ಭಾವ ಭೈರಾಗಿ
ತಾಯಿಯ ತಾಳಿ ಕದ್ದು ಕುಡಿಯುತ್ತಿದ್ದವ, ‘ಸಮಾಜ ಸೇವಕ’ನಾದ ರೋಚಕ ಕತೆ..! ಮರೆಯದೆ ಓದಿ

“ಶಾಲೆಯಲ್ಲಿಯೇ ನಾನು ದಾದಾನಾಗಿ ಪ್ರಾರಂಭಿಸಿ ಬದ್ರತೆಗಾಗಿ ಹಣ ಸಂಗ್ರಹಿಸುತ್ತಿದೆ, ಮನೆಯಲ್ಲಿರುವ ಪ್ರತಿಯೊಂದನ್ನು ನನ್ನ ತಾಯಿಯ ಮಂಗಳಸೂತ್ರವನ್ನೂ ಒಳಗೊಂಡು ಕಳ್ಳತನ ಮಾಡುತ್ತಿದ್ದೆ. ”
ಆದರೆ ಸಿನಿಮಾ ನೋಡೊದಕ್ಕೂ ಮದ್ಯಪಾನ ಮಾಡೋದಕ್ಕೂ ಹಣವನ್ನು ಹೇಗೆ ಕದಿಯಬೇಕೆಂದು ಕಲಿಸಿದ ನನ್ನ ಸ್ನೇಹಿತರ ಕೆಟ್ಟ ಸಹವಾಸದಲ್ಲಿದ್ದೆ. ಶಾಲೆಯಲ್ಲಿ ನಾನು ದಾದಾ ಆಗಿ ಭದ್ರತಾ ಹಣ ಎಂದು ಒಬ್ಬೊಬ್ಬ ವಿದ್ಯಾರ್ಥಿಯ ಕಡೆಯಿಂದ 10 ಪೈಸೆ ಕೂಡಿಸುತ್ತಿದ್ದೆ. ಯಾರು ಕೊಡಲಿಲ್ಲವೋ ಅವರನ್ನು ಹೊಡೆಯುತ್ತಿದೆ. ಮನೆಯಲ್ಲಿರುವ ಪ್ರತಿಯೊಂದನ್ನೂ, ನನ್ನ ತಾಯಿಯ ಮಂಗಳಸೂತ್ರವನ್ನೂ ಒಳಗೊಂಡು ಕಳ್ಳತನ ಮಾಡುತ್ತಿದ್ದೆ.ತಾಯಿಯ ಮದುವೆ ಸೀರೆಯನ್ನು ಸಹ ಕದ್ದು ಒತ್ತೆಯಿಡುತ್ತಿದ್ದೆ. ನಾನು ಕುಟುಂಬಕ್ಕೆ ಅವಮಾನವೆಂದು ಹೇಳಿ ನನ್ನ ತಂದೆ ತಾಯಿಗಳೂ ಸಂಬಂಧಿಕರೂ ನನ್ನನ್ನು ಮನೆಯಿಂದ ಹೊರಗೆ ಹಾಕಿಬಿಟ್ಟರು.
ನಾನು ಚೆನೈಗೆ ಓಡಿ ಹೋಗಿ ಹೋಟೆಲುಗಳಲ್ಲಿ ಪಾತ್ರೆ ತೊಳೆಯುವ ಕೆಲಸಮಾಡುತ್ತಿದ್ದೆ. ಅಲ್ಲಿಯೂ ಕಳ್ಳತನ ಮಾಡಿದ್ದರಿಂದ ಅಲ್ಲಿಂದ ಹೊರಗೆ ಹಾಕಿಬಿಟ್ಟರು. ಕಸ ಹಾಕುವ ಸ್ಥಳಗಳಲ್ಲಿ ಗಜ್ಜಿ ನಾಯಿಗಳೊಂದಿಗೆ ಮಲಗಿ ನನಗೂ ರೋಗ ಬಂದು ಬೇಸತ್ತ ಬಾಳನ್ನು ಮಾಡುತ್ತಿದ್ದೆ . ಬೇಗನೇ ನಾನು ಸೆರೆ ಹಿಡಿದು ಜೇಯಿಲಿನಲ್ಲಿ 10 ದಿನಗಳು ಇದ್ದೆ. ಅಲ್ಲಿ ಶೌಚಾಲಯ ಉಪಯೋಗ ಮಾಡಲು ಅನುಮತಿಸದೆ ಅಸ್ವಸ್ಥನಾಗಿ ಸಾಯುವ ಹಾಗಿದ್ದೆ. ಒಂದು ವೇಳೆ ದೇವರು ಕೊನೆಯ ಸಾರಿ ನನ್ನನ್ನು ಹೊಸ ವ್ಯಕ್ತಿಯಾಗಿರಲು ಸಹಾಯ ಮಾಡಿದರೆ ಹಾಗೆ ಬಾಳುವುದಾಗಿ ಒಂದು ಒಪ್ಪಂದದ ತೀರ್ಮಾನ ದೇವರೊಂದಿಗೆ ಮಾಡಿದೆ. ನನ್ನ ತಂದೆ ತಾಯಿಗಳು ಬಂದು ನನ್ನನ್ನು ಬಿಡುಗಡೆ ಮಾಡಿದರು. ಆಗ ಯೇಸು ಕ್ರಿಸ್ತನು ನನ್ನ ಬಾಳನ್ನು ಬದಲಾಯಿಸಿದನು. ನನ್ನ ಒಪ್ಪಂದ ಆತನಿಗೆ ಬಹು ಶ್ರದ್ಧೆಯಿಂದ ಪಾಲಿಸಿದೆ. ಆತನು ನನ್ನ ಪಾಪವನ್ನೆಲ್ಲಾ ಕ್ಷಮಿಸಿ ಹೊಸ ಬಾಳನ್ನು ನೀಡಿ ನನ್ನನ್ನು ಬದಲಾಯಿಸಿದನು. ನನಗೆ ಮದುವೆಯಾಯಿತು. ನನಗೆ ಬಂದ 1000 ರೂಪಾಯಿಂದ ಒಂದು ಆಟೋ ಕೊಂಡುಕೊಂಡೆ. ನಾನು ಆಟೋ ಚಾಲಕನಾಗಿದ್ದ ಬಡವರು ಹಸಿವೆಯಿಂದ ರಸ್ತೆಯಲ್ಲಿ ನಿಸ್ಸಹಾಯಕರಾಗಿ ಬಿದ್ದುಕೊಂಡಿರುವುದನ್ನು ಕಂಡೆ.ಬಿನ್ನಿಪೇಟೆಯ ಕಸಹಾಕುವ ಸ್ಥಳದಲ್ಲಿ ಎಲುಬು ಚರ್ಮವಾಗಿ ಬಿದ್ದುಕೊಂಡಿದ್ದ ವ್ಯಕ್ತಿಯೇ ನಾನು ಕಾಪಾಡಿದ ಮೊದಲನೆಯ ವ್ಯಕ್ತಿ. ನನ್ನ ಕುಟುಂಬ ನೋಡಿಕೊಳ್ಳಲು ನನಗೆ ಕಷ್ಟವಾಯಿತ್ತು. ಅದರಲ್ಲಿ ಈ ವ್ಯಕ್ತಿಯನ್ನು ಸಹಾಯಮಾಡಲು ದೇವರಲ್ಲಿ ಪೂರ್ಣ ವಿಶ್ವಾಸವಿಟ್ಟೆ.
ಯಾರೂ ನನ್ನ ಈ ಸೇವೆಗೆ ಆಗ ಸಹಕಾರ ಮಾಡಲಿಲ್ಲ. ನಿಸ್ಸಹಾಯಕ ಗತಿಯಿಲ್ಲದವರನ್ನು ನನ್ನ ಮನೆಗೆ ಕರಕೊಂಡು ಬರುವುದನ್ನು ನನ್ನ ಅಕ್ಕ ಪಕ್ಕದ ಮನೆಯವರು ನಿಂದಿಸಿದರು. ಆರಂಭದಲ್ಲಿ ನಾನು ಎಷ್ಟೋ ತಿಂಗಳು ನನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಗತಿಯಿಲ್ಲದವರ ಸೇವೆಯಲ್ಲಿದ್ದು ನೋಡಿಕೊಳ್ಳುವುದು ಕಷ್ಟಕರವಾಗಿತ್ತು.
ಎಸ್.ಆರ್. ಮನೋಹರ್ ಎಂಬ ವ್ಯಕ್ತಿ ಅನಂತರ, ಇಂಡಿಯಾ ಕೆಂಪಸ್ ಕ್ರೂಸೆಡ್ ಫಾರ್ ಕ್ರೈಸ್ಟ್ ಸಂಸ್ಥೆಯವರು ನನಗೆ ಹಣ ಸಹಾಯ ಮಾಡಿದರು. ಮುಖ್ಯಮಂತ್ರಿ ಹೆಚ್.ಡಿ . ಕುಮಾರ ಸ್ವಾಮಿಯವರ ಹಾಗೆ ಕಾಣುತ್ತಿದ್ದೇನೆಂದು ತಮಾಷೆಯಾಗಿ ನನಗೆ ಹೇಳುತ್ತಿದ್ದರು. ಅವರು ಕರ್ನಾಟಕದ ಮುಖ್ಯ ಮಂತ್ರಿಗಳಾಗಿ ಇದ್ದಾಗ ನನ್ನ ಸೇವೆಗೆ ಜಮೀನು ಹಾಗೂ ಕಟ್ಟಡಗಳನ್ನು ಕಟ್ಟಿ ನನ್ನ ಸೇವೆಗೆ ಬಹಳವಾಗಿ ಸಹಾಯಮಾಡಿದರು. ಸ್ವಲ್ಪಕಾಲದ ನಂತರ ಮಾರವಾರಿ ಹಾಗೂ ಜೆನ್ ಸಮುದಾಯದವರು ಔಷಧ ಇತ್ಯಾದಿ ಅವಶ್ಯಕತೆಗಳನ್ನು ಕೊಟ್ಟು ಸಹಾಯಮಾಡಿದರು.
1997 ರಲ್ಲಿ ಕೆಲವು ಕ್ರಿಸ್ತ ಸೇವಕರ ಸಹಾಯದ ಮೂಲಕ ಭಾರತ ನವ ನಾವೆ ಸೇವೆಯನ್ನು ಸ್ಥಾಪಿಸಿದೆ. ಈಗ ಲಿಂಗರಾಜಪುರ ಹಾಗೂ ದೊಡ್ಡ ಗುಬ್ಬಿಯಲ್ಲಿರುವ ಮನೆಗಳಲ್ಲಿ ನಿರ್ಗತಿಕರಾಗಿರುವ 450 ಜನರಿದ್ದಾರೆ. ನಾವು ಕ್ಯಾನ್ ಸರ್, ಏಡ್ಸ್ ಮುಂತಾದ ಗಂಭೀರ ರೋಗಿಗಳೂ ಬುದ್ದಿ ಮಾಂದರಾಗಿರುವವರಿಗೂ ಆಶ್ರಯ ಕೊಡುತ್ತೇವೆ.ನಾನು ಬೀದಿಯಲ್ಲಿ ಬಿದ್ದಿರುವವರನ್ನು ನನ್ನ ಆಟೊದಲ್ಲಿ ನನ್ನ ಮನೆಗೆ ತರುತ್ತಾ ಇದ್ದುದರಿಂದ ನನಗೆ ಆಟೋ ರಾಜ ಎಂಬ ಹೆಸರು ಬಂತು. ಕಳೆದ 16 ವರ್ಷಗಳಿಂದ ನನ್ನ ಸೇವೆಯಲ್ಲಿ ಬೆಂಗಳೂರು ಬೀದಿಯಲ್ಲಿ ಬಿದ್ದಿದ್ದ 5000 ನಿರ್ಗತಿಕರನ್ನು ಸಂರಕ್ಷಿಸಿ ಸಹಾಯಮಾಡಲು ಸಾಧ್ಯವಾಯಿತು. ರಸ್ತೆಯಲ್ಲಿ ಬಿದ್ದಿದ್ದ 2500 ಶವಗಳಿಗೆ ಗೌರವವಾಗಿ ಸಂಸ್ಕಾರ ಮಾಡಲಾಯಿತು.
ಸಾಯುವವರ ಕೊನೆ ಆಶೆಯನ್ನು ಪೂರೈಸಲು ನಾನು ಯತ್ನಿಸುವೆ. ಸಾಮಾನ್ಯವಾಗಿ ಅದು ಅವರಿಗೆ ಇಷ್ಟವಾದ ಊಟ ತಿನ್ನಬೇಕೆಂಬ ಆಶೆಯಾಗಿರುತ್ತೆ. ನಾನು ಕೊತ್ತನೂರಲ್ಲಿದ್ದುಕೊಂಡು ನನ್ನ ಕುಟುಂಬ ಹಾಗೂ ನಿರ್ಗತಿಯರೊಂದಿಗೆ ಸಮಯ ಕಳೆಯುತ್ತಿದ್ದೇನೆ. ನಾವು ಒಂದು ದೊಡ್ಡ ಸಂತೋಷ ಕುಟುಂಬ.
NDTV ಯಲ್ಲಿ ನನ್ನನ್ನು ಸಂದರ್ಶನ ಮಾಡಿದ್ದರು CNN IBN ನಲ್ಲಿ ನಿಜ ಹೀರೋ ಪ್ರಶಸ್ತಿ ನೀಡಿದ್ದಾರೆ. ದಿನಪತ್ರಿಕೆಯಲ್ಲಿ ಸಹ ನನ್ನ ಕೆಲಸದ ಬಗ್ಗೆ ಬಂದಿವೆ.
ಸದ್ಯಕ್ಕೆ ಸರಕಾರದಿಂದ ಯಾವ ಸಹಾಯವಿಲ್ಲದೆ ನಾನು ನನ್ನ ಸೇವೆ ಮಾಡುತ್ತಿದ್ದೇನೆ. ನಾನು ದೇವರೊಂದಿಗೆ ಅಂದು ಮಾಡಿಕೊಂಡ ನನ್ನ ಕೊನೆ ಒಪ್ಪಂದವನ್ನು ಇದುವರೆಗೆ ಪಾಲಿಸುತ್ತಾ ಬಂದಿದ್ದೇನೆ. ಆತನೂ ತನ್ನ ಭಾಗವನ್ನು ಮಾಡುತ್ತಿದ್ದಾನೆ.
ನನ್ನ ಬಾಳೊಂದು ವಿಮಾನವಿದ್ದ ಹಾಗಿದೆ. ಹೇಗೆ ವಿಮಾನ ಪ್ರಾರಂಭದಲ್ಲಿ ವೇಗ ನಿಯಂತ್ರಿಸಲು ಹೋರಾಡಿ ಓಡಾಡುತ್ತದೋ ಹಾಗೆ ಪ್ರಾರಂಭದಲ್ಲಿ ಹೋರಾಡಿ ಓಡಾಡಬೇಕಿತ್ತು. ಇಂದು ಸಾಕಷ್ಟು ವೇಗ ಪಡಕೊಂಡು ಸರಿಯಾದ ರೀತಿಯಲ್ಲಿ ನಾನು ಹಾರಾಡುತ್ತಿರುವುದಾಗಿ ನನಗನಿಸುತ್ತೆ. ಯಾವಾಗ ಇಳಿಯಬೇಕೋ ಅದು ದೇವರ ಕೈಯಲ್ಲಿದೆ !
ವಿಡಿಯೋ ನೋಡಿ
https://m.facebook.com/story.php?story_fbid=792849841085857&id=352420091795503
ಸುದ್ದಿದಿನ.ಕಾಂ|ವಾಟ್ಸಾಪ್|99986715401

ಭಾವ ಭೈರಾಗಿ
ಕವಿತೆ | ಕಿಚನ್ ವಕ್ತ್

- ಸಂಘಮಿತ್ರೆ ನಾಗರಘಟ್ಟ
ಎದ್ದ ತಕ್ಷಣ
ಎದ್ದೋ ಬಿದ್ದೋ ಎಂದು
ಫ್ರೆಶ್ ಆಗಲು ಬಾತ್ ರೂಂ
ನತ್ತ ಹೋಗುವುದೇ ತಡ
ಅಲ್ಲಿನ ಪುಟ್ಟ ಕನ್ನಡಿಯಲ್ಲಿ
ಹಿಡಿ ಮಾತ್ರದ ನನ್ನ ಮುಖ
ಥೇಟ್ ಆಟದ ರೋಬೋಟ್
ನಂತೆಯೇ ಕಾಣುತ್ತಿತ್ತು
ಒಳಗಿನಿಂದ ಕದ ತೆಗೆದು
ಆಚೆ ಹೆಜ್ಜೆಯಿಡುವ ಹೊತ್ತಿಗಾಗಲೇ
ಕಿಚನ್ ನಲ್ಲಿ ಆರ್ಡರ್ ಸಿದ್ಧ
ಬಿಸಿ ನೀರು ಒಬ್ಬರಿಗಾದರೆ
ಸ್ಟ್ರಾಂಗ್ ಕಾಫಿ ಇನ್ನೊಬ್ಬರಿಗೆ
ಅದನ್ನು ಕೊಡುವ ಗ್ಲಾಸ್
ಗಾಜಿನದೋ ಸ್ಟೀಲ್ ನದೋ
ಎಂಬ ಗೊಂದಲದಲ್ಲೇ
ಸ್ಟವ್ ಮೇಲಿನ ಹಾಲು
ಉಕ್ಕಿ ತನ್ನ ಹಿತ ಶತ್ರು
ಗ್ಯಾಸ್ ಟ್ಯುಬ್ ನತ್ತ ಹರಿಯುತ್ತಿತ್ತು
ಅದನ್ನು ಉಜ್ಜಿ ಕ್ಲೀನ್ ಮಾಡಿ
ಸಿಂಕ್ ನತ್ತ ನೋಡುತ್ತಿದ್ದಂತೆ
ಎಲ್ಲಾ ಪಾತ್ರೆ ಸೌಟು ಬಾಣಲೆಯಲ್ಲಿ
ತೇಲುತ್ತಿದ್ದ ಅನ್ನದ ಅಗುಳು
ಇನ್ನು ಅರೆಬರೆ ಖಾಲಿ ಆಗಿದ್ದ
ಹೊಟ್ಟೆ ಒಳಗಿನ ಕಲ್ಮಶದಂತಿತ್ತು
ರಾತ್ರಿ ,ಹಗಲು ಮಾಡುವ
ತಿಂಡಿ -ಕೆಲಸಗಳ ಚಿಂತೆಯಲ್ಲೇ
ನಿದ್ದೆ ಹೀರಿಕೊಂಡು ಮುಖ
ಹುಳಿ ಹಿಂಡಿದಂತಾಗಿತ್ತು….
ಇನ್ನೇನು ಎಲ್ಲಾ ಕೆಲಸ ಮುಗಿಸಿ
ಸೋಫಾ ದಲ್ಲಿ ಕುಳಿತು
ಸುದ್ದಿ ಫೀಡ್ ನೋಡುತ್ತಿದ್ದೆ
ಅಕ್ಕಿ ರಾಗಿಯ ಬೆಲೆ ಪಟ್ಟಿ ಏರಿತ್ತು
ಯಾಕೋ ಈಗಲೂ ದಾಸರಿರಬೇಕಿತ್ತು
ಸಮ ತೂಕ ಮಾಡಿ ಎರಡನ್ನೂ ಅಳೆದು
ನಮ್ಮವರ ಹೊಟ್ಟೆಯನ್ನೂ ತುಂಬಿಸಬೇಕೆನಿಸಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ರೇಖೆಗಳು

- ಡಾ.ಪುಷ್ಪಲತ ಸಿ ಭದ್ರಾವತಿ
ಗಡಿ ದೇಶಗಳೇನೊ ಹಂಚಿಕೊಂಡಿರಿ
ಆದರೆ,
ಸೂರ್ಯ ಚಂದ್ರರ ಗತಿಯೇನು
ಉಸಿರಾಡುವ ಗಾಳಿಯು ಒಂದಿರುವಾಗ
ಪ್ರಾಣವಾಯುವಿಗೆ ಬಂಧನದಲ್ಲಿರಿಸಲಾದಿತೆ
ಹರಿಯುವ ನದಿಗಳಿಗೆ ನಾಮಕರಣವೇನೋ ಮಾಡಿದಿರಿ
ಆದರೆ,
ಜರಿಗಳು, ಹಳ್ಳಕೊಳ್ಳಗಳು ಮಾಡಿದಾದರೂ ಏನು
ಪೂಜಾರಿ ಕೊಟ್ಟಿದ್ದು ತೀರ್ಥವೆ
ಆಬೆಜಂಜಂ, ಹಾಲಿ ವಾಟರ್ ಎಲ್ಲವೂ ಜಲ
ಫಾದರ್,ಪೂಜಾರಿ,ಮೌಲ್ವಿ
ಎಲ್ಲರೂ ಕುಡಿದದ್ದು ನೀರು
ಕೊನೆಗೂ ಅದರ ಮೂಲರೂಪ ಬದಲಾಗಲಿಲ್ಲ
ಮನುಷ್ಯ ,ಪ್ರಾಣಿ,ಮರಗಿಡಗಳ
ತಳಿಗಳನ್ನು ಬೇರ್ಪಡಿಸುವವನು ಮೂರ್ಖನೇ ಇರಬೇಕು .
ದೇಹದಲ್ಲಿರುವ ನರಮಂಡಲವನೊಮ್ಮೆ ಬೇರ್ಪಡಿಸಿ
ಬದುಕಲಾದಿತೆ
ಏನು?
ಕ್ರಿಸ್ತನೇನಾದರು ಬಂದು ಮತಾಂತರ ಮಾಡಿದನೇ
ಅಲ್ಲಾನೇನಾದರು ಬಂದು ರಾಮಮಂದಿರ ಕೆಡವಿದನೇ
ಶಿವನೇನಾದರು ಬಂದು ಮಸೀದಿಯನ್ನು ಹೊಡೆದುರುಳಿಸಿದನೇ..!?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು..!

- ಪ್ರೀತಿ.ಟಿ.ಎಸ್, ದಾವಣಗೆರೆ
ಬೇಂದ್ರೆಯವರು “ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು, ಕಳೆದ ದುಃಖಗಳಲ್ಲಿ ನೆನೆದಂತೆಯೆ” ಎಂದು ತಮ್ಮ ಸಖೀ ಗೀತದಲ್ಲಿ ಹಾಡುತ್ತಾರೆ. ಆದರೆ ಈ ಹೊಸ ವರ್ಷದಲ್ಲಿ ಕಹಿದಿನಗಳ ನೆನಪೇ ಬೇಡ, ಸಿಹಿ ಕಹಿ ಕನಸುಗಳನ್ನು ಕಂಡಂತಹ ಎಳೆತನದ, ಕೆಳೆತನದ ದಿನಗಳ ನೆನಪೇ ಸ್ಥಿರವಾಗಿರಲಿ; ಕಾಲನ ಹೊಡೆತಕ್ಕೆ ಆ ಕನಸುಗಳ ನೆನಪು ಮರೆಯಾಗದಿರಲಿ.
ಹೊಸ ವರ್ಷದಲ್ಲಿ ಇದೆಂತ ಬರಿತ್ತಿದ್ದಾರೆ ಅಂತೀರ! ನಿಮಗಿಂದು ಬರೀ ಹೊಸ ವರುಷ. ಆದರೆ ನನಗೋ ನನ್ನ ಜೀವನ ಪಾವನವಾಗಿಸುವ ದಿನ. ಯಾಕೇ ಗೊತ್ತಾ? ನನ್ನ ಸಾಹಿತ್ಯ ಕ್ಷೇತ್ರಕ್ಕೆ ಅನುಕರಿಣಿಸಿ, ಸಮಾಜ ಕ್ಷೇತ್ರದಲ್ಲಿ ನನ್ನನ್ನ ತೊಡಗುವಂತೆ ಮಾಡಿ, ಕಿಂಚಿತಾದರೂ ನನ್ನಲ್ಲಿ ದಯೆ, ಕರುಣೆ, ವಿಶ್ವಾಸ, ಪ್ರೀತಿ ಹೀಗೆ ಅನೇಕ ಭಾವಗಳನ್ನ ಚಿಕ್ಕಂದಿನಿಂದ ತಿದ್ದಿ ತೀಡಿದ ನನ್ನ ತಂದೆ ತಾಯಿಯ ಜನುಮ ದಿನ.
ಹೊಸ ವರುಷಕ್ಕಿಂತ ಇವರೀರ್ವರ ಜನುಮವೇ ಅದೇನೋ ಸಂಭ್ರಮ. ಅದೇನೋ ಸಡಗರ. ಹಳೆಯ ನೆನಪಿನ ಬುತ್ತಿಯನ್ನು ಮುಚ್ಚಿಟ್ಟು ಹೊಸ ಜೀವನದ ಪಯಣಕ್ಕೆ ಅದೇನೋ ಕಾತುರದಿಂದ ಗಡಿಬಿಡಿಯಾಗುವಾಗ ಅಪ್ಪಾಜಿ ಬಂದು ಹಾದಿಯಲ್ಲಿ ಕಲ್ಲು- ಮುಳ್ಳುಗಳಿರಬಹುದು ಎಚ್ಚರ! ಆದರೆ ಅದನ್ನು ಎದುರಿಸಿ ಮುನ್ನಡೆದಾಗಲೇ ಸುಖ ಸಾಗರ ಎಂಬ ಅವರ ಆಶಯದ ನುಡಿ ಮಾತುಗಳು ಬಹುಶಃ ಇಂದು ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ.
ಮಾಮೂಲೀ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ತಂದೆ-ತಾಯಿಯ ಪೋಸ್ಟ್ ಹಾಕಿ ವಿಶ್ ಮಾಡಿದ್ರೆ ಮುಗಿತಿತ್ತು. ಆದರೆ ಈ ಭಾರಿ, ನನಗಾಗುತ್ತಿರುವುದು ವಿಚಿತ್ರ ಅನುಭವ. ಸಾವಿರ ನೋವು, ದುಃಖ-ದುಮ್ಮಾನಗಳು ಎದೆಯಲ್ಲಿದ್ರು ನಮ್ಮ ಮುಂದೆ ತೋರಿಸದೆ ಮನಸ್ಸಲ್ಲೇ ಇಟ್ಟು ಕೊರಗುತ್ತ ಒಳ್ಳೆಯ ವಿದ್ಯಾಭ್ಯಾಸ ನೀಡಿ, ಸಂಸ್ಕೃತಿ, ನಾಡು-ನುಡಿ, ಸಂಸ್ಕಾರವನ್ನು ಭಿತ್ತುತ್ತ ಬಂದಿದ್ದಾರೆ. ಸುಖದಲ್ಲೆ ಬೆಳೆದ ನಮಗೆ ಕಹಿ ಜೀವನದ ಅನುಭವ ಕಡಿಮೆಯೇ!
ಅಪ್ಪಜಿ-ಅಮ್ಮನ ಆಸೆಯಂತೆ ಮಾಸ್ಟರ್ ಆಫ್ ಜರ್ನಲಿಸಂ ಅಲ್ಲಿ ಎರಡು ಬಂಗಾರದ ಪದಕ ಗೆದ್ದು ಅವರಿಗೆ ನೀಡಿ ಆಸೆ ತೀರಿಸಿದ ನಂತರವಷ್ಟೇ ತಿಳಿದ್ದದ್ದು. ಜೀವನದ ಆಳವೆಷ್ಟು ಎಂದು? ಅಪ್ಪಾಜಿ ಅಮ್ಮನನ್ನು ಬಿಟ್ಟು ಕೆಲಸ ಹುಡುಕುತ್ತ ಬೆಂಗಳೂರಿಗೆ ಬಂದಾಗ ನಿಜವಾದ ರೋಧನೆ, ನೋವು, ಒಂಟಿತನ, ಕಷ್ಟ, ಉಪವಾಸ, ಅನ್ನದ ಬೆಲೆ ಹೀಗೆ ಬದುಕಿನ ಅಷ್ಟು ಪಾಠಗಳು ತಿಳಿಯುತ್ತ ಹೋದದ್ದು. ಎಂತಹ ಒದ್ದಾಟದಲ್ಲೂ ನನ್ನ ತಂದೆ-ತಾಯಿಗೆ ತಿಳಿಸದೆ ನಗ್ತ ನಗ್ತ ಮಾತಾಡಿದ್ರು ಕ್ಷಣಮಾತ್ರದಲ್ಲಿ ಅಪ್ಪಜಿ ಮಾತ್ರ ನನ್ನ ನಗುವಿನ ಹಿಂದಿನ ದುಃಖನ ಗುರುತಿಸಿ, ಮತ್ತಷ್ಟು ಬಲ ತುಂಬುತ್ತ ಬಂದವರು.
ಜನವರಿ 1 ಬಂತೆಂದರೆ ಅಪ್ಪಾಜಿ ಅಮ್ಮನ ಹುಟ್ಟು ಹಬ್ಬ. ಈ ಭಾರಿ ನಾನು ನಿಮಗೆನೂ ಮಾಡಿದೇನು? ಕಡೆಪಕ್ಷ ಅವರ ಮುಂದೆ ಹೋಗಿ ನಿಂತು ಶುಭಾಶಯ ತಿಳಿಸಿ ಬಂದು ಬಿಡಲೇ ಎಂದರೆ ಕೈಯಲ್ಲಿ ಕಾಸಿಲ್ಲ. ಇಲ್ಲಿಂದಲೇ ಶುಭಾಶಯ ತಿಳಿಸಿ ಸುಮ್ಮನಾಗಿ ಬಿಡಲೇ ಎಂದರೆ ಮನಸ್ಸು ಒಪ್ಪುತ್ತಿಲ್ಲ. ಇದೀಗ ದುಡಿತ್ತಿದ್ದಿನಾದರು ಕಣ್ಣ ಮುಂದಿರುವ ಅಷ್ಟು ಹೊಣೆಗಾರಿಕೆಗಳು ನನ್ನನ್ನ ಕಟ್ಟಿಹಾಕ್ತಿದೆ. ಈ ಗೊಂದಲದ ನಡುವೇ ಈ ಲೇಖನ ನಿಮಗಾಗಿ.
ಅಪ್ಪಜಿ-ಅಮ್ಮ ಈ ಭಾರಿ ಹೊಸ ವರುಷದ ಹೊಸ ಆಚರಣೆ ಸಾಧ್ಯವಾಗದಿದ್ದರು ಬೇಸರಿಸದಿರಿ. ಯಾಕೆಂದರೆ ನಿಮಗಾಗಿ ನೀವು ಕಂಡ ಹೊಸ ಕನಸಿನ ಗೂಡೊಂದನ್ನ ಹೊತ್ತು ತರುತ್ತಿದ್ದೇನೆ. ತಂದ ದಿನವೇ ನಿಮ್ಮ ಈ ಜನುಮೋತ್ಸವವನ್ನು ಆಚರಿಸ್ತೇನೆ. ಇದನ್ನ ನಿಮ್ಮೊಡನೇ ಹೇಳಬಹುದಿತ್ತಾದರು, ನನ್ನ ಸಹಪಯಣಿಗರೊಡನೆ ಹಂಚಿಕೊಂಡ ಈ ಕನಸುಗಳು ನಮ್ಮ ಬಾಳಿನ ಮುಂದಿನ ಪಯಣದ ಬುತ್ತಿಯಾಗುತ್ತದೆ ಎಂಬುದು ನನ್ನ ಭಾವನೆ.
ಇಂತಹ ಅದೆಷ್ಟೋ ಅನುಭವಗಳು ಮನೆ ಬಿಟ್ಟು, ತಂದೆ ತಾಯಿಯ ಆಶಯವನ್ನು ನೆನಸಾಗಿಸೋ ಸಾವಿರ ಕನಸುಗಳನ್ನು ಹೊತ್ತು ಬಂದ ಅದೆಷ್ಟೋ ಮನಸ್ಸುಗಳಿಗೆ ಆಗಿರುತ್ತೆ. ಇನ್ನು ಕೆಲವರಿಗೆ ಇಡೀ ವರ್ಷದ ಶ್ರಮದಾಯಕ ದುಡಿಮೆ ಬಳಿಕ ಮನಸ್ಸು ಸ್ವಲ್ಪ ವಿಶ್ರಾಂತಿಯನ್ನು, ಮನೋರಂಜನೆಯನ್ನು ಬಯಸುತ್ತದೆ. ಕುಟುಂಬದ ಬಂಧವನ್ನು ಗಟ್ಟಿಗೊಳಿಸಲು ಮತ್ತು ಪ್ರೀತಿ, ಅನುಬಂಧವನ್ನು ಬಿತ್ತಲು ಹೊಸವರ್ಷವೊಂದು ಸುವರ್ಣಾವಕಾಶ. ನಮ್ಮ ಎಲ್ಲ ಕೆಲಸಕ್ಕೆ ಸ್ವಲ್ಪ ಸಮಯ ವಿಶ್ರಾಂತಿ ಕೊಟ್ಟು ರಿಲ್ಯಾಕ್ಸ್ ಮಾಡುವ ಮೂಲಕ ಸಂಭ್ರಮ, ಸಡಗರಕ್ಕೆ ಅಣಿಯಾಗೋಣ. ನಿಮ್ಮೆಲ್ಲರ ಆಸೆ, ನಿರೀಕ್ಷೆಗಳು ನೆರವೇರಲಿ ಎಂದು ಮನಸ್ಸಲ್ಲೆ ಪ್ರಾರ್ಥಿಸುತ್ತಾ, ಮುಸ್ಸಂಜೆ ಕವಿಯುತ್ತಿರುವಾಗಲೂ ಮರುದಿನದ ಬೆಳಗು ಆಶಾಕಿರಣವನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
