ದಿನದ ಸುದ್ದಿ
‘ಕಾಶ್ಮೀರ ಸಮಸ್ಯೆ’ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದವರು ‘ಇಂದಿರಾಗಾಂಧಿ ಮತ್ತು ವಾಜಪೇಯಿ’..!

ನಿರಂತರವಾಗಿ ರಕ್ತ ಹರಿಯಲು ಕಾರಣವಾಗಿರುವ ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದವರು ಇಬ್ಬರು ಪ್ರಧಾನಿಗಳು. ಮೊದಲನೆಯವರು ಇಂದಿರಾಗಾಂಧಿ, ಎರಡನೆಯವರು ಅಟಲಬಿಹಾರಿ ವಾಜಪೇಯಿ.
ಇಂದಿರಾಗಾಂಧಿ ಮತ್ತು ಝುಲ್ಪಿಕರ್ ಅಲಿ ಭುಟ್ಟೋ ನಡುವೆ ನಡೆದಿದ್ದ ಶಿಮ್ಲಾ ಮಾತುಕತೆ ಬಹುತೇಕ ಯಶಸ್ವಿಯಾಗಿತ್ತು. ಬಾಂಗ್ಲಾದೇಶಕ್ಕೆ ಮಾನ್ಯತೆ, ಮೂರನೆಯವರ (ಯುಎನ್) ಮಧ್ಯಪ್ರವೇಶಕ್ಕೆ ನಿರಾಕರಣೆ ಮತ್ತು ಯುದ್ಧ ವಿರಾಮದ ಗಡಿರೇಖೆಯನ್ನು ಎಲ್ ಓ ಸಿಯಾಗಿ ಪರಿವರ್ತಿಸಲು ಒಪ್ಪಿಗೆ.. ಹೀಗೆ ಬಹುತೇಕ ವಿಷಯಗಳನ್ನು ಭುಟ್ಟೋ ಒಪ್ಪಿಕೊಂಡಿದ್ದರು. ಆ ಸಂಬಂಧ ಮತ್ತೆ ಹದಗೆಟ್ಟಿದ್ದು ಕಾರ್ಗಿಲ್ ಯುದ್ಧದಿಂದಾಗಿ.
ಅದೇ ರೀತಿ ವಾಜಪೇಯಿ ಮತ್ತು ಪರ್ವೇಜ್ ಮುಷರಪ್ ಅವರ ನಡುವೆ ಆಗ್ರಾ ಶೃಂಗ ಸಭೆಯ ಕೊನೆಯಲ್ಲಿ ಇನ್ನೇನು ಪರಸ್ಪರ ಸಮ್ಮತಿಯ ಒಪ್ಪಂದಕ್ಕೆ ಸಹಿ ಬೀಳುತ್ತದೆ ಎನ್ನುವಾಗ ಮುರಿದು ಬಿತ್ತು. ಅದಕ್ಕೆ ಕಾರಣವಾಗಿದ್ದು ಆಗಿನ ಉಕ್ಕಿನ ಮನುಷ್ಯ ಅಡ್ವಾಣಿ -ಸುಷ್ಮಾ ಜೋಡಿ. ಈ ಎರಡನೇ ಘಟನೆಗೆ ಪತ್ರಕರ್ತನಾಗಿ ನಾನು ಕೂಡಾ ಸಾಕ್ಷಿ. ಆಗ್ರಾ ಶೃಂಗ ಸಭೆಯ ಪ್ರತ್ಯಕ್ಷ ವರದಿ ಮಾಡಲು ಅಲ್ಲಿಗೆ ಹೋಗಿದ್ದೆ.
ಅಟಲಬಿಹಾರಿ ವಾಜಪೇಯಿ ಅವರಿಗೆ ತನ್ನ ಸಂಪುಟದ ಸದಸ್ಯರ ಹೆಸರುಗಳೇ ಒಮ್ಮೊಮ್ಮೆ ನೆನಪಾಗದೆ ಇದ್ದರೂ ವಿದೇಶಾಂಗ ವ್ಯವಹಾರದ ಬಗ್ಗೆ ಅಗಾಧವಾದ ತಿಳುವಳಿಕೆ ಇತ್ತು. ಅವರ ಸಮೀಪವರ್ತಿಗಳ ಪ್ರಕಾರ ಏನಾದರೂ ಮಾಡಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆಯಬೇಕೆಂಬ ಆಸೆ ಇತ್ತಂತೆ ಅವರಿಗೆ. ಅಂತಹ 2001ರ ಜುಲೈ ನಲ್ಲಿ ನಡೆದ ಆಗ್ರಾ ಶೃಂಗ ಸಭೆಯ ಬಗ್ಗೆ ವಾಜಪೇಯಿ ಅವರಲ್ಲಿ ಅಂತಹದ್ದೊಂದು ನಿರೀಕ್ಷೆಯೂ ಇತ್ತು.
ಕಾರ್ಗಿಲ್ ಯುದ್ದದ ವೈರತ್ವವನ್ನು ಮನಸ್ಸಲ್ಲಿಟ್ಟುಕೊಳ್ಳದೆ ಅದೇ ಯುದ್ಧದ ಖಳನಾಯಕ ಪರ್ವೇಜ್ ಮುಷರಫ್ ಕಡೆ ಸ್ನೇಹದ ಹಸ್ತ ಚಾಚಿದ್ದ ವಾಜಪೇಯಿ ಆಗ್ರಾಕ್ಕೆ ಬಂದಿದ್ದರು. ಜುಲೈ 15ರ ಸಂಜೆ ಪತ್ನಿ ಜತೆ ತಾಜಮಹಲ್ ವೀಕ್ಷಿಸಿ ಬಂದಿದ್ದ ಸೈನಿಕ ಮುಷರಫ್ ಹರ್ಷಚಿತ್ತರಾಗಿದ್ದರು.
ಅದೇ ರಾತ್ರಿ ವಾಜಪೇಯಿ ಜತೆ ಮಾತುಕತೆಗೆ ಕೂತಿದ್ದಾಗ ಬಾಗಿಲಿನೆಡೆಯಿಂದ ‘’ಗುಪ್ತ ಹಸ್ತ’’ವೊಂದು ಒಳಚಾಚಿತ್ತು. ಆ ಕೈಯಲ್ಲಿ ಒಂದು ಚೀಟಿ ಇತ್ತು. ಅದನ್ನು ಕಳಿಸಿದವರು ಐಎಸ್ ಐ ಮಾಜಿ ಮುಖ್ಯಸ್ಥ ಹಮೀದ್ ಗುಲ್ ಅನುಯಾಯಿಯಾಗಿದ್ದ ವಿದೇಶಾಂಗ ವ್ಯವಹಾರ ಖಾತೆ ಸಚಿವ ಅಬ್ದುಲ್ ಸತ್ತಾರ್. ಆ ಚೀಟಿ ನೋಡಿದೊಡನೆ ಮುಷರಫ್ ಮುಖಗಂಟಿಕ್ಕಿದ್ದರಂತೆ.
ಆಗ್ರಾ ಶೃಂಗ ಸಭೆಯಲ್ಲಿ ‘’ಕಾಶ್ಮೀರ ವಿಷಯವೇ ಪ್ರಧಾನ’’ ಎಂದು ಪಾಕಿಸ್ತಾನ ಹಠ ಮಾಡಿ ಕೂತಿದ್ದರೆ ‘’ಉಳಿದೆಲ್ಲವುಗಳ ಜತೆ ಕಾಶ್ಮೀರ ವಿಷಯವೂ ಇರಲಿ’’ ಎನ್ನುವುದು ಭಾರತದ ವಾದವಾಗಿತ್ತು. ಮುಷರಫ್ ಇದನ್ನು ಒಪ್ಪಿಕೊಂಡಿದ್ದರಂತೆ. ಆದರೆ ಅಷ್ಟರಲ್ಲಿ ಆಗ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅನಿರೀಕ್ಷಿತವಾಗಿ ಪತ್ರಕರ್ತರ ಕೊಠಡಿಗೆ ಬಂದು ಆಫ್ ದಿ ರೆಕಾರ್ಡ್ ಮಾತನಾಡುತ್ತಾ ‘’ ಭಾರತ ಅಂದುಕೊಂಡಂತೆಯೇ ಎಲ್ಲ ನಡೆಯುತ್ತಿದೆ’’ ಎಂಬ ಸುದ್ದಿಯನ್ನು ತೂರಿಬಿಟ್ಟು ಹೊರಟುಹೋದರು. ಟಿವಿ ಚಾನೆಲ್ ಗಳಲ್ಲಿ ಸುದ್ದಿ ಬ್ರೇಕ್ ಆಯಿತು.
ಇದನ್ನು ನೋಡಿದೊಡನೆಯೆ ಪಾಕಿಸ್ತಾನದ ಐಎಸ್ ಐ ಪಡೆ ಕೆರಳಿ ಹೋಗಿತ್ತು. ಆಗಲೇ ಚೀಟಿ ರವಾನೆಯಾಗಿದ್ದು. ಅದರ ನಂತರ ಮುಷರಫ್ ಇನ್ನಷ್ಟು ಬಿಗಿಯಾಗಿ ಹೋದರು. ಕೊನೆಗೆ ತೇಪೆ ಹಚ್ಚುವ ರೀತಿಯಲ್ಲಿ ಆಗ್ರಾ ಘೋಷಣೆಗೆ ಸಹಿ ಹಾಕಿ ಸಂಪಾದಕರ ಸಭೆಯಲ್ಲಿ ಭಾರತದ ವಿರುದ್ಧ ಗುಡುಗಿ ಪಾಕಿಸ್ತಾನಕ್ಕೆ ಹಾರಿಹೋದರು.
ಸುಷ್ಮಾ ಸ್ವರಾಜ್ ಸ್ವಯಂ ಪ್ರೇರಣೆಯಿಂದ ಪತ್ರಕರ್ತರ ಕೊಠಡಿಗೆ ಖಂಡಿತ ಬಂದಿರಲಿಲ್ಲ, ಅವರಿಗೆ ಕೀ ಕೊಟ್ಟು ಕಲಿಸಿದವರು ಲಾಲ್ ಕೃಷ್ಣ ಅಡ್ವಾಣಿಯವರಂತೆ. ಅವರಿಗೆ ನಾಗಪುರದ ಕಡೆಯಿಂದ ಸಂದೇಶ ಬಂದಿರಬಹುದು. ಪರಿವಾರದಲ್ಲಿರುವ ಯಾರಿಗೂ ಪಾಕಿಸ್ತಾನದ ಜತೆ ಅಟಲಬಿಹಾರಿ ವಾಜಪೇಯಿ ಅವರು ಮಾತುಕತೆ ನಡೆಸುವುದು ಬೇಡವಾಗಿತ್ತು. ನಂತರದ ದಿನಗಳಲ್ಲಿ ವಾಜಪೇಯಿಯವರ ರಾಜಧರ್ಮ ಪಾಲನೆಯ ಆದೇಶ ಕೂಡಾ ಜಾರಿಯಾಗದಂತೆ ನೋಡಿಕೊಂಡವರು ಕೂಡಾ ಈಗಿನ ಮೂಕ ನಾಯಕ ಲಾಲ್ ಕೃಷ್ಣ ಅಡ್ವಾಣಿ.
-ದಿನೇಶ್ ಅಮಿನ್ ಮಟ್ಟು
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
