ಗಿಡ ಮೂಲಿಕೆಗಳ ಔಷಧಿ ಅಪಿ೯ಸುವ ಪ್ರಕೃತಿ ಮಡಿಲಿನ ಮಗಳಾದ ಅರ್ಪಿತಾ ಪ್ರಾರಂಭದಲ್ಲಿ ನಮ್ಮ ಯುವ ತರುಣ ಪ್ರಜ್ವಲ್ಗೆ ನೀಡಿದ್ದು ನೋವು , ಮಾಯದ ಘಾಯ. ಜಗದಲ್ಲಿ ಒಳ್ಳೆಯತನದಿಂದ ಬದುಕುವದೆ ತಪ್ಪು ಎಂದೆನಿಸಿದ್ದು ಮುಗ್ದ, ಪ್ರಮಾಣಿಕರಾದ ಬಡತನದಲಿ ಬೆಂದು ಬದುಕುವವರ ಪಾಡೇನಾಗಬಾರದು.
ತಾನು ನೀಡಿದ ಘಾಯ ಮಾಯಿಸುವ ಸಲುವಾಗಿ ಪ್ರಜ್ವಲಗೆ ಪ್ರೀತಿಯ ಮುಲಾಮು ಹಚ್ಚಲು ತಾನು ಶ್ರೀಮಂತರ ಮಗಳೆಂಬುದನು ಮರೆತು, ಬಡತನದ ಬೇಗೆಯಲಿ ಬೆಂದು, ವಿಧವೆಯಾದ ತಾಯಿಯ ಆರೈಕೆಯಲ್ಲಿ ಬೆಳೆದ ಪ್ರಜ್ವಲನನ್ನು ತನ್ನ ಪ್ರೇಮ ಪಾಶದಲಿ ಬೀಳಿಸುತ್ತಾಳೆ. ಆಧುನಿಕ ಕಾಲದ ಟಿ.ಟಿ ಪ್ರೀತಿ ಮಾಡದೆ. ಸತ್ಯ, ಪವಿತ್ರ, ಸಜ್ಜನದ , ನಿಷ್ಕಾಮ ಪ್ರೀತಿಯ ಪಯಣದಲಿ ತೇಲುತ್ತಾರೆ. ಹಾಗು ತಮ್ಮ ಶೈಕ್ಷಣಿಕ ಕಾಲೇಜು ಜೀವನ ಮುಂದುವರೆಸುತ್ತಾರೆ.
ಸದಾ ಕಷ್ಟಗಳನ್ನೆ ತಿಂದು-ಕುಡಿದು ಬೆಳೆದ ಪ್ರಜ್ವಲನಿಗೆ ಅರ್ಪಿತಾಳ ಪ್ರೇಮಾರ್ಪಣೆಯು ನವ ಸತ್ವಯುತ ಶಕ್ತಿ ನೀಡುತ್ತದೆ. ಜೊತೆಗೆ ಇಬ್ಬರಿಗೂ ಅರ್ಪಿತಾಳ ಗೆಳತಿ ರಚನಾ ಹಾಗೂ ಸಹೋದರಿ ಸಹನಾಳ ಸಹಕಾರ ಸಿಕ್ಕು ಇವರ ಪ್ರೀತಿಯ ಮರ ಹೆಮ್ಮರವಾಗಿ ಬೆಳೆಯುತ್ತದೆ. ಅದರೊಂದಿಗೆ ಕಾಲೇಜು ಶಿಕ್ಷಣ ಉತ್ತಮ ಫಲಿತಾಂಶದೊಂದಿಗೆ ಮುಂದೆ ಸಾಗುತ್ತದೆ. ಕಥೆಯು ಯಾವುದೇ ಏರುಪೇರಿಲ್ಲದೆ ಸರಾಗವಾಗಿ ಮುಂದೆ ಸಾಗುವಾಗ ಅವರಿಬ್ಬರ ಪ್ರೀತಿಯಲಿ ವಿಲನ್ ನಂತೆ ಬಂದು ಅರ್ಪಿತಾಗೆ ಕಾಡುತ್ತಾನೆ ಅವಳ ಅಣ್ಣ ರಾಜು. ಆದರೂ ಬೆದರಿಕೆ, ಹೊಡೆತಕ್ಕೆ ಹೆದರದ ಅಪಿ೯ತಾ ನೇರ , ದಿಟ್ಟ ಉತ್ತರ ನೀಡಿ ಬಡವನ ಪ್ರೀತಿಯನ್ನು ಸಮರ್ತಿಸುತ್ತಾಳೆ. ಇವಳಿಗೆ ಪ್ರೀತಿಯ ಪುಷ್ಟಿ ನೀಡುತ್ತಾರೆ ತಾಯಿ-ತಂದೆ-ತಂಗಿ. ಇಂತಹದರಲ್ಲಿ ಪ್ರಜ್ವಲ್ ಸ್ನಾತಕೋತ್ತರ ಶಿಕ್ಷಣ ದೂರದೂರದಲ್ಲಿ ಓದುವಾಗ ಏಕಾಂಗಿತನದ ಶಿಕ್ಷೆ ಅನುಭವಿಸುವಾಗ ಅರ್ಪಿತಾಳಿಗೆ ಅನಾರೋಗ್ಯ ಕಾಡುತ್ತದೆ.
ಇಲ್ಲಿಯವರೆಗೆ ದೂರಾದ ನಲ್ಲನಿಂದಾದ ಏಕಾಂಗಿ ನಲ್ಲೆಯ ತೊಳಲಾಟ, ಅಣ್ಣನ ಕಿರಿಕ್ ಆಟ, ಹೊಡೆದಾಟ ಇವುಗಳಿಂದ ಓದುಗನ ಉತ್ಸುಕತೆ, ಮುಂದಾಲೋಚನೆ, ಓದುವ ಬಯಕೆ ಹೆಚ್ಚಿಸುವರು ಕಾದಂಬರಿಗಾರರಾದ ಎಸ್. ರಾಜು ಸೂಲೇನಹಳ್ಳಿ ಯವರು.
ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದ ಅರ್ಪಿತಾ ಬ್ರೇನ್ ಟ್ಯೂಮರ್ಗೆ ಬಲಿಯಾದಾಗ ಹೆತ್ತವರು, ವೈದ್ಯರು ಅವಳ ಜೀವನದ ಆಸೆ ಕಳೆದುಕೊಳ್ಳುತ್ತಾರೆ. ಅಪಿ೯ತಾಳನ್ನೆ ವರೆಸಿ ಮದುವೆ ಆಗಬೇಕೆಂದು ಪ್ರಜ್ವಲಗೆ ಅನಾರೋಗ್ಯದ ವಿಷಯ ಗೊತ್ತಾದರೂ ತಾನು ನೌಕರಿ ಪಡೆದು ಪ್ರೇಯಸಿಯನ್ನು ಮುಂಬೈ ಆಸ್ಪತ್ರೆಯಲ್ಲಿ ದಾಖಲಿಸಿ, ಅವಳ ತೂಕದಷ್ಟು ಹಣ ಹಾಕಿ ಶಸ್ತ್ರ ಚಿಕಿತ್ಸೆ ಮಾಡಿಸಿ, ಆರಾಮವಾದ ಬಳಿಕ ಊರಿಗೆ ಬಂದು ಎಲ್ಲರ ಸಮ್ಮುಖದಲ್ಲಿ ಮದುವೆಯಾಗಿ ಅವಳೊಂದಿಗೆ ಕಾರವಾರ ಬೀಚಿಗೆ ಹನಿಮೂನ್ ಗೆ ಹೋಗುವ ಕಥೆಯೆ ಈ ಕಾದಂಬರಿಯ ಹೂರಣ.
ಕಥೆ ನೀರಸವೆನಿಸಿದರೂ ಕಥಾನಕವು ಓದುಗನಿಗೆ ಯಾವ ಪುಟದಲ್ಲೂ ನೀರಸತನ ಅನಿಸದು. ಪ್ರಥಮ ಹಾಗೂ ಕೊನೆಯ ಅದ್ಯಾಯಗಳು ಓದುಗನ ಕಣ್ಣೀರ ಕಾರಂಜಿ ಹರಿಸುವಂತೆ ದುಖಃದ ಅನಂತತೆಯಿಂದ ವಿವರಿಸಿದ್ದಾರೆ ಕಾದಂಬರಿಗಾರರಾದ ಎಸ್ ರಾಜು ಸೂಲೇನಹಳ್ಳಿಯವರು.
ಕಾದಂಬರಿಯಲ್ಲಿ ಬರುವ ಪ್ರತಿ ಪಾತ್ರಗಳಿಗೆ ಜೀವ ತುಂಬಿ, ಸಮಾನ ನ್ಯಾಯ ಒದಗಿಸಿದ್ದಾರೆ. ಇದರಿಂದಾಗಿ ಓದುಗ ಕಥಾ ಹಂದರದಲ್ಲಿ ಬಂದಿತನಾಗಿ ಪೂರ್ಣ ಓದಿ ಮುಗಿಸುವನು. ಕಥಾನಾಯಕನ ಹೃದಯವಂತಿಕೆ, ನಾಯಕಿಯ ಸಮಾನ ವೈಚಾರಿಕತೆ, ಗಟ್ಟಿಗುಣ, ಪ್ರೇಮಸಮ್ಮಾನ, ನವಪೀಢಿಗಿರುವ ತಾಯಿತಂದೆಯ ಪ್ರೀತಿ, ಸತ್ಯ ,ನಿಷ್ಕಲ್ಮಶ, ನಿಷ್ಕಾಮ ಪ್ರೀತಿ , ಯುವ ಪೀಳಿಗೆಗೆ ಶಿಕ್ಷಣದ ಒಲವು, ನಿಸರ್ಗದ ವರ್ಣನೆ, ಹಾಗೂ ಕಥೆಯ ನಿರೂಪಣೆಯು ಕಾದಂಬರಿಕಾರರಾದ ಎಸ್ ರಾಜು ಸೂಲೇನಹಳ್ಳಿ ಯವರನ್ನು ಹಿರಿಯ ಪ್ರಬುದ್ಧ ಕಾದಂಬರಿಗಾರರಲ್ಲಿ ನಿಲ್ಲಿಸುವವು.
“ಅವಳ ಪ್ರೇಮದ ಅಲೆಗಳು” ಇದು ಶ್ರೀಯುತ ಮೂರನೆ ಯಶಸ್ವಿ ಕಾದಂಬರಿ ಎಂದು ಹೇಳಲು ಹೆಮ್ಮೆ ಅನಿಸುವದು. ಕಾದಂಬರಿಗಾರರಿಗೆ ಧನ್ಯವಾದಗಳನ್ನು ತಿಳಿಸುತ್ತ, ಇವರ ಸಾಹಿತ್ಯ ಜೀವನಕ್ಕೆ ಶುಭ ಹಾರೈಸೋಣ.
-ಎಂ.ಕೆ.ಶೇಖ್. ಶಿಕ್ಷಕರು.
ಗ್ರಾಮ-ದೇವರ ನಿಂಬರಗಿ
ತಾಲೂಕು- ಚಡಚಣ
ಜಿಲ್ಲೆ- ವಿಜಯಪುರ.
ರಾಜ್ಯಾಧ್ಯಕ್ಷರು
ರಾಜ್ಯ ಯುವ ಬರಹಗಾರರ ಒಕ್ಕೂಟ (ರಿ) ಬೆಂಗಳೂರು
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಭಾವ ಭೈರಾಗಿ
ಕವಿತೆ | ಕಿಚನ್ ವಕ್ತ್

- ಸಂಘಮಿತ್ರೆ ನಾಗರಘಟ್ಟ
ಎದ್ದ ತಕ್ಷಣ
ಎದ್ದೋ ಬಿದ್ದೋ ಎಂದು
ಫ್ರೆಶ್ ಆಗಲು ಬಾತ್ ರೂಂ
ನತ್ತ ಹೋಗುವುದೇ ತಡ
ಅಲ್ಲಿನ ಪುಟ್ಟ ಕನ್ನಡಿಯಲ್ಲಿ
ಹಿಡಿ ಮಾತ್ರದ ನನ್ನ ಮುಖ
ಥೇಟ್ ಆಟದ ರೋಬೋಟ್
ನಂತೆಯೇ ಕಾಣುತ್ತಿತ್ತು
ಒಳಗಿನಿಂದ ಕದ ತೆಗೆದು
ಆಚೆ ಹೆಜ್ಜೆಯಿಡುವ ಹೊತ್ತಿಗಾಗಲೇ
ಕಿಚನ್ ನಲ್ಲಿ ಆರ್ಡರ್ ಸಿದ್ಧ
ಬಿಸಿ ನೀರು ಒಬ್ಬರಿಗಾದರೆ
ಸ್ಟ್ರಾಂಗ್ ಕಾಫಿ ಇನ್ನೊಬ್ಬರಿಗೆ
ಅದನ್ನು ಕೊಡುವ ಗ್ಲಾಸ್
ಗಾಜಿನದೋ ಸ್ಟೀಲ್ ನದೋ
ಎಂಬ ಗೊಂದಲದಲ್ಲೇ
ಸ್ಟವ್ ಮೇಲಿನ ಹಾಲು
ಉಕ್ಕಿ ತನ್ನ ಹಿತ ಶತ್ರು
ಗ್ಯಾಸ್ ಟ್ಯುಬ್ ನತ್ತ ಹರಿಯುತ್ತಿತ್ತು
ಅದನ್ನು ಉಜ್ಜಿ ಕ್ಲೀನ್ ಮಾಡಿ
ಸಿಂಕ್ ನತ್ತ ನೋಡುತ್ತಿದ್ದಂತೆ
ಎಲ್ಲಾ ಪಾತ್ರೆ ಸೌಟು ಬಾಣಲೆಯಲ್ಲಿ
ತೇಲುತ್ತಿದ್ದ ಅನ್ನದ ಅಗುಳು
ಇನ್ನು ಅರೆಬರೆ ಖಾಲಿ ಆಗಿದ್ದ
ಹೊಟ್ಟೆ ಒಳಗಿನ ಕಲ್ಮಶದಂತಿತ್ತು
ರಾತ್ರಿ ,ಹಗಲು ಮಾಡುವ
ತಿಂಡಿ -ಕೆಲಸಗಳ ಚಿಂತೆಯಲ್ಲೇ
ನಿದ್ದೆ ಹೀರಿಕೊಂಡು ಮುಖ
ಹುಳಿ ಹಿಂಡಿದಂತಾಗಿತ್ತು….
ಇನ್ನೇನು ಎಲ್ಲಾ ಕೆಲಸ ಮುಗಿಸಿ
ಸೋಫಾ ದಲ್ಲಿ ಕುಳಿತು
ಸುದ್ದಿ ಫೀಡ್ ನೋಡುತ್ತಿದ್ದೆ
ಅಕ್ಕಿ ರಾಗಿಯ ಬೆಲೆ ಪಟ್ಟಿ ಏರಿತ್ತು
ಯಾಕೋ ಈಗಲೂ ದಾಸರಿರಬೇಕಿತ್ತು
ಸಮ ತೂಕ ಮಾಡಿ ಎರಡನ್ನೂ ಅಳೆದು
ನಮ್ಮವರ ಹೊಟ್ಟೆಯನ್ನೂ ತುಂಬಿಸಬೇಕೆನಿಸಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ರೇಖೆಗಳು

- ಡಾ.ಪುಷ್ಪಲತ ಸಿ ಭದ್ರಾವತಿ
ಗಡಿ ದೇಶಗಳೇನೊ ಹಂಚಿಕೊಂಡಿರಿ
ಆದರೆ,
ಸೂರ್ಯ ಚಂದ್ರರ ಗತಿಯೇನು
ಉಸಿರಾಡುವ ಗಾಳಿಯು ಒಂದಿರುವಾಗ
ಪ್ರಾಣವಾಯುವಿಗೆ ಬಂಧನದಲ್ಲಿರಿಸಲಾದಿತೆ
ಹರಿಯುವ ನದಿಗಳಿಗೆ ನಾಮಕರಣವೇನೋ ಮಾಡಿದಿರಿ
ಆದರೆ,
ಜರಿಗಳು, ಹಳ್ಳಕೊಳ್ಳಗಳು ಮಾಡಿದಾದರೂ ಏನು
ಪೂಜಾರಿ ಕೊಟ್ಟಿದ್ದು ತೀರ್ಥವೆ
ಆಬೆಜಂಜಂ, ಹಾಲಿ ವಾಟರ್ ಎಲ್ಲವೂ ಜಲ
ಫಾದರ್,ಪೂಜಾರಿ,ಮೌಲ್ವಿ
ಎಲ್ಲರೂ ಕುಡಿದದ್ದು ನೀರು
ಕೊನೆಗೂ ಅದರ ಮೂಲರೂಪ ಬದಲಾಗಲಿಲ್ಲ
ಮನುಷ್ಯ ,ಪ್ರಾಣಿ,ಮರಗಿಡಗಳ
ತಳಿಗಳನ್ನು ಬೇರ್ಪಡಿಸುವವನು ಮೂರ್ಖನೇ ಇರಬೇಕು .
ದೇಹದಲ್ಲಿರುವ ನರಮಂಡಲವನೊಮ್ಮೆ ಬೇರ್ಪಡಿಸಿ
ಬದುಕಲಾದಿತೆ
ಏನು?
ಕ್ರಿಸ್ತನೇನಾದರು ಬಂದು ಮತಾಂತರ ಮಾಡಿದನೇ
ಅಲ್ಲಾನೇನಾದರು ಬಂದು ರಾಮಮಂದಿರ ಕೆಡವಿದನೇ
ಶಿವನೇನಾದರು ಬಂದು ಮಸೀದಿಯನ್ನು ಹೊಡೆದುರುಳಿಸಿದನೇ..!?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು..!

- ಪ್ರೀತಿ.ಟಿ.ಎಸ್, ದಾವಣಗೆರೆ
ಬೇಂದ್ರೆಯವರು “ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು, ಕಳೆದ ದುಃಖಗಳಲ್ಲಿ ನೆನೆದಂತೆಯೆ” ಎಂದು ತಮ್ಮ ಸಖೀ ಗೀತದಲ್ಲಿ ಹಾಡುತ್ತಾರೆ. ಆದರೆ ಈ ಹೊಸ ವರ್ಷದಲ್ಲಿ ಕಹಿದಿನಗಳ ನೆನಪೇ ಬೇಡ, ಸಿಹಿ ಕಹಿ ಕನಸುಗಳನ್ನು ಕಂಡಂತಹ ಎಳೆತನದ, ಕೆಳೆತನದ ದಿನಗಳ ನೆನಪೇ ಸ್ಥಿರವಾಗಿರಲಿ; ಕಾಲನ ಹೊಡೆತಕ್ಕೆ ಆ ಕನಸುಗಳ ನೆನಪು ಮರೆಯಾಗದಿರಲಿ.
ಹೊಸ ವರ್ಷದಲ್ಲಿ ಇದೆಂತ ಬರಿತ್ತಿದ್ದಾರೆ ಅಂತೀರ! ನಿಮಗಿಂದು ಬರೀ ಹೊಸ ವರುಷ. ಆದರೆ ನನಗೋ ನನ್ನ ಜೀವನ ಪಾವನವಾಗಿಸುವ ದಿನ. ಯಾಕೇ ಗೊತ್ತಾ? ನನ್ನ ಸಾಹಿತ್ಯ ಕ್ಷೇತ್ರಕ್ಕೆ ಅನುಕರಿಣಿಸಿ, ಸಮಾಜ ಕ್ಷೇತ್ರದಲ್ಲಿ ನನ್ನನ್ನ ತೊಡಗುವಂತೆ ಮಾಡಿ, ಕಿಂಚಿತಾದರೂ ನನ್ನಲ್ಲಿ ದಯೆ, ಕರುಣೆ, ವಿಶ್ವಾಸ, ಪ್ರೀತಿ ಹೀಗೆ ಅನೇಕ ಭಾವಗಳನ್ನ ಚಿಕ್ಕಂದಿನಿಂದ ತಿದ್ದಿ ತೀಡಿದ ನನ್ನ ತಂದೆ ತಾಯಿಯ ಜನುಮ ದಿನ.
ಹೊಸ ವರುಷಕ್ಕಿಂತ ಇವರೀರ್ವರ ಜನುಮವೇ ಅದೇನೋ ಸಂಭ್ರಮ. ಅದೇನೋ ಸಡಗರ. ಹಳೆಯ ನೆನಪಿನ ಬುತ್ತಿಯನ್ನು ಮುಚ್ಚಿಟ್ಟು ಹೊಸ ಜೀವನದ ಪಯಣಕ್ಕೆ ಅದೇನೋ ಕಾತುರದಿಂದ ಗಡಿಬಿಡಿಯಾಗುವಾಗ ಅಪ್ಪಾಜಿ ಬಂದು ಹಾದಿಯಲ್ಲಿ ಕಲ್ಲು- ಮುಳ್ಳುಗಳಿರಬಹುದು ಎಚ್ಚರ! ಆದರೆ ಅದನ್ನು ಎದುರಿಸಿ ಮುನ್ನಡೆದಾಗಲೇ ಸುಖ ಸಾಗರ ಎಂಬ ಅವರ ಆಶಯದ ನುಡಿ ಮಾತುಗಳು ಬಹುಶಃ ಇಂದು ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ.
ಮಾಮೂಲೀ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ತಂದೆ-ತಾಯಿಯ ಪೋಸ್ಟ್ ಹಾಕಿ ವಿಶ್ ಮಾಡಿದ್ರೆ ಮುಗಿತಿತ್ತು. ಆದರೆ ಈ ಭಾರಿ, ನನಗಾಗುತ್ತಿರುವುದು ವಿಚಿತ್ರ ಅನುಭವ. ಸಾವಿರ ನೋವು, ದುಃಖ-ದುಮ್ಮಾನಗಳು ಎದೆಯಲ್ಲಿದ್ರು ನಮ್ಮ ಮುಂದೆ ತೋರಿಸದೆ ಮನಸ್ಸಲ್ಲೇ ಇಟ್ಟು ಕೊರಗುತ್ತ ಒಳ್ಳೆಯ ವಿದ್ಯಾಭ್ಯಾಸ ನೀಡಿ, ಸಂಸ್ಕೃತಿ, ನಾಡು-ನುಡಿ, ಸಂಸ್ಕಾರವನ್ನು ಭಿತ್ತುತ್ತ ಬಂದಿದ್ದಾರೆ. ಸುಖದಲ್ಲೆ ಬೆಳೆದ ನಮಗೆ ಕಹಿ ಜೀವನದ ಅನುಭವ ಕಡಿಮೆಯೇ!
ಅಪ್ಪಜಿ-ಅಮ್ಮನ ಆಸೆಯಂತೆ ಮಾಸ್ಟರ್ ಆಫ್ ಜರ್ನಲಿಸಂ ಅಲ್ಲಿ ಎರಡು ಬಂಗಾರದ ಪದಕ ಗೆದ್ದು ಅವರಿಗೆ ನೀಡಿ ಆಸೆ ತೀರಿಸಿದ ನಂತರವಷ್ಟೇ ತಿಳಿದ್ದದ್ದು. ಜೀವನದ ಆಳವೆಷ್ಟು ಎಂದು? ಅಪ್ಪಾಜಿ ಅಮ್ಮನನ್ನು ಬಿಟ್ಟು ಕೆಲಸ ಹುಡುಕುತ್ತ ಬೆಂಗಳೂರಿಗೆ ಬಂದಾಗ ನಿಜವಾದ ರೋಧನೆ, ನೋವು, ಒಂಟಿತನ, ಕಷ್ಟ, ಉಪವಾಸ, ಅನ್ನದ ಬೆಲೆ ಹೀಗೆ ಬದುಕಿನ ಅಷ್ಟು ಪಾಠಗಳು ತಿಳಿಯುತ್ತ ಹೋದದ್ದು. ಎಂತಹ ಒದ್ದಾಟದಲ್ಲೂ ನನ್ನ ತಂದೆ-ತಾಯಿಗೆ ತಿಳಿಸದೆ ನಗ್ತ ನಗ್ತ ಮಾತಾಡಿದ್ರು ಕ್ಷಣಮಾತ್ರದಲ್ಲಿ ಅಪ್ಪಜಿ ಮಾತ್ರ ನನ್ನ ನಗುವಿನ ಹಿಂದಿನ ದುಃಖನ ಗುರುತಿಸಿ, ಮತ್ತಷ್ಟು ಬಲ ತುಂಬುತ್ತ ಬಂದವರು.
ಜನವರಿ 1 ಬಂತೆಂದರೆ ಅಪ್ಪಾಜಿ ಅಮ್ಮನ ಹುಟ್ಟು ಹಬ್ಬ. ಈ ಭಾರಿ ನಾನು ನಿಮಗೆನೂ ಮಾಡಿದೇನು? ಕಡೆಪಕ್ಷ ಅವರ ಮುಂದೆ ಹೋಗಿ ನಿಂತು ಶುಭಾಶಯ ತಿಳಿಸಿ ಬಂದು ಬಿಡಲೇ ಎಂದರೆ ಕೈಯಲ್ಲಿ ಕಾಸಿಲ್ಲ. ಇಲ್ಲಿಂದಲೇ ಶುಭಾಶಯ ತಿಳಿಸಿ ಸುಮ್ಮನಾಗಿ ಬಿಡಲೇ ಎಂದರೆ ಮನಸ್ಸು ಒಪ್ಪುತ್ತಿಲ್ಲ. ಇದೀಗ ದುಡಿತ್ತಿದ್ದಿನಾದರು ಕಣ್ಣ ಮುಂದಿರುವ ಅಷ್ಟು ಹೊಣೆಗಾರಿಕೆಗಳು ನನ್ನನ್ನ ಕಟ್ಟಿಹಾಕ್ತಿದೆ. ಈ ಗೊಂದಲದ ನಡುವೇ ಈ ಲೇಖನ ನಿಮಗಾಗಿ.
ಅಪ್ಪಜಿ-ಅಮ್ಮ ಈ ಭಾರಿ ಹೊಸ ವರುಷದ ಹೊಸ ಆಚರಣೆ ಸಾಧ್ಯವಾಗದಿದ್ದರು ಬೇಸರಿಸದಿರಿ. ಯಾಕೆಂದರೆ ನಿಮಗಾಗಿ ನೀವು ಕಂಡ ಹೊಸ ಕನಸಿನ ಗೂಡೊಂದನ್ನ ಹೊತ್ತು ತರುತ್ತಿದ್ದೇನೆ. ತಂದ ದಿನವೇ ನಿಮ್ಮ ಈ ಜನುಮೋತ್ಸವವನ್ನು ಆಚರಿಸ್ತೇನೆ. ಇದನ್ನ ನಿಮ್ಮೊಡನೇ ಹೇಳಬಹುದಿತ್ತಾದರು, ನನ್ನ ಸಹಪಯಣಿಗರೊಡನೆ ಹಂಚಿಕೊಂಡ ಈ ಕನಸುಗಳು ನಮ್ಮ ಬಾಳಿನ ಮುಂದಿನ ಪಯಣದ ಬುತ್ತಿಯಾಗುತ್ತದೆ ಎಂಬುದು ನನ್ನ ಭಾವನೆ.
ಇಂತಹ ಅದೆಷ್ಟೋ ಅನುಭವಗಳು ಮನೆ ಬಿಟ್ಟು, ತಂದೆ ತಾಯಿಯ ಆಶಯವನ್ನು ನೆನಸಾಗಿಸೋ ಸಾವಿರ ಕನಸುಗಳನ್ನು ಹೊತ್ತು ಬಂದ ಅದೆಷ್ಟೋ ಮನಸ್ಸುಗಳಿಗೆ ಆಗಿರುತ್ತೆ. ಇನ್ನು ಕೆಲವರಿಗೆ ಇಡೀ ವರ್ಷದ ಶ್ರಮದಾಯಕ ದುಡಿಮೆ ಬಳಿಕ ಮನಸ್ಸು ಸ್ವಲ್ಪ ವಿಶ್ರಾಂತಿಯನ್ನು, ಮನೋರಂಜನೆಯನ್ನು ಬಯಸುತ್ತದೆ. ಕುಟುಂಬದ ಬಂಧವನ್ನು ಗಟ್ಟಿಗೊಳಿಸಲು ಮತ್ತು ಪ್ರೀತಿ, ಅನುಬಂಧವನ್ನು ಬಿತ್ತಲು ಹೊಸವರ್ಷವೊಂದು ಸುವರ್ಣಾವಕಾಶ. ನಮ್ಮ ಎಲ್ಲ ಕೆಲಸಕ್ಕೆ ಸ್ವಲ್ಪ ಸಮಯ ವಿಶ್ರಾಂತಿ ಕೊಟ್ಟು ರಿಲ್ಯಾಕ್ಸ್ ಮಾಡುವ ಮೂಲಕ ಸಂಭ್ರಮ, ಸಡಗರಕ್ಕೆ ಅಣಿಯಾಗೋಣ. ನಿಮ್ಮೆಲ್ಲರ ಆಸೆ, ನಿರೀಕ್ಷೆಗಳು ನೆರವೇರಲಿ ಎಂದು ಮನಸ್ಸಲ್ಲೆ ಪ್ರಾರ್ಥಿಸುತ್ತಾ, ಮುಸ್ಸಂಜೆ ಕವಿಯುತ್ತಿರುವಾಗಲೂ ಮರುದಿನದ ಬೆಳಗು ಆಶಾಕಿರಣವನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
