ದಿನದ ಸುದ್ದಿ
ಪರಿಶಿಷ್ಟ ಪಂಗಡದ ಜನ ಪ್ರತಿನಿಧಿಗಳು ಮತ್ತು ಕಂದಾಯ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ

ಸುದ್ದಿದಿನ,ಉಡುಪಿ : ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಇದರ ವತಿಯಿಂದ ‘ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರವನ್ನು ನೀಡುವಾಗ ಮತ್ತು ಪಡೆಯುವಾಗ ಅನುಸರಿಸಬೇಕಾದ ಕಾನೂನು ಕ್ರಮಗಳು’ ಎಂಬ ವಿಷಯ ಕುರಿತು ಪರಿಶಿಷ್ಟ ಪಂಗಡದ ಜನ ಪ್ರತಿನಿಧಿಗಳಿಗೆ ಹಾಗೂ ಕಂದಾಯ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವು ಫೆ.23ರಂದು ಉಡುಪಿ ಜಿಲ್ಲಾಧಿಕಾರಿಯ ಕಛೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜರಗಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಈದುರವರು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸುಮಾರು 70ಕುಟುಂಬಗಳ ಮಲೆಕುಡಿಯ ಬಾಂಧವರ ಜಾತಿ ಪ್ರಮಾಣ ಪತ್ರಗಳು ಹಾಗೂ ಕೇರಳ ರಾಜ್ಯದಿಂದ ಕರ್ನಾಟಕ ರಾಜ್ಯದಲ್ಲಿ ಬಂದು ನೆಲೆಸಿದವರ ಜಾತಿ ಪ್ರಮಾಣ ಪತ್ರಗಳ ಸಮಸ್ಯೆಗಳ ಕುರಿತಾಗಿ ಗಮನಸೆಳೆದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಾಧರ ಗೌಡ ಈದುರವರು ಅರಣ್ಯ ಹಕ್ಕಿಲ್ಲದ ಆದಿವಾಸಿಗಳನ್ನು ಅರಣ್ಯದಿಂದ ತೆರವುಗೊಳಿಸುವ ಆದೇಶವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಬಗ್ಗೆ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಜಾರಿಯಾಗದ ಕುರಿತು ಹಾಗೂ ತಿರಸ್ಕೃತ ಅರ್ಜಿಗಳ ಬಗ್ಗೆ ಪ್ರಸ್ತಾಪಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡ ನೂರಾಳ್ ಬೆಟ್ಟು,ಕಾರ್ಕಳ ತಾಲೂಕು ಸಮಿತಿಯ ಉಪಾಧ್ಯಕ್ಷ ಡೀಕಯ್ಯ ಗೌಡ, ಸಹ ಕಾರ್ಯದರ್ಶಿ ಸುಂದರಿ ಪೇರಡ್ಕ, ನಾನಾ ತಾಲೂಕು, ಗ್ರಾಮ ಸಮಿತಿಯ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಉಪಸ್ಥಿತಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಓಬವ್ವ ಆತ್ಮ ರಕ್ಷಣಾ ಕಲೆ ಕರಾಟೆ ಯೋಜನೆಗೆ 18 ಕೋಟಿ ರೂಪಾಯಿ ಮೀಸಲು

ಸುದ್ದಿದಿನ,ಯಾದಗಿರಿ : ರಾಜ್ಯ ವಸತಿ ಶಾಲೆಗಳ ಹೆಣ್ಣು ಮಕ್ಕಳ ಆತ್ಮರಕ್ಷಣೆಗಾಗಿ ರೂಪಿಸಿರುವ ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಯೋಜನೆಯ ಅನುಷ್ಠಾನಕ್ಕಾಗಿ 18 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಕರಾಟೆ ಪ್ರದರ್ಶನ ವೀಕ್ಷಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಕಲೆ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಯೋಜನೆಯನ್ನು ರಾಜ್ಯದ ಎಲ್ಲ ವಸತಿ ಶಾಲೆಗಳಲ್ಲಿ ಆರಂಭಿಸಿದೆ. ಈಗಾಗಲೇ ಒಂದು ಸಾವಿರ ಕರಾಟೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮಕ್ಕಳ ಕರಾಟೆ ಕಲೆ ಹಾಗೂ ಸಮವಸ್ತ್ರಕ್ಕಾಗಿ 18 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಡವರು, ಆರ್ಥಿಕವಾಗಿ ಹಿಂದುಳಿದವರು, ಅಲೆಮಾರಿಗಳ ಮಕ್ಕಳೇ ವಿಶೇಷವಾಗಿ ಈ ವಸತಿ ಶಾಲೆಗಳಿಗೆ ದಾಖಲಾಗುತ್ತಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ವಸತಿ ಶಾಲೆಗಳನ್ನು ಮತ್ತುಷ್ಟು ಬಲಪಡಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
