ದಿನದ ಸುದ್ದಿ
ನೋಟುರದ್ಧತಿ : ಪ್ರಧಾನಿಗಳ ಯಾವ ತರ್ಕವನ್ನೂ ಒಪ್ಪದಿದ್ದ ಆರ್ಬಿಐ ‘ಅನುಮೋದನೆ’..!

ಓಟುಗಳ ಮುದ್ರಣ, ಚಲಾವಣೆ ರಿಝರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ) ಕಾರ್ಯಕ್ಷೇತ್ರದಲ್ಲಿ ಬರುವಂತದ್ದು. ಆದರೂ ನವಂಬರ್ 8, 2016ರಂದು ಪ್ರಧಾನ ಮಂತ್ರಿಗಳು ಕಪ್ಪು ಹಣದ, ಖೋಟಾ ನೋಟುಗಳ ಮತ್ತು ಭಯೋತ್ಪಾದಕರ ಹಣಕಾಸಿನ ಮೂಲದ ವಿರುದ್ಧ 56 ಅಂಗುಲದ ಧೀರ ಕಾರ್ಯಾಚರಣೆ ಎಂದ 500 ರೂ. ಮತ್ತು 1000 ರೂ. ನೋಟುಗಳ ರದ್ಧತಿಯ ಪ್ರಕಟಣೆ ಮಾಡಿದಾಗ ಅದು ಆರ್ಬಿಐನ ನಿರ್ಧಾರವಾಗಿತ್ತೇ, ಅಥವ ಅದಕ್ಕೆ ಆರ್ಬಿಐ ನ ಮಂಜೂರಾತಿಯಾದರೂ ಸಿಕ್ಕಿತ್ತೇ? ಇದುವರೆಗೆ ಬಹಳ ಊಹಾಪೋಹದಲ್ಲೇ ಇದ್ದ ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್ ನಾಯಕ್ ಅವರ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸುತ್ತ ಬಂದ ಆರ್.ಬಿ.ಐ. ಕೊನೆಗೂ ನೀಡಿರುವ ಮಾಹಿತಿಯ ಪ್ರಕಾರ, ನೋಟುರದ್ಧತಿಯ ಮೋದಿ ಸರಕಾರದ ಪ್ರಸ್ತಾವನೆ ಆರ್.ಬಿ.ಐ. ಆಡಳಿತ ಮಂಡಳಿಯಲ್ಲಿ ಪ್ರಧಾನ ಮಂತ್ರಿಗಳು ಅದರ ಪ್ರಕಟಣೆ ಮಾಡುವ ಕೇವಲ ಎರಡೂವರೆ ಗಂಟೆಗಳ ಮೊದಲಷ್ಟೇ ಚರ್ಚೆಗೆ ಬಂತು.
ಆದರೆ ಪ್ರಧಾನ ಮಂತ್ರಿಗಳು ಅದನ್ನು ಪ್ರಕಟಿಸುವಾಗ ಅದಕ್ಕೆ ಆರ್.ಬಿ. ಐ. ಮಂಜೂರಾತಿ ಸಿಕ್ಕಿರಲಿಲ್ಲ, ಅದನ್ನು ಸರಕಾರಕ್ಕೆ ಕಳಿಸಿದ್ದು 38 ದಿನಗಳ ನಂತರ, ಡಿಸೆಂಬರ್ 6, 2016ರಂದು; ಕೊನೆಗೂ, ಆರ್ಬಿಐ ಆಡಳಿತ ಮಂಡಳಿ ಅನುಮೋದನೆ ನೀಡಿದರೂ, ಸರಕಾರದ ಹೆಚ್ಚಿನ ತರ್ಕಗಳನ್ನು ಅದು ಒಪ್ಪಲಿಲ್ಲ;
- ನೋಟುರದ್ಧತಿಯಿಂದ ಕಪ್ಪು ಹಣವನ್ನು ತಡೆಯಲು ಸಹಾಯವಾಗುವದಿಲ್ಲ, ಏಕೆಂದರೆ, ಹೆಚ್ಚಿನ ಕಪ್ಪು ಹಣ ನಗದಿನಲ್ಲಿ ಇಲ್ಲ, ಬದಲಾಗಿ ರಿಯಲ್ ಎಸ್ಟೇಟ್ ಮತ್ತು ಚಿನ್ನದ ರೂಪದಲ್ಲಿದೆ, ಅವುಗಳ ಮೇಲೆ ಈ ಕ್ರಮದ ಪರಿಣಾಮ ಅತ್ಯಲ್ಪ;
- ಖೋಟಾ ನೋಟಿನ ಪ್ರಮಾಣ 400 ಕೋಟಿ ರೂ.ಗಳಷ್ಟಾದರೂ ಒಟ್ಟು ನೋಟುಗಳ ಚಲಾವಣೆಯಲ್ಲಿ ಅದರ ಪ್ರಮಾಣ ಅತ್ಯಲ್ಪ, ಅದಕ್ಕಾಗಿ ನೋಟುರದ್ಧತಿಯ ಕ್ರಮದ ಅಗತ್ಯವಿರಲಿಲ್ಲ;3. ಚಲಾವಣೆಯಲ್ಲಿದ್ದ 500 ರೂ. ಮತ್ತು 1000ರೂ. ನೋಟುಗಳ ಏರಿಕೆಯ ಪ್ರಮಾಣ ಆರ್ಥಿಕ ಬೇಳವಣಿಗೆಯ ದರಕ್ಕೆ ಹೋಲಿಸಿದರೆ ಬಹಳ ಹೆಚ್ಚು ಎಂಬ ತರ್ಕವೂ ಅವುಗಳ ನಿಜಮೌಲ್ಯವನ್ನು ಪರಿಗಣಿಸಿದಾಗ ಒಪ್ಪುವಂತದ್ದಲ್ಲ;4. ಪ್ರಸಕ್ತ ವರ್ಷದಲ್ಲಿ ಈ ಕ್ರಮ ಜಿಡಿಪಿ ಬೆಳವಣಿಗೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.
ಅಂದರೆ ಒಟ್ಟಿನಲ್ಲಿ, ಪ್ರಧಾನ ಮಂತ್ರಿಗಳು ನೋಟುರದ್ಧತಿಗೆ ಕೊಟ್ಟ ಯಾವ ಕಾರಣವನ್ನೂ ಒಪ್ಪದಿದ್ದರೂ, ಬದಲಾಗಿ ಇದರಿಂದ ಆರ್ಥಿಕ ವ್ಯವಸ್ಥೆಯ ಮೇಲೆ ಅಲ್ಪಾವಧಿ ದುಷ್ಪರಿಣಾಮ ಉಂಟಾಗಬಹುದು ಎಂದು ಎಚ್ಚರಿಸಿದ್ದರೂ ಆರ್ಬಿಐ ಈ ಕ್ರಮವನ್ನು ಶಿಪಾರಸು ಮಾಡಿತು ಎಂಬುದು ಈ ಆರ್ಟಿಐ ಉತ್ತರದಿಂದ ತಿಳಿಯುವ ಆಂಶ.
ಇವೆಲ್ಲವೂ ಈಗಾಗಲೇ ಎಲ್ಲರ ಗಮನಕ್ಕೆ ಬಂದಿರುವ ಸಂಗತಿ, ನೋಟುರದ್ಧತಿ ಆರ್ಬಿಐ ಎಚ್ಚರಿಸಿದ್ದಕ್ಕಿತಲೂ ಹೆಚ್ಚಿನ ದುಷ್ಪರಿಣಾಮವನ್ನು ಜನಸಾಮಾನ್ಯರ ಮೇಲೆ ಅಲ್ಪಾವಧಿಯಲ್ಲಿ, ನಗದಿಗಾಗಿ ಪರದಾಟದಲ್ಲಿ ಮಾತ್ರವಲ್ಲ, ಅನೌಪಚಾರಿಕ, ಸಣ್ಣ ಉತ್ಪಾದನೆಯ ವಲಯದ ಧ್ವಂಸ ಮತ್ತು ಅಪಾರ ಪ್ರಮಾಣದ ಉದ್ಯೋಗ ನಷ್ಟದಲ್ಲಿ ಈಗಲೂ ಕಾಣ ಬರುತ್ತಿದೆ.
ಆದರೂ ರಿಝರ್ವ್ ಬ್ಯಾಂಕ್ ಈ ಕ್ರಮವನ್ನು ಬೆಂಬಲಿಸಿದ್ದು ಏಕೆ ಎಂಬ ಪ್ರಶ್ನೆಯೂ ಈಗ ಅರ್ಥಹೀನವಾಗಿದೆ.. ಆಗ ಆಡಳಿತ ಮಂಡಳಿಯ ಸದಸ್ಯರಾಗಿ ನವಂಬರ್ 8ರ ಸಭೆಯಲ್ಲಿ ಭಾಗವಹಿಸಿದ್ದವರಲ್ಲಿ ಒಬ್ಬರು ಈಗ ಆರ್ಬಿಐ ಗವರ್ನರ್ ಆಗಿದ್ದಾರೆ.
(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
