ದಿನದ ಸುದ್ದಿ
ಸರಳ ತರಳಬಾಳು ಹುಣ್ಣಿಮೆಯಂದು ಗೋಶಾಲೆ ಪುಣ್ಯಕೋಟಿಗೆ ಅರ್ಪಣೆ

ಸುದ್ದಿದಿನ,ಸಿರಿಗೆರೆ: ಉತ್ಸವಗಳಿಂದ ಸಮಾಜದ ಅಭಿವೃದ್ಧಿ ಮಾಡುವುದಕ್ಕಿಂತ ಉತ್ಸವಗಳ ಸಾರ್ಥಕತೆಯ ನೆನಪಿಗೆ ಸಮಾಜದ ಅಭ್ಯುದಯಕ್ಕೆ ಶ್ರಮಿಸುವ ವಿಶೇಷ ಆಶಯ ಹೊಂದಿ ಆ ಕಾರ್ಯದಲ್ಲಿ ಯಶಸ್ಸು ಗಳಿಸಿದ ಕೀರ್ತಿ ತರಳಬಾಳು ಶ್ರೀ ಜಗದ್ಗುರುವರ್ಯರದು.
ಪರಂಪರೆಗೆ ಮತ್ತು ಅಪಾರ ಶಿಷ್ಯಬಳಗದ ಮನಸ್ಸಿಗೆ ಘಾಸಿ ಮಾಡದಂತೆ ಎಲ್ಲರಿಗೂ ಅನುಕೂಲ ತರುವ ಸರ್ವರೂ ಒಪ್ಟಲೇಬೇಕಾದ ಕಾರ್ಯಕ್ರಮಗಳನ್ನು ಜಾರಿಯ ಅನುಷ್ಠಾನದ ಅಪರೂಪದ ವ್ಯಕ್ತಿತ್ವ ಚಿಂತಕ ಶ್ರೇಷ್ಠರಾದ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳವರದು.
ನಾಡಿನ ಧಾರ್ಮಿಕ ಸಮಾರಂಭಗಳಿಗೆ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಮಾತೃಸ್ವರೂಪದಂತಹ ಸ್ಥಾನವಿದೆ. ಸಮಾರಂಭದ ಸಾರ್ಥಕತಗೆ ನೂರಾರು ಸಮಾಜ ಮುಖಿ ಕಾರ್ಯಗಳು ಸಾಕ್ಷಿಯಾಗಿವೆ. ಅಂತಹ ಜನಮುಖಿ ಕಾರ್ಯಗಳಲ್ಲಿ ಸಾವಿರಾರು ಕೋಟಿಗಳ ವೆಚ್ಚದಲ್ಲಿ ನೂರಾರು ಕೆರೆಗಳಿಗಳ ಒಡಲಿಗೆ ಗಂಗೆ ಹರಿದು ರೈತರ ನೆಮ್ಮದಿಗೆ ಕಾರಣವಾಗಿರುವುದು ಪ್ರಮುಖವಾದುದು. ಆರು ದಶಕಗಳಿಂದಲೂ ಸರ್ವರ ಜನಾಧರಣೆಯ ಸಮಾರಂಭವಾಗಿ ಆಯಾ ಕಾಲದ ಸಮಸ್ಯೆಗಳಿಗೆ ಸ್ಪಂದಿಸುವ ಮಾನವೀಯತೆಯ ಮಹೋತ್ಸವವಾಗಿದೆ.
ಈ ವರ್ಷದ ತರಳಬಾಳು ಹುಣ್ಣಿಮೆ ಮಹೋತ್ಸವ ಹೊಯ್ಸಳರ ನಾಡಾದ ಹಳೇಬೀಡಿನಲ್ಲಿ ಆಚರಿಸುವ ಶ್ರೀಗಳ ಆಶಯಕ್ಕೆ ಆ ಭಾಗದ ಭಕ್ತರು ತುದಿಗಾಲಲ್ಲಿ ನಿಂತಿದ್ದರು.
ಭೀಕರ ಬರಗಾಲದ ಛಾಯೆಯನ್ನು ಮನಗಂಡು
ಕಾರ್ಯಕ್ರಮಗಳಿಗೆ ಆ ಭಾಗದ ಜ್ವಲಂತ ಸಮಸ್ಯೆಗಳಿಗೆ ತರಳಬಾಳು ಹುಣ್ಣಿಮೆ ಮಹೋತ್ಸವದ ಮೂಲಕ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರೀಗಳು ಹಳೇಬೀಡು ವ್ಯಾಪ್ತಿಯ ಕೆರೆಗಳಿಗೆ ಶಾಶ್ವತವಾಗಿ ನೀರು ತುಂಬಿಸುವ ಯೋಜನೆ ಕಾರ್ಯಪಾಲನೆಯ ನಂತರ ಹುಣ್ಣಿಮೆ ಮಹೋತ್ಸವ ಆಚರಿಸುವ ಅರ್ಥಪೂರ್ಣ ನಿರ್ಧಾರ ಕೈಗೊಂಡು ಆ ನಿಟ್ಟಿನಲ್ಲಿ ಹೆಜ್ಜೆ ಹಾಕಿದರು.
ಪರಂಪರೆಯಂತೆ ಸಾಂಕೇತಿಕವಾಗಿ ಸರಳವಾಗಿ 2019ರ ಫೆಬ್ರುವರಿ 19ರಂದು ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಣೆಯ ಜೊತೆಗೆ ನಾಡಿನ ಗೋವುಗಳ ಪಾಲನೆಗೆ ಅಂದೇ ಗೋಶಾಲೆಯ ಉದ್ಘಾಟಿನೆಯ ಕೈಂಕರ್ಯಕ್ಕೆ ಶ್ರೀ ಜಗದ್ಗುವರ್ಯರು ಮನಸ್ಸು ಮಾಡಿರುವುದು ಅತ್ಯಂತ ಸಂದರ್ಭೋಚಿತವಾದುದಾಗಿದೆ.
ಸದಾ ಜನಮುಖಿ ಕಾರ್ಯಗಳಲ್ಲಿ ಸಂತೃಪ್ತಿ ಕಾಣುವ, ನಿತ್ಯವೂ ರೈತಬಂಧುಗಳ ಉನ್ನತಿಗೆ ಶ್ರಮಿಸುವ ಕನ್ನಡ ನಾಡಿನ ಅಪರೂಪದ ವಿದ್ವತ್ಪೂರ್ಣ, ಸಂತಶ್ರೇಷ್ಟರಾಗಿ ,ರೈತ ಮೆಚ್ಚಿದ ಮಹಾಗುರುವೆಂದೇ ಸುಪ್ರಸಿದ್ಧಿಯಾದ ಪರಮ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳವರ ನೂರಾರು ಸಮಾಜಮುಖಿ ಸಾಧನೆಗಳಿಗೆ ಮತ್ತೊಂದು ಸೇರ್ಪಡೆ ಎನ್ನುವಂತೆ ತರಳಬಾಳು ಶ್ರೀ ಮಠದ ಸಾವಿರಾರು ಎಕರೆ ಭೂಮಿಯಲ್ಲಿ ಸಕಲ ಸೌಲಭ್ಯಗಳಿಂದ ಕೂಡಿದ ಗೋಶಾಲೆಯ ನಿರ್ಮಾಣದ ತಯಾರಿ ಭರದಿಂದ ಸಾಗಿದೆ.
ಅಕ್ಷರ,ಅನ್ನ,ಆಸರೆ,ಶಿಕ್ಷಣ,
ಉದ್ಯೋಗ,ನ್ಯಾಯದಾನ, ಕನ್ನಡ ಜಾನಪದ ಕಲೆಗಳ ಪುನರುಜ್ಜೀವನ , ಸಾಮಾಜಿಕ ಕಾಳಜಿ,ಪರಿಸರ ರಕ್ಷಣೆ, ಶರಣ ಸಂಸ್ಕೃತಿಯನ್ನು ವಿಶ್ವಕ್ಕೆ ದರ್ಶಸಿದ ಗಣಕ ಋಷಿ ಎಂದೇ ನಾಮದೇಯರಾಗಿರುವ ಶ್ರೀ ಗುರುವರ್ಯರ ಸಾಧನೆಗಳ ಕುರಿತು ಬರೆಯುವುದೆಂದರೆ ಅದು ಸೂರ್ಯನನ್ನು ಕನ್ನಡಯಲ್ಲಿ ಹಿಡಿದಂತೆ..!
ಶ್ರೀಗಳ ದೂರದರ್ಶಿತ್ವ ಹೇಗಿದೆ ಎಂದರೆ. ಈ ವರ್ಷ ಬರದ ಮುನ್ಸೂಚನೆ ಅರಿತ ಶ್ರೀಗಳವರು ಪುಣ್ಯಕೋಟಿ ಉಳಿಸುವ ಅಭಿದಾನಕ್ಕೆ ಕೈ ಹಾಕಿ ಆರು ತಿಂಗಳಿಂದ ಕರ್ತವ್ಯ ಮಗ್ನರಾಗಿ ನೂರಾರು ಲೋಡ್ ಮೇವನ್ನು ಭಕ್ತರ ಮೂಲಕ ಸಂಗ್ರಹಿಸಿ ಕಾಮಧೇನುಗಳ ಸ್ವಾಗತಕ್ಕೆ ಕಾದು ಕುಳಿತಿದ್ದಾರೆ. ಸಿರಿಗೆರೆ ಸಮೀಪದ ಮೇಗಳಹಳ್ಳಿ ಬಳಿ ದೊಡ್ಡ ಕಾವಲೆಂದೇ ಕಲೆಯಲ್ಪಡುವ ಶ್ರೀ ಮಠದ ಒಡೆತನದ ಸಾವಿರಾರು ಎಕರೆ ಭೂ ಪ್ರದೇಶವನ್ನು ಶಿವಕುಮಾರ ವನವನ್ನಾಗಿಸಿ ಹತ್ತಾರು ವನ್ಯಜೀವಿಗಳಿಗೆ ಆಶ್ರಯ ತಾಣವಾಗಿರುವ ಪ್ರದೇಶದಲ್ಲಿ ತರಳಬಾಳು ಗೋಶಾಲೆ ನಿರ್ಮಾಣವಾಗುತ್ತಿದೆ.
ಹೇಗಿರುತ್ತದೆ ಗೋಶಾಲೆ..?
ಕರ್ನಾಟಕದ ಅನೇಕ ಪ್ರದೇಶಗಳು ಪದೇ ಪದೇ ಬರಗಾಲಕ್ಕೆ ತುತ್ತಾಗುವ ಸ್ಥಿತಿ ಇದೆ. ಮನುಷ್ಯರು ಹೇಗಾದರೂ ಬದುಕಿಕೊಳ್ಳುತ್ತಾರೆ. ಆದರೆ ದನಕರುಗಳು ಮೇವು ನೀರಿಲ್ಲದೆ ಕಂಗಾಲಾಗುತ್ತವೆ.
ಚಾಮರಾಜ ನಗರದ ಬಳಿ ಮೇವು ನೀರಿಲ್ಲದೆ ಎಲ್ಲೆಂದರಲ್ಲಿ ದನಕರುಗಳು ಸತ್ತಿರುವ ವರದಿಗಳು ದುಃಖದಾಯಕ ವರದಿಗೆ ಮನನೊಂದ ಶ್ರೀಗಳು
ಸಿರಿಗೆರೆ ಸಮೀಪ ಇರುವ ಶಿವಕುಮಾರ ವನದ1000 ಎಕರೆ ಅರಣ್ಯ ಪ್ರದೇಶದಲ್ಲಿ ಬೃಹತ್ ಗೋಶಾಲೆಯನ್ನು ಆರಂಭಿಸುವ ಯೋಜನೆಯನ್ನು ಶ್ರೀ ತರಳಬಾಳು ಜಗದ್ಗುರು ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಸಂಕಲ್ಪಿಸಿದರು.
ಇದೊಂದು ಖಾಯಂ ವ್ಯವಸ್ಥೆಯಾಗಿದ್ದು, ಈ ಕಾರ್ಯಕ್ಕಾಗಿ 2 ಕೋಟಿ ರೂಗಳನ್ನು ಮೀಸಲಿರಿಸಲಾಗಿದೆ. ಈ ಕಾಡಿನಲ್ಲಿ ಹರಿಯುವ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ ಮಾಡಿ ಜಾನುವಾರುಗಳಿಗೆ ನೀರನ್ನು ಒದಗಿಸಲಾಗುವುದಲ್ಲದೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಮೇವನ್ನು ಬೆಳೆಸಲಾಗುವುದು. ನೀರನ್ನು ಪಂಪ್ ಮಾಡಲು ಸೋಲಾರ್ ವಿದ್ಯತ್ ಉತ್ಪಾದನೆಯ ಬಗ್ಗೆಯೂ ಚಿಂತಿಸಲಾಗುತ್ತಿದೆ. ಕಾಡಿನಲ್ಲಿರುವ ಮೃಗಗಳಿಂದ ಜಾನುವಾರುಗಳಿಗೆ ತೊಂದರೆ ಆಗದಂತೆ ಬೇಲಿಯನ್ನು ನಿರ್ಮಿಸಲಾಗುವುದು. ರಾಜ್ಯದ ಯಾವುದೇ ಭಾಗದ ರೈತರೂ ಇದರ ಪ್ರಯೋಜನ ಪಡೆಯಬಹುದು.
ರೈತರು ಬಯಸಿದರೆ ಜಾನುವಾರುಗಳನ್ನು ಗೋಶಾಲೆಗೆ ತರಲು ಮಠದಿಂದ ಲಾರಿಯನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಬರ ಪ್ರದೇಶದ ರೈತರು ಇಲ್ಲಿಗೆ ದನಕರುಗಳನ್ನು ತಂದು ಮಳೆಗಾಲ ಬರುವ ತನಕ ಮೇವು ಮತ್ತು ನೀರನ್ನು ಪಡೆದು ಸಾಕಬಹುದು.* *ರಾಸುಗಳೊಂದಿಗೆ ಬರುವ ರೈತರಿಗೂ ಮಠದಿಂದ ಆಹಾರ ಮತ್ತು ವಸತಿಯನ್ನು ನೀಡಲಾಗುವುದು.
ತಮ್ಮ ಭಾಗದಲ್ಲಿ ಮಳೆ ಆರಂಭವಾಗಿ ಮೇವು ನೀರು ದೊರೆಯುವವರೆಗೂ ರೈತರು ಶಿವಕುಮಾರ ವನದಲ್ಲಿ ತನ್ನ ರಾಸುಗಳನ್ನು ಸಾಕಿಕೊಂಡು ಹೋಗಲು ಅನುವು ಮಾಡಿಕೊಡುವುದಾಗಿ ಇಂದು ಗೋಶಾಲೆಯ ಕೆಲಸ ಕಾರ್ಯಗಳನ್ನು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡಿದ ಶ್ರೀ ಜಗದ್ಗುರುವರ್ಯರು ತಿಳಿಸಿದರು.
ಬರಹ : ಬಸವರಾಜ ಸಿರಿಗೆರೆ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
