ರಾಜಕೀಯ
ವಿದ್ಯಾವಂತರಾದ ನಾವು ಬಹುಜನ ಚಳವಳಿಗೆ ಮಾಡುತ್ತಿರುವುದಾದರೂ ಏನು?

ಮಾನ್ಯ ಚಾಮರಾಜನಗರ ಲೋಕಸಭಾ ವ್ಯಾಪ್ತಿಯ ಬಂಧುಗಳೇ ಇತ್ತೀಚಿನ ವರದಿಯಂತೆ ಕರ್ನಾಟಕ ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷದ ಬಲವರ್ಧನೆಯು ಸಮೃದ್ಧವಾಗಿದೆ. ಈ ನಿಟ್ಟಿನಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಆನೆ ಸದ್ದಿಲ್ಲದೆ ಘೀಳಿಟ್ಟಿದೆ.
ಈ ಚುನಾವಣೆಯಲ್ಲಿ ಆನೆಯ ಮೇಲೆ ರಾಜ್ಯಧಿಕಾರವನ್ನು ಏರಲು ಮುನ್ನುಗುತ್ತಿರುವವರು ಯುವಕರ ಕಣ್ಮಣಿ, ನಾಡಿನ ಖ್ಯಾತ ಹೆಸರಾಂತ ಕನ್ನಡ ವಿದ್ವಾಂಸರು, ಪ್ರಗತಿಪರ ಚಿಂತಕರು ಹಾಗು ಎರಡನೇ ತಲೆಮಾರಿನ ಫುಲೆ-ಅಂಬೇಡ್ಕರ್ವಾದವನ್ನು ನಾಡಿನಾದ್ಯಂತ ಪಸರಿಸುತ್ತಿರುವ ಡಾ. ಶಿವಕುಮಾರರವರು. ಇವರು ಬಹುಜನ ಸಮಾಜ ಪಾರ್ಟಿ ಚಾಮರಾಜನಗರ ಲೋಕಸಬಾ ಕ್ಷೇತ್ರ (ಮೀಸಲು)ದಿಂದ ಸ್ಪರ್ಧಿಸಿದ್ದಾರೆ. ನಾಡಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಇವರು ೨೦೧೯ರ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ಮುನ್ನುಗುತ್ತಿದ್ದಾರೆ. ಕ್ಷೇತ್ರದ ಎಲ್ಲಾ ಧರ್ಮಿಯ, ಜಾತಿಯ ಜನರು ಕಾಂಗ್ರೆಸ್, ಬಿಜೆಪಿ ಆಡಳಿತದಿಂದ ಬೇಸತ್ತು ಹೊಸ ಮುಖದತ್ತ ಒಲವು ತೋರುತ್ತಿದ್ದಾರೆ.ಈ ಸಮಯದಲ್ಲಿ ಬಹುಜನ ಚಳವಳಿಯ ಯುವಕರು, ನೌಕರರರು ಪ್ರಗತಿಪರರು ಡಾ. ಶಿವಕುಮಾರರವರನ್ನು ತಮ್ಮ ತನು-ಮನ-ಧನವನ್ನು ಉದಾರ ಮನೋಭಾವದಿಂದ ಅರ್ಪಿಸಿ ಇವರ ಬೆನ್ನೆಲುಬಾಗಿ ನಿಲ್ಲಬೇಕಿದೆ.
ಬಂಧುಗಳೇ ನಾವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಕರ್ನಾಟಕದಲ್ಲಿ ಕಳೆದ 20 ವರ್ಷಗಳಿಂದ ಚಳವಳಿಯ ಒಂದು ಭಾಗವಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಲಕ್ಷಾಂತರ ವಿದ್ಯಾರ್ಥಿಗಳು ಸಾವಿರಾರು ನೌಕರರು, ಕೆಲವು ಜನಪ್ರತಿನಿಧಿಗಳು, ಕಲಾವಿದರು ಚಳವಳಿಯಿಂದ ಸೃಷ್ಠಿಯಾಗಿದ್ದಾರೆ. ನಾವೆಲ್ಲರೂ ಸೇರಿ ವರ್ಷಪೂರ್ತಿ ಚಳವಳಿಯ ರಥವನ್ನು ಎಳೆದು ಚುನಾವಣೆಗಳು ಬಂದಾಗ ಎಷ್ಟು ಜನರು ನಿಷ್ಕ್ರೀಯರಾಗುವುದು ಅಥವ ಕೆಲಸವನ್ನು ಚುರುಕುಗೊಳಿಸದಿರುವುದು ಅಥವ ತಮ್ಮ ತಮ್ಮ ಬೂತುಗಳಲ್ಲಿ ಮತಬ್ಯಾಂಕ್ ಭದ್ರಪಡಿಸದಿರುವುದು ನಾನಾ ಕಾರಣಗಳಿಂದ ರಾಜಕಾರಣ ಮಾಡದಿರುವ ಕಾರಣ ಗಾಂಧಿವಾದಿ ಕಾಂಗ್ರೆಸ್, ಕೋಮುವಾದಿ ಬಿಜೆಪಿ, ಬಂಡವಾಳಶಾಹಿ ಜೆ.ಡಿ.ಎಸ್ ಪಕ್ಷಗಳು ದೇಶದಲ್ಲಿ ರಾರಾಜಿಸುತ್ತಿವೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಚುನಾವಣೆ ಫಲಿತಾಂಶ ಕಾಣುವವರೆಗೂ ಮೈಮರೆಯದೆ ಕೆಲಸ ಮಾಡಬೇಕಿದೆ.
ಮತ್ತೊಂದು ವಿಷಯವನ್ನು ತಮ್ಮ ಗಮನಕ್ಕೆ ತಿಳಿಯಪಡಿಸಿಸುವುದೇನೆಂದರೆ ಈ 5 ವರ್ಷಗಳ ಅವಧಿಯಲ್ಲಿ ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಹೆಚ್ಚಾಗಿ ಪ್ರಶ್ನಿಸುತ್ತಿರುವವರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗು ವಿದ್ಯಾರ್ಥಿ ಸಂಘಟನೆಗಳು. ಉದಾಹರಣೆಗೆ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ, ದಲಿತ ಹೆಣ್ಣು ಮಕ್ಕಳಾದ ದಾನಮ್ಮ ಪ್ರಕರಣ, ಅನಿತಾಳ ಆತ್ಮಹತ್ಯೆ ಪ್ರಕರಣ, ಎಸ್.ಸಿ/ಎಸ್.ಟಿ ತಿದ್ದುಪಡಿ ವಿಧೇಯಕ, ಊನಾ ದೌರ್ಜನ್ಯ ಪ್ರಕರಣ, ಮುಸ್ಲಿಂ ವಿದ್ಯಾರ್ಥಿ ನಜೀಬ್ ನಾಪತ್ತೆ, ಬ್ಯಾಕ್ಲಾಗ್ ಭರ್ತಿ ಮಾಡಿ, ನಿರುದ್ಯೋಗ ನಿವಾರಿಸಿ ಎಂಬ ಹೋರಾಟ, ಆರ್.ಎಸ್.ಎಸ್ ಬಂಧುತ್ವದ ವಿರೋಧಧ ಹೋರಾಟ, ಸಂಶೋಧನಾ ವಿದ್ಯಾರ್ಥಿಗಳ ಫೆಲೋಷಿಪ್ ಗಾಗಿ, ಕೆಲವು ಸಚಿವರನ್ನು ವಜಾಗೊಳಿಸಿದಾಗ ಅವರ ಪರವಾಗಿ ಬೀದಿಗಿಳಿದಿದ್ದು, ಸಂವಿಧಾನವನ್ನು ಬದಲಾಯಿಸಬೇಕೆಂದಾಗ ಪ್ರಜಾಪ್ರಭುತ್ವವಾದಿಗಳಿಗೆ ಅಪ್ಪ-ಅಮ್ಮ ಇಲ್ಲ ಎಂದು ಚೀಡಿಸಿದಾಗ ಹೋರಾಟ ರೂಪಿಸಿದ್ದು, ಇಂತಹ ೧೦ ಹಲವು ಹೋರಾಟಗಳನ್ನು ವಿದ್ಯಾವಂತರಾದ ನಾವು ರೂಪಿಸಿದ್ದು ಯಾರ ವಿರುದ್ಧ? ಯಾವ ಸರ್ಕಾರದ ವಿರುದ್ಧ?
ವಿದ್ಯಾವಂತ ಬಂಧುಗಳೇ ದಯಮಾಡಿ ಒಮ್ಮೆ ಸೂಕ್ಷ್ಮಮತಿಯರಾಗಿ ಯೋಚಿಸಿ. ಇಂತಹ ಸಾವಿರಾರು ಹೋರಾಟಗಳನ್ನು ಮಾಡಿದ್ದು ಕೇಂದ್ರದ ಬಿಜೆಪಿ ಮತ್ತು ರಾಜ್ಯ ಕಾಂಗ್ರೆಸ್ ಮತ್ತು ಜೆ.ಡಿಎಸ್ ಸರ್ಕಾರದ ವಿರುದ್ಧವಲ್ಲವೇ? ಜಾಗೃತರಾಗಿ. ದಾದಾಸಾಹೇಬ್ ಕಾನ್ಷಿರಾಮ್ಜೀ ಹೇಳುವ ಹಾಗೆ ಅನ್ಯಾಯ, ದೌರ್ಜನ್ಯ-ದಬ್ಬಾಳಿಕೆಗಳು ಆಳುವ ವರ್ಗದ ಮೇಲೆ ನಡೆಯುವುದಿಲ್ಲ. ಬದಲಾಗಿ ಗುಲಾಮರ ಮೇಲೆ ನಡೆಯುತ್ತಿದೆ. ಈ ಮಾತು ಈ ಸಂದರ್ಭದಲ್ಲಿ ನಾವು ನೆನೆಯಬೇಕಲ್ಲವೇ? ನಾವೆಲ್ಲ ಇಷ್ಟೊಂದು ದೊಡ್ಡ ಪ್ರತಿಭಟನೆ, ಹೋರಾಟ, ಉಪವಾಸಗಳನ್ನು 5 ವರ್ಷಗಳ ಕಾಲ ಕಾಂಗ್ರೆಸ್ ಬಿಜೆಪಿ ಸರ್ಕಾರಗಳ ವಿರುದ್ಧ ತೊಡೆ ತಟ್ಟಿ ನಿಂತು ನಮ್ಮಗಳ ಬುದ್ಧಿಶಕ್ತಿಯನ್ನು ವರ್ಷವಿಡಿ ಇಂತಹ ಹೋರಾಟಗಳಿಗೆ ವ್ಯಯಿಸಿ, ಚುನಾವಣೆ ಇನ್ನೂ (ಏಪ್ರಿಲ್) ಒಂದು ತಿಂಗಳು ಇದ್ದು, ಈ ಸಮಯದಲ್ಲಿ ಕಾಂಗ್ರೆಸ್-ಬಿಜೆಪಿಯ ಪರವಾಗಿ ಕೆಲಸ ಮಾಡುವುದು ನ್ಯಾಯವೇ? ಇದು ಅನ್ಯಾಯವಲ್ಲದೇ ಮತ್ತೇನು? ಮಾನ್ಯ ಶೈಕ್ಷಣಿಕ ಮಿತ್ರರೇ ನಮ್ಮಗಳ ವಿರೋಧಾಭಾಸವನ್ನು ಕಾಂಗ್ರೆಸ್ ಬಿಜೆಪಿ ಮಿತ್ರರಿಗೆ ತಿಳಿಸಿ ಜಾಗೃತಗೊಳಿಸಿ ಅವರೆಲ್ಲರನ್ನು ಬಾಬಾಸಾಹೇಬ್ ಅಂಬೇಡ್ಕರ್ರವರ ಚಳವಳಿಯ ರಥದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾದ ಡಾ.ಶಿವಕುಮಾರರವರನ್ನು ಜಯಶೀಲರನ್ನಾಗಿಸುವುದು ನಮ್ಮ ನಿಮ್ಮೇಲರ ಆದ್ಯ ಕರ್ತವ್ಯವವಲ್ಲವೇ? ಚಿಂತಿಸಿ.
ಜೈ ಭೀಮ್ ಜೈ ಭಾರತ್
–ಡಾ. ನವೀನ್ ಮೌರ್ಯ
ಸಂಶೋಧಕರು, ಮೈಸೂರು ವಿಶ್ವವಿದ್ಯಾನಿಲಯ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

ದಿನದ ಸುದ್ದಿ
ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ : ಭವ್ಯ ನರಸಿಂಹಮೂರ್ತಿ

ಸುದ್ದಿದಿನ, ಬೆಂಗಳೂರು : ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಅವರ ತತ್ವ ಆದರ್ಶಗಳು ಹಾಗೂ ಯುವ ಜನತೆಗೆ ನೀಡಿರುವ ಸಂದೇಶಗಳನ್ನು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಜನತೆಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಭವ್ಯ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಕ್ ರ್ಯಾಲಿ ಬೆಳಿಗ್ಗೆ 09-00 ಕ್ಕೆ ರಾಜಾಜಿನಗರ Entrance Bridge ಇಂದ ಪ್ರಾರಂಭವಾಗಿ ನವರಂಗ ಚಿತ್ರಮಂದಿರ – ಶಂಕರ್ ಮಠ – ಹಾವನೂರ್ ಸರ್ಕಲ್ – ಹೌಸಿಂಗ್ ಬೋರ್ಡ್ – ಕಾಮಾಕ್ಷಿಪಾಳ್ಯ ಬಸ್ ಸ್ಟಾಂಡ್ – ಹಾವನೂರ್ – ಅಕ್ಷಯ ಉಪಹಾರ – ಮೋದಿ ಹಾಸ್ಪಿಟಲ್ – ನವರಂಗ ಬ್ರಿಡ್ಜ್ – ಗಿರಿಯಾಸ್ ಸಿಗ್ನಲ್ – 6th ಬ್ಲಾಕ್ – ಕೊನೆಯದಾಗಿ 12 ಗಂಟೆಗೆ ಭಾಷ್ಯಮ್ ಸರ್ಕಲ್ ನಲ್ಲಿ ಕೊನೆಗೊಳ್ಳುತ್ತದೆ.
ದಾರಿಯಲ್ಲಿ 4 ಕಡೆ ಸ್ವಾಮಿ ವಿವೇಕಾನಂದರಿಗೆ ಪೂಜೆ ಹಮ್ಮಿಕೊಳ್ಳಲಾಗಿದೆ. ಪೂಜೆಯ ನಂತರ ವಿವೇಕಾನಂದರ ತತ್ವ ಆದರ್ಶಗಳನ್ನೊಳಗೊಂಡ ಹತ್ತು ಸಾವಿರ ಪುಸ್ತಕಗಳನ್ನು ಕ್ಷೇತ್ರದಾದ್ಯಂತ ಉಚಿತವಾಗಿ ಹಂಚಲಾಗುವುದು ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿರುತ್ತದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ7 days ago
ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ
-
ದಿನದ ಸುದ್ದಿ5 days ago
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ
-
ದಿನದ ಸುದ್ದಿ20 hours ago
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ19 hours ago
ನಟ ಮನದೀಪ್ ರಾಯ್ ನಿಧನ