ರಾಜಕೀಯ
ಯಾರಿಗೆ ಕರಗುತ್ತೆ ಬೆಣ್ಣೆನಗರಿ..? : ಬೆಣ್ಣೆನಗರಿಯಲ್ಲಿ ರಂಗೇರಿದ ರಣಕಣ..!

ಸುದ್ದಿದಿನ, ದಾವಣಗೆರೆ:ಮಧ್ಯ ಕರ್ನಾಟಕದ ಸ್ಟಾರ್ ಕ್ಷೇತ್ರವಾದ ದಾವಣಗೆರೆಯಲ್ಲಿ ರಣಬಿಸಿಲಿನೊಂದಿಗೆ ಬಿಜೆಪಿ ಮತ್ತು ಮೈತ್ರಿ ಪಕ್ಷಗಳ ನಡುವಿನ ಲೋಕಾ ಸಮರವೂ ದಿನೇದಿನೇ ರಂಗೇರುತ್ತಿದೆ.
ಕಳೆದ ಚುನಾವಣೆಗಳಲ್ಲಿನ ಕುತೂಹಲವೇ ಈ ಬಾರಿಯೂ ಮುಂದುವರೆದಿದ್ದು, ಹೆಸರಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳಿದ್ದರೂ ಕಾಂಗ್ರೆಸ್ ನ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಮಧ್ಯೆಯೇ ನೇರ ಪೈಪೋಟಿ. ಹೀಗಾಗಿ, ಎರಡು ಪಕ್ಷಗಳ ಅಭ್ಯರ್ಥಿಗಳು ನೇರವಾಗಿ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ.
ಈಗಾಗಲೇ ಸತತ ಮೂರು ಲೋಕಸಭಾ ಚುನಾವಣೆಯಲ್ಲೂ ಕಮಲ ಅರಳಿಸಿದ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ ಇದು ನನ್ನ ಕೊನೆ ಚುನಾವಣೆ. ಇದೊಮ್ಮೆ ನನ್ನನ್ನು ಗೆಲ್ಲಿಸಿ ಬಿಡಿ ಎಂದು ಪ್ರಚಾರ ಶುರು ಮಾಡಿಕೊಂಡಿದ್ದಾರೆ. ಇತ್ತ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹೆಚ್. ಬಿ.ಮಂಜಪ್ಪ ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಫೇಸ್ಬುಕ್ ಮೂಲಕ ಜನರ ಗಮನ ಸೆಳೆದಿರುವ ಹೆಚ್.ಬಿ.ಮಂಜುನಾಥ್ ದಾವಣಗೆರೆ ಅಭಿವೃದ್ದಿಗೆ ತನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಮಂಜಪ್ಪನವರ ಪರ ಅಲೆ ದಿನೇ ದಿನೇ ಹೆಚ್ಚುತ್ತಿದೆ. ಒಬ್ಬ ಸಾಮಾನ್ಯ ಕೃಷಿಕನನ್ನು ಗೆಲುವಿನ ದಡ ಮುಟ್ಟಿಸುವುದು ನಮ್ಮೆಲ್ಲರ ಕರ್ತವ್ಯ..ಗುರಿ ಮುಟ್ಟುವವರೆಗೂ ಮೈ ಮರೆಯದಿರೋಣ…ನಿಮ್ಮ ಮತ ಮಂಜಪ್ಪನವರಿಗೆ…💚
Posted by ನಿಮ್ಮ ಹೆಚ್ ಬಿ ಮಂಜಪ್ಪ on Wednesday, 10 April 2019
ಹಾಲಿ ಬಿಜೆಪಿ ವಶದಲ್ಲಿರುವ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈವರೆಗೂ ಒಟ್ಟು 11 ಬಾರಿ ಲೋಕಸಭಾ ಚುನಾವಣೆ ನಡೆದಿದ್ದು, ಎಂದಿನಂತೆ ಸಾಂಪ್ರದಾಯಿಕ ಎದುರಾಳಿ ಪಕ್ಷಗಳ ನಡುವೆಯೇ ಈ ಬಾರಿಯೂ ಮಹಾ ಸಮರ ಆರಂಭಗೊಂಡಿದೆ.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಮೂರು ಬಾರಿ ಪರಾಭವಗೊಂಡಿರುವ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಈ ಬಾರಿ ಲೋಕಕಣದಿಂದ ಹಿಂದೆ ಸರಿದಿದ್ದು, ಹೆಚ್.ಬಿ.ಮಂಜಪ್ಪ ಅವರನ್ನು ಕಣಕ್ಕಿಳಿಸಿದೆ.
ಅಂದಹಾಗೆ 2004, 2009, 2014ರ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಲ್ಲಿಕಾರ್ಜುನ್ ಈ ಬಾರಿಹಲವು ವೈಯಕ್ತಿಕ ಕಾರಣಗಳನ್ನು ನೀಡಿ ರಣಕಣದಿಂದ ಹಿಂದೆ ಸರಿದು ಕಿಂಗ್ ಮೇಕರ್ ಆಗಲಿದ್ದಾರಾ ನೋಡ ಬೇಕಿದೆ.
2009ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಪಡೆದಿದ್ದ ಮಲ್ಲಿಕಾರ್ಜುನ್, ಕೇವಲ 2 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದರು. 2014ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕ ಅಭ್ಯರ್ಥಿ ಹಾಕಿದ್ದರಿಂದ ಜೆಡಿಎಸ್ನ ಮಹಿಮಾ ಜೆ ಪಟೇಲ್ 46,911 ಮತ ಪಡೆದು, ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ್ 5,01,287 ಮತ ಪಡೆದುಕೊಂಡು 17607 ಮತಗಳ ಅಂತರದಿಂದ ಪುನಃ ಸೋಲು ಕಂಡರು.
ದಾವಣಗೆರೆ ಲೋಕಸಭಾ ಕ್ಷೇತ್ರವು ಒಟ್ಟು 8 ವಿಧಾನಸಭಾ ಕ್ಷೇತ್ರ ಹೊಂದಿದ್ದು, ದಾವಣಗೆರೆ ಉತ್ತರ ಕ್ಷೇತ್ರ, ಜಗಳೂರು, ಹರಪನಹಳ್ಳಿ, ಚನ್ನಗಿರಿ, ಹೊನ್ನಾಳಿ ಹಾಗೂ ಮಾಯಕೊಂಡ ಕ್ಷೇತ್ರಗಳಲ್ಲಿ ಹಾಗೂ ಆರು ಕ್ಷೇತ್ರಗಳ ಜೊತೆಗೆ 36 ಸದಸ್ಯರ ಬಲ ಹೊಂದಿರುವ ದಾವಣಗೆರೆ ಜಿಪಂ ಸಹ ಬಿಜೆಪಿ ವಶದಲ್ಲಿದೆ. ಇನ್ನುಳಿದ ದಾವಣಗೆರೆ ದಕ್ಷಿಣ ಹಾಗೂ ಹರಿಹರ ಕ್ಷೇತ್ರಗಳು ಮಾತ್ರ ಕಾಂಗ್ರೆಸ್ ತೆಕ್ಕೆಯಲ್ಲಿವೆ.
ವಿಕಾಸದ ಹಾದಿಯಲ್ಲಿ ನನ್ನ ದಾವಣಗೆರೆ!ಕಮಲ ಅರಳಿಸಿ!ಅಭಿವೃದ್ಧಿ ಬೆಳಗಿಸಿ!
Posted by GM Siddeshwara on Wednesday, 10 April 2019
ದಾವಣಗೆರೆ ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ನ್ಯಾಮತಿ ತಾಲ್ಲೂಕಿನ ಮಾದನಭಾವಿ, ದಾನಿಹಳ್ಳಿ, ಕೊಡಚಗೊಂಡನಹಳ್ಳಿ, ದೊಡ್ಡೆತ್ತಿನಹಳ್ಳಿ,…
Posted by GM Siddeshwara on Wednesday, 10 April 2019
ಒಟ್ಟು ಮತದಾರರು ಎಷ್ಟು?
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 8,14,413 ಪುರುಷ, 7,96,874 ಮಹಿಳಾ, 110 ತೃತೀಯಲಿಂಗಿ ಹಾಗೂ 568 ಜನ ಸೇವಾ ಮತದಾರರು ಸೇರಿದಂತೆ ಒಟ್ಟು 16,11,965 ಮತದಾರರಿದ್ದು, 2014ರ ಚುನಾವಣೆಗಿಂತ ಈ ಬಾರಿ 1.18 ಲಕ್ಷ ಹೊಸ ಮತದಾರರು ಕ್ಷೇತ್ರದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಆದ್ದರಿಂದ ಈ ಹೊಸ ಮತದಾರರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ, ತಮ್ಮ ಪಕ್ಷಗಳ ವಿಚಾರಧಾರೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಚಾರ ಮಾಡುತ್ತಾ ಮತ ಬೇಟೆ ಶುರುವಿಟ್ಟುಕೊಂಡಿದ್ದಾರೆ.
ಬಿಜೆಪಿ ಗೆಲವಿಗೆ ಕಾರಣಗಳು
ಕುಗ್ಗದ ಪ್ರಧಾನಿ ಮೋದಿ ಬಲ
ಜಿಲ್ಲೆಯಲ್ಲಿ ಸತತ 3 ಬಾರಿ ಬಿಜೆಪಿಗೆ ಗೆಲವು
ಜಿಲ್ಲೆಯ 6 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿರುವುದು
ಕೇಂದ್ರ ಬಿಜೆಪಿಯಿಂದಾದ ಅಭಿವೃದ್ಧಿ ಕಾರ್ಯಗಳು
ಕಾಂಗ್ರೆಸ್ ಗೆಲವಿಗೆ ಕಾರಣಗಳು
ಕಾಂಗ್ರೆಸ್, ಜೆಡಿಎಸ್ ಮೈತ್ರಿ ಬಲ
ಎಸ್ಎಸ್ಎಂ ಸತತ ಮೂರು ಬಾರಿ ಸೋತಿರುವ ಅನುಕಂಪ, ಹಾಗೂ ಈ ಬಾರಿ ಹಿಂದುಳಿದ ವರ್ಗದ (ಕುರುಬ) ವ್ಯಕ್ತಿಯೊಬ್ಬರಿಗೆ ಟಿಕೆಟ್ ನೀಡಿರುವುದು. ರಾಜ್ಯದಲ್ಲಿ ಸರ್ಕಾರ, ಅಭಿವೃದ್ಧಿ ಕಾರ್ಯಗಳು
ಅಹಿಂದ ಮತಗಳ ಕ್ರೂಡಿಕರಣ.

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

ದಿನದ ಸುದ್ದಿ
ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ : ಭವ್ಯ ನರಸಿಂಹಮೂರ್ತಿ

ಸುದ್ದಿದಿನ, ಬೆಂಗಳೂರು : ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಅವರ ತತ್ವ ಆದರ್ಶಗಳು ಹಾಗೂ ಯುವ ಜನತೆಗೆ ನೀಡಿರುವ ಸಂದೇಶಗಳನ್ನು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಜನತೆಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಭವ್ಯ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಕ್ ರ್ಯಾಲಿ ಬೆಳಿಗ್ಗೆ 09-00 ಕ್ಕೆ ರಾಜಾಜಿನಗರ Entrance Bridge ಇಂದ ಪ್ರಾರಂಭವಾಗಿ ನವರಂಗ ಚಿತ್ರಮಂದಿರ – ಶಂಕರ್ ಮಠ – ಹಾವನೂರ್ ಸರ್ಕಲ್ – ಹೌಸಿಂಗ್ ಬೋರ್ಡ್ – ಕಾಮಾಕ್ಷಿಪಾಳ್ಯ ಬಸ್ ಸ್ಟಾಂಡ್ – ಹಾವನೂರ್ – ಅಕ್ಷಯ ಉಪಹಾರ – ಮೋದಿ ಹಾಸ್ಪಿಟಲ್ – ನವರಂಗ ಬ್ರಿಡ್ಜ್ – ಗಿರಿಯಾಸ್ ಸಿಗ್ನಲ್ – 6th ಬ್ಲಾಕ್ – ಕೊನೆಯದಾಗಿ 12 ಗಂಟೆಗೆ ಭಾಷ್ಯಮ್ ಸರ್ಕಲ್ ನಲ್ಲಿ ಕೊನೆಗೊಳ್ಳುತ್ತದೆ.
ದಾರಿಯಲ್ಲಿ 4 ಕಡೆ ಸ್ವಾಮಿ ವಿವೇಕಾನಂದರಿಗೆ ಪೂಜೆ ಹಮ್ಮಿಕೊಳ್ಳಲಾಗಿದೆ. ಪೂಜೆಯ ನಂತರ ವಿವೇಕಾನಂದರ ತತ್ವ ಆದರ್ಶಗಳನ್ನೊಳಗೊಂಡ ಹತ್ತು ಸಾವಿರ ಪುಸ್ತಕಗಳನ್ನು ಕ್ಷೇತ್ರದಾದ್ಯಂತ ಉಚಿತವಾಗಿ ಹಂಚಲಾಗುವುದು ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿರುತ್ತದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
